ಸಾಮಗಾನ

ಶ್ರೀಮಾನ್ ಶಿವರುದ್ರಪ್ಪನವರ ಈ ಕವನಗಳನ್ನು ಕನ್ನಡ ಸಾಹಿತ್ಯಲೋಕ ಆದರದಿಂದ ಸ್ವಾಗತಿಸುತ್ತದೆ ಎಂದು ನಂಬುತ್ತೇನೆ. ಎರಡು ಕಾರಣಗಳಿಂದಾಗಿ:

ಒಂದು, ಯಾವ ಚೇತನವಾಗಲಿ ಯಾವ ನೆವದಿಂದಾಗಲಿ ಅಥವಾ ಯಾವ ಕಾರಣದಿಂದಾಗಲಿ ಊರ್ಧ್ವದ ಕಡೆಗೆ, ಉದ್ಧಾರದ ಕಡೆಗೆ ಅಭಿಮುಖವಾಯಿತೆಂದರೆ ಅದು ಜಗತ್ತಿನ ಶ್ರೇಯಸ್ಸಿಗೆ ಒಂದಿನಿತಾದರೂ ಸೇವೆ ಸಲ್ಲಿಸುವುದರಿಂದ ಶ್ರೇಯೋಕಾಂಕ್ಷಿಗಳೆಲ್ಲರ ಅಭಿನಂದನೆಗೂ ಪಾತ್ರವಾಗಬೇಕಾದದ್ದೆ. ಎರಡು, ಅತಿಯಾದ ಲೌಕಿಕತೆ, ಪಶುವೂ ನಾಚಿಕೊಳ್ಳಬಹುದಾದ ಸ್ವಾರ್ಥತೆ, ಶ್ರೇಯಸ್ಸನ್ನು ನಿರ್ಲಕ್ಷಿಸುವ ಇಂದ್ರಿಯ ಭೋಗಾಸಕ್ತಿ, ತನಗಿಂತ ಉತ್ತಮವಾದುದನ್ನು ಅವಹೇಳನಮಾಡಿ ಕೆಳಗೆಳೆಯುವುದರಿಂದಲೆ ಅದರೊಡನೆ ತನ್ನ ಸಮಾನತೆಯನ್ನು ಸ್ಥಾಪಿಸುತ್ತೇನೆಂಬ ದಂಭದ ಆಸುರೀಚಾಪಲ್ಯ ಇತ್ಯಾದಿ ಲಕ್ಷಣಗಳಿಂದ ನೀಚವಾಗುವಂತೆ ತೋರುತ್ತಿರುವ ನಮ್ಮ ಸುತ್ತಣ ಜನಜೀವನದ ಮಧ್ಯೆ ಯಾವುದಾದರೊಂದು ಜೀವ ಆಕಾಶದ ಕಡೆಗೆ ಕಣ್ಣೆತ್ತಿ ನಡೆದರೆ, ಆದರ್ಶದ ಕಡೆಗೆ ಅರಕೆಯ ದಿಟ್ಟಿಯನ್ನಾದರೂ ಬೀರಿದರೆ, ಉತ್ತಮವಾದುದನ್ನು ಆಶಿಸಿದರೆ, ಆರಾಧಿಸಿದರೆ, ಅನುಕರಿಸಿದರೆ, ಅನುಸರಿಸಿದರೆ ಅದು ನಿಜವಾಗಿಯೂ ಅಭಿನಂದನೀಯ. ಅಂತಹ ಚೇತನವನ್ನು, ಅಂತಹ ಜೀವನವನ್ನು ಸಾಹಿತ್ಯಲೋಕವಾದರೂ ಸಂತೋಷದಿಂದ ಸ್ವಾಗತಿಸದಿದ್ದರೆ ಗತಿಯೇನು? ಶಿವರುದ್ರಪ್ಪನವರ ಈ ಕವನಗಳಲ್ಲಿ ಆ ಊರ್ಧ್ವಗಮನಾಭಿಲಾಷೆ, ಆ ಆದರ್ಶೋನ್ಮುಖವಾದ ಅಭೀಪ್ಸೆ, ಸುಂದರವಾದುದನ್ನೂ ಸತ್ಯವಾದುದನ್ನೂ, ಶಿವವಾದುದನ್ನೂ ರಸಚೇತನದಿಂದ ಆರಾಧಿಸಿ, ಆಕ್ರಮಿಸಿ, ಆಗಬೇಕೆಂಬ ಒಂದು ಹಾರೈಕೆ ಇವುಗಳನ್ನು ನಿಸ್ಸಂದೇಹವಾಗಿ ಕಾಣುತ್ತೇವೆ.

ಈ ಕವನಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ಅಚ್ಚಾಗಿದ್ದಿದ್ದರೆ ಈ ಕವಿ ಒಡನೆಯೆ ನಾಡಿನ ಮೆಚ್ಚುಗೆಗೆ ಪಾತ್ರನಾಗಿ ಪ್ರಸಿದ್ಧನಾಗುತ್ತಿದ್ದ. ಆದರೆ ಈಗ ಹಾಗಾಗದಿರಬಹುದು. ಬಹುಶಾಖೆಗಳಲ್ಲಿ ಮುಂಬರಿಯುತ್ತಿರುವ ಕನ್ನಡ ಸಾಹಿತ್ಯದ ಒಂದು ಶಾಖೆಯಾದ ಈ ಭಾವಗೀತೆ ಇತರ ಶಾಖೆಗಳಿಗಿಂತಲೂ ಉನ್ನತತರವಾಗಿ, ಸುಪುಷ್ಟವಾಗಿ ಬೆಳೆದು ನಿಂತಿದೆ. ಈ ಕವನಗಳಲ್ಲ್ಲಿ ಕಂಡುಬರುವ ಅಚ್ಚುಕಟ್ಟಾದ ಭಾಷಾಶಯ್ಯೆ, ಪದಗುಂಫನಗಳಲ್ಲಿ ಕಂಡುಬರುವ ಕಲ್ಪನಾಚಾತುರ್ಯ, ಛಂದೋವಿಲಾಸದಲ್ಲಿ ನರ್ತಿಸುವ ನೈಪುಣ್ಯ ಇವುಗಳೆಲ್ಲಾ ಹಿರಿಯ ಕವಿಗಳ ಅಧ್ಯಯನದಿಂದ ಮೂಡಿಬಂದ ಫಪ್ರಸಾದಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಯಾವ ಭಾಷೆ, ಯಾವ ಶೈಲಿ, ಯಾವ ಛಂದಸ್ಸು, ಯಾವ ಕಲ್ಪನಾ ವಿಲಾಸ, ಯಾವ ಪದಸಂಘಟನಾ ಅಪೂರ್ವತೆ-ಇವುಗಳನ್ನು ಬಹು ಕಷ್ಟದಿಂದ ಹಿರಿಯ ಕವಿಗಳು ತಮ್ಮ ಬದುಕಿನ ಮೂಸೆಯಲ್ಲಿ ಕಾಯಿಸಿ, ಕರಗಿಸಿ, ಎರಕ ಹೊಯ್ದರೋ ಆ ಪದಪುಂಜಾಯುಧಪಂಕ್ತಿ ಈಗಿನ ಕವಿಯೋಧರಿಗೆ ಸುಲಭ ಸರಬರಾಜಿನ ವಸ್ತುಗಳಾಗಿವೆ. ಹಾಗಾಗುವುದೂ ಸ್ವಾಭಾವಿಕವೆ. ಆದರೆ ಅವುಗಳ ಪ್ರಯೋಗದ ಔಚಿತ್ಯದಲ್ಲಿ ಯಾವ ಕವಿ ತನ್ನ ಸ್ವಂತ ಭಾವಪ್ರಕಾಶನವನ್ನು ನಿಯಮಿಸಿಕೊಳ್ಳುತ್ತಾನೆಯೋ ಅವನು ಕೃತಕೃತ್ಯನಾಗುತ್ತಾನೆ. ಇಲ್ಲಿಯ ಕೆಲವು ಕವನಗಳಲ್ಲಾದರೂ ಅಂತಹ ಕೃತಕೃತ್ಯತೆಯನ್ನು ಸಹೃದಯರು ಅನುಭವಿಸದಿರರೆಂದು ನಂಬುತ್ತೇನೆ.

‘ಕರೆ’, ‘ಒಳದನಿ’, ‘ತೃಪ್ತಿ’ ಈ ಕವನಗಳಲ್ಲಿ ವ್ಯಕ್ತವಾಗಿರುವ ಶಿವರುದ್ರಪ್ಪನವರ ಹೃದಯದ ಭಕ್ತಿ, ಎಚ್ಚರಿಕೆ, ಹಾರೈಕೆಗಳು ಅವರ ಚೇತನವನ್ನು ಋಜುಪಥದಲ್ಲಿ ನಡೆಸಿ ಅವರನ್ನು ರಸಸೇತುವೆಯಿಂದಲೆ ಸತ್ಯ ಸೌಂದರ್ಯದ ಶಿವಸೀಮೆಗೆ ಕರೆದೊಯ್ಯಲಿ ಎಂದು ಹಾರೈಸಿ ಹರಸುತ್ತೇನೆ.

– ಕುವೆಂಪು
ಮೈಸೂರು
೪-೯-೫೧


ಚೆಲುವು-ಒಲವು

ಶ್ರೀಮಾನ್ ಶಿವರುದ್ರಪ್ಪನವರ ಕವನಗಳು ತಮ್ಮ ಬಾಹ್ಯಸೌಂದರ‍್ಯದಿಂದಲೂ ಬಗೆಯ ಕಾಂತಿಯಿಂದಲೂ ಸಹೃದಯರ ಮನಸ್ಸನ್ನು ಸೆಳೆದು ಈ ತರುಣ ಕವಿಗಳಿಗೆ ಯಶಸ್ಸನ್ನು ಈಗಾಗಲೇ ತಂದಿವೆ. ಈ ಕವನ ಸಂಗ್ರಹದಿಂದ ಈ ಯಶಸ್ಸು ವೃದ್ಧಿಯಾಗುತ್ತದೆಂಬ ವಿಷಯದಲ್ಲಿ ನನಗೆ ಸಂದೇಹವಿಲ್ಲ. ಕವನಗಳ ಸೊಗಸು ಅಂಥದು; ಅವನ್ನು ಪಡೆದ ಮನಸ್ಸು ಸುಸಂಸ್ಕೃತವಾದದ್ದು, ಕೋಮಲವಾದದ್ದು, ಪರಿಸರ ಸಂವೇದಿಯಾದದ್ದು ಮತ್ತು ರಸವನ್ನು ವಿಷಯಗಳ ಮುಖೇನ ಎತ್ತಿಕೊಡುವ ಸಾಮರ್ಥ್ಯವುಳ್ಳದ್ದು. ಈ ಸಂಗ್ರಹದಲ್ಲಿನ ಕೆಲವು ಪದ್ಯಗಳು ನನ್ನ ಮನಸ್ಸನ್ನು ಹಿಡಿದಿಟ್ಟ ರೀತಿಗೆ ನಾನು ಬೆರಗು-ಗೊಂಡಿದ್ದೇನೆ. ಅವು “ರಸ”ದ ವಿಷಯದಲ್ಲಿ ಕೆಲವು ಆಲೋಚನಾ ತರಂಗಗಳನ್ನು ಎಬ್ಬಿಸಿವೆ.

ಈ “ರಸ”ವೆನ್ನುವುದೇನು? ಇದೊಂದು ಮನಃಸ್ಥಿತಿ. ಮನಸ್ಸನ್ನು ಒಂದು ತೆರೆದ ಸ್ವಾಸ್ಥ್ಯಕ್ಕೆ ತರುವುದು, ಆ ಹದದಲ್ಲಿ ನಿಲ್ಲುವಂತೆ ಮಾಡುವುದು, ಅದರ ಆಳ ವಿಸ್ತಾರಗಳನ್ನು ಹೆಚ್ಚಿಸುವುದು – ಇದು ಅಷ್ಟು ಸುಲಭವಾದ ಕೆಲಸವಲ್ಲ. ಅದೊಂದು ಬ್ರಹ್ಮವಿದ್ಯೆ. ಏಕೆಂದರೆ: “ಅಸಂಶಯಂ ಮಹಾಬಾಹೋ, ಮನೋ ದುರ್ನಿಗ್ರಹಂ ಚಲಂ” ಎಂಬ ಗೀತಾ ಮಹಾವಾಕ್ಯ ಸತ್ಯ. ಅದು ನಿಂತೆಡೆ ನಿಲ್ಲದು; ಅದರ ಸಂಘಟನೆ ಬಹಳ ಕಷ್ಟ. ನೀರಿಲ್ಲದೆ ಹೇಗೆ ಜೀವ ಬಾಳಲಾರದೋ ಹಾಗೆಯೇ ಮನಸ್ಸಿಲ್ಲದೆ ಆತ್ಮ ಬದುಕಿ ಬಾಳಲಾರದು. ಒಂದು ಲಭ್ಯವಾಗುವಷ್ಟೂ ಇನ್ನೊಂದರ ಸಮೃದ್ಧಿ ಹೆಚ್ಚುತ್ತದೆ. ಆದುದರಿಂದ ಚಲಿಸುವ ಮನಸ್ಸಿನ ಚಲನವನ್ನು ಪಳಗಿಸಿ ಸ್ಥಿಮಿತಕ್ಕೆ ತಂದು ಮಡುಗಟ್ಟುವಂತೆ ನಿಲ್ಲಿಸುವ ಕುಶಲಿಯನ್ನು ಮನುಷ್ಯ ವರ್ಗವೇ ಆದರಿಸುತ್ತದೆ. ಇಂಥ ಕುಶಲ ಶಿಲ್ಪಿಗಳ ವರ್ಗಕ್ಕೆ ಸೇರಿದವನು ಕವಿ. ಅವನ ಕಾವ್ಯದಿಂದ ನಾವು ಬಯಸುವುದು ಆತ ನಮ್ಮ ಚಲ ಮನಸ್ಸಿನ ಚಲನವನ್ನು ಭಾವಗಳಿಂದ ಪಳಗಿಸಿ ರಸದಲ್ಲಿ ಸ್ಥಿಮಿತಗೊಳಿಸುವ ಸಾಮರ್ಥ್ಯವನ್ನು. ಆ ಸಾಮರ್ಥ್ಯವುಳ್ಳವನ ಕಲೆ, ರತ್ನ ಬೆಳಕನ್ನು ಹೇಗೋ ಹಾಗೆ, ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ – ಅಂದರೆ ನಮ್ಮ ಮನಸ್ಸನ್ನು ನಿಜವಾಗಿಯೂ ನಮ್ಮದನ್ನಾಗಿ ಮಾಡುತ್ತದೆ. ನಮ್ಮ ಮನಸ್ಸನ್ನು ನಮಗೆ ತಂದೊಪ್ಪಿಸುವುದಕ್ಕೆ ಕವಿ ಹುಡುಕುವ ವಿಷಯ ತಂತ್ರಗಳೇ ಆತನ ಕಾವ್ಯ. ಶ್ರೀಮಾನ್ ಶಿವರುದ್ರಪ್ಪನವರ ಪದ್ಯಗಳನ್ನು ಉದಾಹರಣೆಗೆ ತೆಗೆದುಕೊಂಡು ಈ ಜಿಜ್ಞಾಸೆಯನ್ನು ಸ್ವಲ್ಪ ಮುಂದುವರೆಸಬಹುದು.

ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸರು ಗಿಡದಿಂ-
ದೆಂತು ಮೂಡಿತು ಬೆಳ್ಳಗೆ!

ಮುಕ್ತಕದಂಥ ಮಾತು. ಈ ಕವನದಲ್ಲಿ ಬೇರೆ ಪದ್ಯಗಳಿಲ್ಲದೆ ಇದೊಂದೇ ಇದ್ದರೂ ಈ ನಾಲ್ಕು ಸಾಲುಗಳು ನಮ್ಮ ಮನಸ್ಸನ್ನು ತಡೆದಿಡುವ ಸಾಮರ್ಥ್ಯಕ್ಕೆ ಕುಂದು ಬರುತ್ತಿರಲಿಲ್ಲ. ಮಿಕ್ಕ ಸಾಲುಗಳಿಂದ ಈ ಆಶ್ಚರ್ಯಭಾವಕ್ಕೆ ಅಷ್ಟು ಪೋಷಣೆ ದೊರೆತಿಲ್ಲವೆಂದು ಹೇಳಬಹುದು. ಈ ವ್ಯಂಗ್ಯಾರ್ಥವನ್ನು ವಾಚ್ಯಕ್ಕೆ ತಿರುಗಿಸಲು ಹವಣಿಸಿ ಆ ಉಪಮೆಗಳೂ ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡಿರುವಂತೆ ತೋರುತ್ತದೆ. ಈಗ “ಅಲೆಗಳು” ಎಂಬ ಪದ್ಯವನ್ನು ತೆಗೆದುಕೊಳ್ಳಿ. ಎಷ್ಟು ಸುಂದರವಾದ ಕವನ. “ಕೆರೆಯ ಮನಸು ದಡಕೆ ನುಡಿವ ತುಂಬೊಲವಿನ ನುಡಿಗಳೇ” ಎನ್ನುವಂಥ ಸಂಬೋಧನೆಗಳು ಎಷ್ಟು ರಮ್ಯವಾಗಿವೆ! ಆದರೆ ಈ ಕವನದಲ್ಲಿ ಕೊನೆಯ ಏಳು ಸಾಲುಗಳೂ ಮತ್ತು “ಆದರಯ್ಯೊ ಕಲ್ಲುದಡದ ಎದೆಗೆ ಬರಿದೆ ಬಡಿವಿರಿ” ಎಂಬ ಕನಿಕರದ ಭಾವವನ್ನು ವಾಚ್ಯಕ್ಕಿಳಿಸುವ ಸಾಲುಗಳೂ ಇಲ್ಲದಿದ್ದರೆ ಈ ಕವನ ಎಷ್ಟೊಂದು ಶಕ್ತವಾಗುತಿತ್ತು! ಹೀಗೆ ಒಂದು ಸಾಲನ್ನು ಕಳೆದುಕೊಂಡರೆ ರಮ್ಯತರವಾಗುವ ಮತ್ತೊಂದು ಪದ್ಯ “ಸುಂಟರಗಾಳಿ” ಎಂಬ ಪದ್ಯ, “ಗಾಂಧೀಜಿಯ ವ್ಯಕ್ತಿತೆಯಲಿ ಮೇಲೆದ್ದಾ ಜನತೆಯೊಲು” ಎಂಬಲ್ಲಿ ಆ ಪದ್ಯಕ್ಕೆ ಪದ್ಯವೇ ಧ್ವನಿಸುತಿದ್ದ ಭಾವ ವಾಚ್ಯವಾಗಿ ಅದರ ಸಾಮರ್ಥ್ಯವನ್ನು ಕುಂಠಿಸುತ್ತದೆ. ಇಂಥ ಪದ್ಯಗಳಲ್ಲಿ ಕವಿಗೆ “ಎಲ್ಲಿ ನನ್ನ ಭಾವವನ್ನು ಸಹೃದಯರು ಗ್ರಹಿಸುವುದಿಲ್ಲವೋ” ಎಂಬ ಆತಂಕ ಕಾವ್ಯಸಮಾಧಿಗೆ ಅಡ್ಡ ಬಂದು ಆ ಸಮಾಧಿಯನ್ನು ತುಸ ಚಲಿಸುವಂತೆ ಮಾಡಿದೆ ಎನ್ನಬಹುದು. ಇನ್ನು “ಕ್ರಾಂತಿಕಾರ” ಎಂಬ ಮತ್ತೊಂದು ಮನೋಹರವಾದ ಪದ್ಯವನ್ನು ನೋಡೋಣ. ಅಲ್ಲಿ ಈ ಆತಂಕದ ಸುಳಿವಿಲ್ಲ. ಆ ಪದ್ಯದ ಸಮಗ್ರಭಾವ ಯಾವ ಒಂದು ಸಾಲಿನಲ್ಲೂ ಮಡುಗಟ್ಟಿ ನಿಲ್ಲದೆ, ಸಾಲು ಸಾಲಿನಿಂದಲೂ ಭಾವ ಪ್ರವಾಹಗಳನ್ನು ಕೊಂಡು, ಸಮಗ್ರ ಪದ್ಯದಲ್ಲಿ ಮಡುಗಟ್ಟಿ ನಿಂತಿದೆ. ಸುಂದರವಾಗಿ ವ್ಯಾಖ್ಯಾನವನ್ನು ಬೇಡುವ ಪಂಕ್ತಿಗಳಿಗೂ ಇಲ್ಲಿ ಕೊರತೆಯಿಲ್ಲ.

