ಒಂದು ಸಂಸ್ಥಾನದ ರಾಣಿ. ಗಂಡನಿಲ್ಲ. ಸುತ್ತಲೂ ಮುತ್ತಿದ ಶತ್ರುಗಳನ್ನು ಎದುರಿಸಿ ರಾಜ್ಯಕ್ಕೆ ಬಂದ ಗಂಡಾಂತರಗಳಿಂದ ಪಾರಾಗುವ ಹೊತ್ತಿಗೆ ಮತ್ತೊಂದು ದೊಡ್ಡ ಗಂಡಾಂತರ ಬಾಯಿ ತೆರೆಯಿತು.

ಮೊಗಲ್ ಸಾಮ್ರಾಟ. “ಅಲಂಗೀರ್” (ಜಗತ್ತನ್ನೇ ಗೆದ್ದವನು) ಎಂದು ಬಿರುದು ಧರಿಸಿದ ಔರಂಗಜೇಬ್. ಉತ್ತರ ಭಾರತದಲ್ಲಿ ಹಲವು ರಾಜ್ಯಗಳನ್ನು ಗೆದ್ದು ದಕ್ಷಿಣದತ್ತ ಕಣ್ಣು ಹೊರಳಿಸಿದ ನೆಲದಾಹದ ವಿಜೇತ. ಅವನ ಅಪಾರವಾದ, ಬಲಿಷ್ಠವಾದ ಸೈನ್ಯ ಸಣ್ಣ ಸಂಸ್ಥಾನದ ಮೇಲೆ ಎರಗಿತು-ಅದೂ ರಾಣಿಯು, ಶಿವಾಶಿ ಮಹಾರಾಜದ ಮಗನಿಗೆ ಆಶ್ರಯ ಕೊಟ್ಟಳು ಎಂದು.

ರಾಣಿ ಹೆದರಲಿಲ್ಲ. ಪಶ್ಚಾತ್ತಾಪ ಪಡಲಿಲ್ಲ, ಕ್ಷಮೆ ಯಾಚಿಸಲಿಲ್ಲ. ವೀರ ರಮಣಿಯಾಗಿ ಮುತ್ತಿಗೆಯನ್ನು ಎದುರಿಸಿದಳು. ಶತ್ರುಗಳೇ ಯುದ್ಧ ನಿಲ್ಲಿಸಿ ಒಪ್ಪಂದ ಬೇಡಿದಾಗ ಅವರನ್ನು ಔದಾರ್ಯದಿಂದ ನಡೆಸಿಕೊಂಡಳು.

ಈ ವೀರ, ಉದಾರ ಸ್ತ್ರೀರತ್ನ ಕೆಳದಿಯ ಚೆನ್ನಮ್ಮಾಜಿ.

ಚೆನ್ನಮ್ಮ ಕೆಳದಿಯ ರಾಜ್ಯವನ್ನು ಇಪ್ಪತ್ತೈದು ವರ್ಷ ಆಳಿದಳು. ರಾಣಿಯ ಮೈಬಣ್ಣ ಮುತ್ತಿನಂತಿತ್ತು. ಹೊಳೆವ ಕಣ್ಣು, ವಿಶಾಲವಾದ ಹಣೆ, ಉದ್ದ ಮೂಗು, ಗುಂಗುರು ಕೂದಲು, ರಾಜಗಂಭೀರ ಮುಖ. ಎತ್ತರಕ್ಕೆ ತಕ್ಕ ಮೈಮಾಟ. ರೂಪವತಿಯಾದ ಚೆನ್ನಮ್ಮ, ಗುಣ ಸಂಪನ್ನೆಯೂ ಆಗಿದ್ದಳು. ಯುದ್ಧಗಳಲ್ಲಿ ದುರ್ಗೆಯಂತೆ ಶತ್ರುಸಂಹಾರ ಮಾಡಬಲ್ಲ ಶಕ್ತಿಯುಳ್ಳವಳಾಗಿದ್ದಳು. ರೂಪ, ಶೌರ್ಯ, ದೈವಭಕ್ತಿ, ಔದಾರ್ಯ-ಎಲ್ಲ ಸೇರಿದ್ದವು ಈ ಮಹಾರಾಣಿಯಲ್ಲಿ.

ಅಸಾಧಾರಣ ಅರಸ

ಕೆಳದಿ ಕನ್ನಡ ನಾಡಿನಲ್ಲಿ ಮಲೆನಾಡಿನ ಒಂದು ಸಂಸ್ಥಾನ. ಇದರ ಮೊದಲನೆಯ ದೊರೆ ಚೌಡಪ್ಪನಾಯಕ ೧೫೦೦ ರಲ್ಲಿ ಪಟ್ಟಕ್ಕೆ ಬಂದ. ಬಹು ಶೂರ.

ಶಿವಪ್ಪನಾಯಕ ಎಂಬ ಸಮರ್ಥ ರಾಜ ೧೬೪೫ರ ಸುಮಾರಿಗೆ ಪಟ್ಟವೇರಿದನು. ಇವನು ಕಾಲಕ್ಕೆ ಕೆಳದಿ ರಾಜ್ಯದಲ್ಲಿ ಅನೇಕ ಸುಧಾರಣೆಗಳಾದವು. ಈ ಅರಸ “ಶಿಸ್ತಿನ ಶಿವಪ್ಪನಾಯಕ” ಎಂದು ಕನ್ನಡನಾಡಿನಲ್ಲಿ ಪ್ರಸಿದ್ಧನಾದನು. ಶಿವಪ್ಪನಾಯಕನ ಕಿರಿಯ ಮಗ ಸೋಮಶೇಖರ ನಾಯಕನು ೧೬೬೭ ರಲ್ಲಿ ಪಟ್ಟಕ್ಕೆ ಬಂದನು. ಆಗ ಕೆಳದಿಯ ರಾಜ್ಯ ಗೋವಾದಿಂದ ಮಲಬಾರಿನವರೆಗಿನ ಸಮುದ್ರ ತೀರವನ್ನೆಲ್ಲ ವ್ಯಾಪಿಸಿತ್ತು.

ಸೋಮಶೇಖರನಾಯಕನು ದಕ್ಷನಾದ ರಾಜ. ರೂಪ, ಪದವಿ, ಸಂಪತ್ತುಗಳನ್ನು ಪಡೆದಿದ್ದ ಸೋಮಶೇಖರ ನಾಯಕನು ಗುಣವಂತನೂ ಆಗಿದ್ದ. ಧಾರ್ಮಿಕ ಬುದ್ಧಿಯುಳ್ಳವನಾಗಿದ್ದ.

ಸೋಮಶೇಖರನಾಯಕ ಅನೇಕ ವರ್ಷಗಳ ಕಾಲ ಮದುವೆ ಮಾಡಿಕೊಳ್ಳಲೇ ಇಲ್ಲ. ಚಿಕ್ಕ ವಯಸ್ಸು, ರಾಜ, ರೂಪವಂತ, ಗುಣವಂತ, ಕೀರ್ತಿವಂತ, ಇಂತಹವನನ್ನು ಅಳಿಯನನ್ನಾಗಿ ಮಾಡಿಕೊಳ್ಳಬೇಕು ಎಂದು ಹಲವಾರು ರಾಜರು ಪ್ರಯತ್ನಿಸಿದರು. ಬಹು ಸುಂದರಿಯರಾದ ರಾಜಕುಮಾರಿಯರನ್ನು ನಾಯಕ ನೋಡಿದ. ಆದರೆ ಮದುವೆ ಕಡೆ ಮನಸ್ಸು ಹೋಗಲೇ ಇಲ್ಲ.

ಕೆಳದಿಯ ಪ್ರಜೆಗಳು, ರಾಜನ ದೈವಭಕ್ತಿಯನ್ನು ಧರ್ಮಬುದ್ಧಿಯನ್ನು ನೋಡಿ “ನಮ್ಮ ರಾಜ ಸನ್ಯಾಸಿಯೇ ಆಗಿಬಿಡುವನೋ!” ಎಂದುಕೊಳ್ಳುತ್ತಿದ್ದರು.

ಮಂತ್ರಿಗಳೇ, ನಾನು ವಧುವನ್ನು ಆರಿಸಿದ್ದೇನೆ

ಒಂದು ಸಲ ರಾಮೇಶ್ವರ ಜಾತ್ರೆಯ ಕಾಲಕ್ಕೆ ಕೋಟೆಪುರದ ಸಿದ್ಧಪ್ಪಶೆಟ್ಟರ ಮಗಳು ಚೆಲುವೆ ಚೆನ್ನಮ್ಮ ಸೋಮಶೇಖರ ದೊರೆಯ ದೃಷ್ಟಿಗೆ ಬದ್ದಳು. ತಿದ್ದಿ ಮಾಡಿದ ಗೊಂಬೆಯಂತೆ ಸುಂದರಿಯಾದ ಚೆನ್ನಮ್ಮ, ಗಂಭೀರ ಭಾವದಿಂದ ಗೆಳತಿಯರೊಂದಿಗೆ ದೇವರ ದರ್ಶನಕ್ಕೆ ಕೊರಟಿದ್ದಳು.

ಅವಳನ್ನು ಕಂಡು ಸೋಮಶೇಖರನಾಯಕನಿಗೆ, “ಮದುವೆಯಾದರೆ ಇವಳನ್ನೇ ಆಗಬೇಕು” ಎನ್ನಿಸಿತು. ಅವಳು ಯಾರು ಎಂದು ದೂತರಿಂದ ತಿಳಿದುಕೊಂಡ. ಮರುದಿನ ಸೋಮಶೇಖರನಾಯಕನು ಪ್ರಧಾನ ಮಂತ್ರಿಗಳನ್ನು ಕರೆಸಿದ. “ಇದುವರೆಗೆ ಮದುವೆಯಾಗಲು ನನಗೆ ಒತ್ತಾಯ ಮಾಡುತ್ತಿದ್ದಿರಿ. ನಿನ್ನೆ ರಾಮೇಶ್ವರ ಜಾತ್ರೆಗೆ ಹೋದಾಗ ಕೋಟೆಪುರದ ಸಿದ್ದಪ್ಪ ಶೆಟ್ಟರ ಮಗಳನ್ನು ಕಂಡೆನು, ನಾನು ಮದುವೆಯಾಗುವುದಾದರೆ ಆಕೆಯನ್ನೇ ಮದುವೆಯಾಗುವೆ. ಶೆಟ್ಟರನ್ನು ಕರೆಸಿ ಮಾತನಾಡಿ” ಎಂದು ಹೇಳಿದನು.

“ದೊರೆಗಳೇ, ಇದುವರೆಗೆ ಕೆಳದಿ ಅರಸು ಮನೆತನದವರೆಲ್ಲ ರಾಜಕುಮಾರಿಯನ್ನೇ ಮದುವೆಯಾದರು”.

“ಇರಬಹುದು ಮಂತ್ರಿಗಳೇ ! ನುಡಿದಂತೆ ನಡೆಯುವುದೊಂದೇ ನನಗೆ ಗೊತ್ತಿದೆ. ಉಳಿದ ಸಂಪ್ರದಾಯದ ಗೊಡವೆ ನನಗೆ ಬೇಡ. ಮದುವೆಯಾಗುವುದಾದರೆ ಸಿದ್ಧಪ್ಪ ಶೆಟ್ಟರ ಮಗಳನ್ನು ಆಗುವೆ. ಶೆಟ್ಟರನ್ನು ಕರೆಸಿ ಮುಂದಿನ ಏರ್ಪಾಟು ಮಾಡಿ”.

ಸಂತೋಷ, ಮಂಗಳ ತುಳುಕಾಡುವ ದಾಂಪತ್ಯ

“ನಿಮ್ಮ ಮಗಳು ಚೆನ್ನಮ್ಮನನ್ನು ಅರಸರು ರಾಣಿಯನ್ನಾಗಿ ಮಾಡಿಕೊಳ್ಳಲು ಬಯಸುತ್ತಾರೆ”.

ಮಂತ್ರಿಗಳು ಆಡಿದ ಈ ಮಾತನ್ನು ಕೇಳಿ ಸಿದ್ದಪ್ಪ ಶೆಟ್ಟರು ಬೆಚ್ಚಿದರು, ಬೆರಗಾದರು. ತಮ್ಮ ಕಿವಿಗಳನ್ನೇ ನಂಬದಾದರು. ಸಂತೋಷದಿಂದ ಒಪ್ಪಿದರು.

“ಅರಸರು ನಿನ್ನ ಕೈ ಹಿಡಿಯಲು ಬಯಸಿದ್ದಾರೆ” ಎಂದು ತಂದೆ ಹೇಳಿದಾಗ ಚೆನ್ನಮ್ಮನಿಗೆ ಆಶ್ವರ್ಯ, ಹಿಡಿಸಲಾರದ ಸಂತಸ.

ರಾಜಧಾನಿಯಾದ ಬಿದನೂರಿನ ಅರಮನೆಯಲ್ಲಿ ಮದುವೆ ರಾಜವೈಭವದಿಂದ ನಡೆಯಿತು.

