ಕತೆಗಾರ-ಕವಿ-ಕಾದಂಬರಿಕಾರರಾದ ಮತ್ತು ಕಿರುತೆರೆಯಲ್ಲಿ ಕಳೆದೊಂದು ದಶಕದಿಂದ ಕ್ರಿಯಾಶೀಲರಾಗಿರುವ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದುದು ಕವಿಯಾಗಿ –೮೦ರ ದಶಕದಲ್ಲಿ (ಇಲ್ಲಿಯವರೆಗೆ ಅವರ ಎರಡು ಕವನ ಸಂಕಲನಗಳು ಪ್ರಕಟವಾಗಿವೆ). ಆದರೆ, ಬಹು ಬೇಗ ಅವರು ತಮ್ಮ ಕಥನ-ಶಕ್ತಿಯನ್ನು ಕಂಡುಕೊಂಡು, ಅನೇಕ ಪ್ರತಿಷ್ಠಿತ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿ, ಯಶಸ್ವಿ ಕತೆಗಾರರಾದರು. ಇಂದಿನವರೆಗೆ, ಐದು ಸಂಕಲನಗಳಲ್ಲಿ, ೫೬ ಕಥೆಗಳನ್ನು ಮಹಾಬಲ ಮೂರ್ತಿಯವರು ಬರೆದಿದ್ದಾರೆ. ಅವುಗಳಲ್ಲಿ ಅವರೇ ಆಯ್ಕೆ ಮಾಡಿದ ೨೨ ಕಥೆಗಳು ಈಗ ‘ಆಯ್ದ ಕಥೆಗಳು’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿವೆ. ಈ ಸಂದರ್ಭದಲ್ಲಿ ಅವರ ಕಥಾಲೋಕಕ್ಕೆ ಒಂದು ಪ್ರವೇಶವನ್ನು ಕಲ್ಪಿಸುವುದು ಈ ಕಿರು ಲೇಖನದ ಉದ್ದೇಶ.

ಮೊದಲಿಗೆ, ಒಂದೆರಡು ಪರಿಚಯಾತ್ಮಕ ಮಾತುಗಳು. ಕಳೆದ ಶತಮಾನದ ೮೦ರ ದಶಕದಲ್ಲಿ ತಮ್ಮ ಸಾಹಿತ್ಯಕ ಸಂವೇದನೆಯನ್ನು ರೂಪಿಸಿಕೊಂಡ ಮಹಾಬಲ ಮೂರ್ತಿಗಳ ಒಲವು ಆ ಕಾಲಘಟ್ಟದಲ್ಲಿ ಪ್ರಭಾವಿಯಾಗಿದ್ದ ಬಂಡಾಯ-ದಲಿತ ಸಂವೇದನೆಗಿಂತ ಭಿನ್ನವಾಗಿ ನವ್ಯ ಸಾಹಿತ್ಯದ ಕಡೆಗೆ ಇದ್ದಿತು ಎಂದು ತೋರುತ್ತದೆ. ಆ ಕಾರಣದಿಂದಲೇ, ಅವರ ಯಾವ ಕಥೆಯೂ, ನೇರವಾಗಿ, ಸಮಕಾಲೀನ ಸಮಸ್ಯೆಗಳಿಗೆ ಅಥವಾ ವಿಚಾರಗಳಿಗೆ ಸ್ಪಂದಿಸುವುದಿಲ್ಲ; ಬದಲಾಗಿ, ಸಾರ್ವಕಾಲಿಕವೆನ್ನಬಹುದಾದ ಮಾನವ ಸ್ಥಿತಿಯಬಗ್ಗೆ, ಈ ಅನೂಹ್ಯ ಜಗತ್ತಿನ ನಿಗೂಢತೆಯ ಬಗ್ಗೆ, ಇಂದಿಗೂ ಅಜ್ಞಾತವಾಗಿಯೇ ಉಳಿದಿರುವ ಹುಟ್ಟು-ಸಾವುಗಳ ಬಗ್ಗೆ ಅವರ ಕಥೆಗಳು ಒಂದು ಬಗೆಯ ಗಾಢ ಚಿಂತನೆಯನ್ನು ಮಾಡುತ್ತವೆ. ಈ ಕಾರಣದಿಂದಲೇ ಕಳೆದೆರಡು ದಶಕಗಳಲ್ಲಿ ಕನ್ನಡದ ಹೆಚ್ಚಿನ ಕತೆಗಾರರು ಸಮಕಾಲೀನ ವ್ಯವಸ್ಥೆಗಳ ಬಗ್ಗೆ ಬರೆದಿರುವಂತಹ ವಿಡಂಬನೆಗಳೂ ಇವರ ಕಥಾ ಲೋಕದಲ್ಲಿ ಇಲ್ಲವೇ ಇಲ್ಲವೆಂದರೂ ಆದೀತು. (ಸುಲಭವಾಗಿ ಆಧುನಿಕ ಬದುಕಿನ ವಿಡಂಬನೆಯಾಗಬಹುದಾಗಿದ್ದ “ಕೃಷ್ಣರಂಧ್ರ”ವೂ ವಿಡಂಬನೆಯ ಧಾಟಿಯಿಂದ ದೂರವಾಗಿ ಒಂದು ಬಗೆಯ ವಿಸ್ಮಯ-ವಿಷಾದಗಳನ್ನು ಸೂಚಿಸುತ್ತದೆ.) ಇವರದೇ ಒಂದು ಕಥೆ ಚಿತ್ರಿಸುವಂತೆ, ದಾರಿ ತಪ್ಪಿ, ಭಯಂಕರ ಕಾಡಿನಲ್ಲಿ ಸಿಕ್ಕಿಹಾಕಿಕೊಂಡು, ಅಲ್ಲಿ ಒಂದು ರಾತ್ರಿ ಅಜ್ಞಾತ ವ್ಯಕ್ತಿಗಳೊಡನೆ ಕಳೆದು, ಅನಂತರ ಅವರು ಗುರುತಿಲ್ಲದಂತೆ ಮಾಯವಾದಾಗ ಮತ್ತೆ ಕಾಡಿನಲ್ಲಿ ತನ್ನ ದಾರಿ ಕಂಡುಕೊಳ್ಳಲು ಪ್ರಯತ್ನಿಸುವಂತೆ ಇವರು ಮಾನವನ ಸ್ಥಿತಿಯನ್ನು ಗ್ರಹಿಸುತ್ತಾರೆ (“ಬದಲಾಯಿತು ದಾರಿ”). ಪರಿಣಾಮತಃ, ಮತ್ತೆ ಮತ್ತೆ ಮಹಾಬಲ ಮೂರ್ತಿಗಳ ಕಥೆಗಳಲ್ಲಿ ‘ಊರಿಂದ ಓಡಿಹೋಗುವುದು,’ ‘ಯಾರನ್ನೋ / ಯಾವುದನ್ನೋ ಹುಡುಕುವುದು,’ ‘ಕಾಡಿನಲ್ಲಿ / ಮಹಾನಗರಗಳಲ್ಲಿ ಕಳೆದುಹೋಗುವುದು,’ ಇತ್ಯಾದಿ ಆಶಯಗಳು ಕಂಡುಬರುತ್ತವೆ.

ಮಾನವ ಬದುಕಿನ ನಿಗೂಢತೆಯನ್ನು ಶೋಧಿಸುವ, ಚಿಂತನಾ ಪ್ರಧಾನವಾಗಿರುವ ಮಹಾಬಲ ಮೂರ್ತಿಗಳ ಕಥೆಗಳನ್ನು, ಸ್ಥೂಲವಾಗಿ, ಮೂರು ವರ್ಗಗಳಲ್ಲಿ ವಿಂಗಡಿಸಬಹುದು: ಅ) ಬದುಕಿನ ಆಕಸ್ಮಿಕಗಳು ಅಥವಾ ಅನಿರೀಕ್ಷಿತ ಘಟನೆಗಳನ್ನಾಧರಿಸಿದ ಕಥೆಗಳು; ಆ) ಜೀವ-ಜೀವದ ಸಂಬಂಧಗಳನ್ನು ವ್ಯಾಖ್ಯಾನಿಸುವ ಕಥೆಗಳು; ಮತ್ತು ಇ) ಬದುಕಿನ ಅನೂಹ್ಯ ಸ್ವರೂಪವನ್ನು ಶೋಧಿಸುವ ಕಥೆಗಳು.

ಮನೆಗೆ ಬಂದ ಅತಿಥಿಯನ್ನು ಶ್ರೀಮಂತನೆಂದು ಭಾವಿಸಿ, ಅವನಿಂದ ಸಾಲ ಬೇಡಲು ಪ್ರಯತ್ನಿಸುತ್ತಿದ್ದಾಗ ಅವನೇ ಸಹಾಯಾರ್ಥಿಯಾಗಿ ಬಂದಿರುವುದು ತಿಳಿಯುವುದು (“ಮನೆಗೆ ಬಂದವರು”); ಜನನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಮಕ್ಕಳು ಬದಲಾಗುವುದು (“ವಿರಾಟನಗರ”); ಯಕ್ಷಗಾನ ಪ್ರದರ್ಶನದಲ್ಲಿ ರಂಗದ ಮೇಲೆ ನಿಜವಾದ ಯುದ್ಧವೇ ನಡೆದು ಪಾತ್ರಧಾರಿಯೊಬ್ಬರು ಸಾಯುವುದು (“ವೈಶಂಪಾಯನ ತೀರ”) — ಇತ್ಯಾದಿ ಆಕಸ್ಮಿಕಗಳನ್ನಾಧರಿಸಿದ ಮೊದಲ ವರ್ಗದಲ್ಲಿ ಬರುವ ಕಥೆಗಳು ಎಲ್ಲಾ ಕಥೆಗಾರರ ಪ್ರಾಥಮಿಕ ಹಂತದಲ್ಲಿ ಕಂಡುಬರುವಂತಹವು. ಆದರೆ, ಇಂತಹ ಕಥೆಗಳಿಗೂ ಸ್ವಲ್ಪ ಮಟ್ಟಿನ ನಾವೀನ್ಯತೆ ದೊರೆಯುವುದು ಅವುಗಳಿಗೆ ಲೇಖಕರು ಕೊಡುವ ಅನ್ಯ ಕೃತಿಗಳ ಸ್ಥೂಲ ಚೌಕಟ್ಟಿನಿಂದ: ಮಕ್ಕಳು ಬದಲಾಗುವ ಕಥೆ, ಮುಂದುವರೆಯುತ್ತಾ, ವಿರಾಟ ನಗರಿಯಲ್ಲಿ ಅಜ್ಞಾತವಾಸದಲ್ಲಿದ್ದ ಪಾಂಡವರಂತೆ, ಬದುಕಿನಲ್ಲಿ ನಾವು ಕಾಣುವ ವ್ಯಕ್ತಿಗಳು ವಾಸ್ತವದಲ್ಲಿ ಬೇರೊಬ್ಬರೇ ಆಗಿರುತ್ತಾರೆ ಎಂಬ ಮನೋವ್ಶೆಜ್ಞಾನಿಕ ಒಳನೋಟವನ್ನು ದಾಖಲಿಸುತ್ತದೆ; ರಂಗದ ಮೇಲಾಗುವ ಯುದ್ಧ, ಭೀಮ-ದುರ್ಯೋಧನರ ಗದಾಯುದ್ಧದ ಹಿನ್ನೆಲೆಯಲ್ಲಿ, ಯಕ್ಷಗಾನದ ಪಾತ್ರಧಾರಿಯೊಬ್ಬರು ಮತ್ತೊಬ್ಬರ ಪತ್ನಿಯೊಡನೆ ಸಂಬಂಧವನ್ನಿಟ್ಟುಕೊಂಡಿದ್ದರೂ ಅನಂತರ ಅವಳು ಹುಚ್ಚಿಯಾಗಿ ಬೀದಿಬೀದಿ ಅಲೆಯುವಂತೆ ಮಾಡಿದುದಕ್ಕಾಗಿ ತಕ್ಕ ಶಿಕ್ಷೆ ಅನುಭವಿಸುವುದನ್ನು ನಾಟ್ಯೀಕರಿಸುತ್ತದೆ.

