ನಮ್ಮ ಕೆರೆಗಳ ನಿರ್ಮಾಣದಲ್ಲಿ ನಮ್ಮ ಪೂರ್ವಿಕರು ಅಳವಡಿಸಿಕೊಂಡಿರುವ ವಿಧಾನಗಳ ಬಗ್ಗೆ ನಮಗೆ ಸಿಗುವ ಮಾಹಿತಿ ಬಹುಮಟ್ಟಿಗೆ ಇಲ್ಲವೇ ಇಲ್ಲ ಎನ್ನಬಹುದು. ಅವರು ಕಟ್ಟೆಯ ಎರಡು ಕಡೆಯ ಇಳಿಜಾರುಗಳನ್ನು ಯಾವ ಸೂತ್ರವನ್ನು ಅವಲಂಬಿಸಿ ನಿರ್ಮಿಸುತ್ತಿದ್ದರು, ಕೋಡಿಯನ್ನು ನಿರ್ಮಿಸುವಾಗ ಯಾವ ಅಂಶವನ್ನು ಅನುಸರಿಸುತ್ತಿದ್ದರು, ಈ ಬಗೆಯ ಪ್ರಶ್ನೆಗಳಿಗೆ ನಮಗೆ ಯಾವ ಉತ್ತರವೂ ಸಿಗುವುದಿಲ್ಲ. ನಮ್ಮ ಪೂರ್ವಿಕರು ಯಾವ ಲಿಖಿತ ದಾಖಲೆಯನ್ನು ಇಟ್ಟಿರುವುದಿಲ್ಲ. ಅಲ್ಪಸ್ವಲ್ಪ ಈ ವಿಷಯವಾಗಿ ನಮಗೆ ಮಾಹಿತಿ ಸಿಗುವುದು. ಪೌರ ಮಾಮಿಲ ಶಾಸನದಿಂದ. ಪೌರ ಮಾಮಿಲ ಇರುವುದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಡವೇಲು ತಾಲ್ಲೂಕಿನಲ್ಲಿ. ಕೆರೆಯ ಹೆಸರು ಅನಂತರಾಜಸಾಗರ. ಇದನ್ನು ಕಟ್ಟಿದ್ದು ೧೪ನೆಯ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ.

ಈ ಶಾಸನದಿಂದ ನಮಗೆ ತಿಳಿಯುವ ಮುಖ್ಯ ಅಂಶವೆಂದರೆ, ಕೆರೆ ಕಟ್ಟಲು ಮುಖ್ಯವಾದ ಅಂಶಗಳಾದ ಕಟ್ಟೆಯ ಭದ್ರವಾದ ಬುನಾದಿ ಮತ್ತು ಕೆರೆಯ ಅಂಗಳ ನೀರು ಸೋರಿಹೋಗದಿರುವಂತಹ ಭೂಮಿಯಾಗಿರಬೇಕೆಂಬುದರ ಬಗ್ಗೆ ಮಹತ್ವವನ್ನು ಕೊಟ್ಟಿದ್ದು. ಈ ಅಂಶಗಳು ಇಂದಿಗೂ ಗಣನೀಯವಾದ ಅಂಶವಾಗಿವೆ. ಕೆರೆ, ಜಲಾಶಯಗಳ ನಿರ್ಮಾಣದಲ್ಲಿ ಇದರಿಂದ ನಮಗೆ ತಿಳಿಯುವುದೇನೆಂದರೆ, ನಮ್ಮ ಪೂರ್ವಿಕರು ಕೆರೆ ನಿರ್ಮಾಣದಲ್ಲಿ ವಿಶಿಷ್ಟವಾದ ವೈಜ್ಞಾನಿಕ ದೃಷ್ಟಿಯನ್ನು ಪಡೆದಿದ್ದರು.

