ಫ್ಯಾಕ್ಟರಿ ಚಳವಳಿ

೧೯೧೯ರಲ್ಲಿ ಟ್ಯೂರಿನಿನ ಪ್ರಸಿದ್ಧ ಫಿಯಟ್ ಕಂಪೆನಿಯಲ್ಲಿ ಈ ಚಳವಳಿ ಪ್ರಾರಂಭ ವಾಯಿತು. ಕಾರ್ಮಿಕರೇ ಫ್ಯಾಕ್ಟರಿಯ ಉತ್ಪಾದನೆ ಮತ್ತು ಆಡಳಿತ ನಿರ್ವಹಣೆಯನ್ನು ವಹಿಸಿಕೊಳ್ಳುವುದು ಈ ಚಳವಳಿಯ ಗುರಿಯಾಗಿತ್ತು. ೧೯೧೮ರಿಂದಲೇ ಇಟಲಿಯ ಕಾರ್ಖಾನೆಗಳಲ್ಲಿ ಕಾರ್ಮಿಕರು ಪ್ರತಿಯೊಂದು ಉತ್ಪಾದನಾ ವಿಭಾಗಕ್ಕೂ ಒಂದೊಂದು ‘ಷಾಪ್ ಕಮಿಟಿ’ಗಳನ್ನು ರಚಿಸಿಕೊಂಡಿದ್ದರು. ಉತ್ಪಾದನಾ ವ್ಯವಸ್ಥೆ ಹಾಗೂ ಆಡಳಿತವನ್ನು ಕಾರ್ಮಿಕರು ನಿರ್ವಹಿಸಬೇಕು ಎನ್ನುವ ಉದ್ದೇಶದಿಂದಲೇ ಈ ಕಮಿಟಿಗಳನ್ನು ರಚಿಸಿಕೊಳ್ಳಲಾಗಿತ್ತು. ಇಂಗ್ಲೆಂಡಿನ ಲೋಹದ ಕಾರ್ಖಾನೆಗಳ ಕಾರ್ಮಿಕರು ರಚಿಸಿಕೊಂಡಿದ್ದ ಷಾಪ್ ಕಮಿಟಿಗಳು ಹಾಗೂ ರಷಿಯಾದ ದುಡಿಯುವ ಜನರು ಕಟ್ಟಿಕೊಂಡಿದ್ದ ಸೋವಿಯತ್‌ಗಳು ಇಟಲಿಯ ಕಾರ್ಮಿಕರಿಗೆ ಮಾದರಿಯಾಗಿದ್ದವು. ಫಿಯಟ್ ಕಂಪೆನಿಯ ೨೦೦೦ ಕಾರ್ಮಿಕರು ಚುನಾವಣೆಯ ಮೂಲಕ ೧೧ ಜನ ‘ಕಮಿಸರ್’ಗಳನ್ನು ಆಯ್ಕೆ ಮಾಡಿ, ಅವರ ನೇತೃತ್ವದಲ್ಲಿ ಉತ್ಪಾದನೆಯ ಪ್ರತಿಯೊಂದು ಅಂಗವನ್ನೂ ನಿಯಂತ್ರಿಸುವ ‘ಫ್ಯಾಕ್ಟರಿ ಕೌನ್ಸಿಲ್’ ರಚಿಸಿದರು. ಕೌನ್ಸಿಲ್ ಆಗಲೇ ಅಸ್ತಿತ್ವದಲ್ಲಿ ಇದ್ದ ಷಾಪ್ ಕಮಿಟಿಗಳನ್ನು ಮರುಸಂಘಟಿಸಿ ಫ್ಯಾಕ್ಟರಿಯ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ತಾನು ವಹಿಸಿಕೊಂಡಿರುವುದಾಗಿ ಘೋಷಿಸಿತು. ಈ ಒಂದು ಫ್ಯಾಕ್ಟರಿಯಲ್ಲಿ ಶುರುವಾದ ಕಾರ್ಯಕ್ರಮ ಉತ್ತರ ಇಟಲಿಯ ಕಾರ್ಮಿಕ ವರ್ಗದಲ್ಲಿ ಎಷ್ಟು ಉತ್ಸಾಹ ಮೂಡಿಸಿತ್ತೆಂದರೆ ೧೯೨೦ರ ಹೊತ್ತಿಗೆ ಉತ್ತರ ಇಟಲಿಯ ಬಹುಪಾಲು ಕಾರ್ಖಾನೆಗಳಲ್ಲಿ ಫ್ಯಾಕ್ಟರಿ ಕೌನ್ಸಿಲ್ ರಚನೆಯಾಗಿ ಫ್ಯಾಕ್ಟರಿಯ ಆಡಳಿತಾಧಿಕಾರವನ್ನು ತಮ್ಮ ಸುರ್ಪದಿಗೆ ತೆಗೆದುಕೊಂಡಿರಲಿಲ್ಲವಾದರೂ ಪ್ರತಿಯೊಂದು ಕಾರ್ಖಾನೆಯಲ್ಲೂ ಕೌನ್ಸಿಲ್ ಪರ್ಯಾಯ ವ್ಯವಸ್ಥಾಪಕ ಮಂಡಳಿಯಾಗಿ ಕಾರ್ಯ ನಿರ್ವಹಿಸತೊಡಗಿತ್ತು. ಪ್ರತಿಯೊಬ್ಬ ಕಾರ್ಮಿಕನೂ ಕೌನ್ಸಿಲಿಗೆ ಬದ್ಧನಾಗಿ ಇದ್ದುದ್ದರಿಂದ ಮಾಲೀಕರಿಂದ ನಿಯುಕ್ತಿಗೊಂಡ ವ್ಯವಸ್ಥಾಪಕ ಮಂಡಳಿ ತನ್ನ ಎಲ್ಲ ಹಲ್ಲು ಉಗುರುಗಳನ್ನು ಕಳೆದುಕೊಂಡುಬಿಟ್ಟಿತ್ತು. ಮೊದಲಿಗೆ ಕೌನ್ಸಿಲಿಗೆ ಸದಸ್ಯರನ್ನು ಆಯಾ ಫ್ಯಾಕ್ಟರಿಗಳ ಕಾರ್ಮಿಕರು ತಾಂತ್ರಿಕ ಕೆಲಸಗಳಲ್ಲಿ ತೊಡಗಿದವರ ಜೊತೆ, ತಾಂತ್ರಿಕವಲ್ಲದ ಕೆಲಸಗಳನ್ನು ನಿರ್ವಹಿಸುವ ಕಸ ಗುಡಿಸುವವರು, ಕ್ಯಾಂಟಿನ್ನಿನ ಅಡುಗೆಯವರು, ಪರಿಚಾರಕರು ಮುಂತಾದವರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆಯ್ಕೆ ಮಾಡಿದ್ದರೂ, ಮುಂದೆ ಉತ್ಪಾದನೆಗೆ ಪರೋಕ್ಷವಾಗಿ ಸಂಬಂಧಿಸಿದ ಫ್ಯಾಕ್ಟರಿ ಬಡಾವಣೆಯ ಎಲ್ಲ ಆಸ್ತಿಹೀನರನ್ನೂ ಮತದಾರರ ಯಾದಿಯಲ್ಲಿ ಸೇರಿಸಿ ವಿಸ್ತೃತ ಪ್ರತಿನಿಧಿತ್ವ ಹೊಂದಿದ ಕೌನ್ಸಿಲನ್ನು ರಚಿಸುವ ನೀಲಿನಕ್ಷೆಯನ್ನು ಕಾರ್ಮಿಕರು ತಯಾರಿಸಿದ್ದರು. ಬಂಡವಾಳಶಾಹಿ ಪದಕೋಶದಲ್ಲಿ ಯಾವುದನ್ನು ವ್ಯವಸ್ಥಾಪಕ, ತಾಂತ್ರಿಕ ವ್ಯವಸ್ಥಾಪಕ ಅಧಿಕಾರಗಳು (ಮ್ಯಾನೇಜೇರಿಯಲ್ ಹಾಗೂ ಟೆಕ್ನೋ ಮ್ಯಾನೇಜೆರಿಯಲ್) ಎಂದು