ಚೆನ್ನಮ್ಮ ಕೆಳದಿಯ ರಾಣಿಯಾದಳು. ಸೋಮಶೇಖರ ನಾಯಕನ ಹೃದಯದ ರಾಣಿಯಾದಳು. ನವದಂಪತಿಗಳು ಮನೆದೇವರಾದ ಕೆಳದಿಯ ರಾಮೇಶ್ವರ, ಇಕ್ಕೇರಿಯ ಅಘೋರೇಶ್ವರ, ಕೊಲ್ಲೂರ ಮೂಕಾಂಬಿಕೆಯ ದರ್ಶನ ಮಾಡಿದರು. ದೇವರಿಗೆ ವಜ್ರಾಭರಣಗಳನ್ನು ಅರ್ಪಿಸಿದರು, ದೀನದಲಿತರಿಗೆ ದಾನ-ಧರ್ಮ ಮಾಡಿದರು.

ಸೋಮಶೇಖರ ನಾಯಕ-ರಾಣಿ ಚೆನ್ನಮ್ಮರ ದಾಂಪತ್ಯ ಜೀವನ ಹಾಲು-ಜೇನಿನಂತೆ ಹೊಂದಿಕೊಂಡು ಸಾಗಿತ್ತು. ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಂಡು ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಬುದ್ದಿವಂತಳಾದ ರಾಣಿ ಸ್ಪಲ್ಪಕಾಲದಲ್ಲಿಯೇ ರಾಜಕಾರಣದಲ್ಲಿ ಬಲ್ಲಿದಳಾದಳು. ಶಸ್ತ್ರ ವಿದ್ಯೆಯಲ್ಲಿ, ಸಂಗೀತದಲ್ಲಿ ಪ್ರವೀಣಳಾದಳು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಳು.

ಚೆನ್ನಮ್ಮ ರಾಣಿ ರಾಜ್ಯದ ಪ್ರಜೆಗಳನ್ನೂ ಅರಮನೆಯ ಸೇವಕರನ್ನೂ ಪ್ರೀತಿಯಿಂದ, ಮಕ್ಕಂತೆ ನೋಡಿಕೊಳ್ಳುತ್ತಿದ್ದಳು. ಅವಳು ಸೋಮಶೇಖರನಾಯಕನ ಪಾಲಿಗೆ ಕೇವಲ ಪತ್ರಿಯಾಗಿರಲಿಲ್ಲ. ರಾಜಕಾರಣದಲ್ಲಿ ಆಪ್ತ ಸಚಿವಳಂತೆ ಸಲಹೆ ಕೊಡುತ್ತಿದ್ದಳು. ರಾಜ್ಯದ ಆಡಳಿತದಲ್ಲಿ ಏನಾದರೂ ಅನ್ಯಾಯವಾಗಿದ್ದರೆ, ನೊಂದವರು ದೊರೆಯ ಬಳಿ ಹೋಗಲಿ ಅಂಜಿ, ರಾಣಿಯ ಬಳಿ ತಮ್ಮ ದೂರನ್ನು ಒಯ್ಯುತ್ತಿದ್ದರು. ರಾಣಿ ಪತಿಗೆ ಹೇಳಿ ನ್ಯಾಯ ದೊರಕಿಸಿಕೊಡುತ್ತಿದ್ದಳು. ದುಷ್ಟರನ್ನು ಶಿಕ್ಷಿಸುವುದಕ್ಕೆ, ಒಳ್ಳೆಯ ಜನರನ್ನು ರಕ್ಷಿಸಲಿಕ್ಕೆ ಚೆನ್ನಮ್ಮರಾಣಿ ಪತಿಗೆ ಸ್ಫೂರ್ತಿ ಕೊಡುತ್ತಿದ್ದಳು. ಇದರಿಂದಾಗಿ ಕೆಳದಿಯ ಜನತೆ ರಾಣಿ ಚೆನ್ನಮ್ಮನನ್ನು ದೇವಿಯಂತೆ ಭಕ್ತಿಗೌರವಗಳಿಂದ ಕಾಣುತ್ತಿದ್ದರು. ಎಲ್ಲ ಧರ್ಮದವರನ್ನೂ ಸಮಭಾವನೆಯಿಂದ ನೋಡುವ ರಾಜದಂಪತಿಗಳು ಕೆಳದಿಯ ರಾಜ್ಯದ ಮಠ ಮಾನ್ಯಗಳಿಗೆ ದತ್ತಿ ಕೊಟ್ಟರು.

ವಿಜಯನಗರದ ಅರಸರ ಕಾಲಕ್ಕೆ ನಾಡಹಬ್ಬದ ಉತ್ಸವ ವೈಭವದಿಂದ ನಡೆಯುತ್ತಿತ್ತು. ಆ ಪರಂಪರೆಯನ್ನು ಕೆಳದಿಯ ಅರಸರು ಉಳಿಸಿಕೊಂಡು ಬಂದಿದ್ದರು. ಆ ಕಾಲಕ್ಕೆ ನಾಡಿನ ಮೂಲೆ ಮೂಲೆಗಳಿಂದ ಪ್ರತಿಭಾವಂತ ಕಾಲವಿದರು ಬರುತ್ತಿದ್ದರು. ನೃತ್ಯ-ಸಂಗೀತಗಳ ಕಾರ್ಯಕ್ರಮ ನಡೆಯುತ್ತಿತ್ತು. ದೊರೆಯು ಕಲಾವಿದರಿಗೆ ಉಡುಗೊರೆ ಕೊಟ್ಟು ಸನ್ಮಾನಿಸುತ್ತಿದ್ದ.

ರಾಜ್ಯಕ್ಕೆ, ರಾಣಿಗೆ ಪೀಡೆ

ಒಂದು ವರ್ಷ ನಾಡಹಬ್ಬ ಕಾಲಕ್ಕೆ ಜಂಬುಖಂಡಿಯ ನರ್ತಕಿ ಕಲಾವತಿ ರಾಜದಂಪತಿಗಳ ಸಮ್ಮುಖದಲ್ಲಿ ನೃತ್ಯ ಮಾಡಿದಳು. ನವಿಲಿನಂತೆ ನರ್ತಿಸುವ, ಕೋಗಿಲೆಯಂತೆ ಹಾಡುವ ರೂಪವತಿ, ಸೊಬಗುಗಾರ್ತಿ ಕಲಾವತಿ ಸೋಮಶೇಖರ ನಾಯಕನ ಪ್ರೀತಿಗೆ ಪಾತ್ರಳಾದಳು. ಅವಳ ನೃತ್ಯ ಕಲೆಯನ್ನು ಮೆಚ್ಚಿದ ದೊರೆ ಅಪಾರ ಧನ-ಕನಕಗಳ್ನನು ಕೊಟ್ಟನು. ಕಲಾವತಿ ರಾಜ ನರ್ತಕಿಯಾದಳು. ಸೋಮಶೇಖರ ನಾಯಕ ಕಲಾವತಿಗೆ ಭವ್ಯ ಅರಮನೆಯನ್ನು ಕಟ್ಟಿಸಿಕೊಟ್ಟನು. ಆಕೆಯ ತಾಯಿ, ಸಾಕುತಂದೆ ಭರಮೆ ಮಾವುತ ನರ್ತಕಿಯೊಂದಿಗೆ ಇರುತ್ತಿದ್ದರು.ಭರಮೆ ಮಾವುತನು ಮಂತ್ರ, ತಂತ್ರ, ಔಷಧಿಗಳನ್ನು ಬಲ್ಲವನಾಗಿದ್ದ. ಅವನು ಬಹಳ ದುಷ್ಟ. ರಾಣಿ ಚೆನ್ನಮ್ಮನಿಗೆ ಮಕ್ಕಳಾಗಿರಲಿಲ್ಲ. ಅದನ್ನು ಆತ ಧೂರ್ತ ಭರಮೆ ಮಾವುತನು ಸೋಮಶೇಖರ ನಾಯಕನ ಸ್ನೇಹವನ್ನು ಬೆಳಸಿದನು. ಕ್ರಮೇಣ ನಾಯಕ ಕಲಾವತಿಯ ಜೊತೆಗೇ ವಾಸಿಸಲು ಪ್ರಾರಂಭಿಸಿದ. ರಾಜ್ಯದ ಹೊಣೆಯನ್ನು ಹೊತ್ತ ರಾಜ ತನ್ನ ಹೊಣೆಯನ್ನು ಮರೆತು ಸದಾ ಕಲಾವತಿಯೊಂದಿಗೆ ಕಾಲ ಕಳೆಯುತ್ತಿದ್ದ. ಭರಮೆ ಮಾವುತನ ಕೈಗೊಂಬೆಯಾದ. ಅವನ ನೆಚ್ಚಿನ ಮಡದಿ ಚೆನ್ನಮ್ಮನನ್ನು ಮರೆತ, ಅರಮನೆಯನ್ನು ತೊರೆದ. ಭರಮೆ ಮಾವುತನು ಔಷಧಿ ಎಂದು ಕೊಟ್ಟಿದ್ದನ್ನೆಲ್ಲ ಕುಡಿದ. ಅದರಿಂದಾಗಿ ದೊರೆ ಅರೆಹುಚ್ಚನಂತಾದ. ನಾನಾ ಬಗೆಯ ರೋಗಗಳಿಗೆ ತುತ್ತಾದ. ರಾಜ್ಯದ ಆಡಳಿತದ ಸಮಸ್ಯೆಗಳನ್ನು ನಿವಾರಿಸಲು ಮಂತ್ರಿಮಾನ್ಯರು ನರ್ತಕಿಯ ಭವನಕ್ಕೆ ಹೋಗಬೇಕಾಯಿತು.

ತನ್ನನ್ನು ಅಷ್ಟು ಪ್ರೀತಿಸುತ್ತಿದ್ದ ಗಂಡ ಈಗ ಅರಮನೆಗೇ ಬರಲೊಲ್ಲ. “ಇಂತಹ ರಾಜನನ್ನು ಪಡೆದ ನಾವೇ ಪುಣ್ಯವಂತರು” ಎಂದು ಹಿಂದೆ ಪ್ರಜೆಗಳು ಹಾಡಿ ಹರಸುತ್ತಿದ್ದರು. ಈಗ ರಾಜ್ಯದ ಹೊಣೆಯೇ ಇಲ್ಲ ಅವನಿಗೆ. ಚೆನ್ನಮ್ಮಾಜಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಳು.

ರಾಜನ ನಿರ್ಲಕ್ಷ್ಯದಿಂದ ರಾಜ್ಯದ ಆಡಳಿತದಲ್ಲಿ ಅವ್ಯವಸ್ಥೆ ತಲೆದೋರಿತು. ರಾಜನ ಅನಾರೋಗ್ಯದ ಸುದ್ದಿ ನಾಡಿನಲ್ಲೆಲ್ಲ ಹಬ್ಬಿತು. ದೊರೆಗೆ ಮಕ್ಕಳಿಲ್ಲ. ಅವನು ಸತ್ತು ಹೋದರೆ? ಸರಿ, ರಾಜ್ಯವನ್ನು ತಾವೇ ಅಪಹರಿಸಬೇಕೆಂದು ಅನೇಕರು ಪಿತೂರಿ ನಡೆಸಿದರು. ಅನೇಕ ಸಲ ಯುದ್ಧದಲ್ಲಿ ಕೆಳದಿಯ ಅರಸರಿಂದ ಸೋತ ಬಿಜಾಪುರ ಸುಲ್ತಾನನು ಇದೇ ಸಮಯದಲ್ಲಿ ಕೆಳದಿಯ ರಾಜ್ಯಕ್ಕೆ ಮುತ್ತಿಗೆ ಹಾಕಲು ಬಂದನು.

ದೊರೆಗಳೇ ಅರಮನೆಗೆ ನಡೆಯಿರಿ?”

ಈ ಅನಾಹುತಗಳಿಂದ ಹಿರಿಯರು ಗಳಿಸಿದ ರಾಜ್ಯವನ್ನು ಉಳಿಸಲೇಬೇಕು ಎಂಬ ಛಲ ತೊಟ್ಟಳು ರಾಣಿ. ತಾನು ಅಬಲೆಯೆಂದು ಸುಮ್ಮನೆ ಕುಳಿತರೆ ರಾಜ್ಯ ಪರರ ಪಾಲಾಗುವುದು ಎಂದು ತಿಳಿದಳು. ಸ್ವಾಭಿಮಾನವನ್ನು ಬಿಟ್ಟು ನರ್ತಕಿಯ ಮನೆಗೆ ಹೋಗಿ ದೊರೆಯನ್ನು ಕಂಡಳು.

ರೋಗಗಳಿಂದ ರಾಜ ತನ್ನ ಹಿಂದಿನ ಭೀಮಾಕಾಯದ ನೆರಳಾಗಿದ್ದ. ಮುಖದಲ್ಲಿ ಕಳೆ ಇಲ್ಲ. ಕಣ್ಣಿನಲ್ಲಿ ಬೆಳಕಿಲ್ಲ. ಚೆನ್ನಮ್ಮಾಜಿಗೆ ತುಂಬ ದುಃಖವಾಯಿತು. ಆದರೂ ಸಹಿಸಿಕೊಂಡಳು. “ದೊರೆಗಳೇ, ಅರಮನೆಗೆ ನಡೆಯಿರಿ, ರಾಜ ವೈದ್ಯರಿಂದ ಔಷಧೋಪಷಾರ ಮಾಡಿಸುತ್ತೇನೆ. ಶಿವಪ್ಪ ನಾಯಕರ ರಾಜ್ಯ ಹಾಳಾಗಬಾರದು. ಯೋಗ್ಯನಾದ ಹುಡುಗನನ್ನು ದತ್ತು ತೆಗೆದುಕೊಳ್ಳಿರಿ.” ಎಂದು ಚೆನ್ನಮ್ಮ ಅಳುತ್ತ ಪಾದಕ್ಕೆರಗಿ ಬೇಡಿಕೊಂಡಳು.

