ಅಧಿಕಾರೇತರರು ಮತ್ತು ಇತರ ವೃತ್ತಿ ಜಾತಿಗಳವರು

ಶೆಟ್ಟಿಗಳು : ದ್ವಾರಸಮುದ್ರದ ಪಟ್ಟಣಶೆಟ್ಟಿಯಾದ ಹೊಯ್ಸಳಶೆಟ್ಟಿಯ ಪತ್ನಿ ದೇಮಿಯಕ್ಕ ಕತ್ತರಿಘಟ್ಟದಲ್ಲಿ ಒಂದು ಜಿನಾಲಯ ಮಾಡಿಸಿದಾಗ ನೊಳಂಬ ಶೆಟ್ಟಿಯು ಅದಕ್ಕೆ ಅಹರ್ನಹಳ್ಳಿಯನ್ನು, ದಾನಶಾಲೆಯನ್ನು, ಎರಡು ಗಾಣಗಳನ್ನು, ಕೆರೆಯನ್ನು ದತ್ತಿಬಿಟ್ಟನು.[1]

ಎಲ್ಲೊ ಹರಿಯುತ್ತಿದ್ದ ನೈಸರ್ಗಿಕ ಕಾಲುವೆಯನ್ನು ತಿರುವಿ ಕೆರೆಯನ್ನು ನಿರ್ಮಿಸಿದ ವ್ಯಕ್ತಿ ಹಂಚಿಧರ್ಮಶೆಟ್ಟಿಯ ಸಾಧನೆಗಳನ್ನು ಒಂದು ಶಾಸನವು ಹೊಗಳುತ್ತದೆ.[2]

ಕಮಟಚೆಟ್ಟಶೆಟ್ಟಿ ಬಾಣಾವರದಲ್ಲಿ ಚಿಕ್ಕಕೆರೆಯೊಂದನ್ನು ದೊಡ್ಡದನ್ನಾಗಿ ಮಾಡಿದನು. ಮತ್ತು ತನ್ನ ಮಗನ ಹೆಸರಿನಲ್ಲಿ ಕನಕನಕೆರೆಯನ್ನು ಕಟ್ಟಿಸಿದನು. ಜೊತೆಗೆ ಬಂಚಿಕಟ್ಟೆ ಎಂಬ ಮತ್ತೊಂದು ಕೆರೆಯನ್ನು ವಿಸ್ತರಿಸಿದನು.[3]

ಸಂತರು ಮತ್ತು ಸನ್ಯಾಸಿಗಳು : ಚಿಲ್ಲುಕಭಟಾರ ಎಂಬ ಸುಪ್ರಸಿದ್ಧ ಶೈವಸನ್ಯಾಸಿ ಐದು ಕೆರೆಗಳನ್ನು ಕಟ್ಟಿಸಿದರೆಂದು ಒಂದು ಶಾಸನವು ತಿಳಿಸುತ್ತದೆ.[4]

ವೀರಶೈವ ಸುಧಾರಕ ಸಿದ್ಧರಾಮ, ಗುಡಿಗಳನ್ನು ಕಟ್ಟುವ ಪದ್ಧತಿಗಿಂತ ಕೆರೆ ಕಾಲುವೆಗಳ ನಿರ್ಮಾಣ ಹೆಚ್ಚು ಉಪಯುಕ್ತ ಎಂದು ಬೋಧಿಸಿದ. ತಾನೇ ಸೊಲ್ಲಾಪುರದಲ್ಲಿ ಭಾರಿಕೆರೆಯನ್ನು ಕಟ್ಟಿಸಲು ಮುಂದೆ ನಿಂತ. ಆ ಕೆರೆ ಇವತ್ತಿಗೂ ಜನರಿಗೆ ಉಪಯುಕ್ತವಾಗಿದೆ.[5]

ವೀರಶೈವ ಶರಣ ಮಡಿವಾಳ ಮಾಕಯ್ಯನಿಗೆ ಸಂಬಂಧಿಸಿದ ಕೆರೆ ಬಸವಕಲ್ಯಾಣಕ್ಕೆ ೫ ಕಿ.ಮೀ. ಹತ್ತಿರವಿರುವ ತ್ರಿಪುರಾಂತಕ ಸರೋವರ.[6]

ಶ್ರೀರಂಗ ಪಟ್ಟಣಕ್ಕೆ ವಾಯುವ್ಯದಲ್ಲಿ ೧೮ ಕಿ.ಮೀ. ದೂರದಲ್ಲಿರುವ ತೊಣ್ಣೂರಿನ ಮೋತಿ ತಲಾಬನ್ನು ಶ್ರೀರಾಮನುಜಾಚಾರ್ಯರು ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಿದಾಗ ನಿರ್ಮಿಸಿದರೆಂದು ಹೇಳಲಾಗುತ್ತದೆ. ಈಗ ಇದನ್ನು ಲಕ್ಷ್ಮೀಸಾಗರವೆಂದು[7] ಕರೆಯಲಾಗುತ್ತದೆ.

ಬಳೆಗಾರರು : ಬಳೆಗಾರ ವೃತ್ತಿಗೆ ಸೇರಿದ ಬಸವಗೌಡನು ಕೂಡಲೂರಿನಲ್ಲಿ ತ್ರೈಲೋಕ್ಯ ಸಮುದ್ರವನ್ನು ನಿರ್ಮಿಸಿದನು.[8]

ಕಾವಲುಗಾರ : ಸಿರಾ ತಾಲ್ಲೂಕಿನ ಅಮರಪುರ ಶಾಸನವು ಬೆಟ್ಟ ರಾಚಯ್ಯನೆಂಬ ಕಾವಲುಗಾರನು ಕೆರೆ ಮತ್ತು ದೇಗುಲವೊಂದನ್ನು ನಿರ್ಮಿಸಿದುದನ್ನು ದಾಖಲಿಸುತ್ತದೆ.[9]

ಮಾವುತ : ಕ್ರಿ.ಶ. ೧೧೯೫ರ ಮಾದುಡಿ ಶಾಸನವು[10] ಸ್ಥಳೀಯ ಕೆರೆಯನ್ನು ಆನೆ ಸವಾರ ಮಾವುತನು ನಿರ್ಮಿಸಿದನೆಂದು ಹೇಳುತ್ತದೆ.

ದೀವರು : ದೀವರ ಕೋಬಿಗಾವುಂಡನು ಕೋಬೇಶ್ವರ ದೇವಾಲಯದ ಎದುರಿನಲ್ಲಿ ಕೆರೆಕಟ್ಟಿಸಿ ಅದನ್ನು ನೂಲಪರ್ವಹಬ್ಬದಂದು ದತ್ತಿನೀಡಿದನೆಂದು ಕ್ರಿ.ಶ. ೧೧೦೦ – ೦೧ರ ಶಾಸನ[11] ಹೇಳುತ್ತದೆ.

ಸುವರ್ಣ್ಣಕಾರ ಮತ್ತು ರಜಕ ವೃತ್ತಿ ಜಾತಿಗಳು : ಸಾಲಿಗ್ರಾಮದ ಗಂಗರಾಜ ರಾಚಮಲ್ಲನ ಪೆರ್ಜ್ಜರಂಗಿ ದಾನಶಾಸನವು[12] ಹಳ್ಳಿಯ ಮೇರೆಯಲ್ಲಿ ಆಸ್ತಿತ್ವದಲ್ಲಿದ್ದ ೧೪ ಕೆರೆಗಳನ್ನು ಹೆಸರಿಸುತ್ತದೆ. ಉಲ್ಲೇಖಿತ ಕೆರೆಗಳಲ್ಲಿ ಸುವರ್ಣ್ಣಕಾರ ತಟಾಕ ಮತ್ತು ರಜಕ ತಟಾಕಗಳು ಉಲ್ಲೇಖಾರ್ಹ. ಇದರಿಂದ ಎರಡು ಸಮುದಾಯಗಳು ಬೇರೆ ಬೇರೆ ಬಡಾವಣೆಗಳಲ್ಲಿ ವಾಸವಾಗಿದ್ದರೆಂದು ಅರಿವಾಗುತ್ತದೆ. ಅಲ್ಲದೆ ತಮ್ಮ ತಮ್ಮ ಕೆರೆಗಳನ್ನು ಬಳಸುತ್ತಿದ್ದರೆಂಬುದು ವ್ಯಕ್ತವಾಗುತ್ತದೆ.

ಮಹಾಜನರು

ಇತಿಹಾಸ ಕಾಲದಲ್ಲಿ ಹಲವಾರು ಸಮುದಾಯ ಸಂಘಟನೆಗಲೂ ಸಹ ಕೆರೆ ನಿರ್ಮಾಣದಲ್ಲಿ ತೊಡಗಿವೆ. ಶ್ರವಣಬೆಳಗೊಳ, ಬೇಲೂರು, ದ್ವಾರಸಮುದ್ರಗಳು ಹೆಚ್ಚಿನ ಸಮುದಾಯದವರನ್ನು ಆಕರ್ಷಿಸಿದ್ದು ಪರಿಣಾಮವಾಗಿ ಕೆರೆ ನಿರ್ಮಾಣದಲ್ಲಿ ತೊಡಗುವಂತೆ ಮಾಡಿದೆ.