ಕರೆಯುತ್ತಾರೊ, ಅಂತಹ ಅಧಿಕಾರವನ್ನು ಕೌನ್ಸಿಲ್ ವಶಪಡಿಸಿಕೊಂಡಿತ್ತು. ಬಂಡವಾಳದ ಹೂಡಿಕೆ ಹಾಗೂ ವಿಸ್ತರಣೆಯ ಸ್ವರೂಪವನ್ನು ನಿರ್ಧರಿಸಿ, ಬಂಡವಾಳಕ್ಕೆ ಚಲನಶೀಲತೆಯನ್ನು ತರುವುದು ಈ ಅಧಿಕಾರವೇ ಆಗಿರುತ್ತದೆ; ಈ ಕಾರ್ಯವನ್ನು ತನ್ನ ಪರವಾಗಿ ಸಮರ್ಥವಾಗಿ ನಿರ್ವಹಿಸಲು, ಬಂಡವಾಳಶಾಹಿ ಮಾಲೀಕರು ಸುಶಿಕ್ಷಿತ ತಾಂತ್ರಿಕ ವ್ಯವಸ್ಥಾಪಕ ವರ್ಗವನ್ನು ಕಟ್ಟಿದ್ದರು. ಗ್ರಾಂಸಿಯ ರೂಪಕವನ್ನೇ ಬಳಸಿ ಹೇಳುವುದಾದರೆ ಈ ವರ್ಗ ಬಂಡವಾಳಶಾಹಿ ವರ್ಗದ ಸೇನಾ ದಂಡನಾಯಕರು; ಕಾರ್ಮಿಕರು ಇವರ ಆಜ್ಞೆಗಳನ್ನು ಎದುರಾಡದೆ ಪಾಲಿಸುವ ಕಾಲಾಳು ಸೈನಿಕರು ಮಾತ್ರವಾಗಿದ್ದರು. ಸಮಾಜದ ಪ್ರತಿ ಸಂಪನ್ಮೂಲವನ್ನು ಬಂಡವಾಳ ಶಾಹಿಯ ವಶಕ್ಕೆ ಗೆದ್ದು ಕೊಡುವ ನಿರ್ಣಾಯಕ ಕಾರ್ಯವನ್ನು ಇವರು ನಿರ್ವಹಿಸಿದ್ದರು.

ಕಾರ್ಮಿಕರ ಕೌನ್ಸಿಲ್ ಫ್ಯಾಕ್ಟರಿಯ ಉತ್ಪಾದನಾ ವ್ಯವಸ್ಥೆಯ ನಿಯಂತ್ರಣ ವಹಿಸಿಕೊಂಡಿದ್ದರ ಪರಿಣಾಮವಾಗಿ, ತನ್ನ ಸೈನ್ಯದ ಮಹಾದಂಡನಾಯಕತ್ವವೂ ಸೇರಿದಂತೆ ಎಲ್ಲ ಅಧಿಕಾರಸ್ಥ ಹುದ್ದೆಗಳಲ್ಲೂ ಶತ್ರುಗಳು ತುಂಬಿಕೊಂಡರೆ ಅರಸನೊಬ್ಬನ ಸ್ಥಿತಿ ಹೇಗೆ ಇರುತ್ತದೋ ಅಂಥ ಸ್ಥಿತಿ ಬಂಡವಾಳಶಾಹಿ ಮಾಲೀಕರಿಗೆ ಬಂತು. ಉತ್ತರ ಇಟಲಿಯ ಕೈಗಾರಿಕೆಯಲ್ಲಿ ಎರಡು ಪರಸ್ಪರ ವಿರೋಧಿಯಾದ ಅಧಿಕಾರ ಕೇಂದ್ರಗಳು ನಿರ್ಮಾಣವಾದವು. ಈ ಬೆಳವಣಿಗೆಯ ಪರಿಣಾಮವನ್ನು ಬಂಡವಾಳಶಾಹಿಗಳು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ೧೯೨೧ರ ಮಾರ್ಚ್ ತಿಂಗಳಲ್ಲಿ ಬಂಡವಾಳಶಾಹಿ ಮಾಲೀಕರು ತಮ್ಮ ಎಲ್ಲ ಕಾರ್ಖಾನೆಗಳನ್ನು ಮುಚ್ಚಿಬಿಡುವೆವು ಎಂದು ಘೋಷಿಸಿದರು. ಮಾಲೀಕರ ಈ ನಿಲುವನ್ನು ವಿರೋಧಿಸಿ ಕಾರ್ಮಿಕರು ಸಾರ್ವತ್ರಿಕ ಮುಷ್ಕರವನ್ನು ಪ್ರಾರಂಭಿಸಿದರು. ಆ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಉತ್ತರ ಇಟಲಿಯ ಇಂಜಿನಿಯರಿಂಗ್ ಕಾರ್ಖಾನೆಗಳಲ್ಲಿ ವೇತನ ಪರಿಷ್ಕರಣೆಯ ಮಾತುಕತೆಗಳು ಮುರಿದುಬಿದ್ದದ್ದೇ, ಕಾರ್ಮಿಕರು ಎಲ್ಲ ಕಾರ್ಖಾನೆಗಳನ್ನು ಆಕ್ರಮಿಸಿಕೊಂಡರು. ಪೊಲೀಸರು ಮತ್ತು ಸೈನ್ಯ ಶಕ್ತಿಯನ್ನು ಉಪಯೋಗಿಸಿ ಕಾರ್ಖಾನೆಗಳನ್ನು ತೆರವು ಮಾಡಿಸಬೇಕೆಂದು ಪ್ರಧಾನ ಮಂತ್ರಿಯಾಗಿದ್ದ ಗಿಯಲೊಟ್ಟಿಯ ಮೇಲೆ ಮಾಲೀಕರು ಒತ್ತಡ ಹೇರತೊಡಗಿದರು. ತುಂಬ ಜನಪ್ರಿಯವಾಗಿರುವ ಈ ಚಳವಳಿಯನ್ನು ಬಲಪ್ರಯೋಗದಿಂದ ಎದುರಿಸಲು ಹೋದರೆ ಕ್ರಾಂತಿಗೆ ಮಣೆ ಹಾಕಿದಂತೆ ಎನ್ನುವುದನ್ನು ಮನಗಂಡ ಗಿಯಲೊಟ್ಟಿ ಜಾಣತನದಿಂದ ರಾಜಿ ಸೂತ್ರಗಳನ್ನು ರೂಪಿಸಿದ.

ಮಾಲೀಕರು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯಲ್ಲಿ ಸಕ್ರಿಯರಾಗಿದ್ದ ಕಾರ್ಮಿಕರನ್ನು ಗುರುತಿಸಿ ಅವರ ಮೇಲೆ ಸೇಡಿನ ಕ್ರಮಗಳನ್ನು ಜರುಗಿಸಲು ಪ್ರಾರಂಭಿಸಿದರು. ಒಂದು ವರ್ಷ ಕಳೆಯುವುದರೊಳಗೇ ‘ಫ್ಯಾಕ್ಟರಿ ಕೌನ್ಸಿಲ್’ಗಳನ್ನು ಸೂತ್ರಬದ್ಧವಾಗಿ ನಿರ್ನಾಮ ಮಾಡಿ, ನಾಮಕಾವಸ್ಥೆಗೆ ರೂಪಿಸಿದ್ದ ಕಾರ್ಮಿಕರ ಸಹಭಾಗಿತ್ವ ಎನ್ನುವ ರಾಜಿ ಸೂತ್ರದ ನಿಯಮಗಳನ್ನು ಒರೆಸಿ ಹಾಕಿದರು.

