ಗ್ರಾಂಸಿಯ ರಾಜಕೀಯ ಹಿನ್ನಡೆ ಮತ್ತು ಬಂಧನ

೧೯೨೦ರಲ್ಲಿ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯರು ಪಕ್ಷವನ್ನು ತೊರೆದು ಇಟಲಿಯ ಕಮ್ಯುನಿಸ್ಟ್ ಪಕ್ಷವನ್ನು (ಪಿ.ಸಿ.ಇ.) ಕಟ್ಟಿದರು. ಗ್ರಾಂಸಿ, ಬೋರ್ಡಿಗ, ತೊಗ್ಲಿಯಾಟ್ಟಿ, ಟೆರಸಿನ್ನಿ ಹಾಗೂ ಟಸ್ಕ ಪಕ್ಷದ ಪ್ರಮುಖ ನಾಯಕರಾಗಿದ್ದರು. ಬೋರ್ಡಿಗ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ.

ಬೋರ್ಡಿಗ ಸೋಷಿಯಲಿಸ್ಟ್ ಪಕ್ಷದ ದಿನಗಳಿಂದಲೂ ಪ್ರಭಾವಿ ನಾಯಕನಾಗಿದ್ದ. ಗ್ರಾಂಸಿ ಬೋರ್ಡಿಗನಷ್ಟು ಪ್ರಭಾವಿಯಲ್ಲದಿದ್ದರೂ ಪಕ್ಷದಲ್ಲಿ ಅವನಿಗೆ ಸಾಕಷ್ಟು ಗೌರವವಿತ್ತು. ಎಡ ಪಕ್ಷಗಳ ಅನೇಕ ಭಿನ್ನಾಭಿಪ್ರಾಯಗಳು ‘ಮೂರನೆಯ ಇಂಟರ್‌ನ್ಯಾಷನಲ್’ನ ಸಮಾವೇಶದ ವೇದಿಕೆಯನ್ನೂ ಏರಿತು. ತಾತ್ಕಾಲಿಕ ಪರಿಹಾರವಾಗಿ ಗ್ರಾಂಸಿಯನ್ನು ಇಂಟರ್ ನ್ಯಾಷನಲ್‌ನ ಕೇಂದ್ರ ಕಛೇರಿಯಲ್ಲಿ ಇಟಲಿಯ ಪಕ್ಷದ ಪ್ರತಿನಿಧಿಯಾಗಿ ಆಯ್ಕೆ ಮಾಡಿ, ಎರಡು ವರ್ಷಗಳ ಅವಧಿಗೆ (೧೯೨೦‑೨೨) ಮಾಸ್ಕೊಗೆ ಕಳುಹಿಸಿತು.

೧೯೨೨ರಲ್ಲಿ ಇಟಲಿಗೆ ಹಿಂತಿರುಗಿದ ನಂತರ ಗ್ರಾಂಸಿ ತನ್ನ ನಿಲುವನ್ನು ಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮುಂದುವರೆಸಿದ. ೧೯೨೪ರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿ ಪಾರ್ಲಿಮೆಂಟಿಗೆ ಆಯ್ಕೆಯಾದ. ೧೯೨೪ರಲ್ಲಿ ಲಿಯೊನೆಲ್ ನಗರದಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಪಕ್ಷವು ಹಿಡಿಯಬೇಕಾದ ಹಾದಿಯ ಬಗ್ಗೆ ಚರ್ಚೆ ನಡೆಯಿತು. ಇದು ಹಲವಾರು ಭಿನ್ನಾಭಿಪ್ರಾಯಗಳಿಂದ ಕೂಡಿದ ಸುದೀರ್ಘ ಚರ್ಚೆಯಾಯಿತು. ಆ ಅಧಿವೇಶನದಲ್ಲಿ ಗ್ರಾಂಸಿಯ ನಿಲುವನ್ನು ಬಹುಪಾಲು ಸದಸ್ಯರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಗ್ರಾಂಸಿಯನ್ನು ಪಕ್ಷದ ಪ್ರಧಾನ ಕಾಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಈ ನಡುವೆ ಸೋಷಿಯಲಿಸ್ಟ್ ಪಕ್ಷದ ನಾಯಕ ಮಟ್ಟಿಯೊಟ್ಟಿಯ ಹತ್ಯೆಯಾಯಿತು. ಮಟ್ಟಿಯೊಟ್ಟಿಯ ಕೊಲೆ ನಡೆದ ತಕ್ಷಣವೇ ಎಲ್ಲ ಫಾಸಿಸ್ಟ್ ವಿರೋಧಿ ಸಂಘಟನೆಗಳು ಒಗ್ಗೂಡಿ ಸಾರ್ವತ್ರಿಕ ಮುಷ್ಕರ ನಡೆಸಬೇಕು ಎಂದು ಗ್ರಾಂಸಿ ಕರೆ ನೀಡಿದ. ತಮ್ಮ ಪಕ್ಷದ ನಾಯಕನ ಕೊಲೆಯಾಗಿದ್ದರೂ ಸೋಷಿಯಲಿಸ್ಟ್ ಪಕ್ಷದವರು ಮುಷ್ಕರದಲ್ಲಿ ಭಾಗವಹಿಸಲು ನಿರಾಕರಿಸಿದರು. ಮುಸಲೋನಿ ಇಟಲಿಯ ಜನರಿಗೆ ಉದ್ದುದ್ದ ಭರವಸೆಗಳನ್ನು ನೀಡಿದ್ದರೂ ಉಳ್ಳವರ ಪರವಾದ ಹಾಗೂ ವಿದೇಶಿ ಬಂಡವಾಳದಾರರನ್ನು ಓಲೈಸುತ್ತಿತ್ತು. ಇದರಿಂದ ಸಾಮಾನ್ಯ ಜನರಲ್ಲಿ ಅಸಮಾಧಾನ ಉಂಟಾಗುತ್ತಿರುವುದನ್ನು ಗ್ರಾಂಸಿ ಗ್ರಹಿಸಿದ. ಈ ಸನ್ನಿವೇಶದಲ್ಲಿ ಒಂದು ಕಡೆ ದಕ್ಷಿಣದ ಫಾಸಿಸ್ಟ್ ವಿರೋಧಿ ರೈತ ಸಂಘಟನೆಗಳ ಜೊತೆಗೆ ಮೈತ್ರಿ ಸಾಧಿಸುವುದು, ಮತ್ತೊಂದು ಕಡೆ ಫಾಸಿಸ್ಟ್ ಸರ್ಕಾರದ ಉಳ್ಳವರ ಪರವಾದ ನೀತಿಗಳಿಗೆ ಬಹಿರಂಗವಾಗಿಯೇ ವಿರೋಧ ತೋರಿಸುತ್ತಿದ್ದ ‘ತಳಮಟ್ಟದ ಫಾಸಿಸ್ಟ್ ಬೆಂಬಲಿಗರ’ ನಡುವೆ ಕಮ್ಯುನಿಸ್ಟ್ ಪಕ್ಷದ ಧೋರಣೆಗಳನ್ನು ಜನಪ್ರಿಯಗೊಳಿಸುವುದು, ಈ ರೀತಿ ಎರಡು ನಮೂನೆಯ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕರ್ತರಿಗೆ ಗ್ರಾಂಸಿ ನಿರೂಪಿಸಿದ. ಫಾಸಿಸ್ಟ್ ಪ್ರಭುತ್ವ ಹೆಚ್ಚೆಚ್ಚು ಕ್ರೂರವಾಗಿ ವಿರೋಧಿಗಳನ್ನು ದಮನ ಮಾಡಲು ಶುರು ಮಾಡಿದ ಹೊತ್ತಿನಲ್ಲಿ ಈ ಕಾರ್ಯಕ್ರಮಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತವೆ ಎನ್ನುವ ಭ್ರಮೆ ಗ್ರಾಂಸಿಗೆ ಒಂದಿಷ್ಟೂ ಇರಲಿಲ್ಲ. “ಹಿಂದಿನ ರೀತಿಯಲ್ಲಿಯೇ ನಮ್ಮ ಕಾರ್ಯಕ್ರಮ ಗಳನ್ನು ಇಂದು ಕೂಡ ನಡೆಸಿಕೊಂಡು ಹೋಗುತ್ತೇವೆ ಎನ್ನುವುದು ಹುಂಬತನ; ನಮ್ಮ ವಿಚಾರಗಳ ಪ್ರಸಾರಕ್ಕೆ ಪರಿಸ್ಥಿತಿ ಪ್ರತಿಕೂಲವಾಗಿದೆ ಎನ್ನುವುದನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ಹಾಗೆಂದು ಅನುಕೂಲಕರ ವಾತಾವರಣಕ್ಕೆ ಕಾಯೋಣ ಎಂದು ಕೈಚೆಲ್ಲಿ ಕೂಡಬಾರದು; ಈ ಪ್ರತಿಕೂಲ ಸನ್ನಿವೇಶದಲ್ಲೂ ನಮ್ಮ ವಿಚಾರಗಳನ್ನು ಜನರಿಗೆ ತಲುಪಿಸುವ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು. ಇದೇ ವಾಸ್ತವಿಕವಾಗಿ ರಾಜಕೀಯದ ಅರ್ಥ” ಎಂದು ಗ್ರಾಂಸಿ ಪಕ್ಷದ ಸದಸ್ಯರಿಗೆ ವಿವರಿಸಿದ. ೧೯೨೬ರಲ್ಲಿ ಯುವಕನೊಬ್ಬ ಮುಸಲೋನಿಯ ಹತ್ಯಗೆ ಯತ್ನಿಸಿದ. ಇದನ್ನೇ ನೆಪ ಮಾಡಿಕೊಂಡು ಫಾಸಿಸ್ಟ್ ಸರ್ಕಾರ ತನ್ನ ವಿರೋಧಿಗಳನ್ನೆಲ್ಲ ‘ದೇಶದ್ರೋಹ’ದ ಆರೋಪ ಹೋರಿಸಿ ಬಂಧಿಸುವ ಆಜ್ಞೆ ಹೊರಡಿಸಿತು. ಪಕ್ಷದ ಸಂಗಾತಿಗಳು ಗ್ರಾಂಸಿ ಇಟಲಿಯಲ್ಲಿ ಇರುವುದು ಸುರಕ್ಷಿತವಲ್ಲ ಎಂದು ಗ್ರಹಿಸಿ ಅವನನ್ನು ಸ್ವಿಟ್ಜರ್‌ಲ್ಯಾಂಡಿಗೆ ಕಳಿಸುವ ನಿರ್ಧಾರ ಮಾಡಿದರು. ಆಗ ಇಟಲಿಯಲ್ಲಿ ಸಂಸತ್ ಸದಸ್ಯರನ್ನು ರಾಜಕೀಯ ಕಾರಣಗಳಿಗೆ ಬಂಧಿಸಕೂಡದು ಎನ್ನುವ ನಿಯಮವಿದ್ದುದರಿಂದ ತನ್ನನ್ನು ಸರ್ಕಾರವು ಬಂಧಿಸಲಿಕ್ಕಿಲ್ಲ ಎಂದು ಗ್ರಾಂಸಿ ದೇಶಾಂತರ ಹೋಗಲು ನಿರಾಕರಿಸಿದ. ಅವನ ನಿರೀಕ್ಷೆಯ ವಿರುದ್ಧ ಸಂಸತ್ ಸದಸ್ಯರನ್ನು ಕೂಡ ಸರ್ಕಾರ ಬಂಧಿಸತೊಡಗಿತು. ಆಗಲೂ ಗ್ರಾಂಸಿ ಹಡಗಿನ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ದಡ ತಲುಪಿದ್ದಾರೆ ಎಂದು ಖಾತ್ರಿಯಾಗದ ಹೊರತು ನಾವಿಕ ತನ್ನ ಸುರಕ್ಷೆಯ ಬಗ್ಗೆ ಚಿಂತಿಸಕೂಡದು. ಪಕ್ಷದ ತಳಮಟ್ಟದ ಕಾರ್ಯಕರ್ತರು ನಾಯಕರಿಲ್ಲದೆ ತಾವು ಹೋರಾಟ ನಡೆಸಬಲ್ಲೆವು ಎಂಬ ವಿಶ್ವಾಸ ವ್ಯಕ್ತಪಡಿಸದ ಹೊರತು ನಾವು ದೇಶ ಬಿಡಕೂಡದು ಎಂದು ಧೃಢವಾಗಿ ಹೇಳಿ ಇಟಲಿಯಲ್ಲಿಯೇ ಉಳಿದ. ಎಣಿಸಿದಂತೆಯೇ ೧೯೨೬ರಲ್ಲಿ ಗ್ರಾಂಸಿಯು ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರನ್ನು ರಾಷ್ಟ್ರವಿರೋಧಿ ಕೃತ್ಯಗಳಿಗಾಗಿ ಬಂಧಿಸಲಾಯಿತು (ಫಣಿರಾಜ್ ೨೦೦೩: ೨೦-೨೩).

ಗ್ರಾಂಸಿಯ ಜೈಲು ದಿನಗಳು

ಫಾಸಿಸ್ಟ್ ಸರ್ಕಾರವು ಗ್ರಾಂಸಿಯನ್ನು ಅಸ್‌ಟಿಕಾ ಎಂಬ ದ್ವೀಪಕ್ಕೆ ಬಂಧಿಯಾಗಿ ವರ್ಗಾಯಿಸಿತು. ಇಟಲಿಯ ಉತ್ತರದಲ್ಲಿದ್ದ ಈ ದ್ವೀಪದಿಂದ ಕೆಲವು ವಾರಗಳ ನಂತರ ಜನವರಿ ೧೯೨೭ರಲ್ಲಿ ಮಿಲಾನ್ ನಗರಕ್ಕೆ ನ್ಯಾಯಾಲಯದ ವಿಚಾರಣೆಗೆ ಕರೆತರಲಾಯಿತು. ಆದರೆ ಯಾವುದೇ ತನಿಖೆ ನಡೆಯದೆ ಗ್ರಾಂಸಿ ಭೀಕರ ಪರಿಸ್ಥಿತಿಯಲ್ಲಿ ಬಂಧನದಲ್ಲಿರ ಬೇಕಾಯಿತು. ನಿಜವಾದ ತನಿಖೆಗಾಗಿ ಗ್ರಾಂಸಿಯು ೧೯೨೮ರ ಮೇ ತಿಂಗಳವರೆಗೆ ಕಾಯ ಬೇಕಾಯಿತು. ಆಮೇಲೆ ಪಕ್ಷದ ಸಂಗಾತಿಗಳೊಂದಿಗೆ ಸ್ಥಳಾಂತರಿಸಲ್ಪಟ್ಟ ಗ್ರಾಂಸಿಯನ್ನು ರೋಮ್‌ಗೆ ತರಲಾಯಿತು. ಈ ಸಮಯದಲ್ಲಿ ಫಾಸಿಸ್ಟ್ ಸರ್ಕಾರವು ಸುಳ್ಳು ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಮಂಡಿಸುತ್ತ ಏಕಪಕ್ಷೀಯವಾಗಿ ಹಾಗೂ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಗ್ರಾಂಸಿಯು ರಾಷ್ಟ್ರವಿರೋಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದನೆಂದೂ, ಕಾರ್ಮಿಕ ವರ್ಗದ ತೀವ್ರಗಾಮಿ ಕಾರ್ಯಾಚರಣೆಯನ್ನು ಹುಟ್ಟುಹಾಕಿದನೆಂದೂ ೨೦ ವರ್ಷಗಳ ಕಾಲ ಸೆರೆಯನ್ನು ಘೋಷಿಸಿತು.  ಈ ಸಂದರ್ಭದಲ್ಲಿ ತೀರ್ಪುಕೊಟ್ಟ ಫಾಸಿಸ್ಟ್ ಅಧಿಕಾರಿಯು ಗ್ರಾಂಸಿಯ ‘ಕಾರ್ಯಕಾರಿ ಕ್ರಿಯಾತ್ಮಕ ಮೆದುಳನ್ನು ನಿಲ್ಲಿಸಬೇಕು’ ಎಂದು ಘೋಷಿಸಿದನು (ಪ್ರಸಾದ್ ೨೦೦೨: ೧-೨).

೧೯೨೬‑೨೮ರವರೆಗೆ ಗ್ರಾಂಸಿಯನ್ನು ಅವನ ಇತರ ಸಂಗಾತಿಗಳ ಜೊತೆ ಒಂದೇ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿಯೇ ಅವನು ಒಂದು ವಿವರವಾದ ಪಠ್ಯಕ್ರಮವನ್ನು ತಯಾರಿಸಿ ಸಹ ಕೈದಿಗಳಿಗೆ ಅಧ್ಯಯನ ತರಗತಿಗಳನ್ನು ಪ್ರಾರಂಭಿಸಿದ. ಅದು ‘ಸೆರೆಮನೆಯ ವಿಶ್ವವಿದ್ಯಾಲಯ’ ಎಂದೇ ಖ್ಯಾತವಾಯಿತು. ೧೯೨೮ರಲ್ಲಿ ಗ್ರಾಂಸಿಯನ್ನು ಅವನ ಸಂಗಾತಿ ಗಳಿಂದ ಬೇರೆ ಮಾಡಿ ಟ್ಯುರಿನ್ ಎಂಬ ಊರಿನ ಜೈಲಿಗೆ ಸ್ಥಳಾಂತರಿಸಲಾಯಿತು (ಫಣಿರಾಜ್ ೨೦೦೩: ೨೩-೨೪).

ಇಟಲಿಯ ಕ್ರೂರ ಬೇಸಿಗೆಯಲ್ಲಿ ಗ್ರಾಂಸಿಯ ಪ್ರಯಾಣವು ರೋಮ್‌ನಿಂದ ಪ್ರಾರಂಭವಾಗಿ ಟುರ್‌ಡಿ ಬಾರಿಯಲ್ಲಿನ ಸೆರೆಮನೆಯಲ್ಲಿ ಕೊನೆಯಾಯಿತು. ದನಗಳನ್ನು ಸಾಗಿಸುವ ರೈಲು ವ್ಯಾಗನ್‌ಗಳಲ್ಲಿ ಗ್ರಾಂಸಿಯನ್ನು ಸರಪಳಿಗಳಿಂದ ಬಂಧಿಸಿ, ಕೈಕಾಲುಗಳನ್ನು ಬಿಗಿದು ಕುಳಿತುಕೊಳ್ಳಲೂ ಆಗದೆ, ನಿಲ್ಲಲ್ಲೂ ಆಗದೆ ಅನೇಕ ದಿನಗಳ ಪ್ರಯಾಣ ಮಾಡಿಸಿದರು. ರೋಮ್‌ನಿಂದ ಪ್ರಾರಂಭವಾದ ಈ ಪ್ರಯಾಣದ ಸಮಯದಲ್ಲೇ ಅಸ್ವಸ್ಥನಾಗಿದ್ದ ಗ್ರಾಂಸಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಸೆರೆಮನೆ ಸೇರಿದ ನಂತರ ಕನಿಷ್ಠ ಆರೋಗ್ಯ ಸೌಲಭ್ಯ ದಿಂದಲೂ ಗ್ರಾಂಸಿಯು ವಂಚಿತನಾದನು. ಬೇಸಿಗೆಯ ದಗೆ ಮತ್ತು ಪ್ರಯಾಣದಿಂದಾಗಿ ಅವನ ಶರೀರದಲ್ಲಿ ಹುಣ್ಣು ಕುರುಗಳ ವ್ರಣವು ಹೆಚ್ಚಾಗಿ ಟ್ಯೂರಿನ್‌ನ್ನು ತಲುಪುತ್ತಿದ್ದಂತೆಯೇ ಸಂಪೂರ್ಣವಾಗಿ ಅನಾರೋಗ್ಯದಿಂದ ತತ್ತರಿಸಿಹೋದನು.

ಟ್ಯೂರಿನ್‌ನಲ್ಲಿನ ಸೆರೆವಾಸವು ಹಿಂದೆ ಹದಗೆಟ್ಟಿದ್ದ ಗ್ರಾಂಸಿಯ ಆರೋಗ್ಯವನ್ನು ಮತ್ತಷ್ಟು ಕೆಡಿಸಿ ಸಾವಿನ ದವಡೆಗೆ ತಳ್ಳಿತು. ಕನಿಷ್ಟ ಆರೋಗ್ಯ ಸೌಲಭ್ಯವಿಲ್ಲದ ಸೆರೆಮನೆಯ ಕ್ಷೀಣಿಸುವ ಊಟದ ವ್ಯವಸ್ಥೆ ಗ್ರಾಂಸಿಯನ್ನು ದೈಹಿಕವಾಗಿ ಕರಗಿಸಿತು. ಈ ವರ್ಣಿಸಲಸಾಧ್ಯವಾದ ಸೆರೆಮನೆಯ ಕ್ರೌರ್ಯ ಹರಯದಲ್ಲಿದ್ದ ಗ್ರಾಂಸಿಗೆ ಮುಪ್ಪಿನ ಸ್ಥಿತಿಯನ್ನು ತಂದಿತಲ್ಲದೆ ಸಾವನ್ನು ಎದುರು ನೋಡುವ ಸಂದರ್ಭಗಳು ಬರತೊಡಗಿದವು. ಈ ನಶಿಸುವ ಸಮಯದಲ್ಲಿ ಗ್ರಾಂಸಿಯು ತನ್ನ ಇಡೀ ಜೀವನದ ಎಲ್ಲ ಧೈರ್ಯ, ಸ್ಥೈರ್ಯ ಹಾಗೂ ತನ್ನಲ್ಲಿದ್ದ ಜ್ಞಾನ ಪಾಂಡಿತ್ಯವನ್ನು ಮತ್ತು ಅಧ್ಯಯನದ ಪ್ರತಿಭೆಯನ್ನು ಕ್ರೋಡೀಕರಿಸಿ ಮುಸಲೋನಿಯ ಫಾಸಿಸಂನ ಉತ್ತುಂಗ ಕಾರ್ಯದ ಅತಿರೇಕಗಳ ಸಂದರ್ಭಗಳನ್ನು ಪುಟ ಪುಟದಲ್ಲಿ ಬರೆಯುವ ನಿರ್ಧಾರ ಮಾಡಿದನು. ಅಲ್ಪಕಾಲಕ್ಕಾದರೂ ಜೀವಿಸುವ ಅಪ್ರತಿಮ ಧೈರ್ಯದೊಂದಿಗೆ ಜೈಲು ಬರಹಗಳನ್ನು ಪ್ರಾರಂಭಿಸಿ ಕಮ್ಯುನಿಸ್ಟ್ ಕಾರ್ಯಕರ್ತನ ಜವಾಬ್ದಾರಿಯನ್ನು ಪೂರೈಸಲು ಗ್ರಾಂಸಿಯು ಸಿದ್ಧನಾದನು. ಈತನ ಜೈಲು ಬರಹಗಳು (ಪ್ರಿಸನ್ ನೋಟ್ಸ್) ಕಮ್ಯುನಿಸ್ಟ್ ಪ್ರಪಂಚದಲ್ಲಿ ಅತ್ಯಂತ ಪ್ರಮುಖ ವಾದ ಬರಹವಾಗಿದ್ದು ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಹೋರಾಟದ ಮೂಲ ಬರಹಗಳ ಲ್ಲೊಂದಾಗಿದೆ.

ಜೀವಿಸಲು ಅಸಹ್ಯ ಹುಟ್ಟಿಸುವ ಜೈಲು ಜೀವನದ ಆ ದಿನಗಳಲ್ಲಿ ಒಂದೆರಡು ಚಮಚದಷ್ಟು ಅನ್ನವನ್ನೂ ಊಟ ಮಾಡದಷ್ಟು ನಿಷ್ಕ್ರಿಯೆಗೊಂಡ ಗ್ರಾಂಸಿ ಒಂದೆರಡು ವರ್ಷಗಳಲ್ಲಿ ತನ್ನ ಎಲ್ಲ ಹಲ್ಲುಗಳನ್ನು ಕಳೆದುಕೊಂಡನು. ಈ ಕಾರಣದಿಂದಾಗಿ ಜೈಲಿನಲ್ಲಿ ಕೇವಲ ಬದುಕಲು ಮಾತ್ರ ಸ್ವೀಕರಿಸುತ್ತಿದ್ದ ಅನಾರೋಗ್ಯಕರ, ಹಳಸಿದ ಆಹಾರವು ಜೀರ್ಣವಾಗದೆ ಗ್ರಾಂಸಿಯು ಹೊಟ್ಟೆ ಹುಣ್ಣು ಮತ್ತು ನೋವುಗಳಿಂದಲೂ ನರಳತೊಡಗಿದನು. ಈ ಸಂಕಟದ ದಿನಗಳನ್ನು ಕಳೆದ ಮೊದಲ ವರ್ಷಗಳಲ್ಲಿ ಗ್ರಾಂಸಿಯು ಪ್ರತಿದಿನ ರಾತ್ರಿಯಲ್ಲಿ ಫಾಸಿಸ್ಟರ ತನಿಖೆಗಾಗಿ ಮೂರು ಬಾರಿ ಒಳಪಡಬೇಕಾಗುತ್ತಿತ್ತು. ಗ್ರಾಂಸಿಯನ್ನು ಕಾವಲು ಕಾಯುತ್ತಿದ್ದ ಕಾವಲುಗಾರರ ಕೋಣೆಯು ಅವನಿದ್ದ ಕೋಣೆಯ ಪಕ್ಕದಲ್ಲಿದ್ದು ಕಟಕಟೆಯನ್ನು ಬಡಿಯುವ ಹಾಗೂ ಬೂಟಿನ ಶಬ್ದಗಳು ಹಗಲು ರಾತ್ರಿ ಕೇಳಿಸುತ್ತಿದ್ದರಿಂದ ಪ್ರತಿ ರಾತ್ರಿಯೂ ಗ್ರಾಂಸಿಯು ನಿದ್ರೆಯಿಂದ ವಂಚಿತನಾದನು. ಕಾರಣವಿಲ್ಲದೆ ನಿದ್ರೆಯಿಂದ ದೂರವಿಡಲು ನಡೆಸುತ್ತಿದ್ದ ತನಿಖೆಗಳು ಗ್ರಾಂಸಿಯನ್ನು ಮಾನಸಿಕವಾಗಿ ಅಸ್ವಸ್ಥನನ್ನಾಗಿಸುವ ಕುತಂತ್ರವಾಗಿತ್ತು. ನವೆಂಬರ್ ೩, ೧೯೩೦ರಲ್ಲಿ ಗ್ರಾಂಸಿಯು ದಿನಕ್ಕೆ ಕೇವಲ ೫ ಗಂಟೆ ಹಾಗೂ ಕೇವಲ ಎರಡು ದಿನ ಮಾತ್ರ ನಿದ್ರಿಸಿದನೆಂದು ಬರೆಯುತ್ತ ತನ್ನಲ್ಲಿದ್ದ ಅಪ್ರತಿಮ ಮನಸ್ಥೈರ್ಯವನ್ನು ವಿವರಿಸಿದ್ದಾನೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಗ್ರಾಂಸಿಯು ಕಮ್ಯುನಿಸ್ಟ್ ಪಕ್ಷದಲ್ಲಿ ತನಗಿದ್ದ ಜವಾಬ್ದಾರಿಯನ್ನು ತನ್ನ ಸಂಗಾತಿಗಳೊಂದಿಗೆ ಮಾಡುತ್ತಿದ್ದ ಸಂಘಟನಾ ಕಾರ್ಯಶೀಲತೆ, ಮಾನಸಿಕವಾಗಿ ಹಾಗೂ ಕ್ರಿಯಾತ್ಮಕವಾಗಿ ಗೆಳೆಯರೊಂದಿಗೆ ಸದಾ ಸ್ಫೂರ್ತಿಯಿಂದ ಜೀವಿಸುತ್ತಿದ್ದ ಗ್ರಾಂಸಿಗೆ ಜೈಲಿನ ಒಂಟಿತನದ ಕಠಿಣ ಬದುಕು ಸಂಪೂರ್ಣ ವ್ಯಕ್ತಿತ್ವವನ್ನು ನಾಶ ಮಾಡಿದಂತಾಗುತ್ತಿತ್ತು. ದೊಡ್ಡ ಆಘಾತವೆಂದರೆ ಗ್ರಾಂಸಿಯು ಸೆರೆಯಾದ ದಿನದಿಂದ ಸಾವಿನ ದಿನದವರೆಗೆ ತನ್ನ ಪ್ರೀತಿಯ ಮಡದಿ ಹಾಗೂ ಎರಡು ಚಿಕ್ಕ ಮುದ್ದು ಮಕ್ಕಳನ್ನು ನೋಡುವುದರಿಂದಲೂ ವಂಚಿತನಾದನು. ಅವನ ಜೀವನ ಸಂಗಾತಿ, ಮಡದಿ ಗೂಯಲಿಯಾಸುಟ್ಜಳನ್ನು ೧೯೨೩ರಲ್ಲಿ ಮಾಸ್ಕೋದಲ್ಲಿ ಮದುವೆಯಾಗಿದ್ದನು. ಅವಳು ತನ್ನ ಪತಿ ಗ್ರಾಂಸಿಯು ಸೆರೆಯಾದ ಘಟನೆಯ ಆಘಾತದಿಂದಾಗಿ ತೀವ್ರ ಮಾನಸಿಕ ವೇದನೆಗೆ ಒಳಗಾಗಿ ಮುಂದೆಂದೂ ಚೇತರಿಸಿಕೊಳ್ಳದಾದಳು.

ಸೆರೆಯನ್ನು ಅನುಭವಿಸುವ ಸಂದರ್ಭದಲ್ಲಿ ಗ್ರಾಂಸಿಯು ತನ್ನ ಸಹೋದರಿಗೆ ಬರೆದ ಪತ್ರದಲ್ಲಿ ತನ್ನ ಸೆರೆವಾಸವನ್ನು ಪ್ರಪಂಚದ ಹೋರಾಟದ ಚರಿತ್ರೆಯಲ್ಲಿ ವರ್ಣಿಸಲು ಅಸಾಧ್ಯವಾದ ಘಟನೆಯೆಂದು ಹಾಗೂ ತನ್ನ ಸೆರೆವಾಸ ಕೊನೆಯಿಲ್ಲದ ಸೆರೆಯ ದುರ್ಘಟನೆಯೆಂದು ವಿವರಿಸಿದ್ದಾನೆ. ಈ ಕಾಗದದಲ್ಲಿ ಗ್ರಾಂಸಿಯು ಫಾಸಿಸ್ಟ್ ಸೆರೆಯ ದುರಂತ ಅನುಭವಗಳನ್ನು ವಿವರಿಸುತ್ತ ತನ್ನ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಗಳನ್ನು ವಿವರಿಸುತ್ತಾನೆ. ಸೆರೆಮನೆಯ ಭೀಕರ ಸ್ಥಿತಿಗಳನ್ನು ಅನುಭವಿಸಿ ಜೀವಿಸಲು ಹಾಗೂ ತನ್ನ ಬರಹದ ಕಾರ್ಯವನ್ನು ಮಾಡಲು ಅಡ್ಡ ಬರುವ ಪ್ರತಿಕೂಲ ಸಂದರ್ಭಗಳನ್ನು ಎದುರಿಸಲು ಸಿದ್ಧವಾಗುವ ಸ್ಥೈರ್ಯವನ್ನು ವಿವರಿಸಿದ್ದಾನೆ.

ಜೀವಿಸಲಾಗದ ಪರಿಸ್ಥಿತಿಯಲ್ಲಿ ಗ್ರಾಂಸಿಯು ಜೀವಿಸುತ್ತಿದ್ದರೂ ತನ್ನ ಬಗ್ಗೆ ಯಾವುದೇ ಅನುಕಂಪವನ್ನು ತೋರಿಸಿ ಬರೆಯದೆ ಹಾಗೂ ತಾನೆಂದೂ ಅಮರವೀರನಾದೆನೆಂದು ಹೇಳದೆ ಗ್ರಾಂಸಿಯು ಕಮ್ಯುನಿಸ್ಟ್ ಬರವಣಿಗೆಗೆ ಅಧ್ಯಯನದ ನಿಷ್ಠೆಯನ್ನು ತೋರಿದ್ದಾನೆ. ಎಲ್ಲರಿಗಿಂತ ಹೆಚ್ಚಾಗಿ ಅತಿ ಕ್ರೂರ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿಯೂ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ಕರ್ತವ್ಯನಿಷ್ಠೆಯನ್ನು ತೋರಿದ್ದಾನೆ. ಜೈಲು ಜೀವನದಲ್ಲಿಯೂ ಸದಾ ಕ್ರಿಯಾತ್ಮಕವಾಗಿ ಜೀವಿಸುವ ಗ್ರಾಂಸಿಯು ತನ್ನ ನಾದಿನಿಗೆ ಬರೆದ ಪತ್ರದಲ್ಲಿ “ಗೋಡೆಗೆ ತಲೆಯನ್ನು ಚಚ್ಚಿ ಕೊಳ್ಳುವ ಮೊದಲು ತಲೆ ನನ್ನದು ಎಂದು ತಿಳಿಯಬೇಕು. ಇದೇ ನನ್ನ ಶಕ್ತಿ” ಎಂದು ತಾನು ಜೀವಿಸುವ ಬೃಹದುದ್ದೇಶವನ್ನು ತಿಳಿಸುತ್ತಾನೆ (ಪ್ರಸಾದ್ ೨೦೦೨: ೨-೫).

ಜೈಲಿನಲ್ಲಿ ಗ್ರಾಂಸಿಯನ್ನು ಕೊಲೆ, ಸುಲಿಗೆ ಮಾಡಿದ ಅಪರಾಧಿಗಳ ಜೊತೆ ಒಂದೇ ಕೋಣೆಯಲ್ಲಿ ಹಾಕಿದರು. ಅವನ ಓದು, ಬರಹಗಳನ್ನು ನಿಷೇಧಿಸಲಾಯಿತು. ಪದೇಪದೇ ಪ್ರತಿಭಟಿಸಿದ ನಂತರ ಪ್ರತ್ಯೇಕ ಕೋಣೆಯೊಂದನ್ನು ನೀಡಿ, ಅವನ ಓದು, ಬರಹದ ಮೇಲೆ ಇದ್ದ ನಿಷೇಧವನ್ನು ತೆಗೆದುಹಾಕಿದರು. ಆದರೆ ಅವನು ಓದುವ ಪ್ರತಿ ಪುಸ್ತಕ, ಪತ್ರಿಕೆಗಳು, ಸ್ನೇಹಿತರಿಗೆ ಬರೆದ ಪತ್ರಗಳು ಸೇರಿದಂತೆ ಎಲ್ಲ ಬರಹಗಳನ್ನೂ ಸೆನ್ಸಾರ್ ಮಾಡಲಾಗುತ್ತಿತ್ತು. ಸೆರೆವಾಸ ಕಾಲದಲ್ಲಿ, ಅವನನ್ನು ಜೀವನ ಪೂರ್ತಿ ಸತಾಯಿಸಿದ ರೋಗಗಳು ಉಲ್ಬಣಗೊಂಡವು. ಈ ಸ್ಥಿತಿಯಲ್ಲಿಯೇ ಗ್ರಾಂಸಿ ೩೪ ನೋಟ್ ಪುಸ್ತಕಗಳಲ್ಲಿ ತನ್ನ ವಿಚಾರಗಳನ್ನು ಬರೆದಿಟ್ಟ. ಈ ಬರಹಗಳೇ ನಂತರ ‘ಪ್ರಿಸನ್ ನೋಟ್ ಬುಕ್ಸ್’ ಎಂದು ಖ್ಯಾತವಾಗಿವೆ. ೧೯೩೬ರಲ್ಲಿ ಅವನ ಆರೋಗ್ಯ ಚಿಂತಾಜನಕವಾಯಿತು. ತನ್ನ ಮೇಲೆ ಕರುಣೆ ತೋರಬೇಕು ಎಂದು ಫಾಸಿಸ್ಟ್ ಸರ್ಕಾರಕ್ಕೆ ಬೇಡಿಕೊಂಡರೆ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತು. ಗ್ರಾಂಸಿ ಈ ರೀತಿ ಬೇಡಿಕೊಳ್ಳಲು ನಿರಾಕರಿಸಿದ (ಫಣಿರಾಜ್ ೨೦೦೩: ೨೪).

ಫಾಸಿಸಂ ಗ್ರಾಂಸಿಯನ್ನು ದೈಹಿಕವಾಗಿ ಬಂಧಿಸಿದರೂ ಸೈದ್ಧಾಂತಿಕವಾಗಿ ಗ್ರಾಂಸಿ ಕಮ್ಯುನಿಸ್ಟ್‌ರೊಂದಿಗೆ ಜೀವಿಸುತ್ತಿದ್ದನು. ಕ್ರೂರ ಸೆರೆಯ ವೈಪರೀತ್ಯ, ಸಂದಿಗ್ಧ ಸಂದರ್ಭಗಳಲ್ಲಿಯೂ ಮನಸ್ಥೈರ್ಯ ಕಳೆದುಕೊಳ್ಳದೆ ಜೀವಿಸಿ ಸಿದ್ಧಾಂತಕ್ಕೆ ಬದ್ಧನಾಗಿ ಸೆರೆಮನೆಯಲ್ಲಿ ಗ್ರಾಂಸಿ ಬರೆದ ಪುಟಗಳ ಸಂಖ್ಯೆ ೨೮೪೮. ಈ ಪುಟಗಳು ೩೪ ನೋಟ್ ಪುಸ್ತಕಗಳಾಗಿವೆ. ಈ ಜೈಲು ಬರಹಗಳು ಒಬ್ಬ ಕ್ರಾಂತಿಕಾರಿಯು ಸೆರೆಯಲ್ಲಿಯೂ ತನ್ನ ಸ್ವಾತಂತ್ರ್ಯದಿಂದ ವಂಚಿತನಾಗಲು ಸಾಧ್ಯವಿಲ್ಲವೆಂಬುದನ್ನೂ ಗ್ರಾಂಸಿಯು ನಿರೂಪಿಸಿದ. ಬಹುಮುಖ್ಯ ವಿಷಯವೆಂದರೆ ಗ್ರಾಂಸಿಯು ಇಟಲಿಯ ಪ್ರಾಚೀನ ಚರಿತ್ರೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ತನ್ನ ರಾಜಕೀಯ ಬರಹದಲ್ಲಿ ವಿಮರ್ಶಿಸಿದ್ದಾನೆ. ೧೯ನೆಯ ಶತಮಾನದ ಕ್ರೈಸ್ತ ಸಭೆ, ಜನಪದ, ಶಿಕ್ಷಣದ ಬೆಳವಣಿಗೆ, ಆಧುನಿಕ ಪತ್ರಿಕೋದ್ಯಮ, ಕೈಗಾರಿಕೆ, ಪೆರೆಂಡೆಲೂ ಹಾಗೂ ಮೆಕೆವೆಲ್ಲಿಯ ಕ್ರಾಂತಿಕಾರಿ ಬರಹದ ಹೊಣೆಗಾರಿಕೆಯು ಗ್ರಾಂಸಿಯ ಬರಹದಲ್ಲಿ ಹೊಸ ಕ್ರಾಂತಿಕಾರಕ ರೂಪ ತಳೆದು ದುಡಿಯುವ ವರ್ಗದ ಜವಾಬ್ದಾರಿಯನ್ನು ಹೆಚ್ಚಿಸಿತು.

ಗ್ರಾಂಸಿಯು ಫಾಸಿಸ್ಟರ ಆಳ್ವಿಕೆಯಲ್ಲಿ ಒಬ್ಬ ಜವಾಬ್ದಾರಿ ಸಾಮಾಜಿಕ ಚಿಂತಕನಾಗಿ ಸಾವಿನಂಚಿನಲ್ಲಿಯೂ ಕಬ್ಬಿಣದ ಸೆರೆಯಲ್ಲಿ ತನ್ನ ಬರಹವನ್ನು ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ಕಾಗದದ ಮೇಲೆ ಇಳಿಸುತ್ತಿದ್ದನು. ಈ ಕಾರಣದಿಂದಾಗಿ ಕ್ರಿಯಾತ್ಮಕ ಬರಹಗಾರನಾದ ಗ್ರಾಂಸಿಗೆ ಮತ್ತೆ ಬರೆಯುವುದಾಗಲಿ, ತಿದ್ದುವುದಾಗಲಿ ಅಥವಾ ಹೆಚ್ಚು ವಿವರಿಸುವುದಾಗಲೀ ಹಾಗೂ ಮತ್ತೆ ಸೇರಿಸುವುದಾಗಲಿ ಸಾಧ್ಯವಾಗುತ್ತಿರಲಿಲ್ಲ.

ಗ್ರಾಂಸಿಯ ಬರಹಗಳನ್ನು ಓದುವಾಗ ಪ್ರತಿಯೊಂದು ಪದ, ವಾಕ್ಯಗಳು ಕ್ರಾಂತಿಕಾರಿ ವಿಷಯಗಳ ತೀವ್ರತೆಯಿಂದ ಕೂಡಿದ್ದು ವಿಚಾರದ ಪ್ರವಾಹವೇ ಉಕ್ಕುವಂತೆ ಅನುಭವವಾಗುತ್ತದೆ. ಬರೆಯುವ ವಿಷಯದ ನಡುವೆ ಜೈಲಿನಲ್ಲಿ ಅಡೆತಡೆಯಾದರೆ ತನ್ನ ಮನಸ್ಸಿನಲ್ಲಿರುವ ಎಲ್ಲ ವಿಷಯಗಳನ್ನು ಆದಷ್ಟು ಸಂಕ್ಷಿಪ್ತವಾಗಿ ಬರೆದು ಮುಗಿಸುವ ಪ್ರಯತ್ನ ಮಾಡುತ್ತಿದ್ದನು. ವಿಷಯವು ಅಲ್ಲಿಗೇ ನಿಂತು ಪುನರಾವರ್ತನೆಯ ಸಾಧ್ಯತೆ ಇಲ್ಲದಿದ್ದರೆ ಮೊದಲು ತನಗಾಗಿ ಬರೆದುಕೊಂಡು ಓದುತ್ತಿದ್ದನು. ಗ್ರಾಂಸಿಯು ಈ ಬರವಣಿಗೆಯನ್ನು ಪ್ರಕಟಣೆ ಮಾಡುವ ಉದ್ದೇಶದಿಂದ ಯೋಚಿಸಿರಲಿಲ್ಲ. ಸೆರೆಮನೆಯ ಪರಿಸ್ಥಿತಿಯಲ್ಲಿ ಇದನ್ನು ಯೋಚಿಸಲೂ ಸಹ ಸಾಧ್ಯವಿರಲಿಲ್ಲ. ತಾನು ಬರೆಯುತ್ತಿದ್ದುದನ್ನು ನೋಟ್ ಪುಸ್ತಕದಲ್ಲಿ ಲೇಖನಗಳ ರೂಪದಲ್ಲಿ ಬರೆಯುತ್ತಿದ್ದು ಬರೆದ ವಿಷಯಗಳನ್ನು ಗ್ರಂಥಸೂಚಿಯೊಂದಿಗೆ ಸೂಚಿಸುತ್ತಿದ್ದನು. ಕೆಲವು ಸಮಯದಲ್ಲಿ ವಿಷಯಗಳು ಅನೇಕ ಬಾರಿ ಪುನರಾವರ್ತನೆ ಯಾಗುತ್ತಿದ್ದವು.

ಜೈಲು ಬರಹಗಳು ಈ ಎಲ್ಲ ಕಾರಣಗಳಿಂದಾಗಿ ಓದುಗರಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಠಿಣವಾಗಿವೆ. ಪರಿಣಾಮವಾಗಿ ಗ್ರಾಂಸಿಯ ಮನಸ್ಸನ್ನು ಮತ್ತು ಈ ಕ್ರಾಂತಿಕಾರಿ ಬರಹವನ್ನು ಬರೆದ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಪದೇ ಪದೇ ಓದಬೇಕಾಗುತ್ತದೆ. ಪ್ರತಿ ಪದ, ವಾಕ್ಯಗಳು ಹೊಸ ವಿಷಯಗಳನ್ನು, ಅರ್ಥವನ್ನು ಮತ್ತು ದೃಷ್ಟಿಕೋನವನ್ನು ವಿವರಿಸುತ್ತವೆ. ಕೇವಲ ಪ್ರಕಟಣೆಗಾಗಿ ಸಾಹಿತ್ಯವನ್ನು ಬರೆಯದೆ ಸಾಂಪ್ರದಾಯಿಕ ಬರವಣಿಗೆಯ ಚಾಪಿಲ್ಲದ, ವಿಷಯಗಳ ಬೃಹತ್ ರಚನೆಯಲ್ಲಿ ಲೇಖನದ ಎಲ್ಲ ನೀತಿ ನಿಯಮಗಳನ್ನು ಈ ಬರಹದಲ್ಲಿ ಗಮನಿಸಲು ಸಾಧ್ಯವಿಲ್ಲ. ಪ್ರತಿ ಪರಿಚ್ಛೇದ (ಪ್ಯಾರ) ತನ್ನದೇ ಆದ ವಿಷಯ ಮತ್ತು ವಿಚಾರವನ್ನು ಒಳಗೊಂಡಿರುತ್ತದೆ. ಸೆರೆಮನೆಯ ಭದ್ರ ಕಾವಲು ತನ್ನನ್ನು ಬರೆಯುವಾಗ ಅಡೆತಡೆ ಮಾಡಿದ ಕಾರಣದಿಂದಾಗಿ ಬರವಣಿಗೆಯು ದೀರ್ಘ ವಿಚಾರದಿಂದ ಬೇರ್ಪಡಿಸಿ ದಂತಾಗಿ ವಿಷಯಗಳು ತುಂಡಾಗಿ ಬರವಣಿಗೆ ಮುಂದುವರೆಯದೆ ಇರುವುದನ್ನು ಈತನ ಮೂಲ ಬರವಣಿಗೆಯಲ್ಲಿ ಕಾಣಬಹುದು. ಫಾಸಿಸ್ಟ್ ಭದ್ರಕಾವಲನ್ನು ಕಣ್ಣು ತಪ್ಪಿಸಲು ಹಾಗೂ ಒಂದು ವೇಳೆ ಈ ಬರಹಗಳು ಭದ್ರತಾ ಸಿಬ್ಬಂದಿಯವರಿಗೆ ಸಿಕ್ಕಿದರೂ ಅಂತಹ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸರಕಾರದ ಪ್ರತಿನಿಧಿಗಳಿಗೆ ಅರ್ಥವಾಗದ ರೀತಿಯಲ್ಲಿ ಗ್ರಾಂಸಿಯು ಭಾಷೆಯನ್ನು ಪ್ರಯೋಗ ಮಾಡಿದ್ದಾನೆ. ದುಡಿಯುವ ವರ್ಗದ ಕ್ರಾಂತಿಕಾರಿ ಪದಕೋಶಗಳ ಬದಲಾಗಿ ಸಾಂಕೇತಿಕ ಶಬ್ದಗಳನ್ನು ಬಳಸುವುದರೊಂದಿಗೆ ವಿವರಿಸಿದ್ದಾನೆ. ಮಾರ್ಕ್ಸ್‌ವಾದ ಎಂಬ ಪದವನ್ನು ಭದ್ರತಾ ಸಿಬ್ಬಂದಿಗೆ ಅರ್ಥವಾಗದೆ ಇರಲು ಕ್ರಿಯೆಯ ತತ್ವಶಾಸ್ತ್ರವೆಂದು, ಮಾರ್ಕ್ಸ್ ಮತ್ತು ಏಂಗಲ್ಸ್‌ರನ್ನು ತತ್ವಶಾಸ್ತ್ರದ ಜನಕರೆಂದು ತನ್ನದೇ ಆದ ಭಿನ್ನ ಹಾಗೂ ಹೊಸ ನಾಮಕರಣದೊಂದಿಗೆ ಜೈಲು ಬರಹಗಳನ್ನು ಮಾಡಿ ಮಾರ್ಕ್ಸ್ ವಿಚಾರಗಳಿಗೆ ಹೊಸ ದೃಷ್ಟಿಕೋನ ನೀಡಿದ್ದಾನೆ (ಪ್ರಸಾದ್ ೨೦೦೨: ೨-೫).

ಆ ಹೊತ್ತಿಗಾಗಲೇ ಗ್ರಾಂಸಿಯು ಅನಾರೋಗ್ಯ, ಬರವಣಿಗೆಯ ಬಿರುಸು, ವಿಶ್ರಾಂತಿಯಿಲ್ಲದ ಮೆದುಳಿನ ಶ್ರಮದಿಂದ ಮೇ ೧೯೩೧ರಲ್ಲಿ ಮತ್ತು ಮಾರ್ಚ್ ೧೯೩೩ರಲ್ಲಿ ಎರಡು ಬಾರಿ ಗ್ರಾಂಸಿ ದೈಹಿಕ ಆಘಾತಕ್ಕೆ ಒಳಗಾಗುತ್ತಾನೆ. ಈ ಆಘಾತಗಳು ಗ್ರಾಂಸಿಯನ್ನು ಮರಣದ ದವಡೆಗೆ ಕೊಂಡೊಯ್ಯುತ್ತಿವೆ ಎಂಬ ಘಟನೆಗಳು ತೀವ್ರವಾಗಿ ಯುರೋಪಿನ ಅನೇಕ ಪ್ರಗತಿಪರ ಬುದ್ದಿಜೀವಿಗಳನ್ನು ಚುರುಕುಗೊಳಿಸಿ ಯೋಚನೆಗೆ ಗುರಿಮಾಡಿತು. ಇಂತಹ ವ್ಯಕ್ತಿಗಳಲ್ಲಿ ಮುಖ್ಯವಾದವರು ಫ್ರಾನ್ಸಿನ ರೋಮೈನ್ ರೊಲ್ಯಾಂಡ್ ಮತ್ತು ಕ್ಯಾಂಟರ್ ಬರಿಯ ಆರ್ಚ್ ಬಿಷಪ್. ಜನವರಿ ೧೯೩೬ ರಲ್ಲಿ ಗ್ರಾಂಸಿಯ ಆರೋಗ್ಯವು ತೀರಾ ಹದಗೆಡಲು ಈತನನ್ನು ಟ್ಯೂರಿನ್‌ನಿಂದ ಪೋರ್‌ಮಿಯ ಎಂಬಲ್ಲಿಗೆ ಚಿಕಿತ್ಸೆಗೆ ಒಯ್ಯಲಾಯಿತು. ನಂತರ ಕೊನೆ ಉಸಿರು ಎಳೆಯುವ ಪರಿಸ್ಥಿತಿಯಲ್ಲಿ ರೋಮ್‌ನ ಕ್ಟೆನಿಸಾನ ಎಂಬ ಔಷಧಾಲಯಕ್ಕೆ ಸೇರಿಸಲಾಯಿತು. ಜೈಲು ಬಿಡುವ ಮುನ್ನ ಅವನ ಬರಹಗಳನ್ನು ವಶಪಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ ಗ್ರಾಂಸಿಯ ನಾದಿನಿಯು ಜೈಲಿನಿಂದ ಅವನನ್ನು ಕರೆದುಕೊಂಡು ಹೋಗುವ ಹೊತ್ತಿಗೆ ಬಹಳ ಚಾಕಚಕ್ಯತೆಯಿಂದ ನೋಟ್ ಪುಸ್ತಕಗಳನ್ನು ಅಡಗಿಸಿಟ್ಟುಕೊಂಡು ಪೊಲೀಸರಿಗೆ ಯಾಮಾರಿಸಿದಳು. ತಕ್ಷಣ ಲಂಡನ್ನಿನಲ್ಲಿ ಇದ್ದ ಗ್ರಾಂಸಿಯ ಗೆಳೆಯರೊಬ್ಬರಿಗೆ ಆ ನೋಟ್ ಬುಕ್‌ಗಳನ್ನು ರಹಸ್ಯವಾಗಿ ರವಾನಿಸಿಬಿಟ್ಟಳು. ರೋಂ ನಗರದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ನೀಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪ್ರಾಣ ಬಿಡುವ ಗಳಿಗೆಯಲ್ಲಿ ಗ್ರಾಂಸಿಯ ಶಿಕ್ಷೆಯನ್ನು ಹತ್ತು ವರ್ಷ ಇಳಿಸಲಾಯಿತು. ಶಿಕ್ಷೆಯನ್ನು ಇಳಿಸಿದ ತೀರ್ಮಾನ ನೀಡಿದ ಒಂದು ವಾರದಲ್ಲಿ ಅಂದರೆ ಏಪ್ರಿಲ್ ೨೭, ೧೯೩೭ರಲ್ಲಿ ಗ್ರಾಂಸಿಯು ಕೊನೆಯ ಉಸಿರು ಎಳೆದನು (ಪ್ರಸಾದ್ ೨೦೦೨: ೩)(ಫಣಿರಾಜ್ ೨೦೦೩: ೨೪).

ಗ್ರಾಂಸಿಯ ಸಿದ್ಧಾಂತದ ಉಗಮ ಮತ್ತು ವಿಕಾಸ

‘ಗ್ರಾಮೀಣ ಬದುಕಿನ ಮೂರ್ಖತನ’ (ಈಡಿಯಾಸಿ ಆಫ್ ರೂರಲ್ ಲೈಫ್) ಮತ್ತು ರೈತರ ಕ್ರೌರ್ಯ ಹಾಗೂ ಕ್ರಾಂತಿಕಾರಿಯಾದ ನಗರ ಸಂವೇದನೆಯುಳ್ಳ ಕೈಗಾರಿಕಾ ಕಾರ್ಮಿಕರ ನಡುವೆ ಕಂಡುಬಂದ ವೈರುಧ್ಯವನ್ನು ಗಮನಿಸಿದ ಗ್ರಾಂಸಿಯು ರೈತರು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಜೀವಂತವಿರುವ ಶಕ್ತಿ ಎಂದೆನ್ನುತ್ತಾನೆ. ಈ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಎಚ್ಚರಿಕೆಯ ವಿಮರ್ಶೆ, ಅವಲೋಕನ ಅಗತ್ಯ ಎನ್ನುತ್ತಾನೆ ಗ್ರಾಂಸಿ. ಈ ಹಿನ್ನೆಲೆಯಲ್ಲಿ ಜನರ ನಂಬಿಕೆಗಳನ್ನು ಮತ್ತು ಜಾನಪದವನ್ನು ಗಣನೆಗೆ ತೆಗೆದುಕೊಳ್ಳುವುದು ಸೂಕ್ತ ಎಂದು ಅವನು ಸಲಹೆ ಮಾಡಿದ್ದಾನೆ. ಗ್ರಾಂಸಿಯ ಚಿಂತನೆ ಮಾದರಿಗಳನ್ನು ಭಾರತೀಯ ರೈತರ ಬಗ್ಗೆ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಸಬಾಲ್ಟರ್ನ್ ಸ್ಟಡೀಸ್‌ನ ಮೂರು ಸಂಪುಟಗಳಲ್ಲಿ (೧೯೮೨, ೧೯೮೩, ೧೯೮೪) ರಣಜಿತ್ ಗುಹಾ ಅವರು ಚರ್ಚಿಸಿದ್ದಾರೆ. ಸಬಾಲ್ಟರ್ನ್ ಚಿಂತಕರು ಮುಂದಿನ ಹಂತಗಳಲ್ಲಿ ಗ್ರಾಂಸಿಯ ಮಾದರಿಯನ್ನು ಭಾರತದ ಚರಿತ್ರೆಯನ್ನು ನಿರ್ವಚಿಸುವ ಸಂದರ್ಭದಲ್ಲಿ ಬಳಸಿಕೊಂಡರು. ಈ ಮೂಲಕ ಭಾರತದ ಚರಿತ್ರೆ ರಚನಾಪರಂಪರೆಯಲ್ಲಿ ‘ಮಹಾತ್ಮ’ ಗ್ರಾಂಸಿಯ ಹೆಸರೂ ಸೇರಿಕೊಂಡಿತು ಎಂದು ಡೇವಿಡ್  ಅರ್ನಾಲ್ಡ್ ವಿವರಿಸುತ್ತಾರೆ. ಮಾರ್ಕ್ಸಿಸಂ ಅನ್ನು ಬಹಳಷ್ಟು ಮಂದಿ ಕಬ್ಬಿಣದ ಕಡಲೆಕಾಯಿ ತರಹ ಜಟಿಲಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಗ್ರಾಂಸಿಯ ನಿಲುವನ್ನು ಇಲ್ಲಿ ಗಮನಿಸಬಹುದು.

ಗ್ರಾಂಸಿಯು ೧೯೨೦ರ ದಶಕದಲ್ಲಿ ಇಟಲಿಯ ರೈತಹೋರಾಟಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ. ಇಟಲಿಯ ದಕ್ಷಿಣ ಭಾಗವು ರೈತಾಪಿ ಜನರಿಂದ ಆವೃತವಾಗಿದ್ದು ಅವರ ರೋದನವನ್ನು ಸೈದ್ಧಾಂತಿಕವಾಗಿ ಹಾಗೂ ಹೋರಾಟದ ಮೂಲಕ ಹೋಗಲಾಡಿಸಲು ಆತನು ಕಟಿಬದ್ಧನಾಗಿದ್ದ. ಇಟಲಿಯ ಉತ್ತರಭಾಗದಲ್ಲಿ ಪ್ರಬಲವಾಗಿದ್ದ ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಆ ಕಾಲದ ಇಟಾಲಿಯನ್ ಸೋಷಿಯಲಿಸ್ಟ್ ಪಾರ್ಟಿಗಳು ಸಹಾನುಭೂತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಗ್ರಾಂಸಿಯು ದಕ್ಷಿಣದವರ ಪ್ರಶ್ನೆಗಳನ್ನು (ಸದರನ್ ಕ್ವಶ್ಚನ್) ಪಾರ್ಟಿಯು ನಿರ್ಣಯಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ. ಉತ್ತರ ಇಟಲಿಯ ಉದ್ದಿಮೆದಾರರಿಗೆ, ಬ್ಯಾಂಕರ್‌ಗಳಿಗೆ ಮತ್ತು ಅಧಿಕಾರಶಾಹಿಗಳಿಗೆ ದಕ್ಷಿಣದ ರೈತರು ಅಡಿಯಾಳಾಗಿರುವುದನ್ನು ಗ್ರಾಂಸಿಯು ಪ್ರಬಲವಾಗಿ ವಿರೋಧಿಸಿದ ಅಂಶಗಳನ್ನು ಈಗಾಗಲೆ ಚರ್ಚಿಸಲಾಗಿದೆ. ಇದನ್ನು ಇಟಲಿಯ ರಾಷ್ಟ್ರೀಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಗ್ರಾಂಸಿಯು ರೈತರ ಬವಣೆಯನ್ನು ಇಟಾಲಿಯನ್ ಕಮ್ಯುನಿಸ್ಟ್ ಪಾರ್ಟಿಯು ತನ್ನ ಸಿದ್ಧಾಂತ ಮತ್ತು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಹೋರಾಟದ ಭಾಗವನ್ನಾಗಿ ಮುಂದುವರಿಸಬೇಕೆಂದು ಒತ್ತಾಯ ಮಾಡುವನು. ೧೯೧೭ರಲ್ಲಿ ರಷ್ಯಾದ ಕ್ರಾಂತಿಯಾಗುವ ಹೊತ್ತಿಗೆ ಗ್ರಾಂಸಿಯು ರೈತರೆಲ್ಲರೂ ಒಗ್ಗಟ್ಟಾಗಿ ಇಟಲಿಯ ಬೂರ್ಜ್ವಾ ರಾಜ್ಯದ ಅಧಿಕಾರವನ್ನು ಕೊನೆಗಾಣಿಸ ಬೇಕೆಂದು ಕರೆ ನೀಡಿದ್ದು ಸರಿಯಷ್ಟೆ. ರೈತರ ಸಂಖ್ಯೆಯು ಇಟಲಿಯಲ್ಲಿ ಪ್ರಧಾನವಾಗಿರುವುದರಿಂದ ರೈತರು ನಡೆಸುವ ಕ್ರಾಂತಿಯು ಸಫಲವಾಗುತ್ತದೆ ಎಂದು ಈತ ನಂಬಿದ್ದನು.

೧೯೧೯-೨೦ರ ಸುಮಾರಿಗೆ ಕೈಗಾರಿಕಾ ಕೇಂದ್ರವಾದ ಟ್ಯೂರಿನ್‌ನಲ್ಲಿ ಸಂಘಟಿಸಲಾದ ಫ್ಯಾಕ್ಟರಿ ಕೌನ್ಸಿಲ್ ಚಳವಳಿಯು ಕೇವಲ ಕಾರ್ಮಿಕರಿಂದ ಹೋರಾಟ ಸಾಧ್ಯವಿಲ್ಲವೆಂದು ಸ್ವತಃ ಆ ಚಳವಳಿಯಲ್ಲಿ ಭಾಗವಹಿಸಿದ್ದ ಗ್ರಾಂಸಿಗೆ ಅರಿವಾಗಿತ್ತು. ನಗರಗಳಲ್ಲಿ ಪ್ರಬಲ ವಾಗಿರುವ ಕ್ರಾಂತಿಕಾರಿ ಹೋರಾಟಗಳಿಂದ ಗ್ರಾಮಗಳ ರೈತರ ಆಶಯಗಳಿಗೆ ಹಿನ್ನಡೆಯಾಗುತ್ತದೆ ಎಂದ ಗ್ರಾಂಸಿಯು ಈ ಕಾರಣಗಳಿಂದಾಗಿ ನಗರಕೇಂದ್ರಗಳಲ್ಲಿನ ಕಾರ್ಮಿಕರ ಮತ್ತು ಬಡರೈತರ ಸಹಯೋಗದೊಂದಿಗೆ ಹೋರಾಟ ಮುಂದುವರಿಯಬೇಕೆಂದು ಆಶಿಸಿದನು. ಬಹುತೇಕ ಸೋಶಿಯಲಿಸ್ಟರಿಗಿಂತ ಮತ್ತು ಕಮ್ಯುನಿಸ್ಟರಿಗಿಂತ ವ್ಯತಿರಿಕ್ತವಾಗಿ ಗ್ರಾಂಸಿಯು ನಿರ್ಲಕ್ಷ್ಯ ಕ್ಕೊಳಗಾದ ದಕ್ಷಿಣದ ರೈತರಿಗೆ ಸ್ಫೂರ್ತಿ ನೀಡುವ ನಾಯಕತ್ವ ಬೇಕೆಂದು ಹೋರಾಟ ಮಾಡಿದ್ದನ್ನು ಗಮನಿಸಬಹುದಾಗಿದೆ. ಮೊದಲನೆಯ ಮಹಾಯುದ್ಧದ ಬಳಿಕ ಇಟಲಿಯಲ್ಲಿ ಕಾರ್ಮಿಕರ ಮತ್ತು ರೈತರ ನೇತೃತ್ವದ ಹೋರಾಟವು ಇಟಲಿಯನ್ನು ಕಬಂಧಶಕ್ತಿಗಳಿಂದ ಮುಕ್ತಿಗೊಳಿಸುತ್ತದೆ ಎಂಬ ಆಶಾಭಾವನೆಯೂ ಅವನಿಗಿತ್ತು. ೧೯೨೬ರ ಹೊತ್ತಿಗೆ ಗ್ರಾಂಸಿಯು “ಸಮ್ ಆಸ್ಪೆಕ್ಟ್ಸ್ ಆಫ್ ದಿ ಸದರನ್ ಕ್ವೆಶ್ಚನ್” ಎನ್ನುವ ಲೇಖನವನ್ನು ಪೂರ್ಣಗೊಳಿಸುವ ಮೊದಲೇ ಇಟಲಿಯ ಫಾಸಿಸ್ಟ್ ಸರಕಾರದಿಂದ ಬಂಧನಕ್ಕೊಳಗಾದನು. ನಂತರದ ವರ್ಷಗಳಲ್ಲಿ ಅವನು ಜೈಲಿನಲ್ಲಿ ಬರೆದ “ನೋಟ್ಸ್”ಗಳು ಹೇಗೆ ಪ್ರಬಲ ವರ್ಗಗಳು ಚಾರಿತ್ರಿಕವಾಗಿ ರೈತರನ್ನು ತಮ್ಮ ಅಧೀನಕ್ಕೊಳಪಡಿಸಿದರು ಎನ್ನುವ ವಿಚಾರಗಳತ್ತ ವಿವರಗಳನ್ನು ತಿಳಿಸುತ್ತವೆ. ಯಾವ್ಯಾವ ಕಾರಣಕ್ಕಾಗಿ ರೈತರ ಹೋರಾಟಗಳು ತಮ್ಮ ಆಳರಸರನ್ನು ರಾಜ್ಯಾಧಿಕಾರದಿಂದ ಹೊರತಳ್ಳಲು ವಿಫಲವಾದವು ಅಥವಾ ರೈತರು ತಮ್ಮ ಅಧಿಕಾರವನ್ನು ಸ್ಥಾಪಿಸಲು ಸಾಧ್ಯ ವಾಗಲಿಲ್ಲ ಎಂಬ ಪ್ರಶ್ನೆಗಳನ್ನು ತನ್ನ  “ಪ್ರಿಸನ್ ನೋಟ್ಸ್”ನಲ್ಲಿ ಚರ್ಚಿಸುತ್ತಾನೆ. ಇಂಥ ಪ್ರಶ್ನೆಗಳನ್ನು ಗ್ರಾಂಸಿಯು ಕೇಳಿದ ಸಂದರ್ಭದಲ್ಲಿ ಅಥವಾ ಅದಕ್ಕೆಲ್ಲ ಉತ್ತರ ಹುಡುಕುವ ಸಂದರ್ಭದಲ್ಲಿ ಗ್ರಾಂಸಿಯು ಕೈಗಾರಿಕಾಕೇಂದ್ರಿತ ಕಾರ್ಮಿಕಶಕ್ತಿಯನ್ನು ಅವಗಣನೆಗೆ ತೆಗೆದು ಕೊಂಡನೆಂದಲ್ಲ. ಕಾರ್ಮಿಕರು ಕ್ರಾಂತಿಯನ್ನು ಯಶಸ್ವಿಯಾಗಿ ಮುಂದುವರೆಸಲು ಕಾರ್ಮಿಕ ಮತ್ತು ರೈತರ ಸಹಯೋಗ ಅಗತ್ಯ ಎಂದು ಬಿಂಬಿಸುವುದು ಅವನ ಸೈದ್ಧಾಂತಿಕತೆಯಾಗಿತ್ತು. ಆ ಮೂಲಕ ದುಡಿಯುವ ವರ್ಗಗಳು ಬಂಡವಾಳಶಾಹಿ ಮತ್ತು ಬೂರ್ಜ್ವಾ ರಾಜ್ಯವನ್ನು ಕೊನೆಗಾಣಿಸಬಹುದಾಗಿದೆ ಎಂದು ಆತ ಬರೆಯುತ್ತಾನೆ. ಈ ಬಗೆಯ ಸಹಯೋಗವು ರಾಜಕೀಯ ಅವಕಾಶವಾದಕ್ಕಲ್ಲ. ಒಂದು ವೇಳೆ ಹಾಗಾದರೆ ರೈತಾಪಿ ವರ್ಗವು ಮತ್ತೊಮ್ಮೆ ಸಂಕಷ್ಟಕ್ಕೀಡಾಗುತ್ತದೆ ಎಂದು ಅವನು ಎಚ್ಚರಿಸುತ್ತಾನೆ. ಉತ್ತರ ಇಟಲಿಯ ಬಂಡವಾಳಶಾಹಿ ಮತ್ತು ಬೂರ್ಜ್ವಾ ರಾಜ್ಯದ ದಮನಕಾರಿ ಕಾರ್ಯಗಳನ್ನು ಕೊನೆಗಾಣಿಸಲು ರೈತರು ಕ್ರಾಂತಿಕಾರಿ ಗಳಾಗುವುದು ಅಗತ್ಯ ಎಂದು ಗ್ರಾಂಸಿಯು ಅಭಿಪ್ರಾಯಪಡುತ್ತಾನೆ. ಉತ್ತರ ಮತ್ತು ದಕ್ಷಿಣ ಇಟಲಿಯವರ ನಡುವೆ ಕಂದಕ ಏರ್ಪಡದಿರಲು ಉತ್ತರದ ಕಾರ್ಮಿಕ ವಲಯವು ದಕ್ಷಿಣದ ರೈತರ ಸಮಸ್ಯೆಗಳನ್ನು ತಮ್ಮ ಸಮಸ್ಯೆ ಎಂದು ಬಗೆದರೆ ಆ ಬಗೆಯ ಕಂದಕಗಳಾಗುವುದಿಲ್ಲ. ಆ ಮೂಲಕ ದಕ್ಷಿಣದ ರೈತರೆಂದರೆ ದೈಹಿಕವಾಗಿ ಕುಗ್ಗಿದವರು ಮತ್ತು ನಿರಂತರ ಹಿಂದುಳಿಕೆ ಯಲ್ಲಿರುವವರು ಎನ್ನುವ ಪಾರಂಪರಿಕ ಪೂರ್ವಗ್ರಹದಿಂದ ಉತ್ತರದವರು ಹೊರಬರಬಹುದು ಎಂದು ಅಭಿಪ್ರಾಯಪಡುತ್ತಾನೆ. ಅಧಿಕಾರ ವರ್ಗದವರು ಹುಟ್ಟುಹಾಕಿದ ಈ ಬಗೆಯ ಮಿಥ್‌ಗಳು ಅಧಿಕಾರವರ್ಗದ ಹೆಜಿಮನಿಗೆ ಸಬಾಲ್ಟರ್ನ್ ವರ್ಗಗಳ ಹಿತಾಸಕ್ತಿಗಳು ಪರಸ್ಪರ ಕಚ್ಚಾಡಲು ಪ್ರೇರೇಪಿಸಿದೆ ಎಂಬ ಅಂಶವನ್ನೂ ಗ್ರಾಂಸಿಯು ಚರ್ಚಿಸಿದ್ದಾನೆ.

ಒಮ್ಮೆ ಕ್ರಾಂತಿಯ ಹೋರಾಟ ಮುಗಿದ ನಂತರ ಫ್ಯಾಕ್ಟರಿ ಕೌನ್ಸಿಲ್ ಹೋರಾಟದ ಅಂಶಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿ ಅದರೊಳಗೆ ರೈತ ಸಮುದಾಯಗಳು ಪಾಲ್ಗೊಳ್ಳಬೇಕೆಂದು, ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರಗಳನ್ನು ಕಡಿಮೆ ಮಾಡಬೇಕೆಂದು ಆತ ಆಶಿಸುತ್ತಾನೆ. ನಗರದ ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಮೂಲಕ ಶೋಷಣೆಯಾಗುತ್ತಿರುವ ರೈತರನ್ನು ರಕ್ಷಿಸಬೇಕೆಂದು ಮತ್ತು ಆ ಮೂಲಕ ರೈತ ಸಮುದಾಯಗಳಿಗೂ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳಿಂದ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಗ್ರಾಂಸಿಯು ಕರೆ ನೀಡುತ್ತಾನೆ.

ಸಾರ್ಡೀನಿಯಾದಲ್ಲಿನ ಗ್ರಾಂಸಿಯ ಬಾಲ್ಯದ ನೆನಪುಗಳಿಂದಾಗಿ ರೈತರ ಸಂಕಷ್ಟದ ಪರಮಾವಧಿಯನ್ನು ಗ್ರಾಂಸಿಯು ಅರ್ಥ ಮಾಡಿಕೊಂಡಿದ್ದನು. ಆ ಕಾರಣದಿಂದಾಗಿಯೇ ರೈತರ ಬಗೆಗಿರುವ ರೊಮ್ಯಾಂಟಿಕ್ ನಿಲುವುಗಳು ಅವನಿಗೆ ಅಪಥ್ಯವಾಗಿತ್ತು. ಭೂತಕಾಲದ ಸೆಂಟಿಮೆಂಟ್‌ಗಳ ಸಹಾಯದಿಂದ ಕೈಗಾರಿಕಾ ಬಂಡವಾಳಶಾಹಿಯನ್ನು ಗೆಲ್ಲಲು ಸಾಧ್ಯ ವಿಲ್ಲದ್ದನ್ನು ಆತನು ಮನಗಂಡಿದ್ದನು. ಗ್ರಾಂಸಿಯು “ಸೆಲೆಕ್ಷನ್ ಫ್ರಂ ದಿ ಪ್ರಿಸನ್ ನೋಟ್ಸ್”ನಲ್ಲಿ ಮೆಟಿರಿಯಲ್ ಡಿಟರ್‌ಮೆಂಟ್ಸ್‌ಗಿಂತ ಹೆಜಮಾನಿಕ್ ಮತ್ತು ಸಬಾಲ್ಟರ್ನ್ ವರ್ಗಗಳ ಐಡಿಯಾಲಜಿಗಳು ಒಂದು ನಿರ್ದಿಷ್ಟವಾದ ಐತಿಹಾಸಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬರೆಯುತ್ತಾನೆ. ಸಾಂಪ್ರದಾಯಿಕ ಮಾರ್ಕ್ಸಿಸ್ಟರಿಗೆ ಸಬಾಲ್ಟರ್ನ್ ಸಂವೇದನೆ ಎನ್ನುವ ಸೈದ್ಧಾಂತಿಕತೆಯು ಅಸಂಗತ ಎಂದೆನ್ನಿಸಿದರೂ, ಸಬಾಲ್ಟರ್ನ್ ತಳಹದಿಯ ಕ್ರಾಂತಿಕಾರಿ ಹೋರಾಟವು ನಿರುಪಯೋಗಿ ಮತ್ತು ಅರ್ಥವಿಲ್ಲದ್ದು ಎಂದೆನ್ನಿಸಿದರೂ, ಶುದ್ಧರೂಪದ ಕ್ರಾಂತಿಕಾರಿ ಹೋರಾಟವು ನಡೆಯುವ ಬಗ್ಗೆ ಗ್ರಾಂಸಿಯು ಸಂದೇಹ ವ್ಯಕ್ತಪಡಿಸುತ್ತಾನೆ. ಚಾರಿತ್ರಿಕತೆಯ ಪ್ರಕ್ರಿಯೆ ಬಗ್ಗೆ, ಅದರ ಸಂಕೀರ್ಣತೆ ಬಗ್ಗೆ ಇರುವ ವಿಚಾರವನ್ನು ಬುದ್ದಿಜೀವಿಗಳು ‘ಭಾಷಾಂತರ’ ಮಾಡಿ ಜನರಿಗೆ ತಲುಪಿಸಬೇಕೆಂಬ ಕರೆಯನ್ನು ಇವನು ನೀಡುತ್ತಾನೆ.

“ವರ್ಗ ಹಿತಾಸಕ್ತಿ” ಎನ್ನುವುದು ಸಮಾಜದ ಗುಂಪುಗಳ ಒಳಗೇ ಉದಯಿಸಬೇಕೇ ವಿನಾ ಯಾರೋ ಹೊರಗಿನಿಂದ ಬಂದು ಅದನ್ನು ಹೇಳಿ ಅರ್ಥೈಸುವುದಲ್ಲ. ಧುತ್ತನೆ ಭುಗಿಲೇಳುವ ಸಬಾಲ್ಟರ್ನ್‌ಗಳ ಸ್ವಭಾವವನ್ನು ಅರಿಯುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಅದರ ಸ್ವರೂಪದ ಮಟ್ಟಿಗೆ ಇಂತಹ ರೈತರ ಸ್ವಭಾವ ಅಥವಾ ರೈತ ಸಮುದಾಯದ ರಚನೆ ಹಸಿಹಸಿಯಾಗಿರುತ್ತದೆ. ಅದು ಶಿಷ್ಟರೂಪದ ತಾರ್ಕಿಕತೆಯನ್ನು ಹೊಂದಿರುವುದಿಲ್ಲ. ಆದರೆ ಅದು ನಂಬಿಕೆಗಳ ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ. ಏಕೆಂದರೆ ಅವು ತಾರ್ಕಿಕವಾಗಿ ಸರಿ ಅಥವಾ ತಪ್ಪು ಎನ್ನುವ ಕಾರಣಕ್ಕಾಗಿಯಲ್ಲ. ಬದಲಿಗೆ ಅವು ಜನಸಾಮಾನ್ಯರ ಹೃದಯದಿಂದ ಬಂದ ಅಭಿವ್ಯಕ್ತಿಗಳೆಂಬ ಕಾರಣಕ್ಕಾಗಿ. ಹಾಗಾಗಿ ಇದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ.

ಆಲ್ಬರ್ಟೋ ಮರಿಯಾ ಸೈರಸ್ ಅವರು ತನ್ನ “ಗ್ರಾಂಸೀಸ್ ಅಬ್ಸರ್ವೇಶನ್ಸ್ ಆನ್ ಫೋಕ್‌ಲೋರ್” ಎನ್ನುವ ಲೇಖನದಲ್ಲಿ ಗ್ರಾಂಸಿಯ ನಂತರದ ಬರವಣಿಗೆಗಳನ್ನು ವ್ಯಾಖ್ಯಾನಿಸುತ್ತ ಗ್ರಾಂಸಿಯು ಸಬಾಲ್ಟರ್ನ್ ಸಂವೇದನೆಗಳನ್ನು ಕುರಿತು ಮಾಡಿದ ಚರ್ಚೆಗೆ ತಾನೇ ಆಂಟಿ ಥೀಸಿಸ್ ಅನ್ನು ಮಾಡಿದ ವಿವರಗಳನ್ನು ನೀಡಿದ್ದಾನೆ (ಲಂಡನ್ ೧೯೮೨). ನಕಾರಾತ್ಮಕವಾಗಿ ರೈತರ ಸಂವೇದನೆಗಳನ್ನು ನೋಡುವುದಾದರೆ ಅದಕ್ಕಿರುವ ಮಿತಿಗಳನ್ನು ನೋಡಬೇಕಾಗುತ್ತದೆ ಎನ್ನುತ್ತಾನೆ ಗ್ರಾಂಸಿ. ಎಲ್ಲ ಕಡೆ ಚದುರಿ ಹೋಗಿರುವ ಮತ್ತು ಐಸೋಲೇಟ್ ಆಗಿರುವ ರೈತ ಸಮುದಾಯಗಳನ್ನು ಒಂದು ‘ಬೃಹತ್ ಸಂಘಟನೆಯ’ ರೂಪದಲ್ಲಿ ನೋಡುವುದು ಸಾಧ್ಯವಾಗುವುದಿಲ್ಲ. ರೈತರು ತಮ್ಮೊಳಗೇ ತಾವು ಭೂ ಒಡೆಯರು, ತಾವು ಗೇಣಿದಾರರು ಮತ್ತು ತಾವು ಕೃಷಿ ಕೂಲಿಕಾರ್ಮಿಕರು ಎಂದು ರೈತ ಸಮುದಾಯದೊಳಗೇ ಒಡೆದು ಹೋಗಿರುವುದರಿಂದ, ಜಮೀನ್ದಾರಿ ಶಕ್ತಿಗಳು ಇಂತಹ ಸನ್ನಿವೇಶದ ದುರ್ಲಾಭವನ್ನು ಪಡೆಯುತ್ತಾರೆ. ಇಟಲಿಯಲ್ಲಿನ ತನ್ನ ಅನುಭವದ ಹಿನ್ನೆಲೆಯಲ್ಲಿ ಕಂಡುಕೊಂಡಂತೆ ರೈತಾಪಿ ವರ್ಗಗಳು ಸಾಂಪ್ರದಾಯಿಕವಾಗಿ ಅರಾಜಕೀಯರಾಗಿ (ಎಪೊಲಿಟಿಕಲ್) ಮತ್ತು ಸೌಮ್ಯರಾಗಿ ಇರುವುದರಿಂದ ಆಡಳಿತಶಾಹಿಗಳು ತಮ್ಮ ರಾಜಕೀಯಕ್ಕೆ ಬಹಳ ಸುಲಭವಾಗಿ ಇವರನ್ನು ಬಳಸಿಕೊಳ್ಳುತ್ತಾರೆ. ಸಬಾಲ್ಟರ್ನ್ ವರ್ಗದಿಂದ ಮುಖ್ಯವಾಗಿ ರೈತಾಪಿ ಸಮುದಾಯಗಳಿಂದ ಸೈನಿಕರನ್ನು ಹಾಗೂ ಮರ್ಸಿನರೀಸ್‌ಗಳನ್ನು (ನಿರ್ದಿಷ್ಟ ಉದ್ದೇಶಕ್ಕಾಗಿ ಹತ್ಯೆಯನ್ನು ಮಾಡುವವರು) ಆಯ್ಕೆ ಮಾಡಿ ಅವರನ್ನು ತಮ್ಮ ಪುರೋಗಾಮಿ ಮತ್ತು ಗತಕಾಲದ ಪಳೆಯುಳಿಕೆಗಳನ್ನು ಕಾಪಾಡಲು ಬಳಸಿಕೊಂಡಿರುವುದನ್ನು ಗ್ರಾಂಸಿಯು ದಾಖಲು ಮಾಡಿದ್ದಾನೆ. ಒಗ್ಗಟ್ಟಾಗಿಲ್ಲದಿರುವುದು ಮತ್ತು ಸಮುದಾಯ ಪ್ರಜ್ಞೆಯ ಕೊರತೆ ಇಲ್ಲದಿರುವುದು ಸಬಾಲ್ಟರ್ನ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ. ಈ ಸಂಕೀರ್ಣತೆಗಳನ್ನು ರೈತ ಸಮುದಾಯಗಳು ಗ್ರಾಂಸಿಯು ಹೇಳುವ ‘ಕಾಮನ್ ಸೆನ್ಸ್’ ಮೂಲಕ ಅರ್ಥ ಮಾಡಿಕೊಂಡರೂ, ಅವರ ನಂಬಿಕೆಗಳು ಏಕಸ್ವರೂಪವಾಗಿಲ್ಲದಿರುವುದನ್ನು ನಾವು ನೋಡಬಹುದು.

ರೈತನೊಬ್ಬನ ಆಲೋಚನೆಗಳಲ್ಲಿ ತಾರ್ಕಿಕತೆಯಾಗಲಿ, ಸಿದ್ಧ ಸಿದ್ಧಾಂತಗಳಾಗಲಿ ಇರುವುದಿಲ್ಲ. ಅವನ ಆಲೋಚನೆಗಳಲ್ಲಿ ದ್ವಂದ್ವಗಳಿರುತ್ತವೆ. ಸಾಮಾಜಿಕ ಮತ್ತು ಪ್ರಸ್ತುತ ಸನ್ನಿವೇಶಗಳಲ್ಲಿ ಕಂಡುಬರುವ ಇಂತಹ ಆಲೋಚನೆಗಳು ಒಂದು ತತ್ವವಾಗಿ ಜನಸಾಮಾನ್ಯರಲ್ಲಿ ಗೋಚರಿಸುತ್ತವೆ. ಯಾವುದಾದರೂ ಒಂದು ಹೊಸ ವಿಚಾರಕ್ಕೆ ರೈತರು ತಮ್ಮನ್ನು ತೆರೆದುಕೊಳ್ಳುವುದು ವಿರಳ. ಆದರೆ, ಅವರು ಬಹಳಷ್ಟು ವಿಚಾರಗಳನ್ನು ಮತ್ತು ಬಹು ಬಗೆಯ ವಿನ್ಯಾಸಗಳನ್ನು ತಲೆಯಲ್ಲಿ ತುಂಬಿಕೊಳ್ಳಲು ಯತ್ನಿಸುವುದನ್ನು ಕಾಣಬಹುದಾಗಿದೆ.  ತಾವಿರುವ ಸನ್ನಿವೇಶವು ಬದಲಾದರೂ ಅದರೊಂದಿಗೆ ತಮ್ಮ ವಿಚಾರಗಳು ಬದಲಾಗಲು ಸಮಯ ತೆಗೆದುಕೊಳ್ಳುವ ಮಂದಿ ರೈತರು. ಬಹುತೇಕ ಸಂದರ್ಭಗಳಲ್ಲಿ ರೈತರು ತಮ್ಮೂರಿನ ಜಮೀನ್ದಾರರ ಅಥವಾ ಪೆಟಿ ಬೂರ್ಜ್ವಾಗಳ ವಿರುದ್ಧ ತಗಾದೆ ತೆಗೆಯುವುದಕ್ಕಿಂತ ಹೆಚ್ಚಾಗಿ ನಗರದ ಅಧಿಕಾರಿಗಳ ವಿರುದ್ಧವೇ ತಗಾದೆ ತೆಗೆದಿದ್ದನ್ನು ಗಮನಿಸಬಹುದು ಎನ್ನುತ್ತಾನೆ ಗ್ರಾಂಸಿ.

ಗ್ರಾಂಸಿಯು ‘ಸಬಾಲ್ಟರ್ನ್’ ಎನ್ನುವ ಪದವನ್ನು ಉಪಯೋಗಿಸಿದ ಬಗೆಗಳು ಸಬಾಲ್ಟರ್ನ್  ಅಧ್ಯಯನ ಕ್ರಮವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಮೂಲೆಗೊತ್ತಲ್ಪಟ್ಟ ಸಮುದಾಯಗಳಾದ ಕಾರ್ಮಿಕರು, ರೈತರು, ಕೂಲಿಕಾರರು, ಕುಶಲಕರ್ಮಿಗಳು, ಕುರಿ ಕಾಯುವವರು ಮತ್ತಿತರರು ಈ ಬಗೆಯ ಸಬಾಲ್ಟರ್ನ್‌ಗಳಾಗುತ್ತಾರೆ. ಫಾಸಿಸ್ಟ್ ಸರಕಾರದ ರಾಜಕೀಯ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಗ್ರಾಂಸಿಯು ‘ಪ್ರೊಲಟರಿಯೇಟ್’ ಎನ್ನುವ ಮಾರ್ಕ್ಸಿಸ್ಟ್ ಪರಿಭಾಷೆಯ ಬದಲಿಗೆ ಸಬಾಲ್ಟರ್ನ್ ಸಮುದಾಯಗಳನ್ನು ಹೆಸರಿಸಿದ್ದನ್ನು ಡೇವಿಡ್ ಅರ್ನಾಲ್ಡ್ ಅವರು ವಿವರಿಸಿದ್ದಾರೆ. ಹಾಗೆಯೇ ಮಾರ್ಕ್ಸಿಸಂ ಬದಲಿಗೆ ಗ್ರಾಂಸಿಯು ‘ದಿ ಫಿಲಾಸಫಿ ಆಫ್ ಪ್ರಾಕ್ಸೀಸ್’ ಎಂದು ಹೆಸರಿಸಿರುವುದನ್ನು ಗಮನಿಸಬಹುದಾಗಿದೆ. ಸಬಾಲ್ಟರ್ನ್ ಎನ್ನುವ ಪದವು ಕೇವಲ ರೈತರ ಮತ್ತು ಭೂ ಒಡೆಯರ ನಡುವಿನ ವಿಚಾರವನ್ನು ಮಾತ್ರ ಅಭಿವ್ಯಕ್ತಗೊಳಿಸದೆ ನಿಯಂತ್ರಣದಲ್ಲಿರುವವರು ಮತ್ತು ನಿಯಂತ್ರಣಕ್ಕೊಳಪಡಿಸುವವರ ನಡುವಿನ ಸಂಬಂಧದ ಪ್ರಕ್ರಿಯೆಯನ್ನು ವಿವರಿಸುತ್ತದೆ ಎಂದು ಗ್ರಾಂಸಿಯು ಭಾವಿಸಿದ್ದನು. ೧೯ನೆಯ ಶತಮಾನದ ಇಟಲಿ ಅಥವಾ ಭಾರತವು ಬಂಡವಾಳಪ್ರಧಾನ ದೇಶಗಳಾಗಿ ಇನ್ನೂ ರೂಪುಗೊಂಡಿಲ್ಲದ್ದರಿಂದ ವರ್ಗದ ಬಳಕೆಗಿಂತ ‘ಸಬಾಲ್ಟರ್ನ್’ ಬಳಕೆ ಹೆಚ್ಚು ಸೂಕ್ತವಾಗಿದೆ. ವಾಸ್ತವಿಕ ಚಾರಿತ್ರಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಾಗುವ ಸಂಘರ್ಷ ಮತ್ತು ದ್ವಂದ್ವತೆಗಳನ್ನು ಹೊರಹೊಮ್ಮಿಸಲು ಗ್ರಾಂಸಿಯು ಬಳಸುವ ಹೆಜಿಮನಿ/ಸಬಾರ್ಡಿನೇಶನ್, ಫೋರ್ಸ್/ಕನ್ಸೆಂಟ್, ಆಕ್ಟಿವ್/ಪ್ಯಾಸಿವ್ ಎನ್ನುವ ಡೈಲೆಕ್ಟಿಕಲ್ ಜಾರ್ಗನ್‌ಗಳ ಬಳಕೆಯನ್ನು ನೋಡಬಹುದು.

ಮಾರ್ಕ್ಸ್ ಮತ್ತು ಏಂಗಲ್ಸ್ ಇವರು ಕಮ್ಯುನಿಸ್ಟ್ ಮ್ಯಾನಿಫೆಸ್ಟೋವಿನಲ್ಲಿ ಉಲ್ಲೇಖಿಸಿದಂತೆ ಸಂವೇದನೆ ಮತ್ತು ಸಂಘಟನೆಗೆ ಸಂಬಂಧಿಸಿದಂತೆ ಪ್ರೊಲಟರಿಯೇಟ್‌ಗೆ ಇರುವ ಅನುಕೂಲಗಳಿಂದ ಪ್ರೊಲಟರಿಯೇಟ್ ಶಕ್ತಿಶಾಲಿಯಾಗಿದ್ದಾನೆ. ಗ್ರಾಂಸಿ ಅದನ್ನು ಅನುಮೋದಿಸಿದರೂ ಪ್ರೊಲಟರಿಯೇಟ್ ಕಾರ್ಮಿಕವರ್ಗವು ಶೋಷಣೆಗೊಳಪಟ್ಟ ಮತ್ತು ದಮನಕ್ಕೊಳಪಟ್ಟ ಉಳಿದ ಸಬಾಲ್ಟರ್ನ್‌ಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಆಶಿಸುತ್ತಾನೆ. ಹಾಗಾಗಿ ಪ್ರೊಲಟರಿಯೇಟ್ ಮತ್ತು ರೈತರ ಅಥವಾ ಕ್ರಾಂತಿಕಾರಿಗಳ ಹಾಗು ಪ್ರತಿಗಾಮಿಗಳ ನಡುವಿನ ದ್ವಂದ್ವಗಳಿಗಿಂತ ಹೆಚ್ಚಾಗಿ ಇವರೆಲ್ಲರೂ ಕ್ರಾಂತಿಕಾರಿಗಳಾಗಿ ಒಟ್ಟಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಕಾಣಬರುವ ಸಂವೇದನಾಶೀಲತೆ ಮತ್ತು ಒಗ್ಗಟ್ಟು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎಂದು ಗ್ರಾಂಸಿಯು ಅಭಿಪ್ರಾಯಪಟ್ಟಿದ್ದಾನೆ.

ಭಾರತದ ರೈತಾಪಿ ವರ್ಗದ ಬಗ್ಗೆ ಗ್ರಾಂಸಿಯ ತತ್ವವನ್ನು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಅನ್ವಯಿಸುವಾಗ ನಮಗೆ ಬಹಳ ಮುಖ್ಯವೆಂದು ಅನ್ನಿಸುವ ವಿಷಯ ‘ಸ್ವಾಯತ್ತೆ’ (ಅಟಾನಮಿ). ಕೆಳವರ್ಗದ ಮೇಲೆ ಆಳುವವರು ತಮ್ಮ ಆಳ್ವಿಕೆಯನ್ನು ಮತ್ತು ಯಜಮಾನಿಕೆಯನ್ನು ದಬ್ಬಾಳಿಕೆ ಮೂಲಕ ಪ್ರತಿಪಾದಿಸುವುದನ್ನು ಗ್ರಾಂಸಿಯು ಈಗಾಗಲೇ ಚರ್ಚಿಸಿರುವುದು ಸರಿಯಷ್ಟೆ. ಆಧುನಿಕ ಬಂಡವಾಳಶಾಹಿ ಸಮಾಜದಲ್ಲಿ ರಾಜ್ಯಾಡಳಿತವನ್ನು ಕಿತ್ತೆಸೆಯಲು ಸಬಾಲ್ಟರ್ನ್ ವರ್ಗಗಳಿಗೆ ಅಸಾಧ್ಯವಾದದ್ದನ್ನು ಮತ್ತು ಸಬಾಲ್ಟರ್ನ್ ವರ್ಗಗಳು ಆಳುವ ವರ್ಗದ ಅಡಿಯಾಳಾದ ವಿಚಾರವನ್ನು ಚರ್ಚಿಸುವುದು ಗ್ರಾಂಸಿಯ ಉದ್ದೇಶವಾಗಿತ್ತು. ಅಲ್ಲಲ್ಲಿ ಸ್ವಾಯತ್ತೆಯ ಅಂಶಗಳು ಕಂಡುಬಂದರೂ ಸಬಾಲ್ಟರ್ನ್‌ಗಳ ನಡುವೆ ಸಮರ್ಥ ನಾಯಕತ್ವದ ಕೊರತೆ ಕಂಡುಬಂದದ್ದನ್ನು, ಸಬಾಲ್ಟರ್ನ್‌ಗಳು ಸಮರ್ಥವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಲು  ವಿಫಲವಾಗಿದ್ದನ್ನು, ಆಳುವ ವರ್ಗದ ಹಿತಾಸಕ್ತಿಗಳನ್ನು ಸೋಲಿಸಲು ಸಮರ್ಥವಾದ ಸೈದ್ಧಾಂತಿಕ ಹಾಗೂ ರಾಜಕೀಯ ನಿರ್ಣಯಗಳನ್ನು ಮಂಡಿಸಲು ವಿಫಲವಾದದ್ದನ್ನು ಗ್ರಾಂಸಿಯು ಚರ್ಚಿಸಿರುವುದು ಗಮನಾರ್ಹ. ಸಬಾಲ್ಟರ್ನ್ ಗುಂಪುಗಳು ದಂಗೆ ಎದ್ದ ಸಂದರ್ಭದಲ್ಲಿ ಮತ್ತು ಸೆಟೆದು ನಿಲ್ಲುವ ಸಂದರ್ಭದಲ್ಲಿಯೂ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿದ್ದ ವಿಚಾರವನ್ನು ತನ್ನ “ಸೆಲೆಕ್ಷನ್ ಫ್ರಂ ದಿ ಪ್ರಿಸನ್ ನೋಟ್ಸ್”ನಲ್ಲಿ ಗ್ರಾಂಸಿಯು ಮಂಡಿಸಿದ್ದನ್ನು ನಾವು  ನೋಡಬಹುದು.

ಭಾರತದ ಚರಿತ್ರೆ ಬರವಣಿಗೆಯನ್ನು ವಿಮರ್ಶಿಸಿದ ಸಂದರ್ಭದಲ್ಲಿ ರಣಜಿತ್ ಗುಹಾ ಅವರು ಗ್ರಾಂಸಿಯ ಮೇಲ್ಕಾಣಿಸಿದ ವಿಷಯಗಳಿಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವರು. ಭಾರತದಲ್ಲಿ ಸಬಾಲ್ಟರ್ನ್ ವರ್ಗಗಳ ಸ್ವಾಯತ್ತ ವಲಯಗಳು ಎಲೈಟ್ ರಾಜಕೀಯದ ಶಿಶುಗಳಾಗಿರಲಿಲ್ಲ ಮತ್ತು ಅವುಗಳ ಮೇಲೆ ಅವಲಂಬಿಸಿಕೊಂಡಿರಲಿಲ್ಲ ಎಂದು ಸಬಾಲ್ಟರ್ನ್ ಸ್ಟಡೀಸ್‌ನ ಪ್ರಥಮ ಸಂಪುಟದಲ್ಲಿ ರಣಜಿತ್ ಗುಹಾ ಅವರು ಬರೆದಿರುವುದು ಗಮನಾರ್ಹ.

ಸಬಾಲ್ಟರ್ನ್‌ಗಳೂ ಅಂತಿಮವಾಗಿ ಆಡಳಿತಶಾಹಿಗಳ ನಿಯಂತ್ರಣಕ್ಕೊಳಪಡುತ್ತಾರೆ ಎನ್ನುವ ಗ್ರಾಂಸಿಯ ಸೈದ್ಧಾಂತಿಕತೆಯನ್ನು ಒಪ್ಪದಿರುವವರ ಪೈಕಿ ಇ.ಪಿ. ಥಾಮ್ಸನ್ ಅವರು ಪ್ರಧಾನರು. ಸಬಾಲ್ಟರ್ನ್ ಸ್ಟಡೀಸ್ ಅಧ್ಯಯನದ ಪ್ರವರ್ತಕ ರಣಜಿತ್ ಗುಹಾ ಅವರು ಕೂಡ ಇದೇ ಸಾಲಿಗೆ ಬರುತ್ತಾರೆ. ಈ ಕುರಿತಂತೆ ಗುಹಾ ಅವರು ಎರಡು ವಲಯಗಳ ರಚನೆಯ ಬಗ್ಗೆ ವ್ಯಾಖ್ಯಾನಿಸಿದ್ದನ್ನೂ ಗಮನಿಸಬಹುದು. ೧೮ನೆಯ ಶತಮಾನದ ಗ್ರಾಮೀಣ ಸಮಾಜ ಪ್ರಧಾನವಾದ ಇಂಗ್ಲೆಂಡಿನ ಚರಿತ್ರೆ ಪ್ರಧಾನವಾಗಿ ಸ್ಥಳೀಯ ಭೂಒಡೆಯರ ಮನೆತನ ಹಾಗೂ ಅವರ ಎಸ್ಟೇಟ್‌ಗಳನ್ನೇ ಕೇಂದ್ರವಾಗಿರಿಸಿಕೊಂಡಿದ್ದರ ಬಗ್ಗೆ ತೀವ್ರವಾದ ಆಕ್ಷೇಪವನ್ನು ಎತ್ತಿದವರು ಇ.ಪಿ. ಥಾಮ್ಸನ್ ಅವರು. ಇಂಗ್ಲೆಂಡಿನ ಉನ್ನತ ವರ್ಗದವರ ಅಧಿಕಾರ, ದರ್ಪ ಹಾಗೂ ದೊಡ್ಡಸ್ತಿಕೆಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತಹ ಚರಿತ್ರೆ ಬರವಣಿಗೆ ಕ್ರಮ ಅದು ಎಂದು ಥಾಮ್ಸನ್ ಅವರು ಚರಿತ್ರೆ ಬರವಣಿಗೆಯಲ್ಲಿ ಉನ್ನತ ವರ್ಗದವರ ಅಭಿಪ್ರಾಯ ದಟ್ಟವಾಗಿ ಮನ್ನಣೆ ಪಡೆದಿರುವುದನ್ನು ಟೀಕಿಸಿದ್ದಾರೆ. ಬದಲಿಗೆ, ಜನಸಾಮಾನ್ಯರ ದೃಷ್ಟಿಕೋನವು ಈ ಹಿನ್ನೆಲೆಯಲ್ಲಿ ಮಹತ್ವ ಪಡೆಯುತ್ತದೆ ಎಂದು ವಾದಿಸುತ್ತಾರೆ. ಈ ಸಂದರ್ಭದಲ್ಲೇ ಅವರು ಜನಸಾಮಾನ್ಯರು ಖ್ಯಾತರೊಂದಿಗಿಟ್ಟುಕೊಂಡ ಅಸಮಾಧಾನಗಳನ್ನೂ ಪರಿಗಣಿಸಬೇಕೆಂದು ಸಲಹೆ ಮಾಡುತ್ತಾರೆ. ಆ ಮೂಲಕ ರಾಜಕಾರಣ ಮತ್ತು ಸಂಸ್ಕೃತಿಗಳೆರಡೂ ವಿಚಾರಗಳಲ್ಲಿ  ಬಡವರು ಮತ್ತು ಗಣ್ಯರ ನಡುವೆ ಇಲ್ಲದಿರುವ ಸಂಬಂಧಗಳು ಗ್ರಾಂಸಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ. ಈ ಎರಡೂ ವರ್ಗಗಳ ನಡುವಿರುವ ಅಂತರಗಳು ಥಾಮ್ಸನ್ನರ ವಾದಕ್ಕೆ ಪುಷ್ಟಿ ನೀಡುತ್ತವೆ. “ಆಳುವ ವರ್ಗದ ಪ್ರಭುತ್ವದ ಯಜಮಾನಿಕೆ ಏನೇ ಇದ್ದರೂ ಅದು ಬಡವರ್ಗವು ಮಾಡುತ್ತಿರುವ ಯಾವ ಕೆಲಸದ ಮೇಲೂ ಪರಿಣಾಮ ಬೀರಿಲ್ಲ. ಅದು ಬಡವರ್ಗದ ವಿರಾಮ ಅಥವಾ ಅವರು ಅನುಸರಿಸುತ್ತಿರುವ ವಿಧಿವಿಧಾನಗಳ ಮೇಲಾಗಲಿ ಅಥವಾ ಅವರ ಸುಖ ಸಂತೋಷಗಳ ಮೇಲಾಗಲಿ ಪರಿಣಾಮವನ್ನು ಬೀರಿಲ್ಲ” ಎಂದು ಥಾಮ್ಸನ್ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕಾಗಿ ಯಜಮಾನಿಕೆ ಎನ್ನುವ ಅಂಶವು ಬಹಳ ಜಟಿಲವಾಗಿರಲಿಲ್ಲ ಅಥವಾ ಸ್ವಯಂಚಾಲಿತವಾಗಿರಲಿಲ್ಲ ಅಥವಾ ಅದು ಎಲ್ಲವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರಲಿಲ್ಲ. ಬದಲಿಗೆ, ಪ್ರಭುತ್ವ ಮತ್ತು ದಬ್ಬಾಳಿಕೆಗೆ ಒಳಗು ಮಾಡುವ ಸಂಬಂಧಗಳ ಸಂರಚನೆಯನ್ನು ರಚಿಸಿಕೊಂಡ ವಾಸ್ತುಶಿಲ್ಪ ಅದು ಎಂದು ಥಾಮ್ಸನ್ ವ್ಯಂಗ್ಯವಾಡುತ್ತಾರೆ. ಆ ವಾಸ್ತುಶಿಲ್ಪದಡಿಯಲ್ಲಿ ಭಿನ್ನವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಮತ್ತು ಬೇರೆ ಬೇರೆ ನಾಟಕಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಕುಟುಕುತ್ತಾರೆ (ಥಾಮ್ಸನ್ ೧೯೭೮). ರೇಮಂಡ್ ವಿಲಿಯಮ್ಸ್ ಅವರು ಕೂಡ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ನೋಡಬಹುದು (ವಿಲಿಯಮ್ಸ್ ೧೯೭೭). ಈ ರೀತಿಯಲ್ಲಿ ಥಾಮ್ಸನ್, ರೇಮಂಡ್ ವಿಲಿಯಮ್ಸ್ ಮತ್ತು ರಣಜಿತ್ ಗುಹಾ ಅವರು ಗ್ರಾಂಸಿಯು ಪ್ರಭುತ್ವದ ಯಜಮಾನಿಕೆಯು ಜಟಿಲವಾಗಿರುತ್ತದೆ, ದೃಢವಾಗಿರುತ್ತದೆ ಎಂದು ಹೇಳಿರುವುದಕ್ಕೆ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತ ಅದು ನಿರಂತರ ಬದಲಾವಣೆಗೆ ಒಳಗಾಗುವ ಪ್ರಕ್ರಿಯೆಯನ್ನು ಹೊಂದಿದೆ ಮತ್ತು ಅದು ತೀವ್ರವಾಗಿ ಕೆಳಸ್ತರಗಳನ್ನು ಬಾಧಿಸಿಲ್ಲ ಎಂದು ಅಭಿಪ್ರಾಯಪಡುತ್ತಾರೆ.

“ಅಧೀನಕ್ಕೊಳಪಡಿಸುವುದು” ಎನ್ನುವ ಪ್ರಕ್ರಿಯೆ ಜೀವಂತವಾಗಿರುವುದೇ ಅದರೊಳಗಿರುವ ಸಂಬಂಧಗಳಿಂದ ಎಂದು ಪಾರ್ಥ ಚಟರ್ಜಿ ಅವರು ಗುರುತಿಸುತ್ತಾರೆ. ಅಧೀನಗೊಂಡ ವರ್ಗಗಳು ಅಧೀನಕ್ಕೊಳಗಾಗದಿದ್ದರೆ ಅಧೀನಕ್ಕೊಳಪಡಿಸುವ ವರ್ಗಗಳು ಇರಲಿಕ್ಕೆ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಬಾಲ್ಟರ್ನ್‌ಗಳ ಸ್ವಾಯತ್ತೆ (ಅಟಾನಮಿ) ಇಲ್ಲದಿದ್ದರೆ ದಬ್ಬಾಳಿಕೆ ಮಾಡುವವರಿಗೂ ತಮ್ಮ ಐಡೆಂಟಿಟಿ ಇರುವುದಿಲ್ಲ. ಪ್ರಬಲವರ್ಗಗಳ ಜೀವನ ಚರಿತ್ರೆಯನ್ನು ಬೆಸೆಯುವುದಕ್ಕಾಗಿ ಸಬಾಲ್ಟರ್ನ್‌ಗಳನ್ನು ಉಪಯೋಗಿಸಲಾಯಿತು ಎಂದು ಪಾರ್ಥ ಚಟರ್ಜಿ ಅವರು ರಣಜಿತ್ ಗುಹಾ ಅವರನ್ನು ಬೆಂಬಲಿಸಿರುವುದು ಗಮನಾರ್ಹವಾಗಿದೆ. (ಪಾರ್ಥ ಚಟರ್ಜಿ ೧೯೮೩).