ಈಗಿರುವ ನಮ್ಮ ಕೆರೆಗಳ ಸಂಖ್ಯೆ ಸುಮಾರು ೩೦,೦೦೦. ಕರ್ನಾಟಕದ ಊರುಗಳ ಹೆಸರಿನಿಂದ, ಈ ಸಂಖ್ಯೆಯಲ್ಲಿ ಉತ್ಪ್ರೇಕ್ಷೆ ಇಲ್ಲವೆನ್ನುವುದು ಸಿದ್ಧವಾಗುತ್ತದೆ. ಕೆರೆ, ಸಮುದ್ರ, ಸಂದ್ರ, ಸಾಗರ ಮತ್ತು ಅವುಗಳಿಗೆ ಸಮಾನವಾದ ಹೆಸರುಳ್ಳ ಊರುಗಳು ಸಾವಿರಾರು.

ಕೆರೆಗಳ ಇತಿಹಾಸ ಕರ್ನಾಟಕದಲ್ಲಿ ಆದಿ ಕದಂಬರ ಕಾಲದಿಂದ ಆರಂಭವಾಗುತ್ತದೆ. ಈ ಕದಂಬರ ಮೂಲಪುರುಷ ಮಯೂರವರ್ಮ. ಇವನು ಚಿತ್ರದುರ್ಗದ ಹತ್ತಿರ ಇರುವ ಚಂದ್ರವಳ್ಳಿಯಲ್ಲಿ ಎರಡು ಗುಡ್ಡಗಳ ನಡುವೆ ಒಂದು ಕೆರೆಯನ್ನು ಧೃಡವಾಗಿ ಕಟ್ಟಿದನು. ಈ ಕೆರೆಯನ್ನು ಧೃಡಪಡಿಸಿದ್ದು ಸುಮಾರು ಕ್ರಿ.ಶ. ೩೫೦ರಲ್ಲಿ. ಮುಂದೆ ಈ ಕೆರೆ ಹಾಳಾಯಿತು. ಇತ್ತೀಚೆಗೆ ಅಂದರೆ ೨೫-೩೦ ವರ್ಷಗಳ ಕೆಳಗೆ ಕರ್ನಾಟಕ ಸರ್ಕಾರದವರು ಈ ಕೆರೆಯ ಒಡ್ಡನ್ನು ವಿಸ್ತರಿಸಿ ಅದರ ಪುನರುದ್ಧಾರ ಮಾಡಿದರು. ಈಗ ಅದು ಉಪಯುಕ್ತವಾಗಿರುವುದಲ್ಲದೆ, ಒಂದು ಸುಂದರ ತಾಣವೂ ಆಗಿದೆ. ಇದೇ ರೀತಿಯ ಪುನರುದ್ಧಾರಕ್ಕೆ ಅನೇಕ ಹಾಳು ಬಿದ್ದ ಕೆರೆಗಳು ಕಾದಿವೆ. ಹೊಸ ಕೆರೆಗಳನ್ನು ಕಟ್ಟುವುದಕ್ಕೆ ಮೊದಲು ಹಳೆಯ ಕೆರೆಗಳನ್ನು ದುರಸ್ತಿ ಮಾಡುವುದು ಯೋಗ್ಯ. ನಮ್ಮ ಪೂರ್ವಜರು ಈ ಕ್ರಮವನ್ನೇ ಅನುಸರಿಸುತ್ತಿದ್ದರು. ಹಾಗೆ ಮಾಡಿದ್ದರಿಂದಲೇ ನಮ್ಮಲ್ಲಿ ಸಾವಿರಾರು ಕೆರೆಗಳು ಇನ್ನೂ ಜೀವಂತವಾಗಿವೆ. ಇದಕ್ಕೆ ಒಂದು ನಿದರ್ಶನ ಬನವಾಸಿ ಹತ್ತಿರವಿರುವ ಗುಡ್ನಾಪುರದ ಕೆರೆ. ಇದನ್ನು ಸುಮಾರು ಕ್ರಿ.ಶ. ೫೦೦ರಲ್ಲಿ ಕದಂಬ ರವಿವರ್ಮ ಕಟ್ಟಿಸಿದ. ಈ ಕೆರೆ ಉತ್ತರ ಕನ್ನಡ ಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆ. ಕಟ್ಟಿ ೧೫೦೦ ವರ್ಷಗಳಾದವು. ಈ ಕೆರೆ ಇನ್ನೂ ಜನರಿಗೆ ನೀರನ್ನು ಒದಗಿಸುತ್ತದೆ. ಕದಂಬರ ನಂತರ ಬಾದಾಮಿ ಚಾಲುಕ್ಯರು ಧಾರವಾಡ ಜಿಲ್ಲೆಯ ಗುಡಗೇರಿಯಲ್ಲಿ ಸು. ಕ್ರಿ.ಶ. ೭೦೦ರಲ್ಲಿ ೭-೮ ಕೆರೆಗಳನ್ನು ಕಟ್ಟಿದ್ದರು. ಅವರ ನಂತರ ಬಂದ ರಾಷ್ಟ್ರಕೂಟರು ಈಗಲೂ ಉಪಯುಕ್ತವಿರುವ ಅನೇಕ ಕೆರೆಗಳನ್ನು ಕಟ್ಟಿದರು. ಒಂದೇ ಒಂದು ಉದಾಹರಣೆಯನ್ನು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನಲ್ಲಿ ನೋಡಬಹುದು. ಅವರ ಕಾಲದಲ್ಲಿ (ಸು.ಕ್ರಿ.ಶ. ೯೫೦ರಲ್ಲಿ) ವಿಜಯಾದಿತ್ಯ ಮಂಗಲ (ಈಗಿನ ಬೇತಮಂಗಳ) ಕೆರೆಯನ್ನು ಕಟ್ಟಿದರು. ಈ ಕೆರೆಯು ಇವತ್ತಿಗೂ ಕೋಲಾರ ಗೋಲ್ಡ್‌ಫಿಲ್ಡ್‌ಗೆ ಕುಡಿಯುವ ನೀರನ್ನು ಕೊಡುತ್ತದೆ. ನಂತರ ಬಂದ ಕಲ್ಯಾಣದ ಚಾಳುಕ್ಯರು ಮತ್ತು ಹೊಯ್ಸಳರು ಕರ್ನಾಟಕದ ತುಂಬಾ ಅನೇಕ ಕೆರೆಗಳನ್ನು ಕಟ್ಟಿದರು. ಈ ಕಾಲದಲ್ಲಿ ಕೆರೆ ಕಟ್ಟುವ ವಿಧಾನದಲ್ಲಿ ಒಂದು ವಿಶೇಷ ಬದಲಾವಣೆಯಾಯಿತು. ಇದರ ಪ್ರಕಾರ ಒಂದರ ಕೆಳಗೆ ಇನ್ನೊಂದು ಕೆರೆಯನ್ನು ಕಟ್ಟುವುದು. ಇದರ ಅತಿ ಶ್ರೇಷ್ಠ ಉದಾಹರಣೆ ಕೋಲಾರ ಜಿಲ್ಲೆಯಲ್ಲಿದೆ. ಅಲ್ಲಿಯ ಪಾಲಾರ್ ನದಿಗೆ, ಒಂದರ ಕೆಳಗೆ, ಇನ್ನೊಂದು ಒಟ್ಟು ೧೦೦೦ ಕೆರೆಗಳನ್ನು ಕಟ್ಟಿದ್ದಾರೆ. ಈ ಜಾಲದ ಕೊನೆಯ ಕೆರೆ ರಾಮಸಾಗರ. ಇದು ಚೋಳರ ಕಾಲದ್ದು (ಸು. ಕ್ರಿ.ಶ. ೧೦೦೦) ಈ ಜಾಲವು ಇನ್ನೂ ಸುಸ್ಥಿತಿಯಲ್ಲಿದೆ. ಕಲ್ಯಾಣ ಚಾಲುಕ್ಯರ ಕಾಲದ ಅತಿ ಪ್ರಸಿದ್ಧ ಕೆರೆ ಸೂಳೆಕೆರೆ. ಈಗ ಅದನ್ನು ‘ಶಾಂತಿಸಾಗರ’ವೆಂದು ಕರೆಯುತ್ತಾರೆ. ಈ ಕೆರೆಯ ನೀರು ಹತ್ತು ಚದರ ಮೈಲು ಹಬ್ಬಿದೆ.

