ಸಬಾಲ್ಟರ್ನ್ ಅಧ್ಯಯನದ ಸ್ವರೂಪ

ಲೇಖನದ ಈ ಭಾಗದಲ್ಲಿ ರಣಜಿತ್ ಗುಹಾ ಅವರು ಸಬಾಲ್ಟರ್ನ್ ಅಧ್ಯಯನದ ಯೋಜನೆಯನ್ನು  ಕಾರ್ಯರೂಪಕ್ಕೆ ಇಳಿಸಿದ ಸಂದರ್ಭದಲ್ಲಿ ಹೊರತಂದ ಮೊದಲನೆಯ ಸಂಚಿಕೆಯಲ್ಲಿ ವ್ಯಕ್ತಗೊಳಿಸಿದ ಅಭಿಪ್ರಾಯಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ೧೯೮೨ರಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿದ “ಸಬಾಲ್ಟರ್ನ್ ಸ್ಟಡೀಸ್ I” ರಲ್ಲಿ ರಣಜಿತ್ ಗುಹಾ ಅವರು ಪ್ರಕಟಿಸಿದ “ಆನ್ ಸಮ್ ಆಸ್‌ಪೆಕ್ಟ್ಸ್ ಆಫ್ ದಿ ಹಿಸ್ಟಾರಿಯಾಗ್ರಫಿ ಆಫ್ ಕಲೋನಿಯಲ್ ಇಂಡಿಯಾ” ಎನ್ನುವ ಲೇಖನದಲ್ಲಿ ವ್ಯಕ್ತಪಡಿಸಿದ ಆಶಯಗಳನ್ನು ಒಂದೆಡೆ ತರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ರಣಜಿತ್ ಗುಹಾ ಅವರು ತಮ್ಮ ೧೬ ಅಂಶಗಳ ಮೂಲಕ ಸಬಾಲ್ಟರ್ನ್ ಅಧ್ಯಯನದ ಆಶಯಗಳನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಅವುಗಳ ವಿವರಗಳು ಹೀಗಿವೆ :

೧. ವಸಾಹತುಶಾಹಿ “ಎಲಿಟಿಸಂ” (ಗಣ್ಯ ಉನ್ನತವರ್ಗದಿಂದ ನಿರ್ವಚಿಸಲ್ಪಟ್ಟ ಬೌದ್ದಿಕ ತಿಳುವಳಿಕೆಯನ್ನು ‘ಎಲಿಟಿಸಂ’ ಎನ್ನಬಹುದು) ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿ ‘ಎಲಿಟಿಸಂ’ಗಳು ಭಾರತದ ರಾಷ್ಟ್ರೀಯವಾದಿ ಚರಿತ್ರೆ ಲೇಖನ ಪರಂಪರೆಯಲ್ಲಿ ಬಹಳ ಪ್ರಧಾನವಾಗಿರುವ ಮತ್ತು ಪ್ರಭಾವಶಾಲಿಯಾಗಿರುವ “ಎಲಿಟಿಸಂಗಳು.”

‘ಎಲೈಟ್’ ಎನ್ನುವ ಪದವು ಪ್ರಾಬಲ್ಯದಲ್ಲಿದ್ದ ಗುಂಪುಗಳನ್ನು ಸಂಕೇತಿಸುತ್ತದೆ. ವಿದೇಶಿ ಹಾಗೂ ದೇಸಿ ಗುಂಪುಗಳು ಇವುಗಳಲ್ಲಿ ಮುಖ್ಯವಾದವು. ಬ್ರಿಟಿಶ್ ವಸಾಹತು ಕಾಲದ ಎಲ್ಲ ಭಾರತೀಯೇತರ ಬ್ರಿಟಿಶ್ ಅಧಿಕಾರಿಗಳು, ವಿದೇಶಿ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಪ್ಲಾಂಟರ್‌ಗಳು, ಭೂ ಒಡೆಯರು ಮತ್ತು ಮಿಶನರಿಗಳು ವಿದೇಶಿ ಪ್ರಾಬಲ್ಯದ ಗುಂಪಿನ ಒಳಗೆ ಬರುತ್ತಾರೆ.

ದೇಸಿ ಪ್ರಾಬಲ್ಯದ ಗುಂಪುಗಳಲ್ಲಿ ತಮ್ಮ ತಮ್ಮ ವರ್ಗ ಮತ್ತು ಹಿತಾಸಕ್ತಿಗಳನ್ನು ಪ್ರತಿನಿಧಿಸುವುದನ್ನು ಎರಡು ಹಂತಗಳಲ್ಲಿ ನೋಡಬಹುದು. ಅದರಲ್ಲಿ ಅಖಿಲ ಭಾರತದ ಮಟ್ಟದಲ್ಲಿ ಕಂಡುಬರುವ ಮೊದಲ ಗುಂಪು ಬಹುದೊಡ್ಡ ಫ್ಯೂಡಲ್‌ಗಳನ್ನು, ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮದ ಬೂರ್ಜ್ವಾಗಳನ್ನು ಮತ್ತು ಬ್ರಿಟಿಶ್ ಅಧಿಕಾರಶಾಹಿಯ ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳೀಯರನ್ನು ಒಳಗೊಂಡಿದೆ.

ಪ್ರಾಂತೀಯ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ಕೂಡ ಅಖಿಲ ಭಾರತೀಯ ಮಟ್ಟದಲ್ಲಿ  ಪ್ರಾಬಲ್ಯದಲ್ಲಿದ್ದ ಗುಂಪುಗಳು ಪ್ರಧಾನ ಪಾತ್ರವನ್ನು ತೋರಿಸುತ್ತಿತ್ತು. ಇದರೊಂದಿಗೆ ಅಖಿಲ ಭಾರತೀಯ ಮಟ್ಟದಲ್ಲಿ ಸಾಮಾಜಿಕವಾಗಿ ಪ್ರಾಬಲ್ಯ ಹೊಂದದೆ ಇರುವ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳಹಂತದಲ್ಲಿದ್ದ ಕೆಲವು ಗುಂಪುಗಳು ಅಖಿಲ ಭಾರತೀಯ ಮಟ್ಟದಲ್ಲಿ ಪ್ರಾಬಲ್ಯವಾಗಿರುವವರ ಹಿತಾಸಕ್ತಿಗಳನ್ನು ಕಾಯುತ್ತಿದ್ದವು. ಈ ಸಂದರ್ಭದಲ್ಲಿ ಕೆಳಹಂತದ ಈ ಬಗೆಯ ಗುಂಪುಗಳು ತಮ್ಮ ಸಮುದಾಯಗಳ ಹಿತಕ್ಕಿಂತ ಅಖಿಲ ಭಾರತೀಯ ಮಟ್ಟದಲ್ಲಿ ಪ್ರಭಾವಿಯಾಗಿದ್ದ ಸಾಮಾಜಿಕವಾಗಿ ಪ್ರತಿಷ್ಠಿತ ರಾಗಿರುವವರ ಹಿತಾಸಕ್ತಿಗಳನ್ನು ಕಾಯುವ ಕಾಯಕವನ್ನು ಮಾಡುತ್ತಿದ್ದವು. ದೇಸಿ ಎಲೈಟ್ ಗುಂಪಿಗೆ ಈ ಬಗೆಯ ಗುಂಪುಗಳೂ ಸೇರ್ಪಡೆ ಹೊಂದಿವೆ.

ದೇಸಿ ಎಲೈಟ್ ವರ್ಗಗಳು ಬಹುರೂಪಿಗಳಾಗಿವೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಾದೇಶಿಕ, ಆರ್ಥಿಕ ಹಾಗೂ ಅಭಿವೃದ್ದಿ ಹಿನ್ನೆಲೆಯಲ್ಲಿ ವ್ಯತ್ಯಾಸಗಳಿರುವುದರಿಂದ ಈ ವರ್ಗಗಳ ಸ್ವರೂಪ ಕೂಡ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಒಂದು ಸ್ಥಳದಲ್ಲಿ ದೇಸಿ ಎಲೈಟ್‌ಗಳ ಕೆಲವು ಗುಂಪುಗಳು ಶೋಷಣೆಗೆ ಒಳಪಟ್ಟರೆ, ಇನ್ನೊಂದು ಸ್ಥಳದಲ್ಲಿ ದೇಸಿ ಎಲೈಟ್‌ಗಳೇ ಶೋಷಕರಾಗಿರುವುದು ಕಂಡುಬರುತ್ತದೆ. ಇವುಗಳ ಸ್ವರೂಪವು ವೈರುಧ್ಯವಾಗಿರುವುದನ್ನು ಮತ್ತು ದ್ವಂದ್ವ ಸ್ವರೂಪವನ್ನು ಹೊಂದಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಈ ಎರಡೂ ಬಗೆಯ ಎಲಿಟಿಸಂಗಳು ಭಾರತದ ವಸಾಹತುಕಾಲದ ಬಹಳ ಮುಖ್ಯವಾದ ಸೈದ್ಧಾಂತಿಕ ಉತ್ಪನ್ನವಾಗಿದೆ. ವಸಾಹತೋತ್ತರ ಕಾಲದಲ್ಲಿ ಬ್ರಿಟನ್ ಮತ್ತು ಭಾರತದಲ್ಲಿ ಕೂಡ ಇವು “ನವವಸಾಹತುಶಾಹಿ” ಮತ್ತು “ನವರಾಷ್ಟ್ರೀಯವಾದಿ” ವಾಙ್ಮಯಗಳಾಗಿ ಮುಂದುವರಿದವು. ವಸಾಹತುಶಾಹಿ ಅಥವಾ ನವವಸಾಹತುಶಾಹಿ ಬರವಣಿಗೆ ಪರಂಪರೆಗಳು ಎಲಿಟಿಸ್ಟ್ ಬರವಣಿಗೆ ಕ್ರಮವನ್ನು ಉದ್ದೀಪಿಸಿದ ಬ್ರಿಟಿಶ್ ಬರಹಗಾರ ರನ್ನು ಮತ್ತು ಅವರ ಶೈಕ್ಷಣಿಕ ಸಂಸ್ಥೆಗಳನ್ನು ಭಾರತ ಹಾಗೂ ಉಳಿದ ದೇಶಗಳ ಬಹುತೇಕರು ಅನುಸರಿಸಿದರು.

