ಮಧ್ಯಕಾಲೀನ ರಾಜ್ಯಗಳು ಕೃಷಿ ಪ್ರಧಾನ ಅರ್ಥವ್ಯವಸ್ಥೆಯನ್ನು ಹೊಂದಿದ್ದ ರಾಜ್ಯಗಳು. ತಮ್ಮ ಆರ್ಥಿಕ ಸ್ಥಿತಿ ಬಲಗೊಳಿಸಿಕೊಳ್ಳಲು ಕೃಷಿಯ ಅಭಿವೃದ್ಧಿಯ ಕಡೆಗೆ ಅವುಗಳು ಗಮನ ನೀಡುವುದು ಅತ್ಯಗತ್ಯವಾಗಿದ್ದಿತು. ಇದಕ್ಕಾಗಿ ರಾಜ್ಯಗಳು ಕೃಷಿ ಕ್ಷೇತ್ರ ವಿಸ್ತರಣೆ ಮತ್ತು ಈಗಾಗಲೇ ಇರುವ ಕೃಷಿ ಕ್ಷೇತ್ರಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯಗಳನ್ನು ಮಾಡಲು ತಮ್ಮ ಅಧೀನ ಸಂಸ್ಥೆಗಳು, ಅಧಿಕಾರಿಗಳು ಹಾಗೂ ಸಮಾಜದ ವಿವಿಧ ವರ್ಗಗಳನ್ನು ಪ್ರೋತ್ಸಾಹಿಸುತ್ತಿದ್ದವು. ನೀರಾವರಿ ವ್ಯವಸ್ಥೆಯಿಂದ ಕೃಷಿಯ ಉತ್ಪನ್ನದಲ್ಲಿನ ಕುಸಿತ ತಡೆಗಟ್ಟಿ ಸ್ಥಿರತೆ ಕಾಪಾಡಿಕೊಳ್ಳಬಹುದಾಗಿದೆ. ಹೀಗಾಗಿ ವಿವಿಧ ರೀತಿಯ ನೀರಾವರಿ ಮೂಲಗಳನ್ನು ಪ್ರಾಚೀನ ಕಾಲದಿಂದ ಕೃಷಿಯು ಆಶ್ರಯಿಸಿದೆ. ನೀರಾವರಿ ವ್ಯವಸ್ಥೆಯು ಆಯಾ ಕಾಲದ ಅಗತ್ಯ ಮತ್ತು ತಂತ್ರಜ್ಞಾನದ ಲಭ್ಯತೆಗೆ ತಕ್ಕಂತೆ ರೂಪಗೊಂಡಿರುತ್ತದೆ. ಅದರಂತೆ ಪ್ರಾಚೀನ ಮತ್ತು ಮಧ್ಯಕಾಲೀನ ನೀರಾವರಿ ಕಾಮಗಾರಿಗಳು ಸಣ್ಣ ಪ್ರಮಾಣದ್ದಾಗಿದ್ದವು. ಅಂತಹ ಕಾಮಗಾರಿಗಳನ್ನು ನಿರ್ಮಿಸುವುದು ಸಮಾಜದ ಶ್ರೇಷ್ಠ ಮೌಲ್ಯಗಳಲ್ಲಿ ಒಂದು, ಅದು ಪುಣ್ಯದ ಕಾರ್ಯ ಎಂಬ ಭಾವನೆಯು ಸಮಾಜದಲ್ಲಿ ರೂಪಗೊಂಡಿತ್ತು. ಅದನ್ನು ಶಾಸನಗಳು ಹಾಗೂ ಹಲವು ಕೃತಿಗಳು ಪ್ರತಿಬಿಂಬಿಸುತ್ತವೆ. ಹೀಗಾಗಿ ಇಂತಹ ಕಾಮಗಾರಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿತು. ಸ್ಥಳೀಯ ಸರ್ಕಾರಗಳು ಈ ಕಾರ್ಯ ತಮ್ಮ ಸಾರ್ವಜನಿಕ ಕಾರ್ಯದ ಪ್ರಮುಖ ಭಾಗ ಎಂದು ತಿಳಿದುಕೊಂಡರೆ, ಸಮಾಜದ ವಿವಿಧ ವರ್ಗಗಳು ಸಮಾಜದಲ್ಲಿ ತಮ್ಮ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಹಾಗೂ ಸ್ಮಾರಕ ರೂಪದಲ್ಲಿ ಈ ಕಾಮಗಾರಿಗಳನ್ನು ನಿರ್ಮಿಸುತ್ತಿದ್ದವು. ದೇವಾಲಯಗಳು ಇಂತಹ ಕಾರ್ಯವನ್ನು ತಮ್ಮ ಸಾಮಾಜಿಕ ಆರ್ಥಿಕ ಕಾರ್ಯವೆಂದು ಪರಿಗಣಿಸಿದ್ದವು. ನೀರಾವರಿ ಕಾಲುವೆಗಳ ನಿರ್ಮಾಣವು ಪುಣ್ಯದ ಕಾರ್ಯ ಎಂಬ ಧಾರ್ಮಿಕ ನಂಬಿಕೆಯು ಅರಸರಿಗೂ ಇತರರಿಗೂ ಸಮಾನವಾಗಿ ಲಾಭಕರವಾಗಿದ್ದಿತು ಎಂದು ಡಾ.ಕೆ.ಎಸ್. ಶಿವಣ್ಣ ಅಭಿಪ್ರಾಯಿಸಿದ್ದಾರೆ.[1] ಹೀಗಾಗಿ ಈ ಕಾರ್ಯಕ್ಕೆ ಶ್ರೀಮಂತರನ್ನು ವರ್ತಕರನ್ನು ಹಾಗೂ ಹಲವು ಸಂಸ್ಥೆಗಳನ್ನು ಆಕರ್ಷಿಸಲು ಪ್ರಭುತ್ವವು ಕೊಡುಗೆಗಳನ್ನು ನೀಡುವ ಪದ್ಧತಿಯನ್ನನುಸರಿಸಿತ್ತು.[2]