ಕೆರೆ ಕಟ್ಟುವ ಕಲೆಯಲ್ಲಿ ಹೊಯ್ಸಳರು ಚಾಳುಕ್ಯರನ್ನು ಮೀರಿಸಿದ್ದರು. ಇವರ ಕಾಲದಲ್ಲಿ ಕಡೂರಿನ ಹತ್ತಿರವಿರುವ ಅಯ್ಯನ ಕೆರೆ ಮತ್ತು ಮದಗದ ಕೆರೆಗಳ ಸೌಂದರ್ಯ ವರ್ಣನಾತೀತ. ಇವುಗಳಲ್ಲಿ ಒಂದರ ಮಧ್ಯೆ ದ್ವೀಪಗಳಿವೆ. ಅವುಗಳನ್ನು ನೋಡಲು ಪ್ರವಾಸಿಗರಿಗೆ ರಸ್ತೆ ಮತ್ತು ಇತರ ಸೌಕರ್ಯಗಳನ್ನು ಮಾಡಿದರೆ ಕರ್ನಾಟಕದಲ್ಲೇ ಅವು ಅತ್ಯಂತ ಸುಂದರ ತಾಣಗಳಾಗಬಲ್ಲವು.

ಹೊಯ್ಸಳರ ನಂತರ ಬಂದ ವಿಜಯನಗರದ ಅರಸರು ಭಾರೀ ಕೆರೆಗಳನ್ನು ಮತ್ತು ಅದ್ಭುತವಾದ ಅಣೆಕಟ್ಟುಗಳನ್ನು ಕಟ್ಟಿ ಈ ಶಾಸ್ತ್ರದಲ್ಲಿ ತಮ್ಮ ಪರಿಣತೆಯನ್ನು ಶಿಖರಕ್ಕೆ ಒಯ್ದಿದ್ದಾರೆ. ಹಂಪಿಗೆ ನೀರನ್ನು ಒದಗಿಸುವ ತುರ್ತು ಅಣೆಕಟ್ಟು ಇಂದಿಗೂ ಉಪಯುಕ್ತ. ಇಂತಹ ಅನೇಕ ಅಣೆಕಟ್ಟುಗಳನ್ನು ವಿಜಯನಗರದ ರಾಜರು ತುಂಗಭದ್ರೆಗೂ ಮತ್ತು ಕಾವೇರಿ ನದಿಗೂ ಕಟ್ಟಿದರು. ಇವತ್ತಿಗೂ ಅವು ಜನಗಳಿಗೆ ನೀರನ್ನು ಕೊಡುತ್ತವೆ. ಕೃಷ್ಣದೇವರಾಯನಕಾಲ (ಕ್ರಿ.ಶ. ೧೫೦೬-೩೦) ಕೆರೆ ಕಟ್ಟುವ ಕಾಲದ ಉಚ್ಫ್ರಾಯ ಕಾಲ. ಅವನು ಹೊಸಪೇಟೆಯಲ್ಲಿ ಕಟ್ಟಿದ ರಾಯರ ಕೆರೆ ಈಗ ಹಾಳು ಬಿದ್ದಿದೆ. ಈ ಹಾಳಾದ ಕೆರೆಯ ಎತ್ತರದ ಕಟ್ಟೆ ಇವತ್ತಿಗೂ ವಿಸ್ಮಯಕಾರಿಯಾಗಿದೆ. ಕೃಷ್ಣದೇವರಾಯನ ಕಾಲದ ಅತ್ಯಂತ ಅದ್ಭುತವಾದ ಕೆರೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರಿನ ಹತ್ತಿರವಿರುವ ಮದಗದ ಕೆರೆ. ಕೃಷ್ಣದೇವರಾಯನ ಸಾಮಂತ, ಕೆಳದಿ ಸದಾಶಿವ ನಾಯಕನ ಆದೇಶದ ಮೇಲೆ ಬಂಕಾಪುರದ ಮಾದಣ್ಣ ಒಡೆಯರು ಈ ಕೆರೆಯನ್ನು ಕಟ್ಟಿಸಿದರು. ಇದರ ಒಡ್ಡಿನ ತಳಹದಿಯು ೮೦೦ ಅಡಿ ಅಗಲ ಮತ್ತು ಮೇಲ್ಭಾಗದಲ್ಲಿ ೪೦೦ ರಿಂದ ೬೦೦ ಅಡಿ ಅಗಲವಾಗಿದೆ. ಇದರ ಎತ್ತರ ಕುಮುದ್ವತಿ ನದಿಯಿಂದ ೧೦೦ ಅಡಿ ಎತ್ತರದಲ್ಲಿದೆ. ಇದನ್ನು ಬ್ರಿಟಿಷರು ನೋಡಿದಾಗ ಇಷ್ಟು ದೊಡ್ಡ ಮಣ್ಣಿನ ಒಡ್ಡನ್ನು ಕಟ್ಟುವ ಕಲೆ ಆಗಿನ ಕಾಲದಲ್ಲಿ (ಹತ್ತೊಂಬತ್ತನೆಯ ಶತಮಾನದ ಮಧ್ಯೆ) ಯುರೋಪಿಯನರಿಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಇವತ್ತಿಗೂ ಈ ಕೆರೆಯ ಲಾಭವನ್ನು ಪಡೆಯಲಾಗುತ್ತಿದೆ.

ವಿಜಯನಗರ ಕಾಲದ ನಂತರ ಪಾಳೇಗಾರರು ಕೆರೆಗಳನ್ನು ಕಟ್ಟುತ್ತಿದ್ದುದಕ್ಕೆ ಚಿತ್ರದುರ್ಗದ ಮದಕೆರೆ ನಾಯಕರು ಒಳ್ಳೆಯ ಉದಾಹರಣೆ. ಅವರು ಚಿತ್ರದುರ್ಗದ ಊರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಕೋಟೆಯ ಮೇಲ್ಭಾಗದಲ್ಲಿ ಬಿದ್ದ ನೀರನ್ನು ಒಂದರ ಕೆಳಗೆ ಒಂದು ಹೊಂಡಕ್ಕೆ ಒಯ್ದು ಕೊನೆಗೆ ಊರಿನಲ್ಲಿ ಕೊಳವೆಗಳ ಮೂಲಕ ನೀರನ್ನು ಸಾಗಿಸಿ ಸಂತೆಹೊಂಡಕ್ಕೆ ತಲುಪಿಸುತ್ತಿದ್ದರು. ಇತ್ತೀಚಿನವರೆಗೆ ಸಂತೆಹೊಂಡದಲ್ಲಿ ನೀರು ಬರುತ್ತಿತ್ತು. ಆದರೆ ಈ ವ್ಯವಸ್ಥೆಯ ಇತರ ಭಾಗಗಳು ಹಾಳಾಗಿ ಹೋಗಿ, ಚಿತ್ರದುರ್ಗಕ್ಕೆ ನೀರನ್ನು ಸರಬರಾಜು ಮಾಡಲು ಬೇರೆ ವ್ಯವಸ್ಥೆ ಮಾಡಬೇಕಾಗಿದೆ. ೧೭ನೇ ಶತಮಾನದಲ್ಲಿ ಆಳಿದ ಬಿಜಾಪುರದ ಆದಿಲ್ ಶಾಹಿಗಳು ತಮ್ಮ ರಾಜಧಾನಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಾಣ್ಮೆಯಿಂದ ಮಾಡಿದರು. ಎತ್ತರದ ಮೇಲೆ ಕೆರೆಗಳನ್ನು ಕಟ್ಟಿ ಇಳಿಜಾರಿನ ಲಾಭವನ್ನು ಪಡೆದು ಕೊಳವೆಗಳ ಮುಖಾಂತರ ಬಿಜಾಪುರಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದರು. ಕಾಲಕ್ರಮೇಣ ನಿರ್ಲಕ್ಷ್ಯತೆಯಿಂದ ಈ ವ್ಯವಸ್ಥೆ ಕುಸಿದು ಹೋಯಿತು. ಅವರು ಕಟ್ಟಿದ ತಾಜ್ ಬಾವಡಿಯಲ್ಲಿ ಇಂದಿಗೂ ನೀರು ಇರುತ್ತದೆ. ಅವರು ಅನುಸರಿಸಿದ ಮಾರ್ಗವನ್ನು ಇಂದಿಗೂ ಅನುಸರಿಸುವ ಹಾಗೆ ಇದೆ.

ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸಲು ಕೆಂಪೇಗೌಡ ೧೬ನೇ ಶತಮಾನದಲ್ಲಿ ಕೆಂಪಾಂಬುಧಿ, ಧರ್ಮಾಂಬುಧಿ ಮತ್ತು ಇನ್ನು ಅನೇಕ ಕೆರೆಗಳನ್ನು ಕಟ್ಟಿದನು. ಬೆಂಗಳೂರು ನಗರ ಬೆಳೆಯುತ್ತಿರುವುದರಿಂದ ಈ ಕೆರೆಗಳು ಒಂದಾದಮೇಲೆ ಇನ್ನೊಂದು ನಾಶವಾಗುತ್ತಿವೆ. ಇರುವವನ್ನಾದರೂ ಪುನರುದ್ಧಾರ ಮಾಡಿದರೆ ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರವಾಗುತ್ತದೆ.

೧೮ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರಿಗೂ, ಹೈದರ್, ಟಿಪ್ಪು, ಮತ್ತು ಮರಾಠರಿಗೂ ಸತತವಾಗಿ ಯುದ್ಧ ನಡೆಯುತ್ತಿತ್ತು. ಈ ಯುದ್ಧಗಳ ಕಾಲದಲ್ಲಿ ಕೆರೆಗಳು ಶತ್ರುಗಳಿಗೆ ನೀರು ಕೊಡಬಾರದೆಂದು ಅವುಗಳನ್ನು ಹಾಳು ಮಾಡಲಾಯಿತು. ದಿವಾನ್ ಪೂರ್ಣಯ್ಯ ಹಳೆಯ ಮೈಸೂರಿನ ಎಲ್ಲಾ ಕೆರೆಗಳನ್ನು ದುರಸ್ತಿ ಮಾಡಿಸಿದನು.

ಅವನ ಕಾಲದ ನಂತರ ಬ್ರಿಟಿಷರು ಸಣ್ಣ ಕೆರೆಗಳನ್ನು ಅಲಕ್ಷಿಸಿದರು. ದೊಡ್ಡ ಕೆರೆಗಳಿಂದ ಆದಾಯ ಬರುತ್ತಿದ್ದುದರಿಂದ ಅವುಗಳನ್ನು ಕಾಪಾಡಿದರು. ಬ್ರಿಟಿಷರು ಬರುವ ಮುಂಚೆ ಗ್ರಾಮಸ್ಥರು ತಮ್ಮ ಊರಿನ ಎಲ್ಲಾ ಕೆರೆಗಳನ್ನು ಕಾಪಾಡುತ್ತಿದ್ದರು. ಅವರಿಗೆ ಬ್ರಿಟಿಷರು ಯಾವ ಉತ್ತೇಜನವನ್ನು ಕೊಡಲಿಲ್ಲವಾದ್ದರಿಂದ ಸಾವಿರಾರು ಕೆರೆಗಳ ದಾಖಲೆಯಲ್ಲಿ ಮಾತ್ರ ಉಳಿದಿವೆ. ಇತ್ತೀಚೆಗೆ ಭಾರೀ ಅಣೆಕಟ್ಟುಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಸಣ್ಣ ಕೆರೆಗಳ ನಾಶ ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ. ನಾಗರೀಕರಣ ಹೆಚ್ಚಾಗಿ, ನಗರಗಳು ಬೆಳೆದ ಹಾಗೆ ಕೆರೆಗಳ ಅವನತಿ ಯಥೇಚ್ಫವಾಗಿ ನಡೆದಿದೆ. ಅವುಗಳಿಗೆ ಚರಂಡಿ ನೀರನ್ನು ಬಿಟ್ಟು ನಾಶಮಾಡಲಾಗಿದೆ. ಬ್ರಿಟಿಷರು ಹೋದಮೇಲೆ ಸ್ವಾತಂತ್ರ್ಯ ಬಂದ ಮೇಲೂ ಭಾರೀ ಅಣೆಕಟ್ಟುಗಳ ಆಕರ್ಷಣೆ ಇನ್ನೂ ಹಾಗೆ ಇದೆ. ಅವುಗಳ ಜತೆಗೆ ಕೊಳವೆ ಬಾವಿಗಳನ್ನು ತೆಗೆಯುವುದು ಹೆಚ್ಚಾಗಿದೆ. ಕೆರೆಗಳ ಜತೆಗೆ ಸೇದೋ ಬಾವಿಗಳು ಬರಿದಾಗಿವೆ.