೨. ಭಾರತ ದೇಶವನ್ನು ಕಟ್ಟುವಲ್ಲಿ ಮತ್ತು ಭಾರತೀಯ ರಾಷ್ಟ್ರೀಯ ಸಂವೇದನೆಯ ಬೆಳವಣಿಗೆಯಲ್ಲಿ ವಸಾಹತುಶಾಹಿ ಹಾಗೂ ಬೂರ್ಜ್ವಾ ಎಲಿಟಿಸಂಗಳಿಂದ ರೂಪಿಸಲ್ಪಟ್ಟ ಪೂರ್ವಗ್ರಹಗಳ ಪಾತ್ರ ಮಹತ್ವದ್ದಾಗಿದೆ. ಒಂದು ರೀತಿಯಲ್ಲಿ ಈ ಬಗೆಯ ರಾಷ್ಟ್ರೀಯತೆಯ ಪ್ರಕ್ರಿಯೆಯು ಮೂಲಭೂತವಾಗಿ “ಎಲೈಟ್‌ಗಳ” ಸಾಧನೆಗಳು ಎಂದು ಬಿಂಬಿಸಲ್ಪಟ್ಟವು. ವಸಾಹತುಶಾಹಿ ಮತ್ತು ನವವಸಾಹತುಶಾಹಿ ಚರಿತ್ರೆ ಬರವಣಿಗೆಗಳು ಬ್ರಿಟಿಶ್ ಆಳರಸರ, ಆಡಳಿತಗಾರರ, ಬ್ರಿಟಿಶ್ ನಿಯಮಗಳ, ಸಂಸ್ಥೆಗಳ ಮತ್ತು ಸಂಸ್ಕೃತಿಗಳ ಸಾಧನೆಗಳನ್ನು ಈ ಮೂಲಕ ಬಿಂಬಿಸಿದವು. ಅದೇ ರೀತಿಯಲ್ಲಿ ರಾಷ್ಟ್ರೀಯವಾದಿ ಮತ್ತು ನವರಾಷ್ಟ್ರೀಯವಾದಿ ಬರವಣಿಗೆಗಳು ಭಾರತದ ಉಚ್ಚವರ್ಗದ ವ್ಯಕ್ತಿತ್ವಗಳನ್ನು, ಸಂಸ್ಥೆಗಳನ್ನು, ಕಾರ್ಯ ಚಟುವಟಿಕೆಗಳನ್ನು ಮತ್ತು ಬೌದ್ದಿಕತೆಯನ್ನು ಭಾರತದ ಚರಿತ್ರೆಯೆಂದು ಮತ್ತು ಅದನ್ನೇ ಭಾರತದ ರಾಷ್ಟ್ರೀಯತೆ ಎಂದು ಬಿಂಬಿಸಿದವು.

೩. ವಸಾಹತುಶಾಹಿ ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿ ಎಲಿಟಿಸಂಗಳು ಭಾರತೀಯ  ರಾಷ್ಟ್ರೀಯತೆಯನ್ನು ಮುಖ್ಯವಾಗಿ ಉತ್ತೇಜಿಸುವ ಮತ್ತು ಪ್ರತಿಕ್ರಿಯಿಸುವ ಪ್ರಕ್ರಿಯೆಗಳಿಗೆ ಮೀಸಲಿರಿಸಿವೆ. ವಸಾಹತುಶಾಹಿತ್ವವು ಕಟ್ಟಿಕೊಟ್ಟ ಸಂಸ್ಥೆಗಳು, ಅವಕಾಶಗಳು, ಸಂಪನ್ಮೂಲಗಳು ಇತ್ಯಾದಿಗಳಿಗೆ ಸ್ಪಂದಿಸಿದ ಭಾರತೀಯ ‘ಎಲೈಟ್’ಗಳ ಚಟುವಟಿಕೆ ಗಳನ್ನು ರಾಷ್ಟ್ರೀಯತೆ ಎಂದು ಬಿಂಬಿಸಲಾಯಿತು. ಭಾರತೀಯ ರಾಷ್ಟ್ರೀಯತೆಯನ್ನು “ಕಲಿಯುವ ಪ್ರಕ್ರಿಯೆ”ಯನ್ನಾಗಿ ಮಾಡಿಕೊಂಡ ಸ್ಥಳೀಯ ಎಲೈಟ್‌ಗಳು ವಸಾಹತುಶಾಹಿಗಳು ಭಾರತವನ್ನು ಆಳಲು ಹುಟ್ಟುಹಾಕಿದ ಆಡಳಿತ ಕ್ರಮಗಳಿಗೆ  ಪ್ರತಿಸ್ಪಂದಿಸುತ್ತ ಅಥವಾ ಪ್ರತಿಕ್ರಿಯಿಸುತ್ತ ಇದ್ದ ಪ್ರಕ್ರಿಯೆಯನ್ನು ಗಮನಿಸಬಹುದು. ಅಂತಿಮವಾಗಿ, ಆಡಳಿತಾರೂಢ ಶಕ್ತಿಗಳ ಮತ್ತು ಸ್ಥಳೀಯ ಎಲೈಟ್‌ಗಳ ನಡುವೆ ನಡೆದ ಸಹಭಾಗಿತ್ವ ಹಾಗೂ ಸ್ಪರ್ಧೆಗಳು ಭಾರತೀಯ ರಾಷ್ಟ್ರೀಯತ್ವವನ್ನು ಹುಟ್ಟುಹಾಕಿದವು ಎಂದು ಬಿಂಬಿಸಿರುವುದನ್ನು ಗಮನಿಸಬಹುದು.

೪. ಆದರ್ಶಮಯ ಕಾರ್ಯ ಚಟುವಟಿಕೆಯ ಭಾಗವೆಂದು ಭಾರತೀಯ ರಾಷ್ಟ್ರೀಯತೆಯನ್ನು ನಿರ್ವಚಿಸಿದ ಎಲಿಟಿಸ್ಟ್ ಇತಿಹಾಸ ಬರವಣಿಗೆ ಕ್ರಮವು ಸ್ಥಳೀಯ ಎಲೈಟ್‌ಗಳು ಜನರನ್ನು ದಾಸ್ಯದಿಂದ ಸ್ವತಂತ್ರದೆಡೆಗೆ ಕೊಂಡೊಯ್ಯುವ ಸಾಧನವೆಂದು ರಾಷ್ಟ್ರೀಯತೆಯನ್ನು ಬಿಂಬಿಸಿರುವ ಪ್ರಯತ್ನಗಳನ್ನು ನೋಡಬಹುದು. ಅನೇಕ ನಾಯಕರು ಅಥವಾ ಉಚ್ಚ ವರ್ಗದ ಸಂಸ್ಥೆಗಳು ಅಥವಾ ಸಂಘಟನೆಗಳು ಈ ದಿಸೆಯಲ್ಲಿ ಪ್ರಧಾನ ಪಾತ್ರಗಳನ್ನು ವಹಿಸಿದವು. ವಸಾಹತು ವಿರೋಧಿ ನೆಲೆಯ ಸ್ವರೂಪದ ಹಿನ್ನೆಲೆಯಲ್ಲಿ ಸ್ಥಳೀಯ ಎಲೈಟ್‌ಗಳು/ ಉಚ್ಚ ವರ್ಗಗಳು ಭಾರತೀಯ ರಾಷ್ಟ್ರೀಯ ಹೋರಾಟಗಳ ವಕ್ತಾರ ರಾದರು. ಈ ಸಂದರ್ಭಗಳಲ್ಲೆಲ್ಲ ಸ್ಥಳೀಯ ಎಲೈಟ್‌ಗಳು ಬ್ರಿಟಿಶ್ ಆಡಳಿತಶಾಹಿ ಯೊಂದಿಗೆ ಇಟ್ಟುಕೊಂಡಿದ್ದ ಸಹಭಾಗಿತ್ವದ ಅಂಶಗಳನ್ನು ಮರೆಮಾಚಲಾಯಿತು. ಸ್ಥಳೀಯ ಉಚ್ಚವರ್ಗಗಳ ಶೋಷಕರ ಮತ್ತು ದಮನಕರ ಪರ ವಿಚಾರಧಾರೆಗಳನ್ನು ಇವು ಜನವರ್ಗದ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತವೆ ಎಂಬ ರೀತಿಯಲ್ಲಿ ಭಾರತೀಯ ರಾಷ್ಟ್ರೀಯ ಹೋರಾಟವು ಬಿಂಬಿಸಿವೆ. ಈ ರೀತಿಯಲ್ಲಿ ಭಾರತೀಯ ಎಲೈಟ್‌ಗಳಿಂದ ರೂಪಿತವಾದ ಈ ಬಗೆಯ ಚಟುವಟಿಕೆಗಳನ್ನೇ ಭಾರತ ರಾಷ್ಟ್ರೀಯತೆಯ ಚರಿತ್ರೆ ಎಂದು ಕರೆಯಲಾಯಿತು.

೫. ಎಲಿಟಿಸ್ಟ್ ಚರಿತ್ರೆ ಬರವಣಿಗೆ ಕ್ರಮಗಳಿಂದ ಕೂಡ ಅನೇಕ ಉಪಯೋಗಗಳಾಗಿವೆ. ವಸಾಹತು ರಾಜ್ಯದ ಬುನಾದಿಯ ಬಗ್ಗೆ, ಕೆಲವು ನಿರ್ದಿಷ್ಟ ಐತಿಹಾಸಿಕ ಸನ್ನಿವೇಶಗಳಲ್ಲಿ ಅದು ಹೇಗೆ ತನ್ನ ವಿವಿಧ ಘಟಕಗಳ ಮೂಲಕ ಕೆಲಸ ಮಾಡುತ್ತಿದ್ದ ವಿವರಗಳ ಬಗ್ಗೆ, ಉಚ್ಚವರ್ಗಗಳ ಸಂಸ್ಥೆಗಳಲ್ಲಿದ್ದ ಬ್ರಿಟಿಶ್ ಮತ್ತು ಭಾರತೀಯ ವ್ಯಕ್ತಿತ್ವಗಳ ಬಗ್ಗೆ ಮತ್ತು ಎಲೈಟ್ ಸಂಘಟನೆಗಳ ಬಗ್ಗೆ ಎಲಿಟಿಸ್ಟ್ ಚರಿತ್ರೆ ಬರವಣಿಗೆಯಲ್ಲಿ ಸಾಕಷ್ಟು ವಿವರಗಳು ದೊರಕುತ್ತವೆ.

