ಸಾಗರ ತಾಲ್ಲೋಕಿನ ಕಡೂರಿನಲ್ಲಿ ಕೆ.ಎಸ್‌. ಮಂಜುನಾಥನ್‌ ಅವರ ಜನನವಾಯಿತು. ಇವರು ಯಕ್ಷಗಾನ ಪ್ರಸಂಗಗಳಲ್ಲಿ ನುಡಿಸಿ ಪ್ರಸಿದ್ಧರಾಗಿದ್ದ ಮದ್ದಳೆ ವಾದಕ ಶೇಷಗಿರಿ ಉಪಾಧ್ಯಾಯರ ಪುತ್ರ. ತಂದೆಯಿಂದಲೇ ಬಾಲಪಾಠ ಆರಂಭವಾಯಿತು. ಮನೆಯ ಆರ್ಥಿಕ ಪರಿಸ್ಥಿತಿ ದುಸ್ತರವಾಗಿದ್ದು, ಅಹನ್ಯಹನಿ ಕಾಲ ಕ್ಷೇಪಕ್ಕೂ ಕಷ್ಟವಾದಾಗ ಚಿಕ್ಕವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ಚಾಮರಾಜಪೇಟೆಯಲ್ಲಿ ಸಂಬಂಧಿಕರ ಹೋಟೆಲಲ್ಲಿ ಕೆಲಸ-ಕಾರ್ಯ ಮಾಡುತ್ತಾ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಬಂತು. ಆಗ ಬೆಂಗಳೂರಿನಲ್ಲಿದ್ದ ಮೃದಂಗ ಕಲಾವಿದ ಪಾಲಘಾಟ್‌ ಸುಬ್ರಹ್ಮಣ್ಯ ಅಯ್ಯರ್ ರವರಲ್ಲಿ ಅಭ್ಯಾಸ ಮುಂದುವರಿಸಿದರು. ಕೆಲಸ ಕಾರ್ಯಗಳ ಮಧ್ಯೆ ಮೃದಂಗ ಅಭ್ಯಾಸ ಮುಂದುವರೆಸುವುದು ತೀರ ಕಷ್ಟವಾಗಿದ್ದಾಗ ಗಾನಕಲಾ ಭೂಷಣ ಎಲ್‌.ಎಸ್‌. ಶೇಷಗಿರಿರಾಯರ ಪರಿಚಯವಾಯಿತು. ರಾಯರು ಸ್ವತಃ ದಕ್ಷಣಾ ಮೂರ್ತಿ ಪಿಳ್ಳೆಯವರ ಪರಿಚಯ ಪ್ರಭಾವಗಳಿಂದ ಬೆಂಗಳೂರಿಗೆ ಅಂದಿನ ಲಯಕಲಾ ನೈಪುಣ್ಯತೆಯನ್ನು ಪರಿಚಯಿಸಿದ್ದವರು. ಅವರ ದೃಷ್ಟಿ ಮಂಜುನಾಥ್‌ ರವರ ಮೇಲೆ ಬಿದ್ದು, ಹಲವು ವರ್ಷಗಳು ಸುದೀರ್ಘ ಶಿಕ್ಷಣ ನೀಡಿ ಒಬ್ಬ ಹಿರಿಯ ವಿದ್ವಾಂಸರನ್ನಾಗಿ ಬೆಳೆಸಿದರು. ಅಂದಿನ ಎಲ್ಲಾ ವಿದ್ವಾಂಸರ ಕಚೇರಿಗಳಲ್ಲಿ ಮೃದಂಗ ನುಡಿಸಿ ಉತ್ತಮ ವಾದಕರೆನಿಸಿಕೊಂಡು ಖ್ಯಾತರಾಗಲು ಅನುವಾದರು.

