ಕೆ.ಎಸ್.ಕೃಷ್ಣನ್ಭಾರತದ ಹಿರಿಯ ಭೌತವಿಜ್ಞಾನಿ ನೊಬೆಲ್ ಬಹುಮಾನ ಪಡೆದ ಸಿ.ವಿ.ರಾಮನ್ ಅವರೊಂದಿಗೆ ಕೆಲಸ ಮಾಡಿದರು. ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗ ಶಾಲೆಯ ಪ್ರಥಮ ನಿರ್ದೇಶಕರು. ಉತ್ತಮ ಅಧ್ಯಾಪಕರು, ಸ್ನೇಹಪರರಾದ ಹಿರಿಯ ವ್ಯಕ್ತಿ.

ಕೆ.ಎಸ್.ಕೃಷ್ಣನ್

‘ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ-ಎಂಬ ಆದರ್ಶ ಧ್ಯೇಯ ಭಾರತೀಯರದು. ಎಂತಲೇ ಹೆಚ್ಚು ಹೆಚ್ಚು ಜ್ಞಾನವನ್ನು ಗಳಿಸಬೇಕು ಎಂಬುದನ್ನೇ ತಮ್ಮ ಜೀವನದ ಗುರಿಯನ್ನಾಗಿ ಇಟ್ಟುಕೊಂಡು ಅನೇಕ ಮಹನೀಯರು ಈ ನಾಡಿನಲ್ಲಿ ಶ್ರಮಿಸಿದರು. ತತ್ವಶಾಸ್ತ್ರಜ್ಞರು, ತಾರ್ಕಿಕರು, ಗಣಿತಶಾಸ್ತ್ರ ಪ್ರವೀಣರು, ವೈದ್ಯರು, ವಿಜ್ಞಾನಿಗಳು-ಹೀಗೆ ಮೇಧಾವಿಗಳ ಪರಂಪರೆಯೇ ಈ ದೇಶದಲ್ಲಿ ಮೆರೆದು ಹೋಗಿದೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ವಿಜ್ಞಾನ ಕ್ಷೇತ್ರ ಅಪಾರವಾಗಿ ಅಭಿವೃದ್ಧಿ ಹೊಂದಿದೆ. ಭಾರತೀಯ ವಿಜ್ಞಾನಿಗಳು ಈ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿಯನ್ನು ಪಡೆದ ಸರ್ ಸಿ.ವಿ.ರಾಮನ್ ಅವರ ಸಹೋದ್ಯೋಗಿಗಳೂ, ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗ ಶಾಲೆಯ ಪ್ರಪ್ರಥಮ ನಿರ್ದೇಶಕರೂ ಆಗಿದ್ದ ಸರ್ ಕೆ.ಎಸ್.ಕೃಷ್ಣನ್ ಅವರು ಭಾರತಕ್ಕೆ ಕೀರ್ತಿ ತಂದ ಮಹನೀಯರಲ್ಲಿ ಒಬ್ಬರು.

ವಿಜ್ಞಾನದ ಎರಡು ಕ್ಷೇತ್ರಗಳಲ್ಲೂ

ವಿಜ್ಞಾನದಿಂದ ಲಭ್ಯವಾಗುವ ಜ್ಞಾನ ಎರಡು ಬಗೆಯದು.

ಒಂದನ್ನು ಶುದ್ಧ ಜ್ಞಾನ ಎನ್ನಬಹುದು. ಇದು ನಮ್ಮ ಸುತ್ತಲಿನ ಜಗತ್ತಿನ ವಿಷಯದ ತಿಳಿವಳಿಕೆ. ಇದು ಯಾವ ರೀತಿಯಲ್ಲಾದರೂ ಪ್ರಯೋಜನಕ್ಕೆ ಬರಬಹುದು, ಬಾರದಿರಬಹುದು, (ನಮ್ಮ ಭೂಮಿಯಿಂದ ಕೋಟ್ಯಂತರ ಮೈಲಿಗಳಾಚೆ ಎರಡು ಗ್ರಹಗಳಿವೆ ಎಂದುಕೊಳ್ಳೋಣ; ಅವುಗಳ ನಡುವೆ ದೂರ ಎಂಟು ಎಂದು ಬಹು ಕಷ್ಟಪಟ್ಟು ಕಂಡುಹಿಡಿಯುವುದರಿಂದ ನಮಗೆ ಯಾವ ಪ್ರಯೋಜನವೂ ಇಲ್ಲದಿರಬಹುದು. ಅಥವಾ ಎಷ್ಟೋ ವರ್ಷಗಳ ನಂತರ ಮನುಷ್ಯ ಅವುಗಳಲ್ಲಿ ಒಂದು ಗ್ರಹವನ್ನು ತಲಪಿದರೆ, ಅಲ್ಲಿಂದ ಇನ್ನೊಂದಕ್ಕೆ ಹೋಗುವ ಪ್ರಯತ್ನ ಮಾಡಿದರೆ ಆಗ ಈ ಮಾಹಿತಿಯನ್ನು ಪ್ರಯೋಗಿಸಿಕೊಳ್ಳಬಹುದು. ಎಂದರೆ, ಇವತ್ತು ಪ್ರಯೋಜನಕ್ಕೆ ಬಾರದು, ಎಂದು ತೋರಿದ ಮಾಹಿತಿ ಎಂದೋ ಪ್ರಯೋಜನಕ್ಕೆ ಬಂದೀತು.) ಆದರೆ ಶುದ್ಧ ಜ್ಞಾನವನ್ನು ಅರಸುವ ವಿಜ್ಞಾನಿ, ತಾನು ಕಂಡು ಹಿಡಿದದ್ದು ಎಂದೋ ಪ್ರಯೋಜನಕ್ಕೆ ಬಂದೀತು ಎಂಬ ನಿರೀಕ್ಷಣೆಯಿಂದಲೇನೂ ಕೆಲಸ ಮಾಡುವುದಿಲ್ಲ. ಜ್ಞಾನವೇ ಅವನಿಗೆ ಮುಖ್ಯ.

ಇನ್ನೊಂದು ಬಗೆಯದು, ನಮ್ಮ ಜೀವನದಲ್ಲಿ ಬಳಸಿಕೊಂಡು ಪ್ರಯೋಜನ ಪಡೆಯಬಹುದಾದಂತಹ ಜ್ಞಾನ, ವಿದ್ಯುಚ್ಛಕ್ತಿಯನ್ನು ಕುರಿತ ಸಂಶೋಧನೆಯಿಂದ ಬರುವ ಜ್ಞಾನ ಇಂತಹದು. ಇದನ್ನು ಬಳಸಿಕೊಂಡು ನಾವು ಯಂತ್ರಗಳನ್ನು ನಡೆಸಬಹುದು, ಅವುಗಳಿಂದ ಕೆಲಸ ಮಾಡಿಸಿಕೊಳ್ಳಬಹುದು. ಒಂದು ದೇಶಕ್ಕೆ ಎರಡು ವರ್ಗಗಳ ವಿಜ್ಞಾನಿಗಳೂ ಬೇಕು. ಕೆ.ಎಸ್.ಕೃಷ್ಣನ್ ಅವರಿಗೆ ಎರಡರಲ್ಲಿಯೂ ಆಸಕ್ತಿ. ಸ್ವತಃ ಶುದ್ಧಜ್ಞಾನದ ಕ್ಷೇತ್ರದಲ್ಲಿಯೇ ಅಮೂಲ್ಯ ಕೆಲಸ ಮಾಡಿದರು.ತಮ್ಮ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ, ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಶಾಲೆಯ ನಿರ್ದೇಶಕರಾಗಿ, ವ್ಯವಹಾರ ಜೀವನಕ್ಕೆ ಅನ್ವಯವಾಗುವ ವಿಜ್ಞಾನ-ತಂತ್ರಜ್ಞಾನಗಳನ್ನು ಬೆಳೆಸಲು ಕಾರಣರಾದರು.

ಬಾಲ್ಯ ವಿದ್ಯಾಭ್ಯಾಸ

ಕೃಷ್ಣನ್ ನಮ್ಮ ನೆರೆ ನಾಡಾದ ತಮಿಳುನಾಡಿನ ಮಧುರೈ ಜಿಲ್ಲೆಯ ವತ್ರಪ್ ಎಂಬ ಊರಿನಲ್ಲಿ ೧೮೯೮ರ ಡಿಸೆಂಬರ್ ೩ ರಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದರು. ಇವರ ತಂದೆಯ ವೃತ್ತಿ ವ್ಯವಸಾಯವಾದರೂ ಅವರು ಸ್ವಯಂ ವಿದ್ವಾಂಸರು. ಅನುಕೂಲವಾದ ಮನೆಯ ವಾತಾವರಣದಲ್ಲಿ ಕೃಷ್ಣನ್ ಬೆಳೆದು ತಮ್ಮ ವಿದ್ಯಾಭ್ಯಾಸದ ಮೊದಲ ಹಂತಗಳನ್ನು ವತ್ರಪ್‌ನಲ್ಲಿ ಏರಿದರು.

ಬೆಳೆಯುವ ಪೈರು ಮೊಳಕೆಯಲ್ಲಿಯೇ ತಿಳಿಯುತ್ತದೆ ಎಂಬ ನಾಣ್ಣುಡಿಗೆ ಅನುಸಾರವಾಗಿ ಕೃಷ್ಣನ್ ಎಳೆಯ ವಯಸ್ಸಿನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಅವರ ಸೂಕ್ಷ ಬುದ್ಧಿ, ವಿಷಯಗಳನ್ನು ಒಂದೇ ಬಾರಿ ಗ್ರಹಿಸುವ ಸಾಮರ್ಥ್ಯಗಳು ಅವರ ಗುರುಗಳನ್ನು ಬೆರಗಾಗಿಸುತ್ತಿದ್ದವು. ಕೃಷ್ಣನ್ ಅವರಿಗೆ ಓದಿನಲ್ಲಿ ಅಲ್ಲದೆ ಆಟಗಳಲ್ಲಿ ಬಹು ಆಸಕ್ತಿ. ಮೇಲಾಗಿ ಚಿನ್ನಕ್ಕೆ ಪುಟವಿಟ್ಟಂತೆ ವಿನೋದ ಪ್ರಕೃತಿ. ನಿರಹಂಕಾರ ಸ್ವಭಾವ. ಇಂಥ ಚಿನ್ನದ ಹುಡುಗ ಎಲ್ಲರ ಮೆಚ್ಚಿಗೆಯನ್ನು ಗಳಿಸಿದ್ದರಲ್ಲಿ ಆಶ್ಚರ್ಯವೇನು?

ವತ್ರಪ್‌ನಲ್ಲಿ ದೊರಕುವ ಶಾಲ್ ಶಿಕ್ಷಣ ಮುಗಿಯಿತು. ಕೃಷ್ಣನ್ ಅವರ ಮುಂದಿನ ವಿದ್ಯಾಭ್ಯಾಸ ಮಧುರೈ ಅನಂತರ ಮದರಾಸಿನಲ್ಲಿ ಜರುಗಿತು. ಮದರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಇವರಿಗೆ ಪ್ರಥಮ ಪದವಿಯನ್ನು ಕೊಟ್ಟ ಕೀರ್ತಿ.

ಕಲ್ಕತ್ತೆಗೆ

ವಿದ್ಯಾಭ್ಯಾಸ ಮುಗಿದ ಮೇಲೆ ಕೃಷ್ಣನ್ ಎಲ್ಲಿಯಾದರೂ ಕೆಲಸಕ್ಕೆ ಸೇರುವ ಯೋಚನೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲದ ಆ ಕಾಲೇಜಿನ ಅಧಿಕಾರಿ ವರ್ಗ ಕೃಷ್ಣನ್ ಅವರನ್ನು ಅಲ್ಲಿಯೇ ಡೆಮಾನ್‌ಸ್ಟ್ರೇಟರ್ ಆಗಿ ನಿಯಮಿಸಿಕೊಂಡಿತು. ಎರಡು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದಾಯಿತು.

