ಕನ್ನಡ ನಾಡನ್ನು ಆಳಿದ ಎಲ್ಲಾ ರಾಜವಂಶಗಳೂ ಸಹ ಕೆರೆ ನಿರ್ಮಾಣ, ರಿಪೇರಿ, ನಿರ್ವಹಣೆ ಮತ್ತು ದಾನ ಚಟುವಟಿಕೆಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿರುವುದು ಕಂಡುಬರುತ್ತದೆ. ಅಲ್ಲದೆ ಅವರ ಸಂಬಂಧಿಗಳು, ಅಧಿಕಾರಿ ವರ್ಗದವರು, ಸಾಮಂತರು, ವೃತ್ತಿಪರರು ಮತ್ತಿತರರೂ ಅಸಂಖ್ಯ ಸಂಖ್ಯೆಯಲ್ಲಿ ಕೆರೆ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎನ್ನುವುದು ಶಾಸನ ಮತ್ತಿತರ ಆಧಾರಗಳಿಂದ ವ್ಯಕ್ತವಾಗುತ್ತದೆ.

ಶಾಸನಗಳ ಸಹಾಯದಿಂದ ಯಾವ ಯಾವ ಸಾಮಾಜಿಕ ಹಿನ್ನೆಲೆಯವರು ಕೆರೆ ನಿರ್ಮಾಣ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬರುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೇವಾಲಯ ಪೂಜಾರಿ ಮತ್ತು ಬ್ರಾಹ್ಮಣರಿರುತ್ತಿದ್ದರು. ಪ್ರಾಚೀನ ಕಾಲದಿಂದಲೂ ಕೃಷಿಯೇ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾದುದರಿಂದ ಕೃಷಿಕರಿರುತ್ತಿದ್ದರು. ಇತರ ವಿವಿಧ ಕಸುಬನ್ನು ಅವಲಂಬಿಸಿದವರಿರುತ್ತಿದ್ದರು. ಹಾಗೆಯೇ ಗ್ರಾಮಾಡಳಿತದ ಮುಖ್ಯಸ್ತರಾದ ಗಾವುಂಡರು ಗ್ರಾಮಾಭ್ಯುದಯದಲ್ಲಿ ಸಾಮಾನ್ಯವಾಗಿ ಭಾಗಿಗಳಾಗುತ್ತಿದ್ದುದರಿಂದ ಕೆರೆ ನಿರ್ಮಾಣ ಅಥವಾ ದಾನಧರ್ಮದಲ್ಲಿ ಅವರ ಪಾತ್ರ ಅನನ್ಯವಾಗಿತ್ತು.

ನಿರ್ಮಾಣ ಕಾರಣದಿಂದ ನಿರ್ಮಾತೃಗಳು ಸಮಾಜದಲ್ಲಿ ಹೊಂದಿದ್ದ ಸ್ಥಾನ ಮತ್ತು ಆರ್ಥಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಲು ಅನುಕೂಲವಾಗುತ್ತದೆ. ಸಾಮಾನ್ಯವಾಗಿ ನಿರ್ಮಾತೃಗಳು ರಾಜರೊ – ಯುವರಾಜರೊ, ರಾಜ – ರಾಣಿಯರೊ, ಸಾಮಂತರೊ, ಕೇಂದ್ರ ಅಥವಾ ಸ್ಥಾನಿಕ ಸರಕಾರಗಳಲ್ಲಿ ಅಧಿಕಾರಿಗಳು ಆಗಿರುತ್ತಾರೆ. ಕೆಲಮೊಮ್ಮೆ ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರೂ ಆಗಿನ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸುವ ವ್ಯಾಪಾರಿಗಳೊ, ಶ್ರೀಮಂತ ಕೃಷಿಕರೊ ಆಗಿರುತ್ತಾರೆ.

ಕೆರೆ ಕಟ್ಟಿಸಿದ ಪ್ರತಿಯೊಬ್ಬರ ಬಗ್ಗೆಯೂ ಶಾಸನಗಳಿರುವುದಿಲ್ಲ. ಕೆರೆಕಟ್ಟಿದಾತ ಶಾಸನದಲ್ಲಿ ದಾಖಲಿಸುವಷ್ಟು ಗಣ್ಯನಾಗಿದ್ದರೆ, ಪ್ರಮುಖನಾಗಿದ್ದರೆ ಅಥವಾ ವರ್ಚಸ್ಸು ಹೊಂದಿದ್ದರೆ ಮಾತ್ರ ಶಾಸನಿಸಿರುವುದನ್ನು ಕಾಣಬಹುದು. ಇಲ್ಲದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಶಾಸನಗಳೇ ಇರುವುದಿಲ್ಲ. ಅಂದರೆ ಅವರ ಅಂತಸ್ತು, ನಿರ್ಮಾಣದ ಪ್ರಚಾರಕ್ಕೆ ಕೊಟ್ಟಿರುವ ಕಾರಣವೂ ಆಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೆರೆಗಳು ಅಸ್ತಿತ್ವದಲ್ಲಿದ್ದಾಗ್ಯೂ ಅವುಗಳ ಉಲ್ಲೇಖ ಶಾಸನದಲ್ಲಿ ಇರಲಿಲ್ಲವಾಗಿ ಆ ವರ್ಗ ಪ್ರಚಾರದಿಂದ ಹೇಗೆ ದೂರ ಉಳಿಯಿತು ಎಂಬುದೂ ಅರಿವಾಗುತ್ತದೆ. ಅವರು ಬಹುಶಃ ಎಂತಹ ವರ್ಗವಾಗಿರಬಹುದು ಎಂಬುದೂ ಊಹಿಸಲಸಾಧ್ಯ. ಕೆರೆಗಳ ಉಲ್ಲೇಖಿತ ಶಾಸನವಿಲ್ಲವೆಂದಾದರೆ ಕಾಲಾನಂತರದಲ್ಲಿ ಅಳಿಸಿಹೋಗಿರಬಹುದಾದ, ನಾಶವಾಗಿರಬಹುದಾದ ಅಥವಾ ಕಣ್ಮರೆಯಾಗಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಆಳುವ ವರ್ಗ

‘…… ಅಲ್ಲಿ ಗಲ್ಲಿಗೊಡೆದ ಕೆರೆಗ ಮಳಿದಾಯ ತನಕ್ಕುಂ
ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತಂ ಬಂದು
[1]

ಎಂಬಲ್ಲಿಯ ಪಾಂಡವರ ರಾಜೋಚಿತ ಪ್ರಯಾಣದ ವರ್ಣನೆಯಲ್ಲಿ, ಪಂಪ ಅಂದಿನ ಸಾಮಾಜಿಕ ಜೀವನದಲ್ಲಿ ದೊರೆಗಳು ವಹಿಸಬೇಕಾದ ಜವಾಬ್ದಾರಿಗಳನ್ನು ವಿವರಿಸಿದ್ದು, ಆ ಜವಾಬ್ದಾರಿಗಳಲ್ಲಿ ಕೆರೆ ಕಾಲುವೆಗಳ ನಿರ್ಮಾಣ ಮತ್ತು ಜೀರ್ಣೋದ್ಧಾರದ ವಿಷಯವೂ ಪ್ರಸ್ತಾಪಿತವಾಗಿರುವುದು ಗಮನಾರ್ಹ.

ಮೌರ್ಯರ ಆಳ್ವಿಕೆಯೊಂದಿಗೆ ಐತಿಹಾಸಿಕ ಕಾಲವು ಪ್ರಾರಂಭವಾಯಿತೆನ್ನಬಹುದು. ಮೌರ್ಯರು ಕೆರೆ ನೀರಾವರಿಗೆ ಮಹತ್ವ ಕೊಟ್ಟಿದ್ದರೆಂಬುದಕ್ಕೆ ಸೌರಾಷ್ಟ್ರದ ಜುನಾಗಡದ ಸುದರ್ಶನ ಸರೋವರ ಅತ್ಯುತ್ತಮ ಉದಾಹರಣೆಯಾಗಿದೆ. ಇಲ್ಲಿರುವ ಶಾಸನದ ಪ್ರಕಾರ ಇಲ್ಲಿ ಆಳ್ವಿಕೆ ಮಾಡುತ್ತಿದ್ದ ಚಂದ್ರಗುಪ್ತ ಮೌರ‍್ಯನ ರಾಜ್ಯಪಾಲನಾಗಿದ್ದ ಪುಷ್ಯಗುಪ್ತನು ಸುದರ್ಶನ ಸರೋವರವನ್ನು ನಿರ್ಮಿಸಿದನು. ಮುಂದೆ ಅಶೋಕನ ಕಾಲದಲ್ಲಿ ರಾಜ್ಯಪಾಲನಾಗಿದ್ದ ತುಶಾಸ್ಥನು ಅದಕ್ಕೆ ಕಾಲುವೆಯನ್ನು ನಿರ್ಮಿಸಿದನು. ಮುಂದೆ ಈ ಭಾಗದಲ್ಲಿ ಮೌರ‍್ಯರ ಉತ್ತರಾಧಿಕಾರಿಗಳಾಗಿ ಆಳ್ವಿಕೆ ಮಾಡಿದ ಶಕರ ಕಾಲದಲ್ಲಿ ಪ್ರವಾಹ ಬಂದು ಕೆರೆ ಒಡೆದು ನೀರೆಲ್ಲಾ ಕೊಚ್ಚಿಕೊಂಡು ಹೋಗಿ ಕೆರೆ ಖಾಲಿಯಾಗಿ ಸುದರ್ಶನ ದುರ್ದಶನವಾಯಿತು. ಆಗ ರುದ್ರದಮನನು ಅದನ್ನು ತನ್ನ ಖರ್ಚಿನಿಂದಲೇ ರಿಪೇರಿ ಮಾಡಿ ಮೂರು ಪಟ್ಟು ಭದ್ರವನ್ನಾಗಿ ಮಾಡಿದನು.[2] ಇದರಿಂದ ಆಳರಸರು ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಲು ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಜನರೊಂದಿಗೆ ಸ್ಪಂದಿಸುತ್ತಿದ್ದರೆಂದು ಸ್ಪಷ್ಟವಾಗುತ್ತದೆ.