೧೯೧೯‑೨೦ರಲ್ಲಿ ನಡೆದ ಈ ವಿದ್ಯಮಾನಗಳು ಇಟಲಿಯ ಚರಿತ್ರೆಯಲ್ಲಿ ‘ಎರಡು ಕೆಂಪು ವರ್ಷಗಳು’ ಎಂದು ಖ್ಯಾತಿ ಪಡೆದಿವೆ. ಈ ಅವಧಿಯಲ್ಲಿ ಗ್ರಾಂಸಿ, ಸೋಷಿಯಲಿಸ್ಟ್ ಪಕ್ಷದ ಎಡಪಂಥದಲ್ಲಿ ಇದ್ದ ಪಾಲಿಮರೊ ತೊಗ್ಲಿಯಾಟ್ಟಿ, ಎಂಜಲೊ ಟಸ್ಕ ಮತ್ತು ಉಂಬರ್ಟೊ ಟೆರಸ್ಸಿನ್ನಿ ಇವರ ಜೊತೆ ಸೇರಿ ‘ಲಾ ಆರ್ಡಿನೊ ನೊವೊ’ (ಹೊಸ ವ್ಯವಸ್ಥೆ) ಎನ್ನುವ ವಾರಪತ್ರಿಕೆಯನ್ನು ಪ್ರಾರಂಭಿಸಿದ. ಸಮಾಜವಾದಿ ಸಿದ್ಧಾಂತಗಳ ಚರ್ಚೆಗೆ ಈ ಪತ್ರಿಕೆ ವೇದಿಕೆಯಾಗಬೇಕು ಎನ್ನುವುದು ಈ ಗೆಳೆಯರ ಇಂಗಿತವಾಗಿತ್ತು. ಈ ಪತ್ರಿಕೆಯನ್ನು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯ ವೈಚಾರಿಕ ಬೆನ್ನೆಲುಬಾಗಿಸುವುದು ಗ್ರಾಂಸಿಯ ಉದ್ದೇಶವಾಗಿತ್ತು. ತನ್ನ ಎರಡನೆಯ ಸಂಚಿಕೆಯಿಂದಲೇ ಪತ್ರಿಕೆಯು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯ ಮುಖ್ಯ ಧ್ವನಿಯಾಯಿತು. ಕೌನ್ಸಿಲ್ ಸದಸ್ಯರು ಗ್ರಾಂಸಿಯನ್ನು ತಮ್ಮ ಸಭೆಗಳಿಗೆ ಆಹ್ವಾನಿಸಿ ಚಳವಳಿಯ ದಿಕ್ಕು ಹಾಗೂ ತಂತ್ರೋಪಾಯಗಳನ್ನು ಚರ್ಚಿಸತೊಡಗಿದರು. ಚಳವಳಿಯು ಮುನ್ನಡೆದಂತೆ ಗ್ರಾಂಸಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ. ಪತ್ರಿಕೆಯ ಬಳಗದಲ್ಲಿ ಎಂಜೆಲೊ ಟಸ್ಕನನ್ನು ಹೊರತುಪಡಿಸಿ ಉಳಿದ ಎಲ್ಲರೂ ಪತ್ರಿಕೆಯು ಚಳವಳಿಗೆ ಸೈದ್ಧಾಂತಿಕ ಮಾರ್ಗದರ್ಶಿಯಾಗಿರಬೇಕು ಎಂಬ ಗ್ರಾಂಸಿಯ ನಿಲುವನ್ನು ಬೆಂಬಲಿಸಿದರು. ಆದರೆ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯರಲ್ಲಿ ಬಹಳಷ್ಟು ಮಂದಿಗೆ ಈ ಚಳವಳಿಯನ್ನು ಬೆಂಬಲಿಸುವ ಉತ್ಸಾಹವಿರಲಿಲ್ಲ. ಎಡಪಂಥೀಯ ಗುಂಪಿನ ಪ್ರಭಾವಶಾಲಿ ನಾಯಕನಾಗಿದ್ದ ಅಮಿಯೊ ಬೋರ್ಡಿಗನು ಈ ಚಳವಳಿಯು ಪಕ್ಷದ ಕಾರ್ಯಕ್ರಮ, ಶಿಸ್ತುಗಳಿಗೆ ಕಾರ್ಮಿಕರು ಬದ್ಧರಾಗಿಲ್ಲ ಎಂದು ವಾದಿಸಿದರು. ಈ ಸಂದರ್ಭದ ತತ್‌ಕ್ಷಣದ ಒತ್ತಡದಲ್ಲಿ, ವ್ಯವಸ್ಥೆಯ ಸಂಪೂರ್ಣ ಅರಿವು ಹಾಗೂ ನಿರ್ದಿಷ್ಟ ಕ್ರಾಂತಿಕಾರಿ ಕಾರ್ಯಕ್ರಮಗಳಿಲ್ಲದೆ, ಮನಸೇಚ್ಛೆ ನಡೆಸುತ್ತಿರುವ ಚಳವಳಿಯಾಗಿದೆ ಎಂದು ವಾದಿಸಿ, ‘ಲಾ ಆರ್ಡಿನೊ ನೊವೊ’ ಗುಂಪು ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದನ್ನು ಟೀಕಿಸಿದ. ಚಳವಳಿಯ ಬಗ್ಗೆ ಎಡಪಂಥದವರು ತಳೆದ ನಿಲುವು ವಿಚಿತ್ರವಾಗಿತ್ತು. ಬಂಡವಾಳಶಾಹಿಯು ತನ್ನ ಆಂತರಿಕ ಬಿಕ್ಕಟ್ಟಿನಿಂದ ಕುಸಿದು ಸಮಾಜವಾದಿ ವ್ಯವಸ್ಥೆಯ ಸ್ಥಾಪನೆಗೆ ದಾರಿಮಾಡಿಕೊಡುತ್ತದೆ ಎನ್ನುವ ಯಾಂತ್ರಿಕವಾದ ಸುಧಾರಣಾವಾದಿ ನಿಲುವನ್ನು ಖಂಡಿತವಾಗಿ ವಿರೋಧಿಸಿ, ಬಂಡವಾಳಶಾಹಿ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಲಭ್ಯವಿರುವ ಎಲ್ಲ ಚಾರಿತ್ರಿಕ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಬೇಕು ಎಂದು ವಾದಿಸಿ, ಈ ವಾದಕ್ಕೆ ಪಕ್ಷದ ಸದಸ್ಯರ ಬೆಂಬಲ ಕ್ರೋಡೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವನೇ ಬೋರ್ಡಿಗ.