ಶಾಸನಗಳು ಹಾಗೂ ಹಲವು ಕೃತಿಗಳಲ್ಲಿ ವಿವಿಧ ರೀತಿಯ ಜಲಮೂಲಗಳನ್ನು ಉಲ್ಲೇಖಿಸಲಾಗಿದೆ. ಅವುಗಳೆಂದರೆ ಕೆರೆ, ಕಟ್ಟೆ, ಸಮುದ್ರ, ಏರಿ, ಕೊಳ, ಕುಂಟೆ, ಸರೋವರ, ತೀರ್ಥ, ತಟಾಕ ಮತ್ತು ದೊಣೆ. ಇವುಗಳಲ್ಲಿ ಕೊಳ ಮತ್ತು ತೀರ್ಥ ಎಂಬ ಹೆಸರಿನೊಂದಿಗೆ ಕೊನೆಗೊಳ್ಳುವ ನೀರಿನ ಮೂಲಗಳು ಸಾಮಾನ್ಯವಾಗಿ ದೇವರ ಆರಾಧನೆಯ ಉದ್ದೇಶಕ್ಕಾಗಿ ಬಳಸುತ್ತಿದ್ದವುಗಳು.[3] ಉಳಿದವುಗಳು ಹೆಚ್ಚಾಗಿ ಕೃಷಿಯ ಉದ್ದೇಶಕ್ಕಾಗಿ ಬಳಸಲ್ಪಡುತ್ತಿದ್ದವು. ಮಾನಸೊಲ್ಲಾಸವು ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ರೂಪಿಸಿದ ಕೆರೆಯನ್ನು ತಟಾಕವೆಂದು ಕರೆದಿದೆ.[4] ನೀರಾವರಿ ಮೂಲಗಳಲ್ಲಿ ಮುಖ್ಯವಾದ ಕೆರೆಗಳಲ್ಲಿ, ಎಲ್ಲಾ ನಿರ್ಮಾಣಗೊಂಡವುಗಳಲ್ಲ, ಸ್ವಾಭಾವಿಕ ಕೆರೆಗಳೂ ಇವೆ. ಕೆರೆಗಳು ಗಾತ್ರದಲ್ಲಿ ಏಕರೀತಿಯಲ್ಲಿ ಇಲ್ಲದೆ ಅವುಗಳ ಹೆಸರುಗಳೇ ಅವುಗಳ ಗಾತ್ರ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಸುತ್ತವೆ.[5] ಕುಂಟೆಗಳು, ಕಟ್ಟು ಕೆರೆ ಮೊದಲಾದವುಗಳು ಅತ್ಯಂತ ಸಣ್ಣ ಗಾತ್ರದ ನೀರಿನ ಮೂಲಗಳು ಅವುಗಳಿಗೆ ಗಮನಾರ್ಹ ಅಚ್ಚುಕಟ್ಟು ಪ್ರದೇಶವಿರುವುದಿಲ್ಲ. ಇವುಗಳು ಮುಖ್ಯ ಕೆರೆಗೆ ನೀರನ್ನು ಸರಬರಾಜು ಮಾಡುವ ಮೂಲಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇಂತಹ ಮೂಲಗಳಿಂದ ನೀರು ಪಡೆಯುವ ಕೆರೆಗಳಲ್ಲಿ ಹೂಳಿನ ಸಮಸ್ಯೆ ಹೆಚ್ಚಾಗಿರುವುದಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಕೆರೆಗಳಿವೆ.[6] ಇಂದು ಬಹುತೇಕ ಕೆರೆಗಳು ಅತ್ಯಂತ ದುಸ್ಥಿತಿಯಲ್ಲಿವೆ. ಬದಲಾದ ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆ ಮತ್ತು ಹಿತಾಸಕ್ತಿಗಳು ಆಡಳಿತ ನಿರ್ಲಕ್ಷ, ನಿರ್ವಹಣೆಯಲ್ಲಿ ವೈಪಲ್ಯತೆ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣಗಳೆನ್ನಬಹುದು. ಕೆರೆಗಳ ಇಂತಹ ಸ್ಥಿತಿ ಕೃಷಿ, ಅಂತರ್ಜಲಮಟ್ಟ, ಪರಿಸರ ವ್ಯವಸ್ಥೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂತಹ ಸ್ಥಿತಿ ಏಕೆ ಎದುರಾಗಿದೆ? ಪರಿಹಾರಗಳೇನು? ಎಂಬುದನ್ನು ಕಂಡುಕೊಳ್ಳಲು, ಗತಕಾಲದಲ್ಲಿನ ಅವುಗಳ ಸ್ಥಿತಿಗತಿ ನಿರ್ವಹಣೆಯ ಏರ್ಪಾಟುಗಳನ್ನು ಕುರಿತು ಗಮನಹರಿಸುವುದು ಅವಶ್ಯವಾಗಿದೆ. ಇಂದಿನ ಕೆರೆಗಳನ್ನು ಕುರಿತು ನಮ್ಮ ಸಮಸ್ಯೆಯ ಪರಿಹಾರಕ್ಕೆ ಗತಕಾಲದ ಏರ್ಪಾಟುಗಳು ಸೂಕ್ತವೆನಿಸದಿರಬಹುದು. ಅವುಗಳು ಪ್ರಸ್ತುತದ ಸಾಮಾಜಿಕ ರಾಜಕೀಯ ಚೌಕಟ್ಟಿಗೆ ಅಪ್ರಸ್ತುತವೆನಿಸಬಹುದು. ಆದರೆ ಕೆಲಮಟ್ಟಿಗಾದರೂ ಮಾರ್ಗದರ್ಶನ ನೀಡುತ್ತವೆಂಬುದನ್ನು ತಳ್ಳಿಹಾಕಲಾಗದು.

ನೀರಾವರಿ ಕಾಮಗಾರಿಗಳ ನಿರ್ಮಾಣಕ್ಕಿಂತ ಅವುಗಳ ನಿರ್ವಹಣೆ ಅಥವಾ ಪಾಲನೆ ಮತ್ತು ದುರಸ್ಥಿ ಮಹತ್ವದ ವಿಚಾರವಾಗಿದೆ. ಯಾವುದೇ ನೀರಾವರಿ ಕಾಮಗಾರಿಗಳು ದೀರ್ಘಕಾಲ ಸುಸ್ಥಿತವಾಗಿರುವುದಿಲ್ಲ, ಕೆರೆಗಳು ಕೂಡ ಇದಕ್ಕೆ ಹೊರತಲ್ಲ. ಸೂಕ್ತವೂ ಸಕಾಲಿಕವೂ ಆದ ನಿರ್ವಹಣೆ ಹಾಗೂ ದುರಸ್ಥಿಯಿಂದ ಕಾಮಗಾರಿಯ ಉಪಯುಕ್ತತೆಯ ಅವಧಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಅಂತಹ ಪ್ರಯತ್ನಗಳ ಅಭಾವದ ಪರಿಣಾಮವಾಗಿ ಕೆರೆಯು ಹೂಳಿನಿಂದ ತುಂಬುತ್ತದೆ ಅಥವಾ ಅದರ ಏರಿ ಅಥವಾ ದಂಡೆಯು ದುರ್ಬಲಗೊಳ್ಳುತ್ತದೆ ಅಥವಾ ತೂಬು ಒಡೆದು ನೀರು ಸೋರಿ ಹೋಗುತ್ತದೆ. ಕಾಲುವೆಯನ್ನು ನಿರ್ಲಕ್ಷಿಸಿದರೂ ಇದೇ ರೀತಿಯ ದುಷ್ಟರಿಣಾಮವಾಗುತ್ತದೆ.[7] ನಮ್ಮ ಪೂರ್ವಜರು ಇದನ್ನರಿತು ನಿರ್ಮಾಣಕ್ಕಿಂತ ನಿರ್ವಹಣೆಗೆ ಹೆಚ್ಚು ಆದ್ಯತೆಯನ್ನು ನೀಡಿದ್ದರು.[8] ಇದೇ ವಿಚಾರವನ್ನು ಬೆಂಬಲಿಸುವ ಉಲ್ಲೇಖಗಳನ್ನು ಶಾಸಗಳಲ್ಲೂ ನೋಡಬಹುದಾಗಿದೆ. ಉದಾಹರಣೆಗೆ ೧೪೧೩೪ ಶಿವಮೊಗ್ಗದ ಶಾಸನವೊಂದರಲ್ಲಿ ನಶಿಸುತ್ತಿರುವ ಕುಟುಂಬವೊಂದನ್ನು, ಬಿರುಕುಗೊಂಡ ಕೆರೆಯೊಂದನ್ನು, ಪತನಗೊಳ್ಳುತ್ತಿರುವ ರಾಜ್ಯವನ್ನು ಹಾಗೂ ಶಿಥಿಲಗೊಂಡ ದೇವಾಲಯ ಇವುಗಳನ್ನು ಯಾರು ಜೀರ್ಣೋದ್ಧಾರ ಮಾಡುತ್ತಾರೋ ಅವರಿಗೆ ಅವುಗಳ ಮೂಲ ನಿರ್ಮಾಣದಿಂದ ಲಭಿಸಿದ ಪುಣ್ಯಕ್ಕಿಂತ ನಾಲ್ಕು ಪಟ್ಟು ಪುಣ್ಯ ಲಭಿಸುವುದು[9] ಎನ್ನಲಾಗಿದೆ. ತೀರ್ಥಹಳ್ಳಿಯಲ್ಲಿ ಕಮಡು ಬರುವ ಹಲವು ದಾನಶಾಸಗಳಲ್ಲಿ ಕೆರೆಗಳ ನಾಶಕೃತ್ಯವನ್ನು ಘೋರ ಪಾಪ ಕೃತ್ಯಗಳೆಂದು ಹೇಳಲಾಗುವ ಶಿಶುಹತ್ಯೆ, ಗೋಹತ್ಯೆ ಹಾಗೂ ಬ್ರಾಹ್ಮಣಹತ್ಯೆಗಳೊಡನೆ ಸಮೀಕರಿಸಲಾಗಿದೆ.[10]

