‘ನವ್ಯೋತ್ತರ’ ಎಂಬ ಪ್ರಯೋಗ ತುಂಬಾ ಸಮಸ್ಯಾತ್ಮಕವಾದದ್ದು. ನಾನು ಇದನ್ನು ‘ಪೊಸ್ಟ್ ಮಾಡರ್ನಿಸ್ಮ್’ ಎಂಬುದಕ್ಕೆ ಸಂವಾದಿಯಾಗಿ ಉಪಯೋಗಿಸುತ್ತಿಲ್ಲ. ಕಳೆದ ಶತಮಾನದ ೮೦ರ ದಶಕದಲ್ಲಿ ತಮ್ಮ ಮೊದಲ ಕಥಾಸಂಕಲನಗಳನ್ನು ಪ್ರಕಟಿಸಿದ ಹಾಗೂ ದಲಿತ-ಬಂಡಾಯ ಚಳುವಳಿಯಲ್ಲಿ ನೇರವಾಗಿ ತಮ್ಮನ್ನು ಗುರುತಿಸಿಕೊಳ್ಳದ ಲೇಖಕರನ್ನು ನಿರ್ದೇಶಿಸಲು, ಎಂದರೆ ಕೇವಲ ಕಾಲವನ್ನು ಸೂಚಿಸಲು, ನಾನು ‘ನವ್ಯೋತ್ತರ’ ಎಂಬ ಪದವನ್ನು ಉಪಯೋಗಿಸಿದ್ದೇನೆ. ಹಾಗೆಯೇ, ಇದು ಸಮೀಕ್ಷಾ ಲೇಖನವೂ ಅಲ್ಲ. ನವ್ಯೋತ್ತರ ಎಂಬ ಗುಂಪಿನಲ್ಲಿ ಅಶೋಕ ಹೆಗಡೆ, ಶ್ರೀಧರ ಬಳಗಾರ್, ವಸುಧೇಂದ್ರ, ಸುನಂದಾ ಕಡಮೆ, ಮಿತ್ರಾ ವೆಂಕಟರಾಜ್, ಸಚ್ಚಿದಾನಂದ ಹೆಗಡೆ, ಇತ್ಯಾದಿ ಇನ್ನೂ ಅನೇಕ ಉತ್ತಮ ಕತೆಗಾರರಿದ್ದಾರೆ ಎಂಬ ಅರಿವು ನನಗಿದೆ. ವಿಶಿಷ್ಟ ಸಂದರ್ಭಗಳಲ್ಲಿ ನಾನು ಬರೆದ ಕೆಲವು ಕಿರು ಲೇಖನಗಳನ್ನು ಮಾತ್ರ ಇಲ್ಲಿ ಸೇರಿಸಿದ್ದೇನೆ;

ರಾಘವೇಂದ್ರ ಖಾಸನೀಸ:

“‘ತಬ್ಬಲಿಗಳು’ ನನಗೆ ತುಂಬಾ ತೃಪ್ತಿ ಕೊಟ್ಟ ಕಥೆ. ಮಾನಸಿಕವಾಗಿ ಬಹಳೇ ಸೋತು ಹೋಗಿದ್ದ ಕಾಲದಲ್ಲಿ, ಅತೀ ನಿಕಟವಾದ ಮಾನವೀಯ ಸಂಬಂಧಗಳು ಕೂಡಾ ಬರೀ ಅನುಕೂಲ ಸಿಂಧುವಿನ ಹೊಂದಾಣಿಕೆ ಮಾತ್ರ ಎನ್ನುವ ಕ್ರೂರ ಸತ್ಯ ಅರಿವಾದಾಗ ನಾನು ಬರೆದ ಕಥೆ ಅದು. ಅಲ್ಲಿಯ ಅನಾಥತನ ಪೂರ್ಣ ವೈಯಕ್ತಿಕವಾದದ್ದು” — ಎಂದು ಒಂದು ಸಂದರ್ಭದಲ್ಲಿ ಖಾಸನೀಸರು ತಮ್ಮ ಪ್ರಸಿದ್ಧ ಕಥೆಯ ಬಗ್ಗೆ ಹೇಳಿದ್ದರು. ‘ಬದುಕಿನಲ್ಲಿ ಮಾನಸಿಕವಾಗಿ ಬಹಳ ಸೋತು ಹೋಗಲು’ ದುರದೃಷ್ಟವಶಾತ್ ಖಾಸನೀಸರಿಗೆ ಅನೇಕ ಕಾರಣಗಳಿದ್ದುವು.