ಅಲ್ಲಿಯೇ ರಾಜ್ಯದ ಪೀಡೆ ಭರಮೆ ಮಾವುತನಿದ್ದ. ಭರಮೆ ಮಾವುತನ ಮಾತಿಗೆ ಮರುಳಾದ ದೊರೆ ರಾಣಿಯ ಮಾತಿಗೆ ಒಪ್ಪಲಿಲ್ಲ. ರಾಣಿ ದುಃಖದಿಂದ ಹಿಂದಿರುಗಿದಳು. ಆದರೆ ರಾಜ್ಯವನ್ನು ಶತ್ರುಗಳು ಸುತ್ತವರಿದಿದ್ದರೂ, ದುಃಖ ಪಡಲು ತರುಣಿ ರಾಣಿಗೆ ಸಮಯವಿಲ್ಲ.

"ದೊರೆಗಳೇ, ಅರಮನೆಗೆ ನಡೆಯಿರಿ, ಶಿವಪ್ಪನಾಯಕರ ರಾಜ್ಯ ಹಾಳಾಗಬಾರದು"

ರಾಜ್ಯದ, ರಾಜವಂಶದ ಭವಿಷ್ಯ ಕೋಮಲವಾದ ಕೈಗಳಲ್ಲಿ

 

ಕೆಳದಿಯ ರಾಜ್ಯಕ್ಕೆ ಒಳಿತಾಗಬೇಕಾದರೆ, ರಾಜವಂಶ ಉಳಿಯಬೇಕಾದರೆ ಒಂದೇ ದಾರಿ ಎಂದು ತೋರಿತು ಚೆನ್ನಮ್ಮನಿಗೆ- ತಾನೇ ರಾಜ್ಯದ ಸಾರಥಿಯೂ ಆಗಬೇಕು.ಖಡ್ಗಪಾಣಿಯೂ ಆಗಬೇಕು. ದೇವರನ್ನು ಪ್ರಾರ್ಥಿಸಿ ಈ ಬೆಟ್ಟದಂತಹ ಹೊರೆಗೆ ಕೋಮಲ ತರುಣಿ ಹೆಗಲು ಕೊಟ್ಟಳು. ಚತುರಳೂ, ವೀರಳೂ ಆದ ರಾಣಿ ತನ್ನ ತಂದೆ ಸಿದ್ದಪ್ಪಶೆಟ್ಟರ ಸಲಹೆ ಕೋರಿದಳು. ನಂಬಿಕೆಗೆ ಯೋಗ್ಯರಾದ ದಳಪತಿಗಳ ಸಹಾಯ ಪಡೆದಳು. ಕಂಕಣ ಧರಿಸಿದ ಕೋಮಲ ಕೈಗಳಲ್ಲಿ ಖಡ್ಗ ಹಿಡಿದು ನಿಂತಳು.

ಎಷ್ಟೇ ಆಗಲಿ ಇವಳು ಹೆಂಗಸು, ಹೆದರಿಸಬಹುದು ಎಂದು ಕೊಬ್ಬಿದವರು ಪ್ರಯತ್ನ ಪ್ರಾರಂಭಿಸಿದರು.

ಒಂದು ದಿನ ಪ್ರಧಾನಿ ಕಾಸರಗೋಡು ತಿಮ್ಮಣ್ಣ ನಾಯಕ, ಸಬ್ಬನೀಸ ಕೃಷ್ಣಪ್ಪ ಕೂಡಿಕೊಂಡು “ದಂಡನಾಯಕ ಭದ್ರಪ್ಪನಾಯಕನ ಮಗ ವೀರಭದ್ರ ನಾಯಕನನ್ನೇ ನೀವು ದತ್ತು ಮಾಡಿಕೊಳ್ಳಬೇಕು. ಆಗ ನಾವು ನಿಮಗೆ ಸಹಾಯ ಮಾಡುತ್ತೇವೆ. ಇಲ್ಲವಾದರೆ ನಿಮ್ಮ ವಿರುದ್ಧ ಜನರನ್ನು ಒಂದುಗೂಡಿಸಿ ಆತನನ್ನು ಪಟ್ಟಕ್ಕೆ ತರುತ್ತೇವೆ” ಎಂದು ರಾಣಿಯನ್ನು ಬೆದರಿಸಿದರು. ಸಚಿವ ಸರಸಪ್ಪಯ್ಯ, ಮತ್ತೊಬ್ಬ ಮುಖ್ಯ ಅಧಿಕಾರಿ ಲಕ್ಷ್ಮಯ್ಯ ಹೀಗೆಯೇ ಹೆದರಿಸಿದರು.

ರಾಣಿ ಎಲ್ಲರ ಮಾತನ್ನೂ ಸಹನೆಯಿಂದ ಕೇಳಿಕೊಂಡಳು.

ಒಂದೆಡೆ ಭರಮೆಮಾವುತ ದೊರೆಯನ್ನ ತನ್ನ ಕೈವಶ ಮಾಡಿಕೊಂಡು ರಾಜ್ಯವನ್ನು ನುಂಗಲು ಸಿದ್ಧನಾಗಿದ್ದಾನೆ. ಇನ್ನೊಂದೆಡೆ ಮಂತ್ರಿಮಾನ್ಯರೆಲ್ಲ ತಮಗೆ ಬೇಕಾದವರನ್ನು ಪಟ್ಟಕ್ಕೆ ತಂದು ರಾಜ್ಯ ಸೂತ್ರ ತಮ್ಮ ಕೈಯಲ್ಲಿ ಉಳಿಯುವಂತೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ರಾಣಿಯ ಮನಸ್ಸು ಇದ್ಯಾವುದಕ್ಕೂ ಒಪ್ಪಲೊಲ್ಲದು. ತಮಗೆ ಮಕ್ಕಳಿಲ್ಲದೆ ಇದ್ದುದರಿಂದ ಒಳ್ಳೆಯ ಗುಣವಂತ, ರಾಜ್ಯಕ್ಕೆ ಮಂಗಳವನ್ನು ತರಬಲ್ಲನು, ಇಂತಹ ಹುಡುಗನನ್ನು ದತ್ತು ತರಬೇಕು ಎಂದು ಯೋಚಿಸಿ ಬಸಪ್ಪನಾಯಕ ಎಂಬ ಹುಡುಗನನ್ನು ಆರಿಸಿದಳು. ಚಿಕ್ಕವನಾದ ಅವನಿಗೆ ಯೋಗ್ಯ ಶಿಕ್ಷಣ ಕೊಟ್ಟರೆ ಈ ರಾಜ್ಯ ಉಳಿಯುವುದು, ಜನ ನೆಮ್ಮದಿಯಿಂದ ಬಾಳುವರು ಎಂಬ ನಿರ್ಧಾರ ಮಾಡಿದಳು ಚೆನ್ನಮ್ಮ.

ಅಪಾಯದ ಹಿಂದೆ ಅಪಾಯ

ಕೆಳದಿ  ರಾಜ್ಯ ತನ್ನ ಬಾಯಿಗೆ ಬಿದ್ದೀತೆ ಎಂದು ಕಾಯುತ್ತಿದ್ದ ಬಿಜಾಪುರದ ಸುಲ್ತಾನ. ಈಗ ರಾಜನು ಮೈಮರೆತಿದ್ದಾನೆ, ರೋಗಿಯಾಗಿದ್ದಾನೆ, ರಾಜ್ಯ ಹೆಂಗಸೊಬ್ಬಳ ಕೈಯಲ್ಲಿದೆ ಎಂದು ಕೇಳಿ ಅವನ ಬಾಯಲ್ಲಿ ನೀರೂರಿತು. ಜನ್ನೋಪಂತ ಎಂಬ ರಾಯಭಾರಿಯನ್ನು ಸಂಧಾನಕ್ಕಾಗಿ ರಾಣಿಯ ಬಳಿ ಕಳುಹಿಸಿದನು. ಅವನ ಹಿಂದೆಯೇ ಯುದ್ಧಕ್ಕಾಗಿ ದಳಪತಿ ಮುಸಫರಖಾನನ್ನು ಅಪಾರ ಸೈನ್ಯದೊಂದಿಗೆ ಕಳುಹಿಸಿದನು. ಜನ್ನೋಪಂತ ರಾಣಿಯನ್ನು ಭೇಟಿಯಾದನು. ಗುಪ್ತಚಾರರ ಮೂಲಕ ರಾಣಿ ಬಿಜಾಪುರ ಸುಲ್ತಾನನ ಕುಟಿಲತನವನ್ನು ಅರಿತಿದ್ದಳು. ಆದರೆ ಒಮ್ಮೆಲೆ ಯುದ್ಧ ಹೂಡುವ ಸಿದ್ಧತೆ ರಾಣಿಯಲ್ಲಿರಲಿಲ್ಲ. ಜನ್ನೋಪಂತನಿಗೆ ಮೂರು ಲಕ್ಷ ರೂಪಾಯಿ ಕೊಟ್ಟು ಸುಲ್ತಾನನೊಂದಿಗೆ ಒಪ್ಪಂದ ಮಾಡಿಕೊಂಡಳು. ಇಷ್ಟಾದರೂ ಬಿಜಾಪುರ ಸೈನ್ಯ ಕೆಳದಿಯತ್ತ ಸಾಗಿದುದನ್ನು ಅರಿತ ರಾಣಿ ಸಮಸ್ತ ಪ್ರಜೆಗಳನ್ನು ಕರೆಸಿದಳು.

“ವೀರ ಕನ್ನಡಿಗರೆ, ಶೂರ ಸೈನಿಕರೆ, ಇಂದು ಈ ರಾಜ್ಯ ಅಳಿವು-ಉಳಿವು ನಿಮ್ಮ ಕೈಯಲ್ಲಿದೆ. “ಗೆದ್ದರೆ ರಾಜ್ಯ: ಸತ್ತರೆ ಸ್ವರ್ಗ” ಎಂಬ ಅಮರ ನುಡಿಯನ್ನು ನೆನಪಿಟ್ಟುಕೊಂಡು ನಾಡಿಗಾಗಿ ಹೋರಾಡಿರಿ. ಗೆದ್ದರೆ ನಿಮಗೆಲ್ಲ ಯೋಗ್ಯ ಸ್ಥಾನ-ಮಾನಗಳು ದೊರೆಯುತ್ತವೆ” ಎಂದು ರಾಣಿ ಪ್ರೀತಿ ಮಮತೆಯಿಂದ ಪ್ರಜೆಗಳಿಗೆ ಹೇಳಿದಳು. ತನ್ನ ಆಭರಣಗಳನ್ನೂ ರಾಜ್ಯ ಭಂಡಾರದ ಧನಕನಕಗಳನ್ನೂ ಪ್ರಜೆಗಳಿಗಿತ್ತು ಪ್ರೋತ್ಸಾಹಿಸಿದಳು. ರಾಣಿಯ ವೀರವಾಣಿಯನ್ನು ಕೇಳಿ, ಔದಾರ್ಯವನ್ನು ಕಂಡು ಸೈನಿಕರೆಲ್ಲ ಹೋರಾಡಲು ಸಿದ್ಧರಾದರು.

ರಾಣಿಯನ್ನು ಬೀಳ್ಕೊಂಡ ಜನ್ನೋಪಂತ ಭರಮೆ ಮಾವುತನನ್ನು ಕಂಡ. ಜನ್ನೋಪಂತನ ಸಿಹಿ ಮಾತುಗಳಿಗೆ ಒಳಗಾಗಿ ಅವನು ದೊರೆಯನ್ನೆ ಕೊಲ್ಲಿಸಿದ.

ಸೋಮಶೇಖರನಾಯಕನ ಮರಣದಿಂದ ರಾಣಿ ಬಹಳ ದುಃಖಿತಳಾದಳು. ಆದರೆ ಅಳುತ್ತ ಕೂಡದೆ ದೊರೆಯ ಕೊಲೆಯ ಸೇಡನ್ನು ತೀರಿಸಲು ರಣಚಂಡಿಯಾದಳು. ಬಿಜಾಪುರದ ಸೈನ್ಯ ಬಿದನೂರಿನ ಕೋಟೆಯನ್ನು ಮುತ್ತಿತು. ಭರಮೆಮಾವುತನ ಸೇವಕರು ಸುಲ್ತಾನನ ಸೈನಿಕರಿಗೆ ಬೇಕಾದ ನೆರವನ್ನಿತ್ತರು.

