ನಾಗತಿಹಳ್ಳಿ ಚಂದ್ರಶೇಖರ್ ಅವರ ಒಂದು ಕಥೆಯ ಹೆಸರು “ಪ್ರಶ್ನೆಯಾಗುವ ವ್ಯಕ್ತಿಗಳು” (ಇದು ಅವರ ಮಲೆನಾಡಿನ ಹುಡುಗಿ ಎಂಬ ಕಥಾಸಂಕಲನದಲ್ಲಿದೆ). ಈ ಕಥೆಯ ಉಲ್ಲೇಖ ಈಗ ಏಕೆಂದರೆ, ನನಗೆ ನಾಗತಿಹಳ್ಳಿ ಅವರೇ ಈಗ ‘ಪ್ರಶ್ನೆಗಳ ವ್ಯಕ್ತಿ’ಯಾಗಿದ್ದಾರೆ.

ಉದಾಹರಣೆಗೆ: ಇದುವರೆಗೆ, ನಾಗತಿಹಳ್ಳಿ ಅವರು ಐದು ಕಥಾಸಂಕಲನಗಳಲ್ಲಿ ಸುಮಾರು ೭೫ ಕಥೆಗಳನ್ನು ಬರೆದಿದ್ದಾರೆ; ಇದೇ ಅವಧಿಯಲ್ಲಿ ಅವರು ಮೂರು ಕಾದಂಬರಿಗಳು, ಆರು ಪ್ರವಾಸ ಕಥನಗಳು, ಆರು ಸಂಪುಟಗಳಲ್ಲಿ ಆತ್ಮಕಥನಗಳು, ಅಂಕಣಬರಹಗಳು, ಮತ್ತು ಬಿಡಿ ಲೇಖನಗಳನ್ನು ಬರೆದಿದ್ದಾರೆ; ಇಷ್ಟೇ ಅಲ್ಲದೆ, ೧೧ ಚಲನಚಿತ್ರಗಳನ್ನು ಹಾಗೂ ಎಂಟು ಮೆಗಾ ಧಾರಾವಾಹಿಗಳನ್ನೂ ನಿರ್ದೇಶಿಸಿದ್ದಾರೆ; ಮತ್ತು ಜನಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಾಧನೆಗಳನಂತರವೂ ಅವರಿಗೆ ‘ಮುನ್ನುಡಿ-ಹಿನ್ನುಡಿ’ಗಳ ಅಗತ್ಯವಿದೆಯೆ? ಉತ್ತರ: ಖಂಡಿತಾ ಇಲ್ಲ.

ಹಾಗಿದ್ದರೆ, ಅವರು ನನ್ನನ್ನೇಕೆ ಅವರ ಸಮಗ್ರ ಕಥೆಗಳಿಗೆ ಮುನ್ನುಡಿಯ ರೂಪದ ಲೇಖನವನ್ನು ಬರೆಯಲು ಕೇಳಿದ್ದಾರೆ? ಈ ಪ್ರಶ್ನೆಗೆ ಅನೇಕ ಉತ್ತರಗಳು ಸಾಧ್ಯ: ಕುತೂಹಲ (‘ಇವರು ನನ್ನ ಇಷ್ಟೆಲ್ಲಾ ಕಥೆಗಳನ್ನು ಕುರಿತು ಏನು ಹೇಳುತ್ತಾರೆ?), ಸವಾಲು (‘ನನ್ನ ೭೫ ಕಥೆಗಳನ್ನೂ ಓದಿಯೇ ನೀವು ಬರೆಯುತ್ತೀರೋ ಅಥವಾ ಹಿನ್ನುಡಿ-ಬೆನ್ನುಡಿಗಳನ್ನಾಧರಿಸಿ, ಒಂದೆರಡು ಸಾಧಾರಣೀಕೃತ ಹೇಳಿಕೆಗಳಿಗೇ ತೃಪ್ತರಾಗುತ್ತೀರೋ?’), ನನ್ನ ಮೇಲಿನ ಅಭಿಮಾನ (ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಬರೆದರೆ, ಬರೆದವನಿಗೂ ಆ ಪ್ರಸಿದ್ಧಿಯ ಧೂಳು ಅಂಟಿಕೊಳ್ಳುತ್ತದೆಯಲ್ಲವೆ!), ಇತ್ಯಾದಿ. ಮೇಲೆ ಉಲ್ಲೇಖಿಸಿದ ಅವರ ಕಥೆಯಲ್ಲಿ ವ್ಯಕ್ತಿಗಳು ನಿರೂಪಕನಿಗೆ ಪ್ರಶ್ನೆಯಾಗಿಯೇ ಉಳಿಯುತ್ತಾರೆ. ಹಾಗೆಯೇ, ನಾನೂ ಕೂಡಾ, ಇವುಗಳಲ್ಲಿ ಯಾವ ಉತ್ತರ ಸರಿ ಎನ್ನುವ ಗೋಜಿಗೆ ಹೋಗದೆ, ಉಳಿದ ಪ್ರಶ್ನೆಗಳನ್ನು ಮುಂದೂಡಿ, ಈಗ ಇವರ ಕಥೆಗಳ ಬಗ್ಗೆಯೇ ನನ್ನ ಪ್ರತಿಕ್ರಿಯೆಯನ್ನು ದಾಖಲಿಸಲು ಪ್ರಯತ್ನಿಸುತ್ತೇನೆ. (ಆದರೆ, ‘ನಿಮ್ಮ ೭೫ –ಅಲ್ಲ, ಒಂದು ಕಥೆ ಎರಡೂ ಸಂಕಲನಗಳಲ್ಲಿ ಬಂದಿರುವುದರಿಂದ, ೭೪ — ಕಥೆಗಳನ್ನೂ ಓದಿಯೇ ಈ ಲೇಖನವನ್ನು ಬರೆಯುತ್ತಿದ್ದೇನೆ ಎಂದು ಧೈರ್ಯವಾಗಿ ಹೇಳಿದನಂತರ ಮುಂದುವರೆಯುತ್ತೇನೆ.)

