ಭೂಮಿಯನ್ನು ದಾನ ಮಾಡುವಾಗ ಎರಡು ಬಗೆಯ ಸಾಮ್ಯಗಳೊಂದಿಗೆ ದಾನ ನೀಡುವುದನ್ನು ಶಾಸನಗಳಲ್ಲಿ ನಾವು ಕಾಣುತ್ತೇವೆ. ಅವು ಹೀಗಿವೆ:

ಅಷ್ಟತೇಜ – ನಿಧಿ, ನಿಕ್ಷೇಪ, ಜಲ, ಪಾಷಾಣ, ಅಕ್ಷಿಣಿ, ಆಗಾಮಿ, ಸಿದ್ಧಿ, ಸಾಧ್ಯಂಗಳು.

ಅಷ್ಟಭೋಗ – ಗದ್ದೆ, ಬೆದ್ದಲು, ತೋಟ, ತುಡಿಕೆ, ಆಣೆ, ಅಚ್ಚುಕಟ್ಟು, ಕಾಡಾರಂಭ, ನೀರಾರಂಭ.

ಅಷ್ಟತೇಜ ಸಾಮ್ಯಗಳಲ್ಲಿ ಒಂದಾದ ಸಾಧ್ಯಂಗಳು ಮಾನವನು ಭೂಮಿಯ ಗುಣವನ್ನು ಉತ್ತಮ ಪಡಿಸುವಲ್ಲಿ ಮಾಡುವ ಪ್ರಯತ್ನಗಳಲ್ಲಿ ಒಂದಾಗಿದೆ. ದೇವ ಮಾತೃಕೆಯಾದ ಭೂಮಿಯನ್ನು ನದೀ ಮಾತೃಕೆಯನ್ನಾಗಿ ಮಾಡುವುದೆಂದರೆ ಇರುವ ಭೂಮಿಗೆ ಶಾಶ್ವತ/ನಿರಂತರ ನೀರನ್ನು ಉಣಿಸಿ ಬೆಳೆಯಿಂದ ನಿರೀಕ್ಷಿತ ಮತ್ತು ಹೆಚ್ಚಿನ ಉತ್ಪನ್ನ ಪಡೆಯಲು ಮಾಡುವ ಪ್ರಯತ್ನವಾಗಿದೆ.

ಹರಿಯುವ ನೀರಿಗೆ ತಡೆಯನ್ನೊಡ್ಡಿ ಅದು ನಿಂತು ಮತ್ತೆ ಮುಂದೆ ಸಾಗುವಂತೆ ಮಾಡುವುದೇ ನೀರಾವರಿ ವ್ಯವಸ್ಥೆ. ಹೀಗೆ ನಿಂತ ನೀರನ್ನು ಅಕ್ಕಪಕ್ಕದ ಕಾಲುವೆಗಳ ಮುಖಾಂತರ ಸಾಗಿಸಿ ಭೂಮಿಗಳಿಗೆ ಉಣಿಸಲಾಗುತ್ತದೆ. ತಾಂತ್ರಿಕ ದೃಷ್ಟಿಯಿಂದ ಎರಡು ಬಗೆಯ ತಡೆಗಳಿವೆ.

೧. ಕೆರೆ (Storage Works)

೨. ತಿರುವು (Diversion Works)

ಸಣ್ಣ ಪ್ರಮಾಣದ ಮಣ್ಣಿನ ಏರಿಯಿಂದ ಕೂಡಿದ ನೀರಿನ ಸಂಗ್ರಹಾಗಾರ ಕೆರೆಯಾದರೆ, ನೀರಿನ ಹರಿವಿಗೆ ಹಾಕಿದ ಕಲ್ಲಿನ ವಡ್ಡು ತಿರುವು. ಬುಖಾನನ್ನನ ವರದಿಯಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಕಟ್ಟೆ, ಕೆರೆ, ಕುಂಟೆ ಎಂದು ವಿಂಗಡಿಸಲಾಗಿತ್ತೆಂದು ಹೇಳಲಾಗಿದೆ. ಈ ರೀತಿಯ ವಿಂಗಡಣೆಗೆ ಯಾವುದೆ ಶಾಸನಾಧಾರ ಮತ್ತು ತಾಂತ್ರಿಕ ತಳಹದಿಯಿಲ್ಲ. ಕರ್ನಾಟಕದಲ್ಲಿ ಬಹುಪಾಲು ನೀರಿನ ಸಂಗ್ರಹಾಗಾರಕ್ಕೆ ಬಳಸಲಾಗಿರುವ ಪದ ಕೆರೆ. ತುಮಕೂರು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳ ಶಾಸನಗಳಲ್ಲಿ ಕುಂಟೆ ಪದವನ್ನು ಕೆರೆಯ ಪರ್ಯಾಯ ಶಬ್ದವಾಗಿ ಬಳಸಲಾಗಿದೆ.

ಶಾಸನಗಳಲ್ಲಿ ಕೆರೆಯನ್ನು ಕಟ್ಟಿದರೆ ಬರುವ ಪುಣ್ಯವನ್ನು ತಿಳಿಸಲಾಗಿದೆ. ಶಾಸನಗಳಲ್ಲಿ ಅನೇಕ ಕೆರೆಗಳ ಉಲ್ಲೇಖವಿದೆ. ಆದರೆ ಬಹುಪಾಲು ಶಾಸನಗಳು ತಾಂತ್ರಿಕ ವಿವರಣೆ ನೀಡುವುದಿಲ್ಲ. ಶಾಸನಗಳಲ್ಲಿ ಸಿಗುವ ಅಲ್ಪ ಮಾಹಿತಿ ಮತ್ತು ಇತರ ಮೂಲಗಳಿಂದ ಮಧ್ಯಕಾಲದ ಕೆರೆಗಳ ತಾಂತ್ರಿಕತೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ.

ಝರಿ, ತೊರೆ, ಹಳ್ಳಗಳಿಗೆ ಅಡ್ಡಲಾಗಿ ಮಣ್ಣಿನ ಏರಿಯನ್ನು ಹಾಕಿ ಕೆರೆಗಳನ್ನು ನಿರ್ಮಿಸಲಾಗುತ್ತಿತ್ತು. ಆಂಧ್ರಪ್ರದೇಶದ ಪೌರ‍್ಮಮಿಲ ಶಾಸನವು ಕೆರೆಯನ್ನು ಕಟ್ಟಬೇಕಾದಾಗ ಗಮನಿಸಬೇಕಾದ ಅಂಶಗಳನ್ನು ದಾಖಲಿಸಿದೆ. ಏರಿಗೆ ಹಾಕುವ ಮಣ್ಣು ಜಿಗುಟಾಗಿದ್ದು ಗಟ್ಟಿಯಾಗುವ ಗುಣವುಳ್ಳದ್ದಾಗಿರಬೇಕು.

ಕನ್ನಡ ನಾಣ್ನುಡಿಯೊಂದು ಏರಿಯ ಮಣ್ಣಿನ ಗುಣವನ್ನು ಪರೋಕ್ಷವಾಗಿ ಸೂಚಿಸುತ್ತದೆ. ‘ಏರಿ ನೀರುಂಬೊಂಡೆ, ಬೇಲಿ ಕೆಯ್ಯ ಮೇದೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ…’ ಎಂಬ ನಾಣ್ನುಡಿ ನೀರು ನಿಲ್ಲಿಸುವ ಕೆರೆ ಏರಿಯೇ ನೀರು ಕುಡಿದರೆ, ಹೊಲದ ಎಲ್ಲೆಗಳನ್ನು ಗುರುತಿಸಲು ಹಾಕಿದ್ದ ಬೇಲಿಯೇ ಕಿತ್ತುಹಾಕಲ್ಪಟ್ಟರೆ, ಮನೆಯೊಡತಿಯೇ ಮನೆಯಲ್ಲಿ ಕಳ್ಳತನ ಮಾಡಿದರೆ… ಇತ್ಯಾದಿಗಳು ಬಹಳ ಕಷ್ಟವೆನ್ನುವ ಸೂಚನೆ ನೀಡುತ್ತದೆ.

ಏರಿಗೆ ಉಪಯೋಗಿಸುವ ಮಣ್ಣು ಸೂಕ್ತ ಗುಣ ಮತ್ತು ಕೆರೆ ಏರಿಯ ಒಳ ಮತ್ತು ಹೊರ ಇಳಿಜಾರು ಸೂಕ್ತ ಪ್ರಮಾಣದಲ್ಲಿರಬೇಕು. ಏರಿಯ ಮಣ್ಣು ನೀರು ಕುಡಿದರೆ ಅದರ ಗಟ್ಟಿತನ ಸಡಿಲವಾಗುತ್ತದೆ. ನಂತರ ಏರಿಯು ಒಡೆದುಹೋಗುತ್ತದೆ.