ಬಿಜಾಪುರದ ಸೈನ್ಯ ಬಹು ದೊಡ್ಡದು. ತಾವು ಶೌರ್ಯದಿಂದ ಹೋರಾಡಿದರೂ ಜಯ ಲಭಿಸಲಾರದು ಎಂದು ಸಿದ್ಧಪ್ಪಶೆಟ್ಟಿ ಹಾಗೂ ಕೆಳದಿಯ ಸರದಾರರು ಚೆನ್ನಮ್ಮನಿಗೆ ಬಿದನೂರನ್ನು ಬಿಡಲು ಸಲಹೆ ಇತ್ತರು. ಬೇರೆ ಮಾರ್ಗವಿರಲಿಲ್ಲ. ಅವರೆಲ್ಲ ಕೆಳದಿಯ ಸಿಂಹಾಸನವನ್ನೂ ರಾಜ್ಯ ಭಂಡಾರದ ಸಂಪತ್ತನ್ನೂ, ಬೆಲೆಯುಳ್ಳ ವಸ್ತುಗಳನ್ನೂ ಭುವನಗಿರಿಗೆ ಸಾಗಿಸಿದರು.

ವೈರಿಗಳ ಕೋಟೆಯ ಬಾಗಿಲನ್ನು ನಾಶ ಮಾಡಿ ಅರಮನೆಯನ್ನು ಹೊಕ್ಕರು. ಅಲ್ಲಿ ರಾಣಿಯನ್ನು ಕಾಣಲಿಲ್ಲ. ರಾಜ್ಯ ಭಂಡಾರವೂ ಬರಿದು. ಅವರಿಗೆ ನಿರಾಸೆಯಾಯಿತು. ಕೋಪ ಧಗಧಗಿಸಿತು. ದಟ್ಟವಾದ ಕಾಡಿನ ಮಧ್ಯದಲ್ಲಿರುವ ಭುವನಗಿರಿ ಕೋಟೆ ಭದ್ರವಾಗಿತ್ತು. ಕೆಳದಿನ ಸರದಾರರು, ಶೂರ ಸೈನಿಕರು ರಾಣಿಯೊಂದಿಗೆ ಭುವನಗಿರಿಯಲ್ಲಿದ್ದರು.

ನನ್ನಿಂದ ಮಹಾಪರಾಧವಾಗಿದೆ

ದತ್ತು ಪ್ರಕರಣದಲ್ಲಿ ರಾಣಿಯೊಂದಿಗೆ ಮನಸ್ತಾಪ ಮಾಡಿಕೊಂಡು ಬಿದನೂರನ್ನು ಬಿಟ್ಟು ಹೋದ ಪ್ರಧಾನ ಮಂತ್ರಿ ತಿಮ್ಮಣ್ಣ ನಾಯಕನಿಗೆ ಬಿಜಾಪುರದವರು ಬಿದನೂರನ್ನು ಕೈವಶಮಾಡಿಕೊಂಡದ್ದು ತಿಳಿಯಿತು. ಎಷ್ಟೇ ಆಗಲಿ, ಆತ ದೇಶಾಭಿಮಾನಿ. ಪರಕೀಯರು ಕೆಳದಿಯನ್ನು ಆಕ್ರಮಿಸಿದುದನ್ನು ಕಂಡು ಕೆಂಡಾವಾದನು ತಿಮ್ಮಣ್ಣ ನಾಯಕ ಭುವನಗಿರಿ ಅರಮನೆಗೆ ಬಂದನು. ರಾಣಿಯನ್ನು ಕಂಡನು.

“ಮಹಾರಾಣಿಯವರೇ, ನನ್ನಿಂದ ಮಹಾಪರಾಧವಾಗಿದೆ. ಸೋಮಶೇಖರನಾಯಕರು ಮರಣ ಹೊಂದಿದ ಮೇಲೆ ನಾನು ಬಿದನೂರಿನಿಂದ ಹೋಗಬಾರದಾಗಿತ್ತು. ಚಿಕ್ಕಂದಿನಿಂದ ನನ್ನನ್ನು ಸಲಹಿದ ಬಿದನೂರು ರಾಜ್ಯ ಪರಕೀಯರ ಪಾಲಾಗುವುದನ್ನು ನಾನು ಸಹಿಸಲಾರೆ. ರಾಜ್ಯಕೆಕ ಬಂದೊದಗಿದ ಕಠಿಣ ಕಾಲದಲ್ಲಿ ನನ್ನ ಸೇವೆಯನ್ನು ಸ್ವೀಕರಿಸಿ” ಎಂದು ಬಿನ್ನವಿಸಿಕೊಂಡನು.

“ಪ್ರಧಾನಿಗಳೇ, ನೀವು ಕೆಳದಿಯ ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಂಬುದನ್ನು ನಿಮ್ಮ ನುಡಿ, ನಡೆಗಳೇ ಸಾರಿ ಹೇಳುತ್ತಿವೆ. ಈಗ ರಾಜ್ಯ ರಕ್ಷಣೆಗಾಗಿ ಎಲ್ಲರ ಸಹಾಯ, ದೇವರ ಕೃಪೆ ಅವಶ್ಯಕವಾಗಿದೆ. ನೀವು ರಾಜಕಾರಣದಲ್ಲಿ ಅನುಭವವುಳ್ಳವರು. ಪೂಜ್ಯ ಶಿವಪ್ಪನಾಯಕರ ಕಾಲದಿಂದ ಸೇವೆ ಸಲ್ಲಿಸಿದ ನಿಮ್ಮ ನೆರವು ರಾಜ್ಯಕ್ಕೆ ಇಂದು ಅವಶ್ಯಕವಾಗಿದೆ. ನೀವು ನಿಮ್ಮ ಮೊದಲಿನ ಪ್ರಧಾನ ಮಂತ್ರಿಯ ಕಾರ್ಯವನ್ನು ಮಾಡಿ.”

ರಾಣಿ, ಮಂತ್ರಿಗೆ ಸನ್ಮಾನ ಮಾಡಿ ಕಳುಹಿಸಿದಳು. ಕೆಳದಿಯ ಅರಸರಿಂದ, ಚೆನ್ನಮ್ಮರಾಣಿಯಿಂದ ಉಪಕಾರ ಹೊಂದಿದ ಸಾವಿರಾರು ಜನ ತಂಡ ತಂಡವಾಗಿ ಭುವನಗಿರಿ ದುರ್ಗಕ್ಕೆ ಬಂದರು. ರಾಣಿಗಾಗಿ, ನಾಡಿಗಾಗಿ ಸರ್ವಸ್ವ ತ್ಯಾಗ ಮಾಡಲು ಸಿದ್ಧರಾದರು.

"ಆಶ್ರಯ ಬೇಡಿದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ"

ಪ್ರಜೆಗಳ ತಾಯಿ ಚೆನ್ನಮ್ಮಾಜಿ

ತಿಮ್ಮಣ್ಣನಾಯಕನು ಕೆಳದಿ ರಾಜ್ಯದ ಎಲ್ಲ ಭಾಗದಿಂದ ದಳಪತಿಗಳನ್ನೂ ಶೂರ ಸೈನಿಕರನ್ನೂ ಕರೆಸಿ ಬಿದನೂರಿನ ಮುತ್ತಿಗೆಗೆ ಹೊರಟನು. ಬಿಜಾಪುರ ಸೈನಿಕರು ಬಿದನೂರನ್ನು ಗೆದ್ದ ಅಹಂಕಾರದಿಂದ ಭುವನಗಿರಿ ದುರ್ಗವನ್ನು ಗೆಲ್ಲಲು ಹೊರಟರು. ದಟ್ಟವಾದ ಕಾಡಿನ ಮಧ್ಯದಲ್ಲಿ ಇಕ್ಕಟ್ಟಾದ ಮಾರ್ಗದಲ್ಲಿ ಸುಲ್ತಾನನ ಸೈನ್ಯ ಕನ್ನಡ ವೀರರ ಕೈಗೆ ಸಿಕ್ಕಿತು. ಆ ಮಾರ್ಗವನ್ನು ಸರಿಯಾಗಿ ಬಲ್ಲ ಚೆನ್ನಮ್ಮನ ಸೈನಿಕರು ಬಜಾಪುರ ಸೈನ್ಯವನ್ನು ನಾಶ ಮಾಡುತ್ತ ಬಿದನೂರಿಗೆ ಹೋದರು. ಬಿದನೂರಿನ ಪ್ರಜೆಗಳಿಗೆ ಕನ್ನಡ ಸೈನಿಕರನ್ನು ಕಂಡು ಹಿಡಿಸಲಾರದ ಸಂತೋಷ. ಕೋಟೆಯ ಬಾಗಿಲನ್ನು ತೆಗೆದು ಅವರನ್ನು ಸ್ವಾಗತಿಸಿದರು. ಅಳಿದುಳಿದ ಸುಲ್ತಾನನ ಸೈನಿಕರು ಬಿಜಾಪುರದತ್ತ ಓಡಿ ಹೋದರು.

ಕೆಳದಿಯ ಪ್ರಜೆಗಳು ಒಗ್ಗಟ್ಟಿನಿಂದ ರಾಣಿಯ ಆಡಳಿತವನ್ನು ಒಪ್ಪಿಕೊಂಡರು. ೧೬೭೧ ರಲ್ಲಿ ಭುವನಗಿರಿ ದುರ್ಗದಲ್ಲಿ ಚೆನ್ನಮ್ಮರಾಣಿಗೆ ಪಟ್ಟಗಟ್ಟಿದರು. ರಾಣಿ ರಾಜ್ಯ ಸೂತ್ರಗಳನ್ನೆಲ್ಲ ತನ್ನ ಕೈಯಲ್ಲಿ ತೆಗೆದುಕೊಂಡಳು. ಬಿದನೂರಿನ ಯುದ್ಧದಲ್ಲಿ ನೆರವಾದ ದಳಪತಿಗಳಿಗೆ, ಸೈನಿಕರಿಗೆ ಧನಕನಕಗಳನ್ನೂ ಭೂಮಿಯನ್ನೂ ಅಧಿಕಾರವನ್ನೂ ಕೊಟ್ಟ ಸನ್ಮಾನಿಸಿದಳು. ಅರಾಜಕತೆಯಿಂದ ಬಳಲುತ್ತಿದ್ದ ರಾಜ್ಯದಲ್ಲಿ ಸುಖ-ಶಾಂತಿ ನೆಲೆಗೊಳ್ಳುವಂತೆ ಮಾಡಿದಳು. ಶಿವಪ್ಪ ನಾಯಕನ ಕಾಲದ ವ್ಯವಸ್ಥೆಯನ್ನು ಮತ್ತೆ ರೂಢಿಯಲ್ಲಿ ತಂದಳು. ರಾಮೇಶ್ವರ, ಅಘೋರೇಶ್ವರ, ಮೂಕಾಂಬಿಕೆಯರ ಕೃಪೆಯಿಂದ ರಾಜ್ಯಕ್ಕೆ ಒದಗಿದ ವಿಪತ್ತು ನಾಶವಾಯಿತೆಂದು, ವೈಭವದಿಂದ ದೇವರ ಪೂಜೆ ಮಾಡಿಸಿ ವಜ್ರದ ಕಿರೀಟ, ಬಂಗಾರದ ನಂದಾದೀಪಗಳನ್ನು ದೇವರಿಗೆ ಅರ್ಪಿಸಿದಳು.

ಚೆನ್ನಮ್ಮ ರಾಣಿ ತನ್ನ ಪತಿಯ ಮರಣಕ್ಕೆ ಕಾರಣರಾದ ಭರಮೆಮಾವುತ, ಜನ್ನೋಪಂತರನ್ನು ಸೆರೆ ಹಿಡಿದು ಕೊಲ್ಲಿಸಿದಳು. ತನ್ನ ವಿರುದ್ಧ ಪಿತೂರಿ ಹೂಡಿ ರಾಜ್ಯವನ್ನು ಅಪಹರಿಸಬೇಕೆಂದು ಮಾಡಿದವರನ್ನು ಅಂಗವಿಹೀನರನ್ನಾಗಿ ಮಾಡಿಸಿ, ರಾಜ್ಯದಿಂದ ಹೊರ ಹಾಕಿದಳು. ಸದ್ಗುಣಿಗಳಿಗೆ ದೇವತೆಯಾಗಿ, ದುಷ್ಟರಿಗೆ ದುರ್ಗೆಯಾಗಿ ನಿಂತಳು ರಾಣಿ ಚೆನ್ನಮ್ಮ. ಪತಿಯ ನೆನಪಿಗಾಗಿ ಒಂದು ಅಗ್ರಹಾರವನ್ನು ಕಟ್ಟಿಸಿದಳು. ಅಲ್ಲಿ ಪಂಡಿತರಿಗೆ ಆಶ್ರಯವಿತ್ತಳು. ಆ ಅಗ್ರಹಾರಕ್ಕೆ “ಸೋಮಶೇಖರಪುರ” ಎಂದು ನಾಮಕರಣ ಮಾಡಿದಳು. ಹೀಗೆ ರಾಜ್ಯಕ್ಕಾಗಿ ಹಗಲಿರುಳು ದುಡಿದಳು.

