ಪ್ರಸ್ತುತ ಭಾರತದ ಚರಿತ್ರೆ ಬರವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಾಮ್ರಾಜ್ಯವಾದಿ, ರಾಷ್ಟ್ರೀಯವಾದಿ, ಮಾರ್ಕ್ಸಿಸ್ಟ್, ಕೇಂಬ್ರಿಡ್ಜ್ ವಿದ್ವಾಂಸರ ಸೈದ್ಧಾಂತಿಕತೆಯನ್ನು ಒರೆಹಚ್ಚುವ ಕೆಲಸವನ್ನು ಸಬಾಲ್ಟರ್ನ್ ಅಧ್ಯಯನವು ಕಳೆದ ಎರಡೂವರೆ ದಶಕಗಳಿಂದೀಚೆಗೆ ಮಾಡುತ್ತಿದೆ. ಕಳೆದ ಒಂದು ದಶಕದಲ್ಲಿ ಸಬಾಲ್ಟರ್ನ್ ಅಧ್ಯಯನದ ಬಗ್ಗೆ ಕನ್ನಡದಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗಿದ್ದರೂ ಅದರ ಸೈದ್ಧಾಂತಿಕತೆ, ಹುಟ್ಟು, ಬೆಳವಣಿಗೆ ಮತ್ತು ಪರಿಣಾಮಗಳನ್ನು ಕುರಿತಂತೆ ಸಂಕ್ಷಿಪ್ತವಾಗಿ ಚರ್ಚಿಸಬೇಕೆನ್ನುವ ಇರಾದೆಯಲ್ಲಿ ಪ್ರಸ್ತುತ ಲೇಖನವನ್ನು ರೂಪಿಸಲಾಗಿದೆ. ಇತ್ತೀಚೆಗೆ ಬಹುಬಗೆಯಲ್ಲಿ ಚರ್ಚೆಗೆ ಒಳಗಾಗುತ್ತಿರುವ ಬಹುಸಂಸ್ಕೃತಿ ನೆಲೆಗಳು, ಜಾನಪದ/ಮೌಖಿಕ ಚರಿತ್ರೆಯ ನೆಲೆಗಳು, ಕೆಳಸ್ತರದ ಜನರ/ಸಮುದಾಯಗಳ ಧ್ವನಿಗಳು, ಸಬಾಲ್ಟರ್ನ್ ಅಧ್ಯಯನಕ್ರಮದ ವ್ಯಾಪ್ತಿಯಲ್ಲಿ ಪ್ರತಿಧ್ವನಿಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ನವಸಾಮಾಜಿಕ ಚಳವಳಿಗಳು ಅದರಲ್ಲಿಯೂ ದಲಿತ, ಕಾರ್ಮಿಕ, ರೈತ, ಮಹಿಳೆ, ಐಡೆಂಟಿಟಿ ಇತ್ಯಾದಿ ಚಳವಳಿಗಳ ಸೈದ್ಧಾಂತಿಕತೆಗಳು ಸಬಾಲ್ಟರ್ನ್ ಅಧ್ಯಯನಕ್ರಮದ ಪ್ರಭಾವಕ್ಕೆ ಒಳಗಾಗಿದ್ದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಬಾಲ್ಟರ್ನ್ ಅಧ್ಯಯನಕ್ರಮದ ಮತ್ತು ಸಿದ್ಧಾಂತದ ವಿವಿಧ ನೆಲೆಗಳನ್ನು ಮತ್ತು ಅದರ ಮೇಲಿನ ಟೀಕೆ/ವಿಮರ್ಶೆಗಳನ್ನು ಇದೇ ಲೇಖನದಲ್ಲಿ ಚರ್ಚಿಸಲಾಗಿದೆ. ೧೯೨೦ರ ದಶಕದಲ್ಲಿ ಇಟಾಲಿಯನ್ ಮಾರ್ಕ್ಸಿಸ್ಟರ ಭಿನ್ನಮತೀಯ ಧ್ವನಿಯಾಗಿ ಹೊರಬಂದ ಸಬಾಲ್ಟರ್ನ್ ಅಧ್ಯಯನವು ಒಂದು ಅಧ್ಯಯನ ಶಿಸ್ತಾಗಿ ಬೃಹತ್ ಪ್ರಮಾಣದಲ್ಲಿ ಬೆಳೆದದ್ದು ಭಾರತದ ವಸಾಹತು ಕಾಲವನ್ನು ಮರುವಿಮರ್ಶಿಸಿದ ಸಂದರ್ಭದಲ್ಲಿ ಎನ್ನುವುದು ಇಲ್ಲಿ ಮುಖ್ಯವಾದ ವಿಚಾರವಾಗಿದೆ. ಇಟಲಿಯಲ್ಲಿ ಆಂಟೋನಿಯೊ ಗ್ರಾಂಸಿಯು ವ್ಯಕ್ತಪಡಿಸಿದ ಸೈದ್ಧಾಂತಿಕತೆಗೆ ದಕ್ಷಿಣ ಏಷಿಯಾದ ಸಂದರ್ಭದಲ್ಲಿ ಆ ಸೈದ್ಧಾಂತಿಕತೆಗೆ ಪ್ರಖರತೆಯನ್ನು ಕೊಟ್ಟವರು ಖ್ಯಾತ ಚರಿತ್ರೆಕಾರ ರಣಜಿತ್ ಗುಹಾ ಮತ್ತು ಅವರ ಸಂಗಡಿಗರು. ‘ಒಪ್ಪಿತವಾದ ಚರಿತ್ರೆಯಲ್ಲಿ’ ದಾಖಲಾಗದೆ ಉಳಿದ ಕೆಳಜಾತಿ/ವರ್ಗ/ಸಮುದಾಯಗಳ ಚರಿತ್ರೆಯನ್ನು, ಈ ಗುಂಪುಗಳು ವಸಾಹತುಶಾಹಿಗೆ ಮತ್ತು ಸ್ಥಳೀಯ ಬಲಾಢ್ಯ ವರ್ಗಗಳಿಗೆ ಒಡ್ಡಿದ ಪ್ರತಿಭಟನೆ/ಪ್ರತಿರೋಧಗಳನ್ನು ಆಧರಿಸಿ, ಮೂಲೆಗೊತ್ತಲ್ಪಟ್ಟ ವ್ಯಕ್ತಿಗಳ/ಸಮುದಾಯಗಳ ಧ್ವನಿಗಳನ್ನು ಸಬಾಲ್ಟರ್ನ್ ಅಧ್ಯಯನ ಸಂಪುಟಗಳಲ್ಲಿ ಗುಹಾ ಮತ್ತು ಅವರ ಸಂಗಡಿಗರು ಅಸಾಂಪ್ರದಾಯಿಕ ರೀತಿಯಲ್ಲಿ ದಾಖಲು ಮಾಡಿದರು. ವಸಾಹತುಶಾಹಿ ಶಕ್ತಿಗಳು ಮತ್ತು ಅವಕ್ಕೆ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಂಡ ಕಾಂಗ್ರೆಸ್‌ನ ಮಧ್ಯಮವರ್ಗದ ಹಿತಾಸಕ್ತಿಗಳು ತುಳಿತಕ್ಕೊಳಗಾದ ಸಮುದಾಯಗಳನ್ನು/ಬಡಕಟ್ಟುಗಳನ್ನು ರಾಜಕೀಯ ಸಾಂಸ್ಕೃತಿಕ ಕೇಂದ್ರಗಳಿಂದ ದೂರ ಇಟ್ಟ ಬಗೆಗಳನ್ನು ಅಧ್ಯಯನ ಮಾಡಲು ಸಬಾಲ್ಟರ್ನ್ ಅಧ್ಯಯನಕಾರರು ಅಧ್ಯಯನ ಕ್ರಮವೊಂದನ್ನು ರೂಪಿಸಿದರು. ೧೯೮೦ರ ದಶಕದಲ್ಲಿ ರಣಜಿತ್ ಗುಹಾ ಅವರು ಕೈಗೆತ್ತಿಕೊಂಡ ಸಬಾಲ್ಟರ್ನ್ ಅಧ್ಯಯನ ಯೋಜನೆ ಇಂದು ಸಮಾಜ ವಿಜ್ಞಾನಗಳಲ್ಲಿ ಮಾತ್ರವಲ್ಲದೆ ಸಾಹಿತ್ಯವಲಯಗಳಲ್ಲಿ ಕೂಡ ಪ್ರಭಾವಿಯಾಗಿ ಬೆಳೆದಿದೆ.

