ಜೀವನದ ಲಯಬದ್ಧತೆಯನ್ನು ಕಾಪಾಡುತ್ತ, ಜಗತ್ತಿನ ಮಾತಾಪಿತೃಗಳಾಗಿ, ತಮ್ಮ ಲಾಸ್ಯ ತಾಂಡವಗಳಿಂದ ಪ್ರಕೃತಿಯಲ್ಲಿನ ಸಮತೋಲನವನ್ನು, ಸೌಂದರ್ಯವನ್ನು ಜಗತ್ತಿಗೆ ತೋರುತ್ತಿರುವ ಶಿವಪಾರ್ವತಿಯರು ನೃತ್ಯದ ಆದಿ ದಂಪತಿಗಳು ಅಥವಾ ಯುಗಳ ನರ್ತಕರು ಎಂದರೆ ತಪ್ಪಾಗಲಾರದು. ಇವರಲ್ಲದೆ, ಮತ್ಯಾವ ದೇವತೆಗಳಿಗೂ ಈ ಪಟ್ಟ ದೊರಕಿಲ್ಲ. ನೃತ್ಯ ದಂಪತಿಗಳೆಂದರೆ ಕೇವಲ ಶಿವ ಪಾರ್ವತಿಯರು ಮಾತ್ರ ಎಂದೇ ಜನಜನಿತವಾಗಿದೆ.

ಶಿವಪಾರ್ವತಿಯರು ಒಟ್ಟಿಗೆ ಸ್ಪರ್ಧೆಗಾಗಿ ಕೆಲವು ವಾದ್ಯಗಳ, ಸಂಗೀತ ಸ್ವರಗಳ ಉಗಮಕ್ಕಾಗಿ ನರ್ತಿಸಿದ ಉದಾಹರಣೆಗಳು ಶೈವಾಗಮಗಳಲ್ಲಿ ಲಭ್ಯವಿರುತ್ತದೆ. ಶಿವ ‘ತಾಂಡವ’ವನ್ನು ಪ್ರದರ್ಶಿಸಿದರೆ, ಪಾರ್ವತಿ ‘ಲಾಸ್ಯ’ ಪ್ರಕಾರವನ್ನು ಪ್ರದರ್ಶಿಸುತ್ತಾಳೆ. ಶಿವನ ಗಣಗಳಲ್ಲಿ ಒಬ್ಬನಾದ ‘ತಂಡು’ವಿನಿಂಧ ತಾಂಡವವೂ ಬಾಣಾಸುರನ ಮಗಳಾದ ಉಷೆಯಿಂದ ಲಾಸ್ಯ ಪ್ರಕಾರವೂ ಭರತಮುನಿಯ ನಾಟ್ಯಶಾಸ್ತ್ರದಲ್ಲಿ ಸೇರ್ಪಡೆಯಾಗಿ ನಾಟ್ಯವು ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗಿದೆ.

ದೈವೀಕಲೆಯಾದ ನೃತ್ಯವು ಭೂಲೋಕದಲ್ಲಿ ಪ್ರಚಾರ ಹಾಗೂ ಪ್ರಾಮುಖ್ಯತೆಯನ್ನು  ವಿಶೇಷವಾಗಿ ಪಡೆಯಿತು. ದೇವತಾಕಾರ್ಯಗಳಾದ ಯಜ್ಞ’ಯಾಗಾದಿಗಳಲ್ಲಿ, ಶುಭಸಮಾರಂಭಗಳಲ್ಲಿ ‘ನಟುವ’ರಿಂದಲೂ, ‘ದೇವದಾಸಿ’ಯರಿಂದಲೂ ನೃತ್ಯಸೇವಾ ಕಡ್ಡಾಯವಾಗಿ ನಡೆಯುತ್ತಿತ್ತು. ಕೇವಲ ‘ನಟುವನಾರ್’, ದೇವದಾಸಿಯರ ಸೊತ್ತಾಗಿದ್ದ ನೃತ್ಯಕಲೆ ಕ್ರಮೇಣ ಜನಸಾಮಾನ್ಯರನ್ನೂ ಆಕರ್ಷಿಸಿ, ಅವರೂ ನೃತ್ಯ ಶಿಕ್ಷಣ ಪಡೆಯುವ ಪ್ರಚೋದನೆ ಉಂಟಾಯಿತು . ಇದರಿಂದ ಸಮಾಜದ ಕುಲೀನ ಮನೆತನದ ಹೆಣ್ಣುಮಕ್ಕಳೂ ಆಸಕ್ತಿಯಿಂದ ನೃತ್ಯವನ್ನು ಕಲಿತು ಪ್ರದರ್ಶಿಸಲೂ ಆರಂಭಿಸಿದರು.