ಅದೊಬಂದ ಇವನೊಂದು ಕಿರಿಯ ಬಿರುಗಾಳಿ
ಮನೆಯ ಒಳಗೂ ಹೊರಗೂ ಇವನದೇ ದಾಳಿ’
ಎಂದು ಪ್ರಾರಂಭವಾಗಿ
ಹೊಳೆವೆಳೆಯ ಕಂಗಳಲಿ ಬೆಳುದಿಂಗಳನು ತುಂಬಿ
ತಂದು ಮನೆಯಂಗಳಕೆ ಸುರಿವ ಧೀರ”

*  *  *

“ಚಂದು ಮಾಮನ ಆಳಿಯ” (ಈ ಅರ್ಧಸಾಲು ನನಗೆ ನಿಜವಾಗಿಯೂ ಪುಲಕವನ್ನು ತಂದಿತು)

*  *  *
ಇವ ಮಾಯಕಾರ
ಎರಡು ಬಾಳನು ಬೆಸೆದ ಸೂತ್ರಕಾರ”

ಎಂಬಲ್ಲಿಗೆ ಮುಗಿಯುವ ಈ ಬಂಧುರ ಕವನ ತನ್ನ ಪಂಕ್ತಿ ಪಂಕ್ತಿಗಳಲ್ಲಿ ತರುವ ಸುಖ ಒಂದು ತೆರದ್ದು; ವಿಶ್ರಮಿಸಿದ ಮೇಲೆ ತರುವ ಸುಖ ಮತ್ತೊಂದು ತೆರದ್ದು. ಈ ಪದ್ಯದಲ್ಲಿ ‘ಸಂಘಾತ’ವೆಂಬ ಅಮೋಘವಾದ ಗುಣವಿದೆ. “ಕಟ್ಟಿಗೆಯ ಮೇಲೆ ಕಟ್ಟಿಗೆಯನ್ನಿಟ್ಟರೆ ಹೇಗೆ ಪೆಟ್ಟಿಗೆಯಾಗುವುದಿಲ್ಲವೋ” ಹಾಗೆಯೆ ಭಾವದ ಮೇಲೆ ಭಾವಗಳನ್ನು ಪೇರಿಸಿದರೂ ರಸಸ್ಥಿತಿಯೊದಗುವುದಿಲ್ಲ. ಸುಸಂಘಟಿತವಾದ ಭಾವಗಳಿಂದಲೇ ರಸದ ಪ್ರಾಪ್ತಿ.

ಶ್ರೀ ಶಿವರುದ್ರಪ್ಪನವರ ಕವನಗಳ ಮೂಲದಲ್ಲಿ ರಸಸ್ಥಿತಿಯನ್ನು ರಚಿಸುವ ಸತತ ಪ್ರೇರಣೆಯಿದೆ. ಈ ಸಂಗ್ರಹದ  ಕವನಗಳಲ್ಲಿ ನಮ್ಮ ಮನಸ್ಸನ್ನು ತನ್ನ ಚೆಂದದಿಂದ ತಡೆಗಟ್ಟುವ ಸಾಲುಗಳನ್ನೆರಚುತ್ತಾ ಆ ಪ್ರೇರಣೆ ಲಾಸ್ಯವಾಡುತ್ತಿದೆ. ಅನೇಕ ಕವನಗಳಲ್ಲಿ ಸಿದ್ಧಿಯನ್ನೂ ಪಡೆದಿದೆ. ಮಳೆ, ಮನದನ್ನೆ, ತಾಯಿ ಮಗುವಿಗೆ, ಕ್ರಾಂತಿಕಾರ, ಬಂಡೆ-ಹೂವು, ಸಂಕ್ರಾಂತಿ, ಜಡೆ-

ಎಲ್ಲವೂ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!

ಎಂಬ ಸಖೇದಾಶ್ಚರ್ಯ ಭಾವದಲ್ಲಿ ಮುಗಿಯುವ ಭವ್ಯೋಪಮಾ ಪೂರ್ಣವಾದ “ಜಡೆ” – ಇಂಥ ರಸಪದಕ್ಕೇರುವ ಎಷ್ಟೊಂದು ಪದ್ಯಗಳನ್ನು ನಾವು ಶಿವರುದ್ರಪ್ಪನವರ ಕಾವ್ಯ ಕೋಶಾಗಾರದಲ್ಲಿ ಕಾಣಲಾರೆವು!

ಹೀಗೆ “ಹರಿವ ಮನವನು ಹಿಡಿದು ಒಂದೆಡೆ ನಿಲ್ಲಿಸಿ”ಕೊಳ್ಳುವ ಪದ್ಯಗಳನ್ನು ರಚಿಸಿರುವ ಶ್ರೀಮಾನ್ ಶಿವರುದ್ರಪ್ಪನವರನ್ನು ಭಾವುಕಲೋಕ ಆದರಿಸಿ ಅಭಿನಂದಿಸುವುದರಲ್ಲಿ ಅನುಮಾನವಿಲ್ಲ. ಅಂಥ ಅಭಿನಂದನೆಗಳನ್ನು ಸಲ್ಲಿಸುವರಲ್ಲಿ ನಾನು ಮೊದಲಿಗನಾಗುವ ಸಂತೋಷಕ್ಕೆ ಶ್ರೀಮಾನ್ ಶಿವರುದ್ರಪ್ಪನವರೂ ಮತ್ತು ಅವರ ಪ್ರಿಯಮಿತ್ರರಾದ ಶ್ರೀ ಪ್ರಭುಶಂಕರರು ನನ್ನಲ್ಲಿಟ್ಟಿರುವ ಮಮತೆಯೇ ಕಾರಣ. ಈ ಕಾವ್ಯದಿಂದ ಕವಿ ಯಶಸ್ಸನ್ನೂ, ಪ್ರಕಾಶಕರು ಉಲ್ಲಾಸವನ್ನೂ, ಸಹೃದಯರು ಆನಂದವನ್ನೂ ಪಡೆಯಲೆಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.

– ಪು.ತಿ.ನ.
೮-೯-೧೯೫೩


ದೀಪದ ಹೆಜ್ಜೆ

ಈ ಕವನಸಂಗ್ರಹದ ಪ್ರಕಟಣೆಗೆಂದು ಕವಿತೆಗಳನ್ನು ಆಯ್ದು ಜೋಡಿಸಿದಾಗ, ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಬರೆದ ಈ ಪದ್ಯಗಳಲ್ಲಿ ಹಲವು, ಸ್ಥಾಯಿಯಾದ ಚಿಂತನೆಯೊಂದರ ಆಜ್ಞಾತಸೂತ್ರವೊಂದನ್ನು ಒಳಗೊಂಡಂತೆ ತೋರಿತು. ಹಾಗೆಯೇ ಯೋಚಿಸಿ ನೋಡಿದ್ದರಲ್ಲಿ, ಇವುಗಳಲ್ಲಿ ನನಗರಿಯದಂತೆಯೇ ಬದುಕಿನ ಸಮಸ್ಯೆಯ ಎರಡು ಮುಖಗಳ ವಿವೇಚನೆ ನಡೆದಿದೆ ಎನ್ನಿಸಿತು. ಒಂದು ಮಾನವ ಮತ್ತು ಆತನ ಅಂತರಂಗ; ಮತ್ತೊಂದು ಮಾನವ ಮತ್ತು ಕಾಲ.

ಜಾಗೃತ ಚೇತನ ಮೊದಲು ಎದುರಿಸಬೇಕಾದ್ದು ತನ್ನನ್ನು; ತನ್ನ ಅಂತರಂಗದಲ್ಲಿ ಬಂದು ತಾಕಲಾಡುವ ವಿವಿಧ ಭಾವಗಳನ್ನು. ಎಲ್ಲ ಚೇತನಗಳಲ್ಲೂ ಸಾಮಾನ್ಯವಾಗಿ ಈ ಸದಸತ್ತುಗಳ ಪ್ರಶ್ನೆ, ಘರ್ಷಣೆ ಉಂಟಾಗುವುದಾದರೂ, ಈ ಹೋರಾಟ ಅತ್ಯಂತ ತೀವ್ರವಾಗಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಬಲವಾದ ಇಚ್ಛೆ ಮೂಡುವುದು ಎಲ್ಲೊ ಕೆಲವರಲ್ಲಿ ಮಾತ್ರ. ಪಂಚಭೂತಗಳ ಪವಾಡದಿಂದ ನಿರ್ಮಿತವಾದ ಸುಂದರವಾದ ಬಹಿರಂಗ ಲೋಕದಲ್ಲಿ ಮೊದಮೊದಲು ಬೆರಗು ಬಣ್ಣಗಳಲ್ಲಿ ಉತ್ಸಾಹದಿಂದ ವಿಹಾರಗೈದ ಚೇತನ ಬಾಳ ಬಂಡೆಯ ಬುಡಕ್ಕೆ ಬಂದು ನಿಂತಾಗ, ತನ್ನ ಅಂತರಂಗ ನಿಸರ್ಗದ ಸೆಳೆತ ರಭಸಗಳನ್ನೂ, ಬಾಳನ್ನು ನಿಷ್ಠುರವಾಗಿ ಕೊನೆಗಾಣಿಸುವ ಕಾಲದ ಲೀಲೆಯನ್ನೂ ಕಂಡು ಬೆರಗಾಗುತ್ತದೆ. ಇಂಥ ತಾಕಲಾಟದ ಸಮಯದಲ್ಲಿ  ಅದು ತನ್ನೊಳಗಿನ ಅವ್ಯವಸ್ಥೆಯನ್ನೆ ಕಾಣುತ್ತದೆ. “ಎದೆಯೊಳಸುಳಿಯ ತಳದಾಳಕ್ಕೆ” ಪಾತಾಳಗರುಡವನ್ನಿಳಿಸಿ ತನ್ನನ್ನು ತಾನೇ ‘ಶೋಧನೆ’ [ಪುಟ ೬೩] ಮಾಡಿಕೊಂಡು ಬೆಚ್ಚಿಬೀಳುತ್ತದೆ; ಮಬ್ಬುಗತ್ತಲ ಕೂಪದಿಂದ ಹೊರಗೆ ಹಾರುವ ಹಾರೈಕೆಯಿಂದ ತಳಮಳಗೊಳ್ಳುತ್ತದೆ. [ಪತಿತ: ಪುಟ ೫೮] ತನ್ನ ಒಳಗಿನ ಅವ್ಯವಸ್ಥೆಯ ಮೂಲವನ್ನರಿಯಲು ಪ್ರಯತ್ನಿಸುತ್ತದೆ. ಅಷ್ಟು ಹೊತ್ತಿಗೆ ಯಾವುದೋ ಗುರಿ, ಬಾಳಬಂಡಿಯ ನೊಗಕ್ಕೆ ಹೆಗಲುಕೊಟ್ಟ ಈ ಜೀವಕ್ಕೆ ಗೋಚರಿಸುತ್ತದೆ. ಆ ಗುರಿ ‘ಬಾಳಬೀದಿಯ ಬದಿಗೆ ಬೆಳ್ಗೊಳದ ಬೆಟ್ಟದಲ್ಲಿ ಗೊಮ್ಮಟ’ನಾಗಿ [ಹುಟ್ಟಿದ ಹಬ್ಬ: ಪು.೧] ಕರೆಯಬಹುದು. ಹೀಗೆ ಕಂಡ ಯಾವುದೋ ಒಂದು ಗುರಿ, ಒಂದು ಆದರ್ಶ ಇದನ್ನು ಸೆಳೆದಾಗ, ಇಂಥ ಒಂದು ನಂಬಿಕೆಯ ಹಾದಿಯಲ್ಲಿ ಬಂದ ತೊಂದರೆಗಳಿಂದ ಅದು  ಮೊದಮೊದಲು ಚಕಿತವಾಗುತ್ತದೆ; ಅದಕ್ಕಾಗಿ ಹೋರಾಡುತ್ತದೆ; ಆಗಾಗ ಸೋಲುತ್ತದೆ. ಎಷ್ಟೋಸಲ ತಾನು ಒಪ್ಪಿಕೊಂಡ ಧ್ಯೇಯದ ಬಗೆಗೆ ಇಟ್ಟ ನಂಬಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಹಂಬಲವೂ ಇದಕ್ಕೆ ಬರುವುದುಂಟು. ಮೊದಮೊದಲು ಹಿರಿಯ ಧ್ಯೇಯವೊಂದರಿಂದ ಆಕರ್ಷಿತವಾಗಿ, ಅದರ ಅನುಸರಣ ಸುಲಭವೆಂದುಕೊಂಡು ಸಹಿ ಹಾಕುತ್ತದೆ; ನಂತರ ಬಂದೊದಗುವ ಕಷ್ಟಪರಂಪರೆಗಳಿಗೆ ಅಂಜಿ ತನ್ನ “ಕಂಟ್ರಾಕ್ಟ್’ನ್ನು ವಜಾ ಮಾಡಿಸಲು ಹೆಣಗಾಡುತ್ತದೆ. ಆದರೆ ಒಂದು ಸಲ ನಿಜವಾಗಿಯೂ ಹಿರಿಯದಾದುದೊಂದಕ್ಕೆ ಶರಣಾದರೆ ಮುಗಿಯಿತು; ನಾವು ಬಿಟ್ಟವೆಂದುಕೊಂಡರೂ ಅದು ನಮ್ಮನ್ನು ಬಿಡದು. ಹೀಗಾಗಿ ಹಾದಿ ನಡೆವ ಚೇತನ ‘ಹಳೆಯ ಕೊಳಗಳ ಪಾಚಿ’ಯನ್ನು ತಳ್ಳುತ್ತಲೇ ‘ಕರುಣಾಳು ಬಾ ಬೆಳಕೆ’ ಎಂದು ಕರೆಯುತ್ತಾ ಹೋಗುತ್ತದೆ [ಪ್ರಶ್ನೆ: ಪುಟ ೫೨]. ಇದೇ ಸಂದರ್ಭದಲ್ಲಿ ತಾನು ತನ್ನೊಡನೆ ಹೂಡಿದ ಹೋರಾಟದಲ್ಲಿ ಎದ್ದು ಬಿದ್ದು, ಕಡೆಗೆ ಇವುಗಳ ಸಹವಾಸವೇ ಬೇಡ ಎಂಬ ನಿರ್ವೇಗದಲ್ಲಿ ನಿಂತಾಗ ಗೊತ್ತಾಗುತ್ತದೆ, ತಾನು ಯಾರನ್ನು ಶತ್ರುಗಳೆಂದು ತಿಳಿದು ಹೋರಾಡಿದೆನೋ ಅವು ತನ್ನ ಮಿತ್ರರು ಕೂಡಾ ಹೌದೆಂದು [ನಿರ್ಧಾರ: ಪುಟ ೬೦]. ಈ ಹೋರಾಟದ ಹಾದಿಯಲ್ಲಿ ಸದಾ ಜಯವೇ ದೊರೆಯುತ್ತದೆಂದು ಹೇಳಲಾಗುವುದಿಲ್ಲ. ಏಕೆಂದರೆ ಎಷ್ಟೋ ವೇಳೆ ನಮ್ಮ ಶ್ರದ್ಧೆ ನಿಜವಾದ ಶ್ರದ್ಧೆಯಾಗಿರುವುದಿಲ್ಲ. ಎಲ್ಲರ ಬದುಕಿನಲ್ಲೂ ಅವರವರ ಶ್ರದ್ಧೆಯನ್ನು ಪರೀಕ್ಷಿಸುವ ಸಮಯವೊಂದು ಬಂದೇ ಬರುತ್ತದೆ. ಆಗ ಗೊತ್ತಾಗುತ್ತದೆ ನಮ್ಮ ಶ್ರದ್ಧೆ ನಿಜವಾಗಿಯೂ ಕಾಗಕ್ಕನ ಸಗಣಿ ಮನೆಯೋ ಅಥವಾ ಗುಬ್ಬಕ್ಕನ ಕಲ್ಲಿನ ಮನೆಯೋ- ಎಂಬುದು. ಅಂಥದೊಂದು ಜಡಿಮಳೆಯ ಇರುಳು ಬಂದಾಗಲೇ ನಮ್ಮ ಶ್ರ್ರದ್ಧೆಯ ಹುರುಳು ಗೋಚರಿಸುವುದು. [ಜಡಿಮಳೆಯ ಇರುಳಿನಡಿ: ಪುಟ ೫೬] ಅವರವರ ನಂಬಿಕೆಯಲ್ಲಿ  ಸಾಕಷ್ಟು ಶಕ್ತಿ ಇತ್ತೊ, ಬೆಳಕನ್ನು ಮುಡಿಯಲ್ಲಿ ಹೊತ್ತ ಲಾಂದ್ರದ ಹಾಗೆ ನಿಲ್ಲಬಲ್ಲರು: [ಇವನು: ಪು ೧೭]  ಎಂಥ ಸಂದರ್ಭದಲ್ಲೂ ಎದೆಗುಂದದೆ ಬದುಕಿ ಗಾಂಧಿಯಂತೆ ಸಿಡಿಗುಂಡಿಗೆ ಗಂಡೆದೆಯನ್ನು ಒಡ್ಡಬಲ್ಲರು; [ಕಂಡದ್ದು ಮೂರು ಸಲ: ಪು ೪೩] ‘ನೆಲವೆ ನನ್ನ ವಾಹನ’ ಎಂಬ ಕೆಚ್ಚನ್ನು ಬೆಳೆಯಿಸಿಕೊಳ್ಳಬಲ್ಲರು; [ಸ್ಪೂಟ್ನಿಕ್-ವಿನೋಬಾ: ಪುಟ ೬೭] ರಾಗ ಭೋಗಗಳ ಭೋಗಿಯಪ್ಪುಗೆಯಿಂದ ಪಾರಾಗಿ ಅಕ್ಕಮಹಾದೇವಿಯಂತೆ  ‘ಶ್ರೀ ಶೈಲಜೂಟದಲ್ಲಿ ಚಂದ್ರಬಿಂಬ’ವಾಗಬಲ್ಲರು. [ಅಮೃತ ಮುಹೂರ್ತ: ಪು. ೬೪] ಶಿವಾಭಿಮುಖವಾಗಿ ಹೊರಡುವ ಒಂದು ನಿರ್ಧಾರವನ್ನು ಕೈಕೊಂಡ ಸಾಧಕರ ಪಾಲಿಗೆ, ಈ ನಿರ್ಧಾರದ ಘಳಿಗೆಯೇ ಅಮೃತ ಮುಹೂರ್ತವಾಗುತ್ತದೆ. ಇಂಥವರು ದೀಪದ ಹೆಜ್ಜೆಯನ್ನು ಮೂಡಿಸುತ್ತಾ ಮುಂದೆ ಹೋಗುತ್ತಾರೆ, ಕಾಲವನ್ನು ಗೆಲ್ಲುತ್ತಾರೆ; ಗೆದ್ದು ನಿಲ್ಲುತ್ತಾರೆ: ಮೃತ್ಯುಂಜಯರಾಗುತ್ತಾರೆ.