ಇದುವರೆಗೂ ಸರ್ಕಾರಕ್ಕೆ ನೀರಿನ ಸಮಸ್ಯೆಗೆ ತಕ್ಷಣ ಹೊಳೆಯುತ್ತಿದ್ದ ಪರಿಹಾರಗಳು ಭಾರೀ ಅಣೆಕಟ್ಟುಗಳು ಮತ್ತು ಕೊಳವೆ ಬಾವಿಗಳು; ಈ ಎರಡು ಪರಿಹಾರಗಳಿಂದ ಲಾಭ ನಷ್ಟ ಸರಿಸಮನಾಗಿವೆ. ಲಾಭದಲ್ಲಿ ಮುಖ್ಯವಾಗಿರುವುದು ಭಾರತದಲ್ಲಿ ‘ಹಸಿರುಕ್ರಾಂತಿ’ ಸಾಧ್ಯವಾಯಿತು ಮತ್ತು ಧಾನ್ಯಗಳನ್ನು ವಿಫುಲವಾಗಿ ಬೆಳೆಯಲು ಸಾಧ್ಯವಾಯಿತು. ಆದರೆ ಭಾರೀ ಅಣೆಕಟ್ಟುಗಳನ್ನು ಕಟ್ಟುವಲ್ಲಿ ಅದರ ನಷ್ಟವೂ ಗಣನೀಯವಾಗಿದೆ. ಆಲಮಟ್ಟಿ ಅಂತಹ ಅಣೆಕಟ್ಟನ್ನು ಕಟ್ಟುವುದಕ್ಕೆ ಅನೇಕ ವರ್ಷಗಳು ಬೇಕಾಗುತ್ತವೆ. ಕಟ್ಟುವಾಗ ಬಹಳ ಹಣ ಪೋಲಾಗುತ್ತದೆ. ಕಟ್ಟುವ ಸ್ಥಳದಲ್ಲಿರುವವರ ಸ್ಥಳಾಂತರದಿಮದ ಮನೆಮಠಗಳನ್ನು ಕಳೆದುಕೊಂಡವರ ಪುನರ್ ವಸತಿಯನ್ನು ಏರ್ಪಡಿಸುವುದು ಸುಲಭ ಸಾಧ್ಯವಿಲ್ಲ. ಅವರ ಗತಿಯನ್ನು ಊಹಿಸಲಾಗುವುದಿಲ್ಲ. ಆದ್ದರಿಂದ ಇಂಥವರು ಮತ್ತು ಪರಿಸರವಾದಿಗಳು ಭಾರೀ ಅಣೆಕಟ್ಟುಗಳನ್ನು ವಿರೋಧಿಸುತ್ತಾರೆ. ಪರಿಸರವಾದಿಗಳ ಪ್ರಕಾರ ಭಾರೀ ಅಣೆಕಟ್ಟುಗಳಿಂದ ಅರಣ್ಯಗಳು ಹಾಳಾಗುತ್ತವೆ. ಅವುಗಳು ಹಾಳಾಗುವುದರಿಂದ ಮಳೆ ಕಡಿಮೆಯಾಗುತ್ತ ಹೋಗುತ್ತದೆ. ಆದ್ದರಿಂದ ಈ ಅಣೆಕಟ್ಟುಗಳನ್ನು ಕಟ್ಟುವುದಕ್ಕಿಂತ ಅರಣ್ಯಗಳನ್ನು ಬೆಳೆಸುವುದರಿಂದ ನೀರಿನ ಸಮಸ್ಯೆಯನ್ನು ಅತಿ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಬಿಡಿಸಬಹುದೆನ್ನುತ್ತಾರೆ.

ಕೊಳವೆ ಬಾವಿಗಳಿಂದ ಲಾಭವೆಂದರೆ ಅವುಗಳನ್ನು ಒಂದು ದಿನದಲ್ಲಿ ನಿರ್ಮಿಸಬಹುದು. ವಿದ್ಯುಚ್ಫಕ್ತಿಯ ಪಂಪಿನಿಂದ ನೀರನ್ನು ಸುಲಭವಾಗಿ ಮೇಲೆತ್ತಬಹುದು. ಇವು ನಿಜವಾದರೂ ಈಚೆಗೆ ಅವುಗಳಿಂದ ಆಗುವ ಅನಾಹುತಗಳನ್ನು ನಾವು ನೋಡುತ್ತಿದ್ದೇವೆ. ಮೊದಲನೆಯ ನಷ್ಟ ಅವುಗಳಿಂದ ಸೇದೋ ಬಾವಿಗಳೆಲ್ಲಾ ಖಾಲಿಯಾಗಿವೆ. ಈಚೆಗೆ ಕೊಳವೆ ಬಾವಿಗಳ ಉಪಯೋಗ ಹೆಚ್ಚಾಗಿ ಅವುಗಳ ಆಳವನ್ನು ಹೆಚ್ಚಿಗೆ ಮಾಡುತ್ತಾ ಹೋಗುವುದು ಅನಿವಾರ್ಯವಾಗಿದೆ. ಕೆಳಕ್ಕೆ ಹೋದ ಹಾಗೆ ಕಲುಷಿತ ನೀರು ಅವುಗಳಿಂದ ಬರಹತ್ತಿದೆ. ಈ ನೀರಿನಿಂದ ರೋಗರುಜಿನಗಳು ಬೆಳೆಯತೊಡಗಿವೆ.

