ಸೊರಬ ತಾಲ್ಲೂಕಿನ ಕೆರೆಗಳ ಮಹತ್ವ ಕುರಿತು ಅಧ್ಯಯನ ಮಾಡುವಲ್ಲಿ ನೆರವಾದ ಅಂಶಗಳಲ್ಲಿ ಮುಖ್ಯವಾದುದು ಈ ತಾಲ್ಲೂಕಿನ ಶಾಸನಗಳು. ಅವನ್ನು ಎಪಿಗ್ರಾಫಿಯ ಕರ್ನಾಟಕ – VIII ಮತ್ತು ಮೈಸೂರು ಆರ‍್ಕಿಲಾಜಿಕಲ್ ರಿಪೋರ್ಟ್ – ೧೯೪೧ ರಿಂದ ತೆಗೆದುಕೊಳ್ಳಲಾಗಿದೆ. ನಂತರ ಶಾಸನ ಉಲ್ಲೇಖವನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಗಳ ಅಧ್ಯಯನ ನಡೆಸಲಾಗಿದೆ. ಸ್ಥಳ ಅಧ್ಯಯನದಲ್ಲಿ ಸ್ಥಳೀಕರಿಂದ ಹಾಗೂ ಪ್ರತ್ಯಕ್ಷ ಅಲ್ಲಿನ ಕೆರೆಗಳ ಸ್ಥಿತಿ, ಹಂಚಿಕೆ ವಿಧಾನ, ಕೆರೆಗೆ ಬರುವ ನೀರಿನ ಮೂಲ, ನೀರಾವರಿ ಪ್ರದೇಶ ಹಾಗೂ ಜಾನಪದ, ಐತಿಹಾಸಿಕ ಕುರುಹುಗಳನ್ನು ಗುರುತಿಸಲಾಗಿದೆ. ಕೆರೆಗೆ ಸಂಬಂಧಿಸಿದ ನಕಾಶೆ, ಟಿಪ್ಪಣಿ, ಕೃಷಿಭೂಮಿ ಇತ್ಯಾದಿ ವಿವರಗಳಿಗಾಗಿ ಕೃಷಿ, ಸಣ್ಣ ನೀರಾವರಿ, ಭೂ ಮಾಪನ, ರಾಜಸ್ವ ಇಲಾಖೆಗಳ ನೆರವು ಪಡೆಯಲಾಗಿದೆ.

ಕೆರೆಯ ಅಧ್ಯಯನಕ್ಕೂ ಮುನ್ನ ಈ ತಾಲ್ಲೂಕಿನ ಭೌಗೋಳಿಕ ಅಂಶಗಳನ್ನು ಗಮನಿಸಬೇಕಾಗುತ್ತದೆ. ತಾಲ್ಲೂಕಿನ ವಿಸ್ತೀರ್ಣ ಸುಮಾರು ೧೧೪೭೬೭ ಹೆಕ್ಟರ್. ಇದರಲ್ಲಿ ಕೃಷಿ ಯೋಗ್ಯ ಭೂಮಿ ಸುಮಾರು ೫೨,೦೦೦ ಹೆಕ್ಟೇರ್ ಮಾತ್ರ. ನೀರಾವರಿಯಾದ ಪ್ರದೇಶ ಸುಮಾರು ೨೨,೫೦೬ ಹೆಕ್ಟೇರ್‌ಗಳಷ್ಟಿದೆ. ತಾಲ್ಲೂಕಿನ ಒಟ್ಟು ೨೭೮ ಗ್ರಾಮಗಳಿಗೆ ಒಟ್ಟು ೧೧೮೭ ಕೆರೆಗಳಿವೆ. ಈ ಕೆರೆಗಳಿಗೆ ಮಳೆಯೇ ಪ್ರಮುಖ ಮೂಲ. ವಾರ್ಷಿಕ ವರದಿಯನ್ವಯ ಇಲ್ಲಿ ೧೭೧೭ಮೀ.ಮೀ. ನಷ್ಟು ಮಳೆಯಾಗುತ್ತಿದೆ.

ಈ ಪ್ರದೇಶ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಿಂದ ಕೂಡಿದ್ದು ಅರೆಮಲೆನಾಡು ಕಪ್ಪು ಎರೆ + ಮರಳು ಮಿಶ್ರ ಹಾಗೂ ಮಲೆನಾಡು ಜಂಬಿಟ್ಟಿಗೆ + ಮರಳು ಮಿಶ್ರ ಮಣ್ಣಿನಿಂದ ಕೂಡಿದೆ. ಪಶ್ಚಿಮ ದಿಕ್ಕು ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿಗೆ ಅಂಟಿಕೊಂಡಿದ್ದು, ಗುಡ್ಡ, ಕುರುಚಲು, ಅರಣ್ಯವನ್ನು ಹೊಂದಿದೆ. ತಾಲ್ಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದು, ಇಲ್ಲಿನ ಮುಖ್ಯ ಬೆಳೆ ಭತ್ತ.

ಕೆರೆಗಳ ಐತಿಹಾಸಿಕ ಮಹತ್ವ, ನಿರ್ಮಾತೃ, ನಿರ್ವಹಣೆ ಇತ್ಯಾದಿ

ತಾಲ್ಲೂಕಿಗೆ ಕ್ರಿ.ಶ. ೨ನೇ ಶತಮಾನದಿಂದ ಐತಿಹಾಸಿಕ ಮಹತ್ವವಿದೆ. ಅದೇ ಇಲ್ಲಿನ ಕೆರೆಗಳಿಗೆ ಕ್ರಿ.ಶ. ೮ ರಿಂದ ೧೭ನೇ ಶತಮಾನಗಳ ಐತಿಹಾಸಿಕ ಆಧಾರವಿದೆ.

ಪ್ರಸ್ತುತ ಮೊಟ್ಟ ಮೊದಲು ಕೆರೆಯ ಕುರಿತು ಉಲ್ಲೇಖಿಸಿರುವ ಶಾಸನ ಕ್ರಿ.ಶ. ೭೦೦ರ ಹಿರೇಮಾಗಡಿಯ ಶಾಸನ.

[1] ಇಲ್ಲಿ ಕೆರೆ, ಹೂದೋಟ, ಅಲ್ಲಲ್ಲಿಯ ನಿರ್ಮಾಣದ ಕುರಿತು ಹೇಳಿದೆ. ನಂತರ ಕ್ರಿ.ಶ. ೭೯೭ರ ಮಾವಲಿ ಶಾಸನ[2] ಮದನಾಗರಸ ಎಂಬುವನು ಗೋಳಿ ಕೆರೆಯನ್ನು ಕಟ್ಟಿಸಿ ಒಣಭೂಮಿಗೆ ನೀರು ಹರಿಸಿದ್ದನ್ನು ದಾಖಲಿಸಿದೆ. ಇದೇ ಗ್ರಾಮದ ಇನ್ನೊಂದು ಇದೇ ಕಾಲದ ಶಾಸನದಲ್ಲಿ[3] ಕೊಂಕೋಡ್ ಕೊಣ್ನಿಂದರ ಕೆರೆಗೆ’ ದಾನ ನೀಡಿದ್ದನ್ನು ಉಲ್ಲೇಖಿಸಿದೆ. ಮನ ಮನೆಯ ಕುಂದರಸನ ಕಾಲದ ಶಾಸನದಲ್ಲಿ[4] ಕುಂದರಸ ಕೆರೆಯೊಂದನ್ನು ಗೊರೆವರಿಸಿ ಕೊಟ್ಟದ್ದನ್ನು ದಾಖಲಿಸಿದೆ. ಕ್ರಿ.ಶ. ೯೦೩ರ ಕೆರೆಹಳ್ಳಿ ಗ್ರಾಮದ ಶಾಸನದಲ್ಲಿ[5] ಗುಲುಗಣ್ನನೆಂಬಾತ ತನ್ನ ತಂದೆಯ ನೆನಪಿಗಾಗಿ ಒಂದು ಕೆರೆ ಹಾಗೂ ಒಂದು ದೇಗುಲವನ್ನು ನಿರ್ಮಿಸಿದ ಉಲ್ಲೇಖವಿದೆ. ಕಕ್ಕರಶಿ ಗ್ರಾಮದ ಕ್ರಿ.ಶ. ೯೫ರ ಶಾಸನವೊಂದರಲ್ಲಿ[6] ವೋಜಿಗನ ಹಿರಿಯರು ಅಲ್ಲಿ ಕೆರೆ, ದೇಗುಲ ನಿರ್ಮಿಸಿದ್ದನ್ನು ಉಲ್ಲೇಖಿಸಿದೆ. ಕ್ರಿ.ಶ. ೯೬ರ ಹುನವಳ್ಳಿ ಶಾಸನದಲ್ಲಿ[7] ಮಾದಗರ ಕಮ್ಮಯ್ಯನ ಮಗ, ನರಿವನ್ಮ ಗಾವುಂಡನ ತಮ್ಮ ನಾಣ್ನೆಯ ಕಟ್ಟಿಸಿದ ಕೆರೆಯನ್ನು ತಾಳಗುಂದೂರು, ಮಹಾಜನರು ನೋಡಿ ಹರಿಸಿದ ವಿಷಯ ಪ್ರಸ್ತಾಪವಾಗಿದೆ. ಕ್ರಿ.ಶ. ೯೭ರ ಜಂಬೆಹಳ್ಳಿ ಶಾಸನ[8] ಕನ್ನಯ್ಯನೆಂಬಾತ ಇಲ್ಲಿ ಎರಡು ದೇಗುಲ ಹಾಗೂ ಒಂದು ಕೆರೆ ನಿರ್ಮಿಸಿದ್ದನ್ನು ದಾಖಲಿಸಿದೆ.

ಈ ಮೇಲಿನ ಶಾಸನಗಳನ್ನು ಗಮನಿಸಿದಾಗ ಬಾದಾಮಿ ಚಾಲುಕ್ಯ ಹಾಗೂ ರಾಷ್ಟ್ರಕೂಟರ ಕಾಲದಲ್ಲಾಗಲೇ ಕೆರೆಯ ನಿರ್ಮಾಣ, ನಿರ್ವಹಣೆ ಕುರಿತು ಸಾಕಷ್ಟು ಯೋಜನೆಗಳು ಆರಂಭವಾಗಿತ್ತು ಎಂದು ತಿಳಿದುಬರುತ್ತದೆ. ಮುಂದಿನ ಕಲ್ಯಾಣ ಚಾಲುಕ್ಯರಿಗೆ ಇವು ಪ್ರೇರಣೆಯೂ ಆದವು ಕೂಡ. ಈ ಕಾಲದ ನಿರ್ಮಾತೃಗಳೂ ಹೆಚ್ಚಾಗಿ ಅರಸರು ಹಾಗೂ ಗಾವುಂಡರು ಆದರೆ ಜಂಬೆಹಳ್ಳಿ ಶಾಸನ[9]ದಲ್ಲಿ ಬರುವ ಕನ್ನಯ್ಯ, ಕೆರೆಹಳ್ಳಿ ಶಾಸನದ ಗುಲುಗಣ್ನ[10] ಕಕ್ಕರಶಿ ಶಾಸನದ ಪೋಜಿಗ[11] ಯಾವುದೇ ಅಧಿಕಾರ ವರ್ಗದಲ್ಲಿದ್ದಂತೆ ತೋರುವುದಿಲ್ಲ. ಒಟ್ಟಾರೆ ಇಂತಹ ಸಾಮಾಜಿಕ ಕಾರ್ಯಕ್ಕೆ ಅರಸನ, ಮಹಾಜನರ ಸಹಕಾರ, ಆರ್ಶಿವಾದವಿರುತ್ತಿತ್ತು ಎಂದು ಧೃಡಪಡಿಸಲು ಜಂಬೆಹಳ್ಳಿ ಶಾಸನ[12] ಹಾಗೂ ಹುನವಳ್ಳಿ ಶಾಸನಗಳು[13] ಆಧಾರವಾಗಿದೆ.