ಹಿಂದೆ ಕೆರೆ ಹಾಗೂ ಕಾಲುವೆಗಳ ನಿರ್ವಹಣೆ ಹಾಗೂ ದುರಸ್ಥಿಯ ಜವಾಬ್ದಾರಿಯು ಗ್ರಾಮಸಮುದಾಯದ್ದಾಗಿತ್ತು. ಫಲಾನುಭವಿಗಳು ಆ ಗ್ರಾಮದ ಮುಖ್ಯ ಭಾಗವಾಗಿದ್ದರು.[11] ಪ್ರಭುತ್ವ ಕೂಡಾ ಇದರಲ್ಲಿ ಆಸಕ್ತಿವಹಿಸಿತ್ತು. ಮಧ್ಯಕಾಲೀನ ಕರ್ನಾಟಕದ ಪ್ರಮುಖ ರಾಜವಂಶಗಳಾದ ಹೊಯ್ಸಳರ ಕಾಲದಲ್ಲಿ ೨೧೫ ಕೆರೆಗಳ ನಿರ್ಮಾಣ ಹಾಗೂ ೩೬ ಕೆರೆಗಳ ಜೀರ್ಣೋದ್ಧಾರವಾದರೆ, ವಿಜಯನಗರದ ಆಳ್ವಿಕೆ ಕಾಲದಲ್ಲಿ ೭೭ ಕೆರೆಗಳು ನಿರ್ಮಾಣಗೊಂಡು, ೧೯ ಕೆರೆಗಳು ಜೀರ್ಣೋದ್ಧಾರಗೊಂಡಿವೆ.[12] ಇತರ ರಾಜವಂಶಗಳು ಕೂಡಾ ಈ ರೀತಿಯ ಕಾರ್ಯದಲ್ಲಿ ಭಾಗಿಯಾಗಿವೆ. ಅಧಿಕಾರಿಗಳು, ಸ್ಥಳೀಯ ಸರ್ಕಾರಗಳು, ವರ್ತಕರು ಹಾಗೂ ದೇವಾಲಯಗಳು ಈ ಕಾರ್ಯದಲ್ಲಿ ಹಿಂದೆ ಬಿದ್ದಿರಲಿಲ್ಲ.

ಕೆರೆಗಳ ನಿರ್ವಹಣಾ ಕಾರ್ಯವು ಸಾಮಾನ್ಯವಾಗಿ ಹೀಗಿರುತ್ತವೆ

ಅ. ಕೆರೆ ಮತ್ತು ಕಾಲುವೆಗಳಲ್ಲಿರುವ ಹೂಳನ್ನು ಕಾಲಕಾಲಕ್ಕೆ ತೆಗೆಸುವುದು.[13]

ಆ. ಕೆರೆಯ ಏರಿ ಅಥವಾ ದಂಡೆಯನ್ನು ಮಳೆ ಅಥವಾ ಇನ್ನಿತರೆ ಕಾರಣದಿಂದ ಹಾನಿಗೊಂಡಿದ್ದರೆ ಸರಿಪಡಿಸುವುದು.13a

ಇ. ತೂಬು ಮತ್ತು ಕೋಡಿ ಹಾನಿಗೊಂಡರೆ ಕಾಲಕಾಲಕ್ಕೆ ದುರಸ್ತಿ ಮಾಡುವುದು.13b

ಈ. ಕೆರೆಯಂಗಳವನ್ನು ಒತ್ತುವರಿಯಾಗದಂತೆ ರಕ್ಷಿಸುವುದು.13c

ಉ. ಕೆರೆಯಂಗಳಕ್ಕೆ ಹೂಳು ಬರದಂತೆ ತಡೆಯುವುದು.13d

ಊ. ಕೆರೆಯ ಗಾತ್ರ ಅವಶ್ಯವಿದ್ದಲ್ಲಿ ವಿಸ್ತರಿಸುವುದು ಹಾಗೂ ಮೆಟ್ಟಿಲುಗಳನ್ನು ನಿರ್ಮಿಸುವುದು.[14]

ಋ. ನೀರಿನ ಬಳಕೆ ಕುರಿತಾದ ವಿವಾದ ಬಗೆಹರಿಸುವುದು.14a

ನಿರ್ವಹಣಾ ಕಾರ್ಯದಲ್ಲಿ ತೊಡಗುವವರಿಗೆ ಅಥವಾ ಜವಾಬ್ದಾರಿ ಹೊಂದಿದ್ದವರಿಗೆ ವಿವಿಧ ರೂಪದ ಕೊಡುಗೆ ಹಾಗೂ ಕಂದಾಯದಲ್ಲಿ ರಿಯಾಯ್ತಿ ನೀಡುವ ವ್ಯವಸ್ಥೆಯಿದ್ದಿತು. ಭೂಮಿ ರೂಪದ ಕೊಡುಗೆಗಳನ್ನು ಈ ಉದ್ದೇಶಕ್ಕೆ ನೀಡಿರುವುದನ್ನು ಶಾಸನಗಳು ತಿಳಿಸುತ್ತವೆ. ಸ್ಥಳೀಯ ಸರ್ಕಾರಗಳು ಇಂತಹ ಕಾರ್ಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಕೆಲವು ತೆರಿಗೆ ಬಾಬ್ತುಗಳನ್ನು ಉಪಯೋಗಿಸಿಕೊಳ್ಳಲು ಪ್ರಭುತ್ವ ಅವುಗಳಿಗೆ ಅನುಮತಿ ನೀಡಿರುವುದುಂಟು.

ಕೆರೆಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ನೀಡಲಾಗಿರುವ ಭೂಮಿಯ ಕೊಡುಗೆಗಳನ್ನು ಬಿತ್ತುವಟ್ಟ, ದಸವಂದ, ಕಟ್ಟುಕೊಡಿಗೆ, ಕೆರೆಕೊಡಿಗೆ, ಕೆರೆಮಾನ್ಯ ಎಂದು ಶಾಸನಗಳಲ್ಲಿ ಹೆಸರಿಸಲಾಗಿದೆ. ಕೆರೆಗಳ ನಿರ್ಮಾಣಕ್ಕಾಗಿ ಭೂಮಿಯನ್ನು ದಾನವಾಗಿ ನೀಡಿದ್ದಲ್ಲಿ, ಅಂತಹ ಕೆರೆಗಳ ನಿರ್ವಹಣೆ ದಾನಪಡೆದ ನಿರ್ಮಾತೃವಿನ ಕರ್ತವ್ಯವಾಗಿರುತ್ತಿತ್ತು.[15] ನಿರ್ವಹಣೆಯ ಉದ್ದೇಶಕ್ಕಾಗಿ ನೀಡಿದ ಭೂಮಿಯ ಬೆಳೆಯನ್ನು ಆ ಕಾರ್ಯಕ್ಕಾಗಿ ಬಳಸಲಾಗುತ್ತಿತ್ತು. ಕೆಲವು ವೇಳೆ ಕೆರೆಯ ನಿರ್ಮಾತೃಗಳೇ ಇಂತಹ ಏರ್ಪಾಟನ್ನು ಮಾಡಿರುವುದುಂಟು. ಶಿಕಾರಿಪುರದ ಕ್ರಿ.ಶ. ೯೩೫ರ ಶಾಸನವು ತಿಳಿಸುವಂತೆ ಪೆರ್ಗಡೆ ಪುಳಿಯ್ಯಮ್ಮ ತಾಳಗುಂದದಲ್ಲಿ ಕೆರೆಯನ್ನು ಕಟ್ಟಿಸಿ, ದೇವರ ನೈವೇದ್ಯ ಮತ್ತು ನಂದಾದೀಪಕ್ಕೆ ಐದು ಮತ್ತಲ್, ಕೆರೆಯ ಕೆಳಗೆ ಒಂದು ಮತ್ತಲ್ ಹಾಗೂ ಕೆರಗಾಲ ಎಂಬಲ್ಲಿ ಇಪ್ಪತ್ತು ಮತ್ತಲ್ ಒಟ್ಟು ಇಪ್ಪತ್ತಾರು ಮತ್ತಲ್ ಗದ್ದೆಯನ್ನು ದೇವರಿಗೆ ಮತ್ತು ಕೆರೆಗೆ ದಾನ ನೀಡಿದನು.[16] ಇದೇ ತಾಲ್ಲೂಕಿನ ಕ್ರಿ.ಶ. ೧೧೦೭ರ ಶಾಸನದಲ್ಲಿ ಅರಸರು ಕೆರೆಯ ನಿರ್ಮಾಣಕ್ಕೆ ಹಾಗೂ ಕೆರೆಗೆ ಪಡಿಸಲ್ಲಿಸುವುದಕ್ಕೆ ಕೆರೆಯ ಕೆಳಗೆ ಗದ್ದೆಗಳನ್ನು ದಾನ ಮಾಡಿದರೆಂದು ಪ್ರಸ್ತಾಪವಿದೆ.[17]ಪಡಿಸಲ್ಲಿಸುವುದು ಎಂದರೆ ಕೆರೆಗಳ ದುರಸ್ತಿ ಕೆಲಸವೆಂದು ಹೇಳಲಾಗಿದೆ.[18] ಅರಸರು ತಮ್ಮ ಪ್ರಾಂತ್ಯಗಳಲ್ಲಿ ಸಂಚರಿಸುವಾಗ ಕೆರೆ ಹಾಗೂ ಕಾಲುವೆಗಳನ್ನು ಗಮನಿಸುತ್ತಿದ್ದರು. ದುರಸ್ತಿ ಅಗತ್ಯವಿರುವ ಕಾಮಗಾರಿಗಳ ದುರಸ್ತಿಗೆ ಸೂಕ್ತ ಏರ್ಪಾಡು ಮಾಡುತ್ತಿದ್ದರು. ಸೊರಬದ ಅವಲಿ ಗ್ರಾಮದ ಕ್ರಿ.ಶ. ೧೧೫೨ರ ಶಾಸನ ವಿವರಿಸುವಂತೆ ಆ ಗ್ರಾಮಕ್ಕೆ ಭೇಟಿ ನೀಡಿದ ಅರಸರು ಅದರ ಮೇಲ್ದಂಡೆಯನ್ನು ಬಲಿಷ್ಠಗೊಳಿಸಲು ಒಂದು ಮತ್ತಲ್ ಗದ್ದೆಯನ್ನು ನೀಡಿದರು.[19] ಇದೇ ತಾಲ್ಲೂಕಿನ ನಾಗರಕೆರೆಯ ಶಾಸನವು, ಕೆರೆಯ ಹೂಳನ್ನು ಕಾಲಕಾಲಕ್ಕೆ ತೆಗೆಸಲು ಕಟ್ಟುಮಾರಿ, ಅದಕ್ಕಾಗಿ ತೋಟವೊಂದನ್ನು ಅರಸರು ದಾನ ನೀಡಿದರೆಂದು ಹೇಳಿದೆ.[20] ಶಿವಮೊಗ್ಗ ತಾಲ್ಲೂಕಿನ ಬೆಂಕಿಪುರ ಸೀಮೆಯ ಕಲ್ಲಗೊಂಡ ಗೌಡನಿಗೆ ರಾಘವ ತಿಮ್ಮರಸಯ್ಯ ಎಂಬಾತನು ಕೆರೆಯನ್ನು ನಿರ್ಮಿಸಿದ್ದಕ್ಕಾಗಿ ಕೆರೆಮಾನ್ಯ ನೀಡಿದ್ದನು.[21] ಸೊರಬದ ಓಟೂರು ಗ್ರಾಮದ ಶಾಸನವು ಬಿತ್ತುಬಟ್ಟ ಕೊಡುಗೆಯನ್ನು ಪ್ರಸ್ತಾಪಿಸಿದೆ.[22] ಕ್ರಿ.ಶ. ೧೫೧೩ರಲ್ಲಿ ಚನ್ನಪಟ್ನದ ೨ ಕೆರೆಗಳ ದುರಸ್ತಿಗಾಗಿ ಒಂದು ಗ್ರಾಮ ದಾನ ನೀಡಿ ನಿರ್ವಹಣೆಗಾಗಿ ೬ ಬಂಡಿಗಳನ್ನಿಡಲಾಗಿತ್ತು.[23] ೧೬೧೩ರಲ್ಲಿ ಕೋಲಾರದ ಮೇಖಲಬೊಮ್ಮನೆಂಬಾತನು ಗ್ರಾಮದ ಕೆರೆಯ ಬಿರುಕನ್ನು ದುರಸ್ತಿ ಪಡಿಸಿದ್ದಕ್ಕಾಗಿ ಕೆರೆಯ ಕೆಳಗಿನ ಕಾಲುಭಾಗ ಭೂಮಿಯನ್ನು ದಸವಂದ ಕೊಡುಗೆಯಾಗಿ ನೀಡಲಾಯಿತು.[24] ಈ ರೀತಿ ಭೂಮಿ ಸ್ವರೂಪದ ಕೊಡುಗೆಗಳನ್ನು ನೀಡುವ ಪದ್ಧತಿ ೧೮ನೇ ಶತಮಾನದವರೆಗೂ ಮುಂದುವರಿದಿತ್ತೆಂದು ಬುಕಾನನ್ ಬರಹ ಹಾಗೂ ಶಾಸನಗಳನ್ನು ಗಮನಿಸಿದಾಗ ತಿಳಿಯುತ್ತದೆ.[25] ಇದಲ್ಲದೆ ಕೆರೆ ನಿರ್ಮಾಣಕ್ಕಾಗಿ ಖಾಸಗಿ ಜಮೀನಿನ ಬಳಕೆಯಾದ ಸಂದರ್ಭದಲ್ಲಿ ಪರಿಹಾರವಾಗಿ ಬದಲಿ ಭೂಮಿ ನೀಡಿದ ಉದಾಹರಣೆಯಿದೆ.[26] ಬಿತ್ತುವಟ್ಟ ಹಾಗೂ ದಸವಂದ ಕೊಡುಗೆಗಳನ್ನು ವಿವಿಧ ರೀತಿ ಅರ್ಥೈಸಲಾಗಿದ್ದರೂ, ಅವುಗಳನ್ನು ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಯ ಉದ್ದೇಶಕ್ಕಾಗಿ ನೀಡಲಾಗಿದೆ ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಕೆರೆಗಳ ಮೇಲ್ವಿಚಾರಣೆಗಾಗಿ ನೇಮಿಸಲ್ಪಟ್ಟ ನೀರುಗಂಟಿಗಳಿಗೂ ಕೊಡುಗೆಗಳನ್ನು ನೀಡುವ ವ್ಯವಸ್ಥೆಯಿದ್ದಿತು. ಮೂಲ ನಿರ್ಮಾತೃವಿನ ವಂಶ ನಿಂತು ಹೋದಲ್ಲಿ ಅವನಿಗೆ ನೀಡಿದ್ದ ಮಾನ್ಯದ ಭೂಮಿಯನ್ನು ಸರಕಾರವೇ ವಹಿಸಿಕೊಳ್ಳುತ್ತಿತ್ತು. ಕೆರೆಯನ್ನು ದುರಸ್ತಿಯಲ್ಲಿಟ್ಟಿರುತ್ತಿತ್ತು.[27]