ಹೀಗಿದ್ದರೂ, ಭಾರೀ ಅಣೆಕಟ್ಟುಗಳನ್ನಾಗಲಿ, ಕೊಳವೆ ಬಾವಿಗಳನ್ನಾಗಲಿ ಕೈಬಿಡುವ ಹಾಗಿಲ್ಲ. ಎಲ್ಲಿ ಸಾಧ್ಯವೊ ಅಲ್ಲಿ ಅಣೆಕಟ್ಟುಗಳನ್ನು ಕಟ್ಟಲೇಬೇಕು. ಆದರೆ ಅವುಗಳಿಂದಾಗುವ ಖರ್ಚನ್ನು ಕಡಿಮೆ ಆಗುವ ಹಾಗೆ ಎಚ್ಚರಿಕೆ ವಹಿಸಬೇಕು. ಕೊಳವೆ ಬಾವಿಗಳನ್ನು ನಿರ್ಮಿಸಲೇಬೇಕು. ಅವುಗಳ ಜೊತೆಗೆ ಕೆರೆಗಳ ಪುನರುದ್ಧಾರವನ್ನು ಮಾಡಿದರೆ ಇಂತಹ ಬಾವಿಗಳಲ್ಲಿ ನೀರು ಸಮೃದ್ಧವಾಗಿ ದೊರೆಯುವುದು. ಕೆರೆಗಳ ಪುನರುದ್ಧಾರ ಮಾಡುವಾಗ, ಕೆಲವು ಮುನ್ನೆಚ್ಚರಿಕೆಗಳನ್ನು ಮರೆಯಬಾರದು.

೧. ಮಾನ್ಯ ಶ್ರೀ ಕುಮಾರ ಬಂಗಾರಪ್ಪನವರು ಸಣ್ಣ ನೀರಾವರಿ ಸಚಿವರಾದ ಮೇಲೆ ರಾಜ್ಯದ ಕೆರೆಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ವಿಶ್ವಬ್ಯಾಂಕ್‌ನಿಂದ ನೆರವನ್ನು ದೊರಕಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ಆದರೆ ಪುನರುದ್ಧಾರದ ಕೆಲಸ ನಡೆದಾಗ ಗ್ರಾಮ ಪಂಚಾಯಿತಿಗಳನ್ನು ಈ ಕೆಲಸದಲ್ಲಿ ತೊಡಗಿಸಬೇಕು. ಜೀರ್ಣೋದ್ಧಾರವಾದ ಮೇಲೆ ಆ ಕೆರೆಗೆ ಸಂಬಂಧಪಟ್ಟ ಎಲ್ಲಾ ಜವಾಬ್ದಾರಿಯನ್ನು ಆ ಸಂಸ್ಥೆಗಳಿಗೆ ವಹಿಸಬೇಕು. ಈ ಜವಾಬ್ದಾರಿಯನ್ನು ಸರ್ಕಾರವು ಹೊರಬಾರದು. ಈ ಪಾಠವನ್ನು ನಮ್ಮ ಕೆರೆಗಳ ಪೂರ್ವೇತಿಹಾಸದಿಂದ ಕಲಿಯಬೇಕು.

೨. ಕೆರೆಗಳಲ್ಲಿನ ಹೂಳು ತೆಗೆಯಿಸುವುದು ಮತ್ತು ಹೂಳು ತೆಗೆದ ಮಣ್ಣನ್ನು ಹೊಲಗಳಿಗೆ ಸಾಗಿಸುವುದು ನಿರಂತರ ಕ್ರಿಯೆಯಾಗಿ ನಡೆಯಬೇಕು. ಗ್ರಾಮೀಣ ಜನಗಳ ಸಹಾಯವು ಈ ಕೆಲಸದಲ್ಲಿ ಅತ್ಯಗತ್ಯ. ಕೆರೆಮಣ್ಣಿನ ಫಲವತ್ತತೆ ಬಗ್ಗೆ ನೀರಾವರಿ, ಕೃಷಿ ಮತ್ತು ಕಂದಾಯ ಖಾತೆಯವರು ಸಂಯುಕ್ತವಾಗಿ ಪ್ರಸಾರ ಮಾಧ್ಯಮಗಳ ಮತ್ತು ಗ್ರಾಮಸಭೆಗಳ ಮುಖಾಂತರ ಜನರಿಗೆ ತಿಳಿಸಬೇಕು. ಪ್ರಾತ್ಯಕ್ಷಿಕ ಕಾರ್ಯಗಾರಗಳು ನಡೆಯಬೇಕು. ಹೀಗೆ ಮಾಡಿದರೆ ಗ್ರಾಮಸ್ಥರು ಬೇಸಿಗೆಯಲ್ಲಿ ಟ್ರಾಕ್ಟರ್ ಮತ್ತು ಚಕ್ಕಡಿಗಳಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೂ ತಮ್ಮ ಜಮೀನಿಗೆ ಹೂಳು ಮಣ್ಣನ್ನು ಹಾಕಿ ಅದನ್ನು ಫಲವತ್ತಾಗಿ ಮಾಡಿಕೊಳ್ಳಬಹುದು. ಕೆಲವು ಗ್ರಾಮದ ರೈತರು ಹೀಗೆ ಮಾಡಿ ರಾಜ್ಯಮಟ್ಟದಲ್ಲಿ ಕೃಷಿ ಪ್ರಶಸ್ತಿ ಸಂಪಾದಿಸುತ್ತಿದ್ದಾರೆ. ಇದು ಇತರರಿಗೆ ಅನುಕರಣೀಯವಾಗಬೇಕು.