ಕ್ರಿ.ಶ. ೧೦೭೧ರ ಲಕ್ಕಪಳ್ಳಿ ಶಾಸನದಲ್ಲಿ[14] ದೇವಸೆಟ್ಟಿ ಎಂಬಾತ ಕಟ್ಟಿಸಿದ ಕೆರೆಯ ಕೆಳಗಿನ ಕಾಡು ಕಡಿದು ಗದ್ದೆಯನ್ನು ಮಾಡಿದ ಕಾರ್ಯಕ್ಕೆ ಕುಬಟೂರು ಸಾಸಿರ್ವರು ಮೆಚ್ಚಿ ಆ ಗದ್ದೆಯನ್ನು ಆ ಸೆಟ್ಟಿಗೇ ಬಿಟ್ಟು, ತಿರುಗಿ ಆ ಸೆಟ್ಟಿ ಅದರ ಆದಾಯವನ್ನು ಆ ಕೆರೆಯ ನಿರ್ವಹಣೆಗೆ ಬಿಟ್ಟಂತೆ ದಾಖಲಿಸಿದೆ. ಕುಂಟಗಳಲೆಯ ಕ್ರಿ.ಶ. ೧೧೧೨ರ ಶಾಸನ[15] ಹೆಲ್ಲಬ್ಬೆ ಎಂಬಾಕೆ (ಉದ್ದರೆಯ ಮಾರಸಿಂಘನ ಹೆಂಡತಿ) ಹಾಗೂ ವೇಮಣ್ಣನ ತಂಗಿ ಚಿಟ್ಟಿಕಟ್ಟಿ ವೇಮಣ್ಣನ ನೆನಪಿಗೆ ಇಲ್ಲಿ ಒಡೆದ ಕೆರೆಯನ್ನು ಕಟ್ಟಿಸಿದ್ದಾರೆ. ಕ್ರಿ.ಶ. ೧೧೨೯ರ ಬೆನ್ನೂರು ಶಾಸನದಲ್ಲಿ[16] ಬೆನ್ನೂರು ಕಾಳಗಾವುಂಡನ ಮಗ ಮಾಣಿಗಾವುಂಡ, ಎಡನಾಡು – ೭ರ ಪ್ರಭುಗಾವುಂಡರ ಸಮಕ್ಷಮದಲ್ಲಿ ಊರೊಂದೆಡೆ, ಕೆರೆಯೊಂದೆಡೆ, ಬಯಲೊಂದೆಡೆ ಇದ್ದು, ಅಲ್ಲಿನ ಕೆರೆಯಿಂದ ಜಾಲಗೆರೆ ಬಯಲಿಗೆ ಕಾಲುವೆ ಮುಖಾಂತರ ನೀರು ಹರಿಸಿದ ಉಲ್ಲೇಖವಿದೆ. ಕ್ರಿ.ಶ. ೧೧೫೧ರ ಹಿರಿಯಾವಲಿ ಶಾಸನ[17] ಇಲ್ಲಿನ ಕೆರೆಯನ್ನು ಬಲಿಷ್ಠ ಮಾಡಲು ಅರಸ ಹಾಗೂ ಊರ‍್ಗಾವುಂಡರು ಸೇರಿ, ಬಿದ್ದಿಯಜ್ಜನ ಮಗನಿಗೆ ಅದೇ ಕೆರೆಯ ತೂಬಿನ ಕೆಳಗೆ ಗದ್ದೆಯನ್ನು ಬಿಟ್ಟಂತೆ ದಾಖಲಿಸಿದೆ.

ಮೇಲಿನ ಕಲ್ಯಾಣ ಚಾಲುಕ್ಯರ ಶಾಸನಗಳನ್ನು ಗಮನಿಸಿದಾಗ ಇಲ್ಲಿ ಕೆರೆಯ ನಿರ್ಮಾಣವೊಂದೇ ಅಲ್ಲದೆ, ಇರುವ ಕೆರೆಯನ್ನು ನೀರಾವರಿಗಾಗಿ ಉಪಯುಕ್ತವಾಗುವಂತೆ, ಹಾಳಾದ ಕೆರೆಯ ದುರಸ್ತಿ ಕಾರ್ಯಕ್ಕೆ, ಕೆರೆಯ ವಿಸ್ತರಣಾ ಕಾರ್ಯಕ್ಕೂ ಹೆಚ್ಚಿನ ಮಹತ್ವ ನೀಡಿದ್ದು ಸ್ಪಷ್ಟವಾಗುತ್ತದೆ. ಈ ಎಲ್ಲ ಅಂಶಗಳಿಂದ ಈಗಾಗಲೇ ಇಲ್ಲಿ ಕೆರೆಗಳ ಸಂಖ್ಯೆ ಸಾಕಷ್ಟಿತ್ತು ಎಂಬುದನ್ನು ಗ್ರಹಿಸಬೇಕಾಗುತ್ತದೆ. ಮುಂದಿನ ಶಾಸನಗಳು ಮತ್ತೆ ಹಿಂದಿನ ಕಾಲದ ಕೆರೆಗಳ ಬಗ್ಗೆ ಪುರಾವೆ ಒದಗಿಸುತ್ತದೆ.

ಕ್ರಿ.ಶ. ೧೨೨೧ರ ಹಿರೇಚೌಟಿ ಶಾಸನ[18] ಕಲಿದೇಗುಲದ ಜೀರ್ಣೋದ್ಧಾರದೊಂದಿಗೆ ಅಲ್ಲಿ ಒಂದು ಕೆರೆ ತೆಗೆಸಿ ದೇವರ ಅಂಗ, ರಂಗಭೋಗಕ್ಕಾಗಿ ಭೂ ದಾನ ನೀಡಿದ್ದನ್ನು ಉಲ್ಲೇಖಿಸಿದೆ. ಕ್ರಿ.ಶ. ೧೨೫೨ರ ತೊರವಂದದ ಶಾಸನದಲ್ಲಿ[19] ಕೆರೆ ಕಟ್ಟಿಸಿ ಅದಕ್ಕೆ ತೂಬು ನಿರ್ಮಾಣ ಮಾಡಿದ ಉಲ್ಲೇಖವಿದೆ. ಕ್ರಿ.ಶ. ೧೨೭೮ರ ಕುಪ್ಪಗಡ್ಡೆ ಶಾಸನ[20] ಬದಕಿ ಸೆಟ್ಟಿ ಕುಪ್ಪಗಡ್ಡೆ ಹೆಗ್ಗೆರೆಯ ಕೆಲಸಕ್ಕೆ ಎಕ್ಕಸಿಯ ಬಯಲಲ್ಲಿ ಭೂದಾನ ನೀಡಿದ್ದನ್ನು ದಾಖಲಿಸಿದೆ.

ಈ ಮಧ್ಯೆ ಶಾಸನಗಳು ನೇರವಲ್ಲದ, ಒಂದು ಪ್ರದೇಶದ ವರ್ಣನೆಯಲ್ಲಿ ಅಥವಾ ಭೂದಾನದ ವಿವರಣೆಯಲ್ಲಿ ಕೆರೆಗಳನ್ನು ಹೆಸರಿಸುತ್ತವೆ. ಕ್ರಿ.ಶ. ೧೧೭೧ರ ತೆವರ ತೆಪ್ಪ ಶಾಸನ[21] ‘ಕಾಳಿಸೆಟ್ಟಿ ಕೆರೆ’ಯನ್ನೂ, ಲೋಕಗೌಡನನ್ನು ವರ್ಣಿಸುವಲ್ಲಿ ‘ಕೆರೆ ಬಾವಿ ದೇವತಾಗ್ರಿಹವರ ವಂಟಿಗೆ ಸತ್ರವೆಂಬಿವಂ ಪಡಿ ಸಲಿಪಂ’…. ಎಂದಿದೆ. ಕ್ರಿ.ಶ. ೧೧೭೨ರ ಎಲಿವಾಳದ ಶಾಸನದಲ್ಲಿ[22] ಬಳಸಿದ ನನ್ದನಂ ನಿಮೃದ ಪೆರ್ಗೆರೆ ಕರ್ಬಿನ ತೋಟ ವೆತ್ತಲುಂ ಎಂದಿದೆ’. ಕ್ರಿ.ಶ. ೧೧೯೮ರ ಉದ್ರಿ ಶಾಸನ[23] ಸಿಂಗೇಶ್ವರ ಬಾವಿ, ಹೆರ್ಗೆರೆ, ನರಿಕನಕಟ್ಟೆ, ಸೂಳೆಯಕೆರೆಗಳನ್ನು ಹೆಸರಿಸಿದೆ. ಕ್ರಿ.ಶ. ೧೨೩೧ರ ಕೋಟಿಪುರದ ಶಾಸನ[24]… ‘ಕೋಮಳ ಭರಿತಂ ಚಲಿತಂ ಸಾಮಜ XXX ತಟಾಕಪಾರ ತಟಾಕಂ’ ಎಂದು ಕುಬಟೂರನ್ನು ವರ್ಣಿಸಿದೆ. ಕ್ರಿ.ಶ. ೧೨೩೭ರ ಎಲಿವಾಳದ ಶಾಸನ[25] ಗೋಳಿಕೆರೆಯನ್ನೂ, ಕ್ರಿ.ಶ. ೧೪೧೫ರ ಭಾರಂಗಿ ಶಾಸನ[26]….‘ತಿಳಿ ನೀರ್ಗ್ಗೊಳಂಗಳಿಂ ಸುಲಲಿತವಾಗಿ ರಂಜಿಪುದು ನಾಗರಖಂಡ ಮದೆತ್ತ ನೋಳ್ಪಡಂ’ ಎಂದು ಇಡೀ ನಾಗರಖಂಡವನ್ನು ವರ್ಣಿಸಿದೆ. ಬೆಣ್ಣೆಗೆರೆಯ ೧೫-೧೬ನೇ ಶತಮಾನದ ಶಾಸನದಲ್ಲಿ[27] ನಾಗರ ಕಟ್ಟೆಯ ಉಲ್ಲೇಖವಿದೆ. ಕ್ರಿ.ಶ. ೧೫೭೭ರ ಹೆಚ್ಚೆ ಶಾಸನದಲ್ಲಿ[28] ಬಿದಿರ ಕೆರೆ, ಸಿಂಗಟಕೆರೆಯ ಪ್ರಸ್ತಾಪವಿದೆ. ನಂತರ ಶಾಸನಗಳು ಈ ಭಾಗದಲ್ಲಿನ ೧೪ನೇ ಶತಮಾನದ ನೀರಾವರಿ ವಹಿವಾಟನ್ನು ಕುರಿತು ದಾಖಲಿಸಿಲ್ಲ. ಮುಂದೆ ಕ್ರಿ.ಶ. ೧೪೪೪ರ ಚಿಕ್ಕಚೌಟಿಯ ಒಂದು ಶಾಸನ[29] ಕೆರೆಯ ಕುರಿತು, ಅಸ್ಪಷ್ಟ ಮಾಹಿತಿಯನ್ನು ನೀಡಿದೆ. ಮತ್ತೆ ಕ್ರಿ.ಶ. ೧೬೧೩ರ ತನಕ ಕೆರೆಯ ಕುರಿತು ಶಾಸನಗಳು ಅಲಭ್ಯ. ಕ್ರಿ.ಶ. ೧೬೧೩ರ ನೇರಲಿಗೆ ಶಾಸನವೊಂದು[30] ಮೂಗೂರು ಅಗ್ರಹಾರದ ಕೆರೆಯನ್ನು ತೆಗೆಸಿ, ಆ ಕೆರೆಯಲ್ಲಿ ದೇವರಿಗೆ ಸೇರಿದ ಭೂಮಿ ಮುಳುಗಡೆಯಾಗಿದ್ದಕ್ಕೆ ಪ್ರತಿಯಾಗಿ ನೇರಲಿಗೆ ಕಾನಕಟ್ಟೆ ಕೆಳಗೆ ಜಮೀನು ನೀಡಿದ್ದನ್ನು ದಾಖಲಿಸಿದೆ. ಕ್ರಿ.ಶ. ೧೭೪೩ರ ಆನವಟ್ಟಿ ಶಾಸನ[31] ಕೂಡ ಇಂತಾದ್ದೆ ಪ್ರಸಂಗವನ್ನು ದಾಖಲಿಸಿದೆ. ಇಲ್ಲಿ ಕಾರೆಹೊಂಡದ ಕೋಡಿಯ ನಿರ್ಮಾಣದಲ್ಲಿ ನಷ್ಟವಾದ ಭೂಮಿಗೆ ಪ್ರತಿಯಾಗಿ ನೀಡಿದ ಭೂಮಿಯ ವಿವರವನ್ನು ನೀಡುತ್ತಿದೆ.

