ಸೊಂಪಾದ ಹಸಿರು ಹುಲ್ಲಿನ ಮೇಲೆ ಹಾರಾಡುವ
ಹಳದಿಯ ಚಿಟ್ಟೆಗಳನ್ನು ನೋಡಿದ್ದೀಯಾ?
ನೋಡಿಲ್ಲವೆ ? ಬಹುಶಃ ನಿನಗೆ ಸಂತೋಷವೆಂದರೇನೆಂದು
ಗೊತ್ತೇ ಇಲ್ಲ
ಸೌಂದರ್ಯವೆಂದರೇನೆಂಬುದೂ
ಗೊತ್ತೇ ಇಲ್ಲ
ಈ ಎರಡರ ನಡುವೆ-
ಕಣ್ಣೀರಿರಬಹುದೆಂಬುದೂ
ಗೊತ್ತೇ ಇಲ್ಲ.

ಕೆಚ್ಚಲ ಗುಮ್ಮಿ ಹಾಲ್ಕುಡಿವ ಎಳೆಯ ಕರುವಿನ ಕುಣಿತ
ನೋಡಿದ್ದೀಯಾ?
ನೋಡಿಲ್ಲವೆ ? ಬಹುಶಃ ನಿನಗೆ ಚೈತನ್ಯವೆಂದರೇನೆಂದು
ಗೊತ್ತೇ ಇಲ್ಲ
ವಾತ್ಸಲ್ಯವೆಂದರೇನೆಂಬುದೂ
ಗೊತ್ತೇ ಇಲ್ಲ
ಈ ಎರಡರ ನಡುವೆ-
ಕ್ರೌರ್ಯವಿರಬಹುದೆಂಬುದೂ
ಗೊತ್ತೇ ಇಲ್ಲ

ಆಕಾಶದಿಂದ ಧಾರಾಕಾರವಾಗಿ ಸುರಿವ ಮಳೆಯನ್ನು
ನೋಡಿದ್ದೀಯಾ?
ನೋಡಿಲ್ಲವೆ? ಬಹುಶಃ ನಿನಗೆ ಪ್ರೀತಿ ಎಂದರೇನೆಂದು
ಗೊತ್ತೇ ಇಲ್ಲ
ವಿರಹ ಎಂದರೇನೆಂಬುದೂ
ಗೊತ್ತೇ ಇಲ್ಲ
ಈ ಎರಡರ ನಡುವೆ-
ದ್ವೇಷವಿರಬಹುದೆಂಬುದೂ
ಗೊತ್ತೇ ಇಲ್ಲ.

ನಿರಭ್ರವಾದ ನೀಲಿಯ ಮಹಾ ಗಗನ ವಿಸ್ತಾರವನ್ನು
ನೋಡಿದ್ದೀಯಾ?
ನೋಡಿಲ್ಲವೆ? ಬಹುಶಃ ನಿನಗೆ ಮೌನ ಎಂದರೇನೆಂದು
ಗೊತ್ತೇ ಇಲ್ಲ
ರಹಸ್ಯ ಎಂದರೇನೆಂಬುದೂ
ಗೊತ್ತೇ ಇಲ್ಲ
ಈ ಎರಡರ ನಡುವೆ-
ವಿಸ್ಮಯವಿರಬಹುದೆಂಬುದೂ
ಗೊತ್ತೇ ಇಲ್ಲ.