ಕೆಳದಿಯ ರಾಜ್ಯದ ಎಲ್ಲ ಪ್ರಜೆಗಳ ಒಪ್ಪಿಗೆಯಿಂದ, ಒಮ್ಮತದಿಂದ ತನಗೆ ಯೋಗ್ಯನೆನಿಸಿದ ಬಾಲಕ ಬಸಪ್ಪನಾಯಕನನ್ನು ದತ್ತು ತೆಗೆದುಕೊಂಡಳು. ಕೆಳದಿಯ ಸೈನ್ಯ ಪಡೆಯನ್ನು ಹೆಚ್ಚಿಸಿದಳು. ರಾಜ್ಯದ ಗಡಿಯಲ್ಲಿ ಭದ್ರವಾದ ಕಾವಲನ್ನಿರಿಸಿದಳು. ರಾಜಕಾರ್ಯವನ್ನು ನಿರ್ವಹಿಸಿ ಉಳಿದ ವೇಳೆಯನ್ನು ರಾಣಿ ಚೆನ್ನಮ್ಮ ದೇವರ ಧ್ಯಾನ, ಪೂಜೆ, ದಾನ, ಧರ್ಮ ಪರೋಪಕಾರಗಳಲ್ಲಿ ಕಳೆಯುತ್ತಿದ್ದಳು. ಎಲ್ಲ ಧರ್ಮಗಳ ಮಠ ಮಾನ್ಯಗಳಿಗೆ ಹೇರಳವಾಗಿ ದಾನದತ್ತಿ ಕೊಟ್ಟಳು. ಎಲ್ಲ ಧರ್ಮಗಳನ್ನು ಗೌರವಿಸಿದ ರಾಣಿ ಸರ್ವರ ಆದರಕ್ಕೆ ಪಾತ್ರಳಾದಳು.

ರಾಜ್ಯದ ರಕ್ಷೆ ಚೆನ್ನಮ್ಮಾಜಿ

ಹಿಂದೆ ಮೈಸೂರಿನ ಅರಸರಿಗೂ ಕೆಳದಿಯ ಅರಸರಿಗೂ ಎರಡು ಮೂರು ಸಲ ಯುದ್ಧ ನಡೆದಿತ್ತು. ಆ ಯುದ್ಧಗಳಲ್ಲಿ ಮೈಸೂರು ಅರಸರು ಸೋತಿದ್ದರು. ಸಮುದ್ರ ತೀರದ ಭೂಮಿಯನ್ನೆಲ್ಲ ಆಕ್ರಮಿಸಿದ ಕೆಳದಿಯ ಅರಸರಿಗೆ  ಪರದೇಶದ ವ್ಯಾಪಾರಿಗಳಾದ ಡಚ್ ಹಾಗೂ ಇಂಗ್ಲೀಷರಿಂದ ಬಹಳ ಲಾಭವಾಗುತ್ತಿತ್ತು. ಮೈಸೂರರಸರಿಗೆ ಕೆಳದಿಯ ಅರಸರ ಹಿರಿಮೆ ಸಹಿಸದಾಗಿತ್ತು.

ಮೈಸೂರಿನಲ್ಲಿ ಚಿಕ್ಕದೇವರಾಜ ಒಡೆಯರು ರಾಜರಾಗಿದ್ದರು. ಕೆಳದಿಯ ರಾಜವಂಶಕ್ಕೆ ಸಂಬಂಧಿಸಿದ ಅಂಧಕ ವೆಂಕಟನಾಯಕ ಎಂಬಾತನು ಅವರಿಗೆ ಪತ್ರ ಬರೆದನು. ಈ ಪತ್ರದಲ್ಲಿ “ಕೆಳದಿಯ ರಾಜ್ಯಕ್ಕೆ ನಾನೇ ಒಡೆಯನಾಗಬೇಕಾಗಿತ್ತು, ಚೆನ್ನಮ್ಮ ರಾಣಿ ಅದಕ್ಕೆ ಅವಕಾಶ ಕೊಡಲಿಲ್ಲ. ಆದ ಕಾರ ನೀವು ಚೆನ್ನಮ್ಮ ರಾಣಿಯೊಂದಿಗೆ ಯುದ್ಧ ಮಾಡಿ ರಾಜ್ಯವನ್ನು ಗೆಲ್ಲಲು ಸಹಾಯ ಮಾಡಿದರೆ ಅರ್ಧ ರಾಜ್ಯವನ್ನು ನಿಮಗೆ ಕೊಡುತ್ತೇನೆ, ಬೇಕಾದ ಸಹಾಯ ಮಾಡುತ್ತೇನೆ” ಎಂದು ಬರೆದಿದ್ದನು.

ಈ ಪತ್ರವನ್ನು ಓದಿ ಚಿಕ್ಕದೇವರಾಯರು ಸಂತೋಷ ಪಟ್ಟರು. ಹೆಂಗಸಿನ ಕೈಯಲ್ಲಿರುವ ರಾಜ್ಯವನ್ನು ಸುಲಭವಾಗಿ ಗೆಲ್ಲಬಹುದು. ಕೆಳದಿಯನ್ನು ಗೆದ್ದರೆ ಪರದೇಶದ ವ್ಯಾಪಾರ ತಮ್ಮದಾಗುವುದು ಎಂದು ಯುದ್ಧ ಸಿದ್ಧತೆ ನಡೆಸಿದರು.

ಮೈಸೂರಿನವರು ಕೆಳದಿಯ ರಾಜ್ಯದ ಮೇಲೆ ಯುದ್ಧ ಸಾರಿದುದನ್ನು ಕೇಳಿ ರಾಣಿ ಚೆನ್ನಮ್ಮ ಹೆದರಲಿಲ್ಲ, ಬೆದರಲಿಲ್ಲ. ಕೆಳದಿಯ ಸೇನಾಧಿಪತಿ ಭದ್ರಪ್ಪನಾಯಕನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಯುದ್ಧಕ್ಕೆ ಕಳುಹಿಸಿದಳು. ಇದೇ ವೇಳೆಯನ್ನು ಸಾಧಿಸಿ ಸೋದೆ, ಸಿರಸಿ, ಬನವಾಸಿಗಳ ಪಾಳೆಯಗಾರರೂ ಕೆಳದಿ ರಾಜ್ಯದ ಮೇಲೆ ಯುದ್ಧ ಸಾರಿದರು. ರಾಣಿ ಚಾತುರ್ಯದಿಂದ ಎಲ್ಲರನ್ನೂ ಸೋಲಿಸಿದಳು.

ಯುದ್ಧದ್ಲಲಿ ಮೊದಲು ಮೈಸೂರಿನವರು ಸೋತರು, ಆದರೆ ಮದುವರ್ಷ ಕೆಳದಿ ಸೈನ್ಯವನ್ನು ಸೋಲಿಸಿದಿದರು. ಮತ್ತೆ ಕಾಳಗವಾದಾಗ ರಾಣಿಯ ಪಕ್ಷಕ್ಕೆ ಜಯ ದೊರೆಯಿತು. ಅನೇಕ ಜನಮೈಸೂರಿನ ಸೈನ್ಯಾಧಿಕಾರಿಗಳು ಸೆರೆ ಸಿಕ್ಕರು. ರಾಣಿ ಅವರನ್ನು ಗೌರವದಿಂದ ಕಂಡಳು. ಬಿಡುಗಡೆ ಮಾಡಿದಳು. ಇದರಿಂದ ಚಿಕ್ಕದೇವರಾಯರು ಚೆನ್ನಮ್ಮ ರಾಣಿಯ ಬಗೆಗೆ ಆದರ, ಅಭಿಮಾನ ತಳೆದರು. ಮೈಸೂರು-ಕೆಳದಿ ರಾಜರಲ್ಲಿ ಸ್ನೇಹದ ಒಪ್ಪಂದವಾಯಿತು.

ರಾಜ್ಯಕ್ಕಾಗಿ ಆಸೆ ಪಟ್ಟ ಕೆಲ ಜನ ನಾಯಕರನ್ನು ರಾಣಿ ತನ್ನ ರಾಜ್ಯದಿಂದ ಹೊರ ಹಾಕಿದ್ದಳು. ಅವರೆಲ್ಲ ಪರರಾಜರ ಸಹಾಯ ಪಡೆದು ರಾಣಿಹೊಂದಿಗೆ ಯುದ್ಧ ಹೂಡಿದರು. ರಾಣಿ ದಕ್ಷತೆಯಿಂದ ಅವರನ್ನೆಲ್ಲ ಯುದ್ಧದಲ್ಲಿ ಸೋಲಿಸಿದಳು.

ರಾಣಿ ಚೆನ್ನಮ್ಮ ತನ್ನ ದತ್ತು ಮಗ ಬಸಪ್ಪನಾಯಕನಿಗೆ ರಾಜ್ಯಭಾರದ ಶಿಕ್ಷಣವನ್ನು ಸ್ವತಃ ಕೊಟ್ಟಳು. ರಾಣಿ ಪ್ರತಿದಿನ ಬೆಳಗಿನ ಸ್ನಾನ-ಪೂಜೆ, ಉಪಹಾರ ತೀರಿಸಿಕೊಂಡು ಅರಮನೆಯ ಸಭಾಭವನಕ್ಕೆ ಬರುತ್ತಿದ್ದಳು. ಮಧ್ಯಾಹ್ನದವರೆಗೆ ಅಲ್ಲಿರುತ್ತಿದ್ದಳು. ತನ್ನನ್ನು ಕಾಣಲು ಬಂದ ಪ್ರಜೆಗಳ ಸುಖ-ದುಃಖಗಳನ್ನು ಸಹಾನೂಭೂತಿಯಿಂದ ಕೇಳಿಕೊಳ್ಳುತ್ತಿದ್ದಳು. ಅವರಿಗೆ ಬೇಕಾದ ಸಹಾಯವನ್ನು ಮಾಡುತ್ತಿದ್ದಳು. ಬಸಪ್ಪ ನಾಯಕ ಹಾಗೂ ಮಂತ್ರಿ ಮಾನ್ಯರೊಂದಿಗೆ ರಾಜಕಾರ್ಯದ ಬಗೆಗೆ ಚರ್ಚಿಸಿ ನಿರ್ಣಯ ಕೊಡುತ್ತಿದ್ದಳು. ಮಧ್ಯಾಹ್ನದ ಪೂಜೆಯ ನಂತರ ಒಂದು ಗಂಟೆ ದಾನ-ಧರ್ಮಕ್ಕೆ ಮುಡಿಪು. ಆಗ ಜೋಗಿ-ಜಂಗಮರು, ಪುರೋಹಿತರು, ದೀನದಲಿತರು ಬಂದು ದಾನ ಸ್ವೀಕರಿಸುತ್ತಿದ್ದರು.

ಮಹಾರಾಣಿ, ನಾನು ಜಂಗಮನಲ್ಲ, ಛತ್ರಪತಿಗಳ ಮಗ“.

ಒಂದು ಮಧ್ಯಾಹ್ನ ರಾಣಿ ಎಂದಿನಂತೆ ದಾನ ಧರ್ಮ ಮಾಡುತ್ತಿದ್ದಾಳೆ. ನಾಲ್ವರು ಜಂಗಮರು ಬಂದರು. ಅವರು ಅಪೂರ್ವ ತೇಜಸ್ವಿಗಳು.

ಎಲ್ಲರೂ ದಾನ ಪಡೆದು ಹೋಗುವವರೆಗೆ ಅವರು ದೂರದಲ್ಲಿ ಕುಳಿತಿದ್ದಳು. ಅನಂತರ ರಾಣಿಯ ದರ್ಶನಕ್ಕೆ ಬಂದರು. ಅವರ ತೇಜಸ್ವಿ ಮುಖಗಳನ್ನು ಕಂಡೊಡನೆ ಅವರು ಸಾಮಾನ್ಯ ಭಿಕ್ಷುಕರಲ್ಲ ಂಬುದನ್ನು ಚತುರಳಾದ ರಾಣಿ ತಿಳಿದುಕೊಂಡಳು. ತನ್ನ ಬಳಿ ಕೈಮುಗಿದು ನಿಂತ ಜಂಗಮರ ಮುಖಂಡನನ್ನು ಕಂಡು “ಪೂಜ್ಯರೆ, ಆಶೀರ್ವದಿಸುವ ಸ್ಥಾನದಲ್ಲಿರುವ ತಾವು ನನಗೆ ನಮಸ್ಕರಿಸ ಬೇಕೆ! ತಮ್ಮ ಊರು ಯಾವುದು? ನನ್ನಿಂದ ಯಾವ ಬಗೆಯ ಸಹಾಯ- ಸೇವೆ ತಮಗೆ ಸಲ್ಲಬೇಕು?” ಎಂದು ಆತ್ಮೀಯತೆಯಿಂದ ಕೇಳಿದಳು.

ಆತ ಮುಂದೆ ಬಂದು ಆದರದಿಂದ ಮತ್ತೊಮ್ಮೆ ನಮಸ್ಕರಿಸಿದ.

“ಮಹಾರಾಣಿಯವರೇ, ನಾನು ಜಂಗಮನಲ್ಲ, ”

“ಅಲ್ಲವೇ? ಹಾಗಾದರೆ ಈ ವೇಷದಲ್ಲಿ ಏಕೆ ಬಂದಿರಿ? ಯಾರು ನೀವು?”