ಈ ತಾಲ್ಲೂಕಿನ ಒಂದು ಶಾಸನ ಈ ಎಲ್ಲ ಶಾಸನಗಳಿಗಿಂತ ಭಿನ್ನವಾಗಿದೆ. ಕೆರೆಗಳ ನಿರ್ಮಾಣ ಮಳೆಗಾಲದ ನೀರನ್ನು ಮಾತ್ರ ಅವಲಂಬಿಸಿರುತ್ತದೆ. ಆದರೆ ಇದರ ಜೊತೆಗೆ ಪ್ರಾಚೀನರು ಕೆರೆ ನಿರ್ಮಾಣದಲ್ಲಿ ಅಂತರ್ಜಲವನ್ನು ಬಳಸಿಕೊಳ್ಳುತ್ತಿದ್ದರೆನ್ನಲು ಈ ಶಾಸನ ಆಧಾರವಾಗಿದೆ. ಕ್ರಿ.ಶ. ೧೧೫೯ರ ಭಾರಂಗಿ ಶಾಸನದಲ್ಲಿ[32] ಬೀರಿ ಸೆಟ್ಟಿಯು ಸಿದ್ದರ ಸೋದದಿಂದ ಕೆರೆ ಕಟ್ಟಿಸಿದ ಉಲ್ಲೇಖವಿದೆ. ಪ್ರಸ್ತುತ ಇಂತಹ ಕೆಲವು ಜವುಳು ಕೆರೆಗಳನ್ನು ಕಾಣಬಹುದು.

ಕೆರೆಯ ನಿರ್ವಹಣೆ ಹಾಗೂ ಅವುಗಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ವ್ಯವಸ್ಥೆಗಳು ಸಾಮಾನ್ಯ. ನಿರ್ದಿಷ್ಟವಾಗಿ ಶಾಸನಗಳು ಇಂತಹ ವ್ಯವಸ್ಥೆಯನ್ನು ದಾಖಲಿಸಿವೆ. ಕ್ರಿ.ಶ. ೮೭೬ರ ಕುಂಸಿ ಶಾಸನದಲ್ಲಿ[33] ನೀರ‍್ಗಂಟಿಗೆ ಇಂದರ, ಮಾರಮಯ್ಯ ಐದು ಮತ್ತರ ಭತ್ತದ ಭೂಮಿಯನ್ನು ಅಳೆದು ಕೊಟ್ಟಂತೆ ದಾಖಲಿಸಿದೆ. ಕ್ರಿ.ಶ. ೧೧೩೯ರ ಓಟೂರು ಶಾಸನದಲ್ಲಿ[34] ರಾಜಗಾವುಂಡರು, ಸಮಸ್ತ ಪ್ರಜೆಗಳೆಲ್ಲ ಸೇರಿ ‘ಬಿತ್ತು ವಟ್ಟ’ವನ್ನು ಕೆರೆಗೆ ಬಿಟ್ಟ ಉಲ್ಲೇಖವಿದೆ. ಕ್ರಿ.ಶ. ೧೨೧೨ರ ತೆಲಗುಂದ ಶಾಸನ[35] ಸೋಮಣ್ಣ ಹಾಗೂ ಕುಬಟೂರು, ಒಡೆಯರು ಕೆರೆಗೆ ಬಿಟ್ಟ ಧರ್ಮವನ್ನು ವಿವರಿಸಿದೆ. ಕ್ರಿ.ಶ. ೧೨೪೫ರ ಕುಬಟೂರು ಶಾಸನದಲ್ಲಿ[36] ‘ಬಾರಿಕರ’ ಉಲ್ಲೇಖವಿದೆ. ನಿರ್ವಹಣೆ ವ್ಯವಸ್ಥೆ ಕುರಿತು ಇನ್ನೂ ಸ್ವಲ್ಪ ಸ್ಪಷ್ಟತೆಗಾಗಿ ಈ ತಾಲ್ಲೂಕಿನ ಅಕ್ಕಪಕ್ಕದ ತಾಲ್ಲೂಕಿನ ಕೆಲವು ಶಾಸನಗಳನ್ನು ಗಮನಿಸುವುದರಿಂದ ಇನ್ನಷ್ಟು ಈ ವಿಚಾರಕ್ಕೆ ಪುಷ್ಠಿ ದೊರೆಯುತ್ತದೆ. ಬಂದಳಿಕೆಯ ಕ್ರಿ.ಶ. ೧೫೨೬ರ ಶಾಸನವೊಂದು[37] ಕಾಲಕಾಲಕ್ಕೆ ಕೆರೆಯ ಹೂಳು ತೆಗೆಯುವಂತೆ ನಂಜಪ್ಪ ಒಡೆಯರು ಅಲ್ಲಿನ ಗೌಡ ಪ್ರಜೆಗಳಿಗೂ, ಸೇನಬೋವಿರಿಗೂ ಕಟ್ಟು ಮಾಡಿ ಮೂವರು ಗೆಯ್ಯುವ ಸಾವಿರ ತೋಟ ಸ್ಥಳವನ್ನು ಇಂತಹ ಕಾರ್ಯಕ್ಕೆ ಬಿಟ್ಟ ದಾಖಲೆ ಗಮನಾರ್ಹ. ತೀರ್ಥಹಳ್ಳಿಯ ಶಾಸನವೊಂದರಲ್ಲಿ[38] ಕೆರೆಯಲ್ಲಿ ಹೂಳು ತುಂಬಿ ನೀರು ಹರಿಯದೇ ಅನುಪಯುಕ್ತವಾದಲ್ಲಿ ಆ ಅಚ್ಚುಕಟ್ಟಿಗೆ ಸೇರಿದ ಜಮೀನಿನ ತೆರಿಗೆಯಲ್ಲಿ ವಿನಾಯ್ತಿ ನೀಡಲಾಗುತ್ತಿತ್ತು.

ನೀರಾವರಿ ಕೆರೆಗಳ ಅಂಕಿ ಅಂಶಗಳು

ತಾಲ್ಲೂಕಿನ ೪ ಕೆರೆಗಳು ಮಾತ್ರ West coast upper series ಗೆ ಸೇರಿವೆ. ಇನ್ನುಳಿದ ಕೆರೆಗಳು Krishna basinಗೆ ಸೇರುತ್ತವೆ. See – Table – 1 ಇಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಕೊಳವೆ ಬಾವಿಗಳು ಇವೆ. ಇವುಗಳಿಂದ ಸುಮಾರು ೨೦೦೦ಹೆ. ಕೃಷಿಭೂಮಿ ನೀರಾವರಿ ಸೌಲಭ್ಯ ಪಡೆದಿವೆ. ತೆರೆದ ಬಾವಿಗಳ ಸಂಖ್ಯೆ ಕೇವಲ ೬೦-೭೦. ಇವು ಸುಮಾರು ೧೦೦ಹೆ. ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿವೆ. ಇತರೆ ಮೂಲಗಳಿಂದ ಅಂದಾಜು ೧೦೦೦ಹೆ. ಕೃಷಿ ಭೂಮಿಗೆ ನೀರಾವರಿ ದೊರೆಯುತ್ತಿದೆ. ಕೃಷಿ ಭೂಮಿಯ ಅರ್ಧಕ್ಕೂ ಹೆಚ್ಚು ಭೂಮಿಗೆ ಕೆರೆಗಳೇ ಪ್ರಮುಖ ನೀರಾವರಿ ಮೂಲ.

ತಾಲ್ಲೂಕಿನಲ್ಲಿ ೪೦ಹೆ. ಗಿಂತ ಹೆಚ್ಚು ಆಯಕಟ್ಟು ಕೆರೆಗಳ ಸಂಖ್ಯೆ ೧೧೬.೪೦ಹೆ.ಗಿಂತ ಕಡಿಮೆ ಆಯಕಟ್ಟಿನ ಕೆರೆಗಳ ಸಂಖ್ಯೆ ೧೦೭೧. ಇಲ್ಲಿನ ಅರೆಮಲೆನಾಡು ಎರೆಭೂಮಿಗೆ ನೀರಿನ ಅವಶ್ಯಕತೆ ಹೆಚ್ಚು. ಅಂತೆಯೇ ಅರೆಮಲೆನಾಡಿನ ಭಾಗವಾದ ಆನವಟ್ಟಿ, ಮಾವಲಿ, ಉದ್ರಿ ಭಾಗಗಳಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟಲ್ಲದೇ ಇವು ಗಾತ್ರ, ಸಾಮರ್ಥ್ಯದಲ್ಲೂ ಹಿರಿದಾಗಿವೆ. ಇಲ್ಲಿನ ಬಹುತೇಕ ಕೆರೆಗಳು ೪೦ ಎಕರೆಗೂ ಹೆಚ್ಚು ವಿಸ್ತೀರ್ಣವನ್ನೊಳಗೊಂಡಿದ್ದು ಇವು ಸುಮಾರು ೮೦-೧೦೦ ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿವೆ. ಈ ಭಾಗದಲ್ಲಿ ಹಾಗೂ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಕೆರೆ ಕುಬಟೂರು ಕೆರೆ. ಇದು ಸುಮಾರು ೧೫೦ ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು ೯೦೦ ಎಕರೆಯಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಭಾಗದಲ್ಲಿ ಗಮನಿಸಬಹುದಾದ ಕೆರೆಗಳು ಅಪಾರ. ಮೂಗೂರು ಭೂ ಕೆರೆ ಸುಮಾರು ೮೦-೯೦ ಎಕರೆ ವಿಸ್ತೀರ್ಣ, ಸುಮಾರು ೭೦೦ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಕರ್ಯವನ್ನು ಒದಗಿಸುವ ಸಾಮರ್ಥ್ಯ ಪಡೆದಿವೆ. (ವಿವರಕ್ಕಾಗಿ Table – 2 ನೋಡಿ) ಅದೇ ರೀತಿ ಈ ಭಾಗದಲ್ಲಿನ ಗ್ರಾಮಗಳಲ್ಲಿ ಕೂಡ ಕೆರೆಗಳ ಸಂಖ್ಯೆ ಅಧಿಕವಾಗಿದೆ. ಮೂಡಿ ಗ್ರಾಮ ಒಂದರಲ್ಲಿಯೇ ಸುಮಾರು ೨೭ ಕೆರೆಗಳಿವೆ (ವಿವರಕ್ಕೆ Table – 3ನೋಡಿ)

ಮಲೆನಾಡಿನ ಜಂಬಿಟ್ಟಿಗೆ ಭೂಮಿಗೆ ನೀರಿನ ಅವಶ್ಯಕತೆ ಕಡಿಮೆ. ಅಂತೆಯೇ ಇಲ್ಲಿ ಕೆರೆಗಳ ಸಂಖ್ಯೆಯು ಕಡಿಮೆ ಇದೆ. ಆದಾಗ್ಯೂ ಎಲ್ಲಿ ಅವಶ್ಯವಿದೆಯೋ ಅಲ್ಲಿ ಕೆರೆಗಳು ವಿಸ್ತೀರ್ಣದಲ್ಲಿ ಹಿರಿದಾಗಿವೆ. ಇಲ್ಲೂ ೬೦ – ೭೦ ಎಕರೆ ವಿಸ್ತೀರ್ಣವುಲ್ಳ ಕೆರೆಗಳ ಸಂಖ್ಯೆ ಸಾಕಷ್ಟಿದೆ. ಇವು ೩೦೦ – ೪೦೦ ಎಕರೆ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯ ಪಡೆದಿವೆ. (ವಿವರಕ್ಕಾಗಿ Table – 2ನೋಡಿ) ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾದಲ್ಲಿ ಈ ಎಲ್ಲಾ ಕೆರೆಗಳು ಸುಮಾರು ೩ – ೪ ತಿಂಗಳು ನೀರಾವರಿಗೆ ಉಪಯುಕ್ತವಾಗಬಲ್ಲವು.

ಕೆರೆ ಕಟ್ಟಡದ ತಂತ್ರಜ್ಞಾನ

ತಾಂತ್ರಿಕವಾಗಿ ಇಲ್ಲಿನ ಕೆರೆಗಳು ಸ್ಥಳೀಯವಾಗಿ ದೊರೆಯುವ ಮಣ್ಣು, ಕಲ್ಲು, ಜಂಬಿಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದೆ. ಕೆರೆಯ ತೂಬಿನ ಅಳವಡಿಕೆ ಕೆರೆಯ ಗಾತ್ರ ಸಾಮರ್ಥ್ಯದ ಆಧಾರದ ಮೇಲೆ ೧ ರಿಂದ ೭ ಕ್ಕೂ ಹೆಚ್ಚು ತೂಬುಗಳ ನಿರ್ಮಾಣವಿರುತ್ತದೆ. ತೂಬಿನ ಮೊದಲ ಹಂತದ ರಂಧ್ರಕ್ಕೆ ಮರದ ಬಿರಡೆಯನ್ನು ಬಳಸಿ ಅವಶ್ಯವಿರುವಾಗ ತೆಗೆಯಲಾಗುತ್ತದೆ. ಎರಡನೆ ಹಂತದ ರಂಧ್ರವನ್ನು ಹೆಚ್ಚಾಗಿ ಮಣ್ಣು ಕಲ್ಲಿನಿಂದ ಭದ್ರಗೊಳಿಸಲಾಗಿರುತ್ತದೆ. ಆಪತ್ಕಾಲದಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ. ಅಪರೂಪಕ್ಕೆ ಇನ್ನೂ ಕೆಲವೆಡೆ ಇತಿಹಾಸಕಾಲದ ತೂಬುಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲವೇ ಕೆರೆಗಳಲ್ಲಿ ಹುಗಿಯಲ್ಪಟ್ಟಿವೆ. ಇವುಗಳು ಗಟ್ಟಿ ಗ್ರಾನೈಟ್ ಶಿಲೆಯಿಂದ ನಿರ್ಮಿತವಾಗಿವೆ. ಇತ್ತೀಚೆಗೆ ತೂಬು ನಿರ್ಮಾಣಕ್ಕೆ ಸುಟ್ಟ ಇಟ್ಟಿಗೆ ಅಥವಾ ಗ್ರಾನೈಟ್ ಶಿಲೆಯ ಸೈಜುಗಲ್ಲನ್ನು ಬಳಸಲಾಗುತ್ತಿದೆ. ತೂಬಿನ ಅಂತರ್ ಮಾರ್ಗದ ಇನ್ನೊಂದು ತುದಿಗೆ ತೊಟ್ಟಿಯ ನಿರ್ಮಾಣವಿದ್ದು ೧ ಅಥವಾ ೩ ಕಾಲುವೆಗಳನ್ನು ಸಂಪರ್ಕಿಸಿರುತ್ತದೆ. ಕೋಡಿ ತಡೆಯ ದಪ್ಪ, ಎತ್ತರ, ಕೆರೆಯ ಸಾಮರ್ಥ್ಯದ ಮೇಲೆ ನಿರ್ಧಾರವಾಗಿ ಕಾಂಕ್ರಿಟ್ ಇಲ್ಲವೆ ಸೈಜುಗಲ್ಲಿನಿಂದ ಕಟ್ಟಲ್ಪಟ್ಟಿದೆ. ಕೋಡಿಯ ಹೆಚ್ಚಾದ ನೀರು ಇನ್ನೊಂದು ಕೆರೆ ಅಥವಾ ಹಳ್ಳವನ್ನು ಸೇರುತ್ತದೆ.

ಈ ಭಾಗದ ಕೆರೆ ತಂತ್ರಜ್ಞಾನದಲ್ಲಿ ಗಮನಿಸಬೇಕಾದ್ದು ‘ಸರಪಳಿ ವ್ಯವಸ್ಥೆ’ ತಾಲ್ಲೂಕಿನ ೭೫ ಭಾಗ ಕೆರೆಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಕಾಡು ಇಲ್ಲವೆ ಬಯಲಂಚಿನಲ್ಲಿ ಆಳವಾದ ಕಾಲುವೆ ನಿರ್ಮಿಸಿ, ಅಲ್ಲಿ ಬಸಿದ ನೀರು ಕಾಲುವೆ ಮುಖಾಂತರ ಒಂದು ಕೆರೆಗೆ, ಅಲ್ಲಿಂದ ಕೋಡಿ ಮಾರ್ಗವಾಗಿ ಇನ್ನೊಂದು ಕೆರೆ ಇದೇ ರೀತಿ ಪುನರಾವರ್ತನೆಯಾಗಿ ಕಡೆಯದಾಗಿ ಹೊಳೆ, ಹಳ್ಳವನ್ನು ಕೂಡಿಕೊಳ್ಳುತ್ತದೆ. ಈ ತಂತ್ರಜ್ಞಾನ ಬಳಸಿ ಸುಮಾರು ೧೦ – ೨೦ ಕಿ.ಮೀ. ವ್ಯಾಪ್ತಿಯಲ್ಲಿನ ಕೆರೆಗಳು ಸಂಪರ್ಕಿಸಲ್ಪಟ್ಟಿರುತ್ತವೆ. ಉದಾ : ಹೆಚ್ಚೆಯ ಒಂದು ದೊಡ್ಡ ಕೆರೆಗೆ ಸುಮಾರು ೨೦ಕ್ಕೂ ಹೆಚ್ಚು ಗ್ರಾಮದ ಸುಮಾರು ೪೦ ಕೆರೆಗಳ ನೀರು ಹಳ್ಳವಾಗಿ ಸೇರುತ್ತದೆ. (ವಿವರಕ್ಕಾಗಿ ನಕಾಶೆ – ೧ ನೋಡಿ) ಅದೇ ರೀತಿ ಕುಬಟೂರು ಕೆರೆಗೂ ಸುಮಾರು ೧೫ ಕಿ.ಮೀ. ವ್ಯಾಪ್ತಿಯಲ್ಲಿನ ಕೆರೆಗಳ ನೀರು ಸೇರುತ್ತದೆ. (ನಕಾಶೆ – ೨ ನೋಡಿ) ಉರಗನಹಳ್ಳಿ ಕೆರೆ (ನಕಾಶೆ – ೩ ನೋಡಿ) ಬೆದವಟ್ಟಿ ಕೆರೆ (ನಕಾಶೆ – ೪ ನೋಡಿ) ಗಳೂ ಸಹಾ ಇದೆ ರೀತಿ ಬಹುದೂರದ ಕೆರೆಗಳನ್ನು ಸಂಪರ್ಕಿಸಿಕೊಂಡಿದೆ. ಪ್ರತಿಗ್ರಾಮದಲ್ಲಿ ಸುಮಾರು ಐದಕ್ಕಿಂತಲೂ ಹೆಚ್ಚು ಕೆರೆಗಳಿದ್ದು, ಒಂದು ಕುಡಿಯುವ ನೀರಿಗಾಗಿ, ಒಂದು ಜಾನುವಾರಿಗಾಗಿ ಉಳಿದವನ್ನು ಕೃಷಿಗಾಗಿ ಬಳಸಲಾಗುತ್ತದೆ. ಈ ಭಾಗದಲ್ಲಿ ಇನ್ನೂ ಒಂದು ಗಮನಿಸಬೇಕಾದ ತಂತ್ರಜ್ಞಾನವೆಂದರೆ, ಮೂಲ ಗ್ರಾಮದ ಸುತ್ತ ಕೆರೆಯ ನಿರ್ಮಾಣವಿದ್ದು ಅವುಗಳಿಗೆ ಸರಪಳಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಮದೊಳಗಿನ ಬಾವಿ ಹಾಗೂ ಭೂಮಿ ನೀರು ತೇವಾಂಶವನ್ನು ಸದಾ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ.

ಸ್ಥಳ ಅಧ್ಯಯನದಲ್ಲಿನ ಗಮನಾರ್ಹ ಅಂಶ

ಸ್ಥಳ ಅಧ್ಯಯನದಲ್ಲಿ ಹಾಗೂ ತಾಲ್ಲೂಕಿನ ಕೆರೆಗಳ ಪಟ್ಟಿ ಗಮನಿಸುವಾಗ ಅಧ್ಯಯನಕ್ಕೆ ಯೋಗ್ಯವಾದ ಅಂಶಗಳಲ್ಲಿ ಕೆರೆಗಳ ಹೆಸರುಗಳು ಸಹಾ ಒಂದು. ಪ್ರಸ್ತುತ ಈ ಹೆಸರುಗಳಿಗೆ ಶಾಸನೋಲ್ಲೇಖವಿಲ್ಲ. ಆದಾಗ್ಯೂ ತಲತಲಾಂತರದಿಂದ ಕರೆಯಲ್ಪಡುತ್ತಿರುವುದರಿಂದ ಇವುಗಳನ್ನು ಹೀಗೆ ವಿಂಗಡಿಸಿ ಗುರುತಿಸಬಹುದಾಗಿದೆ.

ನಿರ್ಮಾತೃ ಅಥವಾ ಜೀರ್ಣೋದ್ಧಾರಗೊಳಿಸಿದವರ ಹೆಸರುಗಳು

ರಂಗಪ್ಪನ ಕೆರೆ, ಸಾರಂಗಯ್ಯನ ಕಟ್ಟೆ, ಚೆನ್ನಯ್ಯ ಕಟ್ಟೆ, ಸಂಗಣ್ಣನ ಕೆರೆ, ನರಸಪ್ಪನ ಕೆರೆ, ಸೋಮಜ್ಜನ ಕಟ್ಟೆ, ಗೌಡನಕಟ್ಟೆ, ದೇಸಾಯಿಕಟ್ಟೆ, ಜೋಯ್ಸನ ಕಟ್ಟೆ, ಕೋನಿಪಾಲ ಕೆರೆ. ಶಿಂಗಪ್ಪನ ಕಟ್ಟೆ, ಗಂಗಯ್ಯನ ಕಟ್ಟೆ, ನಿಂಗಣ್ಣನ ಕಟ್ಟೆ, ಮಲ್ಲಮ್ಮನ ಕಟ್ಟೆ, ಸೂರಪ್ಪನ ವಡ್ಡು ಕಲ್ಲನಾಯ್ಯನ ಕಟ್ಟೆ, ಚುರ್ಚಯ್ಯನ ಕಟ್ಟೆ, ತಕಡಿ ಚೆನ್ನಬಸಯ್ಯನ ಕಟ್ಟೆ, ಮಾಣಿಯಮ್ಮನ ಕಟ್ಟೆ, ಆಚಯ್ಯನ ಕೆರೆ, ತಿಮ್ಮಪ್ಪಯ್ಯನ ಕೆರೆ ಹೀಗೆ ಇನ್ನೂ ಹಲವಾರು ವ್ಯಕ್ತಿಗಳ ಹೆಸರಿನಿಂದ ಕೆರೆಗಳು ಕರೆಯಲ್ಪಟುತ್ತಿವೆ.

ಒಂದು ವರ್ಗದವರಿಗೆ ಸೇರಿದ ಕೆರೆಗಳು

ಹಿಂದೆ ಸಾಮಾಜಿಕವಾಗಿ ಒಂದೊಂದು ವರ್ಗದವರಿಗೆ ಒಂದೊಂದು ಕೆರೆಯನ್ನು ಮೀಸಲಿಡುತ್ತಿದ್ದ ಪದ್ಧತಿ ಇತ್ತು. ಅವನ್ನು ಈ ರೀತಿ ವಿಂಗಡಿಸಬಹುದು. ಅಗಸನಕಟ್ಟೆ, ಬಡಗಿಕಟ್ಟೆ, ತುರುಕರ ಕಟ್ಟೆ, ಉಪ್ಪಾರನ ಕೆರೆ, ಪೂಜಾರಿ ಕೆರೆ, ಮೇಟಿವಾಳದ ಕಟ್ಟೆ, ಕೊಂಡಿಕಾರನ ಕಟ್ಟೆ, ದೇವಾಂಗದವರ ಕಟ್ಟೆ, ಗಾಣಿಗರ ಕೆರೆ ಹೀಗೆ ಇನ್ನೂ ಹಲವಾರು ಇಂತಹ ವರ್ಗವನ್ನು ಸೂಚಿಸುವ ಹೆಸರಿನ ಕೆರೆಗಳು ಕಂಡು ಬರುತ್ತವೆ.

ದೇಗುಲ ಅಥವಾ ದೇವರಿಗೆ ದೈವಗಳಿಗೆ ಸೇರಿದ್ದು

ಇಲ್ಲಿ ಹೆಚ್ಚಾಗಿ ಬಹಳಷ್ಟು ಕಡೆ ಗ್ರಾಮದೇವರ ಕೆರೆಯನ್ನು ಕಾಣಬಹುದು. ಇನ್ನು ರಾಮ, ವಿಠ್ಠಲ, ಭೀಮ, ಶಿವ, ದೇವಿ, ಬಸ್ತಿ, ಕಾಮ, ಬಸವರಿಂದ ಆರಂಭವಾಗುವ ಹಲವಾರು ಕೆರೆಗಳು ಇವೆ.

ಕೆರೆಯ ಬಳಿ ಇರುವ ಜಾಗೆಯ ಲಕ್ಷಣ

ಕೆರೆಗಳಿಗೆ ಅವು ಇರುವ ಜಾಗದ ಲಕ್ಷಣದ ಮೇಲೂ ಹೆಸರು ಬಂದಿರಬಹುದಾಗಿದೆ. ಉದಾ: ಕ್ಯಾದಿಗೆ ಬನ ಹತ್ತಿರವಿದ್ದಲ್ಲಿ ಕ್ಯಾದಿಗೆ ಸರವಿನ ಕೆರೆ, ಜಾಲಿಗಿಡಗಳ ಸರುವಿದ್ದರೆ ಜಾಲಿಕೆರೆ ಹೀಗೆ ಅರಳಿಕಟ್ಟೆ, ನೆಲ್ಲಿಕಟ್ಟೆ, ಹುಣಸೇಕಟ್ಟೆ, ಗೇಗೆ ಕಟ್ಟೆ, ಪತ್ರೆ ಕೆರೆ, ಕಳ್ಳಿಕಟ್ಟೆ, ಕಾನುಕಟ್ಟೆ, ಕಣಗಲುಕಟ್ಟೆ, ಬಿದಿರಿಕಟ್ಟೆ, ಹೊಲಕಟ್ಟೆ ಇನ್ನೂ ಮುಂತಾಗಿ ಕೆರೆಯ ಸಮೀಪದ ಭೂ ಲಕ್ಷಣವನ್ನು ಕೆರೆಗಳು ಸೂಚಿಸುತ್ತಿವೆ. ಕೆರೆಯ ಸ್ಥಿತಿ ಎಂತಾದ್ದು? ಸೂಚಿಸಲು ಇರುವ ಹೆಸರುಗಳು:

ಇಲ್ಲಿ ಕೆರೆಯಲ್ಲಿ ಜಡ್ಡು ತುಂಬಿದ್ದರೆ ಜಡ್ಡು ಕೆರೆ, ಕಳೆ ತುಂಬಿದ್ದರೆ ನ್ಯಾರೆ ಕಟ್ಟೆ, ಗಿಡಕಂಟಿಗಳ ಅವಶೇಷವಿದ್ದರೆ ಕೊರ‍್ಲುಕಟ್ಟೆ, ಹುಲ್ಲಿನ ದಪ್ಪ ಹಾಸಿದ್ದಲ್ಲಿ ತೆಪ್ಪದ ಕೆರೆ ಹೀಗೆ ಕೆಸರುಕಟ್ಟೆ, ತಾವರೆಕೆರೆ, ಬೆಂಡಿನ ಕೆರೆ, ಹಾಳು ಕೆರೆ, ಹೊಲಸುಕೆರೆ, ಎರೆಕೆರೆ ಮುಂತಾಗಿ ಅವುಗಳ ಸ್ಥಿತಿಯನ್ನು ಬಿಂಬಿಸುತ್ತಿವೆ.

ಇಷ್ಟಲ್ಲದೇ ಈ ಭಾಗದಲ್ಲಿ ಹೆಗ್ಗೇರಿ, ಊರಮುಂದಿನ, ತೋಟದ, ಮೇಲಿನ ಕೆಳಗಿನ ಕೆರೆ ಹೆಸರುಗಳು ಸಾಮಾನ್ಯ. ಕೆಲವೊಂದು ಹೆಸರುಗಳು ಸ್ವಾರಸ್ಯಕರವಾಗಿದೆ. ಉದಾ: ಜಗಳದ ಕಟ್ಟೆ! ಘಟಿಂಗನ ಕಟ್ಟೆ! ಕಡಬುಕೆರೆ! ಹುಳಿಮಜ್ಜಿಗೆ ಕೆರೆ! ಸುಣ್ಣ, ಎಡ್ಡೆ, ಗಂಜಿ, ಹಿಟ್ಟು, ಹುಲಿ, ಕರಡಿ, ನಾಗರ, ಕುದುರೆ, ಕೋಣ, ಹಂದಿ ಮುಂತಾದವು. ಜಿಗಳೆಯ ಆವಾಸವಿದ್ದಲ್ಲಿ ಜಿಗಳೆ ಹೊಂಡ, ಕಪ್ಪೆಯ ಆವಾಸವಿದ್ದಲ್ಲಿ ಕಪ್ಪೆಕೆರೆ ಹೀಗೆ ಕಾಲನಂತರ ಕೆರೆಗಳ ಇತಿಹಾಸ ಮಾಸಿ ಅವುಗಳ ಸ್ಥಿತಿ ಅಥವಾ ಬಳಸುವವರ ಹೆಸರಿನ ತಳಿಕೆ ಪಡೆದು ಮುಂದೊಮ್ಮೆ ಇವೇ ಹೆಸರು ಗಟ್ಟಿಯಾಗಿದ್ದು ಗಮನಿಸಬಹುದು. ಕೆರೆಯಿಂದಾಗಿ ಆ ಊರುಗಳಿಗೆ ಅದೇ ಹೆಸರು ಬಂದಿದೆ. ಉದಾ: ಕೋಣನ ಕಟ್ಟೆ, ಕೆರೆಹಳ್ಳಿ, ಕೆರೆಕೊಪ್ಪ, ಕ್ಯಾದಿಗ್ಗೇರಿ, ಬೆಂಡಿಗ್ಗೇರಿ, ಬದನಕಟ್ಟೆ, ಕಾಲಿಗ್ಗೇರೆ, ಮಲ್ಲಸಮುದ್ರ, ವಾತಂಗ ಸಮುದ್ರ, ಶಾಂತಗೆರೆ, ಕರಡಿಗೆರೆ, ತಾವರೆಕೊಪ್ಪ, ತಾವರೆಹಳ್ಳಿ ಹೊಳೆಕಟ್ಟೆ, ಕಟ್ಟಿನ ಕೆರೆ ಇನ್ನೂ ಮುಂತಾಗಿ.

ತಾಲ್ಲೂಕಿನ ಶಾಸನಗಳಲ್ಲಿ ಹೆಚ್ಚಾಗಿ ಸೆಟ್ಟಿಯರು ಕೆರೆ ಕಟ್ಟಿಸಿದ್ದಕ್ಕೆ ಆಧಾರವಿದೆ. ಅಂತೆಯೇ ಶಾಸನುಲ್ಲೇಖವಿಲ್ಲದ ಸೆಟ್ಟಿಯ ಹೆಸರಿನಿಂದ ಕರೆಯಲ್ಪಡುವ ಕೆರೆಗಳು ಸಾಕಷ್ಟಿವೆ. ಈ ಹೆಸರುಗಳಲ್ಲಿ ಅಲ್ಪವಾದರೂ ಕೆರೆಯ ನಿರ್ಮಾತೃಗಳನ್ನು ನೆನೆಯುತ್ತಿರಬಹುದು.

ಕೆರೆಗಳಿಗೆ ಸಂಬಂಧಿಸಿದ ದೇವತೆಗಳು ಮತ್ತು ವಿಧಿಗಳು

ಈ ಭಾಗದ ಕೆರೆಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವಂತಾದ್ದೆಂದರೆ, ಇಲ್ಲಿನ ತೂಬಿನ ಮೇಲಿನ ಗಜಲಕ್ಷ್ಮಿ ಉಬ್ಬು ಫಲಕ. ಇವುಗಳ ಶಿಲ್ಪ ಲಕ್ಷಣದ ಮೇಲೆ ಆ ಕೆರೆಯ ಪ್ರಾಚೀನತೆಯನ್ನು ಸಹಾ ಗುರುತಿಸಬಹುದು. ಕ್ರಿ.ಶ. ೧೦ ರಿಂದ ೧೨ನೇ ಶತಮಾನಕ್ಕೆ ಸೇರಬಹುದಾದ ಇಂತಹ ಫಲಕಗಳು ಕುಪ್ಪಗಡ್ಡೆ, ಕುಬಟೂರು, ಕೊಡಕಣಿ, ಉರುಗನಹಳ್ಳಿ, ಕುಲುಗು, ಬೆನ್ನೂರು, ನೆಗವಾಡಿ, ಬಾಸೂರು, ಅಂಡಿಗೆ, ಚೀಲನೂರು, ಓಟೂರು ಇನ್ನು ಮುಂತಾದೆಡೆ ಇಂತಹ ಶಿಲ್ಪಗಳನ್ನು ಕೆರೆಯ ತೂಬಿಗೆ ಬಳಸಲಾಗಿದೆ. ಸಮೃದ್ಧ ಬೆಳೆಯನ್ನೂ ಕೆರೆಯನ್ನು ಆಶಿಸುವ ರೈತ ಸಮೃದ್ಧಿಗೆ ಸಂಕೇತವಾದ ಗಜಲಕ್ಷ್ಮಿಯನ್ನು ಇಲ್ಲಿ ಬಳಸಿ ಹಿಂದೊಮ್ಮೆ ಆರಾಧಿಸಿರಬಹುದಾಗಿದೆ. ಓಟೂರಿನ ಹಾಗೂ ನೆಗವಾಡಿಯ ಕೆರೆಯ ಬಳಿ ಇರುವ ಇಂತಹ ಫಲಕಗಳಲ್ಲಿ ಮಹಿಷ ಮರ್ಧಿನಿಯ ಚಿತ್ರಣವಿದೆ. ಈಕೆ ದುರ್ಗೆ ಇಲ್ಲಿ ಹುಲುಸಿನ ಸಂಕೇತವಾಗಿ ಆಕೆಯನ್ನು ಆರಾಧಿಸಿರುವಂತಿದೆ. ತೀರಾ ಅಪರೂಪದ ಶಿಲ್ಪ ಇದೇ ತಾಲ್ಲೂಕಿನ ಚಿಟ್ಟೂರು, ಉಳವಿಯ ಕೆರೆಯ ಬಳಿ ಕಂಡು ಬಂದಿವೆ. ಈ ಶಿಲ್ಪಗಳು ಸುಮಾರು ೩ – ೪ ಅಡಿ ಎತ್ತರವಿದ್ದು, ಸ್ವಮೈಥುನ ಭಂಗಿಯಲ್ಲಿವೆ. ಸ್ತ್ರೀ – ಪುರುಷರ ಈ ಭಂಗಿಗೆ ತಾಂತ್ರಿಕರ ನೆರಳಿದ್ದು, ಇವುಗಳನ್ನು ಡಾ.ಅ. ಸುಂದರರು ‘ಕೃಷಿ ಆವಂದ್ಯ ಕಲ್ಪ’ ಎಂದು ಗುರುತಿಸಿದ್ದಾರೆ.[39] ಪ್ರಸ್ತುತ ಮೇಲಿನ ಶಿಲ್ಪಗಳ ಆರಾಧನೆ ನಡೆಯುತ್ತಿಲ್ಲ.

ಗಜಲಕ್ಷ್ಮಿ ಫಲಕ, ಕೋಡಿಹಳ್ಳಿ

ಗಜಲಕ್ಷ್ಮಿ ಫಲಕ, ಕೋಡಿಹಳ್ಳಿ

ಗಜಲಕ್ಷ್ಮಿ ಫಲಕ, ನೆಗವಾಡಿ

ಗಜಲಕ್ಷ್ಮಿ ಫಲಕ, ನೆಗವಾಡಿ

ಈಗ್ಗೆ ಕೆಲವು ವಿಧಿಗಳು ತಲತಲಾಂತರದಿಂದ ತಪ್ಪದೇ ಆಚರಣೆಯಲ್ಲಿವೆ. ದೇವತೆಗಳ ಸ್ಥಾನವನ್ನು ಚೌಡಿ, ಭೂತಗಳು ಪಡೆದಿವೆ. ಗ್ರಾಮೀಣ ಪ್ರದೇಶದಲ್ಲಿ ಸಿಕ್ಕಿಕೊಂಡು ಚೌಡಿ, ಭೂತದ ಸ್ಥಾನವಿರುತ್ತದೆ. ಅಂತೆಯೇ ಕೆರೆಗೂ ಕೂಡ ಒಂದೋ ಎರಡೋ ಇಂತಹ ಸ್ಥಾನಗಳು ಸಾಮಾನ್ಯ. ಇವುಗಳ ಆರಾಧನಾ ಸಮಯ ಹೆಚ್ಚಾಗಿ ಕೆರೆಯ ತೂಬನ್ನು ತೆಗೆಯುವಾಗ. ಈ ವೇಳೆ ಅವರವರ ಆರ್ಥಿಕ ಅನುಕೂಲತೆಗೆ ತಕ್ಕಂತೆ ಪ್ರಾಣಿಬಲಿಯ ಮುಖಾಂತರ ಆರಾಧಿಸುವ ಪರಿಯುಂಟು. ಇನ್ನೂ ಸಾಮೂಹಿಕವಾಗಿ ಆಚರಿಸುತ್ತಾರೆ. ಇನ್ನು ವಿಶೇಷವಾಗಿ ಕೆರೆ ಸಂಬಂಧಿ ಆಚರಣೆಗಳು ಅಲ್ಲಲ್ಲಿ ಉಂಟು. ಮಾವಲಿ ಗ್ರಾಮದ ಬೆಂಡೇ ಕೆರೆ ಕೋಡಿ ಬಿದ್ದಾಗ ಇಲ್ಲಿನ ಲಿಂಗಾಯತ ಕೋಮಿಗೆ ಸೇರಿದ ದೆನ್ಸಾಲೆ ಮನೆತನದವರು ಸಾತ್ವಿಕ ನೈವೇದ್ಯದಿಂದ ಪೂಜಿಸುತ್ತಾರೆ. ಬೆದವಟ್ಟಿಯ ಬಂಗಾರಿವಡ್ಡು ಕಾಲುವೆ ಹರಿಯುವಾಗ ಇಡೀ ಗ್ರಾಮದವರು ಸೇರಿ ಎಡೆಮಾಡಿ ನೀರಿಗೆ ಬಿಡುವ ಪದ್ಧತಿ ಇದೆ. ಹಿರೇಚೌಟಿಯಲ್ಲಿ ಏಳುಬಾವಿ ಗಂಗವ್ವನ ಪೂಜೆಯನ್ನು, ಜಾತ್ರೆಯನ್ನು ವರ್ಷಂಪ್ರತಿ ಆಚರಿಸುವ ಪದ್ಧತಿಯನ್ನಿಟ್ಟುಕೊಂಡಿದ್ದಾರೆ. ಕುಬಟೂರಿನ ಕೆರೆ ತುಂಬಿದಾಗ ಇಲ್ಲಿನ ಲಿಂಗಾಯತ, ಮುದ್ದಾಂಡ್ರು ಕುಟುಂಬ ಗಂಗೆ ಪೂಜೆ ಮಾಡುತ್ತಾರೆ. ಈ ರೀತಿ ಕೆರೆ ತುಂಬಿದಾಗ ಹಸಿರು ಸೀರೆ, ಬಳೆ, ಬಿಚ್ಚೋಲೆ, ಅರಿಶಿನ, ಕುಂಕುಮ ಹಾಗೂ ನಿರ್ದಿಷ್ಟ ತಿಂಡಿಗಳನ್ನು ಕರೆಗೆ ಬಿಡುವ ಪದ್ಧತಿ ಕೆಲವೆಡೆ ಉಂಟು.

ಪ್ರಸ್ತುತದ ಸ್ಥಿತಿ

ಈ ತಾಲ್ಲೂಕಿನಲ್ಲಿ ಅವಶ್ಯವಿರುವಷ್ಟು ಕೆರೆಗಳು ಈಗಾಗಲೇ ಇವೆ. ಕೆಳದಿ ಅರಸರ ಕಾಲದ ನಂತರ (ಕ್ರಿ.ಶ. ೧೬ – ೧೮ನೇ ಶತಮಾನದ ನಂತರ) ಇಲ್ಲಿನ ಕೆರೆಗಳಿಗೆ ಯಾವುದೇ ರೀತಿಯ ಕಾಯಕಲ್ಪ ನಡೆದಿಲ್ಲ. ಭೂ ಪರಿವೇಕ್ಷಣ ಇಲಾಖೆಯ ಕ್ರಿ.ಶ. ೧೯೬೧ – ೬೨ರ ಸಾಲಿನ ದಾಖಲೆಯ ವರದಿಯನ್ವಯ ಇಲ್ಲಿನ ಕೆರೆಗಳು ಆಗಲೇ ಹೂಳು ತುಂಬಿದ್ದವು. ತೂಬುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ೧೯೬೭ ರಿಂದ ೧೯೮೭ರವರೆಗೆ ಅಲ್ಲಲ್ಲಿ ತೂಬು ರಿಪೇರಿ ನಡೆದಿದೆಯೇ ವಿನಃ ಕೆರೆಯ ನೀರಿನ ಸಾಮರ್ಥ್ಯ ಹೆಚ್ಚಿಸಲು ಯಾವುದೇ ಯೋಜನೆ ನಡೆದಿಲ್ಲ. ಬದಲಿಗೆ ಇಪ್ಪತ್ತಕ್ಕೂ ಹೆಚ್ಚು ಕಿರುವಡ್ಡಿನ ನಿರ್ಮಾಣವಾಗಿದ್ದು ಪ್ರಸ್ತುತ ತಾಂತ್ರಿಕ ಅಸಮರ್ಥತೆಯಿಂದಾಗಿ ಇವು ಉಪಯುಕ್ತವಾಗಿಲ್ಲ. ಇಲ್ಲಿ ನೀರಿನ ಬಳಕೆ ಅಧಿಕವಾಗಿದೆಯೇ ವಿನಃ ನೀರು ಸಂಗ್ರಹಣೆ ಸಾಮರ್ಥ್ಯ ಅರ್ಧದಷ್ಟು ಹೆಚ್ಚಲಿಲ್ಲ. ಇದಕ್ಕೆ ಕಾರಣ ಕೇವಲ ಹೂಳು ತುಂಬುವಿಕೆಯೊಂದೇ ಅಲ್ಲ. ಮುಖ್ಯವಾಗಿ ನೀರು ಹಂಚಿಕೆಯಲ್ಲಿನ ಅಶಿಸ್ತು. ಇಡೀ ತಾಲ್ಲೂಕಿನಲ್ಲಿ ಎಲ್ಲಿಯೂ ನೀರು ಹಂಚಿಕೆ ವಿಧಾನದಲ್ಲಿ ನೀತಿ ಇಲ್ಲ. ತೂಬು ಇದ್ದಂತೆಯೇ ಆ ಕಾಲದಲ್ಲಿ ಸೈಪನ್ ಅಥವಾ ನೀರು ಯಂತ್ರವನ್ನು ಬಳಸಿ ಕೆಲವೇ ಕೆಲವು ಎಕರೆ ಭೂಮಿಗಾಗಿ ಹೆಚ್ಚಿನ ನೀರನ್ನು ವ್ಯಯ ಮಾಡಲಾಗುತ್ತದೆ. ತೂಬು ತೆರೆದು ನಂತರ ಕೆರೆಯ ನೀರು ಒಣಗುವ ತನಕವೂ ತೂಬು ಮುಚ್ಚುವ ಕಾರ್ಯ ನಡೆಯುತ್ತಿಲ್ಲ. ಕೇವಲ ೩೫ – ೪೦ ವರ್ಷಗಳ ಹಿಂದೆ ನೀರು ಹಂಚಿಕೆ ಕಾರ್ಯಕ್ಕೆ ಸ್ಥಾನಿಕ ಆಡಳಿತ ಘಟಕವಿತ್ತು. ಇಲ್ಲಿ ನೀರ‍್ಗಂಟೆ ಹಂತ ಹಂತವಾಗಿ ಜಮೀನುಗಳಿಗೆ ನೀರನ್ನು ಹಂಚುತ್ತಿದ್ದ. ಹಾಗಾಗಿ ನೀರು ವ್ಯಯವಾಗುತ್ತಿರಲಿಲ್ಲ. ಕೆರೆ, ಕಾಲುವೆ, ಕೋಡಿಗಳ ಸಣ್ಣ ಪುಟ್ಟ ನಿರ್ವಹಣೆ ಗ್ರಾಮದ ಬಿಟ್ಟಿ ಸೇವೆಯಲ್ಲಿಯೇ ನಡೆಯುತ್ತಿತ್ತು. ಈಗ ಇಂತಹ ಕೆಲಸ ಸರ್ಕಾರದ್ದೆಂಬ ಮನೋಭಾವದಿಂದಾಗಿ ಸಾಮಾನ್ಯ ನಿರ್ವಹಣೆಯೂ ಆಗುತ್ತಿಲ್ಲ. ಅಧಿಕ ಒಣಭೂಮಿ ಬೇಸಾಯಕ್ಕಾಗಿ ತೀರಾ ಕಡಿಮೆ ಅಂತರದಲ್ಲಿ ಕೊಳವೆ ಬಾವಿಗಳ ನಿರ್ಮಾಣ. ನೀರಿನ ಸಂಗ್ರಹದ ಸಾಮರ್ಥ್ಯಕ್ಕಿಂತಲೂ ಹತ್ತು ಪಟ್ಟು ನೀರಾವರಿ ಅವಲಂಬಿತ ಬೆಳೆಗಳನ್ನು ಬೆಳೆಯುತ್ತಿರುವುದು; ನದಿ, ಹಳ್ಳಗಳಿಗೆ ತಡೆ ಹಾಕಿ ಅಲ್ಲಿಂದ ನೇರವಾಗಿ ಕೃಷಿಗೆ ನೀರು ಬಳಸುವುದರಿಂದ ನದಿಯ ಕೆಳಭಾಗ ಒಣಗಿ ಸುತ್ತಮುತ್ತಲ ಕೆರೆ ಬಾವಿಗಳಿಗೆ ನೀರು ಸಂಗ್ರಹವಾಗುತ್ತಿಲ್ಲ. ಇತ್ತೀಚೆಗೆ ಕೆರೆಯ ಅಂಗಳವನ್ನು ಕೃಷಿಗಾಗಿ ಆಕ್ರಮಿಸಲಾಗುತ್ತಿದೆ. ಇದರಿಂದಾಗಿ ಕೆರೆಯ ವ್ಯಾಪ್ತಿ ಕುಗ್ಗುವುದಲ್ಲದೆ, ತಮ್ಮ ಜಮೀನಿನ ಮುಳುಗಡೆ ತಪ್ಪಿಸಲು ಮಳೆಗಾಲದಲ್ಲಿ ಕೋಡಿ ತಡೆ ಒಡೆದು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಲಾಗುತ್ತಿದೆ. ದೊಡ್ಡ ಕೆರೆಯ ಈ ರೀತಿಯಿಂದಾಗಿ ಸಣ್ಣ ಪುಟ್ಟ ಕೆರೆಗಳು ಸಹಜವಾಗಿ ನಿರಪಯೋಗಿಯಾಗಿವೆ. ತಾಲ್ಲೂಕಿನ ಒಟ್ಟು ೧೧೮೭ ಕೆರೆಗಳ ವಿಸ್ತೀರ್ಣದಲ್ಲಿ ಸುಮಾರು ೨ – ೩ ಸಾವಿರ ಎಕರೆ ಕೆರೆ ಅಂಗಳ ಈ ರೀತಿ ಆಕ್ರಮಿಸಲ್ಪಟ್ಟಿದೆ. ಕಾಡಂಚಿನ ಒತ್ತುವರಿಯಿಂದಾಗಿ ನೀರು ಬಸಿಯುವ ಕಾಲುವೆ ಮುಚ್ಚಲ್ಪಟ್ಟ ಕೆರೆಗಳಿಗೆ ನೀರು ಸಂಗ್ರಹವಾಗುತ್ತಿಲ್ಲ. ಇಡೀ ತಾಲ್ಲೂಕಿನಲ್ಲಿ ಕೆರೆಗಳ ಸಂಖ್ಯೆ ಅಪಾರವಾದಾಗ್ಯೂ ಈ ಎಲ್ಲ ಕಾರಣದಿಂದಾಗಿ ಕೃಷಿ ಭೂಮಿಯ ಕೇವಲ ಭಾಗ ೧/೪ ಭಾಗದಷ್ಟು ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯ ಪಡೆದಿವೆ.