ಪ್ರಸ್ತುತ ಲೇಖನದ ಆರಂಭದ ಭಾಗದಲ್ಲಿ ಸಬಾಲ್ಟರ್ನ್ ಅಧ್ಯಯನಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ನೀಡಲಾಗಿದೆ. ಲೇಖನದ ಎರಡನೆಯ ಭಾಗದಲ್ಲಿ ಆಂಟೋನಿಯೊ ಗ್ರಾಂಸಿಯು ಯಾವ ಚಾರಿತ್ರಿಕ ಸಂದರ್ಭದಲ್ಲಿ ಸಬಾಲ್ಟರ್ನ್ ಸೈದ್ಧಾಂತಿಕತೆಯನ್ನು ಅಭಿವ್ಯಕ್ತಪಡಿಸಿದ ಈ ಸೈದ್ಧಾಂತಿಕತೆಗೆ ಸಂಬಂಧಿಸಿದಂತೆ ಗ್ರಾಂಸಿಯೋತ್ತರ ಚರ್ಚೆಗಳನ್ನು ಈ ಭಾಗದಲ್ಲಿ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ಲೇಖನದ ಮೂರನೆಯ ಭಾಗದಲ್ಲಿ ರಣಜಿತ್ ಗುಹಾ ಮತ್ತು ಅವರ ಸಂಗಡಿಗರು ದಕ್ಷಿಣ ಏಷಿಯಾ ಅದರಲ್ಲಿಯೂ ಪ್ರಮುಖವಾಗಿ ಭಾರತದ ಚರಿತ್ರೆ ಬರವಣಿಗೆ ಕ್ರಮವನ್ನು ವಿಶ್ಲೇಷಿಸಿ ಸಬಾಲ್ಟರ್ನ್ ಅಧ್ಯಯನವನ್ನು ಸೈದ್ಧಾಂತೀಕರಿಸಿದ ಬಗೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಪಾರ್ಥ ಚಟರ್ಜಿ, ಡೇವಿಡ್ ಅರ್ನಾಲ್ಡ್ ಮುಂತಾದ ವಿದ್ವಾಂಸರು ಯಾವ ರೀತಿಯಲ್ಲಿ ರಣಜಿತ್ ಗುಹಾ ಅವರ ಬೆನ್ನೆಲುಬಾದರು ಎನ್ನುವ ಚರ್ಚೆಯನ್ನೂ ಈ ಸಂದರ್ಭದಲ್ಲಿ ಮಾಡಲಾಗಿದೆ. ಲೇಖನದ ನಾಲ್ಕನೆಯ ಭಾಗದಲ್ಲಿ ಸಬಾಲ್ಟರ್ನ್ ಅಧ್ಯಯನದ ಮಿತಿಗಳ ಬಗ್ಗೆ ಮಾಡಿದ ವಿಮರ್ಶೆಗಳನ್ನು ಚರ್ಚಿಸಲಾಗಿದೆ. ಲೇಖನದ ಐದನೆಯ ಭಾಗದಲ್ಲಿ ಉಪಸಂಹಾರವಿದೆ.

* * *

ಆರಂಭದಲ್ಲಿ ಮೂರು ಸಂಪುಟಗಳಿಗೆ ಮಾತ್ರ ಮೀಸಲಿದ್ದ ಸಬಾಲ್ಟರ್ನ್ ಸ್ಟಡೀಸ್ ಲೇಖನಗಳು ವಸಾಹತುಗಾರರ ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿಗಳ ‘ಎಲಿಟಿಸಂ’ಗಳು (ಗಣ್ಯವರ್ಗ) ಹುಟ್ಟುಹಾಕಿದ್ದ ಆಶಯಗಳನ್ನು ಮರುವಿಮರ್ಶೆ ಮಾಡುವ ಉದ್ದೇಶವನ್ನು ಹೊಂದಿದ್ದವು. ಪ್ರಸ್ತುತ ೧೨ ಸಂಪುಟಗಳನ್ನು ಕಂಡ ಸಬಾಲ್ಟರ್ನ್ ಸ್ಟಡೀಸ್‌ನ ಆಶಯಗಳು ಜಾಗತಿಕ ಮಟ್ಟದ ಅಕಾಡೆಮಿಕ್ ವಲಯಗಳಲ್ಲಿ ತನ್ನ ಪ್ರಭಾವವನ್ನು ಬೀರಿವೆ. ಈ ಸಂಪುಟಗಳ ಪ್ರಕಟಣಾ ವಿವರಗಳು ಹೀಗಿವೆ:

೧. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೨

೨. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೨, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೩.

೩. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೩, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೪.

೪. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೪, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೫.

೫. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೫, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೭.

೬. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೬, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೯.

೭. ಪಾರ್ಥ ಚಟರ್ಜಿ ಮತ್ತು ಗ್ಯಾನೇಂದ್ರ ಪಾಂಡೆ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೭, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೩.

೮. ಡೇವಿಡ್ ಅರ್ನಾಲ್ಡ್ ಮತ್ತು ಡೇವಿಡ್ ಹಾರ್ಡಿಮನ್ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೮, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೪.