“ಮಹಾರಾಣಿ, ನಾನು ಛತ್ರಪತಿ ಶಿವಾಜಿಯವರ ಮಗ ರಾಜಾರಾಮ.”

ರಾಣಿ ಬೆಚ್ಚಿದಳು. “ದಕ್ಷಿಣ ಭಾರತದಲ್ಲಿ ಹಿಂದು ಧರ್ಮ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಮಕ್ಕಳೇ ! ಶಿವ ಶಿವಾ !. ಎಂತಹ ಕಷ್ಟ ಬಂತು ನಿಮಗೆ ! ಕುಳಿತುಕೊಳ್ಳಿ ರಾಜಕುಮಾರರೇ. ನನ್ನಿಂದೇನಾಗ ಬೇಕಾಗಿದೆ?”

“ತಾಯಿ, ನನ್ನ ಸೋದರ ಸಂಭಾಜಿಯನ್ನು ಔರಂಗಾಜೇಬು ಕ್ರೂರತನದಿಂದ ಕೊಲ್ಲಿಸಿದನು. ನಮ್ಮ ರಾಜ್ಯವನ್ನು ನಾಶಮಾಡಬೇಕು, ನನ್ನನ್ನೂ ಕೊಲ್ಲಿಸಬೇಕು ಎಂದು ಭಾರಿ ಸೈನ್ಯವನ್ನು ಕಳುಹಿಸಿದ್ದಾನೆ. ಅವರು ಹಲವು ಕೋಟೆಗಳನ್ನು ಕೈವಶ ಮಾಡಿಕೊಂಡಿದ್ದಾರೆ. ನನ್ನೊಬ್ಬನನ್ನು ಕೊಲ್ಲಿಸಿದರೆ ಮಹಾರಾಷ್ಟ್ರವನ್ನೆಲ್ಲ ಗೆಲ್ಲಬಹುದೆಂದು ಔರಂಗಜೇಬನು ಪ್ರಯತ್ನ ನಡೆಸಿದ್ದಾನೆ. ಶತ್ರುಗಳ ಕಣ್ಣು ತಪ್ಪಿಸಿ ನಾನಾ ಬಗೆಯ ವೇಷ ಧರಿಸಿ ನಾನು ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ರಕ್ಷಣೆಗಾಗಿ ಅನೇಕ ಜನ ರಾಜ-ಮಹಾರಾಜರ ಮೊರೆಹೊಕ್ಕೆ”.

“ರಕ್ಷಣೆ ಕೊಡಲು ಹಿಂದು ರಾಜರು ಒಪ್ಪಲಿಲ್ಲವೇ?”

“ಎಲ್ಲರೂ ಔರಂಗಜೇಬನ ಕೋಪಕ್ಕೆ ಅಂಜಿ ರಕ್ಷಣೆ ಕೊಡಲು ನಿರಾಕರಿಸಿದರು”.

“ಹೌದೆ? ನಂಬಲೂ ಸಾಧ್ಯವಿಲ್ಲ ಇದನ್ನು. ಹಿಂದು ಧರ್ಮ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಮಹಾರಾಜರ ಮಗನಿಗೆ ರಕ್ಷಣೆ ಕೊಡುವುದು ನಮ್ಮಲ್ಲಿ ಪ್ರತಿಯೊಬ್ಬನ ಕರ್ತವ್ಯವಾಗಿದೆ”.

“ಔರಂಗಜೇಬನ ವೈರತ್ವ ಕಟ್ಟಿಕೊಳ್ಳುವುದು ಸಾಮಾನ್ಯ ಮಾತಲ್ಲ ತಾಯಿ!”

“ರಾಜಾರಾಮರೇ, ಈ ಕೆಳದಿಯ ಅರಮನೆಗೆ ರಕ್ಷಣೆ ಬೇಡಿ ಬಂದವರು, ದಾನ ಧರ್ಮ ಬೇಡಿ ಬಂದವರು ಇದುವರೆಗು ಒಬ್ಬರೂ ನಿರಾಶರಾಗಿ ಹೋಗಿಲ್ಲ. ಈಗ ಸಿಂಹಾಸನವನ್ನು ಹೆಂಗಸು ಏರಿದ್ದರೇನು ? ನಾನು ಅಬಲೆಯಲ್ಲ. ವೀರ ಕನ್ನಡತಿ. ಆಶ್ರಯ ಬೇಡಿದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ. ನೀವು ನಮ್ಮ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯಿರಿ.

“ಮಹಾರಾಣಿಯರೇ, ನನಗೆ ರಕ್ಷಣೆ ಕೊಡುವ ಮೊದಲು ನೀವು ನಿಮ್ಮ ಮಂತ್ರಿಮಾನ್ಯರೊಂದಿಗೆ ವಿಚಾರ ಮಾಡಿರಿ. ಈ ಮಾತು ಒಬ್ಬನ ಹೊಟ್ಟೆಗೆ ಹಾಕಿ ಕಳುಹುವಂತದಲ್ಲ ತಾಯಿ! ರಾಜ್ಯದ ಅಳಿವು-ಉಳಿವಿನ ಪ್ರಶ್ನೆಯಾಗಿದೆ”

“ರಾಜಾರಾಮರೇ, ಕನ್ನಡಿಗರು ಕೊಟ್ಟ ಮಾತಿಗೆ ತಪ್ಪುವವರಲ್ಲ ! ಆಶ್ರಯ ಬೇಡಿ ಬಂದವರನ್ನು ರಕ್ಷಿಸಲಾರದಷ್ಟು ಹೇಡಿಗಳಲ್ಲ”.

“ಅದನ್ನು ನಾನು ಬಲ್ಲೆ ಮಹಾರಾಣಿಯರೇ, ನಿಮ್ಮ ಶೌರ್ಯ ಔದಾರ್ಯಗಳ ಕಥೆಗಳನ್ನು ಕೇಳಿಯೇ ಇಲ್ಲಿಗೆ ಬರುವ ಸಾಹಸ ಮಾಡಿದ್ದೇನೆ. ನಿಮ್ಮ ಮಂತ್ರಿಮಾನ್ಯರು ಒಪ್ಪಿದರೆ, ಕೆಲಕಾಲ ರಕ್ಷಣೆಯನ್ನಿತ್ತು ನನ್ನನ್ನು ಜಿಂಜಿ ಕೋಟೆಗೆ ತಲುಪಿಸಿದರೆ ಸಾಕು. ನಾನೆಂದಿಗೂ ನಿಮ್ಮ ಉಪಕಾರವನ್ನು ಮರೆಯಲಾರೆ. ಇದು ಸಾಧ್ಯವಾಗದಿದ್ದರೆ, ನಾನು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡುತ್ತೇನೆ”.

“ರಾಜಾರಾಮರೇ, ಇಂದು ಸಾಯಂಕಾಲ ರಾಜ ಸಭೆಯನ್ನು ಕರೆಯುತ್ತೇನೆ. ವಿಚಾರವಿನಿಮಯ ಮಾಡುತ್ತೇನೆ. ಏನೇ ಆಗಲಿ, ಆಶ್ರಯ ಬೇಡಿ ಬಂದವರಿಗೆ ರಕ್ಷಣೆ ಕೊಡುವೆ. ರಾಜಧರ್ಮ ಪಾಲಿಸುವ ಹೊಣೆಗಾರಿಕೆ, ನಿಮ್ಮನ್ನು ಸುರಕ್ಷಿತವಾಗಿ ಜಿಂಜಿ ತಲುಪಿಸುವ ಭಾರ ನನ್ನದು”.

“ಮಹಾರಾಣಿಯರೇ, ಕೆಳದಿಯ ರಾಜಮನೆತನದ ಔದಾರ್ಯ ದೊಡ್ಡದು. ಹಿರಿಯ ರಾಜ್ಯಗಳ ರಾಜ ಮಹಾರಜರು ಆಶ್ರಯ ಕೊಡಲು ಹಿಂಜರಿದಾಗ, ಒಬ್ಬ ಮಹಿಳೆ ಹಿರಿಯ ಸಾಹಸಕ್ಕೆ ಕೈ ಹಾಕಿದುದನ್ನು ಕಂಡು ಅಚ್ಚರಿಪಟ್ಟಿದ್ದೇನೆ, ಕೃತಜ್ಞನಾಗಿದ್ದೇನೆ” ಎಂದು ರಾಜಾರಾಮ ಭಕ್ತಿಯಿಂದ ಮಹಾರಾಣಿಗೆ ನಮಸ್ಕರಿಸಿ ಅತಿಥಿ ಗೃಹಕ್ಕೆ ಹೋದನು.

ಅಂದು ಸಾಯಂಕಾಲ ರಾಣಿ ಚೆನ್ನಮ್ಮ ರಾಜಸಭೆ ಕರೆದಳು. ನಡೆದುದನ್ನು ವಿವರಿಸಿದಳು. “ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದಳು.

“ಮಹಾರಾಣಿಯವರೇ, ಔರಂಗಜೇಬನ ಸೈನ್ಯ ರಾಜಾರಾಮನನ್ನು ಬೆನ್ನಟ್ಟಿ ಹೊರಟಿದೆ. ರಾಯಗಢ, ಪನ್ಹಾಳಗಢ ಮೊದಲಾದ ಕೋಟೆಗಳನ್ನು ಈಗಾಗಲೇ ಕೈವಶಪಡಿಸಿಕೊಂಡಿದೆ. ರಾಜಾರಾಮನು ಕೆಳದಿ ಸಂಸ್ಥಾನದಲ್ಲಿ ಕಾಲಿರಿಸಿದ ಸಮಾಚಾರ ಔರಂಗಜೇಬನಿಗೆ ಗೊತ್ತಾದರೆ ನಮ್ಮ ಸರ್ವನಾಶ ಖಂಡಿತ” ಎಂದರು ಪ್ರಧಾನಮಂತ್ರಿ ತಿಮ್ಮಣ್ಣ ನಾಯಕ.

“ಹೌದು ಮಹಾರಾಣಿಯರೇ, ಮಂತ್ರಿಗಳ ಮಾತು ನಿಜ. ಇದುವರೆಗೆ ಸುತ್ತಲಿನ ಶತ್ರುಗಳೊಡನೆ ಯುದ್ಧಗಳು ನಡೆದವು. ಇದೀಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುತ್ತಲಿವೆ. ಈಗ ಔರಂಗಜೇಬನೊಂದಿಗೆ ಹೋರಾಡುವುದು ನಮ್ಮ ಶಕ್ತಿಗೆ ಮೀರಿದ ಮಾತು” ಎಂದು ಸಿದ್ದಪ್ಪಶೆಟ್ಟರು ಮಗಳಿಗೆ ಖಂಡತುಂಡವಾಗಿ ಹೇಳಿದರು.

ದಳಪತಿ ಭದ್ರಪ್ಪ, ಮಂತ್ರಿ ನರಸಪ್ಪಯ್ಯ ಇಬ್ಬರೂ ಇದೇ ಅಭಿಪ್ರಾಯವನ್ನು ಹೇಳಿದರು.

“ಮಾನ್ಯರೇ, ನಿಮ್ಮ ಮಾತು ನಿಜ. ನಾನು ಈ ಬಗೆಗೆ ಬಹಳ ವಿಚಾರ ಮಾಡಿದೆ. ಇದುವರೆಗೆ ಕೆಳದಿಯ ಅರಸರು ಆಶ್ರಯ ಬೇಡಿ ಬಂದವರಿಗೆ ಆಶ್ರಯವಿತ್ತಿದ್ದಾರೆ. ಆ ಪರಂಪರೆಯನ್ನು ಕಾಯ್ದುಕೊಂಡು ಬರುವುದು ನನ್ನ ಕರ್ತವ್ಯವಾಗಿದೆ. ಹಿಂದು ಧರ್ಮಕ್ಕಾಗಿ ತಮ್ಮನ್ನೆ ಶಿವಾಜಿ ಮಹಾರಾಜರು ತೇಯ್ದುಕೊಂಡರು. ಅವರ ಮಕ್ಕಳು ಆಶ್ರಯ ಬೇಡಿದಾಗ ಇಲ್ಲ ಎನ್ನಬಹುದೇ? ರಾಜ್ಯದ ಅಳಿವು-ಉಳಿವು ದೇವರ ಕೈಯಲ್ಲಿಯ ಮಾತು”.

“ಹೌದು ತಾಯಿಯವರೆ, ನಿಮ್ಮ ಮಾತು ನಿಜ. ಕೊಲ್ಲುವವನಿಗಿಂತ ಕಾಯುವ ದೇವರ ಕೃಪೆ ದೊಡ್ಡದು ಎಂದು ನೀವು ಯಾವಾಗಲೂ ನನಗೆ ಹೇಳುತ್ತಿರುವಿರಿ. ದೇವರ ಕೃಪೆ, ನಮ್ಮ ವೀರರ ಸಾಹಸದ ಮುಂದೆ ಔರಂಗಜೇಬ ಏನು ಮಾಡಬಲ್ಲ? ಎಂದ ಬಸಪ್ಪನಾಯಕ. ಸಭೆಯಲ್ಲಿದ್ದ ತರುಣರೆಲ್ಲ ರಾಜಾರಾಮನಿಗೆ ಆಶ್ರಯ ಕೊಡುವುದು ಯೋಗ್ಯವೆಂದರು.