ತಾಲ್ಲೂಕಿನ ಹಲವಾರು ದೊಡ್ಡ ಕೆರೆಗಳು ಇಂದು ದುಸ್ಥಿತಿಯಲ್ಲಿವೆ. ಮೈಸಾವಿ ಗ್ರಾಮದ ವೀರನ ಕೆರೆ ಇಂದೂ ದುರಸ್ಥಿಯಾದಲ್ಲಿ ೭೦೦ಕ್ಕೂ ಹೆಚ್ಚು ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿನ ಕುಬಟೂರು, ಹೆಚ್ಚೆ, ಉರುಗನಹಳ್ಳಿ, ಬೆದವಟ್ಟಿ, ತಲ್ಲೂರು, ಮೂಡಿ, ತೆಲಗಡ್ಜೆ ಕೆರೆಗಳನ್ನು ದುರಸ್ತಿ ಮಾಡಿದಲ್ಲಿ ತಾಲ್ಲೂಕಿನ ಬಹುತೇಕ ಪ್ರದೇಶ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳುತ್ತವೆ. ಕೇವಲ ತಾಂತ್ರಿಕ ಸುಧಾರಣೆಯಿಂದಷ್ಟೇ ಪರಿಹಾರ ಸಿಗುವುದಿಲ್ಲ. ಕಾನೂನಿನ ಭದ್ರತೆ ಕೂಡ ಪ್ರಸ್ತುತ ಅವಶ್ಯವಿದೆ. ಒಟ್ಟಾರೆ ತಾಲ್ಲೂಕಿನ ಕೆರೆಗಳ ಮಹತ್ವವನ್ನು ನಾವು ಇತಿಹಾಸದಲ್ಲಿ ಗಮನಿಸಬಹುದೇ ವಿನಃ ನಂತರ ಕಾಲದಲ್ಲಿ ಅಲ್ಲ. ಇಡೀ ತಾಲ್ಲೂಕಿನಲ್ಲಿ ಒಂದೇ ಒಂದು ಕೆರೆ ಮಹತ್ವದ್ದು, ಆದರೆ ಅದು ನೀರಾವರಿಯಿಂದ ಹೊರತಾಗಿದ್ದು, ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡಿದೆ, ಅದೇ ಗುಡವಿಯ ಕೆರೆ.

Table – 1*

ಕ್ರ. ಸಂ. ಹೋಬಳಿ ಗ್ರಾಮಗಳು ಕೃಷಿ ಯೋಗ್ಯ ಭೂ (ಹೆ) ಕೆರೆಗಳ ಸಂಖ್ಯೆ ಅಚ್ಚುಕಟ್ಟು ಪ್ರದೇಶ (ಎ) ಉಪಪಾತ್ರ ಮುಖ್ಯಪಾತ್ರ
೧. ಕಸಬಾ ೫೯ ೪೫೬೪ ೨೧೫ ೯೫೯೫ ದಂಡಾವತಿ ನದಿ ವರದಾ ನದಿ ಕೃಷ್ಣಾನದಿ
೨. ಆನವಟ್ಟಿ ೫೦ ೮೬೪೧ ೩೮೭ ೧೮.೯೨೬ ಮೂಗೂರು ಹಳ್ಳ ದಂಡಾವತಿ ನದಿ ನದಿ ವರದಾ ನದಿ ಕೃಷ್ಣಾನದಿ
೩. ಉಳವಿ ೬೩ ೩೫೯೦ ೧೯೧ ೮೬೭೨ ದಂಡಾವತಿ ನದಿ ವರದಾ ನದಿ ಕೃಷ್ಣಾನದಿ
೪. ಕುಪ್ಪಗಡ್ಡೆ ೩೫ ೩೮೩೬ ೧೯೭ ೬೪೬೯ ದಂಡಾವತಿ ನದಿ ವರದಾ ನದಿ ಕೃಷ್ಣಾನದಿ
೫. ಚಂದ್ರಗುತ್ತಿ ೩೬ ೨೧೪೧ ೮೫ ೪೧೬೧ ವರದಾ ನದಿ ತದ್ರಿಹಳ್ಳಿ ಕೃಷ್ಣಾನದಿ ವೆಸ್ಟ್ ಕೋಸ್ಟ್
೬. ಜಡೆ ೩೫ ೩೩೨೪ ೧೦೨ ೭೧೩೮ ಜಡೆಹಳ್ಳ ಕೃಷ್ಣಾನದಿ
  ಒಟ್ಟು ೨೭೮ ೨೬.೦೯೬ ೧೧೮೭ ೫೪.೯೬೧    

ವಿವಿಧ ಇಲಾಖೆಗಳ ಅಂಕಿ ಅಂಶಗಳು ಅನ್ವಯ
* ಸ್ಥಳ ಅಧ್ಯಯನದಲ್ಲಿ ಸ್ಥಳೀಕರ ಹೇಳಿಕೆಯ ಅನ್ವಯ

 

Table – 2*

ಕ್ರ. ಸಂ. ಗ್ರಾಮ
ಮತ್ತು ಕೆರೆ
ಕೆರೆಯ ವ್ಯಾಪ್ತಿ (ಅಂದಾಜು ಎಕರೆಗಳಲ್ಲಿ) ಅಚ್ಚುಕಟ್ಟು ಪ್ರದೇಶ (ಅಂದಾಜು ಎಕರೆಗಳಲ್ಲಿ) ಪ್ರಾದೇಶಿಕ ಲಕ್ಷಣ ಕೆರೆಯ ಇಂದಿನ ಸ್ಥಿತಿ ಕೆರೆ ಒತ್ತುವರಿ
೧. ಕುಬಟೂರು ದೊಡ್ಡರೆಕೆ ೧೫೦ ೯೦೦ ಅರೆಮಲೆನಾಡು ಮಧ್ಯಮ ಆಗಿಲ್ಲ
೨. ಮೂಗೂರು ಭೂ ಕೆರೆ ೧೦೦ ೬೭೦ ಅರೆಮಲೆನಾಡು ಮಧ್ಯಮ ಆಗಿದೆ
೩. ತಲ್ಲೂರು ಲಬ್ಳಕೆರೆ ೭೦ ೪೧೭ ಅರೆಮಲೆನಾಡು ಮಧ್ಯಮ ಆಗಿಲ್ಲ
೪. ಹೊಸಳ್ಳಿ ಊರ ಮುಂದಿನ ಕೆರೆ ೫೫ ೩೦೮ ಅರೆಮಲೆನಾಡು ಮಧ್ಯಮ ಆಗಿದೆ
೫. ಮಾವಲಿ ಬೆಂಡೆ ಕೆರೆ ೨೮ ೨೫೦ ಅರೆಮಲೆನಾಡು ಮಧ್ಯಮ ಆಗಿದೆ
೬. ಅಂಡಿಗೆ ತೋಟದ ಕೆರೆ ೨೫ ೨೫೦ ಅರೆಮಲೆನಾಡು ಮಧ್ಯಮ ಆಗಿದೆ
೭. ದೇವತಿ ಕೊಪ್ಪ ದೊಡ್ಡಕೆರೆ ೭೫ ೪೦೦ ಅರೆಮಲೆನಾಡು ಮಧ್ಯಮ ಆಗಿದೆ
೮. ಹುರಳಿ ದೊಡ್ಡಕೆರೆ ೪೦ ೨೪೦ ಅರೆಮಲೆನಾಡು ಮಧ್ಯಮ ಆಗಿದೆ
೯. ಮೂಡಿ ದೊಡ್ಡಕೊಪ್ಪ ೯೦ ೬೦೧ ಅರೆಮಲೆನಾಡು ಮಧ್ಯಮ ಆಗಿದೆ
೧೦. ಹಿರೇಚೌಟಿ ದೊಡ್ಡಕೆರೆ ೨೩ ೨೪೮ ಅರೆಮಲೆನಾಡು ಮಧ್ಯಮ ಆಗಿದೆ
೧೧. ಭಾರಂಗಿ ಹಿರೇಕೆರೆ ೫೦ ೩೦೫ ಅರೆಮಲೆನಾಡು ಮಧ್ಯಮ ಆಗಿದೆ
೧೨. ಚಿಟ್ಟೂರು ದೊಡ್ಡಕೆರೆ ೫೫ ೩೫೦ ಅರೆಮಲೆನಾಡು ಮಧ್ಯಮ ಆಗಿದೆ
೧೩. ಹಂಚಿ ಹರಳಕಟ್ಟೆ ೩೦ ೧೮೦ ಅರೆಮಲೆನಾಡು ಮಧ್ಯಮ ಆಗಿದೆ
೧೪. ಕಮಸವಳ್ಳಿ ತೋಟದ ಕೆರೆ ೪೫ ೨೦೦ ಅರೆಮಲೆನಾಡು ಮಧ್ಯಮ ಆಗಿದೆ
೧೫. ನೇರಲಿಗೆ ಕಾನಕಟ್ಟೆ ೪೦ ೨೦೦ ಅರೆಮಲೆನಾಡು ಮಧ್ಯಮ ಆಗಿದೆ
೧೬. ಎಡ್ಡೆಕೊಪ್ಪ ಸಾವಗಟ್ಟೆ ೪೫ ೨೨೦ ಅರೆಮಲೆನಾಡು ಮಧ್ಯಮ ಆಗಿದೆ
೧೭. ತೆಲಗಡ್ಡೆ ದೊಡ್ಡಕೆರೆ ೭೦ ೬೦೦ ಅರೆಮಲೆನಾಡು ಮಧ್ಯಮ ಆಗಿದೆ
೧೮. ಹೆಚ್ಚೆ ತೋಟದ ಕೆರೆ ೭೧ ೪೦೦ ಮಲೆನಾಡು ಮಧ್ಯಮ ಆಗಿದೆ
೧೯. ಮೈಸಾವಿ ವೀರನಕೆರೆ ೮೦ ೧೦೦ ಮಲೆನಾಡು ಕನಿಷ್ಠ ಆಗಿದೆ
೨೦. ಚಗಟೂರು ದೊಡ್ಡಕೆರೆ ೪೦ ೨೬೭ ಮಲೆನಾಡು ಮಧ್ಯಮ ಆಗಿದೆ
೨೧. ತೆಲಗುಂದ ಹಿರೇಕೆರೆ ೪೬ ೩೩೧ ಮಲೆನಾಡು ಮಧ್ಯಮ ಆಗಿದೆ
೨೨. ಜಡೆ ಚೌಡಿಕೆರೆ ೪೦ ೨೪೫ ಮಲೆನಾಡು ಮಧ್ಯಮ ಆಗಿದೆ
೨೩. ಕುಪ್ಪಗಡ್ಡೆ ದೊಡ್ಡಕೆರೆ ೪೫ ೩೦೦ ಮಲೆನಾಡು ಮಧ್ಯಮ ಆಗಿದೆ
೨೪. ಕೆರೆಹಳ್ಳಿ ದೊಡ್ಡಕೆರೆ ೩೦ ೧೨೦ ಮಲೆನಾಡು ಮಧ್ಯಮ ಆಗಿದೆ
೨೫. ಚಂದ್ರಗುತ್ತಿ ತಾವರೆಕೆರೆ ೩೦ ೩೦೦ ಮಲೆನಾಡು ಮಧ್ಯಮ ಆಗಿಲ್ಲ
೨೬. ಚಿನ್ನೂರು ದೊಡ್ಡಕೆರೆ ೩೫ ೩೦೦ ಮಲೆನಾಡು ಮಧ್ಯಮ ಆಗಿದೆ
೨೭. ಕಮರೂರು ಹಿರೇಕೆರೆ ೩೦ ೨೪೫ ಮಲೆನಾಡು ಮಧ್ಯಮ ಆಗಿದೆ
೨೮. ಬಿಳಗಲಿ ದೊಡ್ಡಕೆರೆ ೪೦ ೩೨೫ ಮಲೆನಾಡು ಮಧ್ಯಮ ಆಗಿದೆ
೨೯. ಶಂಕ್ರಿ ಕೊಪ್ಪ ಅರಸಿಕೆರೆ ೫೫ ೪೭೫ ಮಲೆನಾಡು ಮಧ್ಯಮ ಆಗಿದೆ
೩೦. ಕೊಡಕಣಿ ತಾವರೆಕೆರೆ ೪೦ ೨೫೦ ಮಲೆನಾಡು ಮಧ್ಯಮ ಆಗಿದೆ

