‘ಅಂಕೋಲೆ ತಹಶೀಲ್ದಾರ್ ಸಾಹೇಬ್ರು ಕುಟಾರಿ (ಸಲಿಕೆ/ಗುದ್ದಲಿ) ತಗಂಡು ಗದ್ದಿಗೆ ಹೋಗ್ ಬೇಕು,  ಉತ್ತರ ಕನ್ನಡ ಡಿ ಸಿ ಸಾಹೇಬ್ರು  ಅಗೆ ಕಟ್ಟು ತಗಂಡಿ ಸಸಿ ನೆಡೂಕೆ ಸುರುಮಾಡ್ಬೇಕು!’ ಕಾರ್ಯಕ್ರಮದಲ್ಲಿ ಯುವ ನ್ಯಾಯವಾದಿ ನಾಗರಾಜ್ ನಾಯಕ್ ವಿನಂತಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಾರ್ಡೋಲಿ ಖ್ಯಾತಿಗಳಿಸಿದ ಅಂಕೋಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಅಲ್ಲಿನ ಪಹರೆ ವೇದಿಕೆ ಬಾಸಗೋಡಿನಲ್ಲಿ ಅಧಿಕಾರಿಗಳನ್ನು ಗದ್ದೆ ಕೆಲಸಕ್ಕೆ ಕರೆಯಿತು. ಸ್ವತಃ ಉತ್ತರ ಕನ್ನಡ ಜಿಲ್ಲಾಧಿಕಾರಿ ಅಮರ ನಾರಾಯಣ್ ಸಾಹೇಬರು ಸುರಿವ ಮಳೆಯಲ್ಲಿ ಕರಿಕಂಬಳಿ ಸೂಡಿಕೊಂಡು ತೇಟ್ ರೈತನಾಗಿ ಕೆಸರು ಗದ್ದೆ  ಇಳಿದರು, ನೇಗಿಲು ಹಿಡಿದು ಗದ್ದೆ ಹೂಡಿದರು, ನಾಟಿ ಮಾಡಿದರು.

ಅನ್ನದ ನೆಲದಲ್ಲಿ ಕರ್ಪ್ಯೂ ವಿಧಿಸಿದಂತೆ ಇವತ್ತು ಗದ್ದೆ ಬಯಲು ಜನಗಳಿಲ್ಲದೇ ಬಿಕೋ ಎನ್ನುತ್ತಿದೆ. ಮಳೆಯಲ್ಲಿ ತೋಯ್ದು ಮಣ್ಣಿನ ಕಸುಬು ಮಾಡುವದಕ್ಕೆ ಮೂಲತಃ ರೈತರ ಮನೆಮಂದಿಗೆ ಮನಸ್ಸಿಲ್ಲ. ಓಡುವ ಕೃಷಿ ಸಮುದಾಯವನ್ನು ಮರಳಿ ಮಣ್ಣಿಗೆ ಸೆಳೆಯಲು ಜಾಗೃತಿಯ ಕೆಲಸ ನಡೆಯಬೇಕು. ಬಾಸಗೋಡಿನ ಗದ್ದೆಯಲ್ಲಿ ಡಿಸಿ ಸಾಹೇಬರ ತಂಡ ಕೃಷಿ ಕೆಲಸ ಮಾಡಿದ್ದು ಅಂತಹ ಒಂದು  ಅನನ್ಯ ಪ್ರಯತ್ನ ಅಷ್ಟೇ ! ನಮ್ಮ ಕರಾವಳಿಯಲ್ಲಿ ತುಂಡು ಭೂಮಿಗಳು ಜಾಸ್ತಿ. ಎಕರೆ, ಅರ್ಧ ಎಕರೆ, ಗುಂಟೆ ಇದ್ದವರು  ಇಂದಿನ ಪರಿಸ್ಥಿತಿಯಲ್ಲಿ ಬೇಸಾಯ ನಡೆಸುವದು ಕಷ್ಟವಾಗುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್‌ನಂತಹ ಯಂತ್ರ  ಬಳಕೆ ಸಾಧ್ಯವಿಲ್ಲ,ವರ್ಷಕ್ಕೊಮ್ಮೆ ಹೂಟಿಗೆ ಬಳಸುವ ಎತ್ತಿನ ಜೋಡಿಯನ್ನು ಇಡೀ ವರ್ಷ ಮೇವುಹಾಕಿ ಸಾಕುವದು ಸುಲಭವಲ್ಲ. ಅಷ್ಟಕ್ಕೂ ಎತ್ತಿನಲ್ಲಿ ಹೂಟಿ ಮಾಡುವದಕ್ಕೆ ಜನಗಳಿಲ್ಲ. ಕೃಷಿ ನಂಬಿ ಒದ್ದಾಡುವದಕ್ಕಿಂತ ಹೊಸ ಕೆಲಸ ಹುಡುಕಿ ಯುವತಲೆಮಾರು ಪಲಾಯನ ಮಾಡಿದೆ. ಈಗ  ಎಲ್ಲೆಡೆ ‘ಭೂಮಿ ಮಾಡುವವರಿಲ್ಲ, ಮಾರುವವರೇ ಎಲ್ಲ!’ ಎನ್ನುವಂತಾಗಿದೆ. ಒಂದೆರಡು ವರ್ಷ ಕೃಷಿ ಮಾಡದೇ  ಪಡಬಿದ್ದ ಮೇಲೆ ನಿಧಾನಕ್ಕೆ ಕೃಷಿಯೇತರ ಉಪಯೋಗಕ್ಕೆ ನೆಲ ತೆರೆದುಕೊಳ್ಳುತ್ತದೆ. ಖರೀದಿಸುವವರು ಬರುತ್ತಾರೆ, ಮಾರಾಟ ನಡೆಯುತ್ತದೆ. ಭತ್ತದ ಗದ್ದೆಗೆ ಮಣ್ಣುಹಾಕಿ, ಕಲ್ಲು ಸುರಿದು ಕಾಂಪೌಂಡ್ ಕಟ್ಟಿ ಮನೆ ನಿರ್ಮಿಸಿದ ಬಳಿಕ ಅಕ್ಕಪಕ್ಕದ ಜನಕ್ಕೂ ಮಾರುವ  ಎಕೈಕ ದಾರಿ ಗೋಚರಿಸುತ್ತದೆ.’ ಊಳುವವನೇ ಒಡೆಯ’ಕಾನೂನು ಕೃಷಿನಿರತ ಬಡವರಿಗೆ ನ್ಯಾಯ ನೀಡಿದ್ದು ಹಳೆಯ ಕತೆ. ಆದರೆ ಭೂಮಿ ಪಡೆದವರಿಗೆ ಈಗ ಕೃಷಿ ಮುನ್ನೆಡೆಸುವ ಶಕ್ತಿ, ಆಸಕ್ತಿ ದೂರಾಗಿದೆ. ಈಗ ಊಳುವವನ ಬದಲು  ‘ಉಳ್ಳವನೇ ಒಡೆಯ’ ಹೊಸ ಫರ್ಮಾನು ಎಲ್ಲೆಡೆ ಕಾಣುತ್ತಿದೆ.

ಕುಮಟಾದ ಕಾಗಾಲ್ ಎಂಬಲ್ಲಿ ಸಮುದ್ರದಂಚಿನ ನೆಲೆಯಲ್ಲಿ ಸುಮಾರು ೨೦ ಎಕರೆ ವಿಸ್ತೀರ್ಣಕ್ಕೆ ಹತ್ತಾರು ಅಡಿ ಎತ್ತರದ ಗೋಡೆ ಕಾಣುತ್ತದೆ. ತಟ್ಟನೆ ನೋಡಿದರೆ  ಬೇಲಿಯಿಲ್ಲದ ಬಡವರ ಊರಿನಲ್ಲಿ  ಇದೆಂತಹ ಗೋಡೆ ವೈಭವ ಎಂದು ಕುತೂಹಲ ಮೂಡುತ್ತದೆ. ಬಡವರ ಭೂಮಿ ಖರೀದಿಸಿದ ವ್ಯಕ್ತಿಯೊಬ್ಬ ತನ್ನ ನೆಲ ರಕ್ಷಣೆಗೆ ಭರ್ಜರಿ ಖರ್ಚು ಮಾಡಿದ್ದಾನೆ. ರಕ್ಷಣಾ ಗೋಡೆಗೆ ಇಷ್ಟು ರೊಕ್ಕ ಹಾಕುತ್ತಾರೆಂದರೆ ಒಳಗಡೆ ಏನು ನಿರ್ಮಾಣ ನಡೆಯಲಿದೆ? ಯಾರಿಗೂ ಗೊತ್ತಿಲ್ಲ. ಬಹುತೇಕ ಜನಕ್ಕೆ  ಇದರ ಒಡೆಯ ಯಾರು ಎಂಬುದು ತಿಳಿದಿಲ್ಲ.  ಒಂದು ಕಾಲಕ್ಕೆ ನಮ್ಮ ಹಳ್ಳಿಗರಿಗೆ ಎಲ್ಲರ ಜಮೀನಿನ ಗಡಿ ಗುರುತು ಗೊತ್ತಿದ್ದವು, ಬೆಳೆಯುವ ಭತ್ತದ ಜಾತಿಗಳ ಅರಿವಿತ್ತು. ಯಾವ ಗದ್ದೆಗೆ ಎಷ್ಟು ಗೊಬ್ಬರ ಹಾಕಿ ಎಷ್ಟು ಬೆಳೆ ಪಡೆಯುತ್ತಾರೆಂಬ ತಿಳುವಳಿಕೆಯಿತ್ತು. ಆದರೆ ಇಂದು ಬೆಳೆಯ ಕತೆ ಬದಿಗಿರಲಿ,  ಸುತ್ತ ಏಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ತಿಳಿಯಲಾರದಷ್ಟು ಕೃಷಿ ಜಗತ್ತು ನಿಗೂಢವಾಗುತ್ತಿದೆ. ಹಸುರು ಸೂಸುವ ಭತ್ತದ ಬಯಲು, ತೆನೆ ತೋರಣ, ಸುಗ್ಗಿ ಸಂಭ್ರಮದ ನೆಲೆ ಅಸುನೀಗಿದೆ, ಕೃಷಿಯೇತರ ಉದ್ದೇಶಕ್ಕೆ ಭೂಮಿಗೆ ಬೆಲೆ ಬಂದಿದೆ.  ೫೦೦ಕಿಲೋ ಮೀಟರ್ ದೂರದ ಬೆಂಗಳೂರಲ್ಲಿ ರಾಜಕೀಯ ಉದ್ಯಮದಲ್ಲಿ ಬದುಕುವವರು ನಮ್ಮ ಹಳ್ಳಿಗಳ ಭ”ಷ್ಯದ ಆಟ ಆಡುತ್ತಾರೆ….ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೇಗೆ ಮಾರಬೇಕೆಂದು ಲೆಕ್ಕಹಾಕುತ್ತಾರೆ. ಮಾರುವವರು ಮಾರಿ, ಕೊಳ್ಳುವವರು ಬಾಚಿದ ಬಳಿಕ ಭೂತಪ್ಪ, ಜಟಕ, ಮಾಸ್ತಿ,ಬೀರ್ಲು ಮುಂತಾದ ಗ್ರಾಮ ದೇವರುಗಳೆಲ್ಲ ನಿವೃತ್ತರಾಗಿ ಉದ್ಯಮದ ಹೊಸ’ಮಾರಿ’ಯ  ಮೆರವಣಿಗೆ ಶುರುವಾಗುತ್ತದೆ. ಆರಾಮವಾಗಿ ಬದುಕುವವರು ‘ಗಣಿ ಕಾಯುವವರು-ದಣಿ ಕಾಯುವವರು’ ಮಾತ್ರ! ಹಳ್ಳಿ ಹೀಗಾಗದಂತೆ ಕೃಷಿ ಕಾಳಜಿ ಮೂಡಿಸಿ ಭೂಮಿ ಉಳಿಸುವ ಕೆಲಸ ನಡೆಸಬೇಕು. ಕೃಷಿ, ಹಳ್ಳಿ ಬದುಕಿನ ಬಗೆಗೆ ವಕಾಲತ್ತುವಹಿಸುವ ‘ಪಹರೆ ಪಡೆ’ ಬೇಕು.

ಕೃಷಿ ಬದುಕಿನ ಕಾಲದ ಕತೆ ನೆನಪಾಗುತ್ತಿದೆ. ಮುಂಬೈ ಕಾಯ್ದೆ ಕೌನ್ಸಿಲ್ ಸದಸ್ಯರಾದ ಲಕ್ಷ್ಮಿನಾರಾಯಣ ಭಟ್ ಕರ್ಕಿಯವರು ಕ್ರಿ.ಶ. ೧೯೩೧ರಲ್ಲಿ ಬ್ರಿಟೀಷ್ ಗವರ್ನರ್‌ಗೆ ಬರೆದ ಪತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಕೃಷಿ ಚಿತ್ರ ವಿವರಿಸುತ್ತಾರೆ. ಉಣ್ಣಲು ಅನ್ನವಿಲ್ಲದೇ  ಬಾಳೆಕಾಯಿ, ಹಲಸಿನ ಬೀಜ ತಿಂದು ಜನ ಬದುಕುತ್ತಿರುವ ಧಾರುಣ ಚಿತ್ರ ನೀಡುತ್ತಾರೆ. ಆಗ ಬ್ರಾಹ್ಮಣರು ನೇಗಿಲು ಹಿಡಿದು ಉಳುಮೆ ಮಾಡುವದಕ್ಕೆ ನಿಷೇಧವಿತ್ತು. ಇದನ್ನು ಮೀುರಿ ನಡೆದವರನ್ನು ಜಾತಿಯಿಂದ ಹೊರಹಾಕುವ ಕೆಲಸವನ್ನು ಬ್ರಾಹ್ಮಣ ಮಠಾದೀಶರು ಮಾಡುತ್ತಿದ್ದರು!  ಸಿದ್ದಾಪುರ ತಾಲೂಕಿನ ಹೇರೂರಿನ ಹವ್ಯಕ ಬ್ರಾಹ್ಮಣರು ಅಲ್ಲಿನ ನೆಲಮಾಂವ ಮಠದ ಸನಿಹದ ಗದ್ದೆಯಲ್ಲಿ ಕ್ರಿ,ಶ ೧೯೩೧ರ ಜೂನ್ ೧೮ರಂದು ಉಳುಮೆ ಮಾಡಿ ಮಠದ ನಿಯಮ ಮುರಿದರು! ನೇಗಿಲು ಹಿಡಿದದ್ದು ನಿಜವಾದ ಕೃಷಿ ಜಯಂತಿ. ಇಂದು ಕರಾವಳಿಯಲ್ಲಿರುವ ಹಬ್ಬು ಬ್ರಾಹ್ಮಣರು ಒಂದು ಕಾಲಕ್ಕೆ ನೇಗಿಲು ಹಿಡಿದಿದ್ದಕ್ಕೆ ಹುಟ್ಟಿಕೊಂಡ ಗುಂಪು! ಯಾವತ್ತಿನ ಆಡಳಿತ ವೈಖರಿಯ ನಮ್ಮ ಡಿಸಿ ಸಾಹೇಬರು ಗದ್ದೆಹೂಡಿ ಹುಬ್ಬೇರಿಸುವ ಕೆಲಸ ಮಾಡಿದ್ದಾರೆ. ಭಲೇ! ಅನ್ನದ ಅರಿವು ಬಿತ್ತಲು ಆಗಾಗ ಕೆಸರುಗದ್ದೆಗೆ ಕಚೇರಿ ಬರಬೇಕು.