೫. ಚಾರಿತ್ರಿಕ ಬದಲಾವಣೆಗಳನ್ನು ಗುರುತಿಸುವುದು ಚರಿತ್ರೆ ಬರವಣಿಗೆಯ ಮುಖ್ಯವಾದ ಆಶಯವಾಗಿದೆ. ಆದರೆ ಸಬಾಲ್ಟರ್ನ್ ಅಧ್ಯಯನಕಾರರಿಗೆ ಮಾತ್ರ ಈ ಬಗೆಯ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ರೈತರು, ಬುಡಕಟ್ಟು ಜನರು ಅಥವಾ ದುಡಿಯುವ ವರ್ಗಗಳು ತಮ್ಮ ವ್ಯಾಪ್ತಿಯನ್ನು ಬಿಟ್ಟುಕೊಡದೆ ಹಾಗೇ ತಮ್ಮ ಸ್ವರೂಪವನ್ನು ಉಳಿಸಿಕೊಂಡಿದ್ದರ ಬಗ್ಗೆ ಬರೆಯುವ ಸಬಾಲ್ಟರ್ನ್‌ಗಳ ಅಧ್ಯಯನ ಕ್ರಮವನ್ನು ಬೇಯ್‌ಲಿ ಅವರು ಪ್ರಶ್ನಿಸಿದ್ದಾರೆ. ಬೇರೆ ಸಮುದಾಯ/ವರ್ಗಗಳು ಸರಕಾರದ ಕಾರ್ಯ ಸ್ವರೂಪದಿಂದ, ಗೇಣಿ ನಿಯಮಗಳಿಂದ ಅಥವಾ ಮತ್ತಿತರ ಕಾನೂನುಗಳಿಂದ ಪ್ರಭಾವಕ್ಕೆ ಒಳಗಾಗಿದ್ದರೆ, ಸಬಾಲ್ಟರ್ನ್ ಅಧ್ಯಯನಕಾರರು ಕಂಡುಕೊಂಡ ರೈತ/ದುಡಿಯುವ ವರ್ಗ ಇತ್ಯಾದಿ ವರ್ಗಗಳನ್ನೇಕೆ ಸಾಂಸ್ಥಿಕ ಅಧಿಕಾರ ವಲಯಗಳಿಂದ ಪ್ರಭಾವಕ್ಕೆ ಒಳಗಾಗಲಿಲ್ಲ ಎಂಬುದು ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ. ಸಹಜವಾದ ಬದಲಾವಣೆಗಳನ್ನು ಗುರುತಿಸುವಲ್ಲಿ ಸಬಾಲ್ಟರ್ನ್ ಅಧ್ಯಯನಕಾರರು ವಿಫಲವಾಗಿದ್ದನ್ನು ಬೇಯ್‌ಲಿ ಅವರು ವಿಮರ್ಶಿಸಿರುವುದನ್ನು ನೋಡಬಹುದು. ಬದಲಾಗದ ರೈತ ಸಮುದಾಯಗಳ ಸ್ವರೂಪದಿಂದಲೇ ವಸಾಹತುಶಾಹಿಯ ವಿರುದ್ಧ ರೈತರಿಗೆ ತಮ್ಮ ಸಂವೇದನೆಯನ್ನು ಕಾರ್ಯರೂಪಕ್ಕಿಳಿಸಲು ಸಾಧ್ಯವಾಯಿತು ಎನ್ನುವ ರಣಜಿತ್ ಗುಹಾ ಅವರ ಸಿದ್ಧಾಂತವು ಬಲಹೀನವಾಗಿದೆ. ಶಾಹಿದ್ ಅಮಿನ್ ಅವರು ಗುರುತಿಸಿರುವಂತೆ ಯಾವುದೇ ಬದಲಾವಣೆಗಳಿಲ್ಲದ ರೈತರ ‘ನೈತಿಕ ಆರ್ಥಿಕತೆ’ ಅಥವಾ ‘ಪಾಪ್ಯುಲರ್ ಕಲ್ಚರ್’ (ಜನಪ್ರಿಯ ಸಂಸ್ಕೃತಿ) ಕೂಡ ಈ ನಿಟ್ಟಿನಲ್ಲಿ ಟೀಕೆಗೆ ಒಳಗಾಗಿದೆ.

೬. “ಕೊನೆಗೂ ಯಾಕೆ ಕ್ರಾಂತಿಯಾಗಲಿಲ್ಲ” ಎನ್ನುವ ಪ್ರಶ್ನೆಗೆ “ಕಾಂಗ್ರೆಸ್ ಯಜಮಾನತ್ವ ಮತ್ತು ವಸಾಹತುಗಾರರು ಮಾಡಿದ ದೌರ್ಜನ್ಯ” ಎನ್ನುವ ಉತ್ತರವನ್ನು ಸದಾ ನೀಡುವ ಸಬಾಲ್ಟರ್ನ್ ಅಧ್ಯಯನಕಾರರನ್ನು ಬೇಯ್‌ಲಿ ಅವರು ತಾತ್ವಿಕವಾಗಿ ಆಕ್ರಮಣ ಮಾಡಿದ್ದಾರೆ. ಗೋರಖ್‌ಪುರದಲ್ಲಿ ರೈತರ ಹೋರಾಟವನ್ನು ಬಲಹೀನಗೊಳಿಸಿದ ಗಾಂಧಿ ಮತ್ತು ಕಾಂಗ್ರೆಸ್  ನಾಯಕತ್ವವು ರೈತರ ಹೋರಾಟಕ್ಕೆ ಬೆನ್ನ ಹಿಂದೆ ಚೂರಿ ಹಾಕಿತು. ಗಾಂಧಿಯ ಆದರ್ಶಗಳನ್ನು ಮುಂದಿಟ್ಟುಕೊಂಡು ರೈತರ ನೈಜ ಹೋರಾಟಕ್ಕೆ ಸೇರಿದ ಭೂಮಾಲೀಕರಿಂದಾಗಿ ರೈತ ಹೋರಾಟಕ್ಕೆ ಈ ಗತಿ ಬಂದಿತು.  ಇಂತಹ ಆಗ್ರಹಗಳಿಂದಲೇ ಅಂತಿಮವಾಗಿ ಬ್ರಿಟಿಶರು ತಮ್ಮ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು ಎನ್ನುವ ಗ್ಯಾನೇಂದ್ರ ಪಾಂಡೆಯ ವರಸೆಯನ್ನೇ (ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧)  ಸುಮಿತ್ ಸರ್ಕಾರ್ ಅವರೂ ಮಾಡಿದ್ದನ್ನು (ಸಬಾಲ್ಟರ್ನ್ ಸ್ಟಡೀಸ್, ಸಂಪುಟ III) ಬೇಯ್‌ಲಿ ಅವರು ಟೀಕಿಸಿದ್ದಾರೆ. ಬೇಯ್‌ಲಿ ಅವರ ಪ್ರಕಾರ ಗ್ರಾಮೀಣಮಟ್ಟದ ವಿದ್ಯಮಾನಗಳು ಬಹುತೇಕವಾಗಿ ಆಂತರಿಕ ಕಲಹಗಳಿಂದಲೇ ನಿರ್ವಚನಕ್ಕೊಳಗಾಗುತ್ತವೆ. ರೈತರ ಧ್ವನಿಗಳು ನಾಶವಾಗುವುದು ಗ್ರಾಮೀಣ ಪ್ರದೇಶದ ಸಣ್ಣ ಭೂಮಾಲೀಕರಿಂದ ಎನ್ನುವುದು ಇಲ್ಲಿ ಮುಖ್ಯ ತಾರ್ಕಿಕತೆಯಾಗಿದೆ. ವಸಾಹತು ಸರಕಾರ ಮತ್ತು ಕಾಂಗ್ರೆಸ್ ಇಂತಹ ಕಲಹಗಳ ಸಂದರ್ಭಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ತಾಲೂಕ್‌ದಾರರಂತಹ ಅಥವಾ ತಾಲೂಕ್‌ದಾರರ ಸಹವರ್ತಿಗಳಾಗಿರುವ ಸಣ್ಣ ಭೂಮಾಲೀಕರಂತಹ ತಮ್ಮ ಏಜೆಂಟರ ಮೂಲಕ ಇದ್ದ ಕಲಹವನ್ನೇ ದೊಡ್ಡದು ಮಾಡಲು ಬೆಂಕಿಗೆ ತುಪ್ಪ ಸುರಿದರಷ್ಟೆ ಎಂದು ಬೇಯ್‌ಲಿ ವಾದ ಮಾಡಿದ್ದಾರೆ. ಮೇಲ್ಜಾತಿ ಹಾಗೂ ಕೆಳಜಾತಿಗಳ ಜಮೀನ್ದಾರರ/ಗೇಣಿದಾರರ ಕಲಹಗಳೇ ಇಲ್ಲಿ ಎದ್ದು ಕಾಣುತ್ತವೆ. ಕುಮಿ ರೈತ ಸಂಘಟನೆಯಿಂದ ಮತ್ತು ರಾಮಚಂದ್ರ ಚಳವಳಿಗೆ ಕೆಳಜಾತಿಗಳ ರೈತರನ್ನು ಮೇಲ್ಜಾತಿಯ ರೈತರು ಹೊರಗಿಟ್ಟಿದ್ದನ್ನು ಅವರಿಲ್ಲಿ ಉದಾಹರಿಸುತ್ತಾರೆ. ೧೯೩೦ರ ದಶಕದಲ್ಲಿ ಬಿಹಾರದ ಸ್ವಾಮಿ ಸಹಜಾನಂದ ಅವರ ನೇತೃತ್ವದಲ್ಲಿ ಕೆಳಜಾತಿಗಳ ರೈತರ ಹಿತಾಸಕ್ತಿಗಾಗಿ ಕೈಗೊಂಡ ರೈತ ಹೋರಾಟದಲ್ಲಿ ಮೇಲ್ಜಾತಿಯ ರೈತರು ಯಾವುದೇ ಬೆಂಬಲ ನೀಡದೆ ಇರುವ ವಿಚಾರವನ್ನೂ ಬೇಯ್‌ಲಿ ಅವರು ದಾಖಲಿಸಿದ್ದಾರೆ.