ಕೆರೆಗಳ ನಿರ್ವಹಣೆಯಲ್ಲಿ ಅಂದಿನ ಗ್ರಾಮಸಭೆಗಳು ಹಾಗೂ ಮಹಾಜನರು ವಹಿಸಿದ ಪಾತ್ರ ಪ್ರಧಾನವಾದುದಾಗಿದೆ. ನಿರ್ವಹಣೆಗಾಗಿ ನೀಡಿದ ಭೂಮಿಯ ರಕ್ಷಣಾ ಜವಾಬ್ದಾರಿ ಗ್ರಾಮದ ಗ್ರಾಮ ಸಭೆ ಹಾಗೂ ಮಹಾಜನರದ್ದಾಗಿದ್ದಿತು. ಗ್ರಾಮದ ಕೆರೆಗಳ ಜವಾಬ್ದಾರಿಯು ಅಲ್ಲಿನ ಗ್ರಾಮಸಭೆಯದ್ದಾಗಿದ್ದಿತು. ಅವುಗಳ ಕೆರೆಯ ನಿರ್ವಹಣೆಗಾಗಿ ಗಾಡಿಗಳನ್ನು ಹೊಂದಿದ್ದು, ನಿರ್ವಹಣ ಕಾರ್ಯದಲ್ಲಿ ತೊಡಗಿದವರಿಗೆ ಗಾಡಿಗಳನ್ನು ಹಾಗೂ ಇತರ ಅವಶ್ಯ ವಸ್ತುಗಳನ್ನು ನೀಡುತ್ತಿದ್ದವು. ನಿರ್ಮಾಣ ಕಾರ್ಯದಲ್ಲಿ ತೊಡಗಿದವರನ್ನು ಕೊಡುಗೆಗಳನ್ನು ನೀಡಿ ಪೋತ್ಸಾಹಿಸುತ್ತಿದ್ದವು. ಕ್ರಿ.ಶ. ೧೩೦೦ರಲ್ಲಿ ಓರ್ವನು ಕಲ್ಲನಗೆರೆಯ ಮಹಾಜನರಿಗೆ ಕೆರೆಯ ನಿರ್ವಹಣೆಗಾಗಿ ಗಾಡಿಯೊಂದನ್ನು ನೀಡಿದನೆಂದೂ, ಪ್ರತಿಯಾಗಿ ಅಲ್ಲಿಯ ಗ್ರಾಮಸ್ಥರು ಗಾಡಿಯನ್ನು ಓಡಿಸುವವನಿಗೆ ದಾನವೊಂದನ್ನು ನೀಡಿದರೆಂದು ಅರಸೀಕೆರೆಯ ಶಾಸನವೊಂದು ತಿಳಿಸುತ್ತದೆ.[28] ಮೈಸೂರು ಜಿಲ್ಲೆಯ ಶಾಸನವೊಂದು ಅಲ್ಲಿನ ಗ್ರಾಮಸಭೆಯೊಂದು ಕೆರೆಯ ನಿರ್ವಹಣೆಗಾಗಿ ಗಾಡಿಯೊಂದನ್ನು ನೀಡಲು ಹಾಗೂ ಓಡಿಸುವವನ್ನಿಡಲು ಒಪ್ಪಿಗೆ ನೀಡಿದ್ದನ್ನು ಉಲ್ಲೇಖಿಸಿದೆ.[29] ಗ್ರಾಮಸ್ಥರು ಕೂಡಾ ಈ ಕಾರ್ಯದಲ್ಲಿ ಅಸಕ್ತರಾಗಿದ್ದರು. ಚನ್ನಪಟ್ಟಣದ ಶಾಸನವೊಂದು ಹೇಳುವಂತೆ ನೀಲಕಂಠದೇವ ಎಂಬಾತನು ಗ್ರಾಮದ ಕೆರೆಯನ್ನು ದುರಸ್ತಿ ಮಾಡಿದ್ದಕ್ಕಾಗಿ ಗ್ರಾಮಸ್ಥರು ೨೬೦ ಗದ್ಯಾಣಗಳನ್ನು ಆತನಿಗೆ ಕೊಡುಗೆಯಾಗಿ ನೀಡಿದರು.[30] ಹರಿಹರಕ್ಷೇತ್ರದ ಮಹಾಜನರು ಬುಳ್ಳಪ್ಪ ಎಂಬುವವನಿಗೆ ಜಲಾಶಯದ ವಾರ್ಷಿಕ ನಿರ್ವಹಣೆಯ ಜವಾಬ್ದಾರಿ ವಹಿಸಿ ತಮ್ಮ ಪಾಲಿನ ಭೂಮಿಯಲ್ಲಿ ಎರಡು ಖಂಡುಗ ಭೂಮಿಯನ್ನು ಕೊಡುಗೆಯಾಗಿ ನೀಡಿದ್ದರು.[31] ಇವು ಗ್ರಾಮಸ್ಥರು ಹಾಗೂ ಗ್ರಾಮಡಳಿತವು ಕೆರೆಗಳ ನಿರ್ವಹಣೆಯಲ್ಲಿ ವಹಿಸಿದ್ದ ಪಾತ್ರಕ್ಕೆ ಉತ್ತಮ ಉದಾಹರಣೆಯಾಗಿವೆ. ೧೯೭೦ರ ವರೆಗೂ ನಮ್ಮ ರಾಜ್ಯದಲ್ಲಿ ಗ್ರಾಮಸಭೆಗಳು ಹಾಗೂ ಪ್ರತಿನಿಧಿಗಳು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ನಂತರ ಕೆರೆಯ ನಿರ್ವಹಣೆಯಲ್ಲಿ ಬದಲಾವಣೆಗಳಾದವು.

ಮಧ್ಯಕಾಲೀನ ಕರ್ನಾಟಕದಲ್ಲಿ ಕೆರೆಗಳ ನಿರ್ವಹಣೆಯಂತಹ ಸಾರ್ವಜನಿಕ ಹಿತಾಸಕ್ತಿಯ ಕಾರ್ಯದಲ್ಲಿ ದೇವಾಲಯಗಳು ಭಾಗವಹಿಸಿವೆ. ಅವುಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ, ಸಾಮಾಜಿಕ ಮತ್ತು ಆರ್ಥಿಕ ಕೇಂದ್ರಗಳು ಆಗಿದ್ದು ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವು. ಅಲ್ಲದೆ ದೇವಾಲಯಗಳು ಅಂದಿನ ಗ್ರಾಮ ವ್ಯವಸ್ಥೆಯ ಪ್ರಧಾನ ಅಂಗವಾಗಿದ್ದವು. ಬಹಳಷ್ಟು ದೇವಾಲಯಗಳು ಭೂಮಿಯ ಒಡೆತನ ಹೊಂದಿದ್ದು, ಕೆರೆಗಳ ಪ್ರಧಾನ ಫಲಾನುಭವಿಗಳಾಗಿದ್ದವು. ಉದಾಹರಣೆಗೆ ಹರಿಹರ ಶಾಸನವು ತಿಳಿಸುವಂತೆ ಹರಿಹರ ಕ್ಷೇತ್ರದ ಮಹಾಜನರಿಗೂ, ಹರಿಹರ ದೇವಾಲಯಕ್ಕೂ ಒಪ್ಪಂದವೊಂದಾಗಿತ್ತು. ಅದರಂತೆ ಹರಿದ್ರಾ ನದಿಗೆ ನಿರ್ಮಿಸಿದ್ದ ಜಲಾಶಯದ ವಾರ್ಷಿಕ ದುರಸ್ತಿಗೆ ದೇವಾಲಯವು ಮೂರನೇ ಎರಡರಷ್ಟು, ಮಹಾಜನರು ಮೂರನೇ ಒಂದರಷ್ಟು ವೆಚ್ಚ ಮಾಡಲು ಹಾಗೂ ನೀರನ್ನೂ ಕೂಡಾ ಅದೇ ಪ್ರಮಾಣದಲ್ಲಿ ಹಂಚಿಕೊಳ್ಳಲು ಒಪ್ಪಿಕೊಳ್ಳಲಾಯಿತು.[32] ಇದು ದೇವಾಲಯವು ಭೂಮಿಯ ಒಡೆತನ ಹೊಂದಿದ್ದನ್ನು ಹಾಗೂ ಜಲಾಶಯದ ನಿರ್ವಹಣೆಯಲ್ಲಿ ಭಾಗಿಯಾಗಿದ್ದನ್ನು ಸ್ಪಷ್ಟಪಡಿಸುತ್ತದೆ. ಕೆರೆಯ ನಿರ್ವಹಣೆಗೆ ದೇವಾಲಯಗಳು ನೆರವು ನೀಡಿದಂತೆ, ದೇವಾಲಯಗಳ ನಿರ್ವಹಣೆಗೆ ಕೆರೆಯ ಆದಾಯವನ್ನು ಬಳಸಿರುವುದುಂಟು. ಉದಾಹರಣೆಗೆ ಬಾಗಳಿಯ ಪೆರಿಯ ಕೆರೆಯಿಂದ ಬರುವ ಕೆರೆಯ ಸುಂಕದಲ್ಲಿ ತಿಂಗಳಿಗೆ ೧ ಪಣವನ್ನು ಅಲ್ಲಿನ ನೀಲಕಂಠೇಶ್ವರ ದೇವಾಲಯದ ದೀಪದ ನಿರ್ವಹಣೆಗಾಗಿ ನೀಡಲಾಗುತ್ತಿತ್ತು.[33] ಹೀಗೆ ಕೆರೆಗಳು ಹಾಗೂ ದೇವಾಲಯಗಳ ನಡುವೆ ಪರಸ್ಪರ ಸಂಬಂಧವಿದ್ದಿತು.

ಶ್ರೀಮಂತರು, ವರ್ತಕರು ಹಾಗೂ ಅಧಿಕಾರಿಗಳೂ ಕೂಡಾ ಕೆರೆಗಳ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದನ್ನು ಶಾಸನಗಳು ಧೃಡಪಡಿಸುತ್ತವೆ. ಮಹಾವಡ್ಡ ವ್ಯವಹಾರಿ (ಮಾಧವೀ ಭಟ್ಟಾರ್ಯ)ಯ ಮಗ ಅಲ್ಲದೇವ (ಅಲ್ಲಾಳದೇವ) ಎಂಬಾತನು ವಿಷ್ಣುಸಮುದ್ರದ ನಿರ್ವಹಣೆಗಾಗಿ ೩೦೦ ಗದ್ಯಾಣಗಳನ್ನು ಕೊಡುಗೆ ನೀಡಿದ್ದನು. ಅದರ ಬಡ್ಡಿಯಲ್ಲಿ ಆ ಕೆರೆಯ ತೂಬು ಹಾಗೂ ಕಾಲುವೆಗಳ ದುರಸ್ತಿ ಮಾಡಲಾಗುತ್ತಿತ್ತು.[34] ಕ್ರಿ.ಶ. ೧೪೮೪ರಲ್ಲಿ ಬುಕ್ಕರಾಯ ನಿರ್ಮಿತ ಹರಿದ್ರಾ ನದಿಯ ಜಲಾಶಯವು ಬಿರುಕು ಬಿಟ್ಟಾಗ ನಾಗಣ್ಣ ಒಡೆಯರ್ ಎಂಬ ದೇವರಾಯನ ಮಂತ್ರಿಯು ಸೇನಾನಿಯಿಂದ ಹಣ ಪಡೆದು ಜಲಾಶಯವನ್ನು ದುರಸ್ತಿಗೊಳಿಸಿದರು.[35] ಕ್ರಿ.ಶ. ೧೧೦೭ರಲ್ಲಿ ದಂಡನಾಯಕ ಬರ್ಮರಸನು ಬಾಗಳಿಯ ಪೆರಿಯ ಕೆರೆಯ ದುರಸ್ತಿಗಾಗಿ ಪನ್ನಾಯ ತೆರಿಗೆ ಬಾಬ್ತಿನಲ್ಲಿ ತಿಂಗಳಿಗೆ ಒಂದು ಗದ್ಯಾಣ ನೀಡಿದನು ಹಾಗೂ ಕ್ರಿ.ಶ. ೧೧೧೫ರಲ್ಲಿ ಇದೇ ಕೆರೆಯ ನಿರ್ವಹಣೆಗಾಗಿ ತಿಕ್ಕಭಟ್ಟ ದಂಡನಾಯಕನು ಗ್ರಾಮದ ಸುಂಕದ ಆದಾಯ ಬಾಬ್ತನ್ನು ದಾನ ನೀಡಿದನು.[36]

ಇದಲ್ಲದೆ ಕೆರೆ ಸುಂಕ ವಿಧಿಸುವ ಪದ್ಧತಿ ಇದ್ದಿತು. ನದಿಸುಂಕ, ಪನ್ನಾಯ, ಪೆರ್ಜುಂಕ, ಬಣ್ಣಿಗದರೆ, ವೀಳೆದೆಲೆ ಮೇಲಿನ ಸುಂಕ ಹಾಗೂ ದಂಡದ ಬಾಬ್ತುಗಳಲ್ಲಿ ಭಾಗಶಃ ಕೆಲವೊಮ್ಮೆ ಪೂರ್ಣಭಾಗ, ಕೆರೆಯ ಮೀನುಗಾರಿಕೆಯಿಂದ ಬರುವ ಆದಾಯ ಹಾಗೂ ಕೆರೆಗಾಗಿ ನೀಡಲಾದ ಬಂಡಿಗಳಿಂದ ಬರುವ ಬಾಡಿಗೆ ಬಾಬ್ತುಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿತ್ತು.[37] ಉಪನಯನ, ಮದುವೆ ಮೊದಲಾದ ಶುಭಕಾರ್ಯಗಳಿಂದ ಬರುವ ಹಣ ಹಾಗೂ ಪ್ರಾಯಶ್ಚಿತ್ತ ರೂಪದಲ್ಲಿ ಬರುವ ಹಣವನ್ನು ಕೂಡಾ ಕೆರೆಗಳ ದುರಸ್ತಿ ಕಾರ್ಯಕ್ಕೆ ಬಳಸಲಾಗುತ್ತಿತ್ತು.[38]

ಕೆರೆ, ರಸ್ತೆ ಮೊದಲಾದವುಗಳ ದುರಸ್ತಿಗಾಗಿ ಮಧ್ಯಯುಗದಲ್ಲಿ ರಾಜ್ಯವು ಪ್ರಜೆಗಳಿಂದ ಬಿಟ್ಟಿ (ಊರುಬಿಟ್ಟಿ) ಎಂಬ ಕಡ್ಡಾಯ ಸೇವೆಯನ್ನು ಪಡೆಯುತ್ತಿತ್ತು. ಕೆರೆಗಳ ಮೇಲ್ವಿಚಾರಣೆ ಹಾಗೂ ನೀರಿನ ನಿರ್ವಹಣೆಗಾಗಿ ನೀರುಗಂಟಿಗಳನ್ನು ನೇಮಿಸಿ ಅವರಿಗೆ ಉತ್ಪನ್ನದಲ್ಲಿ ಕೆಲಭಾಗವನ್ನು ಪ್ರತಿಫಲವಾಗಿ ನೀಡಲಾಗುತ್ತಿತ್ತು.

ಶಿವಮೊಗ್ಗದ ತಿಮ್ಮಲಾಪುರ ಕೆರೆಯೊಳಗಿನ ಶಾಸನದಲ್ಲಿ ಈ ಕೆರೆಯ ನೀರು ಪುರುಷ ಪ್ರಮಾಣದಲ್ಲಿ ನಿಂತು ತಿಮ್ಮಲಾಪುರಕ್ಕೆ ಸಲ್ಲಬೇಕು ಎಂಬ ಉಲ್ಲೇಖವಿದೆ.[39] ಇಂತಹ ಸ್ಪಷ್ಟನೆಯ ಉದ್ದೇಶ ನೀರು ಬಳಕೆಯ ಕುರಿತು ವಿವಾದ ಬರಬಾರದೆಂಬುದಾಗಿರಬೇಕು ಎಂದೆನ್ನಬಹುದು.

ಮಧ್ಯಯುಗದ ರಾಜ್ಯ ಮತ್ತು ಸಮಾಜ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ನೀಡಿದ್ದ ಪ್ರಾಮುಖ್ಯತೆಯನ್ನು ಮೇಲಿನ ವಿಚಾರಗಳು ಪುಷ್ಟೀಕರಿಸುತ್ತವೆ. ಅಂದು ಕೆರೆಗಳ ನಿರ್ವಹಣೆ ಗ್ರಾಮದ ಜನರೆಲ್ಲರ ಜವಾಬ್ದಾರಿಯಾಗಿತ್ತು. ನಂತರದಲ್ಲಿ ರಾಜ್ಯ ಮತ್ತು ಸಮಾಜದ ಸ್ವರೂಪದಲ್ಲಾದ ಬದಲಾವಣೆಗಳು ಕೆರೆಗಳ ಕುರಿತ ನಮ್ಮ ಕೃಷ್ಟಿಕೋನವನ್ನು ಬದಲಿಸಿವೆ. ಗ್ರಾಮಾಡಳಿತದ ಸ್ವರೂಪದಲ್ಲಾದ ಬದಲಾವಣೆ, ಭೂಮಿ ಅಥವಾ ಇತರ ಕೊಡುಗೆಗಳನ್ನು ನೀಡುವ ಪದ್ಧತಿಯ ಕಣ್ಮರೆ ಕೆರೆಗಳೂ ಸೇರಿದಂತೆ ಸಾರ್ವಜನಿಕರ ಕಾರ್ಯಗಳನ್ನು ಮಾಡುವಲ್ಲಿ ಸಮಾಜದಲ್ಲಿ ಆಸಕ್ತಿ ಕಡಿಮೆಯಾಗಿರುವುದು, ಆಧುನಿಕ ಕಾಲದಲ್ಲಿ ಬೃಹತ್ ನೀರಾವರಿ ಕಾಮಗಾರಿಗಳಿಗೆ, ಬೋರ್‌ವೆಲ್ ಮೊದಲಾದವುಗಳಿಗೆ ಪ್ರಧಾನ್ಯತೆ ನೀಡಿರುವುದು, ಕೆರೆಗಳ ವ್ಯವಸ್ಥೆ ಅವನತಿಗೊಳ್ಳಲು ಪ್ರಮುಖ ಕಾರಣವೆನ್ನಬಹುದು. ಜೊತೆಗೆ ನಗರೀಕರಣ ಹಾಗೂ ಕೃಷಿಗಾಗಿ ಕೆರೆಯಂಗಳವನ್ನು ಒತ್ತುವರಿ ಮಾಡಿರುವುದು ಕೂಡಾ ಕೆರೆಗಳ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ.