* * *

ಕಳೆದ ಶತಮಾನದ ಎಂಟನೆಯ ದಶಕದಲ್ಲಿ ಲೇಖಕರಾಗಿ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ ನಾಗತಿಹಳ್ಳಿ ಅವರು ಮೂರು ದಶಕಗಳಲ್ಲಿ ಇಂದಿನವರೆಗೆ ಅನೇಕ ಬಗೆಯ ಕಥೆಗಳನ್ನು ಬರೆದಿದ್ದಾರೆ: ಸಿನಿಮೀಯವಾದ ಪ್ರೇಮ ಕಥೆಗಳು (ಉದಾ. “ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ,” …), ಚಿಂತನಾ ಪ್ರಧಾನ ಕಥೆಗಳು (“ಇರುವುದೆಲ್ಲವ ಬಿಟ್ಟು,” …), ರಾಜಕೀಯ ವಿಡಂಬನೆಗಳು (“ ಗತಿಶೀಲ,” “ಕಳೆದುಕೊಂಡವನು,” “ನೊಣಗಳು,” “ಎಲೆಕ್ಸನ್ನು,” …), ಸಾಮಾಜಿಕ ವಿಡಂಬನೆಗಳು (“ಕೋಟೆ,” “ಮುತ್ತಾಲಯ್ಯನ ರಾಜೀನಾಮೆ ಪ್ರಕರಣ,” “ಹುಡ್ಕೋ ಮನೆ,” …), ಧಾರ್ಮಿಕ ವಿಡಂಬನೆ (“ಪುಟ್ಟಕ್ಕನ ಮೆಡಿಕಲ್ ಕಾಲೇಜ್,” …), ವೈನೋದಿಕಗಳು (“ ಕಮಂಗಿಪುರದ ಕಥೆ,” “ಅನ್ನದಾತೋ ಸುಖೀಭವ,” “ಸನ್ಯಾಸ,”…), ಸ್ವಾಭಿಮುಖೀ ಕಥೆಗಳು (“ಸ್ಖಲನ,” “ರಾಯಭಾರ,” “ಯಾತನೆಗಳು,” …), ರೂಪಕ ಕಥೆಗಳು (“ಯಾತ್ರೆ,” “ನಡುರಾತ್ರಿಯಲ್ಲಿ ಸಿಕ್ಕವರು,” “ಸಂಜೆ,”), ಇತ್ಯಾದಿ. ಸೀಮಿತ ಪ್ರಜ್ಞೆಯ ನಿರೂಪಣೆ, ಸರ್ವಜ್ಞ ನಿರೂಪಣೆ, ಪತ್ರ-ದಿನಚರಿಗಳ ಮೂಲಕ ನಿರೂಪಣೆ, ಇತ್ಯಾದಿ ಅನೇಕ ಬಗೆಯ ಕಥನ ತಂತ್ರಗಳ ಪ್ರಯೋಗವನ್ನು ಮಾಡಿದ್ದಾರೆ.

ನಾಗತಿಹಳ್ಳಿ ಅವರ ಸರಿ ಸುಮಾರು ಎಲ್ಲಾ ಕಥೆಗಳೂ ಸಮಕಾಲೀನ ವಾಸ್ತವ ಬದುಕಿಗೆ ಸ್ಪಂದಿಸುತ್ತವೆ, ಆ ಬದುಕನ್ನು ಅರ್ಥೈಸಲು ಪ್ರಯತ್ನಿಸುತ್ತವೆ. ಮೂರು ದಶಕಗಳಷ್ಟು ದೀರ್ಘ ಕಾಲ ಈ ಬಗೆಯ ಗಟ್ಟಿಯಾದ ವಾಸ್ತವ ಪಜ್ಞೆಯನ್ನು ಕ್ರಿಯಾಶೀಲವಾಗಿ ದುಡಿಸಿಕೊಂಡಿರುವವರು ಕನ್ನಡದಲ್ಲಿ ಕೆಲವೇ ಲೇಖಕರು. “ಬದುಕಿನ ನೋವೆಲ್ಲಾ ಹೆಪ್ಪುಗಟ್ಟಿಸಿ ಒಡಲಿನಲ್ಲಿಟ್ಟುಕೊಂಡ ಕಥೆಗಳೆಂದರೆ ನನಗೆ ತೀವ್ರ ಪ್ರೀತಿ. ಅವು ನಾನು ಬರೆಯಬೇಕಾದ ಕಥೆಗಳಾಗಿರುತ್ತವೆ” (“ಸ್ಖಲನ”); “ಭಾವುಕತೆ ಬೇಕು. ಆದರೆ ವಾಸ್ತವದ ಚೌಕಟ್ಟಿನೊಳಗೆ ಭಾವುಕತೆ ಇರಬೇಕು. … ಹಸಿವಿನಲ್ಲಿ, ಶೋಷಣೆಯಲ್ಲಿ, ಕ್ರೌರ್ಯದಲ್ಲಿ, ಕಾಮದಲ್ಲಿ ಹುಟ್ಟುವ ಸಾಹಿತ್ಯ ಗಟ್ಟಿಯಾಗಿರುತ್ತದೆ” (“ದಿನಚರಿಯ ಪುಸ್ತಕಗಳಿಂದ”); ಇಂತಹ ವಾಕ್ಯಗಳು ಕಥೆಗಳಲ್ಲಿ ಬರುವ ಪಾತ್ರಗಳದ್ದಾದರೂ ಇವು ಸಾಹಿತಿಯಾಗಿ ನಾಗತಿಹಳ್ಳಿ ಅವರ ವೈಚಾರಿಕ ನಿಲುವನ್ನೂ ದಾಖಲಿಸುತ್ತವೆ; ಮತ್ತು ಎಡಪಂಥೀಯ ಚಿಂತನೆಯಿಂದ ಪ್ರಭಾವಿತವಾದ ಈ ಬಗೆಯ ವೈಚಾರಿಕತೆಯನ್ನು ‘ಪ್ರಗತಿಶೀಲ’ ಎಂದೂ ಕರೆಯಬಹುದು, ‘ಬಂಡಾಯ’ ಎಂದು ಕರೆದರೂ ತಪ್ಪಾಗಲಾರದು. ಅದಕ್ಕೇ ಇರಬಹುದು, ಇವರ ಕಥೆಗಳು ಒಂದೆಡೆ ಚದುರಂಗರ ಕಥೆಗಳನ್ನು ನೆನಪಿಸಿದರೆ ಇನ್ನೊಂದೆಡೆ ಬೆಸಗರಹಳ್ಳಿ ರಾಮಣ್ಣನವರ ಕಥೆಗಳನ್ನು ನೆನಪಿಗೆ ತರುತ್ತವೆ. ಈ ಬಗೆಯ ಎಡಪಂಥೀಯ ವೈಚಾರಿಕತೆಯ ಹಿನ್ನೆಲೆಯಲ್ಲಿ, ನಾಗತಿಹಳ್ಳಿ ಅವರು ಜೀತ ಪದ್ಧತಿ, ಜಾತಿ-ಪದ್ಧತಿ, ಕೋಮುವಾದ, ನಗರೀಕರಣ, ರಾಜಕಾರಣಿಗಳ ಡಂಭಾಚಾರ ಹಾಗೂ ಅನೈತಿಕತೆ, ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳು, ಮೌಲ್ಯಗಳೇ ಇಲ್ಲದ ಶಿಕ್ಷಣ, ಮತಾಂತರ, ಇತ್ಯಾದಿ ಇಂದಿನ ಸಮಾಜದ ಜ್ವಲಂತ ಸಮಸ್ಯೆಗಳೆಲ್ಲಕ್ಕೂ ಮುಖಾಮುಖಿಯಾಗುತ್ತಾರೆ.