೭. ರೈತರ ಅಹಿಂಸಾತ್ಮಕ ಪ್ರತಿಭಟನೆ ಎನ್ನುವ ಅಂಶವನ್ನೇ ಬೇಯ್‌ಲಿ ಅವರು ಅಲ್ಲಗೆಳೆಯುತ್ತಾರೆ. ಬಹುತೇಕ ಎಲ್ಲ ಸಂಪುಟಗಳಲ್ಲಿಯೂ ಮೇಲಿಂದ ಮೇಲೆ ಉಲ್ಲೇಖಗೊಳ್ಳುವ ರೈತರ ಅಹಿಂಸಾತ್ಮಕ ಪ್ರತಿಭಟನೆಗಳು ಎಂದು ವ್ಯಾಖ್ಯಾನಿಸುವುದಕ್ಕೆ ಮಿತಿಗಳು ಹಲವಿವೆ. ಕೆಲವೊಂದು ಸಂದರ್ಭಗಳಲ್ಲಿ ಕಂಡುಬಂದ ಬಹುದೊಡ್ಡ ಗಲಭೆಗಳಲ್ಲಿ ಕೇವಲ ಅಲ್ಪ ಸಂಖ್ಯೆಯಲ್ಲಿರುವ ಜನರು ಮಾತ್ರ ಹಿಂಸೆಯ ಹಾದಿ ಹಿಡಿದಿರುತ್ತಾರಷ್ಟೆ. ಅಂತಹ ಘಟನೆಗಳೇ ಅತ್ಯಲ್ಪವಾಗಿದೆ. ೧೯೩೦ರ ದಶಕದಲ್ಲಿದ್ದ ಆರ್ಥಿಕ ಅತಿವೃಷ್ಟಿಯ ಸಂದರ್ಭದಲ್ಲಿ ಕಂದಾಯ ವಿರೋಧಿ ಆಂದೋಳನಗಳಿದ್ದರೂ ಬಹುತೇಕ ರೈತರು ಕಂದಾಯವನ್ನು ಪಾವತಿ ಮಾಡಿದಂಥ ಸಂದರ್ಭಗಳನ್ನು ಬೇಯ್‌ಲಿ ಅವರು ನೀಡುತ್ತಾರೆ.

೮. ಸಬಾಲ್ಟರ್ನ್ ಅಧ್ಯಯನಕಾರರು ಆಗಿಂದಾಗ್ಗೆ ಉಲ್ಲೇಖಿಸುವ “ರೈತರ ಸ್ವಾಯತ್ತೆ ವಲಯಗಳನ್ನು” ಕುರಿತಾದ ವ್ಯಾಖ್ಯಾನವನ್ನು ಬೇಯ್‌ಲಿ ಅವರು ತಳ್ಳಿ ಹಾಕುತ್ತ, ಅದೊಂದು ಯಾಂತ್ರಿಕವಾದ ಮತ್ತು ಸಂಕುಚಿತಗೊಂಡ (ಅಬ್‌ಸ್ಟ್ರ್ಯಾಕ್ಟ್) ಚರಿತ್ರೆ ಬರವಣಿಗೆ ಕ್ರಮವಷ್ಟೇ ಎಂದು ವಿಮರ್ಶಿಸಿದ್ದಾರೆ. ಯಾವುದೇ ಬಗೆಯ ಚಾರಿತ್ರಿಕ ಬದಲಾವಣೆಯನ್ನು ಇದು ಅರಿಯಲು ಅಶಕ್ತವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

* * *

ವಿನಯ್ ಬಾಲ್ ಅವರು ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ (೩೨, ೩೩, ಜೂನ್ ೭‑೧೩, ೧೯೯೭) ಪ್ರಕಟಿಸಿದ “ರಿಲೆವೆನ್ಸ್ ಆರ್ (ಇರ್ರಿಲೆವೆನ್ಸ್) ಆಫ್  ಸಬಾಲ್ಟರ್ನ್ ಸ್ಟಡೀಸ್” ಎನ್ನುವ ಲೇಖನದಲ್ಲಿ ವಿವರಿಸಿದಂತೆ ಸಬಾಲ್ಟರ್ನ್ ಅಧ್ಯಯನವು ಸಂಪೂರ್ಣವಾಗಿ ಭೌತಿಕ ಸಂಸ್ಕೃತಿ (ಮೆಟಿರಿಯಲ್ ಕಲ್ಚರ್) ಮತ್ತು ಅದರ ಅಭಿವ್ಯಕ್ತಗಳಾದ ಬಟ್ಟೆ, ಊಟ, ಪೀಠೋಪಕರಣಗಳು, ಬದುಕಲು ಅವಶ್ಯವಿರುವ/ಅವಶ್ಯವಿಲ್ಲದಿರುವ ವಸ್ತುಗಳು, ವಸತಿ, ತಂತ್ರಜ್ಞಾನ ಮತ್ತು ಆರ್ಥಿಕ ವ್ಯವಸ್ಥೆಗಳ ಉತ್ಪಾದನಾ ಸಂಬಂಧಗಳನ್ನು ಮತ್ತು ಪಾತ್ರಗಳನ್ನು ನಿರ್ಲಕ್ಷತೆ, ಭೌತಿಕ ಸಂಸ್ಕೃತಿಯು ರೂಪಿಸುವ ಜನರ ಮೌಲಿಕ ಸಂಸ್ಕೃತಿ ಕೂಡ ಜನರ ಭಾವನೆಗಳನ್ನು ಪ್ರತಿನಿಧೀಕರಿಸುವುದರಿಂದ ಭೌತಿಕ ಸಂಸ್ಕೃತಿಯ ಪಾತ್ರದ ನಿರ್ಲಕ್ಷ ಸಲ್ಲ ಎಂದು ವಿನಯ್ ಬಾಲ್ ಅಭಿಪ್ರಾಯಪಟ್ಟಿದ್ದಾರೆ. ಅವರು ಸಬಾಲ್ಟರ್ನ್ ಅಧ್ಯಯನ ಮಾದರಿಯ ಮೇಲೆ ಎತ್ತಿರುವ ಬಹುಮುಖ್ಯ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

೧. ಪಾಶ್ಚಾತ್ಯ ಚರಿತ್ರಕಾರರು ‘ತಳದಿಂದ ಇತಿಹಾಸ ಬರೆಯುವ ಪ್ರಯತ್ನವನ್ನು ಮಾಡಿದ ಸಂದರ್ಭದಲ್ಲಿ, ಅದರಲ್ಲಿಯೂ ಬ್ರಿಟಿಶ್ ಕಾರ್ಮಿಕರು ಬಿಟ್ಟು ಹೋದ ‘ಡೈರಿಗಳನ್ನು’ ಆಧರಿಸಿ ಕಾರ್ಮಿಕರ ಕೂಗನ್ನು ದಾಖಲಿಸಿದರು. ಭಾರತದ ಕಾರ್ಮಿಕರ ಹಾಗೂ ರೈತರು ಈ ಬಗೆಯ ‘ಡೈರಿಗಳನ್ನು’ ಬಿಟ್ಟುಹೋಗದಿದ್ದರೂ ಸಬಾಲ್ಟರ್ನ್ ಚರಿತ್ರೆಕಾರರು ಲಭ್ಯವಿರುವ ದಾಖಲೆ/ಆಕರಗಳ ಮೂಲಕ ಅವರ ಕೂಗಿಗೆ ಸ್ಪಂದಿಸದೆ ಸಬಾಲ್ಟರ‍್ನಿಟಿ ಎನ್ನುವ ಅಂಶ ಹೇಗೆ ರೂಪಿಸಲ್ಪಟ್ಟಿದೆ ಎನ್ನುವುದಕ್ಕೆ ತಮ್ಮ ಶ್ರಮವನ್ನು ಸೀಮಿತ ಗೊಳಿಸಿದ್ದನ್ನು ನೋಡಬಹುದು. ಸಬಾಲ್ಟರ್ನ್ ಅಧ್ಯಯನಕಾರರ ಒಂದು ಮುಖ್ಯ ಮಿತಿ ಇದಾಗಿದೆ ಎಂಬುದು ಇಲ್ಲಿ ವೇದ್ಯವಾಗಿದೆ.