ಹೀಗೆ, ಕಲೆಯಿಂದ ಪರಸ್ಪರ ಆಕರ್ಷಿತರಾಗಿ ಹೆಣ್ಣುಗಂಡುಗಳು ದಾಂಪತ್ಯ ಜೀವನ ಸ್ವೀಕರಿಸಿ, ನೃತ್ಯಕಲೆಯ ನಿರಂತರ ಸೇವೆ ಮಾಡಿ ಮಹೋನ್ನತರಾಗಿ ಸಮಾಜ ಗುರುತಿಸುವ ನೃತ್ಯ ದಂಪತಿಗಳಾಗಿ ಹೆಸರು ಪಡೆದವರೆಂದರೆ ಶಾಂತಾ-ಧನಂಜಯ, ಯು.ಎಸ್‌.ಕೃಷ್ಣರಾವ್‌-ಚಂದ್ರಭಾಗಾದೇವಿ ಮುಂತಾದವರಲ್ಲದೆ ಈಚಿನ ಕೆಲವು ಯುವ ದಂಪತಿಗಳು. ಮೈಸೂರಿನ ನಾಟ್ಯಾಚಾರ್ಯ ಕೆ.ಎಸ್‌. ರಾಜಗೋಪಾಲ್‌ ಮತ್ತು ಜಯಂತಿದೇವಿ ಅವರೂ ಈ ರೀತಿಯ ನೃತ್ಯ ದಂಪತಿಗಳು .

ಪತಿ ಪತ್ನಿಯರು ಒಟ್ಟಾಗಿ ನರ್ತಿಸುವುದರಿಂದ ಅನುಕೂಲಗಳು ಅನೇಕ. ಅವರು ಒಬ್ಬರನ್ನೊಬ್ಬರು ಅನುಸರಿಸಿ ಭಾವರಸಗಳನ್ನು ಸಮಯೋಚಿತವಾಗಿ ಹೆಚ್ಚು ಮುಕ್ತವಾಗಿ ವ್ಯಕ್ತಪಡಿಸಬಹುದು. ತಾಂಡವ ಲಾಸ್ಯಗಳನ್ನು ಸ್ಪಷ್ಟವಾಗಿ ಮೂಡಿಸಲು ಸಾಧ್ಯವಾಗುವುದು. ಪರಸ್ಪರ ವಿಚಾರ ವಿನಿಮಯ, ಅಭ್ಯಾಸಗಳಿಂದ ಉತ್ತಮ ಗುಣಮಟ್ಟದ ಪ್ರದರ್ಶನ ನೀಡಲು ಅವಕಾಶವಾಗುವುದು. ರಸಾನಂದದ ಮಜಲುಗಳನ್ನು ಒಟ್ಟಾಗಿ ಅನುಭವಿಸಬಹುದು. ಕೌಟುಂಬಿಕ ಜೀವನದಲ್ಲಿ ಕಂಡುಬರಬಹುದಾದ ಕುಂದು ಕೊರತೆಗಳು ನೃತ್ಯದಂಪತಿಗಳ  ಕಲಾಜೀವನದ ಸಂಭ್ರಮ ಸಂತೃಪ್ತಿಗಳಲ್ಲಿ ಮಾಸಿ ಹೋಗುವ ಸಂದರ್ಭಗಳೇ ಹೆಚ್ಚು.