ಕದಂಬರ ಪ್ರಾಚೀನ ಶಾಸನಗಳಲ್ಲಿ ಒಂದೆಂದು ಹೇಳಲಾದ ಚಂದ್ರವಳ್ಳಿ ಶಾಸನವು, ಮಯೂರವರ್ಮನು ಅಲ್ಲಿಯ ತಟಾಕವನ್ನು ಕಟ್ಟಿಸಿದನೆಂದು ಹೇಳುತ್ತದೆ.[3] ಆದರೆ ಅಸ್ತಿತ್ವದಲ್ಲಿದ್ದ ಕೆರೆಯನ್ನು ಮಯೂರವರ್ಮನು ಭದ್ರಪಡಿಸಿದನೆಂಬ ಅಭಿಪ್ರಾಯವೂ ಇತ್ತೀಚೆಗೆ ಚಾಲ್ತಿಯಲ್ಲಿದೆ.

ಪ್ರಣವೇಶ್ವರ ದೇವಾಲಯದ ಮುಂದಿರುವ ಕಾಕುತ್ಸವರ್ಮನ ತಾಳಗುಂದ ಸ್ತಂಭಶಾಸನವು ಕುಡಿಯುವ ನೀರಿನ ಕೆರೆಯ ಬಗ್ಗೆ ಪ್ರಸ್ತಾಪಿಸುತ್ತದೆ.[4]

ಗುಡ್ನಾಪುರವು ಬನವಾಸಿಯ ವಾಯುವ್ಯಕ್ಕೆ ೫ ಕಿ.ಮೀ. ದೂರದಲ್ಲಿದೆ. ಶಾಸನದಲ್ಲಿ ದಿನಾಂಕವಿಲ್ಲದಿದ್ದರೂ ಬಹುಶಃ ಆರನೆಯ ಶತಮಾನದ ಪ್ರಾರಂಭ ಕಾಲದ್ದಾಗಿರಬಹುದು. ಇದರ ಪ್ರಕಾರ ಮೃಗೇಶವರ್ಮನ ಮಗ ರವಿವರ್ಮನು ಗುಡ್ಡತಟಾಕ ಎಂಬ ದೊಡ್ಡ ಕೆರೆಯನ್ನು ಕಟ್ಟಿಸಿದನು.[5] ಹಳ್ಳಿಯ ಹೆಸರೂ ಸಹ ಕೆರೆಯಿಂದಾಗಿಯೇ ಬಂದಿದೆ.

ಹಲಸಿ ಶಾಸನದ ಪ್ರಕಾರ ಕದಂಬರ ಬಿಂದುಸೇನ ಮತ್ತು ಕೃಷ್ಣವರ್ಮ ಎಂಬಿಬ್ಬರು ಶಾಂತಿ ತಟಾಕವನ್ನು ನಿರ್ಮಿಸಿದ್ದರು.[6]

ರಾಷ್ಟ್ರಕೂಟ ದೊರೆ ಮೂರನೆ ಗೋವಿಂದನ ನರಗುಂದದ ದಂಡಾಪುರ ಶಾಸನವು ಪೆರ್ಗೆರೆಯನ್ನು ಜೀರ್ಣೋದ್ಧಾರ ಮಾಡಿದುದರ ಬಗ್ಗೆ ಹಾಗೂ ಸ್ಥಳೀಯ ಕೆರೆಗೆ ಒಟ್ಟು ೨೪ ಮತ್ತರ್ ದಾನ ಮಾಡಿದುದರ ಬಗ್ಗೆ ಉಲ್ಲೇಖಿಸುತ್ತದೆ.[7]

ಮರೊಬ ಶಾಸನವು ವಿಕ್ರಮಾದಿತ್ಯನ ಸಹೋದರ ನೊಳಂಬಾದಿ ರಾಜ ಜಯಸಿಂಹನಿಂದ ಕಟ್ಟಿಲ್ಪಟ್ಟ ನೊಳಂಬ ಸಮುದ್ರಕ್ಕೆ ನಿರ್ವಹಣಾ ದಾನವನ್ನು ನೀಡಿದುದನ್ನು ಪ್ರಸ್ತಾಪಿಸುತ್ತದೆ.[8]

ತಡಂಗಾಲ ಮಾದವನ ತಾಮ್ರಪತ್ರ ಶಾಸನವು[9] ಕ್ರಿ.ಶ. ೫ನೆಯ ಶತಮಾನದ್ದಾಗಿದ್ದು, ಅದು ಮಾದುಕಟ್ಟೂರು ಎಂಬ ಹಳ್ಳಿಯೊಂದನ್ನು ದತ್ತಿಯಾಗಿ ನೀಡಿದುದನ್ನು ಮತ್ತು ಅದಕ್ಕೆ ಹಿರಿಯ ಕರೆಯಿಂದ ನೀರಿನ ಸೌಲಭ್ಯವಿದ್ದುದರ ಬಗ್ಗೆ ಪ್ರಸ್ತಾಪಿಸುತ್ತದೆ.

ಶಾಸನವೊಂದು ಮುಗುಂದ ಮೂವತ್ತರ ಪ್ರದೇಶದಲ್ಲಿ ಅಲ್ಲಿಯ ದೊರೆ ಚಾವುಂಡರಾಯ ನೆಂಬಾತ ಮಾಡಿಸಿದ ಅನೇಕ ಲೋಕೋಪಕಾರದ ಸಾಧನೆಗಳನ್ನು ಪರಿಚಯಿಸುತ್ತದೆ. ಅದರಲ್ಲಿ ಕೆರೆಯೂ ಸೇರಿದೆ.[10] ಇಲ್ಲಿ ಅರಸನಿಗೆ ತಾನು ಜನಕ್ಕೆ ಲೋಕೋಪಕಾರಿ ಎಂದು ಕಾಣಿಸಿಕೊಳ್ಳುವ ಹೆಬ್ಬಯಕೆ ಇರುವುದು ಸ್ಪಷ್ಟವಾಗುತ್ತದೆ.

ಬನ್ನಿಯೂರೆಂಬ ಅಗ್ರಹಾರದ ಕೆರೆಯು ಪದೇ ಪದೇ ಒಡೆದು ಹೋಗುತ್ತಿದ್ದಿತು. ಬಹುಶಃ ಆ ಕೆರೆಯನ್ನು ದುರಸ್ತಿ ಪಡಿಸುವ ಶಕ್ತಿ ಆ ಊರಿಗೆ ಇರಲಿಲ್ಲ. ಆಗ ಅಲ್ಲಿಯ ಮಹಾಜನರೆಲ್ಲರೂ ಒಟ್ಟಾಗಿ ಸೇರಿ ರಾಜನ ಬಳಿ ಬಂದು ಹಿಂದಿನ ಹಲವು ರಾಜರು ಎಷ್ಟು ಸಾರಿ ಕಟ್ಟಿಸಿದರೂ ಅದು ನಿಲ್ಲುತ್ತಿರಲಿಲ್ಲ. ಅದು ನಿಲ್ಲಬೇಕಾದರೆ ಧರ್ಮರಾಜನಾದ ನಿನ್ನ ಹೆಸರಿನಲ್ಲಿ ಕಟ್ಟಿಸಬೇಕು. ಊರಿನ ಜನ ಸುಖವಾಗಿದ್ದರೆ ಅದರ ಪುಣ್ಯ ನಿನಗೆ ಬರುತ್ತದೆ ಎಂದು ಹೊಗಳುತ್ತಾರೆ. ಆಗ ರಾಜನು ‘ಅದೇನು ಮಹಾ’ ಎಂದು ಜಕ್ಕ ಗೋಸಿಯ ಕೈಯಲ್ಲಿ ಹಣವನ್ನು ಕೊಟ್ಟು ಕೆರೆಯನ್ನು ಕಟ್ಟಿಸಿ ಅದಕ್ಕೆ ‘ತಂಬ ಸಮುದ್ರ’ವೆಂದು ಹೆಸರಿಡುತ್ತಾನೆ.[11] ಕೆರೆಯ ವಿಷಯವಾಗಿ ಊರಿನ, ಅದಕ್ಕಿಂತ ಹೆಚ್ಚಾಗಿ ರಾಜನಿಗೆ ಇದ್ದ ಆಸಕ್ತಿಯು ಇಲ್ಲಿ ರೂಪುಗೊಂಡಿದೆ.[12] ಆದರೆ ಊರಿನ ಜನ ಅರಸನಲ್ಲಿ ಕೆರೆಯ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದಾಗ ಮಾತ್ರ ಆಸಕ್ತಿ ಗರಿಗೆದರಿ ಕ್ರಮಕೈಗೊಳ್ಳುವುದಕ್ಕೆ ಮುಂದಾಗಿರುವುದನ್ನು ಗಮನಿಸಬಹುದು. ಅಂದರೆ ಪ್ರಜೆಗಳಿಂದ ಪ್ರಸ್ತಾಪ ಬಂದಾಗ ಮಾತ್ರ ಜವಾಬ್ದಾರಿಯೆಂಬಂತೆ ಪರಿಭಾವಿಸುತ್ತಿದ್ದುದು ಅರಿವಾಗುತ್ತದೆ.

