ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಿಸಲಾದ ಲೇಖನಗಳನ್ನು ಆಗಸ್ಟ್ ೨೦೦೧ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿತ್ತು. ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಹಾಗೂ ಶಿವಮೊಗ್ಗದ ಇತಿಹಾಸ ವೇದಿಕೆಗಳು ಜಂಟಿಯಾಗಿ ಏರ್ಪಡಿಸಿದ ಈ ವಿಚಾರ ಸಂಕಿರಣದಲ್ಲಿ ಕೆರೆ ನೀರಾವರಿಯ ಚರಿತ್ರೆಯ ಕುರಿತು ಮಂಡಿಸಿದ ಪ್ರಬಂಧಗಳನ್ನು ಪ್ರತ್ಯೇಕವಾಗಿ ಈ ಪುಸ್ತಕರೂಪದಲ್ಲಿ ತರುತ್ತಿದ್ದೇವೆ. ಈ ಕುರಿತು ಕೆಲ ಅಂಶಗಳನ್ನು ಇಲ್ಲಿ ಪ್ರಾಸ್ತಾವಿಕವಾಗಿ ಉಲ್ಲೇಖಿಸುವ ಅಗತ್ಯ ಇದೆ.

ಕೆರೆ ನೀರಾವರಿಯ ಚರಿತ್ರೆ ಕೇವಲ ಜ್ಞಾನ ಕುತೂಹಲ ಮಾತ್ರವಲ್ಲ. ಇದೊಂದು ವರ್ತಮಾನದ ಅಗತ್ಯಕ್ಕೆ ಸ್ಪಂದಿಸಿ ಇಂದು ಬೆಳೆಯುತ್ತಿರುವ ಅಧ್ಯಯನವಾಗಿದೆ. ಕರ್ನಾಟಕದ ಕೆರೆ ನೀರಾವರಿಯ ಅಧ್ಯಯನದ ತೀರ ಪ್ರಾರಂಭಾವಸ್ಥೆಯಲ್ಲೇ ಜಿ.ಎಸ್. ದೀಕ್ಷಿತರು ಇಂದು ಅಳಿದುಹೋಗುತ್ತಿರುವ ಕೆರೆಗಳನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯಿಂದ ಇದಕ್ಕೊಂದು ಸಂಶೋಧನಾ ಕಾರ್ಯಕ್ರಮವನ್ನು ಹಾಕಿಕೊಂಡರು. ಈ ಸಂಶೋಧನೆಯಲ್ಲಿ ಕೇವಲ ಇತಿಹಾಸಕಾರರು ಮಾತ್ರವಲ್ಲ, ಇಂದಿನ ತಂತ್ರಜ್ಞರು, ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ. ಇವರೆಲ್ಲರ ಉದ್ದೇಶ ಎಂದರೆ ಕೆರೆ ನೀರಾವರಿಯ ಕುರಿತ ನಮ್ಮ ತಿಳುವಳಿಕೆಯನ್ನು ವಿಸ್ತರಿಸಿ ಅದನ್ನು ಸಫಲವಾಗಿ ಇಂದು ಹೇಗೆ ಅಳವಡಿಸಿಕೊಂಡು, ಉಳಿಸಿಕೊಂಡು ಬರಬಹುದು ಎಂಬುದೇ ಆಗಿದೆ. ಇಂದು ಅನೇಕ ಸ್ವಯಂಸೇವಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಕೆರೆಗಳ ಅಭಿವೃದ್ಧಿಗಾಗಿ ಪರಿಶ್ರಮಿಸುತ್ತಿವೆ.