ಬಿಜಾಪುರ ಜಿಲ್ಲೆಯ ಇಂಡಿ ಗ್ರಾಮದಲ್ಲಿ ೧೯೩೩ರಲ್ಲಿ ಜನಿಸಿದ ಖಾಸನೀಸರು ಕರ್ನಾಟಕ ವಿ. ವಿ. ಯಿಂದ ಬಿ.ಎ. ಮತ್ತು ಮುಂಬಯಿ ವಿ. ವಿ. ಯಿಂದ ಎಂ. ಎ. ಪದವಿಗಳನ್ನು ಪಡೆದು, ನಂತರ ಲೈಬ್ರರಿ ಸೈನ್ಸ್ ವಿಷಯದಲ್ಲಿ ಡಿಪ್ಲೊಮಾ ಪಡೆದರು. ಸ್ವಲ್ಪ ಕಾಲ ಕರ್ನಾಟಕದ ಹೊರಗೆ ಕೆಲಸ ಮಾಡಿದ ಅವರು, ಅನಂತರ ಬೆಂಗಳೂರು ವಿ. ವಿ.ಯಲ್ಲಿ ಗ್ರಂಥಪಾಲರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧೯೯೧ರಲ್ಲಿ ನಿವೃತ್ತರಾದನಂತರ ಬೆಂಗಳೂರಿನಲ್ಲಿಯೇ ನೆಲೆಸಿದ ಅವರು ಕಳೆದ ಒಂದು ದಶಕದಿಂದ ಪಾರ್ಕಿನ್‌ಸನ್ ಖಾಯಿಲೆಯಿಂದ ಬಳಲುತ್ತಿದ್ದರು. ಇದರೊಡನೆಯೇ ಅವರ ಮಗ ಇದ್ದಕ್ಕಿದ್ದಂತೆಯೇ ಕಾಣೆಯಾದ ಚಿಂತೆಯೂ ಅವರನ್ನು ಕಾಡುತ್ತಿತ್ತು. ಕೊನೆಗೆ ಈ ನೋವಿನ ಬದುಕಿಗೆ ಮಾರ್ಚ್ ೧೯ರಂದು ತೆರೆ ಬಿದ್ದಿತು.

ಖಾಸನೀಸರ ಮೊದಲ ಕಥಾ ಸಂಕಲನ ಖಾಸನೀಸರ ಕಥೆಗಳು ೧೯೮೪ರಲ್ಲಿ ಪ್ರಕಟವಾಯಿತು. ಐದು ಕಥೆಗಳಿದ್ದ ಆ ಸಂಕಲನ ಕೂಡಲೇ ಪ್ರಸಿದ್ಧವಾಗಿ ಎಲ್ಲರ ಗಮನವನ್ನೂ ಸೆಳೆಯಿತು; ಮತ್ತು ಆ ವರ್ಷದ ಅಕಾಡೆಮಿಯ ಪ್ರಶಸ್ತಿಯೂ ಅದಕ್ಕೆ ಸಂದಿತು. ಅನಂತರ ಅವರ ಎರಡನೆಯ ಸಂಕಲನ ಬೇಡಿಕೊಂಡವರು ೧೯೮೯ರಲ್ಲಿ ಪ್ರಕಟವಾಯಿತು. ಅವರ ಎಲ್ಲಾ ಕಥೆಗಳೂ ಖಾಸನೀಸರ ಸಮಗ್ರ ಕಥೆಗಳು ಎಂಬ ಸಂಕಲನದಲ್ಲಿ ಸೇರಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ಅವರಿಗೆ ೧೯೯೫ರಲ್ಲಿ ಸಂದಿತು.