ಜಗದೇಕಮಲ್ಲ ಎರಡನೆಯ ಜಯಸಿಂಹನ ಮಂತೂರು ಶಾಸನದ ಪ್ರಕಾರ ಊರೊಡೆಯ ಮದುಸೂದನ ಮತ್ತು ಮಂತೂರಿನ ಮಹಾಜನರು ಒಡಗೂಡಿ ರಟ್ಟ ಸಮುದ್ರವನ್ನು ಕಟ್ಟಿಸಿದರು.[13]

ಹೊಯ್ಸಳ ಅರಸ ಇಮ್ಮಡಿ ಬಲ್ಲಾಳನ ಕಾಲದ ಶಾಸನವು ಶಾಂತಿ ಸಮುದ್ರವನ್ನು ಕೊಳತ್ತೂರಿನ ಮಹಾಜನರು ಮತ್ತು ಶಾಂತಲಾದೇವಿಯರು ಕಟ್ಟಿಸಿದರೆಂದು ಹೇಳುತ್ತದೆ.[14]

ಮಹಾದೇವ, ರುದ್ರಶಿವ ಮತ್ತು ೫೦ ಕುಟುಂಬಗಳವರು ಒಂದು ಗೂಡಿ ಊರಕೆರೆಯನ್ನು ಕಟ್ಟಿದರೆಂದು ನವಲೆ ಶಾಸನ ಅರುಹುತ್ತದೆ.[15]

ಅರಸೀಕೆರೆಯ ಮಹಾಜನರು ನವಿಲುದೋಣಿಗೆ ತೂಬನ್ನು ಕಟ್ಟಿಸಿ ಭೂದಾನ ಮಾಡಿದ್ದಾರೆ.[16]

ಧಾರವಾಡ ಜಿಲ್ಲೆಯ ನರಗುಂದದಲ್ಲಿ ಸಾರ್ವಜನಿಕರಿಂದ ಒಂದು ಕೆರೆ ನಿರ್ಮಾಣವಾಗಿದೆ.[17]

ಹೀಗೆ ಅಗ್ರಹಾರದ ಮಹಾಜನರೇ ತಮ್ಮ ಕೆರೆಯನ್ನು ತಾವೇ ನಿರ್ಮಸಿಕೊಳ್ಳಲು ತಮ್ಮ ಜಮೀನಿಗೆ ನೀರನ್ನು ಒದಗಿಸಿಕೊಳ್ಳುವ ಸುದುದ್ದೇಶವನ್ನೇ ಹೊಂದಿತ್ತು. ಇದರ ನೇತೃತ್ವವನ್ನು ಸಾಮಾನ್ಯವಾಗಿ ಮುಖ್ಯಸ್ಥ ಅಥವಾ ಊರೊಡೆಯ ಹೊತ್ತುಕೊಳ್ಳುತ್ತಿದ್ದನು.

ಜನಸಾಮಾನ್ಯರು

ನರಗುಂದದ ಶಾಸನದ ಪ್ರಕಾರ ಈಶ್ವರಯ್ಯ ಮತ್ತು ಸಂಕಯ್ಯರು ಈಶ್ವರ ಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದರು.[18]

ಹೊರ್ಜಿಯ ಎನ್ನುವವನು ಗೋವಿಂದರಾಜಪುರದಲ್ಲಿ ಕೆರೆಯೊಂದನ್ನು ಕಟ್ಟಿಸಿದನು.[19]

ಬಾಳಗಂಚಿಯ ಶಾಸನದ[20] ಪ್ರಕಾರ ಕುತ್ತಾರ ಜೀಯ ಎನ್ನುವವನ ಶಿವದೇವಾಲಯ ಮತ್ತು ಕೆರೆಯೊಂದನ್ನು ಕಟ್ಟಿಸಿದನು.

ಕೋಸಿಗವಳ್ಳಿಯ ‘ಕಣ್ಣಮ್ಮನಿಗೆ ಬಿಱವದ್ದೆಗಂ ಪುಟ್ಟಿದ ಕನ್ನಯ್ಯನೆರಡು ದೇಗುಲವ ಮಾಡಿಸಿ ಕೆರೆಯಂ ಕಟ್ಟಿಸಿದ ಧರ್ಮಗೆಯ್ಯುತ್ತಿರೆ’ ಎಂದು ಸೊರಬದ ಶಾಸನವೊಂದು[21] ಅರುಹುತ್ತದೆ.

ಆದೋಣಿಯ ಬಂಡೇಶಾಸನವು ಒಂದು ಪ್ರಾಚೀನ ಶಾಸನವಾಗಿದ್ದು ಇದರಲ್ಲಿ ಮೂರನೆಯ ಪುಲಮಾಯಿಯ ಉಲ್ಲೇಖವಿದೆ. ಇದರ ಪ್ರಕಾರ ಗೃಹಪತಿ ಸಂಭ ಎನ್ನುವವನು ವೇಪುರಕ ಎಂಬಲ್ಲಿ ಕೆರೆಯೊಂದನ್ನು ನಿರ್ಮಿಸಿದನು.[22]

ಸ್ತ್ರೀಯರು

ಕೆರೆ ನಿರ್ಮಾಣದಲ್ಲಿ ಪುರುಷರಂತೆಯೇ ಸ್ತ್ರೀಯರೂ ತೊಡಗಿರುವುದು ಕಂಡುಬರುತ್ತದೆ. ಬನವಾಸಿಯ ಮಧುಕೇಶ್ವರ ದೇವಾಲಯದ ಸನಿಹ ಇರುವ ನಾಗಪ್ರತಿಮೆ ಮತ್ತು ಶಾಸನ ಚುಟು ರಾಜವಂಶಸ್ಥರಿಗೆ ಸೇರಿದ್ದು, ಅರಸನಾಗಿದ್ದ ಹರಿತಿಪುತ್ರ ವಿಷ್ಣು ಕಡ ಚುಟುಕುಲಾನಂದ ಶಾತಕರ್ಣಿಯ ಆಳ್ವಿಕೆಯನ್ನು ಪ್ರಸ್ತಾಪಿಸುತ್ತದೆ. ಮಹಾರಾಜನ ಮಗಳಾದ ಮಹಾಬುವಿಯ (ಮಹಾಬೋಜಿ) ಯುವರಾಜ ಶಿವಸ್ಕಂದ ನಾಗಶ್ರೀಯ ತಾಯಿಯಾಗಿದ್ದು, ನಾಗಪ್ರತಿಮೆಯೊಂದನ್ನು, ಕೆರೆ ಮತ್ತು ವಿಹಾರವನ್ನು ಕಟ್ಟಿಸಿದಳು. ಅಮಾತ್ಯಸ್ಕಂದಸತಿಯು ಅದರ ನಿರ್ವಹಣೆ ಹೊತ್ತಿದ್ದು ಆಚಾರ‍್ಯ ಇಂದ್ರಮಯೂರಕ ಅಥವಾ ಸುಜಗಸ್ತನ ಶಿಷ್ಯ ನಟಕನು ನಾಗವನ್ನು ಕೆತ್ತಿದನೆಂದು ಹೇಳುತ್ತದೆ.[23]

ಕ್ರಿ.ಶ. ೯೨೦ರ ಬರಗೂರು ಶಾಸನದ ಪ್ರಕಾರ, ನರನಬ್ಬೆ ಎಂಬಾಕೆ ಕೆರೆಯೊಂದನ್ನು ಕಟ್ಟಿಸಿದಳು.[24]

ಮೂರನೇಯ ಕೃಷ್ಣನ ಕುಡುತಿನಿ ಶಾಸನವು ಕೆರೆಯೊಂದಕ್ಕೆ ೬೨ ಮತ್ತರ್ ಭೂಮಿಯನ್ನು ದಾನಮಾಡಿದುದನ್ನು ದಾಖಲಿಸುತ್ತದೆ.[25] ಈ ಕೆರೆಯ ಇಂದಿಗೂ ಅಸ್ತಿತ್ವದಲ್ಲಿದ್ದು ಕೆರೆ ಕಟ್ಟಿಸಿದವಳು ಪದ್ಮಾವತಿ ಎಂಬಾಕೆ.

ಬಲದೇವನೆಂಬಾತನ ತಾಯಿ ನಾಗಿಯಕ್ಕ ಶ್ರವಣ ಬೆಳಗೊಳದಲ್ಲಿ ಕೆರೆಯೊಂದನ್ನು ಕಟ್ಟಿಸಿದ ವಿಷಯ ಶಾಸನದಲ್ಲಿ ಪ್ರಸ್ತಾಪಿತವಾಗಿದೆ.[26]

ಮಾಚಿಕಬ್ಬೆ ಜಿನಾಲಯ ನಿರ್ಮಿಸಿದುದರ ಜೊತೆಗೆ ಕೆರೆಯೊಂದನ್ನು ನಿರ್ಮಿಸಿದಳು.[27]

ಲಕ್ಕುಂಡಿಯಲ್ಲಿರುವ ಕೆರೆ ಈ ಸುಸ್ಥಿತಿಯಲ್ಲಿಲ್ಲವಾದರೂ ಅದು ಸಾಕಷ್ಟು ಪ್ರಾಚೀನವಾದುದೆನಿಸುತ್ತದೆ. ಇದು ಅತ್ತಿಮಬ್ಬೆಯಿಂದ ನಿರ್ಮಾಣಗೊಂಡಿರುವ ಸಾಧ್ಯತೆ ಇದೆ.[28]

ಗಂಗದೊರೆ ಎರಡನೆ ರಾಚಮಲ್ಲನ ಶಾಸನವು[29] ಶಾಕರರ ಸೂಲೆಬ್ಬೆಯ ಮಗಳಾದ ದಿವಬ್ಬೆಯು ಕೆರೆಯ ತೂಬೊಂದನ್ನು ನಿರ್ಮಿಸಿದಳೆಂದು ಪ್ರಸ್ತಾಪಿಸುತ್ತದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಕೆರೆಯ ಬಗೆಗಿನ ಅತ್ಯಂತ ಪ್ರಾಚೀನ ಉಲ್ಲೇಖ ಇರುವುದು ರಾಷ್ಟ್ರಕೂಟ ದೊರೆ ಇಂದ್ರವಲ್ಲಭನ ಶಾಸನದಲ್ಲಿ. ಕೆರೆಯ ವೆಚ್ಚಕ್ಕಾಗಿ ಒಂದು ಗ್ರಾಮದ ದಾನವನ್ನು ಬಾಡಮ್ಮ ಎಂಬಾಕೆ ನೀಡಿದ ಪ್ರಸ್ತಾಪ[30] ಅದರಲ್ಲಿದೆ.

ಪುತ್ತೂರಿನ ಕ್ರಿ.ಶ. ಸಾವಿರದ ಆಲುಪ ಜಯಸಿಂಹನ ಶಾಸನದ[31] ಪ್ರಕಾರ ಮಾಚಬ್ಬರಸಿಯು ಕಗ್ಗಲ್ಲಿನ ಭೂಮಿಯನ್ನು ಪಡೆದು ತೊರೆಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಿ ಫಲವತ್ತನ್ನಾಗಿ ಮಾಡಿದಳು.

ಸಾಂತರ ಮನೆತನದ ಚಟ್ಟಲದೇವಿಯೆಂಬುವಳೂ ಕೆರೆ ಕಾಲುವೆಗಳನ್ನು ಕಟ್ಟಿಸಿದಳು.[32]

ಹಾನಗಲ್ ಶಾಸನದ[33] ಪ್ರಕಾರ ಮೊದಲನೆ ಸೋಮೇಶ್ವರ ಪತ್ನಿ ಮಹಾದೇವಿಯು ಕೆರೆ ಮತ್ತು ಬಾವಿಗಳನ್ನು ಕಟ್ಟಿಸಿದಳು.