ಆ ಕಾಲದಲ್ಲಿ ಸುಲಭವಾಗಿ ಸಿಗುತ್ತಿದ್ದ ಮಣ್ಣು, ಕಲ್ಲನ್ನು ಉಪಯೋಗಿಸಿಯೇ ಎಲ್ಲ ನಿರ್ಮಾಣವು ನಡೆಯುತ್ತಿತ್ತು. ಅಲ್ಲದೆ ಬೃಹತ್ ಜಲಾಶಯಗಳನ್ನು ಕಟ್ಟಲು ಅವರಿಗೆ ಅವಶ್ಯಕತೆಯೂ ಇರಲಿಲ್ಲ. ಪ್ರತಿಯೊಂದು ಗ್ರಾಮವೂ ತನ್ನ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳುವ ಸಾಮರ್ಥ್ಯವನ್ನು ಪಡೆದಿರುತ್ತಿತ್ತು. ಅವಶ್ಯಕತೆಗಳು ಅಷ್ಟು ಹೆಚ್ಚಿನವಾಗಿರುತ್ತಿರಲಿಲ್ಲ. ಆದ್ದರಿಂದ ಅಂದಿನ ಕೆರೆ ಕಟ್ಟಡಗಳೆಲ್ಲವು ತಮ್ಮ ಗ್ರಾಮಕ್ಕೆ ಸೀಮಿತವಾಗಿರುತ್ತಿದ್ದವು. ಅವುಗಳಲ್ಲಿ ವಿಶೇಷವಾದ ವೈಶಿಷ್ಟ್ಯಗಳು ಇರುತ್ತಿರಲಿಲ್ಲ. ಕೆರೆಗಳ ಬಗ್ಗೆ ನಾವು ತಿಳಿಯಬೇಕಾದರೆ ಇಂದಿಗೂ ಉಳಿದಿರುವ ಹಲವು ಕೆರೆಗಳನ್ನು ಪರಿಶೀಲಿಸಿದರೆ ನಮಗೆ ನಮ್ಮ ಪೂರ್ವಿಕರ ಕುಶಲತೆ, ವಿಶಿಷ್ಟ ದೃಷ್ಟಿಯ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಸಿಗುತ್ತದೆ. ಈ ದಿಶೆಯಲ್ಲಿ ನಾವು ಮದಗಮಾಸೂರು ಕೆರೆ, ರಾಮಸಾಗರ ಕೆರೆ, ತೊಣ್ಣೂರು ಕೆರೆ, ರಾಯರ ಕೆರೆಗಳ ಬಗ್ಗೆ ಪರಿಶೀಲಿಸಬಹುದು.

ಮದಗಮಾಸೂರು ಕೆರೆ, ಹಿರೇಕೆರೂರು ತಾಲ್ಲೂಕಿನ ಮಾಸುರು ಗ್ರಾಮದಲ್ಲಿದೆ. ಇದನ್ನು ವಿಜಯನಗರ ಅರಸರ ಕಾಲದಲ್ಲಿ ಕಟ್ಟಿದ್ದು. ಕೆರೆ ಕಟ್ಟೆ ಸುಮಾರು ನೂರು ಅಡಿ ಎತ್ತರ ತಳದಲ್ಲಿ ಇದರ ಅಗಲ ೮೦೦ ಅಡಿ. ಕಟ್ಟೆಯ ಮೇಲ್ಭಾಗದಲ್ಲಿ ಇದರ ಅಗಲ ೪೦೦ ರಿಂದ ೬೦೦ ಅಡಿ. ಕಟ್ಟೆಯ ಉದ್ದ ಸುಮಾರು ೧೮೫೦ ಅಡಿ. ಬೃಹದಾಕಾರದ ಈ ಕಟ್ಟಡ ಸುಮಾರು ೧೦ ಲಕ್ಷ ಘನ ಅಡಿಗಳಷ್ಟು, ಇಲ್ಲಿ ತೂಬಿಗೆ ಮತ್ತು ಒಳ ಇಳಿಜಾರಿಗೆ ಉಪಯೋಗಿಸಿರುವ ಕಲ್ಲುಗಳು ಮಹಾಗಾತ್ರದವು. ತೂಬಿನ ನಿರ್ಮಾಣಕ್ಕೆ ಉಪಯೋಗಿಸಿರುವ ಒಂದೊಂದು ಕಲ್ಲು ಸ್ಥಂಬ ಸುಮಾರು ೨೦ ಟನ್ನುಗಳಷ್ಟು. ಈ ಬೃಹದಾಕಾರದ ಕಟ್ಟಡ ಕಟ್ಟಲು ಉಪಯೋಗಿಸಲಾದ ನಿರ್ಮಾಣ ವ್ಯವಸ್ಥೆ ನಿಜವಾಗಿಯೂ ಅಚ್ಚರಿ ಉಂಟುಮಾಡುತ್ತದೆ. ಇಂದು ನಿರ್ಮಾಣ ವ್ಯವಸ್ಥೆಯಲ್ಲಿ ಸುಲಭವಾಗಿ ಸಿಗುವಂತಹ ಯಂತ್ರೋಪಕರಣಗಳಿಲ್ಲದೆ ಕಟ್ಟಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಹಿಡಿದಿರಬಹುದು ಈ ಕೆರೆ ಕಟ್ಟಲು.