ತನ್ನನ್ನು ತಾನು ಗೆಲ್ಲುವುದು ಎಂದರೆ ಕಾಲವನ್ನು ಗೆಲ್ಲುವುದು ಎಂದಂತಾಯಿತು. ಹೌದು, ಮನುಷ್ಯನ ನಿರಂತರ ಪ್ರಯತ್ನವೆಲ್ಲಾ ಇದಕ್ಕಾಗಿಯೇ, ಕಾಲವನ್ನು ಗೆಲ್ಲುವುದಕ್ಕಾಗಿಯೇ, ಅಥವಾ ಕಾಲದ ಸೆರೆಯಿಂದ ಬಿಡಿಸಿಕೊಳ್ಳುವುದಕ್ಕಾಗಿಯೇ. ಈ ಬಯಕೆಯೇ ಸೃಷ್ಟಿಸಿತು ಸ್ವರ್ಗಲೋಕವನ್ನು, ನಿರ್ಜರರಾದ ಅಮರರ ಕಲ್ಪನೆಯನ್ನು, ಕ್ಷೀರಸಾಗರ ಮಂಥನದಿಂದ ಅಮೃತವನ್ನು ಪಡೆದವರ ಕಥೆಯನ್ನು. ಪುರಾಣಗಳಲ್ಲಿ ಬರುವ ಯಯಾತಿಯ ಕತೆ, ಕಳೆದುಹೋದ ಯೌವನವನ್ನು ಮತ್ತೆ ಪಡೆಯಬೇಕೆಂಬ ಮಾನವನ ಬಯಕೆಯ ಪ್ರತೀಕವಾಗಿದೆ. ಹಿಂದೆ ಯಯಾತಿಗೆ ಬಂದ ಭಯ, ಬಯಕೆ ಎಲ್ಲರಿಗೂ ಬರುವುದುಂಟು. ಆಧುನಿಕ ನಾಗರಿಕತೆಯಂತೂ ಮಾನವನ ಯೌವನದ ಸಂರಕ್ಷಣೆಗಾಗಿ ಎಷ್ಟೊಂದು ಉಪಾಯಗಳನ್ನು ಕಂಡು ಹಿಡಿದಿದೆ! ಜನ ಬಳಸುವ ಪ್ರಸಾದನ ಸಾಧನಗಳು, ಲೇಹ್ಯಗಳು, ಮಾತ್ರೆಗಳು, ಲೇಪನಗಳು – ಇವೆಲ್ಲಾ ಮಾನವ ಕಳೆದು ಹೋಗುತ್ತಿರುವ ತನ್ನ ಆಯುಷ್ಯವನ್ನು ಅಥವಾ ಕಾಲವನ್ನು ಹಿಂದೆ ಹಾಕಲು ನಡೆಯಿಸುತ್ತಿರುವ ಭಯಮೂಲವಾದ ದುರ್ಬಲ ಪ್ರಯತ್ನಗಳಲ್ಲದೆ ಮತ್ತೇನು? ಕಾಲಗರ್ಭದ ಅಗಸ್ತ್ಯ ಜೀರ್ಣಾಗ್ನಿಯಲ್ಲಿ ಎಷ್ಟೋ ಯುಗಯುಗಗಳ ನಾಗರಿಕತೆ ಸಂಸ್ಕೃತಿಗಳು ಅರಗಿಹೋಗಿವೆ; ‘ಪ್ರಾಚ್ಯಸಂಶೋಧಕರ ಗುದ್ದಲಿಯ ಸದ್ದು’ ಮಾನವನ ಕಿವಿಯ ಮೇಲೆ ಬೀಳುತ್ತದೆ. ದಿನವೂ ನೂರಾರು ಜನ ಈ ಅನಿವಾರ‍್ಯವಾದ ಕಾಲಕ್ಕೆ ವಶರಾಗುತ್ತಿದ್ದಾರೆ. ಕ್ಷಣ ಕ್ಷಣವೂ ನಮ್ಮನ್ನು ಹಳಬರನ್ನಾಗಿ ಮಾಡುತ್ತಾ ಗೋರಿಯ ದಾರಿಯಲ್ಲಿ ಎಳೆದೊಯ್ಯುವ ಈ ನಿಷ್ಕರುಣ ಕಾಲದ ಹಿಡಿತ ತನಗೂ ತಪ್ಪಿದ್ದಲ್ಲ ಎಂಬ ಸತ್ಯ ಇವನಿಗೆ ಅರಿವಾಗುತ್ತದೆ. ವಯಸ್ಸಾದಂತೆ ಒಂದೊಂದೇ ಮೈಲಿ ಕಲ್ಲುಗಳನ್ನು ಎಣಿಸುತ್ತಾ ನಡೆಯುವ ಇವನಿಗೆ ‘ಮಹಡಿ ಮೆಟ್ಟಿಲಮೆಲೆ ಯಾರ‍್ಯಾರದೋ ಹೆಜ್ಜೆ’ಯ ಸದ್ದು [ಮಬ್ಬಿನಿಂದ ಮಬ್ಬಿಗೆ: ಪು. ೪೯] ಕೇಳಿಸುತ್ತವೆ. ಗಡಿಯಾರದ ಟಿಕ್ ಟಿಕ್ ದನಿ ಬಾಳಿನ ನೂಲನ್ನು ಚಣಚಣವೂ ಕತ್ತರಿಸುವ ಕಾಲದ ಕತ್ತರಿಯ ಸದ್ದಿನಂತೆ ಕೇಳುತ್ತದೆ. ಗಡಿಯಾರದಡಿಯಲ್ಲಿ ಬೋಳು ಮರಗಳ ರಸ್ತೆಯಲ್ಲಿ ನಡೆಯುವ ಈ ವ್ಯಕ್ತಿಗೆ ಒಂದು ದಿನ ಗೋಚರಿಸುತ್ತದೆ. ತನ್ನ ಪುಟ್ಟ ಮೊಮ್ಮಗನ ಮುSದಲ್ಲಿ ಕಳೆದ ತನ್ನ ಎಳೆಯ ಬಿಂಬ! ಆಗ ಎನಿಸುತ್ತದೆ, ತಾನು ಈ ಕಾಲಕ್ಕೆ ಭಯಪಡಬೇಕಾಗಿಲ್ಲ, ತಾನೇ ಈ ಮೊಮ್ಮಗುವಿನಲ್ಲಿ ಮುಂದುವರೆಯುತ್ತಿದ್ದೇನೆ ಎಂದು. [ಗಡಿಯಾರದಡಿಯಲ್ಲಿ : ಪು. ೩೮] ಇನ್ನು ಕೆಲವರುಂಟು; ಅವರು ತಾವು ಬದುಕಿದ್ದು ಇನ್ನು ಸಾಕು, ಸದ್ಯ ಈ ಕತೆ ಮುಗಿದರೆ ಸಾಕೆನ್ನುವ ತೃಪ್ತರು. ಅವರಂಥ ಮುಗ್ಧ ಜನಕ್ಕೆ ಕಾಲವನ್ನು ಕುರಿತ ತಳಮಳ ಅಷ್ಟಾಗಿ ಇಲ್ಲ; ಹೇಗೂ ಬದುಕಿದ್ದಾಯಿತು, ಬದುಕು ಹಣ್ಣಾಯಿತು, ಮಣ್ಣು ಆಗುವುದು ಇದಕ್ಕೆ ಅನಿವಾರ‍್ಯ ಎಂಬುದನ್ನು ಒಪ್ಪಿಕೊಂಡವರು, ಅವರೇ ಕಾಲವನ್ನು ಆಹ್ವಾನಿಸುತ್ತಾರೆ ‘ಸಾಕು ಮಾಡೋ ಜನ್ಮ’ ಎಂದು. [ಬಿಡುಗಡೆ: ಪು. ೨೮] ಹೀಗೆ ಬದುಕನ್ನು ಕಬಳಿಸುವ ಕಾಲವನ್ನು ಕಂಡು ಭಯಪಡಬೇಕಾಗಿಲ್ಲ, ತಾನಳಿದರೂ ತನ್ನ ಸಂತಾನದಲ್ಲಿ ತಾನುಳಿಯುತ್ತೇನೆಂಬ ಸಮಾಧಾನವಾಗಲೀ, ಬದುಕಿದ್ದು ಇನ್ನು ಸಾಕೆಂದು ಕಡೆಗೆ ಕಾಲವನ್ನೆ ಆಹ್ವಾನಿಸುವ ಧೈರ್ಯವಾಗಲೀ ಇಲ್ಲದೆ, ಕಾಲವನ್ನು ಗೆದ್ದು ಮೃತ್ಯುಂಜಯರಾದ ವ್ಯಕ್ತಿಗಳು ಕಾಲದ ಕತ್ತಲೆಯ ಮೇಲೆ ಮೂಡಿಸಿದ ದೀಪದ ಹೆಜ್ಜೆಗಳನ್ನೂ ಕಾಣದೆ, ಬರೀ ತಳಮಳದಲ್ಲೇ ಕಾಲ ಕಳೆಯುವವರೂ ಉಂಟು. ಅಂಥವರ ಪಾಲಿಗೆ ಜೀವನವೊಂದು ‘ಅರೆ ಮುಗಿದ ಕವನ’ ವಾಗಬಹುದು; ಅವರ ದಾರಿ ಮುಗಿವಿರದ ಪ್ರಶ್ನೆಯ ‘ಸಂಜೆದಾರಿ’ [ಪು.೩೫]ಯಾಗಬಹುದು; ಬದುಕೆಲ್ಲ ‘ಮಬ್ಬಿನಿಂದ ಮಬ್ಬಿಗೆ’[ಪು.೪೯] ನಡೆದ ಪಯಣವಾಗಬಹುದು. ಹೀಗಾಗಬಾರದು ಬದುಕು. ಅದಕ್ಕೊಂದು ನಂಬುಗೆ ಬೇಕು; ಆ ನಂಬುಗೆಯಲ್ಲಿ ಸತ್ವವಿರಬೇಕು; ಹಾಗಾದರೆ ಬದುಕು ಸಾರ್ಥಕವಾದೀತು. ಈ ಬಗೆಯ ಚಿಂತನೆಯ ಎಳೆಗಳು ಇಲ್ಲಿನ ಹಲವು ಕವನಗಳಲ್ಲಿ ಹಾಸು ಹೊಕ್ಕಾಗಿರುವಂತೆ ತೋರುತ್ತದೆ. ಈ ನನ್ನ ವಿವರಣೆ ಓದುಗರಿಗೆ ಒಂದು ರೀತಿಯಲ್ಲಿ ದಿಕ್ಸೂಚಿಯಾಗಬಹುದೇನೋ ಎಂದು ನನ್ನ ನಿರೀಕ್ಷೆ.

– ಜಿ.ಎಸ್. ಶಿವರುದ್ರಪ್ಪ
ಮೈಸೂರು
ದಿನಾಂಕ: ೦೨-೧೦-೧೯೫೯


ಕಾಡಿನ ಕತ್ತಲಲ್ಲಿ

-೧-
ಕಾವ್ಯದ ಚರಿತ್ರೆಯಲ್ಲಿ ಸಂಪ್ರಯವಾದಿಗಳು ಮತ್ತು ವಾಮಪಂಥೀಯರು ತಮ್ಮೆಲ್ಲ ಶಕ್ತಿಗಳೊಂದಿಗೆ ರಂಗಕ್ಕೆ ಬಂದು ನಿಂತಾಗ ವಿಮರ್ಶಾ ಪರಂಪರೆಯೊಂದರ ಮೂಲಭೂತ ಗುಣವಾದ ಬಹುಮುಖೀ ಪ್ರಜ್ಞೆ ಅಲುಗಾಡತೊಡಗುತ್ತದೆ. ಮೇಲಿನೆರಡು ಮಾರ್ಗಗಳ ಕವಿಗಳು ತಮ್ಮ ಒಳದ್ರವ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಆಕ್ರಮಣಶೀಲತೆಯ ಮೂಲಕ. ಅವರ ಈ ತೀವ್ರ ಏಕಾಗ್ರತೆಯ ಸೃಷ್ಟಿಯನ್ನು ನಿಟ್ಟಿಸಿ ನೋಡ ನೋಡುತ್ತಿದ್ದ ಹಾಗೆ ವಿಮರ್ಶೆ ಕೂಡ ಅದೇ ಬಗೆಯ ಏಕಾಗ್ರತೆಗೆ ತಲುಪುತ್ತದೆ; ತಾನು ಧ್ಯಾನಿಸುತ್ತಿದ್ದ ವಸ್ತುವಿನ ಜೊತೆಗೇ ಬೆರೆತುಹೋಗುತ್ತದೆ.

೧೯೫೦ರ ದಶಕದಿಂದಾಚೆಗೆ ಕನ್ನಡ ಕಾವ್ಯ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ಇದೇ ಬಗೆಯ ವಿದ್ಯಮಾನ ಸಂಭವಿಸುತ್ತಿದೆ ಎಂದು ಈ ಲೇಖಕನ ಅನಿಸಿಕೆ. ಮೊದಲು ಗೋಪಾಲಕೃಷ್ಣ ಅಡಿಗರ ಆಯಸ್ಕಾಂತ ಪ್ರತಿಭೆ, ನಂತರ ೭೦ರ ದಶಕದಲ್ಲಿ ವಾಮಪಂಥೀಯ ಮೌಲ್ಯಗಳ ಸಾಹಿತ್ಯದ ವಿಜೃಂಭಣೆ-ಹೀಗಾಗಿ, ಒಟ್ಟಾರೆಯಾಗಿ ಕನ್ನಡ ವಿಮರ್ಶೆ ಸೃಜನಶೀಲತೆಯ ಬಗೆಗೆ ಬಹುಮುಖೀ ಪ್ರಜ್ಞೆಯನ್ನು ಮಸುಕಾಗಿಸಿಕೊಂಡಿತು.

ಈ ಕಾರಣದಿಂದಾಗಿ ಮೇಲಿನೆರಡೂ ಕಾವ್ಯ ಮಾರ್ಗಗಳಿಗಿಂತ ಭಿನ್ನವಾಗಿ ಸೃಷ್ಟಿಸುವ ಕವಿಗಳ ಬಗೆಗೆ ಆವಶ್ಯಕವಿದ್ದಷ್ಟು ಗಮನ ಬೀಳದೆಹೋಯಿತು. ಅದರಲ್ಲೂ ಉದಾರವಾದಿ ಕಾವ್ಯಮಾರ್ಗದ ಪ್ರಮುಖ ಕವಿಗಳಾದ ಗಂಗಾಧರ ಚಿತ್ತಾಲ, ಕೆ.ಎಸ್.ನರಸಿಂಹಸ್ವಾಮಿ, ಜೆ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿಯವರ ಕಾವ್ಯದ ವೈಶಿಷ್ಟ್ಯತೆಯ ಬಗೆಗೆ ಗಾಢ ಚರ್ಚೆ ಆಗಲೆ ಇಲ್ಲ. ಈ ಕವಿಗಳ ಕಾವ್ಯದ ಬಗ್ಗೆ ಚರ್ಚಿಸುವಾಗಲೂ ತೀವ್ರ ಏಕಾಗ್ರತೆಯ ಕಾವ್ಯದ ಪ್ರಭಾವಲಯದಲ್ಲಿ ನಿಂತೇ ಅರ್ಥೈಸುವ  ಪ್ರಯತ್ನ ಮಾಡಲಾಯಿತು. ಆಧುನಿಕ ಕನ್ನಡ ಕಾವ್ಯದ ಮೊದಲ ನಟ ಗೋಪಾಲಕೃಷ್ಣ ಅಡಿಗರು (ನೀಷೆ ತನ್ನ ಮೇಲಿನ ಪ್ರಭಾವಗಳಲ್ಲೊಂದಾದ ಸಂಗೀತಗಾರ ವ್ಯಾಗ್ನರನನ್ನು ಕುರಿತು ಬಳಸಿದ ಮಾತು ಇದು) ಎಂಬ ಅಂಶವನ್ನು ಗಮನಿಸಿದಾಗ ಕಳೆದೆರಡು ದಶಕಗಳಲ್ಲಿ ವಿಮರ್ಶೆಯನ್ನು ಬರೆದವರ ಸಮಸ್ಯೆಗಳು ಸ್ಪಷ್ಟವಾಗುತ್ತವೆ. ಅದು ಕಣ್ಣು ಕೀಳಲಾರದಷ್ಟು ಬೆರಗಿನ ನೋಟ.