ಸಂಗೀತ, ನೃತ್ಯದಂತಹ ಕಲಾಶಾಸ್ತ್ರಗಳಿಗೆ ಮತಂಗ, ಕೋಹಿಲ, ದತ್ತಿಲರಂತಹ ಪುರುಷರೇ ಪ್ರವರ್ತಕರು. ನಾಟಕ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕಳೆದ ಶತಮಾನದ ಮಧ್ಯಭಾಗದವರೆಗೂ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದರು. ಅಲ್ಲದೆ, ಈ ಕಲೆಗಳು ಹಿಂಧೆ ನಮ್ಮ ಸಮಾಜದಲ್ಲಿ ಒಂದು ಗುಂಪಿನ ವಂಶ ಪಾರಂಪರ್ಯವಾಗಿ, ಕುಲವೃತ್ತಿಯಾಗಿ ಬೆಳೆದು ಬಂದಿತು. ಜೀವನೋಪಾಯಕ್ಕಾಗಿ ಕಲೆಯನ್ನೇ ನಂಬಿದ ಕಾಲವು ಅದಾಗಿತ್ತು. ಕಾಲಕ್ರಮೇಣ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಕುಲೀನಮನೆತನದ ಪುರುಷರೂ, ಸ್ತೀಯರೂ ನೃತ್ಯದಲ್ಲಿನ ದೈವಿಕತೆ, ಸೌಂದರ್ಯಗಳತ್ತ ಆಕರ್ಷಿತರಾಗಿ, ನಟುವರಲ್ಲಿ ಶ್ರದ್ಧಾಭಕ್ತಿಯಿಂದ ಕಲಿಯಲು ಪ್ರಾರಂಭಿಸಿದರು. ಈ ಒಂದು ಪರಂಪರೆಯಲ್ಲಿ, ಶ್ರದ್ಧಾಭಕ್ತಿಗಳಿಂದ ನೃತ್ಯಕಲೆ ಕಲಿತು ತಮ್ಮ ಜೀವನವನ್ನೇ ಕಲೆಗಾಗಿ ಮುಡಿಪಿಟ್ಟ ದಂಪತಿಗಳು ಮೈಸೂರಿನ ಕೆ.ಎಸ್‌. ರಾಜಗೋಪಾಲ್‌ ಮತ್ತು ಜಯಂತಿ ದೇವಿ.

ಕೆ.ಎಸ್‌. ರಾಜಗೋಪಾಲ್‌ ಅವರು ದಿನಾಂಕ ೫.೧೨.೧೯೨೪ರಂದು ಉಡುಪಿಯ ಶ್ರೀನಿವಾಸ ಹೆಬ್ಬಾರ್ ದಂಪತಿಗಳಿಗೆ ಜನಿಸಿದರು. ತಂದೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿದ್ದರೂ, ಬಾಲಕ ರಾಜಗೋಪಾಲರ ಮನಸ್ಸು ವಿದ್ಯಾಭ್ಯಾಸದತ್ತ ಹೆಚ್ಚು ಒಲಿಯಲಿಲ್ಲ. ಎಸ್‌.ಎಸ್‌.ಎಲ್‌.ಸಿ. ವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದ ರಾಜಗೋಪಾಲ್‌ರವರನ್ನು ಆಕರ್ಷಿಸಿದ್ದು ನೃತ್ಯ ಮತ್ತು ನಾಟಕಗಳು.