ಖಾಸನೀಸರ ಅನೇಕ ಕಥೆಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಡಾ. ವಿಕ್ರಮರಾಜ್ ಅರಸ್ ಅವರು ಸಂಪಾದಿಸಿರುವ An Anthology of Kannada Short Stories ಸಂಕಲನದಲ್ಲಿ ಖಾಸನೀಸರ “ತಬ್ಬಲಿಗಳು” ಕಥೆಯ ಅನುವಾದ (Orphans ಎಂಬ ಹೆಸರಿನಲ್ಲಿ) ಸೇರಿದೆ; ಮತ್ತು ಬೋಳುವಾರು ತಾವು ಸಂಪಾದಿಸಿರುವ ಶತಮಾನದ ಕಥೆಗಳು ಸಂಕಲನಕ್ಕಾಗಿ ಈ ಕಥೆಯನ್ನು ಆಯ್ಕೆ ಮಾಡಿದ್ದಾರೆ. “ಹೀಗೂ ಇರಬಹುದು” ಕಥೆ ‘ಕಥಾಲೋಕ’ ಎಂಬ ಹೆಸರಿನ ಮಾಲಿಕೆಯಲ್ಲಿ ಕಿರುತೆರೆಯ ಮೇಲೆ ಬಂದಿದೆ. ಗಿರೀಶ್ ಕಾರ್ನಾಡರು ಒಂದು ಸಂದರ್ಭದಲ್ಲಿ ಹೇಳಿದಂತೆ, “ತಬ್ಬಲಿಗಳು” ಕಥೆಯನ್ನು ಚಲನಚಿತ್ರವಾಗಿ ತಯಾರಿಸಲು ಅವರು ಮತ್ತು ಖಾಸನೀಸರೂ ಕೂಡಿಯೇ ತುಂಬಾ ಹಿಂದೆಯೇ ಸ್ಕ್ರಿಪ್ಟ್ ಕೂಡಾ ಸಿದ್ಧ ಪಡಿಸಿದ್ದರಂತೆ; ಕಾರಣಾಂತರಗಳಿಂದ ಇಲ್ಲಿಯವರೆಗೂ ಆ ಯೋಜನೆ ಕೈಗೂಡಿಲ್ಲ.

* * *

ನವ್ಯ ಕಥೆಗಾರರ ಸಾಲಿನಲ್ಲಿ ಖಾಸನೀಸರು ಬಂದರೂ ಅವರು ಇತರರಿಗಿಂತ ಭಿನ್ನವಾಗುವುದು ಅವರ ವಿಶಿಷ್ಟ ವಿಶ್ವದೃಷ್ಟಿಯ ನೆಲೆಯಲ್ಲಿ. ಖಾಸನೀಸರದು ‘ಆಯ್ಕೆಗಳೇ’ ಇಲ್ಲದ, ‘ಆಗುವಿಕೆ’ಯ ಸಾಧ್ಯತೆಯೇ ಇಲ್ಲದ, ಆಕಸ್ಮಿಕಗಳಿಂದ ತುಂಬಿದ ಲೋಕ. ಈ ಲೋಕದಲ್ಲಿ ಘಟಿಸುವುದೆಲ್ಲವೂ ‘ಪೂರ್ವನಿಯೋಜಿತ’ವಾದದ್ದು; ವ್ಯಕ್ತಿಯ ಇಷ್ಟಾನಿಷ್ಟಗಳಿಗೆ, ನಿರ್ಣಯಗಳಿಗೆ ಇಲ್ಲಿ ಯಾವ ಸ್ಥಾನವೂ ಇಲ್ಲ; ಇಲ್ಲಿರುವವರೆಲ್ಲರೂ ಅಸಂಗತ ಲೋಕದಲ್ಲಿ ಉಸಿರಾಡುವ ಶಪಿತ ವ್ಯಕ್ತಿಗಳು. ವಿಶ್ವವನ್ನು ಕುರಿತಾದ ಇಂತಹ ದುರಂತ ಪ್ರಜ್ಞೆ ಹೈಡೆಗರ್ ಮಂಡಿಸಿದ ‘ದಾಸೀನ್’ (Dassein) ಪರಿಕಲ್ಪನೆಗೆ ಹತ್ತಿರ ಬರುತ್ತದೆ; ಮತ್ತು ಖಾಸನೀಸರ ‘ಅಸಂಗತ ಲೋಕ’ ಕಾಫ಼್ಕಾನ ಲೋಕವನ್ನು ನೆನಪಿಗೆ ತರುತ್ತದೆ; ಎರಡೂ ಲೋಕಗಳಲ್ಲಿ ವ್ಯಕ್ತಿಗಳು ‘ಕಳೆದು ಹೋಗುತ್ತಾರೆ.’

