ಬೆಳಗಾಗೆ ನಾನೆದ್ದು ಯಾರ್ಯಾರ ನೆನೆಯಲಿ ಕಲ್ಲು ಕಾವೇರಿ ಕಪನೀಯ
ಕಲ್ಲು ಕಾವೇರಿ ಕಪನೀಯ ನೆನೆದರೆ ಹೊತ್ತಿದ್ದ ಪಾಪ ಪರಿಹಾರ

ಎನ್ನುವುದು ಜನವಾಣಿಯಾದರೆ

‘ಜೀವಂಗಳಿಗೆಲ್ಲಾ ಉದಕವೇ ಪ್ರಾಣವಾಗಿ’ದೆ ಎನ್ನುತ್ತದೆ ಶಾಸನೋಕ್ತ ಕವಿವಾಣಿ. ಇಂದಿನ ಶರೀರಶಾಸ್ತ್ರ ವಿಜ್ಞಾನವಂತೂ (Medical Sciences) ಮನುಷ್ಯನ ದೇಹದ ೯೫ ಭಾಗ ನೀರಿನಿಂದಲೇ ಉಂಟಾಗಿದೆ ಎಂದರೆ, ಜಲಶಾಸ್ತ್ರಜ್ಞರು, ಈ ವಿಶ್ವದ ಭೂ, ವಾಯು ಮತ್ತು ಜಲ ಮಂಡಲಗಳಲ್ಲಿ ಅಡಕವಾಗಿರುವ ನೀರಿನ ಪ್ರಮಾಣವನ್ನಷ್ಟೇ ಅಲ್ಲದೆ, ಅಂತರ್ಜಲದ ಶೇಕಡವಾರು ಪ್ರಮಾಣವನ್ನೇ ಗುರ್ತಿಸಿದ್ದಾರೆ. ಇಷ್ಟೆಲ್ಲಾ ನೀರಿದ್ದರೂ ನಮ್ಮ ರಾಜ್ಯದ ೧೭,೦೦೦ ಹಳ್ಳಿಗಳಲ್ಲಿ ಕುಡಿಯುವ ಹಾಗೂ ಮನುಷ್ಯನ ಬಳಕೆಗೆ ಯೋಗ್ಯವಾದ ನೀರಿನ ಅಭಾವವಿದ್ದು, ಪ್ರತಿವರ್ಷ ೨,೦೦೦ ಕೋಟಿ ರೂಪಾಯಿಗಳನ್ನು ಇದೇ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ಕಾರಣವೆಂದರೆ ಭೂಮಂಡಲದಲ್ಲಿರುವ ಮನುಷ್ಯನಿಗೆ ಬಳಸಲು ಬರುವ ನೀರಿನ ಪ್ರಮಾಣ ಕೇವಲ ೨.೭೫೮೧ ಶೇಕಡವಾರು ಮಾತ್ರ.

ನಮ್ಮಲ್ಲಿ ಗಾದೆಯೊಂದರ ಪ್ರಕಾರ ‘ಹಿಂದೆ ನೋಡಿ ಮುಂದೆ ನಡೆ’ ಎನ್ನುವ ಅನುಭವ ವಾಣಿಯೊಂದಿದೆ. ಇಂದಿನ ಜಲ ತಂತ್ರಜ್ಞರೂ ಸಹಾ ಒಂದು ಪ್ರದೇಶದಲ್ಲಿ ದೊರೆವ ನೀರಿನ ಪ್ರಮಾಣವನ್ನು ಸರಿಯಾಗಿ ಮತ್ತು ನಿಖರವಾಗಿ ಕಂಡುಹಿಡಿಯಲು ೨೦೦ ವರ್ಷಗಳಷ್ಟು ಮಳೆ, ಹವಾಮಾನ, ಜಲಾನಯನ ಪ್ರದೇಶ, ಭೂಗುಣ ಇತ್ಯಾದಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಇರಬೇಕೆನ್ನುತ್ತಾರೆ. ಇದಕ್ಕೆ ಬೇಕಾದ ಲಿಖಿತ ದಾಖಲೆಗಳಿಲ್ಲ ಎನ್ನುವುದು ಒಂದು ಭಾಗದ ಚಿಂತಕರ ವಿಚಾರವಾದರೆ, ನಮ್ಮ ಕಣ್ಣೆದುರೇ ಇರುವ ಕೆರೆ, ಕುಂಟೆ, ಕಟ್ಟೆಗಳು, ಚದುರಿದಂತೆ ಅಲ್ಲಲ್ಲಿಯೇ ಗೋಚರವಾಗುವ ಶಾಸನಗಳಲ್ಲಿ ಸಾವಿರದ ಐದುನೂರಕ್ಕೂ ಹಿಂದಿನಷ್ಟು ಹಳೆಯದಾದ ಜಲ ತಂತ್ರಜ್ಞಾನದ ಮಾಹಿತಿಯನ್ನು ಬಳಸಿಕೊಳ್ಳುವತ್ತ ವಿದ್ವಾಂಸರು, ತಂತ್ರಜ್ಞರು ಯೋಚಿಸಬೇಕಾದ ಕಾಲ ಈಗ ಸನ್ನಿಹಿತವಾಗಿದೆ.

ಕೃಷಿ ಪ್ರಧಾನವಾದ ಈ ನಮ್ಮ ದೇಶದಲ್ಲಿ ನೆರೆ ಹಾವಳಿ, ನೀರಿನ ನಿರ್ವಹಣೆ, ಅದರ ಜಾಗೃತ ಬಳಕೆ, ಅಂತರ್ಜಲದ ತಿಳುವಳಿಕೆ, ನೀರಿನ ಗುಣಾಂಶಗಳು, ಅಂದಿನವರು ವಿಧಿಸುತ್ತಿದ್ದ ಜಲ ತೆರಿಗೆಗೆ ಸಂಬಂಧಿಸಿದ ವಿಧಿ ವಿಧಾನಗಳು ನಾಗಾವಿ ಹಲ್ಮಿಡಿ (ಕ್ರಿ.ಶ. ಸು. ೪೫೦) ದಂಡಾಪುರ (ಕ್ರಿ.ಶ. ೯೧೮) ತುರವೆಕೆರೆ (ಕ್ರಿ.ಶ. ೧೩-೧೪ ಶತಮಾನ) ಹರಿಹರ (೧೪-೧೫ನೇ ಶತಮಾನ) ಇತ್ಯಾದಿ ಶಾಸನಗಳಲ್ಲಿ ದಾಖಲಾಗಿವೆ. ಈ ಅಮೂಲ್ಯ ಮಾಹಿತಿಯನ್ನು ಪ್ರಸ್ತುತ ನಮ್ಮನ್ನು ಕಾಡುತ್ತಿರುವ ಬರ, ನೆರೆಹಾವಳಿ, ನದಿ ವಿವಾದಗಳಿಗೆ ಇಂದಿನ ಜಲತಂತ್ರಜ್ಞಾನದ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದೆಂಬುದರ ಒಂದು ಕಿರು ನೋಟವಿದು.

ನೀರಿನ ಮೂಲ (ಜಲ – ಆಕರ)ಗಳ ಸಂಸ್ಥಾಪನೆ

೧. ನೀರಾವರಿಯು ಮುಖ್ಯವಾಗಿ ನದಿ, ಬಾವಿ, ಕೆರೆ, ಕುಂಟೆ, ಕಟ್ಟೆಗಳನ್ನು ಅವಲಂಬಿಸಿದ್ದಿತು. ರಾಜರು, ಶ್ರೀಮಂತರು ಮತ್ತು ಗ್ರಾಮ ಸಂಸ್ಥೆಗಳು, ಕೆಲವೊಮ್ಮೆ ಸಾಮಾನ್ಯರೂ, ಕೆರೆ, ಬಾವಿಗಳನ್ನು ಕಟ್ಟಿಸುವುದು ಶ್ರೇಯಸ್ಕರವೆಂದು ನಂಬಿದ್ದರು. ಕಟ್ಟಿಸಿದ ಕೆರೆ ಬಾವಿಗಳನ್ನು ಯಾರೇ ಆಗಲೀ ನಾಶಪಡಿಸುವುದು ಅತ್ಯಂತ ಪಾಪಕರವೆಂಬ ಭಾವನೆ ಇದ್ದಿತು.

೨. ವರದಾ ನದಿಗೆ ಒಂದು ಮಹಾ ಸೇತುವೆ ಇದ್ದಿತು. ನದಿಗಳನ್ನು ತೆಪ್ಪಗಳಲ್ಲಿ ದಾಟುವ ಸ್ಥಳವನ್ನು ‘ಕಡಹು’ ಈಗಿನ (ಕಡ) ಎಂದು ಕರೆಯುತ್ತಿದ್ದರು. ಇರಾಳಿ ಎಂಬ ಹೊಳೆಯನ್ನು ದಾಟುವ ಕಡಹಿನ ಹೆಸರು ಒಂದು ಶಾಸನದಲ್ಲಿದೆ. ಕಡಹುಗಳಲ್ಲಿ ಜನರನ್ನು ತೆಪ್ಪಗಳ ಮೂಲಕ ಸಾಗಿಸುವ ಅಂಬಿಗನಿಗೆ ಹೊಲಗಳನ್ನು ಬಿಟ್ಟುಕೊಡುತ್ತಿದ್ದರು.