ಮಧ್ಯಯುಗದಲ್ಲಿ ಕೆರೆಗಳ ನಿರ್ವಹಣೆ ಸುಸೂತ್ರವಾಗಿ ನಡೆಯುತ್ತಿದ್ದುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ತಾಂತ್ರಿಕತೆಯಲ್ಲಿದ್ದ ಸರಳತೆ, ಅಂದಿನ ತಾಂತ್ರಿಕತೆ ಸರಳ ಮತ್ತು ಸ್ಥಳೀಯವಾದುದಾಗಿತ್ತು. ಇದರಿಂದ ನಿರ್ವಹಣೆಯಲ್ಲಿ ಪರಾವಲಂಬನೆಯಿರಲಿಲ್ಲ. ಅಂದಿನ ದಿನಗಳಲ್ಲಿ ಬಳಸಿದ ಪರಿಕರಗಳು ಕೂಡಾ ಸ್ಥಳೀಯ ಲಭ್ಯಗಳು ಎಂಬುದು ಗಮನಾರ್ಹ.

ಕೆರೆಗಳ ಪುನರ್ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಪುನರ್ ಸಂಘಟನೆ ಮಾಡುವಾಗ ಅಚ್ಚುಕಟ್ಟು ಪ್ರದೇಶದ ಕೃಷಿಕರೊಂದಿಗೆ, ಜಲಾನಯನ ಪ್ರದೇಶದಲ್ಲಿರುವ ಜನರನ್ನು ಭಾಗಿಯಾಗುವಂತೆ ಕಾರ್ಯತಂತ್ರ ರೂಪಿಸಿಕೊಳ್ಳಬೇಕಾಗುತ್ತದೆ. ಕೆರೆಗಳ ಒತ್ತುವರಿ ಸಮಸ್ಯೆ ಇರುವುದೇ ಜಲಾನಯನ ಪ್ರದೇಶದಲ್ಲಿ, ಅಲ್ಲಿನ ಜನರಲ್ಲಿ ಕೆರೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ. ಹಾಗೆಯೇ ಕೆರೆಗಳಿಂದ ಅವರಿಗೆ ಲಾಭದಾಯಕವಾಗುವ ಹಾಗೆ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ.

ಇಂದಿನ ರಾಜಕೀಯ ಸಾಮಾಜಿಕ ವ್ಯವಸ್ಥೆಗೆ ಮಧ್ಯಕಾಲೀನದ ಕೊಡುಗೆಗಳ ಪದ್ಧತಿ ಸರಿಬಾರದು. ಹೀಗಾಗಿ ಕೆರೆಗಳ ನಿರಂತರ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಕೆರೆಗಳಲ್ಲಿ ಮೀನುಗಾರಿಕೆಯ ಜೊತೆಗೆ ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸಿ ಕೆರೆಗಳನ್ನು ಸ್ವಾವಲಂಬಿಯಾಗಿ ಮಾಡಬಹುದು. ಕೃಷಿಯೊಂದಿಗೆ, ಅಂತರ್ಜಲಮಟ್ಟ ಹಾಗೂ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಕೂಡ ಕೆರೆಗಳ ಅಸ್ಥಿತ್ವ ಅಗತ್ಯವಿದೆ. ಅವುಗಳ ಉಳುವಿಗಾಗಿ ಸಾಂಘಿಕ ಪ್ರಯತ್ನ ನಡೆಯಬೇಕು.


 

[1]ಕೆ.ಎಸ್. ಶಿವಣ್ಣ ಹೊಯ್ಸಳರ ರಾಜ್ಯಾಡಳಿತ ಆರ್ಥಿಕತೆ, ಕರ್ನಾಟಕ ಚರಿತ್ರೆ ಭಾಗ ೨ರಲ್ಲಿನ ಲೇಖನ ಪ್ರ – ಕ.ವಿ.ವಿ.ಹಂಪಿ, ಪುಟ ಸಂಖ್ಯೆ ೧೫೭

[2]ಅದೇ, ಪುಟ ಸಂಖ್ಯೆ ೧೫೭

[3]ಆರ್. ಕುಪ್ಪುಸ್ವಾಮಿ ಎಕನಾಮಿಕ್ ಕಂಡೀಷನ್ ಇನ್ ಕರ್ನಾಟಕ (ಕ್ರಿ.ಶ.೯೭೩ ರಿಂದ ೧೩೩೬) ಪ್ರ – ಕ.ವಿ.ಧಾರವಾಡ ೧೯೭೫ ಪುಟ ಸಂಖ್ಯೆ ೬೭

[4]ಡಾ. ಸೂರ್ಯನಾಥ ಕಾಮತ್ (ಸಂ) ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಭಾಗ – ೧ ಪ್ರ – ಕರ್ನಾಟಕ ಸರ್ಕಾರ ಪುಟ ಸಂಖ್ಯೆ ೫೨೨

[5]ಆರ್. ಕುಪ್ಪುಸ್ವಾಮಿ, ಹಿಂದೆ ಉಲ್ಲೇಖಿಸಿದ್ದು (ಕ್ರಿ.ಶ.೯೭೩ ರಿಂದ ೧೩೩೬) ಪ್ರ – ಕ.ವಿ.ಧಾರವಾಡ ೧೯೭೫ ಪುಟ ಸಂಖ್ಯೆ ೬೭

[6]ಎಚ್. ಆರ್. ಕೃ ಕೆರೆಗಳು – ಕಿರಿಯರ ವಿಶ್ವಕೋಶದಲ್ಲಿನ ಲೇಖನ, ಪ್ರ – ಕ.ವಿ.ವಿ.ಹಂಪಿ, ಪುಟ ಸಂಖ್ಯೆ ೧೩೨

[7]ಜಿ.ಎಸ್. ದೀಕ್ಷಿತ್ ಮತ್ತು ಇತರರು ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ ಎ ಹಿಸ್ಟಾರಿಕಲ್ ಸರ್ವೆ ಪ್ರ ಗಾಂಧಿ ಸಾಹಿತ್ಯ ಸಂಘ, ಬೆಂಗಳೂರು ೧೯೭೩, ಪುಟ ಸಂಖ್ಯೆ ೧೫೭

[8]ಅದೇ.

[9]ಎಪಿಗ್ರಾಫಿಯಾ ಕರ್ನಾಟಕ (ಇ.ಸಿ) VII ಶಿವಮೊಗ್ಗ – ೩೦

[10]ಅದೇ. VIII ತೀರ್ಥಹಳ್ಳಿ – ೧೧, ೧೨೨, ೧೩೧.

[11]ಜಿ.ಎಸ್. ದೀಕ್ಷಿತ್ ಮತ್ತು ಇತರರು ಹಿಂದೆ ಉಲ್ಲೇಖಿಸಿದ್ದು, ಪ್ರ ಗಾಂಧಿ ಸಾಹಿತ್ಯ ಸಂಘ, ಬೆಂಗಳೂರು ೧೯೯೩, ಪುಟ ಸಂಖ್ಯೆ ೧೫೮

[12]ಟಿ. ಗೋವಿಂದಯ್ಯ ಕರ್ನಾಟಕ ನೀರಾವರಿ ಅರ್ಥಶಾಸ್ತ್ರ ಪ್ರ – ಸಮಾಜ ವಿಜ್ಞಾನ ಸಂಶೋಧನ ಸಂಸ್ಥೆ ಬೆಂಗಳೂರ ೧೯೯೪, ಪುಟ ಸಂಖ್ಯೆ – ೧೧ ರಿಂದ ೧೩ರವರೆಗೆ

[13]ಜಿ.ಎಸ್. ದೀಕ್ಷಿತ್ ಮತ್ತು ಹಿಂದೆ ಉಲ್ಲೇಖಿಸಿದ್ದು ಪ್ರ ಗಾಂಧಿ ಸಾಹಿತ್ಯ ಸಂಘ, ಬೆಂಗಳೂರು ೧೯೯೩, ಪುಟ ಸಂಖ್ಯೆ ೧೫೮ ರಿಂದ ೧೪ರವರೆಗೆ

[14]ಆರ್. ಕುಪ್ಪುಸ್ವಾಮಿ, ಹಿಂದೆ ಉಲ್ಲೇಖಿಸಿದ್ದು (ಕ್ರಿ.ಶ.೯೭೩ ರಿಂದ ೧೩೩೬) ಪ್ರ – ಕ.ವಿ.ಧಾರವಾಡ ೧೯೭೫ ಪುಟ ಸಂಖ್ಯೆ ೬೯