ಕೃಷ್ಣನ್ ಅವರಿಗೆ ಈ ಕೆಲಸ ತೃಪ್ತಿಯನ್ನು ಕೊಡಲಿಲ್ಲ. ಏಕೆಂದರೆ ಈ ಕೆಲಸದಲ್ಲಿ ಅವರು ಮುಖ್ಯವಾಗಿ ಮಾಡಬೇಕಾಗಿದ್ದುದು ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಯೋಗಗಳನ್ನು ತೋರಿಸುವುದು ಮತ್ತು ಒಂದಿಷ್ಟು ಪಾಠ ಹೇಳುವುದು. ಆದರೆ ಅವರಿಗೆ ತಾವೇ ಹೊಸ ವಿಷಯಗಳನ್ನು ಕಂಡು ಹಿಡಿಯಬೇಕೆಂಬ ಹಂಬಲ. ಇದಕ್ಕೆ ಹಿರಿಯ ವಿಜ್ಞಾನಿಯೊಬ್ಬರ ಮಾರ್ಗದರ್ಶನ ಬೇಕಾಗಿತ್ತು. ಆಗ ಭಾರತದಲ್ಲಿ ವಿಜ್ಞಾನ ಜಗತ್ತಿನಲ್ಲಿ ಬಹಳ ಪ್ರಸಿದ್ಧವಾಗಿದ್ದವರು ಸಿ.ವಿ.ರಾಮನ್. ಅವರ ಬಳಿ ಕೆಲಸಮಾಡಬೇಕೆಂದು ಕೃಷ್ಣನ್ ನಿರ್ಧರಿಸಿದರು. ರಾಮನ್ ಇದ್ದದ್ದು ಕಲ್ಕತ್ತೆಯಲ್ಲಿ. ತಮಿಳುನಾಡಿನ ಹುಡುಗ ದೂರದ ಕಲ್ಕತ್ತೆಯಲ್ಲಿ ಸಂಶೋಧನೆಗೆ ಎಂದು ಪ್ರಯಾಣ ಬೆಳೆಸಿದ್ದು ಕೃಷ್ಣನ್ ಅವರ ಜೀವನದಲ್ಲಿ ಭಾರಿ ಮಾರ್ಪಾಟನ್ನೇ ಮಾಡಿತು.

ಸಂಶೋಧಕ

ಕೃಷ್ಣನ್ ಸಿ.ವಿ.ರಾಮನ್ ಅವರೊಡನೆ ೧೯೨೩ ರಿಂದ ೨೮ರ ವರೆಗೆ, ಸುಮಾರು ಐದು ವರ್ಷಗಳ ಕಾಲ, ಪ್ರಯೋಗಗಳನ್ನು ನಡೆಸಿದರು.

ಭಾರತದ ವಿಜ್ಞಾನದ ಪರ್ವಕಾಲ ಅದು. ಪ್ರಯೋಗಗಳ ಗುರಿ ಬೆಳಕು ಅಣುಗಳಿಂದ ಹೇಗೆ ಚದುರಿ ಹೋಗುತ್ತವೆ ಎಂಬುದನ್ನು ಅರಿಯುವುದು. ವಸ್ತುಗಳು ಘನ, ದ್ರವ ಅಥವಾ ಅನಿಲಗಳ ರೂಪದಲ್ಲಿರುತ್ತವೆ ಎಂಬುದು ನಮಗೆ ಗೊತ್ತಿರುವ ಸಂಗತಿ. ಕಲ್ಲು ಘನವಸ್ತು, ನೀರು ದ್ರವವಸ್ತು, ಗಾಳಿ ಅನಿಲ ವಸ್ತು, ಎಲ್ಲ ವಸ್ತುಗಳಲ್ಲಿ ಕೋಟ್ಯನುಕೋಟಿ ಅಣುಗಳಿರುತ್ತವೆ. ಅಣುಗಳ ಮೇಲೆ ಬೆಳಕು ಬಿದ್ದಾಗ ಅಣು ಅದನ್ನು ಚದುರಿಸುತ್ತದೆ. ಸ್ವಾರಸ್ಯವೇನೆಂದರೆ ಬೆಳಕು ಶಕ್ತಿಯ ಉಂಡೆ. ಬೆಳಕನ್ನು ತರಂಗಗಳಂತೆ (ಅಲೆಗಳು) ಯಾಗಲೀ ಕಣಗಳಂತೆಯಾಗಲೀ ಪರಿಗಣಿಸಬಹುದು. ನೀರಿನ ಮೇಲೆ ಗಾಳಿ ಬೀಸಿದಾಗ ಅಲೆಗಳು ಏಳುವುದನ್ನು ನಾವು ಕಾಣುತ್ತೇವೆ. ಅಲೆ ಉಬ್ಬುತ್ತದೆ, ತಗ್ಗುತ್ತದೆ. ಒಂದು ಉಬ್ಬಿನಿಂದ ಇನ್ನೊಂದು ಉಬ್ಬಿಗೆ ಇರುವ ದೂರ ತರಂಗ ದೂರ. ಇದನ್ನು ಮೀಟರುಗಳಲ್ಲಿ, ಸೆಂಟಿಮೀಟರುಗಳಲ್ಲಿ ಅಳೆಯುತ್ತಾರೆ. ಬೆಳಕನ್ನು ಸಹ ಹಾಗೆಯೇ ಎಂದರೆ ಅಲೆಯಂತೆ ಪರಿಗಣಿಸಿ ಅದರ ತರಂಗ ದೂರವನ್ನು ಅಳೆಯುತ್ತೇವೆ.

ಆದರೆ ತರಂಗ ದೂರ ಬಹಳ ಕಡಿಮೆ. ಕಣ್ಣಿಗೆ ಕಾಣುವ ಬೆಳಕಿನಲ್ಲಿ ವಾಸ್ತವವಾಗಿ ಏಳು ಬಗೆಯ ಬಣ್ಣಗಳಿವೆ. (ಕಾಮನಬಿಲ್ಲನ್ನು ಜ್ಞಾಪಿಸಿಕೊಳ್ಳಿ.) ಇವುಗಳ ತರಂಗ ದೂರ ಬೇರೆ ಬೇರೆ. ತರಂಗ ದೂರದಲ್ಲಿ ವ್ಯತ್ಯಾಸವಿರಲು ಕಾರಣ ಬಣ್ಣದ ಬೆಳಕುಗಳ ಶಕ್ತಿಯಲ್ಲಿರುವ ಭಿನ್ನತೆ. ಬೆಳಕು ಬಹು ಬೇಗ ಚಲಿಸುತ್ತದೆ. (ಒಂದು ಸೆಕೆಂಡಿಗೆ ಒಂದು ಲಕ್ಷ ಎಂಬತ್ತಾರು ಸಾವಿರ ಮೈಲಿ) ಎಂದರೆ ತರಂಗಗಳ ಉಬ್ಬು  ತಗ್ಗುಗಳು ಬಹುಬೇಗ ಮರಳಿ ಮರಳಿ ಬರುತ್ತವೆ. ಒಂದು ಸೆಕೆಂಡಿಗೆ ಎಷ್ಟು ಉಬ್ಬುಗಳು ಪುನಃ ಪುನಃ ಬರುತ್ತವೆ ಎಂಬುದನ್ನು ಆವರ್ತ ಸಂಖ್ಯೆಯಿಂದ ಸೂಚಿಸುತ್ತೇವೆ. ಬೆಳಕು ಒಂದು ಅಣುವಿನ ಮೇಲೆ ಬಿದ್ದಾಗ ಅದರ ಶಕ್ತಿಯಲ್ಲಿ ಕೊಂಚ ಭಾಗ ಅಣುವಿಗೆ ವರ್ಗಾವಣೆ ಆಗುತ್ತದೆ ಎಂದು ಊಹಿಸಬಹುದಲ್ಲವೆ? ಎಂದರೆ ಚದುರಿದ ಬೆಳಕಿನ ಶಕ್ತಿ ಮೊದಲು ಬೀಳುವ ಬೆಳಕಿನ ಶಕ್ತಿಗಿಂತ ಕಡಿಮೆಯಾಗಿರಬೇಕು. ಆದ್ದರಿಂದ ಚದುರಿದ ಬೆಳಕಿನ ಆವರ್ತ ಸಂಖ್ಯೆಯಲ್ಲಿ ವ್ಯತ್ಯಾಸವಿರಬೇಕಲ್ಲವೆ? ಈ ಪ್ರಶ್ನೆಗೆ ಉತ್ತರ ಪಡೆಯುವುದೇ ಕೃಷ್ಣನ್ ಅವರ ಗುರಿ. ಬೆಳಕು ಪಾರದರ್ಶಕ ದ್ರವದ ಒಂದು ಅಣುವಿಗೆ ಡಿಕ್ಕಿ ಹೊಡೆದಾಗ ಅದು ಬಹುಮಟ್ಟಿಗೆ ಚದುರುತ್ತದೆ. ಅಣುವಿನ ಮೇಲೆ ಬಿದ್ದ ಬೆಳಕಿನ ತರಂಗ ದೂರ ಮತ್ತು ಚದುರಿದ ಬೆಳಕಿನ ತರಂಗ ದೂರ ಒಂದೇ. ಇದಕ್ಕೆ ರ‍್ಯಾಲೇ-ಐನ್‌ಸ್ಟೀನ್ ಪರಿಣಾಮ ಎಂದು ಹೆಸರು.

ಕೃಷ್ಣನ್ ರಾಮನ್ ಸಂಶೋಧನೆ

ಕೃಷ್ಣನ್-ರಾಮನ್ ಅವರ ಅದ್ಭುತ ಸಂಶೋಧನೆ ಎಂದರೆ ಈ ಬಗೆಯ ಚದುರಿಕೆಯಲ್ಲಿ ಇನ್ನೊಂದು ಪರಿಣಾಮವೂ ಅಡಗಿದೆ ಎಂಬುದು.

ಮೊದಲಿನ ಬಗೆಯ ಚದುರಿಕೆಯಲ್ಲದೆ, ಅದಕ್ಕಿಂತ ಕಡಿಮೆ ಶಕ್ತಿಯುಳ್ಳ ಎರಡನೆ ಬಗೆಯ ಕಿರಣಗಳೂ ಹೊರಬೀಳುತ್ತವೆ ಎಂಬುದನ್ನು ರಾಮನ್ ಸಹೋದ್ಯೋಗಿಗಳಾದ ರಾಮನಾಥನ್ ಅವರು ೧೯೨೩ರಲ್ಲಿ ಮೊದಲಿಗೆ ಕಂಡುಹಿಡಿದಿದ್ದರು. ಕೃಷ್ಣನ್ ಇದರ ಬಗ್ಗೆ ಕೂಲಂಕಷವಾಗಿ, ಆಳವಾಗಿ ಅಭ್ಯಾಸ ಮಾಡಿದರು. ಹೊರಬರುವ ಎರಡನೆಯ ಮಾದರಿಯ ಬೆಳಕು ತೀರ ದುರ್ಬಲವಾದ್ದರಿಂದ ಅದನ್ನು ಪತ್ತೆ ಮಾಡುವುದಾಗಲೀ, ಅಳತೆ ಮಾಡುವುದಾಗಲೀ ಅತ್ಯಂತ ಪ್ರಯಾಸವಾದ ಕೆಲಸ. ಒಂದು ದೊಡ್ಡ ದೂರದರ್ಶಿಯ ಭೂತಗನ್ನಡಿಯನ್ನು ಬಳಸಿ ಸೂರ್ಯನ ಬೆಳಕನ್ನು ಒಟ್ಟುಗೂಡಿಸಿ ಬಹು ಪ್ರಖರವಾದ ಕಿರಣವನ್ನು ಪಡೆಯಲಾಯಿತು. ಇದನ್ನು ಸೂಕ್ತ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಪರಿಶುದ್ಧವಾದ ಪರೀಕ್ಷಾ ದ್ರವದ ಮೂಲಕ ಹಾಯಿಸಲಾಯಿತು. ಇಷ್ಟಾದರೂ ಸಹ ಚದುರಿದ ಬೆಳಕನ್ನು ಅಳತೆ ಮಾಡಲು ಕಷ್ಟವಾಯಿತು. ಕೃಷ್ಣನ್ ಅವರ ಕುಶಲತೆಯ ಫಲವಾಗಿ ಚದುರಿದ ಬೆಳಕಿನ ತೀವ್ರತೆಯನ್ನು ಮತ್ತು ಧ್ರುವೀಯತೆ (ಅಯಸ್ಕಾಂತಕ್ಕೆ ಎರಡು ಧ್ರುವಗಳುಂಟು. ಬೆಳಕೂ ಸಹ ಧ್ರುವೀಕರಣಕ್ಕೊಳಗಾಗುತ್ತದೆ) ಯನ್ನು ಅಳೆಯಲು ಸಾಧ್ಯವಾಯಿತು.