೨. ದಕ್ಷಿಣ ಭಾರತದಲ್ಲಿ ರೂಪುಗೊಂಡ ಸಬಾಲ್ಟರ್ನ್ ಅಧ್ಯಯನದ ಮಾದರಿಗಳು ನಂತರ ಲ್ಯಾಟಿನ್ ಅಮೆರಿಕಾ ಹಾಗೂ ಆಫ್ರಿಕಾದ ವಿದ್ವಾಂಸರಿಗೆ ಒಂದು ಮಾದರಿ ಅಧ್ಯಯನವಾಗಿ ಬೆಳೆದಿವೆ ಎನ್ನುವುದು ಇತ್ತೀಚಿನ ಚರ್ಚೆಗಳಲ್ಲಿ ಕಂಡುಬಂದ ವಿಚಾರವಾಗಿದೆ. ಆದರೆ ಇದರ ಬಗ್ಗೆ ಎತ್ತಿಕೊಂಡ ವಿಶೇಷ ಚರ್ಚೆಯಲ್ಲಿ ವಿನಯ್ ಬಾಲ್ ಅವರು ನೀಡಿರುವ ವಿಮರ್ಶೆಯನ್ನು ಗಮನಿಸಬಹುದು. ಲ್ಯಾಟಿನ್ ಅಮೆರಿಕಾದ ಹಲವು ವಿದ್ವಾಂಸರು ಮಾರ್ಕ್ಸ್‌ವಾದಿ ದೃಷ್ಟಿಕೋನ ಅಥವಾ ಅದು ಉಲ್ಲೇಖಿಸುವ ಪ್ರಗತಿ ಮತ್ತು ಆಧುನಿಕತೆ ಅಥವಾ ಕ್ರಾಂತಿಯನ್ನು ಎದುರು ನೋಡುವ ಛಲದ ಬಗ್ಗೆ ಮತ್ತು ಏಕಮುಖಿಯಾಗುವ (ಲೀನಿಯರ್) ಅಭಿವೃದ್ದಿ ಸ್ಥಿತ್ಯಂತರಗಳ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರು ಆಧುನಿಕೋತ್ತರ ಮತ್ತು ಸಂರಚನೋತ್ತರವಾದಿಗಳು ನೀಡಿದ ಪರ‍್ಯಾಯಗಳ ಬಗ್ಗೆಯೂ ಸಂಶಯವನ್ನು  ವ್ಯಕ್ತಪಡಿಸಿದ್ದಾರೆ. ‘ಆಧುನಿಕವೇ ಆಗದ ದೇಶಗಳಲ್ಲಿ ಈ ಬಗೆಗಿನ ‘ಸಂಕಥನವು’ ಅಚಾರಿತ್ರಿಕವೆಂದೂ ಅವರು ಪರಿಗಣಿಸಿದ್ದಾರೆ. ಆಧುನಿಕೋತ್ತರ ಸಿದ್ಧಾಂತಕ್ಕೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದಿರುವುದರಿಂದ ಮತ್ತು ಯಾವುದೇ ನಿರ್ದಿಷ್ಟವಾದ ರಾಜಕೀಯದಲ್ಲಿ ತೊಡಗಿಸಿಕೊಳ್ಳದಿರುವ ಅಂಶಗಳಿರುವುದರಿಂದ ಈ ವಿದ್ವಾಂಸರು ಈ ಕುರಿತಂತೆ ಅಷ್ಟಾಗಿ ಒಲವು ತೋರಿಸಲಿಲ್ಲ. ಸಂದೇಹಗಳು ಮತ್ತು ಸಂಶಯಗಳು ನಿರ್ಣಾಯಕ ಸ್ಥಿತಿಯಲ್ಲಿದ್ದ ಸಂದರ್ಭದ ಚಾರಿತ್ರಿಕ ಸನ್ನಿವೇಶದಲ್ಲಿ ಲ್ಯಾಟಿನ್ ಅಮೆರಿಕಾದ ಪ್ರಗತಿಗಾಮಿ ವಿದ್ವಾಂಸರಿಗೆ ಪಾಶ್ಚ್ಯಾತ್ಯೇತರ ಜಗತ್ತು ಹುಟ್ಟು ಹಾಕಿದ ಸಬಾಲ್ಟರ್ನ್ ಅಧ್ಯಯನದ ಮಾದರಿಗಳಿಗೆ ಒಗ್ಗುವುದು ಅನಿವಾರ್ಯವಾದ ಅನುಸಂಧಾನವಾಯಿತು. ಭಾರತೀಯ ವಿದ್ವಾಂಸರ ವಸಾಹತು ವಿರೋಧಿ ಮತ್ತು ಪ್ರಗತಿಗಾಮಿ ರಾಜಕೀಯ ನಿಲುವು ಸಿದ್ಧಾಂತಗಳು ಲ್ಯಾಟಿನ್ ಅಮೆರಿಕಾದ ವಿದ್ವಾಂಸರಿಗೆ ಆಕರ್ಷಕವಾಗಿ ಕಂಡವು. ಲ್ಯಾಟಿನ್ ಅಮೆರಿಕನ್ ಸಬಾಲ್ಟರ್ನ್ ಅಧ್ಯಯನಕಾರರಲ್ಲಿ ಒಬ್ಬನೇ ಒಬ್ಬ ಚರಿತ್ರೆಕಾರನಿರುವುದು ಬಿಟ್ಟರೆ ಉಳಿದವರೆಲ್ಲರೂ ಸಾಹಿತ್ಯವಿಮರ್ಶಕರಿರುವುದೇ ಇದರ ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಮಿತಿಯಾಗಿದೆ. ಆಧುನಿಕೋತ್ತರ ಸಿದ್ಧಾಂತಗಳ ವಿಧಾನ ಮತ್ತು ತಂತ್ರಗಳನ್ನು ಎರವಲು ತರಲಿಕ್ಕೆ ಈ ಸಾಹಿತ್ಯ ವಿಮರ್ಶಕರಿಗೆ ಕೆಲವು ಇರುಸು ಮುರುಸುಗಳಿದ್ದರೂ ನಂತರ ಅದಕ್ಕೂ ಅವರು ಒಗ್ಗಿಕೊಂಡರು. ಈ ಬಗೆಯ ಮಿತಿಗಳು ಆವರಿಸಿರುವುದರಿಂದ ಸಹಜವಾಗಿಯೇ ಸಬಾಲ್ಟರ್ನ್ ಅಧ್ಯಯನಗಳು ಬೊಟ್ಟು ಮಾಡುವ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ಈ ವಿದ್ವಾಂಸರಿಗೆ ಸಾಧ್ಯವಾಗುವುದಿಲ್ಲ. ಲ್ಯಾಟಿನ್ ಅಮೆರಿಕನ್ ಅಧ್ಯಯನಕಾರರಲ್ಲಿ ಪ್ರಧಾನ ಗುಂಪಾದ ಸಾಹಿತ್ಯ ವಿಮರ್ಶಕರ ಈ ಬಗೆಯ ಸರಳೀಕೃತವಾದ ನಿಲುವುಗಳಿಂದಾಗಿ “ಚರಿತ್ರೆ ರಚನಾಕ್ರಮದ ಅಧ್ಯಯನವು ತೀರಾ ಬಡವಾಗಿರುವುದನ್ನು” ವಿನಯ್ ಬಾಲ್ ಗುರುತಿಸುತ್ತಾರೆ. ಭಾರತೀಯ ಸಬಾಲ್ಟರ್ನ್ ವಿದ್ವಾಂಸರಿಂದ ಎರವಲು ತಂದ ಸಬಾಲ್ಟರ್ನಿಟಿಯ ಮೂಲ ಆಶಯವು ಲ್ಯಾಟಿನ್ ಅಮೆರಿಕನ್ ವಿದ್ವಾಂಸರ ಕೈಯಲ್ಲಿ “ಸರಳೀಕೃತವಾಗಿ ಅಪ್ರತಿನಿಧೀಕರಣವಾಯಿತು” ಎಂದು ಲ್ಯಾಟಿನ್ ಅಮೆರಿಕನ್ ಚರಿತ್ರಕಾರನೊಬ್ಬ ವಿಮರ್ಶಿಸಿರುವ ವಿಚಾರ ಇಲ್ಲಿ ಮುಖ್ಯವಾಗುತ್ತದೆ.

