ಸಬಾಲ್ಟರ್ನ್ ಸಿದ್ಧಾಂತದ ಬೆಳವಣಿಗೆ ಮತ್ತು ವಿವಿಧ ಆಯಾಮಗಳು

ಆಧುನಿಕ ಯುಗವು ಪಾಶ್ಚಾತ್ಯ ಜಗತ್ತಿನಲ್ಲಿ ಸಂಸ್ಥೀಕರಣವಾಗುವುದರ ಜೊತೆಜೊತೆಗೆ ರೈತಾಪಿ ವರ್ಗದ ವಿನಾಶವಾಯಿತು. ಭಾರತದ ಸಂದರ್ಭದಲ್ಲಿ ವಸಾಹತುಶಾಹಿ ಬುದ್ದಿಮತ್ತೆಯು ರೈತರನ್ನು ಸರಳ, ಬುದ್ದಿಹೀನ, ಭೂ ಒಡೆಯರಿಂದ ಶೋಷಣೆಗೆ ಒಳಗಾಗುವವ, ವ್ಯಾಪಾರಿಗಳ ಮತ್ತು ಬಡ್ಡಿ ದೊರೆಗಳ ಕೈಯಲ್ಲಿ ಸಿಕ್ಕಿ ನರಳಾಡುವವ, ಅಧಿಕಾರ ಕೇಂದ್ರಗಳಿಗೆ ತಲೆಬಾಗುವವ ಎಂದು ಚಿತ್ರಿಸಿತು. ಹಾಗೆಯೇ ಭಾರತೀಯ ರೈತ ಮಾನವತೀತ ಶಕ್ತಿಗಳಿಗೆ ತಲೆಬಾಗುವವ ಮತ್ತು ವಿವೇಚನೆಯಿಲ್ಲದ ಹೋರಾಟಗಾರ ಎಂದೂ ಕರೆಯಿತು. ಈ ಕಾರಣಕ್ಕಾಗಿಯೇ ಭಾರತೀಯ ‘ಎಲೈಟರು’ ರೈತರನ್ನು ತಮ್ಮ ಸ್ವಾರ್ಥಕ್ಕೆ ಅವರನ್ನು ಬಳಸಿ ಬಿಸಾಕಿತು.  ಭಾರತದ ರಾಷ್ಟ್ರೀಯವಾದಿಗಳ ನಿಲುವು ವಸಾಹತುಶಾಹಿಗಳ ನಿಲುವಿಗಿಂತ ಭಿನ್ನವಾಗಿಯೇ ನಿಲ್ಲದಿರುವುದನ್ನು ಪಾರ್ಥ ಚಟರ್ಜಿಯವರು ತಮ್ಮ ‘ದಿ ನೇಶನ್ ಆಂಡ್ ಇಟ್ಸ್ ಪೆಸೆಂಟ್ಸ್’ (ಚಟರ್ಜಿ ೧೯೯೭:೧೫೮-೧೭೨) ಎನ್ನುವ ಲೇಖನದಲ್ಲಿ ಚರ್ಚಿಸುತ್ತಾರೆ. ತೀವ್ರವಾದ ಬಡತನದ ಕಾರಣದಿಂದಾಗಿ ರೈತರನ್ನು ವಸಾಹತುಶಾಹಿಗಳು ಶೋಷಿಸುತ್ತಾರೆ ಎಂದೆನ್ನುತ್ತಾರೆ ರಾಷ್ಟ್ರೀಯವಾದಿಗಳು.ಈ ಕಾರಣದಿಂದಾಗಿಯೇ ರೈತರಲ್ಲಿ ಅರಿವು ಮೂಡಿ ವಸಾಹತುಶಾಹಿಗಳ ವಿರುದ್ಧ ಪ್ರತಿಭಟಿಸುತ್ತಾರೆ. ಆದರೆ ಅದರಲ್ಲಿ ಬೌದ್ದಿಕತೆಯ ಅಂಶ ಬಲಹೀನವಾಗಿದ್ದರಿಂದ ರೈತರು ಸೋಲೊಪ್ಪುತ್ತಾರೆ. ರೈತರನ್ನು ತಮ್ಮ ತಮ್ಮ ಆಯಕಟ್ಟಿನ  ಕಾರಣಕ್ಕಾಗಿ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವ ಅಂಶವನ್ನು ವಸಾಹತುಶಾಹಿಗಳು ಮತ್ತು ರಾಷ್ಟ್ರೀಯವಾದಿಗಳು ಕರಗತ ಮಾಡಿಕೊಂಡಿದ್ದರು ಎನ್ನುವ ಕಟು ಟೀಕೆಯನ್ನು ಪಾರ್ಥ ಚಟರ್ಜಿಯವರು ಮಾಡಿರುವುದನ್ನು ಗಮನಿಸಬಹುದು. ಲೇಖನದ ಈ ಭಾಗದಲ್ಲಿ ಪಾರ್ಥ ಚಟರ್ಜಿಯವರು ಭಾರತದ ಆಧುನಿಕ ಚರಿತ್ರೆಯಲ್ಲಿ ರೈತರ ಪ್ರತಿಭಟನೆಗಳನ್ನು ಮತ್ತು ಸಂವೇದನೆಗಳನ್ನು ಅಭ್ಯಸಿಸಿ ಪ್ರಕಟಿಸಿದ ತಮ್ಮ ಕೃತಿಯ ಆಶಯಗಳನ್ನು ಲೇಖನದ ಈ ಭಾಗದಲ್ಲಿ ವಿವರಿಸಲು ಯತ್ನಿಸಲಾಗಿದೆ.

ಭಾರತದಲ್ಲಿ ವಸಾಹತು ವಿರೋಧಿ ಹೋರಾಟಗಳ ಹಾದಿಗಳು ವಸಾಹತುಶಾಹಿ ಹಾಗೂ ರಾಷ್ಟ್ರೀಯವಾದಿ ಚರಿತ್ರೆ ಬರವಣಿಗೆ ಕ್ರಮಗಳನ್ನು ಪ್ರಶ್ನಿಸಿವೆ. ಭಾರತದ ರೈತ ವರ್ಗಗಳು ಎಲೈಟ್‌ಗಳ ಹಿತಾಸಕ್ತಿಯನ್ನು ಕಾಪಾಡುವ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಜಕಾರಣದ ಭಾಗಗಳಾಗಿ ಸಂಕ್ಷಿಪ್ತಗೊಳ್ಳದೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಮತ್ತು ತೀವ್ರತೆಯನ್ನು ವಸಾಹತು ವಿರೋಧಿ ಹೋರಾಟಗಳಲ್ಲಿ ತೋರಿಸಿರುವುದನ್ನು ಗಮನಿಸಬಹುದಾಗಿದೆ. ಈ ಸಂದರ್ಭದಲ್ಲಿ ಪಾರ್ಥ ಚಟರ್ಜಿಯವರು ರೈತ ವರ್ಗದ ಎರಡು ಸ್ವಾಯತ್ತ ವಲಯಗಳನ್ನು (ಡೊಮೈನ್) ಗುರುತಿಸುತ್ತಾರೆ. ವಸಾಹತುಶಾಹಿ ವ್ಯವಸ್ಥೆಯು ಕಟ್ಟಿಕೊಟ್ಟಿರುವ ವ್ಯವಸ್ಥೆಯೊಳಗೆ ಇರುವ ಸಂಘಟಿತ ರಾಜಕೀಯ ಪಕ್ಷಗಳು ಅದೇ ವ್ಯವಸ್ಥೆಯ ಪರಿಧಿಯಲ್ಲಿ ಜನಹೋರಾಟದ ಮೂಲಕ ವಸಾಹತುಶಾಹಿ ಸರಕಾರವನ್ನು ಕಿತ್ತೊಗೆದು ತಮ್ಮ ಅಧಿಕಾರವನ್ನು ಕೇಂದ್ರೀಕರಿಸುವುದು ಒಂದನೇ ಬಗೆಯ ಡೊಮೈನ್. ಎರಡನೇ ಬಗೆಯ ಡೊಮೈನ್ ರೈತ ರಾಜಕೀಯ ಕೇಂದ್ರದ್ದಾಗಿದೆ. ಸಂವಿಧಾನಬದ್ಧ ವ್ಯವಸ್ಥೆಯ ಹೊರಗಡೆ ಕಂಡುಬರುವ ಪ್ರಕ್ರಿಯೆ ಇದು. ಯಾರ ದಾಳಕ್ಕೂ ಬಲಿಯಾಗದ ಈ ವರ್ಗದ ಅಭಿವ್ಯಕ್ತಿಯು ತತ್‌ಕ್ಷಣದ ಪ್ರತಿಕ್ರಿಯೆಯಿಂದ (ಸ್ಪಾಂಟೇನಿಯಸ್) ಕೂಡಿರುತ್ತದೆ.

ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಕಂಡುಬರುವ ಜನಸಾಮಾನ್ಯರ ಹೋರಾಟಕ್ಕೆ (ಮಾಸ್ ಮೂವ್‌ಮೆಂಟ್) ಎರಡು ಆಯಾಮಗಳಿವೆ. ರೈತ ಕೇಂದ್ರಿತವಾಗಿರುವ ಎರಡು ಡೊಮೈನ್‌ಗಳು ಪರಸ್ಪರ ಜೊತೆಗೂಡಿ ಹೋರಾಡುವುದು ಬಗೆಹರಿಸಲಿಕ್ಕಾಗದ ಒಂದು ದೊಡ್ಡ ವೈರುಧ್ಯವಾಗಿದೆ. ಮೊದಲನೆಯ ಆಯಾಮದ ಪ್ರಕಾರ, ಎರಡು ಡೊಮೈನ್‌ಗಳು ಒಟ್ಟು ಸೇರುವ ಸಂದರ್ಭದಲ್ಲಿ, ವಸಾಹತು ವಿರೋಧಿ ಹೋರಾಟಗಳ ನೇತೃತ್ವವನ್ನು ರಾಷ್ಟ್ರೀಯವಾದಿಗಳು ವಹಿಸಿಕೊಳ್ಳುತ್ತಾರೆ. ಇಂತಹ ಯೋಜನೆಯಲ್ಲಿ ರೈತರನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಸಾಹತೋತ್ತರ ಕಾಲಘಟ್ಟದಲ್ಲಿ ನೇಶನ್ ಸ್ಟೇಟನ್ನು ಸ್ಥಾಪಿಸಲು ರಾಷ್ಟ್ರೀಯವಾದಿಗಳು ಪ್ರಯತ್ನ ಪಡುತ್ತಾರೆ. ರೈತರು ಅಪ್ರಬುದ್ಧರು ಮತ್ತು ಸಂವೇದನಾಶೀಲರಲ್ಲದವರು ಎನ್ನುವ ಪೂರ್ವಗ್ರಹದಿಂದ ರಾಷ್ಟ್ರೀಯವಾದಿಗಳು ರೈತರನ್ನು ದುಡಿಸಿಕೊಂಡು ರಾಜ್ಯಕೇಂದ್ರಿತ ವ್ಯವಸ್ಥೆಗಳಿಂದ ದೂರವಿಡುತ್ತಾರೆ. ಇನ್ನೊಂದು ಕಡೆಯಿಂದ ಈ ಆಯಾಮವನ್ನು ನೋಡುವುದಾದರೆ, ಇಂತಹ ಸಂದರ್ಭದಲ್ಲೆಲ್ಲ ರಾಷ್ಟ್ರೀಯವಾದಿ ನಾಯಕರ ವ್ಯೂಹಕ್ಕೆ ಬಿದ್ದ ರೈತ ವರ್ಗವು ರಾಜಕಾರಣವನ್ನು ಆಧುನಿಕ ಬೂರ್ಜ್ವಾ ರಾಜಕೀಯ ನೆಲೆಗಟ್ಟಿನಲ್ಲಿ ನೋಡದೆ, ತನ್ನ ಸಂವಹನದ ಮೂಲಕ ರಾಷ್ಟ್ರೀಯವಾದಿ ರಾಜಕಾರಣದ ಮಜಲುಗಳನ್ನು ತನ್ನದೇ ಭಾಷೆಯಲ್ಲಿ ಭಾಷಾಂತರಿಸಿಕೊಳ್ಳುತ್ತದೆ. ರೈತರ ಡೊಮೈನ್‌ನಲ್ಲಿ (ವಲಯ) ಇದು ಪರಿಣಾಮಕಾರಿ ಸಂಚಲನೆಯನ್ನು ಉಂಟುಮಾಡಿರುವುದನ್ನು ನಾವು ಗಮನಿಸಬಹುದು. ಹೀಗಾಗಿ ರಾಷ್ಟ್ರೀಯವಾದಿಗಳ ನೇತೃತ್ವದ ಮೊದಲನೆಯ ಡೊಮೈನ್ ಎರಡನೆ ಬಗೆಯ ಡೊಮೈನ್ ಅನ್ನು ಅಂತರ್ಗತ ಮಾಡಿಕೊಂಡು ರೈತರನ್ನು ನಿಷ್ಕ್ರಿಯ ಸ್ಥಿತಿಯಲ್ಲಿಟ್ಟಿರುತ್ತಾರೆನ್ನುವ ಅಂಶವು ಸರಿಯಲ್ಲ. ಹೀಗಾಗಿ ರೈತ ವರ್ಗದ ಹೋರಾಟವೆನ್ನುವುದು ಒಂದೇ ಆಶಯದ ಒಂದೇ ಹೋರಾಟವಲ್ಲ. ಬದಲಿಗೆ ರೈತ ಹೋರಾಟಗಳು ಬಹುತ್ವವಾದವು ಮತ್ತು ವಸಾಹತು ಕಾಲಘಟ್ಟದಲ್ಲಂತೂ ಅವು ಭಿನ್ನ ಭಿನ್ನ ನೆಲೆಗಟ್ಟಿನವು.

ಎರಡೂ ಡೊಮೈನ್‌ಗಳು ಒಟ್ಟು ಸೇರುವ ರಾಜಕೀಯ ಇನ್ನೊಂದು ಆಯಾಮದ ಪ್ರಕಾರ, ಇಂತಹ ಸಂದರ್ಭದಲ್ಲಿ ಸರಳರೇಖಾತ್ಮಕ ರೀತಿಯಲ್ಲಿ ರೈತರು ರಾಷ್ಟ್ರೀಯವಾದಿ ಸಂವೇದನೆಗೆ ಒಳಗಾಗುವುದಿಲ್ಲ. ಭಾರತದ ಭಿನ್ನಭಿನ್ನ ಪ್ರದೇಶಗಳಲ್ಲಿ ರೈತ ರಾಜಕಾರಣವು ರಾಷ್ಟ್ರೀಯವಾದಿ ರಾಜಕಾರಣದ ಭಿನ್ನಭಿನ್ನ ವಸ್ತುಸ್ಥಿತಿಗಳನ್ನು ಎದುರಿಸುತ್ತಿರುವುದು ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಅನೇಕ ರೈತ ಹೋರಾಟಗಳು ಅಲ್ಲಲ್ಲಿ ಸಫಲತೆಯನ್ನು ಕಂಡರೂ, ನಂತರದಲ್ಲಿ ವಿಮುಖವಾಗುತ್ತವೆ. ಉಗ್ರ ಸ್ವರೂಪದ ಅನೇಕ ವಸಾಹತು ವಿರೋಧಿ ರೈತ ಹೋರಾಟಗಳು ನಂತರ ತನ್ನ ಪಥದಿಂದ ದೂರ ಸರಿದು ಸಂಕುಚಿತ ಸಮುದಾಯ ಹೋರಾಟಗಳಲ್ಲಿ (ಸೆಕ್ಟೇರಿಯನ್)  ಅಂತ್ಯ ಕಾಣುತ್ತವೆ.