ಮಂತ್ರಿಯಾಗಿದ್ದ ಗೋವಿಂದಮಯ್ಯ, ನಾಗರುದ್ರಯ್ಯ ಮತ್ತು ಬೂಚಿರಾಜರ ತಾಯಿಯಾದ ಮಾಕನವ್ವೆಯು ಮಾಕ ಸಮುದ್ರವನ್ನು ಕಟ್ಟಿಸಿದಳೆಂದು ಹಾಸನದ ಶಾಸನವೊಂದು[34] ದಾಖಲಿಸುತ್ತದೆ.

ಎರಡನೆ ವೀರಬಲ್ಲಾಳನ ಕಾಲದ ಚನ್ನರಾಯಪಟ್ಟಣದ ಶಾಸನವು[35] ಮಾಚಿರಾಜನ (ಮಾಚಯ್ಯ ದಂಡನಾಯಕ) ಪತ್ನಿ ಶಾಂತಲಾ ದೇವಿಯು ಕೆರೆ ಕಟ್ಟಿಸಿ ಅದಕ್ಕೆ ದತ್ತಿ ಬಿಟ್ಟಳೆಂದು ಅರುಹುತ್ತದೆ.

ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಮಂತ್ರಿ ಗೋವಿಂದಮಯ್ಯನ ತಾಯಿಯಾದ ಮಕನ್ವೆಯು ಕೆರೆ ಕಟ್ಟಿಸಿದಳು.[36]

ಶ್ರವಣಬೆಳಗೊಳದ ಶಾಸನವು ವಿಲಸನಕಟ್ಟೆಯನ್ನು ಶಾಂತಲಾದೇವಿ ಕಟ್ಟಿದುದನ್ನು ಹೇಳುತ್ತದೆ.[37]

ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾದುದರಿಂದ ‘ಸ್ತ್ರೀ’ ಕೆರೆಯ ನೀರಾವರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಉಲ್ಲೇಖಗಳು ಬಹಳ ಕಡಿಮೆಯೇ ಇವೆ. ಕೆಲವೊಮ್ಮೆ ರಾಜಮನೆತನದ ಮಹಿಳೆಗೆ ಕೆರೆ ನಿರ್ಮಾಣ ಸಾಧ್ಯವಾಗಬಹುದಾದರೂ, ಪ್ರತ್ಯೇಕ ಆರ್ಥಿಕ ಸಾರ್ವಭೌಮತ್ವ ಸಾಮಾನ್ಯ ಸ್ತ್ರೀಗೆ ಸಾಧ್ಯವಿರಲಿಲ್ಲವಾಗಿ ಆಕೆ ಅಂತಹ ಚಟುವಟಿಕೆಯಿಂದ ದೂರವೇ ಉಳಿದಳು. ಆದರೆ ಚೆನ್ನಗಿರಿಯಲ್ಲಿ ಇರುವ ‘ಸೂಳೆಕೆರೆ’ ಎಂಬ ಹೆಸರಿನ ಹಾಗೂ ಸ್ಥಳೀಯ ಸಂಪ್ರದಾಯದ ಆಧಾರದ ಮೇಲೆ ಆರ್ಥಿಕವಾಗಿ ಅನುಕೂಲಸ್ಥಿತಿಯಲ್ಲಿದ್ದ ವೇಶ್ಯೆಯಿಂದ ನಿರ್ಮಾಣವಾಯಿತೆಂಬುದಾಗಿ ಉದಾಹರಿಸಬಹುದು.

ಕೆರೆಯ ನಾಮಾವಳಿಯಲ್ಲಿ ನಿರ್ಮಾತೃಗಳು

ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದವರು ತಮ್ಮ ಹೆಸರನ್ನೇ ದೇವಸ್ಥಾನಗಳಿಗೆ ಇಡುವುದು ಸಾಮಾನ್ಯ. ಅದೇ ರೀತಿ ಕೆರೆಗಳಿಗೂ ತಮ್ಮ ಹೆಸರನ್ನೇ ಇಟ್ಟ ಉದಾಹರಣೆಗಳು ಕೆಲವು ಶಾಸನಗಳಲ್ಲಿ ಕಂಡು ಬರುತ್ತದೆ.

ರಟ್ಟ ವಂಶೋದ್ಭವನಾದ ಸಾಮಂತ ಎರೆಯಮ್ಮನ ಹೆಸರಿನಲ್ಲಿ ‘ರಟ್ಟ ಸಮುದ್ರ ಕೆರೆ’ ನಿರ್ಮಾಣವಾಗಿದೆ.[38] ಗಂಗಸಮುದ್ರ.[39] ಪಟ್ಟಣಸ್ವಾಮಿ ನೊಕ್ಕಯ್ಯ ಎಂಬಾತನು ಕಟ್ಟಿಸಿದ ಕೆರೆ ಪಟ್ಟಣಸ್ವಾಮಿಗೆರೆ.[40]

ಮಹಾಕವಿ ಪಂಪನ ನೆನಪಿಗಾಗಿ ಅವನ ತಮ್ಮ ಜಿನವಲ್ಲಭನು ‘ಕವಿತಾ ಗುಣಾರ್ಣವ’ ಎಂಬ ಕೆರೆಯನ್ನು ಕಟ್ಟಿಸಿದ ಸಂಗತಿಯು ಗಂಗಾಧರಂ ಶಾಸನದಲ್ಲಿದೆ.[41]

ಹಿಂದೊಮ್ಮೆ ಬಹುಶಃ ವ್ಯಕ್ತಿಯಿಂದ ನಿರ್ಮಾಣಗೊಂಡ ಕೆರೆಯ ಹೆಸರಿನಿಂದ ಕರೆಯಲಾಗುತ್ತಿದ್ದ ಊರಿನ ಹೆಸರುಗಳು ಇಂದು ಸ್ವಲ್ಪ ಬದಲಾವಣೆಗೊಂಡಿದೆ. ಗಂಗಸಮುದ್ರ ಇಂದು ಗಂಗಸಂದ್ರವಾಗಿದೆ.[42] ಶಿವನ ಸಮುದ್ರ ಮಾಯಾಸಮುದ್ರಗಳು ಇಂಥವೇ ಊರುಗಳಾಗಿದ್ದು ಹಿಂದೆ ತಾವು ಹೊಂದಿದ್ದ ಕೆರೆಗಳನ್ನು ಇವು ಸೂಚಿಸುತ್ತವೆ.[43]

ಈಗಿನ ಕೆಲವು ಕೆರೆ ನಾಮಾವಳಿಗಳಲ್ಲಿ ಇರುವ ಹೆಸರುಗಳು ವ್ಯಕ್ತಿವಾಚಕವಾಗಿ ಕಂಡು ಬರುತ್ತವೆ. ಅದು ಕೆರೆ ನಿರ್ಮಾತೃಗಳ ಬಗ್ಗೆ ಹಾಗೂ ಅದಕ್ಕೆ ಸಂಬಂಧಿತರ ಮೇಲೆ ಒಂದಷ್ಟು ಬೆಳಕು ಬೀರುತ್ತದೆ ಎಂಬ ದೃಷ್ಟಿಯಿಂದ ಅರ್ಥೈಸಿಕೊಳ್ಳಲು ಸಾಧ್ಯ. ಕೆರೆನಾಮಗಳನ್ನು ನಿರ್ದಿಷ್ಟ ಮತ್ತು ವಾರ್ಗಿಕಗಳೆಂದು ಎರಡು ಭಾಗವಾಗಿ ಗುರುತಿಸಬಹುದು. ನಿರ್ದಿಷ್ಟ ಮತ್ತು ವಾರ್ಗಿಕಗಳೆರಡೂ ಸೇರಿ ಒಂದು ಹೆಸರು ಎನಿಸಿಕೊಂಡರೂ ಅವೆರಡರಲ್ಲಿ ಮೊದಲನೆಯದೇ ನಿಜವಾದ ಕೆರೆಯ ಹೆಸರು. ಏಕೆಂದರೆ ಇತರ ಕೆರೆನಾಮದಿಂದ ಪ್ರತ್ಯೇಕಿಸುವ ಭಾಗವೆಂದರೆ ಅದೇ.

ದೇವಿಂಗೆರೆ, ಕೌಟಲಕೆರೆ, ಕಾಳಿಸೆಟ್ಟಕೆರೆ,[44] ಅಜ್ಜನ ಕೊಳನಕೆರೆ, ಅಯ್ಯನಾಯಕಿಯ ಕೆರೆ, ಕಂಜಣನ ಕೆರೆ, ಕಂನಲ್ಲಮಾನಿಯ ಕೆರೆ, ಕಾಮಾಡಿ ಸೆಟ್ಟಿಯ ಕೆರೆ, ಕೇಣಿಗನ ಕೆರೆ, ಕೊಂಗಾಳ್ವನ ಕೆರೆ, ಕ್ಕಂಬಾಳನ ಕೆರೆ, ಚವುಡೆಯನ ಕೆರೆ, ಚೌರಿಯ ಸೋಮನಾಯಕನ ಕೆರೆ, ಜಕ್ಕವೆಗೆರೆ, ತಲ್ಲಿಗನ ಕೆರೆ, ದಾಸಿಶೆಟ್ಟಿಯ ಕೆರೆ, ಸಿರಿಗನ ಕೆರೆ, ಸೆಟ್ಟಿಗೆರೆ, ಹರಿಯಣ್ನಗಳ ಕೆರೆ ಇವುಗಳು ಹೊಯ್ಸಳೋದಯ ಪ್ರದೇಶದ ಶಾಸನಗಳಲ್ಲಿ[45] ಕಂಡು ಬಂದಿದೆ.

ಮೇಲಿನ ಕೆಲವು ಉದಾಹರಣೆಗಳಿಂದ ವ್ಯಕ್ತವಾಚಕಗಳೊಂದಿಗೆ ಬರುವ ಕೆರೆಗಳು, ಅವುಗಳ ನಿರ್ಮಾತೃಗಳು ಅವರೇ ಆಗಿರಬೇಕೆಂಬ ಬಗ್ಗೆ ಅಥವಾ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಪಟ್ಟವರಾಗಿರಬೇಕೆಂದು ಊಹಿಸಲು ಅಡ್ಡಿಯಿಲ್ಲ.