ಬನ್ನಿಯೂರಲೆರಡೂ ಗ್ರಾಹೆಯ ಸಿದ್ಧಾಯದ ಪೊನ್ನ
ಜಕ್ಕಗೋಸಿಯ ಕಯೊಳೆಕೊಟ್ಟು ಕೆರೆಯಂ ಕಟ್ಟಿಸಿ
ತಂಬ ಸಮುದ್ರವೆಂಬ ಪೆಸರನಿಟ್ಟು[13]

ನೀರಿನ ಸದುಪಯೋಗಕ್ಕೆ ಹಳ್ಳಿಯ ಹಳೆಕೆರೆಯನ್ನು ದುರಸ್ತಿ ಮಾಡುವುದೂ ಒಂದು, ದೋರಸಮುದ್ರದಲ್ಲಿ ಸತ್ಸುಖ ಸಂಕಥಾಬಿನದಿಂ ರಾಜ್ಯಂಗೆಯ್ಯುತ್ತಿದ್ದ ಜೀವದಯೋಪೇತನಾದ ವಿನಯಾದಿತ್ಯ ಪೊಯ್ಸಳನು ದೋರಸಮುದ್ರಕ್ಕೆ ಕ್ರಿ.ಶ. ೧೦೬೨ – ೬೩ರಲ್ಲಿ ಮೇಲಕ್ಕವನ್ನು ಕಟ್ಟಿಸಿದನು.[14] ಮುಂದೆ ಕ್ರಿ.ಶ. ೧೦೯೭ – ೯೮ರಲ್ಲಿ ಕೆರೆಗೆ ತೂಬನ್ನು ಮಾಡಿಸಿದನು. ಇದರ ಉಲ್ಲೇಖ ಕೆರೆಯ ಮಧ್ಯದ ತೂಬಿನ ಪಕ್ಕದಲ್ಲಿ ಬಿದ್ದಿರುವ ಬೋದಿಗೆಯ ಶಾಸನದಲ್ಲಿ ಬಂದಿದೆ.[15] ಗಂಗವಾಡಿ ೯೬,೦೦೦ದಲ್ಲಿ ಎರೆಯಂಗನ ತಂದೆಯಷ್ಟು ಧರ್ಮಿ ಯಾರಿದ್ದಾರೆ? ಎಂದು ಪ್ರಶ್ನಿಸುವ ಶಾಸನವು ತೋಡಿದ ತೊರೆಗಳು ಮತ್ತು ಕುಳಿಗಳು ಕೆರೆಯಾದವು ಎಂದು ವರ್ಣಿಸುತ್ತದೆ. ಇದರಿಂದ ಹೊಯ್ಸಳೋದಯ ವಲಯದಲ್ಲಿ ಕೆರೆ ನಿರ್ಮಾಣ ಎಷ್ಟೊಂದು ಸಾಮಾನ್ಯವಾಗಿತ್ತು ಎಂಬುದು ಅರಿವಾಗುತ್ತದೆ.

ತೊರೆಯನಿತುಂ ಕುಳಿಯನಿತುಂ ಕೆರೆಯಾದವು.[16]

ವಿನಯಾದಿತ್ಯನೆ ಕ್ರಿ.ಶ. ೧೦೬೯ರಲ್ಲಿ ತೊರೆಯನ್ನು ತಿರುಗಿಸಿ ಅದನ್ನು ಮತ್ತಾವರದ ತನಕ ತರುವ ಕೆಲಸವನ್ನು ಮಾಡಿದ್ದಾನೆ. ಹೀಗೆ ಹಳ್ಳಿಗಳ ಮೇಲೆ ಒಡೆತನವನ್ನು ಸ್ಥಾಪಿಸುವಂತವರು ಇಂತಹ ಕೆಲವೊಂದು ಕೆಲಸಗಳಲ್ಲಿ ಸಕ್ರಿಯರಾಗಿ ಬೇರೆಯವರಿಗೆ ಮಾರ್ಗದರ್ಶಕರಾಗಿದ್ದರು.

ಕೆರೆಗಳನ್ನು ಕಟ್ಟಿಸುವಲ್ಲಿ ಅರಸನ ಪಾತ್ರದ ಸ್ವರೂಪ ವಿವಿಧ ತೆರನಾಗಿದ್ದು ಅವನ ಆಸ್ತೆ ಪ್ರಮುಖವಾಗಿ ಪ್ರಕಟವಾಗುತ್ತದೆ. ಕೆರೆ ಕಟ್ಟಿಸುವುದು ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದರೂ ಜನೋಪಯೋಗಿಯ ಜೊತೆಗೆ ನೀರಾವರಿ ಆರ್ಥಿಕ ಮೂಲ ಸೌಲಭ್ಯವನ್ನು ಒದಗಿಸಿ ರಾಜ್ಯದ ಆರ್ಥಿಕ ಸದೃಢತೆ ಕಾಪಾಡುವುದೇ ಆಗಿತ್ತು. ಕೆಲವೊಮ್ಮೆ ಮತ್ಯಾರೊ ಕಟ್ಟಿಸಿದ ಕೆರೆಗೆ ಆಳುವ ವರ್ಗ ದತ್ತಿ ಬಿಟ್ಟಿದ್ದುದನ್ನು ಮೇಲಿನ ಮೊರಬ ಶಾಸನದಲ್ಲಿ, ತಡಂಗಾಲ ಮಾದವನ ತಾಮ್ರಪತ್ರ ಶಾಸನದಲ್ಲಿ ಗಮನಿಸಬಹುದು. ಅರಸನ ಅಥವಾ ರಾಜಕುಟುಂಬದ ನೇರ ಸುಪರ್ದಿಯಲ್ಲೇ ಎಲ್ಲಾ ನೀರಾವರಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದಿತು ಎಂದು ಹೇಳಲು ಬರುವುದಿಲ್ಲ. ಆದಾಗ್ಯೂ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳು ಅರಸನ ಗಮನದಲ್ಲಿರಲಿ ಅಥವಾ ಇಲ್ಲದಿರಲಿ ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಪ್ರೋತ್ಸಾಹ ನಿರಂತರವಾಗಿತ್ತು.

ಕೆರೆಗಳಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಥವಾ ಪ್ರೋತ್ಸಾಹಿಸುವುದು ತನ್ನ ರಾಜ್ಯದ ಆರ್ಥಿಕ ಪ್ರಗತಿಗೆ ಪೂರಕವೇ ಆಗಿತ್ತು. ಜೊತೆಗೆ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನವಿಶ್ವಾಸಗಳಿಸುವುದು ಆ ಮೂಲಕ ತನ್ನ ಆಡಳಿತಕ್ಕೆ ಸುಭದ್ರತೆ ಒದಗಿಸಿಕೊಳ್ಳುವುದೂ ಅರಸನಿಗೆ ಬಹುಮುಖ್ಯವಾಗಿತ್ತು.

ಪ್ರಜೆಗಳು ಅರಸನಲ್ಲಿಗೆ ಪ್ರಸ್ತಾಪ ತೆಗೆದುಕೊಂಡು ಹೋಗುವ ಉದ್ದೇಶವಾದರೂ ಅಸಾಧ್ಯತೆಯನ್ನು ಸಾಧ್ಯಮಾಡುವ ಶಕ್ತಿ ‘ರಾಜಶಕ್ತಿ’ಗೆ ಇದೆ ಎಂಬ ಭಾವನೆಯೆ ಆಗಿದೆ. ಆ ರಾಜಶಕ್ತಿಯು ಆರ್ಥಿಕ, ಸಂಘಟನಾ ಮತ್ತು ರಾಜಕೀಯ ಇಚ್ಫಾಶಕ್ತಿಯೆ ಆಗಿದೆ ಎನ್ನುವುದು ಗಮನಾರ್ಹ. ಇದಕ್ಕೆ ಮೇಲಿನ ಬನ್ನಿಯೂರು ಕೆರೆಯ ಪ್ರಸ್ತಾಪದೊಂದಿಗೆ ಹರಿದ್ರಾ ಅಣೆಕಟ್ಟನ್ನು ಉದಾಹರಿಸಬಹುದು.[17] ೧೪೨೪ರಲ್ಲಿ ಹರಿದ್ರಾ ಅಣೆಕಟ್ಟಿಗೆ ಬಿರುಕು ಕಾಣಿಸಿಕೊಳ್ಳಲಾಗಿ ಅದು ಎರಡನೆಯ ದೇವರಾಯನ ಗಮನಕ್ಕೆ ಹೋಗಿ ಅದನ್ನು ರಾಜ್ಯದ ಖರ್ಚಿನಲ್ಲಿ ಪುನರ್ ಕಟ್ಟಲು ತೀರ್ಮಾನವಾದ ಸಂಗತಿಯನ್ನು ಹೇಳಬಹುದು. ಆದ್ದರಿಂದ ಕೊನೆಯ ವಿಶ್ವಾಸಾರ್ಹ ಸಾಧ್ಯ ಪ್ರಯತ್ನವೆಂಬಂತೆ ಅರಸನಲ್ಲಿಗೇ ಪ್ರಜೆಗಳು ದೌಡಾಯಿಸುತ್ತಿದ್ದರು.

ಮಂತ್ರಿಗಳು, ಮಹಾಪ್ರಧಾನರು ಮತ್ತು ದಂಡನಾಯಕರು

ಕನ್ನಡ ಶಾಸನಗಳನ್ನು ಅವಲೋಕಿಸಿದಾಗ ಮಂತ್ರಿಗಳು, ಮಹಾಪ್ರಧಾನರು ಮತ್ತು ದಂಡನಾಯಕರೂ ಸಹ ಕೆರೆಗಳನ್ನು ಕಟ್ಟಿಸಲು ಆಸಕ್ತಿ ತೋರುವುದು ಸ್ಪಷ್ಟವಾಗುತ್ತದೆ.