೯. ಶಾಹಿದ್ ಅಮಿನ್ ಮತ್ತು ದೀಪೇಶ್ ಚಕ್ರವರ್ತಿ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೯, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೬

೧೦. ಗೌತಮ್ ಭಾತ್ರಾ, ಗ್ಯಾನ್ ಪ್ರಕಾಶ್ ಮತ್ತು ಸೂಸಿ ಥಾರು (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧೦, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೯.

೧೧. ಪಾರ್ಥ ಚಟರ್ಜಿ, ಪ್ರದೀಪ್ ಜೆಗನಾಥನ್ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧೧, ಪರ್ಮನೆಂಟ್ ಬ್ಲ್ಯಾಕ್, ನವದೆಹಲಿ, ೨೦೦೨.

೧೨. ಎಂ.ಎಸ್.ಎಸ್. ಪಾಂಡಿಯನ್, ಅಜಯ್ ಶರಿಯಾ ಶಾಹಿಲ್ ಮಾಯಾರಂ,  (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧೨, ಪರ್ಮನೆಂಟ್ ಬ್ಲ್ಯಾಕ್, ನವದೆಹಲಿ, ೨೦೦೫.

‘ಸಬಾಲ್ಟರ್ನ್’ ಎನ್ನುವ ಪದವು ಯುರೋಪ್‌ನ ಮಧ್ಯಕಾಲೀನೋತ್ತರ ಸಂದರ್ಭದಲ್ಲಿ ರೈತರನ್ನು ಗುರುತಿಸುತ್ತಿದ್ದವು. ೧೭೦೦ರ ಸಂದರ್ಭದಲ್ಲಿ ರೈತ ಮೂಲವನ್ನು ಹೊಂದಿದ್ದ ಕೆಳವರ್ಗದ ಸೈನಿಕರನ್ನು ‘ಸಬಾಲ್ಟರ್ನ್’ ಎಂದು ಕರೆಯಲಾಗುತ್ತಿತ್ತು. ಆಂಟೋನಿಯೊ ಗ್ರಾಂಸಿಯು (೧೮೯೧-೧೯೩೭) ವರ್ಗಸಂಘರ್ಷದ ಹಿನ್ನೆಲೆಯಲ್ಲಿ ಸಬಾಲ್ಟರ್ನ್ ಐಡೆಂಟಿಟಿಯನ್ನು ಪ್ರಚಾರಪಡಿಸಿದನು. ೧೯೨೦ರ ದಶಕಗಳಲ್ಲಿ ಕಾರಾಗೃಹದಲ್ಲಿದ್ದ ಈತ ಮಾರ್ಕ್ಸ್‌ನ ಪರಿಭಾಷೆಯಾದ ‘ಪ್ರೊಲಟೇರಿಯನ್’ (ಕಾರ್ಮಿಕ) ಎನ್ನುವ ಪದದ ಬದಲಿಗೆ ‘ಸಬಾಲ್ಟರ್ನ್’ ಎಂದು ಅಧಿಕಾರಾರೂಢ ಫಾಸಿಸ್ಟ್ ಸರಕಾರದ ಹದ್ದಿನ ಕಣ್ಣಿನಿಂದ ಪಾರಾಗಲು ಬಳಸುತ್ತಿದ್ದನು ಎಂದು ಗಾಯಿತ್ರಿ ಸ್ಪಿವಾಕ್ ತಿಳಿಸುತ್ತಾರೆ (ಚತುರ್ವೇದಿ ೨೦೦೦: ೩೨೪). ಚಾರಿತ್ರಿಕ ಅಧ್ಯಯನದ ಸಂದರ್ಭದಲ್ಲಿ ಗ್ರಾಂಸಿಯ ಸಿದ್ಧಾಂತಗಳನ್ನು ಸಬಾಲ್ಟರ್ನ್ ಅಧ್ಯಯನಕಾರರು ಬಹಳ ವಿಮರ್ಶಾತ್ಮಕವಾಗಿ ಉಪಯೋಗಿಸಿದರು.

ರಾಜ್ಯಕೇಂದ್ರಿತ ಅಧ್ಯಯನಗಳು ೧೯೭೦ರ ದಶಕದಲ್ಲಿ ವಿನಾಶವಾಗುತ್ತಿದ್ದ ಸಂದರ್ಭದಲ್ಲಿ ಸಮಾಜ ಚರಿತ್ರೆಯನ್ನು ‘ತಳದಿಂದ ನೋಡುವ’ ಅಧ್ಯಯನಗಳು ಪ್ರವರ್ಧಮಾನಕ್ಕೆ ಬಂದವು. ಇ.ಪಿ. ಥಾಮ್ಸನ್ ಅವರು ೧೯೬೩ರಲ್ಲಿ ಪ್ರಕಟಿಸಿದ ‘ದಿ ಮೇಕಿಂಗ್ ಆಫ್ ಇಂಗ್ಲಿಷ್ ವರ್ಕಿಂಗ್ ಕ್ಲಾಸ್’ ಸಬಾಲ್ಟರ್ನ್ ಅಧ್ಯಯನಕಾರರಿಗೆ ಬಹಳ ದೊಡ್ಡ ಸ್ಫೂರ್ತಿಯಾಯಿತು. ೧೯೮೨ರಲ್ಲಿ ಎರಿಕ್ ವೂಲ್ಫ್ ಅವರು ಪ್ರಕಟಿಸಿದ ‘ಯುರೋಪ್ ಆಂಡ್ ದಿ ಪೀಪಲ್ ವಿತೌಟ್ ಹಿಸ್ಟರಿ  ಕೂಡ ಈ ನಿಟ್ಟಿನಲ್ಲಿ ಪ್ರಮುಖವಾದುದು. ಜಾಗತಿಕ ಚರಿತ್ರೆಯನ್ನು ಕೆಳಸ್ಥರದಿಂದ ನೋಡಿದ ಕೃತಿ ಇದು.