ಎರಡನೆಯ ವರ್ಗದಲ್ಲಿ ಮಹಾಬಲ ಮೂರ್ತಿಗಳ ಅನೇಕ ಸಫಲ ಕಥೆಗಳು ಬರುತ್ತವೆ; ಮಾನವ ಸಂಬಂಧಗಳನ್ನು ಆಳವಾಗಿ ಶೋಧಿಸುತ್ತವೆ: ವಿಧುರ ವೃದ್ಧರೊಬ್ಬರು ಸ್ತ್ರೀಯೊಬ್ಬಳೊಡನೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ, ಗಾಢ ಸಂಬಂಧವನ್ನಿಟ್ಟುಕೊಂಡಿದ್ದರೂ ಅವಳು ಸಮಾಜದ ದೃಷ್ಟಿಯಲ್ಲಿ ‘ಇಟ್ಟುಕೊಂಡವಳೇ’ ಆಗಿರುವುದರಿಂದ ಅವರಿಬ್ಬರ ನಡುವಿನ ‘ತಳಹದಿಯೇ ಇಲ್ಲದ ಸಂಬಂಧ’ (“ತೆರೆದುಕೊಳ್ಳುವ ಲೋಕ”); ಇಂದ್ರ-ಗೌತಮ-ಅಹಲ್ಯೆಯರ ಸಂಬಂಧವನ್ನು ಸೂಚಿಸುವ, ನಿರೂಪಕ-ಬಾಲಕನಿಗೆ ಅರ್ಥವೇ ಆಗದ, ಸಾಧುವೊಬ್ಬನಿಗೆ ತನ್ನ ತಾಯಿಯೊಡನೆ ಇದ್ದಿರಬಹುದಾದ ಸಂಬಂಧ (“ಸೆಳೆ”); ಇತ್ಯಾದಿ. ಈ ವರ್ಗದ ಪ್ರಾತಿನಿಧಿಕ ಕಥೆಗಳೆಂದರೆ “ ಅವನ ಜಗತ್ತಿನ ಹಗಲು” ಮತ್ತು “ಇರುಳು ಮತ್ತು ಮುದುಕ.”

ಉತ್ತಮ ಪುರುಷ ನಿರೂಪಣೆಯಿರುವ ಮೊದಲ ಕಥೆಯಲ್ಲಿ ನಿರೂಪಕನು ಬೆಳಿಗ್ಗೆ ವಾಕ್ ಮಾಡಲು ಹೋಗುವಾಗ, ಸರ್ಕಲ್ ಬಳಿ, ಹಳೆ ಅಲ್ಯೂಮಿನಿಯಮ್ ಪಾತ್ರೆಗಳು, ಪಂಪ್ ಸ್ಟವ್, ಇತ್ಯಾದಿಗಳೊಡನೆ ಬಂದು, ಚಹಾ ಮಾಡಲು ಪ್ರಾರಂಭಿಸುವ ಬಬ್ಲು ಎಂಬ ಹುಡುಗನನ್ನು ಪ್ರತಿದಿನವೂ ನೋಡುತ್ತಾನೆ. ಬಬ್ಲು ಬಂದ ಸ್ವಲ್ಪ ಹೊತ್ತಿನಲ್ಲಿಯೇ ನಡು ವಯಸ್ಸಿನವನೊಬ್ಬನು ಅಲ್ಲಿಗೆ ಬಂದು ಬಬ್ಲುಗೆ ಸಹಾಯ ಮಾಡುತ್ತಾನೆ. ಇವರಿಬ್ಬರೂ ಸೇರಿ, ತಮ್ಮ ಜಂಗಮ ಟೀಸ್ಟಾಲ್‌ನಲ್ಲಿ ಕಾಫ಼ಿ, ಟೀ, ಬ್ರೆಡ್ ಸ್ಲೈಸ್, ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ. ಐದು ಘಂಟೆಗೆ ಪ್ರಾರಂಭವಾಗುವ ಈ ಟೀ ಸ್ಟಾಲ್ ಎಳು ಘಂಟೆಯ ಹೊತ್ತಿಗೆ ಏನೂ ಇಲ್ಲವಾಗುತ್ತದೆ –ಬಬ್ಲು ಮತ್ತವನ ಸಂಗಡಿಗರು ಎಲ್ಲವನ್ನೂ ತಮ್ಮ ಸೈಕಲ್ಲಿಗೇರಿಸಿ, ಮಾಯವಾಗುತ್ತಾರೆ. ಇವನ ಬದುಕಿನ ಬಗ್ಗೆ ನಿರೂಪಕನು ವಿಚಾರಿಸಿದಾಗ ತಿಳಿದುದು ಆ ನಡು ವಯಸ್ಸಿನವನಿಗೂ ಬಬ್ಲೂಗೂ ಏನೂ ಸಂಬಂಧವಿಲ್ಲ; ಮತ್ತು ಒಬ್ಬರೊಬ್ಬರ ಪರಿಚಯವೂ ಅಷ್ಟಾಗಿ ಇಬ್ಬರಿಗೂ ಇಲ್ಲ. ರೇಲ್ವೇ ಸ್ಟೇಶನ್ ಬಳಿ ಅವರು ಭೇಟಿಯಾಗಿ, ಅನಂತರ ಜೊತೆಯಾಗಿ ಈ ವ್ಯಾಪಾರವನ್ನು ನಡೆಸಲು