೩. ನಮ್ಮ ಕೆರೆಗಳ ಈಗಿನ ದುಸ್ಥಿತಿಗೆ ಕೆಳಗಿನ ಕಾರಣಗಳನ್ನು ಹೇಳಬಹುದು. ಒಂದನೆಯದು ಪಟ್ಟಣಗಳು ಬೆಳೆಯುತ್ತಿರುವುದರಿಂದ, ಅದರ ಸುತ್ತಮುತ್ತಲ ಪ್ರದೇಶದಲ್ಲಿರುವ ಕೆರೆಗಳು ಕಸದ ಗುಂಡಿಗಳಾಗಿ, ಅವುಗಳ ವಿನಾಶವು ಆರಂಭವಾಗುತ್ತದೆ. ಮನೆ ಕಟ್ಟಲಿಕ್ಕೆ ಸ್ಥಳ ಬೇಕಾಗುವುದರಿಂದ ಹಳೆಯ ಕೆರೆ ಬಯಲುಗಳು ಹೊಸ ನಿವೇಶನಗಳಾಗುತ್ತವೆ.

ಎರಡನೇಯದಾಗಿ, ಪಟ್ಟಣಗಳಲ್ಲಿ ಕೆರೆಗಳು ಹೀಗೆ ನಾಶವಾದರೆ, ಹಳ್ಳಿಗಳಲ್ಲಿ ಅವುಗಳ ಜಲಾನಯನ ಪ್ರದೇಶ ಅಥವಾ ಕೆರೆಗೆ ನೀರು ಹರಿದು ಬರುವ ಪ್ರದೇಶವನ್ನು ಸರ್ಕಾರದವರು ತಮಗೆ ಸೇರಿದ್ದೆನ್ನುವ ತಪ್ಪು ಕಲ್ಪನೆಯಿಂದ ಭೂರಹಿತ ಬಡವರಿಗೆ ದಾನ ಮಾಡುತ್ತಿದ್ದಾರೆ ಅಥವಾ ಹಳ್ಳಿಗಳಲ್ಲಿ ಗಟ್ಟುಳ್ಳವರು ಈ ಜಲಾನಯನ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಹೀಗೆ ಎರಡು ಕಾರಣಗಳಿಂದ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ.

ಮೂರನೆಯದಾಗಿ, ಹಿಂದೆ ಎಲ್ಲಾ ಕೆರೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟಿರುತ್ತಿದ್ದರು. ಈ ಗಿಡಗಳು ಮಳೆಯ ರಭಸವನ್ನು ತಡೆದು ಕೆರೆಯಲ್ಲಿ ನಿಧಾನವಾಗಿ ನೀರು ಸಂಗ್ರಹವಾಗುವ ಹಾಗೆ ಮಾಡುತ್ತಿದ್ದವು ಮತ್ತು ಕೆರೆಯಲ್ಲಿ ಹೂಳು ಸೇರುವುದನ್ನು ಕಡಿಮೆ ಮಾಡುತ್ತಿದ್ದವು ಈಗ ಅವುಗಳಿಲ್ಲ.

ಫೆಬ್ರವರಿ ೨೦೦೧ರಲ್ಲಿ ಶ್ರೀ ಎ.ಎನ್. ಯಲ್ಲಪ್ಪರೆಡ್ಡಿ ಸಮಿತಿಯವರು ನೀರಾವರಿ ಯೋಜನೆಗಳ ಕಾಲುವೆ ಜಾಲದುದ್ದಕ್ಕೂ ಮರಗಳನ್ನು ಬೆಳೆಸಬೇಕೆಂದು ಸಲಹೆ ಮಾಡಿದ್ದಾರೆ. ಇದೇ ಪದ್ಧತಿಯನ್ನು ಕೆರೆಗಳ ಮತ್ತು ಅವುಗಳ ಕಾಲುವೆಗಳ ಉದ್ದಕ್ಕೂ ಅನುಸರಿಸಿ ಗಿಡಮರಗಳನ್ನು ಬೆಳೆಸಿದರೆ ಅವುಗಳಲ್ಲಿ ಹೂಳು ಶೇಖರವಾಗುವುದು ಕಡಿಮೆಯಾಗುವುದು. ಅರಣ್ಯಗಳಿಗೂ ಮತ್ತು ನೀರಿಗೂ ನಿಕಟ ಸಂಬಂಧವಿದೆ. ಅಣೆಕಟ್ಟುಗಳ ಕೆಲಸವನ್ನು ಗಿಡಗಳು ಕಡಿಮೆ ಖರ್ಚಿನಲ್ಲಿ ಮಾಡಬಲ್ಲವೆನ್ನುವುದನ್ನು ನಾವು ಹಿಂದೆ ನೋಡಿದ್ದೇವೆ. ಜತೆಗೆ ಜಲಜಂತು ಮತ್ತು ಪಕ್ಷಿಗಳ ಸಂರಕ್ಷಣೆ, ಮೀನುಗಾರಿಕೆಯ ಬೆಳವಣಿಗೆ ಇವನ್ನೆಲ್ಲಾ ಕೆರೆಗಳು ಮಾಡುತ್ತವೆ. ಇವೆಲ್ಲದರ ಜತೆಗೆ ಅಂತರ್ಜಲವು ಹೆಚ್ಚಾಗುವುದು ಅವುಗಳಿಂದ ನಮಗಾಗುವ ಅತಿ ಮಹತ್ವದ ಲಾಭ. ಈಗ ಅಂತರ್ಜಲವೇ ಭಾರತದಲ್ಲಿ ನೀರು ಸರಬರಾಜುವಿನಲ್ಲಿ ಮೊದಲನೆಯ ಸ್ಥಾನದಲ್ಲಿರುವುದರಿಂದ ಅದರ ಅಭಿವೃದ್ಧಿಗೆ ನಾವು ಹೆಚ್ಚು ಗಮನ ಕೊಡಬೇಕು.