ಇನ್ನೊಂದು ಸಮಸ್ಯೆ

ಬೆಳಕಿನ ಚದುರಿಕೆಯ ಕ್ಲಿಷ್ಟ ಸಮಸ್ಯೆ ಕೃಷ್ಣನ್ ಅವರ ಗಮನವನ್ನು ಪೂರ್ಣವಾಗಿ ಸೆರೆಹಿಡಿಯಲಿಲ್ಲ. ಈ ಸಂಶೋಧನೆ ನಡೆಯುತ್ತಿರುವಾಗಲೇ ಇನ್ನೊಂದು ಸಮಸ್ಯೆ ಸಹ ಅವರ ತೀಕ್ಷ ಬುದ್ಧಿಯ ಗಮನವನ್ನು ಸೆಳೆಯಿತು. ಜರ‍್ಮನಿಯ ವಿಜ್ಞಾನಿ ಕ್ಲೆ ನರ್ ಎಂಬಾತ ಅನಿಲದ ಅಣುಗಳು ಅಯಸ್ಕಾಂತ ಕ್ಷೇತ್ರದಲ್ಲಿ ಸೂಕ್ತವಾದ ಯಾವುದೊಂದು ದಿಕ್ಕಿನ ಕಡೆಗೆ ತಿರುಗಿಕೊಳ್ಳುತ್ತವೆ ಎಂದು ತಿಳಿಸಿದ್ದ. ಕೃಷ್ಣನ್ ತಮ್ಮ ಕುಶಲ ಪ್ರಯೋಗಗಳ ಮೂಲಕ ಈ ಹೇಳಿಕೆ ತಪ್ಪು ಎಂದು ತೋರಿಸಿಕೊಟ್ಟರು (೧೯೨೬).

ಬೆಳಕಿನ ಚದುರಿಕೆಯ ಬಗ್ಗೆ ಸಂಶೋಧನೆಯ ಇನ್ನೊಂದು ಹಂತ ೧೯೨೭ ರಲ್ಲಿ ಪ್ರಾರಂಭವಾಯಿತು. ಸೂರ್ಯನ ಬೆಳಕನ್ನು ಕೋಬಾಲ್ಟ್ ನೀಲಿ ಶೋಧಕದ ಮೂಲಕ ಹಾಯಿಸಿ ಹೊರಬರುವ ಬೆಳಕನ್ನು- ಈ ಬೆಳಕಿನಲ್ಲಿ ಸೂರ್ಯನ ಬೆಳಕಿನ ಎಲ್ಲ ಬಣ್ಣಗಳೂ ಇರುವುದಿಲ್ಲ-ಕೆಲವು ಆರ್ಗ್ಯಾನಿಕ್ ದ್ರಾವಣಗಳ ಮೂಲಕ ಹಾಯಿಸಿದಾಗ ನೀಲಿ ಹಸಿರುಬಣ್ಣಗಳು ಮೊದಲಿಗೆ ಕಂಡು ಬರುತ್ತವೆ ಎಂದು ರಾಮನ್ ಕಂಡುಕೊಂಡಿದ್ದರು. ಸಂಶೋಧನೆಯ ಉಪಕರಣ ಹೇಗಿತ್ತು ಎಂದರೆ ಈ ಬಣ್ಣಗಳು ಒಂದು ಸ್ಥಾನದಲ್ಲಿ ಬಣ್ಣದ ಪಟ್ಟೆಗಳಂತೆ  ಕಾಣಿಸಿಕೊಳ್ಳುತ್ತಿದ್ದವು. ನಾನಾ ತರಂಗ ದೂರಗಳ ಮಿಶ್ರಣವಾದ ಸೂರ್ಯದ ಬೆಳಕಿನ ಬದಲು ಒಂದು ಖಚಿತವಾದ ತರಂಗ ದೂರದ ಬೆಳಕನ್ನು ಸೂಸುವ ಮೂಲವನ್ನು ಬಳಸಿದ್ದೇ ಆದರೆ ಆ ಪಟ್ಟೆಗಳು ಸ್ಪಷ್ಟವಾಗಿ, ನಿಚ್ಚಳವಾಗಿ ಕಂಡು ಬರಬಹುದು ಎಂಬ ಊಹೆಯ ಮೇಲೆ ಕೃಷ್ಣನ್ ಪಾದರಸದ ಆರ್ಕನ್ನು (ವಿದ್ಯುಚ್ಚಾಪ) ಬೆಳಕಿನ ಮೂಲವನ್ನಾಗಿ ಬಳಸಿದರು. ಹೀಗೆ ಕೃಷ್ಣನ್ ಅವರು ಬೆಳಕನ್ನು ಕುರಿತು ಸಂಶೋಧನೆಯನ್ನು ಮುಂದುವರಿಸಿದರು.

ಈ ಸಂಶೋಧನೆಗಳು ಅವರು ಗುರು ಸಿ.ವಿ.ರಾಮನ್ ಅವರ ಕೆಲಸಕ್ಕೆ ತುಂಬ ನೆರವಾದವು. ರಾಮನ್ ಅವರ ಮುಖ್ಯ ಸಂಶೋಧನೆಗೆ ‘ರಾಮನ್ ಪರಿಣಾಮ’ ಎಂದೇ ಭೌತಶಾಸ್ತ್ರದಲ್ಲಿ ಹೆಸರು. ಈ ಸಂಶೋಧನೆಯನ್ನು ಮಾಡಲು ರಾಮನ್ ಅವರಿಗೆ ಕೃಷ್ಣನ್ ಅವರ ಸಂಶೋಧನೆಯಿಂದ ಬಹುಮಟ್ಟಿಗೆ ಪ್ರಯೋಜನವಾಯಿತು. ಮುಂದೆ ರಾಮನ್ ಅವರಿಗೆ ‘ರಾಮನ್ ಪರಿಣಾಮ’ ಸಂಶೋಧನೆಗೆ ನೊಬೆಲ್ ಬಹುಮಾನ ದೊರೆಯಿತು.

ಹರಳುಗಳ ವರ್ತನೆಯ ಅಧ್ಯಯನ

ಕೃಷ್ಣನ್ ಅವರ ಸಂಶೋಧನೆಗಳು ವಿಜ್ಞಾನ ಪ್ರಪಂಚದಲ್ಲಿ ಗಣ್ಯ ಸ್ಥಾನವನ್ನು ಅವರಿಗೆ ಗಳಿಸಿಕೊಟ್ಟವು. ಪರಿಣಾಮವಾಗಿ ಢಾಕ್ಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ರೀಡರ್ ಹುದ್ದೆ ದೊರಕಿತು. ಕೃಷ್ಣನ್ ಹುಟ್ಟು ಉಪಾಧ್ಯಾಯರು. ವಿದ್ಯಾರ್ಥಿಗಳೊಡನೆ ಬೆರೆತು ಅವರ ಎಳೆಯ ಮನಸ್ಸನ್ನು ಪರಿಪಕ್ವಗೊಳಿಸಲು ನೆರವಾಗುವುದು ಒಂದು ಪವಿತ್ರ ಕಾರ್ಯ ಎಂದು ಭಾವಿಸಿದ್ದರು.

ಢಾಕ್ಕಾದಲ್ಲಿ ಸಂಶೋಧನೆಯೂ ಮುಂದುವರಿಯಿತು. ಕ್ಷೇತ್ರ, ವಿಷಯ ಮಾತ್ರ ಬೇರೆ. ಕಬ್ಬಿಣ ಅಯಸ್ಕಾಂತದಿಂದ ಆಕರ್ಷಿತವಾಗುತ್ತದೆ ಎಂಬುದು ಗೊತ್ತಿರುವ ವಿಷಯ. ಅಯಾಸ್ಕಾಂತ ಕ್ಷೇತ್ರದಲ್ಲಿ ಸಣ್ಣ ಹರಳುಗಳನ್ನಿಟ್ಟಾಗ ಹರಳಿನ ರಚನೆಗನುಸಾರವಾಗಿ ಕೆಲವು ಪರಿಣಾಮಗಳು ಕಂಡು ಬರುತ್ತವೆ. ಎಲ್ಲ ಹರಳುಗಳೂ ಒಂದೇ ರೀತಿಯ ಪರಿಣಾಮವನ್ನು ತೋರಿಸುವುದಿಲ್ಲ. ಶಕಲಶಾಸ್ತ್ರ (ಕ್ವಾಂಟಮ್ ಮೆಕ್ಯಾನಿಕ್ಸ್) ಹರಳುಗಳ ವಿಭಿನ್ನ ವರ್ತನೆಯನ್ನು ತಾತ್ವಿಕವಾಗಿ ವಿವರಿಸಬಲ್ಲದು. ಹೀಗೆ ತತ್ವದಿಂದ ವಿವರಣೆಯನ್ನು ಕೊಡಬಹುದು, ಆದರೆ ಈ ವಿವರಣೆ ಸರಿಯೇ ಎಂದು ಪ್ರಯೋಗ ಮಾಡಿ ನೋಡಬೇಕು, ಅಲ್ಲವೆ? ಆದರೆ ಈ ಪರಿಣಾಮಗಳು ಬಹು ಸೂಕ್ಷ್ಮ. ಅವನ್ನು ಗುರುತಿಸುವುದು ಕಷ್ಟ.

ಕೃಷ್ಣನ್ ಅವರ ಮಹತ್ವದ ಕೊಡುಗೆ ಎಂದರೆ ಬಹು ನವಿರಾದ ಪ್ರಯೋಗದ ಸಲಕರಣೆಗಳನ್ನು ರೂಪಿಸಿ ಪ್ರಯೋಗಗಳ ಮೂಲಕ ಹರಳುಗಳು ವರ್ತಿಸುವ ಬಗೆಯನ್ನು ಪತ್ತೆ ಹಚ್ಚಿ ತತ್ವದಿಂದ ಊಹಿಸಿದ ಪರಿಣಾಮ ನಿಜಸ್ಥಿತಿಗೆ ತಾಳೆಯಾಗುತ್ತದೆ ಎಂದು ತೋರಿಸಿಕೊಟ್ಟದ್ದು.

ಗೌರವಗಳು

ಈ ಮೂಲಭೂತ ಸಂಶೋಧನೆ ಕೃಷ್ಣನ್ ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ೧೯೩೩ ರಲ್ಲಿ ಅವರು ಗೌರವಾನ್ವಿತ ಪದವಿಯಾದ ‘ಮಹೇಂದ್ರ ಸರ್ಕಾರ್ ಪ್ರೊಫೆಸರ್’ ಪದವಿಯನ್ನು ಸ್ವೀಕರಿಸಬೇಕೆಂದು ಕಲ್ಕತ್ತೆಯ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ ಸಂಸ್ಥೆ ಆಹ್ವಾನಿಸಿತು. ಕೃಷ್ಣನ್ ಕಲ್ಕತ್ತೆಗೆ ಮರಳಿದರು. ಇಲ್ಲಿಯೂ ಅವರು ಢಾಕ್ಕಾದಲ್ಲಿ ನಡೆಸುತ್ತಿದ್ದ ಸಂಶೋಧನೆ ಮುಂದುವರೆಯಿತು.

ಹೂವಿನ ಪರಿಮಳ ಎಲ್ಲೆಡೆ ಹಬ್ಬುವಂತೆ, ಕೃಷ್ಣನ್ ಅವರ ಅಮೂಲ್ಯ ಕೊಡುಗೆ ದೇಶವಿದೇಶಗಳಲ್ಲಿ ಕೀರ್ತಿಯನ್ನು, ಪ್ರತಿಷ್ಠೆಯನ್ನು, ಅವರಿಗೆ ಗಳಿಸಿಕೊಟ್ಟಿತು. ೧೯೩೭ ರಲ್ಲಿ ಅವರು ತಮ್ಮ ಪ್ರಥಮ ಯೂರೋಪ್ ಪ್ರವಾಸವನ್ನು ಕೈಗೊಂಡರು. ಇಂಗ್ಲೆಂಡಿನಲ್ಲಿ ಕ್ಯಾವೆಂಡಿಷ್ ಪ್ರಯೋಗ ಶಾಲೆಯಲ್ಲಿ, ಪ್ರಖ್ಯಾತ ರಾಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಉಪನ್ಯಾಸಗಳನ್ನು ಕೊಟ್ಟರು. ಬೆಲ್ಜಿಯಂನ ಲೀಜ್ ವಿಶ್ವವಿದ್ಯಾನಿಲಯ ಅವರಿಗೆ ಪದಕವನ್ನಿತ್ತು ಸನ್ಮಾನಿಸಿತು. ೧೯೪೦ ರಲ್ಲಿ ರಾಯಲ್ ಸೊಸೈಟಿ ತನ್ನ ಫೆಲೋಷಿಪ್ ಇತ್ತು ತನ್ನ ಗೌರವವನ್ನು ಸೂಚಿಸಿತು.

