ಕತೆಗಾರ-ಕಾದಂಬರಿಕಾರ-ನಾಟಕಕಾರ, ಮತ್ತು ದೇಶ ಕಾಲ ಎಂಬ ಗಂಭೀರ ಸಾಹಿತ್ಯಕ ನಿಯತಕಾಲಿಕೆಯ ಸಂಪಾದಕ ವಿವೇಕ ಶಾನಭಾಗರ ಮೊದಲ ಕಥಾ ಸಂಕಲ ಅಂಕುರ ೧೯೮೫ರಲ್ಲಿ ಪ್ರಕಟವಾಯಿತು; ಅನಂತರ ಹೊರಬಂದ ಲಂಗರು (೧೯೯೨), ಹುಲಿ ಸವಾರಿ (೧೯೯೫), ಮತ್ತು ಮತ್ತೊಬ್ಬನ ಸಂಸಾರ (೨೦೦೫) ಈ ಸಂಕಲನಗಳ ಕಥೆಗಳೂ ಸೇರಿದಂತೆ ಒಟ್ಟು ೩೨ ಕಥೆಗಳನ್ನು ವಿವೇಕ ಬರೆದಿದ್ದಾರೆ. (ಸಂಕಲನಗಳಲ್ಲಿ ಸೇರದ ಇವರ “ನಿರ್ವಾಣ” ಕಥೆ ದೇಶ ಕಾಲದಲ್ಲಿ ಪ್ರಕಟವಾಗಿದೆ.) ವಿವೇಕರ ಹೆಚ್ಚಿನ ಕಥೆಗಳನ್ನು, ಅವುಗಳ ಲಕ್ಷ್ಯ-ಕಾಳಜಿಗಳನ್ನಾಧರಿಸಿ ಮೂರು ವರ್ಗಗಳಲ್ಲಿ ಗುರುತಿಸಬಹುದು: ಅ) ವ್ಯಕ್ತಿಕೇಂದ್ರಿತ ಕಥೆಗಳು, ಆ) ವ್ಯಕ್ತಿ ಮತ್ತು ಅವನ ಸಂಬಂಧಗಳನ್ನು ಕೇಂದ್ರವಾಗುಳ್ಳ ಕಥೆಗಳು, ಮತ್ತು ಇ) ಸಾಮಾಜಿಕ ಗತಿಯನ್ನು ಕೇಂದ್ರವಾಗುಳ್ಳ ಕಥೆಗಳು. ಈ ಎಲ್ಲಾ ಕಥೆಗಳನ್ನು ಗಮನಿಸಿದಾಗ, ವಿವೇಕರ ಲಕ್ಷ್ಯ-ಕಾಳಜಿಗಳು ನವ್ಯಚಿಂತನೆಯ ಮಾರ್ಗದಲ್ಲಿ ವ್ಯಕ್ತಿಯಿಂದ ಪ್ರಾರಂಭವಾಗಿ, ಅನಂತರ ವ್ಯಕ್ತಿ ಮತ್ತು ಅವನ ಕುಟುಂಬ/ ಸಮುದಾಯವನ್ನು ಒಳಗೊಂಡು, ಅನಂತರ ನವ್ಯೋತ್ತರ / ಆಧುನಿಕೋತ್ತರ ಚಿಂತನೆಯ ಹಿನ್ನೆಲೆಯಲ್ಲಿ ಇಡೀ ಸಮಾಜವನ್ನೇ, ಸಾಮಾಜಿಕ ಚಲನೆಯನ್ನೇ ಒಳಗೊಳ್ಳುತ್ತವೆ ಎಂಬುದು ನಮಗೆ ಗೊತ್ತಾಗುತ್ತದೆ.

) ವ್ಯಕ್ತಿಕೇಂದ್ರಿತ ಕಥೆಗಳು: ೭೦-೮೦ರ ದಶಕಗಳಲ್ಲಿ ಬರೆಯಲ್ಪಟ್ಟ ಈ ವರ್ಗದ ಕಥೆಗಳು ಹೆಚ್ಚಾಗಿ ಮೊದಲ ಸಂಕಲನದಲ್ಲಿ ಕಾಣಬರುತ್ತವೆ. ನಾವು ನಿರೀಕ್ಷಿಸುವಂತೆಯೇ, ಈ ಕಥೆಗಳು ನವ್ಯ ಕಥೆಗಳ ಮಾದರಿಯನ್ನನುಸರಿಸುತ್ತವೆ; ಮತ್ತು ಇವುಗಳ ವಸ್ತು (ಮೊದಲ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಚಿತ್ತಾಲರು ಸರಿಯಾಗಿಯೇ ಗುರುತಿಸಿರುವಂತೆ) ‘ಕಾಮ’ –ಭಿನ್ನ ಅವಸ್ಥೆಗಳಲ್ಲಿ ಭಿನ್ನ ರೂಪುಗಳಲ್ಲಿ ವ್ಯಕ್ತಿಯೊಬ್ಬನನ್ನು / ಒಬ್ಬಳನ್ನು ಕಾಡುವ ಕಾಮ: ಕಿಶೋರಾವಸ್ಥೆಯಲ್ಲಿ ಅಸ್ಪಷ್ಟವಾಗಿ ಕಾಡುವ ಕಾಮ (“ಪರಸ್ಪರ”), ತನ್ನ ಪುರುಷತ್ವವನ್ನು ಸಿದ್ಧಪಡಿಸಲೇ ಬೇಕಾದ ಒತ್ತಡ (“ಅಂಕುರ”), ಲೈಂಗಿಕತೆಯನ್ನು ಕುರಿತಾದ ಕಿಶೋರಾವಸ್ಥೆಯ ಭಯೋದ್ವೇಗಗಳು (“ಮಾಧುರಿ”), ಇತ್ಯಾದಿ. ಈ ಸಂಕಲನದಲ್ಲಿ ಗಮನೀಯವಾದ ಕಥೆಗಳೆಂದರೆ ಎರಡು: “ಬಂದಾವೋ ಬಾರವೋ” ಮತ್ತು “ “ಪರಸ್ಪರ.” ಮೊದಲ ಕಥೆ ಅನಂತಮೂರ್ತಿಯವರ ಸಂಸ್ಕಾರದ ಪಾತ್ರ-ವಿಭಜನೆಯ (ಆಚಾರ್ಯರು ಮತ್ತು ಅವರ ‘ಛಾಯೆ’ –Shadow — ನಾರಣಪ್ಪ) ತಂತ್ರವನ್ನು ಆಧರಿಸಿದೆ: ಅತಿ ಶಿಷ್ಟ ಹಾಗೂ ಸಂಕೋಚ ಸ್ವಭಾವದ ನಿರೂಪಕನಿಗೆ ವಿರುದ್ಧವಾಗಿ ಬಿಚ್ಚು ಮನಸ್ಸಿನ ಹಾಗೂ ಸ್ವೇಚ್ಛಾಚಾರಿಯಾದ ಅವನ ಸ್ನೇಹಿತ ನಾಯಕನ ಪಾತ್ರ ಬರುತ್ತದೆ; ಕೊನೆಗೆ ತನ್ನ ಮುಚ್ಚಿಟ್ಟ ಕಾಮನೆಗಳ ಮೂರ್ತ ರೂಪವೇ ನಾಯಕ ಎಂದು ನಿರೂಪಕನಿಗೆ ಅರಿವಾಗುವಲ್ಲಿ ಕಥೆ ಮುಗಿಯುತ್ತದೆ. ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಪ್ರೇಮಕ್ಕನ ಬಗ್ಗೆ ನಿರೂಪಕನಿಗಿರುವ ಅಸ್ಪಷ್ಟ ಕಾಮನೆಗಳನ್ನು ನವಿರಾಗಿ “ಪರಸ್ಪರ” ಕಥೆ ಚಿತ್ರಿಸುತ್ತದೆ.