* ಸ್ಥಳ ಅಧ್ಯಯನದಲ್ಲಿ ಸ್ಥಳೀಕರ ಹೇಳಿಕೆಯ ಅನ್ವಯ.

 

Table – 3

ಕ್ರ. ಸಂ. ಊರುಗಳ ಹೆಸರುಗಳು ಅಲ್ಲಿರುವ ಕೆರೆಗಳ ಸಂಖ್ಯೆ ಆ ಪ್ರದೇಶಧ ಭೂಮಿಯ ಮಣ್ಣು
೧. ಮೂಡಿ ದೊಡ್ಡಿಕೊಪ್ಪ ೨೭ ಕಪ್ಪು ಎರೆ + ಮರಳು ಮಿಶ್ರ
೨. ತತ್ತೂರು ೨೫ ಕಪ್ಪು ಎರೆ
೩. ಗಿಣಿವಾಲ ೨೫ ಕಪ್ಪು ಎರೆ
೪. ಹಂಚಿ ೨೩ ಕಪ್ಪು ಎರೆ
೫. ನೆಗವಾಡಿ ೨೩ ಕಪ್ಪು ಎರೆ
೬. ಹಿರೇಮಾಗಡಿ ೧೯ ಕಪ್ಪು ಎರೆ
೭. ಕುಬಟೂರು ೧೫ ಕಪ್ಪು ಎರೆ
೮. ಭಾರಂಗಿ ೧೫ ಕಪ್ಪು ಎರೆ
೯. ಬೆದವಟ್ಟಿ ೧೦ ಕಪ್ಪು ಎರೆ
೧೦. ಮಾವಲಿ ೧೦ ಕಪ್ಪು ಎರೆ
೧೧. ಕುಪ್ಪಗಡ್ಡೆ ೧೮ ಜಂಬಿಟ್ಟಿಗೆ
೧೨. ಹೆಚ್ಚೆ ೧೦ ಜಂಬಿಟ್ಟಿಗೆ
೧೩. ಕೆರೆಹಳ್ಳಿ ಜಂಬಿಟ್ಟಿಗೆ + ಮರಳು ಮಿಶ್ರ
೧೪. ಸಾರೇ ಕೊಪ್ಪ ಜಂಬಿಟ್ಟಿಗೆ
೧೫. ತವನಂದಿ ಜಂಬಿಟ್ಟಿಗೆ
೧೬. ಹಳೇ ಸೊರಬ ಜಂಬಿಟ್ಟಿಗೆ
೧೭. ಯಲಸಿ ಜಂಬಿಟ್ಟಿಗೆ

* ಸಣ್ಣ ನೀರಾವರಿ ಹಾಗೂ ಕೃಷಿ ಇಲಾಖೆಯ ಅಂಕಿ ಅಂಶಗಳನ್ವಯ

ನಕಾಶೆ - ೧

ನಕಾಶೆ – ೧

ನಕಾಶೆ - ೨

ನಕಾಶೆ – ೨

ನಕಾಶೆ - ೩

ನಕಾಶೆ – ೩

ನಕಾಶೆ - ೪

ನಕಾಶೆ – ೪

ಸೊರಬ ತಾಲೂಕಿನ ಶಾಸನೋಕ್ತ ಕೆರೆಗಳು (ಕ್ರಿ.ಶ. ೭೦೦ - ೧೬೨೦)

ಸೊರಬ ತಾಲೂಕಿನ ಶಾಸನೋಕ್ತ ಕೆರೆಗಳು (ಕ್ರಿ.ಶ. ೭೦೦ – ೧೬೨೦)

[1]ಎಪಿಗ್ರಾಫಿಯ ಕರ್ನಾಟಕಾ VIII ನಂ. ೪೧೧ ಕ್ರಿ.ಶ. ೭೦೦ ಹಿರೇಮಾಗಡಿ.

[2]ಮೈ.ಆ.ರಿ. ೧೯೪೧ ನಂ.೨೯ ಪು. ೧೯೨. ಕ್ರಿ.ಶ. ೭೯೭, ಮಾವಲಿ.

[3]ಎ.ಕ.VIII ನಂ. ೧ ಕ್ರಿ.ಶ. ೭೯೭ ಮಾವಲಿ.

[4]ಎ.ಕ.VIII ನಂ. ೨೩ ಕ್ರಿ.ಶ. ? ಮನಮನೆ.

[5]ಎ.ಕ.VIII ನಂ. ೨೧೬ ಕ್ರಿ.ಶ. ೯೦೩ ಕೆರೆಹಳ್ಳಿ.

[6]ಎ.ಕ.VIII ನಂ. ೪೭೪ ಕ್ರಿ.ಶ. ೯೫೪ ಕಕ್ಕರಶಿ.

[7]ಎ.ಕ.VIII ನಂ. ೫೩೭ ಕ್ರಿ.ಶ. ೯೬೪ ಹುನವಳ್ಳಿ.

[8]ಎ.ಕ.VIII ನಂ. ೪೪ ಕ್ರಿ.ಶ. ೯೭೧ ಜಂಬೆಹಳ್ಳಿ.

[9]ಅದೇ.

[10]ಎ.ಕ.VIII ನಂ. ೨೧೬ ಕ್ರಿ.ಶ. ೯೦೩ ಕೆರೆಹಳ್ಳಿ.

[11]ಎ.ಕ.VIII ನಂ. ೪೭೪ ಕ್ರಿ.ಶ. ೯೫೪ ಕಕ್ಕರಶಿ.

[12]ಎ.ಕ.VIII ನಂ. ೪೪ ಕ್ರಿ.ಶ. ೯೭೧ ಜಂಬೆಹಳ್ಳಿ.

[13]ಎ.ಕ.VIII ನಂ. ೫೩೭ ಕ್ರಿ.ಶ. ೯೬೪ ಹುನವಳ್ಳಿ.

[14]ಎ.ಕ.VIII ನಂ. ೩೧೭ ಕ್ರಿ.ಶ. ೧೦೭೧ ಲಕ್ಕವಳ್ಳಿ.

[15]ಎ.ಕ.VIII ನಂ. ೪೬೮ ಕ್ರಿ.ಶ. ೧೧೧೨ ಕುಂಟಗಳಲೆ.

[16]ಎ.ಕ.VIII ನಂ. ೩೫೯ ಕ್ರಿ.ಶ. ೧೧೨೯ ಬೆನ್ನೂರು.

[17]ಎ.ಕ.VIII ನಂ. ೧೩೨ ಕ್ರಿ.ಶ. ೧೧೫೧ ಹಿರಿಯಾವಲಿ.

[18]ಎ.ಕ.VIII ನಂ. ೨೩೭ ಕ್ರಿ.ಶ. ೧೨೨೧ ಹಿರೇಚೌಟಿ.

[19]ಎ.ಕ.VIII ನಂ. ೩೦೦ ಕ್ರಿ.ಶ. ೧೨೫೨ ತೊರವಂದ.

[20]ಎ.ಕ.VIII ನಂ. ೧೮೭ ಕ್ರಿ.ಶ. ೧೨೭೮ ಕುಪ್ಪಗಡ್ಡೆ.

[21]ಎ.ಕ.VIII ನಂ. ೩೪೫ ಕ್ರಿ.ಶ. ೧೧೭೧ ತೆವರತೆಪ್ಪ.

[22]ಎ.ಕ.VIII ನಂ. ೩೮೯ ಕ್ರಿ.ಶ. ೧೧೭೨ ಎಲಿವಾಳ.

[23]ಎ.ಕ.VIII ನಂ. ೧೪೦ ಕ್ರಿ.ಶ. ೧೧೯೮ ಉದ್ರಿ.

[24]ಎ.ಕ.VIII ನಂ. ೨೭೫ ಕ್ರಿ.ಶ. ೧೨೩೧ ಕೋಟಿಪುರ.

[25]ಎ.ಕ.VIII ನಂ. ೩೮೪ ಕ್ರಿ.ಶ. ೧೨೩೭ ಎಲಿವಾಳ.

[26]ಎ.ಕ.VIII ನಂ. ೩೨೯ ಕ್ರಿ.ಶ. ೧೪೧೫ ಭಾರಂಗಿ.

[27]ಎ.ಕ.VIII ನಂ. ೩೫೦ ಕ್ರಿ.ಶ. ? ಬೆಣ್ಣೆಕೆರೆ.

[28]ಎ.ಕ.VIII ನಂ. ೪೭೫ ಕ್ರಿ.ಶ. ೧೫೭೭ ಹೆಚ್ಚೆ.

[29]ಎ.ಕ.VIII ನಂ. ೨೩೯ ಕ್ರಿ.ಶ. ೧೪೪೪ ಚಿಕ್ಕಚೌಟಿ.

[30]ಎ.ಕ.VIII ನಂ. ೩೫೩ ಕ್ರಿ.ಶ. ೧೬೧೩ ನೇರಲಿಗೆ.

[31]ಎ.ಕ.VIII ನಂ. ೩೫೪ ಕ್ರಿ.ಶ. ೧೭೪೩ ಆನವಟ್ಟಿ.

[32]ಎ.ಕ.VIII ನಂ. ೩೨೮ ಕ್ರಿ.ಶ. ೧೧೫೯ ಭಾರಂಗಿ.

[33]ಎ.ಕ.VIII ನಂ. ೮೫ ಕ್ರಿ.ಶ. ೮೭೬ ಕುಂಸಿ.

[34]ಎ.ಕ.VIII ನಂ. ೭೪ ಕ್ರಿ.ಶ. ೧೧೩೯ ಓಟೂರು.

[35]ಎ.ಕ.VIII ನಂ. ೪೪೧ ಕ್ರಿ.ಶ. ೧೨೧೨ ತೆಲಗುಂದ.

[36]ಎ.ಕ.VIII ನಂ. ೨೬೮ ಕ್ರಿ.ಶ. ೧೨೪೫ ಕುಬಟೂರು.

[37]ಎ.ಕ.VII ಮತ್ತು VIII ಸ.ಇ.ನಂ. ೨೩೪ ಕ್ರಿ.ಶ. ೧೫೨೬ ಬಂದಳಿಕೆ.

[38]ಎ.ಕ.VIII ನಂ. ೧೮೫ ಕ್ರಿ.ಶ. ? ತೀರ್ಥಹಳ್ಳಿ.

[39]ಇತಿಹಾಸ ದರ್ಶನ ಸಂ.೯. ೧೯೯೪ ಅ. ಸುಂದರ, ಪು.೬೯