ಕೃಷ್ಣನ್ ಪ್ರತಿಷ್ಠಿತ ಅಲಹಾಬಾದ್ ವಿಶ್ವವಿದ್ಯಾ ನಿಲಯದಲ್ಲಿ ಭೌತಶಾಸ್ತ್ರ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಐದು ವರ್ಷಗಳ ಸೇವೆ ಸಲ್ಲಿಸಿ ಇಲಾಖೆಯನ್ನು ಬಹುಮಟ್ಟಿಗೆ ಅಭಿವೃದ್ಧಿಗೊಳಿಸಿದರು. ಅವರ ಸಹೋದ್ಯೋಗಿ ಭಾಟಿಯಾ ಅವರೊಡನೆ, ಬೆಳಕಿನ ಚದುರಿಕೆ, ದ್ರವಲೋಹಗಳು ಮತ್ತು ಬೆರಕೆ ಲೋಹಗಳು, ಎಲೆಕ್ಟ್ರಾನುಗಳನ್ನು ಚದುರಿಸುವ ರೀತಿ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮಾಡಿದರು.

ಆಡಳಿತಗಾರ

೧೯೪೭ ಭಾರತದ ವಿಜ್ಞಾನ ಯುಗದಲ್ಲಿ ಒಂದು ಪರ್ವಕಾಲ.

ಈಗಿನ ಪ್ರಪಂಚದಲ್ಲಿ ವಿಜ್ಞಾನಕ್ಕೆ ಬಹು ಮುಖ್ಯವಾದ ಸ್ಥಾನವಿದೆ. ಯಾವ ದೇಶವೇ ಆಗಲಿ ಅಭಿವೃದ್ಧಿಗೆ ಬರಬೇಕಾದರೆ, ಶಕ್ತಿ-ಸಂಪತ್ತುಗಳನ್ನು ಪಡೆಯಬೇಕಾದರೆ ವಿಜ್ಞಾನವನ್ನು ಬೆಳೆಸಬೇಕು. ಎಂದರೆ, ವಿಜ್ಞಾನಿಗಳಿಗೆ ತಮ್ಮ ಕೆಲಸ ಮಾಡಲು ಅನುಕೂಲಗಳನ್ನು ಕಲ್ಪಿಸಿಕೊಡಬೇಕು. ಈಗಿನ ಕಾಲದಲ್ಲಿ ವಿಜ್ಞಾನಿ ಕೆಲಸ ಮಾಡಬೇಕಾದರೆ ಒಳ್ಳೆಯ ಪ್ರಯೋಗ ಶಾಲೆಗಳಿರಬೇಕು. ತುಂಬಾ ಬೆಲೆ ಬಾಳುವ ಪ್ರಯೋಗದ ಸಲಕರಣೆಗಳು ಬೇಕಾಗುತ್ತವೆ. ಹಲವೊಮ್ಮೆ ಅನೇಕ ವಿಜ್ಞಾನಿಗಳು ಒಟ್ಟುಗೂಡಿ ಒಂದು ತಂಡವಾಗಿ ಸಹಕರಿಸಿ ಕೆಲಸ ಮಾಡಬೇಕಾಗುತ್ತದೆ. ಆದುದರಿಂದ ವಿಜ್ಞಾನಿಗಳ ಕೆಲಸಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರವೇ ಕಲ್ಪಿಸಿಕೊಡಬೇಕು.

ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಾನಾ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನಾಲಯಗಳನ್ನು ಸ್ಥಾಪಿಸಬೇಕೆಂಬ ನಿರ್ಧಾರವನ್ನು ಇಂಡಿಯಾ ಸರ್ಕಾರ ಕೈಗೊಂಡಿತು. ರಾಷ್ಟ್ರೀಯ ಭೌತ ವಿಜ್ಞಾನ ಸಂಶೋಧನಾಲಯದ ಶಂಕುಸ್ಥಾಪನೆಯನ್ನು ನವದೆಹಲಿಯಲ್ಲಿ ಜವಾಹರಲಾಲ್ ನೆಹ್ರೂ ಅವರು ನೆರವೇರಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದ ಇಂಥ ಸಂಸ್ಥೆಗೆ ಪ್ರಥಮ ನಿರ್ದೇಶಕನಾಗುವ ವ್ಯಕ್ತಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಜ್ಞಾನ ವಲಯಗಳಲ್ಲಿ ಪ್ರಖ್ಯಾತಿ ಗಳಿಸಿರಬೇಕಲ್ಲವೆ? ಅಲ್ಲದೆ ಅವರು ಹತ್ತಾರು ಜನರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬಲ್ಲ ಸ್ವಭಾವದವರಾಗಿರಬೇಕು. ತಮ್ಮ ಜೊತೆಗೆ ಕೆಲಸ ಮಾಡುವವರ ಗೌರವವನ್ನೂ ಸಹಕಾರವನ್ನೂ ಪಡೆಯಬಲ್ಲವರಾಗಿರಬೇಕು. ಇಂಥ ವ್ಯಕ್ತಿ ಯಾರು? ಯಾರು ಎಂಬುದರಲ್ಲಿ ಸಂದೇಹವೇ ಇರಲಿಲ್ಲ. ನೆಹ್ರೂ ಕೃಷ್ಣನ್ ಅವರನ್ನು ಈ ಸ್ಥಾನವನ್ನು ಅಲಂಕರಿಸಬೇಕೆಂದು ಕೋರಿದರು. ಇದುವರೆಗೆ ಎಲೆಯ ಮರೆಯ ಕಾಯಿಯಂತೆ ಜನ ಜಂಗುಳಿಯಿಂದ ದೂರವಾದ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಪಾಡಿಗೆ ತಮ್ಮ ಸಂಶೋಧನೆಯಲ್ಲಿ ನಿರತನಾಗಿದ್ದ ವಿಜ್ಞಾನಿ ಎಲ್ಲರ ಗಮನವನ್ನು ಸೆಳೆಯುವ ಪ್ರತಿಷ್ಠಿತ ಸ್ಥಾನದಲ್ಲಿ ಕೂರಬೇಕಾಯಿತು.

ಕೃಷ್ಣನ್ ಈ ಆಹ್ವಾನ ಹೊತ್ತುತಂದ ಗೌರವದೊಂದಿಗೆ ಗುರುತರವಾದ ಜವಾಬ್ದಾರಿಯನ್ನೂ ಗಂಟು ಹಾಕಿತು ಎಂದು ಚೆನ್ನಾಗಿಯೂ ಅರಿತಿದ್ದರು. ಆದರೆ ಕೃಷ್ಣನ್ ದೇಶಪ್ರೇಮಿ. ತನ್ನ ನಾಡು ಮುಂದುವರೆದ ದೇಶಗಳ ಸಾಲಿನಲ್ಲಿ ಗಣ್ಯಸ್ಥಾನವನ್ನು ಸಂಪಾದಿಸಲು ಪ್ರತಿಯೊಬ್ಬರೂ ತನ್ನ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಅವರ ಭಾವನೆ. ಎಂತಲೇ ಈ ಸವಾಲನ್ನು ಅಂಗೀಕರಿಸಿದರು.

ಸಂಶೋಧನಾಲಯದ ಹೊಣೆ

ವಿಶ್ವವಿದ್ಯಾನಿಲಯದ ವಾತಾವರಣಕ್ಕೂ ಸಂಶೋಧನಾಲಯದ ವಾತಾವರಣಕ್ಕೂ ಗಣನೀಯವಾದ ವ್ಯತ್ಯಾಸವಿದೆ.

ಸಂಶೋಧನಾಲಯದ ನಿರ್ದೇಶಕ ವಿಜ್ಞಾನಿಯಾಗಿರ ಬೇಕಲ್ಲದೆ ಸಮರ್ಥ ಆಡಳಿತಗಾರನೂ ಆಗಿರಬೇಕು. ಏಕೆಂದರೆ ಸಂಶೋಧನಾಲಯದಲ್ಲಿ ಅನೇಕರು ಕೆಲಸ ಮಾಡುತ್ತಿರುತ್ತಾರೆ. ನಿರ್ದೇಶಕ ಅವರೆಲ್ಲರ ಕೆಲಸಕ್ಕೆ ಅಗತ್ಯವಾದ ಅನುಕೂಲಗಳನ್ನು ಮಾಡಿಕೊಡಬೇಕು, ಅವರ ಕೆಲಸ-ಕಾರ್ಯಗಳನ್ನು ಗಮನಿಸುತ್ತಿರಬೇಕು. ಅಲ್ಲದೆ ರಾಷ್ಟ್ರೀಯ ಸಂಶೋಧನಾಲಯಗಳ ಗುರಿಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಿತ್ತು. ಸಾಧಾರಣವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸಂಶೋಧನೆಗಳಿಗೆ ಪ್ರಾಶಸ್ತ್ಯ ಹೆಚ್ಚು. ಎಂದರೆ ಈ ಸಂಶೋಧನೆಗಳು ದೇಶದ ಕೈಗಾರಿಕೆಗಳಿಗೆ ನೆರವಾಗಬಹುದು, ಆಗದೆ ಹೋಗಬಹುದು, ಜ್ಞಾನವನ್ನು ಹೆಚ್ಚಿಸುವುದಷ್ಟೆ ಅವುಗಳ ಗುರಿ. ಸಂಶೋಧನೆಗಳ ಫಲಿತಾಂಶಗಳು ಉದ್ಯಮಗಳಿಗೆ ನೆರವಾದರೆ ಸಂತೋಷ. ಆದರೆ ಉದ್ಯಮಗಳನ್ನು ಸ್ಥಾಪಿಸಲೆಂದು ಅಥವಾ ಅವಕ್ಕೆ ನೆರವಾಗುವ ಉದ್ದೇಶದಿಂದಲೇ ವಿಶ್ವವಿದ್ಯಾನಿಲಯಗಳು ಸಂಶೋಧನೆಯಲ್ಲಿ ತೊಡಗುವುದಿಲ್ಲ. ರಾಷ್ಟ್ರೀಯ ಸಂಶೋಧನಾಲಯಗಳ ಗುರಿ ಹಾಗಲ್ಲ. ಮೂಲಭೂತ ಸಂಶೋಧನೆಗಳಿಗೆ ಇವುಗಳಲ್ಲಿ ಅಷ್ಟಾಗಿ ಪ್ರಾಶಸ್ತ್ಯವಿಲ್ಲ.