) ವ್ಯಕ್ತಿ ಮತ್ತು ಅವನ ಸಂಬಂಧಗಳು: ಈ ವರ್ಗದ ಕಥೆಗಳು ವಿವೇಕರ ಎರಡನೆಯ ಸಂಕಲನದಲ್ಲಿ ಕಂಡುಬರುತ್ತವೆ; ಮತ್ತು ಇವು ವ್ಯಕ್ತಿಯೊಬ್ಬನು/ಳು ತನ್ನ ಸುತ್ತಾ ಕಟ್ಟಿಕೊಳ್ಳುವ ಗೋಜಲು ಸಂಬಂಧಗಳನ್ನು ವಿಶ್ಲೇಷಿಸುತ್ತವೆ. ಕುಟುಂಬದವರು, ಗೆಳೆಯರು, ಪರಿಚಿತರು-ಅಪರಿಚಿತರು ಮುಂತಾದವರೊಡನೆ ವ್ಯಕ್ತಿಯ ಸುತ್ತಾ (ಸ್ವೇಚ್ಛೆಯಿಂದ ಹಾಗೂ ಅನಿವಾರ್ಯವಾಗಿ) ಬೆಳೆಯುವ ಸಂಬಂಧಗಳು ತಾವರೆ ಕೊಳದಂತೆ –ಹೊರಬರಲು ಪ್ರಯತ್ನಿಸಿದಷ್ಟೂ ವ್ಯಕ್ತಿಯು ಹೆಚ್ಚು ಹೆಚ್ಚು ಆಳಕ್ಕೆ ಕುಸಿಯುತ್ತಾನೆ ಎಂಬುದನ್ನು “ಸಂಪರ್ಕ,” “ಲಗ್ಗೆ,” “ಅಂತಃಪಟ” ಮುಂತಾದ ಕಥೆಗಳು ಸಾಕಷ್ಟು ಯಶಸ್ವಿಯಾಗಿ ದಾಖಲಿಸುತ್ತವೆ. ಅಶೋಕನಿಗೆ ತನ್ನ ಹಾಗೂ ರಾಧಿಕಾ, ಅಪ್ಪ-ಗುಲಾಬಿ, ರಾಧಿಕಾ-ನಾಗರಾಜ ಇವೇ ಮುಂತಾದ ಸಂಬಂಧಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲಾಗದೆ ಅವನು ಒಂದು ವ್ಯೂಹದಲ್ಲಿ ಸಿಕ್ಕಿದವನಂತೆ ಅಸಹಾಯಕನಾಗಿ ಒದ್ದಾಡುವುದನ್ನು “ಸಂಪರ್ಕ” ಚಿತ್ರಿಸುತ್ತದೆ; ತನಗೆ ಕೊಂಚವೂ ಗೊತ್ತಾಗದಂತೆಯೇ ಒಂದು ಮಾಫ಼ಿಯಾ ಜಾಲದಲ್ಲಿ ಸಿಕ್ಕಿಬೀಳುವ ಮತ್ತು ಆ ಕಾರಣದಿಂದ ತನ್ನ ಹೆಂಡತಿಯೂ ಸೇರಿದಂತೆ ಎಲ್ಲರೂ ತನ್ನ ಮೇಲೆ ಲಗ್ಗೆ ಮಾಡುವುದನ್ನು “ಲಗ್ಗೆ” ಕಥೆ ಅನಾವರಣ ಮಾಡುತ್ತದೆ; ಮತ್ತು “ಅಂತಃಪಟ” ಸಿಂಪಿ ಮಹಾದೇವನ ಕೌಟುಂಬಿಕ ಅಸಾಂಗತ್ಯವನ್ನು ಪರಿಣಾಮಕಾರಿಯಾಗಿ ದಾಖಲಿಸುತ್ತದೆ. ಅನೇಕ ಯಶಸ್ವಿ ಕಥೆಗಳಿರುವ ಈ ವರ್ಗದ ಅತ್ಯುತ್ತಮ ಕಥೆಗಳೆಂದರೆ “ ಲಂಗರು” ಮತ್ತು “ ಮೋಹನ ಮುರಲಿ.”

ವಿವೇಕರ ವಿಶಿಷ್ಟ ಕಥೆಗಳಲ್ಲಿ ಒಂದಾದ “ಲಂಗರು” ಎತ್ತುವ ಪ್ರಶ್ನೆಯೆಂದರೆ ಸ್ಥಾಪಿತ ಅಥವಾ ರೂಢಿಗತ ಮೌಲ್ಯಗಳನ್ನು ಹಾಗೂ ಜೀವನಕ್ರಮವನ್ನು ಒಪ್ಪದೇ ಅಸಾಂಪ್ರದಾಯಿಕ ಬದುಕನ್ನು ಬಯಸುವ ವ್ಯಕ್ತಿಯನ್ನು ‘ವಿಕ್ಷಿಪ್ತ’ ಎಂದು ಸಮಾಜ ಏಕೆ ನೋಡುತ್ತದೆ? ಸಮಷ್ಟಿ ಒಪ್ಪಿಕೊಂಡಿರುವ ಸ್ವಾರ್ಥ, ಧನಾರ್ಜನೆ, ಕೌಟುಂಬಿಕ ಭದ್ರತೆ, ಇತ್ಯಾದಿಗಳೇ ಎಲ್ಲರ ಮೌಲ್ಯಗಳೂ ಆಗಬೇಕೆ? ಈ ಕಥೆಯ ಪರಸ್ಪರ ವಿರುದ್ಧ ಪಾತ್ರಗಳು ಸಹೋದರರಾದ ರಘುವೀರ ಮತ್ತು ಅನಂತ. ಇವರಿಬ್ಬರಲ್ಲಿ ಅನಂತನು ಅಂಗಡಿಯನ್ನು ನಡೆಸುತ್ತಾ, ಅಡಿಕೆ ದಲಾಲಿ ವ್ಯಾಪಾರ ಮಾಡುತ್ತಾ, ಅಪಾರ ಹಣವನ್ನು ಗಳಿಸುತ್ತಾನೆ; ಮನೆ ಕಟ್ಟಿಸಿ, ಹೆಂಡತಿ-ಮಕ್ಕಳೊಡನೆ ಸುಖವಾಗಿದ್ದು, ಊರಿನಲ್ಲಿ ಸ್ಥಾನ-ಮಾನಗಳನ್ನು ಪಡೆದಿದ್ದಾನೆ. ಇವನಿಗೆ ವಿರುದ್ಧವಾಗಿ, ರಘುವೀರನಿಗೆ ಹಣ, ಹೆಸರು, ಕುಟುಂಬ ಇವಾವುದರಲ್ಲೂ ಆಸಕ್ತಿಯಿಲ್ಲ; ಮಚವೆಯಲ್ಲಿ ಸಮುದ್ರ ಪ್ರಯಾಣ ಮಾಡುತ್ತಾ, ಆ ಮೂಲಕ ಮಚವೆಯ ಹಾಯಿಗಳು, ಮೀನಿನ ಹಿಂಡುಗಳು, ಆಕಾಶದ ನಕ್ಷತ್ರಗಳು, ಇವುಗಳೊಡನೆ ಒಂದು ಬಗೆಯ ಆಪ್ತ ಸಂಬಂಧವನ್ನು ಬೆಳೆಸಿಕೊಂಡು ಸದಾ ಸಮುದ್ರಯಾನದಲ್ಲಿರುವುದೇ ಅವನ ಬದುಕಿನ ಗುರಿ ಹಾಗೂ ಸಾಧನೆ. ಹಣಗಳಿಕೆಯಲ್ಲಿ ಇವನಿಗೆ ಆಸಕ್ತಿಯಿಲ್ಲದಿರುವುದರಿಂದ ಇವನ ಹೆಸರಿಗೆ ‘ಭೋಳೆ’ ಎಂಬ ವಿಶೇಷಣವು ಅಂಟಿಕೊಳ್ಳುತ್ತದೆ. ಕಾಲವು ಬದಲಾಯಿಸಿ, ಮಚವೆಯ ಮೂಲಕ ಮುಂಬಯಿಯಿಂದ ಸಾಮಾನು ಸಾಗಿಸುವುದು ನಿಂತು ಹೋಗಿ, ಮಚವೆ ಒಂದು ಕಡೆ ನಿಂತು ನಿಧಾನವಾಗಿ ಹಾಳಾಗಲು ಪ್ರಾರಂಭಿಸುತ್ತದೆ; ಒಂದು ಕಡೆ ಕಡ್ಡಾಯವಾಗಿ ನೆಲೆ ನಿಲ್ಲಬೇಕಾಗಿ ಬರುವ ರಘುವೀರನೂ ಆ ಮಚವೆಯಂತೆ ಬದುಕಿನಲ್ಲಿ ಕುಗ್ಗಲು ಪ್ರಾರಂಭಿಸುತ್ತಾನೆ: “ಮಚವೆಯಲ್ಲಿ ತಿರುಗಾಡಿದ ದಿವಸಗಳಲ್ಲಿ ಮನಸ್ಸಿಗೆ ದೊರೆತ ಸುಖ-ಸಮಾಧಾನಗಳ ಅರ್ಥ, ಅಲ್ಲಿ ತಾನು ಸಾಧಿಸಿದ್ದು, ಅರಿತದ್ದು, ಬೆಳೆದದ್ದು ಯಾರಿಗೂ ತಿಳಿಸಲಾಗದ ಹಾಗೆ ಅನಿಸುತ್ತಿತ್ತು. ಸಾಧನೆಯ ಹಾದಿ ಲೌಕಿಕದ್ದೇ ಆಗಿರಬೇಕೆಂಬ ಅಪೇಕ್ಷೆ ಎಲ್ಲರಿಗೂ.”