೧೯೧೯ರ ಸೋಷಿಯಲಿಸ್ಟ್ ಪಕ್ಷದ ಅಧಿವೇಶನದಲ್ಲಿ, ಹಾಲಿ ಬೂರ್ಜ್ವಾ ಪ್ರಜಾಪ್ರಭುತ್ವ ವನ್ನು ಪಲ್ಲಟಗೊಳಿಸುವ ಸಲುವಾಗಿ ಇಟಲಿಯಾದ್ಯಂತ ರೈತರು ಮತ್ತು ಕಾರ್ಮಿಕರ ಸೋವಿಯತ್ತುಗಳನ್ನು ಸಂಘಟಿಸಬೇಕು ಎಂಬ ಗೊತ್ತುವಳಿಯನ್ನು ಮಂಡಿಸಿ, ಆ ಗೊತ್ತುವಳಿ ಬಹುಮತದಿಂದ ಅಂಗೀಕಾರವಾಗುವ ಹಾಗೆ ನೋಡಿಕೊಂಡವರೂ ಎಡಪಂಥೀಯರೇ. ಎಡಪಂಥದವರು ಸೋವಿಯತ್‌ಗಳ ಅವಶ್ಯಕತೆಯನ್ನು ಬಲು ಉತ್ಸಾಹದಿಂದಲೆ ಜನರ ಮಧ್ಯೆ ಪ್ರಚಾರ ಮಾಡಿದರು. ಜನರು ಕೂಡ ತುಂಬು ವಿಶ್ವಾಸದಿಂದ ಈ ವಿಚಾರವನ್ನು ಬೆಂಬಲಿಸಿದರು. ೧೯೧೯ರ ಚುನಾವಣೆಗಳಲ್ಲಿ ಸೋಷಿಯಲಿಸ್ಟ್ ಪಕ್ಷ ೨೦ ಲಕ್ಷ ಮತಗಳನ್ನು ಪಡೆದು, ಪಾರ್ಲಿಮೆಂಟಿನ ಒಟ್ಟು ೫೦೮ ಸ್ಥಾನಗಳಲ್ಲಿ ೧೫೬ ಸ್ಥಾನಗಳನ್ನು ಗೆದ್ದಿತು; ೧೯೧೮ರಲ್ಲಿ, ಮಹಾಯುದ್ಧ ಕೊನೆಯಾದಾಗ ೮೭ ಸಾವಿರ ಇದ್ದ ಪಕ್ಷದ ಸದಸ್ಯತ್ವ ೧೯೨೦ರಲ್ಲಿ ೧ ಲಕ್ಷ ೮೦ ಸಾವಿರಕ್ಕೆ ಏರಿತು. ಸಿ.ಜಿ.ಎಲ್.ನ ಸದಸ್ಯತ್ವ ೨ ಲಕ್ಷದಿಂದ ೨೦ ಲಕ್ಷಕ್ಕೆ ನೆಗೆಯಿತು. ಇದೇ ಸಮಯದಲ್ಲಿ ದಕ್ಷಿಣ ಇಟಲಿಯ ಬಡ ರೈತರು ಮತ್ತು ಗೇಣಿದಾರರು ಜಮೀನುದಾರರ ಭೂಮಿಯನ್ನು ವಶಪಡಿಸಿಕೊಳ್ಳುವ ಚಳವಳಿಯನ್ನು ಪ್ರಾರಂಭಿಸಿದ್ದರು(ಸೋಷಿಯಲಿಸ್ಟ್ ಪಕ್ಷಕ್ಕೆ ದಕ್ಷಿಣ ಇಟಲಿಯಲ್ಲಿ ನೆಲೆಯೇ ಇರಲಿಲ್ಲ. ಈ ಚಳವಳಿಯನ್ನು ಕ್ಯಾಥೋಲಿಕ್ ಚರ್ಚಿನ ಪರವಾಗಿದ್ದ ಪಾಪ್ಯುಲರ್ ಪಾರ್ಟಿಯು ಸಂಘಟಿಸಿತ್ತು). ಇಂಥ ಸನ್ನಿವೇಶದಲ್ಲಿ ಬಹುಸಂಖ್ಯಾತ ಕಾರ್ಮಿಕರು ಸ್ವಯಂಸ್ಫೂರ್ತಿಯಿಂದ ಫ್ಯಾಕ್ಟರಿ ಕೌನ್ಸಿಲ್ ಚಳವಳಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬಂಡವಾಳಶಾಹಿಗಳ ಕೊರಳುಪಟ್ಟಿ ಹಿಡಿದುಕೊಂಡಿದ್ದರು; ಇಡೀ ಯುರೋಪಿನ ಕಾರ್ಮಿಕರು ಇಟಲಿಯ ಚಳವಳಿಯಿಂದ ಸ್ಫೂರ್ತಿ ಪಡೆದು ತಮ್ಮ ದೇಶಗಳಲ್ಲಿ ಕ್ರಾಂತಿಕಾರಿ ಚಳವಳಿಗಳನ್ನು ಸಂಘಟಿಸುವ ಉತ್ಸಾಹದಲ್ಲಿದ್ದರು. ಇಷ್ಟಿದ್ದರೂ ಕಾರ್ಮಿಕರ ಹರಿಕಾರನೆಂದು ಘೋಷಿಸಿಕೊಂಡಿದ್ದ ಪಕ್ಷವು ಚಳವಳಿಯನ್ನು ಬೆಂಬಲಿಸಲು ಹಿಂದೇಟು ಹಾಕತೊಡಗಿತ್ತು. ಸುಧಾರಣಾವಾದಿಗಳು ಜವಾಬ್ದಾರಿಯನ್ನು ಎಡಪಂಥದ ಮೇಲೆ ಹೊರಿಸಲು ನೋಡುತ್ತಿದ್ದರೆ, ಎಡಪಂಥದವರು ‘ಲಾ ಆರ್ಡಿನೊ ನೊವೊ’ ಗುಂಪಿನ ಮೇಲೆ ಹೊರೆಯನ್ನು ಜಾರಿಸಿ ಕೈತೊಳೆದುಕೊಳ್ಳಲು ಹಾತೊರೆಯುತ್ತಿದ್ದರು. ‘ಲಾ ಆರ್ಡಿನೊ ನೊವೊ’ ಗುಂಪಿನವರಿಗೆ ಟ್ಯೂರಿನ್ ನಗರದಲ್ಲಿ ಸಾಕಷ್ಟು ಜನಬೆಂಬಲವಿತ್ತಾದರೂ ಬೇರೆ ಕಡೆಗಳಲ್ಲಿ ಅವರ ಪ್ರಭಾವ ನಗಣ್ಯವಾಗಿತ್ತು. ೧೯೨೦ರಲ್ಲಿ ಚಳವಳಿಯು ಉತ್ತುಂಗದಲ್ಲಿ ಇದ್ದಾಗ, ಸೋಷಿಯಲಿಸ್ಟ್ ಪಕ್ಷದ ಮಹಾಧಿವೇಶನವನ್ನು, ಚಳವಳಿಯ ಕೇಂದ್ರಬಿಂದುವಾಗಿದ್ದ ಟ್ಯೂರಿನ್ ನಗರದಲ್ಲಿ ಆಯೋಜಿಸಲಾಗಿತ್ತು. ಚಳವಳಿಯ ಒತ್ತಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಧಿವೇಶನದಲ್ಲಿ ‘ಲಾ ಆರ್ಡಿನೊ ನೊವೊ’ ಗುಂಪು ಚಳವಳಿಯ ಪರವಾಗಿ ಮಂಡಿಸಿದ ಗೊತ್ತುವಳಿಯನ್ನು ಚರ್ಚೆಗೆ ಕೂಡ ಸ್ವೀಕರಿಸದೆ ತಳ್ಳಿಹಾಕಲಾಯಿತು. ಸೋಷಿಯಲಿಸ್ಟ್ ಪಕ್ಷದ ಮುಖವಾಣಿ ಯಾಗಿದ್ದ ‘ಅವಂತಿ!’ಯಂತೂ ಎರಡು ವರ್ಷಗಳ ಕಾಲ ನಡೆದ ಚಳವಳಿಯ ಬಗ್ಗೆ ಒಂದು ಸಾಲನ್ನೂ ಬರೆಯಲಿಲ್ಲ.