ಗಂಗದೊರೆಯಾಗಿದ್ದ ಮಾರಸಿಂಹನ ಶಾಸನದ ಪ್ರಕಾರ ಅವನ ಮಂತ್ರಿಯ ಪಿರಿಯ ಕೆರೆಯನ್ನು ಕಟ್ಟಿಸಿ ಅದಕ್ಕೆ ನಾಲ್ಕು ಖಂಡುಗ ಜಮೀನನ್ನು ದತ್ತಿಬಿಟ್ಟನು.[18]

ಕ್ರಿ.ಶ. ೧೧೮೬ರಲ್ಲಿ ಶ್ರೀ ಮನ್ಮಹಾಪ್ರಧಾನಂ ಸರ್ವ್ವಾಧಿಕಾರಿ ಶ್ರೀ ಕರಣಾಗ್ರಗಣ್ಯಂ ಸರ್ವ್ವಾಧ್ಯಕ್ಷನೆನಿಸಿದ ವೀರಯ್ಯ ದಂಡನಾಯಕನು ಕಾಡಕಡಿದು ಮಾಡಿದ ಶ್ರೀ ವೀರಬಲ್ಲಾಳಪುರದೊಳು ರುದ್ರಸಮುದ್ರ, ಗಂಗಸಮುದ್ರ, ವೀರಸಮುದ್ರ ಮತ್ತು ಅಚ್ಯುತಸಮುದ್ರಗಳೆಂಬ ಕೆರೆಗಳಂ ಕಟ್ಟಿಸಿದುದು ಬೇಲೂರಿನ ವೀರದೇವನಹಳ್ಳಿಯ ಶಾಸನದಲ್ಲಿ[19] ಬಂದಿದೆ.

ಹಿರಿಯ ದಂಡನಾಯಕ ಗಂಗಪ್ಪಯ್ಯ ಕನ್ನೆಗಾಲ ಕದನದಲ್ಲಿ ಜಯಗಳಿಸಿದಕ್ಕಾಗಿ ಗಂಗಸಮುದ್ರವನ್ನು ಕಟ್ಟಿಸಿ ದೇವರಿಗೆ ದತ್ತಿ ಬಿಟ್ಟನು. ಇಲ್ಲಿ ಅಚಲವಾಗಿದ್ದ ಧಾರ್ಮಿಕ ನಿಷ್ಟೆಯೆ ಪ್ರಬಲವಾಗಿರುವುದು ಸ್ಪಷ್ಟವಾಗುತ್ತದೆ. ಯಾಕೆಂದರೆ ವಿಷ್ಣುವರ್ಧನ ಮಹಾರಾಜ, ವಿಜಯಿಯಾಗಿ, ಬಂದ ಹಿರಿಯ ದಂಡನಾಯಕ ಗಂಗಪ್ಪಯ್ಯನನ್ನು ಯಾವ ಬಹುಮಾನಬೇಕೆಂದು ಕೇಳಲಾಗಿ, ಅವನು ತನಗೆ ಹಳ್ಳಿಯೊಂದನ್ನು ದತ್ತಿಯಾಗಿ ಕೊಡಬೇಕೆಂತಲೂ ಅಲ್ಲಿ ಕೆರೆಯೊಂದನ್ನು ಕಟ್ಟಿಸಿ ದೇವರ ಸೇವೆಗೆ ಬಿಡುವುದಾಗಿ ಹೇಳುತ್ತಾನೆ.[20] ಅರಸನ ಎದುರು ತಾನು ಸೇವಾದುರೀಣ ಎಂದು ತೋರಿಸಿಕೊಳ್ಳುವ ಉತ್ಸುಕತೆಯೂ ಇಲ್ಲಿ ಕಾಣುತ್ತದೆ.

ಮಾದಿಗಿದೇವ ದಂಡನಾಯಕರು ಪತ್ನಿ ಮಾಯಿದೇವಿಯ ಹೆಸರಿನಲ್ಲಿ ಮಹಾಸಮುದ್ರ ನಿರ್ಮಿಸಿದ್ದರು.[21] ತನ್ನ ಪತ್ನಿಯ ಹೆಸರು ಚಿರಸ್ಥಾಯಿಯಾಗಲು ಮಾಡಿದ ಪ್ರಯತ್ನ ಇಲ್ಲಿ ಕಾಣುತ್ತದೆ.

ಗೋಣಿ ಸಮುದ್ರದ ಹೂಳೆತ್ತುವ ಕೆಲಸಕ್ಕಾಗಿ, ತೂಬು ನಿರ್ಮಾಣ ಮಾಡುವುದಕ್ಕಾಗಿ, ಮಹಾಪ್ರಧಾನ ಸೇನಾಧಿಪತಿ ತೇಜಿಮಯ್ಯ ಮತ್ತು ಆತನ ಅಧಿಕಾರಿಗಳಾದ ಬಾಕಣದಂಡನಾಯಕ ಮತ್ತು ರೇವರಸರು ಸೇರಿ ಪಣ್ಣೆಯ ಸುಂಕವನ್ನು ಹೇರಿ, ಹಾಗೆ ಬಂದ ಹಣವನ್ನು ಅಲ್ಲಿಯ ೧೬ ಶೆಟ್ಟಿಗಳಿಗೆ ಕೊಟ್ಟು ಈ ಕೆಲಸವನ್ನು ನೆರವೇರಿಸಿದರು ಎಂದು ಹೇಳಲಾಗಿದೆ. ಈ ಸೆಟ್ಟಿಗಳು ಇತರ ವ್ಯಾಪಾರಿಗಳೊಂದಿಗೆ ಸೇರಿ ಈ ಕೆರೆಯ ಕೆಲಸದ ಸಲುವಾಗಿ ಭೂಮಿಯನ್ನು ಬಿಟ್ಟುಕೊಟ್ಟರೆಂಬ[22] ವಿಷಯವು ತಿಳಿಯುತ್ತದೆ. ಈ ಗೋಣಸಮುದ್ರವೇ ಇಂದಿನ ಡಂಬಳಕೆರೆ.

ಬೆಳ್ಳೂರಿನಲ್ಲಿ ದೊರೆತಿರುವ ಶಾಸನವು ಪೆರುಮಾಳ ದಣ್ಣಾಯಕನ ಸೇವೆಯನ್ನು ದಾಖಲಿಸುತ್ತದೆ. ಇದರ ಪ್ರಕಾರ ಮೂರನೆ ನರಸಿಂಹ ಆಳುತ್ತಿರುವಾಗ ೧೨೬೯ರಲ್ಲಿ ಪೆರುಮಾಳದೇವನು ಬೆಳ್ಳೂರಿನಲ್ಲಿ ಹೆಚ್ಚಿನ ಹಣವನ್ನು ಖರ್ಚುಮಾಡಿ ಅಳ್ಳಾಳ ಸಮುದ್ರ, ಅವ್ವೆಯ ಕೆರೆ, ತಗರ‍್ಜ ಗೆರೆ ಮತ್ತು ಕಾಲುವೆಯನ್ನು ನಿರ್ಮಿಸಿದನು. ಇದರಿಂದ ಶಾಶ್ವತ ನೀರು ಸರಬರಾಜು ಸಾಧ್ಯವಾಯಿತು. ಅಂತೆಯೇ ತಂಬಿಯಣ್ಣ ಮತ್ತು ತಿರುವೆಂಗದ ಪೆರುಮಾಳ್ ಹಾಗೂ ಮಹಾಜನರ ನಡುವೆ ಒಪ್ಪಂದ ನಡೆಯಿತು. ತಮ್ಮ ಒಣ ಜಮೀನನ್ನು ತ್ಯಜಿಸಿ ಅದರ ಬದಲಿಗೆ ಕಾಲುವೆ ಕೆಳಗಿನ ನೀರಾವರಿ ಜಮೀನನ್ನು ಪಡೆದರು. ಅದರ ಪ್ರತಿಫಲವಾಗಿ ವಾರ್ಷಿಕ ನಿಬಂಧದಂತೆ ಪ್ರತಿಖಂಡುಗಕ್ಕೆ ನಾಲ್ಕು ಹಣ ಬಿಟ್ಟು ವಟ್ಟ ಕೊಡಲು ಒಪ್ಪಿದರು. ಹಾಗೆಯೆ ಸದಾಕಾಲ ನೀರಿನ ಸೌಲಭ್ಯ ದೊರಕುವಂತಾಗಲು ನಿರ್ದಿಷ್ಟ ಹಣವನ್ನು ಅಧಿಕಾರಿಗಳಿಗೆ ಮತ್ತು ಗೌಡರಿಗೆ ನೀಡಲು ಒಪ್ಪಿದುದು ದಾಖಲಾಗಿದೆ.[23]

ಮಹಾಪ್ರಧಾನ ಕೇಶಿರಾಜ ಚಮುಪತಿಯ ನೇತೃತ್ವದಲ್ಲಿ ಕೇಶವಪುರ ಅಗ್ರಹಾರದ ಜೊತೆಗೆ ಕೇಶವ ಸಮುದ್ರ ಮತ್ತು ಲಕ್ಷ್ಮೀ ಸಮುದ್ರ ಕೆರೆಗಳು ಅಸ್ತಿತ್ವಕ್ಕೆ ಬಂದವು.[24]

ಮಂತ್ರಿಯ ಇಬ್ಬರು ಮಕ್ಕಳು ಮತ್ತು ದಂಡನಾಯಕರು ಕೂಡಿ ‘ದಸವಾನಿ’ ಗ್ರಾಮದಲ್ಲಿ ಕೆರೆಯನ್ನು ಕ್ರಿ.ಶ. ೧೦೯೦ರಲ್ಲಿ ಕಟ್ಟಿಸಿದರು.[25]

ದಂಡನಾಯಕ ಪೋಚಿಮಯ್ಯನು ಬಿರುವುರದಲ್ಲಿ ತನ್ನ ವಾಸ್ತವ್ಯವನ್ನು ಹೊಂದಿ ಎರೆಯಕೆರೆ, ಮಚ್ಚೇರು ಮತ್ತು ತೆಲ್ಲಿಗನ ಕೆರೆಯಲ್ಲಿ ತನ್ನ ಸರ್ಕಾರವನ್ನು ಹೊಂದಿ, ‘ಕೆರೆಯಂ ಕೆರೆಯ ತುಂಬುಗಳು ಮುಂಬಾವಿಗಳು ಮಂ ಮಾಡಿ ಯೂರೊಡೆವಾಳ್ಳೆಯುಂ ಮೇಲಾಳ್ಕೆಯುಂ’ ನಡೆಸುತ್ತಿದ್ದನೆಂದು ಕ್ರಿ.ಶ. ೧೦೬೩ರ ಬೀರೂರು ಶಾಸನದಲ್ಲಿ[26] ಬಂದಿದೆ. ಅಂದರೆ ಊರಿನ ಆಳ್ವಿಕೆಯನ್ನು ಮಾಡಲು ಇಂತಹ ಕೆಲಸಗಳು ಸಹಾಯಕವಾಗಿದ್ದವೇ? ಅಥವ ಪೂರಕವಾಗಿದ್ದವೇ? ಆಗಿತ್ತು ಎಂಬ ವಿಚಾರಾಭಿಪ್ರಾಯ ಬರದೆ ಇರದು.