“ಮೋಹನ ಮುರಲಿ” ಕಥೆಯೂ ಇದೇ ಪ್ರಶ್ನೆಯನ್ನು ಎತ್ತುತ್ತದೆ: ‘ಸಾಧನೆಯ ಹಾದಿ ಲೌಕಿಕದ್ದೇ ಏಕೆ ಆಗಿರಬೇಕು?’ ಈ ಕಥೆಯಲ್ಲಿ ಬರುವ ರಾಮರಾಯ ಯಾವುದೋ ದಿವ್ಯದ ಹಂಬಲದಿಂದ ಸದಾ ಯಕ್ಷಗಾನದ ಪ್ರಪಂಚದಲ್ಲಿ ಅಲೆಯುತ್ತಿರುತ್ತಾನೆ. ಇದು ‘ಪ್ರಾಪ್ತಿ ಹುಟ್ಟದ ಕೆಲಸ’ ಎಂದು ಅವನ ಅಪ್ಪ ಅವನನ್ನು ತಿರಸ್ಕರಿಸುತ್ತಾನೆ, ಮತ್ತು ಕೊನೆಗೆ ಅವನ ಮಗನೂ ಅದೇ ತೀರ್ಮಾನಕ್ಕೆ ಬಂದಾಗ, ಅವನ ಹೆಂಡತಿ ಮಗನ ಜೊತೆಯಲ್ಲಿ ಹೊರಟು ಹೋಗುತ್ತಾಳೆ. ರಘುವೀರ, ರಾಮರಾಯ ಇವರ ಸಾಲಿನಲ್ಲೇ “ಗುರುತು” ಕಥೆಯ ಬೇಟೆ ಹುಚ್ಚಿರುವ, ಆದರ್ಶವಾದಿಯಾಗಿ ತನ್ನ ಪ್ರಿಯ ವಿದ್ಯಾರ್ಥಿಗೇ ತನ್ನ ಆಸ್ತಿಯನ್ನು ಬರೆದುಕೊಡಲು ಸಿದ್ಧವಾಗಿರುವ ಮುಕುಂದ ಮಾಸ್ತರು, “ನಮ್ಮ ಪಾಡಿಗೆ ನಾವು” ಕಥೆಯ ಊರ ತಲೆಬಿಸಿಯನ್ನೆಲ್ಲಾ ಕಟ್ಟಿಕೊಂಡು ಒದ್ದಾಡುವ ಬಾಯಕ್ಕ, ಮುಂತಾದವರು ಬರುತ್ತಾರೆ.

) ಸಾಮಾಜಿಕ ಚರಿತ್ರೆಗಳು: ವಿವೇಕರಿಗೆ ಖ್ಯಾತಿಯನ್ನು ತಂದುಕೊಟ್ಟ ಅನೇಕ ಕಥೆಗಳು ಈ ವರ್ಗದಲ್ಲಿ ಬರುತ್ತವೆ: “ಕಂತು,” “ಹುಲಿಸವಾರಿ,” “ನೂಲಿನ ಏಣಿ,” “ ಪ್ರತ್ಯಕ್ಷ,” “ಶರವಣ ಸರ್ವೀಸ್,” “ಕೆಲವು ತತ್ವಗಳ ಸಲುವಾಗಿ,” “ನಿರ್ವಾಣ,” ಇತ್ಯಾದಿ; ಮತ್ತು ಇವೆಲ್ಲವೂ ವಿವೇಕರ ಮೂರನೆಯ ಹಾಗೂ ನಾಲ್ಕನೆಯ ಸಂಕಲನಗಳಲ್ಲಿ ಬರುತ್ತವೆ. ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಆಗುತ್ತಿರುವ ‘ಪ್ರಗತಿ,’ ಮತ್ತು ಆ ‘ಪ್ರಗತಿ’ಯ ಉಪಪ್ರಮೇಯಗಳಾದ ಬೃಹತ್ ಅಣೆಕಟ್ಟುಗಳು, ಅಣುಸ್ಥಾವರಗಳು, ಬಹು ರಾಷ್ಟ್ರೀಯ ಕಂಪನಿಗಳು, ಮತ್ತು ಪಶ್ಚಿಮದ ‘ಆರ್ಥಿಕ ಸಾಮ್ರಾಜ್ಯವಾದ’ –ಇವೇ ಮುಂತಾದ ಸಂಗತಿಗಳನ್ನು ಸ್ಥೂಲವಾಗಿ ಆಧುನಿಕೋತ್ತರ ಎಂದು ಗುರುತಿಸಬಹುದಾದ ವೈಚಾರಿಕತೆಯ ನಿಲುವಿನಿಂದ ಈ ಕಥೆಗಳು ವಿಶ್ಲೇಷಿಸುತ್ತವೆ ಹಾಗೂ ಪ್ರಶ್ನಿಸುತ್ತವೆ. ಈ ಎಲ್ಲಾ ಕಥೆಗಳ ಆಳದಲ್ಲಿರುವ ಪ್ರಶ್ನೆಯೆಂದರೆ ‘ಪ್ರಗತಿ ಅಥವಾ ಡೆವಲಪ್‌ಮೆಂಟ್ ಎಂದರೇನು?’

ಈ ಅಂಶಗಳನ್ನು ಸ್ಪಷ್ಟಪಡಿಸಲು “ ಕಂತು” ಹಾಗೂ “ಹುಲಿ ಸವಾರಿ” ಎಂಬ ಕಥೆಗಳನ್ನು ಈ ವರ್ಗದ ಪ್ರಾತಿನಿಧಿಕ ಕಥೆಗಳಂತೆ ಪರಿಗಣಿಸಬಹುದು. “ಕಂತು” ಎಂಬ ದೀರ್ಘ ಕಥೆ ಗ್ರಹಣ ಮತ್ತು ಅಣೆಕಟ್ಟು ಯೋಜನೆಯಿಂದ ಊರಿನ ಮುಳುಗಡೆ ಇವುಗಳನ್ನು ಕೇಂದ್ರದಲ್ಲಿರಿಸಿಕೊಂಡು, ಮಾವಿನೂರಿನ ಭಿನ್ನ ವ್ಯಕ್ತಿಗಳನ್ನು ಹಾಗೂ ಸಮುದಾಯಗಳನ್ನು ಈ ಎರಡು ಘಟನೆಗಳು ಹೇಗೆ ಬದಲಾಯಿಸುತ್ತವೆ ಎಂಬುದನ್ನು ಕಲೈಡೊಸ್ಕೋಪ್ ವಿಧಾನದಲ್ಲಿ ಅನಾವರಣಗೊಳಿಸುತ್ತದೆ. ವೈಜ್ಞಾನಿಕವಾಗಿ ಗ್ರಹಣವನ್ನು ಅರ್ಥಮಾಡಿಕೊಳ್ಳಲು ಮತ್ತು ಇತರರಿಗೆ ಅದನ್ನು ವಿವರಿಸಲು ಒದ್ದಾಡುವ ಸದಾನಂದ ಮಾಸ್ತರು ಮತ್ತು ಗ್ರಹಣವನ್ನು ರಾಹು-ಕೇತುಗಳಿಗೆ ಹಾಗೂ ಪಾಪ-ಪುಣ್ಯಗಳಿಗೆ ಗಂಟು ಹಾಕುವ ತರ್ಕ ಶಾಸ್ತ್ರಿಗಳು, ಪೂರ್ಣ ಸೂರ್ಯಗ್ರಹಣ ಕಾಣಿಸುವುದು ಮಾವಿನೂರಿನಲ್ಲಿ ಮಾತ್ರ ಎಂಬ ಕಾರಣಕ್ಕಾಗಿ ಗ್ರಹಣವೀಕ್ಷಣೆಗೆಂದು ಅಲ್ಲಿಗೆ ಬರುವ ವಿದೇಶಿ ಪ್ರವಾಸಿಗಳು ಮತ್ತು ವಿಜ್ಞಾನಿಗಳು, ಮುಳುಗಡೆಯ ಫಾಯಿದೆಯನ್ನು ಪಡೆಯಲು ಊರಿನ ಪಾಳು ಭೂಮಿಯನ್ನೆಲ್ಲಾ ಖರೀದಿಸುವ ಜಗನ್ನಾಥ ಮತ್ತು ಅಂತಹ ವ್ಯವಹಾರ ಕುಶಲನಲ್ಲದ ಪಾಂಡುರಂಗ, ಅಣೆಕಟ್ಟು ವಿರೋಧಿ ಸಮಿತಿಯವರು ಮತ್ತು ಮಹಮ್ಮಾಯಿ ದೇವಸ್ಥಾನದಲ್ಲಿ ಎಲ್ಲಿಯೋ ಹುಗಿಯಲ್ಪಟ್ಟಿರುವ ನಿಧಿಯನ್ನು ಶೋಧಿಸುತ್ತಿರುವ ಗಂಗಾಧರ, ಮಾನಸಿಕ ಅಸ್ವಸ್ಥತೆಯಿಂದ ನರಳುವ ಮಾಸ್ತರರ ಪತ್ನಿ ಹಾಗೂ ಏನಾದರೂ ತನ್ನ ಹಳೆಯ ಮನೆಯನ್ನು ಬಿಡಲೊಪ್ಪದ ಕಾವೇರಿ — ಇತ್ಯಾದಿ ಭಿನ್ನ ನಂಬಿಕೆ ಹಾಗೂ ವರ್ತನೆಗಳ ಅನೇಕ ಪಾತ್ರಗಳ ಮೂಲಕ ಗ್ರಹಣ ಮತ್ತು ಅಣೆಕಟ್ಟು ಇವುಗಳ ಕಾರಣದಿಂದ ಕುಗ್ರಾಮವಾದ ಮಾವಿನೂರು ಹೇಗೆ ಕ್ಷಿಪ್ರವಾಗಿ ಬದಲಾಗುತ್ತದೆ ಎಂಬುದನ್ನು ಅಸಾಧಾರಣ ಕೌಶಲ್ಯದಿಂದ, ಚರಿತ್ರಕಾರನ ನಿರುದ್ವಿಗ್ನ ಶೈಲಿಯಲ್ಲಿ ಈ ಕಥೆ ಯಶಸ್ವಿಯಾಗಿ ಕಟ್ಟಿಕೊಡುತ್ತದೆ. ಕೊನೆಯಲ್ಲಿ, ಗ್ರಹಣದ ದಿನ ತಮ್ಮ ಪತ್ನಿಯ ಸ್ವಾಸ್ಥ್ಯಕ್ಕಾಗಿ ವಿಶೇಷ ಪೂಜೆ ಮಾಡಿಸಲು ಮಾಸ್ತರರು ಅವಳ ತವರಿಗೆ ಹೋಗಬೇಕಾಗುತ್ತದೆ; ವಿದೇಶಿ ಪ್ರವಾಸಿಗಳ ಪ್ರಾಚ್ಯವಸ್ತುಗಳ ಮೋಹವನ್ನು ತಮ್ಮ ಲಾಭಕ್ಕೆ ಪರಿವರ್ತಿಸಿಕೊಳ್ಳಲು ಊರಿನವರು ತಮ್ಮ ಮನೆ ಬಾಗಿಲೂ ಸೇರಿದಂತೆ ತಮ್ಮಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಮಾರಲು ತೊಡಗುತ್ತಾರೆ; ಮತ್ತು ಅಣೆಕಟ್ಟು ವಿರೋಧಿ ಸಮಿತಿಯವರು ಊರಿನವರ ವಿರೋಧವನ್ನು ಎದುರಿಸಲಾರದೆ ಸೋಲುತ್ತಾರೆ. ಈ ನೆಲೆಯಲ್ಲಿ, ಕಳೆದೆರಡು ದಶಕಗಳಲ್ಲಿ ಕ್ಷಿಪ್ರ ಹಾಗೂ ಸ್ವವಿರೋಧಗಳಿಂದ ಕೂಡಿದ ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಿರುವ ಇಡೀ ಭಾರತದ ಒಂದು ಕಿರು ಪ್ರತಿಮೆಯಾಗಿ ಮಾವಿನೂರು ಬದಲಾಗುವುದನ್ನು ಈ ಕಥೆ ಅತ್ಯಂತ ಯಶಸ್ವಿಯಾಗಿ ಚಿತ್ರಿಸುತ್ತದೆ.

“ಹುಲಿ ಸವಾರಿ” ವಿವೇಕರ ಮತ್ತೊಂದು ಮಹತ್ವಾಕಾಂಕ್ಷೆಯ ಕಥೆ. ಒಂದು ಬಹುರಾಷ್ಟ್ರೀಯ ಕಂಪನಿಯ ಉನ್ನತ ಅಧಿಕಾರಿಗಳಿಗೆ ತರಬೇತಿ ಕೊಡಲು ಮುಂಬಯಿಯಲ್ಲಿ ನಡೆಯುವ ಹತ್ತು ದಿನಗಳ ಶಿಬಿರ ಈ ಕಥೆಯ ಕೇಂದ್ರ. ತರಬೇತಿಯ ಕೊನೆಯ ಮೂರು ದಿನಗಳಲ್ಲಿ ಆಯೋಜಿಸಲಾದ ಒಂದು ‘ಮ್ಯಾನೇಜ್‌ಮೆಂಟ್ ಆಟ’ದಲ್ಲಿ ಅಭ್ಯರ್ಥಿಗಳು ತಮಗೆ ಕೊಟ್ಟ ಕಾಲ್ಪನಿಕ ಕಂಪನಿಗಳ ಮೂಲಕ (ಕಾಲ್ಪನಿಕವಾಗಿ) ಎಷ್ಟು ಲಾಭ ಗಳಿಸುತ್ತಾರೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಭಾರತೀಯ ನಿರೂಪಕನ ಗುಂಪಿನಲ್ಲಿ ಆಫ಼್ರಿಕಾದ ಊಚೆ ಮತ್ತು ಡಚ್ ಮೂಲದ ಹಾಗೂ ಇಂಗ್ಲಂಡ್‌ನಲ್ಲಿ ಹುಟ್ಟಿ ಬೆಳೆದ ಜೆಫ಼್ ಇವರಿಬ್ಬರು ಇರುತ್ತಾರೆ. ಒಂದು ಸಂದರ್ಭದಲ್ಲಿ, ಹೆಚ್ಚು ಲಾಭ ಪಡೆಯಲು ತಮ್ಮ ಕಂಪನಿ ಆಫ಼್ರಿಕಾದಲ್ಲಿ ಕಾರಖಾನೆಯನ್ನು ತೆಗೆಯುವ ಯೋಜನೆ ಹೊಳೆದಾಗ ಊಚೆ “ಅದು ಜನರನ್ನು ನಾಶಮಾಡುತ್ತದೆ” ಎಂದು ವಾದಿಸುತ್ತಾ ಅದನ್ನು ವಿರೋಧಿಸುತ್ತಾನೆ. ಆದರೆ, ಅನಂತರ ಜೆಫ಼್ ‘ಹೇಗೋ’ ಅವನ ಮನಸ್ಸನ್ನು ಪರಿವರ್ತಿಸಿ, ಆಟವನ್ನು ಮುಂದುವರೆಸಿದಾಗ, ಕೊನೆಯ ದಿನ ನಿರೂಪಕನ ಈ ಕಂಪನಿ ಎರಡನೆಯ ಸ್ಥಾನಕ್ಕೇರುತ್ತದೆ. ಶೀರ್ಷಿಕೆಯೂ ಸೇರಿದಂತೆ ಸಂಪೂರ್ಣವಾಗಿ ಅನ್ಯೋಕ್ತಿಯ ನೆಲೆಯಲ್ಲಿ ನಿರೂಪಿಸಲ್ಪಟ್ಟಿರುವ ಈ ಕಥೆ ಭಾರತ, ಆಫ್ರಿಕ, ಮುಂತಾದ ತೃತೀಯ ರಾಷ್ಟ್ರಗಳನ್ನು ಅಮೆರಿಕಾ, ಇಂಗ್ಲಂಡ್, ಮುಂತಾದ ಶ್ರೀಮಂತ ರಾಷ್ಟ್ರಗಳು ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹೇಗೆ ಶೋಷಣೆ ಮಾಡುತ್ತವೆ ಎಂಬುದನ್ನು ಅನಾವರಣಗೊಳಿಸುತ್ತದೆ. ಈ ನೆಲೆಯಲ್ಲಿ, ‘ಮ್ಯಾನೇಜ್‌ಮೆಂಟ್ ಗೇಮ್’ ಎಂಬ ಹೆಸರೂ ತುಂಬಾ ಧ್ವನಿಪೂರ್ಣವಾಗಿದೆ; ಆಧುನಿಕ ಸಾಮ್ರಾಜ್ಯಶಾಹಿಗೆ ಬಡ ರಾಷ್ಟ್ರಗಳ ಶೋಷಣೆಯೂ ಒಂದು ‘ಆಟವೆ.’

ಈ ವರ್ಗದ ಇತರ ಕಥೆಗಳೂ ಇದೇ ಬಗೆಯ ಚಿಂತನೆಯಿಂದ ರೂಪಿತವಾಗಿವೆ. “ಸಶೇಷ” ಕಥೆಯು ದೈನಿಕ ಖರ್ಚು-ವೆಚ್ಚಗಳನ್ನು ದಾಖಲಿಸುತ್ತಿದ್ದ, ‘ನೈತಿಕತೆಯ ಕಾವಲುಗಾರನ ಥರ’ ನಮ್ಮನ್ನು ಅಂಕೆಯಲ್ಲಿಡುತ್ತಿದ್ದ ‘ಲೆಕ್ಕದ ಪುಸ್ತಕ’ ಇಂದು ಕಾಣೆಯಾಗಿರುವುದನ್ನು ಚಿತ್ರಿಸಿದರೆ, “ನೂಲಿನ ಏಣಿ” ಗಾಂಧಿ ಯುಗದ ಆದರ್ಶಗಳು ಇಂದು ಹಾಸ್ಯಾಸ್ಪದವಾಗಿರುವುದನ್ನು ದಾಖಲಿಸುತ್ತದೆ; ಎಲ್ಲೆಡೆಯೂ ಪತಿ-ಪತ್ನಿಯರೊಡನೆಯೂ ಮುಖವಾಡಗಳನ್ನು ಧರಿಸುವ ಇಂದಿನ ಮೇಲ್ವರ್ಗದ ಜನರ ಕೃತಕ ಬದುಕನ್ನು “ಪ್ರತ್ಯಕ್ಷ” ಬಯಲು ಮಾಡಿದರೆ, “ಶ್ರವಣ ಸರ್ವೀಸ್” ಇಂದಿನ ನಗರೀಕರಣದ ಕಾರಣವಾಗಿ ‘ನೆಮ್ಮದಿಯನ್ನು ಮಾರುವುದೂ’ ಒಂದು ‘ಉದ್ಯೋಗ’ವಾಗಿರುವುದನ್ನು ತೋರಿಸುತ್ತದೆ. ಈ ದಿಕ್ಕಿನಲ್ಲಿ ಮತ್ತೊಂದು ಅತ್ಯಂತ ಯಶಸ್ವಿ ಕಥೆಯೆಂದರೆ “ನಿರ್ವಾಣ.” ಈ ಕಥೆಯ ನಿರೂಪಕ ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿಯಾಗಿ, ಸದಾ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುತ್ತಿರುತ್ತಾನೆ. ಒಂದು ಸಲ, ಜಕಾರ್ತಾದಲ್ಲಿ ಇವನಿದ್ದಾಗ, ತನ್ನ ಹೋಟೆಲ್‌ನಲ್ಲಿಯೇ ಇದ್ದ ಮತ್ತೊಬ್ಬ ಭಾರತೀಯನನ್ನು ತನ್ನ ಹಳೆಯ ಕಲೀಗ್ ಜ್ಯೋತಿರ್ಮೊಯಿ ಎಂದು ಗುರುತಿಸುತ್ತಾನೆ; ಅವನೂ ನಿರೂಪಕನನ್ನು ಪ್ರಸಿದ್ಧ ಲೇಖಕನಾದ ರತನ್ ಕಾವಲೆ ಎಂದು ಗುರುತಿಸುತ್ತಾನೆ; ಆದರೆ ಫೋನಿನಲ್ಲಿ ಮಾತನಾಡುವಾಗ ಅವನು ತನ್ನನ್ನು ಫಣೀಶ್ ಎಂದು ಕರೆದುಕೊಳ್ಳುತ್ತಾನೆ. ತಾಸುಗಟ್ಟಲೆ ತಮ್ಮ ತಮ್ಮ ಕೆಲಸದ ಬಗ್ಗೆ, ಕುಟುಂಬದ ಬಗ್ಗೆ, ಗತ ಕಾಲದ ಬಗ್ಗೆ ಮಾತನಾಡುತ್ತಾ ರಾತ್ರಿಯನ್ನು ಕಳೆದು ಬೆಳಿಗ್ಗೆ ಹೋಟೆಲ್ ಬಿಡುವಾಗ ಅವನು ತಾನು ‘ಫಣೀಶ್’ ಅಲ್ಲ ಎಂದು ಹೇಳುತ್ತಾನೆ ಮತ್ತು ನಿರೂಪಕನು ತಾನೂ ‘ರತನ್ ಕಾವಲೆ ಅಲ್ಲ’ ಎಂದು ಸಮಜಾಯಿಶಿ ಕೊಡುತ್ತಾನೆ. ಹಾಗೆ ಒಬ್ಬರಿಗೆ ಮತ್ತೊಬ್ಬರ ಹೆಸರು ಗೊತ್ತಾಗದೆಯೇ ಇಬ್ಬರೂ ದೂರವಾಗುತ್ತಾರೆ. ‘ಈ ಸ್ಥಿತಿಯೂ ಒಂದು ಬಗೆಯ ನಿರ್ವಾಣ’ ಎಂದು ವ್ಯಂಗ್ಯಪೂರ್ವಕವಾಗಿ ಕಥೆ ಧ್ವನಿಸುತ್ತದೆ. ಪ್ರಾಚೀನ ಕಾಲದಲ್ಲಿ ‘ನಿರ್ವಾಣ’ವನ್ನು ಹೊಂದುವುದು ಎಂದರೆ ಜಾತಿ-ಕುಲ-ನಾಮಧೇಯ-ರೂಪುಗಳಿಂದ ಮುಕ್ತನಾಗಿ ಬುದ್ಧನಂತಾಗುವುದು; ಆದರೆ ಇಂದು ಕಾರ್ಪೊರೇಟ್ ಜಗತ್ತು ತನ್ನ ಉದ್ಯೋಗಿಗಳಿಗೆ ಇನ್ನೊಂದು ಬಗೆಯ ನಿರ್ವಾಣವನ್ನು ಕೊಡುತ್ತಿದೆ: ಯಾವ ಕಂಪನಿಯ ಉದ್ಯೋಗಿ ಯಾರಾದರೂ ಆಗಬಹುದು; ಎಲ್ಲಾ ಕಾರ್ಪೊರೇಟ್ ಉದ್ಯೋಗಿಗಳು ಒಂದೇ ಬಗೆಯ ಜೀವನಶೈಲಿಯನ್ನು ಅನುಸರಿಸುವುದರಿಂದ ಹೆಸರುಗಳು ಬದಲಾದರೂ ಏನೂ ಅನರ್ಥವಾಗುವುದಿಲ್ಲ; ಆ ಬಗೆಯ ಎಲ್ಲಾ ಉದ್ಯೋಗಿಗಳ ಕೌಟುಂಬಿಕ ಬದುಕೂ ಭಗ್ನವಾಗಿರುತ್ತದೆ ಮತ್ತು ಎಲ್ಲರೂ ತಾವು ಹುಟ್ಟಿದ ದೇಶ, ಭಾಷೆ, ಸಂಸ್ಕೃತಿಗಳಿಂದ ದೂರ ಹೋಗಿರುತ್ತಾರೆ. ಇಂದಿನ ಭಾರತೀಯ ಕಾರ್ಪೊರೇಟ್ ಜಗತ್ತಿನ ಅಸಾಂಗತ್ಯವನ್ನು ಅತ್ಯಂತ ಧ್ವನಿಪೂರ್ಣವಾಗಿ ನಾಟ್ಯೀಕರಿಸುವ “ನಿರ್ವಾಣ” ಒಂದು ಅತ್ಯಂತ ಯಶಸ್ವಿ ಅಸಂಗತ ಕಥೆ.

ಈ ಸಂದರ್ಭದಲ್ಲಿ, ಮತ್ತೂ ಒಂದು ಅಂಶವನ್ನು ಗಮನಿಸಬೇಕು: ವಿವೇಕರ ಹೆಚ್ಚಿನ ಕಥೆಗಳ ಶೀರ್ಷಿಕೆಗಳೂ ತುಂಬಾ ಧ್ವನಿಪೂರ್ಣವಾಗಿರುತ್ತವೆ: ‘ಕಂತು’ ಎಂದರೆ ‘ಮನ್ಮಥ,’ ‘ತಿಂಗಳು ತಿಂಗಳು ಕಂತು ಕಟ್ಟುವುದು’ ಹಾಗೂ ‘ಕ್ಷೀಣಿಸುವುದು’; ಈ ಎಲ್ಲಾ ಅರ್ಥಸಾಧ್ಯತೆಗಳು ( ‘ಕಾಮನೆಗಳು’ ಹಾಗೂ ‘ಮೌಲ್ಯಗಳು ಕ್ಷೀಣಿಸುವುದು’) “ಕಂತು” ಕಥೆಯುದ್ದಕ್ಕೂ ಬೆಳೆಯುತ್ತಾ ಹೋಗುತ್ತವೆ; ‘ಹುಲಿಯ ಬೆನ್ನೇರಿದವನಿಗೆ ಅದರಿಂದ ಬಿಡುಗಡೆಯೇ ಇಲ್ಲ’ (ಇಳಿದರೆ ಹುಲಿ ತಿನ್ನುತ್ತದೆ, ಸವಾರಿ ಮಾಡುತ್ತಲೇ ಇದ್ದರೆ ಹಸಿವಿನಿಂದ ಸಾವು) ಎಂಬ ಗಾದೆ “ಹುಲಿ ಸವಾರಿ” ಕಥೆಯ ಮೂಲಕ ನಮ್ಮ ದೇಶವು ಅನುಸರಿಸುತ್ತಿರುವ ಮುಕ್ತಮಾರುಕಟ್ಟೆ ಹಾಗೂ ಖಾಸಗೀಕರಣದ ಹಾದಿಯಿಂದ ಹಿಂತಿರುಗಲು ಸಾಧ್ಯವೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ; ‘ನೂಲಿನ ಏಣಿ’ ಸ್ವಲ್ಪ ಕಾಲದನಂತರ ನಿರುಪಯುಕ್ತವಾಗುತ್ತದೆ; ಅದೇ ರೀತಿ ಗಾಂಧೀಜಿಯ ‘ನೂಲಿನ’ ಮಂತ್ರ ಇಂದು ಅಪ್ರಸ್ತುತವಾಗುತ್ತಿದೆ, ಎಂಬುದನ್ನು “ನೂಲಿನ ಏಣಿ” ಕಥೆ ವಿಷದಪಡಿಸುತ್ತದೆ; ‘ನಿರ್ವಾಣ’ ಪದವಂತೂ (ಮೇಲೆ ವಿವರಿಸಿದಂತೆ) ಪ್ರಾಚೀನ ಆಧ್ಯಾತ್ಮಿಕ ಪರಿಕಲ್ಪನೆಯೊಡನೆ ವ್ಯಂಗ್ಯ-ಸಾದೃಶ್ಯವನ್ನು ಸಾಧಿಸುತ್ತದೆ.

* * *

ವಸಾಹತುಶಾಹಿ ಆಗಮನ ಮತ್ತು ಅದರ ಪರಿಣಾಮವಾದ ಇಂಗ್ಲೀಷ್ ಶಿಕ್ಷಣ ಇವುಗಳ ಕಾರಣದಿಂದ ಇಡೀ ಭಾರತೀಯ ಸಮಾಜದಲ್ಲಿ ಒಂದು ಬಗೆಯ ಚಲನೆಯುಂಟಾದರೆ, ಕಳೆದ ಶತಮಾನದ ಕೊನೆಯ ದಶಕದಲ್ಲಿ ಭಾರತವು ‘ಲೈಸೆನ್ಸ್-ಪರ್ಮಿಟ್ ವ್ಯವಸ್ಥೆ’ಗೆ ಮಂಗಳವನ್ನು ಹಾಡಿ, ಖಾಸಗೀಕರಣ, ಮುಕ್ತ ಮಾರುಕಟ್ಟೆ, ಇತ್ಯಾದಿಗಳಿಗೆ ತನ್ನನ್ನು ತೆರೆದುಕೊಂಡಿದ್ದರಿಂದ ಇಡೀ ಸಮಾಜದಲ್ಲಿ ಮತ್ತೊಂದು ಬಗೆಯ ಅಗಾಧ ಚಲನೆ ಕಂಡು ಬಂದಿತು. ಸ್ವಾತಂತ್ರ್ಯ ಲಭಿಸಿದಾಗ ಅತ್ಯಂತ ಕ್ಷುಬ್ದ ಹಾಗೂ ಬಡ ದೇಶವಾಗಿದ್ದ ಭಾರತ ಇಂದು ಬೃಹತ್ ಔದ್ಯೋಗೀಕರಣದಿಂದ ಆರ್ಥಿಕವಾಗಿ ಬಲಶಾಲಿಯಾಗಿದೆ; ಹಾಗೆಯೇ, ಈ ಔದ್ಯೋಗೀಕರಣದಿಂದ ಮನೆ-ಮಠಗಳನ್ನು ಕಳೆದುಕೊಂಡ ಲಕ್ಷಾಂತರ ಜನರು ಬೀದಿ ಪಾಲಾಗಿದ್ದಾರೆ. ಅತಿ ಶ್ರೀಮಂತರು ಹಾಗೂ ನಿರ್ಗತಿಕರು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮಧ್ಯಕಾಲೀನ ಮತಾಚರಣೆಗಳು, ಅಂತಾರಾಷ್ಟ್ರೀಯ ಖ್ಯಾತಿಯ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಏಕೋಪಾಧ್ಯಾಯ ಶಾಲೆಗಳು –ಈ ಬಗೆಯ ಕ್ರೂರ ಸ್ವವಿರೋಧಗಳನ್ನೊಳಗೊಂಡ ಇಂದಿನ ಸಾಮಾಜಿಕ ಚಲನೆಯನ್ನು ಹಾಗೂ ಅದರ ಗೊತ್ತು-ಗುರಿಗಳನ್ನು ಹೇಗೆ ಗ್ರಹಿಸಬೇಕು? ಯಾವ ಪರಿಪ್ರೇಕ್ಷ್ಯದಿಂದ? ಇಂದು ಕನ್ನಡದಲ್ಲಿ (ಮತ್ತು, ಪ್ರಾಯಃ, ಇತರ ಭಾರತೀಯ ಭಾಷೆಗಳಲ್ಲಿ) ಗಂಭೀರವಾಗಿ ಬರೆಯುತ್ತಿರುವ ಲೇಖಕರು ಎದುರಿಸುತ್ತಿರುವುದು ಈ ಬಗೆಯ ಗ್ರಹಿಕೆಯ ಹಾಗೂ ಸಂವಹನೆಯ ಸಮಸ್ಯೆಯನ್ನು.

‘ದೇಶಿ’ ಅಥವಾ ‘ವಸಾಹತೋತ್ತರ’ ಪರಿಪ್ರೇಕ್ಷ್ಯದಿಂದ ಎಂಬುದು ವಿವೇಕರ ನಿಲುವು ಎಂದು ಅವರ ಕಥೆಗಳಿಂದ ನಮಗೆ ಸ್ಪಷ್ಟವಾಗುತ್ತದೆ; ಮತ್ತು ಈ ‘ದೇಶಿ’ ಪರಿಪ್ರೇಕ್ಷ್ಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ‘ಅನ್ಯ’ವಾಗುತ್ತವೆ ಹಾಗೂ ತೃತೀಯ ಜಗತ್ತಿನ ಎಲ್ಲಾ ಬಗೆಯ ಅನರ್ಥಗಳಿಗೂ, ಕಷ್ಟ-ಕಾರ್ಪಣ್ಯಗಳಿಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಹೊಣೆಯಾಗುತ್ತವೆ (“ಹುಲಿ ಸವಾರಿ”ಯಲ್ಲಿ ಜೆಫ಼್ ಡಚ್ ಮೂಲದವ ಮತ್ತು ಇಂಗ್ಲಂಡ್‌ನಲ್ಲಿ ಬೆಳೆದವ ಎಂಬುದು ಅರ್ಥಪೂರ್ಣವಾಗಿದೆ; ಅವನು ಲೋಭದ ಆಸೆಯನ್ನು ತೋರಿಸಿಯೋ ಅಥವಾ ಹೆದರಿಸಿಯೋ ಉಚೆಯನ್ನು ತನ್ನ ಯೋಜನೆಗೆ ಒಪ್ಪುವಂತೆ ಮಾಡುತ್ತಾನೆ). ದೇಶಿ ಚಿಂತನೆಯ ನೆಲೆಯಿಂದ ನೋಡಿದಾಗ, ಇಂದಿನ ಭಾರತ, ತನ್ನ ಖಾಸಗೀಕರಣ ಮತ್ತು ಮುಕ್ತ ಮಾರುಕಟ್ಟೆಯ ನೀತಿಯಿಂದಾಗಿ ‘ಆರ್ಜನ ಸಮಾಜ’ವಾಗಿದೆ; ಮತ್ತು ಇಂದು ನಮಗೆ ಕಾಣುವ ಈ ದೇಶದ ಸಂಪತ್ತು “ದುಡಿಮೆಯೇ ಇಲ್ಲದೇ ಬರೀ ಕಾಗದದ ಮೇಲೆ ವೃದ್ಧಿಸುವ ಸಂಪತ್ತು” (“ಶರವಣ ಸರ್ವೀಸಸ್”), ಹಾಗೂ ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ನಾವು ಕಾಣುವುದು “ ಇನ್ನೊಬ್ಬರ ತಂತ್ರ ಊಹಿಸುವುದು, ಪ್ರತಿಯೇಟು ಹಾಕುವುದು, ಕೋಪ, ಕೃತಕ ನಗೆ, ಪಿಸು ಮಾತಿನ ಚರ್ಚೆಗಳು, ಪರಸ್ಪರ ಭಯಾನಕ ಸ್ಪರ್ಧೆ, ಗುಟ್ಟುಗಳು, ಚಕಚಕನೆ ಲಾಭನಷ್ಟ ಎಣಿಸುವುದು” (“ಹುಲಿ ಸವಾರಿ”). ಸಂಕ್ಷಿಪ್ತವಾಗಿ ಹೇಳಬೇಕಾದರೆ, ಇಂದು ಭಾರತದಲ್ಲಿ ನಾವು ಕಾಣುವುದು ದೇಶೀ ಉದ್ಯಮಗಳ ಸಾವು ಮತು ಮಾನವೀಯತೆಯ ಮುಖವಿಲ್ಲದ ವ್ಯಾಪಾರ. ಕಥೆಗಳ ಮೂಲಕ ಈ ಬಗೆಯ ವೈಚಾರಿಕತೆಯನ್ನು ಸಂವಹಿಸಲು ವಿವೇಕರು ವಾಸ್ತವವನ್ನು ಮೀರಲು ಅನುವು ಮಾಡಿಕೊಡಬಹುದಾದ ‘ಅನ್ಯೋಕ್ತಿ,’ ‘ಅತಿಶಯೋಕ್ತಿ,’ ‘ಅಸಂಗತ ತಂತ್ರ’ ಇತ್ಯಾದಿ ಸಂವಹನ ಮಾರ್ಗಗಳನ್ನು ದುಡಿಸಿಕೊಳ್ಳುತ್ತಾರೆ.