ಬ್ರಿಟನ್ನಿನ ಕೆಲವು ಯುವಇತಿಹಾಸಕಾರರ ಜೊತೆಗೂಡಿ ೧೯೭೦ರ ದಶಕದಲ್ಲಿ ಸಬಾಲ್ಟರ್ನ್ ಸ್ಟಡೀಸ್ ಸಂಪುಟಗಳ ಸ್ಥಾಪಕ ಸಂಪಾದಕ ರಣಜಿತ್ ಗುಹಾ ಅವರು ದಕ್ಷಿಣ ಏಷಿಯಾದ ಚರಿತ್ರೆರಚನಾಶಾಸ್ತ್ರದ ಕುರಿತು ಅನೇಕ ಹಂತಗಳಲ್ಲಿ ಚರ್ಚೆಗಳನ್ನೆತ್ತಿಕೊಂಡು ಒಂದು ಹೊಸಬಗೆಯ ಅಕಾಡೆಮಿಕ್ ಬೌದ್ದಿಕತೆಗೆ ಚಾಲನೆಯನ್ನು ನೀಡಿದರು. ಶಾಹಿದ್ ಅಮಿನ್, ಡೇವಿಡ್ ಅರ್ನಾಲ್ಡ್, ಪಾರ್ಥ ಚಟರ್ಜಿ, ಡೇವಿಡ್ ಹರ್ಡಿಮನ್, ಗ್ಯಾನೇಂದ್ರ ಪಾಂಡೆ ಇವರನ್ನೊಳಗೊಂಡ ವಿದ್ವಾಂಸರ ಗುಂಪು ರಣಜಿತ್ ಗುಹಾ ಅವರ ನೇತೃತ್ವದಲ್ಲಿ ಭಾರತದ “ಸ್ವಾತಂತ್ರ್ಯ ಹೋರಾಟದಲ್ಲಿ” ಕೇವಲ “ಗಣ್ಯವ್ಯಕ್ತಿಗಳ” (ಎಲೈಟ್) ಕಾಣಿಕೆಗಳನ್ನು ಮಾತ್ರ ವೈಭವೀಕರಿಸುತ್ತ ಭಾರತದ ರಾಷ್ಟ್ರೀಯ ಚರಿತ್ರೆಯನ್ನು ನಿರ್ವಚಿಸುವ ಪ್ರಯತ್ನಗಳಿಗೆ ತೀವ್ರವಾದ ಆಕ್ಷೇಪಗಳನ್ನೆತ್ತಿದರು. ಇದರಲ್ಲಿ “ಸಾಮಾನ್ಯ ಜನರ ರಾಜಕಾರಣ”ವನ್ನು ಉಪೇಕ್ಷೆ ಮಾಡಿದ್ದರ ಬಗ್ಗೆ ಅವರು ಕ್ರೋಧವನ್ನು ವ್ಯಕ್ತಪಡಿಸಿದರು. ಒಂದರ್ಥದಲ್ಲಿ “ಸಾಂಪ್ರದಾಯಿಕ ಮಾರ್ಕ್ಸಿಸಂ” ಅನ್ನು ವಿಮರ್ಶಿಸುತ್ತ ಮತ್ತು ಕೇಂಬ್ರಿಡ್ಜ್ ಪಂಥದ ನಿಲುವನ್ನು ನಿರಾಕರಿಸುತ್ತಲೇ ಬೆಳೆದ ಹೊಸ ಪಂಥವನ್ನು “ಸಬಾಲ್ಟರ್ನ್ ಸ್ಟಡೀಸ್” ಎನ್ನಬಹುದು. ಇನ್ನೊಂದರ್ಥದಲ್ಲಿ ಆಂಟೋನಿಯೊ ಗ್ರಾಂಸಿ ಅವರ ರಾಜಕೀಯ ಸಿದ್ಧಾಂತಗಳ ಎಳೆಗಳನ್ನು ಈ ಸಂದರ್ಭದಲ್ಲಿ ಮತ್ತಷ್ಟು ಯಶಸ್ವಿಯಾಗಿ ವಿವರಿಸಲು ಯತ್ನಿಸಲಾಗಿದೆ ಎನ್ನಬಹುದು.

೧೯೮೦ರ ದಶಕದ ಆರಂಭದಲ್ಲಿ ಹೊರಬಂದ ಸಬಾಲ್ಟರ್ನ್ ಅಧ್ಯಯನ ಕೃತಿಗಳು ಮುಖ್ಯವಾಗಿ ವಸಾಹತುಕಾಲದ ಚರಿತ್ರೆಯನ್ನು ಕೇಂದ್ರೀಕರಿಸಿಕೊಂಡಿದ್ದರೆ ನಂತರ ಬಂದ ಕೃತಿಗಳು ಬಹುತೇಕವಾಗಿ ಪ್ರಾಂತೀಯ ಚರಿತ್ರೆಯ ರಚನೆಯ ಕಡೆಗೆ ಒತ್ತುಕೊಟ್ಟವು. ೧೯೮೦ರ ದಶಕದ ಕೊನೆಯ ಭಾಗದಲ್ಲಿ ಈ ಅಧ್ಯಯನವು ಆಂಗ್ಲೊ-ಅಮೆರಿಕನ್ ಚಾರಿತ್ರಿಕ ವಲಯಗಳಲ್ಲಿ ವಸಾಹತೋತ್ತರವಾದ ಮತ್ತು ಸಂಸ್ಕೃತಿ ಅಧ್ಯಯನಗಳು ರೂಪಿಸಿದ ಅಧ್ಯಯನಕ್ಕೆ ತೆರೆದುಕೊಂಡವು. ೧೯೯೩ರಲ್ಲಿ ಲ್ಯಾಟಿನ್ ಅಮೆರಿಕನ್ ಸಬಾಲ್ಟರ್ನ್ ವಿದ್ವಾಂಸರ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದವು. ಇದರೊಂದಿಗೆ ಆಫ್ರಿಕಾ, ಚೀನಾ, ಐರ್ಲೆಂಡ್, ಲ್ಯಾಟಿನ್ ಅಮೆರಿಕಾ ಮತ್ತು ಪ್ಯಾಲೆಸ್ಟೈನ್‌ಗಳಲ್ಲಿ ಹೊರಬಂದ ಸಬಾಲ್ಟರ್ನ್ ಚಿಂತನೆಗಳ ಅಧ್ಯಯನಗಳ ಪ್ರಭಾವವು ಸಬಾಲ್ಟರ್ನ್ ಸ್ಟಡೀಸ್‌ನ ವ್ಯಾಪಕತೆಗೆ ಸಾಕ್ಷಿಯಾಗಿವೆ.