ಕೆರೆ ನಿರ್ಮಾಣದ ಉದ್ದೇಶ

ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸ
ಜ್ಜೆರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬದ
ರ್ಗೆರೆ ವಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಂತೆಲ್ಲವಂ ಪಿಂದೆ ತಾ
ಯೆಱದಳ್ವಾಲೆರೆವಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾ ಮಾತ್ಯನಾ[46]

ತಾಯಿ ಹಾಲನೀಯುವಾಗ ಕಂದನಿಗೆ ಕಿವಿಯಲ್ಲಿ ಹೇಳುವ ಈ ಪಿಸುಮಾತು ಹಿಂದಿನವರು ತಮ್ಮ ನಿಜಜೀವನದಲ್ಲಿ ಪಾಲಿಸಬೇಕಾದ ನಿಯಮಗಳಾಗಿವೆ. ಇವುಗಳಲ್ಲಿ ಕೆರೆಬಾವಿಗಳ ನಿರ್ಮಾಣವು ಪ್ರಥಮ ಪ್ರಾಶಸ್ತ್ಯದಲ್ಲಿ ಸೇರಿರುವುದು ಬಹುಮಾನ್ಯವಾದುದು. ಇದರಿಂದ ಅಂದಿನ ಪರಿಸ್ಥಿತಿಯಲ್ಲಿ ಕೆರೆಬಾವಿಗಳ ನಿರ್ಮಾಣವು ಹೆಚ್ಚಿನ ಮಹತ್ವ ಹೊಂದಿದುದು ಸ್ಪಷ್ಟವಾಗುತ್ತದೆ.

ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ, ಕೆರೆಗಳು ಜನ ಹಾಗೂ ದನಗಳ ಆಹಾರದ ವಿಷಯದಲ್ಲಿ ಹಳ್ಳಿಗಳನ್ನು ಸ್ವಯಂಪೂರ್ಣವಾಗಿ ಮಾಡಿದ್ದವು. ರಾಜ್ಯದ ಬಹುಪಾಲು ಸಂಪತ್ತನ್ನು ಉತ್ಪತ್ತಿ ಮಾಡಿದ್ದವು. ಅಭಾವ ಹಾಗೂ ಪ್ರವಾಹಗಳ ವಿರುದ್ಧ ರಕ್ಷಣೆ ಒದಗಿಸಿದ್ದವು. ಬಾವಿಗಳಲ್ಲಿ ನೆಲಮಟ್ಟಕ್ಕೆ ಹತ್ತಿರದಲ್ಲೆ ನೀರು ಸಿಗುವಂತೆ ಅಂತರ್ಜಲ ಮಟ್ಟ ಮೇಲುಗಡೆ ಇರುವಂತೆ ಮಾಡಿದ್ದವು. ಮಣ್ಣು ಕೊಚ್ಚಿ ಹೋಗುವುದನ್ನು ತಡೆದಿದ್ದವು. ಸುತ್ತಲ ಪ್ರದೇಶವನ್ನು ತಂಪಾಗಿ, ಚೆಂದವಾಗಿ ಹಾಗೂ ಪರಿಸರದ ಸಮಸ್ಯೆಗಳಿಂದ ಮುಕ್ತವಾಗಿ ಇರಿಸಿದ್ದವು. ೧೯೦೧ರ ನೀರಾವರಿ ಆಯೋಗದ ಮಾತಿನಲ್ಲಿ ಚುಟುಕಾಗಿ ಹೇಳುವುದಾದರೆ ಕೆರೆಗಳು ಜನತೆಯ ಜೀವ ಆಗಿದ್ದವು.[47] ಇಲ್ಲಿ ಕೆರೆಗಳ ಮಹತ್ವದಲ್ಲಿಯೇ ಅವುಗಳ ನಿರ್ಮಾಣದ ಉದ್ದೇಶವೂ ಅಡಗಿದೆ.

ಬಹುಶಃ ಸಾರ್ವಜನಿಕ ಕಾರ್ಯಗಳಲೆಲ್ಲಾ ಬಹುಮುಖ್ಯವಾದುದು ತಟಾಕ ನಿರ್ಮಾಣ. ಸತ್ತವನ ಪ್ರೇತವು ಬಹಳ ಬಾಯಾರಿಕೆಯಿಂದ ಬಳಲುವುದೆಂದೂ, ತಟಾಕ ನಿರ್ಮಾಣ ಮುಂತಾದ ಧರ್ಮಕಾರ್ಯಗಳಿಂದ ಅದರ ಬಾಯಾರಿಕೆ ಹಿಂಗುವುದೆಂದೂ ಹಿಂದಿನ ಜನರು ನಂಬಿದ್ದರು. ಮಹಾಭಾರತದ ಪ್ರಕಾರ ಯಾವ ವ್ಯಕ್ತಿಯು ಕಟ್ಟಿಸಿದ ಕೆರೆಯಲ್ಲಿ ಹಸುಗಳು, ಪ್ರಾಣಿಗಳು ಪಕ್ಷಿಗಳು, ಮನುಷ್ಯರು ನೀರನ್ನು ಕುಡಿದು ತೃಪ್ತರಾಗುವರೋ ಅವನು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ.[48]

ಕೆರೆಯನ್ನು ಕಟ್ಟಿಸಿದರೆ ತನಗೆ ಮಾತ್ರವಲ್ಲ ತನ್ನ ತಾಯಿ ತಂದೆಗಳಿಗೂ ಪುಣ್ಯವು ಲಭಿಸುತ್ತದೆಂದು ಕೆರೆಕಟ್ಟಿಸಿದ್ದಾಗಿ ನಾಣಿಮಯ್ಯ ನಾಯಕ ಹೇಳಿಕೊಂಡಿದ್ದಾನೆ.[49] ಸೋರಿಗಾವುಂಡಿ ಎಂಬ ತಾಯಿ ತನ್ನ ಮೂವರು ಮಕ್ಕಳನ್ನು ಕರೆದು ತನಗೆ ಪುಣ್ಯ ಬರುವಂತಾಗಲೂ ಏನಾದರೂ ಧರ್ಮಕಾರ್ಯ ಮಾಡಿ ಎಂದು ಕೇಳಿಕೊಳ್ಳುತ್ತಾಳೆ. ಆಗ ಕೆರೆಯೊಂದನ್ನು ಜೀರ್ಣೋದ್ಧಾರ ಮಾಡುವೆವೆಂದು ಅದರ ಉದಕ ದಾನದ ಫಲವು ನಿಮಗೆ ಸೇರುವುದೆಂದು ಆಕೆಯ ಮಕ್ಕಳು ಭರವಸೆ ನೀಡುತ್ತಾರೆ.[50] ಇದರಿಂದ ಕೆರೆ ನಿರ್ಮಾಣ ಅಥವಾ ಜೀರ್ಣೋದ್ಧಾರದಂತಹ ಕೆಲಸಗಳಿಂದ ಪುಣ್ಯ ಲಭಿಸುತ್ತದೆಂದು ಪ್ರಾಚೀನರು ನಂಬಿದ್ದು ಭಾಸವಾಗುತ್ತದೆ.

ಕನ್ನಡದ ಆದಿಕವಿ ಪಂಪನ ತಮ್ಮನಾದ ಜಿನವಲ್ಲಭನು ಗಂಗಾಧರಂ ಶಾಸನವನ್ನು ರಚಿಸಿದ್ದು ಸುಪ್ರಸಿದ್ಧವಾಗಿದೆ. ಅದರಲ್ಲಿಯೇ ವೃಷಭಗಿರಿ ತೀರ್ಥದ ಪ್ರಸ್ತಾಪವಿದೆ. ಈಗಿನ ಆಂಧ್ರಪ್ರದೇಶದ ಕುರ್ಕ್ಸಾಲ ಗ್ರಾಮದ ಹತ್ತಿರ ಇರುವೆ ಬೊಮ್ಮಲ ಗುಡ್ಡವೇ ವೃಷಭಗಿರಿ.

ಸಬ್ಬಿನಾಡ ನಟ್ಟ ನಡುವಣ ಧರ್ಮ್ಮವುರದ
ಉತ್ತರ ದಿಗ್ಭಾಗದ ವೃಷಭಗಿರಿಯೆಂಬ
ಅನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣದಿಶಾ ಭಾಗದೀ
ಸಿದ್ಧಶಿಲೆಯೊಳ್ತಮ್ಮ ಕುಲದೈವ ಮಾದ್ಯನ್ತ
ಜಿನಬಿಂಬಗಳುಮಂ ಚಕ್ರೇಶ್ವರಿಯುಮಂ
ಪೆರವುಂ ಜಿನ ಪ್ರತಿಮೆಗಳುಮಂ ತ್ರಿಭುವನ ತಿಲಕಮೆಂಬ
ಬಸದಿಯುಮಂ ಕವಿತಾಗುಣಾರ್ಣ್ನವಮೆಂಬ ಕರೆಯುಮಂ
ಮದನ ವಿಳಾಸಮೆಂಬ ಬನಮುಮಂ ಮಾಡಿಸಿದಂ[51]

ಈ ಶಾಸನದ ಪ್ರಕಾರ ಜಿನವಲ್ಲಭನು ‘ತ್ರಿಭುವನತಿಲಕ’ ವೆಂಬ ಬಸದಿಯನ್ನು, ಕೆರೆ ಮತ್ತು ಅರವೆ (ಬನ – ತೋಟ)ಯನ್ನೂ ಮಾಡಿಸಿದನು. ಚಾಳುಕ್ಯರ ಇಮ್ಮಡಿ ಅರಿಕೇಸರಿಯ (ಕ್ರಿ.ಶ. ೯೩೦ – ೯೫೮) ಆಸ್ಥಾನ ಕವಿ ಪಂಪನ ಸ್ಮಾರಕೋದ್ದೇಶದಿಂದ ಪಂಪನ ತಮ್ಮ ಮಾಡಿದ ಈ ಧರ್ಮಕಾರ್ಯ ಸ್ತುತ್ಯಾರ್ಹವಾಗಿದೆ.

ರಾಜರು – ಶ್ರೀಮಂತರು, ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೆರೆ ಬಾವಿಗಳನ್ನು ಕಟ್ಟಿಸುವುದು ಒಳ್ಳೆಯ ಕಾರ್ಯವೆಂದು ನಂಬಿದ್ದರು. ವಾಸ್ತವವಾಗಿ ನೀರಾವರಿಗೋಸ್ಕರವಾಗಿ ಒಂದು ಕೆರೆಯನ್ನು ಕಟ್ಟಿಸುವುದು ಬಹು ಶ್ರೇಷ್ಠವಾದ ಧರ್ಮಕಾರ್ಯವೆಂದು ಅಂದಿನ ಸಮಾಜವು ಪರಿಗಣಿಸುತ್ತಿದ್ದಿತು. ಇಂತಹ ಬೇರು ಬಿಟ್ಟ ಧಾರ್ಮಿಕ ನಂಬಿಕೆಯು ಅರಸರಿಗೂ ಇತರರಿಗೂ ಸಮಾನವಾಗಿಯೇ ಲಾಭಕರವಾಗಿತ್ತು.

