ಇತ್ತೀಚಿನ ವರ್ಷಗಳಲ್ಲಿ ಸಮಕಾಲೀನ ಪಾಶ್ಚಾತ್ಯ ಔದ್ಯೋಗಿಕ ಸಮಾಜದ ರಾಜಕಾರಣದ ಸಂದರ್ಭದಲ್ಲಿ ಪಶ್ಚಿಮದಲ್ಲಿ ಪರಿಷ್ಕಾರಗೊಂಡ ಮಾರ್ಕ್ಸಿಸಂಗೆ ಸಂಬಂಧಿಸಿದಂತೆ ಆಂಟೋನಿಯೋ ಗ್ರಾಂಸಿಯನ್ನು ಉಲ್ಲೇಖಿಸುವುದುಂಟು. ಡೇವಿಡ್ ಅರ್ನಾಲ್ಡ್ ಅವರು  ‘ಗ್ರಾಂಸಿ ಆಂಡ್ ಪೆಸೆಂಟ್ ಸಬಾಲ್ಟರ‍್ನಿಟಿ ಇನ್ ಇಂಡಿಯಾ’ ಎನ್ನುವ (ವಿನಾಯಕ ಚತುರ್ವೇದಿ, ೨೦೦೦)  ಲೇಖನದಲ್ಲಿ ವಿವರಿಸಿದ ಹಾಗೆ ರೈತರು ಮತ್ತು ಗ್ರಾಮೀಣ ಸಮಾಜದ ಬಗ್ಗೆ ಗ್ರಾಂಸಿಯು ಎತ್ತಿಕೊಂಡ ಚರ್ಚೆಯನ್ನು ಇಂಗ್ಲಿಶ್ ವಿದ್ವಾಂಸರು ಅಷ್ಟಾಗಿ ಗಮನಿಸಿಲ್ಲ ಎಂದು ಬರೆಯುತ್ತಾರೆ. ಡೇವಿಡ್ ಅರ್ನಾಲ್ಡರು ಗ್ರಾಂಸಿಯ ಬಗ್ಗೆ ನೀಡಿದ ದೀರ್ಘ ವಿವರಣೆಗಳನ್ನು ಲೇಖನದ ಈ ಭಾಗದುದ್ದಕ್ಕೂ ಬಳಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಗ್ರಾಂಸಿಯ ಬಗ್ಗೆ ಬಂದ ಮನೋಹರ್ ಪ್ರಸಾದ್ ಅವರ ಪ್ರತಿ ಸಂಸ್ಕೃತಿ ಅಂತೋನಿ ಗ್ರಾಂಶ್ಚಿಯ ಚಿಂತನೆಗಳು (೨೦೦೨) ಮತ್ತು ಕೆ. ಫಣಿರಾಜ್ ಅವರ ಅಂಟೋನಿಯೊ ಗ್ರಾಮ್ಷಿ (೨೦೦೩) ಎನ್ನುವ ಕೃತಿಯ ಕೆಲವು ಭಾಗಗಳನ್ನು ಪ್ರಸ್ತುತ ಲೇಖನದ ಈ ಭಾಗದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಬಳಸಿಕೊಳ್ಳಲಾಗಿದೆ. ಗ್ರಾಂಸಿಯ ವೈಯಕ್ತಿಕ ಮತ್ತು ರಾಜಕೀಯ ಜೀವನದ ಬಗ್ಗೆ ಮನೋಹರ ಪ್ರಸಾದ್ ಮತ್ತು ಫಣಿರಾಜ್ ಅವರು ಮನಮುಟ್ಟುವಂತೆ ನೀಡಿರುವ ವಿವರಗಳನ್ನು ಬಹುತೇಕ ಕಡೆ ಅವರ ಭಾಷೆಯಲ್ಲಿಯೇ ಉದ್ಧರಿಸಲಾಗಿದೆ. ಭಿನ್ನಮತೀಯ ಮಾರ್ಕ್ಸ್‌ವಾದಿ ಯೊಬ್ಬನ ಹೃದಯವಿದ್ರಾವಕ ರಾಜಕೀಯ ಜೀವನದ ಮತ್ತು ಅವನ ನಿಷ್ಠುರ ಸೈದ್ಧಾಂತಿಕತೆಯ ಪರಿಚಯವನ್ನು ಈ ಇಬ್ಬರು ಲೇಖಕರು ಮಾಡಿಕೊಡಲು ಯತ್ನಿಸಿದ್ದಾರೆ.