ಕೆರೆಯ ತೂಬಿನಿಂದ ನೀರು ೮೦೦ ಅಡಿ ಅಗಲದ ಕಟ್ಟೆಯನ್ನು ದಾಟಿ, ಹೊರ ಬರಬೇಕು. ಕೆರೆ ಕೆಳಗಿನ ಕಾಲುವೆಗೆ ಸೇರಬೇಕಾದರೆ, ಈ ಮಾರ್ಗವನ್ನು ಕಲ್ಲು ಬಂಡೆ ಇರುವ ಜಾಗದಲ್ಲಿಯೇ ನಿರ್ಮಿಸಿದ್ದಾರೆ. ಒಂದು ಸುರಂಗವನ್ನು ಕಟ್ಟಿದ್ದಾರೆ. ಸುರಂಗದ ಮೇಲು ಭಾಗಕ್ಕೆ ಭಾರಿ ಬಂಡೆಗಳನ್ನು ಹಾಸಿದ್ದಾರೆ. ಅದರ ಮೇಲೆ ಕಟ್ಟೆಯ ಮಣ್ಣನ್ನು ಹೇರಿದ್ದಾರೆ. ಈ ವ್ಯವಸ್ಥೆಯು ಒಂದು ವಿಶಿಷ್ಟವಾದ ವೈಜ್ಞಾನಿಕತೆಯ ನಿದರ್ಶನ. ಈ ಕೆರೆ ಎಷ್ಟೊ ಕಾಲ ಒಡೆದು ನಿಂತಿತ್ತು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ (೧೮೫೮-೧೮೬೨) ಇದರ ಪುನರೋದ್ಧಾರವಾಯಿತು. ಈ ಪುನರ್ ನಿರ್ಮಾಣ ಕೆಲಸವನ್ನು ಮಾಡಿದ ಅಂದಿನ ಇಂಗ್ಲೀಷ್ ಇಂಜನಿಯರ್ ಹೇಳಿರುವಂತೆ, ಯೂರೋಪಿನಲ್ಲಿರುವ ಮಹಾ ಜಲಾಶಯಗಳೆಲ್ಲವೂ ಮದಗ ಕೆರೆಯ ಮುಂದೆ ಪುಟಾಣಿಯಾಗಿದ್ದವಂತೆ.

ಈಗ ರಾಮಸಾಗರ ಕೆರೆಯ ವಿಷಯ ತಿಳಿಯೋಣ. ರಾಮಸಾಗರ ಇರುವುದು ಕೋಲಾರದಿಂದ ಸುಮಾರು ೨೦ ಮೈಲಿಗಳ ದೂರದಲ್ಲಿ. ಕರ್ನಾಟಕ ಮತ್ತು ತಮಿಳುನಾಡು ಸರಹದ್ದಿನಲ್ಲಿ ಪಾಲಾರ್ ನದಿಯು ಕೋಲಾರ ಜಿಲ್ಲೆಯಲ್ಲಿ ಹುಟ್ಟುತ್ತದೆ. ರಾಮಸಾಗರ ಕೆರೆ ಈ ನದಿಯ ೧೦೦೦ನೆಯ ಕೆರೆ. ನದಿಯು ತನ್ನ ೫೦ ಮೈಲಿ ಉದ್ದದ ಹಾದಿಯಲ್ಲಿ ೧೦೦೦ ಕೆರೆಗಳನ್ನು ಹೊಂದಿದೆ. ಮಳೆಯ ನೀರನ್ನು ಪೋಲಾಗದೆ ಬಳಸಿಕೊಳ್ಳಲು ನಮ್ಮ ಪೂರ್ವಿಕರು ನಿರ್ಮಿಸಿದ ಈ ವ್ಯವಸ್ಥೆ ನಿಜವಾಗಲು ಒಂದು ವಿಶಿಷ್ಟವಾದ ನಿಪುಣತೆಯ ಗುರುತು.