೬. ಇಷ್ಟೆಲ್ಲ ಆದರೂ ಈ ಬಗೆಯ ಚರಿತ್ರೆ ಬರವಣಿಗೆಗಳು ಭಾರತದ ರಾಷ್ಟ್ರೀಯತೆಯನ್ನು ವಿವರಿಸಲು ಶಕ್ಯವಾಗುವುದಿಲ್ಲ. ಈ ಬಗೆಯ ಚರಿತ್ರೆ ಬರವಣಿಗೆಗಳು ಜನ ಹೋರಾಟಗಳ ಅಭಿವ್ಯಕ್ತತೆಯನ್ನು ದಾಖಲಿಸಲು ವಿಫಲವಾಗಿವೆ. ಈ ಬಗೆಯ ಜನರ-ಜನಸಾಮಾನ್ಯರ ಅಭಿವ್ಯಕ್ತಿಯನ್ನು ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು “ಕಾನೂನು ಮತ್ತು ಸುವ್ಯವಸ್ಥೆಯ” ಭಾಗವಾಗಿ ನೋಡಿ ನೆಗೆಟೀವ್ ಅಪ್ರೋಚ್ ಮಾಡಿದ್ದೇ ಹೆಚ್ಚು. ಕೆಲವೊಮ್ಮೆ ಇವುಗಳನ್ನು ಸಕಾರಾತ್ಮಕವಾಗಿ ವಿಮರ್ಶಿಸಿದರೂ, ಇವುಗಳನ್ನು ಉಚ್ಚವರ್ಗಗಳ ನಾಯಕರ ಚರಿಷ್ಮಾಗೆ ಪ್ರಭಾವಕ್ಕೊಳಗಾದ ಅಥವಾ ಪ್ರತಿಕ್ರಿಯೆ ನೀಡಿದ ಗುಂಪುಗಳು ಎಂದು ವಿವರಿಸಲು ಮಾತ್ರ ಬಳಸಿಕೊಳ್ಳಲಾಯಿತು. ಹೀಗಾಗಿ ಸಹಸ್ರಾರು, ಲಕ್ಷಾಂತರ ಜನರು ಅನೇಕ ಬಾರಿ ಬೇರೆ ಬೇರೆ ಕಾರಣಗಳಿಗಾಗಿ ಪ್ರತಿಭಟನೆ ಮಾಡಿದ ಅಂಶಗಳನ್ನು ಜನರ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸದೆ ಉಚ್ಚವರ್ಗದ ಎಲೈಟ್ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಿರ್ವಚಿಸಲಾಯಿತು. ೧೯೧೯ರಲ್ಲಿ ರೌಲತ್ ಕಾಯಿದೆ ವಿರೋಧಿ ಹೋರಾಟದಲ್ಲಿ ಮತ್ತು ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ ಹೋರಾಟವು ಸ್ಪಾಂಟೇನಿಯಸ್ ಆಗಿ, ಯಾವುದೇ ಎಲೈಟ್ ನಾಯಕರಿಲ್ಲದೆ ಹೊರಹೊಮ್ಮಿದ ವಿಚಾರಗಳನ್ನು ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು ದಾಖಲು ಮಾಡಲು ಸೋತಿವೆ. ಈ ಬಗೆಯ ಏಕಪಕ್ಷೀಯ ಚರಿತ್ರೆ ಬರವಣಿಗೆಗಳು ಎಲಿಟಿಸ್ಟ್ ರಾಜಕೀಯದ ಕೆಳಗೇ ನಡೆದ ಚೌರಿಚೌರಾ ಘಟನೆಗಳ ಅಥವಾ ರಾಯಲ್ ಇಂಡಿಯನ್ ನೇವಿಯು ರೂಪಿಸಿದ ದಂಗೆಗಳನ್ನು ಅಥವಾ ಆ ಬಗೆಯ ಪ್ರತಿರೋಧಕ್ಕೆ ಸಂಬಂಧಿಸಿದ ಘಟನೆಗಳನ್ನು ವಿವರಿಸಲು ವಿಫಲವಾಗಿವೆ.

೭. ಎಲಿಟಿಸ್ಟ್ ಚರಿತ್ರೆ ಬರವಣಿಗೆ ಕ್ರಮವು ಬಹಳ ಮಟ್ಟಿಗೆ ನೆಚ್ಚಿಕೊಂಡಿರುವ ವರ್ಗಾಧಾರಿತ ನೋಟವೇ ಅದರ ಆ ಕ್ರಮದ ವಿಫಲತೆಗೆ ಕಾರಣವಾಯಿತು. ಬ್ರಿಟಿಶರು ಭಾರತದ ಆಡಳಿತ ವ್ಯವಸ್ಥೆಗೆ ಅನುಕೂಲವಾಗಲೆಂದು ರೂಪಿಸಿದ ಕಾನೂನುಗಳು, ನಿಯಮಗಳು ಮತ್ತು ಸಂಸ್ಥೆಗಳು ಮತ್ತು ಅದಕ್ಕೆ ಸ್ಪಂದಿಸಿದ ಸ್ಥಳೀಯವಾದ ಪ್ರಬಲ ಸಮಾಜಗಳ ಚಟುವಟಿಕೆಗಳನ್ನೇ ಭಾರತದ ರಾಜಕೀಯ ಸ್ಥಿತ್ಯಂತರಗಳನ್ನು ಅಳೆಯುವ ಮಾಪನವನ್ನಾಗಿ ಎಲಿಟಿಸ್ಟ್ ಚರಿತ್ರೆ ಬರವಣಿಗೆ ರೂಪಿಸಿರುವುದು ಚರಿತ್ರೆ ಬರವಣಿಗೆ ಕ್ರಮದ ಮುಖ್ಯ ದೋಷವಾಗಿದೆ. ಬ್ರಿಟಿಶ್ ಆಡಳಿತಗಾರರಿಗೆ ಮತ್ತು ಅವರು ರೂಪಿಸಿರುವ ವ್ಯವಸ್ಥೆಗೆ ಪ್ರತಿಕ್ರಿಯಿಸಿದ ಸ್ಥಳೀಯ ಎಲೈಟ್‌ಗಳ ಪರಸ್ಪರ ವ್ಯವಹಾರಗಳನ್ನು ಮತ್ತು ಸಂಬಂಧಗಳನ್ನು ಭಾರತದ ರಾಷ್ಟ್ರೀಯತೆಯ ಮಜಲೆಂದು ಬಿಂಬಿಸಿರುವುದನ್ನು ಗಮನಿಸಬಹುದು.

೮. “ಜನತೆಯ ರಾಜಕೀಯ” (ಪಾಲಿಟಿಕ್ಸ್ ಆಫ್ ದಿ ಪೀಪಲ್) ಎನ್ನುವ ವಿಚಾರದ ಮೇಲೆ ಎಲಿಟಿಸ್ಟ್ ಚರಿತ್ರೆ ಬರವಣಿಗೆ ಕ್ರಮವು ರೂಪಿಸಿದ ಅಚಾರಿತ್ರಿಕ ಇತಿಹಾಸ ಬರವಣಿಗೆ ಕ್ರಮವನ್ನು ಇಲ್ಲಿ ಗಮನಿಸಬಹುದಾಗಿದೆ. ಭಾರತದ ಎಲೈಟ್ ಅಥವಾ ಸ್ಥಳೀಯ ಪ್ರಬಲ ಉಚ್ಚ ಸಮುದಾಯಗಳು ರೂಪಿಸಿದ ಅಥವಾ ವಸಾಹತುಶಾಹಿಗಳು ರೂಪಿಸಿದ ವ್ಯವಸ್ಥೆಯ ರಾಜಕಾರಣಕ್ಕೆ ಸಮಾನಾಂತರವಾದ ರಾಜಕೀಯವನ್ನು ಪಟ್ಟಣ ಮತ್ತು ಗ್ರಾಮಗಳಲ್ಲಿನ ಸಬಾಲ್ಟರ್ನ್ ವರ್ಗಗಳು, ಮೂಲೆಗೊತ್ತಲ್ಪಟ್ಟ ವರ್ಗಗಳ ಜನಸಾಮಾನ್ಯರು ವಸಾಹತು ಕಾಲದುದ್ದಕ್ಕೂ ಮಾಡಿರುವುದನ್ನು ನಾವು ಗಮನಿಸಬಹುದು. ಈ ಬಗೆಯ ಸಮಾನಾಂತರ ರಾಜಕೀಯದ ಕೇಂದ್ರಬಿಂದುವೇ ಜನರು. “ಜನರೇ” ಕೇಂದ್ರಬಿಂದುವಾಗಿರುವ ಈ ಸ್ವಾಯತ್ತ ವಲಯ(ಆಟಾನಮಸ್ ಡೊಮೈನ್) ಎಲೈಟ್ ರಾಜಕೀಯದ ಉತ್ಪನ್ನವೂ ಅಲ್ಲ ಅಥವಾ ಆ ರಾಜಕೀಯದ ಪರಾವಲಂಬಿಯೂ ಆಗಿಲ್ಲ. ಸಾಂಪ್ರದಾಯಿಕ ಮೂಲಗಳನ್ನು ಹೊಂದಿದ ಸಬಾಲ್ಟರ್ನ್ ವರ್ಗಗಳ ಚಲನಶೀಲತೆಯನ್ನು ವಸಾಹತುಪೂರ್ವ ಕಾಲಘಟ್ಟದಿಂದ ಗುರುತಿಸಬಹುದು. ಹಾಗೆಂದ ಮಾತ್ರಕ್ಕೆ ಇದು ಯಾವುದೋ ಬಗೆಯ ಅರಾಜಕತೆಯ ಅಭಿವ್ಯಕ್ತಿಯೂ ಅಲ್ಲ. ವಸಾಹತುಶಾಹಿಯ ಆಳ್ವಿಕೆಯ ನಂತರ ಅಸ್ತಿತ್ವ ಕಳೆದುಕೊಂಡ ಸಾಂಪ್ರದಾಯಿಕ ಎಲೈಟ್‌ಗಳಿಗಿಂತ ತಮ್ಮ ಚಹರೆಯನ್ನು ವಸಾಹತುಕಾಲದಲ್ಲಿಯೂ ಭದ್ರವಾಗಿಟ್ಟು ಕೊಂಡ ಜನವರ್ಗ ಇದು. ಸಾಂಪ್ರದಾಯಿಕ ಎಲಿಟಿಸ್ಟರು ವಸಾಹತುಕಾಲದ ವ್ಯವಸ್ಥೆಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯನ್ನು ಭಾರತದ ಈ ಜನವರ್ಗವು ಮಾಡಿಕೊಳ್ಳದೆ ನಿರಂತರವಾಗಿ ತನ್ನ ಅಸ್ತಿತ್ವವನ್ನು ಈ ವರ್ಗವು ಕಾಯ್ದುಕೊಂಡಿತು.

