ಈ ಪವಿತ್ರ ಭಾರತದಲ್ಲಿ
ಹಿಂದುಗಳಿದ್ದಾರೆ, ಮುಸ್ಲಿಮರಿದ್ದಾರೆ
ಕ್ರೈಸ್ತರಿದ್ದಾರೆ, ಸಿಖ್ಖರಿದ್ದಾರೆ
ಜೈನರಿದ್ದಾರೆ, ಬೌದ್ಧರಿದ್ದಾರೆ
ಬ್ರಾಹ್ಮಣರಿದ್ದಾರೆ, ಲಿಂಗಾಯತರಿದ್ದಾರೆ
ಒಕ್ಕಲಿಗರಿದ್ದಾರೆ, ಅಸ್ಪೃಶ್ಯರಿದ್ದಾರೆ,
ಆದರೆ ನಾನು ಹುಡುಕುತ್ತಿರುವುದು
ಮನುಷ್ಯರನ್ನು!
ದಯಮಾಡಿ ಹೇಳಿ
ಅವರೆಲ್ಲಿದ್ದಾರೆ?


ಈ ದೇಶದ ಉದ್ದಗಲಕ್ಕೂ
ಅಸಂಖ್ಯಾತ ಗುಡಿಗಳಿದ್ದಾವೆ
ಮಸೀದಿಗಳಿದ್ದಾವೆ, ಮಂದಿರಗಳಿದ್ದಾವೆ
ಚರ್ಚುಗಳಿದ್ದಾವೆ, ಮಠಗಳಿದ್ದಾವೆ,
ಆದರೆ ನಾನು ಹುಡುಕುತ್ತಿರುವುದು
ಅವುಗಳೊಳಗೆ ಇರಬೇಕಾದ ದೇವರನ್ನು.
ದಯಮಾಡಿ ಹೇಳಿ
ಅವನೆಲ್ಲದ್ದಾನೆ?


ಈ ದೇಶದ ಹಿಂದೂಗಳಿಗೆ
ಭಗವದ್ಗೀತೆಯಿದೆ
ಶಾಸ್ತ್ರ-ಪುರಾಣ-ಆಗಮಗಳಿವೆ
ಮುಸಲ್ಮಾನರಿಗೆ ಖುರ್-ಆನ್ ಇದೆ
ಕ್ರೈಸ್ತರಿಗೆ ಬೈಬಲ್ ಇದೆ
ಸಿಖ್ಖರಿಗೆ ಗ್ರಂಥ ಸಾಹೆಬ್ ಇದೆ
ಲಿಂಗಾಯತರಿಗೆ ವಚನಗಳಿವೆ,
ಆದರೆ ನಾನು ಹುಡುಕುತ್ತಿರುವುದು
ಪ್ರೀತಿಗಾಗಿ!
ದಯಮಾಡಿ ಹೇಳಿ; ಅದೆಲ್ಲಿದೆ?