ಮೇಲ್ಕಂಡ ತಾರ್ಕಿಕ ಅಂಶಗಳ ಮೂಲಕ ಪಾರ್ಥ ಚಟರ್ಜಿ ಅವರು ರೈತ ಹೋರಾಟಗಳ ಕೆಲವು ಆಯಾಮಗಳನ್ನು ಚರ್ಚಿಸುತ್ತ, ರಣಜಿತ್ ಗುಹಾ ಅವರು ಸಬಾಲ್ಟರ್ನ್ ಅಧ್ಯಯನದ ಸೈದ್ಧಾಂತೀಕರಣಕ್ಕೆ ಸಂಬಂಧಿಸಿದಂತೆ ಎತ್ತಿರುವ ಅಧ್ಯಯನ ಕ್ರಮಗಳನ್ನು ಬೆಂಬಲಿಸುತ್ತಾರೆ. ಇವರು ೧೭೮೩ರಿಂದ ೧೯೦೦ರ ಅವಧಿಯೊಳಗೆ ನಡೆದ ರೈತ ಬಂಡಾಯಗಳನ್ನು ಚರ್ಚಿಸುತ್ತ ಅಧಿಕಾರಕ್ಕೆ ಸಂಬಂಧಿಸಿದಂತಿರುವ ದಬ್ಬಾಳಿಕೆ ಮತ್ತು ಶೋಷಣೆಗೆ ರೈತರು ಒಳಗಾಗುತ್ತಾರೆ ಎಂಬ ಅಂಶವನ್ನು ತಿಳಿಸುತ್ತಾರೆ. ಕೇವಲ ಪ್ರತಿರೋಧವನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸುವುದಲ್ಲ. ಬದಲಿಗೆ ಪ್ರತಿರೋಧಕ್ಕೆ ಕಾರಣವಾದ ದಬ್ಬಾಳಿಕೆಯ ಪ್ರಕಾರಗಳನ್ನು ಈ ಸಂದರ್ಭದಲ್ಲಿ ಅಧ್ಯಯನಕ್ಕೊಳಪಡಿಸಬೇಕಾಗುತ್ತದೆ. ರೈತರ ಪ್ರತಿರೋಧಕ್ಕೆ ಸಂಬಂಧಿಸಿದ ಬಂಡಾಯಗಳ ಅಧ್ಯಯನಕ್ಕೆ ಪೂರಕವಾದ ಆಕರಗಳು, ದಾಖಲೆಗಳು ಶೋಷಕ ವರ್ಗವು ಹುಟ್ಟುಹಾಕಿರುವವು ಎಂಬ ವಿಚಾರವೂ ಇಲ್ಲಿ ಮುಖ್ಯವಾಗಿದೆ. ಈಗಿರುವ ದಾಖಲೆಗಳು, ಅದಕ್ಕೆ ಸಂಬಂಧಿಸಿದ ವಿವರಗಳು ಶೋಷಕವರ್ಗದ ಜ್ಞಾನವಲಯದ ಅಭಿವ್ಯಕ್ತಿಯಾಗಿದ್ದರಿಂದ ಶೋಷಣೆಗೆ ಒಳಪಟ್ಟ ರೈತಾಪಿ ಜನವರ್ಗವು ಅಧಿಕಾರ ಕೇಂದ್ರದಿಂದ ವಿಮುಖರಾಗಿದ್ದರಿಂದ ರೈತವರ್ಗದ ಸಂವೇದನೆಯ ದಾಖಲಾತಿಯು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ರಣಜಿತ್ ಗುಹಾ ಅವರು ಈ ಬಗೆಯ ರೈತರ ಪ್ರತಿರೋಧಗಳ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಲು  ಸಲಹೆ ಮಾಡಿದ ಆರು ಮುಖ್ಯ ಅಂಶಗಳನ್ನು ಪಾರ್ಥ ಚಟರ್ಜಿ ಅವರು ಅನುಮೋದಿಸುತ್ತಾರೆ. ಈ ಆರು ಅಂಶಗಳ ವಿವರಗಳು ಹೀಗಿವೆ. ಅವು ನಕಾರಾತ್ಮಕತೆ (ನೆಗೇಶನ್), ಅಸ್ಪಷ್ಟತೆ (ಆಂಬಿಗ್ವಿಟಿ), ಕಾರ್ಯ ವೈಖರಿ (ಮೊಡಾಲಿಟಿ), ಒಗ್ಗಟ್ಟು (ಸಾಲಿಡಾರಿಟಿ), ವಿಚಾರ ಹರಡುವಿಕೆ (ಟ್ರಾನ್ಸ್‌ಮಿಶನ್) ಮತ್ತು ಗಡಿ (ಟೆರ್ರಿಟೊರಿಯಾಲಿಟಿ)ಗಳನ್ನು ಒಳಗೊಂಡಿವೆ. ಒಂದನೆಯ ಅಂಶವಾದ ನಕಾರಾತ್ಮಕತೆಗೆ ಸಂಬಂಧಿಸಿದಂತೆ ಮಾತಾಡುವುದಾದರೆ, ರೈತರ ಯಾವುದೇ ಪ್ರತಿರೋಧಗಳನ್ನು ತಮ್ಮ ಶೋಷಕರ ವಿರುದ್ಧ ವ್ಯಕ್ತಪಡಿಸುವಲ್ಲಿ ಕಂಡುಬರುತ್ತದೆ. ದಬ್ಬಾಳಿಕೆ ನಡೆಸುವವರು ಏನೇ ಹೇಳಿದರೂ, ಮಾಡಿದರೂ ಅದಕ್ಕೆ ಋಣಾತ್ಮಕ ಪ್ರತಿಕ್ರಿಯೆ ನೀಡುವುದು ನಕಾರಾತ್ಮಕ ಸ್ವರೂಪವಾಗಿದೆ. ತಾವು ಭಾವಿಸುವ ದೌರ್ಜನ್ಯದ ಸಂಕೇತಗಳಾದ ಕಂದಾಯ ವಸೂಲಿ ಸಂದರ್ಭದಲ್ಲಿ, ಗೇಣಿಯನ್ನು ನಿಗದಿಪಡಿಸುವ ಸಂದರ್ಭದಲ್ಲಿ ಅಥವಾ ಶೋಷಕರು ಕಾನೂನುಬದ್ಧವಾಗಿ ಶಿಕ್ಷೆ ನೀಡುವ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ ರೈತರ ಪ್ರತಿರೋಧಗಳು ನಕಾರಾತ್ಮಕವಾಗಿರುತ್ತದೆ. ಎರಡನೆಯ ಅಂಶವಾದ, ಅಸ್ಪಷ್ಟತೆ ಎನ್ನುವ ಅಂಶವು ಮುಖ್ಯವಾಗಿ ಆಡಳಿತಶಾಹಿಗೆ ಸಂಬಂಧಪಟ್ಟದ್ದಾಗಿದೆ. ರೈತರ ಪ್ರತಿಭಟನೆಗಳ ಮತ್ತು ಅಪರಾಧಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹಜವಾಗಿ ಆಡಳಿತಗಾರರಿಗೆ ಸಾಧ್ಯವಾಗದೆ ಸದಾ ಅವರು ಅಸ್ಪಷ್ಟತೆಯಲ್ಲಿರುತ್ತಾರೆ. ರೈತರ ಪ್ರತಿರೋಧಗಳು ಸಾರ್ವಜನಿಕ ಮತ್ತು ಸಾಮುದಾಯಿಕ ಘಟನೆಗಳಾಗಿರುವುದನ್ನು ಶೋಷಕವರ್ಗವು ಗಮನಿಸುವುದಿಲ್ಲ. ಮೂರನೆಯ ಅಂಶ, ರೈತರ ಪ್ರತಿರೋಧಗಳ ಕಾರ್ಯ ವೈಖರಿಯು ಬಹುತೇಕವಾಗಿ ಅಧಿಕಾರಸ್ಥರ ಅಧಿಕಾರದ ಚಿಹ್ನೆಗಳನ್ನು ಧ್ವಂಸ ಮಾಡುವುದಾಗಿದೆ. ರೈತರ ಪ್ರತಿರೋಧದ ಈ ಬಗೆಯ ಕಾರ್ಯವೈಖರಿಗಳಲ್ಲಿ ಪೊಲೀಸ್ ಸ್ಟೇಶನ್‌ಗಳನ್ನು ಅಥವಾ ಜಮೀನ್ದಾರರ ಗೇಣಿ ಕಚೇರಿಗಳನ್ನು ಅಥವಾ ಲೇವಾದೇವಿಗಾರರ ಮನೆಗಳನ್ನು ನಾಶ ಮಾಡುವುದು ಮುಖ್ಯವಾಗಿರುತ್ತದೆ. ಗುಹಾ ಅವರು ಧ್ವಂಸ ಮಾಡುವುದು, ಸುಡುವುದು, ತಿನ್ನುವುದು ಮತ್ತು ಊಟ ಮಾಡುವುದು ಎನ್ನುವ ಅಂಶಗಳನ್ನು ಅಧಿಕಾರದ ಲಾಂಛನಗಳನ್ನು ಧ್ವಂಸ ಮಾಡಿದ ಸಂದರ್ಭದಲ್ಲಿ ಗುರುತಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಾವೇ ತಮ್ಮ ರೆಬೆಲ್ ಅಧಿಕಾರವನ್ನು ಸ್ಥಾಪಿಸಿದ ರೈತರ ಹೋರಾಟಗಳನ್ನು ನಾವು ಗಮನಿಸಬಹುದು. ಒಗ್ಗಟ್ಟು ಎನ್ನುವ ನಾಲ್ಕನೆಯ ಅಂಶವು ರೈತರ ಸಾಮುದಾಯಿಕತೆಯ ಸ್ವರೂಪದ್ದಾಗಿದೆ. ತನ್ನ ವೈರಿಯ ವಿರುದ್ಧ ನಿಂತ ಈ ಗುಂಪಿನ ಒಗ್ಗಟ್ಟು ಮತ್ತು ಸಹಭಾಗಿತ್ವವು ಇಲ್ಲಿ ಮುಖ್ಯವಾಗಿದೆ. ಈ ಸಮುದಾಯದ ಒಗ್ಗಟ್ಟು ಮತ್ತು ಸಹಭಾಗಿತ್ವವು ಒಂದು ಪ್ರತಿರೋಧದ ಘಟನೆಗಿಂತ ಭಿನ್ನವಾಗಿರುತ್ತವೆ ಅಥವಾ ಕೆಲವೊಮ್ಮೆ ಈ ಪ್ರತಿರೋಧಗಳ ನೆಲೆಗಳು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಭಿನ್ನವಾಗಿರುತ್ತವೆ. ಬಹಳಷ್ಟು ಬಾರಿ ಈ ಬಗೆಯ ಪ್ರತಿರೋಧಗಳಲ್ಲಿ ರಕ್ತ ಸಂಬಂಧಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ಸಾಮುದಾಯಿಕ ಪ್ರಜ್ಞೆಯು ಪ್ರಬಲವಾಗಿದ್ದನ್ನು ಗುರುತಿಸಬಹುದಾಗಿದೆ. ಐದನೆಯ ಅಂಶವಾದ ವಿಚಾರ ಹರಡುವಿಕೆ ಎನ್ನುವ ಅಂಶವು ರೈತರ ಪ್ರತಿರೋಧದ ಎಲ್ಲೆಯನ್ನು ವಿಸ್ತರಿಸಿದೆ. ಅಧಿಕಾರಸ್ಥರು ಊಹಿಸಲಿಕ್ಕೂ ಸಾಧ್ಯವಾಗದ ರೀತಿಯಲ್ಲಿ ವಿಚಾರಗಳು ಟ್ರಾನ್ಸ್‌ಮಿಟ್ ಆಗುತ್ತಿರುತ್ತವೆ. ಉದಾಹರಣೆಗೆ, ಗಾಳಿ ಸುದ್ದಿಗಳು ಬಹಳ ಬೇಗ ಧುತ್ತೆಂದು ಸಮುದಾಯ ಗಳೊಳಗೆ ವಿದ್ಯುತ್ತಿನಂತೆ ಸಂಚರಿಸಿ ರೈತರು ತತ್‌ಕ್ಷಣವೇ ಪ್ರತಿಭಟನೆಯನ್ನು ಮಾಡಲು ಕಾರಣವಾಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ಗಾಳಿಸುದ್ದಿಗಳ ಉಗಮ ನಿಗೂಢವಾಗಿರುತ್ತದೆ. ಕೊನೆಯದಾಗಿ, ಯಾವುದೇ ಪ್ರತಿರೋಧಗಳು ಮತ್ತು ಪ್ರತಿಭಟನೆಗಳು ನಿರ್ದಿಷ್ಟವಾದ ಗಡಿಗಳಲ್ಲಿ ನಡೆಯುತ್ತವೆ. ಅನೇಕ ಸಂದರ್ಭಗಳಲ್ಲಿ ತನ್ನ ಶತ್ರುವಿನ ಗಡಿಯೇ ರೈತರ ಪ್ರತಿರೋಧದ ಎಲ್ಲೆಗಳಾಗಿರುತ್ತವೆ. ರಕ್ತ ಸಂಬಂಧದ ಗಡಿಗಳೂ ಈ ಹಿನ್ನೆಲೆಯಲ್ಲಿ ಮುಖ್ಯವಾಗಿರುತ್ತವೆ. ಈ ಗಡಿಗಳೇ ರೈತ ಸಮುದಾಯದ ಐಕ್ಯಕ್ಕೆ ಕಾರಣವಾಗಿರುತ್ತವೆ.

ರೈತರ ಸಂವೇದನೆಗಳು ಬೂರ್ಜ್ವಾ ಸಂವೇದನಗಳಿಗೆ ವಿರುದ್ಧವಾಗಿರುತ್ತದೆ ಎಂದು ಪಾರ್ಥ ಚಟರ್ಜಿ ಅವರು ವಿಮರ್ಶಿಸಿದ್ದಾರೆ. ಬೂರ್ಜ್ವಾ ಸಂವೇದನೆಗಳು ವ್ಯಕ್ತಿಗತವಾಗಿರುತ್ತದೆ. ವ್ಯಕ್ತಿಕೇಂದ್ರವಾಗಿರುವ ಈ ಸಂವೇದನೆಗಳ ಮೂಲಕ ಬೂರ್ಜ್ವಾಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧೀಕರಿಸಲು ತಮ್ಮ ತಮ್ಮೊಳಗೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ತಮ್ಮ ತಮ್ಮ ಸಾಮಾನ್ಯ ಹಿತಾಸಕ್ತಿಗಳಿಗಾಗಿ ಅವರೆಲ್ಲ ಒಪ್ಪಂದಗಳನ್ನು ಮಾಡಿಕೊಂಡು ಪರಸ್ಪರ ಸಹಕರಿಸುತ್ತಿರುತ್ತಾರೆ. ದಂಗೆಯೆದ್ದ ರೈತವರ್ಗಗಳಲ್ಲಿ ಇದಕ್ಕೆ ವಿರುದ್ಧವಾದ ನೆಲೆಯಲ್ಲಿ ಸಂವೇದನಾ ನೆಲೆಗಳಿರುತ್ತವೆ. ವೈಯಕ್ತಿಕ ನೆಲೆಯಲ್ಲಿ ಅಥವಾ ವ್ಯಕ್ತಿಕೇಂದ್ರಿತ ನೆಲೆಗಳಲ್ಲಿ ಅವರ ಸಂವೇದನೆಗಳಿಲ್ಲದೆ ಸಾಮುದಾಯಿಕ ನೆಲೆಗಟ್ಟಿನಲ್ಲಿರುತ್ತದೆ ಎನ್ನುವುದು ಗಮನಾರ್ಹ. ವ್ಯಕ್ತಿಗಳ ನಡುವಿನ ಒಪ್ಪಂದಕ್ಕಿಂತ ಸಮುದಾಯದ ಪ್ರತಿನಿಧಿಗಳಾಗಿ ರೈತ ವರ್ಗವು ಕಾರ್ಯ ನಿರ್ವಹಿಸುವುದು.

ಇಲ್ಲಿಯವರೆಗೆ ಬೂರ್ಜ್ವಾ ಸಂವೇದನೆಗಳ ಮೂಲಕ ರೈತ ವರ್ಗದ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕ್ರಮಕ್ಕಿಂತ ರೈತರ ಸಂವೇದನೆಯ ಮೂಲಕವೇ ರೈತರ ಡೊಮೈನ್ ಅನ್ನು ಅರ್ಥ ಮಾಡಿಕೊಳ್ಳುವ ಕ್ರಮದ ಬಗ್ಗೆ ವ್ಯಾಖ್ಯಾನಿಸಿದ ರಣಜಿತ್ ಗುಹಾ ಅವರ ಕ್ರಮವನ್ನು ಪಾರ್ಥ ಚಟರ್ಜಿ ಅವರು ಅನುಮೋದಿಸಿದ್ದಾರೆ. ಈ ಮೂಲಕ ಅವರು ಬೂರ್ಜ್ವಾ ಅರ್ಥಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞರನ್ನು ಮಾತ್ರವಲ್ಲ “ಅಗ್ರೇರಿಯನ್” ಪ್ರಶ್ನೆಗಳನ್ನು ಎತ್ತುತ್ತಿರುವ ಮಾರ್ಕ್ಸಿಸ್ಟ್ ವಿದ್ವಾಂಸರಿಗೂ ಸವಾಲನ್ನು ಎಸೆದಿದ್ದಾರೆ.

ರೈತರ ಅನುಭವ ಮತ್ತು ಅವರ ದೃಷ್ಟಿಕೋನವನ್ನು ಈಗಿರುವ  ಅಧ್ಯಯನ ಕ್ರಮದಲ್ಲಿ ವಿವರಿಸಲು ಅಸಾಧ್ಯ ಎನ್ನುವ ಹಿನ್ನೆಲೆಯಲ್ಲಿ ರೈತರ ಸಂವೇದನೆಗೆ ಸಂಬಂಧಿಸಿದ ಚರಿತ್ರೆ ಬರವಣಿಗೆ ಅಗತ್ಯವಿದೆ. ಸಬಾಲ್ಟರ್ನ್ ಅಧ್ಯಯನದ ಸಂದರ್ಭದಲ್ಲಿ ಆಗಾಗ್ಗೆ ಉಲ್ಲೇಖವಾಗುವ ರೈತ ‘ಸಮುದಾಯ’ ಎನ್ನುವ ತಾತ್ವಿಕ ಶಬ್ದಕ್ಕೆ ನಿರ್ದಿಷ್ಟ ಅರ್ಥವನ್ನು ರಣಜಿತ್ ಗುಹಾ ಆರೋಪಿಸಿಲ್ಲದಿರುವುದನ್ನು ಗಮನಿಸಬಹುದಾಗಿದೆ. ಕುಲ, ಬುಡಕಟ್ಟು, ಜಾತಿ, ಹಳ್ಳಿ ಮುಂತಾದ ರೂಪದಲ್ಲಿ ರೈತ ಸಮುದಾಯದ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ‘ಅವರು’ ಮತ್ತು ‘ನಾವು’ ಎನ್ನುವ ಸಮೀಕರಣದ ಮೂಲಕ ಸಮುದಾಯವು ಕಾಲ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ರಚನೆ ಹಾಗೂ ಪುನಾರಚನೆಗೊಳ್ಳುವುದು. ಕೇವಲ ಒಗ್ಗಟ್ಟು ಮತ್ತು ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ ಪ್ರತಿಭಟನಾಕಾರರ ನಡುವಿನ ಒಳಜಗಳ ಮತ್ತು ವಿಶ್ವಾಸ ದ್ರೋಹಗಳಿಗೆ ಸಂಬಂಧಿಸಿದಂತೆ ಕೂಡ ಸಮುದಾಯದ ಅರ್ಥದ ವಿನ್ಯಾಸವು ಬದಲಾಗು ತ್ತಿರುತ್ತದೆ. ೧೭೮೩ರ ರಂಗಾಪುರ ದಂಗೆಯಲ್ಲಿ ರೈತರು ತಮ್ಮ ಪಕ್ಕದ ಹಳ್ಳಿಯ ರೈತರನ್ನುದ್ದೇಶಿಸಿ “ನೀವು ನಮ್ಮ ಅಣ್ಣತಮ್ಮಂದಿರು. ಈ ಸಮರದಲ್ಲಿ ನೀವು ಪಾಲ್ಗೊಳ್ಳಿ” ಎನ್ನುವ ಮಾತನ್ನು ಚರಿತ್ರೆಕಾರರು ದಾಖಲು ಮಾಡಿದ್ದಾರೆ. ಈ ವಿನ್ಯಾಸವನ್ನು ಭಾರತದ ನೆಲದಲ್ಲಿ ನಡೆದ ಭಿನ್ನಭಿನ್ನ ರೈತ ಹೋರಾಟಗಳಲ್ಲಿ ನೋಡಬಹುದಾಗಿದೆ. ಇದು ಒಪ್ಪಂದವಲ್ಲ. ಆದರೆ ಪರಸ್ಪರರು ತಮಗಾಗಿ ಮಾಡಿಕೊಂಡ ಕರ್ತವ್ಯದ ಭಾಗವಾಗಿದೆ. ೧೮೭೫ರ ಡೆಕ್ಕನ್ ದಂಗೆಯ ಸ್ವರೂಪದಲ್ಲಿ ಇದರ ಇನ್ನೊಂದು ವಿನ್ಯಾಸವನ್ನು ನೋಡಬಹುದಾಗಿದೆ. ಅಲ್ಲಿ ಒಗ್ಗಟ್ಟಿನಿಂದ ಕಾದಾಡುತ್ತಿದ್ದ ಕಲ್ಲ ಮತ್ತು ಅಕೋಲ ಎನ್ನುವ ಹಳ್ಳಿಗಳ ರೈತರು ಕಾರಣಾಂತರಗಳಿಂದ ಪರಸ್ಪರ ವಿಮುಖರಾಗುತ್ತಾರೆ. ಆ ಸಂದರ್ಭದಲ್ಲಿ ಕಲ್ಲ ಗ್ರಾಮದವರು ಅಕೋಲ ಗ್ರಾಮದವರೊಂದಿಗೆ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ, ಅಕೋಲ ಗ್ರಾಮದವರು ಕಲ್ಲ ಗ್ರಾಮದವರ ವೈರಿಗಳ ಜೊತೆ ಸೇರಿಕೊಳ್ಳುವುದು ಸರಿಯಲ್ಲ. ಏಕೆಂದರೆ ಕಲ್ಲ ಮತ್ತು ಅಕೋಲ ಗ್ರಾಮದವರು ಒಂದೇ ಗ್ರಾಮಕ್ಕೆ ಸೇರಿದವರು ಎಂದು ಇಲ್ಲಿಯವರೆಗೆ ನಂಬಿಕೊಂಡಿದ್ದರಿಂದ ಈ ಹಾದಿ ಒಳ್ಳೆಯದಲ್ಲ ಎಂದು ಅವರೆನ್ನುತ್ತಾರೆ. ಗ್ಯಾನೇಂದ್ರ ಪಾಂಡೆ ಅವರು ತಮ್ಮ “ಎನ್‌ಕೌಂಟರ‍್ಸ್ ಆಂಡ್ ಕಲಾಮಿಟೀಸ್ : ದಿ ಹಿಸ್ಟರಿ ಆಫ್ ನಾರ್ಥ್ ಇಂಡಿಯನ್ ಕಸ್ಟ್ ಇನ್ ದಿ ನೈನ್‌ಟೀನ್ತ್ ಸಂಚುರಿ” ಎನ್ನುವ ಲೇಖನದಲ್ಲಿ (ಪಾಂಡೆ ೧೯೮೪) ಉತ್ತರ ಪ್ರದೇಶದ ರಜಪೂತ ಭೂ ಒಡೆಯರು ಮತ್ತು ಮುಸ್ಲಿಮ್ ನೇಕಾರರಿಗೆ ಸಂಬಂಧಿಸಿದಂತೆ ನೋಡಿರುವ ಸಂಕೀರ್ಣ ಸಂಬಂಧವನ್ನು ಪಾರ್ಥ ಚಟರ್ಜಿ ಅವರು ಬೆಂಬಲಿಸಿದ್ದಾರೆ. ಪರಸ್ಪರ ವರ್ಷವಿಡೀ ಕಾದಾಡುತ್ತಿದ್ದ ಈ ಎರಡು ಸಮುದಾಯಗಳು ೧೯ನೇ ಶತಮಾನದ ಮಧ್ಯಭಾಗದಲ್ಲಿ “ಹೊರಗಿನವರು” ತಮ್ಮ ಗ್ರಾಮಕ್ಕೆ ಆಕ್ರಮಣ ಮಾಡಿದಾಗ ಪರಸ್ಪರ ಸೇರಿ, ಹೊರಗಿನವರನ್ನು ಹಿಮ್ಮೆಟ್ಟಿಸಿದರು. ಒಮ್ಮೆ ಶತ್ರುವನ್ನು ಹಿಮ್ಮೆಟ್ಟಿಸಿದ ಮೇಲೆ ಈ ಎರಡೂ ಸಮುದಾಯಗಳು ಮತ್ತೆ ತಮ್ಮಲ್ಲೇ ಕಚ್ಚಾಡಿಕೊಳ್ಳಲು ಮತ್ತೆ ಆರಂಭಿಸಿದವು. ‘ನಾವು’ ಮತ್ತು ‘ಅವರು’ ಎನ್ನುವ ಅಂಶ ಕೂಡ ರೈತ ಸಮುದಾಯಗಳಲ್ಲಿ ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುವ ಮಾದರಿಗಳನ್ನು ಈ ಸಂದರ್ಭದಲ್ಲಿ ಅವಲೋಕಿಸಬಹುದಾಗಿದೆ.

ಭಾರತೀಯ ಸಂದರ್ಭದಲ್ಲಿ ಜಾತಿ ಪದ್ಧತಿಯು ರೈತ ಸಮುದಾಯಗಳ ಐಡೆಂಟಿಟಿ ಮತ್ತು ಭಿನ್ನತೆಗಳನ್ನು ಗುರುತಿಸಲು ಸಹಾಯವಾಗಿದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆಯಿದ್ದರೂ, ಅವುಗಳಲ್ಲಿ ಭಿನ್ನತೆಗಳಿದ್ದರೂ ಅವುಗಳ ನಡುವೆ ಒಪ್ಪಿತ ಮೌಲ್ಯಗಳು ಸಾಮಾನ್ಯವಾಗಿದ್ದು, ಅವು ಪರಸ್ಪರರನ್ನು ಬೆಸೆದಿವೆ. ಆದರೆ ಶ್ರೇಣೀಕೃತ ವ್ಯವಸ್ಥೆಯ ತಳಗಿನ ಜಾತಿಗಳು ಇತ್ತೀಚೆಗೆ “ಒಪ್ಪಿತ ಮೌಲ್ಯಗಳನ್ನು” ಒಪ್ಪಲಿಕ್ಕೆ ಸಿದ್ಧವಿರದ ಘಟನೆಗಳನ್ನು ನಾವು ಗಮನಿಸಬಹುದು. ಸಾಮಾಜಿಕ ಸಂಬಂಧಗಳನ್ನು ಗುರುತಿಸುವ ಈ ಪ್ರಕ್ರಿಯೆಯಲ್ಲಿ ದಬ್ಬಾಳಿಕೆ ಮಾಡುವ ಅಥವಾ ಅದಕ್ಕೆ ಪ್ರತಿಯಾಗಿ ಪ್ರತಿಭಟನೆ ತೋರುವ ಈ ಸಂದರ್ಭದಲ್ಲಿ ಜಾತಿಯ ಚರಿತ್ರೆಯ ಜೊತೆಗೆ ರೈತರ ಪ್ರತಿರೋಧಗಳನ್ನು ತಳಕು ಹಾಕುತ್ತ, ಆ ಮೂಲಕ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಾಗಿದೆ ಎಂದು ಪಾರ್ಥ ಚಟರ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಎನ್ನುವ ಪರಿಭಾಷೆಯ ಮೂಲಕ ಬಹುಬಗೆಯ ಸಾಮಾಜಿಕ ಗುಂಪುಗಳ ಐಡೆಂಟಿಟಿ ಮತ್ತು ಭಿನ್ನತೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಉಪಯೋಗಿಸಲ್ಪಡುವ ಜಾತಿ ಎನ್ನುವ ಪರಿಭಾಷೆಯ ಮೂಲಕ ಕೇವಲ ಜಾತಿಯನ್ನು ಮಾತ್ರ ನೋಡದೆ, ಸಮುದಾಯಗಳು ಜಾತಿಗಳಾಗಿ ಮಾರ್ಪಾಡಾಗುವ ಪ್ರಕ್ರಿಯೆಯನ್ನು ಬುಡಕಟ್ಟು, ಜನಾಂಗ, ಭಾಷಿಕ ಗುಂಪುಗಳು, ಧಾರ್ಮಿಕ ಗುಂಪುಗಳು ರಾಷ್ಟ್ರೀಯತೆಗಳಾಗಿ ಮತ್ತು ರಾಷ್ಟ್ರಗಳಾಗಿ ರೂಪುಗೊಳ್ಳುವ ಪ್ರಕ್ರಿಯೆಗಳನ್ನು ಅವಲೋಕಿಸಬಹುದಾಗಿದೆ. ಜಾತಿ ಪ್ರಕಾರಗಳ ಮಾದರಿಯಲ್ಲಿರುವ ಈ ಬಗೆಯ ಗುಂಪುಗಳು ಕೇವಲ ವೈದಿಕಶಾಹಿಗಳಿಗೆ ಸಡ್ಡು ಹೊಡೆದ ಬೌದ್ಧರಿಗೆ, ಜೈನರಿಗೆ ಅಥವಾ ‘ಮಧ್ಯಕಾಲೀನ’ ಭಕ್ತಿಪರಂಪರೆಯ ಪಂಥಗಳಿಗೆ ಮಾತ್ರ ಸೀಮಿತವಾಗಿರದೆ ಭಾರತೀಯ ಮುಸ್ಲಿಮ್ ಮತ್ತು ಕ್ರೈಸ್ತರಿಗೆ ಕೂಡ ಸಂಬಂಧಪಟ್ಟವುಗಳಾಗಿವೆ. ಜಾತಿಗಳು ಮತ್ತು ಜಾತಿ ತರಹದ ವ್ಯವಸ್ಥೆಗಳ ಅಧ್ಯಯನದ ಮೂಲಕ ದಬ್ಬಾಳಿಕೆ ಮತ್ತು ಅದಕ್ಕೆ ಪ್ರತಿರೋಧವನ್ನು ಒಡ್ಡುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಪಾರ್ಥ ಚಟರ್ಜಿಯವರು ವಾದಿಸಿದ್ದಾರೆ.

ರೈತ ಸಮುದಾಯದ ಆಂತರಿಕ ಸಂರಚನೆಯನ್ನು ಅಭ್ಯಸಿಸಿದರೆ ಮುಖ್ಯವಾಗಿ ಬುಡಕಟ್ಟೇತರ ಜನಸಮುದಾಯಗಳಲ್ಲಿ ಸಮಾನತೆಯ ಅಂಶವನ್ನು ಪರಿಭಾವಿಸಿಕೊಂಡಿರುವುದು ಕಂಡುಬರುವುದಿಲ್ಲ. ಈ ಅಸಮಾನತೆಯ ಕಾರಣಗಳಿಂದಾಗಿ ಕೆಳಜಾತಿಗಳ ಭೂರಹಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡುವುದನ್ನು ನಾವು ಗಮನಿಸಬಹುದು. ಈ ಸಂದರ್ಭದಲ್ಲಿ ಕೇವಲ ರೈತರು ಮತ್ತು ಅವರ ಶೋಷಕರ ನಡುವೆ ಮಾತ್ರ ಸಂಘರ್ಷವನ್ನು ಕಾಣದೆ ರೈತರ ಒಳಗೇ ಇರುವ ಸಂಘರ್ಷಗಳನ್ನು ಸಬಾಲ್ಟರ್ನ್ ಅಧ್ಯಯನ ಕ್ರಮದಲ್ಲಿ ಗುರುತಿಸಲಾಗಿದೆ. ರೈತರ ನಡುವೆ ಅಸಮಾನತೆಯನ್ನು, ದೌರ್ಜನ್ಯವನ್ನು, ಆಂತರಿಕ ಕಲಹವನ್ನು ಮತ್ತು ಪ್ರತಿರೋಧಗಳನ್ನು ನಾವು ಗಮನಿಸಬಹುದಾಗಿದೆ.

* * *

ಭಾರತದಲ್ಲಿ ರೈತರ ಪ್ರತಿರೋಧಗಳನ್ನು ಅಭ್ಯಸಿಸಬೇಕಾದ ಸಂದರ್ಭದಲ್ಲಿ ಕಂಡುಬರುವ ದ್ವಂದ್ವಗಳು ರೈತರ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಕಂಡುಬರುತ್ತದೆ. ಈ ದ್ವಂದ್ವಗಳ ಸಮನ್ವಯವನ್ನು ನಾವಿಲ್ಲಿ ಗುರುತಿಸಬಹುದು. ಮೊದಲನೆಯ ಅಂಶದ ಪ್ರಕಾರ, ರೈತರೆಂದರೆ ವಿಧೇಯರು ಎನ್ನುವ ಅರ್ಥೈಸುವಿಕೆಯಾಗಿದೆ. ಅಧಿಕಾರ ಸಂಬಂಧಿ ವಿಚಾರಕ್ಕೆ ಸಂಬಂಧಿಸಿದ ದಬ್ಬಾಳಿಕೆ ಮತ್ತು ಶೋಷಣೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಒಂದು ಬಗೆಯ ರೈತರ ಸಂವೇದನೆ. ಎರಡನೆಯ ಅಂಶದ ಪ್ರಕಾರ ಎಲ್ಲ ಬಗೆಯ ಶೋಷಣೆಯಿಂದ ಮುಕ್ತವಾಗಿದ್ದು ತನ್ನ ಸ್ವಾಯತ್ತೆಯನ್ನು ಉಳಿಸಿಕೊಂಡ ರೈತನ ಸಂವೇದನೆ ಯಾಗಿದೆ. ಪರಸ್ಪರ ವೈರುಧ್ಯಗಳಿದ್ದರೂ ಈ ಸಂವೇದನೆಗಳ ಮೂಲಕವೇ ರೈತರ ಐಡೆಂಟಿಟಿ ಇರುವುದನ್ನು ಗಮನಿಸಬಹುದು. ಸಂಕ್ಷಿಪ್ತವಾಗಿ ರೈತ ಸಮುದಾಯವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ, ಸಮುದಾಯಗಳನ್ನು ಸೂಕ್ತವಾಗಿ ಅರ್ಥೈಸುವುದರ ಮೂಲಕ ರೈತರ ಪ್ರತಿರೋಧಗಳಲ್ಲಿ ಕಂಡುಬಂದ ಹಕ್ಕು ಮತ್ತು ಬಾಧ್ಯತೆಗಳನ್ನು ಸ್ಥಾಪಿಸುವ ಅಥವಾ ಅವನ್ನು ಸವಾಲಿಗೊಡ್ಡುವ ಪ್ರಕ್ರಿಯೆಯನ್ನು ಅಭ್ಯಸಿಸಬಹುದಾಗಿದೆ.

ಯುರೋಪಿನಲ್ಲಿ ಸಾಂಪ್ರದಾಯಿಕವಾಗಿ ರೈತರ ಪ್ರತಿರೋಧಗಳನ್ನು ಅಥವಾ ದಂಗೆಗಳನ್ನು ಅರ್ಥೈಸಿಸುವ ಮಾದರಿಗಿಂತ ಭಿನ್ನವಾಗಿ ಭಾರತದ ರೈತರ ಪ್ರತಿರೋಧಗಳ ಘಟನೆಗಳನ್ನು ಅಭ್ಯಸಿಸಬೇಕಿದೆ. ಭಾರತದಲ್ಲಿ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಅಭ್ಯಾಸ ಮಾಡಲಾದ ರೈತರ ದಂಗೆಗಳ/ಹೋರಾಟದ ಅಧ್ಯಯನ ಕ್ರಮಗಳಿಂದ ಭಿನ್ನವಾಗಿ ಅಭ್ಯಸಿಸಬೇಕಾದ ಜರೂರಿದೆ. ಚರಿತ್ರೆ ಲೇಖನ ಬರವಣಿಗೆಯಲ್ಲಾದ ಆಮೂಲಾಗ್ರವಾದ ಬದಲಾವಣೆಯೇ ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಜಾಗತಿಕ ಚರಿತ್ರೆಯ ಬರವಣಿಗೆಯ ಸಂದರ್ಭದಲ್ಲಿ ಪ್ರಧಾನವಾಗಿರುವ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಸ್ಥಿತ್ಯಂತರವಾಗುವ (ಟ್ರಾನ್ಸಿಷನ್ ಫ್ರಮ್ ಫ್ಯೂಡಲಿಸಂ ಟು ಕ್ಯಾಪಿಟಲಿಸಂ) ಪ್ರಮೇಯಗಳಿಗಿಂತ ಭಿನ್ನವಾದ ಪ್ರಮೇಯಗಳ, ಅಧ್ಯಯನ ಕ್ರಮಗಳ ಜರೂರು ಭಾರತ ಚರಿತ್ರೆ ಬರವಣಿಗೆಗೆ ಇದೆ. ಈ ಕಾರಣಕ್ಕಾಗಿಯೇ ಚರಿತ್ರೆ ಬರವಣಿಗೆಯಲ್ಲಿ ಪ್ರಧಾನವಾಗಿರುವ ಇಂತಹ ಪ್ರಮೇಯಗಳನ್ನು ಪ್ರಶ್ನಿಸುವ ಅಥವಾ ಅವಕ್ಕೆ ಸವಾಲೊಡ್ಡುವ ಅಥವಾ ಅವನ್ನು ಸೂಕ್ತ ಮಾರ್ಪಾಡುಗೊಳಿಸುವ ಅಥವಾ ಅವನ್ನು ಸುಧಾರಣೆಗೊಳಿಸುವ ಅಥವಾ ಅವನ್ನು ಇನ್ನೂ ಶ್ರೀಮಂತಗೊಳಿಸುವ ಪ್ರಯತ್ನವನ್ನು ಮಾಡಬಹುದಾಗಿದೆ ಎಂದು ಪಾರ್ಥ ಚಟರ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

೧೮ ಮತ್ತು ೧೯ನೆಯ ಶತಮಾನದ ವಿದ್ಯಮಾನಗಳನ್ನು ದಾಖಲಿಸಿದ ಯುರೋಪಿಯನ್ ಬರಹಗಾರರು ಭಾರತದ ಜನರಿಗೆ ಚಾರಿತ್ರಿಕ ಸಂವೇದನೆಗಳಿಲ್ಲವೆಂದು ಪ್ರತಿಪಾದಿಸಿದರು. ಕೇವಲ ಕೆಲವು ಆಸ್ಥಾನದ ವೃತ್ತಾಂತಗಳು, ವಂಶಾವಳಿ ಪಟ್ಟಿ ಇತ್ಯಾದಿಗಳನ್ನು ಬಿಟ್ಟರೆ ಚರಿತ್ರೆ ಬರವಣಿಗೆಗೆ ಆಕರಗಳೇ ಇಲ್ಲ ಎಂಬ ಅಂಶವನ್ನು ಈ ಸಂದರ್ಭದಲ್ಲಿ ಎತ್ತಿ ಹಿಡಿಯಲಾಯಿತು. ಆಳಿಸಿಕೊಳ್ಳುವ ಭಾರತೀಯರ ಭಾವನೆಗಳಿಗೆ ನೋವುಂಟುಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಬರೆಯಲಾಗದಿದ್ದರೂ ಯುರೋಪಿನ ಪುನರುಜ್ಜೀವನೋತ್ತರ ಕಾಲಘಟ್ಟದ ವಿದ್ಯಮಾನಗಳು ಈ ಬಗೆಯ ತಿಳುವಳಿಕೆಗೆ ಕಾರಣಗಳಾಗಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನೆಲೆಯಿಂದ ಜೀವಂತಿಕೆಯಿರುವ ರಾಶಿಗಟ್ಟಲೆ ಆಕರಗಳನ್ನು ಭಾರತದಲ್ಲಿ ಶೋಧಿಸಲಿಕ್ಕೆ ಇವರಿಗೆ ಸಾಧ್ಯವಾಗಲಿಲ್ಲ. ಯುರೋಪ್‌ನಲ್ಲಿ ಪ್ರಬಲವಾಗಿ ಕಂಡುಬರುವ ಸರಳರೇಖಾತ್ಮಕ ಕಾಲಘಟ್ಟದಲ್ಲೇ (ಲೀನಿಯರ್ ಆರ್ಡರ್) ದೇಶಗಳ, ರಾಜ್ಯಗಳ ಮತ್ತು ಸಾಮ್ರಾಜ್ಯಗಳ ಅರ್ಥ ಮಾಡಿಕೊಳ್ಳಬೇಕೆಂಬ ಇರಾದೆ ಇದ್ದದ್ದರಿಂದ ಭಾರತದ ಜನಾಂಗಗಳಲ್ಲಿ ಕಂಡುಬರುವ ಸಮಯೇತರ(ಟೈಮ್‌ಲೆಸ್) ವಲಯಗಳಲ್ಲಿ ಅವರಿಗೆ ಚರಿತ್ರೆಯ ವ್ಯಾಪಕತೆ ತೃಣವಾಗಿ ಕಂಡಿತು. ಭಾರತದ ಬಹು ಬಗೆಯ ಸಾಮಾಜಿಕ ಸಂಕಥನಗಳಲ್ಲಿ ಕಂಡುಬರುವ ಸಮುದಾಯಗಳ ಅಂತರ್ ಸಂಬಂಧಗಳು, ಅವುಗಳ ಬಹುತ್ವದ ವಿನ್ಯಾಸಗಳು, ಐಡೆಂಟಿಟಿ ಮತ್ತು ಭಿನ್ನತೆಗಳನ್ನು ರೂಪಿಸುವ ಸೈದ್ಧಾಂತಿಕತೆಗಳು, ಇನ್ನೂ ಜೀವಂತಿಕೆಯಿರುವ ಜನರ ನಂಬುಗೆ ಮತ್ತು ಆಚರಣೆಗಳ ಮೂಲಕ ವ್ಯಕ್ತವಾಗುತ್ತಿರುವ ಸಾಮಾಜಿಕ ಸಂಘರ್ಷಗಳ ವಿನ್ಯಾಸಗಳು ಯುರೋಪಿನ ಸಾಂಪ್ರದಾಯಿಕ ವಿದ್ವತ್‌ಲೋಕದ ವಿದ್ವಾಂಸರಿಗೆ ಪರಿಚಯವಿರಲಿಲ್ಲ. ಅಗಾಧವಾಗಿರುವ ಈ ಆಕರಗಳ ಸಮೂಹವು ಯುರೋಪಿನ ಚರಿತ್ರೆಗಿರುವ ಆಕರಗಳಿಗಿಂತ ಅತಿ ಶ್ರೀಮಂತವಾಗಿವೆ ಎಂದು ಪಾರ್ಥ ಚಟರ್ಜಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೊಂದು ಅಗಾಧ ಪ್ರಮಾಣದ ಆಕರಗಳನ್ನು ನಿಗೂಢ ಪೂರ್ವಜಗತ್ತಿನ ಅಸಂಗತಗಳೆಂದು ವಸಾಹತುಶಾಹಿ ಎತ್ನೋಗ್ರಾಫರ್‌ಗಳು ಅವಲೋಕಿಸಿದರು. ರಾಷ್ಟ್ರೀಯ ವಾದಿಗಳು ಬಹುತ್ವ ಸಂಸ್ಕೃತಿಯ ಆಕರಗಳನ್ನು ಮತ್ತು ವಿನ್ಯಾಸಗಳನ್ನು ಗಮನಿಸುತ್ತ ವಿವಿಧತೆಯಲ್ಲಿ ಏಕತೆ ಎಂದರು. ಸಬಾಲ್ಟರ್ನ್ ಅಧ್ಯಯನಕಾರರಿಗೆ ಆರಂಭದಲ್ಲಿ ಇದೊಂದು ಸವಾಲಾಗಿ ಕಂಡಿತು. ಆದರೆ ಸಮಸ್ಯೆ ಇದ್ದದ್ದು ಭಾರತದ ಆಕರಗಳಲ್ಲಲ್ಲ, ಬದಲಿಗೆ ಆಮದು ಮಾಡಿಕೊಂಡ ವಿಚಾರಗಳಿಗೆ ಎಂಬುದು ಅವರಿಗೆ ನಂತರ ಸ್ಪಷ್ಟವಾಗುತ್ತ ಹೋಯಿತು.

ಭಾರತದಲ್ಲಿ ರೈತರು ದಂಗೆ ಎದ್ದ ಘಟನೆಗಳನ್ನು ಮಧ್ಯಕಾಲೀನ ಯುರೋಪ್ ಅಥವಾ ಚೀನಾಕ್ಕೆ ಹೋಲಿಸುತ್ತ ಭಾರತೀಯ ರೈತರ ಸಾಮರ್ಥ್ಯವನ್ನು ಬದಿಗೆ ಸರಿಸುವ ಪ್ರಯತ್ನವನ್ನು ಪಾರ್ಥ ಚಟರ್ಜಿ ಅವರು ಪ್ರಶ್ನಿಸಿರುವುದು ಈ ಸಂದರ್ಭದಲ್ಲಿ ಮುಖ್ಯವಾಗಿದೆ. ಅವರ ಪ್ರಕಾರ ಭಾರತದಲ್ಲಿ ರೈತ ದಂಗೆಗಳು ಆರಂಭವೇ ಆಗಿಲ್ಲ ಎನ್ನುತ್ತ, ಭಾರತದಲ್ಲಿ ನಡೆದ ರೈತರ ಪ್ರತಿಭಟನೆಗಳು ಬಹುತೇಕವಾಗಿ  ಸ್ಥಳೀಯವಾದದ್ದು ಮತ್ತು ನಂಬಿಕೆಯ ಭಾಗವಾಗಿ ಅವು ನಡೆದವು. ೧೭ನೇ ಶತಮಾನದಿಂದ ಕಾಣಸಿಗುವ ರೈತರ ದಂಗೆಗಳು ಬ್ರಿಟಿಶರ ಆಳ್ವಿಕೆಯಲ್ಲಿ ಮಾತ್ರವಲ್ಲ ವಸಾಹತೋತ್ತರ ಕಾಲಘಟ್ಟದಲ್ಲಿಯೂ ಮುಂದುವರೆದಿರುವುದನ್ನು ಅವರು ಉಲ್ಲೇಖಿಸುತ್ತಾರೆ. ನೂರಾರು ರೈತರು ದೇಶದಲ್ಲೆಲ್ಲ ದಂಗೆ ಎದ್ದ ಬಗೆಗಳನ್ನು ಚಾರಿತ್ರಿಕ ದಾಖಲೆಗಳಲ್ಲಿ ನೋಡಬಹುದಾಗಿದೆ. ಭಾರತದಲ್ಲಿ ‘ಸ್ಥಳೀಯವಾಗಿ’ ನಡೆದ ಬಹುತೇಕ ದಂಗೆಗಳಲ್ಲಿ ಭಾಗವಹಿಸಿದ ರೈತರ ಸಂಖ್ಯೆಯು ಯುರೋಪಿನ ಬಹುದೊಡ್ಡ ದೇಶಗಳಲ್ಲಿ ನಡೆದ ರೈತ ದಂಗೆಗಳಲ್ಲಿ ಭಾಗವಹಿಸಿದ ಜನರಿಗಿಂತ ಅಗಾಧ ಪ್ರಮಾಣದ್ದು ಎಂಬ ವಿಚಾರ ಗಮನಾರ್ಹವಾದುದು. ಹೀಗಿದ್ದಾಗ್ಯೂ ಯುರೋಪ್ ಮತ್ತು ಚೀನಾದಲ್ಲಿ ನಡೆದ ರೈತ ದಂಗೆಗಳಿಂದಾಗಿ ಆದ ರಾಜಕೀಯ ಪರಿಣಾಮಗಳೇನೂ ಭಾರತದಲ್ಲಿ ಆಗಲಿಲ್ಲ ಎನ್ನುವ ಮಾತಿದೆ. ಆದರೆ ಇದಕ್ಕೂ ಒಂದು ಕಾರಣವಿದೆ. ಭಾರತದಲ್ಲಿ ಸರಕಾರದ ಸಾರ್ವಭೌಮಾಧಿ ಕಾರದ ನೆಲೆಗಟ್ಟಿನಲ್ಲಿ ರೂಪಿಸಲ್ಪಟ್ಟ ಕಾನೂನಿನ ಮೂಲಕ ಭಾರತೀಯ ಸಮಾಜವನ್ನು ದಮನ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ರೈತರ ಪ್ರತಿಭಟನೆಗಳಿಗೆ ಸರಕಾರದ ಸಾರ್ವಭೌಮಾಧಿಕಾರದ ಕಾನೂನಿನ ನೆಲೆಗಟ್ಟಿನಲ್ಲಿ ನಿಂತಿರುವ ಆಡಳಿತ ವ್ಯವಸ್ಥೆಯನ್ನು ವಿಫಲಗೊಳಿಸುವುದು ಅವರ ಪರಮಧ್ಯೇಯವಾಗಿರಲಿಲ್ಲ. ಹೀಗಾಗಿ ಮಧ್ಯಕಾಲೀನ ಯುರೋಪ್ ಅಥವಾ ಚೀನಾದ ರೈತರ ದಂಗೆಗಳಿಗಿಂತ ಭಾರತದ ರೈತರ ದಂಗೆಗಳು ವೈಶಿಷ್ಟ್ಯಪೂರ್ಣವಾಗಿವೆ (ಚಟರ್ಜಿ ೧೯೯೭:೧೫೮-೧೭೨).