ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿಯೂ ಮಳೆಯ ಅಭಾವ ತಲೆದೋರಿದೆ. ಇದರಿಂದಾಗಿ ಅಂತರ್ಜಲ ಕುಸಿತ. ಹಾಗಾಗಿಯೇ ಬಯಲು ಸೀಮೆಯಂತೆಯೇ ಮಲೆನಾಡಿನಲ್ಲಿಯೂ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಮಳೆಯ ಅಭಾವಕ್ಕೆ ಮುಖ್ಯವಾಗಿ ಕಾಡುನಾಶ ಎಂಬುದು ಕೇಳಿಬರುತ್ತಿರುವ ಮಾತು. ಮಲೆನಾಡಿನಲ್ಲಿರುವ ತಗ್ಗು ಪ್ರದೇಶಗಳಲ್ಲಿ ಸಹ ನೀರಿನ ಸಂಗ್ರಹ ಕಮ್ಮಿ ಆಗುತ್ತಿದೆ. ಅದೇ ವೇಳೆಯಲ್ಲಿ ನೀರಿನ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇದು ನೀರಿನ ಕೊರತೆಗೆ ಕಾರಣವಾಗಿದೆ. ಹಾಗಿದ್ದರೂ ಸಹ ಮಲೆನಾಡಿನ ಹಳ್ಳಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ದೊರೆಯುತ್ತಿದ್ದರೆ ಅದು ಅಲ್ಲಿನ ಹಿಂದಿನಿಂದ ಉಳಿದು ಬಂದಿರುವ ಕೆರೆ ಕುಂಟೆಗಳಿಂದ ಮಾತ್ರ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರತಿ ಹಳ್ಳಿಗಳಲ್ಲಿ ಎರಡು ಮೂರು ಕೆರೆಗಳು ಈಗಲೂ ಕಂಡುಬರುತ್ತವೆ. ಆ ಕೆರೆಗಳಿಗೆ ಅನಿಸಿಕೊಂಡಂತೆ ಹಿಂದೆ ಸಣ್ಣ ಹೊಂಡಗಳು ಈಗಲೂ ಕಂಡುಬರುತ್ತವೆ. ಹಾಗಾಗಿ ಹಿಂದಿನಷ್ಟು ನೀರು ಇಂದು ದೊರೆಯದಿದ್ದರೂ ದಾಹ ನೀಗಿಸುವಷ್ಟು ಸಿಕ್ಕುತ್ತಿರುವುದು ಮಲೆನಾಡಿಗರ ಸುದೈವ.

ಮಲೆನಾಡಿನ ಕೆರೆಗಳಿಗೆ ರೂಪುಕೊಟ್ಟವರು ಕೆಳದಿ ಅರಸರು. ಕ್ರಿ.ಶ. ೧೬ನೇ ಶತಮಾನದಲ್ಲಿ ಆಡಳಿತ ನಡೆಸಿದ ಕೆಳದಿ ವಿಜಯನಗರದ ಆಶ್ರಯದಲ್ಲಿ ಬೆಳೆದು ಮುಂದೆ ಸ್ವತಂತ್ರವಾಗಿ ಕರ್ನಾಟಕದ ಅಷ್ಟೇಕೆ ದಕ್ಷಿಣ ಭಾರತದ ಶಕ್ತಿಶಾಲಿ ರಾಜ್ಯವಾಗಿ ಮೆರೆಯಿತು. ವಿಜಯನಗರದ ಆಡಳಿತ ಪದ್ಧತಿಯೇ ಇವರ ಕಾಲದಲ್ಲಿಯೂ ಮುಂದುವರೆಯಲ್ಪಟ್ಟಿತು. ಲಿಂಗಣ್ಣ ಕವಿಯ ಕೆಳದಿ ನೃಪ ವಿಜಯ, ಬಸಪ್ಪನಾಯಕನ ಶಿವತತ್ವರತ್ನಾಕರ, ಆ ಕಾಲದ ಶಾಸನಗಳು, ಸಮಕಾಲೀನ ರಾಜಮಹಾರಾಜರ ಕುರಿತ ಇತಿಹಾಸ ಪುಸ್ತಕಗಳು ನಮಗೆ ಅಂದು ಇದ್ದ ಆಡಳಿತ, ಮರಾಹಮತ್ ಮೊದಲಾದವುಗಳ ಬಗೆಗೆ ಅರಿಯುವಲ್ಲಿ ಸಹಕಾರಿಯಾಗಿವೆ.

ವ್ಯವಸಾಯ ಕೆಳದಿ ಅರಸರ ಆದಾಯದ ಮೂಲವಾಗಿದ್ದಿತು. ಹಾಗಾಗಿ ನೀರಾವರಿ ವ್ಯವಸ್ಥೆಗಾಗಿ ಅವರು ಹೆಚ್ಚು ಒತ್ತು ನೀಡಿದ್ದರು. ಇತರ ಯಾವುದೇ ಧರ್ಮ ಕಾರ್ಯಗಳಿಗಿಂತಲೂ ನೀರಿನ ಸೌಕರ್ಯವನ್ನು ಒದಗಿಸುವುದು ಶ್ರೇಷ್ಠ ಎಂಬ ನಂಬಿಕೆ ಅವರದಾಗಿದ್ದಿತು.

[1]

ಆ ಕರ್ನಾಟಕ ದೇಶದ
ಭೂಕಾಂತೆಯ ವಕ್ತ್ರಪದ್ಮ ಮನೆ ರಾಜಿಸುಗುಂ
ಶ್ರೀಕರಮೆನಿಸಿಯಜಸ್ರಂ
ನಾ ಕವನಿಳಿಕೈದ ಕೆಳದಿಯೆಂದೆನಿಪ ಪುರಂ[2]

ಎಂಬ ಮಾತುಗಳು ಕೆಳದಿಯ ಪ್ರಮುಖ ಪ್ರಗತಿಪರ ಸಂಸ್ಥಾನವಾಗಿ ಇತ್ತೆಂಬುದನ್ನು ತಿಳಿಸುತ್ತದೆ. ಇವರು ತಮ್ಮ ಆಶ್ರಯದಾತರ ಜನಪದ ಕೆಲಸಗಳನ್ನು ಮುಂದುವರೆಸಿಕೊಂಡು ಹೋದುದು ಇತರೆ ಯಾವುದೇ ರಾಜವಂಶಗಳಿಗಿಂತಲೂ ಭಿನ್ನ ಎಂಬ ಅಂಶವನ್ನು ಈ ಮಾತುಗಳು ಎತ್ತಿ ತೋರಿಸುತ್ತವೆ.

ಕೆರೆಯಂ ಕಾಳುರದಿಂ ಕನತ್ಕುವಲಯಾಂ ಭೋಜಂಗಳಿಂ ಶೋಭಿಪೊಳ್ಸರದಿಂ…[3]

ಈ ಪ್ರದೇಶವು ಕೆರೆಗಳಿಂದಲೂ, ಹಳ್ಳಗಳಿಂದಲೂ ನೈದಿಲೆ ತಾವರೆಯುಳ್ಳ ಸರೋವರಗಳಿಂದಲೂ ಹೂಬಳ್ಳಿಗಳಿಂದಲೂ ಮೆರೆಯುವ ಉದ್ಯಾನದಿಂದಲೂ ಭತ್ತದ ಹೊಲದಿಂದಲೂ, ಆದ ಬೆಟ್ಟಗಳಿಂದಲೂ ಹೆಚ್ಚಿನ ಸುಖದ ನೆಲೆಯಾಗಿದೆ. ಎನ್ನುವ ಲಿಂಗಣ್ಣ ಕವಿಯ ವರ್ಣನೆ ಆ ಪ್ರದೇಶದ ಸಮೃದ್ಧತೆ ಹಾಗೂ ಜೀವನ ಸಾಫಲ್ಯಗಳನ್ನು ಪರಿಚಯಿಸುತ್ತದೆ.

ಕೆರೆ ಕಾಳ್ಪುರಮಾರಾಮಂ
ವರಶಾಲಿಸಿತೇಕ್ಷು ಧಾನ್ಯಭೂಮಿಕೆಯೆಸೆವಾ
ಗರತೋಂದೆಮಿವರ್ಗಳಿಂದೆಡೆ
ದೆರಪಿಲ್ಲದೆ ತೆರೆದ ಗೆಯ್ಮೆಗೊಳಿಸಿನಿಳೆಯಂ[4]

ಎಂಬ ಕವಿಯ ಮಾತುಗಳು ಅಂದು ಒಂದಿಷ್ಟು ಭೂಮಿ ಹಾಳು ಬಿಡದಂತೆ ಕೃಷಿಯನ್ನು ವ್ಯಾಪಕವಾಗಿ ನಿರ್ಮಿಸಲು ಕೆರೆ, ಕಾಲುವೆ, ತೋಟ, ಭತ್ತ, ಬಿಳಿಕಬ್ಬು ಮತ್ತಿತರ ಧಾನ್ಯಗಳನ್ನು ಬೆಳೆಯುವ ಭೂಮಿ ಮತ್ತು ಕೃಷಿ ಉತ್ಪಾದನೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.