ಎಡಪಂಥೀಯ ವೈಚಾರಿಕತೆ ಲೇಖಕನಿಗೆ ಒಂದು ಬಗೆಯ ಬದ್ಧತೆಯನ್ನು ಕೊಡುತ್ತದೆ; ಮತ್ತು ಆ ಬದ್ಧತೆ ಲೇಖಕನು ರೋಚಕ ಕಲ್ಪನಾ ಪ್ರಪಂಚದಲ್ಲಿ ಮುಳುಗಿ ಕಳೆದುಹೋಗದಂತೆ ಅವನ ಕೃತಿಗಳಿಗೆ ಪ್ರಸ್ತುತತೆಯನ್ನು ಕೊಡುತ್ತದೆ. ನಾಗತಿಹಳ್ಳಿ ಅವರು ಓದುಗರಿಗೆ ಪ್ರಸ್ತುತರಾಗುವುದು ಈ ನೆಲೆಯಲ್ಲಿಯೇ. ಶಿವರಾಮ ಕಾರಂತರಂತೆ, ‘ಸಾಹಿತಿ ಮೂಲತಃ ಬಂಡುಕೋರ’ ಎಂದು ನಂಬುವ ನಾಗತಿಹಳ್ಳಿ ಸೂಕ್ಷ್ಮಾತಿಸೂಕ್ಷ್ಮ, ನೈಜ-ದಟ್ಟ ವಿವರಗಳ ಮೂಲಕ ತಾವು ತಮ್ಮ ಸುತ್ತಲಿನ ಸಮಾಜದಲ್ಲಿ ಕಾಣುವ ಕ್ರೌರ್ಯ-ಶೋಷಣೆ-ನೋವುಗಳನ್ನು ನಿರ್ಭಿಡೆಯಿಂದ, ‘ಇದು ನಮ್ಮ-ನಿಮ್ಮ ಸಮಾಜ’ ಎಂದು ಓದುಗರ ಕಣ್ಣಿಗೆ ಚುಚ್ಚುತ್ತಾರೆ.

ಅವರು ನಮ್ಮೆದುರು ರಾಚುವ ಸಮಾಜದಲ್ಲಿ: ಒಂದು ದೊಡ್ಡ ಮೆಡಿಕಲ್ ಕಾಲೇಜ್ ಕಟ್ಟಿ ಆ ಮೂಲಕ ಎನ್‌ಆಐಗಳಿಂದ ಅಗಾಧ ಹಣವನ್ನು ದೋಚಲು ವಿಧವೆಯೊಬ್ಬಳ ಹೊಲವನ್ನು ಬಲಾತ್ಕಾರದಿಂದ ಆಕ್ರಮಿಸಿಕೊಳ್ಳುವ ಮಠಾಧೀಶರಿದ್ದಾರೆ (“ಪುಟ್ಟಕ್ಕನ ಮೆಡಿಕಲ್ ಕಾಲೇಜು”); ನೊಣಗಳು ಸಿಹಿಗೆ ಮುತ್ತುವಂತೆ ಹೊಟೆಲ್‌ನಲ್ಲಿ ಕೆಲಸಮಾಡುವ ಮುಗ್ಧ ಹುಡುಗಿಯೊಬ್ಬಳನ್ನು ಕೆಡಿಸಿ, ಅವಳು ನಂತರ ವೇಶ್ಯೆಯಾಗುವಂತೆ ಮಾಡಿ, ತಾನು ಚುನಾವಣೆಯಲ್ಲಿ ಗೆದ್ದು ‘ಸಮಾಜ ಕಲ್ಯಾಣ ಮಂತ್ರಿ’ಯಾಗುವ ರಾಜಕಾರಣಿಗಳಿದ್ದಾರೆ (“ನೊಣಗಳು”); ಮಾತಿನಲ್ಲೇ ಕ್ರಾಂತಿ ಮಾಡುತ್ತಾ, ತನ್ನನ್ನು ನಂಬಿದ ಸ್ತ್ರೀಯನ್ನು ವಂಚಿಸಿ ಸ್ತ್ರೀವಿಮೋಚನೆಯ ಬಗ್ಗೆ ಬೃಹತ್ ಕಾದಂಬರಿಯನ್ನು ಬರೆಯುವ ಸಾಹಿತಿಗಳಿದ್ದಾರೆ (“ಶಿಷ್ಟ ಜಗತ್ತಿನ ಒಳ ವ್ಯಾಪಾರಗಳು”); ಜನರು ಮರೆತಿದ್ದ ತನಗೆ ತನ್ನ ಚಿತ್ರದಲ್ಲಿ ಒಂದು ಅವಕಾಶ ಕೊಟ್ಟು ಆ ಮೂಲಕ ತನಗೆ ಮರುಜನ್ಮವನ್ನು ಕೊಟ್ಟ ಆದರ್ಶ ಚಿತ್ರನಿರ್ಮಾಪಕ-ನಿರ್ದೇಶಕನನ್ನು ನಡು ನೀರಿನಲ್ಲಿ ಕೈಬಿಟ್ಟು ಹೋಗುವ ಸ್ವಾರ್ಥಿ ನಟಿಯರಿದ್ದಾರೆ (“ನೀರು ತನ್ನ ಮಟ್ಟವನ್ನು …”); ಪ್ರೇಮಿಗಳಿದ್ದಾರೆ, ವ್ಯಭಿಚಾರಿಗಳಿದ್ದಾರೆ, ಮೋಸಗಾರರಿದ್ದಾರೆ, ಮೋಸಹೋಗುವವರಿದ್ದಾರೆ —-’ಆಧುನಿಕ’ವೆಂದು ಬೀಗುವ ಸಮಕಾಲೀನ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಅನಾಗರಿಕತೆಯ, ಬರ್ಬರತೆಯ ವಿವಿಧ ಮುಖಗಳನ್ನು ನಿರ್ದಾಕ್ಷಿಣ್ಯವಾಗಿ ನಾಗತಿಹಳ್ಳಿ ಅವರ ಕಥೆಗಳು ಅನಾವರಣ ಮಾಡುತ್ತವೆ.