ನಿರ್ಧರಿಸಿರುತ್ತಾರೆ. ಅಷ್ಟೇ ಅಲ್ಲದೆ, ಬಬ್ಲುವಿನ ತಂದೆ-ತಾಯಿಯರು ಯಾರೋ ಗೊತ್ತಿಲ್ಲ. ಅವನೊಬ್ಬ ಅನಾಥ ಮತ್ತು ಅವನ ಒಂದು ಕಣ್ಣೂ ಕೂಡ ಕುರುಡಾಗಿದೆ. ಹೀಗಿದ್ದರೂ, ಸದಾ ಹಸನ್ಮುಖಿಯಾಗಿ, ತನ್ನ ಪಾಲಿಗೆ ಬಂದ ಬದುಕನ್ನು ಪ್ರಾಮಾಣಿಕತೆಯಿಂದ ಬದುಕುತ್ತಿರುವ ಬಬ್ಲುವನ್ನು ನೋಡಿ ನಿರೂಪಕನಿಗೇ ಒಂದು ಬಗೆಯ ಕೀಳರಿಮೆಯುಂಟಾಗುತ್ತದೆ. ಕಾಳ ಕತ್ತಲೆಯಲ್ಲಿಯೂ ಹಗಲನ್ನು ಕಾಣಬಲ್ಲ, ಸೃಷ್ಟಿಸಬಲ್ಲ ಬಬ್ಲು ಮತ್ತು ಅವನ ಸಂಗಾತಿಯ ಅಗಾಧ ಜೀವನಪ್ರೀತಿಯನ್ನು ಈ ಕಥೆ ಪರಿಣಾಮಕಾರಿಯಾಗಿ ಆದರೆ ಭಾವಾವೇಶಕ್ಕೆ ತುತ್ತಾಗದೆ ಚಿತ್ರಿಸುತ್ತದೆ.

“ಇರುಳು ಮತ್ತು ಮುದುಕ” ಕಥೆಯೂ ಇಂತಹುದೇ ಜೀವನಪ್ರೀತಿಯನ್ನು, ವ್ಯಕ್ತಿಗಳ ನಡುವೆ ಅನಿರೀಕ್ಷಿತವಾಗಿ ಬೆಳೆಯುವ ಯಾದೃಚ್ಛಿಕ ಸಂಬಂಧಗಳನ್ನು, ಅರ್ಥಪೂರ್ಣವಾಗಿ ದಾಖಲಿಸುತ್ತದೆ. ಅಹಮದಾಬಾದಿನಲ್ಲಾದ ಭೂಕಂಪದಲ್ಲಿ ತಾನು ತುಂಬಾ ಪ್ರೀತಿಸುತ್ತಿದ್ದ ತನ್ನ ಮೊಮ್ಮಗಳೂ ಸೇರಿದಂತೆ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡ ಮುದುಕನೊಬ್ಬನು ಒಂದು ಅಪರಿಚಿತ ಊರಿಗೆ ಹೋಗಿ, ಲಾಜಿಂಗ್‌ನಲ್ಲಿ ಒಂದು ಕೋಣೆ ಹಿಡಿದು, ಯಾರ ಸಂಬಂಧವೂ ಇಲ್ಲದೆ ಅನಾಮಿಕನಾಗಿರಲು ತೊಡಗುತ್ತಾನೆ. ಆದರೆ, ನಿಧಾನವಾಗಿ, ಆ ಲಾಜಿಂಗ್ ತೋರಿಸಿದ ಹುಡುಗ, ತನಗೆ ಯಾವಾಗಲೂ ಸರ್ವ್ ಮಾಡುವ ಬಾರ್ ವೇಟರ್, ಇತ್ಯಾದಿ ಕೆಲವರು ಇವನಿಗೆ ಹತ್ತಿರವಾಗುತ್ತಾರೆ. ಕೊನೆಗೆ, ಒಂದು ದಿನ, ತನ್ನ ಅಜ್ಜನನ್ನು ಕಳೆದುಕೊಂಡ ತನ್ನ ಮಗಳ ಜನ್ಮದಿನಕ್ಕೆ ಆ ವೇಟರ್ ಮುದುಕನನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಾನೆ. ಅಲ್ಲಿ, ಇವನನ್ನು ನೋಡಿದ ಕೂಡಲೇ ‘ತಾತಾ’ ಎಂದು ಕೂಗುತ್ತಾ ಓಡಿಬರುವ ಹುಡುಗಿ ಇವನಿಗೆ ತನ್ನ ಮೊಮ್ಮಗಳೇ ಆಗಿ ಕಾಣುತ್ತಾಳೆ. ‘No man is an island unto himself’ ಎಂದು ಡನ್ ಹೇಳುವ ಹಾಗೆ, ಯಾರೂ ಈ ಜಗತ್ತಿನಲ್ಲಿ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಮನ ಕಲಕುವಂತೆ ಈ ಕಥೆ ಚಿತ್ರಿಸುತ್ತದೆ.

ಈ ವರ್ಗದಲ್ಲಿ ಬರುವ, ಮಾನವರ ನಡುವೆ ಬೆಳೆಯುವ/ ಕಳೆದುಹೋಗುವ ಸಂಬಂಧಗಳನ್ನು ಚಿತ್ರಿಸುವ ಕಥೆಗಳನ್ನು ಓದುವಾಗ, ಈ ನೆಲೆಯಲ್ಲಿಯೇ ರಾಮನು (ವಾಲ್ಮೀಕಿ ರಾಮಾಯಣದಲ್ಲಿ) ಭರತನಿಗೆ ಹೇಳುವ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ: “ಯಥಾ ಕಾಷ್ಠಂಚ ಕಾಷ್ಠಂಚ ಸಮೇಯಾತಾಂ ಮಹಾರ್ಣವೇ | ಸಮೇತ್ಯಚ ವ್ಯಪೇಯಾಚಾಂ ಕಾಲಮಾಸಾದ್ಯ ಕಂಚನ ||” (ಸಾಗರದ ನೀರಿನಲ್ಲಿ ಎರಡು ಮರದ ತುಂಡುಗಳು ಅಕಸ್ಮಾತ್ತಾಗಿ ಸಂಧಿಸುತ್ತವೆ; ಕೆಲ ಕಾಲ ಒಟ್ಟಿಗೇ ತೇಲುತ್ತವೆ; ಅನಂತರ ಬೇರೆಯಾಗುತ್ತವೆ.)

“ಮಂಥನ,” “ಪ್ರಾಪ್ತಿ,” “ಗ್ರಹಣ,” ಇತ್ಯಾದಿ ಬದುಕಿನ ನಿಗೂಢತೆಯನ್ನು ಶೋಧಿಸುವ ಅನೇಕ ಯಶಸ್ವಿ ಕಥೆಗಳು ಮೂರನೆಯ ವರ್ಗದಲ್ಲಿ ಬರುತ್ತವೆ. ಈ ಕಥೆಗಳು ಎತ್ತುವ ಹಾಗೂ ಪರೀಕ್ಷಿಸುವ ಒಂದು ಸಮಾನ ಪ್ರಶ್ನೆಯೆಂದರೆ ‘ಮಾನವ ಬದುಕು ಸಂಪೂರ್ಣವಾಗಿ ಪೂರ್ವನಿಶ್ಚಿತವೆ? ಭವಿಷ್ಯವನ್ನು ಹೇಳುವ ಜಾತಕಗಳು, ಹಸ್ತ ಸಾಮುದ್ರಿಕ, ಇತ್ಯಾದಿಗಳು ಎಷ್ಟು ವಿಶ್ವಸನೀಯ?

ಯಾವ ವೈದ್ಯ-ಪಂಡಿತರ ಚಿಕಿತ್ಸೆಗೂ ಬಗ್ಗದ ಶ್ವಾಸಕೋಶದ ಕಾಯಿಲೆಗಳಿಂದ ನರಳುತ್ತಿರುವ ಮಗನ ತಂದೆತಾಯಿಗಳು ಕೊನೆಗೆ, ಅನೇಕರು ಹೇಳುವಂತೆ, ಗಿಣಿವೀಣೆಪುರಕ್ಕೆ ಹೋಗಿ, ಅಗೋಚರ ಶಕ್ತಿಗಳನ್ನು ಕರಗತಗೊಳಿಸಿಕೊಂಡಿರುವ ಅಲ್ಲಿಯ ಶಾಸ್ತ್ರಿಗಳನ್ನು ಒಮ್ಮೆ ಭೇಟಿ ಮಾಡಲು ನಿರ್ಧರಿಸುತ್ತಾರೆ. ಹಾಗೆಯೇ, ಒಂದು ದಿನ ಆ ಊರಿಗೆ ಹೋಗಿ, ಶಾಸ್ತ್ರಿಗಳನ್ನು ಕಂಡು ತನ್ನ ಮಗನ ದುರವಸ್ಥೆಯನ್ನು ನಿರೂಪಕನು (ತಂದೆ) ವಿವರಿಸಿದಾಗ, ಶಾಸ್ತ್ರಿಗಳು ಅವನನ್ನು ಒಂದೆಡೆ ಕೂರಿಸಿ (ಪ್ರಾಯಃ ಔಷಧವನ್ನು ತರಲು) ಒಳಗೆ ಹೋಗುತ್ತಾರೆ. ಎಷ್ಟು ಹೊತ್ತಾದರೂ ಅವರು ಹೊರಗೆ ಬರದಿರುವುದನ್ನು ಕಂಡು ನಿರೂಪಕನೇ ಒಳಗೆ ಹೋಗಿ ನೋಡಿದಾಗ, ಇದ್ದಕ್ಕಿದ್ದಂತೆ ಶಾಸ್ತ್ರಿಗಳು ಮರಣಹೊಂದಿರುವುದು ಗೊತ್ತಾಗುತ್ತದೆ. “ಪ್ರಾಪ್ತಿ” ಎಂಬ ಕಥೆಯೂ ಇದೇ ನೆಲೆಯಲ್ಲಿ ಸಾಗುತ್ತದೆ. ಆದಿತ್ಯನೆಂಬ ನಿರುದ್ಯೋಗಿ ತರುಣ ಜ್ಯೋತಿಶ್ಶಾಸ್ತ್ರದಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿರುತ್ತಾನೆ; ಆದರೆ, ಅವನಿಗೆ ಆ ಶಾಸ್ತ್ರದಲ್ಲಿ ನಂಬಿಕೆಯಿಲ್ಲ. ಅಕಸ್ಮಾತ್ತಾಗಿ ಅವನಿಗೆ ಸಿಗುವ ಶರ್ಮ ಈ ಶಾಸ್ತ್ರವನ್ನು ಸಂಪೂರ್ಣವಾಗಿ ನಂಬುತ್ತಾನೆ; ಮತ್ತು ಸದ್ಯ (ಕಥೆ ನಡೆಯುವ ಸಂದರ್ಭದಲ್ಲಿ) ಅವನಿಗೆ ಮೃತ್ಯುದಾಯಕ ಕಂಟಕವಿದೆ ಎಂದು ಅವನು ಹೆದರಿದ್ದಾನೆ. ಶರ್ಮನನ್ನು ಭೇಟಿ ಮಾಡಲು ದೆಹಲಿಗೆ ಹೋಗುವ ಅದಿತ್ಯನಿಗೆ ಶರ್ಮನ ಭೇಟಿ ಸಾಧ್ಯವಾಗುವುದಿಲ್ಲ; ಅವನ ಕುಂಡಲಿ ಹೇಳುವಂತೆಯೇ ಶರ್ಮ ದೆಹಲಿಗೆ ಬರುತ್ತಿರುವಾಗ ಅಪಘಾತದಲ್ಲಿ ಸಿಕ್ಕಿ ಸಾಯುತ್ತಾನೆ. ಆದರೆ, ಅದೇ ಶಾಸ್ತ್ರವು ಹೇಳುವ ರಾಜಯೋಗ ಆದಿತ್ಯನಿಗೆ ಲಭಿಸುವುದೇ ಇಲ್ಲ. “ಗ್ರಹಣ” ಎಂಬ ಕಥೆಯೂ ಇದೇ ಪ್ರಶ್ನೆಯನ್ನೆತ್ತುತ್ತದೆ. ಗ್ರಹಣ ಕಾಲದಲ್ಲಿ ಯಾವ ಕೆಲಸವನ್ನೂ ಮಾಡಬಾರದೆಂದು ಹೆಚ್ಚಿನವರು ನಂಬುವಾಗ ಜಯರಾಮನೆಂಬ ಎಂಜಿನಿಯರ್ ತನ್ನ ಬಾಸ್‌ನೊಡನೆ ಮುಖ್ಯ ವಿಚಾರಗಳನ್ನು ಚರ್ಚಿಸಲು ಅದೇ ಕಾಲದಲ್ಲಿ ಹೋಗುತ್ತಾನೆ. ಆದರೆ, ಮೀಟಿಂಗ್ ನಡೆಯಬೇಕಾದ ಸಮಯದಲ್ಲಿಯೇ ಬಾಸ್‌ನ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರುತ್ತಾರೆ; ಇದೇ ಸಮಯದಲ್ಲಿಯೇ, ಗ್ರಹಣದ ಪರಿವೆಯೂ ಇಲ್ಲದ, ತರುಣಿಯೊಬ್ಬಳು ಆ ಕಟ್ಟಡದ ಗಾರ್ಡ್‌ನೊಡನೆ ರಮಿಸುತ್ತಾ ಸುಖವಾಗಿರುತ್ತಾಳೆ.

ತನ್ನ ಅಗೋಚರ ಶಕ್ತಿಯಿಂದ ಇತರರನ್ನು ಗುಣಪಡಿಸುವ ಶಾಸ್ತ್ರಿಗಳಿಗೆ ತಮ್ಮದೇ ಸಾವು ಹಠಾತ್ತನೆ ಬರುತ್ತದೆ; ಕುಂಡಲಿ ಹೇಳುವಂತೆಯೇ ಕಂಟಕದಿಂದ ಶರ್ಮನು ಸತ್ತರೆ ಅದೇ ಕುಂಡಲಿ ಹೇಳುವ ರಾಜಯೋಗ ಎಂದಿಗೂ ಆದಿತ್ಯನಿಗೆ ಬರುವುದಿಲ್ಲ; ಗ್ರಹಣಫಲದಿಂದ ಒಂದೆಡೆ ಒಬ್ಬರು ಆಸ್ಪತ್ರೆ ಸೇರಿದರೆ, ಮತ್ತೊಬ್ಬರ ಕಾಮತೃಪ್ತಿಗೆ ಯಾವ ಗ್ರಹಣವೂ ಅಡ್ಡಿಪಡಿಸುವುದಿಲ್ಲ. ವಿಧಿಯನ್ನು ನಂಬಿದರೆ ಮನುಷ್ಯಪ್ರಯತ್ನಕ್ಕೆ ಯಾವ ಸ್ಥಾನವೂ ಇಲ್ಲ; ಮನುಷ್ಯಪ್ರಯತ್ನವನ್ನು ನಂಬಿದರೆ, ಅನೇಕ ಸಂದರ್ಭಗಳಲ್ಲಿ ಆ ಪ್ರಯತ್ನಕ್ಕೆ ಯಾವ ಫಲವೂ ದೊರಕುವುದಿಲ್ಲ. ಪ್ರಾಯಃ ಬದುಕು ಎಂದೂ ಅರ್ಥ ಮಾಡಿಕೊಳ್ಳಲಾಗದ ಒಂದು ಅನೂಹ್ಯ ಸಂಗತಿ ಎಂಬುದು ಕತೆಗಾರರ ನಿಲುವೆಂದು ತೋರುತ್ತದೆ.

ಕೊನೆಯದಾಗಿ, ಈ ಸಂಕಲನದ ಕೊನೆಯ ಹಾಗೂ ದೀರ್ಘ ಕಥೆ “ಕಮಂಡಲು ತೀರ್ಥ.” ಬ್ಯಾಂಕಿನಲ್ಲಿ ಅಧಿಕಾರಿಯಾಗಿರುವ ಧನಂಜಯ ತನ್ನ ಪತ್ನಿಯ ಅಕಾಲ ಮರಣದಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ತನ್ನ ಚಿಕ್ಕ ಮಗನಿಗೆ ಬೇಕಾದ ಆರ್ಥಿಕ ಸುಭದ್ರತೆಯನ್ನು ಕಲ್ಪಿಸಿ, ವೈರಾಗ್ಯವನ್ನು ಸ್ವೀಕರಿಸಿ, ಕೂರ್ಮ ಪರ್ವತ ಎಂಬ ಪ್ರದೇಶದಲ್ಲಿ ಕಮಂಡಲು ತೀರ್ಥವೆಂಬ ಸ್ಥಳದಲ್ಲಿ ಒಂದು ಕುಟೀರವನ್ನು ಕಟ್ಟಿಕೊಂಡು ಸಾಧನೆಗೆ ತೊಡಗುತ್ತಾನೆ. ಒಮ್ಮೆ, ಅಕಸ್ಮಾತ್ತಾಗಿ ಅಲ್ಲಿ ಮಿಮಿ ಎಂಬ ಹೆಸರಿನ ಬ್ರಜ಼ಿಲ್ ದೇಶದ ಸುಂದರಿ ಕಣ್ಣಿಗೆ ಬೀಳುತ್ತಾಳೆ; ಅವಳ ಅನ್ಯಾದೃಶ ಚೆಲುವು ಮತ್ತು ಮಿಂಚುವ ತಾರುಣ್ಯ ಅವನ ಲಕ್ಷ್ಯವನ್ನು ಸೆಳೆಯುತ್ತದೆ. ಅಲ್ಲಿರುವ ಮತ್ತೊಬ್ಬನಿಂದ ಅವಳೂ ಹತ್ತಿರದಲ್ಲಿಯೇ ಇದ್ದಾಳೆಂದೂ, ಅವಳಿಗೆ ಭಾರತದ ಆಧ್ಯಾತ್ಮಿಕತೆಯ ಬಗ್ಗೆ ಕುತೂಹಲವಿದೆಯೆಂದೂ ತಿಳಿದು ಅವಳ ಬಗ್ಗೆ ಅವನ ಆಸಕ್ತಿ ವೃದ್ಧಿಸುತ್ತದೆ; ಒಂದು ಸಂದರ್ಭದಲ್ಲಿ ಅವಳ ನಗ್ನ ದೇಹವು ಅವನಿಗೆ ಕಾಣಿಸಿದಾಗ ‘ಭಗವತ್ಸ್ವರೂಪಿಣಿ, ಮಾಯಾವಿನಿ, ಕಾಮಿನಿ, ದೇವಾಂಗನೆ’ — ಹೀಗೆ ಹಲವು ಹತ್ತು ರೂಪುಗಳಲ್ಲಿ ಅವಳು ಕಾಣುತ್ತಾಳೆ ಮತ್ತು ಅವನ ಮನದಾಳದಲ್ಲಿ ಹುದುಗಿದ್ದ ಕಾಮನೆಗಳೆಲ್ಲಾ ಭುಗಿಲೆದ್ದು ಅವನನ್ನು ಅಸ್ವಸ್ಥಗೊಳಿಸುತ್ತವೆ. ಒಂದು ಬೆಳದಿಂಗಳಿನ ರಾತ್ರಿಯಲ್ಲಿ ಅವಳನ್ನು ನೋಡಲೇಬೇಕೆಂಬ ಒತ್ತಡದಿಂದ ಅವಳ ಗುಡಿಸಲ ಬಳಿ ಧನಂಜಯ ಹೋಗುತ್ತಾನೆ. ಅಲ್ಲಿ ಒಳಗೆ ದೀಪವಿದ್ದರೂ ಬಾಗಿಲು ಹಾಕಿರುವುದರಿಂದ ಆ ಗುಡಿಸಲಿನ ಚಿಕ್ಕ ಕಂಡಿಯ ಮೂಲಕ ಇಣಿಕಿ ನೋಡುತ್ತಾನೆ — ಒಳಗೆ, ಒಬ್ಬ ಮುದುಕ ತೆಳ್ಳನೆಯ ಪಾಲಿಥೀನ್ ಕವರುಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ, ಆ ಚಿಕ್ಕ ಪೊಟ್ಟಣಗಳನ್ನು ಎದುರಿಗೆ ನಗ್ನ ದೇವತೆಯಂತೆ ನಿಂತಿದ್ದ ಆ ಪ್ರಮದೆಯ ಯೋನಿಯೊಳಗೆ ಮತ್ತು ನಗ್ನನಾಗಿದ್ದ ಪುರುಷನ ಗುದದೊಳಗೆ ತುಂಬುತ್ತಿರುತ್ತಾನೆ. ಧನಂಜಯನಿಗೆ “ಕಮಂಡಲ ತೀರ್ಥದಲ್ಲೀಗ ಸುಡುತ್ತಿರುವ ತನ್ನ ದೇಹದ ಸದ್ಯದ ಹೊಲಸನ್ನು ತೊಳೆದು ತಂಪಾಗಬೇಕೆನ್ನಿಸಿತು”; ಶಬ್ದವೇ ಆಗದಂತೆ ಉಸುಕಿನಲ್ಲಿ ಹೆಜ್ಜೆಯಿಡುತ್ತಾ ಅವನು ತನ್ನ ಕುಟೀರಕ್ಕೆ ಮರಳುತ್ತಾನೆ.

ಸುಲಭವಾಗಿ ಒಂದು ರೋಚಕ ಕ್ರೈಮ್ ಥ್ರಿಲರ್ ಆಗಬಹುದಿದ್ದ, ಅಥವಾ ಆಧುನಿಕ ಬದುಕಿನಲ್ಲಿ ನೈತಿಕ ಅಧಃಪತನವನ್ನು ಕುರಿತ ಭಾವುಕ ಕಥೆಯಾಗಬಹುದಾಗಿದ್ದ “ಕಮಂಡಲು ತೀರ್ಥ” ತನ್ನ ಜಟಿಲ ಹೆಣಿಗೆಯಿಂದ ಕಾಡುವ ಗಾಢ ವಿಷಾದದ ಕಥೆಯಾಗುತ್ತದೆ. ಕತೆಗಾರನಿಗೆ ಮುಖ್ಯವಾಗುವುದು ಮಿಮಿ ಮತ್ತು ಅವಳ ಗೆಳೆಯರಿಂದಾಗುವ ಕಳ್ಳ ಸಾಗಾಣಿಕೆಯಲ್ಲ, ಅವಳ ಅನೈತಿಕ ವರ್ತನೆಯೂ ಅಲ್ಲ; ಬದಲಿಗೆ, “ಹೆಣ್ಣಾಗಿಯೂ ಮಿಮಿ ತನ್ನ ಮೇಲೇ ತಾನು ನಡೆಸಿಕೊಂಡ ಅತ್ಯಾಚಾರ” ಮತ್ತು ಇಂತಹ ಬದುಕಿಗೆ ಕಾರಣವಾದ “ದೈವಚಿತ್ತದ ಕ್ರೌರ್ಯ.” ಇಡೀ ಕಥೆ ಪರಸ್ಪರ ವಿರುದ್ಧಾಂಶಗಳಿಂದ ರೂಪುಗೊಂಡಿದೆ: ಧನಂಜಯನ ವೈರಾಗ್ಯ ಮತ್ತು ಮಿಮಿಯ ಲೌಕಿಕ ಕಾಮನೆಗಳು, ಪಾವಿತ್ರ್ಯಕ್ಕೆ ಸಂಕೇತವಾದ ಅಗಸ್ತ್ಯ-ಲೋಪಾಮುದ್ರೆಯರ ಪ್ರಾಚೀನ ಪುರಾಣ ಮತ್ತು ಕಳ್ಳಸಾಗಾಣಿಕೆಯೇ ಬದುಕಿನ ಉದ್ದೇಶವಾದ ಮಿಮಿ-ಫಿಲಿಪ್ ಕಥೆ, ಸೌಂದರ್ಯ ಮತ್ತು ಅದರ ಭೀಭತ್ಸ ಉಪಯೋಗ –ಇತ್ಯಾದಿಗಳೆಲ್ಲವೂ ಹೆಣೆದುಕೊಂಡು ಒಂದು ಬಗೆಯ ಗಾಢ ವಿಷಾದವನ್ನು ಸೃಜಿಸುತ್ತಾ, ಈ ಸಂಕಲನದ ಅತ್ಯುತ್ತಮ ಕಥೆಯನ್ನು ಕಟ್ಟಿಕೊಡುತ್ತವೆ.

ಯಕ್ಷಗಾನದ ಹಿನ್ನೆಲೆಯಿರುವ ಮಹಾಬಲ ಮೂರ್ತಿಗಳಿಗೆ ಕಥೆಯನ್ನು ಸ್ವಾರಸ್ಯಕರವಾಗಿ ನಿರೂಪಿಸುವ ಕೌಶಲ್ಯವಿದೆ; ಭಾಷೆಯನ್ನು ಧ್ವನಿಪೂರ್ವಕವಾಗಿ ಉಪಯೋಗಿಸುವ ಸಾಮರ್ಥ್ಯವಿದೆ; ಎಲ್ಲದಕ್ಕಿಂತ ಹೆಚ್ಚಾಗಿ, ಸುಲಭ ತೀರ್ಮಾನಗಳ ಮೋಹಕ್ಕೆ ಪಕ್ಕಾಗದ ವೈಚಾರಿಕ ಪ್ರಬುದ್ಧತೆಯಿದೆ.