ಕನ್ನಡ ಭಾಷೆಯಲ್ಲಿ ಚರಿತ್ರೆ ಬರವಣಿಗೆಗೆ ಸಂಬಂಧಿಸಿದ ಇತ್ತೀಚಿನ ಬರವಣಿಗೆಗಳು ವಿದ್ವಾಂಸರನ್ನು ಮತ್ತು ವಿದ್ಯಾರ್ಥಿಗಳನ್ನು ತಲುಪಬೇಕೆಂಬ ಒತ್ತಾಸೆಯ ಹಿನ್ನೆಲೆಯಲ್ಲಿ ಚರಿತ್ರೆ ಬರವಣಿಗೆಗೆ ಸಂಬಂಧಿಸಿದ ಪ್ರಸ್ತುತ ಕೃತಿಯನ್ನು ಹೊರತರುವ ಪ್ರಯತ್ನವನ್ನು ಮಾಡಿದ್ದೇನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಕೆಳವರ್ಗದ ಹೋರಾಟಗಳನ್ನು ಮತ್ತು ಪ್ರತಿಭಟನೆಗಳನ್ನು ವಿಶ್ಲೇಷಿಸಿರುವ ವಿಚಾರಗಳನ್ನು ಮತ್ತು ಅವುಗಳ ಹಿಂದಿರುವ ಸೈದ್ಧಾಂತಿಕತೆಯನ್ನು ಕನ್ನಡದಲ್ಲಿ ಪರಿಚಯಿಸಬೇಕೆಂಬ ಉಮೇದು ನನ್ನದು.

ಪ್ರಚಲಿತದಲ್ಲಿ ಈಗಾಗಲೇ ಚರ್ಚೆಯಾಗುತ್ತಿರುವ ವಸಾಹತುಶಾಹಿ, ರಾಷ್ಟ್ರೀಯವಾದಿ, ಮಾರ್ಕ್ಸ್‌ವಾದಿ, ಕೇಂಬ್ರಿಡ್ಜ್ ಚರಿತ್ರೆ ಬರವಣಿಗೆ ಬಗ್ಗೆ ಪೂರ್ಣ ಪ್ರಮಾಣದ ವಿವರಗಳನ್ನು ಪ್ರಸ್ತುತ ಕೃತಿಯಲ್ಲಿ ಚರ್ಚಿಸುವ ಗೊಡವೆಗೆ ಹೋಗದೆ ಸಂದರ್ಭಾನುಸಾರವಾಗಿ ಇವುಗಳನ್ನು ಕೃತಿಯುದ್ದಕ್ಕೂ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ಸಬಾಲ್ಟರ್ನ್ ಚರಿತ್ರೆ ಬರವಣಿಗೆಗೆ ಮುಖ್ಯ ಸ್ಫೂರ್ತಿಯಾದ ಆಂಟೋನಿಯೋ ಗ್ರಾಂಸಿಯ ಚಿಂತನೆಗಳು ಮುಖ್ಯವಾದುದು ಎನ್ನುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ಕೃತಿಯಲ್ಲಿ ಈ ಕಾರಣಕ್ಕಾಗಿಯೇ ಗ್ರಾಂಸಿಯ ಬದುಕು ಮತ್ತು ರಾಜಕಾರಣದ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಆ ಮೂಲಕ ವರ್ತಮಾನದ ರಾಜಕಾರಣವನ್ನು ಮತ್ತು ಆ ಬಗೆಯ ರಾಜಕಾರಣವು ರೂಪಿಸುವ ವಿದ್ವತ್‌ವಲಯಗಳ ವಾಙ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವ ನಂಬಿಕೆ ನನ್ನದು. ರಣಜಿತ್ ಗುಹಾ, ಪಾರ್ಥ ಚಟರ್ಜಿ ಮುಂತಾದ ವಿದ್ವಾಂಸರು ಭಾರತದ ಸಂದರ್ಭದಲ್ಲಿ “ಒಪ್ಪಿತವಾಗಿರುವ ಚರಿತ್ರೆ” ಬರವಣಿಗೆ ಕ್ರಮದ ಮೂಲವನ್ನು ಪ್ರಶ್ನಿಸುವ ಮತ್ತು ಅದಕ್ಕೆ ವ್ಯತಿರಿಕ್ತವಾದ ಸಂಶೋಧನಾ ಕ್ರಮಗಳನ್ನು ರೂಪಿಸಿ ಸಬಾಲ್ಟರ್ನ್ ಚರಿತ್ರೆ ಬರವಣಿಗೆ ಕ್ರಮ ಎನ್ನುವ ಒಂದು ಹೊಸ  ಅಧ್ಯಯನ ವಿಧಾನವನ್ನು ಪರಿಚಯಿಸಿದರು. ಈ ಅಧ್ಯಯನ ಕ್ರಮಕ್ಕೂ ಹಲವು ಮಿತಿಗಳನ್ನು ಮೀರಲು ಸಾಧ್ಯವಾಗಲಿಲ್ಲ. ಇದಕ್ಕೆ ಸಂಬಂಧಿಸಿದ ವಿಮರ್ಶೆಗಳನ್ನು ಈ ಕೃತಿಯಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