೯. “ಜನವರ್ಗದ” ಮುಖ್ಯ ಗುಣಲಕ್ಷಣವೆಂದರೆ ಜನ ಸಮೂಹ (ಮೊಬಿಲೈಸೇಶನ್). ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು ಇದರ ಬಗ್ಗೆ ಹೇಳಿದ್ದು ಕಡಿಮೆ. ಎಲೈಟ್ ರಾಜಕೀಯದ ಭಾಗವಾಗಿ ಕೂಡ ಜನವರ್ಗದ ಭಾಗವಹಿಸುವಿಕೆ ಇದ್ದರೂ ಅದು ಬಹುತೇಕವಾಗಿ ವಸಾಹತುಶಾಹಿ ಕಟ್ಟಿಕೊಟ್ಟ ಭೂಮಿಕೆಯಡಿಯಲ್ಲಿ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಬ್ರಿಟಿಶ್ ಪಾರ್ಲಿಮೆಂಟರಿ ವ್ಯವಸ್ಥೆಯು ರೂಪಿಸಿದ ಅಂಶಗಳಲ್ಲಿ ಕಂಡುಕೊಂಡ ಜನಸಮೂಹದ ಅಂಶವಿದು. ಸಬಾಲ್ಟರ್ನ್ ಅಥವಾ ಕೆಳವರ್ಗದ ಸಮುದಾಯದ ಜನಸಮೂಹವು ಬಹುತೇಕವಾಗಿ ರಕ್ತಸಂಬಂಧಿ ಮೂಲದವು. ಕೆಲವೊಮ್ಮೆ ಅದು ನಿರ್ದಿಷ್ಟ ಪ್ರದೇಶದ ಅಥವಾ ವರ್ಗ ಸಂಬಂಧಿ ಸಂಘಟನೆಗಳ ಮೂಲವನ್ನೂ ಹೊಂದಿರುತ್ತಿದ್ದವು. ಕಾನೂನಿನ ಪರಿಧಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ಸಂವಿಧಾನದ ಮಿತಿಯಲ್ಲಿರುವ ಎಲೈಟ್ ರಾಜಕೀಯದ ಜನ ಹೋರಾಟದ ರಾಜಕೀಯವನ್ನು ನೋಡಬಹುದಾಗಿದೆ. ಅಲ್ಲಿಯೇ ಅದರ ರಾಜಕೀಯ ಮಿತಿಯನ್ನೂ ಗಮನಿಸಬಹುದಾಗಿದೆ. ಆದರೆ ಸಬಾಲ್ಟರ್ನ್ ಜನಸಮುದಾಯದ ಅಭಿವ್ಯಕ್ತಿಯು ಬಹುತೇಕವಾಗಿ ಹಿಂಸೆಯೇ ಆಗಿರುತ್ತದೆ. ಎಲೈಟ್ ರಾಜಕಾರಣವು ಬಹಳ ಬುದ್ದಿಪೂರ್ವಕವಾಗಿದ್ದು ಒಂದು ರೀತಿಯಲ್ಲಿ ನಿಯಂತ್ರಣದಲ್ಲಿದ್ದರೆ ಸಬಾಲ್ಟರ್ನ್ ರಾಜಕಾರಣವು ಸ್ಪಾಂಟೇನಿಯಸ್ ಆಗಿರುವುದು. ವಸಾಹತುಕಾಲದಲ್ಲಿ ನಾವು ಕಂಡ ರೈತರ ದಂಗೆಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದಾಗಿದೆ. ನಗರ ಪ್ರದೇಶದ ದುಡಿಯುವ ಜನ ಸಮುದಾಯಗಳನ್ನು ಮತ್ತು ಸಣ್ಣಸಣ್ಣ ವೃತ್ತಿಪರರನ್ನು (ಪೆಟಿ ಬೂರ್ಜ್ವಾಸಿ) ಕೂಡ ಈ ಸಂದರ್ಭದಲ್ಲಿ ಹೆಸರಿಸಬಹುದು.

೧೦. ಸಬಾಲ್ಟರ್ನ್ ವರ್ಗಗಳು ಎಲೈಟ್‌ಗಳಿಗೆ ಪ್ರತಿರೋಧವನ್ನು ನೀಡಿರುವುದು ಸಬಾಲ್ಟರ್ನ್‌ಗಳ ಲಕ್ಷಣವಾಗಿದೆ.

೧೧. ಉತ್ಪಾದನೆಯ ಸಂದರ್ಭದಲ್ಲಿ ಶೋಷಣೆಗೆ ಒಳಪಟ್ಟ ಸಂದರ್ಭಗಳಲ್ಲಿ ಸಬಾಲ್ಟರ್ನ್ ವರ್ಗಗಳು ಸಿಡಿದಿದ್ದನ್ನು ನಾವು ಗಮನಿಸಬಹುದು. ಕಾರ್ಮಿಕರು ಮತ್ತು ರೈತರಿಂದ ಆರಂಭಗೊಂಡು ವರ್ಗ ಪ್ರದೇಶದ ಅಸಂಘಟಿತ ಕಾರ್ಮಿಕರು, ಬಡವರು, ಕೆಳವರ್ಗಗಳ ಜನರು ಅನುಭವಿಸಿದ ಶೋಷಣೆಯ ಸಂದರ್ಭದಲ್ಲಿ ಕೂಡ ಸಬಾಲ್ಟರ್ನ್ ಪ್ರತಿಭಟನೆಗಳು ಹುಟ್ಟಿಕೊಳ್ಳುತ್ತವೆ. ಪೆಟಿ ಬೂರ್ಜ್ವಾಸಿಯ ಕೆಳವರ್ಗಗಳ ಪ್ರತಿಭಟನೆಗಳ ಮೂಲ ಗಳನ್ನೂ ಇಲ್ಲಿ ನೋಡಬಹುದು.

೧೨. ಸಬಾಲ್ಟರ್ನ್ ವರ್ಗಗಳ ಮತ್ತು ಎಲೈಟ್ ವರ್ಗಗಳ ನಡುವಿರುವ ರಾಜಕೀಯದ ಎಲ್ಲೆಗಳ ನಡುವೆ ಆಗಾಗೆ ವ್ಯತ್ಯಾಸಗಳಾಗುವುದುಂಟು. ಕೆಲವು ಸಂದರ್ಭಗಳಲ್ಲಿ ಈ ಎರಡು ಭಿನ್ನ ವರ್ಗಗಳು ಒಟ್ಟಾಗಿರುವ ಸಂದರ್ಭಗಳನ್ನೂ ಗುರುತಿಸಬಹುದು. ಈ ವರ್ಗಗಳ ನಡುವೆ ವೈರುಧ್ಯಗಳಿರುವುದನ್ನೂ ನಾವು ಕಾಣಬಹುದು.

೧೩. ಹೋರಾಟಗಳಲ್ಲಿ ವೈರುಧ್ಯಗಳಿದ್ದರೂ ಅನೇಕ ಸಂದರ್ಭಗಳಲ್ಲಿ ಈ ಎರಡು ವರ್ಗಗಳು ಒಟ್ಟಾಗಿದ್ದು ಹಾಗೂ ಒಗ್ಗಟ್ಟಾಗಿ ಹೋರಾಡಿದ್ದೂ ಉಂಟು. ಸ್ಥಳೀಯ ಉಚ್ಚ ವರ್ಗಗಳು/ಎಲೈಟ್‌ಗಳು ಬಹಳ ಮುಖ್ಯವಾಗಿ ಬೂರ್ಜ್ವಾಸಿಗಳು ಇಂತಹ ಮೈತ್ರಿಗಳ ಉಗಮಕ್ಕೆ ಕಾರಣಕರ್ತರಾಗಿದ್ದಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳ ಸಂದರ್ಭದಲ್ಲೆಲ್ಲ ಈ ಬಗೆಯ ಮೈತ್ರಿಗಳು ಹೋರಾಟದ ಕಾರ್ಯಚಟುವಟಿಕೆಗಳಿಗೆ ಸಹಾಯಕವಾದವು. ಆದರೆ, ಬಹುತೇಕ ಸಂದರ್ಭಗಳಲ್ಲಿ ಈ ಎರಡೂ ವರ್ಗಗಳು ಒಟ್ಟಿಗೆ ರೂಪಿಸಿದ ಹೋರಾಟಗಳು ಸಾಮ್ರಾಜ್ಯವಿರೋಧಿ ಆಶಯವನ್ನು ಬಿಟ್ಟುಕೊಟ್ಟಿರುವುದನ್ನು ಗಮನಿಸಬಹುದು. ಈ ಕಾರಣಕ್ಕಾಗಿಯೇ ಮೈತ್ರಿ ಹೋರಾಟಗಳು ವಿಫಲವಾಗಿರುವುದು. ಈ ಮೈತ್ರಿ ಹೋರಾಟಗಳು ಸ್ಥಳೀಯ ಉಚ್ಚ ವರ್ಗ/ಎಲೈಟ್‌ಗಳ ನಿರ್ದೇಶನದಂತೆ ನಡೆದದ್ದರಿಂದ ಸಹಜವಾಗಿಯೇ ಅವು “ಸಂವಿಧಾನಾತ್ಮಕವಾಗಿ, ನ್ಯಾಯಯುತವಾಗಿ” ವಸಾಹತುಶಾಹಿ ಹಿತಾಸಕ್ತಿಗೆ ಧಕ್ಕೆ ಯಾಗದ ರೀತಿಯಲ್ಲಿ ಹೋರಾಟಗಳನ್ನು ಹಮ್ಮಿಕೊಂಡವು. ಪರಿಣಾಮವಾಗಿ ಈ ಹೋರಾಟಗಳು ನೆಲಕಚ್ಚಿದವು. ಇಲ್ಲವೇ ವಸಾಹತುಶಾಹಿ ಶಕ್ತಿಗಳಿಂದ ದಮನ ಕ್ಕೊಳಗಾಗಿ ಅವಮಾನವನ್ನು ಅನುಭವಿಸಿದವು. ಅಂತಿಮವಾಗಿ ಇವು ಉಚ್ಚ ವರ್ಗಗಳ ಎಲೈಟ್‌ಗಳ ಆಶಯವನ್ನು ಕಾಪಾಡುವ ನಿಟ್ಟಿನಲ್ಲೇ ಬಳಸಲ್ಪಟ್ಟವು.