ಭಾರತದಲ್ಲಿ ಆಗ್ಗೆ ಇದ್ದ ಮತ್ತು ಸ್ಥಾಪಿಸಬಹುದಾದ ಕೈಗಾರಿಕಾ ಉದ್ಯಮಗಳಿಗೆ ನೇರವಾಗಿ ನೆರವನ್ನು ನೀಡಲು ರಾಷ್ಟ್ರೀಯ ಸಂಶೋಧನಾಲಯಗಳನ್ನು ಸ್ಥಾಪಿಸಲಾಯಿತು. ಸ್ವಾವಲಂಬನೆಯಲ್ಲಿ ಪ್ರಥಮ ಹೆಜ್ಜೆಗಳು ಇವು. ಭಾರತದ ಕೈಗಾರಿಕೆಗಳು ಬಹುಮಟ್ಟಿಗೆ ಹೊರದೇಶದ ಯಂತ್ರಗಳನ್ನು, ಪರಿಣತಿಯನ್ನು ಬರಮಾಡಿಕೊಳ್ಳಬೇಕಾಗಿತ್ತು. ಸರಳ ವಸ್ತುಗಳಾದ, ಜನ ಜೀವನಕ್ಕೆ ನಿತ್ಯ ಬೇಕಾಗುವ ಸೋಪು, ಟೂತ್‌ಪೇಸ್ಟ್ ಇಂಥವುಗಳನ್ನು ಮಾಡಲು ಸಹ ಹೊರದೇಶದ ತಾಂತ್ರಿಕ ನಿಪುಣತೆಯನ್ನು ಮೊರೆ ಹೋಗುವ ದುಃಸ್ಥಿತಿ ಇತ್ತು. ಭಾರತದ ಜನರಿಗೆ ಬೇಕಾಗುವ ವಸ್ತುಗಳಲ್ಲಿ ಬಹುಪಾಲನ್ನು ನಾವು ಇಲ್ಲಿಯೇ ತಯಾರಿಸಬೇಕು. ಅದಕ್ಕೆ ಬೇಕಾಗುವ ಕಾರ್ಖಾನೆಗಳನ್ನು ನಾವೇ ಕಟ್ಟಬೇಕು. ತಯಾರಿಸಲು ಬೇಕಾಗುವ ನೈಪುಣ್ಯವನ್ನು, ವಿಧಾನಗಳನ್ನು ನಮ್ಮ ಸಂಶೋಧನಾಲಯಗಳು ಒದಗಿಸಬೇಕು. ಇದರಿಂದ ನಮ್ಮ ಜನಕ್ಕೆ ಅನುಕೂಲವಾಗುವುದಲ್ಲದೆ ನಮ್ಮ ಹಣ ನಮ್ಮಲ್ಲಿಯೇ ಉಳಿಯುತ್ತದೆ. ಹೆಚ್ಚು ಹೆಚ್ಚು ಜನಕ್ಕೆ ಉದ್ಯೋಗ ದೊರೆಯುತ್ತದೆ. ಪರಾವಲಂಬನ ತಪ್ಪಿ ದೇಶ ನಿಜವಾಗಿ ಸ್ವತಂತ್ರವಾಗುತ್ತದೆ. ಇಂಥ ಮಹದಾಕಾಂಕ್ಷೆಗಳನ್ನು ಹೊತ್ತು ಈ ಸಂಶೋಧನಾಲಯಗಳು ತಲೆಯೆತ್ತಿದವು.

ಪರೀಕ್ಷೆಯಲ್ಲಿ ಯಶಸ್ವಿ

ಆದರೆ ವಿಜ್ಞಾನಿಯದು ವಿಚಿತ್ರ ಪ್ರಕೃತಿ. ವಿಜ್ಞಾನವನ್ನು ವ್ಯಾವಹಾರಿಕ ಕ್ಷೇತ್ರದ ಅಡಿಯಾಳನ್ನಾಗಿ ಮಾಡುವುದು ಅವನಿಗೆ ಕಿರಿಕಿರಿಯನ್ನುಂಟು ಮಾಡುವ ಪ್ರಸಂಗ. ಆದ್ದರಿಂದಲೇ ರಾಷ್ಟ್ರೀಯ ವಿಜ್ಞಾನ ಸಂಶೋಧನಾಲಯಗಳನ್ನು ನಿರ್ದೇಶಿಸುವ ಹೊಣೆಹೊತ್ತವರು ತಮ್ಮ ಸಹೋದ್ಯೋಗಿಗಳ ಭಾವನೆಗಳಿಗೆ ನೋವನ್ನುಂಟು ಮಾಡದೆ, ಮೂಲಭೂತ ಹಾಗೂ ವ್ಯಾವಹಾರಿಕ ವಿಜ್ಞಾನಗಳೆರಡನ್ನು ಹೊಂದಿಸಿ ಜನಜೀವನಕ್ಕೆ ಉಪಯುಕ್ತವಾದ ಸಂಶೋಧನೆಗಳನ್ನು ರೂಪಿಸಬೇಕಾಯಿತು. ಇದು ಸುಲಭಕಾರ್ಯವಲ್ಲ. ಕೃಷ್ಣನ್ ಇಂಥ  ಪರೀಕ್ಷೆಯಲ್ಲಿ ಯಶಸ್ವಿ ಗಳಾದರು ಎಂಬುದಕ್ಕೆ ಇಂದು ರಾಷ್ಟ್ರೀಯ ಭೌತ ವಿಜ್ಞಾನ ಸಂಶೋಧನಾಲಯ ಗಳಿಸಿರುವ ಕೀರ್ತಿಯೇ ಸಾಕ್ಷಿ.

ಇನ್ನೂ ಸಂಶೋಧನೆಯ ಮಾರ್ಗದಲ್ಲಿ

ಸಂಶೋಧನಾಲಯದ ಹೊಣೆ ವಹಿಸಿಕೊಂಡ ಕೃಷ್ಣನ್ ಅವರು ಅದರ ಆಡಳಿತಕ್ಕೆ ಬೇಕಾದಷ್ಟು ಕಾಲ ಕೊಡಬೇಕಾಗಿತ್ತು. ಅದರ ಕೆಲಸಕ್ಕಾಗಿ ಅನೇಕ ಸಮಿತಿಗಳ ಸಭೆಗಳಿಗೆ ಹೋಗಬೇಕಾಗಿತ್ತು. ಆದರೂ ಅವರು ಕೇವಲ ಆಡಳಿತದಲ್ಲಿ ಮಗ್ನರಾಗಲಿಲ್ಲ. ತಾವೇ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವ ಉತ್ಸಾಹ ಅವರಲ್ಲಿ ಮಿಡಿಯುತ್ತಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಪ್ರಯೋಗ ಶಾಲೆಯಲ್ಲಿ ಸ್ವತಃ ಕೆಲಸ ಮಾಡಲೂ ಪ್ರಯತ್ನಿಸುತ್ತಿದ್ದರು. ಇಲ್ಲಿ ಅವರ ಆಸಕ್ತಿಯನ್ನು ಸೆರೆಹಿಡಿದ ಕ್ಷೇತ್ರ ಮೂಲಭೂತಕ್ಷೇತ್ರ ಮಾತ್ರವಲ್ಲದೆ ಅದರ ಫಲಿತಾಂಶಗಳಿಂದ ಎಲೆಕ್ಟ್ರಾನಿಕ್ ಉದ್ಯಮಗಳಿಗೂ ಅನುಕೂಲವಾಗುವಂಥದು. ಲೋಹಗಳನ್ನು ಹೆಚ್ಚಿನ ಉಷ್ಣತೆಗೆ ಕಾಯಿಸಿದಾಗ ಎಲೆಕ್ಟ್ರಾನುಗಳು ಹೊರಬೀಳುತ್ತವೆ ಎಂಬುದು ಚೆನ್ನಾಗಿ ತಿಳಿದ ವಿಷಯವಾದರೂ ಎಲೆಕ್ಟ್ರಾನುಗಳು, ಪ್ರೋಟಾನುಗಳು ಹೇಗೆಬಿಡುಗಡೆಯಾಗುತ್ತವೆ ಎಂಬುದರ ಸ್ಪಷ್ಟಚಿತ್ರ ಗೊತ್ತಿರಲಿಲ್ಲ. ಯಾವುದೇ ಪರಮಾಣು ಋಣ ವಿದ್ಯುದಂಶಿತವಾದ ಎಲೆಕ್ಟ್ರಾನುಗಳು, ಧನವಿದ್ಯುದಂಶಿತ ಪ್ರೋಟಾನುಗಳಿಂದ ರೂಪಿತವಾಗಿರುತ್ತದೆ. ಅನೇಕ ಧಾತುಗಳ ಪರಮಾಣುಗಳಲ್ಲಿ ವಿದ್ಯುತ್ ಅಂಶವೇ ಇರದ ನ್ಯೂಟ್ರಾನ್‌ಗಳೂ ಇರುತ್ತವೆ. ವಿರುದ್ಧ ವಿದ್ಯುದಂಶಗಳುಳ್ಳ ಎಲೆಕ್ಟ್ರಾನುಗಳು ಪ್ರೋಟಾನುಗಳು ಪರಸ್ಪರ ಆಕರ್ಷಿತವಾಗುವುದರಿಂದ ಪರಮಾಣು ಸ್ಥಿರವಾಗುತ್ತದೆ. ಶಕಲಶಾಸ್ತ್ರ ರೀತ್ಯಾ ಎಲೆಕ್ಟ್ರಾನುಗಳು ಪ್ರೋಟಾನ್‌ಗಳಿರುವ ಕೇಂದ್ರದಿಂದ (ನ್ಲೂಕ್ಲಿಯಸ್) ಕೊಂಚ ದೂರದಲ್ಲಿರುತ್ತವೆ. ಮತ್ತು ಎಲೆಕ್ಟ್ರಾನುಗಳ ಶಕ್ತಿಗನುಸಾರವಾಗಿ ವಿವಿಧ ಶಕ್ತಿಮಟ್ಟಗಳಲ್ಲಿ ಇರುತ್ತವೆ. ಎಂದರೆ ಹೆಚ್ಚು ಶಕ್ತಿಯುಳ್ಳ ಎಲೆಕ್ಟ್ರಾನುಗಳು ಕೇಂದ್ರದಿಂದ, ಅಲ್ಪಶಕ್ತಿಯುತವಾದ ಎಲೆಕ್ಟ್ರಾನುಗಳಿಗಿಂತ ದೂರದಲ್ಲಿರುತ್ತವೆ. ಆಕರ್ಷಣೆಯನ್ನು ಮೀರಿ ಎಲೆಕ್ಟ್ರಾನುಗಳು ಪರಮಾಣುವಿನಿಂದ ಹೊರಬರಬೇಕಾದರೆ ಶಕ್ತಿಯನ್ನು ವ್ಯಯಮಾಡಬೇಕು. ಈ ಶಕ್ತಿಯನ್ನು ಹೊರಗಿನಿಂದ ಪರಮಾಣುವನ್ನು ಕಾಯಿಸುವುದರ ಮೂಲಕ ಒದಗಿಸಬಹುದು. ಲೋಹಗಳನ್ನು ಬಲವಾಗಿ ಕಾಯಿಸಿದಾಗ ಕೇಂದ್ರದಿಂದ ಹೆಚ್ಚಿನ ದೂರದಲ್ಲಿರುವ ಕೆಲವು ಎಲೆಕ್ಟ್ರಾನುಗಳು ಪ್ರೋಟಾನಿನ ಹಿಡಿತದಿಂದ ಪಾರಾಗಿ ಹೊರಬರಬಲ್ಲವು. ರೇಡಿಯೋ ಹಾಗೂ ಟೆಲಿವಿಷನ್ ಟ್ಯೂಬುಗಳು (ವಾಲ್ವ್‌ಗಳು) ಕೆಲಸ ಮಾಡುವುದು ಈ ಆಧಾರದ ಮೇಲೆ. ರಿಚರ್ಡ್‌ಸನ್ ಎಂಬಾತ ಲೋಹಗಳ ಉಷ್ಣತೆಗೂ ಅದರಿಂದ ಎಲೆಕ್ಟ್ರಾನುಗಳು ಹೊರಬೀಳುವ ದರಕ್ಕೂ ಇರುವ ಸಂಬಂಧವನ್ನು ತಾತ್ವಿಕವಾಗಿ ನಿರ್ಧರಿಸಿದ್ದ. ಆತ ಬಳಸಿದ ಸಮೀಕರಣದಲ್ಲಿ ಎರಡು ಸ್ಥಿರಾಂಕಗಳಿವೆ. ಅವನ್ನು ನಿರ್ಧರಿಸುವುದು ಬಹು ಸೂಕ್ಷ ವಾದ ಪ್ರಯೋಗಗಳಿಂದ ಮಾತ್ರ ಸಾಧ್ಯವಿತ್ತು. ಕುಶಲಿಗಳಾದ ಕೃಷ್ಣನ್ ಹೊಸದಾದ ಒಂದು ಸೂಕ್ಷ  ಪ್ರಯೋಗವನ್ನು ರೂಪಿಸಿ ಇವೆರಡು ಅಂಕಗಳನ್ನು ತಪ್ಪೇ ಇಲ್ಲದಂತೆ ನಿರ್ಧರಿಸಿದರು.

ಇದೇ ಕಾಲದಲ್ಲಿ ಕೃಷ್ಣನ್ ಇನ್ನೊಂದು ಕ್ಷೇತ್ರದಲ್ಲಿ ಸಹ ಸಂಶೋಧನೆ ನಡೆಸಿದರು. ತೆಳ್ಳನೆಯ ಕಡ್ಡಿ, ನಳಿಕೆ ಅಥವಾ ಸುರುಳಿಯ ರೂಪದಲ್ಲಿರುವ ವಸ್ತುವನ್ನು ನಿರ್ವಾತ ಸ್ಥಿತಿಯಲ್ಲಿ ಕಾಯಿಸಿದಾಗ ಉಷ್ಣತೆ ವಸ್ತುವಿನಾದ್ಯಂತ ಹೇಗೆ ವ್ಯತ್ಯಾಸಗೊಳ್ಳುತ್ತದೆ ಎಂಬುದೇ ಅವರ ಸಂಶೋಧನೆಯ ವಿಷಯ. ದೊರೆತ ಉತ್ತರಗಳು ಅನೇಕ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ನೆರವಾದವು.