ಈ ಅಮೂರ್ತ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಖಾಸನೀಸರ “ತಬ್ಬಲಿಗಳು” ಮತ್ತು “ ಅಲ್ಲಾಉದ್ದೀನನ ಅದ್ಭುತ ದೀಪ” ಎಂಬ ಎರಡು ಅತ್ಯಂತ ಯಶಸ್ವಿ ಕಥೆಗಳನ್ನು ನೋಡಬಹುದು. “ತಬ್ಬಲಿಗಳು” ಕಥೆಯಲ್ಲಿ ಬರುವ ಪಾತ್ರಗಳಿಗೆ ಹೆಸರೂ ಇಲ್ಲ: ತಾಯಿ, ತಂದೆ, ತಮ್ಮ ಮತ್ತು ತಂಗಿ — ಹೀಗೇ ಅವರುಗಳು ಗುರುತಿಸಲ್ಪಡುತ್ತಾರೆ. ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಹೊರಟಿರುವ ಇವರ ಪ್ರಯಾಣದೊಂದಿಗೆ ಪ್ರಾರಂಭವಾಗುವ ಈ ಕಥೆ, ನಿಧಾನವಾಗಿ ‘ತಾಯಿ,’ ‘ತಂದೆ’ ಇತ್ಯಾದಿ ಸಂಬಂಧಗಳು ಎಷ್ಟು ಕೃತಕ ಹಾಗೂ ಅರ್ಥಹೀನ, ಮತ್ತು ಒಟ್ಟಿಗಿದ್ದರೂ ಹೇಗೆ ಅವರೆಲ್ಲರೂ ಪರಸ್ಪರ ಅಪರಿಚಿತರು ಎಂಬ ಕಠೋರ ಸತ್ಯವನ್ನು ಅತ್ಯಂತ ಖಚಿತ ವಿವರಗಳೊಡನೆ ಚಿತ್ರಿಸುತ್ತದೆ. ಮಂತ್ರಾಲಯವನ್ನು ಸೇರಿದಾಗಿನಿಂದ ಇವರು ನಾಲ್ವರು ಯಾವಾಗಲೂ ಒಟ್ಟಿಗೆ ಇರಲು ಸಾಧ್ಯವಾಗುವುದೇ ಇಲ್ಲ: ಸಮಯ ಸಿಕ್ಕಿದಾಗಲೆಲ್ಲಾ ಅರೆ ಹುಚ್ಚಿಯಾದ ತಂಗಿ ಹೊಳೆಗೆ ಓಡಿಹೋಗುತ್ತಾಳೆ; ರಥೋತ್ಸವದ ಸಂದರ್ಭದಲ್ಲಿ ತಾಯಿ-ತಂದೆ-ತಮ್ಮ ಎಲ್ಲರೂ ಜನರ ನೂಕು ನುಗ್ಗಲಿನಲ್ಲಿ ಪರಸ್ಪರ ತಪ್ಪಿಸಿಕೊಳ್ಳುತ್ತಾರೆ: ತಾಯಿಗೆ ದೇವರ ದರ್ಶನವಾಗುವುದೇ ಇಲ್ಲ; ತಮ್ಮನಿಗೆ ಇಂತಹ ಆಚರಣೆಗಳಲ್ಲಿ ನಂಬಿಕೆಯಿಲ್ಲ; ತಂದೆಗೆ ಹಸಿವಿನ ಬಾಧೆ ತಾಳಲಾರದಷ್ಟಾಗುತ್ತದೆ; ಮತ್ತು ಎಲ್ಲರ ಮನಸ್ಸನ್ನೂ ಕಾಡುತ್ತಿರುವ (ಆದರೆ ವ್ಯಕ್ತಪಡಿಸಲಾಗದ) ಸಂಗತಿಯೆಂದರೆ ಅನೇಕ ವರ್ಷಗಳ ಹಿಂದೆ ಘಟಿಸಿ ಹೋದ ತಮ್ಮನ ಹೆಂಡತಿಯ ಅಕಾಲಿಕ ಆತ್ಮಹತ್ಯೆ. ಯಾವ ಕಾರಣಕ್ಕಾಗಿ ಅವಳು ರೈಲಿನ ಅಡಿ ಬಿದ್ದು ಸತ್ತಳು ಎಂಬುದು ಎಲ್ಲರಿಗೂ ನಿಗೂಢವಾಗಿಯೇ ಉಳಿಯುತ್ತದೆ. ಹೀಗೆ, ರಥೋತ್ಸವಕ್ಕಾಗಿ ಸೇರಿರುವ ಅಸಂಖ್ಯಾತ ಭಕ್ತರ ಮೈವಾಸನೆಗಳು, ಧೂಳು-ಗದ್ದಲ ಇವುಗಳ ನಡುವೆ ಒಬ್ಬರನ್ನು ಹುಡುಕುವ ಮತ್ತೊಬ್ಬರು ಮತ್ತು ಎಲ್ಲರೂ ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತಿರುವವರು — ಇಂತಹ ಅಸಂಗತ ಲೋಕದಲ್ಲಿ ಎಲ್ಲರೂ ‘ತಬ್ಬಲಿಗಳೇ’: “ ತಂದೆ, ತಾಯಿ, ತಂಗಿ ಹಾಗೂ ತಾನು ಇವರಲ್ಲಿ ಯಾರಿಗೂ ಪರಸ್ಪರ ಸಂಬಂಧವೇ ಇಲ್ಲ, ಅನಿವಾರ್ಯವಾಗಿ ಒಬ್ಬರು ಇನ್ನೊಬ್ಬರನ್ನು ನಂಬಿ, ಅವಲಂಬಿಸಿ, ಒತ್ತಟ್ಟಿಗಿದ್ದೇವೆ.”

ಮಾನವನ ಈ ಬಗೆಯ ‘ತಬ್ಬಲಿತನ’ದ ಮತ್ತೊಂದು ಮುಖವನ್ನು ನಾವು “ಅಲ್ಲಾಉದ್ದೀನನ ಅದ್ಭುತ ದೀಪ” ಕಥೆಯಲ್ಲಿ ಕಾಣುತ್ತೇವೆ. ಈ ಕಥೆ ವಾಸು ಎಂಬ ಬಾಲಕನೊಬ್ಬನ ದೃಷ್ಟಿಕೋನದಿಂದ ನಿರೂಪಿಸಲ್ಪಟ್ಟಿದೆ. ನವ್ಯ ಯುಗದಲ್ಲಿ ಬಾಲಕನ ಸೀಮಿತ ದೃಷ್ಟಿಕೋನದಿಂದ ನಿರೂಪಿಸಲ್ಪಟ್ಟ (“ಕಾಡು,” “ಘಟಶ್ರಾದ್ಧ,”) ಇತ್ಯಾದಿ ಅನೇಕ ಯಶಸ್ವಿ ಕಥೆಗಳ ಸಾಲಿನಲ್ಲಿ ಬರುವ ಈ ಕಥೆ, ಅವುಗಳಂತೆಯೇ ವಯಸ್ಕರ ಜಗತ್ತಿನ ಕ್ರೌರ್ಯ-ಕೃತಕತೆಗಳನ್ನು ಮತ್ತು ಇಂತಹ ಜಗತ್ತಿನಲ್ಲಿ ಕಳೆದುಹೋಗುವ ಮುಗ್ಧತೆಯನ್ನೂ ಅತ್ಯಂತ ನಾಟಕೀಯವಾಗಿ ಚಿತ್ರಿಸುತ್ತದೆ. ಎಷ್ಟೋ ವರ್ಷಗಳ ಹಿಂದೆ ಮನೆ ಬಿಟ್ಟು ಓಡಿ ಹೋದ (ಕಾರಣಗಳು