ಕೆ. ಫಣಿರಾಜ್ ಅವರು ಗ್ರಾಂಸಿಯ ಕಾಲದ ಫ್ಯಾಕ್ಟರಿ ಚಳವಳಿಯ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ. ತುಳಿತಕ್ಕೊಳಗಾದ ಕಾರ್ಮಿಕರು ರಕ್ತ ರಹಿತ ಆರ್ಥಿಕ ಬದಲಾವಣೆಯನ್ನು ಯಶಸ್ವಿಯಾಗಿ ತರುತ್ತಿದ್ದ ಸಂದರ್ಭದಲ್ಲಿ ಆಂದೋಳನವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಬಯಸಿದ್ದ ಫ್ಯಾಕ್ಟರಿ ಮಾಲೀಕ ವರ್ಗಗಳಿಂದ ಮತ್ತು ಆಂದೋಳನದ ಒಳಗೇ ಇದ್ದ ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಫ್ಯಾಕ್ಟರಿ ಚಳವಳಿ ಕುಸಿದು ಫಾಸಿಸ್ಟ್ ಶಕ್ತಿಗಳು ರಕ್ತಪಿಸಾಸುಗಳಾಗಿ  ಬೆಳೆದವು. ಫಣಿರಾಜ್ ಅವರು ಈ ಕುರಿತಾಗಿ ಮಾಡಿರುವ ಅಧ್ಯಯನವನ್ನು ಲೇಖನದ ಈ ಭಾಗದಲ್ಲಿ ನೀಡಲಾಗಿದೆ. ಆಧುನಿಕ ಯುರೋಪಿನ ಚರಿತ್ರೆಯಲ್ಲಿ ಇತ್ತೀಚಿನವರೆಗೂ ಈ ಘಟನೆಗಳು ಪಟ್ಟಭದ್ರರಿಂದಾಗಿ ದಾಖಲೆಯಾಗಿರಲಿಲ್ಲ. ಇಂತಹ  ಸಂದರ್ಭದಲ್ಲಿ ಕನ್ನಡದಲ್ಲಿ ಈ ಕುರಿತಾದ ಅವಶ್ಯ ಮಾಹಿತಿಗಳನ್ನು ನೀಡಿದ ಫಣಿರಾಜ್ ಅವರ ಲೇಖನವು ಯುರೋಪಿನ ಚರಿತ್ರೆಯ ಇನ್ನೊಂದು ಮಗ್ಗುಲಿನ ಚಿತ್ರಣವನ್ನು ಯಶಸ್ವಿಯಾಗಿ ನೀಡುತ್ತವೆ.

ಫಾಸಿಸಂನ ಮೇಲೆ ಈಗಾಗಲೇ ಅನೇಕ ಬರಹಗಳು ಕನ್ನಡದಲ್ಲಿ/ಇಂಗ್ಲಿಶಿನಲ್ಲಿ ಲಭ್ಯವಿದ್ದರೂ ಫಾಸಿಸಂನ ಕುರಿತು ಮಾರ್ಕ್ಸಿಸ್ಟ್ ಭಿನ್ನಮತೀಯ ಗ್ರಾಂಸಿಯ ಅನುಭವ ಮತ್ತು ವಿಚಾರವೇ ತುಸು ಭಿನ್ನವಾದುದು. ತನ್ನ ರಾಜಕೀಯ ಜೀವನದ ಹಸಿ ಸತ್ಯಗಳನ್ನು ಅವನು ದಾಖಲಿಸಿದ್ದಾನೆ. ಮನೋಹರಚಂದ್ರ ಪ್ರಸಾದ್ ಅವರು ಫಾಸಿಸಂನ ಮೇಲೆ ಗ್ರಾಂಸಿಯು ಮಾಡಿದ ಟಿಪ್ಪಣಿಗಳನ್ನು ಈಗಾಗಲೇ ಕನ್ನಡದಲ್ಲಿ ದಾಖಲಿಸಿದ್ದಾರೆ. ಲೇಖನದ ಈ ಭಾಗದಲ್ಲಿ  ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಗಿದೆ. ೧೯೨೦ರ ದಶಕದಲ್ಲಿ ಗ್ರಾಂಸಿಯು ಕಂಡುಕೊಂಡ  ಸತ್ಯಗಳು ಭಾರತದ ನೆಲದಲ್ಲಿ ೨೦೦೦ದ ಸಹಸ್ರಮಾನ ವರ್ಷದ ಮೊದಲ ದಶಕದಲ್ಲಿ  ಗೋಚರಿಸುತ್ತಿರುವುದು ಕಾಕತಾಳೀಯವೇನಲ್ಲ. ಪ್ರಸ್ತುತ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅಭ್ಯಾಸ ಮಾಡುತ್ತಿರುವವರಿಗೆ ಗ್ರಾಂಸಿಯ ಅನುಭವದ ಎಲ್ಲೆಗಳು ಭಾರತದಲ್ಲಿಯೂ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಡೇವಿಡ್ ಅರ್ನಾಲ್ಡ್ ಅವರು ಗ್ರಾಂಸಿಯ ರಾಜಕೀಯ ಸಿದ್ಧಾಂತಗಳ ಬಗ್ಗೆ ಮಾಡಿದ ಜಿಜ್ಞಾಸೆಗಳನ್ನು  ಲೇಖನದ ಇದೇ ಭಾಗದಲ್ಲಿ ಚರ್ಚಿಸಲಾಗಿದೆ.