೩. ಈ ಗದ್ದೆಯಲ್ಲಿ ಬೆಳೆವ ಫಸಲಿನ ಹತ್ತನೇ ಒಂದು ಭಾಗದ ಕೆರೆ (ತೆರಿಗೆ)ಯನ್ನು ಮನ್ನಾ ಮಾಡಿದ್ದೇನೆ ಎನ್ನುತ್ತದೆ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನ (ಕ್ರಿ.ಶ. ಸು. ೪೫೦) ಕೆರೆಗಳು ಪ್ರಾಚೀನ ಕರ್ನಾಟಕದ ನೀರಾವರಿ ಸಾಧನಗಳಲ್ಲಿ ಅತ್ಯಂತ ಪ್ರಮುಖವಾದವುಗಳು. ರಾಜರೂ, ಪೆರ್ಗ್ಗಡೆ (ಹೆಗ್ಗಡೆ ಎಂದರೆ ಊರ ಪ್ರಮುಖರು) ಮುಂತಾದ ಅಧಿಕಾರಿಗಳು, ಸನ್ಯಾಸಿಗಳು, ಹೆಣ್ಣುಮಕ್ಕಳು, ಕೆರೆಗಳನ್ನು ಕಟ್ಟಿಸಿದ ನಿದರ್ಶನಗಳಿವೆ. ಶಿವಖಡನಾಗಸಿರಿ ಎಂಬ ಹೆಣ್ಣು ಮಗಳು ತಟಾಕ ನಿರ್ಮಿಸಿದ್ದನ್ನು ಬನವಾಸಿ ತಾರಕೇರ್ಶವರ ದೇವಸ್ಥಾನದಲ್ಲಿಯ ಕ್ರಿ.ಶ. ೨-೩ನೇ ಶತಮಾನದ ಪ್ರಾಕೃತಶಾಸನ ಉಲ್ಲೇಖಿಸುತ್ತದೆ. ನಾಗಪ್ರತಿಷ್ಟೆಯ ಸಂದರ್ಭದಲ್ಲಿ ನಿರ್ಮಿಸಲಾದ ಕೆರೆಯ ಉದಾಹರಣೆ, ಹೆಣ್ಣು ಮಗಳೊಬ್ಬಳು ಕಟ್ಟಿಸಿದ್ದೆನ್ನುವ ದಾಖಲೆಯಲ್ಲದೆ ಕರ್ನಾಟಕದಲ್ಲೇ ತಟಾಕವನ್ನು ನಿರ್ಮಿಸಿದ್ದಕ್ಕೆ ಮೊದಲ ಉದಾಹರಣೆ ಎನ್ನುವ ‘ಮುಪ್ಪರಿ’ ಮಹತ್ವವನ್ನು ಈ ಶಾಸನ ಹೊಂದಿದೆ.

ಸೂಳೆಯೊಬ್ಬಳು ತನ್ನ ಔದಾರ್ಯವನ್ನು ತೋರಿ ಜನೋಪಕಾರಿಯಾದುದಕ್ಕೆ ಅತ್ಯುತ್ತಮ ಉದಾಹರಣೆಯಲ್ಲವೆ ಇಂದಿಗೂ ಜೀವಂತವಿರುವ ಸೂಳೆಯಕೆರೆ? ಕೆರೆಗೋಸ್ಕರ ತನ್ನ ಪ್ರಾಣವನ್ನೇ ನೀಡಿ ಇನ್ನೂ ಜನಮನದ ನಾಲಿಗೆಯ ಮೇಲೆ ನಿಂತು ಕೆರೆಗೆ ಹಾರವಾಗಿರುವುದು ಮದಗದ ಕೆರೆಯ ವೈಶಿಷ್ಟ್ಯ.

ನೀರಿನ ತೆರಿಗೆ ಅಥವಾ ಕಂದಾಯ

ನರಗುಂದದ ದಂಡಾಪುರ ಶಾಸನ (ಕ್ರಿ.ಶ. ೯೧೮, ರಾಷ್ಟ್ರಕೂಟ ರಾಜ ನಾಲ್ಕನೇ ಗೋವಿಂದ)ವು ಅಲ್ಲಿಯ ಕೆರೆಯ ನಿರ್ವಹಣೆಗೆ ಅಂದಿನ ಸಮಾಜದ ಪ್ರತಿಷ್ಠಿತರಿಂದ ಮೊದಲಾಗಿ ಸಮಾಜದ ಬೇರೆ ಬೇರೆ ವರ್ಗದ ಜನರು ತಮ್ಮಲ್ಲಿ ನಡೆದ ಮದುವೆಯಷ್ಟೇ ಅಲ್ಲ ತಪ್ಪು ಒಪ್ಪಿಗಾಗಿ ಪ್ರಾಯಶ್ಚಿತ್ತ ರೂಪವಾಗಿ ಎಷ್ಟೆಷ್ಟು ಹಣವನ್ನು ಕೊಡಬೇಕೆಂದು ನಿರೂಪಿಸುತ್ತಾರೆ. ಈ ರಾಜಾಜ್ಞೆಯನ್ನು ಹೊರಡಿಸಿದ ಖಚಿತ ಕಾಲವನ್ನು ನಿಖರವಾಗಿ ದಾಖಲಿಸಲಾಗಿದೆ. ‘ಪ್ರಮಾಥಿ ಸಂವತ್ಸರ ಮಕರ ಸಂಕ್ರಮಣ ದಿನದಂದು ಈ ಶಾಸನವನ್ನು ರಚಿಸಲಾಗಿದೆ’ ವಿಪ್ರರ (ಬ್ರಾಹ್ಮಣ) ವಿವಾಹ ಸಂದರ್ಭದಲ್ಲಿ ೨ ದ್ರಮ್ಮಗಳನ್ನೂ, ಮುಂಜಿಯ ಸಂದರ್ಭದಲ್ಲಿ ಎರಡು ದ್ರಮ್ಮಗಳನ್ನು, ಶೂದ್ರಗಣದ ಮದುವೆಯಲ್ಲಿ ಒಂದು ದ್ರಮ್ಮವನ್ನು ‘ಪರ್ಗ್ಗೆಱ’ ಗಾಯ ಱುದೆನ್ದೊಸದು ಕೊಟ್ಟೋರೀ ದ್ವಿಜ ಮುಖ್ಯರ್’ ಎಂದರೆ ದೊಡ್ಡ ಕೆರೆಗೆ ಕಂದಾಯ ಕೊಟ್ಟರು. ಈ ದಾನವನ್ನು ಕೆಡಿಸಿದವರು (ಪಾಲಿಸದವರು) ಪಂಚಮಹಾ ಪಾತಕಕ್ಕೆ ಹೋಗುತ್ತಾರೆ ಎಂದು ಶಾಸನಿಸುತ್ತಿದೆ.

ಬೆಟ್ಟದಿಂದ ಹರಿದುಬರುವ ಸಣ್ಣ ಹೊಳೆಗಳನ್ನು ಕಾಲುವೆಗಳು ಮೂಲಕ ಹಾಯಿಸಿಕೊಂಡು ಕಬ್ಬು, ಭತ್ತಗಳನ್ನು ಬೆಳೆಯುತ್ತಿದ್ದರು ಎನ್ನುತ್ತದೆ. ಒಂದು ಶಾಸನ, ದ್ರೋಣಾಮುಖವೆಂಬ (ಇಂದಿನ ಗುತ್ತಿಕಲು ಎನ್ನುವ ಗ್ರಾಮ) ಗಿರಿ, ನಿರ್ಜರದಿಂದ ಬಂದ ನೀರನ್ನು (ಸಿಂಧುನದಿ) ಪರಿಕಾಲಿಂ (ಚಿಕ್ಕಕಾಲುವೆಯನ್ನಾಗಿ ತಿರುಗಿಸಿ) ಅದರಿಂದ ಬೆಳೆದ ‘ಗಂಧಶಾಲಿ’ ಎನ್ನುವ ಭತ್ತವನ್ನು ಬೆಳೆಯುತ್ತಿರುವ ಹೊಲಗದ್ದೆಗಳಿಂದ ಕೂಡಿದ ಈ ಊರು (ಸುವಾಸನೆ)ಯಿಂದ ಕೂಡಿ ಕಣ್ಣುಗಳಿಗೆ ಸೊಗಸಾಗಿ ಕಾಣುತ್ತಿದ್ದವು. ತೋಟಗಳಲ್ಲಿ ಬಾವಿಗಳಿರುತ್ತಿದ್ದವು. ಬೆಳೆಯರ ಎಂಬ ಹಳ್ಳಿಯ ‘ಎರೆಗ’ ಎಂಬಾತನು ಸಿರುಗುಪ್ಪೆಯಲ್ಲಿ ‘ಮರ ಕಟ್ಟಿನ ದೊಡ್ಡ ಬಾವಿಯನ್ನು ಕಟ್ಟಿಸಿದಂತೆ ಒಂದು ಶಾಸನ ಹೇಳುತ್ತದೆ’.

