ಜನನ : ೧೯೨೮ರ ಮೇ ತಿಂಗಳಿನಲ್ಲಿ ಅರಸೀಕೆರೆಯ ಕಣಕಟ್ಟೆ ಗ್ರಾಮದಲ್ಲಿ

ಮನೆತನ : ಸಂಗೀತ – ಸಾಹಿತ್ಯ ಸಾಂಸ್ಕೃತಿ ಪರಂಪರೆಯ ಮನೆತನ. ಇವರ ತಾತ ’ಭಾನುಕವಿ’ ಎಂದೇ ಖ್ಯಾತರಾಗಿದ್ದವರು. ತಂದೆ ಕೆ. ನರಸಿಂಹಯ್ಯ ಜಮೀನುದಾರರು. ತಾಯಿ ಪದ್ಮಕ್ಷಮ್ಮ.

ಗುರುಪರಂಪರೆ : ಇವರು ತಮ್ಮ ಗಮಕ ಶಿಕ್ಷಣವನ್ನು ಗಮಕಿ ಎಂ. ರಾಘವೇಂದ್ರರಾಯರಲ್ಲಿ ಪಡೆದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುತ್ತಾರೆ. ಹಾರ್ಮೋನಿಯಂ ಸೀನಪ್ಪನವರಲ್ಲಿ ಸಂಗೀತಾಭ್ಯಾಸವನ್ನು ಮಾಡಿರುತ್ತಾರೆ. ವ್ಯಾಖ್ಯಾನದಲ್ಲೂ ಪರಿಣತರು. ಬಿ.ಎ., ಬಿ.ಕಾಂ. ಪದವೀಧರರು.

ಕ್ಷೇತ್ರ ಸಾಧನೆ : ಸುಮಾರು ೫೦ ವರ್ಷಗಳಿಂದಲೂ ನಿರಂತರವಾಗಿ ಗಮಕ ವಾಚನ ವ್ಯಾಖ್ಯಾನ ನಡೆಸಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಪ್ರೌಢಶಾಲಾ ಅಧ್ಯಾಪಕರಾಗಿದ್ದು ಅನಂತರ ಭದ್ರಾವತಿ ಕಬ್ಬಿಣ ಕಾರ್ಖಾನೆಯಲ್ಲಿ ಸೇವೆಗೆ ಸೇರಿ ಅಲ್ಲಿದ್ದಷ್ಟು ಕಾಲ ತಮ್ಮ ಬಿಡುವಿನ ವೇಳೆಯಲ್ಲಿ ಗಮಕ ತರಗತಿಗಳನ್ನು ನಡೆಸಿ ಗಮಕ ಪ್ರಚಾರ ಕಾರ್ಯದಲ್ಲಿ ನೆರವಾಗಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುತ್ತಿರುವ ಎಲ್ಲಾ ಪ್ರಕಾರಗಳ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭದ್ರಾವತಿ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪಂಪನ ಚಂಪೂ ಕಾವ್ಯದಿಂದ ಹಿಡಿದು ಕುವೆಂಪುರವರ ಮಹಾ ಛಂದಸ್ಸಿನವರೆಗಿನ ಎಲ್ಲಾ ಕಾವ್ಯಗಳೂ ಇವರಿಗೆ ಕರಗತ. ಅನೇಕ ಗಮಕ ರೂಪಕಗಳನ್ನೂ ನಡೆಸಿದ್ದಾರೆ. ಶಿವಮೊಗ್ಗ, ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕ ಪ್ರದೇಶಗಳು, ಮುಂಬೈ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆಕಾಶವಾಣಿಯ ವಿವಿಧ ಕೇಂದ್ರಗಳಿಂದ ಇವರ ವಾಚನ ಪ್ರಸಾರವಾಗಿವೆ. ಗಮಕ ಸಮ್ಮೇಳನಗಳಲ್ಲಿ, ಗಮಕ ಶಿಕ್ಷಣ ಶಿಬಿರಗಳಲ್ಲಿ, ಗಮಕ ಗೋಷ್ಠಿಗಳಲ್ಲಿ ಪಾಲ್ಗೊಂಡು ಅನೇಕ ಬೋಧಪ್ರದ ಸಲಹೆಗಳನ್ನು ಮಂಡಿಸಿರುತ್ತಾರೆ. ಕಾಲೇಜು – ಪ್ರೌಢಶಾಲೆಗಳಲ್ಲಿ ಗಮಕ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನೀಡಿರುತ್ತಾರೆ. ಕೆಂಗಲ್ ಹನುಮಂತಯ್ಯನವರು ಜಾರಿಗೆ ತಂದ ಸಂಸ್ಕೃತಿ ಪ್ರಸಾರದ ಕಾರ್ಯಕ್ರಮಗಳಲ್ಲಿ ಅನೇಕ ವರ್ಷಗಳ ಕಾಲ ಅಧಿಕೃತ ಕಲಾವಿದರಾಗಿ ಪಾಲ್ಗೊಂಡಿದ್ದಾರೆ. ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ’ಶಂಕರ ವಿಜಯ’ ಕಾವ್ಯದ ವಾಚನ ಮಾಡಿ ಅನುಗ್ರಹೀತರಾಗಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಕರ್ನಾಟಕ ಗಮಕ ಕಲಾ ಪರಿಷತ್ತಿನ ವತಿಯಿಂದ ಟಿ. ರಾಮಾಶಾಸ್ತ್ರಿಗಳ ದತ್ತಿ ನಿಧಿ ಪುರಸ್ಕಾರ, ಕುಮಾರವ್ಯಾಸ ಮಂಟಪದಲ್ಲಿ ಕುಮಾರವ್ಯಾಸ ಜಯಂತಿ ಉತ್ಸವದಲ್ಲಿ ಸನ್ಮಾನ, ಗಮಕ ಕಲಾ ಶಿರೋಮಣಿ, ಕಾವ್ಯ ಗಾಯನ ಚತುರ, ಗಮಕ ಕಲಾ ತಿಲಕ ಮುಂತದ ಬಿರುದುಗಳಿಗೆ ಪಾತ್ರರಾದ ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೮-೯೯ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.