ಬಹಳ ಯಾಂತ್ರಿಕವಾದ ಮತ್ತು ಸಾಂಪ್ರದಾಯಿಕವಾದ ಅರ್ಥಶಾಸ್ತ್ರೀಯ ಕೇಂದ್ರಿತ ಮಾರ್ಕ್ಸ್‌ವಾದವನ್ನು ಓದಿದವರಿಗೆ ಮಾರ್ಕ್ಸಿಸಂಗೆ ಹೊಸ ಪರಿಭಾಷೆಯನ್ನು ನೀಡಿದ ಗ್ರಾಂಸಿ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾನೆ. ಬಹುತೇಕ ಮಾರ್ಕ್ಸಿಸ್ಟರು ಕೈಗಾರಿಕಾ ಬಂಡವಾಳವು ಎದ್ದು ನಿಂತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ರೈತವರ್ಗವು ಕಣ್ಮರೆಯಾಗಿದೆ ಎನ್ನುವ ಹಿನ್ನೆಲೆಯಲ್ಲಿ ಗ್ರಾಂಸಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಗ್ರಾಂಸಿಯ ಜೀವನ ಮತ್ತು ರಾಜಕೀಯ

೧೯೧೦ರ ನಂತರದ ದಿನಗಳಲ್ಲಿ, ಉತ್ತರ ಇಟಲಿಯಲ್ಲಿ ಎಡ ಪಕ್ಷಗಳು‑ಸೋಷಿಯಲಿಸ್ಟ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಸಾಕಷ್ಟು ಜನಬೆಂಬಲ ಪಡೆದು ಪ್ರಭಾವಶಾಲಿಯಾಗಿದ್ದವು.  ೧೯೧೮ರಲ್ಲಿ ಉತ್ತರ ಇಟಲಿಯ ಟ್ಯೂರಿನ್ ನಗರದ ಕೈಗಾರಿಕಾ ಕಾರ್ಮಿಕರು ಪ್ರಾರಂಭಿಸಿದ ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿ ಇತರೆ ಕೈಗಾರಿಕಾ ನಗರಗಳಿಗೂ ಹಬ್ಬಿ, ಆ ಕಾಲದ ಯುರೋಪಿನಲ್ಲಿಯೇ ಅತಿ ದೊಡ್ಡದಾದ ಕಾರ್ಮಿಕ ಚಳವಳಿಯಾಗಿ ಬೆಳೆದಿತ್ತು. ೧೯೨೦ರ ನಂತರ ಮುಸಲೋನಿಯ ಫಾಸಿಸ್ಟ್ ಚಳವಳಿ ಪ್ರಬಲವಾಗಿ ಬೆಳೆದು, ೧೯೨೮ರಲ್ಲಿ ಮುಸಲೋನಿ ಫಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವನ್ನು ಸ್ಥಾಪಿಸಿದ. ಈ ಕಾಲಘಟ್ಟದ ಉದ್ದಕ್ಕೂ, ಸಾರ್ಡೀನಿಯ ಹಾಗೂ ಸಿಸಿಲಿ ದ್ವೀಪಗಳನ್ನು ಒಳಗೊಂಡ ದಕ್ಷಿಣ ಇಟಲಿಯ ಜನ, ದಮನಕಾರಿ ಜಮೀನುದಾರಿ ವ್ಯವಸ್ಥೆಯಡಿ, ಬೇಸಾಯವನ್ನು ನಂಬಿಕೊಂಡು ಬದುಕುತ್ತಿದ್ದರು. ಈ ಭಾಗದ ಮುಕ್ಕಾಲು ಪಾಲು ಜನ ಭೂಹೀನ ಕೃಷಿ ಕೂಲಿಗಳು ಮತ್ತು ಅತಿ ಕಡಿಮೆ ಭೂಮಿಯನ್ನು ಉಳ್ಳ ಸಣ್ಣ ರೈತರಾಗಿದ್ದರು. ಈ ಬಡ ಜನರೆಲ್ಲ ರೋಮನ್ ಕ್ಯಾಥೋಲಿಕ್ ಚರ್ಚಿನ ಬಗ್ಗೆ ಅಪಾರ ಶ್ರದ್ಧೆಯನ್ನು ಇಟ್ಟುಕೊಂಡು, ಚರ್ಚಿನ ಆಜ್ಞೆಗಳನ್ನು ದೇವರ ಆಜ್ಞೆ ಎಂದೇ ಪಾಲಿಸುತ್ತಿದ್ದರು. ಆದರೆ, ಸ್ವತಃ ದೊಡ್ಡ ಪ್ರಮಾಣದ ಭೂಮಿಯ ಒಡೆತನ ಹೊಂದಿದ್ದ ಚರ್ಚ್, ಶ್ರೀಮಂತ ಜಮೀನುದಾರರು ಹಾಗೂ ನಗರಗಳ ಆಸ್ತಿವಂತರ ಪರವಾಗಿದ್ದು, ಬಡವರನ್ನು ಸುಲಿಯುವ ಎಲ್ಲ ಕ್ರಮಗಳನ್ನು ಬೆಂಬಲಿಸುತ್ತಿತ್ತು. ನಗರಗಳ ವಿದ್ಯಾವಂತರು, ಸರ್ಕಾರಿ ಅಧಿಕಾರಿಗಳು ಮತ್ತು ಗುಮಾಸ್ತರು, ಈ ಸುಲಿಗೆ ವ್ಯವಸ್ಥೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಆ ಮೂಲಕ ಅವರು ಲಾಭದಾಯಕ ವ್ಯಾಪಾರ ಮಾಡಿ ಕೊಂಡಿದ್ದರು.

