ಅಸಾಧಾರಣ ಬಹುಮುಖೀ ಪ್ರತಿಭೆಯ ಜಯಂತ್ ಕಾಯ್ಕಿಣಿ ೧೯೫೫ರಲ್ಲಿ, ಕಡಲ ತೀರದ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಜನಿಸಿದರು. ಇವರ ತಂದೆ ಶ್ರೇಷ್ಠ ವಿದ್ವಾಂಸರೂ ಅಪ್ರತಿಮ ವಿಚಾರವಾದಿಗಳು ಆಗಿದ್ದ ಗೌರೀಶ ಕಾಯ್ಕಿಣಿ ಮತ್ತು ತಾಯಿ ಶಾಂತಾದೇವಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಸಂಸ್ಕೃತ ಕುಟುಂಬದಲ್ಲಿ ಹಾಗೂ ಸಾಹಿತ್ಯಕ ವಲಯದಲ್ಲಿ ಬೆಳೆದ ಕಾಯ್ಕಿಣಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ಬಯೋಕೆಮಿಸ್ಟ್ರಿ’ಯಲ್ಲಿ ಎಂ. ಎಸ್ ಸಿ. ಪದವಿ ಪಡೆದು, ಅನಂತರ ೧೯೭೬ರಲ್ಲಿ ಮುಂಬಯಿಗೆ ತೆರಳಿ, ಅಲ್ಲಿ ಪ್ರಾಕ್ಟರ್ ಅಂಡ್ ಗ್ಯಾಂಬಲ್, ಹೆಕ್ಸ್ಟ್, ಇತ್ಯಾದಿ ಪ್ರಸಿದ್ಧ ಕಂಪನಿಗಳಲ್ಲಿ ಪ್ರೊಡಕ್ಷನ್ ಕೆಮಿಸ್ಟ್ ಆಗಿ ಸುಮಾರು ೨೩ ವರ್ಷಗಳ ಕಾಲ ಕೆಲಸಮಾಡಿದರು. ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯಲ್ಲಿದ್ದಾಗಲೇ ಅದೇ ಕಂಪನಿಯಲ್ಲಿ ಕೆಮಿಸ್ಟ್ ಆಗಿ ಕೆಲಸಮಾಡುತ್ತಿದ್ದ ತಮ್ಮ ಸಹೋದ್ಯೋಗಿ ಸ್ಮಿತಾ ಎಂಬುವವರನ್ನು ಮದುವೆಯಾದರು. ವಿದ್ಯಾರ್ಥಿಯಾಗಿದ್ದಾಗಲೇ ಕಥೆ-ಕವನಗಳ ರಚನೆಯನ್ನು ಪ್ರಾರಂಭಿಸಿದ್ದ ಜಯಂತ್, ಮುಂಬಯಿಯಲ್ಲಿದ್ದ ಶ್ರೀ ಯಶವಂತ ಚಿತ್ತಾಲ, ಶ್ರೀ ವ್ಯಾಸರಾಯ ಬಲ್ಲಾಳ, ಮುಂತಾದ ಹಿರಿಯ ಲೇಖಕರ ಸಹವಾಸದಲ್ಲಿ ಪಳಗಿ, ಬಹು ಬೇಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದರು. ಇವರ ಹೆಚ್ಚಿನ ಕಥೆ-ಕವನ-ಪ್ರಬಂಧಗಳಲ್ಲಿ ಕಂಡುಬರುವುದು ಮುಂಬಯಿ ಎಂಬ ದೈತ್ಯ ನಗರ ಹಾಗೂ ಅಲ್ಲಿನ ಸಾಮಾನ್ಯ ಜನರ ಬದುಕಿನ ಹೋರಾಟ. ಹೊಸ ಸಹಸ್ರಮಾನದ ಪ್ರಾರಂಭದಲ್ಲಿ ಜಯಂತ್ ಹೊಸ ಸಾಹಸವನ್ನು ಕೈಗೊಂಡರು –ತಮ್ಮ ಮುಂಬಯಿಯ ಸುಭದ್ರ ಬದುಕನ್ನು ತೊರೆದು ಬೆಂಗಳೂರಿಗೆ ವಲಸೆ ಬಂದರು. ಪ್ರಾರಂಭದಲ್ಲಿ ಭಾವನಾ ಎಂಬ ವಿಶಿಷ್ಟ ಮಾಸಪತ್ರಿಕೆಯ ಸಂಪಾದಕರಾಗಿ ಎರಡು ವರ್ಷಗಳ ಕಾಲ ದುಡಿದು, ಅನಂತರ, ಕಥೆ-ಕವನಗಳ ರಚನೆಯೊಡನೆ ಹೊಸ ಕ್ಷೇತ್ರಗಳಿಗೂ ಪ್ರವೇಶಿಸಿದರು — ಚಿತ್ರ-ಕಥೆಗಳನ್ನು ಸಿದ್ಧಪಡಿಸುವುದು, ಚಿತ್ರಗೀತೆಗಳ ರಚನೆ, ಕಿರು ತೆರೆಯಲ್ಲಿ (ಇ-ಟಿವಿ) ‘ನಮಸ್ಕಾರ’ ಎಂಬ ಹೆಸರಿನ ವಿಶಿಷ್ಟ ಸಂದರ್ಶನ ಮಾಲಿಕೆಯ ನಿರ್ಮಾಣ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ (ಜ಼ಿ-ಟಿವಿ) ತೀರ್ಪುಗಾರರಾಗಿ ಕಾರ್ಯನಿರ್ವಹಣೆ, ಇತ್ಯಾದಿ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಜಯಂತರ ಕಥೆಗಳು ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಒಂದು ಯಶಸ್ವಿ ಕಥಾ ಸಂಕಲನ, ಅಮೃತಬಳ್ಳಿಯ ಕಷಾಯ, ಇಡಿಯಾಗಿ, ಅಮೆರಿಕಾದಲ್ಲಿ ನೆಲೆಸಿರುವ ಡಾ. ವಿಶ್ವನಾಥ ಹುಲಿಕಲ್ ಮತ್ತು ಅವರ ಸಂಗಡಿಗರಿಂದ ಇಂಗ್ಲೀಷ್‌ಗೆ ಅನುವಾದಗೊಂಡು, ಅಲ್ಲಿಯ ‘ಸಾಹಿತ್ಯ ಗೋಷ್ಠಿ’ ಎಂಬ ಸಂಸ್ಥೆಯಿಂದ dots and lines ಎಂಬ ಹೆಸರಿನಲ್ಲಿ ೨೦೦೪ರಲ್ಲಿ ಪ್ರಕಟವಾಗಿದೆ. ಇತಿ ನಿನ್ನ ಅಮೃತಾ ಹಾಗೂ ವಂತಿ ಪ್ರಸಂಗ ನಾಟಕಗಳು ರಂಗದ ಮೇಲೆ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಇವರ ಕೃತಿಗಳಿಗೆ ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ (೧೯೭೫, ೧೯೮೨, ೧೯೮೯, ೧೯೯೬) ಸೇರಿದಂತೆ, ದಿನಕರ ದೇಸಾಯಿ ಪ್ರಶಸ್ತಿ, ಶ್ರೀಧರ ಪ್ರಶಸ್ತಿ, ಕಥಾ ನ್ಯಾಶನಲ್ ಅವಾರ್ಡ್, ಋಜುವಾತು ಟ್ರಸ್ಟ್ ಫ಼ೆಲೋಶಿಪ್, ಇತ್ಯಾದಿ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಹಾಗೆಯೇ, ವರ್ಷದ ಅತ್ಯುತ್ತಮ ಚಲನಚಿತ್ರ ಸಂಭಾಷಣೆ ಹಾಗೂ ಗೀತೆಗಳಿಗೆ ಕರ್ನಾಟಕ ಸರಕಾರ ನೀಡುವ ಪ್ರಶಸ್ತಿಗಳನ್ನು ಎರಡು ಬಾರಿ, ಮತ್ತು ಫ಼ಿಲ್ಮ್‌ಫ಼ೇರ್ ಪ್ರಶಸ್ತಿಯನ್ನು ಮೂರು ಬಾರಿ ಇವರು ಪಡೆದಿದ್ದಾರೆ. ಇದೇ ವರ್ಷ (೨೦೧೦), ಮಹಾರಾಷ್ಟ್ರದ ‘ಯಶವಂತರಾವ್ ವಿ. ವಿ.’ಯು ‘ಕುಸುಮಾಗ್ರಜ ಪ್ರತಿಷ್ಠಾನ’ದ ಸಹಯೋಗದೊಡನೆ ಭಾರತೀಯ ಭಾಷೆಯ ಸಾಹಿತಿಗಳಿಗೆ ನೀಡುವ ಪ್ರತಿಷ್ಠಿತ ‘ಕುಸುಮಾಗ್ರಜ ಪ್ರಶಸ್ತಿ’ ಪ್ರಾರಂಭಿಕ ವರ್ಷದಲ್ಲಿಯೇ ಜಯಂತ್ ಕಾಯ್ಕಿಣಿ ಅವರಿಗೆ ದೊರಕಿತು ಎಂಬುದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ.

