ಸಬಾಲ್ಟರ್ನ್ ಅಧ್ಯಯನವು ಸಮಾಜದ ಕೆಳಸ್ತರವನ್ನು ಪರಿಗಣನೆಗೆ ತೆಗೆದು ಕೊಂಡಿದೆಯಾದರೂ ಬಂಡವಾಳದ ಲಾಜಿಕ್ಕನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿಲ್ಲ. ಬಂಧಿಯಾಗಿದ್ದ ಗ್ರಾಂಸಿಯು ಜೈಲಿನ ಸೆನ್ಸಾರ್‌ನಿಂದ ತಪ್ಪಿಸಿಕೊಳ್ಳಲು ಮಾರ್ಕ್ಸಿಸ್ಟ್ ಪರಿಭಾಷೆಯಾದ ‘ಸಬಾಲ್ಟರ್ನ್’ ಎನ್ನುವ ಪದವನ್ನು ‘ಪ್ರೊಲಟರಿಯೇಟ್’ ಎನ್ನುವ ಪದಕ್ಕೆ ಸಂವಾದಿಯಾಗಿ ಹೊರತಂದಿದ್ದು ಸರಿಯಷ್ಟೆ. ಫಾಸಿಸ್ಟ್ ಇಟಲಿ ಸರಕಾರ ರೂಪಿಸಿದ ವ್ಯವಸ್ಥೆಯನ್ನು ವಿರೋಧಿಸಿದ ಗ್ರಾಂಸಿಯು ಸಬಾಲ್ಟರ್ನ್ ಎನ್ನುವ ಪದವನ್ನು ವ್ಯಾಖ್ಯಾನಿಸಿರಲಿಲ್ಲ.

ಯಾವ ವ್ಯಕ್ತಿ ಅಥವಾ ಸಮುದಾಯವು ಚಲನಶೀಲತೆಯಿಂದ ಬೇರ್ಪಡೆಗೊಂಡರೋ ಅಥವಾ ಸಾಮಾಜಿಕವಾಗಿ ‘ಹೊರಗುಳಿದರೊ’ ಅಥವಾ ವಸಾಹತುಶಾಹಿಗಳ ಸಹಭಾಗಿಗಳು ಉತ್ಪಾದಿಸಿದ ಸಾಂಸ್ಕೃತಿಕ ಲೋಕದಿಂದ ಹೊರಗುಳಿದರೋ ಅವರು ಸಬಾಲ್ಟರ್ನ್‌ಗಳಾಗುತ್ತಾ ರೆನ್ನುವ ಪಾರ್ಥ ಚಟರ್ಜಿ ಅವರ ನಿಲುವನ್ನು ಗಾಯಿತ್ರಿ ಸ್ಪಿವಾಕ್ ಅವರು ಸಮರ್ಥಿಸಿದ್ದಾರೆ. ದಕ್ಷಿಣ ಏಷ್ಯಾದ ಸಂದರ್ಭದಲ್ಲಿ ಇದೊಂದು ಸೂಕ್ತ ವಿವರಣೆಯಾಗಿದೆ. ಗ್ರಾಂಸಿಯ ದಾರಿಯಲ್ಲಿ ಯೋಚಿಸುವುದಾದರೆ ಈ ಬಗೆಯ ವ್ಯಾಖ್ಯಾನವು ಸಬಾಲ್ಟರ್ನ್ ಅಧ್ಯಯನವು ವಸಾಹತು ಕಾಲದ ಸಂದರ್ಭದಲ್ಲಿ ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ಹೆಚ್ಚು ಡೈನಮಿಕ್ ಆಗಿ ನೋಡಲು ಪ್ರಯತ್ನಿಸಿದೆ ಎನ್ನಬಹುದು. ಹಾಗೆ ನೋಡಿದರೆ ಸಾಂಸ್ಕೃತಿಕ ಸಮಸ್ಯಾತ್ಮಕಗಳನ್ನು (ಪ್ರಾಬ್ಲೆಮೆಟಿಕ್ಸ್) ಸಬಾಲ್ಟರ್ನ್ ಅಧ್ಯಯನಗಳು ಪರಿಗಣಿಸಿದ್ದನ್ನು ನೋಡಿದರೆ ಸಬಾಲ್ಟರ್ನ್ ಅಧ್ಯಯನಗಳು ಮಾರ್ಕ್ಸಿಸ್ಟ್ ಸಿದ್ಧಾಂತಕ್ಕೆ ಪೂರಕವಾಗಿದೆ ವಿನಾ ಸಪ್ಲಿಮೆಂಟ್ ಆಗಿಲ್ಲ ಎನ್ನುತ್ತಾರೆ ಗಾಯಿತ್ರಿ ಸ್ಪಿವಾಕ್.