ತಾವರಕೆರೆಯಲ್ಲಿ ಆಳುತ್ತಿದ್ದ ಮಹಾಪ್ರಧಾನನು ಅಲ್ಲಿ ಕ್ರಿ.ಶ. ೧೦೯೪ರಲ್ಲಿ ಕೆರೆಯೊಂದನ್ನು ಕಟ್ಟಿಸಿದನು.[27]

ಮಹಾಪ್ರಧಾನ ಮನೆವೆಗ್ಗಡೆ ಕುಂದ ಮಾರಾಯನು ಕನ್ನೆಗೆರೆಯನ್ನು ಕಟ್ಟಿಸಿ ಶಿವಾಲಯ ಎತ್ತಿಸಿ ಮೆಂದೇಶ್ವರ ದೇವರ ಪೂಜೆ ‘ನಿವೇದ್ಯಕ್ಕಂ’ ೬ ಸಲಗೆ ಗದ್ದೆಯನ್ನು ಬಿಟ್ಟಿದ್ದಾನೆ.[28]

ಕೆರೆಯ ಪದ್ಮರಸ : ಸಕಲೇಶ ಮಾದರಸರ ಮೊಮ್ಮಗನಾದ ಕೆರೆಯ ಪದ್ಮರಸನು ‘ದೀಕ್ಷಾಬೋಧೆ’ ಎಂಬ ಗ್ರಂಥ ಬರೆದಿದ್ದಾನೆ. ಇವನು ಹರಿಹರ ಮತ್ತು ರಾಘವಾಂಕರೊಂದಿಗೆ ಗುರುತಿಸಲ್ಪಡುತ್ತಿರುವ ತ್ರಿಮೂರ್ತಿಗಳಲ್ಲಿ ಒಬ್ಬ. ವೀರಶೈವ ಕವಿಯಾದ ಇವನು ಸು. ೧೧೬೫ರಲ್ಲಿ ನರಸಿಂಹಬಲ್ಲಾಳನ ಆಳ್ವಿಕೆಯ ಕಾಲದಲ್ಲಿ ಮಂತ್ರಿಯಾಗಿದ್ದನು. ಕೆರೆಯ ಪದ್ಮರಸನು ಪವಾಡವನ್ನು ಮಾಡಿ ಕೆರೆಕಟ್ಟಿಸಿ ಕೆರೆಯ ಪದ್ಮರಸನೆಂದಾದನೆಂದು ‘ಚೆನ್ನಬಸವ ಪುರಾಣ’ದಲ್ಲಿ ಬಂದಿದೆ.[29]

ಪದ್ಮರಸನು ಬೇಲೂರಿನಲ್ಲಿ ಒಂದು ಕೆರೆಯನ್ನು ಕಟ್ಟಿಸುವುದಕ್ಕಾಗಿ ದೊರೆಯ ಭಂಡಾರದಿಂದ ೧೨,೦೦೦ ಹೊನ್ನುಗಳನ್ನು ತೆಗೆದುಕೊಂಡು ಶಿವರೂಪಿಯಾದ ಒಬ್ಬ ಜಂಗಮ ಭುಜಂಗನಿಗೆ ಕೊಟ್ಟು ಬಿಡಲು, ಜನರು ಈ ಸಂಗತಿಯನ್ನು ದೊರೆಗೆ ಹೇಳಿದಾಗ, ಅವನು ಪದ್ಮರಸನನ್ನು ಕರೆಯಿಸಿ ಕೇಳಲು, ಗರ್ದೆ ತೋಂಟಗಳೊಡನೆ ಕೆರೆ ಸಿದ್ಧವಾಗಿದೆ ಬಂದು ನೋಡಬಹುದು. ಎಂದು ಹೇಳಿ ದೊರೆಯೊಡನೆ ಬೇಲೂರಿಗೆ ಹೋಗಿ ಅಲ್ಲಿ ಪವಾಡವನ್ನು ಮಾಡಿ ಕೆರೆಯನ್ನು ತೋರಿಸಿ, ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದನು. ಇವನ ಧ್ಯಾನದಿಂದ ಗಂಗೆಯೇ ಅಲ್ಲಿ ಬಂದು, ಆಕಾಶದಿಂದ ಬಿದ್ದಿತು. ‘ಅಸಮಾಕ್ಷನಿಂದ ಬಿಟ್ಟಿಗೆ ಕಟ್ಟಿಸಿದ ಕತದಿ’ ಈ ಕೆರೆಗೆ ಬಿಟ್ಟ ಸಮುದ್ರವೆಂದು ಹೆಸರು ಬಂತು. ಇದನ್ನು ಕಟ್ಟಿಸಿದುದರಿಂದಲೇ ಈತನಿಗೆ ಕೆರೆಯ ಪದ್ಮರಸನೆಂಬ ಹೆಸರು ಬಂದಿತು.[30] ಪವಾಡದ ಅಧಿಕೃತತೆ ಏನೇ ಇರಲಿ ಕೆರೆಯ ಕಾಮಗಾರಿಯ ಮಂತ್ರಿ ಪದ್ಮರಸನಿಂದ ಜರುಗಿರಬೇಕೆಂದು ಊಹಿಸಬಹುದು. ಹೊಯ್ಸಳ ಅರಸ ಬಿಟ್ಟಿದೇವನ ಹೆಸರಿನಲ್ಲಿ ಕಟ್ಟಿರಬಹುದಾದ ಅಥವಾ ಪುನರುಜ್ಜೀವನ ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಗೌಡರು – ಗಾವುಂಡರು ಮತ್ತು ನಾಳ್ಗಾವುಣ್ಡರು

ಅರಸರು, ಮಂತ್ರಿಗಳು, ಮಹಾಪ್ರಧಾನರು ಮತ್ತು ದಂಡನಾಯಕರು ಮಾತ್ರವಲ್ಲದೆ ಗ್ರಾಮದ ಮುಖಂಡರಾದ ಗಾವುಂಡುಗಳೂ ಸಹ ಕೆರೆಯನ್ನು ಕಟ್ಟಿಸಲು ಆಸಕ್ತಿ ವಹಿಸುತ್ತಿದ್ದರು. ಇವರುಗಳು ನಾಡಿನ ಹಲವಾರು ಕಡೆ ಹರಡಿದ್ದು, ಹೆಚ್ಚು ನೀರಾವರಿ ಸೌಲಭ್ಯದ ಮೂಲಕ ಕೃಷಿ ಫಸಲನ್ನು ಹೆಚ್ಚು ಹೆಚ್ಚು ಬೆಳೆಯಲು ಪ್ರಯತ್ನಿಸಿದ್ದು ಕಂಡು ಬರುತ್ತದೆ.

ಅರಸನಾದ ಪೊಯ್ಸಳ ದೇವನ ಸಾನಿಧ್ಯದಲ್ಲಿ ಪೊಯ್ಸಳ ಗಾವುಂಡನು ಕೆರೆ ಕಟ್ಟಿಸಿ, ಶಿವದೇವಾಲಯವನ್ನು ಕ್ರಿ.ಶ. ೧೦೭೪ರಲ್ಲಿ ನಿರ್ಮಿಸಿದನು.[31]

ಹಾಸನದ ನಿಟ್ಟೂರಿನಲ್ಲಿ ಬೂವಗಾವುಣ್ಡನು ದೇಗುಲಮ ನೆತ್ತಿಸಿ ಕೆರೆಯಂ ಕಾಲುಮಂ ಕಟ್ಟಿಸಿ ಕೊಟ್ಟಿದ್ದಾನೆ.[32]

ಕೋಬೇಶ್ವರ ದೇವರಿಗೆ ಹೊಯ್ಸಳ ಬಲ್ಲಾಳನು ದೇವರಂಗ ಬೋಗಕ್ಕೆ ಬನದ ತೆರೆಯ ಬಾಗವಂ ಬಿಟ್ಟ. ಆಗ ಕೋಬೆಗಾವುಂಡನು ಕೋಬೇಶ್ವರ ದೇವರ ಮುಂದಣಕೆರೆಯ ಪಿತೃಬ್ರಯವಾಗಿ ಮಾಡಿಸಿ ಬಿಟ್ಟಿರುವುದು ದಬ್ಬೆ ಅಗ್ರಹಾರದ ಕ್ರಿ.ಶ. ೧೧೦೦ – ೦೧ರ ಶಾಸನದಲ್ಲಿ[33] ದಾಖಲಾಗಿದೆ.

ಮೊದಲನೆ ನರಸಿಂಹನ ಕಲಿಬವಾಡಿ ಶಾಸನವು ಹಲಬಗೌಡನನ್ನು ಹೆಸರಿಸುತ್ತದೆ. ಅವನು ಕನ್ನಗೆರೆಯನ್ನು ಕಟ್ಟಿಸಿ ಅದನ್ನು ಹಳೆಯ ಕೆರೆಯೊಂದಿಗೆ ಸಂಪರ್ಕಿಸಿದನೆಂದು[34] ದಾಖಲಿಸುತ್ತದೆ.