ಆಗ ಮಂತ್ರಿಗಳೆಲ್ಲ ಅನಿವಾರ್ಯವಾಗಿ ರಾಜಾರಾಮನಿಗೆ ಆಶ್ರಯಕೊಡಲು ಒಪ್ಪಿದರು.

ಮೊಗಲ್ ಸೈನ್ಯದ ಕರಿನೆರಳು

“ಬಂದದ್ದೆಲ್ಲ ಬರಲಿ, ದೇವರ ದಯವೊಂದಿರಲಿ” ಎಂದು ರಾಣಿ ರಾಜಾರಾಮನಿಗೆ ಆಶ್ರಯ ಕೊಟ್ಟಳು. ಕೆಳದಿ ರಾಜ್ಯದಲ್ಲಿ ಯುದ್ಧ ಸಿದ್ಧತೆ ಪ್ರಾರಂಭವಾಯಿತು.

ಔರಂಗಜೇಬನು ತನ್ನ ಮಗ ಅಜಮತಾರನೊಂದಿಗೆ ಅಪಾರ ಸೈನ್ಯವನ್ನು ಕೊಟ್ಟು ಯುದ್ಧಕ್ಕೆ ಕಳುಹಿಸಿದನು. ಆ ಹೊತ್ತಿಗೆ ರಾಜಾರಾಮನು ಜಿಂಜಿ ಕೋಟೆಯನ್ನು ಸುರಕ್ಷಿತವಾಗಿ ಸೇರಿದನು.

ಧೂರ್ತನಾದ ಔರಂಗಜೇಬನು ಒಂದೆಡೆ ಸೈನ್ಯ ಸಮೂಹವನ್ನು ಕೆಳದಿಯತ್ತ ಯುದ್ಧಕ್ಕೆ ಕಳುಹಿಸಿದನು. ಆ ಸೈನ್ಯ ಕೆಳದಿಯನ್ನು ಮುಟ್ಟುವುದಕ್ಕಿಂತ ಮೊದಲು ಒಬ್ಬ ರಾಜದೂತನ ಕೈಯಲ್ಲಿ ಚೆನ್ನಮ್ಮರಾಣಿಗೆ ಒಂದು ಪತ್ರವನ್ನೂ ಬಾರಿ ಬೆಲೆಯ ವಜ್ರ ವೈಢೂರ್ಯಗಳ ಕಾಣಿಕೆಯನ್ನೂ ಕಳುಹಿಸಿದನು.

ಔರಂಗಜೇಬನ ಪತ್ರ ಹೀಗಿತ್ತು:

“ಕೆಳದಿ ಮಹಾರಾಣಿ ಚೆನ್ನಮ್ಮನವರಿಗೆ,

“ನಮಗೂ ನಿಮಗೂ ವೈರವಿಲ್ಲ, ಆದರೆ ನಮ್ಮ ಪರಮ ವೈರಿಯಾದ ರಾಜಾರಾಮನು ನಿಮ್ಮ ಆಶ್ರಯದಲ್ಲಿ ಇದ್ದಾನೆಂದು ಕೇಳಿದ್ದೇವೆ. ಆತನನ್ನು ಕೂಡಲೆ ನಮಗೆ ಒಪ್ಪಿಸಬೇಕು. ನೀವು ಅವನನ್ನು ನಮಗೆ ಒಪ್ಪಿಸಿದರೆ ಎರಡೂ ರಾಜ್ಯಗಳಲ್ಲಿ ಸ್ನೇಹ-ಒಪ್ಪಂದ ಮಾಡಿಕೊಳ್ಳಬಹುದು. ಇಲ್ಲವಾದರೆ ಮೊಗಲ ಸೈನ್ಯದೊಂದಿಗೆ ಯುದ್ಧಕ್ಕೆ ಸಿದ್ಧರಾಗಿರಿ”.

ಚಾಣಾಕ್ಷಳಾದ ರಾಣಿ, ತನ್ನ ಮಂತ್ರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ಉತ್ತರ ಬರೆಸಿದಳು:

“ಮೊಗಲ ಸಾಮ್ರಾಟ ಔರಂಗಜೇಬರಿಗೆ,

“ತಮ್ಮ ಓಲೆ ತಲುಪಿದೆ. ನಮ್ಮ ರಾಜ್ಯದ ಜನತೆ ಮೊಗಲರಿಗೆ ಸ್ನೇಹ ಹಸ್ತ ನೀಡಲು ಸಿದ್ದರಿದ್ದಾರೆ. ಆದರೆ, ಸ್ನೇಹಕ್ಕೆ ತಾವು ಪ್ರತಿಫಲ ಆಶಿಸಿದ್ದೀರಿ. ಆ ರೀತಿ ಪ್ರತಿಫಲ ಕೊಡಲು ನಮಗೆ ಸಾಧ್ಯವಿಲ್ಲ. ಏಕೆಂದರೆ ರಾಜಾರಾಮ ನಮ್ಮ ರಾಜ್ಯದಲ್ಲಿ ಇಲ್ಲ. ಈ ರಾಜ್ಯದ ಮೂಲಕ ಅವರು ಹಾಯ್ದುಹೋದ ಸಮಾಚಾರ ತಿಳಿದಿದೆ”.

ರಾಣಿಯ ಪತ್ರ ಔರಂಗಜೇಬನಿಗೆ ಮುಟ್ಟುವ ವೇಳೆಗೆ ಮೊಗಲರ ಅಪಾರ ಸೈನ್ಯ ಕೆಳದಿ ರಾಜ್ಯದ ಸಮೀಪಕ್ಕೆ ಬಂದಿತು. ಚೆನ್ನಮ್ಮರಾಣಿಯ ಯುದ್ಧ ಸಿದ್ಧತೆ ಮುಗಿದಿತ್ತು. ಕೆಳದಿಯ ಶೂರ ಸೈನಿಕರು ಮೊಗಲ ಸೈನ್ಯ ಬರುವ ಮಾರ್ಗದಲ್ಲಿ ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದರು. ಈ ಮಾರ್ಗ ದಟ್ಟವಾದ ಅರಣ್ಯದಲ್ಲಿತ್ತು. ಮಳೆಗಾಲ ಪ್ರಾರಂಭವಾಗಿತ್ತು. ಉತ್ತರ ದೇಶದ ಬಿಸಿಲಿನಲ್ಲಿ ಬಾಳಿದ ಮೊಗಲ ಸೈನಿಕರಿಗೆ, ಮಲೆನಾಡಿನ ಧಾರಾಕಾರವಾದ ಮಳೆಯಲ್ಲಿ ದಟ್ಟವಾದ ಕಾಡಿನ ಮಾರ್ಗವನ್ನು ದಾಟಿ ಹೋಗುವುದು ಬಹಳ ಕಠಿಣವಾಗಿತ್ತು. ಆದರೆ ಔರಂಗಜೇಬನ ಆಜ್ಞೆಯನ್ನು ಪಾಲಿಸಲು ಅವರು ಕಷ್ಟಪಟ್ಟು ಮುಂದೆ ಸಾಗಿದ್ದರು. ಕನ್ನಡ ವೀರರು ಅರಣ್ಯದಲ್ಲಿ ನಿಂದು ಮೊಗಲ ಸೈನಿಕರನ್ನು ಸಂಹಾರ ಮಾಡ ಹತ್ತಿದರು. ರಾಜಕುಮಾರ ಅಜಮತಾರ ಹೌಹಾರದ. ರಾಜ ಮಹಾರಾಜರನ್ನು ಉರುಳಿಸಿದ ತಾನು ಒಬ್ಬ ಹೆಂಗಸಿಗೆ ಸೋತು ಊರಿಗೆ ಹೋದರೆ ತಂದೆಗೆ ತಲೆದಂಡ ಕೊಡಬೇಕು. ಇದನ್ನು ನೆನೆದೇ ಅವನು ಬೆವರಿದ. ಮುಂದುವರಿದು ರಭಸದ ಯುದ್ಧ ಮಾಡಿ ಕೆಳದಿಯ ಕೋಟೆಯನ್ನು ನಾಶ ಮಾಡುವ ಸಾಹಸ ಅವನ ಸೈನಿಕರಲ್ಲಿ ಉಳಿದಿರಲಿಲ್ಲ. ಅಪಾರ ಸೈನ್ಯ ನಾಶವಾಗಿತ್ತು. ಅನೇಕ ಜನ ದಳಪತಿಗಳನ್ನೂ, ಯುದ್ಧ ಸಾಮಗ್ರಿ, ಕುದುರೆಗಳನ್ನೂ ಕೆಳದಿಯ ಸೈನಿಕರು ವಶ ಮಾಡಿಕೊಂಡಿದ್ದರು. ಅದರಿಂದಾಗಿ ಯುದ್ಧ ಮಂದಗತಿಯಿಂದ ಸಾಗಿತ್ತು. ರಾಜಕುಮಾರ ಅಜಮತಾರ ಚಿಂತೆಗೊಳಗಾಗಿದ್ದ.

ಆ ವೇಳೆಗೆ ಔರಂಗಜೇಬನು ಅಜಮತಾರನಿಗೆ ಪತ್ರ ಕಳಿಸಿದನು. “ರಾಜಾರಾಮನು ಜಿಂಜಿ ಕೋಟೆಯನ್ನಾಳುತ್ತಿದ್ದಾನೆ. ನೀನು ಕೂಡಲೇ ಕೆಳದಿಯ ಯುದ್ಧ ನಿಲ್ಲಿಸಿ ಜಿಂಜಿಗೆ ಹೋಗು”.

ಅಜಮತಾರನಿಗೂ ಇದೇ ಬೇಕಾಗಿತ್ತು. ಮೊಗಲರು ರಾಣಿ ಚೆನ್ನಮ್ಮನೊಂದಿಗೆ ಒಪ್ಪಂದ ಮಾಡಿಕೊಂಡರು. ರಾಣಿ ಸಂತೋಷದಿಂದ ಒಪ್ಪಿಕೊಂಡಳು. ಮೊಗಲ ಸೇನಾಪತಿಗಳನ್ನು ಔದಾರ್ಯದಿಂದ ನಡೆಸಿಕೊಂಡ ಕೆಳದಿಯ ರಾಣಿ ಒಪ್ಪಂದದ ಪ್ರಕಾರ ಅವರನ್ನೆಲ್ಲ ಬಿಡುಗಡೆ ಮಾಡಿದಳು. ಔರಂಗಜೇಬನು ಚೆನ್ನಮ್ಮ ರಾಣಿ ಸ್ವತಂತ್ರಳೆಂದು ಮನ್ನಣೆ ಕೊಟ್ಟು ಗೌರವಿಸಿದನು.

ರಾಣಿ ತನ್ನ ಸೈನ್ಯದ ಅಧಿಕಾರಿಗಳಿಗೂ, ಸೈನಿಕರಿಗೂ ಯೋಗ್ಯ ಬಹುಮಾನಗಳನ್ನು ಕೊಟ್ಟಳು. ಔರಂಗಜೇಬನೊಂದಿಗೆ ಯುದ್ಧ ಮಾಡಿ ಜಯ ಪಡೆದ ಮೊದಲ ಗೌರವ ವೀರ ಕನ್ನಡತಿ, ಧೀರ ಚೆನ್ನಮ್ಮ ರಾಣಿಯದಾಗಿದೆ.

ಆ ವೇಳೆಗೆ ಜಿಂಜಿ ಕೋಟೆಯನ್ನು ಸುರಕ್ಷಿತವಾಗಿ ತಲುಪಿದ ರಾಜಾರಾಮನು ರಾಣಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಿ ಪತ್ರ ಬರೆದನು. “ದೊಡ್ಡ ದೊಡ್ಡ ಸಂಸ್ಥಾನಗಳ ರಾಜ ಮಹಾರಾಜರು ನನಗೆ ಆಶ್ರಯ ಕೊಡಲು ನಿರಾಕರಿಸಿದಾಗ ನೀವು ಧೀರತನದಿಂದ ನನಗೆ ರಕ್ಷಣೆ ಕೊಟ್ಟಿರಿ, ಹಿಂದು ಧರ್ಮ ರಕ್ಷಣೆಗೆ ನೆರವಾದಿರಿ. ನಿಮ್ಮ ಈ ಔದಾರ್ಯವನ್ನು, ಶೌರ್ಯವನ್ನು ನಾನೆಂದಿಗೂ ಮರೆಯಲಾರೆ. ತಾಯಿ ಭವಾನಿ ನಿಮಗೆ ಸುಖ-ಸಮಾಧಾನ ಕೊಡಲಿ. ನಿಮ್ಮ ರಾಜ್ಯ ಸುಖದ ಬೀಡಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ”.

ಬೆಟ್ಟದಂತೆ ಬಂದ ವಿಪತ್ತು ದೇವರ ದಯದಿಂದ ಮಂಜಿಮಂತೆ ಕರಗಿತು ಎಂದು ರಾಣಿ ನಂಬಿದಳು.

