೧೯೫೬ರಲ್ಲಿ ಕೊಡಗಿನಲ್ಲಿ ಜನಿಸಿದ ಶ್ರೀಮತಿ ರಾಜೇಶ್ವರಿ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಿಂದ ಬಂದವರು. ಇವರ ತಂದೆ ಶ್ರೀ ಅಂಬಳೆ ಸುಬ್ಬರಾವ್ ಆಗಿನ ಕಾಲದಲ್ಲಿ ಕೊಡಗಿನ ಪುಟ್ಟ ಹಳ್ಳಿಯೊಂದರಲ್ಲಿ ’ಭಾರತೀಯ ಸಂಗೀತ ನೃತ್ಯ ಕಲಾ ಶಾಲೆ’ ಸಂಸ್ಥೆಯನ್ನು ಸ್ಥಾಪಿಸಿ ಆಸಕ್ತಿರಿಗೆ ಸಂಗೀತ, ನೃತ್ಯ, ನಾಟಕಗಳ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದರು. ನಂತರ ಅವರ ಶಾಲೆ ಮಡಿಕೇರಿಗೆ ವರ್ಗಾವಣೆಗೊಂಡು ಅಲ್ಲೂ ತನ್ನ ಕಲಾಸೇವೆಯನ್ನು ಮುಂದುವರಿಸಿತು. ಶ್ರೀಮತಿ ರಾಜೇಶ್ವರಿ ಆರಂಭದಲ್ಲಿ ತಮ್ಮ ತಂದೆಯವರಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಾರತನಾಟ್ಯದಲ್ಲಿ ತರಬೇತಿ ಪಡೆದರು. ನಂತರ ಬೆಂಗಳೂರಿನ ಶ್ರೀ. ವಿ.ಎಸ್. ಕೌಶಿಕ್, ಕೇರಳದ ಶ್ರೀಮತಿ ಚಿನ್ನಮ್ಮ, ಮೈಸೂರಿನ ಶ್ರೀ ಮೋಹನ ಭಾರ್ಗವ್ ಅವರಲ್ಲಿ ರಾಜೇಶ್ವರಿಯವರಿಗೆ ಹೆಚ್ಚಿನ ಶಿಕ್ಷಣ ದೊರೆಯಿತು.

ತಮ್ಮ ತಂದೆಯವರ ಶಾಲೆಯನ್ನು ಸೋದರ, ಸೋದರಿಯರೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದ ರಾಜೇಶ್ವರಿಯವರು ಆ ಶಾಲೆಯ ಶಾಖೆಗಳನ್ನು ಮಂಡ್ಯ, ಕೆ.ಆರ್. ನಗರ, ಕೊಣನೂರು, ಹಾಸನ, ಪುತ್ತೂರು, ಸುಳ್ಯ ಪಟ್ಟಣಗಳಲ್ಲಿಯೂ ತೆರೆದು ನೂರಾರು ಕಲಾವಿದರನ್ನು ತಯಾರು ಮಾಡಿದರು. ಜೊತೆಗೆ ಅಮೆರಿಕಾ, ಪ್ರಾನ್ಸ್, ಸ್ವಿರ್ಜರ್‌ಲ್ಯಾಂಡ್ ದೇಶೀಯ ಕಲಾವಿದರನೇಕರು ರಾಜೇಶ್ವರಿಯವರಿಂದ ನೃತ್ಯ ಶಿಕ್ಷಣ ಪಡೆದಿದ್ದಾರೆ.

ಪ್ರಸ್ತುತ ಅಂಬಳೆ ರಾಜೇಶ್ವರಿಯವರು ಹಾಸನದಲ್ಲಿ ಶಾಲಾ ಕಟ್ಟಡವೊಂದನ್ನು ನಿರ್ಮಿಸಿ ಅಲ್ಲಿ ಆಸಕ್ತರಿಗೆ ವಸತಿ ಸೌಕರ್ಯವನ್ನು ನೀಡಿ, ಸಂಗೀತ ನೃತ್ಯ ಶಿಕ್ಷಣವನ್ನು ಕೊಡುತ್ತಿದ್ದಾರೆ.

ದೇಶಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡಿರುವ ರಾಜೇರ್ಶವರಿಯವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ೨೦೦೪ರ ಸಾಲಿನ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಶ್ರವಣಬೆಳಗೊಳದ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಂದ್ರಗಿರಿ ಮಹೋತ್ಸವದಲ್ಲಿ ನೀಡಿದ ’ನಾಟ್ಯ ಶಾಸ್ತ್ರ ವಿಶಾರದೆ’ ಬಿರುದು, ಸಿಂಹವಾಹಿನಿ ಕಲಾ ಸಂಘದವರು ನೀಡಿ ’ನಾಟ್ಯ ಶ್ರೀ’ ಪ್ರಶಸ್ತಿ, ಹಾಸನದ ಡಾ|| ರಾಜಕುಮಾರ್ ಅಭಿಮಾನಿ ಸಂಘದವರು ನೀಡಿದ ’ನೃತ್ಯರಾಗಿಣಿ’ ಪುರಸ್ಕಾರ ಪ್ರಮುಖದವಾದವು. ಈಗ ಶ್ರೀಮತಿ ಅಂಬಳೆ ರಾಜೇಶ್ವರಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೫-೦೬ನೇ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.