ಮಾಚಯ್ಯಗೌಂಡರ್ ರಾಮಾಪುರದಲ್ಲಿ ಕೆರೆಗೆ ತೂಬನ್ನು ನಿರ್ಮಿಸಿದನು.[35]

ಹರದಗೌಡನೆಂಬುವವನು ಕುರುಕ್ಕೆ ನಾಡಿನಲ್ಲಿ ಹರದ ಸಮುದ್ರ ಮತ್ತು ದೇವಾಲಯವೊಂದನ್ನು ಕಟ್ಟಿಸಿದನು.[36]

ಎರಡನೆಯ ಬಲ್ಲಾಳನ ಕಾಲದಲ್ಲಿ ಹೊನ್ನಮಾರಗೌಡ ಎಂಬುವವನು ತಮ್ಮ ತಾಯಿ ಮಾಯಕ್ಕನ ಹೆಸರಿನಲ್ಲಿ ಮಾಚಸಮುದ್ರ ಕಟ್ಟಿಸಿದನೆಂದು ೧೩೧೪ರ ಶಾಸನದಿಂದ ತಿಳಿಯುತ್ತದೆ.[37]

ಕ್ರಿ.ಶ. ೧೨೦೩ರಲ್ಲಿ ಗೊಡಚಿಕೊಂಡ ಗ್ರಾಮದ ಬಮ್ಮಗೌಡನು ಗೌಡಗೆರೆಯನ್ನು ಸಮುದ್ರಸಮಾನವಾಗಿ ಕಟ್ಟಿಸಿದನು.[38]

ಮೊದಲ್ಗಟ್ಟದ ಬಾಸಗಾವುಂಡನು ಅನ್ತಾತಂ ನಾಳ್ಗಾವುಣ್ಡತನ ಗೆಯ್ಯುತ್ತಮಿಣ್ದು ರಣಕಿಯ ಕಟ್ಟದ ಊರಂ ಮಾಡಿಸಿ ಬಳ್ಳಿಗೆರೆಯಂ ಕಟ್ಟಿಸಿ ಎರವಕಾವನೆಂಬ ಗದ್ದೆಯಂ ಮಾಡಿಸಿ ಬಾರ್ಚೆಶ್ವರಯೆಂಬ ದೇವಾಲ್ಯಮನೆತ್ತಿಸಿ ದೇವಸ್ವಕ್ಕೆಂದು ದತ್ತಿ ಬಿಟ್ಟಿದ್ದಾನೆ.[39]

ಮೇಲಿನ ಉದಾಹರಣೆಗಳಲ್ಲಿರುವ ಸಾಮಾನ್ಯವಾಗಿ ಕೆರೆ ಮತ್ತು ದೇವಾಲಯವೆರಡನ್ನೂ ಒಬ್ಬಾತನೇ ಕಟ್ಟಿಸಿರುವುದು ಶಾಸನಗಳಲ್ಲಿ ಗೋಚರವಾಗುತ್ತದೆ. ಗ್ರಾಮಕ್ಕೊಂದಾದರು ಕೆರೆ ಮತ್ತು ದೇಗುಲ ಇರಬೇಕೆಂಬ ಭಾವನೆ ಸ್ಥಾಯಿಯಾಗಿ ಇದ್ದುದರಿಂದಲೇ ಎರಡರ ಉಲ್ಲೇಖ ಒಬ್ಬೊಟ್ಟಿಗೇ ಕಾಣಿಸಿಕೊಳ್ಳುತ್ತದೆ. ಗ್ರಾಮದ ಮುಖಂಡನಾದ ಗಾವುಂಡರಿಗೆ ತನ್ನ ಗ್ರಾಮದ ಏಳಿಗೆ ಪ್ರಾಥಮಿಕ ಮಹತ್ವದ್ದಾಗಿ ಇದ್ದುದರಿಂದಲೇ ನೀರಾವರಿ ಯೋಜನೆಗಳಲ್ಲಿ ಸ್ವತಃ ಗಮನಹರಿಸುತ್ತಿದ್ದರು. ಕೆಲವೊಮ್ಮೆ ಸಂದರ್ಭಾನುಸಾರ ಕೆರೆಯ ಜೀರ್ಣೋದ್ಧಾರಕ್ಕೂ ನಿಗಾ ವಹಿಸುತ್ತಿದ್ದರು. ತಟ್ಟ ಕೆರೆಯನ್ನು ನನ್ನೆಯ ಗೌಡ ಜೀರ್ಣೋದ್ಧಾರ ಮಾಡಿದ್ದು.[40] ತೌವತಿ ಗೌಡನು ದೇವಾಲಯ ಜೀರ್ಣೋದ್ಧಾರ ಮಾಡುವುದರೊಂದಿಗೆ ಕೆರೆಯನ್ನು ಆಗಲಿಸಿದ್ದು[41] ಮುಂತಾದ ನೀರಿನ ಸದುಪಯೋಗಕ್ಕೆ ಕೈಗೊಂಡ ಕ್ರಮಗಳನ್ನು ಹೆಸರಿಸಬಹುದು.

ಬೋವಿಗೊಂಡನ ಹಳ್ಳಿಯ ಶಾಸನದ ಪ್ರಕಾರ[42] ದೊಡ್ಡ ಜಮೀನುದಾರನಾಗಿದ್ದ ವಿಕ್ಕಿ ರಾಮಗಾವುಂಡನು ಕೆರೆ ಮತ್ತು ತೂಬೊಂದನ್ನು ನಿರ್ಮಿಸಿದನು. ಈ ಶಾಸನ ಮುಂದುವರೆಸಿ ಅವನ ಮಕ್ಕಳು ಮತ್ತು ಮೊಮ್ಮಕ್ಕಳೂ ಸಹ ಕೆರೆಗಳನ್ನು ನಿರ್ಮಿಸಿದರೆಂದು ಹೇಳುತ್ತದೆ. ಇದರಿಂದ ಕೆಲವೊಂದು ಕುಟುಂಬಗಳಲ್ಲಿ ಕೆರೆ ನಿರ್ಮಾಣವು ಸಾಮಾನ್ಯ ವೃತ್ತಿಯೋಪಾದಿಯಲ್ಲಿ ಇತ್ತೆಂಬುದು ಅರಿವಾಗುತ್ತದೆ. ಬಹುಶಃ ಕೆರೆ ನಿರ್ಮಾಣವೇ ವ್ಯವಹಾರವಾಗಿದ್ದ ಸಂದರ್ಭದಲ್ಲಿ ಅದರಲ್ಲಿ ಕೆಲವೊಂದು ಕುಟುಂಬ ಪರಿಣತವಾಗಿತ್ತೆಂದು ಭಾಸವಾಗುತ್ತದೆ.

ಗ್ರಾಮದ ಮುಖ್ಯಸ್ಥನಾದ ಗಾವುಂಡನ ಸಾನಿಧ್ಯದಲ್ಲಿ ಹಲವು ಸಾರ್ವಜನಿಕ ಜನೋಪಯೋಗಿ ಕಾರ್ಯಗಳು ನಡೆಯುತ್ತಿದ್ದವು. ಗ್ರಾಮದಲ್ಲಿ ನಿರ್ಮಾಣ, ಭೂದಾನ ಇಲ್ಲವೆ ಇತರೆ ದಾನದತ್ತಿಗಳನ್ನು ಮಾಡಿದಾಗ ಅಲ್ಲಿ ಗಾವುಂಡರು ಇರಬೇಕಾಗಿದ್ದಿತು. ಇವನಿಲ್ಲದೆ ಯಾವುದೂ ಸಿಂಧುವಾಗುತ್ತಿರಲಿಲ್ಲ. ಏಕೆಂದರೆ ಅರಸನೊ ಸಾಮಂತರೋ ಅಥವಾ ಇತರರೊ ಕೆರೆ, ಬಾವಿ ಅಥವಾ ದೇವಾಲಯಗಳನ್ನು ಕಟ್ಟಿಸಬಹುದು. ದಾನದತ್ತಿಗಳನ್ನು ನೀಡಬಹುದು. ಆದರೆ ಅದನ್ನು ಕಾಯ್ದುಕೊಂಡು ಹೋಗುವ ಗುರುತರ ಹೊಣೆ ಮತ್ತೆ ಗಾವುಂಡರ ಮೇಲೆಯೆ ಇತ್ತು. ಆದ್ದರಿಂದ ಗಾವುಂಡರ ಪಾತ್ರ ಗಮನಾರ್ಹವಾದುದಾಗಿತ್ತು.

ಇತರೆ ಅಧಿಕಾರಿ ವರ್ಗದವರು

ಸನ್ದಿವಿಗ್ರಹಿ : ಗಂಗ ದೊರೆಯಾದ ಎರಡನೆಯ ನೀತಿಮಾರ್ಗನ ಶಾಸನವು ಸನ್ದಿವಿಗ್ರಹಿಯಾಗಿದ್ದ ಏಚಯ್ಯನು ಕೆರೆ ಕಟ್ಟಿಸಿ ಅದಕ್ಕೆ ಕಲ್ಲಿನ ತೂಬನ್ನು ನಿರ್ಮಿಸಿದನೆಂದು ಹೇಳುತ್ತದೆ.[43]

ಶ್ರೀ ಕರಣಾಧಿಕಾರಿ : ಶ್ರೀ ಕರಣಾಧಿಕಾರಿ ವಿಶ್ವನಾಥರು ನಿರಗುಂದ ನಾಡಿನಲ್ಲಿ ವೀರನರಸಿಂಹಪುರ ಅಗ್ರಹಾರ ನಿರ್ಮಿಸಿದ್ದಲ್ಲದೆ ಕೆರೆಗಳನ್ನು ಕಟ್ಟಿಸಿದ.[44]

ನಾಯಕ : ಲಕ್ಕುಂಡಿಯಲ್ಲಿಯ ಶಾಸನದ ಪ್ರಕಾರ ನನ್ನಿಮಯ್ಯ ನಾಯಕನು ತನ್ನ ತಂದೆ. ತಾಯ್ಗಳ ನೆನಪಿಗೆ ಕೆರೆಯೊಂದನ್ನು ಕಟ್ಟಿಸಿದನು. ಆಗ ಆಳುತ್ತಿದ್ದ ದೊರೆ ಆರನೆಯ ವಿಕ್ರಮಾದಿತ್ಯ.[45]