ವಸಾಹತೋತ್ತರ ಭಾರತದ ಶೈಕ್ಷಣಿಕ ವ್ಯವಸ್ಥೆಯು ಅಪ್ರಜಾಪ್ರಭುತ್ವೀಯ ಬುನಾದಿಯಿಂದ ಕೂಡಿದ್ದರಿಂದಾಗಿ ನಗರ ಮತ್ತು ಹಳ್ಳಿಗಳ ನಡುವಿನ ವರ್ಗ ವ್ಯತ್ಯಾಸಗಳು ಕಣ್ಣಿಗೆ ರಾಚುವಂತಿವೆ. ಈ ಸಂದರ್ಭವನ್ನು ಸಬಾಲ್ಟರ್ನ್ ಸಿದ್ಧಾಂತದ ಮೂಲಕ ವಿವರಿಸುವುದು ಕಷ್ಟ. ಇಂದಿನ ಸಂದರ್ಭದಲ್ಲಿ ‘ಸಬಾಲ್ಟರ್ನ್’ ಎನ್ನುವ ಸಿದ್ಧಾಂತವನ್ನು ಮರುಪರಿಶೀಲಿಸ ಬೇಕಾದ ಅಗತ್ಯವಿದೆ. ಕೇಂದ್ರ ವ್ಯವಸ್ಥೆಯಿಂದ ಕಡಿತಗೊಂಡ, ಮೂಲೆಗೊತ್ತಲ್ಪಟ್ಟ ಸಮುದಾಯಗಳ ಬಗ್ಗೆ ಮಾತಾಡುವ ಸಂದರ್ಭದಲ್ಲಿ ‘ಕೇಂದ್ರ’ ಎನ್ನುವುದು ಇತಿಹಾಸದ ಯಾವ ಸಂದರ್ಭದಲ್ಲಿ ಎಂದು ನಿಶ್ಚಯವಾಗುವುದು ಮುಖ್ಯವಾಗುತ್ತದೆ.

ವಿಮರ್ಶೆಗೆ ಸಂಬಂಧಿಸಿದ ಅಧ್ಯಾಯದಲ್ಲಿ ವಿವರಿಸಿದಂತೆ ರಣಜಿತ್ ಗುಹಾ ಅವರು ‘ಎಲೈಟ್’ ಚರಿತ್ರೆ ಬರವಣಿಗೆ ಎಂದು ಅರ್ಥೈಸಿದ ಸಂದರ್ಭದಲ್ಲಿ ಆ ಎಲೈಟ್‌ಗಳಲ್ಲಿ ಮಾರ್ಕ್ಸಿಸ್ಟರಿದ್ದಾರೆಯೇ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಲಿಲ್ಲ. ವಿಮರ್ಶೆಯ ಸಂದರ್ಭದಲ್ಲಿ ಕೆಳಸ್ತರದ ಚರಿತ್ರೆಯನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಶ್ಲೇಷಿಸಿದವರಲ್ಲಿ ಬಹುತೇಕರು ಮಾರ್ಕ್ಸಿಸ್ಟರು ಎಂಬುದನ್ನು ಗಮನಿಸಬಹುದು. ಕೆಳಸ್ತರದ ಚರಿತ್ರೆ ಬರವಣಿಗೆ ಕ್ರಮವನ್ನು ಅಸಂಪ್ರದಾಯವಾದಿ ಇಂಗ್ಲಿಶ್ ಮತ್ತು ಭಾರತೀಯ ಮಾರ್ಕ್ಸಿಸ್ಟರು ತಮ್ಮ ಬರವಣಿಗೆಯಲ್ಲಿ ರೂಢಿಸಿಕೊಂಡಿದ್ದರು. ಹಾಗೆ ನೋಡಿದರೆ ಸುಮಿತ್ ಸರ್ಕಾರ್ ಅವರಂಥ ಈ ಮಾದರಿಯ ಮಾರ್ಕ್ಸಿಸ್ಟ್ ಚರಿತ್ರೆಕಾರರು ರಣಜಿತ್ ಗುಹಾ ಅವರ ಜೊತೆಗೂಡಿ ಆರಂಭಿಕ ಸಬಾಲ್ಟರ್ನ್ ಸಂಪುಟಗಳು ಬರಲು ಕಾರಣರಾದರು. ಸರ್ಕಾರ್ ಅವರೇ ಹೇಳಿದಂತೆ ಸಬಾಲ್ಟರ್ನ್ ಅಥವಾ ತಳದಲ್ಲಿರುವವರ ಚರಿತ್ರೆ ಆರಂಭದ ಸಂಪುಟಗಳಲ್ಲಿ ಬಂದ ಹಾಗೆ ನಂತರದ ಸಂಪುಟಗಳಲ್ಲಿ ಬರಲಿಲ್ಲ. ಆದ್ದರಿಂದ ಅವರು ನಂತರದ ಸಬಾಲ್ಟರ್ನ್ ಸಂಪುಟಗಳನ್ನು ಉಗ್ರವಾಗಿ ಟೀಕಿಸಿದರು. ನಂತರದ ಸಂಪುಟಗಳಲ್ಲಿ “ಯುರೋಪ್ ಕೇಂದ್ರಿತ” ಮತ್ತು “ಆರ್ಥಿಕ ನಿರ್ಧಾರಕತೆ” (ಇಕಾನಾಮಿಕ್ ಡಿಟರ್‌ಮಿನಿಸಂ) ಮತ್ತು “ಸಾರ್ವತ್ರೀಕರಣ”ದ ಹಿನ್ನೆಲೆಯಲ್ಲಿ ಮತ್ತು ಪುನರುತ್ಥಾನ ಕಾಲದ ರ‍್ಯಾಶನಲಿಸಂನ ಉತ್ಪತ್ತಿಯಾದ ಮಾರ್ಕ್ಸ್‌ವಾದವನ್ನು ಸಬಾಲ್ಟರ್ನ್ ಅಧ್ಯಯನ ಕ್ರಮವು ಟೀಕಿಸಿದ್ದನ್ನು ನಾವು ಕಾಣಬಹುದಾಗಿದೆ. ಆದರೂ ಸಬಾಲ್ಟರ್ನ್ ಚರಿತ್ರೆಯ ಮೂಲೋದ್ದೇಶಗಳನ್ನು ಮರೆಯದೆ “ಜ್ಞಾನಕೇಂದ್ರಿತ” ಜಿಜ್ಞಾಸೆಗಳನ್ನು ಗಮನಿಸಿಕೊಂಡು ಮತ್ತು ಅಂತಹ ಜಿಜ್ಞಾಸೆಗಳು ಎತ್ತಿರುವ ವಿಮರ್ಶೆಗಳನ್ನು ಮನನ ಮಾಡಿಕೊಂಡು ಜ್ಞಾನ ಪರಂಪರೆಯ ಪ್ರಕ್ರಿಯೆ ಮುಂದುವರಿಯುವುದು ಭಾರತೀಯ ಚರಿತ್ರೆ ಬರವಣಿಗೆ ಕ್ರಮಕ್ಕೆ ಇನ್ನೊಂದು ವಿನ್ಯಾಸ ನೀಡಿದಂತೆ ಎಂದು ಅಭಿಪ್ರಾಯಪಡಬಹುದು. ಸಬಾಲ್ಟರ್ನ್ ಯೋಜನೆ ವಸಾಹತುಕಾಲದ ಜಿಜ್ಞಾಸೆಗಳಿಗೆ ಮತ್ತು ವಾಙ್ಮಯಗಳಿಗೆ ಸಂಬಂಧಿಸಿ ದ್ದಾದರೂ ರೇಮಂಡ್ ವಿಲಿಯಮ್ಸ್ ಅವರಂಥ ವಿದ್ವಾಂಸರು ವರ್ತಮಾನಕಾಲದ ಆಶಯಗಳಾಗಿ ಹೆಜಿಮನಿಯನ್ನು ಅರ್ಥೈಸಿದ್ದಾರೆ.

[1]

* * *

ಸಬಾಲ್ಟರ್ನ್ ಅಧ್ಯಯನ ಕ್ರಮಕ್ಕೆ ಇದೊಂದು ಹೊಸ ಆಯಾಮ ಎಂದರೆ ಉತ್ಪ್ರೇಕ್ಷೆ ಯಾಗಲಾರದು. ಸಬಾಲ್ಟರ್ನ್ ವಿದ್ವಾಂಸರು ಬಹುತೇಕ ಕಡೆ ವಸಾಹತುಕಾಲವನ್ನು ಸಮಸ್ಯೀಕರಿಸುತ್ತಿದ್ದಾರೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಅವರ ಸಮಸ್ಯೀಕರಣ ವರ್ತಮಾನ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಜಿಜ್ಞಾಸೆಗಳಿಗೆ ಸಂಬಂಧಪಟ್ಟವುಗಳಾಗಿವೆ ಎಂಬುದು ವೇದ್ಯವಾಗುತ್ತದೆ. ಭೂತ ಮತ್ತು ವರ್ತಮಾನ ಕಾಲದ ಶೋಷಣಾ ಕ್ರಮದಲ್ಲಿ ವ್ಯತ್ಯಾಸ ಗಳಿದ್ದರೂ ಆಶಯಗಳು ಒಂದೇ ರೀತಿ ಇರುವುದನ್ನು ನಾವು ಗಮನಿಸಬಹುದು. ವ್ಯವಸ್ಥೆಯ ಸಂಘಟಿತ ಶೋಷಣೆಗೆ ಅಸಾಂಪ್ರದಾಯಿಕವಾಗಿ ತಮ್ಮ ಅಸಹನೆ ತೋರಿಸಿದ, ಶೋಷಣೆಯ ಪರಾಕಾಷ್ಠೆಯ ಸಂದರ್ಭದಲ್ಲಿ ಕೆಳಸ್ತರದವರು ಬಂಡೆದ್ದ, ಬಂಡೆದ್ದರೂ ಎಲೈಟ್ ರಾಜಕಾರಣದಿಂದಾಗಿ ಬಹುತೇಕವಾಗಿ ಈ ಬಂಡಾಯಗಳ ವಿಫಲತೆಯ ಹಾದಿಯನ್ನು ತುಳಿದಿದ್ದ ಅಂಶಗಳು ಗತ ಹಾಗೂ ವರ್ತಮಾನಕಾಲದ ತಾರ್ಕಿಕ ಹಾಗೂ ತಾತ್ವಿಕ ಸಂಬಂಧಗಳನ್ನು ಸೂಚಿಸುತ್ತದೆ. ವಿಫಲತೆಗೆ ಸಂಬಂಧಿಸಿದಂತೆ ಗ್ರಾಂಸಿಯ ಜೊತೆಗೆ ಹಾಬ್ಸ್ ಬಾಮ್, ರೇಮಂಡ್ ವಿಲಿಯಮ್ಸ್, ರಣಜಿತ್ ಗುಹಾ ಮುಂತಾದ ವಿದ್ವಾಂಸರು ಭಿನ್ನಮತವನ್ನು ಹೊಂದಿದ್ದ ವಿಚಾರವನ್ನು ಈಗಾಗಲೇ ಚರ್ಚಿಸಿರುವುದು ಸರಿಯಷ್ಟೆ.  ಈ ವಿದ್ವಾಂಸರ ಪ್ರಕಾರ ಹೋರಾಟದ ಪ್ರಕ್ರಿಯೆಗಳು ಗ್ರಾಂಸಿಯು ತನ್ನ ಜೀವಿತಾವಧಿಯ ಅಂತಿಮ ಘಟ್ಟದಲ್ಲಿ ಅರ್ಥೈಸಿದಂತೆ ಪ್ರತಿಭಟನೆಗಳು ಮತ್ತು ಪ್ರತಿರೋಧಗಳು ವಿಫಲತೆಯ ಹಾದಿಯನ್ನು ಹಿಡಿಯಲೇಬೇಕಾಗಿಲ್ಲ. ಅವುಗಳಿಗೆ ಧನಾತ್ಮಕ ವಿನ್ಯಾಸವೂ ಇವೆ ಎಂದು ಅಭಿಪ್ರಾಯಪಟ್ಟಿರುವುದನ್ನು ನಾವು ಗಮನಿಸಬಹುದಾಗಿದೆ.