ಲ್ಯಾಟಿನ್ ಅಮೆರಿಕಾದ ವಿದ್ವಾಂಸರಿಗೆ ಹೋಲಿಸಿದರೆ ಆಫ್ರಿಕನ್ ಚರಿತ್ರೆ ಬರವಣಿಗೆಗಳು ಸಬಾಲ್ಟರ್ನ್ ಅಧ್ಯಯನಗಳಿಗೆ ಅಷ್ಟು ತೀವ್ರವಾಗಿ ಸ್ಪಂದಿಸದೆ ಇರುವುದನ್ನು ನಾವು ನೋಡಬಹುದು. “ತಳದಿಂದ ರಚನೆಗೊಳ್ಳುವ ಚರಿತ್ರೆ” ಬರವಣಿಗೆಗಳ ಬಗ್ಗೆ ಅವರು ಒಲವು ತೋರಿದರೂ ಸಬಾಲ್ಟರ್ನ್ ಅಧ್ಯಯನಕಾರರು ಶಿಫಾರಸ್ಸು ಮಾಡಿದ “ಸಬಾಲ್ಟರ್ನ್ ಸ್ವಾಯತ್ತೆ” ವಿಚಾರವನ್ನು ಅವರು ಒಪ್ಪದಿರುವುದು ಕಂಡುಬರುತ್ತದೆ. ಭಾರತದ ಮತ್ತು ಆಫ್ರಿಕಾದ ಸಬಾಲ್ಟರ್ನ್ ಚರಿತ್ರಕಾರರ ನಡುವೆ ಮತ್ತೊಂದು ಮುಖ್ಯವಾದ ವ್ಯತ್ಯಾಸವಿದೆ. ಭಾರತದ ಸಬಾಲ್ಟರ್ನ್ ಚರಿತ್ರೆಕಾರರು “ಭಾರತದ” ಒಳಗಿರುವ ಪ್ರಭೇದಗಳನ್ನು ಬಹಳ ಮುಖ್ಯವಾಗಿ ಸಮುದಾಯಗಳ ಮತ್ತು ಐಡೆಂಟಿಟಿಗಳ ನಡುವಿನ ವ್ಯತ್ಯಾಸಗಳನ್ನು ತೋರಿಸುವುದು ಅಥವಾ ಅವುಗಳ ಮೂಲಕ ಚರಿತ್ರೆಯನ್ನು ರೂಪಿಸಿರುವುದು ಸರಿಯಷ್ಟೇ. ಆದರೆ, ಆಫ್ರಿಕನ್ ಚರಿತ್ರಕಾರರಿಗೆ ಪ್ರಭೇದಗಳಿಗಿಂತ, ವ್ಯತ್ಯಾಸಗಳಿಗಿಂತ ‘ಆಫ್ರಿಕಾ’ ಎನ್ನುವ ಸಾಮಾನ್ಯ ಪರಿಪ್ರೇಕ್ಷ್ಯೆ ಮುಖ್ಯವಾಗಿದೆ. ಹೀಗಾಗಿ ಅವರು ಆಫ್ರಿಕಾವನ್ನು ಬಹುತೇಕವಾಗಿ ಇಡಿಯಾಗಿ ಗ್ರಹಿಸಲು ಪ್ರಯತ್ನಪಟ್ಟಿರುವುದನ್ನು ನಾವು ಗಮನಿಸ ಬಹುದು. ಇಷ್ಟೆಲ್ಲದರ ನಡುವೆಯೂ ಆಫ್ರಿಕಾದ ವಿದ್ವಾಂಸರಿಗೆ ಭಾರತದ ಸಬಾಲ್ಟರ್ನ್ ಮಾದರಿಗಳು ದಿಗ್ಭ್ರಮೆಯನ್ನೇನೂ ಉಂಟುಮಾಡಿಲ್ಲ. ವಸಾಹತುಕಾರರ ಆಕರಗಳಿಗಿಂತ ಭಿನ್ನವಾದ ಆಕರಗಳನ್ನು ಶೋಧಿಸುವಲ್ಲಿ ಆಫ್ರಿಕಾದ ಚರಿತ್ರಕಾರರು ೧೯೬೦ರ ದಶಕದಲ್ಲೇ ಸಕ್ರಿಯವಾಗಿದ್ದರು. ಪರಿಣಾಮವಾಗಿ ವಸಾಹತುಶಾಹಿಯು ಕಟ್ಟಿಕೊಟ್ಟ ವಿರೂಪಗೊಂಡ ಚರಿತ್ರೆಗೆ ಪ್ರತಿಯಾಗಿ ಆಫ್ರಿಕನ್ ಚರಿತ್ರೆಕಾರರು ೧೯೬೦ರ ದಶಕದಲ್ಲಿಯೇ ಮೌಖಿಕ ಆಕರಗಳ ಮೂಲಕ ತಮ್ಮದೇ ಆದ ಚರಿತ್ರೆಯನ್ನು ಕಟ್ಟಿಕೊಳ್ಳಲು ಶ್ರಮಿಸಿದರು. ಹೀಗಾಗಿ ಅವರು ಆಫ್ರಿಕನ್ನರ ಚರಿತ್ರೆಯನ್ನು ರೂಪಿಸುವಲ್ಲಿ ಶ್ರಮಿಸಿದರೇ ವಿನಾ ಆಫ್ರಿಕಾದ ಚರಿತ್ರೆಯು ಹೇಗೆ “ಅಧಿಕಾರಕ್ಕೆ” ಸವಾಲನ್ನೊಡ್ಡಿತು ಅಥವಾ ಅದು ಹೇಗೆ ತನ್ನನ್ನು ಸ್ಥಾಪಿಸಿಕೊಂಡಿತು ಎನ್ನುವ ವಿಚಾರವನ್ನು ರೂಪಿಸಲಿಕ್ಕೆ ಅಲ್ಲ ಎನ್ನುವ ಅಂಶ ಇಲ್ಲಿ ಕಂಡುಬರುತ್ತದೆ.

