ಕೆ.ಎಂ. ರಾಮನ್ ಅವರು ೧೯೩೦ರಲ್ಲಿ ಕಾಸರಗೋಡಿನ ನೀಲೇಶ್ವರದಲ್ಲಿ ಜನಿಸಿದರು. ನಾಟ್ಯದ ಗಿಳು ಅಂಟಿಸಿಕೊಂಡ ರಾಮನ್ ಭರತನಾಟ್ಯ ಕಲಿಕೆಗಾಗಿ ಮೈಸೂರಿಗೆ ಬಂದು ನೆಲೆಸಿ ಅಲ್ಲಿನ ಹೆಸರಾಂತ ನೃತ್ಯ ಪಟು ಕೆ. ಎಸ್. ರಾಜಗೋಪಾಲ್ ಅವರಲ್ಲಿ “ಕಥಕ್ಕಳಿ” ಸಂಪ್ರದಾಯದ ನೃತ್ಯ ಅಭ್ಯಾಸ ಮಾಡಿದರು. ಪ್ರೊ|| ಯು.ಎಸ್.ಕೃಷ್ಣರಾವ್ ಹಾಗೂ ಚಂದ್ರ ಭಾಗಾದೇವಿಯವರಲ್ಲಿ ಕೆಲವು ಕಾಲ ಭರತನಾಟ್ಯದಲ್ಲಿ “ಪಂದನಲ್ಲೂರು ಶೈಲಿ” ಯ ನೃತ್ಯಾಭ್ಯಾಸ ಮಾಡಿ ಅನಂತರ ಕಿಟ್ಟಪ್ಪ ಪಿಳ್ಳೆಯವರಲ್ಲೂ ಶಿಷ್ಯವೃತ್ತಿ ಮಾಡಿ ನೃತ್ಯ ಕಲೆಯಲ್ಲಿ ಪ್ರಾವೀಣ್ಯ ಪಡೆದರು.

ಗುಬ್ಬಿ ವೀರಣ್ಣನವರ ನಾಟಕ ಕಂಪೆನಿಯಲ್ಲಿ ನೃತ್ಯ ನಿರ್ದೇಶಕರಾಗಿದ್ದು ನಾಟ್ಯಚಾರ್ಯರಾಗಿ ಸೇವೆ ಸಲ್ಲಿಸಿದ ನಂತರ ೧೯೬೨ರಲ್ಲಿ ತುಮಕೂರಿನಲ್ಲಿ ತಮ್ಮದೇ ಆದ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರವನ್ನು ಸ್ಥಾಪಿಸಿ ಇಂದಿನ ತನಕ ಸಾವಿರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದ್ದಾರೆ. ಕೇವಲ ಕರ್ನಾಟಕದಲ್ಲೇ ಅಲ್ಲದೆ ಹೊರರಾಜ್ಯ ಹಾಗೂ ಸಾಗರದಾಚೆಯೂ ಇವರ ಶಿಷ್ಯರುಗಳು ವಲಸೆ ಹೋಗಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

ರಾಜ್ಯಾದ್ಯಂತ ೨೦೦೦ಕ್ಕೂ ಮಿಕ್ಕಿ ಕಾರ್ಯಕ್ರಮ ನೀಡಿರುವ ರಾಮನ್ ಅವರ ಸೇವೆಯನ್ನು ಗುರುತಿಸಿ ತುಮಕೂರಿನ ಶ್ರೀ ಸಿದ್ದಗಂಗಾ ಮಠಾಧೀಶ ಶ್ರೀ ಶಿವಕುಮಾರ ಸ್ವಾಮೀಜಿಯವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಶ್ರೀ ರೇಣುಕಾ ವೀರ ಗಂಗಾಧರ ಸ್ವಾಮಿಯವರು “ನಾಟ್ಯಕಲಾ ಪ್ರವೀಣ” ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ. ಕೇರಳದ ನೀಲೇಶ್ವರ (ಇವರ ಹುಟ್ಟೂರು) ಪ್ರಜೆಗಳು ಶ್ರೀ ವಿ.ಸಿ. ಕೇರಳವರ್ಮ ವಲಿಯರಾಜ ಅವರಿಂದ ಚಿನ್ನದ ತೋದಾ ತೊಡಿಸಿ ’ನಾಟ್ಯ ಶ್ರಿ ’ ಬಿರುದಿನೊಂದಿಗೆ ಸನ್ಮಾನಿಸಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿಯೊಂದಿಗೆ ’ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ನೀಡಿ ಗೌರವಿಸಿದೆ.