೧೪. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಸಬಾಲ್ಟರ್ನ್ ರಾಜಕೀಯಕ್ಕೆ ರಾಷ್ಟ್ರ ವಿಮುಕ್ತಿಗಾಗಿ ಒಂದು ಪ್ರಬಲವಾದ ಪೂರ್ಣ ಪ್ರಮಾಣದ ರಾಷ್ಟ್ರೀಯ ಚಳವಳಿಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ದುಡಿಯುವ ವರ್ಗಗಳು ಈ ಹಿನ್ನೆಲೆಯಲ್ಲಿ ಸಾಕಷ್ಟು ಪಕ್ವತೆಯನ್ನು ಹೊಂದಿಲ್ಲದಿರುವುದು ಮತ್ತು ಬಹಳ ಮುಖ್ಯವಾಗಿ ರೈತಾಪಿ ವರ್ಗಗಳ ಜೊತೆಗೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳದಿರುವುದು ಸಬಾಲ್ಟರ್ನ್ ರಾಜಕೀಯದ ಹಿನ್ನೆಡೆಗೆ ಕಾರಣಗಳಾಗಿವೆ. ಬೂರ್ಜ್ವಾಗಳು ಕಂಡ ವೈಫಲ್ಯತೆಯ ಲಾಭವನ್ನು ಈ ಕಾರಣ ಗಳಿಂದಾಗಿಯೇ ಸಬಾಲ್ಟರ್ನ್ ವರ್ಗಗಳು ಬಳಸಿಕೊಳ್ಳಲಾಗಲಿಲ್ಲ. ಬಹಳ ಪ್ರಬಲವಾದ ಮತ್ತು ವ್ಯಾಪ್ತಿಯುಳ್ಳ ವಸಾಹತುವಿರೋಧಿ ಸಂವೇದನೆಗೆ ಸಂಬಂಧಿಸಿದಂತೆ ಬಹಳ ಶ್ರೀಮಂತ ಹಿನ್ನೆಲೆಯ ಇಂತಹ ರೈತ ಪ್ರತಿಭಟನೆಗಳು ಸೂಕ್ತ ನಾಯಕತ್ವ ಇಲ್ಲದೆ ನೇಪಥ್ಯಕ್ಕೆ ಸರಿದವು. ಸ್ಥಳೀಯ ಹೋರಾಟಗಳಾಗಿಯೇ ಉಳಿದ ಈ ಪ್ರತಿಭಟನೆಗಳು ಸಮರ್ಥ ವಸಾಹತುವಿರೋಧಿ ಹೋರಾಟವಾಗಿ ಸರ್ವವ್ಯಾಪಿಯಾಗಲಿಲ್ಲ. ದುಡಿಯುವ ವರ್ಗಗಳ, ರೈತರ ಮತ್ತು ನಗರ ಕೇಂದ್ರಗಳ ಪೆಟಿ ಬೂರ್ಜ್ವಾಗಳ ಹೋರಾಟಗಳು ರಾಷ್ಟ್ರ ವಿವೇಚನೆ ಹೋರಾಟದ ಪಾಡಿಗೆ ಹೋಗದೆ ಕ್ರಾಂತಿಕಾರಿ ನಾಯಕತ್ವವನ್ನು ಹೊಂದದೆ ಭಿನ್ನಭಿನ್ನವಾದ ಮಾರ್ಗಗಳನ್ನು ತುಳಿದು ಬಹುತೇಕ ಸ್ಥಳೀಯವಾಗಿ ಉಳಿದುಬಿಟ್ಟವು.

೧೫. ಉದ್ದೇಶಿಸಲಾದ ಸಬಾಲ್ಟರ್ನ್ ಅಧ್ಯಯನವು ತನ್ನದೇ ಆದ ದೇಶವನ್ನೂ ಹೊಂದಲು ಸಾಧ್ಯವಾಗದ ಚಾರಿತ್ರಿಕ ವೈಫಲ್ಯದ ಬಗ್ಗೆ ಸಂಶೋಧನೆಯನ್ನು ಮಾಡುವ ಇರಾದೆಯನ್ನು ಹೊಂದಿದೆ. ಬೂರ್ಜ್ವಾ ಮತ್ತು ದುಡಿಯುವ ವರ್ಗಗಳು ನಿರಂತರತೆ ಮತ್ತು ಸ್ಪಷ್ಟತೆಯನ್ನು ಕಾಯ್ದುಕೊಳ್ಳದಿರುವುದರಿಂದ ವಸಾಹತುವಿರೋಧಿ ಹೋರಾಟದಲ್ಲಿ ವಿಜಯ ಸಾಧಿಸಲಾಗಲಿಲ್ಲ. ಹಾಗೆಯೇ ೧೯ನೇ ಶತಮಾನದ ಕ್ಲಾಸಿಕ್ ಸ್ವರೂಪದ ಬೂರ್ಜ್ವಾ ಹೆಜಿಮನಿ/ ನಾಯಕತ್ವದ ಬೂರ್ಜ್ವಾ ಪ್ರಜಾಪ್ರಭುತ್ವೀಯ ಕ್ರಾಂತಿಗಳಾಗಲಿ ಅಥವಾ ದುಡಿಯುವ ವರ್ಗಗಳು ಮತ್ತು ರೈತರಿಂದ ರೂಪಿತವಾಗಬಹುದಾಗಿದ್ದ “ಹೊಸ ಪ್ರಜಾಪ್ರಭುತ್ವದ” ಸ್ಥಾಪನೆಯಾಗಲಿ ಸಾಧ್ಯವಾಗಲಿಲ್ಲ. ವಸಾಹತು ಭಾರತದ ಚರಿತ್ರೆ ಬರವಣಿಗೆಯ ಕೇಂದ್ರಬಿಂದುವಾದ ಈ ಬಗೆಯ ವೈಫಲ್ಯಗಳ ಸ್ವರೂಪದ ಕುರಿತಾದ ಅಧ್ಯಯನವನ್ನು ಸಬಾಲ್ಟರ್ನ್ ಅಧ್ಯಯನವು ಕೈಗೊಳ್ಳುತ್ತದೆ. ಎಲಿಟಿಸ್ಟ್ ಚರಿತ್ರೆ ಬರವಣಿಗೆಯು ಜನಸಾಮಾನ್ಯರ ಸಂವೇದನೆಗೆ ಸ್ಪಂದಿಸದೆ ಅಂತಹ ಪ್ರತಿಭಟನೆಗಳನ್ನೆಲ್ಲ ನೆಗೆಟೀವ್ ಆಗಿ ನೋಡಿದ್ದೇ ಹೆಚ್ಚು. ಅದು ಅಳವಡಿಸಿಕೊಂಡ   ಬರವಣಿಗೆ ಕ್ರಮವು ಉಚ್ಚ ವರ್ಗ/ಎಲೈಟ್ ಮತ್ತು ಸಬಾಲ್ಟರ್ನ್‌ಗಳ ನಡುವಿನ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ ಮತ್ತು ಅವು ಒಟ್ಟೊಟ್ಟಿಗೆ ಕಾರ್ಯಚಟುವಟಿಕೆಗಳನ್ನೂ ಹಮ್ಮಿಕೊಂಡ ಅಂಶಗಳನ್ನು ದಾಖಲಿಸಲು ವಿಫಲವಾಗಿರುವುದನ್ನು ಗಮನಿಸಬಹುದು.

೧೬. ಭಾರತದ ಚರಿತ್ರೆ ಬರವಣಿಗೆಯ ಎಲೈಟ್ ಮಾದರಿಗಳನ್ನು ಈಗಾಗಲೆ ಕಟು ವಿಮರ್ಶೆಗೆ ಒಳಪಡಿಸಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಬಾಲ್ಟರ್ನ್ ಪಂಥದ ಲೇಖಕರು ಒಂದೆಡೆ ನಿಂತು ಭಾರತದ ಚರಿತ್ರೆ ಬರವಣಿಗೆ ಕ್ರಮಕ್ಕೆ ಹೊಸ ಆಯಾಮವನ್ನು ನೀಡಬೇಕಾಗಿದೆ.

ಸಬಾಲ್ಟರ್ನ್ ಅಧ್ಯಯನ ಕ್ರಮದ ವಿಕಾಸ

ಸ್ವಾಯತ್ತೆಯಾಗಿರುವ ಸಬಾಲ್ಟರ್ನ್‌ಗಳ ರಾಜಕಾರಣದ ವಲಯಗಳು  (ಡೊಮೈನ್‌ಗಳು) ಸಬಾಲ್ಟರ್ನ್ ಅಧ್ಯಯನಗಳ ವಸ್ತು ವಿಷಯವಾಗಿತ್ತು. ೧೯೧೯-೨೨ರ ಸಂದರ್ಭದ ಔಧ್‌ನಲ್ಲಿ ರೈತವರ್ಗವು ಕೈಗೊಂಡ ಚಳವಳಿಯು ಸ್ವಾಯತ್ತೆಯಾಗಿ, ಸ್ವತಂತ್ರವಾಗಿ, ತನ್ನ ಶೋಷಣೆಗೆ ಪ್ರತ್ಯುತ್ತರವಾಗಿ ಭೂಮಾಲೀಕರ ಮತ್ತು ಬ್ರಿಟೀಶರ ವಿರುದ್ಧ ದಂಗೆ ಎದ್ದಿತು ಎಂದು ಗ್ಯಾನೇಂದ್ರಪಾಂಡೆ ಅವರು ವಿವರಿಸಿದ್ದಾರೆ. ಈ ಹೋರಾಟವನ್ನು ಆರಂಭಿಸುವ ಅಥವಾ ಭಾಗವಹಿಸುವ ಯಾವುದೇ ಜವಾಬ್ದಾರಿಯನ್ನು ಹೊರದೆ, ದಂಗೆಯ ನಂತರದ ದಿನಗಳಲ್ಲಿ ಗಾಂಧಿ ಮತ್ತು ನೆಹರೂ ಅವರ ಮಧ್ಯಮವರ್ಗದ ರಾಷ್ಟ್ರೀಯವಾದಿ ಹಿಂಬಾಲಕರು ಪ್ರಸ್ತುತ ದಂಗೆಯು “ರಾಷ್ಟ್ರೀಯ ಐಕ್ಯತೆ”ಯನ್ನು ಮತ್ತು ಗಾಂಧೀಜಿಯವರ  “ಅಹಿಂಸಾತ್ಮಕ ನಿಲುವನ್ನು” ಸಮರ್ಥಿಸದೆ ಭೂಮಾಲೀಕರ ವಿರುದ್ಧದ ಹಿಂಸಾತ್ಮಕ ದಂಗೆಯಲ್ಲಿ ರೈತರು ಪಾಲ್ಗೊಂಡಿರುವುದನ್ನು ನೋಡಬಹುದಾಗಿದೆ (ಗ್ಯಾನೇಂದ್ರ ಪಾಂಡೆ ೧೯೮೨).