[15]ಜಿ. ಆರ್. ರಂಗಸ್ವಾಮಿಯ್ಯ – ಟ್ಯಾಂಕ್ಸ್ ಕನ್‌ಸ್ಟ್ರಕ್ಷನ್ ಅಂಡ್ ಮೈಂಟೆನೆನ್ಸ್ ಇನ್ ಕರ್ನಾಟಕ ಡೂರಿಂಗ್ ದಿ ಹೊಯ್ಸಳ ಪಿರಿಯಡ್’ ಸ್ಟಡೀಸ್ ಇನ್ ಕರ್ನಾಟಕ ಹಿಸ್ಟರಿ ಅಂಡ್ ಕಲ್ಚರ್ – ನಲ್ಲಿನ ಲೇಖನ, ಸಂ.ಡಾ – ವೀರತಪ್ಪ ೧೯೮೫

[16]ಇ.ಸಿ. VII ಶಿಕಾರಿಪುರ ೩೨೨

[17]ಅದೇ VII ಶಿಕಾರಿಪುರ ೧೯೨

[18]ಡಾ. ಶಾಂತಿನಾಥ ‘ದಿಬ್ಬದ ಶಾಸನಗಳಲ್ಲಿ ಕೆರೆ ಕಾಲುವೆಗಳು’ ಕರ್ನಾಟಕ ಭಾರತಿ ಸಂಪುಟ – ೨೩ ಸಂಚಿಕೆ, ೩ – ೪ ಜನವರಿ – ಮೇ ೧೯೯೧

[19]ಇ.ಸಿ VIII ಸೊರಬ ೧೩೨

[20]ಅದೇ VII ಶಿಕಾರಿಪುರ ೨೩೪

[21]ಅದೇ VIII ಶಿವಮೊಗ್ಗ ೪೬

[22]ಅದೇ VII ಸೊರಬ ೭೪

[23]ಅದೇ IX ಚನ್ನಪಟ್ಟಣ ೧೫೬ ಎಅ. ಮುದ್ದಾಚಾರಿಯವರ ‘ಇರಿಗೇಶನ್ ಪಾಲಿಸಿ ಆಫ್ ದಿ ವಿಜಯನಗರ ರೂಲರ್ಸ್’ ಸ್ಟಡೀಸ್ ಇನ್ ಕರ್ನಾಟಕ ಹಿಸ್ಟರಿ ಅಂಡ್ ಕಲ್ಚರ್‌ನಲ್ಲಿನ ಪ್ರಕಟಿತ ಲೇಖನದಲ್ಲಿ ಉಲ್ಲೇಖಿತ, ಸಂ – ಕೆ.ವೀರತಪ್ಪ ೧೯೮೫

[24]ಇ.ಸಿ. X ಬಾಗೇಪಲ್ಲಿ ೭೧ ಮತ್ತು ಮುಳುಬಾಗಿಲು ೧೩೧ – ೧೩೨, ಡಾ. ಮುದ್ದಾಚಾರಿಯವರ ಮೇಲಿನ ಲೇಖನದಲ್ಲಿ ಉಲ್ಲೇಖಿತ.

[25]ಕೆ.ಎಸ್. ಶಿವಣ್ಣ ದಿ ಅಗ್ರೇರಿಯನ್ ಸಿಸ್ಟಮ್ ಇನ್ ಕರ್ನಾಟಕ (೧೩೩೬ – ೧೭೬೧) ಪ್ರ – ಪ್ರಸಾರಂಗ ಮೈಸೂರು, ವಿ.ವಿ. ೧೯೮೩ ಪುಟ ಸಂಖ್ಯೆ ೯

[26]ಇ.ಸಿ. VIII ಸೊರಬ ೩೫೩

[27]ಜಿ.ಎಸ್. ದೀಕ್ಷಿತ್ ಮತ್ತು ಇತರರು, ಹಿಂದೆ ಉಲ್ಲೇಖಿಸಿದ್ದು ಪ್ರ ಗಾಂಧಿ ಸಾಹಿತ್ಯ ಸಂಘ, ಬೆಂಗಳೂರು ೧೯೯೩, ಪುಟ ಸಂಖ್ಯೆ ೧೬೩

[28]ಇ.ಸಿ. V ಅರಸೀಕೆರೆ ೧೧೬, ಜಿ.ಆರ್. ರಂಗಸ್ವಾಮಯ್ಯ ಹಿಂದೆ ಉಲ್ಲೇಖಿಸಿದ್ದು ೧೯೮೫

[29]ಇ.ಸಿ. IV ನಾಗಮಂಗಲ ೩೯, ಡಾ. ಮುದ್ದಾಚಾರಿಯವರ ಹಿಂದೆ ಉಲ್ಲೇಖಿಸಿದ್ದು ೧೯೮೫

[30]ಇ.ಸಿ. IX ಚನ್ನಪಟ್ಟಣ ೯೭ ಜಿ.ಆರ್. ರಂಗಸ್ವಾಮಯ್ಯ ಹಿಂದೆ ಉಲ್ಲೇಖಿಸಿದ್ದು ೧೯೮೫

[31]ಇ.ಸಿ. XI ದಾವಣಗೆರೆ ೨೩, ೨೯, ಡಾ.ವೆಂಕಟರತ್ನಂ, ಎ.ವಿ. ಅವರ ಲೋಕಲ್ ಗವರ್ನಮೆಂಟ್ ಇನ್ ದಿ ವಿಜಯನಗರ ಎಂಪೈರ್‌ನಲ್ಲಿ ಉಲ್ಲೇಖಿತ, ಪ್ರ ಪ್ರಸಾರಂಗ ಮೈಸೂರ. ೧೯೭೨ ಪುಟ ಸಂಖ್ಯೆ ೬೧

[32]ಇ.ಸಿ. XI ದಾವಣಗೆರೆ ೨೩, ಡಾ. ಮುದ್ದಾಚಾರಿಯವರ ಹಿಂದೆ ಉಲ್ಲೇಖಿಸಿದ್ದು ೧೯೮೫ ಹಾಗೂ ಡಾ. ಡಾ.ವೆಂಕಟರತ್ನಂ, ಎ.ವಿ. ಅವರ ಮೇಲಿನ ಗ್ರಂಥದಲ್ಲಿ ಕೂಡಾ ಇದನ್ನು ಉಲ್ಲೇಖಿಸಲಾಗಿದೆ ಪುಟ ಸಂಖ್ಯೆ ೬೧

[33]ಸೌಥ್ ಇಂಡಿಯನ್ ಇನ್‌ಸ್ಕ್ರಿಪ್ಷನ್ IX ನಂ. ೧೯೮, ಜಿ.ಎಸ್.ದೀಕ್ಷಿತ್‌ರವg ಲೋಕಲ್ ಸೆಲ್ಫ್ ಗವರ್ನಮೆಂಟ್ ಇನ್ ಮೆಡಿವಲ್ ಕರ್ನಾಟಕ, ಪ್ರ ಕ.ವಿ.ಧಾರವಾಡ ೧೯೬೪ ಪುಟ ಸಂಖ್ಯೆ ೧೩೩

[34]ಇ.ಸಿ. VI ಕಡೂರು ೯೨ ಜಿ.ಆರ್. ರಂಗಸ್ವಾಮಯ್ಯ ಹಿಂದೆ ಉಲ್ಲೇಖಿಸಿದ್ದು

[35]ಅದೇ XI ದಾವಣಗೆರೆ ೨೯, ಡಾ. ಮುದ್ದಾಚಾರಿಯವರ ಹಿಂದೆ ಉಲ್ಲೇಖಿಸಿದ್ದು ೧೯೮೫

[36]ಸೌಥ್ ಇಂಡಿಯನ್ ಇನ್‌ಸ್ಕ್ರಿಪ್ಷನ್ IX ನಂ. ೧೭೩, ೧೯೨, ಜಿ.ಎಸ್.ದೀಕ್ಷಿತ್, ೧೯೬೪ ಪುಟ ಸಂಖ್ಯೆ ೧೩೭

[37]ಆರ್. ಕುಪ್ಪುಸ್ವಾಮಿ, ಹಿಂದೆ ಉಲ್ಲೇಖಿಸಿದ್ದು ೧೯೭೫ ಪುಟ ಸಂಖ್ಯೆ ೬೯

[38]ಡಾ. ಶಾಂತಿನಾಥ, ಹಿಂದೆ ಉಲ್ಲೇಖಿಸಿದು ೧೯೯೧

[39]ಇ.ಸಿ. VII ಶಿವಮೊಗ್ಗ ೩೫