ನೀರಿನ ನಿರ್ವಹಣಾಧಿಕಾರಿಗಳು

ಸ್ವಾತಂತ್ರ ಪೂರ್ವದಲ್ಲಿ ಆಡಳಿತದಲ್ಲಿ ರಾಜನೇ ಶ್ರೇಷ್ಠ ಅಧಿಕಾರಿಯಾಗಿದ್ದ. ಎಲ್ಲ ವ್ಯವಸ್ಥೆಯಂತೆ ನೀರಾವರಿ ವ್ಯವಸ್ಥೆಯೂ ಆತನ ಕೈಯಲ್ಲೇ ಇರುತ್ತಿದ್ದಿತಾದರೂ ಮಂತ್ರಿಗಳು, ಸಂಧಿ ವಿಗ್ರಹಿಗಳೂ, ಊರ ಗೌಡರು, ಜಲಸೂತ್ರಧಾರರು, ಶ್ಯಾನುಭೋಗರು, ನೀರ್ಗಂಟಿಗಳೂ, ತಳವಾರರು, ಗ್ರಾಮಪಂಚಾಯತಿಯ ಪಂಚರು ನೀರಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ರಾಜನು ದತ್ತಿ ಬಿಡಲು ಅಥವಾ ಕೆರೆ ಕಟ್ಟೆ ಇತ್ಯಾದಿಗಳನ್ನು ಕಟ್ಟಿಸಲು ಅನುಮತಿ ನೀಡುತ್ತಿದ್ದನು. ಕೆಲವೊಮ್ಮೆ ಭೂಮಿಯನ್ನು ತಾನೇ ಸ್ವತಃ ಕೊಂಡು ಕೊಂಡದ್ದನ್ನು ದಾನಮಾಡುತ್ತಿದ್ದನು. ಈ ವ್ಯವಸ್ಥೆ ‘ಚಾಣಕ್ಯ’ನ ಕಾಲದಿಂದಲೂ ಇದ್ದಿತೆಂಬುದು (ಕ್ರಿ.ಪೂ. ೨) ವಿದ್ವಾಂಸರ ಅಭಿಪ್ರಾಯ. ಪೆರ್ಗ್ಗಡೆ, ಗಾವುಂಡ (ಗೌಡ), ಮಹಾಜನರು ಇತ್ಯಾದಿ ಶಬ್ದಗಳು ಊರಿನ ಹಿರಿಯರನ್ನು ಪಂಚಾಯ್ತಿ ಪ್ರಮುಖರನ್ನು ಸೂಚಿಸುವ ಶಬ್ದಗಳು, ಇವೇ ಮುಂದೆ ಶಾಸ್ತ್ರೋಕ್ತವಾಗಿ ಶಾಸನಗಳಲ್ಲಿ ಬರೆಯಲ್ಪಟ್ಟಿವೆ.

ಒಂದು ಪ್ರದೇಶದಲ್ಲಿ ಕೆರೆಗಳನ್ನು ಕಟ್ಟುವ ಮೊದಲೇ ನೀರಿನ ಹರಿವನ್ನು ಗಮನಿಸಬೇಕು. ಅದರಿಂದ ಕೆಲವರಿಗೆ ಯಾವ ರೀತಿಯ ಹಾನಿಯುಂಟಾಗುತ್ತದೆ? ಅದಕ್ಕೆ ಪರಿಹಾರವೇನು? ನೀರಿನ ನಿರ್ವಹಣೆಯಲ್ಲಿ ಜನರ ಪಾತ್ರವೇನು? ನೀರು ಹೆಚ್ಚಾಗಿ ಹರಿದಾಗ ಉಂಟಾಗುವ ಕ್ಞಾರೀಯ ಆಮ್ಲೀಯತೆಯಿಂದಾಗಿ ಭೂ ಸತ್ವವು ಕಡಿಮೆಯಾದಾಗ ಅದಕ್ಕೆ ತಕ್ಕ ಪರಿಹಾರವೇನು? ಇತ್ಯಾದಿಗಳನ್ನು ತುರವೆಕೆರೆಯ ಶಾಸನಗಳಲ್ಲಿ ನೇರವಾಗಿ ದಾಖಲಿಸಿದೆ.

ಕೆರೆಗಳ ಅಂತರ್ ಜಾಲ ನೀರಿನ ನಿರ್ವಹಣೆ
ಅಯ್ಯರಸನ ಕರೆ
|
ತುರವೆಯ ಕೆರೆ
ಆಡನ ಹಳ್ಳಿಯ ಕೆರೆ
|
ಅರಳಿಯ ಕೆರೆ
|
ಅರಳಿಯ ಕೆರೆ
ರಾಜಕಟ್ಟೆ ನಿರ್ಮಾಣ
|
ತಾಳ ಕೆರೆ
|
ಮಾದಿ ಹಳ್ಳಿ
ಕೆಂಚನ ಕಟ್ಟೆ
|
ಕೆಂಚನ ಕಟ್ಟೆ
|
ಕಳ್ಳನ ಕೆರೆ

ಈ ಮೇಲ್ಕಂಡ ಹಳ್ಳಿಗಳ ಕೆರೆಗಳಿಂದ ನೀರು ತುಂಬಿ ಕೋಡಿ ಹರಿದಾಗ ಇನ್ನೊಂದು ಕೆರೆಗೆ ಬಂದು ಅದರ ಗರಿಷ್ಠ ಉಪಯೋಗ (optimum utility) ವಾಗುತ್ತದೆ ಎನ್ನುವುದರ ಸ್ಥೂಲ ಚಿತ್ರಣವಿದು. ಭೂ ಮಟ್ಟದ ಎತ್ತರ ಮತ್ತು ನೀರಿನ ಕೆಳಮುಖ ಹರಿವು (Gravity flow) ಇವುಗಳನ್ನು ತಿಳಿದೇ ಈ ಕೆರೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಯಲು ಈಗ ಸರ್ವೇ ಆಫ್ ಇಂಡಿಯಾ ಭೂ ನಕ್ಷೆಯಿಂದ ಗುರ್ತಿಸಲಾಗಿರುವ ಕಾಂಟೂರುಗಳಿಂದ ಕಂಡು ಬಂದಿದೆ (ನಕ್ಷೆ ೧)

ಶಾಸನ ಸಾಲುಗಳ ಸಂಕ್ಷಿಪ್ತ ವಿವರಣೆ

‘ಅಯ್ಯರಸನ ಹಳ್ಳಿಕೆರೆ, ಆಡನ ಹಳ್ಳಿಯ ಕೆರೆಗಳಿಗೆ ಮೇಲ್ಕಟ್ಟೆಗಳನ್ನು ಹಾಕಿದಾಗ ಅದರ ನೀರೊತ್ತಿನಿಂದ ಬರುವಂತಹ ಜಲವು ಅರಳಿಯ ಕೆರೆಯ ಗದ್ದೆಗಳಿಗೆ ನೀರುಣಿಸುತ್ತದೆ. ಅಲ್ಲಿಯ ಪ್ರತಿ ಕ್ಷೇತ್ರವೂ ನೀರುಂಡ ತರುವಾಯ ಆಡನ ಹಳ್ಳಿಯ ಮೊದಲ ತೋಟಗಳಿಗೆ ಹಾಯ್ದ ಬರುತ್ತದೆ. ಈ ತೋಟದ ತುದಿಯಲ್ಲಿ ಒಂದು ಬಯಲಿದ್ದು ಅಲ್ಲಿ ರಾಜಕಟ್ಟೆ ಎಂದರೆ ದೊಡ್ಡದಾದ ಕೆರೆಯೊಂದನ್ನು ಈ ಶಾಸನದಲ್ಲಿ ಹೇಳಿರುವ ಊರ ಪ್ರಮುಖರು (ಮಹಾಜನಗಳು) ನಿರ್ಮಾಣ ಮಾಡಬೇಕು. ಈ ದೊಡ್ಡ ಕೆರೆಯ ಎರಡೂ ಕೋಡಿಯಲ್ಲಿ ನೀರು ಹರಿದು ಗದ್ದೆಗಳು ಹಾಳಾದಂಥ ಸಂದರ್ಭದಲ್ಲಿ (ಎಂದರೆ ನೀರು; ಹೆಚ್ಚಾಗಿ ಹರಿಯುವುದರಿಂದ ಭೂಮಿ ಚೌಳಾದರೆ) ಆ ಭಾಮಿಯ ಮಾಲಿಕರಿಗೆ ತಾಳಕೆರೆಯಲ್ಲಿ ಭೂಮಿಯನ್ನು ಕೊಡಲಾಗುತ್ತದೆ. ಕೆಂಚನ ಕಟ್ಟೆಯ ಕೆರೆಯನ್ನು ಆ ಹಳ್ಳಿಯ ಜನರೇ ಕಟ್ಟಿಸಿಕೊಳ್ಳವರು. ಹೀಗೆ ಮಾಡದೇ ರಾಜಕಟ್ಟೆಯ ನೀರನ್ನೇ ಉಪಯೋಗಿಸಿಕೊಂಡ ಪಕ್ಷದಲ್ಲಿ ಕೆಂಚನ ಕಟ್ಟೆಯವರು ತಮ್ಮ ಪಾಲಿಗೆ ಐವತ್ತು ಸಲಗೆ ಗದ್ದೆಗೆ (ಅಂದಿನ ಪ್ರಮಾಣ) ಬೇಕಾಗುವಷ್ಟು ನೀರನ್ನು ಮಾತ್ರ ಉಪಯೋಗಿಸಿಕೊಂಡು, ಮಿಕ್ಕದ್ದನ್ನು ರಾಜಕಟ್ಟೆಯನ್ನು ಕಟ್ಟಿಸಿದ ಮಹಾಜನಗಳಿಗೆ ಬಿಟ್ಟುಕೊಡಬೇಕು. ಒಂದು ಪಕ್ಷ ಕೆಂಚನ ಕಟ್ಟಿಯವರು ಕೆರೆಯನ್ನು (ಕಟ್ಟಿಯನ್ನು) ಕಟ್ಟಿಸದೇ ರಾಜಗಟ್ಟದ ಕೋಡಿಯ ನೀರನ್ನು ಮಾತ್ರ ಹರಿಸಿ ಕೊಂಡರೆ ಒಂದು ಖಂಡುಗ ಒಕ್ಕಲಿಗೆ ಐವತ್ತು ಗದ್ಯಾಣವನ್ನು ಹಿರಿಯ ಮಹಾಜನರಿಗೆ (ರಾಜ ಕಟ್ಟೆ ಕಟ್ಟಿಸಿ) ಕೊಡಬೇಕು.