ಸೇನಬೋವ : ಹತ್ತಿಮತ್ತೂರಿನ ಸೇನಬೋವ ಕಾಮದೇವಭಟ್ಟನ ಮಗನಾದ ಕೋನಪ್ಪನು ಗೋವರ್ಧನಗಿರಿಯ ಗೇರುಸೊಪ್ಪೆ ಮಾರ್ಗದಲ್ಲಿ ಒಂದು ಕೆರೆಯನ್ನು ಕಟ್ಟಿಸಿದನು.[46]

ಮಸಣಯ್ಯನು ಉತ್ತರವಯ್ಯನ ಮಗನಾಗಿದ್ದು, ಉತ್ತರ ಕದಂಬ ಕುಲದ ನನ್ನಿಮಾರ್ತ್ತಣ್ಣ ಪಟ್ಟಳಿಗೆಯ ಎರೆಯಂಗರಸನ ಮಗ ಚಿಣ್ನಮರಸನಲ್ಲಿ ಸೇನಬೋವನಾಗಿದ್ದನು. ಮಸಣಯ್ಯನು ಈಗಿನ ಸಕ್ರೆ ಪಟ್ಟದ ಹೋಬಳಿ ಹೊನ್ನೆಯನಹಳ್ಳಿ ಹಾಳು ಗ್ರಾಮದಲ್ಲಿನ ಕೆರೆಯನ್ನು ಕಟ್ಟಿಸಿ ಕಲ್ಲುಗಳಿಂದ ಸುಭದ್ರವನ್ನಾಗಿ ಮಾಡಿ ಕೆರೆಗೆ ಹೊಂದಿಕೊಳ್ಳುವಂತೆ ದೇಗುಲವನ್ನು ನಿರ್ಮಿಸಿದನು.[47]

ಹೆಗಡೆಗಳು : ಕೊಂಡಾಲೆಯ ಶಾಸನದ ಪ್ರಕಾರ ಪ್ರಭುಶೆಟ್ಟಿ ಮತ್ತು ಜಕ್ಕಿಮಬ್ಬೆಯ ಮಗನಾದ ಹೆಗ್ಗಡೆ ಮಲ್ಲಿಮಯ್ಯನು ಕೆರೆಯೊಂದನ್ನು ಕಟ್ಟಿಸಿದನು.[48]

ಚಾವುಂಡಯ್ಯ ಎಂಬ ಪೆರ್ಗಡೆಯು ತೂಬೊಂದನ್ನು ನಿರ್ಮಿಸಿದ ಸಂದರ್ಭದಲ್ಲಿ ತಮ್ಮ ದೊರೆಗಳಂತೆ ಅಧಿಕಾರಿಗಳೂ ಸಹ ಜನರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವಲ್ಲಿ ಉತ್ಸುಕರಾಗಿದ್ದಾರೆ ಎಂಬುದನ್ನು ಶಾಸನವೊಂದು[49] ಅರುಹುತ್ತದೆ.

ಮೂರನೆಯ ರಾಚಮಲ್ಲನ ಶಾಸನವು ಪೆರ್ಗಡೆ ಸಂಕಯ್ಯನು ಕೆರೆಯೊಂದನ್ನು ರಿಪೇರಿ ಮಾಡಿದನೆಂದು[50] ಹೇಳುತ್ತದೆ.

ಪಟ್ಟಣಸ್ವಾಮಿ : ಸಾಂತರ ಅರಸು ವೀರಸಾಂತರನ ಶಾಸನವು[51] ಪಟ್ಟಣಸ್ವಾಮಿ ನೊಕ್ಕಯ್ಯನು (ನೊಕ್ಕಿಯ ಸೆಟ್ಟಿ) ಕೆರೆ ಕಟ್ಟಿಸಿ ನೂರು ಗದ್ಯಾಣಗಳಿಂದ ಉಗುರೆ ತೊರೆಯನ್ನು ಕೆರೆಗೆ ಹರಿಯುವಂತೆ ಮಾಡಿದನೆಂದು ಹೇಳುತ್ತದೆ.

ಸಾಮಂತರು

ಇಡೀ ಕರ್ನಾಟಕದಲ್ಲೇ ಸಾಮಂತರದಲ್ಲಿ ಹೆಚ್ಚಿನ ಸಂಖ್ಯೆಯ ಕೆರೆಗಳನ್ನು ಕಟ್ಟಿದವರೆಂದರೆ ನೊಳಂಬ ಪಲ್ಲವರು.[52] ಇವರ ನಿರ್ಮಿತ ಕೆರೆಗಳು ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಈ ಭಾಗದ ಇತರ ಸಾಮಂತರೆಂದರೆ ಅರಣಿಯ ಸೆಲ್ವಗಂಗರು, ತಾಡಿಗೊಲ, ಸುಗಟೂರು, ತೇಲ್ಕಲ್, ಮಹಾಬಲಿ ಬಾಣರು, ಕೊರಟಗೆರೆ, ಚಿಕ್ಕಬಳ್ಳಾಪುರ ಮತ್ತು ಆವಂತಿ ಪ್ರಭುಗಳು. ಗುಮ್ಮಿನಾಯಕನ ಪಾಳ್ಯದ ಮುಖ್ಯಸ್ತರು ಮತ್ತು ಮರಾಠ ನಾಯಕರೂ ಸಹ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.

ಹಾಸನ ಜಿಲ್ಲೆಯಲ್ಲಿ ಕೊಂಗಾಳ್ವರು, ಚೆಂಗಾಳ್ವರು ನಂತರ ಕದಂಬರು, ಜಾವಗಲ್ಲು, ಹೊಳೆನರಸೀಪುರ ಮತ್ತು ಐಗೂರು ನಾಯಕರು ಅಧಿಕಾರ ಹೊಂದಿದ್ದರು. ಇವರುಗಳು ಕೆರೆಕಟ್ಟಿ ಕಾಲುವೆಗಳನ್ನು ಕಟ್ಟಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತಿಹಾಸ ಕಾಲದಲ್ಲಿ ಹಲವಾರು ಸಾಮಂತರು ಆಳಿದ್ದಾರೆ. ಪ್ರಮುಖವಾಗಿ ಆಸಂದಿ ಗಂಗರು, ಕಳಸದ ಮುಖ್ಯಸ್ಥರು, ಆಳುಪರು, ಸೇನವಾರರು, ಸಾಂತರರು ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುವ ಸಾಮಂತರೆಂದರೆ ಸಾಂತರರು, ಕೆಳದಿ ಮುಖ್ಯಸ್ಥರು, ಸಂತೆಬೆನ್ನೂರು, ನಾಯಕರು, ಸಿಂದರು ಇವರಲ್ಲಿ ಸಾಂತರರು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಅಂತೆಯೇ ಈ ಭಾಗದಲ್ಲಿ ಪ್ರಬಲವಾಗಿ ಆಳಿದ ಕೆಳದಿ ನಾಯಕರೂ ಸಹ ಕೆರೆಕಟ್ಟೆ ನಿರ್ಮಾಣ ಮತ್ತು ಪುನರುಜ್ಜೀವನದಲ್ಲಿ ತೊಡಗಿಸಿಕೊಂಡು ಪ್ರದೇಶದ ಸಂಪದಭಿವೃದ್ಧಿಗೆ ಕಾರಣರಾಗಿದ್ದಾರೆ.

ತುಮಕೂರು ಮತ್ತು ಚಿತ್ರದುರ್ಗ ಪ್ರದೇಶಗಳಲ್ಲಿ ಹರತಿ ನಾಯಕರು ಪ್ರಧಾನ ಪಾತ್ರ ವಹಿಸಿದ್ದಾರೆ. ಕೊರಟಗೆರೆ ಮತ್ತು ಚಿಕ್ಕಬಳ್ಳಾಪುರದ ನಾಯಕರು ತಮ್ಮ ಕಾಲದಲ್ಲಾಗಲೇ ಅಸ್ತಿತ್ವದಲ್ಲಿದ್ದ ಕೆಲವೊಂದು ಕೆರೆಗಳನ್ನು ಪ್ರಸ್ತಾಪಿಸುತ್ತಾರೆ.

ಚಿತ್ರದುರ್ಗ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾದವರೆಂದರೆ ಹಟ್ಟಿ ನಾಯಕರು, ಚಿತ್ರದುರ್ಗ, ಮತ್ತಿಕೋಡು ನಾಯಕರು ಮತ್ತು ಉಚ್ಚಂಗಿ ಪಾಂಡ್ಯರು.

ಮೈಸೂರು ಪ್ರದೇಶದಲ್ಲಿ ಕಂಡು ಬರುವ ಸಾಮಂತರೆಂದರೆ ಉಮ್ಮತ್ತೂರು ನಾಯಕರು, ಕಳಲೆನಾಯಕರು, ಚಂಗಾಳ್ವರು ಇತ್ಯಾದಿ.

ಹೀಗೆ ಆಯಾಯ ಪ್ರದೇಶಗಳಲ್ಲಿ ಪ್ರಭಾವವನ್ನು ಮತ್ತು ಅಧಿಕಾರವನ್ನು ಹೊಂದಿದ್ದ ಸಾಮಂತರು ಕೆರೆಕಟ್ಟೆಗಳನ್ನು ಕಟ್ಟಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿದ್ದ ಕೆರೆಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿಯೂ ಅವರ ಹಿಂದಿನವರು ಹೇಗೆ ಕೆರೆ ನಿರ್ಮಾಣ ಚಟುವಟಿಕೆಗಳಲ್ಲಿ ಆಸ್ಥೆವಹಿಸುತ್ತಿದ್ದರು ಎಂಬುದು ಅರಿವಾಗುತ್ತದೆ. ಎಲ್ಲೆಲ್ಲಿ ನಾಯಕರು ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದರೊ ಆ ಸ್ಥಳೀಯ ಪ್ರದೇಶಗಳಲ್ಲಿ ತಮ್ಮ ನಾಯಕತ್ವಕ್ಕೆ ಮಾನ್ಯತೆಯನ್ನು ಕೆರೆಕಟ್ಟೆಗಳಂತಹ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೊರಕಿಸಿಕೊಳ್ಳುತ್ತಿದ್ದರು.