* * *

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇತಿಹಾಸಕಾರ ವಿನಾಯಕ ಚರ್ತುವೇದಿ ಅವರು ಸಬಾಲ್ಟರ್ನ್ ಸ್ಟಡೀಸ್‌ನ ಬೌದ್ದಿಕತೆಯ ಆರಂಭಿಕ ಹಂತಗಳನ್ನು ತಮ್ಮ ‘ಮ್ಯಾಪಿಂಗ್ ಸಬಾಲ್ಟರ್ನ್ ಸ್ಟಡೀಸ್  ಎಂಡ್ ದಿ ಪೋಸ್ಟ್ ಕಲೋನಿಯಲ್” ಎನ್ನುವ ಕೃತಿಯಲ್ಲಿ (೨೦೦೦) ಗುರುತಿಸಿದ್ದಾರೆ. ರಣಜಿತ್ ಗುಹಾ ಅವರಿಗೆ ಗುರುಗಳು ಮತ್ತು ಮಾರ್ಗದರ್ಶಕರಾಗಿದ್ದ ಸುಶೋಭನ್ ಸರ್ಕಾರ್ ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು. ಭಾರತದ ಮಟ್ಟಿಗೆ ಸಬಾಲ್ಟರ್ನ್ ಚಿಂತನೆಗಳನ್ನು ಪರಾಮರ್ಶಿಸಲು ಪ್ರಯತ್ನಿಸಿದ ಮೊದಲನೆಯ ವಿದ್ವಾಂಸರು ಸುಶೋಭನ್ ಸರ್ಕಾರ್. “ಎ ರೂಲ್ ಆಫ್ ಪ್ರಾಪರ‍್ಟಿ ಫಾರ್ ಬೆಂಗಾಲ್” (೧೯೬೩, ಪ್ಯಾರಿಸ್) ಎನ್ನುವ ಪುಸ್ತಕವನ್ನು ರಣಜಿತ್ ಗುಹಾ ಅವರು ಸುಶೋಭನ್ ಸರ್ಕಾರ್ ಅವರಿಗೆ ಅರ್ಪಿಸಿದ್ದು ಎಷ್ಟು ಗಮನಾರ್ಹವೋ ಅಷ್ಟೇ ಗಮನಾರ್ಹವಾದ ಸಂಗತಿ ಎಂದರೆ ಆ ಪುಸ್ತಕದಲ್ಲಿ ಗ್ರಾಂಸಿಯ ಬರವಣಿಗೆಗಳನ್ನು ಪ್ರಸ್ತಾಪಿಸಿರುವ ವಿಚಾರವಾಗಿದೆ. ೧೯೫೦ರ ದಶಕದಲ್ಲಿ ಪಾಶ್ಚಾತ್ಯ ಬೌದ್ದಿಕ ಜಗತ್ತಿಗೆ ಗ್ರಾಂಸಿಯ ಪರಿಚಯ ಆಗುವುದಕ್ಕಿಂತ ಮೊದಲೇ ಸುಶೋಭನ್ ಸರ್ಕಾರ್ ಗ್ರಾಂಸಿಯ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ ವಿಚಾರ ನಮಗೆ ತಿಳಿದುಬರುತ್ತದೆ. ೧೯೫೮-೫೯ರಲ್ಲಿ ಔಧಪುರ  ವಿಶ್ವವಿದ್ಯಾಲಯದಲ್ಲಿ ಸರ್ಕಾರ್ ಅವರ ಸಹೋದ್ಯೋಗಿಯಾದ ಗುಹಾ ಅವರು ಸರ್ಕಾರ್ ಅವರೊಂದಿಗೆ ಈ ಕುರಿತಂತೆ ನಿರಂತರ ಬೌದ್ದಿಕ ಚರ್ಚೆಯಲ್ಲಿದ್ದರು. ೧೯೬೮ರಲ್ಲಿ ಈ ಹಿನ್ನೆಲೆಯಲ್ಲಿ ಗುಹಾ ಅವರು “ದಿ ಥಾಟ್ ಆಫ್ ಗ್ರಾಂಸಿ” ಎನ್ನುವ ಪ್ರಕಟಣೆಯನ್ನು ಹೊರತಂದಿರುವುದು ಆಶ್ಚರ್ಯ ವೆಂದೇನು ಅನ್ನಿಸುವುದಿಲ್ಲ. ಗ್ರಾಂಸಿಯು ಬರೆದ “ದಿ ಮಾಡರ್ನ್ ಪ್ರಿನ್ಸ್ ಆಂಡ್ ಅದರ್ ಎಸ್ಸೇಸ್” ಎನ್ನುವ ಸಣ್ಣ ಪುಸ್ತಿಕೆಯ ಭಾಷಾಂತರವನ್ನು ಮಾಡಿದ ಸುಶೋಭನ್ ಸರ್ಕಾರ್ ಬಂಗಾಳದ ಚರಿತ್ರೆಕಾರರ ಗಮನ ಸೆಳೆದಿರುವುದು ಗಮನಾರ್ಹವಾಗಿದೆ.

