ಬೆಳಿಗ್ಗೆ ಎಂಟು ಗಂಟೆಗೆ ಪ್ರೊ|| ಆಕ್ಸಿನೋವ್ ಫೋನ್ ಮಾಡಿದರು. ನನ್ನನ್ನು ಲೆನಿನ್ ಗ್ರಾಡ್‌ಗೆ ಕಳುಹಿಸಿಕೊಡಲು ತಾವು ಬಹಳ ಪ್ರಯತ್ನ ಮಾಡಿದುದಾಗಿಯೂ, ಆದರೆ ಅದು ಸಾಧ್ಯವಾಗಿಲ್ಲವೆಂದೂ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಮೂರು : ಒಂದು – ಲೆನಿನ್‌ಗ್ರಾಡ್‌ಗೆ ನನ್ನನ್ನು ಕಳುಹಿಸಬೇಕೆಂಬುದು, ಸರ್ಕಾರದ ಪೂರ್ವಯೋಜಿತ ಕಾರ್ಯಕ್ರಮದಲ್ಲಿ ಸೇರಿರಲಿಲ್ಲ; ಎರಡು – ಲೆನಿನ್‌ಗ್ರಾಡ್ ವಿಶ್ವವಿದ್ಯಾಲಯಕ್ಕೆ  ಬರೆದು ನನ್ನ  ಕಾರ‍್ಯಕ್ರಮವನ್ನು ಗೊತ್ತುಮಾಡಬೇಕಾಗಿತ್ತು, ಅದು ಸಾಧ್ಯವಾಗಲಿಲ್ಲ; ಮೂರು – ಲೆನಿನ್‌ಗ್ರಾಡ್‌ನಲ್ಲಿ ನನ್ನ ವಸತಿಗೆ ಏರ್ಪಾಡು ಮಾಡುವುದು ಕಷ್ಟ.

ನನಗೆ ಲೆನಿನ್‌ಗ್ರಾಡ್‌ಗೆ ಹೋಗಲಾಗಲಿಲ್ಲ ಎಂಬ ಸಂಗತಿ ಆಶ್ಚರ‍್ಯವನ್ನುಂಟು ಮಾಡಲಿಲ್ಲ; ಆದರೆ ಅದಕ್ಕೆ ಅವರು ನೀಡಿದ ಕಾರಣಗಳು ವಿಲಕ್ಷಣವಾಗಿದ್ದವು. ಯಾಕೆಂದರೆ, ಸಾಧ್ಯವಾದರೆ ಲೆನಿನ್‌ಗ್ರಾಡ್ ವಿಶ್ವವಿದ್ಯಾಲಯಕ್ಕೆ ಭೇಟಿಕೊಡಬೇಕೆಂಬ ನನ್ನ ಆಪೇಕ್ಷೆಯನ್ನು, ನಾನು ಆಕ್ಸಿನೋವ್ ಅವರೆದುರು ತೋಡಿಕೊಂಡದ್ದು ನಾನು ಈ ಊರಿಗೆ ಬಂದಾಗ; ಹದಿನೈದು ದಿನಗಳ ಹಿಂದೆಯೆ. ಒಂದೇ ರಾಜ್ಯದ ಬೇರೆ ಬೇರೆ ನಗರದ ವಿಶ್ವವಿದ್ಯಾಲಯಕ್ಕೆ ಹೋಗಿ ಬರುವ ಕಾರ‍್ಯಕ್ರಮ ಕೂಡ ಎಷ್ಟು ಕಷ್ಟ! ವಿದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಬ್ಬ ಪ್ರೊಫೆಸರ್ ಬಂದ ಎಂದು ಭಾವಿಸೋಣ. ಅಂಥ ಸಂದರ್ಭದಲ್ಲಿ ಆತನನ್ನು ಈ ರಾಜ್ಯದ ಬೇರೆ ಬೇರೆಯ ವಿಶ್ವವಿದ್ಯಾಲಯಗಳನ್ನು ತೋರಿಸದೆ, ಪ್ರೇಕ್ಷಣೀಯ ಸ್ಥಳಗಳನ್ನು ಆತ ಸಂದರ್ಶಿಸಲು ಅವಕಾಶ ಕೊಡದೆ, ಬರೀ  