ಈ ಹೇಳಿಕೆಗೆ ಕೆಲವು ಮುಖ್ಯ ಅಪವಾದಗಳಿವೆ. ಉದಾಹರಣೆಗೆ: ೧೯೮೫ರಲಿಯೇ ಬರೆದ (ನನ್ನ ಪ್ರೀತಿಯ ಹುಡುಗನಿಗೆ ಸಂಕಲನದಲ್ಲಿ) “ಇರುವುದೆಲ್ಲವ ಬಿಟ್ಟು” ಎಂಬ ಕಥೆಯನ್ನು ನೋಡಬಹುದು. ‘ಯಾವ ರೀತಿಯದ್ದಾದರೂ ಬದುಕು ಪವಿತ್ರ; ಅದರಿಂದ ಓಡಿ ಹೋಗಿ ಏನನ್ನೂ ಸಾಧಿಸಲಾಗುವುದಿಲ್ಲ’ ಎಂಬಂತಹ ಜೀವನಮುಖಿ ಆಶಯದ ಸುತ್ತಾ ಈ ಕಥೆ ರಚಿಸಲ್ಪಟ್ಟಿದೆ. ಒಂದು ಕಾಲೇಜಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕನಾಗಿರುವ ನಿರೂಪಕನು ಹತ್ತು ವರ್ಷಗಳನಂತರ ತನ್ನ ವೃತ್ತಿಯಲ್ಲಿ ಬೇಸತ್ತು, ತನ್ನ ಸ್ವಾತಂತ್ರ್ಯವು ಮುಕ್ಕಾಗುತ್ತದೆಂದು ವಿವಾಹಬಂಧನಕ್ಕೆ ಸಿಲುಕದೆ, ತನ್ನನ್ನು ಪ್ರೀತಿಸಿದ ಹೆಣ್ಣುದನಿಗಳಿಗೆ ಕಿವುಡಾಗಿ, ತನ್ನ ವೃತ್ತಿಗೆ ರಾಜೀನಾಮೆ ಕೊಟ್ಟು, ಅಜ್~ಝಾತ ಕಡಲುತೀರದ ಕಾಟೇಜ್ ಒಂದರಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ. ತನ್ನ ಬರವಣಿಗೆಯ ಕೆಲಸವನ್ನೂ ನಿಲ್ಲಿಸುತ್ತಾನೆ. ಆದರೆ, ಒಂದು ದಿನ ಅವನನ್ನು ನೋಡಲು ಬರುವ ಅವನ ವಿದ್ಯಾರ್ಥಿನಿಯೊಬ್ಬಳು (ಪ್ರೇಮಾ) ನಿಧಾನವಾಗಿ ಅವನ ಭ್ರಮೆಗಳನ್ನು ದೂರ ಮಾಡಿ ಮತ್ತೆ ಬದುಕಿನತ್ತ ಅವನನ್ನು ಹೊರಳಿಸುತ್ತಾಳೆ. ಕಾವ್ಯಮಯವಾದ ಶೈಲಿ ಹಾಗೂ ಉತ್ತಮ ಪುರುಷ ನಿರೂಪಣೆಯಿರುವ ಈ ಕಥೆ ಎಲ್ಲಿಯೂ ಕೃತಕವಾಗಿ ಕಾಣದೆ, ಪರಿಣಾಮಕಾರಿಯಾಗಿ ತನ್ನ ಮೂಲಾಶಯವನ್ನು ಕಟ್ಟಿಕೊಡುತ್ತದೆ.

ಇಂತಹುದೇ ಮತ್ತೊಂದು ಯಶಸ್ವಿ ಕಥೆ “ಸನ್ನಿಧಿ.” ಗೊತ್ತಿರುವವರೆಲ್ಲರಿಂದಲೂ ಪೋಲಿ ಎಂದು ಕರೆಸಿಕೊಳ್ಳುವ, ಯಾವಾಗಲೂ ಒಂದಲ್ಲಾ ಒಂದು ಕೆಲಸದಲ್ಲಿ ಮುಳುಗಿರುವ, ಮರಿ ಫುಡಾರಿ ಪುಂಡಲೀಕ ಹಠಾತ್ತನೆ ಒಂದು ದಿನ ಕ್ಯಾನ್ಸರ್ ಆಗಿ ಆಸ್ಪತ್ರೆ ಸೇರುತ್ತಾನೆ; ಅದೇ ಆಸ್ಪತ್ರೆಯ ಇನ್ನೊಂದು ವಾರ್ಡ್‌ನಲ್ಲಿ ಅವನ ಪ್ರೇಯಸಿ (ಅವಳಿಂದ ಸದಾ ದೂರದಲ್ಲಿರುವ ಸೈನಿಕನ ಪತ್ನಿ) ದಿನ ತುಂಬಿ ಪ್ರಸವಕ್ಕಾಗಿ ಮಲಗಿರುತ್ತಾಳೆ. ಕಥೆ ಹೀಗೆ ಕೊನೆಯಾಗುತ್ತದೆ: “ನಾನು ಕಾಯುತ್ತಲೇ ಇದ್ದೆ. ಪದುಮ ಇನ್ನೇನು ಹಡೆಯುತ್ತಾಳೆಂದು, ಪುಂಡಲೀಕ ಇನ್ನೇನು ಸಾಯುತ್ತಾನೆಂದು.” ‘ನೈತಿಕ-ಅನೈತಿಕ’ ದ್ವಂದ್ವವನ್ನು ಮೀರಿ, ಸಾವು-ಬದುಕುಗಳ ನಿಗೂಢ ಚಕ್ರವನ್ನು ಈ ಕಥೆ ಯಶಸ್ವಿಯಾಗಿ ದಾಖಲಿಸುತ್ತದೆ.