ಅಂದು ಮೃದಂಗ ವಾದ್ಯದ ಕಲಾವಿದರಲ್ಲಿ ಸಾಕಷ್ಟು ಸ್ಪರ್ಧೆ ಇದ್ದು, ಘಟ ವಾದ್ಯಕ್ಕೆ ಕೈ ಹಾಕಿದರು ಮಂಜುನಾಥನ್‌. ಸ್ವಂತ ಅಭ್ಯಾಸ ಸಾಧಾರಣ ಮಡಕೆಯಲ್ಲಿ ಅಭ್ಯಾಸ ಮಾಡಿ ಕಚೇರಿಗಳಲ್ಲೂ ನುಡಿಸಲು ಪ್ರಾರಂಭಿಸಿದರು. ಕಠಿಣ ಸಾಧನೆ, ದೀರ್ಘ ಶ್ರಮದಿಂದ ಘಟವಾದ್ಯದಲ್ಲಿ ಪರಿಣತರಾಗಿ ರಾಜ್ಯದ ಮೃದಂಘ ವಿದ್ವಾಂಸರೆಲ್ಲರ ಜೊತೆ ಸರಿ ಸಮಾನಗಿ ನುಡಿಸಿ ಹೆಸರು ಗಳಿಸಿದರು. ವಿಶೇಷವೆಂದರೆ, ದೇವನಹಳ್ಳಿಗೆ ಹೋಗಿ ಅಲ್ಲೇ ನಿಂತು ಸೂಕ್ತ ಮಾರ್ಗದರ್ಶನ ಮಾಡಿ ತಮಗೆ ಬೇಕಾದ ರೀತಿಯಲ್ಲಿ ನೂರಾರು ಘಟಗಳನ್ನು ತಯಾರಿಸಿ ಬೆಂಗಳೂರಿಗೆ ತಂದು ಚಾಮರಾಜಪೇಟೆಯಲ್ಲಿ ನಾಲ್ಕನೆ ರಸ್ತೆಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿದ್ದ ತಮ್ಮ ಕೊಠಡಿ ತುಂಬ ತುಂಬಿದ್ದರು. ಇದೇನು ಸುಲಭವಾದ ಕೆಲಸವಾಗಿರಲಿಲ್ಲ. ಬೇಕಾದ ಶ್ರುತಿಗಳಿಗೆ ಘಟಗಳೇನೂ ಸಿಗುತ್ತಿರಲಿಲ್ಲ. ಅನೇಕ ವೇಳೆ ಒಂದು ಸಲ ಬೇಯಿಸಿದ ೨೦-೩೦ ಘಟಗಳು ಎಲ್ಲಾ ಒಂದೇ ಶ್ರುತಿಯಲ್ಲಿರುತ್ತಿದ್ದವು. ಬೇಸರಗೊಳ್ಳದೇ ಹಲವಾರು ಬಾರಿ ಹಲವಾರು ಸಂಖ್ಯೆಗಳಲ್ಲಿ ವಾದ್ಯಗಳನ್ನು ತಯಾರಿಸಿ ಉತ್ತಮಗುಣಮಟ್ಟದಲ್ಲಿ ಸಿಕ್ಕಿದ ವಾದ್ಯಗಳನ್ನೆಲ್ಲಾ ಶೇಖರಿಸಿ ಅಲ್ಲಿಂದ ಇಲ್ಲಿಗೆ ತಂದು ಶೇಖರಿಸಿದ್ದೇ ವಿಶೇಷ ದಾಖಲೆ. ಉತ್ತಮ ನಾದವು ಆದರೆ ಅಷ್ಟೇನೂಗಟ್ಟಿಯಾಗಿಲ್ಲದೇ ಇರುತ್ತಿದ್ದ ಘಟಗಳು ಇವರ ತೀವ್ರ ಶೋಧನೆಯ ಪ್ರತಿಫಲ. ಈ ವಾದ್ಯಗಳ ಉಪಯೋಗದಿಂದ ಸಂಗೀತ ಲಯ ವಾದ್ಯಗಳಲ್ಲಿ ಘಟವಾದ್ಯದ ಸ್ಥಾನವೇ ಬದಲಾಯಿಸಿ ಉನ್ನತಮಟ್ಟಕೇರಿತು.