ಪ್ರಜೆಗಳು ಸಿರ್ವ ಬಿನ್ನಪವನಾಲಿಸಿಯೊಳ್ಗೆರೆ ಕಾಳ್ಪುರಂಗಳಂ
ಸೃಜಿಯಿಸಿ ಮೇಣವರ್ಗೆ ಕರಮೂಲಧನಂಗಳನಿತ್ತು ಬಿತ್ತುಮಂ
ನಿಜಮೆನಲಿತ್ತು ಗೋಷ್ಪದದನಿತ್ತಿಳೆಯಂಮಿಗೆ ಬೀಳಲೀಯದಾ
ದ್ವಿಜಸುರಪಾದಪಂ ಶಿವನೃಪಂಮಿಗೆ ಗೈಮೆಗೆ ತಂದನಳ್ತಿಯಿಂ[5]

ಪ್ರಜೆಗಳು ಹೇಳಿದ ಭಿನ್ನಹವನ್ನು ಕೇಳಿ ಒಳ್ಳೆಯ ಕೆರೆ ಕಾಲುವೆಗಳನ್ನು ನಿರ್ಮಿಸಿ ಅವರಿಗೆ ಕಂದಾಯದಿಂದ ಸಿಗಬಹುದಾದ ಹಣವನ್ನೂ, ಮೇಲುವೆಚ್ಚಕ್ಕೆ ಸರ್ಕಾರದ ಖಜಾನೆಯಿಂದ ಹಣವನ್ನೂ ಕೊಡಿಸಿ ವ್ಯವಸಾಯಕ್ಕೆ ಅನುಕೂಲಗೊಳಿಸಲಾಗಿತ್ತು.

ಕೆರೆಯ ನಿರ್ಮಾಣ

ಕೆಳದಿಯ ಅರಸರ ಕಾಲದಲ್ಲಿ ನೀರಾವರಿ ವ್ಯವಸ್ಥೆಗಾಗಿ ಅನೇಕ ಅಣೆಕಟ್ಟುಗಳು, ಕೆರೆಗಳು, ಕೊಳಗಳು, ವಿಶಾಲವಾದ ಕೆರೆಗಳೂ ಮತ್ತು ಬಾವಿಗಳು ರಾಜ್ಯದಾದ್ಯಂತ ನಿರ್ಮಾಣವಾದವು. ಆ ಕಾಲದ ಕೆರೆಗಳನ್ನು ಕರ್ನಾಟಕದಾದ್ಯಂತ ಈಗಲೂ ನೋಡಬಹುದಾಗಿದೆ. ಮುಖ್ಯವಾಗಿ ಕೆಳದಿಯ ವೆಂಕಟಪ್ಪನಾಯಕನ ಕಾಲದಲ್ಲಿ ಆನಂದಪುರದಲ್ಲಿ ನಿರ್ಮಾಣವಾದ ಕೆರೆ,[6] ಭುವನಗಿರಿ ದುರ್ಗದಲ್ಲಿ ನಿರ್ಮಿಸಿದ ಕೆರೆ,[7] ಸದಾಶಿವ ಸಾಗರದಲ್ಲಿ ಅಗ್ರಹಾರಕ್ಕಾಗಿ ನಿರ್ಮಿಸಿದ ಕೆರೆ, ಸದಾಶಿವ ನಾಯಕನ ಕೆಳದಿಯಲ್ಲಿ ನಿರ್ಮಿಸಿದ ಕೆರೆ,[8] ಸೋಮಶೇಖರ ನಾಯಕನು ನಿರ್ಮಿಸಿದ ಕೆರೆ,[9] ಬಸವಪ್ಪನಾಯಕನು ಬಿದನೂರಿನಲ್ಲಿ ನದಿಗೆ ನಿರ್ಮಿಸಿದ ಶಿಲಾಸೇತುವೆ,[10] ಶಿವಪ್ಪನಾಯಕನ ಕಾಲದಲ್ಲಿ ನಿರ್ಮಾಣವಾದ ಕೆರೆಗಳು ಅಲ್ಲದೇ ಕಾವೇರಿ ನದಿಗೆ ಹಾಕಿಸಿದ ಸೇತುವೆ,[11] ಮೊದಲ ವೆಂಕಟಪ್ಪನಾಯಕನ ಕಾಲದಲ್ಲಿ ಹತ್ತಿಮತ್ತೂರಿನ ಸೇನಭೋವ ಕಾಮದೇವಭಟ್ಟನ ಮಗ ಕೋನಪ್ಪನು ಗೋವರ್ಧನಗಿರಿಯ ಗೇರುಸೊಪ್ಪೆ ಮಾರ್ಗದಲ್ಲಿ ನಿರ್ಮಿಸಿದ ಕೆರೆ,[12] ಇಮ್ಮಡಿ ಸೋಮಶೇಖರ ನಾಯಕನು ದೈನೂರಲಿ[13] ತುಂಗಾ ನದಿಗೆ ನಿರ್ಮಿಸಿದ ಒಡ್ಡು,[14] ಸಿರಿವಂತೆಯಲ್ಲಿರುವ ಸಂಕಣ್ಣನ ಕೆರೆ,[15] ಚಿಕ್ಕಮಗಳೂರಿನಲ್ಲಿರುವ (ನರಸಿಂಹರಾಜಪುರ) ವೀರಮ್ಮಾಜಿ ಕೆರೆ,[16] ಕೆಳದಿಯ ವಿರಕ್ತಮಠದ ಖಜಾನೆಯ ಸಿದ್ಧಬಸವ ಎಂಬುವವನು ನಿರ್ಮಿಸಿದ ಕೆರೆ,[17] ಬಂಕಾಪುರದ ಮಾದಣ ಒಡೆಯರ ಮೂಲಕ ಪೂರ್ಣಗೊಳಿಸಲ್ಪಟ್ಟ ಮದಗದ ಕೆರೆ,[18] ಕೆಳದಿಯ ಸಂಪೆಕಟ್ಟೆ ಕೆರೆ,[19] ಇಕ್ಕೇರಿಯ ಕೋಟೆಯಲ್ಲಿರುವ ತಟಾಕ ಮತ್ತು ದೇವಾಲಯದ ನಾಲ್ಕು ದಿಕ್ಕಿನಲ್ಲಿರುವ ಕೆರೆಗಳು,[20] ನಗರದ ಕೋಟೆಯ ಒಳಭಾಗದಲ್ಲಿರುವ ಅಕ್ಕ ತಂಗಿಯರ ಕೆರೆ ಮತ್ತು ಕೋಟೆ, ಕೆರೆ,[21] ಭುವನಗಿರಿ ದುರ್ಗದ ಕೋಟೆಯಲ್ಲಿರುವ ಕೆರೆ,[22] ಹೀಗೆ ರಾಜ್ಯದಾದ್ಯಂತ ಹಲವು ಕೆರೆಗಳನ್ನು ನೋಡಬಹುದಾಗಿದೆ.

ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಕೆರೆಗಳು ರಾಜ್ಯಾದಾದ್ಯಂತ ಇದ್ದವು ಎಂಬುದಾಗಿ ಚಾರ್ಲ್ ಎಲಿಯೇತ್ ೧೮೭೦ರಲ್ಲಿ ಬರೆಯುತ್ತಾನೆ. ಅಂದಿನ ಕೆರೆಗಳ ಅಚ್ಚುಕಟ್ಟುತನ ರಕ್ಷಣಾ ವ್ಯವಸ್ಥೆ ಇವುಗಳನ್ನೇ ಆಂಗ್ಲ ಅಧಿಕಾರಿಗಳು ಮುಂದುವರೆಸಿಕೊಂಡು ಬಂದಿದ್ದರೆ ಸಾಕಾಗಿತ್ತು ಎಂಬ ಅಭಿಪ್ರಾಯವನ್ನು ಎಲಿಯೇತ್ ವ್ಯಕ್ತಪಡಿಸುತ್ತಾನೆ.

ಕೆಳದಿಯ ಕಾಲದಲ್ಲಿ ನೀರಾವರಿಗಾಗಿಯೇ ಪ್ರತ್ಯೇಕ ಇಲಾಖೆ ಇದ್ದಂತೆ ಕಂಡು ಬರುವುದಿಲ್ಲ. ಸರ್ಕಾರವಲ್ಲದೆ ಸಾರ್ವಜನಿಕರು, ಧನಿಕರು ನೀರಿನ ಸೌಕರ್ಯವನ್ನು ಒದಗಿಸುವುದರಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.[23] ಹಿಂದೆ ನಿರ್ಮಿಸಲಾಗಿದ್ದ ನೀರಾವರಿ ಮೂಲಗಳನ್ನು ಆಗಾಗ ರಿಪೇರಿ ಮಾಡಿಸಲಾಗುತ್ತಿತ್ತು. ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಕಾಶಿಯ ಕಪಿಲಧಾರ ತೀರ್ಥವನ್ನು, ಮಾನಸಸರೋವರ, ಗಂಧರ್ವಸಾಗರದ ನಾಲ್ಕು ಭಾಗಗಳನ್ನು ಶಿಲೆಯಿಂದ ಸುಭದ್ರಗೊಳಿಸಲು ಶಿಲ್ಪಗಳನ್ನು ಕರೆಸಿದ ಬಗ್ಗೆ ಉಲ್ಲೇಖ ದೊರೆಯುತ್ತದೆ.[24] ಜನರ ಅಹವಾಲುಗಳನ್ನು ಆಸಕ್ತಿಯಿಂದ ಕೇಳಿ ಅವರಿಗೆ ಅವಶ್ಯವಾದ ಕೆರೆ, ಕಾಲುವೆಗಳನ್ನು ನಿರ್ಮಿಸಿ ಅವರಿಗೆ ಕಂದಾಯದಿಂದ ಸಿಗಬಹುದಾದ ಹಣವನ್ನು ಹಾಗೂ ಮೇಲುವೆಚ್ಚಕ್ಕೆ ಖಜಾನೆಯಿಂದ ಹಣವನ್ನೂ ಕೊಡಿಸುವುದು ರೂಢಿಯಲ್ಲಿತ್ತು.

