ಹಿಂದೂಸ್ಥಾನಿ ಗಾಯಕರಾಗಿ, ಕನ್ನಡ ಕಾವ್ಯ ಹಿಂದೂಸ್ಥಾನಿ ಪದ್ಧತಿಯಲ್ಲಿ ಹಾಡಿ ಜನಮನವನ್ನು ಸೂರೆಗೊಂಡಿರುವ ಶ್ರೀ ಕೆ.ಎನ್‌. ಅರ್ಕಸಾಲಿಯವರು ಹೈದ್ರಾಬಾದ ಕರ್ನಾಟಕದ ಸಂಗೀತಗಾರರಲ್ಲೊಬ್ಬರು. ೧೯೧೪ರಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಶ್ರೀ ಕೆ.ಎನ್‌. ಅರ್ಕಸಾಲಿ ಉತ್ತರ ಕರ್ನಾಟಕದ ಸಂಗೀತ ರಸಿಕರ ಅಭಿಮಾನ ಗಳಿಸಿದ ಕಲಾವಿದರು.

ಪಂಡಿತ ಸಿದ್ಧರಾಮ ಜಂಬಲದಿನ್ನಿಯವರಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಶಿಷ್ಯ ವೃತ್ತಿ ಮಾಡಿ, ಸಂಗೀತವನ್ನೇ ಉಸಿರಾಗಿಸಿಕೊಂಡವರು ಅರ್ಕಸಾಲಿಕಯವರು. ತಮ್ಮ ಸಂಗೀತ ಕಛೇರಿಗಳಲ್ಲಿ ಪ್ರಭುಲಿಂಗಲೀಲೆ ಮತ್ತು ರಾಘವಾಂಕ ಕವಿಗಳ ಕಾವ್ಯಗಳನ್ನು ಭಾವಪೂರ್ಣವಾಗಿ ಹಾಡಿ, ಸಂಗೀತ ವಲಯದಲ್ಲಿ ಈ ಕಾವ್ಯಗಳನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಅರ್ಕಸಾಲಿಯವರ ಕಳಕಳಿ ಅನುಕರಣೀಯ.

ನಾಡಿನ ತುಂಬೆಲ್ಲ ತಮ್ಮ ಪ್ರಬುದ್ಧ ಗಾಯನದಿಂದ ಚಿರಪರಿಚಿತರಾಗಿರುವ ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.