* * *

ಕವಿಯಾಗಿ ಕನ್ನಡ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ ಜಯಂತರ ಮೊದಲ ಕವನ ಸಂಕಲನ ರಂಗದಿಂದೊಂದಿಷ್ಟು ದೂರ ೧೯೭೪ರಲ್ಲಿ (ಎಂದರೆ ಇವರ ೧೯ನೆಯ ವಯಸ್ಸಿನಲ್ಲಿಯೇ) ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಜಯಂತ್ ಬರೆದಿರುವ ಒಟ್ಟು ಕೃತಿಗಳ ಸಂಖ್ಯೆ ಹದಿನೇಳು: ಕವನ ಸಂಕಲನಗಳು (೫), ಕಥಾ ಸಂಕಲನಗಳು (೭), ನಾಟಕಗಳು (೩), ಪ್ರಬಂಧ ಸಂಕಲನಗಳು (೨).

) ಕಾವ್ಯ: ಇದುವರೆಗೆ ಪ್ರಕಟವಾಗಿರುವ ಜಯಂತರ ಕವನಸಂಕಲನಗಳು ಐದು: ರಂಗದಿಂದೊಂದಿಷ್ಟು ದೂರ (೧೯೭೪), ಕೋಟಿತೀರ್ಥ (೧೯೮೨), ಶ್ರಾವಣ ಮಧ್ಯಾಹ್ನ (೧೯೮೭), ನಿಲಿ ಮಳೆ (೧೯೯೭), ಮತ್ತು ಒಂದು ಜಿಲೇಬಿ (೨೦೦೮). ಇವರ ಮೊದಲ ಸಂಕಲನ ನವ್ಯ ಕಾವ್ಯ ಉಚ್ಛ್ರಾಯದಲ್ಲಿದ್ದಾಗ ಹೊರಬಂದಿತು; ಆದುದರಿಂದ, ಇವರ ಕವನಗಳೂ ನವ್ಯ ಮಾದರಿಯನ್ನೇ ಅನುಸರಿಸಿರುವುದು ಆಶ್ಚರ್ಯವೇನಲ್ಲ. ಎಂದರೆ, ಗೇಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ‘ಕಾವ್ಯಾತ್ಮಕ’ ಭಾಷೆ ಹಾಗೂ ನೇರ ನಿರೂಪಣೆ ಇವುಗಳನ್ನೂ ದೂರವಿಟ್ಟು, ಜಯಂತರು ಸಾಮಾನ್ಯ ಜನರ ಭಾಷೆಯಲ್ಲಿಯೇ, ಅವರ ‘ಕ್ಷುಲ್ಲಕ’ ದೈನಿಕ ವಿವರಗಳಿಂದ ಕೂಡಿದ ಶಬ್ದಚಿತ್ರಗಳನ್ನು ನಿರ್ಮಿಸುತ್ತಾ ಹೋಗುತ್ತಾರೆ. ಕವನವು ಬೆಳೆದಂತೆಲ್ಲಾ ಈ ಶಬ್ದಚಿತ್ರಗಳೂ ಪರಸ್ಪರ ಸಂಬಂಧಗಳನ್ನು ಕಲ್ಪಿಸಿಕೊಳ್ಳುತ್ತಾ ರೂಪಕಗಳಾಗಿ ಬೆಳೆದು, ಮಿಶ್ರ ಭಾವನೆಗಳನ್ನು ಹಾಗೂ ಒಂದು ವಿಶಿಷ್ಟ ಅನುಭವವನ್ನು ಓದುಗರಿಗೆ ಕೊಡುತ್ತವೆ. ಅಮೂರ್ತ ವಿಚಾರಗಳಿಗೆ ಇಂದ್ರಿಯಗಮ್ಯ ವಿವರಗಳ ಮೂಲಕ ಮೂರ್ತ ರೂಪವನ್ನು ಕಲ್ಪಿಸಿ, ಆ ಮೂಲಕ ಆ ವಿಚಾರವನ್ನು ಓದುಗರಿಗೆ / ಕೇಳುಗರಿಗೆ ತಲಪಿಸಬೇಕು ಎನ್ನುವುದು ಕವಿಯಾಗಿ ಇವರು ಕೈಗೊಂಡ ವ್ರತ. ತಮ್ಮ ಅಂಕಣ ಬರಹವೊಂದರಲ್ಲಿ ಜಯಂತ್ ತಮ್ಮ ಸಾಹಿತ್ಯ-ರಚನಾ ಕ್ರಮವನ್ನು ಹಾಗೂ ಉದ್ದೇಶವನ್ನೂ ಹೀಗೆ ವಿವರಿಸುತ್ತಾರೆ: “ಪ್ರತಿ ಅಂಕಣದಲ್ಲೂ ದೈನಿಕದ ಸಣ್ಣಪುಟ್ಟ ವಿವರಗಳ ಮೂಲಕ ಅನುಭವವೊಂದನ್ನು ಕಟ್ಟಿಕೊಡುವ ಪ್ರಯತ್ನವೊಂದನ್ನು ನಡೆಸಿದೆ. ಸಾಹಿತ್ಯ ಎಂದರೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಸ್ಪಷ್ಟ ಉತ್ತರ ನನ್ನ ಬಳಿ ಇಲ್ಲ. ಅದು ‘ವಿಚಾರ’ವನ್ನು ಅಥವಾ ‘ಅರ್ಥ’ವನ್ನು ಅನುಭವವಾಗಿಸುವ ಒಂದು ನಮ್ರ ಯತ್ನ ಎಂದು ಸುಮಾರಾಗಿ ಹೇಳಬಹುದೇನೋ!” (ಬೊಗಸೆಯಲ್ಲಿ ಮಳೆ, ಪು. ೨೮೬) ಈ ಮಾತುಗಳು ಅವರ ಅಂಕಣ ಬರಹಗಳಿಗೆ ಹೇಗೋ ಹಾಗೆ ಅವರ ಕವನಗಳಿಗೂ ಅನ್ವಯವಾಗುತ್ತವೆ.

ನಿದರ್ಶನಾರ್ಥವಾಗಿ ಈ ಕೆಲವು ಪ್ರಾತಿನಿಧಿಕ ಸಾಲುಗಳನ್ನು ಗಮನಿಸಿ:

ಅ) “ನೀರೆರೆದುಕೊಂಡು ಕೆದರು ತಲೆ ಹೊತ್ತಂಥ / ಕರವೀರ ದಾಸಾಳ ಶಂಖಪುಷ್ಪ./ ಬಿರಿದು ನೀರ್ಕುಡಿದು ಗಳಗಳ / ಮದನ ಮಸ್ತಾಗಿ ಪುಟಿದ ಹಸಿರು ಹುಲ್ಲು.”

) “ಶಬ್ದಗಳೆಷ್ಟೋ ಬಂದುವು ಬಾಬಾ ಬಾಗಿಲು ತಟ್ಟಿ / ಶ್ರುತಿಗೆಟ್ಟು ಮಲಗಿದ್ದೆ ಅಥವಾ ಕ್ಷಣಕ್ಕೆ ಎಣ್ಣೆ /ಹನಿಸುತ್ತಿದ್ದೆ.”

) “ಹರಕು ನೋಟಿನಂತೆ ಜೀವ / ಕದ್ದು ದಾಟುತ್ತಿದೆ ಮತ್ತೊಂದು ದಿನದ ಕೈಗೆ.”

) “ ಟಿಫ಼ಿನ್ ಕ್ಯಾರಿಯರ್ಗಳು ಹೂವಿನ ಅಂಗಡಿಗಳನ್ನು / ಹಲೋ ಅಂದಿವೆ. ಸೈಕಲ್ ಬೆಲ್ಲುಗಳು ಕೊಳದೊಳಗಿನ / ಪ್ಲಾಸ್ಟಿಕ್ ಕಮಲಗಳನ್ನು ಕರೀತಿವೆ. … ಮಚ್ಚರದಾನಿಗೆಂದು ಯಾರೋ ರಾತ್ರಿ / ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೇ ಇವೆ.”