ಹಲವು ಆಸಕ್ತಿಗಳು

ವಿಜ್ಞಾನಿಗೆ ಹೊಸ ಜ್ಞಾನವನ್ನು ಸಂಪಾದಿಸುವುದರಲ್ಲಿಯೇ ಗಾಢವಾದ ಆಸಕ್ತಿ. ಆದುದರಿಂದ ಸಾಮಾನ್ಯವಾಗಿ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲೆ ಮುಳುಗಿರುತ್ತಾರೆ, ತಮ್ಮ ಸುತ್ತಲಿನ ಪ್ರಪಂಚಕ್ಕೆ ಹೆಚ್ಚು ಗಮನ ಕೊಡುವುದಿಲ್ಲ, ತಾವು ಆರಿಸಿಕೊಂಡ ವಿಭಾಗವಲ್ಲದೆ ಬೇರೆ ಯಾವ ವಿಷಯದಲ್ಲಿಯೂ ಅವರಿಗೆ ಹೆಚ್ಚು ಆಸಕ್ತಿ ಇರುವುದಿಲ್ಲ, ಅವರು ಜನರೊಡನೆ ಹೆಚ್ಚು ಬೆರೆಯುವುದಿಲ್ಲ ಎಂದೆಲ್ಲ ಜನರ ಕಲ್ಪನೆ. ಅನೇಕ ವಿಜ್ಞಾನಿಗಳು ಹೀಗೆ ಇರುವುದೂ ಉಂಟು. ಆದರೆ ಕೃಷ್ಣನ್ ಈ ಬಗೆಯವರಲ್ಲ. ಅವರು ಬಹು ಸ್ನೇಹಪರರು. ಅನೇಕ ಮಂದಿ ಹಿರಿಯ ವಿಜ್ಞಾನಿಗಳು ಅವರ ಸೌಜನ್ಯವನ್ನೂ ಸ್ನೇಹದ ಮನೋಭಾವವನ್ನೂ ಮೆಚ್ಚಿ ಕೊಂಡಿದ್ದಾರೆ.

ಯಾವ ವಿಷಯವನ್ನು ಆರಿಸಿಕೊಳ್ಳಲಿ, ಅದನ್ನು  ಸಂಪೂರ್ಣವಾಗಿ ತಿಳಿದುಕೊಳ್ಳುವ ಸ್ವಭಾವ ಅವರದು. ಚಿಕ್ಕವಯಸ್ಸಿನಿಂದ ಅವರಿಗೆ ವಿಜ್ಞಾನದಲ್ಲಿ ಒಲವು. ಜೊತೆಗೇ ಪುರಾಣ ಪುಣ್ಯಕಥೆಗಳಲ್ಲಿ ಆಸಕ್ತಿ. ಇಪ್ಪತ್ತೆರಡು – ಇಪ್ಪತ್ತನಾಲ್ಕು ವರ್ಷ ವಯಸ್ಸಿನಲ್ಲೆ ವಿಜ್ಞಾನವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ ಬಹು ಒಳ್ಳೆಯ ವಿಜ್ಞಾನದ ವಿದ್ಯಾರ್ಥಿ ಎಂದು ತಮ್ಮ ಉಪಾಧ್ಯಾಯರ ಮತ್ತು ಜೊತೆಯವರ ಮೆಚ್ಚಿಕೆ ಪಡೆದಿದ್ದರು; ಆಗಲೇ ಭಾರತದ ಪುರಾಣಗಳ ಮತ್ತು ಪುಣ್ಯ ಪುರುಷರ ಕಥೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದು ತಮ್ಮ ಗೆಳೆಯರಿಗೆ ಹೇಳಿ ಅವರ ಮೆಚ್ಚಿಕೆ ಪಡೆಯುತ್ತಿದ್ದರು.

ದೇಶದ ಸ್ವಾತಂತ್ರ  ಹೋರಾಟದಲ್ಲಿ ಅವರಿಗೆ ತುಂಬಾ ಆಸಕ್ತಿ. ೧೯೨೧ ರಲ್ಲಿ, ಅವರಿಗೆ ಇಪ್ಪತ್ತಮೂರು ವರ್ಷ ವಯಸ್ಸಾಗಿದ್ದಾಗ, ಕಲ್ಕತ್ತೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ವಿಶೇಷ ಸಭೆ ನಡೆಯಿತು. ಕೃಷ್ಣನ್ ಪ್ರಾರಂಭದಿಂದ ಕಡೆಯವರೆಗೆ ಭಾಗವಹಿಸಿದರು. ನಾಯಕರ ಭಾಷಣಗಳನ್ನೂ ಸಭೆಯಲ್ಲಿನ ಚರ್ಚೆಗಳನ್ನೂ ಆಸಕ್ತಿಯಿಂದ ಕೇಳಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಖಾದಿ ಬಟ್ಟೆ ಹಾಕಲು ಪ್ರಾರಂಭಿಸಿದ್ದರು. ಆಗಿನ ಕಾಲದಲ್ಲಿ ಖಾದಿ ಬಟ್ಟೆ ಬಹು ದಪ್ಪ. ಆದರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಕೃಷ್ಣನ್ ಖಾದಿ ಬಟ್ಟೆಯನ್ನು ತೊಡುತ್ತಿದ್ದರು.

ಕಾರ್ಯನಿಷ್ಠೆ

ಕೃಷ್ಣನ್ ಅವರ ಕಾರ್ಯನಿಷ್ಠೆ ಅವರ ಸಹದ್ಯೋಗಿಗಳೆಲ್ಲರ ಮೆಚ್ಚುಗೆಯನ್ನು ಗಳಿಸಿತಲ್ಲದೆ, ಅವರ ವಿಷಯದಲ್ಲಿ ಗೌರವ ಭಾವನೆಯನ್ನುಂಟುಮಾಡಿತು.

ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್‌ನ ಪ್ರಯೋಗ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗಂಧಕವನ್ನು ಕಾಯಿಸಿ ಕುದಿಸುವ ಸಂದರ್ಭ ಬಂತು. ಇದಕ್ಕಾಗಿ ಬಳಸಿದ ಮಣ್ಣಿನ ಮೂಸೆ ಸೋರಲು ಪ್ರಾರಂಭಿಸಿತು. ಇದನ್ನು ಸರಿಪಡಿಸಲು ದನದ ಸಗಣಿ ಮತ್ತು ಮಣ್ಣನ್ನು ಸೇರಿಸಿ ಮೂಸೆಯ ಹೊರಭಾಗಕ್ಕೆ ಸವರಿದರೆ ಸೋರುವುದು ನಿಲ್ಲಬಹುದು ಎಂದು ಅವರ ಜೊತೆಗೆ ಕೆಲಸಮಾಡುತ್ತಿದ್ದ ರಾಮದಾಸ ಸಲಹೆ ಮಾಡಿದರಂತೆ. ಒಡನೆ ಕೃಷ್ಣನ್ ತಮ್ಮ ಪಂಚೆ ಕಚ್ಚೆಯನ್ನು ಮೇಲಕ್ಕೆ ಕಟ್ಟಿ ಪ್ರಯೋಗ ಶಾಲೆಯ ನೆಲದ ಮೇಲೆ ಲಕ್ಷಣವಾಗಿ ಕುಳಿತು ಮಣ್ಣು ಮತ್ತು ಸಗಣಿಯನ್ನು ತಿಕ್ಕಲು ಪ್ರಾರಂಭಿಸಿಯೇ ಬಿಟ್ಟರಂತೆ. ಸುತ್ತಮುತ್ತಲಿನ ಸಿಬ್ಬಂದಿ ನೆಟ್ಟ ಕಣ್ಣಿನಿಂದ ನೋಡುತ್ತಲೇ ಇದ್ದರೂ ಅವರಿಗೆ ಅದರ ಅರಿವೇ ಇರಲಿಲ್ಲವಂತೆ!

ಸಂಶೋಧನೆಗೆ ಮುಡಿಪು

ಕೃಷ್ಣನ್ ಮೂಲಭೂತ ವಿಜ್ಞಾನದ ಕ್ಷೇತ್ರದಲ್ಲಿ ಹೆಚ್ಚಿಗೆ ದುಡಿದರೂ ವಿಜ್ಞಾನ ಸಾರ್ವಜನಿಕ ಶ್ರೇಯಸ್ಸಿಗೆ ನೆರವಾಗಬೇಕು, ತಾಂತ್ರಿಕ ಪರಿಣತಿಗೆ ಹಾದಿ ತೋರಿಸಬೇಕು ಎಂಬುದನ್ನು ಚೆನ್ನಾಗಿ ಮನಗಂಡಿದ್ದರು. ‘ಜ್ಞಾನ’ ಮತ್ತು ‘ಕರ್ಮ’ ಗಳೆರಡೂ ಕೈ ಹಿಡಿದು ನಡೆಯಲೇಬೇಕೆಂಬುದು ಅವರ ಸ್ವಂತ ಅನುಭವದಿಂದ ಗೋಚರವಾಗಿತ್ತು. ಎಂದರೆ ಜ್ಞಾನ ಬೆಳೆಯಬೇಕು. ಈ ಜ್ಞಾನವನ್ನು ಜನರ ಹಿತಕ್ಕಾಗಿ ಬಳಸಿ ಕೆಲಸ ಮಾಡಲು ಸಾಧ್ಯವಾಗಬೇಕು. ನಿರ್ದೇಶಕರ ಜವಾಬ್ದಾರಿಯನ್ನು ಹೊರುವ ಮುನ್ನವೇ ಅವರ ಕೆಲಸ ಕಾರ್ಯಗಳು ಹೆಚ್ಚಾಗಿ ಸ್ವತಃ ಪ್ರಯೋಗ ಶಾಲೆಯಲ್ಲಿ ಸಂಶೋಧನೆ ಮಾಡುವ ಅವಕಾಶಗಳು ಕಡಿಮೆಯಾಗುತ್ತ ಬಂದಿದ್ದವು. ಎಷ್ಟೋ ಬಾರಿ ಅವರು ಈ ವಿಷಯದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ೧೯೨೭ರಲ್ಲಿ ತಮ್ಮ ಅದುವರೆಗಿನ ಅನುಭವವನ್ನು ಮೆಲುಕು ಹಾಕುತ್ತಾ ಹೀಗೆಂದಿದ್ದಾರೆ. ‘‘ಈಗ ನಾನು ಕೆಲವು ಕಾಲದಿಂದ ಸ್ವತಃ ಯಾವುದೇ ಪ್ರಯೋಗಗಳನ್ನು ನಡೆಸಿಲ್ಲ. ವಾಸ್ತವವಾಗಿ ನನ್ನ ಕಡೆಯ ಪ್ರಯೋಗವನ್ನು ೧೯೨೬ರ ಬೇಸಗೆಯಲ್ಲಿ ನಡೆಸಿದೆ. ಅಂದಿನಿಂದ ಇದುವರೆಗೆ, ಒಂದು ವಾರದ ವಿನಾ, ಮೇಜಿನ ಮುಂದೆ ಕುಳಿತಿರುವುದೇ ಆಗಿದೆ. ಈ ಕಾಲಾವಧಿಯಲ್ಲಿ ವಿಜ್ಞಾನಕ್ಕೆ ನಾನು ಇತ್ತಿರುವ ಕೊಡುಗೆಯ ದೃಷ್ಟಿಯಿಂದ ತೃಪ್ತಿಪಟ್ಟುಕೊಳ್ಳಬಹುದಾದರೂ ಪ್ರೊಫೆಸರ್ ರಾಮನ್ ಆಗಿಂದಾಗ್ಗೆ ಹೇಳುತ್ತಿರುವಂತೆ ವಿಜ್ಞಾನಿ ತಾನು ಸ್ವತಃ ಪ್ರಯೋಗಗಳನ್ನು ಮಾಡುವ ಅಭ್ಯಾಸವನ್ನು ಬಹಳ ಕಾಲ ಮರೆಯಬಾರದು. ಈ ದೃಷ್ಟಿಯಿಂದ ಯಾವುದಾದರೂ ಪ್ರಯೋಗವನ್ನು ಮಾಡುವ ಉದ್ದೇಶದಿಂದ ಆರ್ಗಾನಿಕ್ ಹಬೆಗಳು ಬೆಳಕನ್ನು ಹೊರಸೂಸುವ ಸಮಸ್ಯೆಯನ್ನು ಎತ್ತಿಕೊಂಡೆ’’. ಹೀಗೆ ಕೆಲವೇ ದಿನ  ಸಂಶೋಧನೆಯ ಕೆಲಸ ಮಾಡಲು ಸಾಧ್ಯವಾಗದೆ ಹೋದರೆ ಆತಂಕಪಟ್ಟುಕೊಳ್ಳುತ್ತಿದ್ದ ಚೇತನ ಅವರದು.