೧೯೨೨-೨೩ರ ಸುಮಾರಿಗೆ ದಕ್ಷಿಣ ಗುಜರಾತಿನಲ್ಲಿ ನಡೆದ ‘ದೇವಿ ಚಳವಳಿ’ಯನ್ನು ವಿಶ್ಲೇಷಿಸಿದ ಡೇವಿಡ್ ಹರ್ಡಿಮನ್ ಅವರ ಬರಹ ಈ ನಿಟ್ಟಿನಲ್ಲಿ ಮುಖ್ಯವಾದುದು. ಪಾರ್ಸಿ ಭೂಮಾಲೀಕರ ಆರ್ಥಿಕ ದಬ್ಬಾಳಿಕೆಯನ್ನು ಮತ್ತು ಮದ್ಯ ದೊರೆಗಳ ಪ್ರಭಾವವನ್ನು ಕಿತ್ತೊಗೆಯಲು ಅಲ್ಲಿನ ಆದಿವಾಸಿಗಳು ನಡೆಸಿದ ಹೋರಾಟ ಸ್ವಾಯತ್ತ ಹೋರಾಟವಾಗಿತ್ತು, ಸ್ವತಂತ್ರ ಹೋರಾಟವಾಗಿತ್ತು. ಸಮುದಾಯ ಸುಧಾರಣೆಗಾಗಿ ಆದಿವಾಸಿಗಳು ನಡೆಸಿದ ಹೋರಾಟವಿದು. ಹೋರಾಟದ ಆರಂಭದಲ್ಲಿ ಕಾಂಗ್ರೆಸ್ಸಿನ ಪ್ರಭಾವವೇನೂ ಇರಲಿಲ್ಲ. ಹೋರಾಟ ಒಂದು ಹಂತಕ್ಕೆ ತಲುಪಿದ ಮೇಲೆ ಮಧ್ಯಮ ವರ್ಗದ ಕಾಂಗ್ರೆಸ್ ನಾಯಕರು ಆದಿವಾಸಿಗಳು ನಡೆಸಿದ ಈ ಚಳವಳಿಗೆ ದುಮುಕಿ ಮಾರ್ಗದರ್ಶನ ನೀಡಲು ಆರಂಭಿಸಿದರು. ಇವರು ಆದಿವಾಸಿಗಳಿಗೆ ಗಾಂಧೀಜಿಯ ಕಾರ್ಯಕ್ರಮಗಳನ್ನು ಅನುಸರಿಸಲು ಕರೆ ನೀಡಿದರು. ಈ ಮೂಲಕ ಪಾರ್ಸಿ ಭೂಮಾಲೀಕರ ವಿರುದ್ಧ ಆರ್ಥಿಕ ಭೇಡಿಕೆಗಳನ್ನು ಮುಂದಿಟ್ಟು ಸಮರ ಸಾರಿದ ಆದಿವಾಸಿಗಳ ಹೋರಾಟದ ಅಲೆಯನ್ನು ತಣ್ಣಗೆ ಮಾಡಿದರು. ತುಳಿತಕ್ಕೊಳಗಾದ ಮತ್ತು ಶೋಷಣೆಗೆ ಒಳಗಾದ ಸಬಾಲ್ಟರ್ನ್ ಗುಂಪುಗಳು ಯಾವ ರೀತಿಯಲ್ಲಿ ತಮ್ಮ ಹಕ್ಕಿಗಾಗಿ ಸ್ವಯಂ ಒತ್ತಾಯವನ್ನು ಮಾಡಿದರು ಎಂಬ ವಿವರಗಳನ್ನು ಡೇವಿಡ್ ಹರ್ಡಿಮನ್ ಚರ್ಚಿಸಿರುವುದು ಗಮನಾರ್ಹವಾಗಿವೆ (ಡೇವಿಡ್ ಹರ್ಡಿಮನ್ ೧೯೮೪). ಸಬಾಲ್ಟರ್ನ್ ವರ್ಗಗಳಿಗೆ ಪ್ರತ್ಯೇಕ ಐಡೆಂಟಿಟಿ -ಸ್ವಾಯತ್ತೆ ಇರುವುದೆಂದು ವಾದಿಸಿದ ರಣಜಿತ್ ಗುಹಾ ಅವರ ಥಿಯರಿಗೆ ಡೇವಿಡ್ ಹರ್ಡಿಮನ್ ನೀಡಿರುವ ಘಟನೆಗಳು ಇನ್ನೂ ಪುಷ್ಟಿಯನ್ನು ನೀಡಿವೆ. ೧೯೨೧-೨೨ರ ಸಂದರ್ಭದಲ್ಲಿ ಯುನೈಟೆಡ್ ಪ್ರಾಂತ್ಯದ ಗೋರಖ್‌ಪುರದ ರೈತರು ಗಾಂಧಿಯ ಬಗ್ಗೆ ಇಟ್ಟುಕೊಂಡ ಪ್ರತೀಕಗಳಿಗೆ ಮೂಲ ಗಾಳಿಮಾತೆಂದು ಶಾಹಿದ್ ಅಮೀನ್ ಅವರ ಬರಹದಿಂದ ತಿಳಿಯುತ್ತದೆ. ಆ ಭಾಗದ ರೈತರ ಭಾವನೆ, ನಂಬುಗೆ ಮತ್ತು ಅಪೇಕ್ಷೆಗೆ ಅನುಗುಣವಾಗಿ ಅವರು ರೂಪಿಸಿಕೊಂಡ ಗಾಂಧಿಗೂ, ನಿಜವಾದ ಗಾಂಧಿಯ ರಾಜಕೀಯ ಕಾರ್ಯಕ್ರಮಕ್ಕೂ ಅಥವಾ ಅವರ ಅನುಯಾಯಿಗಳು ಕಟ್ಟಿಕೊಡುವ ಗಾಂಧಿಯ ಚಿತ್ರಕ್ಕೂ ಯಾವುದೇ ಸಂಬಂಧಗಳಿರುವುದಿಲ್ಲ. ಗೋರಖ್‌ಪುರದ ರೈತರು ಕಟ್ಟಿಕೊಟ್ಟ ‘ಮಹಾತ್ಮನ’ ಪ್ರತೀಕವನ್ನು ಶಾಹಿದ್ ಅಮೀನ್ ಅವರು ಅನಾವರಣ ಮಾಡಿರುವುದು ಕುತೂಹಲಕಾರಿಯಾಗಿದೆ (ಶಾಹಿದ್ ಅಮೀನ್ ೧೯೮೪).

ಮೇಲ್ಕಂಡ ಮೂರು ಭಿನ್ನ ಘಟನೆಗಳಲ್ಲಿ ರೈತ ವರ್ಗವು ತನ್ನದೇ ಅನುಭವದಿಂದ ಕಂಡುಕೊಂಡ ಸ್ವತಂತ್ರ ಚಿಂತನೆಯ ಮೂಲಕ ತಮ್ಮ ಶೋಷಣೆಯ ವಿರುದ್ಧ ಹೋರಾಟದ ಮಾರ್ಗಗಳನ್ನು ಆವಿಷ್ಕಾರ ಮಾಡಿಕೊಂಡದ್ದನ್ನು ನಾವು ಗಮನಿಸಬಹುದು. ಎಲೈಟ್ ಮತ್ತು ಸಬಾಲ್ಟರ್ನ್ ಡೊಮೈನ್‌ಗಳು ಸ್ವತಂತ್ರವಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ತಮ್ಮ ತಮ್ಮ ಉದ್ದೇಶಗಳಿಗಾಗಿ ಕೆಲಸಗಳನ್ನು ಮಾಡುತ್ತಿದ್ದರೂ, ರಣಜಿತ್ ಗುಹಾ ಅವರು ವಿವರಿಸಿದ ಹಾಗೆ ಕೆಲವೊಮ್ಮೆ ಅವು ಪರಸ್ಪರ ಒಂದೆಡೆ ನಿಂತು ಕೆಲಸ ಮಾಡಿದವು. ಸಬಾಲ್ಟರ್ನ್‌ಗಳ ಹೋರಾಟದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ನ ಮಧ್ಯಮವರ್ಗದ ಕಾರ್ಯಕರ್ತರ ಪ್ರವೇಶವನ್ನು ಇಂತಹ ಸಂದರ್ಭಗಳಲ್ಲಿ ಕಾಣಬಹುದಾಗಿದೆ. ಇವರು ಸಬಾಲ್ಟರ್ನ್ ಮತ್ತು ಎಲೈಟ್‌ಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರು ಎಂದು ಡೇವಿಡ್ ಅರ್ನಾಲ್ಡ್ ಅಭಿಪ್ರಾಯಪಟ್ಟಿರುವುದನ್ನು ನಾವು ನೋಡಬಹುದು. ಇದಕ್ಕೆ ಪ್ರತಿಯಾಗಿ ಸಬಾಲ್ಟರ್ನ್‌ಗಳು ತಮ್ಮ ಧ್ಯೇಯವನ್ನು ಪೂರ್ಣಗೊಳಿಸಲು ಎಲೈಟ್‌ಗಳ ಸಹಾಯ ಪಡೆದಿದ್ದನ್ನು ಮತ್ತು ಅಂತಹ ಸಂದರ್ಭದಲ್ಲಿ ಎಲೈಟ್‌ಗಳ ಹಿತಾಸಕ್ತಿಯನ್ನು ಸಬಾಲ್ಟರ್ನ್‌ಗಳು ಸಾಕಷ್ಟು ಬದಿಗೆ ಸರಿಸಿದ್ದನ್ನು ಸುಮಿತ್ ಸರ್ಕಾರ್ ಅವರು ದಾಖಲಿಸಿದ್ದಾರೆ. ಬಂಗಾಳದ ಉದಾಹರಣೆಯನ್ನು ನೀಡುತ್ತ, ಸ್ವದೇಶಿ ಹಾಗೂ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಸ್ವಾಯತ್ತೆಯನ್ನು ಪಡೆದಿದ್ದರು ಎನ್ನಲಾದ ಸಬಾಲ್ಟರ್ನ್ ವರ್ಗಗಳು ಎಲೈಟ್ ರಾಜಕಾರಣದಲ್ಲಿನ ಭಿನ್ನವರ್ಗಗಳನ್ನು ಗ್ರಹಿಸಿ, ಅವುಗಳ ಮೂಲಕ ತಮ್ಮ ಶೋಷಣೆಗೆ ಮುಕ್ತಿ ಹೇಳಲು, ತಮಗೆ ನ್ಯಾಯ ದೊರಕಿಸಿಕೊಳ್ಳಲು ಮತ್ತು ಸ್ವತಂತ್ರರಾಗಲು ಹವಣಿಸಿದ್ದನ್ನು ನಾವು ಈ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಈ ಮೂಲಕ ಸಬಾಲ್ಟರ್ನ್‌ಗಳು ಎಲೈಟ್‌ಗಳ ‘ಸೂಕ್ತ ಮಾರ್ಗದರ್ಶನದ’ ಹೊರತಾಗಿ (ಇದ್ದರೂ ಅಲ್ಪ ಪ್ರಮಾಣದಲ್ಲಿ) ವಸಾಹತುಶಾಹಿ ಸರಕಾರದ ವಿರುದ್ಧ ಸುದೀರ್ಘ ಕಾಲಘಟ್ಟದವರೆಗೆ ಸಮರ ಸಾರಲು ಸಾಧ್ಯವಾದ ಬಗೆಗಳನ್ನು ನಾವು ಕಾಣಬಹುದಾಗಿದೆ (ಸುಮಿತ್ ಸರ್ಕಾರ್ ೧೯೮೪).

