ಕನ್ನಡ ಚಿತ್ರರಂಗದ ಕಳೆದ ಅರ್ಧ ಶತಮಾನದ ಜೀವಂತ ಪ್ರತಿನಿಧಿ ನಿರ್ದೇಶಕ, ನಿರ್ಮಾಪಕ ಕೆ.ಎಸ್.ಎಲ್. ಸ್ವಾಮಿ (ರವಿ) ಅವರು.
೧೯೬೬ರಲ್ಲಿ ತೂಗುದೀಪ ಚಿತ್ರದ ಮೂಲಕ ಚಿತ್ರ ನಿರ್ದೇಶನಕ್ಕೆ ಕಾಲಿರಿಸಿದ ರವಿ ಅವರು ಬಹುದೊಡ್ಡ ನಿರ್ದೇಶಕರುಗಳೆನಿಸಿದ ಸಿದ್ಧಲಿಂಗಯ್ಯ, ತಿಪಟೂರು ರಘು, ದೊರೈ, ದಾಸರಿ ನಾರಾಯಣರಾವ್, ವಿ. ಸೋಮಶೇಖರ್, ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕೋಟಾರೆಡ್ಡಿ, ಶ್ರೀದತ್ತರಾಜ್, ಮಣಿಮುರುಗನ್ ಮುಂತಾದ ಎಲ್ಲರೊಂದಿಗೆ ದುಡಿದವರು. ಅಲ್ಲದೆ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಡೆಯ ಚಿತ್ರ ‘ಮಸಣದ ಹೂವು’ ಪೂರ್ಣಗೊಳಿಸಿ ಬಿಡುಗಡೆ ಮಾಡಿದ ಕೀರ್ತಿಯೂ ಅವರದಾಗಿದೆ.
ಈವರೆಗೆ ಸುಮಾರು ೪೦ ಚಿತ್ರಗಳನ್ನು ನಿರ್ದೇಶಿಸಿರುವ ರವಿಯವರ ಚಿತ್ರಜೀವನದಲ್ಲಿ ಮಸಣದ ಹೂವು, ಮಲಯ ಮಾರುತ, ಮಿಥಿಲೆಯ ಸೀತೆಯರು, ಮಕ್ಕಳ ಭಾಗ್ಯ, ತುಳಸಿ, ಭಾಗ್ಯಜ್ಯೋತಿ ಮುಂತಾದುವು ಮರೆಯಲಾರದ ದಾಖಲೆಗಳನ್ನು ನಿರ್ಮಿಸಿದವು.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ,(೧೯೯೪-೯೫) ಪುರಸ್ಕೃತರಾದ ರವಿ ಅವರ ಮಲಯ ಮಾರುತ ಸಂಗೀತಕ್ಕೆ ಸುರಸಿಂಗಾರ್ ಪ್ರಶಸ್ತಿಯೂ, ಜಂಬೂ ಸವಾರಿ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ಸಂದಿವೆ. ಚಲನಚಿತ್ರ ರಂಗದ ಅನೇಕ ಸಂಘಗಳಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡಿರುವ ರವಿ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.
Categories