ನಾಯಕರು ಯಾವ ಮೂಲ ಪ್ರದೇಶದಿಂದ ಬಂದವರೊ ಸಹಜವಾಗಿ ಆ ಪ್ರದೇಶದ ಅಭಿವೃದ್ಧಿಯ ಕಡೆ ಗಮನ ಹರಿಸುವುದು ಸಹಜವಾದುದು. ಅಧಿರಾಜರು ಸಹ ತಮ್ಮ ಸಾಮಂತರು ನಿರ್ಮಾಣ ಅಥವಾ ದುರಸ್ತಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದರು. ಅಧಿರಾಜರ ಮತ್ತು ಸಾಮಂತರ ಸಹಕಾರ, ಪರಸ್ಪರ ವಿಶ್ವಾಸ ಪ್ರದೇಶದ ಸಮತೋಲನ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಈಗಾಗಿಯೇ ಕೆಲವೊಂದು ಪ್ರದೇಶಗಳು ನೀರಾವರಿ ಸೌಲಭ್ಯದಿಂದ ಪ್ರಗತಿ ಪಥದಲ್ಲಿ ಮುನ್ನಡೆದಿರುವುದು ಭಾಸವಾಗುತ್ತದೆ. ಇಂತಹ ಪರಿಸ್ಪರ ಅರಿವಿನಿಂದ ಹಾಸನ, ತುಮಕೂರು, ಚಿಕ್ಕಮಗಳೂರು, ಕೋಲಾರಗಳಂತಹ ಜಿಲ್ಲೆಗಳು ಅಭಿವೃದ್ಧಿಗಳಿಸಿದ್ದರೆ ಚಿತ್ರದುರ್ಗ ಮತ್ತು ಶಿವಮೊಗ್ಗಗಳಂತಹ ಜಿಲ್ಲೆಗಳು ಪರಸ್ಪರ ಸಹಕಾರವಿಲ್ಲದೆ ಹಿಂದುಳಿಯಬೇಕಾಯಿತು. ಡಾ. ಜಿ.ಆರ್. ಕುಪ್ಪುಸ್ವಾಮಿಯವರು[53] ಗುರುತಿಸಿರುವಂತೆ ಮಧ್ಯಯುಗದಲ್ಲಿ ರಾಜಕೀಯ ಕೇಂದ್ರ ಬಿಂದು ಬದಲಾದುದು ಕಾರಣವಾಗಿದೆ. ಹೊಯ್ಸಳೋದಯ ಕಾರಣದಿಂದ ಅದರ ಸನಿಹದಲ್ಲಿರುವ ಪ್ರದೇಶಗಳು ಅರಸರ ಗಮನಕ್ಕೆ ಕಾರಣವಾಗಿ, ಅವರ ಪ್ರಭಾವ ವಲಯಕ್ಕೆ ಸಿಲುಕಿದ ಅನುಕೂಲಸ್ಥರು ಮತ್ತು ಅಧಿಕಾರಿವರ್ಗದವರು ಕೆರೆಕಟ್ಟೆಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡು ಬಹು ಮುಖ್ಯವಾಗಿ ಅರಸರ ಅನುರಾಗಕ್ಕೆ ಪಾತ್ರರಾಗಲು ಪ್ರಯತ್ನಿಸಿದ್ದು ಕಂಡು ಬರುತ್ತದೆ.

 

[1]ಪಂಪಭಾರತ ೨, ೯೭ ವ.

[2] Mirashi V.V., The History and Inscription of the Satavahanas and Western Kshatrapas : PartI I, section II, B.No. SI.P. 121.

[3] Mysore Archaeological Reports 1929. No – 1.

[4](ಎಪಿಗ್ರಾಪಿಯ ಕರ್ನಾಟಿಕಾ – ರೈಸ್ ಸಂ.) ಕ – VIII, ಶಿಕಾರಿಪುರ – ೧೭೬.

[5] Gopal B.R. ‘Gudnapur Inscription of Kadamba Raviverma’, Srikanthika, Ed, B. K. Gururajarao. P.61.

[6] Kuppuswamy G.R. ‘Irrigation in Karnataka Inscriptions as a source’ P.145. QJMS LXXII, 3 & 4, 1991.

[7] Karnataka Inscriptions 40 – 41, 1141 A.D.

[8] South Indian Insctiptions, XI, ii, 124.

[9] MAR – 1910, P.17.

[10]ಚಿದಾನಂದ ಮೂರ್ತಿ ಎಂ. ಪೂರ್ವೋಕ್ತ, ಪು.೪೪೬.

[11] MAR – ೧೯೩೦, ಪು. ೨೩೫, ೧೦೮೦ A.D.

[12]ಚಿದಾನಂದ ಮೂರ್ತಿ ಎಂ. ಪೂರ್ವೋಕ್ತ, ಪು.೪೫೫.

[13] MAR – ೧೯೩೦, ಪು. ೨೩೫ – ೩೬, No.೭೬, ಶಿಕಾರಿಪುರ, ಹಳೇಬನ್ನೂರು.

[14]ಎ.ಕ. – ೯, ಬೇಲೂರು – ೩೩೮ (ಹೊಸ)

[15]ಎ.ಕ. – ೯, ಬೇಲೂರು – ೩೪೧ (ಹೊಸ)

[16]ಅದೇ.

[17] Kuppuswamy G.R. ‘Some aspectr of irrigation system in Karnataka’ P.404. QJMS LXXIV, 4, Dec, 1983.

[18]ಎ.ಕ. – III ನಂಜನಗೂಡು – ೧೯೨, ಪು.೧೧೫.

[19]ಎ.ಕ. – ೯, ಬೇಲೂರು – ೪೩೮.

[20]ಎ.ಕ. – ೩, (ಪರಿಷ್ಕೃತ), ೫೫೮, ಕ್ರಿ.ಶ.೧೧೪೫.

[21]ಎ.ಕ. – ೮, ಹಾಸನ – ೫೯, ಕ್ರಿ.ಶ.೧೩೧೦.

[22] SII – XV, ೫೭, ೧೧೮೫, ಡಂಬಳ, ಮುಂಡರಗಿ (ತಾ) ಗದಗ (ಜಿ)

[23]ಎ.ಕ. – VII, (ಪರಿಷ್ಕೃತ), ನಾಗಮಂಗಲ – ೮೩.

[24]ಎ.ಕ. – ೫, ಚನ್ನರಾಯಪಟ್ಟಣ – ೨೪೪, ಕ್ರಿ.ಶ.೧೨೧೦.

[25]ಎ.ಕ. – ೧೦, ಅರಸೀಕೆರೆ – ೧೮೬ ಮತ್ತು ೧೮೭.

[26]ಎ.ಕ. – ೬ (ರೈಸ್), ಕಡೂರು – ೧೬೧.

[27] MAR – ೧೯೨೪, ೧೯, P.೩೧.

[28]ಎ.ಕ. – ೯, ಬೇಲೂರು – ೪೭೩, ಕ್ರಿ.ಶ.೧೦೯೩.

[29]ನರಸಿಂಹಾಚಾರ್ ಆರ್. ‘ಕರ್ನಾಟಕ ಕವಿ ಚರಿತೆ’, ಪು.೨೭೭.

[30]ಅದೇ ಮತ್ತು ಪದ್ಮಣಾಂಕ ಕವಿಕೃತ ಪದ್ಮರಾಜ ಪುರಾಣ, ಸಂ: ಹಿರೇಮಠ ಆರ್.ಸಿ.

[31]ಎ.ಕ. – ೬ (ರೈಸ್), ಚಿಕ್ಕಮಗಳೂರು – ೧೫.

[32]ಎ.ಕ. – ೮, ಹಾಸನ – ೭೧, ಕ್ರಿ.ಶ.೧೦೯೫ – ೯೬.

[33]ಎ.ಕ. – ೯, ಬೇಲೂರು – ೧೯೦.

[34]ಎ.ಕ.V ಅರಸೀಕೆರೆ – ೧೫೭.

[35] MAR – ೧೯೦೬, ಪು.೮.

[36]ಎ.ಕ. – ೬ ಪಾಂಡವಪುರ – ೨೦,೧೧೭೬.

[37]ಎ.ಕ. – ೫, ಹಾಸನ – ೯೬.

[38]ಬೋಜರಾಜ ಬಿ.ಪಾಟೀಲ್, ‘ನಾಗರ ಖಂಡ ಒಂದು ಅಧ್ಯಯನ’ ಪುಟ – ೧೨೫.

[39]ಎ.ಕ. – ೯, ಬೇಲೂರು – ೪೮೪, ಕ್ರಿ.ಶ.೧೦೯೬.

[40] MAR – ೧೯೨೩, P.೧೧೩.

[41]ಬೋಜರಾಜ ಬಿ.ಪಾಟೀಲ್, ಪೂರ್ವೋಕ್ತ, ಪು.೧೨೩.

[42]ಎ.ಕ. – X, ಚಿಂತಾಮಣಿ – ೯, ಕ್ರಿ.ಶ.೧೧೦೦.

[43] MAR – ೧೯೧೬, P.೪೬.

[44]ಎ.ಕ. – ೫, ಚನ್ನರಾಯಪಟ್ನ – ೨೦೩, ಕ್ರಿ.ಶ.೧೨೨೩.

[45] SII – XI, ii, 196.

[46]ಎ.ಕ. – ೮, ನಗರ – ೫೪.

[47] MAR – ೧೯೩೯, ಕಡೂರು – ೩೭ ಮತ್ತು MAR – ೧೯೪೩, ಕಡೂರು – ೨೭.

[48]ಎ.ಕ. – XV, ೩೩೫.

[49] MAR – 1912, P.37.

[50] MAR – 1909, P.16.

[51]ಎ.ಕ. – VIII ಎನ್.ಆರ್. ೫೮, ೧೦೬೨ A.D.

[52] Kuppuswamy G.R. ‘Irrigation Facilities provided by Feudatory Families in South Karnataka’, The Quarterly Journal of the Mythic Society, Jan – March 1983. P.1 to 9.

[53]ಅದೇ.