ಭಿನ್ನ ಸಂಕಲನಗಳಿಂದ ಉದ್ಧರಿಸಿರುವ ಈ ಸಾಲುಗಳು ಕವನವನ್ನು ಕಟ್ಟುವಿಕೆಯ ಪ್ರಕ್ರಿಯೆ ಜಯಂತರ ಸರಿ ಸುಮಾರು ಎಲ್ಲಾ ಕವನಸಂಕಲನಗಳಲ್ಲಿಯೂ ಸಮಾನವಾಗಿಯೇ ಇರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಹೇಳಿಕೆಗೆ ಒಂದು ಟಿಪ್ಪಣಿಯೆಂದರೆ, ಕವಿಯಾಗಿ ಬೆಳೆಯುತ್ತಾ ಹೋದಂತೆ ಇವರ ಶಬ್ದಚಿತ್ರಗಳು ಹೆಚ್ಚು ಖಚಿತವೂ ಹೆಚ್ಚು ಧ್ವನಿಪೂರ್ಣವೂ ಆಗುತ್ತಾ ಹೋಗುತ್ತವೆ. ಈ ದೃಷ್ಟಿಯಿಂದ ನೀಲಿಮಳೆ ಜಯಂತರ ಅತ್ಯುತ್ತಮ ಕವನ ಸಂಕಲನ ಎಂದು ಹೇಳಬಹುದು.

ಆದರೆ, ಅವರ ಕವನಗಳ ಕಾಳಜಿಗಳು ಹಾಗೂ ಕೇಂದ್ರ ಪ್ರಜ್ಞೆ ಸಂಕಲನದಿಂದ ಸಂಕಲನಕ್ಕೆ ಬದಲಾಗುತ್ತವೆ. ಈ ದಿಕ್ಕಿನಲ್ಲಿ ನಾವು ಅವರ ಕಾವ್ಯದ ಎರಡು ಘಟ್ಟಗಳನ್ನು ಗುರುತಿಸಬಹುದು: ಇವರ ಮೊದಲ ಎರಡು ಸಂಕಲನಗಳ ಕವನಗಳು ಸ್ವ-ಕೇಂದ್ರಿತವಾಗಿದ್ದು, ‘ನಾನು ಮತ್ತು …’ ಎಂಬ ಚೌಕಟ್ಟಿನಲ್ಲಿ ವ್ಯಕ್ತಿಯ ಅವಸ್ಥಾಂತರಗಳು (‘ಯಕ್ಷಲೋಕ,’ ‘ಮುದ್ದುಮಕ್ಕಳಿಗೊಂದು ಕವಿತೆ,’ ಇತ್ಯಾದಿ), ಕವಿಗೆ ಪರಂಪರೆಯೊಡನೆ ಇರುವ ಸಂಬಂಧ (‘ಅಪ್ಪನ ಚಪ್ಪಲಿ,’ ‘ಅಜ್ಜೀ ಕವಿತೆ,’ ಉಡುಪಿ,’ ‘ಕೋಟಿತೀರ್ಥ,’ …), ಮತ್ತು ಕಾವ್ಯಸ್ವರೂಪ (‘ಭಾವಗೀತೆ,’ ‘ನನ್ನ ಕವಿತೆ,’ ‘ನೀನಾಗಲು,’ ‘ಅರ್ಥ,’ ‘ಅನುಭವ ಇಲ್ಲದ ಕವಿತೆ,’ …) ಇತ್ಯಾದಿ ಸಂಗತಿಗಳನ್ನು ವಿಶ್ಲೇಷಿಸುತ್ತವೆ.

ಜಯಂತರ ಕಾವ್ಯಜೀವನದ ಎರಡನೆಯ ಘಟ್ಟವನ್ನು ನಾವು ಶ್ರಾವಣ ಮಧ್ಯಾಹ್ನ ಎಂಬ ೧೯೮೭ರಲ್ಲಿ ಪ್ರಕಟವಾದ ಕವನ ಸಂಕಲನದಿಂದ ಗುರುತಿಸಬಹುದು. ಇದರಲ್ಲಿ ಮತ್ತು ಅನಂತರ ಬಂದಿರುವ ಉಳಿದೆರಡು ಸಂಕಲನಗಳಲ್ಲಿ (ಪ್ರಾಯಃ, ಮುಂಬಯಿವಾಸದ ಪರಿಣಾಮವಾಗಿ) ಕವಿಯ ಲಕ್ಷ್ಯ ಹಾಗೂ ಕಾಳಜಿಗಳು ಬದಲಾಗುತ್ತವೆ; ಬೇಂದ್ರೆಯವರ ಹರ್ಷೋಲ್ಲಾಸಗಳ ‘ಶ್ರಾವಣ’ ಇಲ್ಲಿಲ್ಲ; ಬದಲಿಗೆ ‘ನೋವುಂಟು ಶ್ರಾವಣಕೆ’ ಎಂಬ ಭಾವ ಸರಿಸುಮಾರು ಎಲ್ಲಾ ಕವನಗಳನ್ನೂ ಆವರಿಸಿ, ವಿಷಾದ ಸ್ಥಾಯಿಯಾಗುತ್ತವೆ. ಈ ಎರಡನೆಯ ಘಟ್ಟದ ಕವನಗಳಲ್ಲಿ ಕವಿಯ ಲಕ್ಷ್ಯ ವ್ಯಕ್ತಿಯಿಂದ ಸಮಾಜದತ್ತ ಹೊರಳಿ, ಆಧುನಿಕ ಮಹಾನಗರಗಳ ಕ್ರೌರ್ಯ, ವ್ಯಂಗ್ಯ, ಹಾಗೂ ಬದುಕಿನ ಏಕತಾನತೆ ಇವುಗಳನ್ನು ಆ ಕವನಗಳು ಗಾಢ ವಿಷಾದದ ದನಿಯಲ್ಲಿ ಚಿತ್ರಿಸುತ್ತವೆ.

ಹತಾಶ ಹಾಗೂ ಭೀಭತ್ಸ ಅನುಭವಗಳಿಗೆ ರೂಪು ಕೊಡುವ ಪ್ರಜ್ಞೆಯನ್ನು ನಾವು ‘ನಗರ ಪ್ರಜ್ಞೆ’ ಎಂದು ಗುರುತಿಸಬಹುದು. ಪ್ರಾಯಃ, ಜಯಂತರಲ್ಲಿ ನಾವು ಕಾಣುವ ನಗರ ಪ್ರಜ್ಞೆಗೆ ಎರಡು ಕಾರಣಗಳಿವೆ –ವೈಯಕ್ತಿಕ ಹಾಗೂ ಸಾಮಾಜಿಕ. ವೈಯಕ್ತಿಕ ನೆಲೆಯಲ್ಲಿ, ಎರಡನೆಯ ಘಟ್ಟದ ಈ ಕವನಗಳ ನಿರೂಪಕ ತನ್ನ ಸರಳ, ಗ್ರಾಮೀಣ ಮತ್ತು ಹಸಿರು ಪರಿಸರದಿಂದ ಬೇರು ಸಹಿತ ಕೀಳಲ್ಪಟ್ಟು ಮತ್ತೊಂದು ಅಪರಿಚಿತ ಹಾಗೂ ಕ್ರೂರ ಪರಿಸರದಲ್ಲಿ ನೆಡಲ್ಪಟ್ಟಿದ್ದಾನೆ. ಪರಿಣಾಮತಃ, ತನ್ನ ಮೂಲ ಪರಿಸರವನ್ನು ಮರೆಯಲಾಗದೆ, ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲಾಗದೆ ಹಾಗೂ ಅಲ್ಲಿಯ ಹೃದಯವೇಧಕ ನೋವಿಗೆ ಏನೂ ಪರಿಹಾರ ಒದಗಿಸಲಾರದೆ, ಈ ನಿರೂಪಕ ಹತಾಶೆ ಹಾಗೂ ‘ಪರಕೀಯ ಪ್ರಜ್ಞೆ’ಯಿಂದ ನರಳುತ್ತಾನೆ. ನೀಲಿಮಳೆ ಸಂಕಲನದ ‘ಊರು ನಾನು ಸಾವು’ ಎಂಬ ಕವನ, ಪ್ರಾತಿನಿಧಿಕವಾಗಿ, ಕವಿಯ ಈ ಪರಕೀಯ ಪ್ರಜ್ಞೆಯನ್ನು ಅತ್ಯಂತ ಯಶಸ್ವಿಯಾಗಿ ದಾಖಲಿಸುತ್ತದೆ: ಊರು ಬಿಟ್ಟು ಹೋದವನು ಮತ್ತೆ ತನ್ನ ಹುಟ್ಟುರಿಗೆ ಮರಳಿದಾಗ ಅವನಿಗೆ ತಬ್ಬಿಬ್ಬಾಗುತ್ತದೆ; “ಸ್ವಾಗತವಿಲ್ಲ, ಕಿರುನಗೆಯಿಲ್ಲ ಯಾಕೆ / ಬಂದೆ ಎಂಬ ಪ್ರಶ್ನೆಪತ್ರಕೆ ಮುಖಗಳಿಲ್ಲ.” ಊರಿನಲ್ಲಿ ಯಾರಾದರೂ ಸತ್ತಿರಬಹುದೆ? ಎಂದು ಯೋಚಿಸುತ್ತಾ, ಅಲ್ಲಲ್ಲಿ ಅಲೆದಾಡಿ ಕೊನೆಗೆ ಹಿಂತಿರುಗಲು ಬಸ್ ಹತ್ತಿದಾಗ ನಿರೂಪಕನಿಗೆ ಅರಿವಾಗುತ್ತದೆ, “ಇದೇ ನನ್ನ ಸಾವೋ ಏನೋ …”.