ಗ್ರಾಂಸಿ (೧೮೯೧-೧೯೩೬) ಕೂಡ ಸಾರ್ಡೀನಿಯದಲ್ಲಿ ಹುಟ್ಟಿ ಬೆಳೆದವನು. ಅವನ ತಂದೆ ಸರ್ಕಾರಿ ಉದ್ಯೋಗಿ. ತಾಯಿ ಓದು‑ಬರಹ ಬಲ್ಲ ಹೆಂಗಸು. ಸಾರ್ಡೀನಿಯದ ಸಾಮಾನ್ಯ ಜನರ ಜೀವನಮಟ್ಟಕ್ಕೆ ಹೋಲಿಸಿದರೆ ಗ್ರಾಂಸಿಯ ಕುಟುಂಬ ಮಧ್ಯಮವರ್ಗದ ಕುಟುಂಬವಾಗಿತ್ತು. ಗ್ರಾಂಸಿಗೆ ಶಾಲೆಗೆ ಹೋಗುವ ಭಾಗ್ಯವೂ ದೊರಕಿತ್ತು. ಆದರೆ ಇದು ಅವನ ಬಾಲ್ಯದ ಒಂದು ಮುಖ ಮಾತ್ರ. ಚಿಕ್ಕಂದಿನಲ್ಲಿಯೇ ಅಪಘಾತ ಒಂದರಲ್ಲಿ ಅವನ ಬೆನ್ನು ಮೂಳೆ ಜಖಂ ಆಗಿತ್ತು. ಸರಿಯಾದ ಸಮಯಕ್ಕೆ ತಕ್ಕುದಾದ ವೈದ್ಯಕೀಯ ಉಪಚಾರ ಸಿಗದೆ ಅವನು ಜೀವನಪೂರ್ತಿ ಗೂನು ಬೆನ್ನಿನವನಾಗೇ ಇದ್ದ. ಅವನ ಈ ಊನಕ್ಕೆ ಬಾಲ್ಯದಲ್ಲಿ ದೊರಕುತ್ತಿದ್ದ ಒಂದೇ ಒಂದು ಉಪಚಾರವೆಂದರೆ, ಕಾಲುಗಳನ್ನು ಸೂರಿಗೆ ಕಟ್ಟಿ, ತಲೆಕೆಳಗೆ ಮಾಡಿ ಗಂಟೆಗಟ್ಟಲೆ ಜೋತಾಡಿಸುತ್ತ ಇದ್ದದ್ದು. ಈ ಉಪಚಾರದಿಂದಾಗಿ ಬಾಲ್ಯದಿಂದಲೇ ಅವನಿಗೆ ಅಂಟಿಕೊಂಡಿದ್ದ ಉಸಿರಾಟದ ತೊಂದರೆ ಮತ್ತು ತಲೆನೋವು(ಮೈಗ್ರೇನ್)ಗಳು ಮತ್ತಷ್ಟು ಉಲ್ಬಣಗೊಂಡವು. ೪೫ ವರ್ಷಗಳ ಅವನ ಆಯುಷ್ಯದ ಪೂರ್ತಿ ಈ ರೋಗಗಳು ಅವನ ಜೀವ ಹಿಂಡಿದವು. ಗ್ರಾಂಸಿ ಫಾಸಿಸ್ಟರಿಂದ ಸಜೆಗೆ ಗುರಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾಗ, ತಲೆನೋವು ತಡೆಯಲು ಅಸಾಧ್ಯವಾಗಿ, ರಾತ್ರಿ ಇಡೀ ಅವನು ಜೈಲಿನ ಗೋಡೆಗೆ ತಲೆ ಜಜ್ಜಿಕೊಳ್ಳುತ್ತಿದ್ದ. ಅವನು ಎಂಟು ವರ್ಷದವನಾಗಿದ್ದಾಗ, ಹಣದ ದುರುಪಯೋಗದ ಆರೋಪದ ಮೇಲೆ ಅವನ ತಂದೆಯನ್ನು ಕೆಲಸದಿಂದ ವಜಾಮಾಡಿ ಜೈಲಿಗೆ ಹಾಕಿದರು. ಅವರದು ಎಂಟು ಮಕ್ಕಳ ದೊಡ್ಡ ಕುಟುಂಬ. ತಾಯಿಯ ದರ್ಜಿ ಕೆಲಸದಿಂದ ಸಂಸಾರ ನಿರ್ವಹಿಸುವುದು ಕಷ್ಟವಾಗಿತ್ತು. ಗ್ರಾಂಸಿ ಶಾಲೆ ಬಿಟ್ಟು ದಿನಗೂಲಿಗೆ ಸಣ್ಣಪುಟ್ಟ ಕೆಲಸ ಮಾಡತೊಡಗಿದ. ಅವನು ಹನ್ನೆರಡನೆಯ ವರ್ಷದವನಾಗಿದ್ದಾಗ ಅವನ ತಂದೆಯ ಬಿಡುಗಡೆಯಾದರೂ ಬಡತನ ಕಡಿಮೆಯಾಗಲಿಲ್ಲ. ಆದರೂ ಅವನ ತಂದೆ‑ತಾಯಿ ಅವನನ್ನು ಹೈಸ್ಕೂಲಿನವರೆಗೆ ಓದಿಸಿದರು. ಆ ಹೊತ್ತಿಗೆ ಅವನ ಅಣ್ಣ ಮಿಲಿಟರಿ ಸೇರಿದ್ದ. ಅವನು ಗ್ರಾಂಸಿಗೆ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯ ಪತ್ರಿಕೆ ‘ಅವಂತಿ!’