ತಮ್ಮ ಹದಿನಾರನೆಯ ವಯಸ್ಸಿನಲ್ಲೇ ಬೆಂಗಳೂರಿನ ಗುರು ಎಂ.ಆರ್. ನಾಗಭೂಷಣ್‌ರವರಲ್ಲಿ ನೃತ್ಯಾಭ್ಯಾಸವನ್ನು ಆರಂಭಿಸಿದರು. ತಮ್ಮಲ್ಲಿರುವ ಕಲೆಗಳ ಕಲಿಕೆಯ ಅದಮ್ಯ ಬಯಕೆಯನ್ನು ಸಾಕಾರಗೊಳಿಸಲು ಕಲೆಗಳ ತವರೂರಾದ ಮೈಸೂರನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡರು. ೧೯೩೮ರಲ್ಲಿ ಮೈಸೂರಿಗೆ ಪಾದಾರ್ಪಣೆ ಮಾಡಿದ ರಾಜಗೋಪಾಲ್‌ ಪತ್ನಿ ಜಯಂತಿಯೊಂದಿಗೆ ಕಲಾಪ್ರಪಂಚದಲ್ಲಿ ಬೆಳೆಯುತ್ತಾ ಹೋದರು. ನಾಟಕರತ್ನ ಗುಬ್ಬಿವೀರಣ್ಣ, ಹಿರಣ್ಣಯ್ಯ, ಹಾಸ್ಯಪಟು ಜಟ್ಟಪ್ಪನವರ ಕಂಪನಿ ನಾಟಕಗಳಲ್ಲಿ ಸ್ತ್ರೀಪಾತ್ರ ಧರಿಸುತ್ತಿದ್ದುದಲ್ಲದೇ ನೃತ್ಯವನ್ನು ಮಾಡುತ್ತಿದ್ದರು. ಈ ಒಂದು ಹಿನ್ನೆಲೆಯಿಂದ, ರಾಜಗೋಪಾಲ್‌ ಅವರು ನಾಟ್ಯ ಸರಸ್ವತಿ ಜಟ್ಟಿತಾಯಮ್ಮ ಹಾಗೂ ನಾಟ್ಯ ಪ್ರವೀಣೆ ಸುಂದರಮ್ಮನವರಲ್ಲಿ ಕೆಲವು ವರ್ಷ ನೃತ್ಯ ಅಭ್ಯಾಸ ಮಾಡಿ ಭರತನಾಟ್ಯದ ಸೊಬಗು, ಲಾವಣ್ಯ, ಸೌಂದರ್ಯಗಳ ಪರಿಜ್ಞಾನ ಪಡೆಯಲಲು ಅವಕಾಶವಾಯ್ತು.

ಮೈಸೂರಿನ ಅರಮನೆಯಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಕಾಲದಲ್ಲಿ ಬ್ಯಾಂಡ್‌ ಸೆಟ್ಟಿನಲ್ಲೂ ಸೇವೆ ಸಲ್ಲಿಸುವ ಅವಕಾಶ ರಾಜಗೋಪಾಲ್‌ರವರಿಗೆ ದೊರಕಿತು. ರಾಜಗೋಪಾಲ್‌ರವರು ನೃತ್ಯಶಿಕ್ಷಣ ಪಡೆಯುತ್ತಿದ್ದ ಗುರುಗಳ ಬಳಿಯಲ್ಲೇ ಜಯಂತಿ ಅವರು ನೃತ್ಯ ತರಬೇತಿಗಾಗಿ ಬರುತ್ತಿದ್ದರು. ಇವರಿಬ್ಬರ ಪರಸ್ಪರ ಪರಿಚಯವು ಪ್ರೇಮಕ್ಕೆ ತಿರುಗಿ ಹಿರಿಯರ ಸಮ್ಮತಿ ಪಡೆದು ರಾಜಗೋಪಾಲ್‌ ಮತ್ತು ಜಯಂತಿ ಗೃಹಸ್ಥ ಜೀವನಕ್ಕೆಕ ಕಾಲಿಟ್ಟರು. ನೃತ್ಯಕಲೆಗೇ ತಮ್ಮನ್ನು ಅರ್ಪಿಸಿಕೊಳ್ಳಬೇಕೆಂಬ ಮನೋಭಾವವನ್ನು ಹೊಂದಿದ್ದ ಈ ಚೇತನಗಳು ಪರಸ್ಪರ ಒಲಿದು ಸತಿಪತಿಗಳಾದದ್ದು ನೃತ್ಯಕ್ಷೇತ್ರದ ಸುದೈವವೇ ಸರಿ!