ಸಬಾಲ್ಟರ್ನ್ ವಿದ್ವಾಂಸರು ತಳದಿಂದ ಇತಿಹಾಸ ನೋಡುವ ಬಗ್ಗೆ ಅಥವಾ ರೈತರ/ಕೆಳವರ್ಗದ ಹೋರಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಚರಿತ್ರೆ ಬರೆದ ಬಗ್ಗೆ ಇತಿಹಾಸ ಬರವಣಿಗೆಯಲ್ಲಿ ಹೊಸ ಪುಟಗಳನ್ನು ಬರೆದವರು ಎನ್ನುವ ರೀತಿಯ ಠೇಂಕಾರವನ್ನು ಟೀಕಾಕಾರರು ಅದರಲ್ಲೂ ಮಾರ್ಕ್ಸಿಸ್ಟ್ ವಿದ್ವಾಂಸರು ಟೀಕಿಸಿದ್ದು ಸರಿಯಷ್ಟೆ. ಎ.ಆರ್. ದೇಸಾಯಿ, ರವೀಂದರ್ ಕುಮಾರ್, ಮಾಜಿದ್ ಸಿದ್ದಿಕ್, ಸುಮಿತ್ ಸರ್ಕಾರ್ ಮುಂತಾದ ಭಾರತೀಯ ವಿದ್ವಾಂಸರು ಅಥವಾ ಇ.ಪಿ. ಥಾಮ್ಸ್‌ನ್ ಮತ್ತು ಎರಿಕ್ ಹಾಬ್ಸ್‌ವಾಮ್ ಅವರಂತಹ ಇಂಗ್ಲಿಶ್ ವಿದ್ವಾಂಸರು ಯಾವುದನ್ನು ಸಬಾಲ್ಟರ್ನ್ ವಿದ್ವಾಂಸರು ‘ಕೆಳವರ್ಗಗಳ ಚರಿತ್ರೆ’ ಎಂದು ಕರೆದಿದ್ದಾರೋ ಅಧೇ ಬಗೆಯ ಚರಿತ್ರೆಯನ್ನು, ಸಬಾಲ್ಟರ್ನ್ ವಿದ್ವಾಂಸರು ಸಬಾಲ್ಟರ್ನ್ ಸಂಪುಟಗಳನ್ನು ಹೊರತರುವ ಮೊದಲೇ ಬರೆಯಲು ಶ್ರಮಿಸಿದ್ದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಸಬಾಲ್ಟರ್ನ್ ಚರಿತ್ರೆ ಬರವಣಿಗೆಗೆ ಸ್ಫೂರ್ತಿಯಾದುದ್ದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಯಾರು ಕೆಳವರ್ಗಗಳ ಚರಿತ್ರೆಯನ್ನು ಬರೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದರು ಎನ್ನುವ ಜಿಜ್ಞಾಸೆಗಳಿಗಿಂತ ಕೆಳವರ್ಗಗಳ ಚರಿತ್ರೆ ಬರವಣಿಗೆಯ ಆಶಯಗಳು ಇಂದಿನ ಅವಶ್ಯಕತೆಯಾಗಿದೆ. ಮೂಲೆಗೊತ್ತಲ್ಪಟ್ಟ ಸಮುದಾಯಗಳ/ವರ್ಗಗಳ ಚರಿತ್ರೆ ಮತ್ತು ಸಂಸ್ಕೃತಿಯ ಅಧ್ಯಯನಗಳಿಂದಾಗಿ ಇತಿಹಾಸದ ಇನ್ನೊಂದು ಮಗ್ಗುಲನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಮೂಲಕ ಭಾರತದ ಜನಸಂಖ್ಯೆಯ ಬಹುಸಂಖ್ಯಾತರ ಅಂದರೆ ಕೆಳಸಮುದಾಯ/ವರ್ಗಗಳ ಜನರು ಬೆರಳೆಣಿಕೆ ಸಂಖ್ಯೆಯಲ್ಲಿರುವ ಬಲಾಢ್ಯರು ರೂಪಿಸಿದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಚಾರಿತ್ರಿಕವಾಗಿ ನಲುಗಿ ಹೋಗಿರುವ ಪ್ರಕ್ರಿಯೆಯನ್ನು ಅರಿಯಬೇಕಾಗಿದೆ ಮತ್ತು ಅಭ್ಯಸಿಸಬೇಕಾಗಿದೆ.

ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವಾರು ಸಾಮ್ಯತೆಗಳನ್ನು ಹೊಂದಿದ ಭಾರತ ಉಪಖಂಡ, ಲ್ಯಾಟಿನ್ ಅಮೆರಿಕಾ ಮತ್ತು ಆಫ್ರಿಕಾದಲ್ಲಿನ ಸಮುದಾಯ ಪ್ರಜ್ಞೆಗಳ ಪ್ರಭಾವದ ಬಗ್ಗೆ ವಿಮರ್ಶೆಗಳೇನೇ ಇದ್ದರೂ, ಈ ಪ್ರದೇಶಗಳ ಸಬಾಲ್ಟರ್ನ್ ಅಧ್ಯಯನ ಕ್ರಮದ ಮಿತಿಗಳೇನೇ ಇದ್ದರೂ ಇವು ಇಂದಿನ ಜಾಗತಿಕ ರಾಜಕಾರಣಕ್ಕೊಂದು ಪರ‍್ಯಾಯವನ್ನು ಕಂಡುಕೊಳ್ಳುತ್ತಿದೆ. ಭಾರತದ ಸಂದರ್ಭದಲ್ಲಿ ಸಬಾಲ್ಟರ್ನ್ ಆಶಯಗಳು ಮತ್ತು ಸೈದ್ಧಾಂತಿಕತೆಗಳು ಅನೇಕ ಸಂದರ್ಭಗಳಲ್ಲಿ ಮುಖ್ಯವಾಗಿ ಜಾತಿ/ಸಮುದಾಯ/ಧರ್ಮಗಳ ಅಧ್ಯಯನ/ರಾಜಕಾರಣದ ಸಂದರ್ಭದಲ್ಲಿ ಬುಡಕಟ್ಟು/ಮಾವೋಯಿಸ್ಟ್ ಹೋರಾಟಗಳ ಸಂದರ್ಭದಲ್ಲಿ, ರೈತ/ಮಹಿಳೆ/ದಲಿತ ಕಾರ್ಮಿಕ ಇತ್ಯಾದಿ ಪ್ರತಿಭಟನೆಗಳ ಸಂದರ್ಭದಲ್ಲಿ, ಪ್ರತ್ಯೇಕ ರಾಜ್ಯ/ರಾಷ್ಟ್ರ ಮುಂತಾದ ಹೋರಾಟದ ಸಂದರ್ಭಗಳಲ್ಲಿ, ಸೆಕ್ಟೇರಿಯನ್ ಹೋರಾಟಗಳಲ್ಲಿ ಕುಬ್ಜಗೊಂಡಿದ್ದನ್ನು ಕಾಣಬಹುದಾಗಿದೆ. ಕರ್ನಾಟಕದ ಸಂದರ್ಭಕ್ಕೂ ಇದೇ ವಿಚಾರಗಳು ಅನ್ವಯವಾಗುತ್ತದೆ. ಬಹುಸಂಸ್ಕೃತಿ, ಉಪಸಂಸ್ಕೃತಿ, ಅಧೀನ ಸಂಸ್ಕೃತಿ, ಪ್ರತಿಸಂಸ್ಕೃತಿ, ದೌರ್ಜನ್ಯ/ಯಜಮಾನಿಕೆ ಇತ್ಯಾದಿ ಸಬಾಲ್ಟರ್ನ್ ಪರಿಪೇಕ್ಷೆಗಳ ಮೂಲಕ ಸಂಶೋಧನೆ/ಬರಹ ಮಾಡಿದ ಬಹುತೇಕ ಸಂದರ್ಭಗಳಲ್ಲಿ ಸಬಾಲ್ಟರ್ನ್ ರಾಜಕಾರಣದ ತಾತ್ವಿಕತೆಯು ಸೈದ್ಧಾಂತಿಕವಾಗಿ ಅಭಿವ್ಯಕ್ತಗೊಳ್ಳುವಲ್ಲಿ ಅಲ್ಲಲ್ಲಿ ಅಷ್ಟು ಸಫಲತೆ ಕಂಡುಬರದಿದ್ದರೂ ಆ ಬಗೆಯ ಆಶಯಗಳನ್ನು ಬೌದ್ದಿಕ ಲೋಕದಲ್ಲಿ ಹರಿಯ ಬಿಟ್ಟಿರುವುದು ಶ್ಲಾಘನೀಯ.