ಬೆಂಗಳೂರೊಂದರಲ್ಲೆ  ಕೊಳೆಹಾಕಿ ಹಿಂದಕ್ಕೆ ಕಳಿಸುತ್ತೇವೇನು? ಇಲ್ಲೆ ಇರುವುದು ಆ ದೇಶಕ್ಕೂ ನಮ್ಮ ದೇಶಕ್ಕೂ ವ್ಯತ್ಯಾಸ. ಒಮ್ಮೆ ನಿಶ್ಚಯವಾದ ಒಂದು ಕಾರ‍್ಯಕ್ರಮವನ್ನು ಯಾವ ಕಾರಣಕ್ಕೂ ಮುರಿಯದೆ ಮತ್ತೆ ಬದಲಾಯಿಸಲು ಸಾಧ್ಯವಾಗದಂತಹ ಒಂದು ಶಿಸ್ತು ಇದು ಎಂದು ಸಮಾಧಾನ ಪಟ್ಟುಕೊಳ್ಳುವುದು ಕಷ್ಟ. ಒಂದೂರಿಂದ ಇನ್ನೊಂದು ಊರಿಗೆ ಹೋಗಬೇಕಾದರೂ ಸರ್ಕಾರದ ಅಪ್ಪಣೆ ಬೇಕು. ಪ್ರತಿಯೊಬ್ಬರ ಜೇಬಿನಲ್ಲೂ ಸದಾ ಪಾಸ್‌ಪೋರ್ಟ್ ಇರಬೇಕು. ಇಂಥ ನಿರ್ಬಂಧದಲ್ಲಿ ಈ ಜನ ಹೇಗಪ್ಪ ಬದುಕುತ್ತಾರೆ ? ದೇಶ ಲೌಕಿಕವಾಗಿ ಮುಂದುವರಿದಿದೆ ನಿಜ. ಹೊಟ್ಟೆ ಬಟ್ಟೆಗೆ ಕೊರತೆಯಿಲ್ಲ ನಿಜ. ಆದರೆ ಎಲ್ಲ ಬದುಕೂ ಒಂದು ನಿಷ್ಠುರ ನಿಯಂತ್ರಣದೊಳಗೆ ಸಾಗಬೇಕಾದರೆ, ಯಾರೂ ಈ ನಿರ್ಬಧದಿಂದ  ಕಸಿವಿಸಿಗೊಳ್ಳುವುದಿಲ್ಲವೆ? ಒಮ್ಮೆ ನನ್ನ ದ್ವಿಭಾಷಿ ವೊಲೋಜನನ್ನು ಕೇಳಿದೆ; ‘ಸದಾ ನಿಮ್ಮ ಜೇಬಿನಲ್ಲಿ ಪಾಸ್‌ಪೋರ್ಟ್ ಇರಿಸಿಕೊಂಡು ಎಲ್ಲಿ ಹೋದರೆ ಅಲ್ಲಿ ತೋರಿಸಬೇಕಲ್ಲ, ಇದೊಂದು ನಿರ್ಬಂಧ ಎಂದು ಅನಿಸುವುದಿಲ್ಲವೆ ?’ ಆತ ಕೊಟ್ಟ ಉತ್ತರ: ‘ಏನಿಲ್ಲ, ಇದು ನಮಗೆ ಅಭ್ಯಾಸವಾಗಿಬಿಟ್ಟಿದೆ.’

ಎರಡು ವಾರದಿಂದ ನನ್ನ ದ್ವಿಭಾಷಿ ಸದಾ ನನ್ನ ಜತೆಯಲ್ಲಿದ್ದಾನೆ. ಆದರೆ ಎಂದೂ ಆತ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಕುತೂಹಲಕ್ಕಾದರೂ ಕೇಳಲಿಲ್ಲ. ಮಾತಾಡಿದರೆ, ದಿನ ದಿನದ ಕಾರ್ಯಕ್ರಮದ ಬಗ್ಗೆ ಅಥವಾ ಸಂದರ್ಶನದ ಸ್ಥಳಗಳ ಬಗ್ಗೆ. ಅಂತೂ ಒಂದು ಬಗೆಯ ಲೆಕ್ಕಾಚಾರದ ನಿಲುವು. ನಾನು ಸಂಧಿಸಿದ ಎಲ್ಲ ಜನವೂ ಅಷ್ಟೆ. ಆಯಾ ಸಂದರ್ಭಕ್ಕೆ ಎಷ್ಟು ಮಾತೋ ಅಷ್ಟು.