೧೯೫೦ರಲ್ಲಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಈ ದಂಪತಿಗಳು ಸರಳವೂ, ನಿರಾಡಂಬರವೂ ಆದ ಜೀವನವನ್ನು ಸಾಗಿಸುತ್ತ ನೃತ್ಯಕಲಾ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಪತಿಪತ್ನಿಯವರು ಒಟ್ಟಾಗಿ ಹಲವಾರು ನೃತ್ಯಕಾರ್ಯಕ್ರಮಗಳನ್ನು  ನೀಡಿ ಮೈಸೂರಿನ ಮನೆಮಾತಾಗಿದ್ದಾರೆ. ಇವರು ಅಭಿನಯಿಸಿದ ಬೆಸ್ತರನೃತ್ಯ, ಶಿವಪಾರ್ವತಿಯರ ನೃತ್ಯಗಳು ಇವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದುವು. ಒಟ್ಟಾಗಿ ಅನೇಕ ಬಿರುದು ಹಾಗೂ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ‘ತಿಲೋತ್ತಮೆ’ ಎಂಬ ಚಿತ್ರಕ್ಕೆ ನೃತ್ಯ ನಿರ್ದೇಶನವನ್ನು ಮಾಡಿ ಈ ಜೋಡಿ ಚಿತ್ರರಂಗದಲ್ಲೂ ಖ್ಯಾತಿಯನ್ನು ಪಡೆಯಿತು.

 

೧೮೩೪ರಲ್ಲಿ ಜನಿಸಿದ ಜಯಂತಿಯವರು ಮೂಲತಃ ಮಂಗಳೂರಿನವರು. ತಂದೆ, ಸಸ್ಯಶಾಸ್ತ್ರದಲ್ಲಿ ಅಧ್ಯಾಪಕರಾಗಿದ್ದ ಶ್ರೀ ಬಿ.ಎಸ್‌. ವ್ಯಾಸವಿಠ್ಠಲ್‌ ಅವರು. ತಂದೆ ತಾಯಿಗಳ ಪ್ರೋತ್ಸಾಹ ಸಹಕಾರಗಳಿಂದ ಜಯಂತಿ ಅವರು ಶ್ರೀ ವಾರಿಯರ್ ಅವರಲ್ಲಿ ಕಥಕ್ಕಳಿ ನೃತ್ಯವನ್ನು ಕಲಿತರು. ಇಲ್ಲಿಂಧ ಅವರ ಕಲೆಯ ಜ್ಞಾನಪಿಪಾಸೆ ಹೆಚ್ಚುತ್ತಾ ಹೋಯಿತು. ಶ್ರೀ ಹೀರಾಲಾಲ್‌ ಅವರಲ್ಲಿ ಕಥಕ್‌ ನೃತ್ಯವನ್ನು ಕೆಲಕಾಲ ಅಭ್ಯಾಸ ಮಾಡಿದರು. ಜಯಂತಿ ಅವರು ಬಹುಮುಖ ಪ್ರತಿಭೆ ಉಳ್ಳವರು. ನೃತ್ಯಕ್ಷೇತ್ರದಷ್ಟೇ ಅಲ್ಲದೆ, ವೀಣೆ, ಪಿಟೀಲು ವಾದನಗಳಲ್ಲೂ ಪರಿಣತಿಯನ್ನು ಹೊಂದಿ ಕಚೇರಿಗಳನ್ನು ಕೊಡುತ್ತಿದ್ದರು. ಈಗಲೂ ವಿದ್ಯಾರ್ಥಿಗಳಿಗೆ ವೀಣೆ, ಪಿಟೀಲು ವಾದನಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