ದಂಗೆಗಳಾಗುವುದು ಕೇವಲ ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಗಾಗಿ ಮಾತ್ರವಲ್ಲ, ರೈತರ ದಂಗೆಯೆನ್ನುವುದು ಸಮಷ್ಟಿ ಸಂವೇದನೆಯ ಅಭಿವ್ಯಕ್ತಿಯಾಗಿದೆ. ತಾವು ಆಳುವ ವರ್ಗಕ್ಕೆ ಅಧೀನರಾಗದಿರಲು ಮಾಡಿದ ಹೋರಾಟ ಫಲಕಾರಿಯಾಗದಿರುವುದನ್ನು ಚಿತ್ರಿಸುವುದಷ್ಟೆ ಸಬಾಲ್ಟರ್ನ್ ಅಧ್ಯಯನದ ಉದ್ದೇಶವಲ್ಲ. ಬದಲಿಗೆ ರೈತ ಸಂವೇದನೆಯ ಭಾಗವಾಗಿರುವ ಹೋರಾಟವು ಒಂದು ಸ್ವಾಯತ್ತೆ ವಲಯವಾಗಿದ್ದನ್ನೂ ಅಭ್ಯಸಿಸುವುದು ಕೂಡ ಈ ಬಗೆಯ ಅಧ್ಯಯನದ ಉದ್ದೇಶವಾಗಿದೆ. ವಸಾಹತು ಕಾಲಾವಧಿಯಲ್ಲಿ ಬ್ರಿಟಿಶ್ ಆಳರಸರು ಮತ್ತು ಸ್ಥಳೀಯ ಎಲೈಟ್‌ಗಳಿಗಿಂತ ಭಿನ್ನ ಸಂರಚನೆಯನ್ನು ಹೊಂದಿದ ಸಬಾಲ್ಟರ್ನ್ ವಲಯಗಳು ಗ್ರಾಂಸಿಯು ಚರ್ಚಿಸಿದ ಇಟಲಿಯ ಪುನರುಜ್ಜೀವನೋತ್ತರ ವಿದ್ಯಮಾನಗಳಿಗಿಂತ ೧೯ ಮತ್ತು ೨೦ನೇ ಶತಮಾನದ ಭಾರತದಲ್ಲಿ ಪ್ರಮುಖವಾಗಿ ಕಂಡುಬಂದಿದ್ದನ್ನು ನೋಡಬಹುದು. ವಸಾಹತುಪೂರ್ವ ಭಾರತದಲ್ಲಿ ಪ್ರವರ್ಧಮಾನದಲ್ಲಿದ್ದ ಊಳಿಗಮಾನ್ಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯು ಬಿಟ್ಟುಕೊಟ್ಟ ಅಧಿಕಾರ ಸೂತ್ರಗಳು ಸ್ಥಳೀಯ ಅರಸರ ಮತ್ತು ದೊಡ್ಡ ಭೂಮಾಲೀಕರ ಕೈಗಳನ್ನು ಬಲಪಡಿಸಿದವು. ಹೊರಜಗತ್ತಿಗೆ ಅವರ ಸಂಬಂಧಗಳು ಅಷ್ಟಕಷ್ಟೇ ಇದ್ದರೂ ಅವರಿದ್ದ ವ್ಯವಸ್ಥೆ ಒಂದು ಬಗೆಯಲ್ಲಿ ಹೊರಜಗತ್ತಿನ ವಿದ್ಯಮಾನಗಳಿಂದ ದೂರ ಉಳಿದವು. ಪರಿಣಾಮವಾಗಿ ರೈತರು ಪ್ರಧಾನವಾಗಿದ್ದ ಸ್ಥಳೀಯ ಸಮಾಜವು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಬಹಳಷ್ಟು ಸ್ವಾಯತ್ತೆಯನ್ನು ಹೊಂದಿತ್ತು. ೧೯ನೆಯ ಶತಮಾನದ ಅಂತ್ಯ ಭಾಗದವರೆಗೂ ಹೆಚ್ಚು ಕಡಿಮೆ ಇದೇ ವ್ಯವಸ್ಥೆಯನ್ನು ಭಾರತದ ಸಂದರ್ಭದಲ್ಲಿ ಕಂಡುಬಂದಿತು ಎನ್ನುವ ವಿಚಾರವನ್ನು ಡೇವಿಡ್ ಅರ್ನಾಲ್ಡ್ ಅವರು ವಿಮರ್ಶಿಸಿದ್ದಾರೆ. ಡೇವಿಡ್ ಅರ್ನಾಲ್ಡ್ ಅವರು ಮುಂದುವರಿದು, ಯಾವ ಗಳಿಗೆಯಿಂದ ಭಾರತವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಥವ್ಯವಸ್ಥೆಯ ಭಾಗವಾಗಿ ಕಾರ್ಯ ಚಟುವಟಿಕೆಯನ್ನು ನಿರ್ವಹಿಸಲು ಮುಂದಾಯಿತೋ ಆ ಹೊತ್ತಿನಿಂದ ರಾಜ್ಯ ವ್ಯವಸ್ಥೆಯ ಸ್ವರೂಪ, ನಿರ್ವಹಣಾ ವಿಧಾನ ಮತ್ತು ಮೂಗು ತೂರಿಸುವ ವಿಧಾನ ಇವೆಲ್ಲದರಲ್ಲೂ ಬದಲಾವಣೆ ಕಂಡುಬಂದವು ಎನ್ನುತ್ತಾರೆ. ಸಹಜವಾಗಿ ಸರಕು ಸಾಗಾಟ ಕ್ರಮಗಳಲ್ಲಿ ಮತ್ತು ಸಂವಹನ ಕ್ರಮಗಳಲ್ಲಿಯೂ ಭಾರಿ ಬದಲಾವಣೆಗಳನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು. ಚರಿತ್ರೆಯ ಈ ಕಾಲಘಟ್ಟದಲ್ಲಿ ನಡೆದ ಈ ಬಗೆಯ ಮಹತ್ವದ ಸ್ಥಿತ್ಯಂತರದ  ವ್ಯಾಪ್ತಿ ಭಾರತದ ಎಲ್ಲ ಕಡೆ ಒಂದೇ ತರಹದ್ದಾಗಿರಲಿಲ್ಲ. ಸಂಪರ್ಕವೇ ದುಸ್ತರವಾಗಿದ್ದ ಭಾರತದ ಪೂರ್ವಭಾಗಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬದಲಾವಣೆ ತೀವ್ರಗತಿಯಲ್ಲಿ ಆಯಿತು. ಗತಕಾಲದಿಂದ ಸಾಂಪ್ರದಾಯಿಕವಾಗಿ ಅಧಿಕಾರವನ್ನು ಹೊಂದಿದ್ದ, ಸ್ವಾಯತ್ತ ವಲಯಗಳ ಮುಖ್ಯಸ್ಥರು ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರೂ ಹತ್ತೊಂಬತ್ತನೇ ಶತಮಾನದಲ್ಲಿ ಕಂಡುಬಂದ ಈ ಬದಲಾವಣೆಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ (ಡೇವಿಡ್ ಅರ್ನಾಲ್ಡ್ ೧೯೮೨). ಉಳಿದ ಬಹುತೇಕ ಪ್ರದೇಶಗಳಲ್ಲಿ ಈ ಬದಲಾವಣೆಗಳನ್ನು ಜನರು ಭಿನ್ನ ಭಿನ್ನ ರೀತಿಯಲ್ಲಿ ಸ್ವೀಕರಿಸಿದರು. ಕೆಲವೆಡೆ ಇದೊಂದು ಸಹಜ ಪ್ರಕ್ರಿಯೆ ಎಂಬಂತೆ ಸ್ವೀಕರಿಸಿದರೂ, ಉಳಿದೆಡೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದವು. ಆರ್ಥಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳು ಮತ್ತು ಗ್ರಾಮೀಣ ಬಂಡವಾಳವು ವ್ಯವಸ್ಥೆಯ ಕೇಂದ್ರಸ್ಥಾನವನ್ನು ಅಲಂಕರಿಸಿದ ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲಿಯೂ ಸಂಬಂಧಗಳು ಏರುಪೇರಾಯಿತು. ಇಂತಹ ಸಂದರ್ಭದಲ್ಲಿ ಹೊರಜಗತ್ತಿನ ಶಕ್ತಿಗಳೊಡನೆ ವ್ಯವಹರಿಸಲು ಅಥವಾ ಅವರ ಆಕ್ರಮಣಗಳಿಂದ ರೈತ ವರ್ಗಗಳನ್ನು ರಕ್ಷಿಸಲು ಸ್ಥಳೀಯ ಎಲೈಟ್‌ಗಳು ಹೊರಜಗತ್ತಿನ ಶಕ್ತಿಗಳ ದಲ್ಲಾಳಿಗಳಾದರು ಅಥವಾ ಅವರ ಮಿತ್ರರಾದರು. ಈ ವಿಷಮ ಪರಿಸ್ಥಿತಿಯಲ್ಲಿ ರೈತರು ಸ್ಥಳೀಯ ಎಲೈಟ್‌ಗಳನ್ನು ನಂಬಿ ಅವರ ಮೂಲಕ ಸ್ಥಳೀಯವಲ್ಲದ ಶಕ್ತಿಗಳೊಂದಿಗೆ ವ್ಯವಹಾರ ನಡೆಸುವಂತಹ ಸಂದರ್ಭದ ನಿರ್ಮಾಣವಾಯಿತು. ಹೊಸ ವ್ಯವಸ್ಥೆಯ ಆರ್ಥಿಕ ವೈರುಧ್ಯಗಳಿಂದ ರೈತವರ್ಗಗಳ ಒಳಗೇ ಒಂದು ಬಗೆಯ ಸಂಘರ್ಷ ಉಂಟಾಯಿತು. ೧೯೨೦ ಮತ್ತು ೧೯೩೦ರ ದಶಕಗಳಲ್ಲಿ ಬಂಗಾಳದ ಸಂದರ್ಭದಲ್ಲಿ ಪಾರ್ಥ ಚಟರ್ಜಿಯವರು ಅಧ್ಯಯನ ಮಾಡಿರುವಂತೆ ಕೆಲವು ರೈತವರ್ಗಗಳು ಪ್ರಖರವಾದ ತಮ್ಮ ‘ಸಮುದಾಯ’ದ(ಕಮ್ಯುನಲ್) ಐಡೆಂಟಿಟಿಯನ್ನು ಹೊರಜಗತ್ತಿನ ಪ್ರಭಾವದಿಂದಾಗಿಯೋ ಅಥವಾ ಆಂತರಿಕ ಜಗತ್ತಿನ ವಿಪ್ಲವಗಳಿಂದಾಗಿಯೋ ಬಿಟ್ಟುಕೊಡಲು ತಯಾರಾಗಲಿಲ್ಲ. ಈ ಬಗೆಯ ಸಾಮುದಾಯಿಕ ಪ್ರಜ್ಞೆ ಅನೇಕ ಬಾರಿ ಧಾರ್ಮಿಕ ಚೌಕಟ್ಟಿನಲ್ಲಿ ವ್ಯಕ್ತವಾಯಿತು. ಪರಿಣಾಮವಾಗಿ ಮುಸ್ಲಿಂ ರೈತರು ಹಿಂದೂ ವ್ಯಾಪಾರಿಗಳ ಮತ್ತು ಲೇವಾದೇವಿಗಾರರ ವಿರುದ್ಧ ಬಂಡೆದ್ದರು. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಆಕ್ರಮಣ ಮಾಡಿದರು. ಹೀಗಾಗಿ, ಇದು ರೈತರ ಮತ್ತು ಭೂಮಾಲೀಕರ ನಡುವಿನ ಹೋರಾಟ ಎಂದು ಬಿಂಬಿತವಾಗಿದೆ. ಆದರೆ, ಭಾರತೀಯ ಪರಿಭಾಷೆಯಲ್ಲಿ ಈ ಹೋರಾಟಗಳು ಕೋಮುಗಲಭೆಗಳೆಂದೇ ಬಿಂಬಿತವಾದವು (ಪಾರ್ಥ ಚಟರ್ಜಿ ೧೯೮೨). ಇಲ್ಲಿ “ಧರ್ಮ” ಎನ್ನುವ ಅಂಶ ಸಮಷ್ಟಿಪ್ರಜ್ಞೆಯಾಗಿ ಒಂದು “ವರ್ಗ”ದ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತು ಎಂಬ ಅಂಶವನ್ನು ಗಮನಿಸ ಬಹುದಾಗಿದೆ.