ಗ್ರಾಂಸಿಯ ಸಾರ್ಡೀನಿಯಾದ ರೈತರ ಮತ್ತು ಅವರಿಗೆ ಸಂಬಂಧಿಸಿದ ವಲಯಗಳ  ಅಸ್ತಿತ್ವ ಹಾಗೂ ಹಿತಾಸಕ್ತಿಗಳನ್ನು ಅಲ್ಲಿನ ಸರ್ಕಾರವು ತೊಟ್ಟಿಗೆಸೆದ ರೀತಿಯಲ್ಲಿಯೇ, ಭಾರತದ ಸಂದರ್ಭದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕ ಅಥವಾ ಇನ್ನೂ ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಸಂದರ್ಭದಲ್ಲಿ ರೈತ ಮತ್ತು ರೈತರಿಗೆ ಸಂಬಂಧಿಸಿದ  ವಲಯಗಳ ಅಸ್ತಿತ್ವ ಮತ್ತು ಹಿತಾಸಕ್ತಿಗಳನ್ನು ಬೆಂಗಳೂರಿನಂತಹ ಶಕ್ತಿಶಾಲಿ ಅಧಿಕಾರ ಕೇಂದ್ರಗಳು ಮತ್ತು ಅವಕ್ಕೆ ಸಂಬಂಧಿಸಿದ ವಲಯಗಳು ಇತಿಹಾಸದುದ್ದಕ್ಕೂ ಕಡೆಗಣಿಸಿದ್ದನ್ನು ಗಮನಿಸಬಹು ದಾಗಿದೆ. ಉಪೇಕ್ಷೆಗೊಳಪಟ್ಟ ದಕ್ಷಿಣ ಭಾರತದ ಅದರಲ್ಲಿಯೂ ಕರ್ನಾಟಕದ ರಾಜಕಾರಣವು/ಇಚ್ಛಾಶಕ್ತಿಯು ದೆಹಲಿಯ ಅತಿಶಕ್ತಿಶಾಲಿ ಪ್ರಭಾವಳಿ ಮುಂದೆ ಸೊರಗುತ್ತಿರುವುದನ್ನು ನಾವು ಇದೇ ಸಂದರ್ಭದಲ್ಲಿ ಗಮನಿಸಬಹುದು. ದೆಹಲಿ ಪ್ರಭುಗಳು ಅಮೆರಿಕದಂತಹ ಸೂಪರ್ ಪವರ್ ಬಳಿ ಸೋತು ಸುಣ್ಣವಾಗುವುದನ್ನು ನೋಡಬಹುದು. ವ್ಯವಸ್ಥೆಗೆ ಸಂಬಂಧಿಸಿದಂತೆ ವಸಾಹತು ಕಾಲದಲ್ಲಿ ಬಹುತೇಕವಾಗಿ ಕಂಡುಬರುವ ಇಂತಹ ಲಕ್ಷಣಗಳು ವಸಾಹತೋತ್ತರ ಕಾಲದ ಚರಿತ್ರೆಯಲ್ಲಿಯೂ ಕಂಡುಬರುವುದು ಆಶ್ಚರ್ಯವೇನಿಲ್ಲ. ಒಂದು ಕಡೆ ದಮನಕಾರಿಯಾದ ವಲಯವು ಇನ್ನೊಂದೆಡೆ ದಮನಕ್ಕೊಳಗಾಗುವ ಪ್ರಕ್ರಿಯೆಗಳು ಅಧ್ಯಯನಾಸಕ್ತರಿಗೆ ಯಾವತ್ತೂ ಕುತೂಹಲ ಕಾರಿಯಾದ ವಿಚಾರವಾಗಿದೆ. ರೈತ ಅಥವಾ ಮೂಲೆಗೊತ್ತಲ್ಪಟ್ಟವರ ಸಂವೇದನೆಗಳನ್ನು ಅಧಿಕಾರ ಕೇಂದ್ರಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದಾದ ಪ್ರಕ್ರಿಯೆಗಳಿಗೆ ಸಬಾಲ್ಟರ್ನ್ ಅಧ್ಯಯನಗಳು ಎತ್ತುತ್ತಿರುವ ಜಿಜ್ಞಾಸೆಗಳು ಪೂರಕವಾಗುವ ಸಂದರ್ಭಗಳು ಹೆಚ್ಚು. ಹೀಗಾಗಿ, ಸಬಾಲ್ಟರ್ನ್ ಅಧ್ಯಯನಗಳು ವಸಾಹತುಶಾಹಿ ಯುಗವು ಕಟ್ಟಿಕೊಟ್ಟ ಬುದ್ದಿಮತ್ತೆಯ ಪ್ರಮೇಯಗಳನ್ನು ಬದಿಗಿರಿಸಿದ ರೀತಿಯಲ್ಲಿ, ವಸಾಹತೋತ್ತರ ಭಾರತದ ರೈತ-ಜನಸಾಮಾನ್ಯರ ಹೊರತಾದ ಶಕ್ತಿ ಕೇಂದ್ರಗಳು