ಆಫ್ರಿಕನ್ ಚರಿತ್ರೆಕಾರರಿಗೆ ಸಬಾಲ್ಟರ್ನ್ ಅಧ್ಯಯನಕ್ರಮದ ಬಗೆಗಿನ ಅದರಲ್ಲಿಯೂ  ವಸಾಹತು ಸರಕಾರಗಳು ಅಧಿಕಾರ ಕೇಂದ್ರ ಶಕ್ತಿಗಳಾಗಿ ವ್ಯವಸ್ಥೆಯನ್ನು ನಿಯಂತ್ರಿಸಿದ ಕುರಿತಾಗಿ ಮಾಡಿದ ನಿರೂಪಣೆಯ ಬಗ್ಗೆ ಅಥವಾ ಇಡೀ ವ್ಯವಸ್ಥೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿರುವ ‘ನೇಶನ್ ಸ್ಟೇಟ್’ಗಳ ಎಡಬಿಡಂಗಿತನದ ಬಗ್ಗೆ ನೀಡಿದ ವಿಮರ್ಶೆಯ ಬಗ್ಗೆ ಸಹಾನುಭೂತಿಯಿರುವುದನ್ನು ಕಾಣಬಹುದು. ಇಷ್ಟಾಗಿಯೂ ಅವರಿಗೆ ಪ್ರಬಲಚರಿತ್ರೆಗೆ ಪ್ರತಿಯಾಗಿ ನೀಡಿದ “ಸಮುದಾಯಗಳ ಸ್ವಾಯತ್ತೆ”ಯ ಅಂಶಗಳ ಬಗ್ಗೆ ಒಲವಿಲ್ಲ. ವಿನಯ್ ಬಾಲ್ ಅವರು ವಿವರಿಸಿದಂತೆ, ಇತ್ತೀಚೆಗೆ ಸೋಮಾಲಿಯಾದಲ್ಲಿ ಒಂದು ಕೇಂದ್ರೀಕೃತ ವ್ಯವಸ್ಥೆಯ ಗೈರುಹಾಜರಿಯಲ್ಲಿ ಸಮುದಾಯಗಳು ತಮ್ಮ ತಮ್ಮ ಕೈಗಳಿಗೆ ಕೈಗೆಟುಕುವ ಯಂತ್ರಚಾಲಿತ ಆಯುಧಗಳನ್ನು ಬಗಲಲ್ಲಿಟ್ಟುಕೊಂಡು ನೆತ್ತರು ಹೊಳೆಯನ್ನು ಹರಿಸಿದ ಘಟನೆಗಳನ್ನು ನೋಡಿದ ಮೇಲೆ ಆಫ್ರಿಕಾದ ಚರಿತ್ರೆಕಾರರು ಸಬಾಲ್ಟರ್ನ್ ಅಧ್ಯಯನ ಮಾದರಿಯಲ್ಲಿ ಪ್ರಬಲವಾಗಿರುವ ಮರುಸಂರಚಿಸುವ (ಡಿಕನ್‌ಸ್ಟ್ರಕ್ಷನ್) ಸಿದ್ಧಾಂತಗಳಿಂದ ದೂರವಾಗಿದ್ದಾರೆ. ಹಾಗೆ ನೋಡಿದರೆ, ೧೯೫೬ರಲ್ಲಿ ಆನ್ವಾಕ ಡೈಕ್ ಎಂಬ ವಿದ್ವಾಂಸ “ಟ್ರೇಡ್ ಅಂಡ್ ಪಾಲಿಟಿಕ್ಸ್ ಇನ್ ದಿ ನಿಗರ್ ಡೆಲ್ಟಾ” ಎನ್ನುವ ಪ್ರಕಟಣೆಯಲ್ಲಿ ಆಫ್ರಿಕಾದ ಚರಿತ್ರೆಯನ್ನು ರಚಿಸುವ ಸಂದರ್ಭದಲ್ಲಿ ಆಫ್ರಿಕನ್ನರನ್ನು ಅವನು ಪ್ರತಿಭಟನೆಕಾರರಾಗಿಯೋ ಅಥವಾ ಸಹವರ್ತಿಗಳನ್ನಾಗಿಯೋ(ಕೊಲಾಬರೇಟರ‍್ಸ್) ನೋಡದೆ ಇರುವುದು ಈ ಸಂದರ್ಭದಲ್ಲಿ ಮುಖ್ಯ ವಿಚಾರವಾಗುತ್ತದೆ. ಸಾಗರೋತ್ತರ ವ್ಯವಹಾರದ ಸಂದರ್ಭದಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆಯ ಅಂಗವಾಗಿ ಯುರೋಪಿಯನ್ನರನ್ನು ಅರ್ಥ ಮಾಡಿಕೊಂಡ ಈ ಲೇಖನವು ಸಬಾಲ್ಟರ್ನ್ ಅಧ್ಯಯನ ಕ್ರಮವು ಪ್ರಚಲಿತಕ್ಕೆ ಬರುವ ಮೂರು ದಶಕಗಳ ಹಿಂದೆ ಪ್ರಕಟವಾಗಿತ್ತು ಎಂಬ ವಿಚಾರವು ನಮ್ಮ ಗಮನವನ್ನು ಸೆಳೆಯುತ್ತದೆ.

೩. ಡೈಕನ ಮಾದರಿಗಳಿಗಿಂತ ಅಥವಾ ಅವನ ನಂತರ ಬಂದ ಉಳಿದ ಆಫ್ರಿಕನ್ ಚರಿತ್ರೆಕಾರರ ಮಾದರಿಗಳಿಗಿಂತ ಭಿನ್ನವಾಗಿ ಸಬಾಲ್ಟರ್ನ್ ಅಧ್ಯಯನ ಕ್ರಮವು “ಭಿನ್ನತೆಗಳನ್ನು” ಮತ್ತು “ವ್ಯತ್ಯಾಸಗಳನ್ನು” ವ್ಯವಸ್ಥೆಯಲ್ಲಿ ಗುರುತಿಸುವ ಹಾದಿಯಲ್ಲಿ ಮುಂದುವರಿಯಿತು. ವರ್ಣ, ರಾಷ್ಟ್ರೀಯತೆ ಮತ್ತು ಲಿಂಗಸಂಬಂಧಿ ವಿಚಾರಗಳಲ್ಲಿ “ವ್ಯತ್ಯಾಸಗಳನ್ನು” ಕಂಡುಕೊಳ್ಳುವ ಸಂದರ್ಭದಲ್ಲಿ ಭೌತಿಕ ವ್ಯವಸ್ಥೆ (ಮೆಟಿರಿಯಲ್ ಕಂಡೀಶನ್ಸ್) ಹುಟ್ಟು ಹಾಕಿರುವ ಸಾಮಾನ್ಯ ಅಂಶಗಳನ್ನು  ಗಣನೆಗೆ ತೆಗೆದುಕೊಳ್ಳದಿರುವುದನ್ನು ನೋಡಬಹುದು. ವ್ಯತ್ಯಾಸಗಳಾಗಲಿ ಅಥವಾ ಅವುಗಳಿಂದ ರೂಪುಗೊಳ್ಳುವ ಐಡೆಂಟಿಟಿ ಗಳಾಗಲಿ ಸ್ಥಾವರವಾಗಿರುವುದಿಲ್ಲ. ಬದಲಿಗೆ ಅವು ಬದಲಾಗುತ್ತಲೇ ಇರುತ್ತವೆ. ನಮ್ಮಲ್ಲಿ ರೂಪುಗೊಂಡ ಸಾಂಸ್ಕೃತಿಕ ಐಡೆಂಟಿಟಿಗಳ ಪ್ರಕ್ರಿಯೆ ಹಂತದಲ್ಲಿರುವುವು ಮತ್ತು ಅದಕ್ಕಾಗಿಯೇ ಅವು ಒಂದೊಂದು ಸಂದರ್ಭದಲ್ಲಿ ಒಂದೊಂದು ಅರ್ಥವನ್ನು ಪಡೆದುಕೊಳ್ಳುವುವು. ಕೆಲವೊಂದು ಸಂದರ್ಭಗಳಲ್ಲಿ ಏಕತೆಯನ್ನು ಸಾಧಿಸಲು ಅಥವಾ ಅದನ್ನು ನ್ಯಾಯಸಮ್ಮತೀಕರಿಸಲು ಒಂದು ಎತ್ನಿಕ್ ಗುಂಪು ಬಹುಸಮುದಾಯಗಳನ್ನು ವರ್ಗ ಅಥವಾ ಜಾತಿ ಹೆಸರಿನಲ್ಲಿ ಒಂದೆಡೆಗೆ ತರುವ ಪ್ರಯತ್ನಗಳನ್ನು ಮಾಡಿರುವ ವಿಚಾರಗಳನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಗುಂಪುಗಳಲ್ಲಿರುವ ತಾರತಮ್ಯ ಅಥವಾ ವ್ಯತ್ಯಾಸಗಳನ್ನು ಅರಿತುಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ. ಒಂದು ಸಬಾಲ್ಟರ್ನ್ ಗುಂಪು ಇನ್ನೊಂದು ಸಬಾಲ್ಟರ್ನ್ ಗುಂಪನ್ನು ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಅಧ್ಯಯನ ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರವನ್ನು ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ದಲಿತ ಪುರುಷರು ಮತ್ತು ನಾಯಕರು ದಲಿತ ಮಹಿಳೆಯರನ್ನು ಅಧೀನಗೊಳಿಸುವ ವಿಚಾರಗಳನ್ನು ಪ್ರತಿಭಟಿಸಿ ತಮ್ಮದೇ ವೇದಿಕೆಗಳನ್ನು ರೂಪಿಸಿಕೊಳ್ಳುತ್ತಿರುವ ದಲಿತ ಮಹಿಳೆಯರ ಸಂಘಟನೆಗಳಲ್ಲಿ ಕೆಲವು ಹೊಸ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿವೆ. ಈ ಮೂಲಕ ತಮ್ಮ ಮೇಲಿನ ಶೋಷಣೆಗೆ ಪ್ರತಿಯಾಗಿ ಸ್ವತಂತ್ರವಾಗಿ ರಾಜಕೀಯ ಅಭಿವ್ಯಕ್ತಗಳನ್ನು ವ್ಯಕ್ತಪಡಿಸುವ ಅಂಶಗಳು ಕಾಣುತ್ತವೆ. ದಲಿತ ಮಹಿಳೆಯರು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ದಲಿತ ಪುರುಷರ ಪ್ರಾಬಲ್ಯದಿಂದ ಹಿಂದೆ ಸರಿಯಬೇಕಾದ ವಿಚಾರಗಳನ್ನು ವಿಮರ್ಶಿಸಿರುವುದನ್ನು ವಿನಯ್ ಬಾಲ್ ದಾಖಲಿಸಿದ್ದಾರೆ. ದಲಿತ ಸಾಹಿತ್ಯ ಸಮ್ಮೇಳನ ಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತ ಮಹಿಳೆಯರಿಗೆ ಉನ್ನತ ಸ್ಥಾನಮಾನ ಸಿಗುವಲ್ಲಿ ದಲಿತ ಪುರುಷರು ಅಡ್ಡಗಾಲು ಹಾಕುತ್ತಿದ್ದಾರೆಂಬ ಟೀಕೆಗಳೂ ಅಲ್ಲಲ್ಲಿ ಕಂಡುಬರುತ್ತವೆ.