ಭಾರತದಲ್ಲಿ ನಡೆದ ಈ ಬೆಳವಣಿಗೆಗಳ ನಡುವೆಯೂ ೧೯೬೦ರ ದಶಕದಲ್ಲಿ ಇಂಗ್ಲಿಶ್ ಮಾರ್ಕ್ಸಿಸ್ಟರಿಂದ ಸಬಾಲ್ಟರ್ನ್ ಅಧ್ಯಯನವು ಬೌದ್ದಿಕ ವಲಯಗಳ ಗಮನ ಸೆಳೆಯಿತು. ಗ್ರಾಂಸಿಯ ಬರವಣಿಗೆಗಳು ಇಂಗ್ಲಿಷ್ ಮಾರ್ಕ್ಸಿಸಂನ್ನು ಸ್ಥಿತ್ಯಂತರ ಮಾಡುವಲ್ಲಿ ಪ್ರಭಾವಶಾಲಿ ಯಾಗುತ್ತಲೇ ಸಬಾಲ್ಟರ್ನ್ ಅಧ್ಯಯನಗಳು ಇಂಗ್ಲೆಂಡಿನಲ್ಲಿ ಹೊಸ ವಿನ್ಯಾಸವನ್ನು ಹೊಂದಿದವು. ಎರಿಕ್ ಹಾಬ್ಸ್‌ವಾಮ್ ಅವರ ಬರಹಗಳು ಈ ನಿಟ್ಟಿನಲ್ಲಿ ಬಹುಮುಖ್ಯವಾದವು.  ೧೯೬೦ರ ಸುಮಾರಿಗೆ ಎರಿಕ್ ಹಾಬ್ಸ್‌ವಾಮ್ ಪ್ರಕಟಿಸಿದ “ಪ್ರಿಮಿಟಿವ್ ರೆಬೆಲ್ಸ್” (ಮ್ಯಾಂಚೆಸ್ಟರ್ ಪ್ರೆಸ್, ೧೯೭೧) ಎನ್ನುವ ಕೃತಿ ಹಾಗೂ ‘ಸೊಸೈಟಿ’ ಎನ್ನುವ ಇಟಾಲಿಯನ್ ನಿಯತಕಾಲಿಕೆಯಲ್ಲಿ (೧೬, ೧೯೬೦) ಅವರು ಪ್ರಕಟಿಸಿದ “ಹಿಸ್ಟರಿ ಆಫ್ ಸಬಾಲ್ಟರ್ನ್ ಕ್ಲಾಸಸ್” ಎನ್ನುವ ಲೇಖನಗಳು ಚರಿತ್ರೆಯಲ್ಲಿ ರೈತ ಸಮಾಜಗಳನ್ನು (ಪೆಸೆಂಟ್ ಸೊಸೈಟೀಸ್) ಅಧ್ಯಯನವನ್ನು ಕೈಗೊಳ್ಳಲು ಸ್ಫೂರ್ತಿಯಾದವು. ಒಪ್ಪಿತವಾದ ಚರಿತ್ರೆ ಬರವಣಿಗೆಯಲ್ಲಿ ಅಪರಾಧೀಕರಣ ಮತ್ತು ಹಿಂದುಳಿದಿರುವುದಕ್ಕೆ ಮೀಸಲಾಗಿದ್ದ “ರೈತರ ಚರಿತ್ರೆ”ಯನ್ನು ಹಾಬ್ಸ್‌ಬಾಮ್ ಅವರು ವಿವೇಚಿಸಿರುವುದನ್ನು ನೋಡಬಹುದು. ರಣಜಿತ್ ಗುಹಾ ಅವರು ೧೯೮೩ರಲ್ಲಿ ಪ್ರಕಟಿಸಿದ “ಎಲಿಮೆಂಟರಿ ಆಸ್‌ಪೆಕ್ಟ್ಸ್ ಆಫ್ ಪೆಸೆಂಟ್ ಇನ್‌ಸರ್ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ” ಎನ್ನುವ ಕೃತಿ ನೇರವಾಗಿ ಹಾಬ್ಸ್‌ವಾಮ್ ಅವರಿಂದ ಪ್ರಭಾವಿತವಾಗಿದೆ ಎನ್ನುವುದು ಗಮನಾರ್ಹವಾದ ವಿಚಾರ. ೧೯೬೦ರ ದಶಕದಿಂದ ತೀರಾ ಇತ್ತೀಚಿನವರೆಗೂ ಗ್ರಾಂಸಿಯ ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸಿ ಇಟಲಿಯಿಂದ ಹೊರಗೆ ಈ ಚರ್ಚೆಗಳು ವ್ಯಾಪಕವಾಗಲು ಪೆರಿ ಯಾಂಡರ್ಸನ್ ಮತ್ತು ಟಾಮ್ ನೇರನ್ ಮುಂತಾದವರು “ನ್ಯೂ ಲೆಫ್ಟ್ ರಿವ್ಯೂ”ನಲ್ಲಿ ಬರೆದ ಲೇಖನಗಳು ಕಾರಣವಾದವು. ರೇಮಂಡ್ ವಿಲಿಯಮ್ಸ್ ಮತ್ತು ಸ್ಟೂವರ್ಟ್ ಹಾಲ್‌ಗಳಂತಹ ಬ್ರಿಟಿಶ್ ವಿದ್ವಾಂಸರ ಮೂಲಕ ೧೯೭೦ರ ದಶಕದಲ್ಲಿ ಗ್ರಾಂಸಿಯ ತತ್ವಗಳು ಚರಿತ್ರೆ ಬರವಣಿಗೆಯ ಹೊಸ ಆಯಾಮಗಳಿಗೆ ಗ್ರಾಸವನ್ನು ಒದಗಿಸಿತು. ಯುರೋಪಿನ ರಾಜ್ಯವ್ಯವಸ್ಥೆಗಳ ಅಭಿವೃದ್ದಿಯ ಸ್ವರೂಪವು ಅಸಮಾನವಾಗಿರುವ ಅಂಶಗಳನ್ನು ವಸಾಹತುಶಾಹಿ ಭಾರತದ ಜೊತೆಗಿನ ಅವುಗಳ ಸಂಬಂಧಗಳನ್ನು ನಿರ್ವಚಿಸುವ ಆಂಡರ್‌ಸನ್ ಮತ್ತು ನೇರನ್ ಅವರು ಸಬಾಲ್ಟರ್ನ್ ಅಧ್ಯಯನಕ್ಕೆ ಹೊಸ ರೂಪರೇಷೆಯನ್ನು ನೀಡಿದರು. ಕಾರ್ಮಿಕರ, ರೈತರ ಮತ್ತು ಸಾಮಾನ್ಯ ಜನರ ಐತಿಹಾಸಿಕ ಅನುಭವಗಳನ್ನು ‘ಮರು’ ಕಟ್ಟುವುದರೊಂದಿಗೆ (ರೀಕನ್‌ಸ್ಟ್ರಕ್ಷನ್) ಬ್ರಿಟಿಶ್ ಚರಿತ್ರೆಕಾರರಾದ ಇ.ಪಿ. ಥಾಮ್ಸನ್, ಕ್ರಿಸ್ಟೋಫರ್ ಹಿಲ್ ಮತ್ತು ರೋಡ್ನಿ ಹಿಲ್ಟನ್ ಅವರು ಜಾಗತಿಕ ಮಟ್ಟದಲ್ಲಿ ಈ ಬಗೆಯ ಕ್ರಾಂತಿಕಾರಿ ಒಳನೋಟಗಳನ್ನು ಖ್ಯಾತಿಗೊಳಿಸಿದರು. ಗಣ್ಯ(ಎಲೈಟ್) ವಿದ್ವಾಂಸರು/ಚರಿತ್ರೆಕಾರರು ಕಟ್ಟಿದ ಚರಿತ್ರೆಗಿಂತ ಭಿನ್ನವಾಗಿ ‘ಕೆಳಗಿನವರ ಚರಿತ್ರೆ’ಗಳನ್ನು (ಹಿಸ್ಟರೀಸ್ ಫ್ರಂ ಬಿಲೋ) ಭಾರತದ ವಸಾಹತುಕಾಲದ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೊರತರಲು ಭಾರತದ ಸಬಾಲ್ಟರ್ನ್ ಚರಿತ್ರೆಕಾರರು ರಣಜಿತ್ ಗುಹಾ ಅವರ ನೇತೃತ್ವದಲ್ಲಿ ಸಬಾಲ್ಟರ್ನ್ ಸಂಪುಟಗಳನ್ನು ತರಲು ಸಾಧ್ಯವಾಯಿತು.