ಜಯಂತರ ಎಲ್ಲಾ ಕವನ ಸಂಕಲನಗಳಲ್ಲಿಯೂ ಪುನರಾವರ್ತನೆಯಾಗುವ ಒಂದು ಆಶಯವೆಂದರೆ ‘ಕಳೆದುಕೊಂಡ ಸ್ವರ್ಗ.’ ಈ ಆಶಯದ ಪ್ರಾತಿನಿಧಿಕ ಅಭಿವ್ಯಕ್ತಿಯಾಗಿ ‘ಶಾಯಿ’ ಕವನವನ್ನು ನೋಡಬಹುದು. ತಾನು ಬಾಲ್ಯದಲ್ಲಿ ಉಪಯೋಗಿಸುತ್ತಿದ್ದ ಇಂಕುಪೆನ್ನು ಈಗೆಲ್ಲಿ ಹೋಯಿತು ಎಂದು ಚಿಂತಿಸುವ ನಿರೂಪಕ ಆ ಹಳೆಯ ಇಂಕುಪೆನ್ನನ್ನು ನೆನಪಿಸಿಕೊಳ್ಳುತ್ತಾನೆ: “ಖಾಲಿಯಾಗಲು ಬಂತೋ ಕುಡುಗಿದರೆ ನೀಲಿ ಮಳೆ / ಕಾಗದದ ಮೇಲೆ ಹನಿಗಳ ಹಿಡಿದೆಳೆದರೆ / ನೂರು ಕಾಲಿನ ನೀಲಿ ಜೀವ ತೆವಳುವುದು ಬಳಿಗೆ(ನೀಲಿಮಳೆ). ಈ ಕವನದ ಮುಖ್ಯ ಪ್ರತಿಮೆಯಾದ ‘ನೀಲಿಮಳೆ,’ ಅತ್ಯಂತ ಸಹಜವಾಗಿ, ಒಂದು ನೆಲೆಯಲ್ಲಿ ಬಾಲ್ಯವನ್ನು, ಇನ್ನೊಂದು ನೆಲೆಯಲ್ಲಿ ಗ್ರಾಮೀಣ ಸಂಸ್ಕೃತಿಯನ್ನು, ಮತ್ತೊಂದು ನೆಲೆಯಲ್ಲಿ ಸೃಜನಶೀಲತೆಯನ್ನು ಸಂಕೇತಿಸುತ್ತದೆ.

‘ಕಳೆದುಕೊಂಡ ಸ್ವರ್ಗ’ ಆಶಯದ ಸಾಮಾಜಿಕ ಆಯಾಮವೆಂದರೆ ಅಸಮಾನ ಅವಕಾಶ-ಅಧಿಕಾರಗಳನ್ನಾಧರಿಸಿರುವ ನಗರೀಕೃತ ಆಧುನಿಕ ವ್ಯವಸ್ಥೆ. ಈ ಕ್ರೂರ ವ್ಯವಸ್ಥೆಯ ಭೀಕರ ಮುಖಗಳನ್ನು ನಾವು ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಮುಂತಾದ ಆಧುನಿಕ ನಗರಗಳಲ್ಲಿ ಕಾಣುತ್ತೇವೆ: ಬಾಲ್ಯವನ್ನೇ ಕಳೆದುಕೊಂಡ ಬಾಲಕಾರ್ಮಿಕರು (‘ದೀಪವಿಲ್ಲದ ಟ್ರಕ್ಕು,’), ಖಾಸಗೀ ಸ್ಥಳವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಸ್ನಾನ, ಸಂಭೋಗ, ಸಾವು ಇತ್ಯಾದಿಗಳನ್ನು ಅನುಭವಿಸುವ ನಿರ್ಗತಿಕರು (‘ಹಳಿಗಳ ಮೇಲೆ’), ರಾತ್ರಿ ಪಾಳಿ ಮುಗಿಸಿ ಬಸ್ಸಿಗೆ ಕಾಯುವ ದಾದಿಯರು (‘ಜಾಗರದ ಕೊನೆಗೆ’), ‘ಚರ್ಮದ ಗೊಂಬೆಗಳು, ಬೆವರಿನ ಬೊಂಬೆಗಳು’ — ಒಟ್ಟಿನಲ್ಲಿ, “ಕನಸಿನ ಸುರಂಗಗಳಲ್ಲೂ ಓಡಿಓಡಿ ದಣಿದವರು.” ಇಂತಹ ಕಾಂಕ್ರೀಟು ಕಾಡುಗಳ ಬದುಕನ್ನು ಮತ್ತು ಯಾವ ರೀತಿಯಿಂದಲೂ ವ್ಯಕ್ತಿಯೊಬ್ಬನು ಆ ವ್ಯವಸ್ಥೆಯನ್ನು ಬದಲಾಯಿಸಲಾಗದ ಅಸಹಾಯಕತೆಯನ್ನು ಜಯಂತರ ಈ ಘಟ್ಟದ ಕವನಗಳು ಹೃದಯಸ್ಪರ್ಶಿಯಾಗಿ ದಾಖಲಿಸುತ್ತವೆ.

ನಗರ ಪ್ರಜ್ಞೆಯ ಅನೇಕ ಯಶಸ್ವಿ ಕವಿಗಳು ಕನ್ನಡದಲ್ಲಿದ್ದಾರೆ — ನಿಸಾರ್ ಅಹಮದ್, ಅರವಿಂದ ನಾಡಕರ್ಣಿ, ರಾಮಚಂದ್ರ ಶರ್ಮ, ರಾಮಚಂದ್ರ ದೇವ, ಇತ್ಯಾದಿ. ಆದರೆ, ಜಯಂತರ ಹಾಗೆ, ಯಾವ ಹೇಳಿಕೆ ಹಾಗೂ ತಾತ್ವಿಕ ನೆಲೆಯ ಸಾಧಾರಣೀಕರಣವಿಲ್ಲದೆ, ಕುಶಲ ಹಾಗೂ ಸಹೃದಯ ಚಿತ್ರಕಾರನಂತೆ, ನಗರ ಜೀವನದ ಕ್ರೌರ್ಯ ಹಾಗೂ ಅಮಾನವೀಯತೆಯನ್ನು ಅಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿರುವವರು ಬಹಳ ಕಮ್ಮಿ.

ಜಯಂತರ ಕಾವ್ಯಕ್ಕೆ ಮತ್ತೊಂದು ಮುಖವೂ ಇದೆ –ಗೇಯತೆಯ ಮುಖ. ಕಳೆದ ಹತ್ತು ವರ್ಷಗಳಲ್ಲಿ ಜಯಂತ್ ಸರಿ ಸುಮಾರು ನೂರು ಚಿತ್ರಗೀತೆಗಳನ್ನು ಹಾಗೂ ರಂಗಗೀತೆಗಳನ್ನು ರಚಿಸಿದ್ದಾರೆ; ಮತ್ತು ಹೆಚ್ಚಿನವು ಅಪಾರ ಜನಪ್ರಿಯತೆಯನ್ನು ಗಳಿಸಿವೆ. ಪೂರ್ವನಿರ್ಧಾರಿತ ಸನ್ನಿವೇಷ ಹಾಗೂ ಧಾಟಿಗಳಿಗೆ ಶಾಬ್ದಿಕ ರೂಪ ಕೊಡುವ ಚಿತ್ರಗೀತೆಗಳನ್ನು ಕಾವ್ಯವೆಂದು ಗುರುತಿಸಬೇಕೆ ಎನ್ನುವುದು ಚರ್ಚಾಸ್ಪದ ವಿಷಯ; ಆದರೆ, ಆ ಪ್ರಕಾರದಲ್ಲೂ ಜಯಂತ್ ತಮ್ಮ ಸ್ವೋಪಜ್ಞತೆಯನ್ನು ದಾಖಲಿಸಿದ್ದಾರೆ ಎಂಬುದು ನಿರ್ವಿವಾದ.