ಕೆರೆಯಲ್ಲಿ ನಿಂತ ನೀರಿನ ಆಳ ಮತ್ತು ವಿಸ್ತಾರ ಬಹಳವಾದರೆ ಅಲೆಗಳುಂಟಾಗುತ್ತವೆ. ನೀರಿನ ಅಲೆಗಳು ಬಂದು ಕೆರೆಯ ಏರಿಯನ್ನು ಅಪ್ಪಳಿಸುತ್ತವೆ. ಅಪ್ಪಳಿಸಿದ ಅಲೆಗಳು ಹಿಂದೆ ಸರಿಯುವಾಗ ಏರಿಯ ಗಟ್ಟಿ ಮಣ್ಣನ್ನು ಹಿಂದೆ ಎಳೆಯುವ ಪ್ರಯತ್ನ ಮಾಡುತ್ತವೆ. ಈ ಪ್ರಯತ್ನದಲ್ಲಿ ಅದು ಅನೇಕ ಕಡೆ ಸಫಲವಾಗಿ ಏರಿಯ ಇಳಿಜಾರು ವಕ್ರವಾಗಿ ತನ್ನ ಗುಣವನ್ನು ಕಳೆದುಕೊಂಡು ಕೆರೆ ಒಡೆಯಬಹುದು. ಕೆರೆಯ ಒಳ ಇಳಿಜಾರಿಗೆ ಕಲ್ಲುಗಳ ಹೊದಿಕೆ ಹಾಕುವ ರೂಢಿಯ ಬಳಕೆಯಲ್ಲಿ ಬಂದು ನೀರಿನ ಅಲೆಗಳಿಂದ ಆಗುವ ಹಾನಿಯು ಕಡಿಮೆಯಾಗಿದೆ.

ನಯಸೇನ ಕವಿಯು ರಚಿಸಿರುವ ಧರ್ಮಾಮೃತ ಕೃತಿಯಲ್ಲಿ ಅನೇಕ ನುಡಿಮುತ್ತುಗಳಿವೆ. ಧರ್ಮಾಮೃತವನ್ನು ಕ್ರಿ.ಶ. ೧೧೧೨ರಲ್ಲಿ ರಚಿಸಲಾಗಿದೆಯೆಂದು ಅಭಿಪ್ರಾಯ ಪಡಲಾಗಿದೆ. ಕವಿಯು ಕೆರೆಗಳಿಗೆ ಸಂಬಂಧಿಸಿದಂತೆ ‘ಅಂತೊಡೆದ ಕಲ್ಲ ಕೆರೆಯಿಲ್ಲೆಂಬ’ ನಾಣ್ನುಡಿಯನ್ನು ಉಲ್ಲೇಖಿಸಿದ್ದಾನೆ. ಕಲ್ಲ ಕೆರೆಗಳು ಒಡೆಯುತ್ತಿದ್ದಿಲ್ಲವೆಂದರೆ ಮಣ್ಣಿನ ಕೆರೆಗಳು ಒಡೆಯುತ್ತಿದ್ದವೆಂದು ಅರ್ಥ. ಮೊದಲು ಕೆರೆಯ ಏರಿಗಳು ಬರೀ ಮಣ್ಣಿನಿಂದ ಕೂಡಿದ್ದು ಆಗಾಗ್ಗೆ ಇವು ಹಾನಿಯಾಗುತ್ತಿದ್ದುದರಿಂದ ಅವುಗಳ ಇಳಿಜಾರಿಗೆ ಕಲ್ಲು ಹೊದಿಕೆ ಹಾಕುವ ಕೆಲಸ ರೂಢಿಯಲ್ಲಿ ಬಂದಿದೆ. ಮಣ್ಣಿನ ಏರಿಯ ಕೆರೆಗಳಿಗೆ ಹೋಲಿಸಿದರೆ ಕಲ್ಲಿನ ಹೊದಿಕೆಯಿದ್ದ ಏರಿಗಳು ಧೃಡವಾಗಿರುವುದನ್ನು ಕಂಡು/ಕೇಳಿ ಕವಿಯು ಹೇಳಿದ ನಾಣ್ನುಡಿಯಾಗಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮಣ್ಣಿನ ಏರಿಗಳಿಗೆ ಕಲ್ಲು ಹೊದಿಕೆ ಹಾಕುವ ವ್ಯಾಪಕ ಪ್ರಕ್ರಿಯೆಯು ಜಾರಿಯಲ್ಲಿ ಬಂದಿರಬೇಕು.

01_274_KNNCA-KUH

ಕುಮದ್ವತಿ ನದಿ ಮದಗದ ಕೆರೆ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಮತ್ತು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಗಡಿಗಳು ಕೂಡುವ ಭಾಗದಲ್ಲಿ ಕುಮದ್ವತಿ ನದಿಯು ಎರಡು ನೈಸರ್ಗಿಕ ಗುಡ್ಡಗಳ ನಡುವಿನಲ್ಲಿ ಹರಿದು ಹೋಗುತ್ತದೆ. ಇಲ್ಲಿ ನದಿಗೆ ಮಣ್ಣಿನ ಏರಿಯನ್ನು ಹಾಕಿ ಮದಗದ ಕೆರೆಯನ್ನು ನಿರ್ಮಿಸಲಾಗಿದೆ.

ಕೆಳದಿ ಸದಾಶಿವನಾಯಕ (ಕ್ರಿ.ಶ. ೧೫೪೦-೧೫೬೫) ಬಂಕಾಪುರದ ಮಾದಣ್ಣ ಒಡೆಯರ ಮೂಲಕ ಮದಗದ ಕೆರೆಯನ್ನು ಪೂರ್ಣ ಮಾಡಿದನೆಂದು ತಿಳಿಯಲಾಗಿದೆ. ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆ ಗೆಝೆಟಿಯರ್ ಮಾಹಿತಿಯಂತೆ ಈ ಕೆರೆಯ ಏರಿಯು ಆಳವಾದ ಕಡೆ ೮೦೦ ಅಡಿ ಅಗಲ, ಮತ್ತು ೧೦೦ ಅಡಿ ಎತ್ತರ ಇದೆ. ಕೆರೆಗೆ ಎರಡು ತೂಬುಗಳಿದ್ದು ಈ ಎರಡೂ ಕೆರೆಯ ಬಲಭಾಗದಲ್ಲಿ ಇವೆ. ಮೊದಲನೆಯ ತೂಬು ಸಮುದ್ರಮಟ್ಟದಿಂದ ೫೭೭.೮೩ ಮೀ ಮತ್ತು ಎರಡನೆಯ ತೂಬು ೬೦೦.೦೦ ಮೀ ಎತ್ತರದಲ್ಲಿ ಇದೆ. ಮೊದಲನೆಯ ತೂಬು ಹದಿನಾರು ಕಂಬಗಳಿಂದ ಕೂಡಿದ್ದು ಸ್ಥಳೀಯರು ಇದನ್ನು ಕತ್ತರಿ ತೂಬು ಎಂದು ಕರೆಯುತ್ತಾರೆ. ಇದು ಕಸ ಕಡ್ಡಿ ಇತ್ಯಾದಿಗಳು ತೂಬಿನ ಒಳಹೋಗದಂತೆ ಕತ್ತರಿಸಿ ಹಾಕುತ್ತಿತ್ತೆಂದು ಹೇಳುತ್ತಾರೆ. ಎರಡನೆಯ ತೂಬಿನಲ್ಲಿ ಒಂಭತ್ತು ಕಂಬಗಳಿರುವುದರಿಂದ ೪ ಅಗಳಿಗಳಿವೆ.