ದೇವಾಲಯಕ್ಕೆ ಬರುವ ಭಕ್ತರಿಗೆ, ಕುಡಿಯಲು, ಸ್ನಾನಕ್ಕೆ, ಶುಚಿಕಾರ್ಯಕ್ಕೆ, ದೇವರ ಜಮೀನಿಗೆ, ಮೂಕ ಪ್ರಾಣಿಪಕ್ಷಿಗಳಿಗೆ ಹಾಗೂ ಜನರೆಲ್ಲರ ಉಪಯೋಗಕ್ಕೆ ಕೆರೆಗಳನ್ನು ಕಟ್ಟಿಸುವುದು, ಬಾವಿ ಮತ್ತು ಕಾಲುವೆಗಳನ್ನು ತೋಡಿಸುವುದನ್ನು ಪುಣ್ಯದ ಕಾರ್ಯವೆಂದು ಹಿಂದಿನವರು ಭಾವಿಸಿದ್ದರಿಂದ ಧಾರ್ಮಿಕ ಮೂಲನೆಲೆಯಾಗಿ ಪರಿಭಾವಿಸಬಹುದು. ಅಲ್ಲದೆ ಬಹಳ ಮುಖ್ಯವಾಗಿ ಸಮಾಜದ ಬೆನ್ನೆಲುಬಿನಂತಿರುವ ರೈತರಿಗೆ ನೀರಾವರಿ ಸೌಕರ್ಯ ಒದಗಿಸುವುದು ಪಾರಮಾರ್ಥಿಕ ಕಾರ್ಯವೆಂದು ಪರಿಗಣಿತವಾಗಿದ್ದರಿಂದ ಅನುಕೂಲಸ್ತ ಆಸಕ್ತರು ಕೆರೆಗಳ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದರೆ ಕೆರೆ ನಿರ್ಮಾಣ ಚಟುಚಟಿಕೆಯು ಬಹುಮುಖ್ಯವಾಗಿ ದೇವಾಲಯದೊಂದಿಗೇ ಅಂಟಿಕೊಂಡಿರುವುದು ಕಂಡುಬರುತ್ತದೆ. ದೇವಾಲಯ ಕಟ್ಟಿದ ಮೇಲೆ ಅದರ ನಿರ್ವಹಣೆಗೆ, ಸಂಬಂಧಿತರಿಗೆ ಜವಾಬ್ದಾರಿ ಒಪ್ಪಿಸುವುದು. ದೇವಾಲಯವೇ ತಮ್ಮ ಜೀವನಾಧಾರ ಎಂದು ತಿಳಿದವರಿಗೆ ಅದರ ನಿರ್ವಹಣೆಗೆ ಭೂದತ್ತಿ ಬಿಡುವುದು. ಆ ಭೂಮಿಗೆ ನೀರಾವರಿ ಒದಗಿಸುವ ಸಲುವಾಗಿಯೇ ಕೆರೆ ನಿರ್ಮಾಣದಂತಹ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಕಂಡುಬರುತ್ತದೆ. ಧಾರ್ಮಿಕ ಆಸ್ಥೆಯ ಮೂಲ ಸೆಲೆಯಾದ, ದೇವಾಲಯ ನಿರ್ಮಾಣದೊಂದಿಗೆ ಕಟ್ಟಲ್ಪಡುವ ಕೆರೆಗಳೂ ಸಹ ಭಕ್ತಿ, ನಿಷ್ಟೆ ಮತ್ತು ನಿರ್ವಹಣಾ ಮುನ್ನೆಚ್ಚರಿಕೆಯ ಪ್ರತೀಕವಾಗಿವೆ.

ಶಾಸನಗಳಲ್ಲಿ ಬಂದಿರುವ ತೂಬು, ಕೋಡಿ, ನೀರೊತ್ತು ಮತ್ತು ಕಾಲುವೆಗಳ ಉಲ್ಲೇಖಗಳು ಕೆರೆಗೂ ಮತ್ತು ನೀರಾವರಿಗೂ ಸಂಬಂಧಿಸಿದ್ದುದರಿಂದ ಕೆರೆ ನಿರ್ಮಾಣ ಉದ್ದೇಶವು ವ್ಯವಸಾಯ ಸಂಬಂಧಿ ನೀರಾವರಿಗೆ ಬಳಸುವದಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೊಸ ಕೆರೆಗಳ ಉದಯಕ್ಕೂ ಮತ್ತು ಸಾಗು ಮಾಡಲು ಯೋಗ್ಯವಾದ ಜಮೀನಿನ ವಿಸ್ತಾರಕ್ಕೂ ಅಂತರ್ ಸಂಬಂಧವಿದೆ. ಕೆರೆಗಳ ನಿರ್ಮಾಣವು ಒಣಬೇಸಾಯ ಭೂಮಿಯನ್ನು ನೀರ‍್ಮಣ್ಮಾಗಿ (Wet Farming) ಪರಿವರ್ತಿಸುವ ಉದ್ದೇಶ ಹೊಂದಿದ್ದುದನ್ನು ತಳ್ಳಿಹಾಕುವಂತಿಲ್ಲ. ಆದಾಗ್ಯೂ ಕೆರೆಯ ನೀರಾವರಿ ಸೌಲಭ್ಯವು ಅದು ತಲುಪುವ ಹಂತದವರೆಗೂ ನೀರ‍್ಬೂಮಿಯಾಗಿ ವಿಸ್ತರಿಸಲು ಅವಕಾಶವಿತ್ತು. ಹೊಸಕೆರೆಗಳ ನಿರ್ಮಾಣವು ಇನ್ನೂ ಕೃಷಿಗೆ ಒಳಪಡದ ಭೂಮಿಯನ್ನು ಸಾಗುವಳಿಗೆ ತರುವಲ್ಲಿ ಮತ್ತು ಸಾಗುವಳಿಗೆ ತಂದ ಭೂಮಿಯನ್ನು ನೀರಾವರಿ ಬೇಸಾಯಕ್ಕೆ (Wet Cultivation) ಬಳಸುವದಾಗಿತ್ತು.

ಕೆರೆ ನಿರ್ಮಾಣ ಜಾಗವನ್ನು ಬಹಳ ಜಾಗರೂಕವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದು, ಅದು ಗಟ್ಟಿ ನೆಲವಾಗಿರಬೇಕಾಗಿದ್ದು, ಮಳೆ ನೀರು ಇಳಿಜಾರಿನಲ್ಲಿ ಇಳಿದು ಬರುವಂತಹ ಪ್ರದೇಶವಾಗಿರಬೇಕಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ನೀರುಪಯೋಗಿಸಲು ಕೃಷಿಭೂಮಿ ಇರಬೇಕಾಗುತ್ತಿತ್ತು. ಜೊತೆಗೆ ಸಮಾನಾಂತರವಾಗಿ ನೈಸರ್ಗಿಕವಾಗಿ ಮೇಲೆದ್ದ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ನೀರನ್ನು ಒಂದ ಕಡೆ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತಿತ್ತು. ಅಂತಹ ಪ್ರಶಸ್ತ ಪ್ರದೇಶದಲ್ಲಿ ಕಡಿಮೆ ಮಾನವಶಕ್ತಿ ಮತ್ತು ಕಡಿಮೆ ಹಣವಷ್ಟೇ ಬಳಕೆಯಾಗುತ್ತಿತ್ತು. ಹೀಗಾಗಿಯೇ ಜನವಸತಿಯಿಂದ ಸ್ವಲ್ಪ ದೂರವಿದ್ದರೂ, ಸುತ್ತ ಮುತ್ತಲ ಸ್ವಾಭಾವಿಕ ಸವಲತ್ತು ಬಳಸಿಕೊಂಡೇ ಮತ್ತು ನೀರುಣಿಸಲು ಎಟುಕುವಷ್ಟು ಭೂಮಿ ಇಟ್ಟುಕೊಂಡೇ ಕೆರೆ ನಿರ್ಮಾಣವಾಗಿರುವುದನ್ನು ಗಮನಿಸಬಹುದು. ಆದರೆ ಹೊಸ ಕೆರೆಗಳ ನಿರ್ಮಾಣದಿಂದ ಎಷ್ಟು ಎಕರೆ ಭೂಮಿಯನ್ನು ಈ ರೀತಿ ನೀರಿನ ಸೌಲಭ್ಯಕ್ಕೆ ಒಳಪಡಿಸಲಾಗಿತ್ತು ಎಂದು ಹೇಳಲು ಬರುವುದಿಲ್ಲ. ಶಾಸನಗಳಲ್ಲಿ ದಾಖಲಾಗದ ಅದೆಷ್ಟೋ ಕೆರೆಗಳು ಇದ್ದಿರಬಹುದಾಗಿದ್ದು, ಸಾಮಾನ್ಯವಾಗಿ ಹಳ್ಳಿಯೊಂದಕ್ಕೆ ಒಂದಾದರೂ ಕೆರೆ ಇದ್ದಿರಬೇಕು. ಅಸ್ಪೃಶ್ಯರು ಹಾಗೂ ನೀರಿನ ಸೌಲಭ್ಯವಿಲ್ಲದಾಗ ಬ್ರಾಹ್ಮಣರನ್ನು ಒಳಗೊಂಡು ಎಲ್ಲರೂ ಕೆರೆಯ ನೀರನ್ನು ದೈನಂದಿನ ಬಳಕೆಗೂ ಬಳಸುತ್ತಿದ್ದರೆಂದೂ ಊಹಿಸಬಹುದು. ಸಾರ್ವಜನಿಕ ಉಪಯೋಗಕ್ಕಾಗಿ ಬಳಸಲ್ಪಡುವ ಕೆರೆಗೆ ‘ಊರೊಂಬ ಕೆರೆ’,[52] ಕುಡಿಯಲು ಯೋಗ್ಯವಾಗಿದ್ದುದಕ್ಕೆ ‘ಕುಡಿನೀರ ಕೆರೆ’ ಎಂದು ಪ್ರತ್ಯೇಕವಾಗಿ ಶಾಸನಗಳಲ್ಲಿ ಉಲ್ಲೇಖವಿದೆ.[53] ಇವುಗಳ ಉಲ್ಲೇಖಗಳಿಂದ ಪ್ರಾಚೀನ ಕಾಲದಲ್ಲಿ ಕೆರೆಗಳು ಕುಡಿಯುವ ನೀರಿನ ಮೂಲವಾಗಿದ್ದವು ಎಂಬುದು ಅರಿವಾಗುತ್ತದೆ.