ವಿಜ್ಞಾನ ಕ್ಷೇತ್ರದಲ್ಲಿ ಕೃಷ್ಣನ್ ಅವರು ತಳೆದಿದ್ದ ಆಸಕ್ತಿ ಸಂಕುಚಿತ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ತಮ್ಮ ಸಂಶೋಧನೆಗಳಲ್ಲಿ ನಿರತರಾಗಿದ್ದಾಗ ಸಹ ತಮ್ಮ ಪ್ರಯೋಗ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇತರರು ಬಿಡಿಸಲಾರದ ತೊಡಕಿಗೆ ಸಿಕ್ಕಿ ತಮ್ಮ ಸಲಹೆಯನ್ನು ಬಯಸಿದಾಗ ಅವರ ಸಮಸ್ಯೆಗೆ ಒಡನೆ ಗಮನವಿತ್ತು ಅದನ್ನು ಬಗೆಹರಿಸುತ್ತಿದ್ದರು. ಸಂಶೋಧನೆಗೆ ಬುದ್ಧಿ ಚುರುಕಾಗಿದ್ದರೆ ಸಾಲದು. ದೈಹಿಕ ಶ್ರಮವೂ ಬೇಕು. ಕೃಷ್ಣನ್ ಅವರು ಕೆಲಸವನ್ನು ಪ್ರಾರಂಭಿಸುತ್ತಿದ್ದದ್ದು ಬೆಳಿಗ್ಗೆ ೮ ಗಂಟೆಗೆ. ಮುಗಿಸುತ್ತಿದ್ದ ಕಾಲ ರಾತ್ರಿ ಎಂಟು ಗಂಟೆ. ಮಧ್ಯರಾತ್ರಿಯವರೆಗೆ ಕೆಲಸ ಮಾಡಿದ ದಿನಗಳಿಗೆ ಲೆಕ್ಕವೇ ಇಲ್ಲ.

ವ್ಯಕ್ತಿತ್ವದ ಹಲವು ಮುಖಗಳು

ಕೃಷ್ಣನ್ ಅವರ ಬಹುಮುಖ ವ್ಯಕ್ತಿತ್ವವನ್ನು ಅವರ ಸಹೋದ್ಯಾಗಿಗಳ ಮಾತಿನಲ್ಲಿ ತಿಳಿಯುವುದೇ ಚೆನ್ನ. ಪ್ರೊಫೆಸರ್ ಮಹದೇವನ್ ರಾಮನ್ ಒಡನೆ ಕೆಲಸ ಮಾಡಲು ಬಂದರು-‘‘ಸೈನ್ಸ್ ಅಸೋಸಿಯೇಷನ್‌ಗೆ ಸೇರಿದ ಅನಂತರ ನಾನು ಮೊತ್ತಮೊದಲು ಭೇಟಿಯಾದವರೆಂದರೆ ಕೆ.ಎಸ್.ಕೃಷ್ಣನ್. ಆಗ ಬೆಳಿಗ್ಗೆ ೮ ಗಂಟೆಯ ಸಮಯ. ಖಾದಿ ಕುರ್ತಾ ಮತ್ತು ಪಂಚೆಯನ್ನುಟ್ಟಿದ್ದ ಅವರನ್ನು ನೋಡಿ ನನಗೆ ಸಂತೋಷವೂ ಆಶ್ಚರ್ಯವೂ ಆಯಿತು. ಅವರು ನನಗೆ ಮದರಾಸಿನಲ್ಲಿ ಗುರುಗಳಾಗಿದ್ದರು. ನಾನು ಅವರನ್ನು ಗುರುತು ಹಿಡಿದರೂ ನನ್ನನ್ನು ಅವರು ಗುರುತಿಸುವರೋ ಇಲ್ಲವೋ ಎಂಬ ಶಂಕೆ ನನಗಿತ್ತು. ಆದರೆ ನನ್ನನ್ನು ತಕ್ಷಣವೇ ಅವರು ಗುರುತಿಸಿ ಬಹು ವಿಶ್ವಾಸದಿಂದ ಬರಮಾಡಿಕೊಂಡರು. ಅವರದು ಬಹು ತೀಕ್ಷ  ಬುದ್ಧಿ ಅಲ್ಲದೆ ವಿಮರ್ಶಾತ್ಮಕ ದೃಷ್ಟಿ…ತಮ್ಮ ಸುತ್ತಮುತ್ತಲಿನವರಲ್ಲಿ ಅವರಿಗೆ ಇರುವ ಸಹಜ ಪ್ರೀತಿ ಮತ್ತು ಗೌರವಗಳು ಅವರ ಪರಿಪಕ್ವ ಹೃದಯದ ಮತ್ತು ಬುದ್ಧಿಶಕ್ತಿಯ ಸಂಕೇತಗಳು. ಚಿಕ್ಕಂದಿನಲ್ಲಿಯೇ ಮದುವೆ ಮಾಡಿಕೊಂಡು ತಂದೆಯಾಗಿದ್ದರು. ಆದರೂ ಶಾಲೆಯ ವಿದ್ಯಾರ್ಥಿಯಂತೆಯೇ ಉತ್ಸಾಹಭರಿತ ರಾಗಿರುತ್ತಿದ್ದರು. ಯಾವುದೇ ಚಿಂತೆ ಇಲ್ಲದವರಂತೆ ಗಟ್ಟಿಯಾಗಿ ಕೇಕೆ ಹಾಕಿ ನಗುತ್ತಲಿದ್ದರು. ಅವರ ವಿಷಯ ಸಂಗ್ರಹ ವ್ಯಾಪಕ. ಯಾವುದೇ ಕೂಟದಲ್ಲಿ ತಮ್ಮ ಬುದ್ಧಿ, ತಿಳಿಹಾಸ್ಯ ಮತ್ತು ತರ್ಕಬದ್ಧ ವಾದಗಳಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದರು….ಕೃಷ್ಣನ್ ಕ್ರೀಡಾಭಿಮಾನಿಗಳೂ ಹೌದು. ಕಾಲ್ಚೆಂಡಿನಾಟವೆಂದರೆ ಬಹು ಖುಷಿ. ತಮ್ಮ ಕೆಲಸ ಮುಗಿದ ಒಡನೆ ಶ್ರೇಷ್ಠ ಟೀಮುಗಳ ಆಟವನ್ನು ನೋಡಲು ಧಾವಿಸುತ್ತಿದ್ದರು. ಅನೇಕ ವೇಳೆ ಆಟಕ್ಕೆ ತಡವಾಗಿ ಹೋಗಿ ಟಿಕೆಟ್ಟು ದೊರಕದೆ ಕಾಳಸಂತೆಯಲ್ಲಿ ಟಿಕೆಟ್ಟನ್ನು ಕೊಂಡು ಆಟವನ್ನೂ ನೋಡಿದ್ದೂ ಉಂಟು. ಆಟವನ್ನು ನೋಡುವಾಗ ಮೈಮರೆತು ತಮ್ಮ ನೆಚ್ಚಿನ ಟೀಮನ್ನು ಪ್ರೋತ್ಸಾಹಿಸಲು ಗಟ್ಟಿಯಾಗಿ ಕೂಗುತ್ತಿದ್ದರು. ಬದಿಯಲ್ಲಿದ್ದ ಜನ ಹಸನ್ಮುಖರಾಗಿ ಇವರ ಕೂಗಾಟವನ್ನು ಕೇಳುತ್ತಿದ್ದರು.’’

ಕೃಷ್ಣನ್ ಅವರು ಭಾರತೀಯ ಸಂಸ್ಕೃತಿಯ ಪ್ರತೀಕವೆಂದರೆ ತಪ್ಪಾಗಲಾರದು. ಭಾರತೀಯ ಪೌರಾಣಿಕ ಗ್ರಂಥಗಳನ್ನು ತಮಿಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದರು. ತರುಣರಾಗಿದ್ದಾಗಲೇ ತಾಳೆಗರಿ ಗ್ರಂಥಗಳನ್ನು ಅಭ್ಯಾಸ ಮಾಡಿದ್ದರು. ತಮಿಳಿನಲ್ಲಿ ವೈಜ್ಞಾನಿಕ ಹಾಗೂ ಪಾರಮಾರ್ಥಿಕ ವಿಷಯಗಳ ಮೇಲೆ ನಿರರ್ಗಳವಾಗಿ ನವಿರಾದ ಹಾಸ್ಯ ಬೆರೆಸಿ ಬಹಳ ಚೆನ್ನಾಗಿ ಭಾಷಣ ಮಾಡುತ್ತಿದ್ದರು. ಬರವಣಿಗೆ ಸಹ ಅಷ್ಟೇ ಉತ್ತಮ. ಈ ಹಿರಿಯರ ಭಾಷಣಗಳನ್ನು ಏರ್ಪಡಿಸಲು ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕ ಸಂಸ್ಥೆಗಳು ನಾನು ತಾನೆಂದು ಮುಂದಾಗುತ್ತಿದ್ದವು.

ಅಂತರರಾಷ್ಟ್ರೀಯ ಮನ್ನಣೆ ಪಡೆದ ಕೃಷ್ಣನ್ ವಿದೇಶಗಳಲ್ಲಿ ನಡೆಯುತ್ತಿದ್ದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಮತ್ತು ಭಾರತದ ಅನಧಿಕೃತ ರಾಯಭಾರಿಯಂತೆ ಗೌರವವನ್ನು ಪಡೆಯುತ್ತಿದ್ದರು. ವೈಜ್ಞಾನಿಕ ಕ್ಷೇತ್ರದಲ್ಲಿ ವಿಜ್ಞಾನಿಗಳ ನಡುವೆ ವಿಚಾರ ವಿನಿಮಯವಾಗುವುದರಿಂದ ಜನಾಂಗಗಳಲ್ಲಿ ಪರಸ್ಪರ ಸದ್ಭಾವನೆ ಬೆಳೆದು ಮೈತ್ರಿಯುಂಟಾಗಲು ಸಹಾಯವಾಗುತ್ತದೆ ಎಂದು ಅವರು ದೃಢವಾಗಿ ನಂಬಿದ್ದರು. ಅವರು ಪ್ರತಿಭಾವಂತರು, ಅಲ್ಲದೆ ಸ್ನೇಹದ ಸ್ವಭಾವ. ಆದುದರಿಂದ ಅವರಿಗೆ ಅನೇಕ ದೇಶಗಳಲ್ಲಿ ಸ್ನೇಹಿತರಿದ್ದರು.

ಕೆಲಸ ಮಾಡುವುದು ನಿನ್ನ ಹೊಣೆ

ಗೀತೆ ‘‘ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’’ ಎನ್ನುತ್ತದೆ. ಎಂದರೆ, ‘ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಮಾಡು, ಆ ಅಧಿಕಾರ ನಿನಗಿದೆ. ಆದರೆ ಫಲದ ವಿಷಯ, ನಿನ್ನ ಕೆಲಸ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ವಿಷಯ ಚಿಂತಿಸಬೇಡ’ ಎಂದು. ಕೃಷ್ಣನ್ ನಡೆದುಕೊಳ್ಳುತ್ತಿದ್ದುದು ಹೀಗೆಯೇ. ತಮ್ಮ ಕೆಲಸವನ್ನು ನಿಷ್ಠೆಯಿಂದ, ಆಸಕ್ತಿಯಿಂದ ಮಾಡುವರು. ಆದರೆ ಅದರ ಪರಿಣಾಮ ಅವರು ನಿರೀಕ್ಷಿಸಿದಂತೆ ಆಗದಿದ್ದರೆ ಖಿನ್ನರಾಗುತ್ತಿರಲಿಲ್ಲ, ನಿರಾಸೆಪಡುತ್ತಿರಲಿಲ್ಲ. ಒಂದೇ ಬಗೆಯ ಶ್ರದ್ಧೆಯಿಂದ ಕೆಲಸವನ್ನು ಮುಂದುವರಿಸುತ್ತಿದ್ದರು.