೧೯೪೮ರಲ್ಲಿ ಶ್ರೀ ರಾಜಗೋಪಾಲ್‌ ಅವರು ‘ಶ್ರೀ ನೃತ್ಯಕಲಾಮಂದಿರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅನೇಕ ಪುರುಷ ನೃತ್ಯಪಟುಗಳನ್ನು ತರಬೇತಿಗೊಳಿಸಿ ಬೆಳಕಿಗೆ ತಂದರು. ಪತ್ನಿ ಜಯಂತಿಯೊಂದಿಗೆ ಈ ಸಂಸ್ಥೆ ಮತ್ತೂ ಬೆಳೆಯುತ್ತಾ ಹೋಯಿತು. ಈ ಕಲಾ ದಂಪತಿಗಳ ಪ್ರಮುಖ ಶಿಷ್ಯರುಗಳಲ್ಲಿ ದಿವಂಗತರಾದ ವಿಷ್ಣುದಾಸ್‌, ಪಿ.ಎನ್‌. ಆನಂದರಾವ್‌, ಎಂ.ಆರ್. ರಾವ್‌ ಮತ್ತು ಕೃಷ್ಣಕುಮಾರ್ ಹಾಗೂ ಶ್ರೀಯುತರಾದ ತುಮಕೂರು ರಾಮನ್‌, ಟಿ.ಎನ್‌. ಸೋಮಶೇಖರ್ ಮತ್ತು ಕೆ.ಬಿ. ಮಾಧವರಾವ್‌ ಅವರು ಪ್ರಮುಖರು.

 

ಶ್ರೀ ರಾಜಗೋಪಾಲ್‌ ಅವರ ಕಲಾಸೇವೆಗೆ ಮೆಚ್ಚಿ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಲಲಿತಮಹಲ್‌ನ ಪಕ್ಕ ೪೦-೬೫ರ ನಿವೇಶನವನ್ನು ಕೊಟ್ಟರು. ಕರ್ನಾಟಕ ಸರ್ಕಾರವು ಆಶ್ರಯ ಮನೆಯನ್ನು ಮೈಸೂರಿನಲ್ಲಿ ಈ ದಂಪತಿಗಳಿಗೆ ನೀಡಿದೆ. ಶ್ರೀ ರಾಜಗೋಪಾಲ್‌ರವರಿಗೆ ಹಲವು ಪ್ರಶಸ್ತಿಗಳು ಸಂದಿದ್ದು. ೧೯೯೩-೯೪ರಲ್ಲಿ ಕರ್ನಾಟಕ ಕಲಾ ತಿಲಕ ಎಂಬ ಬಿರುದನ್ನು ನೀಡಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಗೌರವಿಸಿದೆ. ಅರಮನೆಯ ಹಾಗೂ ಸರ್ಕಾರದ ಕಲಾವಿದರ ಮಾಸಾಶನಗಳೂ ಇವರಿಗೆ ದೊರಕುತ್ತಿವೆ. ಮೈಸೂರಿನ ಪ್ರತಿಷ್ಠಿತ ಸಂಸ್ಥೆಯಾದ ‘ಭಾರತೀಯ ನೃತ್ಯ ಕಲಾಪರಿಷತ್‌’ ೧೯೮೭ರಲ್ಲಿ ಈ ದಂಪತಿಗಳನ್ನು ಸನ್ಮಾನಿಸಿ ನೃತ್ಯಕಲಾಶಿಲ್ಪಿ ಎಂಬ ಬಿರುದನ್ನು  ನೀಡಿದೆ. ಅಂತೆಯೇ ಮಂಡ್ಯದ ಶಾಂತಲಾ ನೃತ್ಯಕಲಾ ಮಂದಿರವೂ ಇವರಿಗೆ ನಾಟ್ಯಕಲಾರತ್ನ ಎಂಬ ಬಿರುದನ್ನು ನೀಡಿದೆ.