ಸೂಚಿಸಲ್ಪಟ್ಟಿದ್ದರೂ ಅವುಗಳು ವಾಸುವಿಗೆ ಅರ್ಥವಾಗುವುದಿಲ್ಲ) ತನ್ನ ಕಕ್ಕ ಸತ್ಯಬೋಧನನ್ನು ಹುಡುಕಿಕೊಂಡು, ತಪ್ಪು ವಿಳಾಸದೊಡನೆ ಮುಂಬಯಿಗೆ ಬರುವ ವಾಸು ಅಲ್ಲಿ ಅಕ್ಷರಶಃ ಕಾಡಿನಲ್ಲಿ ಕಳೆದುಹೋದ ತಬ್ಬಲಿಯಾಗುತ್ತಾನೆ. ಗೊತ್ತಿಲ್ಲದ ದಿಕ್ಕುಗಳಲ್ಲಿ ಮತ್ತು ತಾಣಗಳಲ್ಲಿ ಅಲೆದು ಸುಸ್ತಾಗಿ, ಕೊನೆಗೆ ಬಣ್ಣ ಬಣ್ಣದ ಬೆಳಕಿನಿಂದ ಝಗಝಗಿಸುವ ಅಲಕಾ ಚಿತ್ರಮಂದಿರದ ಎದುರು, ನಿದ್ದೆಗೆ ಶರಣು ಹೋಗುತ್ತಾನೆ; ಮತ್ತು ರಾತ್ರಿ ತನ್ನ ಸ್ವಪ್ನದಲ್ಲಿ ಕಕ್ಕನನ್ನು ಕಾಣುತ್ತಾನೆ. ಆದರೆ, ಎದ್ದಾಗ ವಾಸುವಿಗೆ “ತನ್ನ ಸುತ್ತಲೂ ಇರುವ ಪ್ರಪಂಚ ತಾನು ಅದೇ ಆಗ ಕಂಡ ದುಸ್ವಪ್ನಗಳಂತೆ ಕ್ರೂರವಾಗಿ, ಅಸಂಬದ್ಧವಾಗಿ ಕಾಣಿಸಿತು.” ಕತ್ತಲಿನಲ್ಲಿ, ತೆರೆಯ ಮೇಲೆ ಮಾತ್ರ ಅಲ್ಲಾಉದ್ದೀನನಿಗೆ ಅದ್ಭುತ ದೀಪ ಸಿಗುತ್ತದೆ; ವಾಸ್ತವದಲ್ಲಿ ಅಂತಹ ದೀಪವಾಗಲಿ, ವಾಸುವಿನ ಕಕ್ಕನಾಗಲಿ ಸಿಗುವ ಸಾಧ್ಯತೆಯೇ ಇಲ್ಲ.

ಅದ್ಭುತ ದೀಪವಿಲ್ಲದೆ ಕತ್ತಲಿನಲ್ಲಿ ತಡವರಿಸುವ ಅಲ್ಲಾಉದ್ದೀನರು, ಪರಸ್ಪರ ದ್ವೇಷಿಸುತ್ತಿದ್ದರೂ ಒಟ್ಟಿಗೆ ಬದುಕಬೇಕಾಗಿರುವ ತಂದೆ-ತಾಯಿಯರು, ಕೈಗಳಿಲ್ಲದಿದ್ದರೂ ಬಲಾತ್ಕಾರದ ಆಪಾದನೆಯನ್ನೆದುರಿಸಬೇಕಾದ ಅಂಗವಿಕಲರು, ಕಳವು ಮಾಡಿಯೂ ಅದರ ಬಗ್ಗೆ ಇನ್ನೊಬ್ಬರೊಡನೆ ಅದನ್ನು ಸಮರ್ಥಿಸಿಕೊಳ್ಳಬೇಕಾದ ಒತ್ತಡವಿರುವ ಕಳ್ಳರು — ಇಂತಹ ಶಪಿತ ವ್ಯಕ್ತಿಗಳು ತುಂಬಿರುವ ಈ ಪ್ರಕ್ಷುಬ್ಧ ಜಗತ್ತಿನಿಂದ ಬಿಡುಗಡೆ ಕೇವಲ ಸಾವಿನಿಂದ ಮಾತ್ರ ಸಾಧ್ಯವೇನೋ!