ಪ್ರಸಿದ್ಧ ಘಟಂ ಕಲಾವಿದರಾದ ಶ್ರೀ ಕೆ.ಎನ್‌. ಕೃಷ್ಣಮೂರ್ತಿಯವರು ಜನಿಸಿದ್ದು ೨೩ ಮೇ ೧೯೨೬. ಕೇರಳದ ಪಾಲ್ಗಾಟ್‌ನಲ್ಲಿ. ಬಾಲ್ಯದಲ್ಲೇ ಸಂಗೀತದ ಬಗ್ಗೆ ಆಸಕ್ತಿಯನ್ನು ಗಳಿಸಿಕೊಂಡಿದ್ದ ಕೃಷ್ಣಮೂರ್ತಿಯವರು ತಮ್ಮ ಪ್ರಾಥಮಿಕ ಮೃದಂಗ ಶಿಕ್ಷಣವನ್ನು ವಿಖ್ಯಾತ ವಿದ್ವಾನ್‌ ಪಾಲ್ಗಾಟ್‌ ಶ್ರೀ ಮಂಜುಮಣಿಯವರಿಂದ ಮತ್ತು ಮೃದಂಗ ದಂತಕತೆಯಾಗಿರುವ ಪಾಲ್ಗಾಟ್‌ ಶ್ರೀ ಮಣಿ ಅಯ್ಯರ್ ಅವರಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಿದರು. ಮೃದಂಗದಲ್ಲಿ ಉತ್ತಮ ನೈಪುಣ್ಯವನ್ನು ಸಾಧಿಸಿದರೂ ಸಹ ಘಟ ವಾದನದ ಕಡೆಗೆ ತಮ್ಮ ಒಲವನ್ನು ಬೆಳೆಸಿಕೊಂಡು ಆ ವಾದ್ಯವನ್ನು ಕರಗತ ಮಾಡಿಕೊಂಡರು. ೧೯೬೦ರಲ್ಲಿ ಬೆಂಗಳೂರಿಗೆ ಬಂದು ನೆಲಸಿದ ನಂತರ ಖ್ಯಾತ ಮೃದಂಗ ವಿದ್ವಾಂಸರಾಗಿದ್ದ ಶ್ರೀ ಸಿ.ಕೆ. ಅಯ್ಯಮಣಿ ಅಯ್ಯರ್ ಹಾಗೂ ನಂತರ ಶ್ರೀ ಎಂ.ಎಲ್‌. ವೀರಭದ್ರಯ್ಯ ಅವರುಗಳ ಮಾರ್ಗದರ್ಶನದಲ್ಲಿ ತಮ್ಮ ವಾದನ ಕಲೆಯನ್ನು ಉತ್ಕೃಷ್ಟಗೊಳಿಸಿಕೊಂಡರು.

ವಿದ್ವಾಂಸರಾದ ನೇದನೂರಿ ಕೃಷ್ಣಮೂರ್ತಿ, ಸಿ. ರಾಮದಾಸ್‌, ಶಂಕರರಾವ್‌, ನಾಗಸ್ವರ ಬಿ. ರಾಮದಾಸಪ್ಪ ಮುಂತಾದವರಿಗೆ ಘಟ ವಾದನದ ಸಹಕಾರವನ್ನು ನೀಡಿದ್ದಾರೆ. ದೇಶ ವಿದೇಶಗಳಲ್ಲಿ ನಡೆದ ವೈವಿಧ್ಯಮಯ ಕಚೇರಿಗಳಲ್ಲಿ ಭಾಗವಹಿಸಿ ತಮ್ಮ ಪರಿಣತಿಯನ್ನು ವ್ಯಕ್ತಗೊಳಿಸಿದ್ದಾರೆ. ಶ್ರೀ ಕೆ.ಎನ್‌. ಕೃಷ್ಣಮೂರ್ತಿಯವರು ಅನೇಕ ಜನ ಶಿಷ್ಯರಿಗೆ ಘಟ ವಾದ್ಯದ ತರಬೇತಿಯನ್ನು ನೀಡಿದ್ದಾರೆ.

ಇವರ ಕಲಾಸೇವೆಯನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಗಾಯನ ಸಮಾಜ, ಶ್ರೀ ತ್ಯಾಗರಾಜ ಗಾನಸಭಾ, ನಾದಜ್ಯೋತಿ, ಶ್ರೀ ತ್ಯಾಗರಾಜಸ್ವಾಮಿ ಸಭೆ, ಪರ್ಕಸಿವ್‌ ಆರ್ಟ್ಸ್ ಸೆಂಟರ್ ಹೀಗೆ ಹಲವು ಕಲಾ ಸಂಸ್ಥೆಗಳು ಇವರಿಗೆ ಬಿರುದು ಬಾವಲಿಗಳನ್ನು ನೀಡಿ ಪುರಸ್ಕರಿಸಿವೆ. ಇವರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೫-೯೬ರಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.