) ಸಣ್ಣ ಕಥೆಗಳು: ಇದುವರೆಗೆ ಜಯಂತ್ ಏಳು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ: ತೆರೆದಷ್ಟೇ ಬಾಗಿಲು (೧೯೮೨), ಗಾಳ (೧೯೮೨), ದಗಡೂ ಪರಬನ ಅಶ್ವಮೇಧ (೧೯೮೯), ಅಮೃತಬಳ್ಳಿ ಕಷಾಯ (೧೯೯೬), ಬಣ್ಣದ ಕಾಲು (೧೯೯೯), ಜಯಂತ್ ಕಾಯ್ಕಿಣಿ ಕಥೆಗಳು (೨೦೦೩), ಮತ್ತು ತೂಫಾನ್ ಮೇಲ್ (೨೦೦೫). ಒಟ್ಟಾರೆಯಾಗಿ ಹೇಳಬಹುದಾದರೆ, ಕವನಗಳನ್ನು ಕಟ್ಟುವಂತೆಯೇ ಜಯಂತ್ ಖಚಿತ ದೈನಿಕ ವಿವರಗಳ ಮೂಲಕ ತಮ್ಮ ಕಥೆಗಳನ್ನೂ ಕಟ್ಟುತ್ತಾರೆ; ಆದರೆ, ಒಂದು ವ್ಯತ್ಯಾಸವಿದೆ. ಇವರ ಕವನಗಳು ನೇರವಾಗಿ ವಾಸ್ತವ ಪ್ರಪಂಚಕ್ಕೆ ಕನ್ನಡಿ ಹಿಡಿದರೆ, ಕಥೆಗಳಲ್ಲಿ ಬದುಕಿನ ‘ಅಗಣಿತ ದಿವ್ಯ ವ್ಯಂಗ್ಯಗಳ ಕ್ಷಣ’ಗಳನ್ನು ದಾಖಲಿಸಲು, ಅವರೇ ಹೇಳುವಂತೆ, “ ತುಸು ಪಕ್ಕ ಸರಿದು ಅಥವಾ ತುಸು ವಾರೆಯಾಗಿ ನೋಡುವುದರಿಂದಲೇ ಇಂಥ ಕ್ಷಣಗಳ ಹುಲುತನ(trivia)ವನ್ನು ಮೀರಿ ನಾವು ಆ ಕ್ಷಣದ ಅಸಂಗತತೆಯನ್ನು ಮನಗಾಣಬಲ್ಲೆವು. ಅಥವಾ ಅಸಂಗತತೆಯನ್ನು ಮನಗಾಣುವುದರ ಮೂಲಕವೇ ಆ ಕ್ಷಣವನ್ನು ಮೀರಬಲ್ಲೆವು” (ಶಬ್ದತೀರ, ಪು. ೭೦).

ಸ್ಥೂಲವಾಗಿ, ಜಯಂತರ ಕಥೆಗಳಲ್ಲಿಯೂ ನಾವು ಎರಡು ಘಟ್ಟಗಳನ್ನು ಗುರುತಿಸಬಹುದು. ೧೯೮೯ರವರೆಗೆ ಪ್ರಕಟವಾದ ಮೊದಲ ಮೂರು ಸಂಕಲನಗಳ ಕಥೆಗಳು (ಮೂರನೆಯ ಸಂಕಲನದಲ್ಲಿ ಬರುವ “ದಗಡೂ ಪರಬನ ಅಶ್ವಮೇಧ”ವನ್ನು ಹೊರತುಪಡಿಸಿ; ಈ ಕಥೆಯೇ ಮೇಲೆ ಹೇಳಿದ ಎರಡು ಘಟ್ಟಗಳನ್ನು ಬೇರ್ಪಡಿಸುತ್ತದೆ) ಹಾಗೂ ಅಲ್ಲಿಂದಾಚೆಗೆ ಬಂದ ಎರಡು ಸಂಕಲನಗಳ ಕಥೆಗಳು (ಒಂದು ಸಂಕಲನ ‘ಆಯ್ದ ಕಥೆಗಳು’). ಮೊದಲ ಘಟ್ಟದ ಕಥೆಗಳನ್ನು ಸ್ಥೂಲವಾಗಿ ನಾವು ‘ನವ್ಯ ಕಥೆಗಳು’ ಎಂದು ಗುರುತಿಸಬಹುದು. ಎಂದರೆ, ಇವೆಲ್ಲಾ ಕಥೆಗಳು ಕೇಂದ್ರ ಪಾತ್ರದ ಬದುಕಿನ ನಿರ್ಣಾಯಕ ಕ್ಷಣಗಳ ಸುತ್ತಾ ಕಟ್ಟಲ್ಪಟ್ಟಿವೆ. ಕಥೆಯೊಂದು ಮುಖ್ಯ ಪಾತ್ರದ ಬದುಕಿನ ‘ಕ್ಷುಲ್ಲಕ’ ಹಾಗೂ ‘ನೀರಸ’ ವಿವರಗಳಿಂದ ಪ್ರಾರಂಭವಾಗಿ, ಬದುಕಿನಲ್ಲಿ ಅರ್ಥಕ್ಕಾಗಿ ಹಾಗೂ ಸಾಂಗತ್ಯಕ್ಕಾಗಿ ಆ ಪಾತ್ರವು ನಡೆಸುವ ತಡಕಾಟವನ್ನು ಚಿತ್ರಿಸುತ್ತದೆ; ನಿರ್ಣಾಯಕ ಕ್ಷಣದಲ್ಲಿ (ಅಸ್ತಿತ್ವವಾದದ ಹಿನ್ನೆಲೆಯಲ್ಲಿ) ಆ ಪಾತ್ರವು ಕೈಗೊಳ್ಳುವ ನಿರ್ಧಾರದೊಂದಿಗೆ ಆ ಕಥೆ ಕೊನೆಯಾಗುತ್ತದೆ: ಇಳಿ ವಯಸ್ಸಿನಲ್ಲಿ, ತನ್ನ ಸಾಕು ಮಗಳೊಡನೆ ಸಮುದ್ರದೆದುರು ನಿಂತು, ತನ್ನ ಬಾಲ್ಯದ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಮತ್ತು ಆ ಮೂಲಕ ತನ್ನ ಒಂಟಿತನವನ್ನು ಮೀರಲು ನಿರ್ಧರಿಸುವ ಸೀತಮ್ಮ (‘ಸಮುದ್ರ’); ಬದುಕು ಎಷ್ಟೇ ಕ್ಷುಲ್ಲಕವಾಗಿದ್ದರೂ ಅದರಿಂದ ಓಡಿಹೋಗುವುದರಲ್ಲಿ ಅರ್ಥವಿಲ್ಲ ಎಂಬ ಸತ್ಯವನ್ನು ಮನಗಂಡು, ತನ್ನ ಊರಿಗೆ ಹಾಗೂ ಕುಟುಂಬಕ್ಕೆ ಮರಳಲು ನಿರ್ಧರಿಸುವ ಉನ್ನಿ ಕೃಷ್ಣನ್ (‘ಉನ್ನಿಕೃಷ್ಣನ್ ಬಂದು ಹೋದ’); ತನ್ನ ಸುತ್ತಮುತ್ತಲಿನ ಜನರ ಸ್ವಾರ್ಥ-ಅಸೂಯೆಗಳೂ ‘ನಿಜಗಳೇ’ ಮತ್ತು ಆ ನಿಜಗಳನ್ನು ತಾನು ಒಪ್ಪಿಕೊಂಡೇ ಬದುಕಬೇಕು ಎಂದು ನಿರ್ಧರಿಸುವ ನಿರೂಪಕ (‘ಕಣ್ಣಿಗೊಂದು ಕ್ಷಿತಿಜ’); ಇತ್ಯಾದಿ. ಈ ಘಟ್ಟದ ಕಥೆಗಳೆಲ್ಲವೂ ತಮ್ಮ ನೈಜ ಹಾಗೂ ಖಚಿತ ವಿವರಗಳಿಂದ ಮತ್ತು ಶಕ್ತ ನಿರೂಪಣೆಯಿಂದ ಓದುಗರನ್ನು ಗಾಢವಾಗಿ ತಟ್ಟುತ್ತವೆ. ಆದರೆ, ಇವುಗಳ ಮಿತಿಯೆಂದರೆ, ‘ನಿರೀಕ್ಷಣೀಯತೆ’: ಒಂದೆರಡು ಕಥೆಗಳನ್ನು ಓದಿದನಂತರ ಅವುಗಳ ಗತಿ, ಮುಕ್ತಾಯ, ಮತ್ತು ಪಾತ್ರಗಳ ವರ್ತನೆ ಇವೆಲ್ಲವೂ ನಮ್ಮ ನಿರೀಕ್ಷೆಗಳಿಗನುಗುಣವಾಗಿಯೇ ಇರುತ್ತವೆ.