ಮದಗ - ಮಾಸೂರು ಕೆರೆಯ ಮೊದಲನೆಯ ತೂಬು

ಮದಗ – ಮಾಸೂರು ಕೆರೆಯ ಮೊದಲನೆಯ ತೂಬು

ತೂಬಿನ ಪ್ರತಿಯೊಂದು ಕಂಬವು ಒಂದೇ ಶಿಲೆಯ ಟ್ರ್ಯಾಪ್ ಕಲ್ಲು ಆಗಿದ್ದು ಸುಮಾರು ೨೦೦ ಟನ್ನು ತೂಕ ಇರಬಹುದಾಗಿದ್ದು ಇದನ್ನು ಸ್ಥಳಕ್ಕೆ ತಂದು ಗುರುತ್ವಾಕರ್ಷಣೆ ಮಾತ್ರದಿಂದಲೇ ನಿಲ್ಲಿಸಿರುವುದು ಮಹಾ ಸಾಹಸ ಮತ್ತು ತಾಂತ್ರಿಕ ಕೌಶಲ್ಯ ಹೊಂದಿದವರು ಮಾಡಿದ ಕೆಲಸವಾಗಿದೆ. ಒಂದೇ ಬದಿಯಲ್ಲಿ ಎರಡು ತೂಬುಗಳಿದ್ದು, ತೂಬುಗಳ ನಡುವಿನ ಮಟ್ಟವನ್ನು ಗಮನಿಸಬೇಕು. ಎರಡನೆಯ ತೂಬಿನ ತಳ ಮಟ್ಟವು ಮೊದಲನೆಯ ತೂಬಿನ ತಳ ಮಟ್ಟಕ್ಕಿಂತ ೨೦.೦೦ಮೀ ಎತ್ತರದಲ್ಲಿದೆ. ಮದಗದ ಕೆರೆಯಲ್ಲಿ ಹೆಚ್ಚಿನ ನೀರು ಬಂದಾಗ ಮೊದಲನೆಯ ತೂಬು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿ ಅದರಿಂದ ಬರುವ ನೀರನ್ನು ನಿಯಂತ್ರಿಸಲು ಅಸಾಧ್ಯವಾಗುತ್ತದೆ. ಈಗ ಎರಡನೆಯ ತೂಬಿನಿಂದ ನೀರನ್ನು ಹಾಯಿಸಿ, ಅದರ ತಳಮಟ್ಟ ಬಂದನಂತರವೇ ಮೊದಲನೆಯ ತೂಬಿನ ಮಾಳಿಗೆ ಕಾಣಬಹುದಾಗಿದ್ದು ಅನಂತರವೇ ನೀರನ್ನು ನಿಯಂತ್ರಿಸಬಹುದು.

ಮದಗ - ಮಾಸೂರು ಕೆರೆಯ ಎರಡನೆಯ ತೂಬು

ಮದಗ – ಮಾಸೂರು ಕೆರೆಯ ಎರಡನೆಯ ತೂಬು

 

ಮೊದಲನೆಯ ತೂಬಿನ ತಳಮಟ್ಟ ೫೭೭.೮೩ ಮೀ
ತೂಬಿನ ತಳದಿಂದ ಮಾಳಿಗೆ ೮.೦೦ ಮೀ (ಸುಮಾರು)
ಒಟ್ಟು ೫೮೫.೮೩ ಮೀ
ಎರಡನೆಯ ತೂಬಿನ ತಳಮಟ್ಟ ೬೦೦.೦೦ಮೀ
ಮದಗ - ಮಾಸೂರು ಕೆರೆಯ ಪಕ್ಷಿನೋಟ

ಮದಗ – ಮಾಸೂರು ಕೆರೆಯ ಪಕ್ಷಿನೋಟ

ಮದಗ - ಮಾಸೂರು ಕೆರೆ ಇಂದಿನ ಕೋಡಿ

ಮದಗ – ಮಾಸೂರು ಕೆರೆ ಇಂದಿನ ಕೋಡಿ

ಇವೆರಡು ಮಟ್ಟಗಳಲ್ಲಿನ ವ್ಯತ್ಯಾಸ ಸುಮಾರು ೧೪.೦೦ಮೀ ಇದೆ. ಇಷ್ಟು ವ್ಯತ್ಯಾಸವಿರುವ ತೂಬುಗಳ ನೀರು ನಿರ್ವಹಣೆಯ ಪರಿ ತಿಳಿಯದಾಗಿದೆ.

ತೂಬುಗಳು ನಡುವಿನ ಎತ್ತರದ ವ್ಯತ್ಯಾಸವನ್ನು ಹೀಗೆ ವಿವರಿಸಬಹುದಾಗಿದೆ. ಮದಗದ ಕೆರೆಯ ನಿರ್ಮಾಣ ಎರಡು ಹಂತಗಳಲ್ಲಿ ಆಗಿರಬೇಕು. ಮೊದಲನೆಯ ಹಂತದಲ್ಲಿ ಕತ್ತರಿ ತೂಬು ಮತ್ತು ಆ ಮಟ್ಟಕ್ಕೆ ಏರಿ ಇರಬೇಕು. ಕುಮದ್ವತಿ ನದಿಯು ಮಲೆನಾಡು ಪ್ರದೇಶದಲ್ಲಿ ಹುಟ್ಟಿದರೂ ಬಹುಪಾಲು ಅದು ಹರಿಯುವುದು ಅರೆಮಲೆನಾಡು ಪ್ರದೇಶದಲ್ಲೆ. ಮದಗಕ್ಕೆ ಬರುವಾಗ ಆಗಲೇ ೧೦೦ ಕಿ.ಮೀ. ಸಂಚರಿಸಿರುತ್ತದೆ. ಮೊದಲ ಹಂತದ ಏರಿಯು ೨೦.೦೦ ಮೀ ಇರಬೇಕು (೭-೮ ಪುರುಷ ಎತ್ತರ).

ನದಿಯಲ್ಲಿ ಹೆಚ್ಚು ನೀರು ಕಂಡುಬಂದು ಕೆರೆಯ ಏರಿಯನ್ನು ಎತ್ತರಿಸಿದರೆ ಇದನ್ನು ಕೂಡಾ ಉಪಯೋಗಿಸಬಹುದು ಎಂದು ಕಂಡುಕೊಳ್ಳಲಾಯಿತು. ಆಗ ಏರಿಯನ್ನು ಮತ್ತೆ ಎತ್ತರ ಮಾಡುವ ಎರಡನೆ ಹಂತದ ಕೆಲಸ ಪ್ರಾರಂಭವಾಗಿದೆ. ಈಗ ಪೂರ್ಣಗೊಂಡ ಏರಿಯ ಎತ್ತರ ೩೩ ಮೀ ಆಗಿದೆ. (೧೦೦ ಅಡಿ ೧೨-೧೩ ಪುರುಷ ಪ್ರಮಾಣ) ಎರಡನೆಯ ತೂಬಿನ ಕಾಲುವೆಯಿಂದ ಎಡವಟ್ಟೆ ೭೦ ವಿಭಾಗದ ಗ್ರಾಮಗಳಿಗೂ ಮೊದಲನೆಯ ತೂಬಿನಿಂದ ಮಾಸೂರು ೧೨ ಮತ್ತು ರಟ್ಟಪಳ್ಳಿ ೭೦ ವಿಭಾಗದ ಗ್ರಾಮಗಳಿಗೂ ನೀರುಣಿಸಲಾಗುತ್ತಿತ್ತು.

ಕ್ರಿ.ಶ. ೧೮೬೩ರಲ್ಲಿ ಈ ಕೆರೆಯ ನೀರು ತೂಬಿನ ಮಟ್ಟಕ್ಕಿಂತ ಕೆಳಗೆ ಇದ್ದು ಉಪಯೋಗಕ್ಕೆ ಬಾರದೆ ಇರುವುದನ್ನು ಕಂಡು ಬ್ರಿಟೀಷ್ ಇಂಜಿನಿಯರ್ ತಂಡವು ತೂಬಿನಲ್ಲಿದ್ದ ಹೂಳನ್ನು ತೆಗೆಯಲು ಪ್ರಾರಂಭಿಸಿದರು. ಹೀಗೆ ಎರಡೂ ಬದಿಯಲ್ಲಿ ಕಾರ್ಯ ಮಾಡುತ್ತಿರುವಾಗ ನೀರಿನ ಮಾರ್ಗಕ್ಕೆ ಹೊದಿಸಿದ್ದ ಕಲ್ಲು ಚಪ್ಪಡಿಗಳು ಒಡೆದು ಅಡ್ಡಲಾಗಿ ಬಿದ್ದಿರುವುದನ್ನು ಕಂಡರು. ಚಪ್ಪಡಿಗಳನ್ನು ತೆರವು ಮಾಡಿ ಕಾಲುವೆಯನ್ನು ಸುಗಮ ಮಾಡಲು ಸೂಚಿಸಿದರೆ ಕಾರ್ಮಿಕರು ಅದನ್ನು ತೆಗೆದರೆ ಏರಿಯು ಕುಸಿಯುವುದೆಂಬ ಭಯ ವ್ಯಕ್ತಪಡಿಸಿದರು.

ಕೆರೆಯಲ್ಲಿ ಇದ್ದ ನೀರನ್ನು ಉಪಯೋಗಿಸಬೇಕೆಂದು ಇರುವ ತೂಬಿನ ಕೆಳಗಡೆ ಇನ್ನೊಂದು ಕಾಲುವೆಯನ್ನು ತೆಗೆದು ನೀರನ್ನು ಹೊರತಂದು ಈಗಲೂ ಉಪಯೋಗಿಸಲಾಗುತ್ತಿದೆ. ಕತ್ತರಿ ತೂಬಿನ ತಳಮಟ್ಟ ೫೭೭.೮೩ ಮೀ, ಇದಕ್ಕಿಂತ ಕೆಳಮಟ್ಟದಲ್ಲಿ ಈಗ ಕೋಡಿಯನ್ನು ನಿರ್ಮಿಸಲಾಗಿದೆ, ಕೋಡಿಯಿಂದ ನೀರು ಕೆಳಕ್ಕೆ ಸಣ್ಣ ಜಲಪಾತವಾಗಿ ದಮ್ಮಿಕ್ಕುತ್ತಿದೆ.