ಶ್ರೀ ರಾಜಗೋಪಾಲ್‌ರವರಿಗೆ ಕವಿತಾ ರಚನೆ ಮಾಡುವ ಸಾಮರ್ಥ್ಯವೂ ಇದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ೮-೧೦ ಕೃತಿಗಳನ್ನು ರಚಿಸಿರುವುದಲ್ಲದೇ ತಮಿಳಿನ ಪ್ರಸಿದ್ಧ ಕೃತಿ ‘ತಾಯೇ ಯಶೋದೆ’ಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ವಿದುಷಿ ಜಯಂತಿ ಹಾಗು ವಿದ್ವಾನ್‌ ರಾಜಗೋಪಾಲ್‌ ದಂಪತಿಗಳಲ್ಲಿಕ ಕೆಲವಾರು ವರ್ಷಗಳ ಕಾಲ ತರಬೇತಿ ಪಡೆದು ಹಿಂದಿನ ಗುರುಕುಲಪದ್ಧತಿಯಂತೆ ಗುರುಗಳ ಬಳಿಯೇ ಇದ್ದು ಅವರ ನಿರಂತರ ತರಬೇತಿ, ಮಾರ್ಗದರ್ಶನ ಪಡೆದು ರಂಗಪ್ರವೇಶ ಮಾಡಿದ ವಿದ್ಯಾರ್ಥಿನಿಯರು ಹಲವಾರು.

ಈಗ ಅನಾರೋಗ್ಯದ ನಿಮಿತ್ತ ಶ್ರೀ ರಾಜಗೋಪಾಲ್‌ ಅವರು ನೃತ್ಯ ಪಾಠಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಜಯಂತಿ ತಮ್ಮ ನಿವಾಸದಲ್ಲಿ ಅಲ್ಲದೆ ಕೊಡಗು ಜಿಲ್ಲೆಯ ಗೋಣಿಕೊಪ್ಪ, ವಿರಾಜಪೇಟೆಗಳಲ್ಲೂ ವಿದ್ಯಾರ್ಥಿಗಳಿಗೆ ನೃತ್ಯವೇ ಅಲ್ಲದೆ, ವೀಣೆ, ಪಿಟೀಲುವಾದನಗಳಲ್ಲೂ ತರಬೇತಿ ನೀಡುತ್ತಿದ್ದಾರೆ.

 

ರಾಜಗೋಪಾಲ್‌ ದಂಪತಿಗಳದು ಯಶಸ್ವೀ ದಾಂಪತ್ಯ; ಒಂದು ಸುಖೀ ಕುಟುಂಬ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು  ಹೊಂದಿದ್ದು, ಅವರೆಲ್ಲರೂ ಸಮಾಜದಲ್ಲಿ ಒಳ್ಳೆಯ ಸ್ಥಾನಗಳನ್ನು ಪಡೆದಿರುವುದು ಈ ದಂಪತಿಗಳಿಗೆ ಸಂತೋಷವಾಗಿದೆ. ತಾವು ಕಲೆಯನ್ನೇ ನಂಬಿ ಬದುಕನ್ನು ಸಾಗಿಸಿದರೂ ಆ ಕಲಾದೇವಿ ತಮ್ಮನ್ನು ಸುಖವಾಗಿ ತೃಪ್ತಿಯಹಿಂದಿರುವಂತೆ ಕೃಪೆ ಮಾಡಿದ್ದಾಳೆ ಎಂದು ಕೃತಜ್ಞತಾ ಭಾವ ತಳೆದಿದ್ದಾರೆ.