ಮೂರನೆಯ ಕಥಾ ಸಂಕಲನದಲ್ಲಿ ಬರುವ ‘ದಗಡೂ ಪರಬನ ಅಶ್ವಮೇಧ’ ಎಂಬ ಕಥೆ ಮೇಲೆ ಹೇಳಿದ ನವ್ಯ ಕಥೆಗಳ ಮಾದರಿಯನ್ನು ಮುರಿಯುತ್ತದೆ. ಮದುವೆಯ ದಿಬ್ಬಣದಲ್ಲಿ ಮದುಮಗನ ಕುದುರೆ ಬೀದಿಯಲ್ಲಿ ಅಕಸ್ಮಾತ್ತಾಗಿ ಆಗುವ ಶಬ್ದಕ್ಕೆ ಹೆದರಿ ಎತ್ತಲೋ ಓಡಿ ಹೊಗುತ್ತದೆ; ಆ ಕಾರಣದಿಂದ ಮದುಮಗನಾದ ದಗಡೂ ತಾನು ಮದುವೆಯಾಗಬೇಕಿದ್ದ ತರುಣಿಯನ್ನು ಬಿಟ್ಟು ಬೇರೊಬ್ಬಳೊಡನೆ ಮದುವೆಯಾಗಬೇಕಾಗುತ್ತದೆ. ಈ ಕಥೆಯು ಧ್ವನಿಸುವ ವೈಚಾರಿಕತೆಯೆಂದರೆ ವ್ಯಕ್ತಿಗೆ ಆಯ್ಕೆಯ ಸ್ವಾತಂತ್ರ್ಯವೂ ಇಲ್ಲ ಮತ್ತು ಪರಿಣಾಮದ ಜವಾಬ್ದಾರಿಯೂ ಇಲ್ಲ. ಅರ್ಥಾತ್, ‘ತನ್ನ ನಿರ್ಧಾರಗಳಿಂದ ವ್ಯಕ್ತಿಯೊಬ್ಬನು ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳಬಹುದು’ ಎಂಬ ಅಸ್ತಿತ್ವವಾದದ ಮುಖ್ಯ ಗ್ರಹಿಕೆಯನ್ನೇ ಈ ಕಥೆ ತಿರಸ್ಕರಿಸುತ್ತದೆ. ‘ಬದುಕಿಗೆ ತನ್ನದೇ ಆದ ಗತಿಯಿದೆ ಮತ್ತು ಈ ಗತಿ ಕಾರ್ಯ-ಕಾರಣಗಳ ತರ್ಕವನ್ನು ಮೀರಿದುದು’ ಎಂಬಂತಹ ಲೋಕದೃಷ್ಟಿಯನ್ನು ಈ ಕಥೆಯನಂತರ ಬಂದ ಎರಡು ಸಂಕಲನಗಳ ಹೆಚ್ಚಿನ ಕಥೆಗಳು ದಾಖಲಿಸುತ್ತವೆ.

ಬದಲಾದ ವೈಚಾರಿಕತೆ ಕಥೆಗಳ ಶಿಲ್ಪವನ್ನು ಹಾಗೂ ನಿರೂಪಣಾ ಶೈಲಿಯನ್ನೂ ಬದಲಾಯಿಸುತ್ತದೆ. ಈ ಘಟ್ಟದ ಹೆಚ್ಚಿನ ಕಥೆಗಳಲ್ಲಿ ಒಂದು ಕೇಂದ್ರ ಪಾತ್ರವಿಲ್ಲದೆ, ಒಂದಕ್ಕಿಂತ ಹೆಚ್ಚು ಪಾತ್ರಗಳು ಸಮಾನವಾಗಿ ಬೆಳೆಯುತ್ತವೆ; ಮತ್ತು ಕಥೆಯ ಗತಿ ತೀವ್ರವಾಗಿ ನಿರ್ಧಾರಕ ಕ್ಷಣದತ್ತ ಓಡುವುದರ ಬದಲಿಗೆ ನಾವು ಒಂದೇ ಸನ್ನಿವೇಷದ ವಿವಿಧ ಮುಖಗಳನ್ನು ನೋಡುತ್ತೇವೆ ಮತ್ತು ಕಥೆಯೂ ಖಚಿತ ಮುಕ್ತಾಯವಿಲ್ಲದೆ ಕೊನೆಯಾಗುತ್ತದೆ. ಈ ಕಥೆಗಳು ಧ್ವನಿಸುವ ವೈಚಾರಿಕತೆಯೇನೆಂದರೆ ‘ಅಸಂಗತ ಬದುಕಿನಲ್ಲಿ ವ್ಯಕ್ತಿಗೆ ಆಯ್ಕೆಗಳಿಲ್ಲ, ಆಯ್ಕೆ ಮಾಡುವ ಸ್ವಾತಂತ್ರ್ಯವೂ ಇಲ್ಲ; ವ್ಯಕ್ತಿಗೆ ಸಾಧ್ಯವಿರುವುದು ತನ್ನ ‘ಸರಳುಗಳಿಂದ ಹೊರಬಂದು,’ ತನ್ನ ಸೀಮಿತ ನೆಲೆಯಲ್ಲಿ ಇತರರಿಗೆ ನೆರವಾಗುವುದು. ಉದಾಹರಣೆಗೆ, ಜಯಂತರ ಅನೇಕ ಶ್ರೇಷ್ಠ ಕಥೆಗಳ ಸಂಕಲನವಾದ ಅಮೃತಬಳ್ಳಿಯ ಕಷಾಯದ ಕಥೆಗಳನ್ನು ನೋಡಬಹುದು: ಟ್ರಪೀಜ಼್ ಕಲಾವಿದೆ ಡಂಪಿ ತನಗೆ ಹುಟ್ಟುವ ಮಗು ಸರ್ಕಸ್ ಕಂಪನಿಗೆ ಸೇರಬಾರದೆಂದು, ಅತಿ ಕಷ್ಟದಿಂದ ಸರ್ಕಸ್ ಡೇರೆಯ ಹೊರಗೆ ಹೋಗಿ ಮಗುವಿಗೆ ಜನ್ಮ ನೀಡುತ್ತಾಳೆ; ಆದರೆ ಹುಟ್ಟಿದ ಮಗುವಿಗೆ ನಾಲ್ಕು ಕೈಗಳಿದ್ದು ‘ಸರ್ಕಸ್ ಕಂಪನಿಗೆ ಹೇಳಿ ಮಾಡಿಸಿದ ಮಗು’ ಎಂದು ಎಲ್ಲರಿಗೂ ಅದು ಭಾಸವಾಗುತ್ತದೆ; ಆದರೂ, ವೈದ್ಯರು ಅದರ ಕೈಕಾಲುಗಳನ್ನು ಸರಿಪಡಿಸಿ ಅದೂ ಇತರ ಮನುಷ್ಯರಂತೆಯೇ ಬೆಳೆಯಬಹುದು ಎಂಬ ನಂಬಿಕೆಯಿಂದ ಡಂಪಿ ಮಗುವನ್ನಪ್ಪಿ ಮಲಗುತ್ತಾಳೆ (‘ಡೈಮಂಡ್ ಸರ್ಕಸ್ಸಿನಲ್ಲಿ ಒಂದು ಹೆರಿಗೆ’); ಇದ್ದಕ್ಕಿದ್ದಂತೆ ಪ್ರಾರಂಭವಾಗಿ ಅಪಾರ ಸಾವು-ನೋವುಗಳಿಗೆ ಕಾರಣವಾಗುವ ಕೋಮು ಗಲಭೆಯನ್ನು ವಯಸ್ಸಾದ ಮಾಯಿಗೆ ಅರ್ಥೈಸುವುದಾಗಲಿ ಅದನ್ನು ನಿಯಂತ್ರಿಸುವುದಾಗಲಿ ಸಾಧ್ಯವಿಲ್ಲ; ಅವಳಿಗೆ ಸಾಧ್ಯವಿರುವುದೆಂದರೆ ಆಸ್ಪತ್ರೆಗೆ ಸೇರಿದವರ ಶುಶ್ರೂಷೆ ಮಾಡುವುದು ಮತ್ತು “ಕೋಮು ವಿಳಾಸ ತೂಕ ವಯಸ್ಸು ಹೆಸರು ಅಡ್ಡಹೆಸರು” ಏನೂ ಇಲ್ಲದ ೨೧೩೨ ಎಂಬ ಸಂಖ್ಯೆಯ ಶಿಶುವನ್ನು ಪಾಲಿಸುವುದು; ಹಾಗೆಯೇ, ಮಾಯಿಯ ಮಗ ತನ್ನ ತಂದೆಯ ಭಾವಚಿತ್ರವನ್ನೇ ಅನಾಥ ತರುಣನೊಬ್ಬನಿಗೆ ಕೊಟ್ಟು, ಆ ಮೂಲಕ ಅವನ ವಿವಾಹಕ್ಕೆ ನೆರವಾಗುವುದು (‘ಅಮೃತಬಳ್ಳಿಯ ಕಷಾಯ’); ಇತ್ಯಾದಿ. “ಎಲ್ಲಾ ಜೀವಿಗಳ ಒಳಗೂ ತನ್ನ ಆತ್ಮದ ಚಂದ್ರನ ಚೂರು ಹಂಚಿಹೋಗಿದೆ; ಒಂದು ಚೂರಿಗೆ ಇನ್ನೊಂದು ಚೂರು ತುಸು ತಗಲಿದರೂ ಸಾಕು” (‘ಚಂದಿರನೇತಕೆ ಓಡುವನಮ್ಮ’) ಎಂಬ ಪ್ರಬುದ್ಧ ಹಾಗೂ ಮಾನವೀಯ ನಿಲುವು ಇಂತಹ ಕಥೆಗಳನ್ನು ರೂಪಿಸಿದೆ.