ಹತ್ತು ಗಂಟೆಗೆ ವೊಲೋಜ ಬಂದ. ಪ್ರೊ || ಆಕ್ಸಿನೋವ್ ಕೊಟ್ಟ ಸುದ್ದಿಯನ್ನು ತಿಳಿಸಿದೆ. ‘ಏನು ಮಾಡುವುದು, ನಿಮ್ಮ ಜೊತೆಗೆ ನಾನೂ ಲೆನಿನ್‌ಗ್ರಾಡ್‌ನಲ್ಲಿ ಎರಡು ಮೂರು ದಿನ ಕಳೆಯೋಣ ಅಂದುಕೊಂಡಿದ್ದೆ, ಈ ಅವಕಾಶ ನನಗೂ ತಪ್ಪಿಹೋಯಿತು’ ಎಂದ. ‘ಯಾಕೆ, ಇದೇ ದೇಶದ ನೀವು ಈವರೆಗೆ ಲೆನಿನ್ ಗ್ರಾಡ್ ನೋಡಿಲ್ಲವೆ ?’ ಎಂದೆ. ಇಲ್ಲವೆಂದು ತಲೆಯಾಡಿಸಿದ. ‘ಯಾಕೆ, ಒಂದೂರಿಂದ ಇನ್ನೊಂದೂರಿಗೆ ಹೋಗಲು ನಿರ್ಬಂಧ ನಿಮಗೂ ಇದೆಯೆ’ – ಎಂದೆ. ‘ಹಾಗೇನಿಲ್ಲ; ನಾನು ಇದುವರೆಗೂ ಲೆನಿನ್‌ಗ್ರಾಡ್ ನೋಡಿಲ್ಲ, ಅಷ್ಟೆ’ ಎಂದ. ‘ಸರಿ ಮುಂದೇನು ಮಾಡೋಣ, ಇನ್ನೊಂದೈದುದಿನಗಳಲ್ಲಿ ಇನ್ನೂ ಏನೇನು ನೋಡಬಹುದೋ ನೋಡೋಣ….. ಅಂದ ಹಾಗೆ ನನ್ನ ಉಪನ್ಯಾಸದ ಕಾರ್ಯಕ್ರಮ ಈ ವಾರದಲ್ಲೇನಾದರೂ ಉಂಟೆ’ ಎಂದೆ.  ‘ಇಲ್ಲ,  ನಿಮ್ಮ  ಉಪನ್ಯಾಸಗಳ ಕಾರ್ಯಕ್ರಮ ಮುಗಿದ ಹಾಗೇ…. ಮುಂದಿನದು ಏನೆಂಬುದನ್ನು ಯೋಚನೆ ಮಾಡೋಣ; ಈ ದಿನ ಸೆಂಟ್ರಲ್ ಎಕ್ಸಿಬಿಷನ್ ಹಾಲ್‌ನಲ್ಲಿ ಫ್ರೆಂಚ್ ಫೋಟೋಗ್ರಫಿಯ ಪ್ರದರ್ಶನ ಇದೆ ಬನ್ನಿ ಹೋಗೋಣ’ ಎಂದ.

ನಿನ್ನೆಯ ಹಾಗೆ ಮಳೆಯೇನೂ ಇರಲಿಲ್ಲ; ಆದರೆ ಬರೀ ಮೋಡ ಕವಿದ ವಾತಾವರಣ. ಬಸ್ಸು ಹಿಡಿದು, ಮೆಟ್ರೋ ಸ್ಟೇಷನ್ನನ್ನು ಹೊಕ್ಕು ನಿಮಿಷಾರ್ಧದಲ್ಲಿ ಧಡಗುಟ್ಟಿಕೊಂಡು ಬಂದ ಸುರಂಗ ರೈಲನ್ನೇರಿ, ಹದಿನೈದು ಇಪ್ಪತ್ತು ನಿಮಿಷದಲ್ಲಿ ಕ್ರೆಮ್ಲಿನ್ನಿನ ಬಳಿ ಹೊರಗೆ ಬಂದೆವು. ರಸ್ತೆ ದಾಟಿ ಸೆಂಟ್ರಲ್ ಎಕ್ಸಿಬಿಷನ್ ಹಾಲ್‌ಗೆ ಬಂದಾಗ, ದೊಡ್ಡ ಕ್ಯೂ. ನಾನು ವಿದೇಶೀಯನೆಂಬ ಕಾರಣ ಕ್ಯೂ ನಿಲ್ಲುವ ನಿರ್ಬಂಧವಿಲ್ಲದೆ, ಒಳಕ್ಕೆ ಪ್ರವೇಶ ದೊರೆಯಿತು. ಫ್ರೆಂಚ್ ದೇಶದ ನೂರಾರು ಛಾಯಾಚಿತ್ರಗಳನ್ನು ನೋಡಿ ಮುಗಿಸುವ ವೇಳೆಗೆ ಕಾಲುಗಳು ಬಿದ್ದು ಹೋದವು. ಸಾಕಷ್ಟು ಹಸಿವಾಗಿತ್ತು. ಅನತಿ ದೂರದ ನ್ಯಾಷನಲ್ ಕೆಫೆಗೆ ಬಂದರೆ ಅಲ್ಲೂ ಒಂದು ಕ್ಯೂ. ನಾವು ಅದನ್ನು ಸೇರಿ ಒಂದರ್ಧಗಂಟೆ ತಪಸ್ಸು ಮಾಡಿದೆವು. ಕಡೆಗೆ ಎರಡು ಕುರ್ಚಿ ಖಾಲಿಯಾದ ನಂತರ, ಮುಖ್ಯಸ್ಥೆಯ ಸೂಚನೆಯ ಮೇರೆಗೆ ಹೋಗಿ ಕೂತೆವು. ಕಿಕ್ಕಿರಿದ ಜನ. ಕ್ಯೂ ನಿಂತ ಜನ. ಹೋಟೆಲುಗಳಲ್ಲಿ ಕಾಣುವ ಈ ಜನಸಂದಣಿಯನ್ನು ನೋಡಿದರೆ, ಈ ದೇಶದ ಜನ ಮನೆಯಲ್ಲಿ ಅಡುಗೆ ಮಾಡದೆ ಹೋಟೆಲುಗಳಲ್ಲೆ ಊಟ ಮಾಡುತ್ತಾರೇನೋ ಎಂಬ ತಪ್ಪು ಕಲ್ಪನೆ ಬಂದು ಬಿಡುತ್ತದೆ. ನಗರಗಳ ಹೋಟೆಲುಗಳಂತೂ ಸದಾ ಹೊರಗಿನಿಂದ ಬಂದ ಪ್ರವಾಸಿಗಳಿಂದ ತುಂಬಿರುತ್ತದೆ. ನಮ್ಮ ದೇಶದ ನಗರದ  ಹೋಟೆಲುಗಳಲ್ಲೂ  ಈ ಸ್ಥಿತಿ ಒಮ್ಮೊಮ್ಮೆ ಇರುತ್ತದೆ. ಆದರೆ ಇಲ್ಲಿ ಒಮ್ಮೆ ಕೂತೆವೆಂದರೆ, ಸುಮಾರು ಎರಡು ಗಂಟೆಗೆ ಕಡಿಮೆಯಿಲ್ಲದಷ್ಟು ಕಾಲವನ್ನು ಅದು ತೆಗೆದುಕೊಳ್ಳುತ್ತದೆ. ಬಡಿಸುವುದರಲ್ಲಿನ ಈ ನಿಧಾನಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಿದ್ದೇನೆ. ಬಹುಶಃ ಎಲ್ಲಾ ಸರ್ಕಾರದ ನಿರ್ವಹಣೆಯ ಕಾರಣವಿರಬೇಕು. ಸ್ವಂತ ಹೋಟೆಲಾದರೆ, ಸ್ಪರ್ಧೆ ಇರುತ್ತದೆ, ಗಿರಾಕಿಗಳನ್ನು ಕಾಯಿಸಿದರೆ ಏನೆಂದುಕೊಂಡಾರೋ ಎಂಬ ಆತಂಕವಿರುತ್ತದೆ. ಜನವನ್ನು ಸೆಳೆಯಬೇಕೆಂಬ  ಉದ್ದೇಶವಿರುತ್ತದೆ.  ಆದರೆ ಇದು ಸರ್ಕಾರದ ನಿರ್ವಹಣೆಗೊಳಪಟ್ಟದ್ದು. ಮೇಲ್ವಿಚಾರಕರಿಗೆ,  ಪರಿಚಾರಕರಿಗೆ ತಿಂಗಳ ಸಂಬಳ ಬರುತ್ತದೆ. ಕೆಲಸ ಮಾಡಬೇಕು; ನಿಧಾನವಾಗಿ ಮಾಡುತ್ತಾರೆ. ಗಿರಾಕಿಗಳು ಮಾತಾಡುವಂತಿಲ್ಲ. ತೆಪ್ಪಗೆ ಕ್ಯೂ ನಿಂತು, ಬಂದು ತಿಂದು ಹೋಗುತ್ತಾರೆ. ವೊಲೋಜನನ್ನು ಕೇಳಿದೆ, ‘ಬಡಿಸಲು  ಯಾಕಿಷ್ಟು ನಿಧಾನ; ನಿಮ್ಮ ಜನಕ್ಕೆ ತಿನ್ನುವುದರಲ್ಲೇ ಎಷ್ಟೊಂದು  ಕಾಲಹರಣವಾಗುತ್ತದಲ್ಲ ?’.  ಅವನೆಂದ, ‘ಕಾಲಹರಣವಾಗುತ್ತದೇನೋ ನಿಜ; ಈ ರೆಸ್ಟೋರಾಂಟ್‌ಗಳಿರುವುದೂ ಅದಕ್ಕೇ; ನಾಲ್ಕಾರು ಜನ ಸ್ನೇಹಿತರನ್ನು ಕರೆದುಕೊಂಡು ವಿರಾಮವಾಗಿ ಕೂತು ಹೊತ್ತು ಕಳೆಯುವುದಕ್ಕೆ. ತುಂಬ ಅವಸರದ ಕೆಲಸವಿರುವವರು ಸಾಮಾನ್ಯವಾಗಿ ಬಫೆಗಳಲ್ಲೇ ಉಪಹಾರ ಮುಗಿಸುತ್ತಾರೆ; ಅಲ್ಲಿ ಟೇಬಲ್ಲ ಮೇಲಿರಿಸಿದ ಪದಾರ್ಥಗಳಲ್ಲಿ ಬೇಕಾದ್ದನ್ನು ನಾವೇ ಬಡಿಸಿಕೊಂಡು ಬೇಗ ಊಟ ಮುಗಿಸಬಹುದು. ಆದರೆ, ನಿಮಗೆ ಅನ್ನ ಬೇಕು ಎಂದರೆ ನಾವು ರೆಸ್ಟೋರಾಂಟಿಗೇ ಬರಬೇಕು.’