ರಣಜಿತ್ ಗುಹಾ ಅವರಿಗಿಂತ ಭಿನ್ನವಾಗಿ ಸಬಾಲ್ಟರ್ನ್ ಅಥವಾ ಕೆಳಗಿನವರ ಚರಿತ್ರೆಯನ್ನು ನಿರ್ವಚಿಸಲು ಪ್ರಯತ್ನಿಸಿದವರು ರಾಬರ್ಟ್ ಬ್ರೆನರ್. ಇವರು “ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳ ವ್ಯವಸ್ಥೆಗೆ ಸ್ಥಿತ್ಯಂತರ” (ಟ್ರಾನ್ಸಿಷನ್ ಫ್ರಂ ಫ್ಯೂಡಲಿಸಂ ಟು ಕ್ಯಾಪಿಟಲಿಸಂ)  ಹೊಂದಿದ್ದ ವಿದ್ಯಮಾನಗಳನ್ನು ಕುರಿತು ನಿರ್ವಚಿಸಿದ ಪ್ರಮುಖ ವಿದ್ವಾಂಸರು. ಮಾರ್ಕ್ಸಿಸ್ಟ್ ಚರಿತ್ರೆಯನ್ನು ರೂಪಿಸುವಲ್ಲಿ ಸಾಂಪ್ರದಾಯಿಕವಾಗಿ ಪ್ರಭಾವಿ ಪಾತ್ರ ವಹಿಸುವ “ಆರ್ಥಿಕ ನಿರ್ಧಾರಕತೆ” (ಇಕಾನಮಿಕ್ ಡಿಟರ್‌ಮಿನಿಸಂ) ಬದಲು “ಪ್ರತಿಭಟನೆ ಮತ್ತು ಹೋರಾಟಗಳ” ಮೂಲಕ ಚರಿತ್ರೆಯ ಪ್ರಕ್ರಿಯೆಗಳನ್ನು ನಿರ್ವಚಿಸಬಹುದು ಎಂದು ವ್ಯಾಖ್ಯಾನಿಸಿದವರು ಬ್ರೆನರ್ ಅವರು. ಭಾರತದಲ್ಲಿ ಪ್ರಮುಖವಾಗಿ ಪಾರ್ಥ ಚಟರ್ಜಿಯವರು ಬ್ರೆನರ್ ಅವರ ಮಾದರಿಯನ್ನು ಪ್ರಶಂಸಿಸಿದ್ದು ಮಾತ್ರವಲ್ಲ, ಬ್ರೆನರ್ ಅವರ ಮಾರ್ಕ್ಸಿಸ್ಟ್ ಸೋಶಿಯಲ್ ಥಿಯರಿಯನ್ನು ಫೂಕೊ ಕೇಂದ್ರಿತ “ಅಧಿಕಾರ”ದ ಅಂಶಗಳ ಮೂಲಕ ೧೯ ಮತ್ತು ೨೦ನೇ ಶತಮಾನದ ಭಾರತದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಇದು ಸಬಾಲ್ಟರ್ನ್ ರಾಜಕೀಯದ ಮೂಲಭೂತ ಅಂಶವಾದ ‘ಸಮುದಾಯ’ದ(ಕಮ್ಯುನಿಟಿ) ಬಗ್ಗೆ ಬರೆಯಲು ಪ್ರಾಥಮಿಕವಾದ ಮಾದರಿಯಾಯಿತು.

* * *

೧೯೭೦ರ ದಶಕದ ಭಾರತದ ರಾಜಕೀಯ ಬೆಳವಣಿಗೆಗಳ ಭ್ರಮನಿರಸನವನ್ನು ಪ್ರತಿಫಲಿಸುವಂತೆ ಸಬಾಲ್ಟರ‍್ಟ್ ಅಧ್ಯಯನದ ಯೋಜನೆ ರೂಪಿತವಾಯಿತು. ಆ ಮೂಲಕ ಕ್ರಾಂತಿಕಾರಿ ಸಿದ್ಧಾಂತಗಳ ಹಾಗೂ ಜನಹೋರಾಟದ(ಮಾಸ್ ಸ್ಟ್ರಗಲ್) ನಡುವಿನ ಸಂಬಂಧಗಳನ್ನು ಶೋಧಿಸುವ  ಸಂಶೋಧನೆಗಳು ಆರಂಭವಾದವು. ೧೯೭೦ರ ದಶಕದ ಕೊನೆಯಲ್ಲಿ ಭಾರತದ ಹೊಸ ತಲೆಮಾರಿನ ಕೆಲವು ಬುದ್ದಿಜೀವಿಗಳು ಚೀನಾ ಹೋರಾಟದ ಎಡಪಂಥೀಯ ಧೋರಣೆಗಳಿಂದ ಪ್ರಭಾವಿತರಾದರು. ಅದು ಒಂದು ಬಗೆಯಲ್ಲಿ ಅಲ್ಲಿಯವರೆಗೂ ಭಾರತದ ರಾಜಕಾರಣದಲ್ಲಿ ಯಜಮಾನಿಕೆಯನ್ನು ನಡೆಸುತ್ತಿದ್ದ ಅಖಿಲ ಭಾರತೀಯ ಕಾಂಗ್ರೆಸ್‌ನ ಹಿತಾಸಕ್ತಿಗಳಿಗೆ ಸವಾಲಾಯಿತು. ನಕ್ಸಲ್‌ಬಾರಿಯಲ್ಲಿ ಮಾವೋವಾದಿಗಳು ನಡೆಸಿದ ಹೋರಾಟದ ನಂತರ ಅದರಲ್ಲಿಯೂ ಪ್ರಮುಖವಾಗಿ ೧೯೭೫-೭೭ರ ಅವಧಿಯಲ್ಲಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ಅಭಿವ್ಯಕ್ತಿಯಾಗಿದ್ದ ತುರ್ತುಪರಿಸ್ಥಿತಿಯ ನಂತರ ಸಬಾಲ್ಟರ್ನ್ ಅಧ್ಯಯನಗಳು ಪ್ರಭಾವಶಾಲಿಯಾಗಿ ಆರಂಭವಾದವು.

ಸ್ವಾತಂತ್ರ್ಯದ ನಂತರ ಭಾರತೀಯ ಯುವಚರಿತ್ರೆಕಾರರು ಕೇಂಬ್ರಿಡ್ಜ್ ಸ್ಕೂಲಿನ ಸಿದ್ಧಾಂತಗಳ ಮುಖ್ಯವಾಗಿ ಫ್ಯಾಕ್ಷನ್ ಥಿಯರಿ ಅಥವಾ ಜಾತಿಕೇಂದ್ರಿತ ವಾದಗಳ ಅಥವಾ ಅಮೆರಿಕನ್ ಓರಿಯಂಟಲಿಸ್ಟ್ ‘ಸಮುದಾಯ’ ಮತ್ತು ದಕ್ಷಿಣ ಏಷ್ಯಾದ ಚಿಂತನೆಯ ಹುಡುಕಾಟದ ಸಂಶೋಧನೆಗಳ ಭರಾಟೆಗಳಿಂದ ಬೇಸತ್ತು ಹೋಗಿದ್ದರು. ಇವೆರಡು ಸೈದ್ಧಾಂತಿಕ ನೆಲೆಗಳು ಇನ್ನೂ ವಿಸ್ತಾರಗೊಳ್ಳಬೇಕೆಂದು ಈ ಯುವ ಚರಿತ್ರೆಕಾರರು ಆಶಿಸತೊಡಗಿದರು.