ಕೊಳವೆ ಬಾವಿಗಳ ಆಳವನ್ನು ಕಡಿಮೆ ಮಾಡುವುದಕ್ಕೆ ಕೆರೆಗಳ ಜತೆಗೆ ಸರ್ಕಾರದವರು ಚಿಕ್ಕ ಡ್ಯಾಂಗಳ ಕಟ್ಟಡಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಿದ್ದಾರೆ. ಇವುಗಳನ್ನು ಕಟ್ಟುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡಬೇಕಾಗುತ್ತದೆ. ಶ್ರೀ ಜಯಚಂದ್ ಜೈನ ಎನ್ನುವವರ ಪ್ರಕಾರ ಕೊಳವೆ ಬಾವಿಗಳನ್ನು ನದಿಯ, ಕಾಲುವೆಗಳ, ಹಳ್ಳಿಗಳ ಪಕ್ಕದಲ್ಲಿ ನಿರ್ಮಿಸಿದರೆ, ಪ್ರವಾಹ ಬಂದಾಗ, ಈ ಬಾವಿಗಳು ಅಂತರ್ಜಲವನ್ನು ಹೆಚ್ಚಿಸುತ್ತಾ ಹೋಗುತ್ತವೆ. ವಿಶೇಷ ಖರ್ಚಿಲ್ಲದೆ ಕೊಳವೆ ಬಾವಿಗಳಲ್ಲಿ ನೀರು ವಿಫುಲವಾಗಿ ಸಂಗ್ರಹವಾಗುತ್ತದೆಂದು ಅವರು ಅನ್ನುತ್ತಾರೆ.

ಮನೆಗಳನ್ನು ಕಟ್ಟುವಾಗ ಮೇಲ್ಭಾವಣಿಯಿಂದ ನೀರು ಸಂಗ್ರಹವಾಗುವ ಹಾಗೆ ಕಟ್ಟಿದರೆ, ಸಂಗ್ರಹವಾದ ನೀರಿನಿಂದ ಸ್ವಲ್ಪಮಟ್ಟಿಗೆ ಆದರೂ ಸಹಾಯವಾಗುವುದು; ಬಹು ಮಹಡಿ ಕಟ್ಟಡಗಳ ಮೇಲ್ಭಾವಣಿಯಿಂದ ಹೆಚ್ಚು ನೀರನ್ನು ಸಂಗ್ರಹಿಸಬಹುದು. ಈ ವ್ಯವಸ್ಥೆ ಅಷ್ಟು ದುಬಾರಿಯಲ್ಲ ಅಥವಾ ಒಂದೂವರೆ ಲಕ್ಷದಲ್ಲಿ ಈ ವ್ಯವಸ್ಥೆ ಮಾಡಬಹುದು. ಹಾಗೆ ಮಾಡಿದವರಿಗೇ ಕಾರ್ಪೋರೇಷನ್ನಿನವರು ನೀರು ಒದಗಿಸುವರೆಂದು ಕಾನೂನಿನಲ್ಲಿ ಹೇಳಬಹುದು. ತಮಿಳುನಾಡಿನಲ್ಲಿ ಹೀಗೆ ಮಾಡಿದೆ.

ಕೊನೆಯದಾಗಿ, ಜನರು ನೀರಿನ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲಿ ತಮ್ಮ ಪಾತ್ರವನ್ನು ಕಂಡುಕೊಳ್ಳಬೇಕು. ಸರ್ಕಾರದವರು ಭಾರೀ ಅಣೆಕಟ್ಟುಗಳ ಮೇಲಿನ ವ್ಯಾಮೋಹ ಕಡಿಮೆ ಮಾಡಿ, ಕೆರೆಗಳ ಪುನರುದ್ಧಾರಕ್ಕೆ ಮತ್ತು ಇತರ ಮಾರ್ಗಗಳಿಂದ ಅಂತರ್ಜಲ ವೃದ್ಧಿಯಾಗುವ ಹಾಗೆ ನೋಡಿಕೊಳ್ಳಬೇಕು.