ರಾಜ್ಯಭಾರ ನಿಪುಣೆ

ರಾಣಿ ಚೆನ್ನಮ್ಮ ತನ್ನ ಅಧೀನದಲ್ಲಿದ್ದ ಕರಾವಳಿ ಪ್ರದೇಶದಲ್ಲಿ ವ್ಯಾಪಾರ ಮಾಡಲು ಅರಬರೊಂದಿಗೆ ಹಾಗೂ ಪೋರ್ಚುಗೀಸರೊಂದಿಗೆ ವ್ಯಾಪಾರದ ಷರತ್ತುಗಳನ್ನು ಹಾಕಿ ವ್ಯವಹಾರ ನಡೆಸಿದಳು. ಇದರಿಂದಾಗಿ ರಾಜ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಪಡೆಯಲು ಅನುಕೂಲವಾಗಿತ್ತು. ಲಾಭದಾಯಕವಾಗಿತ್ತು. ಕೆಳದಿಯ ರಾಜ್ಯ ರಕ್ಷಣೆಗೆ ಬೇಕಾದ ಕುದುರೆ ವ್ಯಾಪಾರವನ್ನು ಅರಬರೊಂದಿಗೆ ಮಾಡುತ್ತಿದ್ದಳು. ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಮೆಣಸನ್ನು ಹಾಗೂ ಅಕ್ಕಿಯನ್ನು ಅರಬರು, ಪೋರ್ಚುಗೀಸರು ಕೊಳ್ಳುತ್ತಿದ್ದರು. ಇದರಿಂದಾಗಿ ರಾಜ್ಯದ ಸಂಪತ್ತು ಹೆಚ್ಚಲು ಕಾರಣವಾಯಿತು.

ಚೆನ್ನಮ್ಮರಾಣಿಯ ದತ್ತುಪುತ್ರ ಬಸಪ್ಪನಾಯಕನು ಪ್ರಾಪ್ತ ವಯಸ್ಸಿಗೆ ಬಂದನು. ಚೆನ್ನಮ್ಮನ ಬಳಿ ಇದ್ದು ರಾಜಕಾರಣದಲ್ಲಿ ಬಲ್ಲಿದನಾಗಿದ್ದನು. ಸದ್ಗುಣಿಯೂ ವಿನಯಶೀಲನೂ, ಶೂರನೂ ಆದ ಬಸಪ್ಪನಾಯಕನು ರಾಜ್ಯ ಆಡಳಿತವನ್ನು ಸರಿಯಾಗಿ ನಡೆಸಬಲ್ಲನು ಎಂಬ ವಿಶ್ವಾಸ ರಾಣಿಯಲ್ಲಿ ಉಂಟಾಯಿತು. ಆಗ ಆಕೆ ರಾಜ್ಯದ ಆಡಳಿತದ ಬಹುಭಾಗವನ್ನು ಬಸಪ್ಪನಾಯಕನಿಗೆ ಒಪ್ಪಿಸಿದಳು.

ರಾಣಿ ತನ್ನ ವೇಳೆಯನ್ನು ಪರಹಿತ ಕಾರ್ಯದಲ್ಲಿ ಕಳೆಯಲು ಪ್ರಾರಂಭಿಸಿದಳು. ಇಕ್ಕೇರಿ, ಅಘೋರೇಶ್ವರ, ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬೆಯರ ದರ್ಶನಕ್ಕೆ ಹೋಗಿ ತೀರ್ಥಯಾತ್ರೆ ಮಾಡಿಬಂದಳು. ತಾನು ಹೋದ ದೇವಸ್ಥಾನಗಳಲ್ಲಿ ಅಖಂಡ ಪೂಜೆ ನಡೆಯುವಂತೆ ದಾನ ಮಾಡಿದಳು.

ಚೆನ್ನಮ್ಮರಾಣಿ ಬಸವಾಪಟ್ಟಣದ ಬಳಿಯುರುವ ಹುಲಿಕೆರೆಯನ್ನು ಗೆದ್ದಳು. ಹಾಳು ಬಿದ್ದ ಆ ಕೋಟೆಯನ್ನು ಮತ್ತೆ ಕಟ್ಟಿಸಿದಳು. ಬಸವಪ್ಪನಾಯಕನು ಅಧಿಕಾರಕ್ಕೆ ಬಂದ ಮೇಲೆ ತನ್ನ ತಾಯಿಯ ನೆನಪಿಗಾಗಿ ಕುಲಿಕೆರೆಗೆ ಚೆನ್ನಗಿರಿ ಎಂದು ನಾಮಕರಣ ಮಾಡಿದನು.

ಚೆನ್ನಮ್ಮರಾಣಿ ಬಿದನೂರು ಬಳಿಯಿರುವ ವೇಣಿಪುರ ನೀಲಕಂಠೇಶ್ವರನಿಗೆ ಸುಂದರವಾದ ತೇರನ್ನು ಮಾಡಿಸಿ ಕೊಟ್ಟಳು. ನೀಲಕಂಠೇಶ್ವರ ಜಾತ್ರೆ ಪ್ರತಿ ವರ್ಷ ಆಗುವಂತೆ ಸಕಲ ವ್ಯವಸ್ಥೆ ಮಾಡಿಸಿಕೊಟ್ಟಳು. ಮನೆಯ ದೇವರಾದ ಕೆಳದಿ ರಾಮೇಶ್ವರ, ವೀರಭದ್ರೇಶ್ವರ, ಕೊಪ್ಪೂರು ಮೂಕಾಂಬಿಕೆಯರ ಪೂಜೆ ಸದಾಕಾಲ ನಡೆಯುವಂತೆ ಭೂದಾನ, ಸುವರ್ಣದಾನ ಮಾಡಿದಳು. ಕೆಳದಿ ವೀರಭದ್ರೇಶ್ವರ ದೇವಾಲಯದ ಶಿಖರವನ್ನು ಕಟ್ಟಿಸಿದಳು. ಧ್ವಜಸ್ತಂಭ ನಿಲ್ಲಿಸಿದಳು. ಕಾಶಿ, ರಾಮೇಶ್ವರ, ಶ್ರೀಶೈಲ, ತಿರುಪತಿಗಳ ದೇವಸ್ಥಾನಗಳಿಗೆ ದಾನ ಕೊಟ್ಟಳು. ಜಂಗಮರಿಗೆ ಮಠಗಳನ್ನು ಶೈವ-ವೈಷ್ಣವರಿಗೆ ಅಗ್ರಹಾರಗಳನ್ನು ಕಟ್ಟಿಸಿ ಕೊಟ್ಟಳು.

ಚೆನ್ನಮ್ಮಾಜಿ ೧೬೭೧ ರಿಂದ ೧೬೯೬ರ ವರೆಗೆ ಧರ್ಮದಿಂದ, ದಕ್ಷತೆಯಿಂದ ರಾಜ್ಯವಾಳಿದಳು. ಕೀರ್ತಿ, ವೈಭವಗಳಿಂದ ಬಾಳಿದಳು. ಸದಾ ಶಿವಚಿಂತನೆಯಲ್ಲಿ ಕಾಲ ಕಳೆದಳು. ಧರ್ಮ ಭಾವನೆಯುಳ್ಳ, ದೈವಭಕ್ತಳಾದ ಚೆನ್ನಮ್ಮರಾಣಿ ತನ್ನ ಕೊನೆಗಾಲದಲ್ಲಿ ಮಗನನ್ನು ಬಳಿ ಕರೆದು ಹೀಗೆ ಹೇಳಿದಳು:

“ಬಸಪ್ಪನಾಯಕರೇ, ಚೌಡಪ್ಪನಾಯಕರಿಂದ ಸ್ಥಾಪಿತವಾದ ಕೆಳದಿಯ ರಾಜ್ಯವನ್ನು ಉಳಿಸಿ-ಬೆಳೆಸುವ ಭಾರ ನಿಮ್ಮದು. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದು ಶರಣರು ನುಡಿದರೆ ನಡೆಯಿರಿ. ಪಾಪದ ಕಾರ್ಯಕ್ಕೆ ಕೈ ಹಾಕಬೇಡಿರಿ. ಸತ್ಯ, ದಯೆ, ಧರ್ಮ ಪಾಲನೆಗಾಗಿ ಬಾಳಿರಿ. ವೇಳೆಯನ್ನು ಹಾಳು ಅಭ್ಯಾಸಗಳಲ್ಲಿ ಕಳೆಯದೆ ಸತ್ಕಾರ್ಯದಲ್ಲಿ ಕಳೆಯಿರಿ. ಕೆಳದಿಯ ರಾಜ್ಯದ ಪ್ರಜೆಗಳನ್ನು ಮಕ್ಕಂತೆ ಕಾಪಾಡಿರಿ. ಅವರ ಸುಖ-ದುಃಖದಲ್ಲಿ ಪಾಲ್ಗೊಳ್ಳಿರಿ. ಕೀರ್ತಿಯನ್ನು ತನ್ನಿರಿ. ಕೆಳದಿಯ ರಾಜ್ಯದ ಸುಖದ ಬೀಡಾಗಲಿ, ಜನತೆಯ ಬಾಳು ಸಂತೃಪ್ತಿಗೊಳ್ಳಲಿ ದೇವರು ನಿಮ್ಮನ್ನು ರಕ್ಷಿಸಲಿ.”

ಭಕ್ತಿವಂತಳೂ, ಸದ್ಗುಣಸಂಪನ್ನಳೂ, ಶೂರಳು, ಚತುರಳೂ ಆದ ರಾಣಿ ಚೆನ್ನಮ್ಮ ಭಾರತೀಯರಿಗೆ ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವನ ಪಾದಸೇರಿದಳು. ಬಸಪ್ಪನಾಯಕ, ಕೆಳದಿಯ ಜನ ದುಃಖ ಭರಿತರಾದರು. ಆಕೆಯ ಕಳೇಬರವನ್ನು ಬಿದನೂರು ಕೊಪ್ಪಲು ಮಠದಲ್ಲಿ ಸಮಾಧಿ ಮಾಡಿದರು.

"ಕೆಳದಿಯ ರಾಜ್ಯದ ಪ್ರಜೆಗಳನ್ನು ಮಕ್ಕಳಂತೆ ಕಾಪಾಡಿರಿ"

ಸ್ಫೂರ್ತಿಯ ಸೆಲೆ

ತರುಣ ರಾಜ ಸೋಮಶೇಖರನಾಯಕನ ಅವಿವೇಕದಿಂದ ರಾಜ್ಯ ಅನಾಯಕ ಸ್ಥಿತಿಯಲ್ಲಿದ್ದು, ಸುತ್ತ ಶತ್ರುಗಳು ಬಾಯ್ತೆರೆದು ಕುಳಿತಿದ್ದಾಗ ಚೆನ್ನಮ್ಮಾಜಿ ಧೈರ್ಯದಿಂದ, ವಿವೇಕದಿಂದ, ರಾಜ್ಯದ ಮತ್ತು ಪ್ರಜೆಗಳ ಹಿತರ ದೃಷ್ಟಿಯಿಂದ ನಡೆದುಕೊಂಡಳು. ವೈರಿಗಳನ್ನು ಸದೆಬಡಿದಳು. ಇತರ ರಾಜರು ಔರಂಗಜೇಬನಿಗೆ ಹೆದರಿದರು. ಛತ್ರಪತಿ ಶಿವಾಜಿಯ ಮಗನಿಗೆ ಆಶ್ರಯ ಕೊಡಲು ಹಿಂಜರಿದರು. ಕನ್ನಡ ನಾಡಿನ ಈ ಮಹಿಳೆ ಅವನನ್ನು ರಕ್ಷಿಸಿದಳು. ರಾಣಿಯಾಗಿ ಶೌರ್ಯದಂತೆ ವಿವೇಕವನ್ನೂ, ದಕ್ಷತೆಯನ್ನೂ ಮೆರೆದಳು. ರಾಜ್ಯದಲ್ಲಿ ಶಾಂತಿ ಸ್ಥಾಪಿಸಿದಳು. ಪ್ರಜೆಗಳು ಶತ್ರುಗಳ ಭಯವಿಲ್ಲದೆ, ಕಳ್ಳಕಾಕರ ಸೊಲ್ಲಿಲ್ಲದೆ, ದುಷ್ಟ ಅಧಿಕಾರಿಗಳ ಕಾಟವಿಲ್ಲದೆ ಬದುಕುವಂತೆ ರಾಜ್ಯ ನಡೆಸಿದಳು. ಬಡವರಿಗೆ ತಾನೇ ಆಶ್ರಯವಾದಳು. ಎಲ್ಲ ಧರ್ಮಗಳನ್ನೂ ಗೌರವಿಸಿದಳು.

ಕರ್ನಾಟಕದ ಇತಿಹಾಸದಲ್ಲಿ ವೀರರಾಣಿ ಕೆಳದಿಯ ಚೆನ್ನಮ್ಮನ ಹೆಸರು ಬಂಗಾರದ ಅಕ್ಷರಗಳಲ್ಲಿ ಕಂಗೊಳಿಸುತ್ತಿದೆ. ಆಕೆಯ ಜೀವನ ಕನ್ನಡಿಗರಿಗೆ ಸ್ಫೂರ್ತಿಯ ಸೆಲೆಯಾಗಿದೆ.