Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕೆ.ಆರ್. ಹೊಸಳಯ್ಯ

ಜನಪದ ಕಲೆಯ ವಿಶಿಷ್ಟ ಪ್ರಕಾರವಾದ ವೀರಭದ್ರ ಕುಣಿತದ ಅತ್ಯುತ್ತಮ ಕಲಾವಿದರು ಕೆ.ಆರ್. ಹೊಸಳಯ್ಯ. ಐದೂವರೆ ದಶಕಗಳಿಂದಲೂ ಕಲಾಸೇವೆಯಲ್ಲಿ ನಿರತ ಕಲಾಧ್ಯಾನಿ.
ತುಮಕೂರು ಜಿಲ್ಲೆಯ ಜಾನಪದೀಯ ಕೊಡುಗೆ ಹೊಸಳಯ್ಯ, ಕುಣಿಗಲ್ ತಾಲ್ಲೂಕಿನ ಎಡೆಯೂರು ಹುಟ್ಟೂರು. ವೀರಭದ್ರ ಕುಣಿತ ವಂಶಪಾರಂಪರವಾಗಿ ಬಂದ ಕಲೆ. ಹತ್ತು ವರ್ಷದ ಬಾಲಕನಾಗಿರುವಾಗಲೇ ಕಲಾರಂಗಕ್ಕೆ ಪಾದಾರ್ಪಣೆ. ವಯಸ್ಸು-ಅನುಭವ ಮಾಗಿದಂತೆ ವೀರಭದ್ರ ಕುಣಿತದಲ್ಲಿ ಕಲಾನೈಪುಣ್ಯತೆ, ಕನ್ನಡ ಮತ್ತು ಸಂಸ್ಕೃತಿಯ ಹಲವು ಕಾರ್ಯಕ್ರಮಗಳು, ರಾಜ್ಯದ ಇತರೆಡೆ ಮಾತ್ರವಲ್ಲದೆ, ಚೆನೈ, ಅಂಡಮಾನ್ ಮತ್ತು ನಿಕೋಬಾರ್, ಕಲ್ಕತ್ತಾ, ದೆಹಲಿ, ತಂಜಾವೂರು, ಒರಿಸ್ಸಾ, ಪಂಜಾಬ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಕಲಾಪ್ರದರ್ಶನ, ಸಿಂಹದಮರಿ, ಸಿರಿಗಂಧ, ಕಲಾಸಿಪಾಳ್ಯ ಚಿತ್ರ, ಲಕ್ಷ್ಮೀಬಾರಮ್ಮ, ಹರಹರಮಹದೇವ ಮುಂತಾದ ಧಾರಾವಾಹಿಗಳಲ್ಲೂ ಕಲಾಪ್ರದರ್ಶನಗೈದ ಹಿರಿಮೆ, ಐವತ್ತೈದು ವರ್ಷಗಳಿಂದಲೂ ಬದುಕಿನ ನಿರ್ವಹಣೆ ಹಾಗೂ ಸಾಧನೆಗೆ ವೀರಭದ್ರ ಕುಣಿತವನ್ನೇ ನೆಚ್ಚಿ ತನ್ಮಯರಾಗಿ ಕಲಾಸೇವೆಗೈಯುತ್ತಿರುವ ಹೊಸಳಯ್ಯ ದೇಸೀ ಕಲೆಯ ವಿರಳ ಕಲಾಕುಸುಮ.