ಕೆ ಆರ್‌ನಗರ ತಾಲೂಕು ಮೈಸೂರು ಜಿಲ್ಲೆಯ ವಾಯುವ್ಯ ಭಾಗದಲ್ಲಿದೆ. ಉತ್ತರ ಹಾಗೂ ವಾಯುವ್ಯ ಭಾಗದಲ್ಲಿ ಹೊಳೆನರಸೀಪುರ ತಾಲೂಕು, ಪಶ್ಚಿಮ ಅರಕಲಗೂಡು, ನೈಋತ್ಯದಲ್ಲಿ ಪಿರಿಯಾಪಟ್ಟಣ, ದಕ್ಷಿಣಕ್ಕೆ ಹುಣಸೂರು, ಆಗ್ನೇಯಕ್ಕೆ ಮೈಸೂರು ತಾಲೂಕುಗಳು ಮೇರೆಗಳಾಗಿವೆ. ಒಟ್ಟು ವಿಸ್ತೀರ್ಣ ೫೯೬ ಚ.ಕಿ.ಮೀ.ಗಳು. ಕಾವೇರಿ ನದಿಯು ಈ ತಾಲೂಕಿನ ಜೀವನದಿಯಾಗಿದೆ. ಕೆ ಆರ್‌ಎಸ್‌ಹಿನ್ನೀರು ಪ್ರದೇಶದಲ್ಲಿರುವ ಕೆ ಆರ್‌ನಗರ ತಾಲೂಕು ಭತ್ತದ ಕಣಜ ಎಂದೇ ಪ್ರಸಿದ್ಧ. ಕೆ ಆರ್‌ನಗರ ಪಟ್ಟಣವು ಮೊದಲು ಕಾವೇರಿ ನದಿಯ ದಂಡೆಯ ಎಡತೊರೆಯಲ್ಲಿತ್ತು. ಕನ್ನಂಬಾಡಿ ಕಟ್ಟೆಯ ನಿರ್ಮಾಣದ ಹಿನ್ನೆಲೆಯಲ್ಲಿ ೧೯೩೫ರಲ್ಲಿ ಪಟ್ಟಣವನ್ನು ಈಗಿರುವಲ್ಲಿಗೆ ಸ್ಥಳಾಂತರಿಸಲಾಯಿತು. ಪ್ರಾಚೀಣ ಕಾಲದಿಂದಲೂ ಜೈನ, ಶೈವ, ವೈಷ್ಣವ ಧರ್ಮಗಳನ್ನು ಪೋಷಿಸಿ ಬೆಳೆಸಿರುವ ಕೆ.ಆರ್‌. ನಗರ ಹಳೆ ಎಡತೊರೆಯ ಪ್ರಾಚೀನ ಮಸೀದಿ ಹಾಗೂ ಕ್ರೈಸ್ತರ ಡೋರನಹಳ್ಳಿ ಧಾರ್ಮಿಕ ಕೇಂದ್ರ ಸೇರಿದಂತೆ ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿ ಭಾವೈಕ್ಯತೆಯ ಜೀವನಕ್ಕೆ ಹೆಸರಾಗಿದೆ. ಗಂಗರ ಹಾಗೂ ಹೊಯ್ಸಳರ ಕಾಲದ ಶಾಸನಗಳು ಈ ತಾಲೂಕಿನಲ್ಲಿ ದೊರಕಿವೆ.

 

ಚಿಕ್ಕಹನಸೋಗೆ

ದೂರ ಎಷ್ಟು?
ತಾಲ್ಲೂಕಿನಿಂದ: ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ.

ಜೈನ ಬಸದಿ

ಹನಸೋಗೆ ಎಂಬ ಹೆಸರಿನಿಂದ ಸಾಹಿತ್ಯದಲ್ಲಿ, ಶಾಸನದಲ್ಲಿರುವ ಈ ಊರು ಇಂದು ಚಿಕ್ಕ ಹನಸೋಗೆಯಾಗಿದೆ. ರಾಮನೆಂಬ ದೊರೆಯು ಅನೇಕ ಜೈನ ಬಸದಿಗಳನ್ನು ಕಟ್ಟಿಸಿದ್ದಾನೆ. ಗಂಗರ ದೊರೆ ಬೂತುಗನನ್ನು (ಕ್ರಿ.ಶ. ೮೭೦) ಉಲ್ಲೇಖಿಸುವ ಶಾಸನವು ಈ ಊರಿನಲ್ಲಿದೆ. ಗಂಗರ ಕಾಲದಲ್ಲಿ ಈ ಊರು ೬೪ ಬಸದಿಗಳನ್ನು ಹೊಂದಿತ್ತು ಎನ್ನಲಾಗಿದೆ. ಇಲ್ಲಿರುವ ದೇವಾಲಯಗಳ ಕಲ್ಲಿನ ತೊಲೆಗಳ ಮೇಲೆ ಜೈನ ಧರ್ಮದ ಅನೇಕ ಶಾಸನಗಳಿವೆ.

 

ಕಪ್ಪಡಿ ರಾಚಪ್ಪಾಜಿ ಗದ್ದಿಗೆ

ದೂರ ಎಷ್ಟು?
ತಾಲೂಕಿನಿಂದ: ೧೧ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೫೬ ಕಿ.ಮೀ.

ರಾಚಪ್ಪಾಜಿ ಗದ್ದಿಗೆ

ಕೆ ಆರ್‌ನಗರದ ಕಪ್ಪಡಿ ಕ್ಷೇತ್ರ ಜಾನಪದದಲ್ಲಿ ಬರುವ ಧರೆಗೆ ದೊಡ್ಡವರಾದ ರಾಚಪ್ಪಾಜಿ ಚೆನ್ನಮ್ಮಾಜಿಯವರ ಪುಣ್ಯಕ್ಷೇತ್ರವಾಗಿದೆ. ಕೆ.ಆರ್‌. ನಗರದಿಂದ ಚುಂಚನ ಕಟ್ಟೆಗೆ ಹೋಗುವಾಗ ಹೆಬ್ಬಾಳು ಗ್ರಾಮದಿಂದ ೩ ಕಿ.ಮೀ. ದೂರದಲ್ಲಿ ಇದೆ. ಕಾರ್ತಿಕ ಸೋಮವಾರಗಳಂದು ಹಾಗೂ ಮಹಾಶಿವರಾತ್ರಿಯ ದಿನದಿಂದ ಯುಗಾದಿಯವರೆಗಿನ ಅವಧಿಯಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡಿ ಹರಕೆ ತೀರಿಸುತ್ತಾರೆ.

 

ಸಾಲಿಗ್ರಾಮ

ದೂರ ಎಷ್ಟು?
ತಾಲೂಕಿನಿಂದ: ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ.

ಸಾಲಿಗ್ರಾಮ

ಕಾವೇರಿ ಬಲದಂಡೆಯಲ್ಲಿ ಇರುವ ಸಾಲಿಗ್ರಾಮ ಶ್ರೀ ವೈಷ್ಣವರಿಗೆ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಗಂಗರ ಎರಡನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗಿದೆ. ಕ್ರಿ.ಶ. ೧೦೭೯ರ ದಾಖಲೆಯೊಂದರಲ್ಲಿ ಸಾಲಿಗ್ರಾಮ ಎಂದರೆ ಶಾಲೆಯ ಸ್ಥಳ, ಅಗ್ರಹಾರ ಎಂಬ ಅರ್ಥವಿದೆ. ಹೊಯ್ಸಳ ಹಾಗೂ ಚೋಳರ ಕಾಲಕ್ಕೆ ಸೇರಿದ ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯವು ಇಲ್ಲಿದೆ. ೧೮೭೮ರ ಬಳಿಕ ಜೈನರ ಪ್ರಮುಖ ಕೇಂದ್ರವಾಗಿ ಬೆಳೆದ ಈ ಸ್ಥಳದಲ್ಲಿ ಅನಂತನಾಥ, ನೇಮಿನಾಥ, ಪಾರ್ಶ್ವನಾಥರ ಜೈನ ಬಸದಿಗಳಿವೆ.

 

ಡೋರನಹಳ್ಳಿ

ದೂರ ಎಷ್ಟು?
ತಾಲೂಕಿನಿಂದ: ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೬ ಕಿ.ಮೀ.

ದೊಡ್ಡಕೊಪ್ಪಲು ಮುಖ್ಯ ರಸ್ತೆಯಿಂದ ೩ ಕಿ.ಮೀ. ಒಳಗೆ ಕ್ರಿಶ್ಚಿಯನ್‌ರು ವಾಸಿಸುವ ಗ್ರಾಮವಿದ್ದು ಇದಕ್ಕೆ ಜನರ ಬಾಯಿಯಲ್ಲಿ ಕ್ರಿಶ್ಚಿಯನ್‌ಕೊಪ್ಪಲು ಎಂದು ಹೆಸರಿದೆ. ೨೦೦ ವರ್ಷಗಳ ಇತಿಹಾಸವಿರುವ ಈ ಚರ್ಚ್‌‌ನಲ್ಲಿರುವ ಸೇಂಟ್‌ಅಂತೋನಿಯವರ ಪ್ರತಿಮೆಯು ಹೊಲ ಉಳುವ ರೈತನಿಗೆ ದೊರಕಿದ್ದು, ಆ ರೈತನಿಂದ ಈ ಚರ್ಚ್‌ನಿರ್ಮಿಸಲ್ಪಟ್ಟಿದೆ. ಈ ಪ್ರತಿಮೆಯು ೧೪ ರಿಂದ ೧೬ನೇ ಶತಮಾನದಲ್ಲಿದ್ದ ಸೇಂಟ್‌ಅಂತೋನಿಯವರದು ಹಾಗ ಫ್ರಾನ್ಸಿಸ್‌ಮಿಷನರಿಗೆ ಸೇರಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ.