ಇದಕ್ಕೆಲ್ಲ ಮೂಲ ಕಾರಣವೆಂದರೆ ವರ್ತಮಾನದಲ್ಲಿ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗಳು ಹಾಗೂ ಪರಿಸರ ಸಮಸ್ಯೆಗಳು, ಆಧುನಿಕ ಭಾರತೀಯ ಸರ್ಕಾರಗಳು ಒಂದು ಹಂತದಲ್ಲಿ ಈ ಸಣ್ಣ ಕೆರೆಗಳು ರಾಜ್ಯಕ್ಕೆ ಹೊರೆಯಲ್ಲದೇ ಮತ್ತೇನಲ್ಲವೆಂದು ದೊಡ್ಡ ಕೆರೆಗಳಿಗೆ ಹಾಗೂ ಬೃಹತ್ ನೀರಾವರಿಗೆ ಒತ್ತು ನೀಡುತ್ತ ಬಂದವು. ೧೯ನೇ ಶತಮಾನದಲ್ಲಿ ಕೆರೆ ನೀರಾವರಿಯ ನಿರ್ವಹಣೆಯನ್ನು ಸ್ಥಾನಿಕ ವ್ಯಕ್ತಿ ಮತ್ತು ಸಮುದಾಯಗಳ ಹಿಡಿತದಿಂದ ತಪ್ಪಿಸಿ ಅವುಗಳ ಪೂರ್ಣ ಪ್ರಯೋಜನವನ್ನು ಪಡೆಯುವ ಉದ್ದೇಶದಿಂದ ರಾಜ್ಯವೇ ಅಧಿಕಾರ ಶಾಹಿಯಿಂದ ಅವುಗಳನ್ನು ನಿರ್ವಹಿಸಲು ತೊಡಗಿತು. ಆದರೆ ೧೮೮೪ರಲ್ಲೇ ಈ ಕೆರೆಗಳನ್ನೆಲ್ಲ ರಿಪೇರಿ ಮಾಡಿ ನಿರ್ವಹಿಸುವ ಕೆಲಸ ರಾಜ್ಯಕ್ಕೆ ಹೊರೆಯಾಗುವುದು ಎಂಬುದೂ ಸ್ಪಷ್ಟವಾಗಿತ್ತು. ತದನಂತರ ೨೦ನೇ ಶತಮಾನದಲ್ಲಿ ಲಾಭವನ್ನು ತರದ ಸಣ್ಣ ಕೆರೆಗಳನ್ನು ಸರ್ಕಾರ ನಿರ್ಲಕ್ಷಿಸಿತು. ಅಷ್ಟಾಗಿಯೂ ೧೯ – ೨೦ನೇ ಶತಮಾನದಲ್ಲಿ ಆಧುನಿಕ ರಾಜ್ಯವು ಕೆರೆಗಳ ಅಭಿವೃದ್ಧಿಗಾಗಿ ಅಪಾರ ಶ್ರಮವನ್ನಂತೂ ವಹಿಸಿದೆ. ಕೆರೆಗಳ ಸಂಖ್ಯೆಯನ್ನು ೨೦ನೇ ಶತಮಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಆದರೆ ಕೆರೆಗಳ ಸಂಖ್ಯೆಯ ಹೆಚ್ಚಳವೊಂದೇ ನೀರಾವರಿ ಅಭಿವೃದ್ಧಿಯ ಮಾನದಂಡವಲ್ಲ. ಈ ಕೆರೆಗಳನ್ನು ನಿರ್ವಹಿಸಿಕೊಂಡು ಅದರ ಉಪಯೋಗವನ್ನು ಪಡೆಯುವಲ್ಲಿ ಸಮುದಾಯಗಳು ವಿಫಲವಾಗುತ್ತಿವೆ. ಹಾಗಾಗಿ ಎಲ್ಲ ಭಾರತವೂ ಸರ್ಕಾರದ ಮೇಲೇ ಬೀಳುತ್ತಿದೆ. ಹೀಗಾಗಿ ಹಾಳಾದ ಕೆರೆಗಳು ಹಾಗೇ ಉಳಿದವು. ಹೂಳು ತುಂಬಿದ ಕೆರೆಗಳು ನೀರನ್ನು ಕಳೆದುಕೊಂಡವು. ಕೆರೆಗೆ ಬರುವ ನೀರಿನ ಸ್ರೋತಗಳನ್ನು ಸರಿಯಾಗಿ ತಿದ್ದದೇ ಅವೂ ಕಡಿಮೆಯಾದವು.

ಇವುಗಳ ಜೊತೆಗೇ ಕೆರೆಯಂಗಳದ ಒತ್ತುವರಿ, ಪಟ್ಟಣ ಪ್ರದೇಶಗಳಲ್ಲಿ ಅವುಗಳನ್ನು ಸೈಟುಗಳನ್ನಾಗಿ ಪರಿವರ್ತಿಸುವುದು ಮುಂತಾದ ಸಮಸ್ಯೆಗಳೂ ಗಂಭೀರವಾಗಿವೆ. ಒಂದು ಕಾಲದಲ್ಲಿ ಬಹುತೇಕ ಹಳ್ಳಿಗಳಿಗೆ ಸಣ್ಣಪುಟ್ಟ ಕೆರೆಗಳಾದರೂ ಕುಡಿಯುವ ನೀರಿಗಾಗಿ ಅಗತ್ಯವಿದ್ದವು. ಇಂದು ಕೊಳವೆ ಬಾವಿಗಳ ಉಪಯೋಗದಿಂದ ಇಂಥ ಕೆರೆಗಳೂ ಮಹತ್ವ ಕಳೆದುಕೊಂಡು ನಶಿಸುತ್ತಿವೆ. ಅಷ್ಟೇ ಅಲ್ಲದೇ ಭೂಮಿಯ ಅಂತರ್ಜಲವು ಇಂದು ಕೊಳವೆ ಬಾವಿಗಳಿಗೂ ಸಿಗದ ರೀತಿಯಲ್ಲಿ ಒತ್ತುತ್ತಿದೆ. ಅದಕ್ಕೆ ಕಾರಣ ಎಂದರೆ

೧. ನೀರಾವರಿಗಾಗಿ ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ಅನಿರ್ಬಂಧಿತವಾಗಿ ತೆಗೆಯಲಾಗುತ್ತಿದೆ.

೨. ಅಂತರ್ಜಲದ ಅಭಿವೃದ್ಧಿಗೆ ಪರಿಣಾಮಕಾರಿಯಾದ ಕಾರ್ಯಕ್ರಮಗಳೇನೂ ರೂಪಿತವಾಗುತ್ತಿಲ್ಲ. ಹೀಗಾಗಿ ಕೊಳವೆ ಬಾವಿ ಕೆರೆಗಳಿಗೆ ಪರ್ಯಾಯವಾಗಲಾರದು ಎಂಬುದು ಸಾಬೀತಾಗುತ್ತಿದೆ. ಅಷ್ಟೇ ಅಲ್ಲ, ಕೆರೆಗಳನ್ನು ಅಭಿವೃದ್ಧಿಪಡಿಸುವುದೊಂದೇ ಇದಕ್ಕೆ ಸದ್ಯದ ಪರ್ಯಾಯ ಎಂಬುದೂ ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಗಂಭೀರವಾಗಿ ಸರ್ಕಾರ ಮತ್ತು ಸಮುದಾಯಗಳು ಕಾರ್ಯಪ್ರವೃತ್ತವಾಗದಿದ್ದರೆ ಕೆಲ ಪ್ರದೇಶಗಳ ಪರಿಸ್ಥಿತಿ ಭೀಕರವಾಗಬಹುದು.

ಅದೇ ರೀತಿ ಬೃಹತ್ ನೀರಾವರಿಯೂ ಕೆರೆಗಳಿಗೆ ಸೂಕ್ತ ಪರ್ಯಾಯವಾಗಲಾರದು. ಕೆಲ ಪ್ರಾಕೃತಿಕ ಅನುಕೂಲ ಅಂಶಗಳು ಇದ್ದಲ್ಲಿ ಮಾತ್ರ ಬೃಹತ್ ನೀರಾವರಿ ಸಾಧ್ಯವಾಗಬಹುದು. ನಮ್ಮ ರಾಜ್ಯದ ಬಹುತೇಕ ಭಾಗವು ಇಂಥ ಅದೃಷ್ಟವನ್ನು ಹೊಂದಿಲ್ಲ. ಕೇವಲ ಮಳೆಯ ನೀರನ್ನೇ ನೆಚ್ಚಿಕೊಂಡಿರುವ ಭಾಗಗಳಿಗೆ ಬೇಸಿಗೆಯಲ್ಲಿ ನೀರಿನ ಏಕೈಕ ಆಸರೆಗಳು ಈ ಕೆರೆಗಳಾಗಿವೆ. ಹಾಗಾಗಿ ಅಂಥ ಭಾಗಗಳಲ್ಲಿ ವಿವೇಕಯುತವಾದ ನೀರಾವರಿ ಎಂದರೆ ಕೆರೆಗಳದೇ. ಇದರ ಜೊತೆಗೇ ಬೃಹತ್ ನೀರಾವರಿ, ಯೋಜನೆಗಳು ಪರಿಸರದ ಮೇಲೆ, ಸಮುದಾಯಗಳ ಸಂಸ್ಕೃತಿಯ ಮೇಲೆ ತರಬಹುದಾದ ಆಘಾತಗಳನ್ನು ಕುರಿತು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹಾಗಾಗಿ ಒಂದು ಮಿತಿಯನ್ನು ಮೀರಿ ಈ ಬೃಹತ್ ಯೋಜನೆಗಳನ್ನು ಹಮ್ಮಿಕೊಳ್ಳುವುದೂ ಸಾಧ್ಯವಿಲ್ಲ.

ಹೀಗೆ ಈ ಮೇಲಿನ ಎಲ್ಲ ಕಾರಣಗಳಿಂದಾಗಿ ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದ ಕೆರೆ ನೀರಾವರಿಯತ್ತ ನಮ್ಮ ಗಮನವನ್ನು ಹರಿಸುವುದು ವರ್ತಮಾನದ ಒಂದು ಅನಿವಾರ್ಯತೆಯೇ ಆಗಿದೆ. ಇಂದು ನಮ್ಮ ತಂತ್ರಜ್ಞಾನವು ಅಪೂರ್ವವಾಗಿ ಬೆಳೆದಿದೆ ಹಾಗೂ ನಮ್ಮ ಸಾಮಾಜಿಕ ನ್ಯಾಯದ ಕಲ್ಪನೆಗಳೂ ಬದಲಾಗಿವೆ. ಹಾಗಾಗಿ ಈ ಹಳೇ ಸಂಗತಿಗಳನ್ನು ತಿಳಿದುಕೊಳ್ಳುವ ಅಗತ್ಯವೇನಿದೆ? ಅದು ಮತ್ತೆ ಹಳೆ ಸಾಮಾಜಿಕ ವ್ಯವಸ್ಥೆಗಳ ವೈಭವೀಕರಣವಾಗುವುದಿಲ್ಲವೆ? ಎಂದೂ ಕೇಳಿದವರಿದ್ದಾರೆ. ತಂತ್ರಜ್ಞಾನಕ್ಕೂ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೂ ಕಾರಣ ಸಂಬಂಧಗಳಿವೆ ಎಂಬ ಗ್ರಹಿಕೆಯಿಂದ ಇಂಥ ಪ್ರಶ್ನೆಗಳು ಏಳುತ್ತವೆ ಹಾಗೂ ಐತಿಹಾಸಿಕ ಸಾಮಾಜಿಕ ವ್ಯವಸ್ಥೆಗಳ ಕುರಿತ ಅಗಾಧ ಅಜ್ಞಾನದಿಂದಲೂ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆ ಅಜ್ಞಾನವನ್ನು ಭೇದಿಸಲಿಕ್ಕೆ ನಮಗೆ ಆಕರ ಹಾಗೂ ಮಾಹಿತಿಗಳ ಅಭಾವವಿದೆ. ಚಾರಿತ್ರಿಕ ಸಂಗತಿಗಳ ಕುರಿತು ಹೆಚ್ಚು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿದಂತೆಲ್ಲ ನಮ್ಮ ಗ್ರಹಿಕೆಗಳಿಗೆ ಸ್ಪಷ್ಟತೆ ಬರಬಹುದು.

ಇಲ್ಲಿ ನಮಗೆ ಏಳುವ ಮುಖ್ಯ ಪ್ರಶ್ನೆ ಎಂದರೆ ಏಕೆ ಆಧುನಿಕ ರಾಜ್ಯ ಈ ಕೆರೆ ನೀರಾವರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ವಿಫಲವಾಗಿದೆ ಎಂಬುದು. ಅಂಥ ನಿರ್ವಹಣೆ ರಾಜ್ಯಕ್ಕೊಂದು ಆರ್ಥಿಕ ನಷ್ಟದ ಬಾಬ್ತು ಎಂದಾದಲ್ಲಿ ಚಾರಿತ್ರಿಕ ರಾಜ್ಯಗಳು ನಷ್ಟವನ್ನನುಭವಿಸುತ್ತಾ ಇದನ್ನು ಉಳಿಸಿಕೊಂಡು ಬಂದವೆ? ಅಥವಾ ಆ ರಾಜ್ಯಗಳು ಇದನ್ನು ನಿಬಾಯಿಸಿದ ರೀತಿ ಬೇರೆ ಇತ್ತೆ? ಹೀಗಿದ್ದಾಗ ಆ ರಾಜ್ಯಗಳ ಸ್ವರೂಪ ಏನು? ಅಂದಿನ ಕೆರೆ ನಿರ್ವಹಣೆಯ ಸ್ವರೂಪ ಏನು? ಇಂದಿನ ಬದಲಾದ ಪರಿಸ್ಥಿತಿಗೆ ಅಂತಹ ಜ್ಞಾನಗಳು ಯಾವ ರೀತಿ ಅನ್ವಯವಾಗಬಹುದು? ಎಂಬೆಲ್ಲ ವಿಷಯಗಳನ್ನು ಪರಿಶೀಲಿಸುವುದರ ಉಪಯುಕ್ತತೆಯನ್ನು ಅಲ್ಲಗಳೆಯುವಂತಿಲ್ಲ. ಬಹುಶಃ ತೀರ ವಿಸ್ತೃತವಾದ ಸಂಶೋಧನೆಗಳಿಂದ ಈ ಕುರಿತು ನಮ್ಮ ಗ್ರಹಿಕೆ ಸ್ಪಷ್ಟವಾಗುತ್ತ ಸಾಗಬಹುದು. ಈ ನಿಟ್ಟಿನಲ್ಲಿ ಪ್ರಸ್ತುತ ಸಂಗ್ರಹದಲ್ಲಿ ಅನೇಕ ವಿದ್ವಾಂಸರನ್ನು ಸಂಪರ್ಕಿಸಿ ಕೆರೆ ನೀರಾವರಿಯ ತಂತ್ರಜ್ಞಾನ, ಅದರ ಇತಿ – ಮಿತಿಗಳು, ಕೆರೆಗಳ ನಿರ್ವಹಣೆ, ನಿರ್ಮಾತೃಗಳು, ಹಾಗೂ ಕರಾವಳಿ, ಮಲೆನಾಡು, ಒಳನಾಡುಗಳ ಕೆಲ ಆಯ್ದು ಪ್ರದೇಶಗಳ ಸಂಬಂಧಿಸಿ ವಿಸ್ತೃತ ಅಧ್ಯಯನಗಳು ಮುಂತಾದ ಲೇಖನಗಳನ್ನು ಇಲ್ಲಿ ಯೋಜಿಸಲಾಗಿದೆ.

ಕರ್ನಾಟಕದಲ್ಲಿ ಚಾರಿತ್ರಿಕ ಕೆರೆ ನೀರಾವರಿಯ ಈಗಾಗಲೇ ಅನೇಕ ಅಧ್ಯಯನಗಳು ಬಂದಿವೆ. ಜಿ.ಎಸ್. ದೀಕ್ಷಿತ್, ಜಿ.ಆರ್. ಕುಪ್ಪುಸ್ವಾಮಿ, ಎಸ್. ಕೆ. ಮೋಹನ್ ಇವರ Tank Irrigation in Karnataka ಇಂಥದೊಂದು ಸಮಗ್ರ ಗ್ರಂಥವಾಗಿದೆ. ಸಿ.ಟಿ.ಎಂ. ಕೊಟ್ರಯ್ಯನವರ Irrigation systems under Vijayanagara empire ಗ್ರಂಥವೂ ಹೊರಬಂದಿದೆ. ಇವೆರಡೂ ಕನ್ನಡ ವಿಶ್ವವಿದ್ಯಾಲಯದಿಂದ ಅನುವಾದಿತಗೊಂಡು ಪ್ರಕಟವಾಗಿವೆ. ಜೊತೆಗೆ ಜಿ.ಆರ್. ಕುಪ್ಪುಸ್ವಾಮಿಯವರು ಈ ಸಂಬಂಧಿಸಿ ಅನೇಕ ಮೌಲಿಕವಾದ ಲೇಖನಗಳನ್ನು ಪ್ರಕಟಿಸಿದ್ದಾರೆ. ಚಾರಿತ್ರಿಕ ರಾಜಮನೆತನಗಳ ಕಾಲದ ನೀರಾವರಿಯ ಕುರಿತು ಬಿಡಿ ಲೇಖನಗಳೂ ಪ್ರಕಟವಾಗಿವೆ. ವಾಸುದೇವನ್ ಅವರು ಹಂಪಿಯ ಸುತ್ತ ಮುತ್ತಲಿನ ಕೆರೆಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಗ್ರಂಥದಲ್ಲಿನ ಲೇಖನಗಳು ಇಂಥ ಸಂಶೋಧನೆಗಳಿಗೆ ಹೊಸ ಸೇರ್ಪಡೆಗಳು ಹಾಗೂ ಆದಷ್ಟೂ ಹೊಸ ಮಾಹಿತಿಗಳನ್ನು ಉದ್ದೇಶವಾಗಿಟ್ಟುಕೊಂಡು ಇವುಗಳನ್ನು ಯೋಜಿಸಲಾಗಿದೆ. ಈ ಲೇಖನಗಳಿಗೆಲ್ಲ ಪ್ರಾಸ್ತಾವಿಕವಾಗಿ ಜಿ.ಎಸ್. ದೀಕ್ಷಿತ್‌ರ ಕೆರೆಗಳ ಚಾರಿತ್ರಿಕ ಅಂಶಗಳು ಲೇಖನ ಕೂಡ ಇಲ್ಲಿದೆ. ಪ್ರಸ್ತುತ ವಿಚಾರ ಸಂಕಿರಣದ ವಿಷಯ ಯೋಜನೆ ಹಾಗೂ ಅದಕ್ಕೆ ಸಂಬಂಧಿಸಿದ ವಿದ್ವಾಂಸರನ್ನೂ ಆಹ್ವಾನಿಸುವಲ್ಲಿ ದೀಕ್ಷಿತರು ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಮೊತ್ತ ಮೊದಲನೆಯದಾಗಿ ನಾವು ಋಣಿಗಳಾಗಿದ್ದೇವೆ.