ಚಾಮರಾಜಪೇಟೆ ಮೂರನೆಯ ರಸ್ತೆಯಲ್ಲಿದ್ದ ಮಲಬಾರ್ ಲಾಡ್ಜ್, ಅದರ ಮಾಲೀಕ ಶೇಷಅಯ್ಯರ್ ಸಂಗೀತ ಪ್ರೇಮಿ, ಕಲಾರಾಧಕ, ಚಂಬೈಯವರ ಆಪ್ತ. ಇವರ ಹೋಟಲಿನಲ್ಲಿ ಪಿಟೀಲು ಮೈಸೂರು ಟಿ. ಚೌಡಯ್ಯ ಇಳಿದುಕೊಳ್ಳುತ್ತಿದ್ದುದು. ಇವರ ಪರಿಚಯದಿಂದ ಮಂಜುನಾಥ್‌ರವರಿಗೆ ಚೌಡಯ್ಯನವರ ಸಂಪರ್ಕ ಬೆಳೆಯಿತು. ಚೌಡಯ್ಯ ಅಂದು ಇಡೀ ಸಂಗೀತ ಲೋಕದಕ್ಕಲಿ ಬಹು ಜನಪ್ರಿಯರಾಗಿ ರಾಷ್ಟ್ರದಾದ್ಯಂತ ಪ್ರಖ್ಯಾತರಾಗಿ ಮೆರೆದ ಕಾಲ. ಅಂದು ಚಂಬೈ ಮುಸುರಿ, ಅರಿಯಕ್ಕುಡಿ, ಮಹಾರಾಜಪುರಂ, ಜಿ.ಎನ್‌.ಬಿ. ಮಧುರೆ ಮಣಿ ಅಯ್ಯರ್, ಎಂ.ಎಸ್‌.ಸುಬ್ಬಲಕ್ಷ್ಮಿ, ಆಲತ್ತೂರು ಸೋದರರು, ಶೆಮ್ಮಂಗುಡಿ, ಟಿ.ಆರ್. ಮಹಾಲಿಂಗಂ, ಹೀಗೆ ಅಂದಿನ ದಿಗ್ಗಜರಿಗೆಲ್ಲ ಚೌಡಯ್ಯ ಎಂದರೆ ಅಚ್ಚುಮೆಚ್ಚು, ಎಲ್ಲೆಲ್ಲೂ ಬೇಡಿಕೆ. ಚೌಡಯ್ಯನವರ ಪಿಟೀಲು ಇದ್ದೆಡೆಯೆಲ್ಲಾ ತನಿಯಾಗಲಿ ಪಕ್ಕವಾದ್ಯವಾಗಲಿ “ಮಂಜು” ಇರಬೇಕೆಂದು ಹಠ. ಹೀಗೆ ಚೌಡಯ್ಯನವರ ಪ್ರೋತ್ಸಾಹದಿಂದ ಮಂಜುನಾಥ್‌ ಕರ್ನಾಟಕ ಸಂಗೀತ ಕ್ಷೇತ್ರದಲ್ಲೆಲ್ಲಾ ಕೆ.ಎಸ್‌.ಮಂಜುನಾಥನ್‌ ಆಗಿ ಸುಪ್ರಖ್ಯಾತರಾದರು. ಆಗಿನ ದಿಗ್ಗಜಗಳಾದ ಪಾಲಘಾಟ್‌ ಮಣಿ, ಪಳನಿ ಸುಬ್ರಹ್ಮಣ್ಯ ಪಿಳ್ಳೆ, ರಾಮನಾಥಪುರಂ, ಮುರುಗಭೂಪತಿ ಇವರೆಲ್ಲರ ಮತ್ತು ಇತರ ಖ್ಯಾತ ಮೃದಂಗ ವಿದ್ವಾಂಸರ ಜೊತೆಗೂ ಮಂಜುನಾಥನ್‌ ಘಟನುಡಿಸಿ ಮೆರೆದರು.