ಮದಗದ ಕೆರೆಯು ವಿಫಲವಾಗುವ ಸಂದರ್ಭದಲ್ಲಿ ಹಳೆಯ ಕೋಡಿಯು ಕ್ಷೇಮವಾಗಿ ನೀರನ್ನು ಹೊರ ಕಳುಹಿಸಲು ಸಾಧ್ಯವಾಗದೇ ಅಸಾಧ್ಯ ಪ್ರವಾಹ ಬಂದು ಕೋಡಿಯ ಎರಡೂ ಬದಿಯ ಏರಿಯನ್ನು ಕೊರೆದು ಇಡೀ ಕೋಡಿಯನ್ನು ಹೊತ್ತೊಯ್ದಿರಬಹುದು. ಈಗ ಕೋಡಿಯಿರುವ ಭಾಗದಲ್ಲಿ ಯಾವುದೇ ಹಳೆಯ ಕೋಡಿಯ ಕುರುಹು ಕಾಣುವುದಿಲ್ಲ.

ಅಗಾಧ ಪ್ರಮಾಣದ ನೀರು ಸಂಗ್ರಹವಾಗಿರುವುದಕ್ಕೆ ನಮಗೆ ಜನಪದ ಹಾಡೊಂದರಲ್ಲಿ ಸುಳಿವು ದೊರಕುತ್ತದೆ. ಈ ಪ್ರದೇಶದಲ್ಲಿ ಮಾಯದಂಥ ಮಳೆಯೊಂದು ಬಂದು ಕೆರೆಯ ಏರಿಯು ಒಡೆಯುತ್ತದೆ. ಕೆರೆಯ ಏರಿಯನ್ನು ಭದ್ರಪಡಿಸಲು ೬೦೦೦ ವಡ್ಡರು ೩೦೦೦ ಗುದ್ದಲಿಗಳನ್ನು ತಂದು ಕಲ್ಲು ಕಲ್ಲಿಗೆ ಮಣ್ಣನ್ನು ಸುರಿದು, ಆಡು ಕುರಿಗಳನ್ನು ಬಲಿ ನೀಡಿ ಮಂತ್ರವನ್ನು ಹಾಕಿಸಿದರೂ ಏರಿಯ ಕೊರಕಲನ್ನು ನಿಲ್ಲಿಸಲು ಸಾಧ್ಯವಾಗದೆ ಇರುವುದನ್ನು ಕವಿ ಚಿತ್ರಿಸಿದ್ದಾನೆ.

ಕುಮದ್ವತಿ ನದಿಯಲ್ಲಿ ಇಂದಿಗೂ ಹೆಚ್ಚಿನ ಪ್ರವಾಹ ಬರುವುದನ್ನು ಕಾಣುತ್ತೇವೆ. ೯೦ರ ದಶಕದ ಆದಿಭಾಗದಲ್ಲಿ ಮದಗದ ಕೆರೆಗಿಂತ ೨೦ ಕಿ.ಮೀ ಮೇಲ್ಬಾಗದಲ್ಲಿ ಇದೇ ಕುಮದ್ವತಿ ನದಿಗೆ ಸ್ವಾತಂತ್ರ್ಯಾ ನಂತರ ಕಟ್ಟಲಾಗಿರುವ ಅಂಜನಾಪುರ ಜಲಾಶಯದ ಕೋಡಿ ಹೆಚ್ಚಿನ ನೀರನ್ನು ಸಾಗಿಸದೆ ಏರಿಯು ಒಡೆದಿತ್ತು.

ಕುಮದ್ವತಿ ನದಿಯು ಅರೆ ಮಲೆನಾಡು ಪ್ರದೇಶದಲ್ಲಿ ಹರಿಯುತ್ತಿರುವುದರಿಂದ ಪ್ರತೀ ವರ್ಷ ಅಧಿಕ ನೀರು ಬರುವುದಿಲ್ಲ. ೨೫-೩೦ ವರ್ಷಗಳಿಗೊಮ್ಮೆ ಇಂತಹ ಅಗಾಧ ಮಿಂಚಿನ ಹುಚ್ಚು ಪ್ರವಾಹ ಬಂದು ಹಾನಿ ಮಾಡುತ್ತದೆ. ಹೀಗೆ ಬಂದ ಮಾಯದಂಥ ಮಳೆಯಿಂದಾದ ಹುಚ್ಚು ಪ್ರವಾಹ ಮದಗದ ಕೆರೆಯನ್ನು ಒಡೆದಿರಬೇಕು.

ಜುನಾಘಡದ ಕೆರೆಯನ್ನು ಇಲ್ಲಿ ಉಲ್ಲೇಖಿಸಬಹುದು. ಇದನ್ನು ಅಶೋಕನ ಕಾಲದಲ್ಲೇ ಕಟ್ಟಿಸಿದರೂ ಹಲವು ಬಾರಿ ಒಡೆಯಿತು. ರುದ್ರದಾಮನ ಕಾಲದಲ್ಲಿ ಏರಿಯನ್ನು ಮೂರು ಪಟ್ಟು ಗಾತ್ರದಲ್ಲಿ ಕಟ್ಟಿದ ಉಲ್ಲೇಖವಿದೆ. ಇದೇ ಕೆರೆ ಮತ್ತೆ ಒಡೆಯುತ್ತದೆ. ಸ್ಕಂದಗುಪ್ತನ ಕಾಲದ (ಕ್ರಿ.ಶ. ೪೫೫-೪೬೭) ಜುನಾಘಡ ಶಾಸನವು ಕೆರೆಯ ಏರಿಯ ಅಳತೆಗಳನ್ನು ನೀಡುತ್ತಿದ್ದು ಅದು ೧೦೦ ಹಸ್ತ ಉದ್ದ, ೬೮ ಹಸ್ತ ಅಗಲ ಮತ್ತು ೭ ಪುರುಷ ಮಾತ್ರ ಇದೆ. ಮದಗದ ಕೆರೆಯ ಆಳ ೧೦೦ ಅಡಿಗೂ (ಸುಮಾರು ೧೨-೧೩ ಪುರುಷ ಪ್ರಮಾಣ) ಹೆಚ್ಚಿದೆ.

ಕೆರೆಗಳನ್ನು ಝರಿ, ತೊರೆ, ಹಳ್ಳಗಳಿಗೆ ಕಟ್ಟಬಹುದಾಗಿದೆ. ಅದು ನದಿಯಾಗುವ ಹಂತಕ್ಕೆ ಬಂದಾಗ ಅದರಲ್ಲಿನ ನೀರಿನ ಪ್ರಮಾಣ ಹೆಚ್ಚು. ಕೆರೆಗಳ ನಿರ್ಮಾಣ ನೀರಿನ ಸೆಲೆಗಳ ಮೊದಲ ಹಂತದಲ್ಲಿ ಸಾಧುವಾಗಿತ್ತು. ಮದಗದ ಕೆರೆಯು ನದಿಯು ಸುಮಾರು ೧೦೦ ಕಿ.ಮೀ. ಹರಿದು ಬಂದ ನಂತರ ನಿರ್ಮಿಸಲಾಗಿದೆ. ತಾಂತ್ರಿಕವಾಗಿ ಎರಡು ಗುಡ್ಡಗಳ ನಡುವೆ ಹರಿಯುವ ನದಿಯನ್ನು ಕಟ್ಟುವುದು ಸರಿ. ಆದರೆ ಅಂದಿನ ಏರಿಯ ಮತ್ತು ಕೋಡಿಯ ತಾಂತ್ರಿಕತೆ ಸಮರ್ಪಕವಾಗಿಲ್ಲದ ಕಾರಣ ಕೋಡಿಯು ವಿಫಲವಾಗಿ ಮದಗದ ಕೆರೆಯು ಒಡೆದಿರಬೇಕು. ಅದು ಆ ಕಾಲದಲ್ಲಿ ನಿರ‍್ಮಾಣವಾದ ಅತೀ ಎತ್ತರದ ಕೆರೆಯಾಗಿದ್ದಿರಬೇಕು. ಹೆಚ್ಚಿನ ನೀರು ಮತ್ತು ಏರಿಯ ಕಡಿಮೆ ಸಾಮರ್ಥ್ಯ ಕೆರೆಯು ಒಡೆಯಲು ಕಾರಣವಾಗಿರಬಹುದು. ಆದರೆ ಆ ಕೆರೆಯೇನಾದರೂ ಇಂದಿಗೆ ಇದ್ದರೆ ಅದು ದಕ್ಷಿಣ ಭಾರತದಲ್ಲೆ ಎತ್ತರದ ಕೆರೆಯಾಗಿರುತ್ತಿತ್ತು. ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದಂತೆ ಅತೀ ಬೇಗ ಒಡೆದ ಕೆರೆಯೂ ಇದಾಗಿದೆ.