ರಾಮಸಾಗರದಲ್ಲಿ ಪಾಲಾರ್ ನದಿ ಎರಡಾಗಿ ಸೀಳಿ, ಹಲವು ಮೈಲುಗಳ ನಂತರ ಮತ್ತೆ ಕೂಡಿಕೊಂಡು ಒಂದಾಗುತ್ತೆ. ರಾಮಸಾಗರ ಕಟ್ಟೆ ಇರುವುದು ಈ ಎರಡಾಗಿ ಸೀಳಿರುವ ಭಾಗದಲ್ಲಿ. ಈ ಎರಡು ಸೀಳು ನದಿಗಳ ಪ್ರದೇಶದಲ್ಲಿ ಕಲ್ಲಿನ ಕಟ್ಟಡವನ್ನು ನಿರ್ಮಿಸಿ, ಈ ಭಾಗವನ್ನು ಕೋಡಿಯಾಗಿ ಉಪಯೋಗಿಸಿದ್ದಾರೆ. ಈ ಕೆರೆಯ ಕಾಲುವೆ ತೂಬುಗಳು ಈ ಕೋಡಿಯ ಕಟ್ಟೆಯಲ್ಲೇ ನಿರ್ಮಿತವಾಗಿವೆ. ತೂಬಿನಿಂದ ಹೊರಡುವ ಕಾಲುವೆ ನೀರು ಈ ಕೋಡಿಯಿಂದ ಹೊರಡುವ ನದಿಯನ್ನು ದಾಟಿ ಮುಂದೆ ಹೋಗಿ ದಡವನ್ನು ಸೇರಬೇಕಲ್ಲವೆ. ಈ ಕ್ರಮಕ್ಕೆ ಅವರು ಉಪಯೋಗಿಸಿರುವ ವ್ಯವಸ್ಥೆ ವಿಶಿಷ್ಟವಾದದ್ದು. ಇಲ್ಲಿರುವ ಮೂರು ಕಾಲುವೆಗಳಲ್ಲಿ, ಎಡದಂಡೆಯಲ್ಲಿರುವುದು ಎರಡು. ಬಲದಂಡೆಯಲ್ಲಿರುವುದು ಒಂದು. ಎರಡರ ನೀರನ್ನು ಕೋಡಿಗೆ ಒಂದು ಸುರಂಗ ಮಾರ್ಗವನ್ನು ನಿರ್ಮಿಸಿ, ದಡವನ್ನು ಸೇರಿಸಿದ್ದಾರೆ. ಮತ್ತೊಂದಕ್ಕೆ ನದಿಯಲ್ಲಿ ಒಂದು ಅಡ್ಡಕಟ್ಟೆಯನ್ನು ಕಟ್ಟಿ ದಡದಲ್ಲಿ ನಿರ್ಮಿತವಾದ ಕಾಲುವೆ ತೂಬಿಗೆ ಸೇರುವಂತೆ ಮಾಡಿದ್ದಾರೆ. ಈ ರೀತಿಯಾದ ವ್ಯವಸ್ಥೆ ಅಂದಿನ ಅವರ ಚಾತುರ‍್ಯಕ್ಕೆ ಸಾಕ್ಷಿ.

ರಾಮಸಾಗರದ ಮತ್ತೊಂದು ವಿಶಿಷ್ಟ ಅಂಶವೆಂದರೆ, ಅಲ್ಲಿನ ನೀರಾವರಿ ವ್ಯವಸ್ಥೆ. ನಮ್ಮಲ್ಲಿ ಸಾಧಾರಣವಾಗಿ ಎಲ್ಲ ಕಾಲುವೆಗಳು ೨೪ ಗಂಟೆಗಳ ಕಾಲ ಹರಿಯುವಂತೆ ರೂಪುಗೊಂಡಿರುತ್ತವೆ. ಸಾಧಾರಣವಾಗಿ ರಾತ್ರಿಯ ಹೊತ್ತಿನಲ್ಲಿ ಯಾರೂ ತಮ್ಮ ಭೂಮಿಗಳಿಗೆ ನೀರು ಹಾಯಿಸುವ ಗೋಜಿಗೆ ಹೋಗುವುದಿಲ್ಲ. ರಾತ್ರಿಯಲ್ಲಿ ನೀರು ಹೊಲಗಳಲ್ಲಿ ಹರಿದು ಹೋಗುತ್ತೆ. ಈ ರೀತಿ ರಾತ್ರಿಯ ವೇಳೆ ಪೊಲಾಗುವ ನೀರನ್ನು ಗಮನಿಸಿಯೇ ಇರಬೇಕು. ಕಾಲುವೆಗಳು ಹಗಲಿನ ೧೨ ಗಂಟೆಗಳ ಕಾಲಮಾತ್ರ ಹರಿಯುವ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ಈ ರೀತಿಯ ವ್ಯವಸ್ಥೆಯನ್ನು ನಮ್ಮ ಸಣ್ಣ ಕೆರೆಗಳಿಗೆ ಅಳವಡಿಸಿಕೊಳ್ಳಲಾಗುತ್ತಿದೆ. ಅಂದರೆ ನಮ್ಮ ಪೂರ್ವಿಕರು ಬಹು ಹಿಂದೆಯೇ ನೀರಿನ ವ್ಯಯದ ಬಗ್ಗೆ ಎಷ್ಟು ಕಾಳಜಿವಹಿಸುತ್ತಿದ್ದರು ಎಂದು ಇದು ತೋರಿಸುತ್ತದೆ.

ಈಗ ತೊಣ್ಣೂರು ಕೆರೆಯ ಬಗ್ಗೆ ನೋಡೋಣ. ಇದು ಶ್ರೀರಂಗಪಟ್ಟಣ ಸಮೀಪದಲ್ಲಿದೆ. ಈ ಕೆರೆ ಶ್ರೀ ವೈಷ್ಣವ ಗುರುಗಳಾದ ಶ್ರೀರಾಮಾನುಜಾಚಾರ‍್ಯರ ಕಾಲದಲ್ಲಿ, ಹನ್ನೊಂದನೆ ಶತಮಾನದಲ್ಲಿ ಕಟ್ಟಿರಬಹುದೆಂಬುದಾಗಿ ಊಹಿಸಲಾಗಿದೆ. ಸುಂದರವಾದ ಪ್ರದೇಶ, ಸೊಗಸಾದ ಕಲ್ಲಿನ ಕಟ್ಟಡ. ಈ ಕೆರೆಯ ವಿಶಿಷ್ಟ ರಚನೆ ಅದರ ಕೋಡಿ. ಇಲ್ಲಿ ಕೋಡಿ ಮತ್ತು ಕಾಲುವೆ ತೂಬು ಒಂದೆ ಆಗಿರುತ್ತದೆ. ಕೋಡಿಯಿಂದ ಹೊರಡುವ ಕಾಲುವೆ ಸ್ವಲ್ಪ ದೂರ ಹರಿದನಂತರ ಎರಡಾಗಿ ಸೀಳಾಗುತ್ತದೆ. ಒಂದು ಭಾಗದ ನೀರು ಬಲಭಾಗದಲ್ಲಿರುವ ನದಿಯ ಕಣಿವೆ ಸೇರುತ್ತದೆ. ಉಳಿದ ಭಾಗ ಮುಂದಕ್ಕೆ ಹೋಗಿ ನೀರಾವರಿ ಪ್ರದೇಶವನ್ನು ಸೇರುತ್ತದೆ. ಈ ಕೋಡಿ ಕಾಲುವೆಯನ್ನು ಬೆಟ್ಟದ ಬಂಡೆಯನ್ನು ಕೊರೆದು ನಿರ್ಮಿಸಿದೆ. ಕೋಡಿ ಕಾಲುವೆ ನೀರು ಹರಿಯುವ ರಭಸಕ್ಕೆ ಒಳ್ಳೆಯ ಕಲ್ಲಿನ ಜಾಡು ಇರಬೇಕೆಂದು ತಿಳಿದು, ಅದೇ ರೀತಿಯ ಸ್ಥಳವನ್ನೇ ತಮ್ಮ ಕಟ್ಟಡದ ನಿರ್ಮಾಣಕ್ಕೆ ಅಳವಡಿಸಿಕೊಳ್ಳುತ್ತಿದ್ದರು.

ನಾವು ಆರಿಸಿಕೊಂಡಿರುವ ಮತ್ತೊಂದು ಕೆರೆಯನ್ನು ಗಮನಿಸೋಣ. ರಾಯರ ಕೆರೆ, ಇದು ಹಂಪಿ ಪ್ರದೇಶದ ಹೊಸಪೇಟೆಯ ಸಮೀಪದಲ್ಲಿದೆ. ಈಗ ಈ ಕೆರೆ ಒಂದು ಒಣ ಪ್ರದೇಶ. ಹದಿನಾರನೆ ಶತಮಾನದಲ್ಲಿ ಕೃಷ್ಣದೇವರಾಯ ಕಟ್ಟಿಸಿದ ವೈಭವದ ಕೆರೆ. ಅಂದಿನ ರಾಜಧಾನಿಯಾದ ಹಂಪೆಯ ಹಲವಾರು ತೋಟಗಳಿಗೆ ನೀರು ಒದಗಿಸುತ್ತಿತ್ತು. ಈ ಕೆರೆಗೆ ತನ್ನದೆ ಆದ ಜಲಾನಯನ ಪ್ರದೇಶ ಸ್ವಲ್ಪ ಮಾತ್ರ. ಆದ್ದರಿಂದ ಈ ಕೆರೆಗೆ ಅದರ ಸಮೀಪದಲ್ಲೇ ಸುಮಾರು ಹತ್ತು ಮೈಲಿ ದೂರದಲ್ಲಿದ್ದ ಇನ್ನೊಂದು ಕೆರೆಯಿಂದ ನೀರನ್ನು ಹಾಯಿಸಿ, ರಾಯರ ಕೆರೆಯ ಅವಶ್ಯಕತೆಯನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಿದರು. ಇದು ಒಂದು ತಾಂತ್ರಿಕ ಕುಶಲತೆಯ ಸಂಕೇತ.

ಇಂದಿಗೂ ಈ ರೀತಿ ಒಂದು ಕಣಿವೆಯಿಂದ ಮತ್ತೊಂದು ಕಣಿವೆಗೆ ನೀರನ್ನು ತಿರುಗಿಸುವುದು ಸುಲಭವಾದ ಕೆಲಸವಲ್ಲ. ಕಷ್ಟವಾದ ಕೆಲಸವೇ, ಈ ಕೆಲಸವನ್ನು ಅಂದು ಸಾಧಿಸಿದ್ದರು ಎಂದರೇ ಅದು ವಿಶಿಷ್ಟವಾದ ವಿಷಯ.

ಕೆರೆಗೆ ಬರುವ ನೀರು ತನ್ನ ಜತೆ ಪ್ರವಾಹದಲ್ಲಿ ಕಲ್ಲು ಮಣ್ಣು ತರುತ್ತದೆ. ಅದು ಕೆರೆ ಅಂಗಳದಲ್ಲಿ ನಿಲ್ಲುತ್ತದೆ. ಕಾಲಕ್ರಮೇಣ ಕೆರೆಯಲ್ಲಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ನಮ್ಮ ಪೂರ್ವಿಕರು ಕೆರೆಗೆ ಬಂದು ಸೇರುವ ಎಲ್ಲಾ ಹಳ್ಳಗಳಲ್ಲಿ ಅಲ್ಲಲ್ಲೇ ಸಣ್ಣ ಕಟ್ಟೆಗಳನ್ನು ಕಟ್ಟಿ ಪ್ರವಾಹದಲ್ಲಿ ಬರುವ ಕಲ್ಲು ಮಣ್ಣನ್ನು ಅಲ್ಲಲ್ಲೇ ತಡೆ ಹಿಡಿದಿಡುತ್ತಿದ್ದರು. ಕೆರೆಯ ಅಂಗಳವನ್ನು ಸಂರಕ್ಷಿಸುತ್ತಿದ್ದರು. ಇದು ಸುಲಭವಾದ ಗಣನೀಯವಾದ ಉಪಾಯ. ಅವರ ದೂರ ದೃಷ್ಟಿಗೆ ಒಂದು ನಿದರ್ಶನ.

ಈ ಹಲವು ಕಟ್ಟಡಗಳ ಪರಿಶೀಲನೆಯಿಂದ ನಮಗೆ ತಿಳಿಯುವುದೇನೆಂದರೆ, ನಮ್ಮ ಪೂರ್ವಿಕರಿಗೆ ಸಾಕಷ್ಟು ತಾಂತ್ರಿಕ ಜ್ಞಾನ, ಜಲಶಾಸ್ತ್ರದ ವಿಜ್ಞಾನವು ಇತ್ತು. ಆದರೆ ಅವರು ತಮ್ಮ ಜ್ಞಾನ ಭಂಡಾರವನ್ನು ಕ್ರೋಢೀಕರಿಸಿ, ನಮಗೆ ಲಭ್ಯವಾಗುವಂತೆ ಯಾವ ಲಿಖಿತ ಗ್ರಂಥವನ್ನು ಬಿಟ್ಟುಹೋಗಿಲ್ಲ.