ಎತ್ತುತ್ತಿರುವ ‘ಜ್ವಲಂತ’ ಪ್ರಶ್ನೆಗಳನ್ನು ಬದಿಗಿರಿಸಬೇಕಾಗುತ್ತದೆ. ಕನ್ನಡದಲ್ಲಿ ಈ ಬಗೆಯ ವಾಗ್ಮಯಗಳು ಇಂದಿನ ರಾಜಕೀಯ ಹಾಗೂ ಬೌದ್ದಿಕ ಸಂದರ್ಭದ ಅಗತ್ಯಗಳಾಗಿವೆ. ಇಪ್ಪತ್ತನೆಯ ಶತಮಾನದ ಮಧ್ಯಭಾಗದಿಂದ ಪ್ರಭಾವಿಯಾಗಿದ್ದ ರಾಷ್ಟ್ರೀಯ ಮತ್ತು ಮಾರ್ಕ್ಸಿಸ್ಟ್ ಸಿದ್ಧಾಂತಿಗಳ ವೈಚಾರಿಕ ಸಂಘರ್ಷಗಳು  ಪ್ರಸ್ತುತ ಸಂದರ್ಭದಲ್ಲಿ ಮಾರ್ಕ್ಸಿಸ್ಟ್-ಸಬಾಲ್ಟರ್ನ್-ಲಿಬರಲ್/ರಾಷ್ಟ್ರೀಯ ವೈಚಾರಿಕತೆಗಳ ಸಂಕಥನವಾಗಿ ಮುಂದುವರಿದಿರುವುದನ್ನು ಗಮನಿಸಬಹುದು.

ಒಪ್ಪಿತವಾದ ಚರಿತ್ರೆಗೆ ಸವಾಲಾಗಿ ಇಂದಿನ ಸಂದರ್ಭದ ತಾತ್ವಿಕ/ಸೈದ್ಧಾಂತಿಕ ಅವಶ್ಯಕತೆಯಾಗಿ ಸಬಾಲ್ಟರ್ನ್ ಅಧ್ಯಯನ ಕ್ರಮವು ತನ್ನ ಅಂತರ್ಗತವಾಗಿರುವ ಮಿತಿಗಳೊಂದಿಗೆ ಚರಿತ್ರೆ ಬರವಣಿಗೆ ಪ್ರಕ್ರಿಯೆಗೆ ಒಂದು ಹೊಸ ನೋಟವನ್ನು ಪ್ರಭಾವಿಯಾಗಿ ನೀಡುತ್ತಿರುವುದು ಭಾರತೀಯ ಚರಿತ್ರೆ ಬರವಣಿಗೆ ಕ್ರಮದಲ್ಲಿ ಒಂದು ಮುಖ್ಯ ಆಯಾಮವಾಗಿದೆ.


[1] ಹೆಜಿಮನಿ ಅಥವಾ ಯಜಮಾನಿಕೆ ಎನ್ನುವ ಪರಿಭಾಷೆಯನ್ನು ಆರಂಭದಲ್ಲಿ ಕಾರ್ಲ್‌ಮಾರ್ಕ್ಸ್ ಬಳಸಿದ್ದನು. ಆರ್ಥಿಕವಾಗಿ ಸದೃಢವಾಗಿರುವ ಒಂದು ವರ್ಗ ಬಲಹೀನವಾಗಿರುವ ಇನ್ನೊಂದು ವರ್ಗವನ್ನು ತನ್ನ ಶಕ್ತಿ ಸಾಮರ್ಥ್ಯದ ಮೂಲಕ ದಮನ ಮಾಡುವ ಮತ್ತು ಆ ಮೂಲಕ ತನ್ನ ಅಧಿಕಾರವನ್ನು ಸ್ಥಾಪಿಸುವ ಕ್ರಿಯೆಯನ್ನು ‘ಹೆಜಿಮನಿ’ ಎಂದು ಅರ್ಥೈಸಲಾಗಿದೆ. ಗ್ರಾಂಸಿಯು ‘ಹೆಜಿಮನಿ’ಗೆ ಭಿನ್ನವಾದ ಅರ್ಥವನ್ನು ಕೊಟ್ಟಿದ್ದಾನೆ. ಸಮಾಜದ ಬಹುತೇಕ ಗುಂಪು/ಸಮುದಾಯಗಳ ಇಚ್ಛೆ/ಒಪ್ಪಿಗೆಯಂತೆ ಗಳಿಸಿಕೊಂಡ ನೈತಿಕ ಮತ್ತು ತತ್ವ ಶಾಸ್ತ್ರೀಯ (ಫಿಲಸಾಫಿಕಲ್) ನಾಯಕತ್ವವನ್ನು ‘ಹೆಜಿಮನಿ’ ಎಂದು ಅರ್ಥೈಸಲಾಗಿದೆ ಎಂದು ರಾಬರ್ಟ್ ಬೊಕಾಕ್ ತನ್ನ ‘ಹೆಜಿಮನಿ’ ಎನ್ನುವ ಪುಸ್ತಕದಲ್ಲಿ (ಲಂಡನ್, ೧೯೮೬) ಅಭಿಪ್ರಾಯ ಪಟ್ಟಿದ್ದಾನೆ. ಯಾಂತ್ರಿಕ ರೀತಿಯಲ್ಲಿ ಆರ್ಥಿಕತೆಯ ಮೂಲಕ ಮಾತ್ರವೇ ಅರ್ಥೈಸುತ್ತಿದ್ದ ಮಾರ್ಕ್ಸಿಸಂನ ಪರಿಭಾಷೆ ‘ಹೆಜಿಮನಿ’ಯನ್ನು ಗ್ರಾಂಸಿಯು ಭಿನ್ನವಾಗಿ ಅರ್ಥೈಸಿದನು.