ಕೆಳಜನತೆಯ ಸಂವೇದನೆ ಮತ್ತು ಪ್ರತಿಭಟನೆಗಳಿಗೆ ಸಂಬಂಧಿಸಿದಂತಿರುವ ಸಬಾಲ್ಟರ್ನ್ ಅಧ್ಯಯನದ ಕೆಲವು ನೆಲೆಗಳನ್ನು ವಿಮರ್ಶಿಸಲು ಪ್ರಸ್ತುತ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಪ್ರಭಾವಿಯಾಗಿರುವ ಸಬಾಲ್ಟರ್ನ್ ವಿಚಾರಧಾರೆಯ ಅನೇಕ ವಿಚಾರಗಳು ಈ ಕೃತಿಯಲ್ಲಿ ಬರದೇ ಹೋದರೆ ಖಂಡಿತವಾಗಿಯೂ ಅದು ಲೇಖಕನ ಮಿತಿಯೆಂದೇ ನಾನು ಭಾವಿಸುತ್ತೇನೆ. ಚರಿತ್ರೆಯ ಅಧ್ಯಯನಕಾರನಾಗಿ ಮಾಡಿದ ಒಂದು ಸಣ್ಣ ಕಸೂತಿ ಕೆಲಸಕ್ಕಿಂತ ಇದು ಹೆಚ್ಚಲ್ಲ ಎಂದು ನಾನು ತಿಳಿದಿದ್ದೇನೆ. ಸಬಾಲ್ಟರ್ನ್ ಅಧ್ಯಯನದ ಸೈದ್ಧಾಂತಿಕತೆಯು ಮಾರ್ಕ್ಸಿಸ್ಟ್ ಪರಿಭಾಷೆಯಾದ ‘ವರ್ಗವನ್ನು’ ಪರಿಗಣಿಸದೇ ಇರುವುದು ಸರಿಯಷ್ಟೆ. ಆದರೂ ಓದುಗರಿಗೆ  ಬಹು ಪರಿಚಯವಿರುವ ‘ವರ್ಗವನ್ನು’ ಬಹುತೇಕರಿಗೆ ತಲುಪಿಸುವ ಉದ್ದೇಶದಿಂದ ಪ್ರಸ್ತುತ ಕೃತಿಯ ಶೀರ್ಷಿಕೆಯಲ್ಲಿ ‘ವರ್ಗವನ್ನು’ ಬಳಸಿಕೊಳ್ಳಲಾಗಿದೆ.

ಚರಿತ್ರೆ ವಿಭಾಗದ ೨೦೦೮-೦೯ರ ವೈಯಕ್ತಿಕ ಯೋಜನೆಯಡಿಯಲ್ಲಿ ಸಬಾಲ್ಟರ್ನ್ ಅಧ್ಯಯನ ಕ್ರಮವನ್ನು ಅಭ್ಯಾಸ ಮಾಡುವ ಸಂದರ್ಭದಲ್ಲಿ ವಿಭಾಗದಲ್ಲಿ ನನಗೆ ಸಹಕರಿಸಿದ ನನ್ನ ಸಹೋದ್ಯೋಗಿಗಳಾದ ಡಾ. ಸಿ.ಆರ್.ಗೋವಿಂದರಾಜು, ಡಾ. ಕೆ.ಮೋಹನ್‌ಕೃಷ್ಣ ರೈ, ಡಾ. ವಿರೂಪಾಕ್ಷಿ ಮತ್ತು ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಕರಡು ಬರಹವನ್ನು ಓದಿ ಸೂಕ್ತವಾದ ಪ್ರತಿಕ್ರಿಯೆ ನೀಡಿದ ಡಾ. ರಾಜಾರಾಮ ಹೆಗಡೆ, ಡಾ. ಜೆ.ಎಸ್.ಸದಾನಂದ, ಡಾ. ಕೆ.ಮೋಹನ್‌ಕೃಷ್ಣ ರೈ, ಶ್ರೀ ಎನ್.ಕೆ.ವಸಂತರಾಜ್, ಶ್ರೀ ಗಂಗಾಧರ ಕುಷ್ಟಗಿ ಮೊದಲಾದ ನನ್ನ ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ.

ಪ್ರಸ್ತುತ ಕೃತಿಯು ಹೊರಬರಲು ಕಾರಣರಾದ ನಮ್ಮ ಮಾನ್ಯ ಕುಲಪತಿಗಳಾದ  ಡಾ. ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ಮೋಹನ ಕುಂಟಾರ್ ಅವರಿಗೆ, ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಮತ್ತು ಶ್ರೀ ಹೆಚ್.ಬಿ.ರವೀಂದ್ರ ಅವರಿಗೆ ನಾನು ಋಣಿಯಾಗಿದ್ದೇನೆ. ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ.ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೋಜಿಸಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ವಿಜಯ್ ಪೂಣಚ್ಚ ತಂಬಂಡ