ವಿಜ್ಞಾನ ಕ್ಷೇತ್ರದಲ್ಲಿ ಅವರು ಋಷಿ. ‘‘ಸರಳಜೀವನ ಮತ್ತು ಉಚ್ಚ ಚಿಂತನೆ’’ ಅವರ ಜೀವನದ ಧ್ಯೇಯ. ಎಂದರೆ ಅವರ ಜೀವನ ಬಹು ಸರಳ. ಹಣ, ಸುಖ ಜೀವನ, ವೈಭವ ಇವಕ್ಕೆ ಆಸೆ ಪಟ್ಟವರಲ್ಲ. ಅವರ ಯೋಚನೆಗಳೆಲ್ಲ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಂಬಲದಿಂದ ಬಂದವು. ಸಣ್ಣ ಯೋಚನೆಗಳು, ತಮಗೆ ಇದು ಬೇಕು ಅದು ಬೇಕು ಎಂಬ ಯೋಚನೆಗಳು ಅವರಿಂದ ದೂರ.

ಮತ್ತೆ ಗೌರವಗಳು

ಅವರ ವಿಜ್ಞಾನ ಪ್ರೌಢಿಮೆಯಿಂದಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಗೌರವಗಳಿಗೆ ಪಾತ್ರರಾದರು. ೧೯೬೧ರಲ್ಲಿ ತೀರಿಕೊಳ್ಳುವವರೆಗೆ ೧೪ ವರ್ಷಗಳ ಕಾಲ ದೆಹಲಿಯ ರಾಷ್ಟ್ರೀಯ ಭೌತ ವಿಜ್ಞಾನ ಪ್ರಯೋಗ ಶಾಲೆ (ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ) ಯ ನಿರ್ದೇಶಕರಾಗಿದ್ದರು. ೧೯೪೯ರಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅನೇಕ ಅಂತರ ರಾಷ್ಟ್ರೀಯ ಸಂಸ್ಥೆಗಳಿಗೆ ಸದಸ್ಯರಾಗಿದ್ದುದಲ್ಲದೆ ಕೆಲವು ಸಂಸ್ಥೆಗಳ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ೧೯೪೭ರಲ್ಲಿ ಬ್ರಿಟಿಷ್ ಸರ್ಕಾರ ನೈಟ್‌ಹುಡ್ ಅನ್ನು ಇತ್ತು ಗೌರವಿಸಿತು. ಅವರು ಸರ್ ಕೆ.ಎಸ್.ಕೃಷ್ಣನ್ ಆದರು. ಸ್ವಾತಂತ್ರ  ಬಂದ ಮೇಲೆ ಇಂಡಿಯಾ ಸರ್ಕಾರ ೧೯೫೪ರಲ್ಲಿ ಪದ್ಮಭೂಷಣ ಬಿರುದನ್ನಿತ್ತಿತು. ೧೯೫೬ರಲ್ಲಿ ಭಟ್ನಾಗರ್ ಪ್ರಶಸ್ತಿ ದೊರಕಿತು.

ತುಂಬು ಜೀವನ ನಡೆಸಿದ ಕೃಷ್ಣನ್ ಅವರ ಅರವತ್ತನೆಯ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ನೆಹ್ರೂ ಮಾತನಾಡುತ್ತಾ ‘‘ಕೃಷ್ಣನ್ ಅವರು ಮಹಾ ವಿಜ್ಞಾನಿಗಳು ನಿಜ; ಅದಕ್ಕಿಂತ ವಿಶೇಷ ಸಂಗತಿ ಅವರು ಇನ್ನೂ ದೊಡ್ಡ ವ್ಯಕ್ತಿ ಎಂಬುದು. ಅವರು ಆದರ್ಶ ಪ್ರಜೆ, ಸರ್ವಸಮನ್ವಯ ವ್ಯಕ್ತಿತ್ವವುಳ್ಳ ಪರಿಪೂರ್ಣ ಮಾನವ’’ ಎಂದರು.

‘‘ಪರಿಪೂರ್ಣ ಮಾನವ’’

‘ಪರಿಪೂರ್ಣ ಮಾನವ’ ಎನ್ನುವ ಮಾತನ್ನು ನೆಹ್ರೂ ಯಾವ ಅರ್ಥದಲ್ಲಿ ಹೇಳಿದರು? ಮನುಷ್ಯನಿಗೆ ಬುದ್ದಿಶಕ್ತಿ ಮುಖ್ಯ; ಬುದ್ಧಿಶಕ್ತಿ ಹೆಚ್ಚಿದಷ್ಟೂ ಮನುಷ್ಯನ ಯೋಗ್ಯತೆ, ಅವನು ಮಾಡಬಹುದಾದ ಕೆಲಸದ ಮಹತ್ವ ಹೆಚ್ಚು. ಅತಿ ಹೆಚ್ಚಿನ ಬುದ್ಧಿಶಕ್ತಿಗೆ ಪ್ರತಿಭೆ ಎನ್ನುತ್ತಾರೆ. ಕೃಷ್ಣನ್ ಅವರು ಪ್ರತಿಭಾವಂತರು. ಬಹು ಕಷ್ಟವಾದ ವಿಷಯಗಳನ್ನು ಆರಿಸಿಕೊಂಡು ತಾವೇ ಹೊಸ ಹೊಸ ಸಂಗತಿಗಳನ್ನು ಕಂಡುಹಿಡಿದರು. ಸಿ. ವಿ. ರಾಮನ್ ಅಂತಹ ಜಗದ್ವಿಖ್ಯಾತ ವಿಜ್ಞಾನಿಗಳು ಮೆಚ್ಚುವಂತೆ ಸಂಶೋಧನೆ ಮಾಡಿದರು.

ಆದರೆ ಮನುಷ್ಯನಿಗೆ ಬುದ್ಧಿಶಕ್ತಿಯೊಂದೇ ಸಾಲದು. ಬುದ್ಧಿಶಕ್ತಿ ಮಾತ್ರ ಇದ್ದರೆ ತನ್ನ ಲಾಭಕ್ಕಾಗಿಯೇ ಎಲ್ಲವನ್ನೂ ಬಳಸಿಕೊಂಡು ಇತರರಿಗೆ ಅಪಾಯವಾದಾನು. ತನ್ನಿಂದ ದೇಶಕ್ಕೆ ಪ್ರಯೋಜನವಾಗಬೇಕು ಎಂಬ ಸೇವೆಯ ಮನೋಭಾವ ಇರಬೇಕು. ಕೃಷ್ಣನ್ ದೇಶಕ್ಕಾಗಿ ದುಡಿದರು. ತಾವು ಸಂಶೋಧನೆ ಮಾಡಲು ತೊಂದರೆಯಾಗುತ್ತದೆ ಎಂದು ತಿಳಿದೂ ದೇಶಕ್ಕಾಗಿ ರಾಷ್ಟ್ರೀಯ ಭೌತ ವಿಜ್ಞಾನದ ಸಂಶೋಧನಾಲಯದ ನಿರ್ದೇಶಕರ ಕೆಲಸವನ್ನು ಒಪ್ಪಿಕೊಂಡರು.

ಮನುಷ್ಯ ಬುದ್ಧಿವಂತನಾಗಿದ್ದರೂ ಕಲ್ಲಿನಂತೆ ಭಾವಗಳಿಲ್ಲದೆ ಇದ್ದರೆ ಇತರರ ಕಷ್ಟಸುಖಗಳನ್ನು ಲಕ್ಷಿಸಲಾರ, ಅವರ ಸ್ನೇಹವನ್ನು ಗಳಿಸಲಾರ, ಅವರೊಡನೆ ಕೆಲಸ ಮಾಡಲಾರ. ಕೃಷ್ಣನ್ ಅವರದು ಸ್ನೇಹದ ಸ್ವಭಾವ, ಹೃದಯವಂತಿಕೆಯ ಸ್ವಭಾವ. ವಿದ್ಯಾರ್ಥಿಯಾಗಿ ತಮ್ಮ ಉಪಾಧ್ಯಾಯರ ಮೆಚ್ಚಿಕೆ ಪ್ರೀತಿಗಳನ್ನು ಗಳಿಸಿದರು. ಉಪಾಧ್ಯಾಯರಾಗಿ ತಮ್ಮ ವಿದ್ಯಾರ್ಥಿಗಳ ಪ್ರೀತಿ ಗೌರವಗಳನ್ನು ಸಂಪಾದಿಸಿದರು. ತಮ್ಮೊಡನೆ ಕೆಲಸ ಮಾಡುವವರ ಆದರ ಗೌರವಗಳನ್ನು ಪಡೆದರು.

ಒಬ್ಬ ಮನುಷ್ಯನಿಗೆ ಒಂದು ವಿಷಯದಲ್ಲಿ, ಒಂದು ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇರಬಹುದು. ಆ ವಿಷಯದಲ್ಲಿ, ಕ್ಷೇತ್ರದಲ್ಲಿ ವಿಶೇಷ ಕೆಲಸ ಮಾಡಬಹುದು. ಆದರೆ ಎಷ್ಟು ಇತರ ವಿಷಯಗಳಲ್ಲಿ ಆಸಕ್ತಿ ಇದ್ದರೆ ಅಷ್ಟು ಅವರ ವ್ಯಕ್ತಿತ್ವ ಬೆಳೆಯುತ್ತದೆ. ಅವನಿಗೆ ಜೀವನದಲ್ಲಿ ಸಂತೋಷ ಕೊಡುವ ಸಂಗತಿಗಳು ಹೆಚ್ಚುತ್ತವೆ. ವಿಜ್ಞಾನಿಯಾದವನಿಗೆ ಸಾಹಿತ್ಯ ಸಂಗೀತ ಆಟಗಳು ಚಿತ್ರಕಲೆ ಹೀಗೆ ಹಲವು ಇತರ ವಿಷಯಗಳಲ್ಲಿ, ಸಾಹಿತಿಗೆ ವಿಜ್ಞಾನ, ಸಂಗೀತ್, ಆಟಗಳು, ಚಿತ್ರಕಲೆ ಹೀಗೆ ಇತರ ವಿಷಯಗಳಲ್ಲಿ, ಕ್ರೀಡಾಪಟುವಿಗೆ ಸಂಗೀತ, ಚಲನಚಿತ್ರ, ವಿಜ್ಞಾನ, ಮನೋವಿಜ್ಞಾನ ಹೀಗೆ ಇತರ ವಿಷಯಗಳಲ್ಲಿ-ಹೀಗೆ ಯಾವುದಾದರೂ ಒಂದು ವಿಷಯದಲ್ಲಿ ಪರಿಣತರಾದವರಿಗೆ ಇತರ ಎಷ್ಟು ವಿಷಯಗಳಲ್ಲಿ ಆಸಕ್ತಿ ಇದ್ದರೆ ಅಷ್ಟೂ ಅವರ ಜೀವನ ಪರಿಪೂರ್ಣವಾಗುತ್ತದೆ.

ಕೃಷ್ಣನ್ ದೊಡ್ಡ ವಿಜ್ಞಾನಿ. ಜೊತೆಗೆ ತಮಿಳು, ಸಂಸ್ಕೃತ ಭಾಷೆಗಳನ್ನು ಬಲ್ಲವರು. ಭಾರತದ ಹಿಂದಿನ ತತ್ವಚಿಂತನೆ, ಪುರಾಣದ ಕಥೆಗಳು ಎಲ್ಲವನ್ನೂ ಚೆನ್ನಾಗಿ ಬಲ್ಲವರು. ಕಾಲ್ಚೆಂಡಿನಾಟ ಎಂದರೆ ಎಲ್ಲೆಯಿಲ್ಲದ ಉತ್ಸಾಹ. ಜೊತೆಗೆ ಸೊಗಸಾದ ಹಾಸ್ಯಪ್ರಜ್ಞೆ. ಇದರಿಂದಲೇ ನೆಹ್ರೂ ಕೃಷ್ಣನ್ ಅವರ ವ್ಯಕ್ತಿತ್ವವನ್ನು ಅಷ್ಟು ಮೆಚ್ಚಿಕೊಂಡಿದ್ದು.