08_274_KNNCA-KUH

ಸೋಮನಾಥ ಸಮುದ್ರದ ಎರಡು ಕೋಡಿ ಕಾಲುವೆ ಮಾರ್ಗಗಳಿಂದ ಹರಿವ ನೀರು ಕೋಡಿಯನ್ನು ಬಿಟ್ಟ ನಂತರ ಬೆದ್ದಲು ಭೂಮಿಗೆ ಬರುತ್ತದೆ. ಅಲ್ಲಿಯ ಯಾವ ಹೊಲದಲ್ಲಿ ಯಾರಾದರೂ ಗಿಡ, ಗಂಟಿಗಳನ್ನು ಕಡಿದು (ಹಳಿವಡಿದು), ಉತ್ತು ಆ ನೀರನ್ನು ಉಪಯೋಗಿಸಿಬಹುದು. ಈ ಹೊಲದಲ್ಲಿ ಬೆಳೆವ ಮಾವು, ಹುಣಸೇ ಮರಗಳು ಆಯಾ ಹಳ್ಳಿಗಳಿಗೇ ಸೇರುತ್ತವೆ. ಇಂತಹ ಬೇಸಾಯದಲ್ಲಿ ಒಂದು ಹಳ್ಳಿಯ ಹೊಲಗಳು ಇನ್ನೊಂದು ಹಳ್ಳಿಗೆ ಹೋದರೆ ಅವುಗಳಿಂದ ಉಂಟಾಗುವ ತಂಟೆ ತಕರಾರುಗಳನ್ನು ನಿವಾರಿಸಲಾಗುವುದು.

ಕೆರೆಗಳಲ್ಲಿ ಸಂಗ್ರಹಿಸಲಾದ ನೀರಿನ ಬಳಕೆಗೆ ರೂಪಿಸಲಾದ ನಿರ್ದಿಷ್ಟ ಸ್ಪಷ್ಟ ನಿಯಮಗಳು

೧. ಹೊಸದಾಗಿ ಕೆರೆಕಟ್ಟುವಂತಹವರು ತಮ್ಮ ಊರ/ಹಳ್ಳಿಯ ಹಳ್ಳದ ಬಳಿ ಇರುವ ತಮ್ಮ ಭೂಮಿಗಳನ್ನೆ ಉಪಯೋಗಿಸಿಕೊಳ್ಳಬೇಕು.

೨. ಕಟ್ಟೆ, ಕಿರುಗಟ್ಟೆಗಳನ್ನು ಕಟ್ಟುವಲ್ಲಿ (ಈ ಶಬ್ದಗಳು ನೀರಿನ ಸಂಗ್ರಹಣೆಯ ಗಾತ್ರ ವಿಸ್ತಾರಗಳನ್ನೇ ಸೂಚಿಸುತ್ತವೆ ಎಂಬುದು ಗಮನಾರ್ಹ) ಮತ್ತೊಬ್ಬರ ಕ್ಷೇತ್ರಕ್ಕೆ ಹಾನಿಯಾಗದಂತೆ ಮೊದಲೇ ಒಡಂಬಡಿಕೆಯನ್ನು ಮಾಡಿಕೊಂಡು ಕಟ್ಟಬೇಕು.

೩. ಕೆರೆಯ (ಮೇಲಂಕಣ) ಎತ್ತರವನ್ನು ಹೆಚ್ಚಿಸುವಾಗ ಅದರ ಹಿನ್ನೀರಿನಿಂದ ಮುಳುಗುವ ಭೂಮಿಯವರು ಹಾಗೆ ಮಾಡಬಾರದೆಂದು ತಡೆಯಲಾಗದು. ಇಂಥ ಸಮಸ್ಯೆ ಬಂದಲ್ಲಿ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ಉದಾಹರಣೆ ಸಹಿತ ಈ ಶಾಸನದಲ್ಲಿ ಹೇಳಲಾಗಿದೆ.

ಅಯ್ಯರಸನ ಕೆರೆಯ ಎತ್ತರವನ್ನು ಹೆಚ್ಚಿಸಿದರೆ ಅದರ ನೀರೊತ್ತಿನಿಂದ ಅರಳಿಯ ಕೆರೆಯ ನೀರು ಹೆಚ್ಚಾಗಿ, ಈ ಕೆರೆಯ ಹಿಂದಿನ ಗದ್ದೆಗಳು ಮುಳುಗಡೆಯಾಗುತ್ತದೆ. ಆಗ ಆಡನ ಹಳ್ಳಿಯಲ್ಲಿರುವ ಮೊದಲ ತೋಟದ ತುದಿಯ ಬಯಲಲ್ಲಿ ಇರುವಂಥ ಜಾಗದಲ್ಲಿ ಮಹಾಜನಗಳು ರಾಜಗಟ್ಟೆ ಕಟ್ಟಿಸಬೇಕು ಅದರ ಎರಡೂ ಕೋಡಿಗಳಿಂದ ಹರಿದು ಬರುವ ನೀರು ಈಗಾಗಲೇ ಇರುವ ಗದ್ದೆಯ ಸ್ಥಳಕ್ಕೆ ಬಂದು ಅವರು ತಮ್ಮ ತಮ್ಮ ಬೆದ್ದಲಿಗೆ ಬದಲಾಗಿ ತಾಳಕೆರೆಯ ಹೊಲಗಳನ್ನು ತೆಗೆದುಕೊಳ್ಳುವರು. ಕೆಂಚನ ಕಟ್ಟೆಯ ಜನರು ಅವರ ಕೆರೆಯನ್ನು ತಾವೇ ಕಟ್ಟಿಸಿಕೊಳ್ಳಬೇಕು.

೪. ಕೆರೆ ಕಟ್ಟುವ ಮುನ್ನವೇ ಇದ್ದ ಬಂಡೀದಾರಿಗಳನ್ನು ಹಾಗೆಯೇ ಬಿಡಬೇಕು. ಆ ಜಾಗವನ್ನು ನಮ್ಮದು ಅಥವಾ ನಿಮ್ಮದು ಎಂದು ಜಗಳವಾಡಬಾರದು. ಹಿಂದಿನ ನಮ್ಮ ಜನರು ಇಂದಿನಂತೆಯೇ ಸಂಪರ್ಕ ಸೇತುವೆಗಳಾದ ರಸ್ತೆ ಸಾರಿಗೆ (ಬಂಡಿಹಾದಿಯ) ಬಗ್ಗೆ ಇತ್ತಿದ್ದ ಪ್ರಾಮುಖ್ಯತೆಯನ್ನು ಈ ಶಾಸನ ಸಾಲುಗಳು ಸ್ಪಷ್ಟೀಕರಿಸುತ್ತವೆ.

೫. ಸೋಮನಾಥ ಸಮುದ್ರದ ಎರಡು ಕೋಡಿಗಳ ಕಾಲುವೆಯ ಮಾರ್ಗದ ಮೂಲಕ ನೀರು ಹರಿವ ಸ್ಥಳದಲ್ಲಿ, ಕೋಡಿಯನ್ನು ಬಿಟ್ಟು ಉಳಿದ ಒಣ ಭೂಮಿಗೆ ಹಾನಿಯುಂಟಾದರೆ (ಇಲ್ಲಿ ಹಾನಿ ಎಂದರೆ ಕೊರಕಲು ಇತ್ಯಾದಿ ಎಂದು ಅರ್ಥೈಸಬಹುದು). ಅಥವಾ ಜೌಗಿನಿಂದ ಕೂಡಿ ವ್ಯವಸಾಯಕ್ಕೆ ಯೋಗ್ಯವಾಗಿರದಿದ್ದರೆ ಮಹಾಜನರು ಅವರಿಗೆ ಆದ್ಯತೆಯ ಮೇಲೆ ಅವರವರ ಭೂಮಿಗೆ ತಕ್ಕ ಪರಿಹಾರವಾಗಿ ಬೇರೆ ಭೂಮಿಯನ್ನು ಸೋಮನಾಥ ಸಮುದ್ರದ ಜನರಿಗೆ ಕೊಡಬೇಕು.

೬. ಪ್ರಜೆಗಳಿಗೆ ಯಾವ ತೊಡಕು ಬಂದರೂ ತುರವೆಕೆರೆಯ ಅಗ್ರಹಾರದ ಮಹಾಜನಗಳು ನ್ಯಾಯಸಮ್ಮತವಾದ ತೀರ‍್ಮಾನವನ್ನು ಕೊಡುತ್ತಾರೆ.

೭. ಪ್ರತಿ ಗೃಹಸ್ಥರೂ ಮಾಳಿಗೆಯ ಮನೆಯನ್ನು ಕಟ್ಟುವಾಗ ಬಾವಿ, ಬಚ್ಚಲುಗಳನ್ನು ಕಟ್ಟುವಾಗ, ಕೆರೆ ಕಟ್ಟೆಗಳ ದುರಸ್ತಿಗೆ ಬೇಕಾಗುವ ಕಲ್ಲುಗಳನ್ನು ಒದಗಿಸಬೇಕು (ಅವರವರ ಅಂತಸ್ತಿಗೆ ತಕ್ಕಂತೆ ಎಂದು ನಾವು ಊಹಿಸಬಹುದು. ಏಕೆಂದರೆ ಈ ಹಿಂದೆಯೇ ಸಮಾಜದ ಬೇರೆ ಬೇರೆ ವರ್ಗದವರಿಗೆ ಬೇರೆ ಬೇರೆ ಕರ ನೀಡುವ ಪದ್ಧತಿ ಇದ್ದಿತೆನ್ನುವುದನ್ನು ನೋಡಿದ್ದೇವೆ. ಅಲ್ಲದೆ ಕೆರೆಗೆ ಹೆಚ್ಚು ನೀರು ಬಂದಾಗ ಅದರಿಂದ ಉಂಟಾಗುವ ಹಾನಿ, ಎಂದರೆ ಕೆರೆ ಏರಿ ಒಡೆಯುವುದಾಗಲೀ, ನೀರೊತ್ತಿನಿಂದ ಕೆರೆಯ ಮೇಲಿನ ಹೊಲಗದ್ದೆಗಳ ಬೆಳೆಗೆ ಹಾನಿಯುಂಟಾದರೆ, ಕಾಲುವೆ, ತೂಬುಗಳ ದುರಸ್ತಿ ಕೊರಕಲು, ಇತ್ಯಾದಿ ಉಂಟಾದಾಗ ಅವುಗಳ ಖರ್ಚಿಗೆ ಸಹಾಯ ಮಾಡುವುದಿಲ್ಲ ಎಂದು ಜನರು ಹೇಳಬಾರದು.

೮. ಈ ಶಾಸನವನ್ನು ಮೀರಿದರೆ ಚಕ್ರವರ್ತಿ ವೀರನಾರಸಿಂಹದೇವರ ಆಣೆ, ಸೋಮಣ್ಣ ದಂಡನಾಯಕನ ಆಣೆ. ಅಶೇಷ ಮಹಾಜನಗಳ ಸಾಕ್ಷಿಯಾಗಿ ತಮ್ಮ, ತಮ್ಮ ಮಾತಾಪಿತೃಗಳ ಅಣೆಯಾಗಿ ತಮ್ಮ ಇಷ್ಟದೇವತೆಯ ಆಣೆಯಾಗಿ ಪಾಲಿಸತಕ್ಕದ್ದು.

೯. ಇದನ್ನು ತಪ್ಪದಂತೆ ನಡೆಸಿಕೊಡುತ್ತೇವೆ ಎನ್ನಲು ತುರವೆಯ ಕೆರೆಯ ‘ಮಹಾಜನರು’ ಶ್ರೀಪ್ರಸನ್ನ ದೇವರ ಹೆಸರಿನಲ್ಲಿ ಸಾಕ್ಷಿ (ವೊಪ್ಪ) ನೀಡುತ್ತಿದ್ದೇವೆ. ‘ಸ್ವಹಸ್ತ ದೊಪ್ಪ ಶ್ರೀರಾಮನಾಥ’

ಈ ನಿಯಮಗಳನ್ನು ಈಗಿನ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಿ ಬಳಸಿಕೊಳ್ಳುವತ್ತ ಚಿಂತನೆ ನಡೆಸಿದರೆ, ನಮ್ಮ ಗ್ರಾಮಗಳ, ರಾಜ್ಯಗಳ ನಡುವೆ ಇರುವ ಜಲವಿವಾದಗಳನ್ನು ಬಗೆಹರಿಸುವಲ್ಲಿ ಸಹಾಯವಾಗುತ್ತದಲ್ಲವೆ? ಏಕೆಂದರೆ ಈ ಶಾಸನದಲ್ಲಿ (ಕ್ರಿ.ಶ. ೧೨೮೫) ಉಕ್ತವಾಗಿರುವ ೭೦೦ ವರ್ಷಗಳಿಗೂ ಹಳೆಯದಾದ ಇಪ್ಪತ್ತಕ್ಕೂ ಮಿಕ್ಕ ಹಳ್ಳಿಗಳು, ಕೆರೆಗಳು ಇಂದಿಗೂ ಇವೆ. ಭಾರತೀಯ ಸರ್ವೇಕ್ಷಣ Survey of India ಭೂ ನಕ್ಷೆಯ ಪ್ರಕಾರ ಈ ಕೆರೆಯಂಗಳ ಮತ್ತು ಜಲಾನಯನ ಪ್ರದೇಶ ಸುಮಾರು ೧೬.೨೫ ಕಿಲೋಮೀಟರ್. ತುರವೆಕೆರೆಯ ಕೆರೆಯೊಂದೆ ಇಂದಿಗೂ ತಾಲ್ಲೂಕು ಪಟ್ಟಣದ ಅರ್ಧಭಾಗ ನೀರನ್ನು ಒದಗಿಸುತ್ತಿದೆ ಎಂದರೆ ಆಶ್ಚರ್ಯವಲ್ಲವೆ? ಅಂದಿನ ಪರಿಸರ, ಜನಸಂಖ್ಯೆ ಇತ್ಯಾದಿಗಳನ್ನು ಗಮನದಲ್ಲಿಟ್ಟು ನಿರ್ಮಿಸಲಾಗಿದ್ದರೂ ಇಂದಿಗೂ ಅದರ ಬಳಕೆ ಅಚ್ಚಳಿಯದೆ ಸಾಗಿಬರುತ್ತಿದೆ.

ಹೀಗೆ ಜಲಾಕರಗಳ ನಿರ್ಮಾಣಕ್ಕೆ ಬೇಕಾಗುವ ಆಯ್ಕೆ, ಕೆರೆ, ಕಟ್ಟೆ, ಕೋಡಿಗಳ ನಿರ್ಮಾಣದ ವ್ಯವಸ್ಥೆ, ಅದಕ್ಕೆ ಬೇಕಾಗುವ ಪರಿಕರ ಸಾಮಗ್ರಿಗಳನ್ನು ಪ್ರಾದೇಶಿಕವಾಗಿಯೇ ದೊರಕಿಸಿಕೊಳ್ಳುವ ಬಗೆ, ಅವುಗಳ ಸಮರ್ಥ ನಿರ್ವಹಣೆ ಮತ್ತು ನೀರಿನ ಬಳಕೆಗೆ ಬೇಕಾಗುವ ಸರ್ವಸಮ್ಮತ ನಿರ್ಣಯಗಳು, ರಾಜರು, ದಂಡನಾಯಕರು ಮೊದಲ್ಗೊಂಡು ಫಲಾನುಭವಿಗಳಾದ ಜನಸಾಮಾನ್ಯರು ಅಂತರ್ ಸಾಕ್ಷಿಯಿಂದ ನಡೆದುಕೊಂಡು ಕಷ್ಟನಿಷ್ಟುರಗಳನ್ನು ಹಂಚಿಕೊಳ್ಳುವ ಸಹಕಾರಿ ತತ್ವಕ್ಕೆ ಸ್ಪಷ್ಟ ದಾಖಲೆಗಳನ್ನೊದಗಿಸಿವೆ ತುರವೆಕೆರೆಯ ಶಾಸನಗಳು.

ಜಲಸೂತ್ರಧಾರರು (HYDROLOGISTS)

ನಮಗೆ ತಿಳಿದಿರುವುದು, ವಿಶ್ವವಿಖ್ಯಾತ ಜಲಸೂತ್ರಧಾರ ಭಾರತರತ್ನ ವಿಶ್ವೇಶವರ‍್ಯನವರು. ಆದರೆ ಅಂಥ ಮಹಾಪುರುಷರು ಕರ್ನಾಟಕದಲ್ಲಿ ಹುಟ್ಟುವುದಕ್ಕೆ ೯೬೩ ವರ್ಷ ಮುಂಚಿತವಾಗಿಯೇ ಈ ನೆಲದಲ್ಲಿ ಜಲಸೂತ್ರಧಾರರು ಇದ್ದರು ಎಂದು ಉಲ್ಲೇಖಿಸುತ್ತವೆ ಶಾಸನಗಳು. ಹಂಚಿ ಧರ್ಮಸೆಟ್ಟಿ ಕ್ರಿ.ಶ. ೧೦೦೦, ಸಿಂಗಾಯಭಟ್ಟ (ಕ್ರಿ.ಶ. ೧೩೮೮), ಬುಳ್ಳಪ (ಕ್ರಿ.ಶ. ೧೪೧೦) ಇತ್ಯಾದಿ. ಇವರು ಮಾಡಿದ ಜನೋಪಯೋಗಿ ಕಾರ‍್ಯಗಳನ್ನು ಮುಂದೆ ವಿವರಿಸಲಾಗಿದೆ. ಹಂಚಿ ಧರ್ಮ ಸೆಟ್ಟಿ ಎಂಬಾತನು ಎಲ್ಲೋ ಹರಿಯುತ್ತಿದ್ದ ಕಾಲುವೆಯನ್ನು ತಿದ್ದಿ, ತನ್ನ ಊರಿನ ಬಳಿ ಹರಿಯುವಂತೆ ಮಾಡುತ್ತಾನೆ.

ಸಿಂಗಾಯ ಭಟ್ಟ : (ಕ್ರಿ.ಶ. ೧೩೮೮) ವಿಜಯನಗರ ಸಂಸ್ಥಾಪಕನಾದ ಹರಿಹರರಾಯ (ಹಕ್ಕ)ನ ಕುಮಾರನಾದ ಶ್ರೀ ಪ್ರತಾಪ ಬುಕ್ಕರಾಯನು, ಪೆನುಗೊಂಡೆ (ಆಂಧ್ರಪ್ರದೇಶ) ಪಟ್ಟಣದಲ್ಲಿ ರಾಜ್ಯವಾಳುತ್ತಿರುವಾಗ ದಶವಿದ್ಯಾ ಚಕ್ರವರ್ತಿ ಜಲಸೂತ್ರಧಾರ ಸಿಂಗಾಯ ಭಟ್ಟನನ್ನು ಕರೆಯಿಸಿ ಆತನಿಗೆ ಪೆನ್ನಾರ್ ನದಿಯ ನೀರನ್ನು ಪೆನುಗೊಂಡೆಗೆ ಕಾಲುವೆಯ ಮೂಲಕ ಸಿರುವೆರದಕೆರೆಗೆ ತಂದು ಆ ಕಾಲುವೆ ಹೆಸರನ್ನು ಪ್ರತಾಪಬುಕ್ಕರಾಯ ಮಂಡಲದ ಕಾಲುವೆಯಾಗಿ ಮಾಡಿಸಿ ಬರೆಸಿದ ಶಾಸನವಿದು. ಎನ್ನುತ್ತದೆ ಗೌರಿಬಿದನೂರ್ ಆಚಾರ‍್ಯ ಜೂನಿಯರ್ ಕಾಲೇಜಿನಲ್ಲಿ ರಕ್ಷಿಸಲಾಗಿರುವ ಶಾಸನ. ಈ ಕಾಲುವೆ ಇಂದಿಗೂ ಪೆನುಗೊಂಡೆಯ ಕೆರೆಗೆ ನೀರುಣಿಸುತ್ತಿದೆ.

ಜನರೂ, ಜನಮಾನ್ಯರೂ ಸೇರಿ ಯಾ ರೀತಿ ಕೆರೆ, ಕಟ್ಟೆ, ಕಾಲುವೆಗಳನ್ನು ನಿರ್ಮಿಸಿ, ನದಿಯ ಪ್ರವಾಹದ ನೀರನ್ನು ಹೇಗೆ ನೀರಾವರಿಗೆ ಬಳಸಿ ಕೊಳ್ಳುತ್ತಿದ್ದರು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಹರಿಹರದ ಶಾಸನಗಳು.

ವಿಜಯನಗರದ ಮೊದಲ ಅರಸ ಹರಿಹರರಾಯನ ಮಗನಾದ ಪ್ರತಾಪಬುಕ್ಕರಾಯನು ಹರಿಹರದೇವರಿಗೆ ಮತ್ತು ಅಲ್ಲಿಯ ನಿವಾಸಿಗಳಿಗೆ ಮಾಡಿಕೊಟ್ಟ ‘ವ್ಯವಹಾರ’ವನ್ನು ಬಣ್ಣಿಸುತ್ತದೆ ದಾವಣಗೆರೆ ೨೩ನೇ ನಂಬರಿನ ಶಾಸನ. ಕ್ರಿ.ಶ. ೧೪೧೦ ಹರಿದ್ರೆಯೆಂಬ ನದಿಗೆ ಅಡ್ಡಕಟ್ಟಿ ಹರಿಹರಕ್ಕೆ ಕಾಲುವೆಯನ್ನು ತಂದು ಆ ಕಾಲುವೆ ಕೆಳಗೆ ನೀರಾವರಿಯಾದಷ್ಟು ಭೂಮಿಯೊಳಗೆ ಶ್ರೀ ಹರಿಹರ ದೇವರಿಗೆ ೨ ಭಾಗ, ಕೆರೆಯನ್ನು ಕಟ್ಟಿಸಿ ತಮ್ಮ ಸ್ವಂತ ಖರ್ಚಿನೊಂದಿಗೆ ಕಾಲುವೆಯನ್ನು ಕಟ್ಟಿಸಿದವರಿಗೆ ಒಂದು ಭಾಗ ಭೂಮಿಯನ್ನು ನಿರ್ಣಯವಾಗಿ, ಕೊಟ್ಟ ತಾಮ್ರಶಾಸನವೊಂದಿದೆ.

ಹರಿದ್ರಾ ನದಿಯನ್ನು ಕಟ್ಟಿ ಹರಿಹರೇಶ್ವರನಿಗೆ ಬನ್ನಿಕೋಡ ಸೀಮೆಯಲ್ಲಿ ಎಂದರೆ ಬನ್ನಿಕೋಡು, ಬೆಳುವಡಿ, ಹನಗವಾಡಿ, ಹರಿಹರ, ಗುತ್ತೂರು, ಗಂಗನರಸಿ ಕೆರೆಗೆ ಹರಿಸಿ ಅದರ ಕೆಳಗೆ ನೀರಾವರಿಯಾದಷ್ಟು ಭೂಮಿಯನ್ನು ೩ ಭಾಗ ಮಾಡಿ ಅದರಲ್ಲಿ ೨ ಪಾಲು ಭೂಮಿಯನ್ನು ದೇವರು, ೧ ಭಾಗವನ್ನು ಮಹಾಜನಗಲೂ ಅನುಭವಿಸತಕ್ಕದ್ದು. (ನಕ್ಷೆ ೨).

‘ಕಾಲುವೆ ಮುಗಿದ ನಂತರ ಪ್ರತಿವರುಷ ಕಾಲುವೆಯ ಆರೈಕೆ ವೆಚ್ಚವನ್ನು ದೇವರು ಎರಡು ಭಾಗ ಭರಿಸಬೇಕು, ಬ್ರಾಹ್ಮಣರು ಒಂದು ಪಾಲು ಭರಿಸಬೇಕು. (೬೬ನೇ ಸಾಲು) ಈ ಕಾಲುವೆಯ ಕೆಳಗೆ ಹುಟ್ಟುವಂಥ ಕಟ್ಟೆ, ಕುಂಟೆಗಳನ್ನು ಕಟ್ಟಿಕೊಳ್ಳುವ ಕೆಲಸವನ್ನು ದೇವರು ೨ ಪಾಲು ತೆತ್ತು ಭಾಗಕ್ರಮದಿಂದ ಭೋಗಿಸಬೇಕೆಂದು ಕೊಟ್ಟ ತಾಮ್ರಶಾಸನದ ಪ್ರತಿ ಶಿಲಾಶಾಸನವಿದು’. ಈ ಶಿಲಾಶಾಸನದಲ್ಲಿ ೮೪ ವೃತ್ತಿಗಳಿದ್ದು ಕರ್ನಾಟಕದ ಅತೀ ದೊಡ್ಡ ಶಿಲಾಶಾಸನಗಳಲ್ಲಿ ಇದು ಒಂದಾಗಿದೆ. ಹರಿಹರದ ಹರಿಹರೇಶ್ವರ ದೇವಾಸ್ಥಾನದಲ್ಲಿ ಈ ಶಾಸನವನ್ನು ಈಗಲೂ ನೋಡಬಹುದಾಗಿದೆ.

ಬುಳ್ಳಪ ಅಮಾತ್ಯ : ಗೌತಮ ಗೋತ್ರದ ಶ್ರೀ ಜಗಂನಾಥನ ಪುತ್ರನು ಈತ. ಹರಿದ್ರಾ ನದಿಯ ಬಲದ ಕೆರೆಯನ್ನು ವಿಜಯನಗರದ ಅರಸು ಒಂದೇ ದೇವರಾಯ (ಕ್ರಿ.ಶ. ೧೪೦೬)ನು ಆಜ್ಷೆ ಮಾಡಿದ ಪ್ರಕಾರ ಹರಿಹರ ದೇವರಿಗೆ, ಬ್ರಾಹ್ಮಣರಿಗೆ, ಅಖಿಲ ಜನಕ್ಕೆ ಸಂಜೀವಿನಿಯಂತೆ ಕಟ್ಟಿಸಿದ. ಈತನ ಬುದ್ಧಿವಂತಿಕೆಯನ್ನು ಶಾಸನ ಸಾಲುಗಳು ಕವಿತೆಯಂತೆ ಹೀಗೆ ಬಣ್ಣಿಸುತ್ತವೆ. ‘ವೀರಭಗೀರಥಂ ಗಂಗೆಯನುರ್ವ್ವಿಗೆ (ಭೂಮಿಗೆ) ತಂದದ್ದು ಏನು ಮಹಾ ಪೌರುಷವಲ್ಲ. ಆಕಾಶದಿಂದ ಧರೆಗೆ ಬಂದ ಗಂಗೆ ಹರಿದ್ರಾ ನದಿಗೆ ಬರದಿದ್ದುದರಿಂದ ಆಕೆಯನ್ನು ಕಟ್ಟಿ ಹಿಡಿದು ಹರೀಶ ಪುರಿಗೆ (ಹರಿಹರಕ್ಕೆ)ಕೊಂಡು ತಂದ ಬುಳ್ಳ ಚಮೂಪನೇ ಸೌಭಾಗ್ಯವಂತನು; ಹೀಗೆ ತುಂಗಭದ್ರೆಗೆ ಹರಿದ್ರೆ ಸೇರಿದುದಕ್ಕೆ ಆ ನದಿಯ ತೇಜಸ್ಸು ಇನ್ನೂ ಹೆಚ್ಚಿದೆ. ಈ ನದಿಯ ಕಾಲುವೆಯ ಕೆಳಗೆ ಬೆಳೆವ ಹೂವು, ಬಾಳೆ, ವೀಳ್ಯೆ ಎಲೆ, ಲತಾಮಂಟಪಗಳಿಂದ ತುಂಬಿದ್ದರಿಂದ ಉಂಟಾದ ದುಂಬಿಗಳು ಹರಿಹರೇಶ್ವರನ ಪಾದದಲ್ಲಿ ರಾರಾಜಿಸುತ್ತಿವೆ. ಈ ಕಾಲುವೆಯಲ್ಲಿ ವಿಸ್ತಾರವಾಗಿ ಹರಿವ ಕೆನ್ನೀರು ಭೂದೇವಿಯು ಶ್ರೀಮಂತವಾಗಿ ತನ್ನ ತಲೆಯಲ್ಲಿ ಧರಿಸಿದ ಅಗ್ರ ಸಿಂಧರದಂತೆ ಶೋಭಿಸುತ್ತಿದೆ. ಇಲ್ಲಿ ಬಂದಿರುವ ಕೆನ್ನೀರಿನ ವರ್ಣನೆ ಮಳೆಗಾಲದಲ್ಲಿಯ ಕೆಂಪು ನೀರನ್ನು ಸೂಚಿಸುತ್ತದೆ. ನೀವು (ನಕ್ಷೆ ೨ರಲ್ಲಿ) ನೋಡುವಂತೆ ಈ ಕಾಲುವೆ ಈಗ ಅಲ್ಲಲ್ಲಿ ಕುರುಹಿಗೆ ಮಾತ್ರ ಕಂಡುಬರುತ್ತದೆ. ಆದರೆ ಇಂದಿಗೂ ಹರಿದ್ರಾನದಿಯ ದಡದಲ್ಲಿ ಬೆಳೆವ ವೀಳೆಯ ಎಲೆ ಉತ್ತಮ ಮಟ್ಟದ್ದಾಗಿದ್ದು ಕೊಲ್ಲಿ ರಾಷ್ಟ್ರಗಳಿಂದ ಹಿಡಿದು ನಮ್ಮ ದೇಶದ ಕಾಶ್ಮೀರದವರೆಗೆ ರಫ್ತಾಗುತ್ತಿವೆ. ಈ ಶಾಸನಗಳು ಹೀಗೆ ಬುಳ್ಳಪ ಅಮಾತ್ಯನು ನಿರ್ಮಿಸಿದ ಕಾಲುವೆಯ ಕಾಲ ಕ್ರಿ.ಶ. ೧೪೧೦ ಎನ್ನುವುದು ಶಾಸನೋಕ್ತ. ಶಾಸನಸಂಖ್ಯೆ, ದಾ.೨೩ರಲ್ಲಿ ಮುಂದೆ ಈ ಕಾಲುವೆ ಒಡೆದು ಹೋಗುತ್ತದೆ. ಅದನ್ನು ತನ್ನ ಖರ್ಚಿನಿಂದಲೇ ಪುನರುಜ್ಜೀವನಗೊಳಿಸುತ್ತಾನೆ ಈ ಬುಳ್ಳಪ. ಈ ಶಾಸನದ ಸಂಖ್ಯೆ ದಾವಣಗೆರೆ ೨೯, ಕಾಲ ಕ್ರಿ.ಶ. ೧೪೨೫ ಅಂದರೆ ಕಾಲುವೆ ೧೫ ವರ್ಷ ತನ್ನ ಕೆಲಸವನ್ನು ನಿರ್ವಹಿಸಿದೆ ಎಂದಾಯಿತು.

09_274_KNNCA-KUH

ಚಾಮನೃಪಾಲ : ಈತ ಬೊಪ್ಪ ದೇವನ ಮಗ. ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಿಸಿದಾತ. ವೀರ ಪ್ರತಾಪ ದೇವರಾಯನ ಕಾಲದಲ್ಲಿ, ಆತನ ಪ್ರಧಾನ ದಂಡನಾಯಕನಾದ ಸಾಂಗಣನ ಕೋರಿಕೆಯಂತೆ ಬುಳ್ಳಪನು ಹರಿದ್ರಾನದಿಗೆ ಕಾಲುವೆ ನಿರ್ಮಿಸಿದ್ದು ಅದು ಒಡೆದು ಹೋದಾಗನೊಂದು ಅದರ ಪುನಃ ಪ್ರತಿಷ್ಠಾಪನೆ ಮಾಡುವ ಪುಣ್ಯ ಪುರುಷರಾರೆಂದು ವಿಚಾರಿಸಿ ನೋಡಿದಾಗ ತನಗಿಂತ ಬುದ್ಧಿವಂತನೂ ಧರೆಯಲ್ಲಿ ಬಹುತಟಾಕನು (ಕೆರೆ ನಿರ‍್ಮಿಸಿದವನು) ಆದ ಚಾಮರಾಜನನ್ನು ಹುಡುಕಿ ಕರೆಯಿಸಿ ಜೀರ್ಣೋದ್ಧಾರ ಮಾಡಬೇಕೆಂದು ಹೇಳಿದ್ದಕ್ಕೆ, ಆತನು ಕಾರ‍್ಯವನ್ನು ಕೈಗೆತ್ತಿಕೊಂಡ ಕಾಲ ಶತವರುಷ ೧೩೪೭, ಕ್ರೋಢಿ ಸಂವತ್ಸರ ಕಾರ್ತೀಕ ಶುದ್ಧ ೧೨ ಸೋಮವಾರ (ಕ್ರಿ.ಶ. ೧೪೨೫). ಎಂದರೆ ನಕ್ಷೆ ೨ರಲ್ಲಿ ತೋರಿಸಿರುವಂತೆ ಅಲ್ಲಲ್ಲಿ ಈಗ ಕಂಡುಬರುತ್ತಿರುವ ಕಾಲುವೆ. ಈಗ್ಗ್ಯೆ ೩೦ ವರ್ಷಗಳ ಹಿಂದೆ ಹರಿಹರದ ಹಳ್ಳದ ಕೆರೆಯಲ್ಲಿ ಕಂಡು ಬರುತ್ತಿದ್ದ ಈ ಕಾಲುವೆ ತುಂಗಭದ್ರೆಯ ಹೊಳೆ ಒತ್ತಿನಿಂದ ನೀರು ಹೆಚ್ಚಾದಾಗ ತುಂಬಿ ಹರಿದು ಅಮರಾವತಿ, ಗಂಗನರಸಿ ಕೆರೆಗಳಿಗೆ ಹರಿದು ಹೋಗುತ್ತಿದ್ದು ಆ ನೀರಿನಿಂದ ಭತ್ತ ಬಾಳೆಗಳನ್ನು ಬೆಳೆದ ರೈತರು ಇನ್ನೂ ಇರುವರು. ಇನ್ನೊಂದು ವಿಶೇಷವೆಂದರೆ ಕಾಲುವೆಯ ದುರಸ್ತಿ ಕಾರ‍್ಯ ಪ್ರಾರಂಭವಾದದು ಕಾರ್ತೀಕ ಶುದ್ಧ ೧೨ ರಂದು ಎಂದರೆ ಸುಮಾರು ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ; ಮಳೆಗಾಲದ ನಂತರ ಎನ್ನುವ ಧೃಡದಾಖಲೆ ಇದಾಗಿದೆ. ಎಂದರೆ ಈಗಿನಂತೆಯೆ ಮುಂಗಾರು ಮಳೆಗಳ ನಂತರ ಹಿಂಗಾರಿನಲ್ಲಿ (Non monsoon period) ಈ ಕಾರ‍್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಹರಿದ್ರೆ, ತುಂಗಭದ್ರೆಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ನೆರೆಬಂದ ದಾಖಲೆಗಳಿಲ್ಲ ಎನ್ನುವುದೂ ಗಮನಾರ್ಹ.

ಮಿಟ್ಟಿಗನ ಕಟ್ಟೆ : (ಇಂದಿನ ಮಿಟ್ಲಕಟ್ಟೆ; ಹರಿಹರದಿಂದ ಸು. ೧೫ ಕಿ.ಮಿ.ದೂರದಲ್ಲಿದೆ) ಮಿಟ್ಟಲಿಗ ಎಂಬ ಗೊಲ್ಲಗೆ ಕಟ್ಟಿಸಿಕೊಟ್ಟ ಮಿಟ್ಟಿಗನ ಕಟ್ಟೆಯೆಂದು ನಾಮಧೇಯಕ (ಹೆಸರಿಸಿ) ಮಾಡಿ ಆಕಟ್ಟೆಯ (ಕೆರೆಗಿಂತ ಚಿಕ್ಕದಾದ ನಿಲ್ದಾಣ) ಚತುಃಸೀಮೆಯ ವಿವರವನ್ನು ಹೀಗೆ ಹೇಳಿದ್ದಾರೆ. (ದಾ.ಶಾ. ಸಂಖ್ಯೆ ೬೬-೬೭ ಕಾಲ ಕ್ರಿ.ಶ. ೧೩೫೪) ‘ಆ ಗ್ರಾಮದಿಂದ ಮೂಡಲು (East – ಪೂರ್ವಕ್ಕೆ) ನಾಗೇನೂರೆಂಬ ಗ್ರಾಮ ಭಾಗದಿಂ / ಪಾಂಡವರ ಮರಡಿಯ ಮೇಲೆ ಮಧ್ಯದಿ ನೆಟ್ಟ ಕರವನಂತ ಕಲ್ಲು ಗ್ರಾಮದಿಂ, ಟಂಕಲ್ಲು, ಮುದಿಹದಡ, ಯೆಂಬ ಗ್ರಾಮದ ಬಿಳೇಕಲ್ಲಮರಡೀ ಬದೀಲಿ, ನೆಟ್ಟ ಬಿಳೇಕಲ್ಲು ಗಳುಯೆರಡು / ಗ್ರಾಮದ ಪಡುವಲು (ಪಶ್ಚಿಮಕ್ಕೆ) ಸಾಲಕಟ್ಟಿಯೆಂಬ ಗ್ರಾಮದ ಸಂಣಕಲ್ಲು ಮರಡಿಯ ಮೇಲೆ ನೆಟ್ಟ ಕಲ್ಲು ರೇವನದ(?) ಕಲ್ಲುಗಳು ಮೂರು ಬಡಗಲು ಕುಂದುವಾಡೀಯೆಂಬ ಗ್ರಾಮದ ಬಿಳೇಕಲ್ಲ ಮರಡಿ… ಮೊದಲಾದ ಸಾಲುಗಲ್ಲುಗಳು / ಈ ಬಗೆ ಚತುಃಶೀಮಾಸಹಿತವಂ ಮಾಡಿ/ಶ್ರೀ ವಿರೂಪಾಕ್ಷ.

ವಿಶ್ವದ ಭೂ, ವಾಯು ಮತ್ತು ಜಲ ಮಂಡಲಗಳಲ್ಲಿ ಅಡಕವಾಗಿರುವ ನೀರಿನ ಪ್ರಮಾಣ ಹಾಗೂ ಅಂತರ್ಜಲದ ಅಂಶಗಳ ಪಟ್ಟಿ

ಕ್ರ. ಸಂ ವಿಭಾಗ ನೀರಿನ ಪ್ರಮಾಣ ೧೦೦೦ ಘನ ಕಿ.ಮೀ. ಒಟ್ಟು ಪ್ರಮಾಣದ ನೂರರ ಅಂಶ ಶೇಕಡವಾರು ಪ್ರಮಾಣ
೧. ವಾಯಮುಂಡಲದ ನೀರು ೧೩ ೦.೦೦೧
೨. ಭೂಮಂಡಲದ ನೀರು
ಅ. ಸಮುದ್ರದ ಉಪ್ಪು ನೀರು ೧,೩೨೨,೨೪೦ ೯೭.೨೨೪
ಆ. ಭೂಮಧ್ಯ ಸಮುದ್ರ ಮತ್ತು ಉಪ್ಪುನೀರಿನ ಸರೋವರಗಳು ೧೦೪ ೦.೦೦೮
ಇ. ಕೆರೆ, ಕಟ್ಟೆ ಮತ್ತು ಸಿಹಿನೀರಿನ ಸರೋವರಗಳು ೧೨೫ ಮನುಷ್ಯನ ಉಪಯೋಗಕ್ಕೆ ಬರುವ ನೀರು ೦.೦೦೯ ಒಟ್ಟು ಶೇಕಡವಾರು ಪ್ರಮಾಣ ಮನುಷ್ಯನ ಬಳಕೆಗೆ ಬರುವಂತಹುದು
ಈ. ನದಿ, ಕಾಲುವೆಗಳಲ್ಲಿ ಸಂಗ್ರಹಿತ ನೀರು ೧,೨೫ ೦.೦೦೧
ಉ. ಹಿಮ, ಪರ್ವತಗಳಲ್ಲಿಯ ಸಂಗ್ರಹಣೆ ೨೯,೦೦೦.೦೦ ಮನುಷ್ಯನ ಉಪಯೋಗಕ್ಕೆ ಬರುವ ನೀರು ೨.೧೩೨
ಊ. ಸಸ್ಯ ಮತ್ತು ಜೀವಾಣುಗಳು ೫೦.೦೦ ೦.೦೦೪
೩. ಭೂಗರ್ಭದಲ್ಲಿನ ನೀರು
ಅ. ಪಾರ್ಶ್ವ ಜಲಾಧಾರಿತ ನೀರು ೬೭ ೦.೦೦೫
ಆ. ಅಂತರ್ಜಲ, ೦.೮ ಕಿ.ಮಿ. ಆಳದ ಮೇಲೆ ೪,೨೦೦ ೦.೩೦೯
೪. ಅಂತರ್ಜಲ ಒಳಗೆ ಆಳದ ಕೆಳಗೆ ೦.೮ ಕಿ.ಮಿ. ೪,೨೦೦ ೦.೩೦೯
೧,೩೬೦,೦೦೦ ೧೦೦.೦೦೦

೧. ಅಧಾರ :
೨. Ground Hydrology by Heman Bower – page No. 2
೩. ೦.೮ ಕಿ.ಮೀ. ಆಳದಿಂದ ಎಂದರೆ ಒಂದನೇ ಸ್ಥಳದಿಂದ ಮತ್ತೆ ೦.೮ ಕಿ.ಮೀ. ಆಳದವರೆಗಿನ ಎರಡನೇ ಸ್ಥರ
೪. ಎರಡನೇ ಸ್ಥರದಿಂದ ಪೂರ್ತಿಕಲ್ಲಿನ ಸ್ಥರ ಅಥವಾ ಲಾವಾರಸದ ಗಟ್ಟಿಭಾಗ ದೊರೆಯುವ ತನಕ ಇರುವಸ ಸ್ಥರ ಭೂ ಪದರಗಳಲ್ಲಿ ದೊರೆಯುವ ನೀರಿನ ಬೇರೆ ಬೇರೆ ನೆಲೆಗಳನ್ನು ವೈಜ್ಞಾನಿಕವಾಗಿ ಗುರ್ತಿಸುವ ಒಂದು ರೀತಿ ಇದು.

ದೇವರ ಸನ್ನಿದಿಯಲ್ಲಿ ಮಾಡಿಕೊಟ್ಟ ಧರ್ಮಶಾಸನ’. ಈ ಶಾಸನದ ಭೂಮಿ ವಿವರಗಳು ಹಳ್ಳಿಗಳು ಈಗಲೂ ಇವೆ. ಆದರೆ ಮಿಟ್ಟಿಗ ಯಾವ ಮಹತ್ಕಾರ‍್ಯವನ್ನು ಮಾಡಿದನೆನ್ನುವುದನ್ನು ಶಾಸನ ಹೇಳುವುದಿಲ್ಲ. ಏನೇ ಆಗಲಿ ಮಿಟ್ಲಕಟ್ಟ ಎಂಬ ಗ್ರಾಮವು ಈ ಶಾಸನ ಕಾಲಕ್ಕಿಂತ ಹಿಂದೆ ಇಲ್ಲ ಎನ್ನುವುದರ ಸ್ಪಷ್ಟ ದಾಖಲೆ ಈ ಶಾಸನ.

ಹೀಗೆ ನೀರಿನ ನಿರ್ವಹಣೆ, ಅದರ ಜಾಗೃತ ಬಳಕೆ, ಅಂತರ್ಜಲದ ತಿಳುವಳಿಕೆ, ನೀರಿನ ಗುಣ, ತೆರಿಗೆ ವಿಧಾನ, ಜಲಸೀಮೆ (Catchment – Area) ಗಳನ್ನು ನಿಖರವಾಗಿ ಗುರ್ತಿಸುವ ರೀತಿ ವಿಧಿ, ವಿಧಾನಗಳು ಇಂದಿಗೂ ಗಮನಾರ್ಹವೆನ್ನುವ ಸಂಗತಿಯನ್ನು ಕರ್ನಾಟಕದ ನೂರಾರು ಶಾಸನಗಳು ನಿರೂಪಿಸುತ್ತಿವೆ. ಇವುಗಳ ಸ್ಥೂಲ ಪರಿಚಯ ಮಾತ್ರ ಈ ಲೇಖನ.

ಅಡಿಟಿಪ್ಪಣಿಗಳು

೧. ಎ.ಕ. III Sr. ೧೩೪ ; ಕಾಲ ಕ್ರಿ.ಶ. ೯೧೦

೨. ಎ.ಕ.ಸಿ.ಎಂ. ೧೨೨, ಕ್ರಿ.ಶ. ೧೧೪೦

೩. ಎಸ್.ಐ. IX ; ೭೪ ಕ್ರಿ.ಶ. ೯೮೧

೪. ಎ.ಕ. XII ಕ್ರಿ.ಶ. ೯.೧೦೭೨

೫. BKI.I.ii 134, 1087 A.D.

೬. ಎ.ಸಿ.ಸಂ. ೧೨. ೨ನೇ ಶಾಸನ ಕ್ರಿ.ಶ. ೧೨೯೩

೭. ಅದೇ. ಸಂ. ೧, ಶಾಸನ ಸಂಖ್ಯೆ ೫, ಕ್ರಿ.ಶ. ೧೦೦೦

೮. ಅದೇ. ಸಂಖ್ಯೆ X, ಗೌರಿಬಿದನೂರು

೯. ಅದೇ. ಶಾಸಂಖ್ಯೆ ದಾ.೨೯, ಕಾಲ ಕ್ರಿ.ಶ. ೧೪೨೫, ಸಾಲು ೩೯