ಈ ವಿಚಾರ ಸಂಕಿರಣವನ್ನು ಮೂಲತಃ ಶಿವಮೊಗ್ಗದಲ್ಲಿ ನಡೆಸಬೇಕೆಂದು ಯೋಚಿಸಲಾಗಿತ್ತು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಸಿದೆವು. ಈ ವಿಚಾರ ಸಂಕಿರಣದ ನಿರ್ವಹಣೆ ಹಾಗೂ ಈ ಗ್ರಂಥವನ್ನು ಹೊರತರಲು ಧನಸಹಾಯ ನೀಡಿದ ಸಣ್ಣ ನೀರಾವರಿ ಸಚಿವರಾದ ಮಾನ್ಯ ಶ್ರೀ ಕುಮಾರ ಬಂಗಾರಪ್ಪನವರಿಗೆ ನಮ್ಮ ಕೃತಜ್ಞತೆಗಳು. ಹಂಪಿ ವಿಶ್ವವಿದ್ಯಾಲಯವು ಉತ್ಸಾಹದಿಂದ ಈ ಕೆಲಸವನ್ನು ನಡೆಸಿಕೊಟ್ಟಿದೆ. ಅದರಲ್ಲೂ ಕುಲಪತಿಗಳಾದ ಎಚ್. ಜಿ. ಲಕ್ಕಪ್ಪಗೌಡರು ಹಾಗೂ ಕುಲಸಚಿವರಾದ ಕೆ.ವಿ.ನಾರಾಯಣ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಅವರಿಗೆ ನಾವು ಋಣಿಗಳಾಗಿದ್ದೇವೆ. ಹಾಗೂ ಈ ವಿಚಾರಸಂಕಿರಣವನ್ನು ಏರ್ಪಡಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚಂದ್ರಪೂಜಾರಿಯವರಿಗೂ ನಮ್ಮ ಕೃತಜ್ಞತೆ ಸಲ್ಲುತ್ತದೆ.

ಈ ವಿಚಾರ ಸಂಕಿರಣರಕ್ಕೆ ನಮ್ಮ ಆಹ್ವಾನವನ್ನು ಪುರಸ್ಕರಿಸಿ ತಮ್ಮ ಲೇಖನಗಳನ್ನು ಮಂಡಿಸಿ, ಸಕಾಲದಲ್ಲಿ ಅವುಗಳನ್ನು ನಮಗೆ ತಲುಪಿಸಿದ ಎಲ್ಲ ವಿದ್ವಾಂಸರಿಗೂ ನಾವು ಕೃತಜ್ಞರಾಗಿದ್ದೇವೆ. ಪ್ರಸ್ತುತ ಗ್ರಂಥವನ್ನು ಹೊರತರುತ್ತಿರುವ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದ ಪದಾಧಿಕಾರಿಗಳಿಗೂ ಹಾಗೂ ಇದನ್ನು ಸಿದ್ಧಪಡಿಸಿಕೊಟ್ಟ ಯಾಜಿ ಗ್ರಾಫಿಕ್ಸ್ ಅವರಿಗೂ ನಾವು ಋಣಿಗಳು.

ರಾಜಾರಾಮ ಹೆಗಡೆ