ಮೊದಲ ಮಹಾಯುದ್ಧ ಪ್ರಾರಂಭವಾದಾಗ ಮುಸಲೋನಿ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯ ಗುಂಪಿನ ನಾಯಕನಾಗಿದ್ದ. ಎಲ್ಲ ದೇಶದ ಬಂಡವಾಳಶಾಹಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಾರಂಭಿಸಿರುವ ಯುದ್ಧವನ್ನು ಸಮಾಜವಾದಿಗಳು ಬೆಂಬಲಿಸಕೂಡದು ಎಂಬ ಸೋಶಿಯಲಿಸ್ಟ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಅಂತಾರಾಷ್ಟ್ರೀಯ ಒಕ್ಕೂಟವಾದ ‘ಎರಡನೆಯ ಇಂಟರ್‌ನ್ಯಾಷನಲ್’ನ ನಿರ್ಣಯವನ್ನು ಇಟಲಿಯಲ್ಲಿ ಮುಸಲೋನಿ ಬಲವಾಗಿ ಪ್ರತಿಪಾದಿಸಿದ್ದ. ಆದರೆ ೧೯೧೫ರ ಹೊತ್ತಿಗೆ ಆತ ತನ್ನ ನಿಲುವನ್ನು ಬದಲಾಯಿಸಿ, ಪಕ್ಷವನ್ನು ತೊರೆದು, ಇಟಲಿಯ ಸೈನ್ಯದ ದಂಡನಾಯಕನಾಗಿ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡ. ೧೯೧೮ರಲ್ಲಿ ಯುದ್ಧ ಕೊನೆಗೊಂಡಾಗ ಇಟಲಿಯ ಸಾಮಾನ್ಯ ಜನರ ಜೀವನದ ಸ್ಥಿತಿ ತುಂಬ ಕೆಟ್ಟದಾಗಿತ್ತು. ಯುದ್ಧದಿಂದ ಮರಳಿದ ಮುಸಲೋನಿ, ಮಾಜಿ ಯೋಧರ, ನಗರದ ನಿರುದ್ಯೋಗಿ ಯುವಕರ, ಸಮಾಜವಾದಿ ರಾಜಕೀಯ ಸಫಲವಾದರೆ ತಮ್ಮ ಬದುಕಿನ ಸವಲತ್ತುಗಳಿಗೆ ಸಂಚಕಾರ ಬರುತ್ತದೆ ಎಂಬ ಹೆದರಿಕೆ ಇಟ್ಟುಕೊಂಡಿದ್ದ ಸಣ್ಣ ವರ್ತಕರ ಹಾಗೂ ಮಧ್ಯಮವರ್ಗದ ಜನರ ಬೆಂಬಲವನ್ನು ಗಳಿಸಿಕೊಂಡು ‘ಫಾಸಿ’ ಎಂಬ ಸಂಘಟನೆಯನ್ನು ಕಟ್ಟಿದ. ಇಟಲಿಯ ಜನ ದರಿದ್ರ ಸ್ಥಿತಿಯಲ್ಲಿ ಇರುವುದಕ್ಕೆ ದೇಶ ಒಪ್ಪಿಕೊಂಡಿರುವ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವೇ ಕಾರಣವಾಗಿದೆ; ಬೆನ್ನೆಲುಬಿಲ್ಲದ ಜನ ದೇಶದ ಅಧಿಕಾರ ಹಿಡಿದಿರುವುದರಿಂದ ಇಟಲಿಯ ರಾಷ್ಟ್ರೀಯ ಪ್ರಭುತ್ವವನ್ನು ಯಾರು ಬೇಕಾದರೂ ಹೆದರಿಸಿ ಮಣಿಸುವ ವಾತಾವರಣ ನಿರ್ಮಾಣವಾಗಿದೆ (ಇಟಲಿಯು ಮೊದಲ ಮಹಾಯುದ್ಧದಲ್ಲಿ ವಿಜಯಿ ಮೈತ್ರಿಕೂಟದ ಭಾಗವಾಗಿದ್ದರೂ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳು ಇಟಲಿಗೆ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿರಲಿಲ್ಲ) ಎಂದು ಆತ ವಾದಿಸತೊಡಗಿದ. ಈ ಹೊತ್ತಿನಲ್ಲೇ, ಸಮಾಜವಾದಿಗಳು ಪ್ರಬಲರಾಗಿ ದೇಶದ ಭದ್ರತೆ, ಇಟಲಿಯ ಪರಂಪರಾನುಗತ ಸಂಸ್ಕೃತಿಗಳಿಗೆ ಅಪಾಯ ತರುತ್ತಿದ್ದಾರೆ; ಇಂಥ ಸನ್ನಿವೇಶದಲ್ಲಿ, ಸರ್ವಶಕ್ತ ರಾಷ್ಟ್ರಪ್ರೇಮಿ ನಾಯಕನ ಮಾರ್ಗದರ್ಶನದಲ್ಲಿ, ಕಳೆದು ಹೋಗಿರುವ ರೋಮನ್ ಸಾಮ್ರಾಜ್ಯದ ವೈಭವವನ್ನೂ, ಶುದ್ಧ ಇಟಲಿಯನ್ ಸಂಸ್ಕೃತಿಯನ್ನೂ ಮರುಸ್ಥಾಪಿಸುವಂತಹ ಸಶಕ್ತ ಪ್ರಭುತ್ವದ ಅಗತ್ಯವಿದೆ ಎನ್ನುವ ವಿಚಾರಗಳನ್ನು ಮುಸಲೋನಿ ಪ್ರತಿಪಾದಿಸತೊಡಗಿದ. ಆ ಹೊತ್ತಿನಲ್ಲಿ ಮುಸಲೋನಿ ‘ಫಾಸಿ’ ಒಂದು ರಾಜಕೀಯ ಪಕ್ಷವಲ್ಲ, ಒಂದು ರಾಷ್ಟ್ರಪ್ರೇಮಿ ಸ್ವಯಂಸೇವಾ ಸಂಸ್ಥೆ ಎಂದು ಪ್ರಚಾರ ಮಾಡಿದ; ‘ಬ್ಲ್ಯಾಕ್ ಷರ್ಟ್ಸ್’ ಎಂಬ ಗೂಂಡ ಅರೆಸೈನಿಕ ಪಡೆ ಕಟ್ಟಿ, ದೇಶದ ಯಾವ ಕಾನೂನನ್ನು ಲೆಕ್ಕಿಸದೆ ತನ್ನ ವಿರೋಧಿಗಳ ಮೇಲೆ ಭಯೋತ್ಪಾದಕ ಆಕ್ರಮಣ ಮಾಡುವ ಕಾರ್ಯತಂತ್ರವನ್ನು ಮುಸಲೋನಿ ಸಂಯೋಜಿಸಿದ. ಇಟಲಿಯ ಭೂಮಾಲೀಕರು, ಬಂಡವಾಳಶಾಹಿಗಳು ಮತ್ತು ಈ ವರ್ಗಗಳ ಹಿತಾಸಕ್ತಿಯನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡಿದ್ದ ಸರ್ಕಾರವು ಸಮಾಜವಾದಿಗಳು, ರೈತ ಬಂಡುಕೋರರು ಮತ್ತು ಕ್ರಾಂತಿಕಾರಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಸ್ವಯಂತಂತ್ರವಾದಿಗಳನ್ನು (ಲಿಬರಲ್‌ಗಳು) ಮಟ್ಟಹಾಕಲು ‘ಫಾಸಿ’ ಸರಿಯಾದ ಸಂಘಟನೆ ಎಂದು ಪರಿಗಣಿಸಿ, ಅದಕ್ಕೆ ಸರ್ವರೀತಿಯ ಸಹಕಾರ ನೀಡಿತು. ಆಗ ಪ್ರಧಾನ ಮಂತ್ರಿಯಾಗಿದ್ದ ಗಿಯಲೊಟ್ಟಿಯಂತೂ ಈ ದೇಶಪ್ರೇಮಿ ಸಂಘಟನೆಯಲ್ಲಿ ಯುವಕರು ಸೇರಿಕೊಳ್ಳಬೇಕು ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದ. ೧೯೨೧ರಲ್ಲಿ ಮುಸಲೋನಿ ಇಟಲಿಯ ಸಂಸತ್ತಿಗೆ ಆಯ್ಕೆಯಾದ ತಕ್ಷಣವೆ ‘ಫಾಸಿ’ ಸಂಘಟನೆಯನ್ನು ‘ನ್ಯಾಷನಲ್ ಫಾಸಿಸ್ಟ್ ಪಾರ್ಟಿ’ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸಿದ. ೧೯೨೨ರಲ್ಲಿ ಪ್ರಭುತ್ವದ ಮುಖ್ಯಸ್ಥನಾದ ಇಟಲಿಯ ರಾಜ ಮೂರನೆಯ ವಿಕ್ಟರ್ ಇಮ್ಯಾನುಯಲ್ ವಿಶೇಷಾಧಿಕಾರವನ್ನು ಉಪಯೋಗಿಸಿ ತನ್ನನ್ನು ಪ್ರಧಾನಮಂತ್ರಿಯನ್ನಾಗಿ ನೇಮಿಸಬೇಕು ಎಂದು ಮುಸಲೋನಿ ಒತ್ತಾಯಿಸತೊಡಗಿದ. ಇಟಲಿಯ ಪಾರ್ಲಿಮೆಂಟಿನ ಬಹುಪಾಲು ಸದಸ್ಯರು ಈ ಬೇಡಿಕೆಯನ್ನು ವಿರೋಧಿಸಿದರು. ತನ್ನ ಬೇಡಿಕೆ ಈಡೇರದಿದ್ದರೆ ಫಾಸಿಸ್ಟ್ ಪಡೆಗಳು ರಾಜಧಾನಿಯಾದ ರೋಂ ನಗರಕ್ಕೆ ಮುತ್ತಿಗೆ ಹಾಕುತ್ತವೆ ಎಂದು ಮುಸಲೋನಿ ಬೆದರಿಸಿದ. ಅಂತೆಯೇ ೧೯೨೧ರ ಮಾರ್ಚ್ ತಿಂಗಳಲ್ಲಿ ಫಾಸಿಸ್ಟ್ ಪಡೆ ರೋಂ ನಗರಕ್ಕೆ ಮುತ್ತಿಗೆ ಹಾಕಿತು. ರಾಜನು ಪಾರ್ಲಿಮೆಂಟಿನ ವಿರೋಧವನ್ನು ತಳ್ಳಿಹಾಕಿ ಮುಸಲೋನಿಯನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ. ಇದಲ್ಲದೆ ಒಂದು ವರ್ಷದ ಮಟ್ಟಿಗೆ ತಾನು ಸರ್ವಾಧಿಕಾರಿಯಾಗಿ ಆಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಮುಸಲೋನಿಯ ಬೇಡಿಕೆಯನ್ನೂ ರಾಜ ಒಪ್ಪಿಕೊಂಡ. ೧೯೨೪ರಲ್ಲಿ ಸಂಸತ್ತಿಗೆ ಚುನಾವಣೆ ನಡೆಯುವುದಿತ್ತು. ಈ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೆ ಸರಳವಾದ ಬಹುಮತ ದೊರಕುತ್ತದೆಯೋ ಆ ಪಕ್ಷಕ್ಕೆ ಮುಕ್ಕಾಲು ಪಾಲು ಪಾರ್ಲಿಮೆಂಟ್ ಸ್ಥಾನಗಳನ್ನು ಕೊಡಬೇಕು ಎನ್ನುವ ವಿಚಿತ್ರವಾದ ‘ಅಸೆರ್ಬ್ ಕಾನೂನನ್ನು’ ಮುಸಲೋನಿ ಜಾರಿ ಮಾಡಿದ. ಈ ಚುನಾವಣೆಗಳಲ್ಲಿ ಫಾಸಿಸ್ಟ್ ಪಕ್ಷ ಶೇ. ೬೦ರಷ್ಟು ಮತ ಗಳಿಸಿ, ಒಟ್ಟು ೫೨೫ ಸ್ಥಾನಗಳಲ್ಲಿ ೩೭೫ ಸ್ಥಾನಗಳನ್ನು ಪಡೆದುಕೊಂಡಿತು. ಇಲ್ಲಿಂದ ಮುಂದೆ ‘ಬ್ಲ್ಯಾಕ್ ಷರ್ಟ್’ಗಳು, ಫಾಸಿಸ್ಟ್ ಗುಪ್ತ ಪೊಲೀಸರು ಹಾಗೂ ಅರೆಮಿಲಿಟರಿ ಪಡೆಗಳು ಪ್ರಭುತ್ವವನ್ನು ತಮ್ಮ ಕೈಗೆ ತೆಗೆದುಕೊಂಡರು. ಎಷ್ಟೋ ಊರುಗಳಲ್ಲಿ ಫಾಸಿಸ್ಟರು ತಮ್ಮದೇ ಆದ ಪೊಲೀಸು ಮತ್ತು ಕಾನೂನು ವ್ಯವಸ್ಥೆ ಸ್ಥಾಪಿಸಿದ್ದರು. ೧೯೨೪ರಲ್ಲಿ ಫಾಸಿಸ್ಟ್ ಆಡಳಿತವನ್ನು ತಕ್ಷಣ ಬರಖಾಸ್ತುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದ ಸೋಷಿಯಲಿಸ್ಟ್ ನಾಯಕ ಮೆಟ್ಟಿಯೊಟ್ಟಿ ಯನ್ನು ಅಪಹರಿಸಿ ಹತ್ಯೆ ಮಾಡಲಾಯಿತು; ಈ ಹತ್ಯೆಗೆ ವ್ಯಕ್ತವಾದ ಅಲ್ಪಸ್ವಲ್ಪ ಪ್ರತಿಭಟನೆಯನ್ನು ಫಾಸಿಸ್ಟ್ ಪಡೆಗಳು ಕ್ರೂರ ರೀತಿಯಲ್ಲಿ ತುಳಿದು ಹಾಕಿದವು. ತನ್ನ ವಿರೋಧಿಗಳನ್ನು ಬೇಟೆಯಾಡಿ, ಇವರನ್ನು ಕೂಡಿ ಹಾಕಲೆಂದೇ ಲಿಯಾಪಾರಿ ದ್ವೀಪದಲ್ಲಿ ನಿರ್ಮಿಸಲಾಗಿದ್ದ ದೊಡ್ಡಿಗಳಿಗೆ ಸಾಗಿಸಲು ‘ಒವ್ರಾ’ ಎಂಬ ವಿಶೇಷ ಪೊಲೀಸ್ ಪಡೆಯನ್ನೇ ಮುಸಲೋನಿ ನಿಯೋಜಿಸಿದ. ೧೯೨೮ರಲ್ಲಿ ಇಟಲಿಯ ಪಾರ್ಲಿಮೆಂಟ್ ಹಾಗೂ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬರಖಾಸ್ತು ಮಾಡಿದ ಮುಸಲೋನಿ ಫಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವನ್ನು ಇಟಲಿಯ ಜನರ ಮೇಲೆ ಹೇರಿದ. ರೋಮನ್ ಕ್ಯಾಥೋಲಿಕ್ ಚರ್ಚ್ ಮೊದಲಿಗೆ ಫಾಸಿಸ್ಟ್ ಆಳ್ವಿಕೆಯನ್ನು ವಿರೋಧಿಸಿತ್ತು. ಆದರೆ ೧೯೨೯ರಲ್ಲಿ ಮುಸಲೋನಿ ಪೋಪ್‌ರ ಜೊತೆ ‘ಲ್ಯಾಟರನ್ ಒಪ್ಪಂದ’ವನ್ನು ಮಾಡಿಕೊಂಡು ರೋಂ ನಗರದ ಒಳಗೇ ಸಂಪೂರ್ಣ ಚರ್ಚಿನ ಸ್ವಯಂ ಆಡಳಿತಕ್ಕೆ ಸೇರಿದ ವ್ಯಾಟಿಕನ್ ನಗರವನ್ನು ಕಟ್ಟಿಕೊಟ್ಟ. ಚರ್ಚ್ ನಿಯುಕ್ತಿಗೊಳಿಸಿದ ಎಲ್ಲ ಪುರೋಹಿತರಿಗೆ ಸರ್ಕಾರದಿಂದ ಸಂಬಳ, ಶಾಲೆಗಳಲ್ಲಿ ಕ್ಯಾಥೋಲಿಕ್ ಧರ್ಮದ ಕಡ್ಡಾಯ ಬೋಧನೆ ಮುಂತಾದ ಸವಲತ್ತುಗಳನ್ನು ನೀಡಿದ ನಂತರ ಪೋಪ್ ಫಾಸಿಸ್ಟರಿಗೆ ಬೇಷರತ್ ಬೆಂಬಲ ಘೋಷಿಸಿದ. ಎಲ್ಲ ರಾಜಕೀಯ ಪಕ್ಷಗಳು, ಕಾರ್ಮಿಕ, ರೈತ ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ಹೆಂಗಸರು ಮನೆಯ ಹೊರಗಿನ ಪ್ರಪಂಚಕ್ಕೆ ಕಾಲಿಡದೆ, ಮನೆಯಲ್ಲಿ ಒಳ್ಳೆಯ ಗೃಹಿಣಿಯರಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಇಟಲಿಗೆ ಹೆಚ್ಚೆಚ್ಚು ಮಕ್ಕಳನ್ನು ಅಗತ್ಯವಾಗಿ ಹಡೆದುಕೊಡಬೇಕು ಎಂಬ ಆಜ್ಞೆಗಳನ್ನು ಮುಸಲೋನಿ ಹೊರಡಿಸಿದ. ಹೆಂಗಸರನ್ನು ಹೆರುವ ಕಾರ್ಖಾನೆಗಳನ್ನಾಗಿಸುವ ಈ ಆಜ್ಞೆಗೆ ಮುಸಲೋನಿ ಮಹಾಶಯ ಕೊಟ್ಟ ಹೆಸರು ‘ಮಕ್ಕಳನ್ನು ಹೆರುವ ಯುದ್ಧ!’ (ಫಣಿರಾಜ್ ೨೦೦೩: ೧-೨೪).

ಫಾಸಿಸಂ

ಗ್ರಾಂಸಿಯು ಹೇಳುವಂತೆ ಇಟಲಿಯ ಫಾಸಿಸಂ, ಕಾರ್ಮಿಕ ವರ್ಗದ ವಿರೋಧಿ ರಾಜಕೀಯ ಸಿದ್ಧಾಂತವಾಗಿದ್ದು ಸಹಸ್ರಾರು ಕ್ರೂರ ಹಾಗೂ ಭ್ರಷ್ಟ ಮನಸ್ಸುಗಳ ತಲೆ, ಬಾಲ, ಆಕಾರವಿಲ್ಲದ ಜನಸಮೂಹವಾಗಿ ಬೆಳೆಯುತ್ತಿತ್ತು. ಈ ಪಕ್ಷವು ತನ್ನ ಸದಸ್ಯತ್ವವನ್ನು ಹೆಚ್ಚಿಸಲು ಎಲ್ಲ ಸಮಾಜ ವಿರೋಧಿ, ವಿಚ್ಛಿದ್ರಕಾರಿ ಜನರನ್ನು ಸದಸ್ಯತ್ವಕ್ಕಾಗಿ ತೆಗೆದುಕೊಳ್ಳಲು ಆಹ್ವಾನಿಸುತ್ತಿತ್ತು. ಈ ದಿಶೆಯಲ್ಲಿ ಫಾಸಿಸಂ ವ್ಯವಸ್ಥೆಯು ಇಟಲಿಯಲ್ಲಿ ಒಂದು ದುರಂತ ಸಮಾಜವಾಗಿ ಬೆಳೆದು ನಿಂತಿತ್ತು. ಫಾಸಿಸಂ ಉಗಮವೆಂದರೆ ಅನಾಗರಿಕ ಮತ್ತು ಬರ್ಬರಗೊಂಡಿರುವ ವಿಕೃತ ಸಮಾಜದ ಮನಸ್ಥಿತಿ. ಫಾಸಿಸಂ ಬಹುಮುಖ್ಯ ಅಂಗವೆಂದರೆ ಇಟಲಿಯ ಪ್ರಸಿದ್ಧ ಕೊಲೆಗಡುಕ, ವೃತ್ತಿಪರ, ರಕ್ತಪಾತ ಮಾಡುವ ಮಾಫಿಯಾ ಜನರ ಕೂಟ ಹಾಗೂ ಯುದ್ಧಗಳಲ್ಲಿ ಭಾಗವಹಿಸಿದ್ದ ಭ್ರಷ್ಟ ಯೋಧರನ್ನು ಕೂಡಿಸಿ ಮಾಡಿದ ಅಧಿಕಾರ ವರ್ಗದ ನಾಯಕತ್ವವಾಗಿತ್ತು. ಈ ರಕ್ತ ಪಿಪಾಸಿಗಳಿಂದ ಆಳಲ್ಪಡುವ ಯಾವುದೇ ಸಮಾಜ ಮತ್ತು ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡ ಕ್ರೂರ ಮನಸ್ಸಿನ ಸಮಾಜವಾಗಿ ಬದಲಾವಣೆ ಹೊಂದುತ್ತದೆ. ಇಟಲಿಯಲ್ಲಿ ಅಂದಿನ ಪರಿಸ್ಥಿತಿಯು ಬಹಳ ಗಂಭೀರವಾಗಿದ್ದು ಕೊಲೆ, ಸುಲಿಗೆ, ಲೂಟಿ ಮತ್ತು ದೌರ್ಜನ್ಯಗಳು ಸಾಮಾನ್ಯವಾಗಿದ್ದವು. ಅಪರಾಧಿಗಳನ್ನು ಯಾವುದೇ ರೀತಿಯಲ್ಲಿ ಶಿಕ್ಷೆಗೆ ಗುರಿ ಮಾಡಲು ಸಾಧ್ಯವಾಗದೆ ಅಧಿಕಾರ ವರ್ಗವೇ ಅಂತಹ ಅಪರಾಧಿಗಳಿಗೆ ಬೆಂಬಲ ಕೊಡುತ್ತಿತ್ತು.

ಗ್ರಾಂಸಿಯ ಅಧ್ಯಯನದಂತೆ ಫಾಸಿಸ್ಟರ ಬೆಳವಣಿಗೆಯು ಚಿಕ್ಕಪುಟ್ಟ ಪುಂಡರ ತಂಡ (ಲುಂಪನ್), ಗುಂಪುಗಳೊಂದಿಗೆ ಪ್ರಾರಂಭವಾಗಿ ಶಿಸ್ತಿನಿಂದ ಕೂಡಿದ ಅರೆ ಸೈನ್ಯ ಪೊಲೀಸ್‌ನ ರೂಪ ಪಡೆಯುತ್ತ ಹಂತ ಹಂತವಾಗಿ ಸಾವಿರಾರು ಜನರ ಚಿಕ್ಕ ಪುಟ್ಟ ತುಕಡಿ ಮತ್ತು ಘಟಕಗಳು ನಗರ ಪ್ರದೇಶಗಳಲ್ಲಿ ಹುಟ್ಟಿಕೊಳ್ಳುತ್ತವೆ. ಸಾವಿರಾರು ಜನರು ಜಮಾಯಿಸುವ ಕವಾಯಿತು ಪ್ರದರ್ಶನಗಳು ಪ್ರಾರಂಭವಾಗುತ್ತವೆ. ಇಟಲಿಯಲ್ಲಿ ಈ ರೀತಿಯ ಸಭೆಗಳು ಸೀನಾ ಎಂಬಲ್ಲಿ ನಡೆಸಲಾಯಿತು. ಇಟಲಿಯಲ್ಲಿನ ಸಮಾಜವಾದಿಗಳು ಇಂತಹ ಬೆಳವಣಿಗೆಯನ್ನು ನೋಡಿಯೂ ಅಂತಹ ಬೆಳವಣಿಗೆಯ ಬಗ್ಗೆ ಯೋಚಿಸದೆ ಕಾರ್ಯಮಗ್ನರಾಗದೆ ಇದ್ದದ್ದು ಕಾರ್ಮಿಕ ಹೋರಾಟದ ಅಂತ್ಯಕ್ಕೆ ಕಾರಣವಾಯಿತು.

ಗ್ರಾಂಸಿಯ ಅಭಿಪ್ರಾಯದಂತೆ ಇಟಲಿಯಲ್ಲಿ ಫಾಸಿಸಂ ಮೊದಲನೆಯ ಮಹಾಯುದ್ಧದ ನಂತರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಕಾರಣವಾಗಿ ಬೂರ್ಜ್ವಾ ಹಾಗೂ ಮಧ್ಯಮವರ್ಗಗಳ ನಡುವೆ ಬೆಳೆಯಿತು. ಯುದ್ಧದ ನಂತರ ಮಧ್ಯಮ ವರ್ಗದ ಬೂರ್ಜ್ವಾ ಗುಣಗಳನ್ನು ಹೊಂದಿದ್ದ ಯೋಧರು, ಸೈನಿಕರು, ಗ್ರಾಮೀಣ ಮಧ್ಯಮ ವರ್ಗದ ಭೂಮಾಲೀಕ, ಬಂಡವಾಳ ವರ್ಗವು ಕಾರ್ಮಿಕರನ್ನು ಹಾಗೂ ಸೋಷಿಯಲಿಸ್ಟ್‌ರನ್ನು ಸದೆಬಡಿದು ದೊಡ್ಡ ಬಂಡವಾಳ ವರ್ಗ ಹಾಗೂ ಆಳುವ ವರ್ಗ ಎರಡೂ ಒಂದಾಗಿ ಸಹಕಾರದಿಂದ ಸರಕಾರದ ಅಧಿಕಾರವನ್ನು ಪಡೆಯಲು ಶ್ವೇತ ಯೋಧರ ಪಕ್ಷವನ್ನು ಕಾರ್ಮಿಕರ ವಿರುದ್ಧ ರಚಿಸಲಾಯಿತು.

ಗ್ರಾಂಸಿಯ ಪ್ರಕಾರ ಫಾಸಿಸಂ ಸಿದ್ಧಾಂತವು ಉತ್ಪಾದನೆ ಹಾಗೂ ಕಾರ್ಮಿಕ ಕ್ಷೇತ್ರದ ಸಮಸ್ಯೆಗಳನ್ನು  ಬಗೆಹರಿಸಲು ಬಂದೂಕು ಹಾಗೂ ಇತರ ಮಾರಕ ಆಯುಧಗಳನ್ನು ಬಳಸುವ ಮಂತ್ರವಾಗಿರುತ್ತದೆ. ಗ್ರಾಂಸಿಯು ತನ್ನ ಕಾಲದಲ್ಲಿಯೇ ಮುಸಲೋನಿಯ ನಾಯಕತ್ವದ ಫಾಸಿಸಂ ಹಾಗೂ ಸ್ಪೆಯಿನ್‌ನ ಫಾಸಿಸಂ ಬೆಳವಣಿಗೆಗಳು ಜರ್ಮನಿಯ ನಾಸಿಜಂನ ಜೊತೆಗೆ ಬೆಳೆಯುತ್ತಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ವಿರೋಧಿ ಶಕ್ತಿಗಳಾಗುತ್ತಿದ್ದವು ಎಂಬುದನ್ನು ಕಂಡುಕೊಂಡನು. ಕೈಗಾರಿಕಾ ಕಾರ್ಮಿಕರ ಸಂಬಂಧಗಳನ್ನು ಒಡೆಯುವುದು, ರಾಷ್ಟ್ರೀಯ ಬಂಡವಾಳವನ್ನು ದೋಚುವುದು ಮತ್ತು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿ ಚಿಕ್ಕಪುಟ್ಟ ಬೂರ್ಜ್ವಾ ಶಕ್ತಿಗಳನ್ನು ಕ್ರೋಡೀಕರಿಸಿ ಬಂಡವಾಳಿಗರನ್ನು ಹೆಚ್ಚು ಪ್ರೋತ್ಸಾಹಿಸುತ್ತ ಕೊಳ್ಳೆ ಹೊಡೆಯುವ ಆರ್ಥಿಕ ಸಂಸ್ಕೃತಿಯನ್ನು ನಿರ್ಮಿಸುವುದು ಫಾಸಿಸ್ಟರ ಪ್ರಮುಖವಾದ ಕಾರ್ಯಕ್ರಮಗಳಾಗಿದ್ದವು.

ಫಾಸಿಸ್ಟರು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ದೇಶವನ್ನೆಲ್ಲ ಲೂಟಿ ಹೊಡೆದು ಉತ್ಪಾದನೆಯಲ್ಲಿ ಬಿಕ್ಕಟ್ಟನ್ನು ತಂದೊಡ್ಡಿದ್ದರು. ಕಾರ್ಮಿಕರ ಹಾಗೂ ನಾಯಕರ ಕೊಲೆಗಳು, ಲಾಕ್‌ಔಟ್‌ಗಳು, ತುರ್ತು ಪರಿಸ್ಥಿತಿ, ರೈತರ, ಕಾರ್ಮಿಕರ ಸಂಘಗಳ ರದ್ಧತಿ, ಕಾರ್ಮಿಕರ ಬಂಧನಗಳು ಪ್ರತಿದಿನದ ಸುದ್ದಿಗಳಾಗಿದ್ದವು. ಈ ಫಾಸಿಸ್ಟ್ ದೇಶಗಳಲ್ಲಿ ಬೋಲ್ಶೆವಿಕ್ ಪಕ್ಷದ ವಿರೋಧಿ ಗುಂಪುಗಳು, ದಳಗಳು ನೇಮಕಗೊಂಡು ಸೇನೆಯು ಜುಂಟಾ ಮಾದರಿಯಲ್ಲಿ ಕಾರ್ಯಗತ ಮಾಡುತ್ತಿದ್ದವು. ಇಟಲಿಯ ಫಾಸಿಸ್ಟ್ ದಳಗಳಲ್ಲಿ ೪೦,೦೦೦ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸಜ್ಜುಗೊಳಿಸಿ ಕಾರ್ಮಿಕ ಸಂಘಗಳ ವಿರುದ್ಧ ವ್ಯವಸ್ಥಿತವಾದ ದೌರ್ಜನ್ಯಗಳನ್ನು ನಡೆಸಲು ನೇಮಿಸಲಾಗಿತ್ತು. ಇಟಲಿ, ಸ್ಪೇನ್ ಮತ್ತು ಜರ್ಮನಿಯಲ್ಲಿ ಸಾರ್ವಜನಿಕ ಸ್ವಾತಂತ್ರ್ಯವು ನಾಶಗೊಂಡು ಮಾನವ ಹಕ್ಕುಗಳು ಸಂಪೂರ್ಣ ನಾಶಗೊಂಡವು. ಇಟಲಿಯ ಮಧ್ಯಮ ವರ್ಗವು ದೇಶದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬಡತನ ಹಾಗೂ ಜನರ ಹಾಹಾಕಾರವನ್ನು ಬಗೆಹರಿಸಲು ಬಂದೂಕು, ಗುಂಡುಗಳನ್ನು ಬಳಸುವುದು ಅಗತ್ಯವೆಂದು ಯೋಚಿಸುತ್ತಿತ್ತು. ಈ ರೀತಿಯ ನಾಯಕತ್ವದ ಅಡಿಯಲ್ಲಿ ಪುಂಡರ ಗುಂಪುಗಳನ್ನು ಸಂಘಟಿಸುವುದು, ಶಸ್ತ್ರಾಸ್ತ್ರಗಳ ಸಂಗ್ರಹಣೆ, ತರಬೇತಿ ಚಟುವಟಿಕೆಗಳನ್ನು ಗುಪ್ತವಾಗಿ ಹಾಗೂ ಬಹಿರಂಗವಾಗಿ ನಡೆಸುವುದು ಮತ್ತು ಸಂಚಲನ ಚಟುವಟಿಕೆ ಹಾಗೂ ಸಂಘಟನೆಯನ್ನು ಶ್ರೇಣೀಕೃತವಾದ ನಾಯಕತ್ವ ದೊಂದಿಗೆ ಸಂಘಟಿಸುವುದು ಫಾಸಿಸ್ಟರ ಮುಖ್ಯ ಕಾರ್ಯವಾಗಿರುತ್ತದೆ(ಪ್ರಸಾದ್ ೨೦೦೨: ೭-೧೩).