 

ಚುಂಚನಕಟ್ಟೆ

ದೂರ ಎಷ್ಟು?
ತಾಲೂಕಿನಿಂದ: ೧೪ ಕಿ.ಮೀ.
ಜಿಲ್ಲಾಕೇಂದ್ರದಿಂದ: ೫೯ ಕಿ.ಮೀ.

ಚುಂಚನಕಟ್ಟೆ ಜಲಪಾತ

ಚುಂಚ ಎಂಬ ಪಾಳೇಗಾರ ಕಟ್ಟಿಸಿದ ಅಣೆಕಟ್ಟಿನಿಂದಾಗಿ ಇಲ್ಲಿಗೆ ಚುಂಚನಕಟ್ಟೆ ಎಂಬ ಹೆಸು ಬಂದಿತು ಎನ್ನಲಾಗಿದೆ. ಅಣೆಕಟ್ಟು ದಾಟಿದ ಬಳಿಕ ಕಾವೇರಿ ನದಿಯು ಕಲ್ಲುಗಳಿಂದಾವೃತ ಜಾಗದಲ್ಲಿ ಹರಿದು ಎರಡು ಹಂತಗಳಲ್ಲಿ ಜಲಪಾತವಾಗಿ ಬೀಳುತ್ತದೆ. ಇಲ್ಲಿರುವ ಕೋದಂಡರಾಮ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಆರ್ಷಿಕವಾಗಿ ೧೫ ದಿನಗಳ ಜಾತ್ರೆ ನಡೆಯುತ್ತದೆ. ಇದರಲ್ಲಿ ದನಗಳ ಜಾತ್ರೆಯೂ ಸೇರಿದೆ.

 

ಯಡತೊರೆ

ದೂರ ಎಷ್ಟು?
ತಾಲ್ಲೂಕಿನಿಂದ: ೦೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೪೮ ಕಿ.ಮೀ.

ಕೆ ಆರ್‌ನಗರದಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ೩ ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯ ಮೇಲೆ ಈ ದೇವಾಲಯವಿದೆ. ರಾಜೇಂದ್ರ ಚೋಳನು ತನ್ನ ಸಾಮ್ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ನಿರ್ಮಿಸಿರುವ ದೇವಾಲಯವೆಂದು ಪ್ರತೀತಿಯಿದೆ. ಇಲ್ಲಿ ರಥಸಪ್ತಮಿಯಂದು ರಥೋತ್ಸವ ಜರುಗುತ್ತದೆ. ಆ ದಿನ ಸೂರ್ಯನ ಕಿರಣಗಳು ನೇರವಾಗಿ ಅರ್ಕನಾಥ ದೇವರ ಲಿಂಗದ ಮೇಲೆ ಬೀಳುವಂತೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ.

 

ಭೇರ್ಯ

ದೂರ ಎಷ್ಟು?
ತಾಲ್ಲೂಕಿನಿಂದ: ೧೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೩ ಕಿ.ಮೀ.

ಕೆ.ಆರ್‌. ನಗರದಿಂದ ಹಾಸನ ಮಾರ್ಗದಲ್ಲಿ ೧೮ ಕಿ.ಮೀ. ದೂರದಲ್ಲಿ ಹೊಯ್ಸಳರ ಕಾಲದ ಈ ಊರಿದೆ. ಇಲ್ಲಿ ಹೊಯ್ಸಳರು ಕಟ್ಟಿಸಿರುವ ಚನ್ನಕೇಶವ ದೇವಾಲಯವಿದೆ. ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ಚನ್ನಕೇಶವ ವಿಗ್ರಹದ ಪ್ರೆತಿಮೆ ಸುತ್ತಲಿನ ಪ್ರಭಾವಳಿ ಇಲ್ಲಿನ ಮುಖ್ಯ ಆಕರ್ಷಣೆ. ಜಯವಿಜಯರ ಸುಂದರ ಪ್ರತಿಮೆಗಳೂ ಇಲ್ಲಿವೆ.