ಸಾಮಾನ್ಯವಾಗಿ ಕೆರೆ ಮತ್ತು ದೇವಾಲಯ ಎರಡನ್ನೂ ಒಬ್ಬಾತನೇ ಕಟ್ಟಿಸಿರುವುದು ಶಾಸನಗಳಲ್ಲಿ ಗೋಚರವಾಗುತ್ತದೆ. ಭೂಮಿಯನ್ನು ಬಿಟ್ಟುಕೊಡುವ ಉದ್ದೇಶವಾದರೂ, ದೇವಾಲಯದ ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆಯುವಂತಾಗಲು ಹಾಗೂ ಅದನ್ನೇ ಉದ್ಯೋಗವಾಗಿ ನೆಚ್ಚಿಕೊಂಡವರಿಗೆ ಜೀವನೋಪಾಯಕ್ಕೆ ಆಧಾರವಾಗಲಿ ಎಂಬುದೇ ಆಗಿತ್ತು. ಆದರೆ ಕೆರೆಯ ಮುಂದಣ ಭೂಮಿಯನ್ನೇ ಸಾಮಾನ್ಯವಾಗಿ ಬಿಟ್ಟುಕೊಡುವ ಉದ್ದೇಶ. ಬಿಟ್ಟು ಕೊಟ್ಟ ಪೂಜಾರಿಯ ಜಮೀನಿಗೆ ನೀರಿನ ಕೊರತೆ ತಾಗದಿರಲಿ ಎಂಬುದಾಗಿತ್ತು. ‘ತಾವರೆಯ ಕೆರೆಯ ಕೆಳಗಣ ಆಡನಮಣ್ನ ಧಾರಾಪೂರ್ವಕ ಕೊಟ್ಟರ್’, ‘ಬಡಗಣಮೈಯ್ಯ ಕೆರೆಯ ಕೆಳಗೆ ತೊರೆವರವಿಳಿಯ ಕಡ ಹೊನ್ನನಾವಗಂ ಬಿಟ್ಟ’ ‘ಕೆರೆಯ ಕೆಳಗೆ ಕಾರು ಬೆಳವಕಮ್ಮ’ ‘ದೇವಾಲೆಯದ ಮುಂದಣ ಕೆರೆಯ ಗದ್ದೆ’ ಮುಂತಾದ ಉಲ್ಲೇಖಗಳೊಂದಿಗೆ ‘ಕೆರೆಯೊಳಗೆ ಬೆದ್ದಲೆಯೊಂದು ಮತ್ತರು’, ‘ಬಾಗೆಯ ಕರೆಯಲು ಕಡುಗ ಬೆದ್ದಲೆ ಮತ್ತರು’ ಗಳೆಂಬ ದಾನವು ಸಹ ಶಾಸನಗಳಲ್ಲಿ ಬಂದಿದೆ.

ಕ್ರಿ.ಶ. ೧೦೭೧ರ ಶಾಸನದ ಪ್ರಕಾರ ಹೊಸದಾಗಿ ಕೆರೆಯನ್ನು ಕಟ್ಟಿಸಿದಾಗ, ಕಾಡು ಕಡಿದು ಉತ್ತು ಹೊಸದಾಗಿ ಪೈರನ್ನು ತೆಗೆಯುತ್ತಿದ್ದರು.[54] ಕಾಡಂ ಕಡಿದು, ಕೆರೆಯಂ ಕಟ್ಟಿಸಿ, ಊರು ಮಾಡಿಸಿದರು’ ಎಂದು ಶಾಸನಗಳು[55] ತಿಳಿಸುತ್ತವೆ. ಇದರಿಂದ ಊರು ಮಾಡುವ ಉದ್ದೇಶದಿಂದ ಈ ಹಿಂದೆ ದಟ್ಟವಾಗಿದ್ದ ಕಾಡು ಕಡಿದು ಕೆರೆ ಕಟ್ಟಿಸುವುದು ಸಾಮಾನ್ಯವಾಗಿತ್ತು ಎಂದರಿವಾಗುತ್ತದೆ. ಗ್ರಾಮೀಣ ನೆಲೆಯ ಜನಸಂಖ್ಯೆಯ ಬೆಳವಣಿಗೆಯ ದೆಸೆಯಿಂದಾಗಿ ಕಾಡನ್ನು ಕಡಿದು ಅನುಕೂಲಕ್ಕೆ ತಕ್ಕಂತೆ ಹೊಸ ವಸತಿಗೊ, ಕೆರೆಗೊ, ಜಮೀನಿಗೊ ಬಳಸಿಕೊಳ್ಳುವ ಚಟುವಟಿಕೆಗಳಿಗೆ ಇಂಬು ದೊರಕಿರಬೇಕು. ದಟ್ಟಾರಣ್ಯದಿಂದ ತುಂಬಿಹೋಗಿದ್ದ ಪ್ರದೇಶದಲ್ಲಿ ಕಾಡುಗಳನ್ನು ಕಡಿದು ಜನವಸತಿಗೆ ಅನುಕೂಲ ಜಾಗವನ್ನಾಗಿ ಪರಿವರ್ತಿಸುವುದು ಸಕಾರಣವಾಗಿದ್ದು, ಬದಿಗೆರೆ, ಮತ್ತಿಕೆರೆ, ಬನದಕೆರೆಯಂತಹ ಹೆಸರುಗಳು ಅಲ್ಲಿ ಹಿಂದೆ ಇದ್ದಿರಬಹುದಾದ ಕಾಡಿನ ಉಲ್ಲೇಖವೇ ಆಗಿವೆ.

ಕೃಷಿ ವಿಸ್ತರಣೆಯಲ್ಲಿ ಹಲವಾರು ಜನ ಪಾಲ್ಗೊಳ್ಳುತ್ತಿದ್ದರು. ಅರಸ ಮತ್ತವನ ರಾಣಿ ಮತ್ತು ಮಂತ್ರಿಯನ್ನು ಒಳಗೊಂಡು ಅಧಿಕಾರಿ ವರ್ಗದವರು ಹಾಗೂ ಗ್ರಾಮದ ಮುಖಂಡನಾದ ಗಾವುಂಡರು, ಇತರರೂ ಸಹ ಸಕ್ರಿಯರಾಗಿದ್ದರು. ಇದು ಕೆರೆ ನಿರ್ಮಾಣದಂತಹ ಜನಪ್ರಿಯ ಜನೋಪಯೋಗಿ ಕಾರ್ಯಕ್ರಮದಲ್ಲಿ ಅವರಿಗಿದ್ದ ಆಸ್ಥೆಯ ಸಂಕೇತವಾಗಿದೆ ಎಂದು ಹೇಳಬಹುದು.

ಗಂಗವಾಡಿ ೯೬,೦೦೦ರಲ್ಲಿ ಎರೆಯಂಗನ ತಂದೆಯಷ್ಟು ಯಾರು ಧರ್ಮಿಯರಿದ್ದಾರೆ? ಎಂದು ಪ್ರಶ್ನಿಸುವ ಶಾಸನವೊಂದು[56] ತೋಡಿದ ತೊರೆಗಳು ಮತ್ತು ಕುಳಿಗಳು ಕೆರೆಯಾದವು ಎಂದು ವರ್ಣಿಸುತ್ತದೆ. ‘ತೊರೆಯನಿತುಂ ಕುಳಿಯನಿತುಂ ಕೆರೆಯಾದವು’. ಕಡೂರಿನ ಶಾಸನದ ಪ್ರಕಾರ[57] ದಂಡನಾಯಕ ಪ್ರೋಚಿಮಯ್ಯನು ‘ಕೆರೆಯುಂ ಕೆರೆಯ ತುಂಬುಗಳು ಮುಂಬಾವಿಗಳುಮಂ ಮಾಡಿ ಯೂರೊಡೆವಾಳ್ಕೆಯುಂ ಮೇಲಾಳ್ಕೆಯುಂ ನಡೆಸುತ್ತಿದ್ದನು.’ ಹೀಗೆ ಹಳ್ಳಿಗಳ ಮೇಲೆ ಒಡೆತನವನ್ನು ಸ್ಥಾಪಿಸುವಂತವರು ಇಂತಹ ಕೆಲವೊಂದು ಕೆಲಸಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡು ಬೇರೆಯವರಿಗೆ ಮಾರ್ಗದರ್ಶಕರಾಗಿದ್ದರು.

ತರೀಕೆರೆ ಶಾಸನವು[58] ಜನರು ತಮ್ಮ ತಮ್ಮ ಹಳ್ಳಿಯಲ್ಲಿ ಕೆರೆ ಕಾಲುವೆ ಕಟ್ಟಿಸಿ ತೋಟ ಮಾಡಬೇಕೆಂದು ಉಲ್ಲೇಖಿಸುತ್ತದೆ.

ಆ ಕೇಶವ ದೇವರ ದಾನದವೂರ ಕಾಡಿನಗದ್ದೆ ಬೆದ್ದಲೊಳಗಾದ
ಭೂಮಿಯೊಳಗೆ ತೆಂಗು ಕವುಂಗು ಮುಖ್ಯವಾದ
ಸಮಸ್ತ ಸ್ಥಾವರವಹ ಫಲಪುಷ್ಪಂಗಳನ್ನೂ ಯುಕ್ಕಿಕೊಂಡು
ಕೆರೆವಾ ಕಟ್ಟ ಕೊಮ್‌ಡು ಕಾಲುವೆಯನ್ನು ತಂದುಕೊಂಡು
ಸಂತಾನಗಾಮಿಯಾಗಿ ಭೋಗಿಸುವರು’.

ಯಾವುದೇ ಪ್ರದೇಶದಿಂದ ಬಂದ ಅಧಿಕಾರಿಗಳು ತಮ್ಮ ಪ್ರದೇಶದಲ್ಲಿಯೇ ಸಾಮಾನ್ಯವಾಗಿ ಕೆರೆಕಟ್ಟೆಗಳನ್ನು ಕಟ್ಟಿಸುವ ಕಡೆ ಗಮನವೀಯುತ್ತಿದ್ದರು. ಜೊತೆಗೆ ರಾಜಕೀಯ ಒತ್ತಡಗಳೂ ಸಹ ನಿರ್ದಿಷ್ಟ ಪ್ರದೇಶದಲ್ಲಿಯೆ ನಿರ್ಮಾಣವನ್ನು ಉದ್ಗೋಷಿಸುತ್ತಿದ್ದವು. ಹೆಚ್ಚೆಚ್ಚು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವುದರಿಂದ ಭೂಕಂದಾಯ, ನೀರಿನ ಕರ ಮುಂತಾದ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ವರಮಾನವೇ ಆಗಿತ್ತು. ಒಟ್ಟಾರೆ ನಿರ್ದಿಷ್ಟ ಪ್ರದೇಶದಲ್ಲಿ ಕೆರೆ ನಿರ್ಮಾತೃಗಳ ಸಂಖ್ಯೆ ಹಣಹೂಡುವ ಸಾಮರ್ಥ್ಯದ ಸೂಚ್ಯಂಕವೇ ಆಗಿದೆ. ಅಂತೆಯೇ ಸರ್ಕಾರದ ಪ್ರೋತ್ಸಾಹವೂ ನಿರಂತರವಾಗಿತ್ತು.

ಪೆರ್ಜ್ಜರಂಗಿ ದಾನ ಶಾಸನವು[59] ಹಳ್ಳಿಯ ಮೇರೆಯಲ್ಲಿ ಅಸ್ತಿತ್ವದಲ್ಲಿದ್ದ ೧೪ ಕೆರೆಗಳನ್ನು ಹೆಸರಿಸುತ್ತದೆ. ಇವುಗಳ ಕೆರೆ ನೀರಾವರಿಯ ಮೂಲಕ ಕೃಷಿ ಆರ್ಥಿಕತೆಯ ವಿಸ್ತರಣೆಗೆ ಕಾರಣವಾಗಿರುವುದು ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಕೆರೆ ನಿರ್ಮಾಣದ ಉತ್ಕಟೇಚ್ಚೆಯು ಸಾಮಾಜಿಕ ಅವಶ್ಯಕತೆಯಾಗಿತ್ತು.

ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಆಕರ್ಷಣೆ

ಚರಿತ್ರೆಯ ಆರಂಭದ ಅವಧಿಯಿಂದಲೂ ಸಮಾಜದ ಏಳಿಗೆ ಬೆನ್ನೆಲುಬಾದ, ಬೇಸಾಯಕ್ಕೆ ನೀರಾವರಿಯು ಅನಿವಾರ್ಯ ಎಂದು ತಿಳಿದುದರಿಂದ ಅದರ ವಿಕಾಸಕ್ಕೆ ಸಕಲ ಪ್ರಯತ್ನಗಳನ್ನೂ ಕೈಗೊಂಡರು. ವ್ಯವಸಾಯ ಅಭಿವೃದ್ಧಿ ಎಂದರೆ ರಾಜ್ಯದ ಅಭಿವೃದ್ಧಿ; ಅಂದರೆ ರಾಜಕೀಯ ಭದ್ರತೆ ಎಂದೆ ಭಾವಿಸಿದ್ದರು. ರಾಜರ ದೂರಾಲೋಚನೆ ಮತ್ತು ವಾಸ್ತವಿಕ ಧೋರಣೆಗಳಿಂದಾಗಿ ಅವರ ಅಧಿಕಾರಿಗಳು, ಹಳ್ಳಿಯ ಸಭೆಗಳು ಹಾಗೂ ದೇವಾಲಯದ ಆಡಳಿತದವರಿಗೆ ಪ್ರೋತ್ಸಾಹ ದೊರಕುತ್ತಿತ್ತು. ಈ ಪ್ರೋತ್ಸಾಹಗಳು ಉದಾರ ಅನುದಾನ, ಬಿರುದಾವಳಿ ಹಾಗೂ ಅನೇಕ ವಿಧವಾದ ರಿಯಾಯಿತಿಗಳಿಂದ ಕೂಡಿದ್ದವು.[60]

ಶ್ರೀಮಂತ ಜನರು, ಸಂಸ್ಥೆಗಳು ಅಥವಾ ಯಾರಾದರಾಗಲಿ ರಾಜ್ಯದ ಸಂಪದಭಿವೃದ್ಧಿ ಕಾರ್ಯದಲ್ಲಿ ತೊಡಗಲು ಏನಾದರೂ ಒಮದು ವಾಸ್ತವಿಕವಾದ ಆರ್ಥಿಕ ಆಕರ್ಷಣೆ ಇರಬೇಕು. ಕೇವಲ ಸ್ಫೂರ್ತಿ ಅಥವಾ ಮಾದರಿ ಕೆಲವೆ ದಿನಗಳಲ್ಲಿ ಬತ್ತಿಹೋಗುತ್ತದೆ. ಶ್ರೀಮಂತರಿಗೆ ಹಣವನ್ನು ಹೂಡಲು ಉತ್ಸಾಹ ಬಾರದಂತಾಗುತ್ತದೆ. ಆದ್ದರಿಂದ ಯಾರು ನೀರಾವರಿ ಕಾರ್ಯಗಳಲ್ಲಿ ತೊಡಗುತ್ತಾರೊ ಅವರಿಗೆ ತೆರಿಗೆ ವಿನಾಯಿತಿ. ಇತರೆ ರಿಯಾಯಿತಿಗಳನ್ನೊ ಅಥವಾ ಜಮಿನನ್ನೊ ನೀಡುತ್ತಿದ್ದರು. ಅಂದರೆ ಅರಸರು ಅಭಿವೃದ್ಧಿ ಕಾರ‍್ಯಗಳಿಗೆ ತಕ್ಕ ವಾತಾವರಣವನ್ನು ನಿರ್ಮಿಸುತ್ತಿದ್ದರು. ಹೀಗಾಗಿಯೇ ಅನುಕೂಲಸ್ಥರು ನೀರಾವರಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಉತ್ಸುಕರಾಗಿದ್ದರು.

ಬಿತ್ತುವಟ್ಟ : ಕೆರೆಯ ನಿರ್ಮಾಣ, ಅದರ ಸಂರಕ್ಷಣೆಯ ಕೆಲಸ ಮಾಡಿದ್ದಕ್ಕಾಗಿ ಕಟ್ಟಿದ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಭೂಮಿಯನ್ನು ದಾನವೀಯುವುದಕ್ಕೆ ‘ಬಿತ್ತುವಟ್ಟ’ ಎಂದು ಕರೆಯುತ್ತಾರೆ. ಕೆರೆಯ ಸಂರಕ್ಷಣೆಗಾಗಿ ಹುಟ್ಟುವಳಿಯ ಒಂದು ಭಾಗವನ್ನು ನೀಡುವುದು ಎಂಬ ಅಭಿಪ್ರಾಯವೂ ಇದೆ.

ದಶವಂದ : ಕೆರೆಯ ದುರಸ್ತಿ ಅಥವಾ ನಿರ್ಮಾಣಕ್ಕಾಗಿ ಸಾಮಾನ್ಯ ಕಂದಾಯದ ಹತ್ತನೆಯ ಒಂದರಷ್ಟು ಕಂದಾಯಕ್ಕೆ ಭೂಮಿಯನ್ನು ನೀಡುವುದು.

ಕಟ್ಟುಕೊಡಿಗೆ : ಕೆರೆಯ ನಿರ್ಮಾಣ, ಅದರ ಜೀರ್ಣೋದ್ಧಾರಕ್ಕಾಗಿ ನೀಡಲಾದ ಕೊಡುಗೆ; ಬಹುಮಾನ; ಭೂಮಿದಾನ.

ಸೀಯಣ್ಣನೆಂಬುವನು ದೊಡ್ಡ ಕೆರೆಯನ್ನು ನಿರ್ಮಿಸಿದ್ದಕ್ಕಾಗಿ ಪೆರಿಯ ನಾಡಿನ ನಿವಾಸಿಗಳು ಆತನಿಗೆ ೬ ಖಂಡುಗೆ ಗದ್ದೆಯನ್ನು ಕಟ್ಟು ಕೊಡುಗೆಯಾಗಿ ನೀಡಿದರು.[61]

ಎಕ್ಕಲಸೆಟ್ಟಿ ‘ಎಕ್ಕ ಸಮುದ್ರ’ ಕಟ್ಟಿಸಿದ್ದಕ್ಕಾಗಿ ೪೦ ಕಂಬ ಜಮೀನನ್ನು ಆತ ಕೆರೆ ಕೊಡುಗೆಯಾಗಿ ಪಡೆದಿದ್ದ.[62]

ಪುಲಿಯೂರು ನಾಡಿನ ಕಿರಿಕಿರೈ, ಕೆರೆಯನ್ನು ದುರಸ್ತಿ ಗೊಳಿಸಿದ್ದಾಕ್ಕಾಗಿ ಆ ಊರ ನಿವಾಸಿಗಳು ಮತ್ತು ಸಿಂಗೇಯ ದಂಡನಾಯಕರು ಅವನಿಗೆ ಕೊಡುಗೆಯಾಗಿ ಭೂಮಿಯನ್ನಿತ್ತರು.[63]

ಅಯ್ಯಪದೇವ ಎಂಬಾತನು ಆಳುತ್ತಿರುವಾಗ ಚೋರಯ್ಯ ಮುಂತಾದವರು ಸೇರಿ ಅಯ್ಯಪದೇವನಿಂದ ಕೆರೆಗೆ ಬಿತ್ತುವಾಟ ಪಡೆದರು.[64]

ಕೆರೆಗೋಡು ಮತ್ತು ನಕ್ಕೇರ ಹಾಳು ಶಾಸನಗಳು[65] ದಶವಂದದ ಪ್ರಸ್ತಾಪವನ್ನು ಮಾಡುತ್ತದೆ.

ಬೊಮ್ಮಯ್ಯ ಎಂಬುವರು ಕೆರೆಗೆ ದಕ್ಷಿಣದ ತೂಬನ್ನು ಕಟ್ಟಿಸಿಕೊಟ್ಟಿದ್ದಕ್ಕಾಗಿ ಆ ಕೆರೆಯ ಸಮೀಪ ಒಂದು ಸಲಗೆ ೧೦ ಖಂಡುಗ ಗದ್ದೆಯನ್ನು ಆತನ ಕೆಲಸಕ್ಕೆ ಪ್ರತಿಫಲವಾಗಿ ಕೊಡಲಾಗಿತ್ತು.[66]

ಬೇಲೂರು ಶಾಸನದ[67] ಪ್ರಕಾರ ವೀರಯ್ಯನಾಯಕ (ವೀರಯ್ಯ ದಂಡನಾಯಕ) ನೀರಾವರಿ ಸೌಲಭ್ಯವನ್ನು ಒದಗಿಸಲು ರುದ್ರಸಮುದ್ರ, ಗಂಗಸಮುದ್ರ, ಅಚ್ಯುತಸಮುದ್ರ ಮತ್ತು ವೀರಸಮುದ್ರ ಕೆರೆಗಳನ್ನು ನಿರ್ಮಿಸಿ ಅಂತಹ ಕೆರೆ ಕಟ್ಟಿಸಿದವರಿಗೆ ೧೨ ವರ್ಷಗಳ ಕಾಲ ತೆರಿಗೆ ಮಾನ್ಯವೆಂದು ೧೦ ಸಲಗೆ ಭತ್ತದ ಭೂಮಿ ಮಾನ್ಯವೆಂದು ಸ್ಪಷ್ಟಪಡಿಸಿದ್ದ.

ಇವುಗಳ ಉದಾಹರಣೆಗಳಿಂದ ಕೆರೆ ನಿರ್ಮಾತೃಗಳ ಉದ್ದೇಶವು ಆರ್ಥಿಕ ಪ್ರತಿಫಲಾಪೇಕ್ಷೆಯನ್ನು ಪಡೆಯುವದನ್ನು ಹೊಂದಿತ್ತು ಎಂದರಿವಾಗದೆ ಇರದು. ಆದರೆ ಕೆರೆಕಟ್ಟಿಸುವ ಅಥವಾ ಜೀರ್ಣೋದ್ಧಾರ ಮಾಡುವ ಪ್ರತಿಯೊಬ್ಬರೂ ಅದೇ ಉದ್ದೇಶ ಹೊಂದಿದ್ದರು ಹಾಗೂ ಪ್ರತಿಯೊಬ್ಬರಿಗೂ ಭೂ ದತ್ತಿ ಸಿಗುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ. ಆದಾಗ್ಯೂ ಒಟ್ಟಿನಲ್ಲಿ ಕೆರೆ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ದಾನದತ್ತಿಗಳನ್ನು ನೀಡಿ ಪ್ರೋತ್ಸಾಹಿಸುವ ಸತ್ಸಂಪ್ರದಾಯವಿತ್ತು.

 

[1]ಎ.ಕ. – VI, ೩.

[2]ಎ.ಕ. – ೧, ೫, ೧೦೦೦ ಕ್ರಿ.ಶ.

[3]ಎ.ಕ. – ಅರಸೀಕೆರೆ – ೨೨.

[4]ಎ.ಕ. – XII, ೯, ಕ್ರಿ.ಶ.೧೦೭೨.

[5]ದೀಕ್ಷಿತ್ ಜಿ.ಎಸ್. ಕುಪ್ಪುಸ್ವಾಮಿ ಜಿ.ಆರ್. ಮೋಹನ್ ಎಸ್.ಕೆ. ‘ಕರ್ನಾಟಕದಲ್ಲಿ ಕೆರೆ ನೀರಾವರಿ’ ಪುಟ.೩೮.

[6]ಅದೇ.

[7]ಅದೇ, ಪುಟ.೪೫.

[8]ಎ.ಕ. – VI, ೮೬.

[9]ಎ.ಕ. – XII, ಸಿರಾ – ೩೩.

[10]ಎ.ಕ. – V, ಅರಸೀಕೆರೆ – ೧೫೦.

[11]ಎ.ಕ. – ೯, ಬೇಲೂರು – ೧೯೦.

[12]ಎ.ಕ. – ೫, ಕೆ.ಆರ್.ನಗರ – ೪೯, ೮೧೯ ಕ್ರಿ.ಶ.

[13] SII XI (i), 74.

[14]ಎ.ಕ. – X, ಚನ್ನರಾಯಪಟ್ಟಣ – ೯,

[15]ಎ.ಕ. – X, ಚನ್ನರಾಯಪಟ್ಟಣ – ೬೪.

[16]ಎ.ಕ. – X, ಅರಸೀಕೆರೆ – ೪೦.

[17] IA – XII, P.222.

[18]ಎ.ಇ. – VI, ನಂ.೧೨.

[19]ಎ.ಕ. – VIII, ಹಾಸನ – ೧೩೩.

[20]ಎ.ಕ. – X, ಚನ್ನರಾಯಪಟ್ಟಣ – ೧೩೬.

[21]ಎ.ಕ. – ೮, ಸೊರಬ – ೪೪.

[22]ಎಪಿಗ್ರಾಫಿಯಾ ಇಂಡಿಕಾ XIV, ಪು. ೧೪೩.

[23] Mirashi, V.V.OP.Cit. Section II, B.No.37. P.92.

[24]ಎ.ಕ. – XII, ಸಿರಾ – ೩೯.

[25] SIIIX, i, No.65.

[26] SII – Xi, 38.

[27]ಎ.ಕ. – XV, P – ೩೨.

[28]ಶಾಂತಿನಾಥ ದಿಬ್ಬದ ‘ಶಾಸನಗಳಲ್ಲಿ ಕೆರೆ ಕಾಲುವೆಗಳು’, ಪು.೧೨೧, ೧೨೫.

[29] MAR – ೧೯೦೯, ಪು.೧೫.

[30]ದೀಕ್ಷಿತ್ ಜಿ.ಎಸ್. ಕುಪ್ಪುಸ್ವಾಮಿ ಜಿ.ಆರ್. ಮೋಹನ್ ಎಸ್.ಕೆ.ಪೂರ್ವೋಕ್ತ ಪು.೩೭.

[31] EI – 29, No.29.

[32]ಎ.ಕ. – VIII, ೩೫

[33] SI – XX, 49.

[34]ಎ.ಕ. – VIII, ಹಾಸನ – ೧೩೨.

[35] MAR – 1940, Ch – 8,

[36]ಎ.ಕ. – VIII, ಹಾಸನ – ೧೩೨ ಮತ್ತು ಎ.ಕ. – V, ಹಾಸನ – ೭೫.

[37]ಎ.ಕ. – ಶ್ರವಣಬೆಳಗೊಳ – ೧೬೨.

[38] Bombay Karnataka Inscriptions 1 – 74, 1041 A.D.

[39]ಎ.ಕ. – II, ೧೩೨, ೧೧೨೩, A.D.

[40]ಎ.ಕ. – VII, ೫೮, ೧೦೬೨, A.D.

[41]ನೇಗಿನ ಹಾಳ ಎಂ.ಬಿ. ‘ಜಿನವಲ್ಲಭನ ಕುರ್ಕಿಯಾಲ ಶಾಸನ’, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೭೦ – ೨, ಡಿಸೆಂಬರ್ – ೧೯೮೫.

[42] B.K.I – 1, 74, 1072, A.D.

[43]ಚಿದಾನಂದ ಮೂರ್ತಿ ಎಂ. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, ಪು.೪೪೬.

[44]ಬೋಜರಾಜ ಬಿ.ಪಾಟೀಲ್, ಪೂರ್ವೋಕ್ತ, ಪು – ೧೨೪.

[45]ಎ.ಕ. – ೯.

[46] SII, Vol – iv, 267.

[47]ದೀಕ್ಷಿತ್ ಜಿ.ಎಸ್. ಕುಪ್ಪುಸ್ವಾಮಿ ಜಿ.ಆರ್. ಮೋಹನ್ ಎಸ್.ಕೆ.ಪೂರ್ವೋಕ್ತ ಪು.೫ – ೬.

[48]ಚಿದಾನಂದ ಮೂರ್ತಿ ಎಂ. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, ಪು.೪೫೨.

[49] B.K.I – 1, ii, 196, 1121, A.D.

[50] K.I.l.24, 1148, A.D.

[51]ನೇಗಿನ ಹಾಳ ಎಂ.ಬಿ. ‘ಜಿನವಲ್ಲಭನ ಕುರ್ಕಿಯಾಲ ಶಾಸನ’, ಅದರ ಕೆಲವು ಮುಖಗಳು, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೭೦ – ೨, ಡಿಸೆಂಬರ್ – ೧೯೮೫.ಪು೧ – ೮, ಮತ್ತು ಹಂಪನಾಗರಾಜಯ್ಯ, ಶಾಸನಗಳಲ್ಲಿ ಜೈನತೀರ್ಥಗಳು, ಪು.೫೭ – ೫೮.

[52]ಎ.ಕ. – ೪, ಕೆ.ಆರ್.ಪೇಟೆ – ೬೮. ಕ್ರಿ.ಶ.೧೧೬೮, ಎ.ಕ. – ೭, ಸೊರಬ – ೧೪೦, ಕ್ರಿ.ಶ.೧೧೯೮.

[53]ಎ.ಕ. – ಯಳಂದೂರು – ೧೫, ಕ್ರಿ.ಶ.೧೨೮೩.

[54]ಚಿದಾನಂದ ಮೂರ್ತಿ ಎಂ. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, ಪು.೩೬೮.

[55]ಎ.ಕ. – ೫, ಬೇಲೂರು – ೧೩೭, ೧೧೮೭ ಮತ್ತು ೧೭೫, ೧೧೮೬.

[56]ಎ.ಕ. – ೯, ಬೇಲೂರು – ೩೪೧.

[57]ಎ.ಕ. – ೬, ಕಡೂರು – ೧೬೧.

[58]ಎ.ಕ. – ೬, ತರೀಕೆರೆ – ೫೫.

[59]ಎ.ಕ. – ೫, ಕೆ.ಆರ್.ನಗರ – ೪೯, ಕ್ರಿ.ಶ.೮೧೯.

[60]ಕೊಟ್ರಯ್ಯ ಸಿ.ಟಿ.ಎಂ. ‘ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ’ ಪು.೨೧.

[61] MAR – 1919, No. 81 – 83.

[62] MAR – 1928. No.19.

[63]ಎ.ಕ. – ೯, ಹೊಸಪೇಟೆ – ೧೩೯.

[64] SII. IX, i, 20.

[65]ದೀಕ್ಷಿತ್ ಜಿ.ಎಸ್. ಕುಪ್ಪುಸ್ವಾಮಿ ಜಿ.ಆರ್. ಮೋಹನ್ ಎಸ್.ಕೆ.ಪೂರ್ವೋಕ್ತ ಪು.೧೨೫.

[66]ಎ.ಕ. – ೫, ಅರಸೀಕೆರೆ – ೧೮೦.

[67]ಎ.ಕ. – ೫, ಬೇಲೂರು – ೧೭೫.