Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕೆ.ಎಸ್.ನರಸಿಂಹಸ್ವಾಮಿ

ಇಪ್ಪತ್ತನೆಯ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ.ಎಸ್.ನರಸಿಂಹಸ್ವಾಮಿಯವರು ಜನಿಸಿದ್ದು ೨೬. ಜನವರಿ ೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ತಂದೆ ಸುಬ್ಬರಾಯರು ತಾಯಿ ನಾಗಮ್ಮ. ವರ್ಡ್ಸ್‌ವರ್ತ್, ರಾಬರ್ಟ್‌ಬರ್ನ್ಸ್ ರಂಥವರಿಂದ ಪ್ರಭಾವಿತರಾಗಿದ್ದ ಇವರು ತಾವು ವಿದ್ಯಾರ್ಥಿಗಳಾಗಿದ್ದಾಗಲೇ ಕವನಗಳನ್ನು ರಚಿಸತೊಡಗಿದ್ದರು. ಅವರ ಕಬ್ಬಿಗನ ಕೂಗು ಎಂಬ ಮೊದಲ ಕವನ ೧೪-೧-೧೯೩೩ ರ ಪ್ರಬುದ್ದಕರ್ನಾಟಕ ದಲ್ಲಿ ಪ್ರಕಟವಾಯಿತು. ಇವರು ಅದಿಕೃತವಾಗಿ ಕಾವ್ಯಜಗತ್ತನ್ನು ಪ್ರವೇಶಿಸಿದ್ದು ಮೈಸೂರುಮಲ್ಲಿಗೆ (೧೯೪೯) ರ ಕವನ ಸಂಕಲನದೊಂದಿಗೆ ಅಂದಿನಿಂದ ಅವರು ಹಲವು ಸಂಕಲನಗಳನ್ನು ಹೊರತಂದಿದ್ದಾರೆ.

ಅವುಗಳೆಂದರೆ ಐರಾವತ(೧೯೪೫), ದೀಪದ ಮಲ್ಲಿ(೧೯೪೭), ಉಂಗುರ(೧೯೪೯), ಇರುವಂತಿಗೆ(೧೯೫೨), ಶಿಲಾಲತೆ (೧೯೫೯), ಮನೆಯಿಂದ ಮನೆಗೆ(೧೯೬೦), ತೆರೆದಬಾಗಿಲು(೧೯೭೬), ನವಪಲ್ಲವ(೧೯೮೩), ದುಂಡುಮಲ್ಲಿಗೆ(೧೯೮೬), ಎಂಬ ಕವನ ಸಂಕಲನಗಳನ್ನೂ, ಮಲ್ಲಿಗೆ ಮಾಲೆ ಎಂಬ ಸಮಗ್ರ ಕವನಗಳ ಸಂಗ್ರಹ ಪ್ರಕಟಿಸಿದ್ದು, ಇದರಲ್ಲಿ ಎಂಟು ಅಪ್ರಕಟಿತ ಕವನಗಳನ್ನು ಸೇರಿಸಲಾಗಿದೆ.