ವಿಶ್ವದೆಲ್ಲೆಡೆ ಪ್ರಸಾರವಾದ, ೧೯೭೦ ರಲ್ಲಿ ಜಪಾನಿನಲ್ಲಿ ನಡೆದ “ಎಕ್ಸಪೊ-೭೦” ಎಂಬ ಬೃಹತ್‌ ಕಾರ್ಯಕ್ರಮದಲ್ಲಿ ಇವರ ಘಟವಾದನ ಮೊದಲಬಾರಿಗೆ ಟೆಲಿವಿಷನ್‌ ಮೂಲಕ ಪ್ರದರ್ಶನವಾಯಿತು. ಓದು ಬರಹ ಏನೂ ಬರದ, ಹೋಟೆಲ್‌ ಮಾಣಿಯಾಗಿದ್ದ ಮಂಜುನಾಥನ್‌ ಯಾರೊಬ್ಬರ ನೆರೆವಿಲ್ಲದೇ ಒಬ್ಬರೇ ಹೋಗಿ ಘಟ ‘ತನಿ’ ನುಡಿಸಿದ್ದು ಆ ದಾಖಲೆಯನ್ನು ಈವರೆಗೆ ಯಾರೂ ಮುರಿದಿಲ್ಲ. ೧೯೭೧ರಲ್ಲಿ ಪಶ್ಚಿಮ ಜರ್ಮನಿಯ ವಿಶ್ವ ಸಂಗೀತ ಮಹಾಸಮ್ಮೇಳನದಲ್ಲಿ ಚಿಟ್ಟಿಬಾಬುರವರೊಂದಿಗೆ ನುಡಿಸಿ ಕೀರ್ತಿ ಪತಾಕೆ ಹಾರಿಸಿದರು. ಹಾಂಗ್‌ಕಾಂಗ್‌ನಲ್ಲಿ ನಡೆದ ಏಷ್ಯದ ಎರಡನೆ ವಿಶ್ವ ಸಂಗೀತ ಸಮ್ಮೇಳನ, ೧೯೭೯ರಲ್ಲಿ ಇಂಗ್ಲೆಂಡ್‌, ಪ್ರಾನ್ಸ್‌, ಹೀಗೆ ವಿಶ್ವದೆಲ್ಲೆಡೆ ಘಟವಾದ್ಯ ಪರಿಚಯಿಸಿ ಅಪಾರ ಯಶಸ್ಸು ಗಳಿಸಿದರು.

ಎಂ.ಜಿ.ಆರ್. ಇನ್ಸ್ ಟಿಟ್ಯೂಟ್‌ -ಮೃದಂಗ, ಘಟ, ರಿಸರ್ಚ್‌ಇನ್ಸ್ ಟಿಟ್ಯೂಟ್‌ ಎಂಬ ಸಂಸ್ಥೆ ಸ್ಥಾಪಿಸಿ ಮೃದಂಗ ಘಟ ವಾದನಗಳ ಬಗ್ಗೆ ಸಂಶೋಧನೆ ನಡೆಸುವ ಯೋಜನೆ ಹಾಕಿಕೊಂಡು ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು  ಮಾಡಿ ಅದಕ್ಕಾಗಿ ಪ್ರಕಟಿತ ವಸ್ತು ಸಂಗ್ರಹಗಳನ್ನು ಶಿಷ್ಯ, ಬೆಂಗಳೂರು ಕೆ. ವೆಂಕಟರಾಂ ಮೂಲಕ ಹೊರತರುವ ಪ್ರಯತ್ನ ಮಾಡಿದರು.

ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದವು . ಪಕ್ಕ ವಾದ್ಯಗಾರರಿಗೆ ಅದರಲ್ಲೂ ಲಯವಾದ್ಯಗಾರರಿಗೆ ಅದರಲ್ಲಿ ಮತ್ತೆ ಘಟವಾದ್ಯದಂತಹ ಉಪಪಕ್ಕವಾದ್ಯಗಾರರಿಗೆ ಗೌರವ ಮನ್ನಣೆಗಳು ತೀರ ಕಡಿಮೆಯಾಗಿದ್ದ ಕಾಲದಲ್ಲಿ ಇದು ಗಮನಾರ್ಹ ಗೌರವ. ಅವುಗಳಲ್ಲಿ ಸಂಗೀತ ರತ್ನ ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ೧೯೮೫ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೮೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವು ಸ್ಮರಣಾರ್ಹ.

ಇವರು ಬೆಂಗಳೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ದೊರೆಸ್ವಾಮಿ ಅಯ್ಯಂಗಾರ್ ರವರ ವೀಣೆಯೊಂದಿಗೆ ಬೆರೆತು ನುಡಿಸುತ್ತಿದ್ದಾಗ ಮತ್ತೊಂದು ವೀಣಾ ತಂತಿ ಮಿಡಿದಂತೆ ಭಾಸವಾಗುತ್ತಿತ್ತು ಇವರ ಘಟವಾದನ. ಆರ್.ಕೆ. ಶ್ರೀಕಂಠನ್‌, ಎಂ.ಎಸ್‌. ಶೆಲ್ವಪುಳ್ಳೆ ಅಯ್ಯಂಗಾರ್ ರವರೊಂದಿಗೆ ಕಲೆತು ವಿಶೇಷ ಆಹ್ವಾನಿತ ಕಲಾವಿದರೊಂದಿಗೆಲ್ಲ ಬೆರತು ನುಡಿಸುವ ವೈಶಿಷ್ಟ್ಯ ಅವರದು.

ಇವರ ವಾದ್ಯ  ವಿಶೇಷವನ್ನು ಚೆಂಬೈರವರು “ಮಂಜು”ನಾದ ಎಂದು ಹೊಗಳಿ ಹಿಗ್ಗುತ್ತಿದ್ದುದು ಮರೆಯುವಂತಿಲ್ಲ. ಇದು ಎಂದಿಗೂ ಸ್ಮರಣಾರ್ಹ. ಘಟವಾದ್ಯ ನುಡಿಸುವ ಸತ್ಸಂಪ್ರದಾಯ ಹಾಕಿದವರು ಎಂದಿಗೂ ಮೃದಂಗ ದೊಂದಿಗೆ ಸೇರಿ ಮೊದಲಿನಿಂದ ಕೊನೆಯವರೆಗೂ ನುಡಿಸಿದವರಲ್ಲ. ಅನುಪಲ್ಲವಿಯಲ್ಲಿ ಸೇರಿ ಮೃದಂಗ ವಾದನವನ್ನು ಹಿಂಬಾಲಿಸಿ ಪೋಷಿಸಿ ಕಚೇರಿಗೆ ಸುನಾದದ ಪೋಷಣೆ ಒದಗಿಸುವುದೇ ಹೊರತು ಗಟ್ಟಿಯಾಗಿ ಕಟ ಕಟ ಎಂದು