ಯನ್ನು ಕಳಿಸಿ ಕೊಡುತ್ತಿದ್ದ. ಗ್ರಾಂಸಿ ಬಡ ವಿದ್ಯಾರ್ಥಿಗಳಿಗೆ ದೊರಕುತ್ತಿದ್ದ ವಿದ್ಯಾರ್ಥಿ ವೇತನ ಪಡೆದು ಉತ್ತರ ಇಟಲಿಯ ಟ್ಯೂರಿನ್ ವಿಶ್ವವಿದ್ಯಾಲಯ ಸೇರಿದ. ಮುಂದೆ ಅವನ ಜೊತೆ ಕಮ್ಯುನಿಸ್ಟ್ ಪಕ್ಷ ಕಟ್ಟಿದ ಅನೇಕ ಜನ ಅಲ್ಲಿ ಅವನ ಸಹಪಾಠಿಗಳಾಗಿದ್ದರು. ಗ್ರಾಂಸಿಯು ಸೂಕ್ಷ್ಮ ಪ್ರತಿಭೆ ಹಾಗೂ ಜ್ಞಾನದಾಹಗಳಿಂದಾಗಿ ಅಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಆದರೆ ಬಡತನ ಮತ್ತು ಅನಾರೋಗ್ಯಗಳ ಕಾರಣವಾಗಿ ಉನ್ನತ ಶಿಕ್ಷಣವನ್ನು ಪೂರ್ತಿ ಗೊಳಿಸಲು ಅವನಿಗೆ ಸಾಧ್ಯವಾಗಲಿಲ್ಲ. ಇಟಲಿಯ ಅತ್ಯಂತ ಹಿಂದುಳಿದ ಮತ್ತು ಅವಜ್ಞೆ ಗೊಳಪಟ್ಟ ಸಾರ್ಡೀನಿಯಾದಲ್ಲಿ ಹುಟ್ಟಿದ ಹಿನ್ನೆಲೆಯಲ್ಲಿ ಗ್ರಾಂಸಿಗೆ ತನ್ನ ಪ್ರದೇಶದ ಜನರು ಅನುಭವಿಸುತ್ತಿದ್ದ ದುಃಖ ದುಮ್ಮಾನಗಳ ಪರಿಚಯವಿತ್ತು. ಆ ಕಾರಣದಿಂದ ಆತ ಯುವಕ ನಾಗಿದ್ದಾಗಲೇ ಪ್ರತ್ಯೇಕ ಸಾರ್ಡೀನಿಯಾಕ್ಕಾಗಿ ನಡೆಯುತ್ತಿದ್ದ ಹೋರಾಟಕ್ಕೆ ಆಕರ್ಷಿತ ನಾಗಿದ್ದನು(ಡೇವಿಡ್ ಆರ್ನಾಲ್ಡ್ ೨೦೦೦). ಆ ಹೊತ್ತಿಗಾಗಲೇ ತತ್ವಶಾಸ್ತ್ರದಲ್ಲಿನ ಅವನ ಪಾಂಡಿತ್ಯ ವಿಶ್ವವಿದ್ಯಾಲಯದಲ್ಲಿ ಜನಜನಿತವಾಗಿತ್ತು. ಈ ಕಾಲದಲ್ಲಿಯೇ ಅವನು ಮಾರ್ಕ್ಸ್‌ವಾದವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ. ಈ ಕಾರಣದಿಂದಾಗಿ ಆತ ಪ್ರತ್ಯೇಕತೆಯ ಪ್ರಶ್ನೆಯನ್ನು ಕೈಬಿಟ್ಟು ಇಟಲಿಯ ಸಮಾಜವಾದಿ ಸಮಾಜದಲ್ಲಿ ದಕ್ಷಿಣದ ಪ್ರಶ್ನೆಗಳು (ಸದರನ್ ಕ್ವೆಶ್ಚನ್ಸ್) ಬಹುಮುಖ್ಯವಾದುದೆಂದು ಭಾವಿಸಿದನು. ದಕ್ಷಿಣ ಇಟಲಿಯ ರೈತ ವರ್ಗವು ಉತ್ತರ ಇಟಲಿಯ ಕೈಗಾರಿಕೋದ್ಯಮಿಗಳ, ಬ್ಯಾಂಕರ್‌ಗಳ ಮತ್ತು ಅಧಿಕಾರಶಾಹಿಗಳ ಕೈಯಲ್ಲಿ ನಲುಗುತ್ತಿರುವುದನ್ನು ಅರ್ಥೈಸಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಹೆಚ್ಚು ಸೂಕ್ತವಾದುದು ಎಂದು ಅವನು ಭಾವಿಸಿದನು(ಡೇವಿಡ್ ಆರ್ನಾಲ್ಡ್ ೨೦೦೦). ೧೯೧೫ರಲ್ಲಿ ವಿದ್ಯಾಭ್ಯಾಸ ನಿಲ್ಲಿಸಿ, ಇಟಲಿಯ ಸೋಷಿಯಲಿಸ್ಟ್ ಪಾರ್ಟಿ ಸೇರಿ, ಪಕ್ಷದ ಪತ್ರಿಕೆ ‘ಅವಂತಿ!’ಯ ಪೂರ್ಣಾವಧಿ ಕಾರ್ಯಕರ್ತನಾದ. ಆಗ ಮುಸಲೋನಿ ಈ ಪತ್ರಿಕೆಯ ಸಂಪಾದಕನಾಗಿದ್ದ. ಗ್ರಾಂಸಿಯು ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆ ಮತ್ತು ಕಲಾ ವಿಮರ್ಶೆಗಳನ್ನು ಬರೆಯುತ್ತಿದ್ದ.

ಆ ಹೊತ್ತಿಗೆ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಎರಡು ಬಣಗಳು ಇದ್ದವು. ಒಂದು ಸುಧಾರಣಾವಾದಿ ಬಣ, ಮತ್ತೊಂದು ಕ್ರಾಂತಿಕಾರಿ ಎಡಪಂಥೀಯ ಬಣ. ಸುಧಾರಣಾವಾದಿ ಬಣದ ನಿಲುವು ಹೀಗೆ ಇತ್ತು: ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಸಂಬಳ, ಭತ್ಯೆ ಇತ್ಯಾದಿಯಾಗಿ ಸದ್ಯದ ವ್ಯವಸ್ಥೆಯಲ್ಲಿ ನ್ಯಾಯಬದ್ಧವಾಗಿರುವ ಬೇಡಿಕೆಗಳನ್ನು ಮಾತ್ರ ಮುಂದೆ ಇಟ್ಟುಕೊಂಡು ಹೋರಾಟಗಳನ್ನು ಮಾಡುವ ಮೂಲಕ ಕಾರ್ಮಿಕರ ಮಧ್ಯೆ ಪ್ರಭಾವ ಉಳಿಸಿಕೊಳ್ಳಬೇಕು; ಪಕ್ಷವು ಪಾರ್ಲಿಮೆಂಟಿನಲ್ಲಿ ಹೆಚ್ಚು ಸ್ಥಾನ ಗಳಿಸುವ ಕಡೆ ಗಮನಹರಿಸಬೇಕು; ಸರ್ಕಾರ ರಚಿಸುವ ಎಲ್ಲ ವಿಧಾನಗಳನ್ನೂ ಬಳಸಿ, ಪಾರ್ಲಿಮೆಂಟಿನಲ್ಲಿ ಸಮಾಜವಾದಿ ನಿಲುವಿನ ಕಾನೂನುಗಳನ್ನು ಜಾರಿ ಮಾಡುವ ಮೂಲಕ, ನಿಧಾನವಾಗಿ ಸಮಾಜವಾದಿ ವ್ಯವಸ್ಥೆ ರೂಢಿಯಾಗುವ ಹಾಗೆ ಮಾಡಬೇಕು. ಈ ನಿಟ್ಟಿನಲ್ಲಿ ಬಂಡವಾಳ ಶಾಹಿಯನ್ನು ಬೆಂಬಲಿಸುವ ಕೆಲವು ಲಿಬರಲ್ ಪಕ್ಷಗಳ ಜೊತೆಗೆ ವಿಷಯಾಧಾರಿತ ಹೊಂದಾಣಿಕೆಯನ್ನು ಸಹ ಮಾಡಿಕೊಳ್ಳಬಹುದು. ಪಕ್ಷದ ಕ್ರಾಂತಿಕಾರಿ ಎಡ ಪಂಥೀಯರಿಗೆ ಮುಸಲೋನಿ ನಾಯಕನಾಗಿದ್ದ. ಸುಧಾರಣವಾದಿಗಳ ಈ ನಿಲುವನ್ನು ಅವರೆಲ್ಲಾ ಖಡಾಖಂಡಿತವಾಗಿ ವಿರೋಧಿಸುತ್ತಿದ್ದರು. ಬಂಡವಾಳಶಾಹಿ ವ್ಯವಸ್ಥೆಯ ಜೊತೆ ಯಾವ ರೀತಿಯ ಹೊಂದಾಣಿಕೆಯನ್ನೂ ಮಾಡಿಕೊಳ್ಳಕೂಡದು. ಈ ವ್ಯವಸ್ಥೆಯನ್ನು ಬುಡಸಮೇತ ಕಿತ್ತೊಗೆಯುವ ಕಾರ್ಮಿಕ ವರ್ಗದ ಕ್ರಾಂತಿಯ ಮುಂದಾಳತ್ವ ವಹಿಸಿಕೊಳ್ಳುವ ಸರ್ವಸಿದ್ಧತೆ ಪಕ್ಷದ ಮುಖ್ಯ ಲಕ್ಷ್ಯವಾಗಿರಬೇಕು. ಕಾರ್ಮಿಕ ಸಂಘಟನೆಗಳು ಮತ್ತು ಪಾರ್ಲಿಮೆಂಟುಗಳನ್ನು ಈ ಸಂಪೂರ್ಣ ಕ್ರಾಂತಿಯ ಸಂದೇಶ ಬಿತ್ತರಿಸುವ ವೇದಿಕೆಗಳು ಎಂದು ಮಾತ್ರ ಪರಿಗಣಿಸಬೇಕು ಎನ್ನುವುದು ಎಡಪಂಥೀಯ ಬಣದ ನಿಲುವಾಗಿತ್ತು. ಗ್ರಾಂಸಿ ಎಡಪಂಥಕ್ಕೆ ಸೇರಿದವನು. ಆದರೆ ಎಡಪಂಥದವರ ಹಲವು ವಿಚಾರಗಳ ಬಗೆಗೆ ಅವನಿಗೆ ಸಹಮತವಿರಲಿಲ್ಲ. ಎಡಪಂಥದವರು ಸಂಪೂರ್ಣ ಕ್ರಾಂತಿಯ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದರೂ, ಅವರ ಕಾರ್ಯಕ್ರಮಗಳು ಅಂತಹ ಕ್ರಾಂತಿಯನ್ನು ಕಾರ್ಯಸಾಧ್ಯ ಮಾಡುವಂತಹವಾಗಿರಲಿಲ್ಲ. ಉತ್ತರ ಇಟಲಿಯ ಕೈಗಾರಿಕ ಕಾರ್ಮಿಕರನ್ನು ಸಂಘಟಿಸುವ ಮೂಲಕ ಕ್ರಾಂತಿ ಸಾಧ್ಯವಾಗಿಬಿಡುತ್ತದೆ ಎಂದು ಇವರು ನಂಬಿದ್ದರು. ಉತ್ತರ ಹಾಗೂ ದಕ್ಷಿಣ ಇಟಲಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ನಡುವಿನ ಅಗಾಧ ಅಂತರ, ಒಟ್ಟಾರೆ ಉತ್ತರದ ಜನರ ಬಗ್ಗೆ ದಕ್ಷಿಣದ ಬಡವರಿಗೆ ಇದ್ದ ಸಕಾರಣವಾದ ವಿಪರೀತ ಸಿಟ್ಟು, ಇಟಲಿಯ ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಉತ್ತರ ಹಾಗೂ ದಕ್ಷಿಣದ ಬಡಜನರನ್ನು ಒಂದಾಗಿ ಹೆಣೆಯಬಲ್ಲ ಒಂದೇ ಒಂದು ಎಳೆಯೂ ರೂಪ ಪಡೆಯದಿರುವ ಚಾರಿತ್ರಿಕ ವಿಪರ್ಯಾಸ, ಇವುಗಳನ್ನು ಗಂಭೀರವಾಗಿ ಪರಿಗಣಿಸಿ, ದಕ್ಷಿಣದ ಬಡರೈತರು ಮತ್ತು ಉತ್ತರದ ಕಾರ್ಮಿಕರನ್ನು ಜೀವಂತವಾಗಿ ಬೆಸೆಯುವ ಕಾರ್ಯಕ್ರಮವನ್ನು ಪಕ್ಷ ರೂಢಿಸಿಕೊಳ್ಳದಿದ್ದರೆ ಇಟಲಿಯಲ್ಲಿ ಕ್ರಾಂತಿ ಅಸಾಧ್ಯ ಎನ್ನುವುದು ಗ್ರಾಂಸಿಯ ಸ್ಪಷ್ಟ ನಿಲುವಾಗಿತ್ತು. ಪ್ರಬಲಧಾರೆಯ ಎಡಪಂಥೀಯರಿಗೆ ಗ್ರಾಂಸಿಯ ವಾದ ಪರಿಣಾಮಕಾರಿ ಎಂದೆನಿಸಲಿಲ್ಲ ಎನ್ನುವುದು ಗಮನಾರ್ಹ.

೧೯೧೩ರಲ್ಲಿ ಮೊದಲನೆಯ ಮಹಾಯುದ್ಧ ಶುರುವಾಯಿತು. ಇಟಲಿಯು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಮೈತ್ರಿಕೂಟವನ್ನು ಸೇರಿಕೊಂಡಿತು. ಯುರೋಪಿನ ಎಲ್ಲ ಸಮಾಜವಾದಿ/ಕಮ್ಯುನಿಸ್ಟ್ ಪಕ್ಷಗಳು ಮೊದಲಿಗೆ ಈ ಯುದ್ಧವನ್ನು ಬಂಡವಾಳಶಾಹಿಗಳು ತಮ್ಮ ಲಾಭಕ್ಕಾಗಿ ನಡೆಸುತ್ತಿರುವ ಯುದ್ಧ ಎಂದು ಗುರುತಿಸಿದ್ದವು. ಯಾವ ಸಮಾಜವಾದಿ/ ಕಮ್ಯುನಿಸ್ಟ್ ಪಕ್ಷಗಳೂ ಬಂಡವಾಳಶಾಹಿಯು ನಿರೂಪಿಸುತ್ತಿರುವ ರಾಷ್ಟ್ರಪ್ರೇಮದ ಸೋಗಿಗೆ ಮರುಳಾಗಿ ತಮ್ಮ ರಾಷ್ಟ್ರೀಯ ಪ್ರಭುತ್ವಗಳ ಯುದ್ಧನೀತಿಗೆ ಬೆಂಬಲ ಸೂಚಿಸಕೂಡದು ಎಂಬ ಒಮ್ಮತದ ನಿರ್ಧಾರವನ್ನು ಅವುಗಳು ತೆಗೆದುಕೊಂಡಿದ್ದವು. ಆದರೆ ಯುದ್ಧ ಮುಂದುವರಿಯುತ್ತಾ ಹೋದಂತೆ ಬಹುಪಾಲು ಪಕ್ಷಗಳು ತಮ್ಮ ತಮ್ಮ ಪ್ರಭುತ್ವಗಳ ಯುದ್ಧ ನೀತಿಗೆ ಸಕ್ರಿಯ ಬೆಂಬಲ ಸೂಚಿಸತೊಡಗಿದವು. ಇಟಲಿಯ ಸೋಷಿಯಲಿಸ್ಟ್ ಪಕ್ಷ ಕೂಡ ಇದೇ ಧೋರಣೆಯನ್ನು ಅನುಸರಿಸಿತು. ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯ ಗುಂಪು ಮಾತ್ರ ತನ್ನ ಪಕ್ಷದ ಈ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿತು.

೧೯೧೭ರಲ್ಲಿ ಮೊದಲನೆಯ ಮಹಾಯುದ್ಧ ಕೊನೆಗೊಂಡಿತು. ಯುದ್ಧದಿಂದ ಕೈಗಾರಿಕ ಉತ್ಪನ್ನಗಳ ಮೇಲೆ ಯಾವ ದುಷ್ಪರಿಣಾಮವೂ ಉಂಟಾಗಿರಲಿಲ್ಲ. ಆದರೆ ಹಣದುಬ್ಬರ ಉಳಿದ ವಸ್ತುಗಳ ಬೆಲೆಗೆ ಹೋಲಿಸಿದರೆ ಹಣದ ಬೆಲೆ ಕಡಿಮೆಯಾಗಿ, ವಸ್ತುಗಳನ್ನು ಖರೀದಿಸಲು ಹಿಂದೆಗಿಂತ ಜಾಸ್ತಿ ಹಣ ವ್ಯಯ ಮಾಡಬೇಕಾದಂತಹ ಪರಿಸ್ಥಿತಿ ವಿಪರೀತ ಹೆಚ್ಚಾಗಿತ್ತು. ಉತ್ಪಾದನೆಯಾದ ಆಹಾರದ ಮುಕ್ಕಾಲುಪಾಲು ಯುದ್ಧಭೂಮಿಗೆ ಸಾಗಿಸಲ್ಪಡುತ್ತಿದ್ದ ಕಾರಣವಾಗಿ, ಸಾಮಾನ್ಯ ಜನರು ಆಹಾರದ ಅಭಾವವನ್ನು ಅನುಭವಿಸಬೇಕಾಯಿತು. ಇಟಲಿಯ ಸಾಮಾನ್ಯ ಜನರ ನಿತ್ಯದ ಆಹಾರವಾದ ಬ್ರೆಡ್ ವಾರಗಟ್ಟಲೆ ಸರಬರಾಜಾಗುತ್ತಿರಲಿಲ್ಲ. ಈ ಪರಿಸ್ಥಿತಿಯ ಪರಿಣಾಮವಾಗಿ ೧೯೧೭ರ ಆಗಸ್ಟ್ ತಿಂಗಳಲ್ಲಿ, ಉತ್ತರ ಇಟಲಿಯ ನಗರಗಳ ಕಾರ್ಮಿಕರು ತಮ್ಮ ಸಂಬಳ ಹೆಚ್ಚಳಕ್ಕಾಗಿ ಶುರುಮಾಡಿದ ಮುಷ್ಕರ, ಜನರ ಬ್ರೆಡ್ ಹಾಹಾಕಾರದ ಜೊತೆಗೂಡಿ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯ ರೂಪ ತಾಳಿತು. ಇದು, ನಿತ್ಯದ ಬವಣೆ ಅಸಹನೀಯವಾದಾಗ, ಯಾವ ನಾಯಕತ್ವದ ಪ್ರೇರಣೆಯೂ ಇಲ್ಲದೆ, ತತ್‌ಕ್ಷಣ ಜನರೇ ಪ್ರಾರಂಭಿಸಿದ ಪ್ರತಿಭಟನೆಯಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಸಂಘಟಿತ ಫ್ಯಾಕ್ಟರಿ ಕಾರ್ಮಿಕರದ್ದು ಸಣ್ಣ ಪಾಲಾದರೆ, ಮುಕ್ಕಾಲು ಪಾಲು ಜನ ನಗರ ಪ್ರದೇಶದ ಅಸಂಘಟಿತ ಬಡವರ ಪಾಲು ನಿರ್ಣಾಯಕವಾಗಿತ್ತು. ಇವರಲ್ಲಿ ಹೆಂಗಸರ ಸಂಖ್ಯೆಯೇ ೪೦,೦೦೦ದಷ್ಟು ಇತ್ತು. ೨ ಲಕ್ಷ ಜನ ಉತ್ತರ ಇಟಲಿಯ ನಗರಗಳ ಕಾರ್ಖಾನೆ ಹಾಗೂ ಬೀದಿಗಳನ್ನು ಆಕ್ರಮಿಸಿಕೊಂಡು ಬಿಟ್ಟರು. ‘ಬ್ರೆಡ್ ದಂಗೆ’ ಎಂದೇ ಖ್ಯಾತವಾಗಿರುವ ಈ ಪ್ರತಿಭಟನೆಯನ್ನು ಹದ್ದುಬಸ್ತಿಗೆ ತರುವುದಕ್ಕೆ ಪೊಲೀಸರಿಂದ ಸಾಧ್ಯವಾಗಲಿಲ್ಲ. ಸರ್ಕಾರ ಶಸ್ತ್ರಸಜ್ಜಿತ ಸೈನಿಕರ ತುಕಡಿಗಳನ್ನು ಕಳಿಸಿತು. ಸೈನ್ಯ ೨೦೦೦ ಜನರನ್ನು ಕೊಂದು ಪ್ರತಿಭಟನೆಯನ್ನು ಹತ್ತಿಕ್ಕಿತು. ಈ ಪ್ರತಿಭಟನೆಯಲ್ಲಿ ಸೋಷಿಯಲಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆಗಳು ನೇರವಾಗಿ ಪಾಲ್ಗೊಳ್ಳಲಿಲ್ಲ. ಪಕ್ಷ ಕೂಡ ಈ ಘಟನೆಯ ಬಗ್ಗೆ ಮುಗುಮ್ಮಾಗಿತ್ತು. ಪ್ರತಿಭಟನೆಯಲ್ಲಿ ಅನಾರ್ಕಿಸ್ಟರು (ಎಲ್ಲ ಬಗೆಯ ಪ್ರಭುತ್ವಗಳೂ ಜನರನ್ನು ತಮ್ಮ ಮೂಗಿನ ನೇರಕ್ಕೆ ಜೀವಿಸಬೇಕು ಎಂದು ಒತ್ತಾಯಿಸಿ ದಬ್ಬಾಳಿಕೆ ಮಾಡುತ್ತವೆ; ಹೀಗಾಗಿ ಎಲ್ಲ ನಮೂನೆಯ ಪ್ರಭುತ್ವಗಳ ಅಸ್ತಿತ್ವವನ್ನು ನಿರಾಕರಿಸುವುದರಿಂದ ಮಾತ್ರ ಮನುಷ್ಯರ ನಿಜವಾದ ವಿಮೋಚನೆ ಸಾಧ್ಯ ಎಂಬ ನಿಲುವು ಉಳ್ಳವರು ಅನಾರ್ಕಿಸ್ಟರು) ಮಾತ್ರ ಸಕ್ರಿಯವಾಗಿ ಭಾಗವಹಿಸಿದ್ದರು. ಇದರ ಬೆನ್ನಿಗೇ ಉತ್ತರ ಇಟಲಿಯ ಟ್ಯೂರಿನ್ ನಗರದ ಫ್ಯಾಕ್ಟರಿಗಳಲ್ಲಿ ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿ ಸಣ್ಣದಾಗಿ ಶುರುವಾಯಿತು.