ಬದುಕಿನ ಅಸಂಗತತೆಯನ್ನು ಹಾಗೂ ಬದುಕಿನ ಅಪಾರ ವ್ಯಂಗ್ಯಗಳನ್ನು ಮುಂದಿನ ತೂಫಾನ್ ಮೇಲ್ ಸಂಕಲನದ ಕಥೆಗಳೂ ಯಶಸ್ವಿಯಾಗಿ ದರ್ಶಿಸುತ್ತವೆ (‘ನೋ ಪ್ರೆಸೆಂಟ್ಸ್ ಪ್ಲೀಜ಼್,’ ‘ಕಣ್ಮರೆಯ ಕಾಡು,’ ಕನ್ನಡಿ ಇಲ್ಲದ ಊರಿನಲ್ಲಿ,’ ಇತ್ಯಾದಿ). ಈ ಸಂಕಲನದ ಅತ್ಯುತ್ತಮ ಕಥೆಯೆಂದರೆ ಟಿಕ್ ಟಿಕ್ ಗೆಳೆಯ.’ ಮುಂಬಯಿಯ ನಾನಾವಟಿ ಆಸ್ಪತ್ರೆಯ ಒಂದು ಭಾಗದಲ್ಲಿ ನಡೆಯುತ್ತಿರುವ ಕ್ವಿಜ಼್ ಸ್ಪರ್ಧೆಯಲ್ಲಿ ಭಾಗವಹಿಸಲು ಮಧುಬನಿ ಎಂಬ ಕಿಶೋರಿ ಮತ್ತವಳ ತಂದೆ ಅಲ್ಲಿಗೆ ಬರುತ್ತಾರೆ. ಸ್ಪರ್ಧೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರಿಸುವ ಮಧುಬನಿಗೆ ‘ಭೋಪಾಲ್ ಗ್ಯಾಸ್ ದುರಂತದ ದಿನ ಯಾವುದು?’ ಎಂಬ ಪ್ರಶ್ನೆಗೆ ಉತ್ತರಿಸಲಾಗುವುದಿಲ್ಲ; ಏಕೆಂದರೆ, ಆ ದುರಂತದೊಡನೆಯೇ ಅವಳಿಗೆ ಶವಗಳಾಗಿ ಮನೆಗೆ ಹಿಂದಿರುಗಿದ ಜ್ಯೋತ್ಸ್ನಾ ಭಾಭಿ ಮತ್ತು ಅವಳ ಮಗಳು ಸೇಜಲ್ ಎಲ್ಲರೂ ನೆನಪಿಗೆ ಬರುತ್ತಾರೆ. ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಒಂದಾಗಿರುವ ಈ ಕಥೆ ಒಂದು ನೆಲೆಯಲ್ಲಿ ಸಮಾಜದ ಪ್ರತಿಷ್ಠಿತ ವರ್ಗದವರ ಹೃದಯಹೀನತೆಯನ್ನು ಕುರಿತ ವಿಡಂಬನೆಯಾಗುತ್ತದೆ (ಭೋಪಾಲ್ ಗ್ಯಾಸ್ ದುರಂತ ಕ್ವಿಜ಼್ ಮಾಸ್ಟರನಿಗೆ ಒಂದು ಕ್ವೈಜ಼್ ಪ್ರಶ್ನೆ, ಅಷ್ಟೆ; ಮಧುಬನಿಗೆ, ತನ್ನೆಲ್ಲಾ ಗೆಳತಿಯರು ಶವಗಳಾದ ದಿನ); ಮತ್ತೊಂದು ನೆಲೆಯಲ್ಲಿ, ಕಥೆ ‘ಕಾಲ’ದ ಅಗಣಿತ ಸಾಧ್ಯತೆಗಳ ದಾಖಲೆಯಾಗುತ್ತದೆ: ಬಾಲ್ಯದಲ್ಲಿ ತನಗಾದ ಅವಮಾನವನ್ನು ಇನ್ನೂ ಮರೆಯಲಾಗದ ಮಧುಬನಿಯ ತಂದೆ, ಆಲ್‌ಜ಼ೈಮರ್ ರೋಗದ ಕಾರಣ ಏನನ್ನೂ ನೆನಪಿಟ್ಟುಕೊಳ್ಳಲಾಗದ ಬುದ್ಧೂ ರಾಮ್, ಕಾಲವೆಂದರೆ ನಿರ್ಣಾಯಕ ಕ್ಷಣಗಳಾಗಿರುವ ಮಧುಬನಿ, ‘ಯುವರ್ ಟೈಮ್ ಸ್ಟಾರ್ಟ್ಸ್ ನೌ’ ಎಂದು ಠೀವಿಯಿಂದ ಹೇಳುವ ಕ್ವಿಜ಼್ ಮಾಸ್ಟರ್ –ಇವರೆಲ್ಲರೂ ಮಾನವ-ಕಾಲ ಸಂಬಂಧದ ಅನೇಕಾನೇಕ ವಿನ್ಯಾಸಗಳು. ಶಿಲಾಪ್ರತಿಮೆಗೆ ಹಾಕಿರುವ ನಿಜವಾದ ಕನ್ನಡಕ, ಕರೀನಾಗೆ ಕೊಡಲು ಬುದ್ಧೂ ರಾಮ್ ತಯಾರು ಮಾಡಿರುವ ಕಾಗದದ ದೋಣಿ –ಇವೆಲ್ಲವೂ ಕೃತಿಯಲ್ಲಿ ಧ್ವನಿ ತರಂಗಗಳನ್ನೇ ಸೃಜಿಸುವ ಅದ್ಭುತ ಸಂಕೇತಗಳಾಗುತ್ತವೆ. ಇಂದಿನ ಶ್ರೇಷ್ಠ ಕತೆಗಾರರಲ್ಲಿ ಜಯಂತ್ ಒಬ್ಬರು ಎಂಬುದನ್ನು ಇಲ್ಲಿಯವರೆಗೆ ಬಂದಿರುವ ಅವರ ಐದು ಸಂಕಲನಗಳು ನಿರ್ವಿವಾದವಾಗಿ ದರ್ಶಿಸುತ್ತವೆ.

ಜಯಂತರ ಕಾವ್ಯ ಮತ್ತು ಕಥೆಗಳನ್ನು ಒಟ್ಟಿಗೇ ನೋಡಿದಾಗ ಒಂದು ಕುತೂಹಲದ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ. ಎರಡೂ ಪ್ರಕಾರಗಳಲ್ಲಿ ಸಂಪೂರ್ಣವಾಗಿ ವರ್ತಮಾನದ ವಾಸ್ತವಕ್ಕೆ ಕಟ್ಟು ಬಿದ್ದಿದ್ದರೂ, ಒಟ್ಟಾರೆಯಾಗಿ ಇವರ ಕಾವ್ಯದ ಲೋಕದೃಷ್ಟಿ ನೋವು, ಹತಾಶೆ ಹಾಗೂ ಗಾಢ ವಿಷಾದದಿಂದ ಕೂಡಿದ್ದರೆ, ಇವರ ಕಥೆಗಳು ಅದೇ ನೋವು-ವಿಷಾದಗಳನ್ನು ದಾಖಲಿಸುತ್ತಲೇ, ಎಲ್ಲೋ ಒಂದುಕಡೆ ಮಾನವ ಚೇತನ ತನ್ನ ಸುತ್ತಲೂ ಇರುವ ವ್ಯವಸ್ಥೆಯನ್ನು ಮೀರುವ ಪ್ರಯತ್ನವನ್ನು ಮಾಡುವುದನ್ನೂ ಹಾಗೂ ಆ ಪ್ರಯತ್ನವೇ ಅದಕ್ಕೆ ಒಂದು ಬಗೆಯ ಘನತೆಯನ್ನು ತಂದುಕೊಡುವುದನ್ನೂ ದಾಖಲಿಸುತ್ತವೆ. ಈ ಭಿನ್ನತೆಗೆ ಭಿನ್ನ ಪ್ರಕಾರಗಳ ಸಾಧ್ಯತೆಗಳು ಕಾರಣವೇ ಎಂಬುದು ಚರ್ಚಾಸ್ಪದ ಸಂಗತಿ.