ಇದಕ್ಕೆ ತೀರಾ ವಿಭಿನ್ನವಾದ, ವೈನೋದಿಕವೆಂದು ಕಂಡರೂ ಅಷ್ಟೇ ಪರಿಣಾಮಕಾರಿಯಾದ ಕಥೆ “ಮನೆಗೆ ಬಂದ ಮಹಾಲಕ್ಷ್ಮಿ” (ಸನ್ನಿಧಿ). ತನ್ನ ವೈವಾಹಿಕ ಬದುಕಿನ ಏಕತಾನತೆಯಿಂದ ಬೇಸತ್ತ ಗಂಡನೊಬ್ಬನು, ನವೀನ ಅನುಭವವನ್ನು ಹುಡುಕುತ್ತಾ, ತನ್ನ ಪತ್ನಿ ಊರಿಗೆ ಹೋಗಿರುವಾಗ ಮನೆಗೆ ವೇಶ್ಯೆಯೊಬ್ಬಳನ್ನು ಕರೆತರುತ್ತಾನೆ. ಬಹುದಿನಗಳ ನಂತರ ಸಿಕ್ಕಿರುವ ಸ್ವಾತಂತ್ರ್ಯವನ್ನು ಸಂಪೂರ್ಣ ಸವಿಯಲು ಆ ವೇಶ್ಯೆ, ಇತರ ವಿವಾಹಿತ ಸ್ತ್ರೀಯರಂತೆ, ಅವನೊಡನೆ ಪಾರ್ಕಿನಲ್ಲಿ ಆಟವಾಡಿ, ಹೊಟೇಲಿನ ಫ಼್ಯಾಮಿಲಿ ರೂಮಿನಲ್ಲಿ ಅವನೊಡನೆ ನಿಧಾನವಾಗಿ ತಿಂಡಿ ತಿಂದು, ಕೊನೆಗೆ ಮನೆಗೆ ಬರುತ್ತಾಳೆ; ಅಲ್ಲಿಯೂ, ಮರ್ಯಾದಸ್ಥರಂತೆ ಅವನ ಹೆಂಡತಿಯ ಸೀರೆಯುಟ್ಟುಕೊಂಡು ಅವನ ಮುಂದೆ ನಾಚುತ್ತಾ ನಿಲ್ಲುತ್ತಾಳೆ. ಅವನಿಗೆ ಇವಳು ತನ್ನ ಪತ್ನಿಯಂತೆಯೇ ಕಾಣುವುದರಿಂದ ಭ್ರಮನಿರಸನವಾಗಿ ಕೂಡಲೇ ಅವಳನ್ನು ಅವಳ ಮನೆಗೆ ಕಳುಹಿಸುತ್ತಾನೆ. ವಿವಾಹಿತನಿಗೆ/ಳಿಗೆ ಆ ಬಂಧನದಿಂದ ಬಿಡುಗಡೆ ಎಷ್ಟು ಆಕರ್ಷಕವಾಗಿ ಕಾಣುತ್ತದೆಯೋ ಆಷ್ಟೇ ಆಕರ್ಷಕವಾಗಿ ವಿವಾಹ ಸಾಧ್ಯತೆಯಿಲ್ಲದವಳಿಗೆ ಆ ಬಂಧನವು ಕಾಣಿಸುತ್ತದೆ. ಸಾಧಾರಣ ವೇಶ್ಯೆಯೊಬ್ಬಳಿಗೆ ವೈವಾಹಿಕ ಬದುಕಿನ ಬಗ್ಗೆ ಇರಬಹುದಾದ ಅದಮ್ಯ ಆಕರ್ಷಣೆಯನ್ನು ಎಳೆ ಎಳೆಯಾಗಿ ಈ ಕಥೆ ನಮ್ಮ ಮುಂದೆ ಚಿತ್ರಿಸುತ್ತದೆ.

ಈ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆ ನನ್ನನ್ನು ಕಾಡುತ್ತದೆ. ಕಥೆಗಳನ್ನು ರೋಚಕವಾಗಿ ಕಟ್ಟುವ ಕೌಶಲ್ಯ ನಾಗತಿಹಳ್ಳಿಯವರಿಗಿದೆ; ಅವರ ಭಾಷೆ ಭಾವೋದ್ದೀಪಕವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿಮಾಬದ್ಧವಾಗಿರುತ್ತದೆ (“ಕಡುಕಪ್ಪು ಬಟ್ಟೆ ತಗೊಂಡು ಹೊಸದಾಗಿ ಎಂಬ್ರಾಯ್ಡರಿ ಕಲಿತ ಪುಟ್ಟ ಹುಡುಗಿಯೊಬ್ಬಳು ಅಡ್ಡಾದಿಡ್ಡಿ ಹೊಲೆದ ಕುಸುರಿ ಕಲೆಯಂತೆ ಗಗನದ ತುಂಬಾ ತಾರೆಗಳು ಚೆಲ್ಲಿಕೊಂಡಿದ್ದುವು”) — ಇಂತಹ ವರ್ಣನೆಗಳು ಸರಿ ಸುಮಾರು ಪ್ರತಿಯೊಂದು ಕಥೆಯಲ್ಲಿಯೂ ಇದ್ದು ನಮ್ಮನ್ನು ಬಡಿದೆಬ್ಬಿಸುತ್ತವೆ); ಮತ್ತೆ, ಇವರ ಕಥೆಗಳಲ್ಲಿ ಸಮಕಾಲೀನ ಪ್ರಜ್~ಝೆಯಿದೆ ಹಾಗೂ ಸಾಮಾಜಿಕ ಕಳಕಳಿಯಿದೆ. ಈ ಕಾರಣಗಳಿಂದ ಇವರು ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು ಎಂಬುದನ್ನು ಯಾರೂ ಒಪ್ಪಬಹುದು. ಹೀಗಿದ್ದರೂ, ಇವರ ಹೆಚ್ಚಿನ ಸಾಮಾಜಿಕ ವಿಡಂಬನೆಗಳು, ಎಲ್ಲೋ ಒಂದು ಕಡೆ ನನಗೇಕೆ ಅತೃಪ್ತಿಯನ್ನುಂಟು ಮಾಡುತ್ತವೆ?

ಈ ಅತೃಪ್ತಿಗೆ ನನಗೆ ತೋರುವ ಹಾಗೆ ಎರಡು ಪರಸ್ಪರ ಸಂಬಂಧಿತ ಕಾರಣಗಳಿವೆ. ಅಷ್ಟೇನೂ ಮುಖ್ಯವಲ್ಲದ ಮೊದಲನೆಯ ಕಾರಣವೆಂದರೆ, ಇವರ ಕೆಲವು ಕಥೆಗಳಲ್ಲಿ ಆ ಕಥೆಗಳನ್ನು ದುಃಖಾಂತ ಮಾಡಲೆಂದೇ ಬರುವ ಅಸಹಜ (ಅಥವಾ, ನನಗೆ ಹಾಗೆಂದು ತೋರುವ) ತಿರುವುಗಳು. ಉದಾಹರಣೆಗಾಗಿ: ಪರಂಪರಾಗತ ನಂಬಿಕೆಗಳ ಭದ್ರ ಕೋಟೆಯನ್ನು ದಾಟುವ ಉದ್ದೇಶದಿಂದ ಅವಿವಾಹಿತೆ ಯಶೋಧರಾ ತನ್ನ ವಿದ್ಯಾರ್ಥಿ ವೀರಭದ್ರನನ್ನು ತಾನೇ ಆಕರ್ಶಿಸಿ, ಅವನೊಡನೆ ಸುಖಿಸುತ್ತಾಳೆ; ಆದರೆ, ಕೊನೆಗೆ, ವೀರಭದ್ರ ತನ್ನ ಹೆಸರಿಗೆ ತಕ್ಕಂತೆ ಕ್ರೂರ ಮೃಗವಾಗಿ ಅವಳನ್ನು ಆಕ್ರಮಿಸುತ್ತಾನೆ ಮತ್ತು ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ (“ಯಶೋಧರ ಚರಿತೆ”). ಈ ಕಥೆಯಲ್ಲಿ ಎಲ್ಲಿಯೂ ಅವನು ಕೊನೆಯಲ್ಲಿ ಮೃಗವಾಗಬಹುದೆನ್ನುವ ಸೂಚನೆಯಿಲ್ಲ; ಅದಕ್ಕಿಂತ ಹೆಚ್ಚಾಗಿ, ಅವನ ಮೃಗೀಯ ವರ್ತನೆಗೆ ಕಾರಣವೂ ಇಲ್ಲ — ಕಾಲ್ಪನಿಕ ಅಷ್ಟಾವಂಕನೊಡನೆ ಅವನ ಸಮೀಕರಣವನ್ನು ಬಿಟ್ಟರೆ. ಆದರ್ಶವಾದಿ ಸಿನಿಮಾ ನಿರ್ಮಾಪಕನೊಬ್ಬನು ಅಪ್ರಸಿದ್ಧ ನಟಿಯೊಬ್ಬಳಿಗೆ ಅವಕಾಶ ಕೊಡುತ್ತಾನೆ; ಶೂಟಿಂಗ್ ನಡೆಯುತ್ತಿರುವಾಗಲೇ ಅಕಸ್ಮಾತ್ ಅಲ್ಲಿಗೆ ಬಂದ ಹಿಂದಿ ಚಿತ್ರ ನಿರ್ಮಾಪಕನೊಬ್ಬ ಆ ನಟಿಯನ್ನು ತನ್ನ ಚಿತ್ರಕ್ಕೆ ನಾಯಕಿಯಾಗಲು ಆಹ್ವಾನಿಸುತ್ತಾನೆ; ಅವಳು ಒಪ್ಪಿಕೊಂಡು, ತನ್ನ ಮೊದಲ ಚಿತ್ರವನ್ನು ಮುಗಿಸದೆ ಮುಂಬಯಿಗೆ ಹೋಗುತ್ತಾಳೆ ಮತ್ತು ಇದರಿಂದ ಆ ಕನ್ನಡ ಚಿತ್ರ ನಿರ್ಮಾಪಕ ಎಲ್ಲವನ್ನೂ ಕಳೆದುಕೊಂಡು, ಹಾಳಾಗುತ್ತಾನೆ (“ನೀರು ತನ್ನ ಮಟ್ಟವನ್ನು …”). ಶೂಟಿಂಗ್ ನಡೆಯುವ ಅದೇ ಜಾಗಕ್ಕೆ, ಅದೇ ಹೊತ್ತಿನಲ್ಲಿ, ಆ ಹಿಂದಿ ಚಿತ್ರ ನಿರ್ಮಾಪಕ ಅಲ್ಲಿಗೆ ಬರದಿದ್ದರೆ? ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು.

ಕಥೆಗಳು ದುಖಾಂತವಾಗಿ ಮುಗಿಯುವುದಕ್ಕೆ ‘ಸಣ್ಣ ಕಥೆ’ ಎಂಬ ಪ್ರಕಾರವೂ ಕಾರಣವೆ? ಎಂದರೆ, ನೀಳ್ಗತೆ – ಕಾದಂಬರಿಗಳ ಹರಹು ಸಣ್ಣ ಕಥೆಗಳಿಗಿಲ್ಲ; ಆದುದರಿಂದ, ಕಥೆಗೆ ಕೊನೆಯಲ್ಲಿ ಅನಿರೀಕ್ಷಿತ ತಿರುವನ್ನು ಕೊಟ್ಟು (ಓ. ಹೆನ್ರಿಯಂತೆ) ಅಥವಾ ಕಥೆಯ ಕೊನೆಯನ್ನು ದುಖಾಂತವಾಗಿಸಿ, ಆ ಮೂಲಕ ಅವುಗಳನ್ನು ಪರಿಣಾಮಕಾರಿಯಾಗಿಸಲು ಲೇಖಕರು ಪ್ರಯತ್ನಿಸುತ್ತಾರೆಯೆ? ಈ ಪ್ರಶ್ನೆ ಏಕೆ ಏಳುತ್ತದೆಂದರೆ, ನಾಗತಿಹಳ್ಳಿ ಅವರ ನೀಳ್ಗತೆ /ಕಿರು ಕಾದಂಬರಿ ವಲಸೆ ಹಕ್ಕಿಯ ಹಾಡು ಸ್ವಾತಂತ್ರ್ಯೋತ್ತರ ಭಾರತವನ್ನು, ಆ ಕಾಲಘಟ್ಟದಲ್ಲಿ ಆಗಿರುವ ಸಾಂಸ್ಕೃತಿಕ ಅಧಃಪತನವನ್ನು ಚಿತ್ರಿಸುತ್ತಾದರೂ ಅದು ಸಂಪೂರ್ಣ ನಿರಾಶೆ-ಹತಾಶೆಗಳಿಂದ ತುಂಬಿಲ್ಲ. ಕಾರಂತರ ನಾವು ಕಟ್ಟಿದ ಸ್ವರ್ಗ ಮತ್ತು ಗೊಂಡಾರಣ್ಯ ಕೃತಿಗಳನ್ನು ನೆನಪಿಗೆ ತರುವ ಈ ಕಿರು ಕಾದಂಬರಿ ಕೆಂಚೇಗೌಡನಂತಹ ಆದರ್ಶ ವ್ಯಕ್ತಿಯನ್ನೂ ವಿಶ್ವಸನೀಯವಾಗಿ ಚಿತ್ರಿಸುತ್ತದೆ. ಅವನ ಪಾತ್ರ ಅತ್ತ ವೈಭವಿಕರಿಸಲ್ಪಡದೆ, ಇತ್ತ ಅದೊಂದು ವ್ಯಂಗ್ಯಚಿತ್ರವೂ ಆಗದೆ, ಅತ್ಯಂತ ನೈಜವಾಗಿ ಬಂದಿದೆ. ಅವನು ತನ್ನ ಹೆಂಡತಿಯ ಗೋರಿಯ ಬಳಿ ಒಬ್ಬನೇ ಕುಳಿತು “ ನಾನೀಗ ದುಡಿದು ಬದುಕುತ್ತಿದ್ದೇನೆ, ಕಣೆ” ಎಂದು ಹೇಳುವ ಮಾತು ಲೇಖಕರ ಜೀವನಶ್ರದ್ಧೆಯನ್ನು ಪ್ರತಿಫಲಿಸುತ್ತದೆ. ಹಾಗೆಯೇ, ಅದರಲ್ಲಿ ಬರುವ ಜರ್ಮನ್ ತರುಣಿಯ ಚಿತ್ರವೂ ವಿಶ್ವಸನೀಯವಾಗಿದೆ. ಒಟ್ಟರೆ, ಕಾದಂಬರಿಯ ಧ್ವನಿ ‘ಕತ್ತಲೆಯಲ್ಲಿಯೂ ತಾರೆಗಳನ್ನು ನೋಡುವ’ ಆರೋಗ್ಯಪೂರ್ಣ ನಿಲುವು.

ಸಣ್ಣಕಥೆ ಎಂಬ ಪ್ರಕಾರದ ಮಿತಿ, ಎಡಪಂಥೀಯ ಚಿಂತನೆಗೆ ಬದ್ಧತೆ, ಜನಪ್ರಿಯತೆಯ ಲಕ್ಷ್ಯ –ಕಾರಣವೇನೇ ಇರಲಿ, ನಾಗತಿಹಳ್ಳಿಯವರ ಹೆಚ್ಚಿನ ಸಾಮಾಜಿಕ-ರಾಜಕೀಯ ವಿಡಂಬನೆಗಳು ಏಕಮುಖಿಯಾಗಿ ಇಂದಿನ ಸಮಾಜವನ್ನು ಗ್ರಹಿಸುತ್ತವೆಂಬುದು ಸ್ಪಷ್ಟ. ಏಕಮುಖಿ ಲೋಕಗ್ರಹಿಕೆ ಪರಿವರ್ತನಶೀಲ ಸಮಾಜವನ್ನು ಅರ್ಥೈಸುವಾಗ ಎಡರುವ ಹಾಗೂ ಸುಲಭ ತೀರ್ಮಾನಗಳಿಗೆ ಬರುವ ಸಾಧ್ಯತೆಗಳು ಹೆಚ್ಚು.

ಈ ಹೇಳಿಕೆಯನ್ನು ನಾನು ಸ್ವಲ್ಪ ವಿವರಿಸಬೇಕು. ಶ್ರೇಷ್ಠ ಕಥೆ-ಕಾದಂಬರಿಗಳು ಹಿಂದಿ-ಕನ್ನಡ ಜನಪ್ರಿಯ ಚಲನಚಿತ್ರಗಳಂತೆ ಸುಖಾಂತವಾಗಿ ಮುಗಿದು (ಅವನಿಗೆ ಅವಳು / ಅವಳಿಗೆ ಅವನು ಸಿಕ್ಕುತ್ತಾಳೆ/ನೆ; ಕೊನೆಗೆ ಅವರು ಸುಖವಾಗಿರುತ್ತಾರೆ; ಭದ್ರಂ ಶುಭಂ, ಮಂಗಳಂ), ಓದುಗರಿಗೆ / ನೋಡುಗರಿಗೆ ತಾವಿರುವ ವ್ಯವಸ್ಥೆಗಳ ಬಗ್ಗೆ ಹುಸಿ ತೃಪ್ತಿ-ಸಮಾಧಾನಗಳನ್ನು ಕೊಡಬೇಕೆಂದು ನಾನು ಹೇಳುತ್ತಿಲ್ಲ. ನನ್ನ ದೃಷ್ಟಿಯಲ್ಲಿ, ಬದುಕಿನಲ್ಲಿ ನಾವು ಕಾಣುವ ವಿವರಗಳು ಕೇವಲ ‘ವಿವರಗಳಷ್ಟೆ’; ಅವುಗಳನ್ನು ವ್ಯಾಖ್ಯಾನಿಸಿ, ಇಡೀ ಸಮಾಜ-ಸಮುದಾಯಗಳ ಬಗ್ಗೆ ಒಂದು ಆಳವಾದ ಗ್ರಹಿಕೆಯನ್ನು ಅಭಿವ್ಯಕ್ತಿಗೊಳಿಸುವಾಗ, ಗ್ರಹಿಕೆಎಷ್ಟು ವಿಭಿನ್ನ ದನಿಗಳನ್ನು, ಎಷ್ಟು ಪರಸ್ಪರ ವಿರೋಧಗಳನ್ನು ಒಳಗೊಳ್ಳುತ್ತದೆಎಂಬುದು ಮುಖ್ಯವಾಗುತ್ತದೆ. ನಮ್ಮ ಗ್ರಹಿಕೆ ಬಿಡಿ ಗಿಡ-ಮರಗಳ ಅನನ್ಯ ವಿವರಗಳನ್ನು ಒಳಗೊಳ್ಳುವಂತೆಯೇ ಇಡೀ ಕಾಡಿನ ಒಟ್ಟಾರೆ ರೂಪವನ್ನೂ ಒಳಗೊಳ್ಳಬೇಕಾಗುತ್ತದೆ.

ನಾಗತಿಹಳ್ಳಿ ಅವರ “ಗಾಯ” ಎಂಬ ಕಥೆಯನ್ನೇ ತೆಗೆದುಕೊಳ್ಳೋಣ. ಇಡೀ ಕಥೆಯ ಆಶಯ, ‘ಮಂಡ್ಲು ಪಂಚಾಯ್ತಿ ಬಂದು, ಅಪ್ಪಾ-ಮಕ್ಕಳೀಗೆ, ಅತ್ತೆ-ಸೊಸೇಗೆ, ಅಣ್ಣ-ತಮ್ಮಗೋಳ್ಗೆ ಭಿನ್ನಾ ಭೇದ ತಂತು. ಮೂರು ಎಣಾ ಬಿತ್ತು.” ಪಂಚಾಯ್ತಿ ಚುನಾವಣೆಗಳಿಂದ ಎರಡು-ಮೂರು ಪಾರ್ಟಿಗಳಾಗಿ ಹೆಚ್ಚಿನ ಹಳ್ಳಿಗಳಲ್ಲಿ ಅಶಾಂತಿ-ಅಸಹನೆ ಹೆಚ್ಚುತ್ತಿವೆ ಎಂಬುದು ನಿಜ. ಆದರೆ, ಈ ಪಂಚಾಯ್ತಿ ವ್ಯವಸ್ಥೆಯಿಂದಾಗಿಯೇ ಕೇವಲ ಇಕ್ಕಿಸಿಕೊಂಡೇ ಅನುಭವವಿದ್ದ ದಲಿತರೂ ಈಗ ಇತರರಿಗೆ ಇಕ್ಕ ತೊಡಗಿದ್ದಾರೆ; ಪುರುಷಕೇಂದ್ರಿತ ಕ್ರೂರ ವ್ಯವಸ್ಥೆಯಲ್ಲಿಯೂ ಮಯೂರಿಯಂತಹ ಸ್ತ್ರೀಯೊಬ್ಬಳು ಎಲೆಕ್ಷನ್ ಗೆದ್ದು ಊರ ಮುಖಂಡಳಾಗುತ್ತಾಳೆ; ಮತ್ತು ತನ್ನ ಮಗಳನ್ನು ದಲಿತ ಯುವಕನೊಬ್ಬನಿಗೆ ಕೊಟ್ಟು ಮದುವೆ ಮಾಡುತ್ತಾಳೆ. ಈ ನಿಶ್ಶಬ್ದ ಕ್ರಾಂತಿಯ ಅರಿವೂ ಲೇಖಕನಿಗಿರಬೇಕು. ಅರ್ಥಾತ್, ಬದುಕೆಂಬ ನದಿ ತನ್ನ ತಿರುವುಗಳಲ್ಲಿ ಎಲ್ಲವನ್ನೂ ಪಾತಾಳಕ್ಕೆ ಎಸೆಯುವ ಭಯಂಕರ ಸುಳಿಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆಯಷ್ಟೇ ಅಲ್ಲದೆ, ಸದಾ ಹಸಿರಾಗಿರುವ ದ್ವೀಪಗಳನ್ನೂ ಒಳಗೊಂಡಿರುತ್ತದೆ.

ನಾಗತಿಹಳ್ಳಿ ಅವರ ಇತ್ತೀಚಿನ ಛಿದ್ರ (೨೦೦೩) ಎಂಬ ಸಂಕಲನದಲ್ಲಿರುವ “ಯಾತ್ರೆ” ಮತ್ತು “ನಾಯಿಪಾಡು” ಕಥೆಗಳು, ಮತ್ತು ಅನಂತರ ಬರೆದಿರುವ “ಸಂಜೆ,” “ಭೂಮಿ ಗುಂಡಗಿದೆ,” “ನಡು ರಾತ್ರಿಯಲ್ಲಿ ಸಿಕ್ಕವರು,” ಇವೇ ಮುಂತಾದ ಕಥೆಗಳು ಕಥೆಗಾರರಾಗಿ ನಾಗತಿಹಳ್ಳಿ ಒಂದು ತಿರುವಿನಲ್ಲಿ ನಿಂತಿದ್ದಾರೆಂಬುದನ್ನು ನಿದರ್ಶಿಸುತ್ತವೆ. ವೈನೋದಿಕ-ನಿರುದ್ವಿಗ್ನ ಶೈಲಿಯಲ್ಲಿ ಬರೆಯಲ್ಪಟ್ಟಿರುವ ಈ ಕಥೆಗಳನ್ನು ಹಾಸ್ಯ ಕಥೆಗಳೆಂದು ಓದಬಹುದು; ಬದುಕಿನ ತರ್ಕಾತೀತ ಸ್ವರೂಪವನ್ನು ತೋರಿಸುವ ರೂಪಕ ಕಥೆಗಳಂತೆಯೂ ಓದಬಹುದು; ಅಥವಾ, …. ಹೀಗೆ, ವಾಸ್ತವದಲ್ಲಿ ಭದ್ರವಾಗಿ ಕಾಲೂರಿಯೂ ವಾಸ್ತವವನ್ನು ಮೀರಿ, ಅನೇಕ ಅನಿಸಿಕೆಗಳನ್ನು ಧ್ವನಿಸುವ ಆದರೆ ಯಾವುದನ್ನೂ ನಿರ್ದಿಷ್ಟವಾಗಿ ಹೇಳದ ಕಥನ ಮಾರ್ಗವೊಂದನ್ನು ಈ ಕಥೆಗಳಲ್ಲಿ ನಾಗತಿಹಳ್ಳಿ ಶೋಧಿಸುತ್ತಿದ್ದಾರೆಂದು ಕಾಣುತ್ತದೆ.