ಮೃದಂಗದೊಂದಿಗೆ ಸ್ಪರ್ಧೆಗಿಳಿದು ಅದಕ್ಕೂಮೀರಿ ನುಡಿಸಿದವರಲ್ಲ. ಪಿಟೀಲಿನ ದೀರ್ಘ-ಸರಳ ಸ್ವರಗಳಿಗೆ ಮೃದಂಗಕ್ಕೆ ಬಿಟ್ಟು ಬೇಕಾದಲ್ಲಿ ಸಮಯೋಚಿತವಾಗಿ ನುಡಿಸಿ, ಔಚಿತ್ಯವರಿತ ಮಾದರಿಯನ್ನು ರೂಢಿಸಿದರು. ಇವರ ಘಟವಾದನದ ಶೈಲಿ ವೈಶಿಷ್ಟಪೂರ್ಣ. ಘಟವಾದ್ಯವನ್ನು ಕಾಶ್ಮಿರದ “ನೂರ್” ನಂತೆ ಮುಂದೆ ಇರಿಸಿಕೊಂಡು ಅದರ ಕಂಠದ ಮೇಲೆ ಎಡ ಅಂಗೈನಿಂದ ಪೋಷಿಸಿಕೊಂಡು ಬಲಗೈನಲ್ಲಿ ಕಂಠದ ಮೇಲೆ ಶ್ರುತಿಶುದ್ಧವಾದ ನಾದವನ್ನು ಹೊಮ್ಮಿಸುತ್ತಾ ತಬಲಾ ವಾದನದ ರೀತಿಯ ವಿಶೇಷ ನಾದಸೌಖ್ಯವನ್ನು ಒದಗಿಸುತ್ತಿದ್ದುದು ಗಮನಾರ್ಹ ಹಾಗೂ ಅನುಕರಣೀಯ. ಅರಿಯಕ್ಕುಡಿಯಂಥವರು ಚೌಡಯ್ಯನವರನ್ನು ಈತ ಈ ರೀತಿ ನುಡಿಸುತ್ತಿರುವರಲ್ಲ ಎಂದು ಪ್ರಶ್ನಿಸಿದಾಗ, ಚೌಡಯ್ಯನವರ ಉತ್ತರ-ಈ ನಾದಸೌಖ್ಯ ಸಂಪ[ರದಾಯದಲ್ಲಿದೆಯೇ ಎಂಬುದು ಮುಖ್ಯ. ಹಾಗಿದ್ದ ಮೇಲೆ ಈ ನವೀನ ನುಡಿಕರ ಏಕೆ ಮುಂದಕ್ಕೆ ಮಾದರಿಯಾಗಬಾರದು ಎಂದು ಸಮಾಧಾನ ಸೂಚಿಸಿದರಂತೆ. ಇಂದು ಹಲವಾರು ವಿದ್ವಾಂಸರು ಈ ನುಡಿಕರವನ್ನು ಅನುಸರಿಸುತ್ತಿದ್ದಾರೆ.

ಇವರ ಶಿಷ್ಯವರ್ಗ ದೊಡ್ಡದು. ಅವರಲ್ಲಿ ಸುಪ್ರಸಿದ್ಧರಾಗಿ ಸಮಕಾಲೀನ ಸಂಗೀತ ಪ್ರಪಂಚದಲ್ಲಿ ವಿಶಿಷ್ಟ್ ಸ್ಥಾನಗಳಿಸಿರುವವರು ಘಟಂ ಬೆಂಗಳೂರು ಕೆ.ವೆಂಕಟರಾಂ ಹಾಗೂ ಮೃದಂಗ ಕಲಾವಿದ ಎ.ವಿ. ಆನಂದ್‌.

ಘಟವಾದ್ಯಕ್ಕೆ ಒಂದು ವಿಶೇಷ ಸ್ಥಾನವನ್ನು ಕಲ್ಪಿಸಿ ಅದರಲ್ಲೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ಸಂಪಾದಿಸಿಕೊಟ್ಟ ಮಂಜುನಾಥನ್‌ ಮುಂದಿನ ಘಟವಾದಕರಿಗೆ ಮಾದರಿಯಾಗಿ ವಿಶೇಷ ಸೇವೆ ಸಲ್ಲಿಸಿ ೨೧.೪.೧೯೮೯ರಲ್ಲಿ ಕಣ್ಮರೆಯಾದರು.