ತನ್ನ ವಿದ್ಯಾರ್ಥಿ ದೆಸೆಯಲ್ಲಿ ಮಾವೋಯಿಸ್ಟ್ ವಿದ್ಯಾರ್ಥಿ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಣಜಿತ್ ಗುಹಾ ಅವರು ರಾಜಕೀಯ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂಸಾತ್ಮಕ ಸ್ವರೂಪದ ಸಬಾಲ್ಟರ್ನ್ ಸಂವೇದನೆಗಳನ್ನು ಸಿದ್ಧಾಂತೀಕರಿಸಿರು ವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ೧೯೮೨ರಲ್ಲಿ ಸಬಾಲ್ಟರ್ನ್ ಅಧ್ಯಯನ ಸಂಪುಟಗಳ ಯೋಜನೆ ಆರಂಭವಾಯಿತು. ನವದೆಹಲಿಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಸಬಾಲ್ಟರ್ನ್ ಸ್ಟಡೀಸ್‌ನ ಮೊದಲನೆಯ ಸಂಪುಟ (೧೯೮೩), ಎರಡನೆಯ ಸಂಪುಟ (೧೯೮೩), ಮೂರನೆಯ ಸಂಪುಟ (೧೯೮೪) ಮತ್ತು ನಾಲ್ಕನೆಯ ಸಂಪುಟಗಳನ್ನು (೧೯೮೫) ಪ್ರಕಟಿಸಿದವು. ಈ ನಾಲ್ಕು ಸಂಪುಟಗಳ ಸಂಪಾದಕರಾಗಿ ರಣಜಿತ್ ಗುಹಾ ಅವರು ಕಾರ್ಯವಹಿಸಿದರು. ೧೯ ಮತ್ತು ೨೦ನೇ ಶತಮಾನದ ಭಾರತದ “ಕೆಳಸ್ತರದ” ಚರಿತ್ರೆಯನ್ನು ಕಟ್ಟಲು ಗುಹಾ ಅವರು ಶ್ರಮಿಸಿದರು. ಈ ಸಂಪುಟಗಳಲ್ಲಿ ಐದನೆಯದನ್ನು (೧೯೮೭) ಮತ್ತು ಆರನೆಯದನ್ನು (೧೯೮೯) ಕೂಡ ರಣಜಿತ್ ಗುಹಾ ಅವರೇ ಸಂಪಾದಿಸಿದರು. ಈ ಕೃತಿಗಳಲ್ಲಿರುವ ಲೇಖನಗಳು ಕೇವಲ ಕೆಳಸ್ತರದ ಅಧ್ಯಯನ ಮಾಡುವುದಕ್ಕೆ ಮಾತ್ರ ಮೀಸಲಾಗದೆ ಯುರೋಪ್‌ಕೇಂದ್ರಿತ ಬರವಣಿಗೆಗಳನ್ನು ಸವಾಲಿಗೊಡ್ಡಿದವು. ಇದರೊಂದಿಗೆ ಮೆಟ್ರೋಪಾಲಿಟನ್ ಮತ್ತು ಅಧಿಕಾರಿಶಾಹಿಗಳು ರೂಪಿಸಿದ “ಜ್ಞಾನಪರಂಪರೆಗೂ” ಸಬಾಲ್ಟರ್ನ್ ಅಧ್ಯಯನಗಳು ಸವಾಲನ್ನೊಡ್ಡಿದವು. ಜ್ಞಾನಪರಂಪರೆಯಿಂದ ಹೊರಗಿದ್ದ “ರೈತ ಸಂವೇದನೆ ಮತ್ತು ಪ್ರತಿಭಟನೆ” ಮತ್ತಿತರ ಸಂಬಂಧಿತ ವಿಚಾರಗಳನ್ನು ಸಬಾಲ್ಟರ್ನ್ ಅಧ್ಯಯನಕಾರರು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದರು.

೧೯೮೦ರ ದಶಕದಲ್ಲಿ ಭಾರತದ ಉದ್ದಗಲಕ್ಕೂ ಸಬಾಲ್ಟರ್ನ್ ಅಧ್ಯಯನದ ಬಗ್ಗೆ ವ್ಯಾಪಕವಾದ ಚರ್ಚೆಗಳಾದವು. ಉತ್ತರ ಅಮೆರಿಕಾ ಮತ್ತು ಬ್ರಿಟನ್ನಿನಲ್ಲಿ ಕೂಡ ಇದರ ಪ್ರತಿಧ್ವನಿಗಳು ಕೇಳಿಸಿತು. ಕೇಂಬ್ರಿಡ್ಜ್‌ನ ಇತಿಹಾಸಕಾರರು ಈ ಅಧ್ಯಯನಕ್ಕೆ ಸಂಬಂಧಿಸಿದ ಯೋಜನೆಗೆ ಒಲವು ತೋರಿಸಿದರು. ಸಿ.ಎ. ಬೇಲಿ, ಟಾಮ್ ಬ್ರಾಸ್, ರಾಜ್‌ನಾರಾಯಣ್ ಚಂದ್ರಾವರ್ಕರ್, ರೋಸಲಿಂಡ್ ಓ ಹನಲೂನ್ ಮತ್ತು ಡೇವಿಡ್ ವಾಶ್‌ಬ್ರೂಕ್ ಇವರಲ್ಲಿ ಪ್ರಮುಖರು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಈ ಸಂದರ್ಭದಲ್ಲೇ “ಬಹುಸಂಸ್ಕೃತಿ” ಮೇಲೆ ಚರ್ಚೆಗಳು ತೀವ್ರವಾಗಿದ್ದರಿಂದ ಸಬಾಲ್ಟರ್ನ್ ಅಧ್ಯಯನಗಳು ವಿದ್ವಾಂಸರ ಮನಸೆಳೆದವು. ರೋನಾಲ್ಡ್ ಇಂಡೇನ್ ಅವರು “ವಸಾಹತೋತ್ತರ ಭಾರತದಲ್ಲಿ ಪ್ರಥಮ ಬಾರಿಗೆ ಭಾರತೀಯರು ತಮ್ಮನ್ನು ತಾವು ಪ್ರತಿನಿಧಿಸಿಕೊಂಡಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಬರೆದರು (ಮಾಡರ್ನ್ ಏಷಿಯನ್ ಸ್ಟಡೀಸ್, ೨೦.೦೩.೧೯೮೬, ಪುಟ ೪೪೫). ನಂತರದ ಸಂಪುಟಗಳಲ್ಲಿ ಪ್ರಮುಖವಾಗಿ (೧೯೯೨-೯೯) ಸಬಾಲ್ಟರ್ನ್ ಅಧ್ಯಯನಗಳು “ಸಂಸ್ಕೃತಿ” ಕೇಂದ್ರಿತ ಅಧ್ಯಯನಗಳಿಗೆ ಬಹುಪಾಲು ಮೀಸಲಾಗಿದ್ದನ್ನು ಗಮನಿಸಬಹುದು. ಯು.ಎಸ್.ಎ.ನ ಮಾನವಿಕ ಅಧ್ಯಯನ ವಿಭಾಗಗಳ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾದುದು.