ಕೆಸವಿನ ದಂಟು ಮತ್ತು ಗೆಡ್ಡೆಗಳು ಒಳ್ಳೆಯ ತರಕಾರಿ. ಒಮ್ಮೆ ನೆಟ್ಟರೆ ಬಹುಕಾಲ ಇರುವಂತಾದ್ದು ಈ ಬೆಳೆ. ಉಷ್ಣವಲಯದ ಹಲವಾರು ದೇಶಗಳ ಜನರು ಇವುಗಳನ್ನು ಆಹಾರವಾಗಿ ಬಳಸುತ್ತಾರೆ. ಇದರ ಬೇರುಗೆಡ್ಡೆಗಳು ಪಿಷ್ಟಯುಕ್ತ ಆಹಾರ. ಚಿಗುರೆಲೆಗಳೂ ಸಹ ಉತ್ತಮ ತರಕಾರಿಯೇ. ನಮ್ಮ ದೇಶದಲ್ಲಿ ಸುಮಾರು ೧.೭ ಲಕ್ಷ ಹೆಕ್ಟೇರುಗಳಲ್ಲಿ ಈ ಬೆಳೆಯ ಬೇಸಾಯವಿದೆ. ಅದರಿಂದ ಸಿಗುತ್ತಿರುವ ವಾರ್ಷಿಕ ಉತ್ಪತ್ತಿ ಸುಮಾರು ೨೦ ಲಕ್ಷ ಟನ್ನುಗಳಷ್ಟು.

ಪೌಷ್ಟಿಕ ಗುಣಗಳು : ಕೆಸವಿನ ಗೆಡ್ಡೆ ಮತ್ತು ಎಲೆಗಳಲ್ಲಿನ ಹಲವಾರು ಪೋಷಕಾಂಶಗಳಿವೆ.

೧೦೦ ಗ್ರಾಂ ಗೆಡ್ಡೆ ಮತ್ತು ಎಲೆಗಳಲ್ಲಿ; ವಿವಿಧ ಪೋಷಕಾಂಶಗಳು

ಪೋಷಕಾಂಶಗಳು ಗೆಡ್ಡೆ ಎಲೆ
ತೇವಾಂಶ ೬೫.೦ ಗ್ರಾಂ ೭೩.೧ ಗ್ರಾಂ
ಶರ್ಕರಪಿಷ್ಟ ೨೯.೦ ಗ್ರಾಂ ೨೨.೧ ಗ್ರಾಂ
ಪ್ರೊಟೀನ್ ೩.೦ ಗ್ರಾಂ ೩.೦ ಗ್ರಾಂ
ಕೊಬ್ಬು ೦.೧೬ ಗ್ರಾಂ ೦.೧ ಗ್ರಾಂ
ಒಟ್ಟು ಖನಿಜ ಪದಾರ್ಥ ೧.೩೦ ಗ್ರಾಂ ೧.೭ ಗ್ರಾಂ
ನಾರು ಪದಾರ್ಥ ೧.೧೮ ಗ್ರಾಂ
’ಎ’ ಜೀವಸತ್ವ ೪೦ ಐಯು
ರೈಬೋಫ್ಲೇವಿನ್ ೦.೦೪ ಮಿ.ಗ್ರಾಂ ೯೦ ಮಿ.ಗ್ರಾಂ
ಥಯಮಿನ್ ೦.೧೮ ಮಿ.ಗ್ರಾಂ ೩೧ ಮಿ.ಗ್ರಾಂ
’ಸಿ’ ಜೀವಸತ್ವ ೭.೦೦ ಮಿ.ಗ್ರಾಂ ಅತ್ಯಲ್ಪ
ನಯಾಸಿನ್ ೦.೯೦ ಮಿ.ಗ್ರಾಂ

ಔಷಧೀಯ ಗುಣಗಳು ಗೆಡ್ಡೆಗಳನ್ನು ಬಿಸಿ ಮಾಡಿ ಜಜ್ಜಿ ಊತ ಇರುವ ಭಾಗಗಳ ಮೇಲೆ ಹರಡಿ ಕಟ್ಟಿದಲ್ಲಿ ಶಮನ ಸಿಗುತ್ತದೆ. ಬಾಯಿ ಹುಣ್ಣಿನಲ್ಲಿ ಈ ಗೆಡ್ಡೆಗಳನ್ನು ಸುಟ್ಟು ತಯಾರಿಸಿದ ಬೂದಿ ಮತ್ತು ಜೇನು ತುಪ್ಪಗಳ ಮಿಶ್ರಣ ಲೇಪಿಸುವುದುಂಟು. ಇವುಗಳ ಸೇವನೆ ಮಲಬದ್ದತೆಗೆ ಒಳ್ಳೆಯದು. ದಂಟು ಹಾಗೂ ಎಲೆಗಳ ರಸವನ್ನು ಕಿವಿ ನೋವಿನಲ್ಲಿ ಬಳಸುತ್ತಾರೆ. ಇದರ ಯಾವುದೇ ಭಾಗವನ್ನು ಹಸಿಯಾಗಿ ಬಳಸುವಂತಿಲ್ಲ. ಒಂದು ವೇಳೆ ಹಾಗೇನಾದರೂ ತಿಂದದ್ದೇ ಆದರೆ ಗಂಟಲು ಕೆರೆತ ಉಂಟಾಗುತ್ತದೆ. ಇವುಗಳನ್ನು ಬಹಳಷ್ಟು ಪ್ರಮಾಣದಲ್ಲಿ ಬಳಸಿದ್ದೇ ಆದರೆ ದೇಹದ ತೂಕದಲ್ಲಿ ಹೆಚ್ಚಳವುಂಟಾಗುತ್ತದೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ಮಧ್ಯ ಹಾಗೂ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳು, ಪ್ರಸ್ತುತ ಈಜಿಫ್ಟ್, ಫಿಲಿಪ್ಪೈನ್ಸ್, ಹವಾಯ್, ಪೆಸಿಫಿಕ್ ದ್ವೀಪಗಳು, ಕ್ಯಾರಿಬ್ಬೀನ್ ದ್ವೀಪಗಲಲ್ಲಿ ಇದನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಯಲಾಗುತ್ತದೆ.

ಸಸ್ಯ ವರ್ಣನೆ : ಇದು ಆರೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಕೆಸವಿನಲ್ಲಿ ಎರಡು ಬಗೆ. ಅವುಗಳೆಂದರೆ ಎಡ್ಡೊ ಮತ್ತು ದಶೀನ್. ಎಡ್ಡೊ ಬಗೆಯಲ್ಲಿ ಲಶುನ (ಗೆಡ್ಡೆ)ಗಳು ಸಣ್ಣವಿದ್ದು ಲಶುನಮರಿಗಳು ದೊಡ್ಡವಿರುತ್ತವೆ. ಆದರೆ ದಶೀನ್ ಬಗೆಯಲ್ಲಿ ಹಾಗಲ್ಲ. ಅದರಲ್ಲಿ ಲಶುನಗಳು ದೊಡ್ಡವಿದ್ದು ಮರಿಗಳು ಸಣ್ಣವಿರುತ್ತವೆ. ಮೊದಲ ಬಗೆಯನ್ನು ಹೆಚ್ಚಾಗಿ ವೆಸ್ಟ್ ಇಂಡೀಸ್, ಟ್ರಿನಿಡಾಡ್, ಅಮೆರಿಕಾ ಮುಂತಾಗಿ ಬೆಳೆದರೆ ಎರಡನೆಯದನ್ನು ಅಮೆರಿಕಾ, ಹವಾಯ್ ಮುಂತಾಗಿ ಹೆಚ್ಚಾಗಿ ಬೆಳೆಯುತ್ತಾರೆ.

ಎಡ್ಡೊ ಬಗೆಯಲ್ಲಿ ಲೆಹುವ, ಷಿಕೊಯುವಯುವ, ಪಿಕೊಕಿಯ ಹಾಗೂ ಪಿಕೊ ಉಲಿ ಉಲಿ ಮುಖ್ಯವಾದುವು. ದಶೀನ್ ಬಗೆಯಲ್ಲಿ ಫಿಜಿಮುಮು ಜನಪ್ರಿಯ.

ಕೆಸವು ಮೃದು ಭಾಗಗಳಿಂದ ಕುಡಿದ ಸಸ್ಯ. ಲಶುನಗಳು ಹಸಿಯಾಗಿದ್ದು ಮಣ್ಣೊಳಗಿರುತ್ತವೆ. ಅವುಗಳ ಗೆಣ್ಣುಭಾಗಗಳಿಂದ ಮರಿಗಳು ಹುಟ್ಟಿ ವೃದ್ಧಿ ಹೊಂದುತ್ತವೆ. ಲಶುನಗಳಲ್ಲಿ ಗೆಣ್ಣುಗಳು, ಗೆಣ್ಣಿ ನಂತರ ಮತ್ತು ಬೇರುಗಳು ಸ್ಪಷ್ಟ. ಅವುಗಳ ಮೇಲ್ತುದಿಯಲ್ಲಿ ಸುಳಿಮೊಗ್ಗು ಇರುತ್ತದೆ. ಲಶುನದ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಕೆಲವು ೧ ಸೆಂ.ಮೀ. ದಪ್ಪ ಇದ್ದರೆ ಮತ್ತೆ ಕೆಲವು ೧೫ ಸೆಂ.ಮೀ ದಪ್ಪ ಇರುತ್ತವೆ. ಅದೇ ತೆರನಾಗಿ ಅವುಗಳ ಉದ್ದ ಸಹ ವ್ಯತ್ಯಾಸಗೊಳ್ಳುತ್ತದೆ. ಕೆಲವೊಂದು ಲಶುನಗಳು ೬೦ ಸೆಂ.ಮೀ. ಉದ್ದ ಇರುವುದುಂಟು. ಲಶುನದ ಹೊರಸಿಪ್ಪೆ ಮಾಸಲು ಕಂದು; ಒರಟಾಗಿರುತ್ತದೆ. ತಿರುಳು ಗಟ್ಟಿ, ಬೆಳ್ಳಗೆ, ಹಳದಿ, ಕೆಂಪು, ಕೆನ್ನೀಲಿ ಅಥವಾ ಕಿತ್ತಲೆ ಬಣ್ಣದ್ದಿರುತ್ತದೆ. ಮಣ್ಣಿನಿಂದ ಮೇಲೆ ಕಾಣುವ ಭಾಗದಲ್ಲಿ ಎಲೆಗಳೇ ಪ್ರಧಾನ. ಅವು ಹೃದಯಾಕಾರವಿರುತ್ತವೆ.

ಪ್ರತಿ ಎಲೆಯಲ್ಲಿ ಉದ್ದನಾದ ತೊಟ್ಟು ಅಥವಾ ದಂಟು ಮತ್ತು ವಿಶಾಲಗೊಂಡ ಅಲುಗು ಇರುತ್ತವೆ. ತೊಟ್ಟಿನ ಬುಡಭಾಗ ಅಗಲಗೊಂಡಿದ್ದು ಲಶುನಕ್ಕೆ ಬಿಗಿಯಾಗಿ ಅಂಟಿಕೊಂಡಿರುತ್ತದೆ. ಎಲೆಗಳ ಅಂಚು ಒಡೆದಿರುವುದಿಲ್ಲ. ಎಲೆಗಳ ಬಣ್ಣ ಹಸುರು. ತಳಭಾಗದ ನರಗಳು ಎದ್ದು ಕಾಣುತ್ತವೆ. ತೊಟ್ಟಿನ ತುದಿಯಲ್ಲಿ ಮೂರು ಪ್ರಧಾನ ನರಗಳು ಪ್ರಾರಂಭಗೊಂಡು, ಕವಲೊಡೆದಿರುತ್ತವೆ. ಎಲೆಗಳು ಅಲುಗು ೧.೨ ರಿಂದ ೧.೬ ಮೀಟರ್ ಉದ್ದ ಇರುತ್ತದೆ. ದಂಟು ಬುಡದತ್ತ ದಪ್ಪನಾಗಿದ್ದು ತುದಿಯತ್ತ ಕಿರಿದಾಗುತ್ತಾ ಹೋಗುತ್ತದೆ. ದಂಟಿನ ಭಾಗ ಗಟ್ಟಿ ಇದ್ದಂತೆ ಕಂಡರೂ ಅದರ ಒಳಭಾಗದಲ್ಲಿ ಗಾಳಿಯ ಪೊಟರುಗಳಿರುತ್ತವೆ. ನೀರು ನಿಲ್ಲುವ ಸ್ಥಳಗಳಲ್ಲಿ ಇವು ಗಿಡದ ಉಸಿರಾಟದಲ್ಲಿ ನೆರವಾಗುತ್ತವೆ. ದಂಟುಗಳ ಬಣ್ಣ ಕೆನ್ನೀಲಿ ಇಲ್ಲವೇ ಹಸುರು. ಅಪರೂಪವಾಗಿ ಹೂಬಿಡುವುದುಂಟು. ಹೂತೆನೆ ಹೊಂಬಾಳೆಯಂತೆ ಕಾಣುತ್ತವೆ. ಅವುಗಳ ಮೇಲೆ ರಕ್ಷಾಪೊರೆ ಇರುತ್ತದೆ. ಹೂಗಳಲ್ಲಿ ಹೆಣ್ಣು, ನಿರರ್ಥಕ ಮತ್ತು ಗಂಡು ಎಂದು ಮೂರು ಬಗೆ. ಬುಡಭಾಗದಲ್ಲಿನ ಹೂವು ಹೆಣ್ಣು ಹೂವಾಗಿರುತ್ತವೆ. ತುದಿಯಲ್ಲಿ ಗಂಡು ಹೂಗಳಿದ್ದು ಅವೆರಡರ ನಡುವೆ ನಿರರ್ಥಕ ಹೂವು ಇರುತ್ತವೆ. ಹೂವು ಗಾತ್ರದಲ್ಲಿ ಬಲು ಸಣ್ಣವು. ಕಾಯಿಗೆ ’ಬೆರ‍್ರಿ’ ಎನ್ನುತ್ತಾರೆ.

ಲಶುನಗಳು ಉರುಳೆಯಂತೆ ಇಲ್ಲವೇ ಗೋಲಾಕಾರವಿರುತ್ತವೆ. ಎಲೆತೊಟ್ಟುಗಳ ಕಂಕುಳಲ್ಲಿ ಮೂಡುವ ಸಣ್ಣ ಲಶುನಗಳೇ ಮರಿಲಶುನಗಳು. ಮೊದಲೇ ತಿಳಿಸಿದಂತೆ ಅವುಗಳನ್ನು ಹಸಿಯಾಗಿ ತಿನ್ನಬಾರದು. ಅವುಗಳನ್ನು ಕ್ಯಾಲ್ಷಿಯಂ ಆಕ್ಸಲೇಟ್ ಇರುವ ಕಾರಣ ಗಂಟಲಲ್ಲಿ ಕೆರೆತವನ್ನುಂಟು ಮಾಡುತ್ತವೆ. ಅವು ದಿನಕಳೆದಂತೆಲ್ಲಾ ಬಲಿತು ಗಡಸುಗೊಳ್ಳುತ್ತವೆ.

ಹವಾಗುಣ ಇದಕ್ಕೆ ಬೆಚ್ಚಗಿನ ಹವಾಗುಣ ಬಹುವಾಗಿ ಹಿಡಿಸುತ್ತದೆ. ಇದನ್ನು ಸಮುದ್ರಮಟ್ಟದಿಂದ ೨೪೦೦ ಮೀಟರ್ ಎತ್ತರದವರೆಗೆ ಲಾಭದಾಯಕವಾಗಿ ಬೆಳೆಯಬಹುದು. ಹವಾಗುಣ ಬೆಚ್ಚಗಿದ್ದು, ಆರ್ದ್ರತೆಯಿಂದ ಕೂಡಿದ್ದಲ್ಲಿ ಉತ್ತಮ. ಮಳೆ ವರ್ಷದ ಎಲ್ಲಾ ತಿಂಗಳಲ್ಲಿ ಆಗುತ್ತಿದ್ದರೆ ಸೂಕ್ತ.  ಉಷ್ಣತೆ ೨೧ ರಿಂದ ೨೭ ಸೆ. ಇದ್ದಲ್ಲಿ ಲಾಭದಾಯಕ. ಹಿಮ ಸುರಿದರೆ ಇದಕ್ಕಾಗದು.

ಭೂಗುಣ : ಇದರ ಬೇಸಾಯಕ್ಕೆ ಫಲವತ್ತಾದ ಮಣ್ಣಿನ ಭೂಮಿ ಬೇಕು. ಮಣ್ಣು ಆಳವಾಗಿದ್ದು, ನೀರು ಬಸಿಯುವಂತಿರಬೇಕು. ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ನೀರಾವರಿ ಸೌಲಭ್ಯವಿರಬೇಕು. ಸಾಮಾನ್ಯವಾಗಿ ತಗ್ಗು ಪ್ರದೇಶಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳಲಾಗುತ್ತದೆ.

ತಳಿಗಳು : ಕೆಸವಿನ ಬೆಳೆಯಲ್ಲಿ ಬಹಳಷ್ಟು ತಳಿಗಳಿವೆ. ತೋಟಗಾರಿಕೆ ಇಲಾಖೆಯ ಹಿಂದಿನ ನಿರ್ದೇಶಕರಾಗಿದ್ದ ಡಾ|| ಎಂ.ಎಚ್.ಮರಿಗೌಡರು ಸುಮಾರು ೪೪ ವರ್ಷಗಳ ಹಿಂದೆ ೩೦೦-೪೦೦ ತಳಿಗಳನ್ನು ಪಟ್ಟಿ ಮಾಡಿದ್ದರು.

ಸಸ್ಯಾಭಿವೃದ್ಧಿ : ಇದನ್ನು ಗೆಡ್ಡೆ ಹಾಗೂ ಮರಿಗೆಡ್ಡೆಗಳ ಮೂಲಕ ವೃದ್ಧಿ ಮಾಡಬಹುದು. ಗೆಡ್ಡೆಗಳನ್ನು ಹೋಳು ಮಾಡಿ ಸಹ ಬಿತ್ತಬಹುದು ಆದರೆ ಅವುಗಳಲ್ಲಿ ಸುಳಿಭಾಗ ಇರುವುದು ಅಗತ್ಯ. ಇಂತಹ ಬಿತ್ತನೆ ಸಾಮಗ್ರಿಗೆ ಹವಾಯಿಯಲ್ಲಿ ’ಹುಲಿ’ ಎನ್ನುತ್ತಾರೆ. ಬಿತ್ತನೆ ಗೆಡ್ಡೆಗಳ ತೂಕ ೧.೫ ಗ್ರಾಮ ಗಳಿಗು ಮೇಲ್ಪಟ್ಟಿರಬೇಕು. ಬೀಜ ಪದ್ಧತಿ ಕಷ್ಟ. ಉತಕ ಸಾಕಣೆಯಿಂದ ನಂಜು ರೋಗ ರಹಿತ ಸಸಿಗಳು ಸಾಧ್ಯ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ತಿಪ್ಪೆಗೊಬ್ಬರದ ಜೊತೆಗೆ ಮೊದಲ ಕಂತಿನ ರಾಸಾಯನಿಕ ಗೊಬ್ಬರಗಳನ್ನು ಹಾಕುವುದು ಸರಿಯಾದ ಮಾರ್ಗ. ಮಡಿಗಳಾದಲ್ಲಿ ಸಾಲುಗಳ ನಡುವೆ ೪೫ ಸೆಂ.ಮೀ. ಮತ್ತು ಸಾಲಿನಲ್ಲಿ ೩೦ ಸೆಂ.ಮೀ ಅಂತರ ಕೊಡಬೇಕು. ನಮ್ಮ ರಾಜ್ಯದಲ್ಲಿ ಸಾಲುಗಳ ನಡುವೆ ೪೫ ಸೆಂ.ಮೀ. ಮತ್ತು ಸಾಲಿನಲ್ಲಿ ೬೦ ಸೆಂ.ಮೀ. ಅಂತರ ಕೊಡುವ ರೂಢಿ ಇದೆ. ಫಿಜಿಯಲ್ಲಿ ೬೦ * ೬೦ ಸೆಂ.ಮೀ. ಗಳಷ್ಟು ಅಂತರ ಕೊಟ್ಟರೆ ಪಶ್ಚಿಮ ಆಫ್ರಿಕಾದಲ್ಲಿ ೧.೦ * ೧.೦ ಅಂತರ ಕೊಡುತ್ತಾರೆ. ಗೆಡ್ಡೆಗಳನ್ನು ಊರುವ ಮುಂಚೆ ತೆಳ್ಳಗೆ ನೀರು ಕೊಡುವುದು ಒಳ್ಳೆಯದು. ಬಿತ್ತುವ ಆಳ ಹೆಚ್ಚೆಂದರೆ ೫ ರಿಂದ ೭.೫ ಸೆಂ.ಮೀ. ಅಷ್ಟೆ. ಉತ್ತರ ಭಾರತದಲ್ಲಿ ಮಾರ್ಚ್-ಏಪ್ರಿಲ್ ಮತ್ತು ಜೂನ್-ಜುಲೈ ಹಾಗೂ ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್-ಅಕ್ಟೋಬರ್ ಬಿತ್ತನೆಗೆ ಸರಿಯಾದ ಕಾಲ. ಹೆಕ್ಟೇರಿಗೆ ೭೫೦ ರಿಂದ ೯೫೦ ಕಿ.ಗ್ರಾಂ ಬಿತ್ತನೆ ಬೇಕಾಗುತ್ತದೆ. ಬಿತ್ತನೆ ಮಾಡಿದ ನಂತರ ಮಣ್ಣಲ್ಲಿನ ತೇವ ಹಾಗೆಯೇ ಇರುವಂತೆ ಮಾಡಲು ಮತ್ತು ಉಷ್ಣತೆ ಕುಸಿಯದಂತಿರಲು ಒಣಹುಲ್ಲಿನ ಹೊದಿಕೆ ಕೊಡುವುದುಂಟು. ಜಪಾನ್ ದೇಶದಲ್ಲಿ ಸಾಲುಗಳ ನಡುವೆ ಒಂದು ಮೀಟರ್ ಅಗಲದ ಪ್ಲಾಸ್ಟಿಕ್ ಹಾಳೆಗಳನ್ನು ಹರಡುತ್ತಾರೆ.

ಗೊಬ್ಬರ : ಈ ಬೆಳೆ ಹೆಚ್ಚಿನ ಫಲವತ್ತನ್ನು ಅಪೇಕ್ಷಿಸುತ್ತದೆ. ಸೂಕ್ತ ಪ್ರಮಾಣದ ಸಾರಜನಕ ದೊರೆತಲ್ಲಿ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ. ಅದೇ ರೀತಿ ಪೊಟ್ಯಾಷಿಯಂ ಧಾತುವು ಸಾಕಷ್ಟಿದ್ದಲ್ಲಿ ನೀರು ನಿರ್ವಹಣೆ ಉತ್ತಮವಿರುವುದಾಗಿ ತಿಳಿದು ಬಂದಿದೆ. ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೨೦೦ ಕಿ.ಗ್ರಾಂ ಅಮೋನಿಯಂ ಸಲ್ಫೇಟ್, ೨೦೦ ಕಿ.ಗ್ರಾಂ ಸೂಪರ್ ಫಾಸ್ಫೇಟ್ ಮತ್ತು ೨೦೦ ಕಿ.ಗ್ರಾಂ ಮ್ಯೂರೇಟ್ ಆಫ್ ಪೊಟ್ಯಾಷ್‌ಗಳನ್ನು ಕೊಡಬೇಕಾಗುತ್ತದೆ. ರಾಸಾನಿಕ ಗೊಬ್ಬರಗಳನ್ನು ಮೊದಲೇ ಹೇಳಿದಂತೆ ಎರಡು ಸಮ ಕಂತುಗಳಲ್ಲಿ ಕೊಡಬೇಕು.

ನೀರಾವರಿ : ಬೆಳೆಗೆ ಹದವರಿತು ನೀರು ಕೊಡಬೇಕು. ಯಾವುದೇ ಹಂತದಲ್ಲಿ ನೀರು ಪೂರೈಕೆ ನಿಲ್ಲಬಾರದು. ಇತರ ಪದ್ದತಿಗಳಿಗಿಂತ ಕಾಲುವೆಗಳಲ್ಲಿ ನೀರನ್ನು ಹಾಯಿಸುವುದು ಉತ್ತಮ. ಬೇಸಿಗೆಯಲ್ಲಿ ನಾಲ್ಕು ದಿನಗಳಿಗೊಮ್ಮೆ ಮತ್ತು ಇತರ ದಿನಗಳಲ್ಲಿ ಹತ್ತು ದಿನಗಳಿಗೊಮ್ಮೆ ನೀರು ಹಾಯಿಸಬೇಕು. ನಿಂತ ನೀರಿನಲ್ಲಿ ಬೆಳೆಯುವುದಿದ್ದರೆ ನೀರಿನ ಮಟ್ಟ ೨.೫ ರಿಂದ ೫.೦ ಸೆಂ.ಮೀ. ಗಳಷ್ಟಿದ್ದರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು. ಸುಮಾರು ಮೂರು ನಾಲ್ಕು ತಿಂಗಳುಗಳವರೆಗೆ ಕಳೆಗಳ ಬಾಧೆ ಹೆಚ್ಚಾಗಿರುತ್ತದೆ. ಇತರ ದೇಶಗಳಲ್ಲಿ ಈ ಉದ್ದೇಶಕ್ಕೆ ಕಳೆನಾಶಕಗಳನ್ನು ಬಳಸುತ್ತಾರೆ. ಹೆಕ್ಟೇರಿಗೆ ೧.೨ ಕಿ.ಗ್ರಾಂ ಪ್ರೊಮೆಟ್ರಿನ್ ಕಳೆನಾಶಕ ಸಾಕಾಗುತ್ತದೆ. ಇದನ್ನು ಕಳೆಗಳ ಬೀಜ ಮೊಳೆಯುವ ಮುಂಚೆ ಸಿಂಪಡಿಸುತ್ತಾರೆ. ಹವಾಯ್ ದೇಶದಲ್ಲಿ ಈ ಉದ್ದೇಶಕ್ಕೆ ಹೆಕ್ಟೇರಿಗೆ ೫-೬ ಕಿ.ಗ್ರಾಂ ನೈಟ್ರೊಫೆನ್ ಬಳಸುತ್ತಾರೆ. ಎರಡನೇ ಕಂತಿನ ರಾಸಾಯನಿಕ ಗೊಬ್ಬರಗಳನ್ನು ಬಿತ್ತನೆ ಮಾಡಿದ ನಾಲ್ಕು ತಿಂಗಳುಗಳ ನಂತರ ಮೇಲುಗೊಬ್ಬರವಾಗಿ ಕೊಡಬೇಕು.

ಅಂತರ ಬೆಳೆಯಾಗಿ : ಕೆಸವಿನ ದಂಟನ್ನು ರಬ್ಬರ್, ಬಾಳೆ, ಕೋಕೋ, ತೆಂಗು, ಕಿತ್ತಲೆ ಮುಂತಾದುವುಗಳ ನಡುವೆ ಬೆಳೆಸುವುದು ಲಾಭದಾಯಕ. ಈಜಿಫ್ಟ್ ದೇಶದಲ್ಲಿ ಇದನ್ನು ಮೂಲಂಗಿ, ಟರ್ನಿಪ್, ಸೌತೆ ಮುಂತಾದುವುಗಳ ನಡುವೆ ಬೆಳೆಯುತ್ತಾರೆ. ನೈಜೀರಿಯಾದಲ್ಲಿ ಡಯಸ್ಕೋರಿಯಾ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಕೋಕೋ ಬೆಳೆಗಳಲ್ಲಿ ಬೆಳೆಸುತ್ತಾರೆ.

ಸವರುವಿಕೆ : ಒಣಗಿದ ಹಾಗೂ ಮುರಿದ ಎಲೆಗಳನ್ನು ಸವರಿ ತೆಗೆಯಬೇಕು. ಪಕ್ಕ ಮೋಸುಗಳನ್ನು ಚಿವುಟಿ ಹಾಕಬೇಕು. ಗಿಡವೊಂದಕ್ಕೆ ಒಂದು ಇಲ್ಲವೇ ಎರಡು ಮೋಸುಗಳಿದ್ದರೆ ಸಾಕು.

ಕೊಯ್ಲು ಮತ್ತು ಇಳುವರಿ ಎಲೆ ಮತ್ತು ದಂಟುಗಳಿಗಾದಲ್ಲಿ ಅವು ಇನ್ನೂ ಎಳಸಾಗಿರುವಾಗಲೇ ಕೊಯ್ಲು ಮಾಡಬೇಕು. ನಮ್ಮಲ್ಲಿ ಬಿತ್ತನೆ ಮಾಡಿದ ಮೂರು ತಿಂಗಳುಗಳ ನಂತರ ಎಲೆ ಮತ್ತು ದಂಟುಗಳನ್ನು ಕೊಯ್ಲು ಮಾಡಲು ಪ್ರಾರಂಭಿಸುತ್ತಾರೆ. ಗೆಡ್ಡೆಗಳಿಗಾದರೆ ಆರು ತಿಂಗಳು ಹಿಡಿಸುತ್ತವೆ. ಆ ಸಮಯಕ್ಕೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಒಣಗಲು ಪ್ರಾರಂಭಿಸುತ್ತವೆ. ನಮ್ಮ ದೇಶದಲ್ಲಿ ಹೆಕ್ಟೇರಿಗೆ ೧೧.೭ ರಿಂದ ೧೪.೦ ಟನ್ ಗೆಡ್ಡೆಗಳು ಸಾಧ್ಯವಾದರೆ ಹವಾಯಿಯಲ್ಲಿ ಅದರ ಪ್ರಮಾಣ ೨೨.೫ ಟನ್ನುಗಳಷ್ಟು ಇದೆ.

ಗೆಡ್ಡೆಗಳನ್ನು ಚೆನ್ನಾಗಿ ತೊಳೆದು, ಬಿಸಿಲಲ್ಲಿ ಹರಡಿ, ಒಂದೆರಡು ದಿನಗಳವರೆಗೆ ಒಣಗಿಸಿ ಜೋಪಾನ ಮಾಡಿದರೆ ವಾರಗಟ್ಟಲೆ ಇಡಬಹುದು. ಸ್ಥಳೀಯ ಮಾರುಕಟ್ಟೆಗಳೆ ಇವುಗಳ ಮಾರಾಟ ಕೇಂದ್ರಗಳು.

ಕೀಟ ಮತ್ತು ರೋಗಗಳು : ಕೀಟಗಳಲ್ಲಿ ಎಲೆ ತಿನ್ನುವ ಕಂಬಳಿ ಹುಳು ಮತ್ತು ದುಂಬಿಗಳು ಸ್ವಲ್ಪ ಮಟ್ಟಿನ ಹಾನಿಯನ್ನುಂಟು ಮಾಡುತ್ತವೆ. ಕಂಬಳಿ ಹುಳುಗಳು ರಾತ್ರಿ ಹೊತ್ತಿನಲ್ಲಿ ಹರಿದಾಡಿ ಎಲೆ ಮತ್ತು ದಂಟುಗಳನ್ನು ತಿನ್ನುತ್ತವೆ. ದುಂಬಿಗಳು ಎಲೆಗಳಲ್ಲಿ ರಂಧ್ರಗಳನ್ನುಂಟು ಮಾಡುತ್ತವೆ. ಕಂಬಳಿ ಹುಳುಗಳನ್ನು ತಿನ್ನುವ ಪರೋಪ ಜೀವಿ ಹುಳುಗಳನ್ನು ಬಳಸಿ ಅವುಗಳನ್ನು ಸುಲಭವಾಗಿ ಹತೋಟಿ ಮಾಡಬಹುದು. ಅದಿಲ್ಲದಿದ್ದಲ್ಲಿ ೧ ಲೀಟರ್ ನೀರಿಗೆ ೫೦ ಮಿ.ಲೀ ಎಂಡೋಸಲ್ಫಾನ್ ಕೀಟನಾಶಕ ಬೆರೆಸಿ ಸಿಂಪಡಿಸಿದಲ್ಲಿ ಈ ಎರಡೂ ಕೀಟಗಳು ಸಾಯುತ್ತವೆ.

ರೋಗಗಳಲ್ಲಿ ನಂಜುರೋಗ, ಎಲೆಚುಕ್ಕೆ ಮತ್ತು ಮೆತುಕೊಳೆ ಮುಖ್ಯವಾದುವು. ನಂಜುರೋಗ ಸಸ್ಯಹೇನುಗಳ ಮೂಲಕ ಹರಡುತ್ತದೆ. ರೋಗದ ಸೋಂಕು ಇರುವ ಗೆಡ್ಡೆಗಳನ್ನು ಬಿತ್ತನೆಗೆ ಬಳಸಬಾರದು. ಅಂತಹ ಸಸಿಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

ಎಲೆಚುಕ್ಕೆ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪ್ರಾರಂಭಕ್ಕೆ ಎಲೆಗಳ ಮೇಲೆಲ್ಲಾ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ಅನಂತರ ಅವು ಗಾತ್ರದಲ್ಲಿ ಹಿಗ್ಗುತ್ತವೆ ಎಲೆಗಳ ಆರೋಗ್ಯ ಕೆಡುತ್ತದೆಯಲ್ಲದೆ ಅವು ನೋಡಲು ಚೆನ್ನಾಗಿರುವುದಿಲ್ಲ. ನೆರಳು ಜಾಸ್ತಿ ಇದ್ದಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಬೆಳೆ ಪರಿವರ್ತನೆ ಅನುಸರಿಸಬೇಕು ಹಾಗೂ ಶೇಕಡಾ ೧ ಬೋರ್ಡೊ ಮಿಶ್ರಣ ಸಿಂಪಡಿಸಬೇಕು.

ಮೆತು ಕೊಳೆ ಶಿಲೀಂಧ್ರ ರೋಗವಿದ್ದು, ಎಲೆ ಮತ್ತು ದಂಟು ಕೊಳೆಯುವಂತೆ ಮಾಡುತ್ತದೆ. ತೇವ ಜಾಸ್ತಿ ಇದ್ದರೆ ಇದರ ಹಾವಳಿ ಹೆಚ್ಚು. ಯಾವುದಾದರೂ ಸೂಕ್ತ ಶಿಲೀಂಧ್ರ ನಾಶಕ ಸಿಂಪಡಿಡಿದಲ್ಲಿ ಇದು ಹತೋಟಿಗೊಳ್ಳುತ್ತದೆ.

ಬೀಜೋತ್ಪಾದನೆ : ಇದು ಗೆಡ್ಡೆಗಳ ಮೂಲಕ ವೃದ್ಧಿಯಾಗುವ ಕಾರಣ ಬೀಜೋತ್ಪತ್ತಿ ಕಾರ್ಯ ಎಲ್ಲಿಯೂ ಕಂಡುಬಂದಿಲ್ಲ. ಉತಕ ಸಾಕಣೆಯಲ್ಲಿ ರೋಗರಹಿತ ಸಸ್ಯಸಾಮಗ್ರಿ ಸಾಧ್ಯ.

* * *