ಆದರೆ ಅಡಿಗರ ಕಾವ್ಯದಲ್ಲಿ ಕಾಣದಿರುವ, ಈಗಿನ ವಾಮಪಂಥೀಯ ಕಾವ್ಯ ಇನ್ನೂ ಒಳಗೊಳ್ಳದಿರುವ ಅನೇಕ ಮಹತ್ವದ ಅನುಭವ ವಲಯಗಳು ಮೇಲೆ ಹೆಸರಿಸಿದ ಕವಿಗಳಲ್ಲಿ ಸಾಕಷ್ಟು ಶಕ್ತಿಯುತವಾಗಿಯೇ ಪ್ರಕಟವಾಗಿವೆ. ಕನ್ನಡ ನವೋದಯದ ಪ್ರಮುಖ ಸತ್ವಾಂಶಗಳ ಮುಂದುವರಿಕೆ ಇದು ಎಂದರೂ ಸಲ್ಲುತ್ತದೆ. ನಿಸರ್ಗದ ಚೇತೋಹಾರಿ ಅನುಭವ, ಅನುಭಾವೀ ಕಂಪನಗಳು, ಆಶಾವಾದೀ ನೆಲೆಗಳಿಂದ ಹೊರಡುವ ಮಾರ್ದವತೆ, ಮಾನವತಾವಾದ – ಈ ಎಲ್ಲ ಅಂಶಗಳನ್ನು ಕನ್ನಡದ ಉದಾರವಾದಿ ಕಾವ್ಯಮಾರ್ಗದಲ್ಲಿ ಕಾಣುತ್ತೇವೆ. ಅಡಿಗರ, ವಾಮಪಂಥೀಯರ, ಆಕರ್ಷಕ ತೀವ್ರತೆಯಿಂದಾಚೆಗೆ ಹೋಗಿ ಕಾವ್ಯ ಜೀವನದ ಈ ಉಲ್ಲಾಸಕರ ಅನುಭವಗಳನ್ನು ಪಡೆಯಬೇಕು ಎಂಬ ಅನುಭವ ಎಲ್ಲ ಕಾವ್ಯಾಭಿಮಾನಿಗಳಲ್ಲೂ ಸಹಜವಾಗಿಯೇ ಹರಿಯುತ್ತಿರುತ್ತದೆ ಎಂಬುದಕ್ಕೆ ಈ ಕವಿಗಳಿಗೆ ಸಾಮಾನ್ಯ ಕಾವ್ಯಾಭಿಮಾನಿಗಳಿಂದ ಸಿಕ್ಕಿರುವ ಮೌನ ಬೆಂಬಲವೇ ಸಾಕ್ಷಿ.

ಕನ್ನಡ ನವೋದಯದ ತುಂಬುಸಮೃದ್ಧತೆಯಿಂದ ಬಹಳಷ್ಟನ್ನು ಪಡೆದು ಮನದುಂಬಿಸಿಕೊಂಡು ತಮ್ಮ ದಾರಿ ಹುಡುಕುತ್ತ ಹೊರಟ ಪಥಿಕರು ಇವರು. ಕಹಿತನದ, ಒಂಟಿತನದ, ಬಿಕ್ಕಟ್ಟಿನ ತೀವ್ರ ಅನುಭವವನ್ನೂ ತಮ್ಮ ಕಾವ್ಯದಲ್ಲಿ ಹೇಳಿಯೂ ನವೋದಯದ ಉಲ್ಲಾಸವನ್ನು ಮತ್ತೆ ಮತ್ತೆ ಬದುಕ ಬಯಸಿದ ಕವಿಗಳು ಈ ನಾಲ್ಕು ಜನ. ನವೋದಯದ ಪ್ರಮುಖ ಗುಣವಾದ ಉದಾರವಾದವನ್ನು ಎಲ್ಲ ಹೊಡೆತಗಳಿಂದ ಸಾಧ್ಯವಿದ್ದಷ್ಟು ರಕ್ಷಿಸಿ ಮುನ್ನಡೆಸಿದ ಈ ಕವಿಗಳ ವಿಶೇಷ ಅಧ್ಯಯನ ನಡೆದರೆ, ಅದು ಕನ್ನಡ ವಿಮರ್ಶೆಯ ಮತ್ತೊಂದು ಬಗೆಯ ಜೀವನ ದರ್ಶನದ ವೈಶಿಷ್ಟ್ಯವನ್ನು ಮನಗಾಣಲಿದೆ.

ಜಿ. ಎಸ್. ಶಿವರುದ್ರಪ್ಪನವರ ಕಾವ್ಯದ ಸ್ಥೂಲ ಸಮೀಕ್ಷೆಯನ್ನು ಮಾಡುವ ಆಶಯವನ್ನು ಹೊಂದಿರುವ ಈ ಪುಟ್ಟ ಬರಹದ ಹಿನ್ನೆಲೆಯಲ್ಲಿ ಕೆಲಸ ಮಾಡಿರುವ ತಾತ್ವಿಕ ನೆಲೆ ಮೇಲಿನದು.

-೨-

ಜಿ. ಎಸ್. ಎಸ್.ರ ಕಾವ್ಯದ ಮೊದಲ ಘಟ್ಟವನ್ನು ಸೌಂದರ‍್ಯಾತ್ಮಕ ಘಟ್ಟ ಎಂದು ಕರೆಯಬಹುದು; ಆ ಕಾವ್ಯದ ಮಿರಾಂಡಳ ರೀತಿಯದು. ಮೇಲೆ ಕಣ್ಣಿಟ್ಟ ಕಡೆಗೆಲ್ಲ ಜ್ಯೋತಿರ್ಮಾಲೆ ಕಾಣುವಂಥ ಆ ಕಾವ್ಯಲೋಕ ಅತ್ಯಂತ ಬಿಕ್ಕಟ್ಟಿನ ಗಳಿಗೆಗಳಲ್ಲಿ, ಮೆಲ್ಲನೆ ಮನಸ್ಸನ್ನು ತೇಲಿಸುವಂಥದು. ಕಾವ್ಯದ ಬಗೆಗೆ ನಾವೆಷ್ಟೋ ಕ್ರಿಯಾಶೀಲ ಸಿದ್ಧಾಂತಗಳನ್ನು ಹೇಳಿದರೂ, ಒಳಗೆಲ್ಲೊ ಮನಸ್ಸು ತುಡಿಯುವುದು ಈ ಬಗೆಯ ಕಾವ್ಯಾನುಭವಕ್ಕೇ, ಬಹುಶ: ಕಾವ್ಯದ ಉತ್ಕಟ ಕ್ರಿಯಾಶೀಲತೆ ಇರುವುದು ಈ ಪ್ರತಿಲೋಕ ಸೃಷ್ಟಿಯಲ್ಲೆ. ಹೀಗಾಗಿ, ಜಿ. ಎಸ್. ಎಸ್.ರ ಮೊದಲ ಘಟ್ಟದ ಭಾವಗೀತೆಗಳು ಈಗಲೂ ನನಗೆ ಪ್ರಿಯವಾದವುಗಳೇ. ಶಬ್ದಗಳ ಗುಂಗಿಗೆ ಪ್ರತಿಸ್ಪಂದಿಸಲು ಆಗ ತಾನೆ ಕಿವಿ ತೆರೆಯುತ್ತಿದ್ದ ದಿನಗಳಲ್ಲಿ ಕೇಳಿದ ಒಂದಷ್ಟು ಹಾಡುಗಳು ಈಗಲೂ ಕಿವಿಯಲ್ಲಿ ತೇಲುತ್ತದೆ. (ಅವನ್ನು ಹಾಡಿದ ಹುಡುಗಿಯರ ನೆನಪು ನನ್ನ ಮಟ್ಟಿಗೆ ಈ ಗೀತೆಗಳಿಗೆ ಮತ್ತಷ್ಟು ಶೋಭೆ ತಂದಿದೆ). “ಅಲ್ಲ್ಲಿ-ಇಲ್ಲಿ”, “ನೆಲದ ಕರೆ”, “ಹಳೆಯಹಾಡು”, “ತೃಪ್ತಿ”. “ಶಾಕುಂತಲ ಸಂಧ್ಯೆ” ಮುಂತಾದ ಕವನಗಳು ಅವುಗಳ ಭಾವನಾ ವಾತಾವರಣದ ಮಾರ್ದವತೆಯ ಕಾರಣಕ್ಕಾಗಿಯೇ ಹೆಚ್ಚು ಪ್ರಿಯವಾಗುವಂಥವು. ಜಿ.ಎಸ್.ಎಸ್.ರ ಮೊದಲ ಕವನ ಸಂಕಲನಗಳು ಈ ಘಟ್ಟಕ್ಕೆ ಸೇರುತ್ತವೆ.

ಒಂದು ಬಗೆಯ ಸಾತ್ವಿಕ ಹುಚ್ಚುತನ ಈ ಘಟ್ಟದ ಮುಖ್ಯ ಗುಣ. ಚೆಲುವಿನ ಆರಾಧನೆ ಇಲ್ಲಿಯ ಪ್ರಮುಖ ಅನುಭವವಾದರೂ ಅದು ಎಲ್ಲಿಯೂ ಬೊಹೀಮಿಯನ್ ಆಗುವುದಿಲ್ಲ. ನೀತಿ-ಅನೀತಿಗಳ ಲೋಕಗಳ ವ್ಯತ್ಯಾಸವನ್ನೂ ಕತ್ತರಿಸಿ ಹಾಕುವ ಇಂದ್ರಿಯ ಗಮ್ಯ ಅನುಭವಗಳ ಉತ್ಕಟ ಶೋಧನೆ ಇಲ್ಲಿಲ್ಲ. ಬದಲಾಗಿ, ಚೆಲುವೆಂಬುದು ಮನಸ್ಸನ್ನು ಉನ್ನತೀಕರಿಸುವ ಒಂದು ಅನುಭವವಾಗಿ ಪ್ರಕಟವಾಗುತ್ತದೆ. ಹುಚ್ಚುತನ  ಬೋದಿಲೇರ್‌ನ ಅನುಭವದ ಹಾಗೆ ಗಾಜಿನಂಗಡಿಯೊಳಗೆ ನುಗ್ಗಿದ ಜೋಡಿಗೂಳಿಯಾಗುವುದಿಲ್ಲ. ಬದಲಾಗಿ, ಒಂದು ದಿವ್ಯ ವಿಸ್ಮಯದ ಎತ್ತರಕ್ಕೆ ಓದುಗನನ್ನು ಅದು ಕರೆದೊಯ್ಯುತ್ತದೆ. “ಜಡೆ” ಕವನ  ಇದಕ್ಕೆ ಸಾಕ್ಷಿ. ಚೆಲುವಿನ Pantheist ಆರಾಧನೆಯಂತೆ ಬೆಳೆದುನಿಲ್ಲುವ ಈ ಕವನ ಕೊನೆಗೆ ಸಾಧಿಸುವ ವಿಸ್ಮಯ ಇಡೀ ಕವನದ ಅನುಭವವನ್ನೆ ಪರಿವರ್ತಿಸಿಬಿಡುತ್ತದೆ.

ಜೆ. ಎಸ್. ಎಸ್. ಅವರ ಸೌಂದರ‍್ಯಾರಾಧನೆಗೂ, ಹತ್ತೊಂಬತ್ತನೆ ಶತಮಾನದ ಯೂರೋಪಿಯನ್ ಸೌಂದರ‍್ಯಾರಾಧಕರ ನಿಲುವುಗಳಿಗೂ ಇರುವ ವ್ಯತ್ಯಾಸ ಅಪಾರವಾದದ್ದು. ಭಗ್ನಗೊಂಡ ಬದುಕಿನ ನೆಲೆಗಳಿಂದ, ತೀವ್ರ ಬಿಕ್ಕಟ್ಟಿನ ಅರಿವಿನಿಂದ ಹುಟ್ಟಿದ ಸೌಂದರ‍್ಯಾರಾಧನೆ ಅದು. ಜೀವನ ಮತ್ತು ಸೌಂದರ‍್ಯಾನ್ವೇಷಣೆ ಪರಸ್ಪರ ವಿರೋಧಿಗಳು ಎಂಬ ನೆಲೆಗಳಿಂದ ಹೊರಟು ಎರಡನೆಯದನ್ನು ಒಂದು ಬಗೆಯ ಹತಾಶೆಯಿಂದ ತಬ್ಬಿಕೊಂಡವರು ಅವರು. ಆದರೆ ಇಲ್ಲಿ ಅದು ಜೀವನದ ಸುಸಂಗತತೆಯ, ಅರ್ಥವಂತಿಕೆಯ ಸಂಕೇತ.

ಈ ಘಟ್ಟದ ಇನ್ನೊಂದು ಮುಖ್ಯ ಗುಣವೆಂದರೆ ಅದು ಒಂದು ಕ್ಷಣದ ಅನುಭವವನ್ನು ಹೇಳುವಂಥದು. ಅದು ಒಂದು ನಿರ್ದಿಷ್ಟ ಕಾಲಾವಧಿಯ, ಮನಃಸ್ಥಿತಿಯ ಅಭಿವ್ಯಕ್ತಿ. ಕುವೆಂಪು ಅವರ ಪ್ರಭಾವದಲ್ಲಿದ್ದೂ ಒಂದು ಮನಃಸ್ಥಿತಿಯ ಪುನರ್‌ನಿರ್ಮಾಣದ ದೃಷ್ಟಿಯಿಂದ ಇದು ಪು.ತಿ.ನ. ಕಾವ್ಯಕ್ಕೆ ಹೆಚ್ಚು ಸಮೀಪ. ಈ ಘಟ್ಟದ ಕವನಗಳನ್ನು ನಾನು ಈಗ ಮತ್ತೊಮ್ಮೆ ಓದುತ್ತಿದ್ದ ಹಾಗೆ ನನಗೆ ದಕ್ಕಿದ ಮುಖ್ಯ ಅನುಭವವೆಂದರೆ ನಿರಂತರವಾಗಿ ಹರಿಯುತ್ತಿರುವ ಕಾಲ ಪ್ರವಾಹದೊಳಗೆ ಕೆಲವು ನಿರ್ದಿಷ್ಟ ಅವಧಿಯ ಅನುಭವಗಳನ್ನು, ಭಾವನಾ ವಿಶೇಷಗಳನ್ನೂ ಕಡೆದು ನಿಲ್ಲಿಸುವ ಕ್ರಿಯೆ; ಅನುಭವದ ಪೂರ್ಣತೆಗಿಂತ ಆ ಅವಧಿಯ ಅನುಭೂತಿಗಳ ಉನ್ನತೀಕರಣ.

ಇಲ್ಲಿಯ ಭಾವಗೀತಾತ್ಮಕತೆ ಜಿ.ಎಸ್.ಎಸ್. ಅವರ ಕಾವ್ಯಜೀವನದುದ್ದಕ್ಕೂ ಹರಿದು ಬಂದಿರುವುದನ್ನು ಕಾಣಬಹುದು. ಆದರೆ ಇಲ್ಲಿಯಷ್ಟೇ ತುಂಬಿ ಹರಿಯುತ್ತದೆ ಎಂದೇನೂ ಹೇಳಲಾಗುವುದಿಲ್ಲ. ಜೀವನದ ವೈಷಮ್ಯಗಳ ಮರಳಿಗೆ ಅದು ನುಗ್ಗಿದಾಗ ತನ್ನ ಮೊದಲಿನ ಸಮೃದ್ಧತೆಯನ್ನು ಕಳೆದುಕೊಂಡರೂ ಮೆಲ್ಲಗೆ ಹಾಗೇ ಜಿನುಗುತ್ತಾ ಮುಂದುವರಿಯಿತು.
ಈ ಲೋಕದ ಸ್ವಯಂಪೂರ್ಣತೆ, ಮಾಧುರ‍್ಯ ಆಶ್ಚರ‍್ಯಕರವಾದದ್ದು. ಈ ಅಂಶ ಈ ಬಗೆಯ ಕಾವ್ಯದ ಮೇಲೆ ಮಾಡಬಹುದಾದ ಪರಿಣಾಮಕಾರೀ ಟೀಕೆ ಕೂಡಾ ಹೌದು. ಈ ಕಾರಣಕ್ಕಾಗಿಯೇ ಕಾವ್ಯದಲ್ಲಿ ಘರ್ಷಣೆಗಳ ಮಂಥನವನ್ನು, ಆಕ್ರಮಣಕಾರೀ ಏಕಾಗ್ರತೆಯನ್ನು ನಿರೀಕ್ಷಿಸುವ ನನ್ನಂಥವರಿಗೆ ಇದು ಅನೇಕ ಕುತೂಹಲಗಳ ಲೋಕವೂ ಹೌದು. ಏಕೆಂದರೆ, ಬಾಳಿನಾಸೆಗೆ ಹಾಲನ್ನೆರೆಯುವ ಭಾವಗೀತೆಗಳು ಎಂದರೆ ಒಂದು ಹಂತದಲ್ಲಿ ಇಂಥವೇ.
ಈ ಘಟ್ಟದ ಕಾವ್ಯಾನುಭವಕ್ಕೆ ಒಂದು ಸಮರ್ಥ ವಿಮರ್ಶಾರೂಪಕಕ್ಕಾಗಿ ಹುಡುಕುತ್ತಿರುವಾಗ ಶೇಕ್ಸ್‌ಪಿಯರ್‌ನ The Tempest  ನಾಟಕದ ಒಂದು ಭಾಗ ನೆರವಾಗಿದೆ. ಮೊದಲ ಬಾರಿಗೆ ಅಷ್ಟೊಂದು ಜನರನ್ನು ಕಂಡ ಆ ಹುಡುಗಿ ಮಿರಾಂಡ ತನ್ನೆಲ್ಲ ಜೀವನೋಲ್ಲಾಸಗಳ ಶೃಂಗ ತಲುಪಿದಂತೆ ಆನಂದದಿಂದ ಕೂಗುತ್ತಾಳೆ. ಜಗತ್ತಿನ ಕ್ರೂರತೆಯ ಪರಿಚಯ ಇನ್ನೂ ಆಗಿರದ ಹುಡುಗಿ ಅವಳು; ಎಲ್ಲೆಲ್ಲೂ ಚೆಲುವನ್ನೆ ಆಕೆ ಕಾಣುತ್ತಾಳೆ.

O’wonder!
How many godly creatures are there here!
How beauteous mankind is!
O’brave new world,
That has such people in’t!
ಜೀವನದ ಹೊಡೆತಗಳಿಂದ ಜರ್ಝರಿತನಾಗಿದ್ದ ತಂದೆ ಪ್ರಾಸ್ಪೆರೊ ಮೆಲ್ಲಗೆ ಹೇಳಿದ:
It is new to thee.

ಮಿರಾಂಡಗಳ ಶಕ್ತಿ ಬೇರೆ ರೀತಿಯದು, ಪ್ರಾಸ್ಪೆರೊನ ಶಕ್ತಿ ಬೇರೆ ರೀತಿಯದು; ಆತನದು ರುದ್ರ ತಿಳಿವಿನ ಶಕ್ತಿ. ಆತನಿಗೆ ಮತ್ತೆ ಮಿರಾಂಡಗಳ ಶುಭ್ರ ವಿಸ್ಮಯ ಸಾಧ್ಯವಿಲ್ಲ ಎಂಬುದು ನಿಜಕ್ಕೂ ದೊಡ್ಡ ನೋವಿನ ಸಂಗತಿ.

