ಕೆಳದಿ ಸೀಮೆ ಹಾಗೂ ಕ್ಯಾಸನೂರು ಸೀಮೆ ಅವಳಿ ಸೀಮೆಗಳು. ಸುಮಾರು ನೂರು ಹಳ್ಳಿಗಳನ್ನೊಳಗೊಂಡಿದೆ. ನೂರಾರು ಎಕರೆ ಅಡಿಕೆ ತೋಟವೂ ಸಹ ಕೆಳದಿ ರಾಜ್ಯಕ್ಕಿಂತ ಹಳೆಯದು.

ಇಲ್ಲಿ ಅಡಿಕೆಯ ಎಕರೆವಾರು ಇಳುವರಿ ಕನಿಷ್ಠ ೩೦ ಕ್ವಿಂಟಾಲು! ಗರಿಷ್ಠ ೪೦ ಕ್ವಿಂಟಾಲು!!!

ಈ ಸೀಮೆಗಳ ಪ್ರತಿ ಊರು ಏಕಪ್ರಕಾರವಾಗಿದೆ. ಎರಡು ಗುಡ್ಡಗಳ ಮಧ್ಯೆ ಕಣಿವೆ. ಕಣಿವೆ ಇಳಿಯುತ್ತಿದ್ದಂತೆ ಕೆರೆ. ಕೆರೆಯ ಕೆಳಗೆ ತೋಟ. ತೋಟದ ಎರಡೂ ಕಡೆಗಳಲ್ಲಿ ನೀರು ಹರಿದುಹೋಗಲು ಹೆಗ್ಗಾದಿಗೆಗಳು. ಮಧ್ಯದಲ್ಲಿ ಕೆರೆಯ ತೂಬಿನಿಂದ ಹರಿದುಹೋಗುವ ವ್ಯವಸ್ಥೆ. ಈ ಕೆರೆಗಳು ಬತ್ತುವುದು ಬಹಳ ಅಪರೂಪ.

ಕಾಗದಾಳಿ ಮಣ್ಣು ಅಂದರೆ ಕೆಂಪುಮಿಶ್ರಿತ ಗೊಚ್ಚು. ನೀರು ಹೆಚ್ಚಾದರೆ ಬಸಿದುಹೋಗುತ್ತದೆ. ಬೇಸಿಗೆಯಲ್ಲಿ ತೇವಾಂಶವಿರುತ್ತದೆ.

ಇಲ್ಲಿನ ತೋಟಗಳಿಗೆ ಕೃಷಿಯೇ ಇಲ್ಲ ಎನ್ನಬಹುದು. ಗೊಬ್ಬರ ಹಾಕಿಸುವುದು, ನೀರು ಕಟ್ಟುವುದು ಇವೆಲ್ಲಾ ಎರಡು ವರ್ಷಗಳಿಗೊಮ್ಮೆ ಮಾತ್ರ. ಎಲ್ಲೋ ಒಂದೋ, ಎರಡೋ ಮರಕ್ಕೆ ಕೊಳೆರೋಗ ಬರುತ್ತದೆಯೇನೋ? ಬಂದರೆ ಮಾತ್ರ ಬೋರ್ಡೋ ಸಿಂಪಡಣೆ.

ಮರದಲ್ಲಿ ಎರಡು ಮೂರು ಗೊನೆಗಳು ಮಾತ್ರ. ಆದರೆ ಒಬ್ಬರಿಂದ ಹೊರಲು ಸಾಧ್ಯವಿಲ್ಲ. ಗೊನೆಯನ್ನು ಇಬ್ಭಾಗ ಮಾಡಿ ಇಳಿಸುವುದೇ ಸೈ. ಬುಡಕ್ಕೆ ಹಿಡಿದು ಕತ್ತರಿಸಲು ತಾಕತ್ತು ಜಾಸ್ತಿ ಬೇಕು.

ಮಳೆಗಾಲದಲ್ಲಿ ಸೊಪ್ಪಿನಬೆಟ್ಟದಿಂದ ಸೊಪ್ಪು. ಬೇಸಿಗೆಯಲ್ಲಿ ದರಕು. ಇವುಗಳು ಖಾಯಂ. ಹತ್ತು-ಇಪ್ಪತ್ತು ವರ್ಷಗಳಿಗೊಮ್ಮೆ ಮೇಲ್ಮಣ್ಣು.

ಎಕರೆಗೆ ಒಂದು ಸಾವಿರ ಮರಗಳು ಅಥವಾ ಅದಕ್ಕೂ ಹೆಚ್ಚು. ಗಣ್ಣುಗಳೂ ಹತ್ತಿರ ಹತ್ತಿರವಾಗಿ ಉದ್ದನೆಯ ಮರಗಳು.

ಮಳೆಗಾಲದಲ್ಲಿ ಹಸುರು ಹೆಡಗಳು ಜೋತುಬೀಳುವುದೂ ಇದೆ. ಬೇಸಿಗೆಯಲ್ಲಿ ಹಳದಿಯಾಗುವುದೂ ಇದೆ. ಆದರೂ ಫಸಲು ಏರುಪೇರಿಲ್ಲ. ಬಹುಶಃ ಬರನಿರೋಧಕ ತಳಿ.

ಬಿತ್ತನೆಗೆ ೩೦ರ ಪ್ರಾಯದ ಮರ, ಕಣ್ಣು ದೊಡ್ಡದು. ಒಂದೇ ರೀತಿ ಇಳುವರಿ, ಒತ್ತೊತ್ತಾಗಿರುವ ಅಡಿಕೆಗೊನೆ, ಗಿಡ್ಡ ಗಣ್ಣು, ಗಿಡ್ಡ ಸೋಗೆ. ಹೆಚ್ಚು ಕೊಬ್ಬರಿ. ಸಾಧಾರಣ ತೊಗರು [ಚೊಗರು]. ತೆಳುಸಿಪ್ಪೆ. ಹಣ್ಣಾದ ಅಡಿಕೆಯನ್ನು ನೀರಲ್ಲಿ ಹಾಕಿದರೆ ಮೇಲ್ಮುಖ ನಿಲ್ಲುವುದು. ಹೀಗೆ ಏನೆಲ್ಲಾ ಪರೀಕ್ಷೆಗಳನ್ನು ಮಾಡುತ್ತಾರೆ.

ಅದಕ್ಕಾಗಿಯೇ ಇದು ಚಿಕಣಿಗಾಗಲೀ, ರಾಶಿಗಾಗಲೀ, ಚಾಲಿಗಾಗಲೀ ಯೋಗ್ಯವಾಗಿದೆ. ಬಯಲುಸೀಮೆಯವರಿಗಂತೂ ಬಲು ಅಚ್ಚುಮೆಚ್ಚು.

ಇದಕ್ಕೆ ಸಾಗರದಲ್ಲಿಯೇ ಮಾರುಕಟ್ಟೆ. ಬೊಂಬಾಯಿಗೆ ಪ್ರಯಾಣ. ಬಣ್ಣಕ್ಕೆ ಹಾಗೂ ಸುಪಾರಿಗೆ ಬಳಕೆ. ಬೆಲೆಯೂ ದುಬಾರಿ.

ತೀರ್ಥಹಳ್ಳಿ ಲೋಕಲ್‌ ಚಿಕ್ಕದು. ದಕ್ಷಿಣಕನ್ನಡದ್ದು ದೊಡ್ಡದು. ಆದರಿದು ಚಪ್ಪಟೆಯಾಗಿ ದುಂಡಗೆ ದೊಡ್ಡದಿದೆ.