ಕ್ರಾಂತಿಗಿಂತ ಮೊದಲು ಕ್ರಾಂತಿಯ ನೇತೃತ್ವ ವಹಿಸುವ ನಾಯಕರು ಮತ್ತು ಜನಸಾಮಾನ್ಯರ ನಡುವೆ ಅವಿನಾಭಾವ ಸಂಬಂಧವಿರಲೇಬೇಕೆಂದು ಈತ ವಾದಿಸಿದ್ದ. ಇಲ್ಲದಿದ್ದರೆ, ಕ್ರಾಂತಿಯ ನಂತರ ಜನಸಾಮಾನ್ಯ ಮತ್ತು ಅಧಿಕಾರಸ್ಥರ ನಡುವಿರುವ ಸಂಬಂಧವು ಅಧಿಕಾರಸ್ಥರ ಸರ್ವಾಧಿಕಾರಿ ಮನೋಭಾವದಿಂದ ಕೂಡಿರುತ್ತದೆ ಎಂದು ಅವನು ನಂಬಿದ್ದನು. ಶೋಷಣೆಗೆ ಒಳಗಾದ ಎಲ್ಲರೂ ತಮ್ಮ ಶಿಕ್ಷಣ ಮತ್ತು ಪರಸ್ಪರ ಒಪ್ಪಂದದಿಂದ “ಫಿಲಾಸಫಿ ಆಫ್ ಪ್ರಾಕ್ಸಿ”ಯನ್ನು ಅಂದರೆ ಮಾರ್ಕ್ಸ್‌ವಾದವನ್ನು ಒಪ್ಪಿಕೊಳ್ಳಬೇಕೇ ವಿನಾ ಯಾವುದೇ ವಾಮ ಮಾರ್ಗದ ಪ್ರಕ್ರಿಯೆಯಿಂದಲ್ಲ ಅಥವಾ ಪಕ್ಷದ ಎಲೈಟ್ ನಾಯಕರ ಆಜ್ಞೆಯನ್ನು ಅನುಸರಿಸುವ ಮೂಲಕ ಅಲ್ಲ ಎಂದು ಗ್ರಾಂಸಿಯು ‘ಹೆಜಿಮನಿ’ಗೆ ಅರ್ಥ ವಿವರಣೆ ನೀಡಿದ್ದಾನೆ. ‘ಜೀವಂತವಿರುವ ಹೆಜಿಮನಿ’ ಎಂದರೆ ‘ಅದೊಂದು ಪ್ರಕ್ರಿಯೆ’ ಎಂದು ರೇಮಂಡ್ ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಹೆಜಿಮನಿ ಎಂದರೆ ಜಿಗುಟಲ್ಲ, ಇದೊಂದು ಬಗೆಯಲ್ಲಿ ಸಂರಚನೆಯನ್ನು ಸವಾಲಿಗೆ ಒಡ್ಡದ ಪ್ರಕ್ರಿಯೆ. ಆದರೆ ಈ ಸಂದರ್ಭದಲ್ಲಿ ಹೆಜಿಮನಿಯ ಸಂಬಂಧಗಳು ಸತತವಾಗಿ ಪುನರಾವೃತ್ತವಾಗಬೇಕು, ಮತ್ತೊಮ್ಮೆ ಸಂಬಂಧಗಳ ಪರಾಮರ್ಶೆಯಾಗಬೇಕು, ಮಾರ್ಪಾಡಿಗೆ ಆಗಾಗ್ಗೆ ಒಗ್ಗಿಕೊಳ್ಳುವಂತಿರಬೇಕು ಎಂದು ಹೆಜಿಮನಿಯನ್ನು ರೇಮಂಡ್ ವಿಲಿಯಮ್ಸ್ ಅರ್ಥೈಸಲು ಪ್ರಯತ್ನಿಸಿದ್ದಾರೆ. ಇಲ್ಲಿ ‘ಹೆಜಿಮನಿ’ಯ ಅಂಶ ಭೂತಕಾಲಕ್ಕೆ ಮಾತ್ರವಲ್ಲ ವರ್ತಮಾನಕ್ಕೂ ಸಂಬಂಧಿಸಿದೆ ಎಂಬ ವಿಚಾರವನ್ನು ಗಮನಿಸಬಹುದಾಗಿದೆ (ವಿಲಿಯಮ್ಸ್ ೧೯೭೭: ೧೧೨-೧೧೩).