ವಸಾಹತುಶಾಹಿ ಚಿಂತನೆಯಾಗಲಿ ವಸಾಹತೋತ್ತರ ಚಿಂತನೆಯಾಗಲಿ, ಅನಿವಾರ್ಯವಾಗಿ ಅದು ಏಕಮುಖಿಯಾಗಿ ಅನ್ಯರನ್ನು ಸೃಜಿಸುತ್ತಲೇ ಹೋಗುತ್ತದೆ; ಮತ್ತು ಸಾಮಾಜಿಕ ಚರಿತ್ರಕಾರನಿಗಿರಬೇಕಾದ ‘ದೂರ’ವನ್ನು ಅದು ಇಲ್ಲವಾಗಿಸುತ್ತದೆ. ಈ ಹೇಳಿಕೆಯ ನಿದರ್ಶನವಾಗಿ ನಾವು “ಹುಲಿ ಸವಾರಿ” ಕಥೆಯನ್ನು ನೋಡಬಹುದು. ಮ್ಯಾನೇಜ್‌ಮೆಂಟ್ ಆಟವನ್ನು ರೂಪಿಸಿದವನು ಅಮೆರಿಕಾದ ಪೀಟರ್ ಮತ್ತು ನಿರೂಪಕನ ಗುಂಪನ್ನು ನಿಯಂತ್ರಿಸುವವನು ಡಚ್ ಜೆಫ಼್. “ನೋಡು ಜೆಫ಼್‌ಗಿಂತ ನಿನಗೇ ಹೆಚ್ಚು ಇದು ಅರ್ಥವಾಗಬೇಕು. ನೂರಾರು ಜಾತಿ ಧರ್ಮ ದೇವರು ಇರುವ ನಿಮಗೂ ನಮಗೂ ಆಳದಲ್ಲಿ ಬಹಳ ಅಂತರವಿಲ್ಲ. …” ಎಂಬ ಉಚೆಯ ಮಾತುಗಳು ಆ ಮಾತುಗಳಿಗಾಗಿಯೇ ಉಚೆಯ ಪಾತ್ರ ಅಲ್ಲಿ ಬಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಎಂದರೆ, ‘ಜೆಫ಼್ ಅನ್ಯ, ಉಚೆ ಸ್ವ’ ಎನ್ನುವಂತಹ ಸಮೀಕರಣ ಉದ್ದಕ್ಕೂ ಕಥೆಯನ್ನು ರೂಪಿಸಿದೆ. ಕಥೆಯನ್ನು ಓದಿ ಮುಗಿಸಿದನಂತರ, ‘ವೆರಿ ಕ್ಲೆವರ್! ಇದೊಂದು ಅತ್ಯಂತ ಜಾಣತನದಿಂದ ಕಟ್ಟಲ್ಪಟ್ಟಿರುವ ಕಥೆ’ ಎಂದು ನಮಗೆ ತೋರುತ್ತದೆಯೇ ಹೊರತು, ಭಾವನಾತ್ಮಕ ಅನುಭವವೇನೂ ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ದೇಶಿ ವೈಚಾರಿಕತೆಯಿದ್ದರೂ ಅದನ್ನು ಅರಗಿಸಿಕೊಳ್ಳುವ ಕಥೆ “ಕಂತು”; ಈ ಕಥೆ ಒಂದೇ ಸನ್ನಿವೇಶವನ್ನು ಭಿನ್ನ ಭಿನ್ನ ಪರಿಪ್ರೇಕ್ಷ್ಯಗಳಿಂದ ನೋಡುತ್ತಾ, ಒಂದು ಸಮಾಜದ ಹೊರಳುವಿಕೆಯಲ್ಲಿರುವ ನೋವು, ಕ್ರೌರ್ಯ, ಉತ್ಸಾಹ, ನಿರೀಕ್ಷೆ, ಇತ್ಯಾದಿಗಳಿಂದ ಕೂಡಿದ ಸಂಕೀರ್ಣ ಅನುಭವವನ್ನು ಕೊಡುತ್ತದೆ. ವಿವೇಕರ ಹೆಚ್ಚಿನ ಕಥೆಗಳು “ಹುಲಿ ಸವಾರಿ” ಮತ್ತು “ಕಂತು” ಇವೆರಡರ ನಡುವೆ ಸದಾ ಓಲಾಡುತ್ತವೆ.

ನಿರುದ್ವಿಗ್ನ ಭಾಷಾಸ್ತರ ಮತ್ತು ವ್ಯಂಗ್ಯ-ವೈನೋದಿಕ ಶೈಲಿ — ಇವು ವಿವೇಕರ ಕಥೆಗಳ ವಿಶಿಷ್ಟ ಲಕ್ಷಣಗಳು. ಆದರೆ, ಕೆಲ ಸಂದರ್ಭಗಳಲ್ಲಿ ಇವರ ಭಾಷೆ ಕಾವ್ಯಾತ್ಮಕ-ಭಾವನಾತ್ಮಕವೂ ಆಗಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು: “ಆ ದಿಬ್ಬದ ಮೇಲೆ ನವಿಲುಗಳು ಕುಣಿದಾವು ಅಂತ ಕಾದರೆ ಕತ್ತು ಕೊಂಕಿಸಿ ಬಳುಕಿ ಮಾಯವಾಗಿಬಿಟ್ಟವು. ಅವು ನರ್ತಿಸುವುದನ್ನು ನೋಡಬೇಕಂತ ಅದಮ್ಯ ಆಸೆಯಾಯಿತು. ಇಲ್ಲೇ ಕಾಯುತ್ತಾ ಉಳಿದೇನು. ಮರಳಲ್ಲಿ ಮರಳಾಗಿ ನೀರಲ್ಲಿ ನೀರಾಗಿ ಕಾದೇನು. ಗಾಳಿಯಲ್ಲಿ ಗಾಳಿಯಾಗಿ ಇಲ್ಲೇ ಸುಳಿದೇನು. ಆದರೇನು — ಸೂರ್ಯ ಏರಿ ಬಂದೇ ಬಿಟ್ಟ. ತಾನು ಕಂಡದ್ದು ನಾಟ್ಯದ ಕೊನೆಯ ಕ್ಷಣದ ಝಳಕೋ ತನ್ನ ಭ್ರಾಂತಿಯೋ ಅಥವಾ ಆ ದಿವ್ಯಕ್ಷಣ ಹೆಪ್ಪುಗಟ್ಟಿ ನಿಂತಾಗ ತನಗೆ ಎಚ್ಚರ ತಪ್ಪಿತ್ತೋ? ತಿಳಿಯದು.”

ಗಾಢ ದೇಶಿ ಪ್ರಜ್ಞೆ ಮತ್ತು ಚರಿತ್ರಕಾರನಿಗಿರಬೇಕಾದ ವೈಚಾರಿಕ ವಸ್ತುನಿಷ್ಟತೆ — ಇವೆರಡನ್ನೂ ಹೇಗೆ ಬೆಸೆಯುವುದು ಎಂಬುದು, ಪ್ರಾಯಃ, ವಿವೇಕ ಶಾನಭಾಗರನ್ನು ಎಂದಿನಿಂದಲೂ ಕಾಡುತ್ತಿರುವ ಪ್ರಶ್ನೆಯೆಂದು ಕಾಣುತ್ತದೆ.