ನೀರು ಇಂಗಿ ಹೋಗದಂತೆ ಅಂದು ಭಾರಿ ಕಾಳಜಿ ವಹಿಸಲಾಗುತ್ತಿತ್ತು. ಇದನ್ನು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಕೆರೆಗಳಿಂದ ನೋಡಬಹುದು. ಸಾಮಾನ್ಯವಾಗಿ ೩ – ೪ ಕಿ.ಮೀ.ಗೆ ಒಂದು ಕೆರೆ ಇರುತ್ತದೆ. ದೊಡ್ಡ ಕೆರೆಗಳ ಹಿಂದೆ ಒಂದು ರೀತಿಯ ಸರಪಳಿಯಂತೆ ಸಣ್ಣ ಕೆರೆಗಳಾಗಲಿ, ಹೊಂಡಗಳಾಗಲೀ ಇರುತ್ತವೆ. ಬಿದ್ದ ಮಳೆನೀರು ಮೊದಲು ಸಣ್ಣಕೆರೆ ಹೊಂಡಗಳಲ್ಲಿ ಶೇಖರಣೆಯಾಗಿ ಅಲ್ಲಿಂದ ದೊಡ್ಡ ಕೆರೆಗೆ ಹರಿದು ಬರುತ್ತಿತ್ತು. ಹೀಗೆ ಹರಿಯುವಾಗ ಮೊದಲಲ್ಲಿ ಬರುವ ಹೂಳು ಸಣ್ಣ ಕೆರೆಗಳಲ್ಲಿ ಉಳಿದು ದೊಡ್ಡ ಕೆರೆಗೆ ಕೇವಲ ತಿಳಿಯಾದ ನೀರು ಮಾತ್ರ ಶೇಖರಣೆಯಾಗುತ್ತಿತ್ತು. ವೈಜ್ಞಾನಿಕ ಹಿನ್ನೆಲೆಯಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿತ್ತು.[25]

ಗೌಡ ಅಥವಾ ಪಟೇಲರು ಗ್ರಾಮದ ಮುಖ್ಯ ಅಧಿಕಾರಿಗಳಾಗಿರುತ್ತಿದ್ದರು. ಗ್ರಾಮ ರಕ್ಷಣೆ, ಅಗತ್ಯ ಪೂರೈಕೆ ಇವರ ಕರ್ತವ್ಯವಾಗಿತ್ತು. ಸರ್ಕಾರಿ ಹಾಗೂ ಖಾಸಗಿಯವರ ಭೂಮಿ ಆಸ್ತಿ ಪಾಸ್ತಿಯ ಲೆಕ್ಕವನ್ನು ಸೇನುಭೋವರು ಇಡುತ್ತಿದ್ದರು. ಉತ್ಪನ್ನದ ಅಂದಾಜು ಸರ್ಕಾರಕ್ಕೆ ನೀಡುವುದು ಅವರ ಕೆಲಸವಾಗಿತ್ತು. ನೀರಿನ ರಕ್ಷಣೆ, ಕೆರೆ ಅಥವಾ ಜಲಾಶಯದಿಂದ ಗ್ರಾಮದ ಭೂಮಿಗೆ ಕ್ರಮವಾಗಿ ನೀರನ್ನು ಬಿಡುವ ಕೆಲಸ ನೀರಗಂಟಿಯವರದಾಗಿತ್ತು. ಇವರಿಗೆ ಭೂಮಿ ಉಂಬಳಿ ಬಿಡುತ್ತಿದ್ದರು. ಕೆಳದಿ ಸಮೀಪದ ಹಿರೇನೆಲ್ಲೂರಿನಲ್ಲಿ ಈಗಲೂ ನೀರಗಂಟೀರ ಅಥವಾ ನೀರೆಗುಡೀರ ಮನೆತನ ಇದೆ.[26] ಕೆರೆಯ ಅಚ್ಚುಕಟ್ಟಿನ ದಾಖಲೆ ಪಂಚಾಯಿತಿಯಲ್ಲಿ ಇರುತ್ತಿತ್ತು. ಕೆರೆ, ಕಾಲುವೆ, ಕೋಡಿಗಳನ್ನು ಪಂಚಾಯಿತಿ ನೋಡಿ ಕೊಳ್ಳುತ್ತಿತ್ತು. ನೀರಿನ ಹಂಚಿಕೆಯಲ್ಲಿ ಪಕ್ಷಪಾತವಾಗದಂತೆ ನೀರಗಂಟಿ ಕ್ರಮ ಕೈಗೊಳ್ಳುತ್ತಿದ್ದನು. ನೀರಿನ ವಿತರಣೆ ವ್ಯವಸ್ಥೆ ನಿಯಂತ್ರಣ, ಮೊದಲಾದುವು ಅವನ ಆಡಳಿತಕ್ಕೆ ಬರುತ್ತಿತ್ತು. ಅವನಲ್ಲದೆ ಬೇರೆ ಯಾರೂ ಕಾಲುವೆ, ನೀರತಡೆಗಳನ್ನು ಮುಟ್ಟಲು ಅವಕಾಶ ಇರುತ್ತಿರಲಿಲ್ಲ. ಸಾಮಾನ್ಯವಾಗಿ ನೀರಗಂಟಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಿದ್ದನು.

ನೆರೆ ಹಾವಳಿ, ಅತಿವೃಷ್ಠಿ ಅನಾವೃಷ್ಠಿ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾಗುವ ಸಂದರ್ಭದಲ್ಲಿ ಕಂದಾಯದಲ್ಲಿ ಪೂರ್ಣ ಮನ್ನಾ ದೊರೆಯುತ್ತಿತ್ತು. ಅಥವಾ ಸ್ವಲ್ಪ ಭಾಗ ಕೊಡುವ ವ್ಯವಸ್ಥೆ ಇತ್ತು. ಬಿರಾಡದ ರೂಪದಲ್ಲಿ ೧೬೪೦ರಲ್ಲಿ ಸಾಹಯ ನೀಡಿದ ಬಗ್ಗೆ ಉಲ್ಲೇಖವಿದೆ.[27] ಮಾದುರು ಶಾಸನವು ರೈತನೊಬ್ಬನಿಗೆ ಅನಿರೀಕ್ಷಿತವಾಗಿ ಅವನ ಭಾವಿ ಹಾಳಾದಾಗ ಸರ್ಕಾರ ಪರಿಹಾರ ನೀಡಿದ ಬಗ್ಗೆ ತಿಳಿಸುತ್ತದೆ.[28] ಕೆರೆಗಳಲ್ಲಿ ನೀರು ತುಂಬಿ ನೀರು ಹರಿಯದಿದ್ದಾಗ ನೀಡುವತ್ತಿನ ನಷ್ಟ ಎಂಬುದಾಗಿ ಕಂದಾಯದಲ್ಲಿ ವಿನಾಯಿತಿ ಸಿಗುತ್ತಿತ್ತು.[29] ರೈತರು ಪುನಃ ಅನುಕೂಲ ಪಡೆದಾಗ ಕಂದಾಯವನ್ನು ಹೆಚ್ಚಿಸಿ ಇದನ್ನು ವಸೂಲು ಮಾಡಲಾಗುತ್ತಿತ್ತು.[30] ಒಣಭೂಮಿ ಮತ್ತು ನೀರಾವರಿ ಕಂದಾಯದಲ್ಲಿ ವ್ಯತ್ಯಾಸವಿತ್ತು.[31] ಬರಗಾಲದಲ್ಲಿ ಅಥವಾ ಅಲ್ಪ ಮಳೆಯಾದ ಕಾಲದಲ್ಲಿ ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ನೀರಗಂಟಿಯ ಮೂಲಕ ಮಾಹಿತಿಯನ್ನು ಪಡೆದು ಸರ್ಕಾರ ನಿಶ್ಚಯಿಸುತ್ತಿತ್ತು. ಇಂದು ಪಂಚಾಯಿತಿ ವ್ಯವಸ್ಥೆ ಇಲ್ಲದಿರುವುದರಿಂದ ಮೊದಲಿನ ಸುಭದ್ರತೆ ಕಡಿಮೆಯಾಗಿದೆ.

ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಬರುತ್ತಿದ್ದ ಮಳೆ ನೀರನ್ನು ಕಟ್ಟೆಗಳಲ್ಲಿ ಸಂಗ್ರಹಿಸುತ್ತಿದ್ದರು. ಅವು ಹಳ್ಳ ಎಂಬುದಾಗಿ ಕರೆಯಲ್ಪಡುತ್ತಿತ್ತು. ಕಟ್ಟೆಯಿಂದ ಕುಂಟೆಯ ಕಡೆ ನೀರು ಹರಿಯುತ್ತಿತ್ತು. ಇವು ನೀರುಹಿಂಗಲು ಸಹಾಯ ಮಾಡುತ್ತಿದ್ದವು. ಅಲ್ಲದೇ ಕೊಳೆ, ಹೂಳುಗಳನ್ನು ತಡೆಗಟ್ಟುತ್ತಿದ್ದವು. ಕಟ್ಟೆ : ಕುಂಟೆಗಳ ಮೂಲಕ ಹಾದು ಕೆರೆಗೆ ನೀರು ಬರುತ್ತಿತ್ತು.

ಒಂದೊಂದು ಕೆರೆಗೂ ತನ್ನದೇ ಆದ ಜಲಾನಯನ ಪ್ರದೇಶ ಇರುತ್ತಿತ್ತು. ಹೆಚ್ಚುವರಿ ನೀರು ಮುಂದಿನ ಕೆರೆಗೆ ಹರಿಯುತ್ತಿತ್ತು. ನೀರು ಒಳ ಹರಿಯುವುದಕ್ಕೂ, ಹೆಚ್ಚುವರಿ ನೀರು ಹೊರಹೋಗುವುದಕ್ಕೂ ಬೇಕಾದಂತೆ ಈ ನಿಶ್ಚಿತ ಸ್ಥಳದಲ್ಲಿ ತೂಬುಗಳು ಇರುತ್ತಿದ್ದವು. ಕೆರೆಯ ಅಕ್ಕಪಕ್ಕದಲ್ಲಿ ನೆಲ ಕುಸಿಯದಂತೆ ಕಾಪಾಡಲು ಮರಗಳನ್ನು ಬೆಳೆಸುತ್ತಿದ್ದರು. ಕೆರೆಗಳು ಭೋಗಣಿ ಆಕಾರದಲ್ಲಿ ನಿರ್ಮಾಣಗೊಳ್ಳುತ್ತಿದ್ದರಿಂದ ಹೆಚ್ಚು ನೀರು ಶೇಖರಣೆಗೆ ಸಹಕಾರಿಯಾಗಿತ್ತು. ಕೆರೆಗಳ ಸಮಸ್ಯೆಗಳಲ್ಲಿ ಹೂಳು, ಜಲಕಳೆ, ಮುಖ್ಯವಾದವು. ಜಲಕಳೆಯ ನಿರ್ನಾಮಕ್ಕೆ ಎರಡು ವರ್ಷಗಳಿಗೊಮ್ಮೆ ಇರುಗುಣಿಯ ಮೂಲಕ ಕೆರೆಬೇಟೆ ಮಾಡಿ ಸ್ವಚ್ಫಗೊಳಿಸುತ್ತಿದ್ದರು. ಹೂಳನ್ನು ಅಕ್ಕಪಕ್ಕದ ತೋಟಗಳಿಗೆ ಬಳಸುವುದು ವಾಡಿಕೆಯಲ್ಲಿತ್ತು.[32]

ಕೆಳದಿಯ ಆಡಳಿತದ ನಂತರ

ಕ್ರಿ.ಶ. ೧೭೬೩ರಲ್ಲಿ ಹೈದರನ ದಾಳಿಯೊಂದಿಗೆ ಕೆಳದಿ ಅವನತಿ ಹೊಂದಬೇಕಾಯಿತು. ಆ ವೇಳೆಗೆ ಕೆಳದಿ ಅರಸರಿಂದ, ಆ ಕಾಲದಲ್ಲಿದ್ದ ಸಾಮಂತರುಗಳಿಂದ ಮತ್ತು ಈ ಮೊದಲು ಆಡಳಿತ ನಡೆಸಿದ ರಾಜಮನೆತನಗಳಿಂದ ಸುಮಾರು ಮೂವತ್ತೆಂಟು ಸಾವಿರಕ್ಕೂ ಹೆಚ್ಚು ಕೆರೆಗಳು ರಾಜ್ಯದಲ್ಲಿ ನಿರ್ಮಾಣವಾಗಿದ್ದವು. ಕೆಳದಿಯ ಕಾಲದಲ್ಲಿ ಕೆಲವು ಕೆರೆಗಳ ಜೀರ್ಣೋದ್ಧಾರವಾದ ಬಗ್ಗೆ ನಮಗೆ ಮಾಹಿತಿ ದೊರೆಯುತ್ತದೆ. ಹೈದರ್ ಕೆಳದಿಯನ್ನು ವಶಪಡಿಸಿಕೊಂಡ ಮೇಲೆ ಕೆಳದಿ ರಾಜಧಾನಿ ಬಿದನೂರಿಗೆ (ನಗರ) ಹೈದರ ನಗರವೆಂದು ಹೆಸರಿಡಲ್ಪಟ್ಟಿತು. ಟಿಪ್ಪುವಿನ ನಂತರ ಇದು ನಗರ ತುಕಡಿ ಎಂದು ಕರೆಯಲ್ಪಟ್ಟಿತು. ೧೮೯೯ರ ನಂತರ ಅಷ್ಟಗ್ರಾಮ ಬೆಂಗಳೂರು ನಗರ ವಿಭಾಗವಾಗಿ ರೂಪುಗೊಂಡಿತು. ಬೆಂಗಾಲದ ಸಿವಿಲ್ ಸರ್ವೀಸ್ ಅಧಿಕಾರಿ ಅನರಬಲ್ ಹೆಚ್. ಬಿ. ದೇವೆರೆಕ್ಸರವರು ನಗರ ಡಿವಿಜನ್‌ನ ಮುಖ್ಯಾಧಿಕಾರಿಯಾಗಿದ್ದಾಗ ಕೆಳದಿ ರಾಜ್ಯಕ್ಕೆ ಕೆಳದಿ ಶಿವಪ್ಪನಾಯಕನ ಶಿಸ್ತನ್ನೆ ಮುಂದುವರೆಸಿ ಮೈಸೂರು ರಾಜ್ಯದ ಆಡಳಿತದಲ್ಲಿ ಸಾಯರ್ ಪದ್ಧತಿಯನ್ನು ಜಾರಿಗೆ ತಂದರು. ನಗರ ಡಿವಿಜನ್ ಈ ರೀತಿ ಸರ್ ಸಾಯರ್ ಇಲಾಖೆಯಾಗಿ ವಿಭಾಗಿಸಲ್ಪಟ್ಟಿತು. ೧೮೧೧ರಲ್ಲಿ ಟಿಪ್ಪುವಿನ ಕಾಲದಲ್ಲಿ ನಗರ ತುಕಡಿಯಾಗಿ ಮಾಡಿ ಇದಕ್ಕೆ ೨೪ ತಾಲ್ಲೂಕುಗಳು ಸೇರಿಸಲ್ಪಟ್ಟಿತ್ತು. ಅವುಗಳೆಂದರೆ,

೧. ಬಿದನೂರು (ನಗರ)

೨. ಅನಂತಪುರ

೩. ಶಿವಮೊಗ್ಗ

೪. ಹೊಳೆಹೊನ್ನೂರು

೫. ಕಡೂರು

೬. ಅಜ್ಜಂಪುರ

೭. ತರೀಕೆರೆ

೮. ಕುಂಶಿ

೯. ಚನ್ನಗಿರಿ

೧೦. ಬಸವಾಪಟ್ಟಣ

೧೧. ಕೌಲೆದುರ್ಗ

೧೨. ಮಂಡಗದ್ದೆ

೧೩. ಶಿಕಾರಿಪುರ

೧೪. ಉಡುಗಣಿ

೧೫. ಜಡೆಆನವಟ್ಟಿ

೧೬. ಸೊರಬ

೧೭. ಲಕ್ಕುವಳ್ಳಿ

೧೮. ವಸ್ತಾರೆ

೧೯. ಯೆಗಟಿ

೨೦. ಬಿದರೆಹೊನ್ನಾಳಿ

೨೧. ಕೊಪ್ಪ

೨೨. ಚಂದ್ರಗುತ್ತಿ

೨೩. ಇಕ್ಕೆಪಿರಿಸಾಗರ

೨೪. ಹರಿಹರ

ನಗರದ ತುಕಡಿಯಲ್ಲಿ ನಗರಕ್ಕೆ ಇಬ್ಬರು ಸರಸಾಯರು ಇದ್ದರು. ಇವರು ಪ್ರಮುಖ ಅಧಿಕಾರಿಗಳಾಗಿದ್ದರು.[33] ಮರಾಹಮತ್ ಅಧಿಕಾರ ಇವರ ಪರಿಧಿಗೆ ಬರುತ್ತಿತ್ತು. ವಿಜಯ ನಗರಕ್ಕೆ ೭೨ ಪಾಳೆಯಪಟ್ಟುಗಳು ಒಳಪಡುತ್ತಿದ್ದವು.[34] ಮೈಸೂರರಸರ ಕಾಲದಲ್ಲಿ ಕಮಿಷನ್‌ನ ಮೊದಲ ಕೆಲವು ವರ್ಷಗಳವರೆಗೆ ಮರಮ್ಮತ್ ಕಾಮಗಾರಿಗಳು ರೆವಿನ್ನು ಇಲಾಖೆಯ ಮೂಲಕವೇ ನಡೆಯುತ್ತಿತ್ತು. ೧೮೩೬ – ೩೭ರಲ್ಲಿ ಪ್ರತ್ಯೇಕವಾಗಿ ಮರಮ್ಮತ್ ಸೂಪರೆಂಟೆಂಡರ್ ನೇಮಕವಾದರು. ಅನಂತರದಲ್ಲಿ ೧೮೫೫ – ೫೬ರಲ್ಲಿ ಇಂಜಿನಿಯರ ಇಲಾಖೆ ಪ್ರತ್ಯೇಕವಾಗಿ ಏರ್ಪಟ್ಟಿತು. ಅದರ ಮೂಲಕ ಕೆರೆ, ಕಾಲುವೆ ರಸ್ತೆ ದುರಸ್ತಿ ನಡೆಸಲ್ಪಟ್ಟಿತು. ಸೇತುವೆಗಳು ಅಗತ್ಯಕ್ಕೆ ತಕ್ಕಂತೆ ನಿರ್ಮಾಣವಾದವು. ಅಂದು ನೀರಾವರಿ ಕಾಮಗಾರಿಗಳಿಗೆ ೨೫ ವರ್ಷಗಳಲ್ಲಿ ಒಟ್ಟು ೩೦ ಲಕ್ಷ ರೂಪಾಯಿ ವ್ಯಯಿಸಲ್ಪಟ್ಟಿತು.[35] ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲತೆಗಳಾದವು. ಬೌರಿಂಗ್ ಕಾಲದಲ್ಲಿ ನಾಲ್ಕು ತುಕಡಿಗಳಿಗೆ ಬದಲಾಗಿ ನಗರ ತುಕಡಿಯೊಂದಿಗೆ ಎಂಟು ಡಿಸ್ಟ್ರಿಕ್ಟುಗಳು ಏರ್ಪಟ್ಟವು.[36] ೧೮೬೯ರಲ್ಲಿ ೧೨ ಇಲಾಖೆ ವಿಂಗಡಿಸಿ ಮಾಹೆಯಾನದಂತೆ ತಲಬು ಗೊತ್ತು ಮಾಡಿ ಮರಹಮ್ಮತೆಗೆ ೨೦೬ ಜನಸಂಖ್ಯೆಗೆ ೧೨೮೦ – ೮೦ಯಂತೆ ಮೊಕರೂರಾಯಿತು.[37]

ಸರೆಸಾಯರ್ ವಿಭಾಗ

೧. ಕೆಳದಿ (ಇಕ್ಕೇರಿ) ಸರೆಸಾಯರ್ ವಿಭಾಗ:

i) ಹೊನ್ನಾಳಿ ii) ಸಾಗರ iii) ಶಿಕಾರಿಪುರ ಸೊರಬ ತಾಲ್ಲೂಕಿನೊಂದಿಗೆ ಬೆಳಬಂದೂರು ಕಸಬಾ ಮತ್ತು ನಗರ (ಹಳೆನಗರ) ತಾಲ್ಲೂಕುಗಳು

೨. ಕೌಲೇದುರ್ಗ[38] ಸರೆಸಾಯರ್ ವಿಭಾಗ :

ಚಿಕ್ಕಮಗಳೂರು, ಕೊಪ್ಪ, ಕೌಲೇದುರ್ಗ, ಹೊಳೆಹೊನ್ನೂರು, ಲಕ್ಕವಳ್ಳಿ, ಚನ್ನಗಿರಿ, ಇದಕ್ಕೆ ಕಡೂರು, ಹರಿಹರ, ಇರಿಕೇರಿ? ಇವುಗಳೂ ಸೇರಿದ್ದವು. ಇದು ದಿವಾನ್ ಪೂರ್ಣಯ್ಯ ಆದಿಯಾಗಿ ೧೮೪೬ – ೪೭ರವರೆಗೂ ಮುಂದುವರಿದಿದ್ದು ವ್ಯಕ್ತಪಡುತ್ತದೆ.

ಈ ವಿಭಾಗದ ಕೆರೆಗಳ ಮೇಲ್ವಿಚಾರಣೆ ಕುರಿತು ಮೆಮೋರೆಂಡಾಮ್ ಆಫ್ ಲ್ಯಾಂಡ್ ಟೆನ್ಯೂರ್ಸ್ ಪ್ರಕಾರ ಈ ಕೆಳಕಂಡಂತೆ ಕೆರೆಗಳೆಲ್ಲವೂ ಸಾಯರೆರವರ[39] ಆಡಳಿತಕ್ಕೊಳಪಟ್ಟು ಗ್ರಾಮಾಂತರ ಕೆರೆಗಳೆಲ್ಲವೂ ನೀರುಗಂಟಿಯ ಮೇಲ್ವಿಚಾರಣೆಯಲ್ಲಿದ್ದವೆಂಬುದು ವ್ಯಕ್ತವಾಗುತ್ತದೆ.

The Neergunty regulates the supply of irrigating water to the wet lands of the village. Whether belonging to the Riots or to the circar. He has to economize the supply of water in every possible way, and in the season of rains may be said to holds the safety valves of the Tanks and other reservoirs in his hands, many a days supply of water is sometimes lost by the timidity or apathy of an inefficient Neerguntu, and on the other hand many a valuable dam is carried away by the vastness or ignorance of a presumptions one.[40]

ಉಪಸಂಹಾರ

೧೭೯೯ರ ಟಿಪ್ಪುವಿನ ನಂತರ ಬ್ರಿಟಿಷರು ಮೈಸೂರು ದೇಶದ ಕೆರೆಗಳ ಬಗ್ಗೆ ಸಮೀಕ್ಷೆ ಕೈಗೊಂಡು ೧೮೦೬ಕ್ಕೆ ಮುಗಿಸಿದರು.[41] ಆ ಪ್ರಕಾರ ೧೪೮೦೩ ಕೆರೆಗಳು, ೮೫೬೨ ಕುಂಟೆಗಳು[42] ಇರುವುದು ಕಂಡು ಬರುತ್ತದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಕುರಿತಂತೆ ಮಾಹಿತಿ ಇಲ್ಲ.[43]

ವೈಜ್ಞಾನಿಕವಾಗಿ ಕೆರೆ ಹಾಗೂ ತೂಬುಗಳನ್ನು ನಿರ್ಮಿಸಿ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡುದು ಕೆಳದಿ ಕಾಲದ ವೈಶಿಷ್ಟ್ಯ. ಆ ಕಾಲದಲ್ಲಿ ಅಳವಡಿಸಿದ ತೂಬುಗಳು ಈಗಲೂ ನೀರಾವರಿ ಇಲಾಖೆಯ ಮುಖಾಂತರ ಮುಂದುವರೆಸಿಕೊಂಡು ಬರುತ್ತಿದೆ. ಸ್ವಾತಂತ್ರ್ಯ ಪೂರ್ವದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಸೊರಬದ ನಾಡಿಗೆ ನೀಲಕಂಠಪ್ಪನವರು ಸರ್ಕಾರಕ್ಕೂ ಪುರಾತತ್ವ ಇಲಾಖೆಗೂ ಧಕ್ಕೆ ಬಾರದಂತೆ ಇದನ್ನೆ ಸ್ವಲ್ಪ ಮಾರ್ಪಡಿಸಿ ಮುಂದುವರೆಸಿಕೊಂಡು ಹೋಗಲು ಶಿಫಾರಸ್ಸು ಮಾಡಿದ್ದರು.[44] ಇಂತಹ ಕೆಳದಿ ಕಾಲದ ಸಾಗರ ಕೆರೆಯ ಇತ್ತೀಚೆಗೆ ಹೊಸದಾಗಿ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಕಣ್ಮರೆಯಾಗಿಸಿದುದು ದುರ್ದೈವ.

ಕೆಳದಿ ಅರಸರು ಜನಗಳಿಗೆ ಕೆರೆ ನಿರ್ಮಾಣದ ಬಗ್ಗೆ ಪೋತ್ಸಾಹ ನೀಡುತ್ತಿದುದ್ದು ಗಮನಾರ್ಹ. ವಿದೇಶಿ ಪ್ರವಾಸಿಗರು ಅವರ ಆಡಳಿತವನ್ನು ಮೆಚ್ಚಿ ಉಲ್ಲೇಖಿಸಿದ್ದಾರೆ. ನೀರಾವರಿ ಬೇಸಾಯ ಹಾಗೂ ಕುಡಿಯುವ ನೀರಿಗೆ ಲೋಪ ಇಲ್ಲದಂತೆ ರಾಜ್ಯದ ಜನಸಾಮಾನ್ಯರನ್ನು ರಕ್ಷಿಸಿದುದು ಹಿರಿಮೆಯಾಗಿದೆ. ಭಾರತದ ಸರ್ವೇ ಅಧಿಕಾರಿ ಸ್ಟೋಕ್ಸ್‌ನು ಇದನ್ನು I have no where in India seen so much honesty and veracity as among the country people of Nagara (Keladi State). The ryots of Nagara have always prided themeselves on their Nationality.[45]

ಎಂದು ಉದ್ಗರಿಸಿದ್ದಾನೆ. ಜಲ ಶೇಖರಣೆಯ ವ್ಯವಸ್ಥೆ ಎಷ್ಟು ವೈಜ್ಞಾನಿಕವಾಗಿತ್ತೆಂದರೆ ಹೊಸದಾಗಿ ಕೆರೆಯೊಂದಕ್ಕೆ ಜಾಗವನ್ನು ಹುಡುಕುವುದಕ್ಕೆ ಶ್ರಮ ಪಡಬೇಕಾಗಿತ್ತು. ಈಗ ಇರುವ ಕೆರೆಗಳನ್ನು ದುರಸ್ತಿಗೊಳಿಸುವುದು ಸಾಧ್ಯವಾದೀತು. ಆದರೆ ಎಲ್ಲಿಯಾದರು ಹೊಸ ಕೆರೆಯೊಂದನ್ನು ಕಟ್ಟದಲ್ಲಿ ಅದರಿಂದ ಇನ್ನಾವದೋ ಹಳೆಯ ಕೆರೆಯ ನೀರಿನ ಪೂರೈಕೆಗೆ ತಡೆಯಾಗುವುದು ಖಂಡಿತ ಎಂಬ ಹಳೇ ಮೈಸೂರು ಸಂಸ್ಥಾನದ ಮೊದಲ ಆಂಗ್ಲ ಚೀಫ್ ಇಂಜಿನಿಯರ್ ಮೇಜರ್ ಸ್ಯಾಂಕಿ ಅವರ ಮಾತು ಇಂದೂ ಪ್ರಸ್ತುತವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಕೆರೆಗಳನ್ನು ರಕ್ಷಿಸುವ ಬದಲು ಕೆರೆಯ ಅಚ್ಚುಕಟ್ಟನ್ನು ವ್ಯವಸಾಯಕ್ಕಾಗಿ ರೂಪಾಂತರ ಮಾಡುವುದು, ಸಣ್ಣ ಪುಟ್ಟ ಕೆರೆಗಳನ್ನು ಮುಚ್ಚಿ ನಿವೇಶನ ಮಾಡಿಕೊಳ್ಳುವುದು ಕಂಡು ಬರುತ್ತಿದೆ. ಇದು ಸಹಜವಾಗಿ ಮಲೆನಾಡಿನಲ್ಲಿ ಅಂತರ್ಜಲ ಕುಸಿತಕ್ಕೆ ದಾರಿಮಾಡಿ ಕೊಡುತ್ತಿದೆ. ಹಿಂದಿನಂತೆಯೇ ಇಂದೂ ಸಹ ಜನರು ಕೆರೆ, ಕುಂಟೆಗಳನ್ನು ರಕ್ಷಿಸಲು ಸರ್ಕಾರವನ್ನೇ ಅವಲಂಬಿಸದೆ ತಾವುಗಳೇ ಮುಂದಾದಲ್ಲಿ ನೀರಿನ ಅಭಾವವನ್ನು ತಡೆಗಟ್ಟಲು ಸಾಧ್ಯವಾಗಬಹುದು.

ಆಕರಗಳು

ಕೆಳದಿ ಅರಸರ ಶಾಸನ ಸಂಪುಟ ವೀರಶೈವ ಅಧ್ಯಯನ ಸಂಸ್ಥೆ, ಗದಗ, ೧೯೯೧.

ಎಫಿಗ್ರಾಫಿಯ ಇಂಡಿಕಾ ಸಂಪುಟ ೧೪.

ಎಫಿಗ್ರಾಫಿಯ ಕರ್ನಾಟಕ ೭, ೮.

ಡಾ. ಬಿ.ಎಲ್. ರೈಸ್ ಮೈಸೂರು ಕೊಡಗಿನ ಶಾಸನಗಳು

ಕೆಳದಿ ಅರಸರ ಶಾಸನಗಳ ಸಾಂಸ್ಕೃತಿಕ ಅಧ್ಯಯನ ವೆಂಕಟೇಶ್ ಜೋಯಿಸ ಕನಾಪ, ಬೆಂಗಳೂರು ೧೯೯೬.

ಟ್ಯಾಂಕ್ ಇರಿಗೇಷನ್ ಇನ್ ಕರ್ನಾಟಕ ಡಾ.ಜಿ.ಎಸ್. ದೀಕ್ಷಿತ್ ಗಾಂಧಿ ಸಾಹಿತ್ಯ ಸಂಘ, ಬೆಂ.೧೯೯೩.

ಕೆಳದಿ ಸಂಸ್ಥಾನದ ಸಮಗ್ರ ಅಧ್ಯಯನ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಮಠ, ಆನಂದಪುರಂ ೧೯೯೪.

ಕೆರೆಗಳನ್ನು ಮರೆಯದಿರಿ ಪ್ರಾರಂಭ ಬೆಂಗಳೂರು ೧೯೮೯.

ಶ್ರೀಮನೆ ಮಹಾರಾಜರ ವಂಶಾವಳಿ ಮೈಸೂರು ೧೯೯೨.

ಶಿವತತ್ವರತ್ನಾಕರ ಭಾಗ ೧, ಕನ್ನಡ ವಿ.ವಿ. ಹಂಪಿ.

ಈಗ ಕಾಣಬರುವ ಪ್ರಮುಖ ಕೆಳದಿ ಕಾಲದ ಕೆರೆಗಳು
ಸಾಗರ ತಾಲ್ಲೂಕಿನ ಕೆಲವು ಕೆರೆಗಳ ಪಟ್ಟಿಯನ್ನಿಲ್ಲಿ ಕೊಡಲಾಗಿದೆ.

೧. ಕೆಳದಿ ಕೆರೆ, ಹಿರೇಕೆರೆ ೧೦೮ ಎಕರೆ ೨೧ ಗುಂಟೆ.

೨. ಸಂಪೆಕಟ್ಟೆ ಕರೆ (ಸಂಪಟ್ಟೆ ಕೆರೆ) ೪ ಎಕರೆ ೨೯.

೩. ಸಂಗಮೇಶ್ವರ (ಸಂಗಳ) ಕೆರೆ ಈಗ ಇಲ್ಲ.

೪. ಗಣಪತಿ ಕೆರೆ ಸಾಗರ.

೫. ಇಕ್ಕೇರಿಯ ಸೂಳೆಕೆರೆ, ಮಜ್ಜಿಗೆ ಕೆರೆ ಮತ್ತು ಇನ್ನೆರಡು ಕೆರೆಗಳು.

೬. ಬಿದನೂರಿನ ಕೆರೆ ಮತ್ತು ಕೋಟೆಯೊಳಗಿನ ಅಕ್ಕತಂಗಿ ಕೊಳ.

೭. ದೇವಗಂಗೆ ಕೊಳಗಳು.

೮. ಆನಂದಪುರದ ಎರಡು ದಿಕ್ಕಿನ ಕೆರೆಗಳು.

೯. ಮಲಂದೂರಿನ ಚಂಪಕಸರಸಿ.

೧೦. ಆಚಾಪುರದ ಕೆರೆ.

೧೧. ಕವಲೇದುರ್ಗದ ಕೋಟೆಯಲ್ಲಿರುವ ೭ ಕೆರೆಗಳು.

೧೨. ಸಿರಿವಂತೆಯ ಸಂಕಣ್ಣನ ಕೆರೆ.

೧೩. ಆರಗದ ಕೆರೆ.

೧೪. ಸದಾಶಿವ ಅಗ್ರಹಾರದ ಕೆರೆ.

೧೫. ತಿಮ್ಮಣ್ಣ ನಾಯಕನ ಕೆರೆ.

೧೬. ಆಯನೂರಿನ ಬಸವನ ಒಡ್ಡು.

೧೭. ಬಂದಗದ್ದೆ ತೋಟದ ಮೇಲಿನ ಕೆರೆ – ೩೦ ಎಕರೆ ೧೪ ಗುಂಟೆ.

೧೮. ಬಂದಗದ್ದೆ ಮೇಲಿನ ಕೆರೆ – ೪ ಎಕರೆ ೨೪ ಗುಂಟೆ.

೧೯. ಕೆಳದಿ ಶ್ರೀನಿವಾಸನ ಕೆರೆ.

೨೦. ಹೊಲಗುಡಿ ಕೆರೆ ಮಠದ ಆಸ್ತಿ.

೨೧. ಹೊಸಕಟ್ಟಿನ ಕೆರೆ (ಈಗ ಈ ಕೆರೆ ಇಲ್ಲ) ೫೬ ಎಕರೆ ೧೮ ಗುಂಟೆ.

೨೨. ಕಣಗಲ ಕೆರೆ ೩೬ ಎಕರೆ ೩೮ ಗುಂಟೆ.

೨೩. ಹಳ್ಳಿಬೈಲು ಗದ್ದೆ ಮೇಲಿನ ಕೆರೆ (ಜಡ್ಡಿನ ಬೈಲು) ೬೦ ಎಕರೆ ೨ ಗುಂಟೆ.

೨೪. ತುಮರಿಗದ್ದೆ ಕೆರೆ (ಸ್ವಂತ ಆಸ್ತಿ)

೨೫. ಹೊಲಗುಡಿ ಕೆರೆ ಮಠದ ಗದ್ದೆ ೩೩ ಎಕರೆ ೩೮ ಗುಂಟೆ.

೨೬. ಅಕ್ಕಿಮನೆ ಕೆರೆ (ಈಗಿಲ್ಲ)

೨೭. ತೆರವಿನಕೊಪ್ಪದ ಕೆರೆ.

೨೮. ಕೆಳದಿಪುರದ ಕೆರೆ ೫೫ ಎಕರೆ ೩೦ ಗುಂಟೆ.

೨೯. ಚೌಡಿ ಕೆರೆ.

೩೦. ಆಚಾಪುರ ಬಟ್ಟೆ ಮಲ್ಲಪ್ಪನ ಕೆರೆ ೨೫ ಎಕರೆ.

೩೧. ಎಡೆಹಳ್ಳಿ ಗೌರಿ ಕೆರೆ ೧೫ ಎಕರೆ.

೩೨. ಚೆನ್ನಶೆಟ್ಟಿಕೊಪ್ಪ ಚೆನ್ನಮ್ಮಾಜಿ ಕೆರೆ ೧೫ ಎಕರೆ.

೩೩. ಉಲ್ಲತ್ತಿ ಕೆರೆ.

೩೪. ಶಿರವಾಲದ ಕೆರೆ.

೩೫. ಅದರಂತೆ ಕೆರೆ.

೩೬. ಕೆಳದಿಪುರ ಕೆರೆ.

೩೭. ಮೆಳವರಿಗೆ ಕೆರೆ.

೩೮. ನೇರಲಗಿ ಕೆರೆ.

೩೯. ಗದ್ದೆಮನೆ ಹಳ್ಳ.

೪೦. ಕೆಳಗಿನ ಮಾಸೂರು ಕೆರೆ.

೪೧. ಮೇಲಿನ ಮಾಸೂರು ಕೆರೆ.

೪೨. ಚಿಕ್ಕನೆಲ್ಲೂರು ಕೆರೆ.

೪೩. ಚಿಕ್ಕ ನೆಲ್ಲೂರು ಕುಂಠ.

೪೪. ಮನೆಘಟ್ಟದ ಕೆರೆ.

೪೫. ಶ್ರೀಧರಪುರ ಕೆರೆ.

೪೬. ಬೆಳೆಯೂರು ಕೆರೆ.

೪೭. ಬೇಲೂರು ಕೆರೆ.

೪೮. ಹಲಸಿನಕೊಪ್ಪ ಕೆರೆ.

೪೯. ಹಾಗಲಪುರ ಕೆರೆ.

೫೦. ಯಲಕುಂದ್ಲಿ ಕೆರೆ.

೫೧. ಹಿರೇನೆಲ್ಲೂರು ಕೆರೆ.

೫೨. ಕಾಗೋಡು ಕೆರೆ.

೫೩. ಮಂಡಗಳಲೆ ಕೆರೆ.

೫೪. ಕಾನ್ಲೆ ಕೆರೆ.

೫೫. ಗಡೀಮನೆ ಕೆರೆ.

೫೬. ಕನ್ನಹೊಳೆ ಸೈದೂರು.

೫೭. ಸೈದೂರು ಕೆರೆ.

೫೮. ತಡಗಲಳೆ ಕೆರೆ.

೫೯. ಕಣಸೆ ಕೆರೆ.

೬೦. ಸಣ್ಣಮನೆ ಹಳ್ಳ

ಹೀಗೆ ಸಾಗರ ತಾಲ್ಲೂಕಿನಲ್ಲಿ ಸರ್ವೇ ಮಾಡಿದಲ್ಲಿ ಏನಿಲ್ಲೆಂದರು ೭೦೦ಕ್ಕೂ ಹೆಚ್ಚು ಕೆರೆಗಳು ಕಂಡು ಬರುತ್ತದೆ. ಮೆಕೆಂಜಿ ಸಂಗ್ರಹದಲ್ಲಿ ಶಿವಮೊಗ್ಗ ಜಿಲ್ಲೆಯ ಕೆರೆಯ ಪ್ರಸ್ತಾಪವಿಲ್ಲ (ಟ್ಯಾಂಕ್ ಇರಿಗೇಷನ್ ಇನ್ ಕರ್ನಾಟಕ ಪುಟ ೯೦).

*

10 Number of tank in the several districs of Mysore as in 1871

  Total No. of Tanks No.of tanks Yielding No Revenue No. of Tanks Yielding Revenue Below 50 50 to 100 100
to 500
500 to 1000 1000 to 2000 2000 to 3000 3000 to 4000 4000 to 5000 more Than 5000
Nandidurg Division
1. Bangalore District 2,227 254 862 407 630 84 31 5 2 1 1
2. Kolar District 5,282 1,427 2,028 783 886 108 33 7 7 71 2
3. Tumkur District 2,081 1096 285 175 359 94 39 20 6 3 4
Ashtagram Division
1. Mysore District 1,474 36 874 219 280 45 14 1 1 2 2
2. Hassan District 6,324 566 3,903 910 847 68 21 7 2  –  –

Nagar Division

1. Shimoga District 8,304 931 3,871 1,418 1,855 175 49 3 1  – 1
2. Kadur District 8,378 4,452 2,910 640 635 55 34 7  – 1 4
3. Chitradurga District 1,785 1,103 268 93 226 53 29 7 3  – 3
  36,265 9,865 15,001 4,645 5,718 682 250 57 22 8 17

Tank Irrigation in Karnataka, Page No. 277, 1993

 

[1]ಎಪಿಗ್ರಾಫಿಯ ಇಂಡಿಕ ಸಂ XIV ಪುಟ ೯೭.

[2]ಕೆಳದಿ ನೃಪ ವಿಜಯ,ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ೧೯೭೭ ಪುಟ ೨೩.

[3]ಶಿವತತ್ವರತ್ನಾಕರ ಕಲ್ಲೋಲ ೭ ತರಂಗ ೧೪, ಕನೈವಿ ಪುಟ. ೧೯.

[4]ಕೆನೃವಿ ಪುಟ ೧೨೯, ಕೆಳದಿ ಸಂಪತ್ತು ಕರಾವಳಿಯನ್ನೊಳಗೊಂಡಿತ್ತು.

[5]ಅದೇ ಪುಟ ೧೬೪.

[6]ಕೆಳದಿ ಅರಸರ ಶಾಸನ ಸಂಪುಟ, ಗದಗ ಶಾಸನ ಸಂಖ್ಯೆ ೪೩ ಪುಟ ೭೧.

[7]ಕೆನೃವಿ ಪುಟ ೧೨೬.

[8]ಅದೇ ಪುಟ ೧೩೧ ಸಂಗಮೇಶ್ವರ (ಈಗೀನ ಸಂಗಳ)ದಲ್ಲಿಯೂ ಒಂದು ಕೆರೆ ನಿರ್ಮಿಸಿದ್ದನು. ಆ ಕೆರೆ ಈಗಿಲ್ಲ. ಕೆನೈವಿ ಪುಟ ೧೩೧.

[9]ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಕಸಾಪ ಬೆಂಗಳೂರು ಪುಟ ೨೦೪.

[10]ಕೆನೃವಿ ಪುಟ ೧೭೬.

[11]ಕೆಳದಿ ಅರಸನ ಶಾಸನ ಸಂಪುಟ ಪುಟ ೧೯೫ – ೧೯೯, ಕೆಳದಿ ಅರಸರ ವಾಸ್ತು ಮತ್ತು ಮೂರ್ತಿ ಶಿಲ್ಪ, ಡಾ. ಅ. ಸುಂದರ ಪುಟ ೧೭ – ೧೮, ಕೆಳದಿ ಪಾಲಿಟಿ ಚಿಟ್ನಸ್ ಕೆ.ಎನ್.ಪು ೧೮ – ೧೯ ಇಸಂಚ ಪುಟ ೮೨ – ೯೩ ಶಿರಕಲ್ಲೋಲ ೭ ತರಂಗ ೧೪, ಕೆನೃವಿ ಪುಟ ೧೬೯.

[12]ಕೆಳದಿ ಅರಸರ ಶಾಸನ ಸಂಪುಟ ಸಂಖ್ಯೆ ೧೩೨.

[13]ಅದೇ ಸಂಖ್ಯೆ ೨೫೩ ಇದು ಈಗಿನ ಆಯನೂರು ಇರಬಹುದೇ.

[14]ಎಪಿಗ್ರಾಫಿಯ ಕರ್ನಾಟಿಕಾ, ೮ ಶಿವಮೊಗ್ಗ ೭ ಎಪಿಗ್ರಾಫಿಯಾ ಕರ್ನಾಟಕ.

[15]ಕೆಳದಿಯ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ನಿರ್ಮಿತ, ಕೆನೃವಿ ೭೭ – ೭೮.

[16]ಕೆಳದಿ ವೀರಮ್ಮಾಜಿ ಕಾಲದ ನಿರ್ಮಿತ. ಕೆ ಅಶಾಸಂ ೮೩. ಚಿಕ್ಕಮಗಳೂರು ಜಿಲ್ಲೆ ಗೆಜೆಟೀಯರ್.

[17]ಕೆ ಅಶಾಸಂಸಂಖ್ಯೆ ೨೮೮.

[18]ಕೆಳದಿ ಸಮಗ್ರ ಇತಿಹಾಸ ಸಂ.ಎಂ.ಎಂ. ಕಲಬುರ್ಗಿ ಪುಟ ೨೬೮.

[19]ಕೆನೃವಿ ಪುಟ ೭೭ – ೭೮, ಇದು ಆ ಕಾಲದ ಹೂವಿನ ತೋಟದ ಪಕ್ಕದಲ್ಲಿದ್ದ ಕೆರೆ ಈಗ ಅದಕ್ಕೆ ಸಂಪಟ್ಟೆಕೆರೆ ಎಂದು ಕರೆಯುತ್ತಾರೆ.

[20]ಅಘೋರೇಶ್ವರ ದೇವಾಲಯದ ನಾಲ್ಕು ದಿಕ್ಕಿನಲ್ಲಿ ಕೆರೆ ಇದೆ. ಕೋಟೆಯಲ್ಲಿರುವ ಬಾವಿಗೆ ಏತ ನೀರಾವರಿ ವ್ಯವಸ್ಥೆ ಇದೆ.

[21]ನಗರದ ಕೋಟೆಯ ಬಲಭಾಗದಲ್ಲಿ ಇದೆ ಶಿಥಿಲಾವಸ್ಥೆಯಲ್ಲಿದೆ.

[22]ಭುವನಗಿರಿಯ ಹೊರಭಾಗದಲ್ಲಿ ಸಂಗಮೇಶ್ವರದಲ್ಲಿ ಒಂದು ಸರೋವರ ನಿರ್ಮಾಣವಾಗಿತ್ತು. ಹಾಗೆಯೇ ನಗರದ ಹತ್ತಿರದಲ್ಲಿ ದೇವಗಂಗೆ ಎಂಬ ಕೊಳಗಳು ನಿರ್ಮಿಸಲ್ಪಟ್ಟಿದ್ದವು. ಭುವನಗಿರಿ ಕೋಟೆಯಲ್ಲಿ ಎತ್ತರದ ಜಾಗದಲ್ಲಿ ಇಂದೂ ಸಹ ವ್ಯವಸ್ಥೆಯಿಂದ ಕೂಡಿದ ೭ ಕೆರೆಗಳನ್ನು ನೋಡಬಹುದು.

[23]ವಿಜಯನಗರದ ಕಾಲದ ನೀರಾವರಿ ಪದ್ಧತಿ ಮೈ ವಿವಿ ಅಪ್ರಕಟಿತ ಸಂಪ್ರಬಂಧ. ಸಿ.ಟಿ.ಎಂ. ಕೊಟ್ರಯ್ಯ ೧೯೮೪ ಪುಟ ೨೧೪ – ೨೧೬.

[24]ಕೆನೃವಿ ಪುಟ ೫೨ – ೫೩

[25]ವಿಜಯನಗರ ಕಾಲದ ನೀರಾವರಿ ಪದ್ಧತಿ ಪುಟ ೨೧೬.

[26]ನೀರಗಂಟಿ ಕೆಲಸವನ್ನು ಹಿಂದೆ ಅವರ ಮನೆತನದಲ್ಲಿ ಮಾಡುತ್ತಿದ್ದರಂತೆ.

[27]ಎ.ಕ. ೮ ತೀರ್ಥಹಳ್ಳಿ ೧೮೫ ಯಾರಾದರು ನಿಧನ ಹೊಂದಿದರೆ ಅವರಿಗೆ ವಾರಸುದಾರರು ಯಾರೂ ಇಲ್ಲವೆಂದಾದರೆ ಅವರ ಆಸ್ತಿಯಲ್ಲಿ ಸ್ವಲ್ಪ ಪಾಲನ್ನು ದೇವಾಲಯ ಕೆರೆ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.

[28]ಬಿ.ಎಲ್. ರೈಸ್, ಮೈಸೂರು ಕೊಡಗಿನ ಶಾಸನಗಳು ಪುಟ ೪೮.

[29]ಎ.ಕ. ೮ ತೀರ್ಥಹಳ್ಳಿ ೪೮.

[30]ಎಂ.ಎ.ಆರ್. ೧೯೩೩ ಸಂಖ್ಯೆ ೩೦ ಪುಟ ೧೯೬ (ಮೈಸೂರು ಅರ್ಕಿಯಾಲಾಜಿಕಲ್ ರಿಪೋರ್ಟ್ಸ್)

[31]ಬುಕಾನನ್ ಪ್ರವಾಸ ಕಥನ ಭಾಗ ೨ ಪುಟ ೪೦೯ – ೪೧೬

[32]ಕೆರೆಗಳನ್ನು ಮರೆಯದಿರಿ ರಂಭ ಬೆಂಗಳೂರು ೧೯೮೯ ಹೊಸಬಾಳೆ, ಹೆಗ್ಗೋಡು, ಕೆಳದಿ, ಇಕ್ಕೇರಿ ಮೊದಲಾದ ಕಡೆ ಇರುವ ಕೆರೆಗಳನ್ನು ಮತ್ತು ಹಿಂದಿನ ವ್ಯವಸ್ಥೆಯೇ ಮುಂದುವರೆದುಕೊಂಡು ಬಂದಿರುವುದನ್ನು ಈಗಲೂ ನೋಡಬಹುದು.

[33]ಶ್ರೀಮನೆ ಮಹಾರಾಜನ ವಂಶಾವಳಿ ಪುಟ ೪೧ – ೪೨.

[34]ಅದೇ ಪುಟ ೯೫.

[35]ಅದೇ ಪುಟ ೧೦೭.

[36]ಅದೇ ಪುಟ ೧೧೧.

[37]ಅದೇ ಪುಟ ೧೭೮.

[38]ಕೆಳದಿ ಅರಸರ ನಾಲ್ಕನೇ ರಾಜಧಾನಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ.

[39]ಜನರಲ್ ಮೆಮೋರಂಡಮ್ ಆನ್ ಮೈಸೂರು ಎಕ್ಸೆಟ್ರಾ, ಮೈಸೂರು ಗೌರ್ನಮೆಂಟ್ ಪ್ರೆಸ್ ೧೯೦೯ ಪುಟ ೫.

[40]ಅದೇ ಈ ಸಂಬಂಧದ ಮೂಲ ಪತ್ರ ಒಂದು ಸಂಶೋಧಕ ಕೆಳದಿ ಗುಂಡಾಜೋಯಿಸ್‌ರವರಲ್ಲಿದೆ.

[41]ಕರ್ನಲ್ ಮೆಕೆಂಜಿ ಆಧಾರದ ಮೇರೆಗೆ.

[42]ಕುಂಠೆ ಚಿಕ್ಕ ಕೆರೆ.

[43]ಟ್ಯಾಂಕ್ ಇರಿಗೇಷನ್ ಇನ್ ಕರ್ನಾಟಕ ಪ್ರೊ. ಜಿ.ಎಸ್. ದೀಕ್ಷಿತ್ ಗಾಂಧಿ ಸಾಹಿತ್ಯ ಸಂಘ್, ಬೆಂಗಳೂರು ೧೯೯೩, ಪುಟ ೯೦.

[44]ಶ್ರೀ ಗುಂಡಾಜೋಯಿಸರು ಈ ಪತ್ರವನ್ನು ನೀಡಿ ಸಹಕರಿಸಿದ್ದಕ್ಕೆ ಕೃತಜ್ಞತೆಗಳು. ಸಾಗರದ ದಿ. ಸೂರ್ಯನಾರಾಯಣ ಜೋಯಿಸರ ಮುಖಾಂತರ ಲಭಿಸಿದ ಈ ಪತ್ರದ ಪ್ರತಿ ಅನುಬಂಧದಲ್ಲಿದೆ. ದಿವಂಗತರ ಪುತ್ರ ಶ್ರೀ ಸದಾನಂದ ಜೋಯಿಸರಿಗೆ ಅತ್ಯಂತ ಕೃತಜ್ಞತೆ ಸಲ್ಲುತ್ತದೆ.

[45]ಕೆಳದಿ ಪಾಲಿಟಿ ಡಾ. ಕೆ.ಎನ್. ಚಿಟ್ನೀಸ್ ಪುನೆ ವಿವಿ ಪುಟ ೨೧೨.