) ಗದ್ಯ: ಇಲ್ಲಿಯವರೆಗೆ ಜಯಂತರ ಎರಡು ಪ್ರಬಂಧ ಸಂಕಲನಗಳು ಹೊರಬಂದಿವೆ: ಬೊಗಸೆಯಲ್ಲಿ ಮಳೆ (೨೦೦೧) ಮತ್ತು ಶಬ್ದ ತೀರ (೨೦೦೬). ಬೊಗಸೆಯಲ್ಲಿ ಮಳೆ ಜಯಂತರು ಹಾಯ್ ಬೆಂಗಳೂರು ವಾರಪತ್ರಿಕೆಗೆ ಪ್ರತಿವಾರವೂ ಬರೆದ ೯೧ ಅಂಕಣ ಬರಹಗಳ ಸಂಕಲನ. ಈ ಬರಹಗಳು ಸಮಕಾಲೀನ ಸಮಾಜದ ಅನೇಕ ಗಂಭೀರ-ಕ್ಷುಲ್ಲಕ ಸಂಗತಿಗಳಿಗೆ ಸ್ಪಂದಿಸುತ್ತವೆ. ಶಬ್ದ ತೀರ ಅಂಕಣ ಬರಹಗಳಿಗಿಂತ ಸ್ವಲ್ಪ ದೀರ್ಘವಾದ ೫೮ ಲೇಖನಗಳ ಸಂಕಲನ. ಇದರಲ್ಲಿರುವ ಲೇಖನಗಳ ಹರಹು ‘ಧೂಳು,’ ‘ಹೆದ್ದಾರಿಯ ಹೊರಳಲ್ಲಿ’ ಮುಂತಾದ ಲಲಿತ ಪ್ರಬಂಧಗಳಿದ ಹಿಡಿದು ಚಲನ ಚಿತ್ರಗಳ ವ್ಯಾಖ್ಯಾನ ಹಾಗೂ ಸಾಹಿತ್ಯ ವಿಮರ್ಶೆ ಎಂದು ಕರೆಯಬಹುದಾದ ಲೇಖನಗಳನ್ನೂ ಒಳಗೊಳ್ಳುವಷ್ಟು ವಿಸ್ತಾರವಾಗಿದೆ. ಜಯಂತರ ಗದ್ಯ ಇಬ್ಬರು ಸಂವೇದನಾಶೀಲ ಗೆಳೆಯರ ನಡುವಿನ ದಿನ ನಿತ್ಯದ ಮಾತುಕತೆಯಂತೆ ನೇರ, ಸರಳ, ಹಾಗೂ ಭಾವಪೂರ್ಣ. ಈ ಬರಹಗಳು ನಾವು ಸಾಮಾನ್ಯವೆಂದು ಭಾವಿಸುವ ಘಟನೆ-ವಿಚಾರಗಳ ಅಸಾಮಾನ್ಯತೆಯನ್ನೂ ಮತ್ತು ನಾವು ಕ್ಲಿಷ್ಟ ಹಾಗೂ ಅಸಾಮಾನ್ಯ ಎಂದು ಭಾವಿಸುವ ಸಂಗತಿಗಳ ಆಳದಲ್ಲಿರುವ ಸಾಮಾನ್ಯ ಅಂಶಗಳನ್ನೂ ಗುರುತಿಸಿ, ನಾವೂ ಅವುಗಳನ್ನು ಗುರುತಿಸುವಂತೆ ಪ್ರಚೋದಿಸುತ್ತವೆ.

) ನಾಟಕಗಳು: ಇಲ್ಲಿಯವರೆಗೆ ಜಯಂತ್ ಮೂರು ನಾಟಕಗಳನ್ನು ಬರೆದಿದ್ದಾರೆ. ಮೂರೂ ಅನುವಾದಗಳು: ಸೇವಂತಿ ಪ್ರಸಂಗ (೧೯೯೬) ಬರ್ನಾರ್ಡ್ ಶಾ ರಚಿಸಿದ (ಮತ್ತು ಅನಂತರ My Fair Lady ಎಂಬ ಹೆಸರಿನಲ್ಲಿ ಪ್ರಸಿದ್ಧ ಚಲನಚಿತ್ರವೂ ಆದ) Pygmallion ನಾಟಕದ ಯಶಸ್ವಿ ಅನುವಾದ. ಜತೆಗಿರುವನು ಚಂದಿರ (೨೦೦೧) ಎಂಬ ನಾಟಕ ಜೋಸೆಫ್ ಸ್ಟೀನ್ ರಚಿಸಿದ Fiddler On The Roof ಎಂಬ ಸಂಗೀತ ನಾಟಕದ ಅನುವಾದ. ಜಾವೇದ್ ಸಿದ್ದಿಕಿ ಅವರ ತುಮ್ಹಾರೀ ಅಮೃತಾ ಎಂಬ ಹಿಂದಿ ನಾಟಕದ ಅನುವಾದ ಇತಿ ನಿನ್ನ ಅಮೃತಾ (೨೦೦೩). ಜಯಂತರು ದುಡಿಸಿಕೊಳ್ಳುವ ಕನ್ನಡದ ಭಿನ್ನ ಭಾಷಾ ಸ್ತರಗಳು, ಅವರ ಸೃಜನಾತ್ಮಕ ಅನುವಾದ, ಮತ್ತು ಮುಖ್ಯವಾಗಿ ಅವುಗಳಿಗೆ ಜಯಂತರೇ ರಚಿಸಿರುವ ರಂಗಗೀತೆಗಳು — ಇವೆಲ್ಲಾ ಕಾರಣಗಳಿಂದ ಜಯಂತರ ನಾಟಕಗಳು ಮತ್ತೆ ಮತ್ತೆ ರಂಗದ ಮೇಲೆ ಪ್ರದರ್ಶನಗೊಂಡು ಅಪಾರ ಜನಪ್ರಿಯತೆಯನ್ನು ಗಳಿಸಿವೆ.

) ಕಿರು ತೆರೆ ಕಾರ್ಯಕ್ರಮಗಳು: ಕಿರುತೆರೆಯಲ್ಲಿ ಸಂದರ್ಶನಗಳು ಪ್ರತಿ ದಿನವೂ ಅಥವಾ ವಾರಕ್ಕೊಮ್ಮೆ ಎಲ್ಲಾ ವಾಹಿನಿಗಳಲ್ಲೂ ಕಂಡುಬರುವ ಒಂದು ಸಾಮಾನ್ಯ ಕಾರ್ಯಕ್ರಮ. ಆದರೆ, ಈ-ಟಿವಿ ವಾಹಿನಿಗಾಗಿ, ಜಯಂತರು ತಾವೇ ರೂಪಿಸಿ, ನಡೆಸಿಕೊಟ್ಟ ‘ನಮಸ್ಕಾರ’ ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ವಹಣೆ ತುಂಬಾ ಸ್ವೋಪಜ್ಞವಾದವುಗಳು. ಆಧುನಿಕ ಕನ್ನಡದ ಶ್ರೇಷ್ಠ ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತ, ಬೇಂದ್ರೆ, ಮತ್ತು ಕನ್ನಡ ಚಲನಚಿತ್ರಗಳ ಅಭೂತಪೂರ್ವ ನಾಯಕ ನಟ-ಗಾಯಕ ರಾಜ್‌ಕುಮಾರ್ — ಈ ನಾಲ್ಕು ಮಹನೀಯರ ಬಗ್ಗೆ ಒಬ್ಬೊಬ್ಬರ ಬಗ್ಗೆಯೂ ೩೦ ಕಂತುಗಳಲ್ಲಿ, ಅವರ ಬದುಕು-ಸಾಧನೆಗಳನ್ನು ಧಾರಾವಾಹಿಯಾಗಿ ಕಟ್ಟಿಕೊಟ್ಟುದು ಒಂದು ಮಹಾ ಸಾಧನೆಯೇ ಸರಿ. ಇಷ್ಟೇ ಅಲ್ಲದೆ, ಈ ಮಹನೀಯರ ಬದುಕಿನ ಬಗ್ಗೆ ವಿದ್ವಾಂಸರಿಗಿಂತ ಹೆಚ್ಚಾಗಿ, ಅವರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು, ಅವರ ನಿಕಟ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಗಳು, ಕಾರ್ಯದರ್ಶಿ, ಡ್ರೈವರ್, ಮಾಲಿ, ಇತ್ಯಾದಿ ಶ್ರೀ ಸಾಮಾನ್ಯರು –ಇವರುಗಳ ಸಂದರ್ಶನಗಳ ಮೂಲಕವೇ ಕುವೆಂಪು ಮುಂತಾದವರು ಬದುಕಿದ ರೀತಿ, ಅವರು ನಂಬಿದ್ದ ಮೌಲ್ಯಗಳು, ಅವರು ತೋರಿದ ದಾರಿ, ಇತ್ಯಾದಿಗಳನ್ನು ಅಪಾರ ಸಂಖ್ಯೆಯ ವೀಕ್ಷಕರಿಗೆ ಪರಿಚಯಿಸಿದ್ದು ದಾಖಲೆಗೆ ಅರ್ಹವಾದ ಒಂದು ಕಾರ್ಯಕ್ರಮ.