ಊಟ ಮುಗಿದಾಗ ಮೂರೂವರೆ. ಮುಂದೇನು ಮಾಡುವುದು ತಿಳಿಯಲಿಲ್ಲ. ಗಾರ್ಕಿಸ್ಟ್ರೀಟ್‌ನಲ್ಲಿ ಕಾಲಾಡಿಸುತ್ತ  ನಡೆದೆವು. ಇದೊಂದು ನೋಡಬೇಕಾದ ರಾಜರಸ್ತೆ. ರಸ್ತೆಯುದ್ದಕ್ಕೂ ರಷ್ಯಾ ದೇಶದ ದೊಡ್ಡ ಸಾಹಿತಿಗಳ ಶಿಲಾವಿಗ್ರಹಗಳಿವೆ. ಈ ಬೀದಿಯಲ್ಲಿ ವಸ್ತುಗಳನ್ನು ಮಾರುವ ಎಷ್ಟೋ ಅಂಗಡಿಗಳಿವೆ. ಒಂದು ಅಂಗಡಿ ಹೊಕ್ಕು, ಊರಿಗೆ ನೆನಪಿಗೆ ಒಯ್ಯುವಂಥ ವಿಶೇಷದ ವಸ್ತುಗಳೇನಾದರೂ ಇವೆಯೇ ಎಂದು ಕಣ್ಣಾಡಿಸಿದೆ, ಅಂಥ ವಿಶೇಷದ ವಸ್ತುಗಳೇನೂ ಕಾಣಿಸಲಿಲ್ಲ – ಕೆಲವು ಗೊಂಬೆಗಳ ಹೊರತು. ವೊಲೋಜ, ಕೆಲವು ಮರದ ಆಟದ ಸಾಮಾನು ತೋರಿಸಿ, ‘ಇವು ನೋಡಿ, ನಮ್ಮಲ್ಲಿನ ವಿಶೇಷಗಳಿವು’  ಎಂದ.  ನೋಡಿದೆ. ನಮ್ಮಲ್ಲಿನ ಚನ್ನಪಟ್ಟಣದ ಬಣ್ಣದ ಆಟಿಕೆಗಳು ಇವುಗಳಿಗಿಂತ ಸಾವಿರ ಪಾಲು ಸೊಗಸಾಗಿವೆ ಎನ್ನಿಸಿತು.

ಸಂಜೆ ಬೇಗನೆ ಮಹಾದೇವಯ್ಯವರ ಮನೆಗೆ ಬಂದೆ. ಅವರಿನ್ನೂ ಮನೆಗೆ ಬಂದಿರಲಿಲ್ಲ. ಅವರ ಮಡದಿ ಮಾಡಿಕೊಟ್ಟ ನಮ್ಮೂರಿನ ಕಾಫಿಯನ್ನು ಚಪ್ಪರಿಸುತ್ತ, ಅಲ್ಲಿದ್ದ ಕೆಲವು ಪುಸ್ತಕಗಳನ್ನು ತಿರುವಿ ಹಾಕುತ್ತಾ ಕಾಲ ಕಳೆದೆ. ಆರೂವರೆಗೆ ನನ್ನ ಮಿತ್ರರು ಮನೆಗೆ ಬಂದರು. ‘ಯಾಕೆ ತಡವಾಯಿತು’ ಎಂದೆ. ‘ಇದೆಯಲ್ಲ, ಹಾಲು -ಮೊಸರಿಗೆ ಕ್ಯೂ ನಿಲ್ಲುವುದು’ ಎಂದರು. ‘ನೋಡಿ, ಈ ದೇಶದಲ್ಲಿ ಜನದ ಮುಕ್ಕಾಲು ಆಯುಷ್ಯ ಕ್ಯೂ ನಿಂತೇ ಸವೆದು ಹೋಗುತ್ತದೆ. ದಿನವಿಡೀ ದುಡಿದು ಮನೆಗೆ ಬಂದರೆ, ಸಂಜೆ ಪ್ರತಿಯೊಂದು ದಿನಬಳಕೆಯ ವಸ್ತುವಿಗಾಗಿ ಕ್ಯೂ ನಿಲ್ಲಬೇಕು…. ಸಾಮಾನುಗಳನ್ನು ತಂದುಕೊಡಲು ಆಳುಗಳಿಲ್ಲ, ನಮ್ಮ ಮನೆಯವರಂತೂ ಬೆಳಗಿನಿಂದ ಸಂಜೆ ತನಕ ಎಲ್ಲವನ್ನೂ ಅವರೇ ನೋಡಿಕೊಳ್ಳಬೇಕು. ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಅಡುಗೆ ಮಾಡುವುದು – ಎಲ್ಲಾ ಅವರದೇ, ಆಳುಗಳು ದೊರಕುವುದೇ ಇಲ್ಲವೆಂದು ಇದರರ್ಥವಲ್ಲ; ದೊರೆಯುತ್ತಾರೆ. ಆದರೆ ಸಿಕ್ಕಾಪಟ್ಟೆ ಸಂಬಳ ತೆರಬೇಕು. ಹೀಗಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿದೆ.’