-೩-

ಎರಡನೆಯ ಘಟ್ಟವನ್ನು ಮೆಟಫಿಸಿಕಲ್ ಕಾವ್ಯ ಎಂದು ಕರೆಯಬಹುದು, ಇಲ್ಲಿಯ ಸೌಂದರ‍್ಯಾರಾಧನೆ ಮೆಟಫಿಸಿಕಲ್ ತಾತ್ವಿಕತೆಯಿಂದ ಪರಿಷ್ಕೃತವಾಗಿದೆ. “ದೀಪದ ಹೆಜ್ಜೆ” ಯಿಂದ “ತೆರೆದ ದಾರಿ” ತನಕದ ಕವನಗಳನ್ನು ಸ್ಥೂಲವಾಗಿ ಈ ಘಟ್ಟಕ್ಕೆ ಸೇರಿಸಬಹುದು. “ದೀಪದ ಹೆಜ್ಜೆ” ಯಿಂದ ಪ್ರಾರಂಭವಾದ ಈ ಘಟ್ಟದಲ್ಲಿ ಅತ್ಯಂತ ಮಹತ್ವಾಕಾಂಕ್ಷೀ ಕವನಗಳನ್ನು ಕಾಣಬಹುದು. ಜೊತೆಗೆ, ಕನ್ನಡ ವಿಮರ್ಶೆ ಈ ಘಟ್ಟದ ಕೆಲವು ಕವನಗಳನ್ನು ಸಾಕಷ್ಟು ಗಾಢವಾಗಿಯೇ ಚರ್ಚಿಸಿದೆ. “ಹುಟ್ಟಿದ ಹಬ್ಬ”, “ಇವನು”, “ಸಂಜೆ ದಾರಿ”, “ಗಡಿಯಾರದಡಿಯಲ್ಲಿ”, “ಮಬ್ಬಿನಿಂದ ಮಬ್ಬಿಗೆ”, “ಜಡಿಮಳೆಯ ಇರುಳಿನಡಿ”, “ಶಾರದೆ”, “ಮಳೆರಾತ್ರಿಯ ಒಂದು ಕ್ಷಣ”, “ಕನಸಿನಿಂದ ನನಸಿಗೆ”. “ಶಾಕುಂತಲದ ಐದನೆಯ ಅಂಕ” ಮುಂತಾದ ಶ್ರೇಷ್ಠ ಕವನಗಳು ಆಧುನಿಕ ಕನ್ನಡ ಕಾವ್ಯದ ಇತಿಹಾಸದಲ್ಲಿ ಕವಿಗೆ ವಿಶಿಷ್ಟ ಸ್ಥಾನ ದೊರಕಿಸಿಕೊಡುವಂಥವು.

ಕಾವ್ಯಶಿಲ್ಪದ ದೃಷ್ಟಿಯಿಂದಂತೂ ಕವಿ ಇಲ್ಲಿ ಆಶ್ಚರ‍್ಯಕರ ಪ್ರಬುದ್ಧತೆ ತಲುಪಿದ್ದಾರೆ. ಈ ದೃಷ್ಟಿಯಿಂದ ಅಡಿಗರಿಗೆ “ಚಂಡೆ ಮದ್ದಳೆ” ಇದ್ದ ಹಾಗೆ, ಜಿ. ಎಸ್. ಎಸ್. ಅವರಿಗೆ “ದೀಪದ ಹೆಜ್ಜೆ” ಎನ್ನಬಹುದು.

ಜೀವನ ದರ್ಶನದ ದೃಷ್ಟಿಯಿಂದಂತೂ ಎರಡೂ ಕೃತಿಗಳು ಬೇರೆ ಬೇರೆ ಲೋಕಗಳಿಂದ ಬಂದಂಥವು, ಒಂದು aggressive ಆದದ್ದು, ಇನ್ನೊಂದು ಉದಾರವಾದಿ ಮನೋಧರ್ಮಕ್ಕೆ ಸಹಜವಾದ ತಾಳ್ಮೆ ಮತ್ತು ಚಿಂತನಪರತೆಗಳಿಂದ ಹುಟ್ಟಿದ್ದು.

ಇಲ್ಲಿಯ ಕಾವ್ಯಶಿಲ್ಪದ ಮುಖ್ಯ ಗುಣವೆಂದರೆ, ಅನುಭವಪೂರ್ಣತೆ. ಮೊದಲಿನ ಸೌಂದರ‍್ಯಾತ್ಮಕ ಘಟ್ಟದಲ್ಲಿ ಒಂದು ನಿರ್ದಿಷ್ಟ ಅವಧಿಯ ಅನುಭವ ಮುಖ್ಯವಾದರೆ, ಇಲ್ಲಿಯ ಅನುಭವಗ್ರಹಣ ಕ್ರಮಕ್ಕೆ ಪ್ರಾರಂಭ-ಶೃಂಗ-ಮುಕ್ತಾಯ ಮೂರೂ ಇರುತ್ತವೆ. ಜೀವನದ ಉಳಿದೆಲ್ಲ ಅನುಭವಗಳು ಕಾವ್ಯದಿಂದ ಮಾಯವಾಗಿಬಿಟ್ಟಿವೆ ಎಂಬಂಥ ವಾತಾವರಣದಲ್ಲೂ ಈ ಕವನಗಳು ಹುಟ್ಟಿದವು ಎಂಬ ಅಂಶ ಕವಿಗೆ ನವೋದಯದ ಜೊತೆಗಿದ್ದ ಸುಭದ್ರ ಸಂಬಂಧವನ್ನು ಹೇಳುತ್ತದೆ.

ಈ ಘಟ್ಟದಲ್ಲಿ ನಾಟಕೀಯತೆ ಜಿ. ಎಸ್. ಎಸ್. ಅವರ ಕಾವ್ಯವನ್ನು ಪ್ರವೇಶಿಸಿತು. ವಿವಿಧ ಬಗೆಯ ಮನಸ್ಥಿತಿಗಳು, ಅನುರಾಗಗಳು ಇಲ್ಲಿ ಪ್ರಕಟವಾಯಿತು. ಜೊತೆಗೆ ಇಲ್ಲಿಯ ಮುಖ್ಯ ತಾತ್ವಿಕ ನೆಲೆಯೆಂದರೆ ಒಂದು ಬಗೆಯ ಧೀರೋದಾತ್ತ ಆಶಾವಾದ. ಘರ್ಷಣೆಗಳ ಅರಿವಿದ್ದೂ ಅದನ್ನು ದಾಟಬಲ್ಲೆ ಎಂಬ ಆದಿಭೌತಿಕ ಆಶಾವಾದ ಈ ಕವನಗಳ ಶಿಲ್ಪವನ್ನು ಕಟ್ಟಿದೆ. ಅಶಿಕ್ಷಿತ ಆಶಾವಾದದಂತೆ ಕಾಣದೆ ತಾನು ಬದುಕುತ್ತಿರುವ ಸ್ಥಿತಿಯ ನೈತಿಕ ವಿಷಮತೆಗೆ ಪ್ರತಿಸ್ಪಂದಿಸಿಯೇ ಹುಟ್ಟಿದ ತಾತ್ವಿಕ ನಿಲುವು ಅದು. ಅತಿರೇಕದ ಸಂಪ್ರದಾಯವಾದೀ ನಿಲುವುಗಳಿಗೆ ಹೋಗದೆಯೂ ಜೀವನ ಶ್ರದ್ಧೆಯನ್ನು, ಉಳಿಸಿಕೊಳ್ಳುವ ಕ್ರಮಕ್ಕೆ ಈ ಘಟ್ಟದ ಶ್ರೇಷ್ಠ ಕವನಗಳು ಸಾಕ್ಷಿ.

ಮೆಟಫಿಸಿಕಲ್ ಅಂಶಗಳು ಇಲ್ಲಿ ದಟ್ಟವಾಗಿದ್ದರೂ ಅದು ಎಲ್ಲಿಯೂ ಧಾರ್ಮಿಕ ನಿಗೂಢವಾದೀ ನೆಲೆಗಳಿಗೆ ಹೋಗಿ ತಲುಪುವುದಿಲ್ಲ; ಪರಂಪರಾಗತ ಮೌಲ್ಯಗಳ ಮಡಿಲಿಗೆ ಬೀಳುವುದಿಲ್ಲ. ಏಕೆಂದರೆ, ಸಮಕಾಲೀನ ಜೀವನದ ಸವಾಲುಗಳ ತೀವ್ರತೆಯನ್ನು ಇವು ತೆಳ್ಳಗೆ ಮಾಡಿಬಿಡುತ್ತವೆ. ಜೀವನದ ಸೊಗಸು ವಿಷಮತೆಗಳನ್ನು, ಜೀವನದ ಮೂಲಭೂತ ಶ್ರದ್ಧೆಯೊಂದರ ಮೂಲಕವೇ ಒಳಗೊಳ್ಳುತ್ತವೆ. ಚರಿತ್ರೆಯ ಪ್ರಗತಿಪರ ಸತ್ವದ ಬಗ್ಗೆ ಅಪಾರ ಗೌರವವಿರಿಸಿಕೊಂಡಿರುವ ಶ್ರದ್ಧೆ ಅದು. ಹೀಗಾಗಿ, ಆಧುನಿಕ ಭಾರತೀಯ ನಾಗರಿಕತೆ ಒಪ್ಪಿಕೊಂಡಿರುವ ಮೌಲ್ಯಗಳ ಬಗ್ಗೆ ಎಲ್ಲಿಯೂ ಮೂಲಭೂತವಾದ ತಿರಸ್ಕಾರ ಮೂಡುವುದಿಲ್ಲ. ಸಮಕಾಲೀನ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಮುಗಿಲಗಲದೆದೆಯಲ್ಲಿರುವ ಚಿಕ್ಕೆಗಳ ದಂಡೆಯ ಮೇಲೊಂದು ಕಣ್ಣು ಇದ್ದೇ ಇರುತ್ತದೆ ಇಲ್ಲಿಯ ಕಾವ್ಯ ಪ್ರಜ್ಞೆಗೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಅತಿರಂಜಿತ ಆತ್ಮ ಕಥನವಿಲ್ಲ. ಸಾತ್ವಿಕ ವಿನಯ ಈ ಘಟ್ಟದಲ್ಲಿ ಎಲ್ಲ ಕವನಗಳಿಗೂ ಶ್ರುತಿ ಹಿಡಿದಿದೆ.

-೪-

ಮುಂದಿನ ಘಟ್ಟ ರುದ್ರ ತಿಳಿವಿನ ಘಟ್ಟ. “ತೆರೆದ ದಾರಿ”ಯಲ್ಲೇ ಸಾಕಷ್ಟು ಸ್ಪಷ್ಟವಾಗಿ ಮೂಡಿದ ಈ ಕಾವ್ಯ ತನ್ನ ಶೃಂಗವನ್ನು ತಲುಪಿದ್ದು “ಗೋಡೆ” ಸಂಕಲನದಲ್ಲಿ. ಈ ಎರಡೂ ಕವನ ಸಂಕಲನಗಳ ಮುಖ್ಯ ಕವನಗಳ ಅನುಭವ ಮೂಲತಃ ಟ್ರ್ಯಾಜಿಕ್ ಆದದ್ದು. ಸುತ್ತಲೂ ಮೊರೆವ ಕತ್ತಲಿನ, ಕೆಡುಕಿನ, ಪ್ರೀತಿಹೀನ ಸ್ಥಿತಿಯ ಕಾವ್ಯ ಅದು. ಹೃದಯ ಹೃದಯಗಳ ಸಂಬಂಧ ಕಡಿದು ಬಿದ್ದ ಒಂದು ವಿಷಮ ವಾತಾವರಣದ ಕಾವ್ಯ ಅದು.

“ಮುಂಬೈ ಜಾತಕ”, “ರ‍್ಯೆಲು ಬರುತ್ತದೆ”, “ವಿಫಲ”, “ಸಂಕ್ರಮಣ”, “ವ್ಯರ್ಥ”, “ಗೋಡೆ”, “ನನ್ನ ಸುತ್ತ”, “ನನ್ನ ನಿನ್ನ ನಡುವೆ”, “ಖಾಲಿ ಸೈಟಿನ ಕಡೆಗೆ”, ಕವನಗಳ ದಟ್ಟ ವಿಷಾದ ಬೆರಗು ಹುಟ್ಟಿಸುವಂಥದ್ದು. ಅತ್ಯಂತ ವೈಯಕ್ತಿಕವಾದ ಲೋಕವೊಂದನ್ನು ಇಲ್ಲಿಯ ಕವನಗಳು ನಿರ್ಮಿಸುತ್ತವೆ. ಕಾವ್ಯದಲ್ಲಿ ಬರುವ ಮನುಷ್ಯ ಅಖಂಡವಾದವನು ಎಂದು ನಾವು ಹೊರಟರೆ ಕೊನೆಗೆ ಅಲ್ಲಿ ಸಿಗುವುದು ಸಾಮಾಜಿಕ ಮನುಷ್ಯನೇ. ಆದರೆ ಇಲ್ಲಿಯ  ಅನುಭವ ಆ ರೀತಿಯದಲ್ಲ. ಮನುಷ್ಯರ ನಡುವಿನ ಸಂವಹನದ ಸಮಸ್ಯೆ ಇಲ್ಲಿ ತನ್ನ ತೀವ್ರತೆಯೊಂದಿಗೆ ಪ್ರಕಟವಾಗುತ್ತದೆ.

ಈ ಘಟ್ಟದ ಜಗತ್ತಿನಲ್ಲಿ ಪ್ರಕಟವಾಗುವ ಬಿಕ್ಕುಗಳು, ನಿಟ್ಟುಸಿರು, ಆಕ್ರಂದನ, ಮೌನ ರೋಮ್ಯಾಂಟಿಕ್ಕರ ಕವನಗಳನ್ನು ನೆನಪಿಸುವಂಥದು. ಜಗತ್ತಿನೆಲ್ಲದರ ಬಗ್ಗೆ ನಿರ್ಲಕ್ಷ್ಯ ತಾಳಿ ವ್ಯಕ್ತಿ ಸಂಬಂಧಗಳ ಬಗ್ಗೆ ಬರೆಯಬಲ್ಲ ದಿಟ್ಟತನವೇ ಆ ಕವನಗಳಿಗೆ ವಿಚಿತ್ರ ಅಂತರ್ಮುಖೀ ಗುಣವನ್ನು ನೀಡಿವೆ. ವೈಯಕ್ತಿಕ ಹಂತದಲ್ಲಿ ದಟ್ಟವಾಗಿ ಹಬ್ಬುವ ಸಂವಹನ ಹೀನಸ್ಥಿತಿ ಇಡೀ ಸಮಾಜಕ್ಕೆ ಹಬ್ಬಿ ನಿಂತಿರುವುದನ್ನು ಕೂಡ ಹೇಳಲಾಗಿದೆ.

ವೈಯಕ್ತಿಕ ಸಂಬಂಧಗಳ ಪಾವಿತ್ರ್ಯತೆಯನ್ನು ಉಳಿಸಗೊಡದ ಹೃದಯಹೀನ ಜಗತ್ತು ಇದು. ಲಾಭಕ್ಕೆ ಹಾತೊರೆವ, ಯಾವ ಥರದ ಪ್ರಬುದ್ಧ ಸ್ವಯಂಪೂರ್ಣತೆಗೂ ಅವಕಾಶ ಕೊಡದ, ಕುರುಡು ಕಾಂಚಾಣದ ಚಾರಿತ್ರಿಕ ಜಗತ್ತು ಇದು. ಇಂಥ ಸ್ಥಿತಿಯಲ್ಲಿ ಕೆಲವು ಕವಿಗಳು ಆ ಜಗತ್ತನ್ನು ಅದರ ಶರತ್ತುಗಳ ಮೇಲೆಯೇ ವಿರೋಧಿಸುತ್ತಾರೆ. ಪ್ರಖರ ಸಾಮಾಜಿಕ ಸತ್ಯವನ್ನು ಅನ್ವೇಷಿಸುವ ಕಾವ್ಯ ಬರೆಯುತ್ತಾರೆ. ಶ್ರೇಷ್ಠ ವಾಮಪಂಥೀಯ ಕವಿಗಳು  ಈ ಬಗೆಯವರು. ಆದರೆ ಇನ್ನೊಂದು ರೀತಿಯ ಕವಿಗಳು ಈ ಜಗತ್ತನ್ನು ಬೇರೆ ನೆಲೆಗಳಿಂದ ವಿರೋಧಿಸುತ್ತಾರೆ. ಆ ಜಗತ್ತು ಕೊಲ್ಲಬಯಸುವ, ಕರಗಿಸ ಬಯಸುವ ಕ್ಷೇತ್ರಗಳಿಗೆ ಗಟ್ಟಿಯಾಗಿ ಆತುಕೊಳ್ಳುವುದರ ಮೂಲಕ ತಮ್ಮ ಅನುಭವಗಳ ಮೌಲಿಕತೆಯನ್ನೂ ಸಾರುತ್ತಾರೆ. ಪ್ರಕೃತಿಗೆ, ಪ್ರೇಮಕ್ಕೆ, ಚೆಲುವಿಗೆ ಗಾಢವಾಗಿ ಅಂಟಿಕೊಂಡ ರೊಮ್ಯಾಂಟಿಕ್ ಕವಿಗಳು ಇಂಥವರು. ಅರ್ಥಪೂರ್ಣ ರೊಮ್ಯಾಂಟಿಕ್ ಕಾವ್ಯದ ಉಗಮ ಇಲ್ಲಿಂದಲೇ.

ಈ ದೃಷ್ಟಿಯಿಂದ “ತೆರೆದ ದಾರಿ”, “ಗೋಡೆ”ಯಂಥ ಮುಖ್ಯಕವನ ಸಂಗ್ರಹಗಳು ನಿಜವಾಗಿಯೂ ಕುತೂಹಲಕಾರಿಯಾದವುಗಳು. ನವೋದಯದ ನಂತರ ವೈಯಕ್ತಿಕ ಸಂಬಂಧಗಳ ಲೋಕದಲ್ಲಿ ಉಂಟಾಗುವ ಅಲ್ಲೋಲ ಕಲ್ಲೋಲವನ್ನು ಪ್ರಮುಖ ವಸ್ತುವನ್ನಾಗಿ ಕಾವ್ಯದಲ್ಲಿ ತಂದದ್ದನ್ನು ಇಲ್ಲಿಯ ತನಕ ಕನ್ನಡ ವಿಮರ್ಶೆ ಗಮನಿಸದೇ ಇದ್ದದ್ದು ನಿಜಕ್ಕೂ ಆಶ್ಚರ‍್ಯದ ಸಂಗತಿ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಸ್ತುವೆಂದರೆ ಒಂಟಿತನದ್ದು. “ಅನಾವರಣ” ಸಂಕಲನದ “ಹೋಟೆಲಿನಲ್ಲಿ” ಕವನದಲ್ಲೇ ಸ್ಪಷ್ಟವಾಗಿ ಕಾಣಿಸಿಕೊಂಡ ಈ ವಸ್ತು ತನ್ನ ಪ್ರಬುದ್ಧ ಘಟ್ಟವನ್ನು ತಲುಪಿದ್ದು “ಗೋಡೆ” ಕೃತಿಯಲ್ಲಿ. ಅಲ್ಲಿ ಈ ವಸ್ತು ಇನ್ನಿತರ ಅನುಭವ ವಲಯಗಳ ಜೊತೆ ಕರಗಿ ಹೋದರೂ, ಅದರ ಆಳದಲ್ಲಿ ಒಂಟಿತನ ಮೌನವಾಗಿ ಚಲಿಸುತ್ತಲೇ ಇರುತ್ತದೆ. “ಅನಾವರಣ”ದಿಂದಾಚೆಗಿನ ಕವನಗಳಲ್ಲಿ ಮೂಡುವ ಈ ಒಂಟಿತನ ಈ ಕವಿಯಲ್ಲಿ ಕಾಣಿಸಿಕೊಳ್ಳುವುದು ಅನೇಕ ರೀತಿಯಲ್ಲಿ. ಆಧುನಿಕ ನಾಗರಿಕತೆಯೇ ಎಲ್ಲ ಥರದ ಪ್ರೀತಿಯ ಸೆಲೆಗಳನ್ನು ಬತ್ತಿಸಿ ಹಾಕಿದೆ ಎಂಬ ನೆಲೆಯಿಂದ ಅದು ಬಂದಿರಬಹುದು ಅಥವಾ ಸಮಕಾಲೀನ ಬದುಕೇ ಇಂಥ ಒಂಟಿತನವನ್ನು ಸೃಷ್ಟಿಸಿರಬಹುದು; ಅಥವಾ ಮನುಷ್ಯನ ಮೂಲಭೂತ ಸ್ಥಿತಿಯೇ ಇದಾಗಿರಬಹುದು. ಒಟ್ಟಾರೆಯಾಗಿ ಒಂಟಿತನದ ದ್ರವ್ಯದಲ್ಲೇ ಉಳಿದ ವಿಷಾದದ ಅನುಭವಗಳೂ ರೂಪುಗೊಂಡಿವೆ. “ತೆರೆದ ದಾರಿ”ಯ “ವಾಲ್ಮೀಕಿ” ಅಂಥ ಪರಿಣಾಮಕಾರಿ ಕವನಗಳಲ್ಲೊಂದು.

ಆಧುನಿಕ ಯುಗದ ಅತ್ಯಂತ ಕ್ರೂರ ಸತ್ಯಗಳಲ್ಲೊಂದು ಈ ಒಂಟಿತನ. ಆಧುನಿಕ ಯುಗದ ಮಾನವನಿಗೆ ಉಂಟಾಗುವ ದಿವ್ಯ ತಿಳಿವು ಎಂದರೆ ಮೂಲತಃ ಈ ಒಂಟಿತನದ್ದೆ. ಹೀಗಾಗಿ, ಈ ಅನುಭವ ಉಳಿದ ಬಿಕ್ಕಟ್ಟುಗಳ, ವೈಯಕ್ತಿಕ ಸಂಕಟಗಳನ್ನು ರೂಪಿಸುವ ಕೇಂದ್ರಭೂಮಿಕೆಯಾಗಿ ಅಲ್ಲಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.

-೫-

ಚರಿತ್ರೆಗೆ ಋತುಗಳ ರೀತಿಯ ಬದುಕು ಇದೆ. (ಆದರೆ ವಸಂತ ಮಾತ್ರ ನಿಜವಾಗಿಯೂ ಯುಟೋಪಿಯಾ ಏನೋ!) ಈಗಂತೂ ನಾವು ಬದುಕುತ್ತಿರುವುದು ಖಾಂಡವಾಗ್ನಿಯ ಋತು. ಗ್ರೀಷ್ಮದುರಿಬಿಸಿಲು ಎಲ್ಲ ಜೀವಚೈತನ್ಯವನ್ನು ಬತ್ತಿಸಿ ಹಾಕುತ್ತಿದೆ. ಧಗೆ, ದಾಹಗಳು ನಮ್ಮ  ಕೇಂದ್ರ ಅನುಭವಗಳಾಗಿವೆ.

ಎಲ್ಲ ನಾಗರಿಕತೆಗಳೂ ಈ ಬಿಕ್ಕಟ್ಟನ್ನು ಒಂದಲ್ಲ ಒಂದು ಬಾರಿ ಎದುರಿಸಲೇ ಬೇಕಾಗುತ್ತದೆ. ಇಂಥ ಉರಿಬಿಸಿಲಿನ ಋತು ಬಂದಾಗ ಎಲ್ಲೆಲ್ಲೂ ಬರೀ ಬೋಳು ಬಯಲು. ಹಸಿರೇ ಕಾಣದ ಬೆಂಗಾಡು, ಸುಡುವ ಬಂಡೆಗಳು. ಹತ್ತೊಂಬತ್ತನೆ ಶತಮಾನದ ಜರ್ಮನಿ ಹೆಗೆಲ್ಲನಿಗೆ ಇದೇ ಬಗೆಯ ತಲ್ಲಣವನ್ನು ಅನುಭವಿಸುತ್ತಿರುವಂತೆ ಕಂಡಿತು. ಆತ ಈ ಋತುವಿನ ಅನುಭವವನ್ನೇ ಪಡೆದು, ಇದನ್ನೆ ನೀರಸ ಗದ್ಯಯುಗ ಎಂದು ಕರೆದ. ಆಸ್ತಿತ್ವದ ನೀರಸ ಗದ್ಯ ಮತ್ತು ಹೃದಯದ ಕಾವ್ಯಗಳ ನಡುವೆ ತೀವ್ರ ರೀತಿಯ ಸಂಘರ್ಷ ಈ ಯುಗದಲ್ಲಿ ಇದ್ದದ್ದೆ ಎಂದು ಸಾರಿದ. ಬಹುಶಃ ಈಗ ನಾವು ಭಾರತದಲ್ಲಿ ಬದುಕುತ್ತಿರುವುದು ಅಂಥದೇ ಋತುವಿನಲ್ಲಿ.

ಎಪ್ಪತ್ತನೆಯ ದಶಕ ಭಾರತೀಯ ಚರಿತ್ರೆಯಲ್ಲಿ ದಟ್ಟ ವಿಷಾದದ ದಶಕ. ವಿನಾಶದ ಅಂಚಿನಲ್ಲಿರುವ ವ್ಯವಸ್ಥೆಯ ರಾಕ್ಷಸೀ ಶಕ್ತಿ ಘನೀಕೃತವಾಗಿ ಈ ಒಂದೇ ದಶಕದಲ್ಲಿ ತನ್ನ ಪಂಜಗಳಿಂದ ತೀವ್ರವಾಗಿ ಹೊಡೆಯಿತು. ಭೀಕರವಾದ ಅರಿವಿನ ಹತ್ತಿರ ನಾವು ಸಾಗುತ್ತಿದ್ದೇವೆ, ನಮ್ಮ ಪ್ರಜ್ಞೆಯೊಳಗೆ ಅದು ತೀರಾ ಇಳಿದು ಬಿಟ್ಟಿದೆ ಎಂಬುದಕ್ಕೆ ಈ ದಶಕದ ಕಾವ್ಯ ಸಾಕ್ಷಿ.

ಉದಾರವಾದಕ್ಕಂತೂ ಇವು ಸೃಜನಶೀಲ ಬಿಕ್ಕಟ್ಟಿನ ದಿನಗಳೂ ಹೌದು. ತಮ್ಮ ಸೃಜನಶೀಲತೆಯ ಮೂಲದ್ರವ್ಯವನ್ನು ಕಾಪಾಡಿಕೊಳ್ಳಲು ಹೊಸ ಬಗೆಯ ನುಡಿಕಟ್ಟು, ರೂಪಕ, ಸಂವೇದನಾಕ್ರಮಗಳನ್ನು ರೂಢಿಸಿಕೊಳ್ಳುವ ಮೂಲಕ ಇವರು ಈ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯವಿದೆ. ಜಿ. ಎಸ್. ಎಸ್. ಅವರ “ಕಾಡಿನ ಕತ್ತಲಲ್ಲಿ” ಕೃತಿಯನ್ನು ನಾವು ಅರ್ಥಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯಲ್ಲಿಯೇ.

ಎಪ್ಪತ್ತರ ದಶಕದಲ್ಲಿ ಸಾಹಿತ್ಯವನ್ನು ಸಮಾಜಮುಖಿಯನ್ನಾಗಿ ಮಾಡಲು ಯತ್ನಿಸಿದ ಪ್ರಮುಖ ಸಾಹಿತ್ಯಿಕ ಮೌಲ್ಯಗಳ ಪ್ರಭಾವ ಈ ಸಂಕಲನದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಸ್ಥೂಲ ಸಮಾಜವಾದೀ ಆಶಯಗಳನ್ನು ಒಳಗೊಳ್ಳುವ ಪ್ರಯತ್ನ ಈ ಕೃತಿಯ ಸತ್ವ. “ಗೋಡೆ” ಕೃತಿಯಲ್ಲಿ ಶೃಂಗವನ್ನು ತಲುಪಿದ್ದ ರುದ್ರ ತಿಳಿವಿನ ಘಟ್ಟ ಇಲ್ಲಿ ಸಾಮಾಜಿಕ ಆಯಾಮವನ್ನು ಒಳಗೊಳ್ಳಲು ಯತ್ನಿಸಿದೆ. ಈ ದೃಷ್ಟಿಯಿಂದ ಇಲ್ಲಿಯ “ದುಃಸ್ವಪ್ನ” ಇಡೀ ಕೃತಿಯ ಶ್ರೇಷ್ಠ ಕವನ.
ನಮ್ಮ ಬದುಕಿನೆಲ್ಲ ಕ್ಷೇತ್ರಗಳು ಭ್ರಷ್ಟಗೊಂಡಿರುವ ಸ್ಥಿತಿಯ ಮೇಲೆ ಮಾರ್ಮಿಕ ವ್ಯಾಖ್ಯಾನ ಈ ಕವನ.

ಕಂಡೆ
ಎಂತೆಂಥವರು ಏನೇನೋ ಆದದ್ದ ಕಂಡೆ.
ಗೊಮ್ಮಟನಾಗಿ ನಿಂತಿದ್ದ ಮಹಾ ಮೂರ‍್ತಿ
ಕರಗಿ ಕೊಚ್ಚೆಯಾಗಿ ಹರಿದದ್ದ ಕಂಡೆ
ಇಂದ್ರನೈರಾವತಕ್ಕೆ ತೊಣಚಿ ಹತ್ತಿ
ಬೀದಿ ನಾಯಾಗಿ ಬೂದಿಯಲ್ಲಿ ಹೊರಳಾಡಿದ್ದ ಕಂಡೆ.
ನಿಗಿ ನಿಗಿ ಉರಿದ ಉಜ್ವಲವಾದ ಮಾತೆಲ್ಲ
ಬರೀ ಬೂದಿಯಗಿ ತೆಪ್ಪಗಾದದ್ದ ಕಂಡೆ.

– ದುಃಸ್ವಪ್ನ

ಹೀಗೆ ಬೆಳೆಯುತ್ತಾ ಹೋಗುವ ಕವನದ ಕೊನೆ ತುಂಬ ನಾಟಕೀಯವಾದದ್ದು. ಪರಿಸರ ಪ್ರಜ್ಞೆಯ ಮೇಲೆ ಪರಿಣಾಮ ಬೀರುವ ರೀತಿ ಕವನದ ಕೊನೆಯಲ್ಲೇ ಪರಿಣಾಮಕಾರಿಯಾಗಿ ಮೂಡುತ್ತದೆ. ‘ಕಂಡು ಎಚ್ಚರಗೊಂಡೆ ಎಚ್ಚರವೆಲ್ಲ ನಿಗಿ ನಿಗಿ ಉರಿವ ಕೆಂಡದ ಉಂಡೆ’. ಈ ಕವನವನ್ನು ಇಲ್ಲಿಯ ಅನುಭವ ಗ್ರಹಣ ಕ್ರಮದ ಕೇಂದ್ರ ರೂಪಕವೆನ್ನಬಹುದು.

“ಕಾಡಿನ ಕತ್ತಲಲ್ಲಿ”, “ಇನ್ನೆಂದು ಬೆಳಗು ನಿಮಗೆ”, ಉತ್ತರಾಧಿಕಾರಿ”, “ವಸಂತ ಮೂಡುವುದೆಂದಿಗೆ” ಕವನಗಳು ಈ ದೇಶದ ಜನಸಾಮಾನ್ಯನ ವಿಮೋಚನೆಯ ಆಶಯವನ್ನು ಹೊತ್ತ ಕವನಗಳು. ಜಿ. ಎಸ್. ಎಸ್.ರಿಗೆ ಸಿದ್ಧಿಸಿರುವ ಸರಳ ಭಾವಗೀತಾತ್ಮಕ ಶೈಲಿಯಲ್ಲಿ ಈ ಕವನಗಳು ರಚಿತವಾಗಿವೆ. ಜೀವನದಲ್ಲಿಯ ಮೂಲಭೂತ ಘರ್ಷಣೆಗಳ ಅಂತರ‍್ಮುಖೀ ಅರಿವಿನಿಂದ ಈ ಕವನಗಳು ಹುಟ್ಟಿಲ್ಲವಾದ್ದರಿಂದ ಇವು ಸರಳ ಭಾವಗೀತೆಗಳ ಹಂತಕ್ಕೆ ನಿಂತುಬಿಡುತ್ತವೆ. ಅದರಾಚೆಗೆ ಏರುವುದಿಲ್ಲ. ಹೀಗಾಗಿ, ಇಂಥ ಸಾಮಾಜಿಕ ವಾಸ್ತವವನ್ನು ಕುರಿತ ಕವನಗಳು ಅಂಥ ಗಾಢ ಅನುಭವವನ್ನು ನೀಡುವುದಿಲ್ಲ.

ಕವಿಗೆ ತನ್ನನ್ನು ಆವರಿಸಿರುವ ಸೃಜನಶೀಲತೆಯ ಬಿಕ್ಕಟ್ಟಿನ ಅರಿವಿದೆ. “ಸ್ವಗತ” ಪದ್ಯದಲ್ಲಿ ಇದರ ಮಾರ್ಮಿಕ ಕಥನವಿದೆ. “ಕಾರಂಜಿಗಳ ಬಾಯಿಗೆ ಮಣ್ಣು ಮೆತ್ತಿಕೊಂಡು ಒಳಗಿನಿಂದ ನೀರು” ಏರುವುದೇ ಇಲ್ಲ. ಗರಿ ತೆರೆದು ನಿಂತ ಮರಗಳ ತುಂಬ ಹಕ್ಕಿಗಳ ಗುಜಗುಂಪಲೂ ಇಲ್ಲ. ಎಲ್ಲ ಕವಿಗಳಲ್ಲೂ ಮತ್ತೆ ಹೊಸ ಹಾರುವಿಕೆಗಾಗಿ ಅಪ್ರಜ್ಞಾಪೂರ್ವಕವಾಗಿ ಕವಿಪ್ರಜ್ಞೆ ಸಿದ್ಧವಾಗುತ್ತಿದ್ದಾಗಿನ ಮಂಪರು ಇದು. ತಮ್ಮ ಸೃಜನಶೀಲತೆಯ ಒರತೆ ಬತ್ತಿಹೋಗಿದೆ, ತಾನಿನ್ನು ಬರೆಯಲಾರೆ ಎಂದ ಕವಿಗಳು, ನಂತರ ಕೆಲವೇ ದಿನಗಳಲ್ಲಿ ಅದ್ಭುತವಾದ ಕಾವ್ಯ ರಚಿಸಿರುವ ಪ್ರಸಂಗಗಳು ಕಾವ್ಯ ಚರಿತ್ರೆಯಲ್ಲಿ ಅನೇಕವಾಗಿವೆ.

ಹೀಗಾಗಿ, ಈ ಸಂಕಲನದ ಇನ್ನೊಂದು ರೀತಿಯ ಕವನಗಳ ಬಗ್ಗೆ ನನಗೆ ಕುತೂಹಲವಿದೆ; ನಂಬಿಕೆಯಿದೆ. ಕವಿ ತನ್ನನ್ನು ಪುನರುಜ್ಜೀವಿಸಿಕೊಳ್ಳುತ್ತಿರುವ ಒಂದು ಮಾರ್ಗ ಇದು. ಎಲ್ಲ ರೀತಿಯ ತೆಳು ಸಾಮಾಜಿಕ ವಾಸ್ತವಗಳಿಂದಾಚೆಗೆ ಇರುವ, ನಿಗೂಢವಾದ, ಅವೈಚಾರಿಕವಾದ ಅನುಭವಗಳನ್ನು ಹೇಳುವ ಕವಿತೆಗಳು ಇವು. ಹೃದಯದ ಕಾವ್ಯದ, ಗೊತ್ತಿಲ್ಲದ ಲೋಕವೊಂದರ ಛಾಯೆಗಳು ತಾನೇ ತಾನಾಗಿ ಇಲ್ಲಿ ಮೂಡುತ್ತವೆ. “ಸಾಲುಮರಗಳ ಕೆಳಗೆ”. “ಚೈತ್ರದಲ್ಲಿ”, “ನಿನ್ನ ನಗು”, “ಕೇರಳದಲ್ಲಿ” ಈ ರೀತಿಯ ಕುತೂಹಲಕಾರಿ ರಚನೆಗಳು. “ನಿನ್ನ ನಗು” ಕವನ “ಜಡೆ” ಕವನದಂತೆ pantheist vision ಅನ್ನು ಹೊಂದಿರುವಂಥದು. ಮತ್ತೆ ಅದೇ ಬಗೆಯ ಸಾತ್ವಿಕ ಹುಚ್ಚುತನ ಈ ಕವನದಲ್ಲಿ ಹಿಂದಿರುಗಿದೆ.
“ದುಃಸ್ವಪ್ನ”ದ ರುದ್ರ ತಿಳಿವನ್ನು ಮತ್ತು ಈ ಕವನಗಳ ಅನುಭವ ಗ್ರಹಣ ಕ್ರಮವನ್ನು ಜಿ. ಎಸ್. ಎಸ್. ಬೆಸೆಯಬಲ್ಲರಾದರೆ ಅಲ್ಲಿಂದ ಜಿ. ಎಸ್. ಎಸ್.ರ ಕಾವ್ಯಜೀವನದ ಹೊಸ ಘಟ್ಟದ ಪ್ರಾರಂಭ; ಕನ್ನಡದಲ್ಲಿ ಇನ್ನೂ ಹುಟ್ಟಬೇಕಾಗಿರುವ ರೊಮ್ಯಾಂಟಿಕ್ ಕಾವ್ಯದ ಬೇರುಗಳು ಇರುವುದು ಇಂಥ ನೆಲೆಗಳಲ್ಲಿಯೇ. ಗಾರ್ಕಿ ಇಂಥದ್ದನ್ನೆ ಕ್ರಾಂತಿಕಾರಿ ರೊಮ್ಯಾಂಟಿಸಿಸಂ ಎಂದು ಕರೆದ. ಅಸ್ತಿತ್ವದ ನೀರಸ ಗದ್ಯ, ಪ್ರತಿಭೆಯ ಗರಿಗಳನ್ನು ಕತ್ತರಿಸಿ ಹಾಕುತ್ತದೆ; ಸುಟ್ಟು ಬೂದಿ ಮಾಡುತ್ತದೆ. ಆದರೆ ಮನುಷ್ಯನ ಪ್ರತಿಭೆ ಅಷ್ಟು ಸುಲಭವಾಗಿ ಸಾಯುವಂಥದ್ದಲ್ಲ. ಬೂದಿಯಿಂದ ಮತ್ತೆ ಅದು ಅರಳಿ ಹಾರಾಡುತ್ತದೆ. ಆ ಹಕ್ಕಿ ಹಾರುವುದನ್ನು ಅಸಮಾನತೆಯ ಮೇಲೆ ನಿಂತ ವ್ಯವಸ್ಥೆ ಎವೆ ತೆಗೆದಿಕ್ಕದೆ ನೋಡುತ್ತದೆ.

ಅಂಥ ಅರ್ಥಪೂರ್ಣ ರೊಮ್ಯಾಂಟಿಕ್ ಕಾವ್ಯವನ್ನು ಪ್ರಾರಂಭಿಸಲು ಜಿ. ಎಸ್. ಎಸ್.ರಂಥವರಿಗೆ ಅವರ ಇಡೀ ಕಾವ್ಯ ಜೀವನ ಸಿದ್ಧತೆ ನೀಡಿರುತ್ತದೆ. ತಮ್ಮ ನಂಬಿಕೆಗಳ ಸ್ವರೂಪದ ಕಾರಣಕ್ಕಾಗಿಯೇ ಈ ಕವಿಗಳು ಅಂತರಂಗದ ಹಾಡನ್ನು ಗೆಲ್ಲ್ಲಿಸಬಲ್ಲರು. ಸುಲಭವಾಗಿ ಬಿಚ್ಚಿಕೊಳ್ಳದ, ನಿಗೂಢ, ಅವೈಚಾರಿಕ (ಗದ್ಯಾತ್ಮಕ “ವಿಚಾರ”ಕ್ಕಿಂತ ಭಿನ್ನವಾದದ್ದು ಎಂದರ್ಥ) ಕಾವ್ಯ ಅವರ ಕಾವ್ಯಜೀವನದ ಸತ್ವ ಸಮಸ್ತವನ್ನೂ  ಬಳಸಿಕೊಂಡರೆ ಹುಟ್ಟಬಲ್ಲದು. ಬಹುಶಃ ಈ ಕಾರಣಕ್ಕಾಗಿಯೊ ಏನೊ, ಅವರ “ಚೈತ್ರದಲ್ಲಿ” ಪದ್ಯ ನನಗೆ ವಿಶಿಷ್ಟವಾಗಿ ಕಂಡಿತು. ಸಾಮಾಜಿಕ ಪ್ರಜ್ಞೆಯ ಕಾವ್ಯದ ಹೆಸರಿನಲ್ಲಿ ನಮ್ಮ ಸುತ್ತಲೂ ಸರಳ ಪ್ರತಿಕ್ರಿಯೆಗಳೇ ತುಂಬಿರುವಾಗ ಇಂಥ ಕವನಗಳು ಕಾವ್ಯಕ್ಕಿರುವ ಸಾಧ್ಯತೆಗಳನ್ನು ಸೂಚಿಸಬಲ್ಲದು.

ಕಾವ್ಯ ಉಂಟುಮಾಡುವ ಪ್ರಜ್ಞೆಯ ಕ್ರಾಂತಿಕಾರೀ ಪಲ್ಲಟ ಮೂಲತಃ ಈ ಸ್ವರೂಪದ್ದೆ. ಅದಕ್ಕಾಗಿಯೇ ಖ್ಯಾತ ವಾಮಪಂಥೀಯ ಚಿಂತಕ ಹರ್ಬರ್ಟ್ ಮಾರ್ಕ್ಯೂಸ್ ಹೇಳಿದ: ಬೋದಿಲೇರ್ ಮತ್ತು ರಿಂಬಾರ ನಿಗೂಢ ಪದ್ಯಗಳು ಬ್ರೆಕ್ಟ್‌ನ ಸರಳ ಉಪದೇಶಾತ್ಮಕ ನಾಟಕಗಳಿಗಿಂತ ಹೆಚ್ಚು ತೀವ್ರವಾದ ಕ್ರಾಂತಿಕಾರಿ ಪಾತ್ರವನ್ನು ನಿರ್ವಹಿಸುತ್ತವೆ.

ಗ್ರೀಷ್ಮದುರಿಬಿಸಿಲಿನಲ್ಲಿ ಕಾವ್ಯಾಭಿಮಾನಿಗಳು ಇಂಥ ಕಾವ್ಯಕ್ಕಾಗಿ ಕಾಯುತ್ತಾರೆ. ದಟ್ಟ ಕಾರ್ಮೋಡದ ಆಕಾಶದ ಎದೆವೊಡೆದಂತೆ ಭೋರೆಂದು ನುಗ್ಗುವ, ಧೋ ಧೋ ಎಂದು ಸುರಿಸುವ ಆ ಮಳೆಗಾಗಿ ಕಾಯುತ್ತಾರೆ. ಒಣಗಿ ಬೆಂಗಾಡಾದ ಹೃದಯಗಳು ಮತ್ತೆ ನೀರುಂಡು ತಣಿದು ಬದಲಾವಣೆಯ ರಥಕ್ಕೆ ಕೈ ಹಚ್ಚುತ್ತವೆ. ಅಂಥ ದೈತ್ಯ ಸಂಕಟಗಳ ಹೊತ್ತಿನಲ್ಲೂ ಪ್ರೊಮಿತ್ಯೂಸ್‌ನಿಗೆ ಶಕ್ತಿ ನೀಡಿದ್ದು ಅವನ ಬಾಯಿಂದ ಹೊರಟ ಆ ಮಹಾಕವನಗಳಲ್ಲವೇನು? ದೇವರು, ಧರ್ಮಗಳ ಸರಳ ಸಮಾಧಾನಗಳಿಲ್ಲದ ಕಾವ್ಯ ಅದು.

ಜಿ. ಎಸ್. ಎಸ್. ಅವರ ಐವತ್ತೈದರ ಹೊತ್ತಿಗೆ ಬಂದ ಈ ಕೃತಿಯಲ್ಲೂ ದೇವರ, ಧರ್ಮದ ಸುಳಿವಿಲ್ಲ. ಆಧುನಿಕ ಯುಗದಲ್ಲಿ ಅಂತರ್ಮುಖಿಯಾದವನಿಗೆ ಈ ರೀತಿಯ ನಂಬಿಕೆ ಸಾಧ್ಯವೂ ಇಲ್ಲ. ಏಕೆಂದರೆ-ಹೆಗೆಲ್ ಹೇಳಿದ: ನಮ್ಮ ಅಂತರ್ಮುಖೀ ಬೆಂಕಿಯಲ್ಲಿ ದೇವರುಗಳು ಉರಿದು ಬೂದಿಯಾಗಿದ್ದಾರೆ.

ಈ ಕವಿಯ ಮುಂದಿನ ದಾರಿಯ ಬಗ್ಗೆ ಕುತೂಹಲ ಹುಟ್ಟುವುದು ಇದೇ ಕಾರಣಕ್ಕಾಗಿ.

– ಡಿ. ಆರ್. ನಾಗರಾಜ್
ಆಗಸ್ಟ್ ೧೯೮೧


ವ್ಯಕ್ತಮಧ್ಯ

 

ಕಳೆದ ಏಳು ವರ್ಷಗಳ ಕಾಲಮಾನದಲ್ಲಿ ನಾನು ಆಗಾಗ ಬರೆದ ನಲವತ್ತು ಕವಿತೆಗಳನ್ನು ಒಳಗೊಳ್ಳುವ ‘ವ್ಯಕ್ತಮಧ್ಯ’ ಎಂಬ ಹೆಸರಿನ ಈ ನನ್ನ ಹದಿಮೂರನೆಯ ಕವನಸಂಗ್ರಹ ಪ್ರಕಟವಾಗುತ್ತಿರುವುದು ನನಗೆ ಸಂತೋಷವನ್ನು ತಂದಿದೆ. ನಾವು ಕಾಣುವ, ನಾವು ಪ್ರೀತಿಸುವ ಹಾಗೂ ನಮಗೆ ದತ್ತವಾದ ಈ ಬದುಕಿನ ಸ್ವರೂಪವನ್ನು ‘ವ್ಯಕ್ತಮಧ್ಯ’ ಎಂದು ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. ಆ ಮಾತನ್ನು ಈ ಸಂಗ್ರಹದ ಶೀರ್ಷಿಕೆಯಾಗಿ ನಾನು ಬಳಸಿಕೊಂಡಿದ್ದೇನೆ – ನನಗೆ ಪ್ರಸ್ತುತವಾಗುವ ಅರ್ಥದಲ್ಲಿ. ಚರಿತ್ರೆ, ಪುರಾಣ ಮತ್ತು ವಾಸ್ತವಗಳ ಮೂಲಕ ನಾನು ನನಗೆ ದತ್ತವಾದ ಈ ‘ವ್ಯಕ್ತಮಧ್ಯ’ದ ಬದುಕನ್ನು  ಗ್ರಹಿಸಿದ ಹಾಗೂ ಅರ್ಥಮಾಡಿಕೊಂಡ ಕ್ರಮವನ್ನು ಈ ಕವಿತೆಗಳು ಅಭಿವ್ಯಕ್ತಪಡಿಸುತ್ತವೆ.
ಕವಿತೆ ಎನ್ನುವುದು ಮೂಲತಃ ಶಬ್ದಾರ್ಥಗಳ ಒಂದು ವಿಶಿಷ್ಟ ರೀತಿಯ ಕಟ್ಟಡ ಎಂಬ ತಿಳವಳಿಕೆಯೇ ನಮ್ಮ ಇತ್ತೀಚಿನ ಬಹುತೇಕ ಕವಿಗಳಿಗೆ ಇಲ್ಲವಾಗುತ್ತಿದೆಯೇನೋ ಎಂಬ ಅನುಮಾನವಿದೆ ನನಗೆ. ಕವಿತೆಯೊಂದರಲ್ಲಿ ನಾವು ಏನು ಹೇಳುತ್ತಿದ್ದೇವೆಯೋ ಅದೇ ಮುಖ್ಯ, ಹೇಗೆ ಹೇಳುತ್ತಿದ್ದೇವೆ ಎಂಬುದಲ್ಲ ಎಂಬ ಒಂದು ಗ್ರಹಿಕೆಯಿಂದಾಗಿ ಬರವಣಿಗೆ ತನ್ನ ‘ಬಂಧ’ವನ್ನೆ ಸಡಿಲಗೊಳಿಸಿಕೊಳ್ಳುತ್ತಿರುವಂತೆ ತೋರುತ್ತದೆ. ಅದರಲ್ಲೂ ನವ್ಯಕಾವ್ಯ ತಂದುಕೊಟ್ಟ ಮುಕ್ತಛಂದೋ ರಚನೆಯ ಸೌಲಭ್ಯದಿಂದ, ಕವಿತೆ ಬರೆಯುವುದು ತೀರಾ ಸಲೀಸಾದ ಕೆಲಸ ಎಂಬ ಒಂದು ತಪ್ಪು ತಿಳಿವಳಿಕೆ, ಕವಿತೆಯನ್ನು ಯಾವುದೋ ಒಂದು ಭಾವನೆಯ, ಆಲೋಚನೆಯ, ಎಷ್ಟೋವೇಳೆ ಕೇವಲ ಅನಿಸಿಕೆಯನ್ನು ಕುರಿತ ಮಾತುಗಾರಿಕೆ ಅಥವಾ ಹರಟೆಯ ಹಂತಕ್ಕೆ ತಂದಿತೆಂಬುದನ್ನು ನಿದರ್ಶನ ಸಹಿತವಾಗಿ ವಿವರಿಸಿ ಹೇಳಬೇಕಾಗಿಲ್ಲ. ಕವಿತೆಯ ಸಂದರ್ಭದಲ್ಲಿ ‘ಬಂಧ’ ಎಂದರೆ ನಿಯತವಾದ ಪದ್ಯಬಂಧ ಎಂದೇ ತಿಳಿಯಬೇಕಾಗಿಲ್ಲ. ಅದೊಂದು ಬಹು ಮುಖ್ಯವಾದ ಗುಣ ಕಾವ್ಯದಲ್ಲಿ. ಗೋಪಾಲಕೃಷ್ಣ ಅಡಿಗರಂಥ ಶಕ್ತ ಕವಿ ನಿಯತ ಪದ್ಯ ಬಂಧಗಳನ್ನು ಮುರಿದು ಕಾವ್ಯಾಭಿವ್ಯಕ್ತಿಯನ್ನು ಮುಕ್ತಛಂದೋ ವಿಧಾನಕ್ಕೆ ತಂದರೂ, ಅವರ ಬರವಣಿಗೆ, ಅವರೇ ಹೇಳುವಂತೆ ‘ಸಾವಯವ ಶಿಲ್ಪದ ಸಮಗ್ರೀಕರಣಬಲ’ದಿಂದ ಪಡೆದುಕೊಂಡ ‘ಬಂಧ’ದ ಸ್ವರೂಪವೇ ಬೇರೆ. ನನಗಂತೂ ‘ಬಂಧೇ ವ್ಯವಸ್ಥಿತೌ ಕಾವ್ಯಂ’ ಎಂಬ ಪ್ರಾಚೀನ ಆಲಂಕಾರಿಕನಾದ ಕುಂತಕನ ಮಾತು ತುಂಬ ಮಹತ್ವದ್ದಾಗಿ ತೋರುತ್ತದೆ. ಬಂಧವೊಂದರಲ್ಲಿ ಅನುಭವಗಳನ್ನು ವ್ಯವಸ್ಥೆಗೊಳಿಸುವ ಕಲೆಗಾರಿಕೆಯೆ ಕಾವ್ಯ ಎಂಬುದನ್ನು ನಮ್ಮ ಹೊಸ ತಲೆಮಾರಿನ ಕವಿಗಳು ತಿಳಿದುಕೊಳ್ಳಬೇಕಾಗಿದೆ.

ಈ ಸಂಗ್ರಹದ ಸಂದರ್ಭದಲ್ಲಿ ಕಾವ್ಯಾಸಕ್ತರ ಗಮನಕ್ಕೆ ತರಬೇಕಾದ ಸಂಗತಿಯೊಂದಿದೆ. ಅದೇನೆಂದರೆ ಏಳು ವರ್ಷಗಳ (೧೯೯೨) ಹಿಂದೆ ಪ್ರಕಟವಾದ ನನ್ನ ‘ಚಕ್ರಗತಿ’ ಎಂಬ ಹೆಸರಿನ ಕವನ ಸಂಗ್ರಹದ ಕೆಲವು ಕವಿತೆಗಳ ಮೂಲಮಾನದಲ್ಲಿ ನಾನು ನಡೆಯಿಸಿದ ‘ಪದ್ಯಬಂಧ’ದ ಪ್ರಯೋಗಗಳು, ಈ ಸಂಗ್ರಹದ ಅರ್ಧದಷ್ಟು ಕವಿತೆಗಳಲ್ಲಿ ಇನ್ನಷ್ಟು ವೈವಿಧ್ಯತೆಯಿಂದ ಮುಂದುವರಿದಿವೆ. ಈ ಪ್ರಯೋಗಗಳ ಲಕ್ಷಣವೆಂದರೆ, ಇಡೀ ಆಧುನಿಕ ಕನ್ನಡ ಕಾವ್ಯದ ಉದ್ದಕ್ಕೂ (ನವೋದಯ, ನವ್ಯ, ನವ್ಯೋತ್ತರ ಸಂದರ್ಭಗಳಲ್ಲಿ), ಪರಿಚಿತವಾದ ಹಾಗೂ ಸಮೃದ್ಧವಾದ ‘ಚತುಷ್ಪದಿ’ (ನಾಲ್ಕು ಪಾದಗಳ) ಪದ್ಯ ಬಂಧವನ್ನು, ಅದರ ಚೌಕಟ್ಟನ್ನು ದಾಟಿಸಿ ಪದ್ಯದಿಂದ ಪದ್ಯಕ್ಕೆ ಮುಂದುವರಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಹೀಗೆ ಪರಿಚಿತವಾದ ‘ಚತುಷ್ಪದಿ’ಗಳಲ್ಲಿ ಎರಡನೆಯ ಮತ್ತು ನಾಲ್ಕನೆಯ ಪಾದಾಂತ್ಯದ ಪದಪ್ರಾಸ ಅಥವಾ ಸ್ವರಪ್ರಾಸಗಳಿಂದಾಗಿ, ಒಂದು ಬಗೆಯ ನಿಲುಗಡೆಯ ಮೂಲಕ ಪಡೆದುಕೊಳ್ಳುತ್ತಿದ್ದ ಅಚ್ಚುಕಟ್ಟಾದ ಬಂಧವನ್ನು ಮುರಿದು, ಕವಿತೆಯ ನಡೆ ಒಂದು ‘ಚತುಷ್ಪದಿ’ಯಿಂದ ಮತ್ತೊಂದು ‘ಚತುಷ್ಪದಿ’ಗೆ ಹೊರಳುವಂತೆ ‘ವ್ಯವಸ್ಥೆ’ಗೊಳಿಸಿದ ಈ ‘ಬಂಧ’ವನ್ನು ‘ಮುಕ್ತಬಂಧ’ ಎಂದು ನಾನು ಕರೆಯಲು ಅಪೇಕ್ಷಿಸುತ್ತೇನೆ. ನವ್ಯ ಸಂದರ್ಭದ್ದು ‘ಮುಕ್ತಛಂದ’ವಾದರೆ, ಇದು ‘ಮುಕ್ತಬಂಧ’- ನಿರ್ದಿಷ್ಟವಾದ ನಾಲ್ಕು ಪಂಕ್ತಿಗಳ ಬಂಧವನ್ನು ನೋಟಕ್ಕೆ ಕಾಣುವಂತೆ ಉಳಿಸಿಕೊಂಡೂ, ಅದರಿಂದ ಮುಕ್ತವಾಗಿ ಮುನ್ನಡೆಯುವ ಒಂದು ರಚನಾವಿಶೇಷ. ಈ ಕಾರಣದಿಂದ ಈ ‘ಬಂಧ’ ಹಾಡುಗಾರಿಕೆಗೆ ಅಳವಡುವ ಲಕ್ಷಣಕ್ಕೆ ಹೊರತಾಗಿ, ಹಿಂದಿನ ಪರಿಚಿತವಾದ ‘ಚತುಷ್ಪದಿ’ಗಳನ್ನು ಓದುತ್ತಿದ್ದ ಕ್ರಮದಿಂದ, ಬೇರೆಯಾದ ಓದುಗಾರಿಕೆಗೆ ಒತ್ತಾಯಿಸುತ್ತವೆ. ಒಂದು ಪದ್ಯಬಂಧದಿಂದ ಮುಂದಿನ ಪದ್ಯಬಂಧಕ್ಕೆ ಮುನ್ನಡೆಯುವ ಈ ಪ್ರಯೋಗವನ್ನು Run on stanza pattern ಎಂದು ಇಂಗ್ಲಿಷಿನಲ್ಲಿ ವರ್ಣಿಸುವುದು ಸುಲಭ. ನನ್ನ ಆಪ್ತ ವಲಯಕ್ಕೆ ಸೇರಿದ ಗೆಳೆಯರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಪ್ರೊ. ಕೆ.ಜಿ. ನಾಗರಾಜಪ್ಪ – ಇಂಥವರು ಈ ಪ್ರಯೋಗಗಳ ವಿಶೇಷತೆಯನ್ನು ಗುರುತಿಸಿದ ಮೊದಲಿಗರಾದರೂ, ಛಂದಸ್ಸು ಮೊದಲಾದ ಕ್ಷೇತ್ರಗಳಲ್ಲಿ ಪರಿಣತರಾದ ವಿದ್ವಾಂಸರು ಏನು ಹೇಳುತ್ತಾರೆ ಎನ್ನುವ ಕುತೂಹಲದಿಂದ, ನನ್ನ ಸ್ನೇಹಿತರೂ, ಘನ ವಿದ್ವಾಂಸರೂ ಆದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರಿಗೆ, ಕಳೆದ ವರ್ಷ ಈ ಕೆಲವು ಕವಿತೆಗಳನ್ನು ಕಳುಹಿಸಿ, ಅವರ ಪ್ರತಿಕ್ರಿಯೆಗಳನ್ನು ಕೋರಿದೆ. ಅವರು ತುಂಬ ವಿಶ್ವಾಸದಿಂದ ಇವುಗಳನ್ನು ಓದಿ ನೋಡಿ, “ಸಾಮಾನ್ಯವಾಗಿ ಹೊಸಗನ್ನಡ ಕವಿತೆಯಲ್ಲಿ ಮಾತ್ರಾ ಬಂಧಗಳು ಚತುಷ್ಪದಿಗಳ ಕಟ್ಟಡದಿಂದಾಗಿದ್ದು, ಆ ಚತುಷ್ಪದಿಗಳು ಒಂದೊಂದೂ ಪ್ರತ್ಯೇಕ ಸಂಪೂರ್ಣ ಅರ್ಥದ ವಾಕ್ಯಘಟಕಗಳಾಗಿರುತ್ತವೆ. ನಿಮ್ಮ ಪ್ರಯೋಗಗಳಾದರೋ ನನಗೆ ಹೊಸವಾಗಿ ಕಾಣುತ್ತವೆ. ಇಂತಹ ಪ್ರಯೋಗಗಳು ಕನ್ನಡಕ್ಕೆ ಹೊಸತು; ಬೇರೆ ಯಾವ ಕವಿಯಾದರೂ ಇಂಥ ಪ್ರಯೋಗಗಳನ್ನು ಮಾಡಿದ ಹಾಗೆ ತೋರುವುದಿಲ್ಲ, ನಾನು ಬಲ್ಲಮಟ್ಟಿಗೆ.’’ (ತಾ: ೧೦-೨-೧೯೯೮ರ ಪತ್ರ) ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿ ನನಗೆ ಧೈರ್ಯವನ್ನು ತುಂಬಿದರು.

ಇನ್ನು ಈ ಮುನ್ನುಡಿಯನ್ನು ವಿಲಂಬಿಸಲು ನನಗೆ ಇಷ್ಟವಿಲ್ಲ. ಕೊನೆಗೆ ಹೇಳಬೇಕಾದದ್ದು ನಾಲ್ಕು ಕೃತಜ್ಞತೆಯ ಮಾತುಗಳನ್ನು ಮಾತ್ರ. ನನ್ನ ಪ್ರಿಯ ಗುರುಗಳಾದ ಶ್ರೀ ಜಿ.ಪಿ. ರಾಜರತ್ನಂ ಅವರು ಹಾಕಿಕೊಟ್ಟ ಕನ್ನಡದ ಕೈಂಕರ್ಯವನ್ನು ಅತ್ಯಂತ ನಿಷ್ಠೆಯಿಂದ, ಸದ್ದಿರದೆ ನಿರ್ವಹಿಸುತ್ತಾ, ಬೆಂಗಳೂರಿನ ಕ್ರೈಸ್ತ ಕಾಲೇಜಿನ ಕನ್ನಡ ಸಂಘವನ್ನು ಕಳೆದು ಮೂರು ದಶಕಗಳ ಕಾಲಮಾನದಲ್ಲಿ ಒಂದು ಅತ್ಯುತ್ತಮವಾದ ಪ್ರಕಟನೆಯ ಹಾಗೂ ಪ್ರತಿಭಾ ಪ್ರಕಾಶನದ ವೇದಿಕೆಯನ್ನಾಗಿ ಮಾಡಿದ, ಗೆಳೆಯ ಶ್ರೀ ಚಿ. ಶ್ರೀನಿವಾಸರಾಜು ಅವರು ನನ್ನ ಈ ಕವನ ಸಂಗ್ರಹವನ್ನು ಕ್ರೈಸ್ತ ಕಾಲೇಜಿನ ಕನ್ನಡಸಂಘದಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷದ ಸಂಗತಿಯಾಗಿದೆ. ಈ ಕಾರಣಕ್ಕಾಗಿ ಶ್ರೀನಿವಾಸರಾಜು ಅವರಿಗೂ, ಹಾಗೂ ಕ್ರೈಸ್ತ ಕಾಲೇಜಿನ ಕನ್ನಡ ಸಂಘದ ಪದಾಧಿಕಾರಿಗಳಿಗೂ ನಾನು ಕೃತಜ್ಞನಾಗಿದ್ದೇನೆ. ಹಾಗೆಯೇ ಈ ಕೃತಿಯ ಮುದ್ರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನೇತ್ರಾ ಮುದ್ರಣಾಲಯದವರಿಗೂ ನನ್ನ ವಂದನೆಗಳು.

– ಜಿ.ಎಸ್. ಶಿವರುದ್ರಪ್ಪ
ಅಕ್ಟೋಬರ್, ೧೯೯೯


ತೀರ್ಥವಾಣಿ

ಶ್ರೀ ರಾಮಕೃಷ್ಣರ ಸಾಧನೆಯ ರೀತಿ ಎಷ್ಟು ವಿಶಿಷ್ಟವೂ ವೈವಿಧ್ಯಪೂರ್ಣವೂ ಆಗಿರುವುದೋ, ಅವರ ಉಪದೇಶ ವಿಧಾನವೂ ಅಷ್ಟೇ ವಿಶಿಷ್ಟವೂ ವೈವಿಧ್ಯಪೂರ್ಣವೂ ಆಗಿರುವುದು ಕಂಡುಬರುತ್ತದೆ. ಅವರು ತಮ್ಮ ಅಂತರಂಗ ಶಿಷ್ಯರಿಗೆ ಅವರವರ ಸ್ವಭಾವಕ್ಕನುಸಾರವಾಗಿ ನೀಡಿದ ಮಂತ್ರೋಪದೇಶ ರೂಪವಾದ ಶಿಕ್ಷಣ ನಮಗೆ ಅಗೋಚರವಾದುದು. ಆದರೆ ಎಲ್ಲರಿಗೂ ಗೋಚರವಾಗುವಂತೆ ಮಾತು-ಕತೆಗಳ ರೂಪದಲ್ಲಿ ಅವರು ಮಾಡಿದ ಉಪದೇಶ-ಶ್ರೀ ಮಾಸ್ಟರ್ ಮಹಾಶಯನ ಕೃಪೆಯಿಂದ ‘ಶ್ರೀ ರಾಮಕೃಷ್ಣ ವಚನವೇದ’ ರೂಪದಲ್ಲಿ ನಮಗೆ ಲಭ್ಯವಾಗಿರುವ ಉಪದೇಶ-ಸ್ಥೂಲವಾಗಿ ಹೇಳುವುದಾದರೆ ಮೂರು ಮುಖವುಳ್ಳದ್ದು. ಒಂದು, ಸರಳವಾದ, ಲಲಿತವಾದ, ಹಾಸ್ಯ ಮಿಶ್ರಿತವಾದ ಮಾತೃ ಸಂಹಿತೆಯ ಶೈಲಿಯಲ್ಲಿ ದೃಷ್ಟಾಂತ-ಪ್ರತಿಮಾ ವಿಧಾನಗಳ ಮೂಲಕ ಅಸಾಧಾರಣ ತತ್ವಾನುಭವಗಳನ್ನು ಅತ್ಯಂತ ಪ್ರಿಯವಾದ ರೀತಿಯಲ್ಲಿ ನಿರೂಪಿಸಿರುವ ರೀತಿ. ಎರಡನೆಯದು, ಈ ವಚೋಭೂಮಿಕೆಯಲ್ಲಿ ವಿಹರಿಸುತ್ತಿರುವಾಗಲೇ, ತಾವು ಹೇಳುವ ಉಪದೇಶಕ್ಕೆ ಸಂಬಂಧಿಸಿದಂತೆ ಒಂದು ವಿಷಯವನ್ನೋ ತತ್ವವನ್ನೋ ಸ್ಪಷ್ಟಪಡಿಸುವಂತೆ, ಸಮರ್ಥಿಸುವಂತೆ, ಇದ್ದಕ್ಕಿದ್ದ ಹಾಗೆಯೇ ತಮ್ಮ ಮಧುರವಾದ, ದೇವ ದುರ್ಲಭವಾದ ಕಂಠದಿಂದ ಹಲವು ಸಂತರ ಗೀತೆಗಳನ್ನು ಹಾಡಿ ಇಡೀ ಆವರಣವನ್ನೇ ಒಂದು ಬಗೆಯ ಅಪೂರ್ವ ರೋಮಾಂಚನದಲ್ಲಿ ನಿಲ್ಲಿಸುವ ರೀತಿ. ಮೂರನೆಯದು, ಆ ಗೀತದ ಹೊನಲು ತೀವ್ರವಾಗಿ, ಒಂದು ಸಾಮೂಹಿಕ ನರ್ತನವನ್ನು ಪ್ರಚೋದಿಸುವುದರ ಮೂಲಕವೋ, ಅಥವಾ ನೇರವಾಗಿಯೋ ಪರಮಹಂಸರನ್ನು ಸಮಾಧಿಯ ಮೌನ ಶಿಖರಕ್ಕೇರಿಸುವುದರ ಮೂಲಕವೋ ಅಪೂರ್ವಾನುಭವವನ್ನು ಉಂಟುಮಾಡುವ ರೀತಿ. ಈ ಸಮಾಧಿ ಸ್ಥಿತಿ ಅವರ ಉಪದೇಶದ ಮೌನ ಶಿಖರ; ಮಾತು ಮನಂಗಳಿಂದತ್ತತ್ತಮೀರಿದ, ಕೇವಲ ಹೃದಯ ಸಂವೇದ್ಯವಾದ ಉಪದೇಶಾನುಭವ ಅದು.

ಶ್ರೀ ರಾಮಕೃಷ್ಣರ ಉಪದೇಶದಲ್ಲಿಯಂತೆ ಗಾನ ಸಂಯೋಜನೆ ನಮಗೆ ಬಹುಶಃ ಬೇರಾವ ಸಂತರ ಬದುಕಿನಲ್ಲೂ ಕಾಣದೆನ್ನಬಹುದು. ಅವರು ತಮ್ಮ ಉಪದೇಶದ ಮಾತು-ಮೌನಗಳ ನಡುವೆ ಸಮಯೋಚಿತವಾಗಿ ಬಳಸುವ ಈ ಗೀತಗಾನವೂ ಒಂದು ರೀತಿಯಲ್ಲಿ ಅವರ ಅಪೂರ್ವವಾದ ಉಪದೇಶ ವಿಧಾನದ ಒಂದು ಅವಿಭಾಜ್ಯ ಅಂಗವಾಗಿದೆ. ರಾಮಪ್ರಸಾದ-ದಾಶರಥಿ-ಉದ್ಧವದಾಸ-ನಾನಕ್-ಕಬೀರ್ ಮೊದಲಾದ ಸಂತರಿಂದ ಹೊರಹೊಮ್ಮಿದ ಈ ವಾಣಿ, ಅನೇಕ ಭಕ್ತರ ನಾಲಗೆಯ ಮೇಲೆ ನಲಿದು, ಭಕ್ತಿ ಭಾವೋದ್ದೀಪನಗೊಳಿಸಿ ಮೊದಲೇ ಪವಿತ್ರವಾದುವು. ಅವುಗಳು ಮತ್ತೆ ಪರಮಹಂಸರ ಶ್ರೀಕಂಠದ ಮೂಲಕ ಹರಿದು ಬಂದು ಮತ್ತೂ ಪವಿತ್ರವಾದ ಕಾರಣ, ಇವುಗಳನ್ನು ನಾವು ಇಲ್ಲಿ ‘ತೀರ್ಥವಾಣಿ’ ಎಂದು ಕರೆದಿದ್ದೇವೆ.

ಇಲ್ಲಿರುವ ಐವತ್ತು ಗೀತಗಳನ್ನು ‘ಶ್ರೀ ರಾಮಕೃಷ್ಣ ವಚನವೇದ’ದಿಂದ ಆರಿಸಿ ಕೊಡಲಾಗಿದೆ. ಹಾಗೆ ಆರಿಸುವಲ್ಲಿ ಯಾವ ಗೀತಗಳು ಸಾಹಿತ್ಯ ದೃಷ್ಟಿಯಿಂದ ವಿನೂತನವೂ, ಅಪೂರ್ವವೂ ಆಗಿರುವಂತೆ ತೋರಿತೋ ಅಷ್ಟನ್ನು ಮಾತ್ರ ಸಂಗ್ರಹಿಸಿ ಕೊಡಲಾಗಿದೆ.

ಏಳು ವರ್ಷಗಳ ಹಿಂದೆ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದವರು ವಂಗ ಭಾಷೆಯಲ್ಲಿ ಮಾಸ್ಟರ್ ಮಹಾಶಯನಿಂದ ರಚಿತವಾಗಿರುವ ‘ಶ್ರೀ ರಾಮಕೃಷ್ಣ ಕಥಾಮೃತ’ವನ್ನು ‘ಶ್ರೀ ರಾಮಕೃಷ್ಣ ವಚನವೇದ’ವೆಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸುವ ಏರ್ಪಾಡು ಮಾಡಿದಾಗ, ಆಶ್ರಮದವರು ಅದರಲ್ಲಿ ಬರುವ ಬಂಗಾಳೀ ಗೀತಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕೆಂದು ನನ್ನನ್ನು ಕೃಪೆಯಿಟ್ಟು ನಿಯೋಜಿಸಿದರು. ನಾನು ಬಂಗಾಳಿಮೂಲ, ಹಾಗೂ ಅಂಗ್ಲ ಅನುವಾದಗಳನ್ನು ಅವಲಂಬಿಸಿ ಅವುಗಳನ್ನು ಕನ್ನಡಿಸಿದ್ದೇನೆ. ವಂಗ ಭಾಷೆಯ ಆ ಅಪೂರ್ವವಾದ ಸ್ವರ ಮಾಧುರ್ಯವನ್ನೂ, ಛಂದೋ ವೈವಿಧ್ಯಗಳನ್ನೂ ಕನ್ನಡಕ್ಕೆ ತರಲಾಗದಿದ್ದರೂ, ಮೂಲದ ಭಾವಕ್ಕೆ ಆದಷ್ಟು ಅಪಚಾರವಾಗದ ರೀತಿಯಲ್ಲಿ, ಕನ್ನಡಕ್ಕೆ ತಂದಿದ್ದೇನೆಂಬ ಭರವಸೆ ನನಗಿದೆ. ಅನುವಾದ ಸಮಯದಲ್ಲಿ ಈ ಗೀತಗಳ ಅಪೂರ್ವ ಭಾವನೆಯ ಪರಿಭಾವನೆಯಲ್ಲಿ ನಿಂತು ಒಂದು ಬಗೆಯ ನಲವನ್ನೂ, ಪಾವಿತ್ರ್ಯದ ಕಿಂಚಿತ್ ಸ್ಪರ್ಶವನ್ನೂ ತತ್ಕಾಲಕ್ಕಾದರೂ ಪಡೆದು, ಅವ್ಯಾಜವಾಗಿ ಬಳಿಗೆ ಬಂದ ಶ್ರೀ ಗುರುಕೃಪೆಯ ವಾತ್ಸಲ್ಯಭಾವಕ್ಕೆ ಬೆರಗಾಗಿದ್ದೇನೆ.

ಈ ಗೀತಗಳಿಗೆ ಕೊಟ್ಟಿರುವ ಹಣೆ-ಹೆಸರು ಔಪಚಾರಿಕವಾಗಿ, ಅನುಕೂಲಕ್ಕಾಗಿ ಇಟ್ಟುಕೊಂಡದ್ದು. ಇಲ್ಲಿನ ಎಷ್ಟೋ ಗೀತಗಳು ಹಾಡಲು ಅನುಕೂಲವಾಗಿವೆ ಎಂಬುದು ಮೇಲೆಯೇ ವೇದ್ಯವಾಗುತ್ತದೆ. ಭಕ್ತಿರಸದ ನೆಲೆಯಿಂದ ಮೂಡಿದ ಈ ಗೀತಗಳು ಸಾಹಿತ್ಯ ದೃಷ್ಟಿಯಿಂದಲೂ ಅಪೂರ್ವವಾದುವು ಎಂಬ ಕಾರಣದಿಂದ ಇವುಗಳನ್ನು ‘ಶ್ರೀ ರಾಮಕೃಷ್ಣ ವಚನವೇದ’ದ ದಿವ್ಯ ದೇಗುಲದ ಕಟ್ಟಡದಿಂದ ಪ್ರತ್ಯೇಕಿಸಿ ಪ್ರಕಟಿಸಲು ಒಂದು ಕಾರಣವೆನ್ನಬಹುದು.

– ಜಿ.ಎಸ್. ಶಿವರುದ್ರಪ್ಪ
ಮೈಸೂರು
೧೨-೧೦-೧೯೬೦