ಮೈಸೂರು ಮಲ್ಲಿಗೆ-ಯಲ್ಲಿ ಅಡಕವಾಗಿರುವುದು ಕವಿಯ ದಾಂಪತ್ಯ ಜೀವನದ ರಸಾನುಭವಗಳು. ಶಿಲಾಲತೆಯಲ್ಲಿ ನಗರ ಜೀವನದ ಸಮಸ್ಯೆಗಳಂತಹ ಬದುಕಿನ ಜಟಿಲತೆಯನ್ನು ಸೆರೆಹಿಡಿಯುವ ಪ್ರಯತ್ನದಿಂದ ಸಂಕೀರ್ಣತೆಯ ಕಡೆಗೆ ಸಾಗಿದ ಕಾವ್ಯದ ಮೇಲೆ ನವ್ಯಕಾವ್ಯದ ಪ್ರಭಾವವಿರುವುದು ಕಂಡುಬರುತ್ತದೆ. ಇಲ್ಲಿ ಯೇಟ್ಸ್, ಎಲಿಯಟ್, ಎಜ್ರಾಫೌಂಡ್, ರಂತಹ ಕಾವ್ಯದಿಂದ ಪ್ರಭಾವಿತರಾಗಿರುವುದು ತಿಳಿಯುತ್ತದೆ. ಕವಿ ಇಲ್ಲಿ ನವೋದಯದಿಂದ ನವ್ಯದ ಕಡೆಗೆ ಸರಿದ ಕಾಲಘಟ್ಟ ಇದಾಗಿತ್ತು. ತೆರೆದ ಬಾಗಿಲು ಇವರ ಶ್ರೇಷ್ಟ ಕವನಗಳಲ್ಲಿ ಒಂದು. ಸಾವಿನ ನೆರಳಿನಲ್ಲಿ ನಿಂತಾಗ ಎದೆ ನಡುಗಿಸುವ ಅನುಭವ, ಆ ಸ್ಥಿತಿಯಿಂದ ಪಾರದಾಗ ಮನಸ್ಸಿನಲ್ಲಾದ ಶಾಂತಿಯ ಅನುಭವ- ಈ ಎರಡನ್ನೂ ಸಹಜವಾಗಿ ಚಿತ್ರಿಸಿದ್ದಾರೆ. ಮತ್ತೆ ಈ ಸಂಕಲನದಲ್ಲಿ ನವೋದಯದ ಕಡೆಗೆ ಹೊರಳಿಸಿದ ಕವಿಗಳು ಈ ರೀತಿಗೆ ವಿಸ್ತಾರತೆಯನ್ನು ತಂದುಕೊಟ್ಟು, ಒಂದು ಘಟನೆಯ ಸುತ್ತಾ ಬೆಳೆಯುತ್ತಾ ಒಂದು ಕಥೆಯನ್ನು ಹೇಳುತ್ತವೆ. ಕೆ.ಎಸ್.ನ ರವರು ಮೂರು ಸ್ವತಂತ್ರವಾದ ಗದ್ಯ ಕೃತಿಗಳನ್ನು ನೀಡಿದ್ದಾರೆ, ಮಾರಿಯ ಕಲ್ಲು, ಸಣ್ಣಕಥೆಗಳ ಸಂಕಲನ, ಇದರಲ್ಲಿ ಗ್ರಾಮೀಣ ಜನರ ಮೂಡನಂಬಿಕೆ ಮತ್ತು ಪ್ರಾಣಿಬಲಿಯನ್ನು ತಡೆಯುವ ಪ್ರಯತ್ನ, ಆಶಯ ಇಲ್ಲಿನ ವಸ್ತು. ದಮಯಂತಿ(೧೯೬೦), ದಮಯಂತಿಯನ್ನು ಕೇಂದ್ರವಾಗಿಟ್ಟುಕೊಂಡು ಕಥೆಯನ್ನು ನೋಡುತ್ತಾರೆ. ಇಲ್ಲಿ ಅವರ ಸ್ತ್ರೀವಾದಿ ಮನೋಭಾವ ವ್ಯಕ್ತವಾಗಿರುವುದು ಕಂಡು ಬರುತ್ತದೆ. ಉಪವನ ಇವರ ಗದ್ಯ ಕೃತಿಗಳಲ್ಲೇ ಮುಖ್ಯವಾದ ಪ್ರಬಂಧ ಮತ್ತು ವಿಮರ್ಶಾಲೇಖನಗಳ ಸಂಗ್ರಹ(೧೯೫೮).

ಇವರ ಅನುವಾದ ಕೃತಿಗಳಲ್ಲಿ ಪ್ರಮುಖವಾದವು (ಇಂಗ್ಲಿಷ್‌ನಿಂದ):-ಮೀಡಿಯಾ, ಯೂರಿಪಿಡೀಸ್‌ನ ಗ್ರೀಕ್‌ನಾಟಕ. ಹೆಣ್ಣೊಬ್ಬಳ ಸೇಡಿನ ಕಥೆಯೇ ಈನಾಟಕದ ವಸ್ತು, ಹಕಲ್ಬರಿ ಪಿನ್ನನ ಸಾಹಸಗಳು(ಮೂಲಕತೃ ಅಮೆರಿಕಾದ ಮಾರ್ಕ್ ಟ್ವೇನ್), ಪತ್ರಗುಚ್ಚ ಮೋಹನಮಾಲೆ, ಸುಬ್ರಹ್ಮಣ್ಯ ಭಾರತಿ, ಇವು ಪ್ರಮುಖ ವಾದವು. ಇವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ರಾಜ್ಯ ಮತ್ತು ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾವ್ ಬಹದ್ದೂರ್ ಪ್ರಶಸ್ತಿಗಳು ಲಬಿಸಿವೆ.