ಮೇಲ್‌ಜಾತಿ/ವರ್ಗಗಳು ಹಿಡಿತದಲ್ಲಿಟ್ಟುಕೊಂಡಿದ್ದ ಸಾಂಪ್ರದಾಯಿಕ ಅಧಿಕಾರ ಸಂಬಂಧಗಳು ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಸಾಹತುಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಬೆಸೆದ ಹೊಸ ವ್ಯವಸ್ಥೆಯಿಂದಾಗಿ ವಿಚಲಿತವಾದವು. ಈ ಹೊಸ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಹತ್ತಿರವಾದ ವರ್ಗವೆಂದರೆ ಭಾರತೀಯ ಬೂರ್ಜ್ವಾಗಳು. ಹಳೆಯ ವ್ಯವಸ್ಥೆಗೆ ಒಗ್ಗಿ ಹೋಗಿದ್ದ ರೈತವರ್ಗಗಳಿಗೆ ಈ ವ್ಯವಸ್ಥೆ ನಿಜಕ್ಕೂ ನುಂಗಲಾಗದ ವ್ಯವಸ್ಥೆಯಾಯಿತು. ರೈತ ವರ್ಗಗಳ ಐಡೆಂಟಿಟಿ ಮತ್ತು ನಾಯಕತ್ವಗಳು ಈ ಕಾರಣಕ್ಕಾಗಿ ನಿಧಾನವಾಗಿ ನಶಿಸುತ್ತ ಬಂದವು. ಇಂತಹ ಸಂದರ್ಭಗಳಲ್ಲಿ ರೈತವರ್ಗಗಳು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಹಿತಾಸಕ್ತಿಗಾಗಿ ರೈತರ ಸ್ವಾಯತ್ತೆಯನ್ನುಳಿಸಿ ಕೊಳ್ಳುವುದು ಅನಿವಾರ್ಯವಾಗಿತ್ತು.

ರೈತರ ಸ್ವಾಯತ್ತೆಯು ಬಹಳ ಪ್ರಬಲವಾಗಲು ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಬಹಳಷ್ಟು ಅವಕಾಶಗಳಿದ್ದವು. ಆ ಕಾಲಘಟ್ಟದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೋರಾಟಗಳು ರೈತವರ್ಗಕ್ಕೆ ಈ ಬಗೆಯ ಭೂಮಿಕೆಯನ್ನು ಸಿದ್ಧಮಾಡಿಕೊಟ್ಟಿತ್ತು. ಗಾಂಧೀಜಿಯವರ ನಾಯಕತ್ವದಲ್ಲಿ ಮಧ್ಯಮವರ್ಗಗಳು ರೈತರನ್ನು ಒಲಿಸಿಕೊಂಡು ಹೋಗುವ ರಾಷ್ಟ್ರೀಯ ಹೋರಾಟದ ಮಾರ್ಗಗಳನ್ನು ರೂಪಿಸಿದ್ದವು. ಈ ದಿಸೆಯಲ್ಲಿ ಅಲ್ಪಸ್ವಲ್ಪ ಸಫಲತೆಯೂ ಆಗಿತ್ತು. ಆದರೆ ಸಬಾಲ್ಟರ್ನ್ ಅಧ್ಯಯನಗಳ ಪ್ರಕಾರ ಗ್ರಾಂಸಿಯು ಪ್ರತಿಪಾದಿಸಿದ ದ್ವೀತಿಯ ರೈತವರ್ಗದ ನಾಯಕತ್ವ ಮಾತ್ರ ಈ ಸಂದರ್ಭದಲ್ಲಿ ಕಾಣಲಿಲ್ಲ. ಭಾರತೀಯ ಬೂರ್ಜ್ವಾಗಳು ರೈತವರ್ಗದ ದಾಪುಗಾಲಿಗೆ ತೊಡಕಾದವು. ಗಾಂಧೀಜಿಯವರು ರೈತರ ಒಪ್ಪಿಗೆ/ಸಹಮತದೊಂದಿಗೆ ರೂಪಿಸಬೇಕೆಂದು ಹೊರಟಿದ್ದ ರಾಷ್ಟ್ರೀಯ ಹೋರಾಟವು ಸಮರ್ಥ ನಾಯಕತ್ವದ ಕೊರತೆಯಿಂದ ಸೊರಗಿತು. ಗ್ಯಾನೇಂದ್ರ ಪಾಂಡೆಯವರು ಔಧ್‌ನ ರೈತ ಹೋರಾಟವನ್ನು ವಿಮರ್ಶಿಸಿದಂತೆ, ಕಾಂಗ್ರೆಸ್ ನಾಯಕರಿಗೆ ರೈತರ ಬಹುಮುಖ್ಯವಾದ ಬೇಡಿಕೆಗಳನ್ನು ತಕ್ಷಣವೇ ಈಡೆರಿಸುವುದಕ್ಕಿಂತ ಮುಖ್ಯವಾಗಿ “ರಾಷ್ಟ್ರೀಯ ಐಕ್ಯತೆಗಾಗಿ” ಅಹಿಂಸೆಯನ್ನು ಪಾಲಿಸುವುದು ಮತ್ತು ಅಂತರ್‌ವರ್ಗಗಳ ನಡುವೆ ಸಹಮತ ಏರ್ಪಡಿಸುವುದು ಮುಖ್ಯವಾಯಿತು. ಸಮರ್ಥವಾದ ನಾಯಕತ್ವವಿಲ್ಲದೆ ರೈತವರ್ಗಗಳಿಗೆ ಪರಿಪಕ್ವತೆಯ ರಾಜಕೀಯ ಸಂವೇದನೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಕಾರ್ಮಿಕ ವರ್ಗವು ತನ್ನ ವಾಸ್ತವಿಕತೆಯ ಹಿನ್ನೆಲೆಯಲ್ಲಾಗಲಿ ಅಥವಾ ತನ್ನ ಸಂವೇದನೆಯನ್ನು ರೂಪಿಸಿಕೊಳ್ಳುವ ಹಿನ್ನೆಲೆಯಲ್ಲಾಗಲಿ ಒಂದು ಶಕ್ತಿಯಾಗಿ ರೂಪುಗೊಳ್ಳಲಿಲ್ಲ ಅಥವಾ ರೈತವರ್ಗದ ಜೊತೆ ಸಖ್ಯವನ್ನೂ ಬೆಳೆಸಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವದ ಹೊರೆ ಸಹಜವಾಗಿಯೇ ಎಂಬಂತೆ ಭಾರತೀಯ ಬೂರ್ಜ್ವಾಗಳ ಹೆಗಲ ಮೇಲೆ ಬಿದ್ದಿತು. ಆದರೆ ಅವರು ಈ ಹೊರೆಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾದರು. ರೈತರ ಸತ್ವಶಾಲಿ ಹೋರಾಟಗಳನ್ನು ಸಾಮಾನ್ಯೀಕರಣಗೊಳಿಸಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ.