ಜಲ ಸಂಪನ್ಮೂಲ ಮಾನವನ ಮೂಲಚೂಲಗಳ ಕಾಲದಿಂದಲೂ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಹೆಚ್ಚಿನ ನಾಗರೀಕತೆಗಳು ಅರಳಿದ್ದು ಜಲತಟದಲ್ಲೇ. ತಟಾಕ ನಿರ್ಮಾಣ – ನಿರ್ವಹಣೆ ಅದರಲ್ಲಿ ಜನಪದರು ಪಾಲ್ಗೊಂಡ ರೀತಿ – ನೀತಿ ತುಂಬ ಸ್ವಾರಸ್ಯವಾದ ಅಧ್ಯಯನ. ಇತಿಹಾಸದ ಪುಟಗಳಲ್ಲಿ ಮೌರ‍್ಯರ ಕಾಲದಿಂದಲೂ ಕೆರೆ ನಿರ್ಮಾಣದ ಪ್ರಕ್ರಿಯೆ ಪ್ರಕಟಿತ; (ಕ್ರಿ.ಪೂ. ೪ನೆಯ ಶತಕ) ಅದರ ದುರಸ್ತಿ, ನಿರ್ವಹಣೆ ಕೂಡ ದಾಖಲಾತಿಗೊಂಡಿದ್ದು ಸ್ಪಷ್ಟ.

ಕರ್ನಾಟಕದ ಕೆರೆಗಳ ಇತಿಹಾಸ ರೋಚಕವಾಗಿದೆ. ಸದ್ಯಕ್ಕೆ ಶಾತವಾಹನ ಕಾಲದಷ್ಟು ಪ್ರಾಚೀನ ಶಾಸನೋಲ್ಲೇಖ ಲಭ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ದೊರೆತ ಶಿಲಾಶಾಸನದ ಪ್ರಕಾರ ಹಾರಿತೀ ಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ರಾಜನ ೧೨ನೆಯ ಆಳ್ವಿಕೆ ವರ್ಷದಲ್ಲಿ, ಹೇಮಂತ ಋತುವಿನ ಏಳನೆಯ ಪಕ್ಷದಲ್ಲಿ ಮೊದಲ ದಿನ ಮಹಾಭುವಿ ವಂಶದ, ಮಹಾರಾಜನ ಬಾಲಿಕೆಯಾದ, ಪುತ್ರವತಿಯಾದ, ಪೂಜ್ಯ ಯುವರಾಜಮಾತೆಯೂ ಆದ, ಸಿವಖಡನಾಗಸಿರಿ (ಶಿವಸ್ಕಂದ ನಾಗಶ್ರೀ) ಒಂದು ಕೆರೆಯನ್ನು ಮಾಡಿಸಿದಳು (ನಾಗಪ್ರತಿಮೆ ಹಾಗೂ ವಿಹಾರದ ಜೊತೆಗೆ). ಇವುಗಳ ಮೇಲ್ವಿಚಾರಣೆ ಮಾಡಿದವ ಅಮಾತ್ಯ ಖಡಸಾತಿ (ಸ್ಕಂದಸ್ವಾತಿ). ಪ್ರಸ್ತುತ ಇದೇ ಪ್ರಾಚೀನತಮ ಶಾಸನೋಕ್ತ ಅಥವಾ ದಾಖಲಿತ ಕೆರೆಯೆಂದು ಹೇಳಬಹುದು. (ಕ್ರಿ.ಶ. ೨-೩ನೆಯ ಶತಮಾನ ಇಂದಿಗೆ ಸುಮಾರು ೧೮೦೦ ವರ್ಷಗಳಷ್ಟು ಹಿಂದೆ). (ಬನವಾಸಿಯಲ್ಲಿ ಟೆರಾಕೂಟ ಕೊಳವೆಗಳು ಸಾಕಷ್ಟು ಸಿಕ್ಕಿವೆ. ಕೆರೆ ನೀರಾವರಿ, ನದಿ ನೀರಾವರಿ ಬಳಕೆಯಿತ್ತು). ಬನವಾಸಿಯ ಆದಿ ಕದಂಬರ ಕಾಲದಲ್ಲಿ (ಕ್ರಿ.ಶ. ೪-೬ರ ಶತಕಗಳಲ್ಲಿ) ಕೆರೆಗಳ ಇತಿಹಾಸವು ಶಾಸನಗಳಲ್ಲಿ ಇನ್ನು ಸ್ಪಷ್ಟವಾಗಿ ರೇಖಿತವಾಗಿದೆ. ಸದ್ಯಕ್ಕೆ ಸುಮಾರು ಹದಿನಾರು ಕೆರೆಗಳ ಉಲ್ಲೇಖವನ್ನು ಗಮನಿಸಲಾಗಿದೆ. ಮಾತ್ರವಲ್ಲ ಕೆಲವು ಶಾಸನಗಳಲ್ಲಿ ಕೆರೆ ದುರಸ್ತಿ, ವಿಸ್ತರಣೆ, ನಾಮಧೇಯ, ವಿಶೇಷಣ ಮುಂತಾದ ಅಲ್ಪ ಸ್ವಲ್ಪ ವಿವರಗಳು ಗೋಚರಿಸುತ್ತವೆ. ಇವೆಲ್ಲವೂ ಕರ್ನಾಟಕದ ಪ್ರಾಚೀನ ತಟಾಕ ಚರಿತ್ರೆಯ ಮಜಲುಗಳನ್ನು ಗುರುತಿಸುವಲ್ಲಿ, ರೂಪಧಾರಣೆ ಸ್ವರೂಪವನ್ನು ಪುನಾರಚಿಸುವಲ್ಲಿ, ತುಂಬ ಸಹಾಯಕವಾಗಿವೆ.

ಕೆರೆ, ನಿರ್ಮಾಣದಲ್ಲಿ ಪ್ರಾಕೃತಿಕವಾಗಿದ್ದ ಗುಡ್ಡ ಕಣಿವೆಗಳನ್ನು ಬಳಸಿದ್ದರ (Ecofriendly) ನಿದರ್ಶನ ಚಂದ್ರವಳ್ಳಿ – (ಚಿತ್ರದುರ್ಗ) ಹುಲಿಗೊಂಡಿ ಕಣಿವೆಯಲ್ಲಿ ನೋಡಬಹುದು. ಅಷ್ಟೇ ಅಲ್ಲ ಅದು ಹಾಳಾದಾಗ (ಪ್ರಾಯಶಃ) ಅದರ ದುರಸ್ತಿ ಕಾರ‍್ಯವನ್ನು ಮಾಡಿದ್ದರ ಉದಾರಣೆ ಇದಾಗಿದೆ. ಅದನ್ನು ಇನ್ನೂ ಚೆಂದಗೊಳಿಸಿದ್ದರ ನಿದರ್ಶನವೂ ಇದಾಗಿದೆ. ಅದರ ಬಳಿ ಪ್ರವಾಸಿ ನೆಲೆ ನಿರ್ಮಿಸಿದ್ದೂ ಸ್ವಾರಸ್ಯಕರವಾಗಿದೆ. ಹೀಗೆ ಎರಡು ಗುಡ್ಡೆಗಳ ನಡುವೆ ನಿರ್ಮಿತವಾಗಿದ್ದ ಆ ಕೆರೆ ಇಂದಿಗೂ ಇದೆ. (೧೯೭೧ರ ಹೊತ್ತಿಗೆ ಮತ್ತೆ ದುರಸ್ತಿ ಕಾರ‍್ಯವನ್ನು ಕರ್ನಾಟಕ ಸರ್ಕಾರ ಮಾಡಿಸಿತ್ತು).

ಕದಂಬಾಣಂ ಮಯೂರವವರ್ಮಣಾ
ತಟಾಕಂ ದೃಢೀಕೃತಂ
, ಅಭಿರೂಪ ರಚಯಿತ್ವಾ

ವಾನವಾಸಕಂ ಸ್ಥಾಪಯಿತ್ವಾ.… ಎಂದು ಪ್ರಾಕೃತ ಮಿಶ್ರ ಸಂಸ್ಕೃತದಲ್ಲಿ ಒಂದು ಸಾರ್ವಜನಿಕ ದಾಖಲೆಯೊಂದಿಗೆ ೪ನೆಯ ಶತಮಾನದಲ್ಲಿ ಕೆರೆ ನಿರ್ಮಾಣ, ನಿರ್ವಹಣೆ, (ದುರಸ್ತಿ) ಸೌಂದರ‍್ಯೀಕರಣವನ್ನು ಕನ್ನಡ ನಾಡಿನ ಪ್ರಥಮ, ದೇಶೀ, ಸ್ವತಂತ್ರ ರಾಜಮನೆತನ ಮಾಡಿದ್ದು ತುಂಬ ಸ್ವಾರಸ್ಯಕರವಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ತಾಳಗುಂದದಲ್ಲಿ ಈ ನಾಡಿನಲ್ಲೇ ಸದ್ಯಕ್ಕೆ ಅತ್ಯಂತ ಪ್ರಾಚೀನ ತೇದಿವಿವರವುಳ್ಳ ಪ್ರಣವೇಶ್ವರಾಲಯವಿದ್ದು, ಅದರ ಎಡಬದಿಯಿರುವ ಕೆರೆಯನ್ನು ಕದಂಬ ಕಕುಸ್ಥವರ್ಮ ನಿರ್ಮಿಸಿದ, ಅದೊಂದು ಮಹತ್ ಕರೆ (ದೊಡ್ಡ ಕರೆ) ಜೊತೆಗೆ ಅದರ ಉದ್ದೇಶವನ್ನು ಸ್ಪಷ್ಟ ಪಡಿಸಲಾಗಿದೆ; ಜಲಾಶಯದಿಂದ ನೀರು, ಸರಬರಾಜು ಯಥೇಚ್ಫವಾಗಿ ಆಗಲೆಂದು ಆ ಕೆರೆಯನ್ನು ನಿರ್ಮಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಅಲ್ಲಿರುವ ಪ್ರಣವಲಿಂಗ ದೇಗುಲ ಸತಕರ್ಣಿಗಳ ಕಾಲಕ್ಕಾಗಲೆ (ಕ್ರಿ.ಶ. ೩ನೇ ಶತಕ) ಇತ್ತು. ಅವರು ಅದನ್ನು ಆರಾಧಿಸುತ್ತಿದ್ದರು. ಆ ಕಾಲದ ಇಟ್ಟಿಗೆ ಕಟ್ಟಡ ಭಾಗಗಳೂ ಸಿಕ್ಕಿವೆ. ಅಂದರೆ ಕದಂಬ ಪೂರ್ವಕಾಲದ ಒಂದು ದೇವಾಲಯ, ಅದರ ಬಳಿ ಕದಂಬರ ಕಾಲದ ಕೆರೆ, ಇವು ಮುಂದಿನ ತಲೆಮಾರಿನವರಿಗೆ ತಿಳಿಯಲೆಂದು ಕದಂಬ ಶಾಂತಿವರ್ಮ ಶಾಸನಸ್ಥಗೊಳಿಸಿದ. ಕಾವ್ಯರೂಪದಲ್ಲಿ ಕವಿ ಕುಬ್ಜ ಶಿಲಾಸ್ತಂಭದಲ್ಲಿ ಅದನ್ನು ಬರೆದ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕು ಗುಡ್ನಾಪುರ ಶಾಸನ ಕೆರೆಗಳ ಇತಿಹಾಸ ಪುನಾರಚನೆಯಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸುತ್ತದೆ. ಇದರಲ್ಲಿ ನಾಲ್ಕು ಕರೆಗಳು ಉಲ್ಲೇಖವಲ್ಲದೆ, ಎರಡು ನದಿಗಳ ಪ್ರಸ್ತಾಪವು ಇದೆ. ಹೀಗೆ ಒಂದೇ ಒಂದು ಪ್ರಾಚೀನ ಶಾಸನದಲ್ಲಿ ಆರು ಜಲಮೂಲಗಳ ಉಲ್ಲೇಖವಿರುವುದು ಪ್ರಾಯಶಃ ಅಪೂರ್ವವೆಂದು ಅನ್ನಿಸುತ್ತದೆ. ಇದನ್ನೆಲ್ಲ ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ.

ಆದಿಕದಂಬ ರವಿವರ್ಮನು ೫ನೆಯ ಶತಮಾನದಲ್ಲಿ ಕಾಂತಾರಾರ‍್ಯ ಪಾಟೀ, (ಕಂತ್ರಾಜಿ) ಕಲ್ಲಂಗೋಡ, ಗ್ರಾಮ (ಕಲಗೋಡು) ಮೂಗುರು ಗ್ರಾಮ (ಮೊಗವಳ್ಳಿ) ಸೀಮೆಯಲ್ಲಿ ದಕ್ಷಿಣಕ್ಕೆ ಗುಡ್ಡತಟಾಕಕ್ಕೆ (ಗುಡ್ಡನ ಕೆರೆ > ಗುಡ್ನಾಪುರ) ಒಂದು ಒಡ್ಡುಕಟ್ಟಿ, ಆ ಕೆರೆಯ ನೀರಿನಿಂದ ಎಷ್ಟು ಬೆಳೆಯಬಹುದೋ ಅಷ್ಟು ಹೊಸ ಕ್ಷೇತ್ರದಾನ ಮಾಡಿದ. ಮುಂದೆ ದಾನ ಸಂದರ್ಭದಲ್ಲಿ ಬೃಹತ್ ತಟಾಕ (ದೊಡ್ಡಕೆರೆ) ಪದ್ಮತಟಾಕ, (ಕಮಲ ಕೆರೆ) ಅಂಬಿಲ ಕುಂಡಿ (ಅಂಬ್ಲಿಹೊಂಡ) ತಟಾಕಗಳನ್ನು ಉಲ್ಲೇಖ ಮಾಡಲಾಗಿದೆ. ಹೀಗೆ ಒಟ್ಟು ನಾಲ್ಕು ಕೆರೆಗಳ ಜಾಲ (Net work) ಆ ಪ್ರದೇಶದಲ್ಲಿದ್ದದ್ದು ಸ್ಪಷ್ಟ. ಅವುಗಳಲ್ಲಿ, ಅಷ್ಟೇಕೆ ಇಡೀ ಉತ್ತರ ಕನ್ನಡ, ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಕೆರೆಯಾದ ಗುಡ್ನಾಪುರದ ‘ಗುಡ್ಡ ತಟಾಕಕ್ಕೆ’ ಒಡ್ಡು ಕಟ್ಟಿದ ಸ್ವಾರಸ್ಯಕರ ಸಂಗತಿ, ಅದರಿಂದ ಕೆರೆ ನೀರಾವರಿ ವ್ಯವಸ್ಥೆ ಮಾಡಿದ್ದು, ಅದರ ಬಳಕೆ ಕಳೆದ ೧೫೦೦ ವರ್ಷಗಳಿಂದ ನಡೆದುಕೊಂಡು ಬಂದದ್ದು ಗಮನಾರ್ಹವಾಗಿದೆ. ಇದೇ ರಾಜ ರವಿವರ್ಮವನ ಕಾಲದ ಇತರ ಕೆಲವು ಶಾಸನಗಳಲ್ಲಿ ಮತ್ತಷ್ಟು ಕೆರೆಗಳ ಉಲ್ಲೇಖ ಬರುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಕುಂಟಗಣಿ (ಬನವಾಸಿ ಬಳಿಯೂ ಕುಂಟಗಳ್ಲೆ ಇದೆ!) ತಾಮ್ರಶಾಸನದಲ್ಲಿ ದಾನ ದಾಖಲೆಯ ಸಂದರ್ಭದಲ್ಲಿ ಅಲ್ಲಿದ್ದ ಕರ್ಪಟೇಶ್ವರ ಭೂಮಿ ವರಿಯಕಾ ಗ್ರಾಮದಲ್ಲಿತ್ತು. ಆ ಭೂಮಿ ಕೆರೆ ಬದಿ, ಅದರ ಎರಡೂ ದಡದಲ್ಲಿತ್ತು. ಈ ಕೆರೆಯ ದಿಬ್ಬವನ್ನು (ತಟಾಕ ಬಂಧಂ ಕಾರಯಿತ್ವಾ) ರಾಜ ರವಿವರ್ಮ ಧರ್ಮಮಹಾರಾಜನು ಕಟ್ಟಿಸಿದ.

ಶಿರಸಿ ತಾಮ್ರಪಟದಲ್ಲಿ ರವಿವರ್ಮನ ಭೂದಾನ ಉಲ್ಲೇಖಿಸುವಾಗ (ಜಂಬುಪುಕ್ಕೊಲ್ಲೀ ಕ್ಷೇತ್ರ) ಸಾರೆ (ಚಾರೆ) ಗ್ರಾಮದಲ್ಲಿ ಎರಡು ಕೆರೆಗಳಿದ್ದುದನ್ನು ಪ್ರಸ್ತಾಪಿಸಲಾಗಿದೆ. ಆ ಕೆರೆಗಳ ಹೆಸರೂ ಸ್ವಾರಸ್ಯಕರವಾಗಿದೆ. ದಾಸ ತಟಾಕ (ದಾಸನ ಕೆರೆ), ಬಂಬಾರಿ ತಟಾಕ (ಬಂಬಾರೆಕೆರೆ). ಇದನ್ನು ಗುರುತಿಸಿಬೇಕಾಗಿದೆ.

ಈಚೆಗೆ ರಾಣೆಬೆನ್ನೂರು ಶಂಭುಲಿಂಗಪ್ಪನವರ ಮನೆಯಲ್ಲಿ ಪತ್ತೆ ಮಾಡಿದ ಕದಂಬ ಮಾಂಧಾತೃವರ್ಮನ ತಾಮ್ರಪಟದಲ್ಲಿ ‘ವಾಣೀಜತಟಾಕ’ ದ ಉಲ್ಲೇಖವನ್ನು ಮೊದಲ ಬಾರಿಗೆ ಗಮನಿಸಲಾಗಿದೆ. ಇದು ಸಂಸ್ಕೃತೀಕರಣಗೊಂಡ ಹೆಸರು. ದೇಶೀ, ಹೆಸರು ‘ಶೆಟ್ಟಿಕೆರೆ’ ಆಗಿರಬೇಕು. ಈ ರೀತಿ ವ್ಯಾಪಾರಿ ಶೆಟ್ಟರು ಕಟ್ಟಿಸಿದ ಕೆರೆ ‘ಶೆಟ್ಟಿಕೆರೆ’ ಆ ಕಾಲಕ್ಕಾಗಲೇ ಇತ್ತೆಂಬುದು, ಆ ಮೂಲಕ ಸಮಾಜದ ವಿವಿಧ ಸ್ಥರಗಳವರೂ ಕೆರೆ ನಿರ್ಮಾಣದವಲ್ಲಿ ಪಾತ್ರವಹಿಸಿದ್ದರು ಎಂಬುದಕ್ಕೆ ಇದೊಂದು ನಿದರ್ಶನ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಮ್ರಪಟದಲ್ಲಿ ಕದಂಬ ಸಿಂಹ ವರ್ಮನ ಭೂದಾನ ಉಲ್ಲೇಖಿಸುವಾಗ ಆಸಂದೀ ತಟಾಕ (ಅಸಂದಿ ಕೆರೆ) ಹೆಸರಿಸಲ್ಪಟ್ಟಿದೆ. ಇದೊಂದು ಊರ ಹೆಸರು ಹೊತ್ತ ಕೆರೆ. ಆದರೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಶಿವಳ್ಳಿ ತಾಮ್ರಪಟದಲ್ಲಿ ಕದಂಬ ಇಮ್ಮಡಿ ಕೃಷ್ಣವರ್ಮನ ಕಾಲದಲ್ಲಿ ಮಾಹೇಶ್ವರೀ ಕ್ಷೇತ್ರದ ದಕ್ಷಿಣಕ್ಕೆ, ಬಂದಣಿಕೆ ಪೂರ್ವಕ್ಕೆ ‘ಶಾಂತ ತಟಾಕ’ ಇತ್ತೆಂಬುದು ದಾಖಲಾಗಿದೆ. ಅಲ್ಲಿ ಶಾಂತಿನಾಥ ಬಸದಿಯಿದೆ. ಅದರ ಕೆಳಸ್ತರದಲ್ಲಿ ಶಾತವಾಹನ ಕದಂಬ ಕಾಲದ ಇಟ್ಟಿಗೆ ಕಟ್ಟಡ ಭಾಗಗಳೂ ಸಿಕ್ಕಿವೆ. ಆ ಕಾಲಕ್ಕಾಗಲೇ ಇದ್ದಿರಬಹುದಾದ ಶಾಂತಿನಾಥನಿಂದಾಗಿ ಅದರ ಬಳಿಯಿರುವ ಕೆರೆಗೆ ‘ಶಾಂತ ತಟಾಕ’ ಎಂದು ಹೆಸರು ಬಂದಿರಬೇಕು. ಇಲ್ಲವೆ, ‘ಶಾಂತಿಸಾಗರ’ ಎಂದಿದ್ದರೂ ಸರಿಯೇ (ಇದೊಂದು ಗುಣವಾಚಕ).

ಹಾಸನಜಿಲ್ಲೆ ಬೇಲೂರು ತಾಲ್ಲೂಕು ತಗರೆಯಲ್ಲಿ ದೊರೆತ ಅರ್ಧಸಂಸ್ಕೃತ ಗಿರ್ದ ಕನ್ನಡ ಬರಹವುಳ್ಳ ತಾಮ್ರ ಪಟದಲ್ಲಿ ಎರಡು ಕೆರೆಗಳ ಉಲ್ಲೇಖ ಬಂದಿದೆ; ಕಿರುಕೂಡಲೂರು ಕೆರೆ ಹಾಗೂ ತಗರೆಯ ಪೆರ್ಗ್ಗೇರೆ (ಹಿರಿಯ ದೊಡ್ಡಕೆರೆ ಪೆಗ್ಗೆಣಿಯಾ ಮೊದಲಕೆರೆ). ಇವು ಕನ್ನಡ ಶಾಸನ ಭಾಗದಲ್ಲಿ ಬಂದಿದ್ದು ಕದಂಬ ಭೋಗಿವರ್ಮನ ಕಾಲಕ್ಕಾಗಲೇ ಪೆರ್ಗ್ಗೆರೆ, ‘ಕೆರೆ’ ಎಂಬ ದೇಶೀಶಬ್ದ ಕಂಡುಬರುವುದೊಂದು ವಿಶೇಷ ‘ಕೆರೆ’ ಶಬ್ದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ ಆದಿಕದಂಬರ ಕನ್ನಡ ಶಾಸನೋಲ್ಲೇಖ ಗಮನಾರ್ಹ.

ಬೆಳಗಾಂವ್ ಜಿಲ್ಲೆಯ ಬೇಡ್ಕಿಹಾಳ ತಾಮ್ರಪಟದಲ್ಲಿ (ಇದೊಂದು ಕೂಟ ಶಾಸನವೆ? ಅಥವಾ ೪ನೆಯ ಶತಕದ ಕದಂಬ ಶಾಸನದ ೧೧ನೆಯ ಶತಮಾನದ ಪ್ರತಿಯೆ ಏನೇ ಇರಲಿ) ದಿಗ್ಭಾಗ ಹೇಳುವಾಗ ಗುಡ್ಡದ ಹಿಂಭಾಗದಲ್ಲಿದ್ದ ತಟಾಕವನ್ನು ತಪ್ಪದೆ ಪ್ರಸ್ತಾಪಿಸಲಾಗಿದೆ. ಚಂದ್ರವಲ್ಳಿ ಕೆರೆಯ ಹಾಗೆ ಗುಡ್ಡವನ್ನು ಬಳಸಿ ಕೆರೆ ನಿರ್ಮಾಣ ಅಲ್ಲಾಗಿರಬಹುದು.

ಹೀಗೆ ಆದಿ ಕದಂಬರ ಕಾಲದಲ್ಲಿ ಅದರಲ್ಲೂ ಕದಂಬ ರವಿವರ್ಮನ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಕೆರೆಗಳು ಶಾಸನಗಳಲ್ಲಿ ಉಲ್ಲೇಖಿತವಾಗಿವೆ. ಅವುಗಳ ನಿರ್ಮಾಣ, ನಿರ್ವಹಣೆ ದುರಸ್ತಿ ಬಳಕೆ, ಇವುಗಳ ಹಿಂದಿದ್ದ ಜನವರ್ಗ ಇತ್ಯಾದಿ ಸಂಗತಿಗಳು ಕೆರೆ ಇತಿಹಾಸದ ಪುನಾರಚನೆಯಲ್ಲಿ ಉಪಯುಕ್ತವಾಗಿದೆ. ಕರ್ನಾಟಕದ ಪ್ರಾಚೀನತಮ ಕೆರೆಯೊಂದು ನಿರ್ಮಾತೃ ಸಾತಕರ‍್ಣಿ ಒಬ್ಬ ‘ಮಹಿಳೆ’ ಎಂಬ ಸಂಗತಿ ಕುತೂಹಲಕಾರಿ (ಮಾತೃಪ್ರಧಾನ ಕುಟುಂಬ). ಹಾಗೆಯೇ ‘ಕೆರೆಗೆ ಹಾರ’ ಆಗಿದ್ದವಳೂ ಮಹಿಳೆ ಎಂಬ ಜಾನಪದ ವಿಚಾರವೂ ಅಷ್ಟೇ ಸ್ವಾರಸ್ಯಕರ ಸಂಗತಿ.