ದಲಿತ ಮಹಿಳೆಯರನ್ನು ಒಂದು ಸಬಾಲ್ಟರ್ನ್ ಗುಂಪೆಂದು ಭಾವಿಸಿದರೂ ಅಲ್ಲಿ ಕೂಡ ಕೆಲವು ಆಭಾಸಗಳನ್ನು ನಾವು ನೋಡಬಹುದು. ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಕರ್ನಾಟಕದ ದಲಿತ ಮಹಿಳೆಯರಿಗಿಂತ ಹೆಚ್ಚು ಪ್ರಮಾಣದಲ್ಲಿ ಹಾಗೂ ಪ್ರಭಾವಿಯಾಗಿ ಮಹಾರಾಷ್ಟ್ರದ ಮಹಿಳೆಯರು ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮಹಾರಾಷ್ಟ್ರದ ಮಹಿಳೆಯು ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ “ಭಾರತೀಯ ದಲಿತ ಮಹಿಳೆಯನ್ನು” ಪ್ರತಿನಿಧೀಕರಿಸುತ್ತಾಳೆ. ಸಹಜವಾಗಿ ಕರ್ನಾಟಕದ ದಲಿತ ಮಹಿಳೆಯ ಪ್ರಶ್ನೆಗಳು ಅಲ್ಲಿ ಪ್ರಭಾವಿಯಾಗಿರುವುದಿಲ್ಲ ಎಂಬ ವಿಚಾರವನ್ನು ಗೋಪಾಲಗುರು ಅವರು ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ (೧೯೯೫) ಬರೆದ ‘ದಲಿತ್ ವುಮೆನ್’ ಎನ್ನುವ ಲೇಖನದಲ್ಲಿ ವ್ಯಕ್ತಪಡಿಸಿರುವುದು ಗಮನಾರ್ಹ ವಾಗಿದೆ. ಇನ್ನೊಂದು ಅರ್ಥದಲ್ಲಿ ತನ್ನ ಮುನ್ನಡೆಗೆ ದಲಿತ ಮಹಿಳೆಯು ‘ರಾಜ್ಯದ’ ಸಹಕಾರವನ್ನು ಅಪೇಕ್ಷಿಸಿದರೆ ಅದು ಕೂಡ ವ್ಯರ್ಥವೇ. ದಲಿತ ಮಹಿಳೆಯರ ಈ ಬಗೆಯ ಸಂಕೀರ್ಣ ಪ್ರಶ್ನೆಗಳಿಗೆ ದಲಿತ ಪುರುಷಪ್ರಧಾನ ವ್ಯವಸ್ಥೆಯು ರಾಜ್ಯದ ಜೊತೆಗೆ ಬೆಸೆದುಕೊಂಡಿರುವುದರಿಂದ ಉತ್ತರ ನೀಡಲು ರಾಜ್ಯವ್ಯವಸ್ಥೆ ಕೂಡ ಅಸಮರ್ಥವಾಗಿ ರುತ್ತದೆ. ಬಿಹಾರದ ಭೋದಗಯಾದಲ್ಲಿ ಸರಕಾರವು ದಲಿತರಿಗೆ ಭೂಹಂಚಿಕೆಯನ್ನು ಮಾಡಬೇಕೆಂದ ಸಂದರ್ಭದಲ್ಲಿ, ದಲಿತ ಮಹಿಳೆಯರು ದಲಿತ ಪುರುಷರ ಬದಲಿಗೆ ತಮ್ಮ ಹೆಸರಿಗೆ ಭೂಮಿಯನ್ನು ಹಂಚಬೇಕೆಂದು ಮಾಡಿದ ಬೇಡಿಕೆಗೆ ಸರಕಾರ ಜಪ್ಪಯ್ಯ ಎನ್ನದಿರುವುದನ್ನು ನಾವು ನೋಡಬಹುದು. ಮಹಾರಾಷ್ಟ್ರದಲ್ಲಿ ದಲಿತ ಮಹಿಳೆ ‘ಬಹುಜನ ಮಹಿಳಾ ಅಗಾದಿಯ’ ನೇತೃತ್ವದಲ್ಲಿ ಉದಾರವಾದವನ್ನು ಪ್ರತಿಭಟಿಸಿದರೆ, ಬೆಂಗಳೂರಿನಲ್ಲಿ ಅವರು ಹಿಂದುತ್ವದ ವಿರುದ್ಧ ಚಳವಳಿಯನ್ನು ಮಾಡಿದ ಘಟನೆಗಳು ಸಿಗುತ್ತವೆ. ದಲಿತ ಮಹಿಳೆ ಎನ್ನುವ ಒಂದು ಐಡೆಂಟಿಟಿಯು ಬಹುಮುಖ್ಯ ಭಿನ್ನತೆಗಳನ್ನು, ವ್ಯತ್ಯಾಸಗಳನ್ನು ಮತ್ತು ತಾರತಮ್ಯಗಳನ್ನು ಅಭಿವ್ಯಕ್ತಗೊಳಿಸಿರುವುದನ್ನು ನಾವಿಲ್ಲಿ ಗಮನಿಸಬಹುದು. ಭಿನ್ನತೆಗಳನ್ನು ಮುಖ್ಯವಾಗಿ ಗಂಡು ಹೆಣ್ಣುಗಳ ನಡುವೆ, ಅಕ್ಷರಸ್ಥ ಅನಕ್ಷರಸ್ಥರ ನಡುವೆ, ಉದ್ಯೋಗಿ ನಿರುದ್ಯೋಗಿಗಳ ನಡುವೆ, ಪ್ರಾಂತೀಯತೆ ಮತ್ತು ಭಾಷಿಕ ವ್ಯತ್ಯಾಸಗಳ ನಡುವೆ ಕಾಣಬಹುದಾಗಿದೆ. ದಲಿತ ಮಹಿಳೆ ಎನ್ನುವ ಕೆಟಗರಿಯು ಬೇರೆ ಬೇರೆ ಸಂದರ್ಭದಲ್ಲಿ ಮತ್ತು ಪ್ರದೇಶಗಳಲ್ಲಿ ಲಿಂಗಸಂಬಂಧಿ ತಾರತಮ್ಯದ ವಿರುದ್ಧ, ಉದಾರವಾದಿ ನಿಲುವಿನ ವಿರುದ್ಧ, ಹಿಂದುತ್ವದ ವಿರುದ್ಧ ಧ್ವನಿ ಎತ್ತಿರುವುದು ಇಲ್ಲಿ ವೇದ್ಯವಾಗಿದೆ. ಇಷ್ಟೊಂದು ಬಗೆಯ ಸಂಕೀರ್ಣತೆಗಳನ್ನು ಮತ್ತು ಹೋರಾಟಗಳನ್ನು ‘ದಲಿತರು’ ಎನ್ನುವ ಒಂದು ಕೆಟಗರಿ ಮೂಲಕ ಅಥವಾ ‘ಸಮುದಾಯದ’ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಿರುವುದು ಸಬಾಲ್ಟರ್ನ್ ಅಧ್ಯಯನ ಕ್ರಮದ ಮಿತಿಯಾಗಿದೆ. ವ್ಯತ್ಯಾಸಗಳು ಅಥವಾ ತಾರತಮ್ಯಗಳನ್ನು ಕೇವಲ ಸಮಾಜದ ಒಂದು ಸಣ್ಣ ಘಟಕಕ್ಕೆ ಸೀಮಿತಗೊಳಿಸದೆ ಸಮಷ್ಟಿಯಾಗಿ ನೋಡಿದರೆ ಈ ಬಗೆಯ ಮಿತಿಗಳನ್ನು ಮೀರಬಹುದಾಗಿದೆ.

ಇನ್ನೂ ಒಂದು ಹೆಜ್ಜೆಯನ್ನಿಟ್ಟು ಮಾತನಾಡುವುದಾದರೆ ದಲಿತರ ಪ್ರಶ್ನೆಯೊಂದಿಗೆ, ಮಹಿಳಾ ಪ್ರಶ್ನೆಗಳು ಮತ್ತು ನಕ್ಸಲರು ಪ್ರತಿಪಾದಿಸುವ ಬುಡಕಟ್ಟುಗಳ ಪ್ರಶ್ನೆಗಳು ಭಾರತದಲ್ಲಿ ಬಹಳ ಮುಖ್ಯವಾಗಿವೆ. ಈ ಮೂರು ಪ್ರಶ್ನೆಗಳು ಬೇರೆ ಬೇರೆ ಹಂತಗಳಲ್ಲಾಗುತ್ತಿರುವ ಘೋಷಣೆಗಳಿಂದಾಗಿ ಹುಟ್ಟಿಕೊಂಡಂತವು. ಆಶ್ಚರ್ಯವೆಂದರೆ, ಈ ಮೂರು ಬಗೆಯ ಭಾರತದ ಪ್ರಧಾನ ಹೋರಾಟಗಳು ಪರಸ್ಪರ ಬಹಳ ಅಸಹನೆಗಳನ್ನಿಟ್ಟುಕೊಂಡಂತಹವು. ಬಹುತೇಕ ನಕ್ಸಲರು “ಉನ್ನತಜಾತಿಗಳಿಗೆ ಸೇರಿರುವ ಕಾರಣಕ್ಕಾಗಿ” ನಕ್ಸಲರಿಗೆ ‘ಜಾತಿ’ ಸಂಬಂಧಿತ ಪ್ರಶ್ನೆಗಳು ಮುಖ್ಯವಾಗಿಲ್ಲ ಎಂದು ದಲಿತರು ಆಪಾದಿಸುತ್ತಾರೆ. ದಲಿತರು ‘ಆತ್ಮಗೌರವಕ್ಕಾಗಿ’  ಮತ್ತು ‘ಅಧಿಕಾರವನ್ನು ಹಿಡಿಯುವುದಕ್ಕಾಗಿ’ ಹೋರಾಟ ಮಾಡುತ್ತಿರುವುದಕ್ಕಾಗಿ ನಕ್ಸಲರು ದಲಿತರ ಹೋರಾಟವು ‘ಬೂರ್ಜ್ವಾ ಹೋರಾಟ’ವಾಗಿದೆ ಎಂದು ಭಾವಿಸಿದ್ದಾರೆ. ‘ಭೂ ಹಂಚಿಕೆಯನ್ನು’ ಮಾಡಬೇಕೆನ್ನುವ ಬೇಡಿಕೆ ಬದಲು ಭಿನ್ನ ಬೇಡಿಕೆಗಳನ್ನು ಮಂಡಿಸುತ್ತಿರುವ ದಲಿತ ಚಳವಳಿ ‘ವರ್ಗಹೋರಾಟವನ್ನು’ ಸೋಲಿಸುತ್ತಿದೆ ಎಂದು ನಕ್ಸಲರು ಟೀಕಿಸಿದ್ದಾರೆ. ಬಹುತೇಕ ಮಹಿಳಾ ಚಳವಳಿಗಳು ಕೆಳವರ್ಗಗಳ ಮಹಿಳೆಯರ ಕಷ್ಟಕಾರ್ಪಣ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದಾಗಿ ಇವು ‘ಎಲೈಟ್’ ಹಿತಾಸಕ್ತಿಗಳನ್ನು ಪ್ರತಿನಿಧಿಸಿವೆ ಎಂದು ವರ್ಗಾಧಾರಿತ ಚಳವಳಿಗಳು ಆರೋಪಿಸಿವೆ. ಇದಕ್ಕೆ ಪ್ರತಿಯಾಗಿ ಮಹಿಳಾ ಚಳವಳಿಗಾರರು ಭಿನ್ನವಾದ ವಾದವನ್ನು ಮಂಡಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಅಥವಾ ನಕ್ಸಲೈಟರನ್ನು ಬೇಟೆಯಾಡುತ್ತ ಪೊಲೀಸರು ನುಗ್ಗಿದ ಸಂದರ್ಭದಲ್ಲಿ ನೇರವಾದ ದೌರ್ಜನ್ಯಕ್ಕೆ ಮತ್ತು ಅತ್ಯಾಚಾರಕ್ಕೆ ಈಡಾಗುವವರು ಮಹಿಳೆಯರು. ಇಂತಹ ಸಂದರ್ಭದಲ್ಲಿ ಮಹಿಳೆಯರು ಯಾವ ಜಾತಿ, ವರ್ಗ ಮತ್ತು ಧರ್ಮಗಳಿಗೆ ಸೇರಿದವರು ಎನ್ನುವ ಪ್ರಶ್ನೆಯೇ ನುಸುಳುವುದಿಲ್ಲ ಎನ್ನುತ್ತಾರೆ ಮಹಿಳಾ ಚಳವಳಿಗಾರರು. ಈ ಎಲ್ಲ ಸಂದರ್ಭಗಳಲ್ಲಿ ಬಹುತೇಕ ಚಳವಳಿಗಳು ಶೋಷಣೆಯ ವಿರುದ್ಧ ಹೋರಾಟಗಳನ್ನು ಒಂದಾಗಿ ಮಾಡದೆ ಪರಸ್ಪರ ಕಾಲೆಳೆದುಕೊಳ್ಳುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು. ಪರಸ್ಪರ ಸ್ನೇಹಕ್ಕಿಂತ ವೈರತ್ವವೇ ಅಥವಾ ದ್ವೇಷ ಸಾಧನೆಯೇ ಇಲ್ಲಿ ಪ್ರಧಾನವಾಗಿರುವುದು. ಈ ಕಾರಣಗಳಿಂದಾಗಿ ಈ ಚಳವಳಿಗಳು ಪರಸ್ಪರರ ಮುನ್ನಡೆಗೆ ಅಡ್ಡಗಾಲಾಗಿವೆ (ಜಿ. ವಿಜಯ್ ೧೯೯೫).

ಭೂಮಿಯ ಪ್ರಶ್ನೆಯನ್ನು ಮಾತನಾಡುವ ನಕ್ಸಲೈಟ್‌ಗಳಾಗಲಿ, ಲಿಂಗತಾರತಮ್ಯದ ಮಾತನಾಡುವ ಮಹಿಳೆಯರಾಗಲಿ ಅಥವಾ ಜಾತಿತಾರತಮ್ಯದ ಬಗ್ಗೆ ಮಾತನಾಡುವ ದಲಿತರಾಗಲಿ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದವರೇ. ಪರಸ್ಪರ ಸಹಕಾರದಿಂದ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾಗಿವೆ. ಏಕೆಂದರೆ ಈ ಮೂರು ಬಗೆಯ ಹೋರಾಟಗಳಿಗೆ ಇರುವ ಇತಿಹಾಸ ಮತ್ತು ಚೌಕಟ್ಟು ಭಾರತದ ಮಟ್ಟಿಗೆ ಒಂದೇ ಆಗಿವೆ. ಹಾಗಾಗಿ “ವ್ಯತ್ಯಾಸಗಳು” “ಭಿನ್ನತೆಗಳಿಗಿಂತ” ಹೆಚ್ಚು ತಮ್ಮ ಉದ್ದೇಶಗಳನ್ನು ಈಡೇರಿಸಲು ಇವು ಪೂರಕವಾಗಿಯೇ ಹೋರಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಿನ್ನತೆ ಮತ್ತು ವ್ಯತ್ಯಾಸಗಳ ಅಧ್ಯಯನಕ್ಕಿಂತ ಹೆಚ್ಚಾಗಿ ಈಗ ಅಗತ್ಯವಾಗಿರುವುದು ಸದೃಢವಾದ ನಿರಂತರತೆ (ಪೊಟೆನ್ಷಿಯಲ್ ಟ್ರಾನ್ಸ್‌ಫಾರ್ಮರ್). ಹೀಗಾಗಿ ಸಬಾಲ್ಟರ್ನ್ ಅಧ್ಯಯನ ಕ್ರಮವು ಪ್ರತಿಪಾದಿಸುವ ವ್ಯತ್ಯಾಸಗಳ ಭಿನ್ನತೆಗಳ ಚರಿತ್ರೆ ಒಂದು ಮಿತಿಯಾಗಿ ಉಳಿಯುತ್ತದೆ.

೪. ಸಬಾಲ್ಟರ್ನ್ ಅಧ್ಯಯನ ಕ್ರಮವು ಆರಂಭದಲ್ಲಿ ಎತ್ತಿದ್ದ ಪ್ರಶ್ನೆಗಳು ಸಮರ್ಥನೀಯವೇ ಆಗಿತ್ತು. ಜನರ ಹೋರಾಟಗಳು ದಮನಿಸಲ್ಪಟ್ಟ ವಿವರಗಳ ಬಗ್ಗೆ ಅದರ ಒಲವಿತ್ತು. ದಮನಕ್ಕೊಳಗಾದವರ ಬಗ್ಗೆ ಅದಕ್ಕೆ ಸಹಾನುಭೂತಿಯಿತ್ತು. ಆದರೆ, ಈ ದಿನಗಳಲ್ಲಿ ದಮನಿತರ “ಭಿನ್ನಭಿನ್ನ” ವ್ಯತ್ಯಾಸಗಳುಳ್ಳ ಕೂಗನ್ನು ದಾಖಲು ಮಾಡಿಕೊಳ್ಳುವ ಭರದಲ್ಲಿ ಸಬಾಲ್ಟರ್ನ್ ಅಧ್ಯಯನ ಕ್ರಮಕ್ಕೆ ದಮನಿತರು ಎದುರು ನೋಡುತ್ತಿರುವ ಒಳ್ಳೆಯ ಭವಿಷ್ಯಕ್ಕೆ ಯಾವುದೇ ಬಗೆಯಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಬಡವರು ಭಿನ್ನವಾಗಿಯೇ ಇರುವುದು (ಅಥವಾ ದೇಸಿ ಸಂಸ್ಕೃತಿ) ಸಹಜವಾಗಿದೆ. ಆ ಕಾರಣಕ್ಕಾಗಿಯೇ ಆ ಬಗೆಯ ಭಿನ್ನತೆಯನ್ನು ಉಳಿಸಿಕೊಂಡು, ಅದರ ಬಗ್ಗೆ ಹೆಮ್ಮೆಪಟ್ಟುಕೊಂಡು ಮತ್ತು ಆ ಸಂಭ್ರಮವನ್ನು ಆಚರಿಸಿಕೊಂಡು ಹಾಗೆಯೇ ಇರುವುದು ಸಹಜವೆಂದು ಈ ಅಧ್ಯಯನ ಕ್ರಮವು ಭಾವಿಸಿರುವುದು ಮತ್ತು ಇದರ ಬದಲಾವಣೆಗೆ ಯಾವುದೇ ಚರ್ಚೆ ಗಳಿಲ್ಲದಿರುವುದು ಸಬಾಲ್ಟರ್ನ್ ಅಧ್ಯಯನ ಕ್ರಮದ ಆಶಯಕ್ಕೆ ಭಂಗ ಬಂದಿದೆ. ಇದು ಈ ಅಧ್ಯಯನ ಕ್ರಮದ  ಒಂದು ಮಿತಿ ಕೂಡ ಹೌದು.

೫. ದುಡಿಯುವ ಜನತೆಯ ಹೋರಾಟವನ್ನು ಸಬಾಲ್ಟರ್ನ್ ಅಧ್ಯಯನಕಾರರು ‘ಪ್ರತಿಭಟನೆ’ ಎಂದು ನಕಾರಾತ್ಮಕವಾಗಿ ನೋಡುವ ಬದಲು “ಹೀರೋಯಿಕ್” ಎಂದು ನೋಡುವುದು ಸೂಕ್ತ ಎಂದು ವಿನಯ್ ಬಾಲ್ ಸಲಹೆ ಮಾಡಿರುವುದನ್ನು ಗಮನಿಸಬಹುದು. ಎಲೈಟ್‌ಗಳದ್ದಾದರೆ ಅದು ಹೀರೋಯಿಕ್, ಸಬಾಲ್ಟರ್ನ್‌ಗಳದ್ದಾದರೆ ಅದು ‘ರೆಸಿಸ್ಟೆನ್ಸ್’ (ಪ್ರತಿಭಟನೆ) ಎಂದು ಹೋರಾಟದ ಉತ್ಸಾಹಕ್ಕೆ ತಣ್ಣೀರೇಕೆ ಎರಚಬೇಕೆಂದು ಅವರು ಪ್ರಶ್ನಿಸಿದ್ದಾರೆ. ಉಪವಾಸ ಮತ್ತು ದಿನನಿತ್ಯದ ಬದುಕನ್ನು ದಾಟಲು ಪ್ರಯತ್ನಪಡುತ್ತಿರುವ ದುಡಿಯುವ ವರ್ಗದ ಜನರ ಜೀವನವನ್ನು ‘ಸಹಜ’ ಎಂಬಂತೆ ಅಥವಾ ಒಪ್ಪಿಕೊಂಡ ಸಹಜತೆ ಎಂದು ಬಿಂಬಿಸುವುದು ಅಥವಾ ಅದರಿಂದ ಹೊರಕ್ಕೆ ಬರಲು ತಾಕಲಾಟಪಡುತ್ತಿರುವುದನ್ನು ‘ಪ್ರತಿಭಟನೆ’ ಎಂದು ಬಿಂಬಿಸುವುದು ಆಭಾಸಕರವಾಗಿದೆ. ಆ ಹೆಜ್ಜೆಗಳು ‘ಹೀರೋಯಿಕ್’ ಆಗಿರುವುದು ಎಂದು ವಿನಯ್ ಬಾಲ್ ವಾದಿಸಿದ್ದಾರೆ. ಸಬಾಲ್ಟರ್ನ್ ಅಧ್ಯಯನಕಾರರು ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಸಾಹತು ವಾದವು ಸೃಷ್ಟಿಸಿರುವ ವ್ಯಾಕುಲತೆಗಳನ್ನು ಅರಿಯುವಲ್ಲಿ ಉತ್ಸಾಹ ತೋರಿರುವುದು ಕಂಡುಬರುತ್ತದೆ. ವಸಾಹತುಶಾಹಿಯ ಸ್ವರೂಪ ಮತ್ತು ಪರಿಣಾಮಗಳನ್ನು ಅವರು ನಿರ್ಲಕ್ಷಿಸಿರುವುದನ್ನು ಈ ಸಂದರ್ಭದಲ್ಲಿ ನಾವು ಗಮನಿಸಬಹುದು. ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವರ್ಗದ ಪಾತ್ರವನ್ನು ಅವರು ನಿರಾಕರಿಸಿರುವುದರಿಂದ ವಸಾಹತುಕಾಲದ ಬಂಡವಾಳಗಾರರು ‘ವರ್ಗ’ದ (ಬಂಡವಾಳಶಾಹಿ) ಚೌಕಟ್ಟಿನಲ್ಲಿ ಬರುವುದಿಲ್ಲ. ಹೀಗಾಗಿ ಜನಸಾಮಾನ್ಯರ ವರ್ಗದ ಪ್ರತಿಭಟನೆಗಳು ಬಂಡವಾಳಶಾಹಿ ವರ್ಗದ ಅಥವಾ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಡೆದಿಲ್ಲ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಈ ರೀತಿಯಲ್ಲಿ ಸಬಾಲ್ಟರ್ನ್ ಅಧ್ಯಯನಕಾರರು “ಬಂಡವಾಳಶಾಹಿ/ವಸಾಹತುಶಾಹಿ” ಮತ್ತು “ಪ್ರತಿಭಟನೆ” ಎನ್ನುವ ಎರಡು ಲೋಕಗಳನ್ನು ಅದರಷ್ಟಕ್ಕೆ ಬಿಟ್ಟುಬಿಡುತ್ತಾರೆ. ಆದರೂ, ಅವರು “ಜನರ ಚರಿತ್ರೆ” ಬರೆಯುತ್ತೇವೆ ಎನ್ನುವುದು ಆಭಾಸವಾಗಿದೆ ಎನ್ನುತ್ತಾರೆ ಟೀಕಾಕಾರರು. ‘ವರ್ಗ’ ಎನ್ನುವುದರ ಬದಲಿಗೆ ‘ಸಬಾಲ್ಟರ್ನ್’ ಅಥವಾ ‘ಸಮುದಾಯ’ ಎಂಬ ಪರಿಭಾಷೆಯನ್ನು ಉಪಯೋಗಿಸಿದ ಮಾತ್ರಕ್ಕೆ ಇತಿಹಾಸದ ಸಂಕೀರ್ಣತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಸುಮಿತ್ ಸರ್ಕಾರ್.