ಮದ್ರಾಸು ಪ್ರಾಂತ್ಯದಲ್ಲಿ ಮುಖ್ಯ ಇಂಜಿನಿಯರ್ ಡಬ್ಲು, ಎಂ. ಎಲ್ಲಿಸ್ ಅವರ ಅಭಿಪ್ರಾಯದಲ್ಲಿ ದಕ್ಷಿಣ ಭಾರತದ ಬಹುತೇಕ ಕೆರೆಗಳ ಒಡ್ಡಿನ ಎತ್ತರ ೧೫ ಅಡಿ ಇದೆ. ಕೆಲವೆಡೆ ಅದು ೨೫-೩೦ ಅಡಿ ಎತ್ತರ ಇದ್ದು ವಿರಳವಾಗಿ ೩೫ ಅಡಿಗಿಂತಲೂ ಹೆಚ್ಚಿನ ಎತ್ತರ ಕಾಣಸಿಗುತ್ತದೆ. ೪೦ ಅಡಿಗಿಂತಲೂ ಹೆಚ್ಚಿನ ಎತ್ತರದ ಒಡ್ಡು, ಹೆಚ್ಚಿನ ವೆಚ್ಚದಿಂದ ಕೂಡಿದ್ದು ಸಾಧುವಲ್ಲದ ಪ್ರಸ್ಥಾವನೆ ಎನ್ನುತ್ತಾರೆ.

ಮಧ್ಯಕಾಲದ ತಂತ್ರಜ್ಞಾನದ ಸಂದರ್ಭದಲ್ಲಿ ಕೆರೆಯ ಏರಿಯ ಎತ್ತರಕ್ಕೆ ಮತ್ತು ಕೋಡಿ ನಿರ್ಮಾಣ ವಿಧಾನಕ್ಕೆ ಒಂದು ಮಿತಿಯಿತ್ತು. ಹೆಚ್ಚಿನ ಎತ್ತರದ ಏರಿಗಳು ಒಡೆಯುತ್ತಿದ್ದವು.

ಹರಿದ್ರಾ ನದಿ ದೇವರಬೆಳಕೆರೆ ಕಟ್ಟೆ

ನೀರಿನ ಪ್ರವಾಹಕ್ಕೆ ಅಡ್ಡಲಾಗಿ ಹಾಕಿದ ಕಟ್ಟೆ ಅಣೆಕಟ್ಟೆ. ಕಟ್ಟೆ ತನ್ನ ಮೇಲ್ಮೈಯಲ್ಲಿ ಹೆಚ್ಚಿನ ನೀರನ್ನು ಮುಂದಕ್ಕೆ ಹರಿದು ಹೋಗುವುದಕ್ಕೆ ಅನುವು ಮಾಡಿಕೊಡಬೇಕು. ಇಲ್ಲಿ ನೀರಿಗೆ ಹರಿವಿನ ಶಕ್ತಿ ಇರುವುದರಿಂದ ಕಟ್ಟೆಯು ಕಲ್ಲಿನಿಂದ ನಿರ‍್ಮಿಸಿದವು ಆಗಿರಬೇಕು. ಒಂದನೆಯ ದೇವರಾಯನ ಕ್ರಿ.ಶ. ೧೪೧೦ರ ಹರಿಹರ ಶಾಸನದಲ್ಲಿ ತುಂಗಭದ್ರೆಯ ಉಪ ನದಿಯಾದ ಹರಿದ್ರೆಯನ್ನು ಕಟ್ಟಿದ ಉಲ್ಲೇಖವಿದೆ. ಈ ಕಟ್ಟೆಯಿಂದ ಕಾಲುವೆಯ ಮೂಲಕ ಬನ್ನಿಕೋಡು, ಬೆಳುವಡಿ, ಹನಗವಾಡಿ, ಹರಿಹರ, ಗುತ್ತೂರು ಮತ್ತು ಗಂಗನರಸಿ ಗ್ರಾಮಗಳ ಭೂಮಿಗಳು ನೀರನ್ನು ಪಡೆಯುತ್ತಿದ್ದವು.

ಹಂಪಿಯಲ್ಲಿನ ತುರ್ತು ಕಾಲುವೆ ತುಂಗಭದ್ರಾ ನದಿಯಿಂದ ಹೊರಡುತ್ತದೆ. ಇಲ್ಲಿ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಕಟ್ಟೆಯನ್ನು ಚಿಂತಾಯಕ್ಕ ದೇವಮ್ಮ ಕಟ್ಟಿಸಿದ್ದಾಗಿಯೂ ಇದನ್ನು ಬಂದೋಜ ಮಾಡಿದನೆಂದು ಶಾಸನವು ತಿಳಿಸುತ್ತದೆ. ಇದರ ಕಾಲ ಸುಮಾರು ಕ್ರಿ.ಶ. ೧೪೬೫-೧೪೮೫ ಇರಬಹುದೆಂದು ಅಭಿಪ್ರಾಯ ಪಡಲಾಗಿದೆ. ತುರ್ತು ಕಾಲುವೆಯನ್ನು ಶಾಸನದಲ್ಲಿ ಹಿರಿಯ ಕಾಲುವೆ ಎಂದು ಕರೆಯಲಾಗಿದೆ. ಈ ಕಾಲುವೆ ತುಂಗಭದ್ರಾ ನದಿಯಿಂದ ಹೊರಡುವ ಭಾಗದಲ್ಲಿ ಒಂದು ಕಲ್ಲಿನ ಕಟ್ಟೆಯನ್ನು ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಜಾಗದಲ್ಲಿ ನೈಸರ್ಗಿಕವಾಗಿ ಅಲ್ಲಲ್ಲಿ ಬಂಡೆಗಳಿವೆ. ಇವುಗಳ ಮಧ್ಯೆ ಕಲ್ಲಿನ ದಿಮ್ಮಿಗಳನ್ನು ಹಾಕಲಾಗಿದ್ದು ಉದ್ದನೆಯ ಭಾಗವು ನದಿಯು ಹರಿಯುವ ದಿಕ್ಕಿನಲ್ಲಿದೆ. ದಿಮ್ಮಿಗಳಲ್ಲಿ ಕುಳಿಗಳಿದ್ದು ಕಬ್ಬಿಣದ ಸಲಾಕೆಗಳಿಂದ ಪಕ್ಕದ ದಿಮ್ಮಿಗಳಲ್ಲಿ ಕುಳಿಗಳೊಂದಿಗೆ ಬಂಧಿಸಲಾಗಿದೆ. (ಜೋಡಿಸಲಾಗಿದೆ) ಕಬ್ಬಿಣದ ಆಸರೆಯು ನೀರಿನ ಸೆಳವಿನೊಂದಿಗೆ ಕಲ್ಲಿನ ದಿಮ್ಮಿಗಳ ಸ್ಥಾನಪಲ್ಲಟ ಆಗದಂತೆ ನೋಡಿಕೊಳ್ಳುತ್ತವೆ.

ಹರಿದ್ರಾ ನದಿ ಕಾಲುವೆ ಮಟ್ಟ

ಹರಿದ್ರಾ ನದಿ ಕಾಲುವೆ ಮಟ್ಟ

ಹೀಗೆ ಹಾಕಲಾದ ಕಟ್ಟೆಗಳು ಒಡೆದು ಹೋಗುತ್ತಿದ್ದವು. ಕ್ರಿ.ಶ. ೧೪೧೦ರಲ್ಲಿ ಹರಿದ್ರಾ ನದಿಗೆ ಹಾಕಲಾದ ಕಟ್ಟೆಯು ಕ್ರಿ.ಶ. ೧೪೨೪ರಲ್ಲಿ ಒಡೆದಿರುವುದನ್ನು ಶಾಸನವು ಸೂಚಿಸುತ್ತದೆ. ೧೪ ವರ್ಷಗಳ ತರುವಾಯ ಕಟ್ಟೆಯು ಒಡೆದಿದೆ. ದೇವರಾಯನ ಮಹಾಪ್ರಧಾನಿ ನಾಗಣ್ಣದಂಡನಾಯಕನ ನಿರೂಪದ ಮೆರೆಗೆ ಬುಳ್ಳರಾಜನು ಈ ಕಟ್ಟೆಯನ್ನು ಕಟ್ಟಿಸಿದ್ದು, ಒಡೆದಾಗ ಇದೇ ಬುಳ್ಳರಾಜನು ಸಮಸ್ತ ಸೇನಾಧಿಪತಿ ಚಾಮನೃಪನಲ್ಲಿ ಭಿನ್ನವಿಸಿ ಹಣ ಪಡೆದು ಮತ್ತೆ ಕಟ್ಟೆಯನ್ನು ಕಟ್ಟಿಸುತ್ತಾನೆ. ಶಾಸನವು ಚಾಮನೃಪನನ್ನು ಗಂಡರಗುಳಿ ಮತ್ತು ಅಭಿನವ ಭೋಜನೆಂದು ಸ್ತುತಿಸಿದೆ.

ಈ ಕಟ್ಟೆಯು ಮತ್ತೆ ಒಡೆದಿರಬೇಕು. ಏಕೆಂದರೆ ಇಂದು ಆ ಕಟ್ಟೆಯು ಕಾಣುವುದಿಲ್ಲ ಮತ್ತು ಕಾಲುವೆಯೂ ಇಲ್ಲ. ಈ ಕಟ್ಟೆಯನ್ನು ಹರಿಹರ ದೇವರಿಗೆ ಸಲ್ಲುವ ಬನ್ನಿಕೋಡು ಸೀಮೆಯಲ್ಲಿ ಕಟ್ಟಲಾಗಿತ್ತೆಂದು ಶಾಸನವು ತಿಳಿಸುತ್ತದೆ. ಈಗ ದೇವರ ಬೆಳಕೆರೆ ಎಂಬ ಜಾಗದಲ್ಲಿ ನೀರಾವರಿ ಇಲಾಖೆಯವರು ತಡೆಗೋಡೆಯೊಂದನ್ನು ನಿರ‍್ಮಿಸಿದ್ದು ಅದೇ ಜಾಗದಲ್ಲಿ ಹಿಂದೆ ವಿಜಯನಗರ ಕಾಲದ ಕಟ್ಟೆಯಿತ್ತೆಂದು ಹೇಳಲಾಗುತ್ತಿದೆ.

ದೇವರಬೆಳಕೆರೆಯಲ್ಲಿನ ಶಾಸನವೊಂದರಲ್ಲಿ ವಿಜಯ ಪಂಡಿತ ಇಲ್ಲಿ ವಿಜಯಸಮುದ್ರ ನಿರ್ಮಿಸಿದ ಉಲ್ಲೇಖವಿದೆ. ಶಾಸನವು ಲಿಪಿಯ ದೃಷ್ಟಿಯಿಂದ ಹೊಯ್ಸಳರ ಕಾಲಕ್ಕೆ ಸೇರಬಹುದಾಗಿದೆ. ಹೊಯ್ಸಳ ಅರಸರು ಕೂಡಾ ಹರಿಹರ ದೇವಾಲಯಕ್ಕೆ ದಾನ ನೀಡಿದ್ದಾರೆ ವಿಜಯ ಸಮುದ್ರವು ಇದೇ ಹರಿದ್ರಾ ನದಿಗೆ ಕಟ್ಟಲಾಗಿರುವ ಕಟ್ಟೆಯಿಂದಾದ ಜಲಾಶಯಕ್ಕೆ ಇಟ್ಟ ಹೆಸರಾಗಿತ್ತೆ? ಇದು ಹೌದಾದರೆ ಇದು ಯಾವಾಗಲೊ ಒಡೆದು ಹೋಗಿದ್ದು ಮತ್ತೆ ಅದನ್ನು ವಿಜಯನಗರ ಕಾಲದಲ್ಲಿ ಪುನಃ ಕಟ್ಟಲಾಗಿತ್ತೆಂದು ಕಾಣುತ್ತದೆ.

ಸ್ಥಳ ಪರೀಕ್ಷೆಯ ನಂತರ ತಿಳಿದು ಬರುವುದೆಂದರೆ ಹರಿದ್ರಾ ನದಿಗೆ ಕಟ್ಟಲಾಗಿದ್ದ ಕಟ್ಟೆಯ ಬಹುಪಾಲು ಹಂಪಿಯ ತುರುತು ಕಾಲುವೆಯ ಕಟ್ಟೆಯಂತೆ ಇದ್ದು ನೀರನ್ನು ತಿರುವು ಮಾಡುವ ಸಾಧನವಾಗಿತ್ತೆಂದು ತೋರುತ್ತದೆ. ನದಿಯಲ್ಲಿ ಹಲವು ದೊಡ್ಡ ದೊಡ್ಡ ಬಂಡೆಗಳಿರುವುದಾಗಿ ಸ್ಥಳೀಯ ಮೀನುಗಾರರು ಹೇಳುತ್ತಾರೆ. ಆದರೆ ಈ ಜಾಗವು ಮೇಲೆ ಹೇಳಿದಂತೆ ಇಂದು ನೀರಾವರಿ ಇಲಾಖೆಯವರು ಕಟ್ಟಿರುವ ಕಟ್ಟೆಯ ಜಾಗಕ್ಕಿಂತ ೨-೩ಕಿ.ಮೀ. ಮುಂದೆ ಇದೆ. ಇದರಿಂದ ಕಟ್ಟೆಯು ಇಲ್ಲಿ ಇದ್ದಿರಬಹುದೆಂದು ಊಹಿಸಬಹುದು.

ನದಿ ಪಾತ್ರದಲ್ಲಿ ನೈಸರ್ಗಿಕವಾಗಿ ಕಲ್ಲು ಬಂಡೆಗಳಿಂದ ಕೂಡಿದ್ದರೆ, ಅಥವಾ ಹಾಸು ಬಂಡೆ, ಅಥವಾ ಗಟ್ಟಿ ಪದರದಿಂದ ಕೂಡಿದ್ದರೆ ಕಟ್ಟೆ ನಿರ‍್ಮಾಣಕ್ಕೆ ಸೂಕ್ತ ಸ್ಥಳ, ನೈಸರ್ಗಿಕ ಕಲ್ಲು ಬಂಡೆಗಳ ಮಧ್ಯದಲ್ಲಿ ಕಟ್ಟೆ ಕಟ್ಟಿದರೆ ಅದು ಅನುಕೂಲಕರ ಮತ್ತು ಧೃಡವಾಗಿರುತ್ತದೆ.

ನೈಸರ್ಗಿಕ ಬಂಡೆಗಳ ಜಾಗದಲ್ಲಿ ಕಟ್ಟಲಾಗುವ ಕಟ್ಟೆಗೆ ಹಂಪಿಯ ತುರುತು ಕಾಲುವೆಯ ಕಟ್ಟೆ ಉತ್ತಮ ಉದಾಹರಣೆ. ಗಟ್ಟಿಪದರದ ಮೇಲೆ ಕಟ್ಟಲಾಗುವ ಕಟ್ಟೆಯೊಂದು ನಮಗೆ ತುಂಗಭದ್ರಾ ನದಿಯ ಉಪನದಿ ಕುಮದ್ವತಿ ನದಿಯಲ್ಲಿ ದೊರೆಯುತ್ತದೆ. ಹಿರೇಕೆರೂರು ತಾಲ್ಲೂಕಿನ ಎಡಗೋಡಿಯ ಬಳಿ ಕಾಣಸಿಗುತ್ತದೆ. ಇಲ್ಲಿ ನದಿಯಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಗಟ್ಟಿ ಪದರದ ಮೇಲೆ ಹಾಕಲಾಗಿದ್ದು, ಬೇಸಿಗೆಯಲ್ಲಿ ಮಾತ್ರ ಇವುಗಳನ್ನು ಕಾಣಬಹುದಾಗಿದೆ. ಈ ಬಂಡೆಗಳನ್ನು ಬಹು ದೂರದಿಂದ ತರಲಾಗಿದೆ ಏಕೆಂದರೆ ಈ ಬಂಡೆಗಳು ಹತ್ತಿರದಲ್ಲೆಲ್ಲೂ ಸಿಗುವುದಿಲ್ಲ (ನೋಡಿ ಚಿತ್ರ ನಂ.)

ಕೆಳದಿ ಇಮ್ಮಡಿ ಸೋಮಶೇಖರನಾಯಕನ ಕಾಲದಲ್ಲಿ (ಕ್ರಿ.ಶ. ೧೭೧೫-೧೭೪೦) ಹಯಿನೂರಲ್ಲಿ ತುಂಗಾನದಿಗೆ ಒಡ್ಡನ್ನು ಕಟ್ಟಿಸಿ ಅದಕ್ಕೆ ಬಸವ ಒಡ್ಡು ಎಂದು ಕರೆಯಲಾಗಿತ್ತು. ಶಾಸನವು ಇಂದಿನ ಹರಕೆರೆ ಆಗಿರಬಹುದೆ?

ಕಾವೇರಿ ಮತ್ತು ಅದರ ಉಪ ನದಿಗಳಿಗೆ ಅನೇಕ ಕಟ್ಟೆಗಳಿದ್ದವು. ತಲಕಾಡು ಬಳಿಯಲ್ಲಿ ಮಾಧವ ಮಂತ್ರಿ ಕಟ್ಟೆಯಿತ್ತು. ಯಳಂದೂರ ತಾಲ್ಲೂಕಿನ ಗಣಿಗನೂರು ಬಳಿ ಹದಿನಾಡು ಅರಸರು ಕ್ರಿ.ಶ. ೧೫೬೯-೧೫೯೩ರಲ್ಲಿ ಬಂಡೆಕಾರರ ಕೈಯಲ್ಲಿ ಕಟ್ಟಿಸಿದ ವಡವು ಎಂದು ಕರೆಯಲಾಗಿದೆ. ಟಿಪ್ಪು ಸುಲ್ತಾನ್ ಕ್ರಿ.ಶ. ೧೭೯೮ರಲ್ಲಿ ಕಾವೇರಿ ನದಿಗೆ ಲಕ್ಷಕ್ಕೂ ಹೆಚ್ಚಿಗೆ ರೂಪಾಯಿಗಳನ್ನು ವೆಚ್ಚಮಾಡಿ ಕಟ್ಟೆಯನ್ನು ಕಟ್ಟಿದ್ದಾಗಿ ಪರ್ಶಿಯನ್ ಶಾಸನ ಉಲ್ಲೇಖಿಸಿದೆ. ನರಸರಾಜ ಒಡೆಯರ್ ಅವರು ಕಾವೇರಿ ಮತ್ತು ಕಣ್ವ ನದಿಗಳಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸಿ ಅದನ್ನು ನರಸಾಂಬುದಿ ಎಂದು ಕರೆದರು.

ಹರಿದ್ರಾ ನದಿಗೆ ಕಟ್ಟಲಾಗಿರುವ ಕಟ್ಟೆಯು ಅಂತಹ ಅನುಕೂಲಕರ ಜಾಗದಲ್ಲಿ ಇರಲಿಲ್ಲವೆಂದು ಮತ್ತು ಇದು ಉಪ ನದಿ ಮುಖ್ಯ ನದಿಗೆ ಸೇರುವ ಜಾಗಕ್ಕೆ ಬಹಳ ಸನಿಹ ಇರುವುದರಿಂದ ಪ್ರವಾಹ ಕಾಲದಲ್ಲಿ ಹೆಚ್ಚು ನೀರು ಬಂದು ಪದೆ ಪದೆ ಕಟ್ಟೆಯು ಒಡೆದಿರಬಹುದೆಂದು ತೋರುತ್ತದೆ.

ನದಿಗಳಿಗೆ ಕಟ್ಟಲಾಗುವ ಕಟ್ಟೆಯಿಂದ ಕೆಲವು ಅನಾನುಕೂಲವುಂಟಾಗುತ್ತವೆ. ಅವುಗಳೆಂದರೆ:

೧. ನದಿ ಪಾತ್ರದಲ್ಲಿ ಹೂಳು ತುಂಬುವುದು.

೨. ಕಟ್ಟೆಯ ಮುಂಭಾಗದಲ್ಲಿ ನೀರು ಹರಿಯುವ ರಭಸದಿಂದ ಕುಳಿಗಳಾಗುತ್ತದೆ.

೩. ಬೇಸಿಗೆಯಲ್ಲಿ ಕಟ್ಟೆಯ ಮುಂಭಾಗದ ನದಿಯಲ್ಲಿ ನೀರು ಇರುವುದಿಲ್ಲ.

ಇತರೆ ತಾಂತ್ರಿಕ ವಿವರಗಳು

ಕ್ರಿ.ಶ. ೧೪೧೯ರ ಶಾಸನವು ರಾಜಗುಂಡ್ಲಹಳ್ಳಿ ಕೆರೆಯನ್ನು ಕಟ್ಟಿದ ವಿಧಾನವನ್ನು ಹೀಗೆ ವಿವರಿಸಿದೆ…. ‘ಆ ಹಳದಲೂ ಕೆರೆಯನಾ ಕಟ್ಟಿಸಿ ಕೆರೆಗೆ ಮಂಣನು ಬಹಳವಾಗಿ ಹಾಕಿ ಕಲುಕಟೆಯನು ಕಟಿ ಕಲು ತೊಂಬನುಯಿಕಿ ಆ ತೂಬಿಗೆ ಯಿಟಿಗೆ ರಸವರ‍್ಗ ಸುರಿಣ ಸಹ ಯಿಕಿ ತೂಬನು ಜತನವಾಗಿ ಮಾಡಿ ಆ ಕೆರೆಯನ್ನು ಪೂರಯಿಸಿ ಆ ಕೆರೆಯ ಕೆಳಗೆ ಅಚುಕಟಿನ ಗದೆಯನೂ ತಿದಿ…’ ರಸವರ್ಗ ಕಲ್ಲು ಮತ್ತು ಇಟ್ಟಿಗೆಗಳಿಗೆ ಹಾಕುವ ಗಾರೆಯಾಗಿದೆ.

ಸಾಂತಳಿಗೆ ಸಾವಿರದ ಬನ್ನಿಯೂರ ಅಗ್ರಹಾರದ ಕೆರೆಯ ಪದೆ ಪದೇ ಒಡೆದು ಹೋಗುತ್ತಿದ್ದು ಜಕ್ಕಗೋಸಿ ಪೆರ‍್ಗಡೆ ಲೋಕನಾಥ ಅರಸನ ಸಮೀಪಕ್ಕೆ ಬಂದು ಹಿಂದಿನ ಹಲವು ಅರಸರುಗಳಿಗೆ ಕೆರೆಯನ್ನು ನಿಲ್ಲಿಸಲಾಗಿಲ್ಲ ನಿನ್ನ ಹೆಸರಲ್ಲಿ ಕಟ್ಟೆ ಬಲಿಷ್ಟವಾಗುವುದೆಂದು ಬಿನ್ನವಿಸಲು, ಅವನು ಜಕ್ಕಗೋಸಿಯನ್ನು ಕರೆದು ಕೆರೆಯನ್ನು ಕಟ್ಟಲು ಸೂಚಿಸುತ್ತಾನೆ. ಶಾಸನದಲ್ಲಿ ಪಡಿಸಲಿಸುತ್ತಮಿರೆ ಎಂದು ಹೇಳಲಾಗಿದೆ. ಇದನ್ನು ಕೆರೆಯ ಹೂಳು ತೆಗೆಯುವುದಕ್ಕೆ ಎಂಬ ಅರ‍್ಥದಲ್ಲಿ ಅನೇಕರು ಬಳಸುತ್ತಾರೆ. ಆದರೆ ಇಲ್ಲಿ ಇದು ಒಡೆದ ಕೆರೆಯನ್ನು ಕಟ್ಟವುದನ್ನು ಸೂಚಿಸುತ್ತದೆ. ಕುಪ್ಪಗಡ್ಡೆಯ ಕ್ರಿ.ಶ. ೯೫೪ರ ಶಾಸನ ಪಡಿಸಲಿಸುವುದನ್ನು ಉಲ್ಲೇಖಿಸುತ್ತದೆ.

ಹಿರೆಆವಲಿಯ ಕ್ರಿ.ಶ. ೧೦೭೪ರ ಶಾಸನದಲ್ಲಿ ಆವಲಿಯ ಕೆರೆಯನ್ನು ಬಲಿಷ್ಟ ಮಾಡುವುದನ್ನು ಕೆರೆಯ ಮೇಲಂಕವನ್ನು ಮಾಡುವುದೆಂದು ಕರೆಯಲಾಗಿದೆ. ಕೆರೆಯ ಮೇಲಂಕವನ್ನು ಮಾಡುವುದೆಂದರೆ ಪ್ರಾಯಶಃ ಏರಿಗೆ ಹೆಚ್ಚಿನ ಮಣ್ಣನ್ನು ಹಾಕಿ ಏರಿಯನ್ನು ಎತ್ತರಿಸುವುದು ಆಗಿರಬೇಕು.

ಕ್ರಿ.ಶ. ೮೭೦ರ ದಾವಣಗೆರೆ ತಾಲ್ಲೂಕು ಆಗರದ ಕೆರೆಯ ಬಳಿಯ ಶಾಸನವು ಇರುಗಮಯ್ಯನ ಮಗ ಸರಿಯಮಯ್ಯ ಎರಡು ಕೆರೆಯ ತೂಬುಗಳನ್ನು ಇಕ್ಕಿ ಮೂಡಣ ಕೆರೆಯ ಕಟ್ಟಿಸಿ ಮೂರು ಕೆರೆಯ ಬಿತ್ತು ಪಟ್ಟವಂ ಪಡೆದು ಬಿತ್ತುವಟಂ ಸಲಿಸಿದ್ದನ್ನು ಉಲ್ಲೇಖಿಸಿದೆ. ಬಿತ್ತು ಪಟ್ಟ ಕೆರೆಯ ಕೆಳಗಿನ ಭೂಮಿಯಾದರೆ ಬಿತ್ತುವಟ್ಟ ಅದಕ್ಕೆ ನೀಡುವ ಮರ‍್ಯಾದೆ ಆಗಿರಬೇಕು. ಇದನ್ನು ಹೊಳೆನರಸೀಪುರ ಶಾಸನವು ಧೃಡಪಡಿಸುತ್ತದೆ. ಕ್ರಿ.ಶ. ೧೨೭೬ರ ಶಾಸನವು ಕೆಸರುವಣ, ಬಿತ್ತುವಟ್ಟ ಅರುವಣ ಇವು ಊರ ಮರ‍್ಯಾದೆ ಗದ್ದೆಯ ಆಯಗಳೆಂದು ಹೆಸರಿಸಿವೆ.

ಕೆರೆ ನೀರಾವರಿ ಕೋಲ ಗಡಿಬ - ಅಮೃತಾಪುರ

ಕೆರೆ ನೀರಾವರಿ ಕೋಲ ಗಡಿಬ – ಅಮೃತಾಪುರ

ಕೆರೆಯನ್ನು ಕಟ್ಟಿದವರಿಗೆ ಕಟ್ಟುಗೊಡಗೆ ನೀಡಲಾಗುತ್ತಿತ್ತು. ಕ್ರಿ.ಶ. ೧೫೪೧ ತಮ್ಮಡಿಹಳ್ಳಿ ಶಾಸನವು ಒಡೆದು ನಿಖಿಲವಾದ ಕೆರೆಯನ್ನು ತಮ್ಮ ಹೊಂನನ್ನು ಇಕ್ಕಿ ಕಟ್ಟಿಸಿದ ಚಂನಗೋಂಡ ಮತ್ತು ತಿಂಮ್ಮಗೋಂಡ ಇವರಿಗೆ ವೆಂಕಟಾದ್ರಿ ನಾಯಕರ ಅಪ್ಪಣೆ ಪಡೆದು ತಿಪ್ಪಯ ರಾಜನು ಕಟ್ಟುಗೊಡಗೆ ನೀಡುತ್ತಾನೆ.

ಕೆರೆಗೆ ಸಂಬಂಧಿಸಿದಂತೆ ಬಂಡಿ ದಳಗಳು ಇರುತ್ತಿದ್ದವು. ಈ ದಳಗಳು ಕೆರೆಯ ಒಳಭಾಗದಲ್ಲಿ ಶೇಖರವಾಗುತ್ತಿದ್ದ ಹೂಳು ತೆಗೆಯುತ್ತಿದ್ದವು. ಪಾಂಡಿಚೇರಿಯ ಶಾಸನವೊಂದರ ಪ್ರಕಾರ ಕೆರೆಯ ಹೂಳು ತೆಗೆಯುವದಕ್ಕೆ ೧೦ ರಿಂದ ೮೦ ವಯಸ್ಸಿನ ಪ್ರತಿಯೊಬ್ಬರೂ ಪ್ರತಿ ವರ್ಷ ೨ x ೨ x ೨ x ೧ ಅಳತೆಯ ಗುಂಡಿಗಳನ್ನು ತೆಗೆಯಬೇಕಾಗಿತ್ತು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತಿತ್ತು.

ಒಟ್ಟಾರೆಯಾಗಿ ಕೆರೆಗಳು ಆಗಾಗ್ಗೆ ಒಡೆಯುತ್ತಿದ್ದವು. ಅವುಗಳ ನಿರ್ಮಾಣ ತಂತ್ರಕ್ಕೆ ಮಿತಿಯಿತ್ತು. ಮಧ್ಯಕಾಲದ ಕೆರೆಗಳನ್ನು ಜೀರ್ಣೋದ್ದಾರ ಮಾಡುವಾಗ ಏರಿಗೆ ಮೇಲಂಕ, ತೂಬುಗಳು ಕಾಲುವೆಗಳನ್ನು ಸರಿಪಡಿಸಿ, ಹೂಳು ತೆಗೆದು, ಒಡೆದ ಕೆರೆಗಳನ್ನು ಪುನಃ ಬಳಕೆಗೆ ತರುತ್ತಿದ್ದರು. ಕೆರೆಯ ಅಳತೆಯ ಕೋಲುಗಳನ್ನು ದಾಖಲಿಸಿ ಇಡುತ್ತಿದ್ದರು.

 

ಅಡಿಟಿಪ್ಪಣಿಗಳು

೧. ಅ. ಸುಂದರ, ಕೆಳದಿ ಅರಸರ ಕಾಲದ ವಾಸ್ತು ಮತ್ತು ಮೂರ‍್ತಿ ಶಿಲ್ಲ, ಸಂಪುಟ ೧, ಪುಟ ೧೧

೨. ಐ.ಎ. (ಇಂಡಿಯನ್ ಎಂಟಿಕ್ಟರಿ) ಸಂಪುಟ ೩ ಎಫ್.ಜಿ.ಐ. ನಂ. ೧೪ ಪುಟ ೬೧-೬೪ ಜುನಾಘಡ ಶಾಸನ ಸಾಲು ೨೦-೨೧

೩. ಇ.ಸಿ. (ಎಪಿಗ್ರಾಫಿಯಾ ಕರ್ನಾಟಿಕಾ) ೧೧ ದಾವಣಗೆರೆ ನಂ.೨೩.

೪. ವಿ.ಪಿ.ಆರ್. (ವಿಜಯನಗರ ಪ್ರೊಗ್ರೆಸ್ ರಿಪೋರ್ಟ್) ೮೪-೮೭ ಪುಟ ಶಾಸನ ನಂ.೧

೫. ಚಿತ್ರ ನಂ. ೩೭ ವಿ.ಪಿ.ಆರ್. ೮೪-೮೭

೬. ಇ.ಸಿ. ೧೧, ಡಿಜಿ. ನಂ. ೨೯

೭. ಇ.ಸಿ. ೭, ಶಿವಮೊಗ್ಗ ನಂ. ೭

೮. ಎಂ.ಎ.ಆರ್. (ಮೈಸೂರು ಆರ್ಕಿಯಾಲಜಿಕಲ್ ರಿಫೋರ್ಟ್ಸ್) ೧೯೧೨ ಸಂಪುಟ ೪, ಪುಟ ೨೪

೯. ಸಿ.ಎಸ್. ಪಾಟೀಲ್, ಹದಿನಾಡು ಅರಸು ಮನೆತನ, ಸಾರಂಗ ಶ್ರೀ, ಪುಟ ೧೭೦.

೧೦. ಎ.ಆರ್. ೧೯೬೩-೬೪ ಕೆ.ಆರ್. ಪೇಟೆ ತಾಲ್ಲೂಕು ಕೃಷ್ಣರಾಜ ಸಾಗರ, ನಂ.೨೫೮

೧೧. ಅನಲ್ಸ್ ಆಫ್ ಮೈಸೂರು ರಾಯಲ್ ಫ್ಯಾಮಿಲಿ ಪುಟ ೯೧, ಕೆ.ಎಸ್. ಚಿಟ್ನಸ್, ಮೆಡಿವಲ್ ಇಂಡಿಯನ್ ಐಡಿಯಾಸ್ ಅಂಡ್ ಇನ್ಸ್‌ಟಿಟ್ಯುಷನ್ಸ್ ಪುಟ ೮೫.

೧೨. ಇ.ಸಿ. ಮುಳಬಾಗಿಲು ನಂ. ೧೨೭

೧೩. ಎಂ.ಎ.ಆರ್.೧೯೩೦ ನಂ. ೭೬ ಹಳೆಬನ್ನೂರು, ಶಿಕಾರಿಪುರ ತಾಲ್ಲೂಕು

೧೪. ಇಸಿ ೮ ಸೊರಬ ನಂ. ೧೮೪ ಕುಪ್ಪಗಡ್ಡೆ.

೧೫. ಇಸಿ ೮ ಸೊರಬ ನಂ. ೧೩೨ ಹಿರೆಅವಲಿ

೧೬. ಇಸಿ ೧೧ ದಾವಣಗೆರೆ ನಂ. ೭೯

೧೭. ಇಸಿ ಹೊಸದು ೯ ಹೊಳೆನರಸೀಪುರ ನಂ.೧

೧೮. ಎಸ್. ಐ.ಐ. (ಸೌತ್ ಇಂಡಿಯನ್ ಇನ್‌ಸ್ಕಿಪ್ಯನ್ಸ್) ೯ ಭಾಗ ೨ ನಂ. ೫೯೭

೧೯. ಇಸಿ ೧೫, ಅರಸೀಕೆರೆ ತಾಲ್ಲೂಕು, ನೇರಿಲಿಗೆ ನಂ. ೨೩೮ ತಮ್ಮನಹಲ್ಲಿ ನಂ.೨೩೯