ಕೆ. ಎಸ್. ನರಸಿಂಹಸ್ವಾಮಿ-ಕನ್ನಡದ “ಪ್ರೇಮ ಕವಿ”, “ಒಲವಿನ ಕವಿ” ಎಂದೇ ಖ್ಯಾತರಾದ, ತಮ್ಮ ಸರಳ ಸುಂದರ ಮತ್ತು ಮನೋಜ್ಞ ಕವನಗಳ ಮೂಲಕ ಕನ್ನಡದ ಜನ ಸಾಮಾನ್ಯರನ್ನು ಕಾವ್ಯದ ಹತ್ತಿರಕ್ಕೆ ಕರೆದುಕೊಂಡ ಈ ‘ಮೈಸೂರು ಮಲ್ಲಿಗೆ’ಯ ಕವಿ. ಎಲ್ಲ ಅರ್ಥದಲ್ಲಿ ಜನರ ಕವಿ. ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು ಕೆಎಸ್‌ನ. ಕಾವ್ಯ ಪಂಡಿತರಿಗಷ್ಟೇ ಅಲ್ಲದೆ ಜನಸಾಮಣ್ಯರನ್ನೂ ರಂಜಿಸಿದ ಇವರ “ಮೈಸೂರು ಮಲ್ಲಿಗೆ” ಕವನ ಸಂಕಲನ ಮಲ್ಲಿಗೆಯ ಕಂಪನ್ನು ನಾಡಿಗೇ ಪಸರಿಸಿತು. ಯುವ ಪ್ರೇಮಿಗಳ, ನವ ದಂಪತಿಗಳ ಬಾಯಲ್ಲಿ ಕಾವ್ಯ ನಲಿದಾಡುವಂತೆ ಮಾಡಿತು, ನವೋಲ್ಲಾಸ ಚಿಮ್ಮಿಸಿತು. ೧೯೪೨ ರಲ್ಲಿ ಪ್ರಕಟಆದ “ಮೈಸೂರು ಮಲ್ಲಿಗೆ” ಇದುವರೆಗೆ ೨೮ ಮುದ್ರಣಗಳನ್ನು ಕಂಡಿರುವುದು ಕೆ.ಎಸ್.ನ ಗಳಿಸಿಕೊಂಡ ಜನಪ್ರೀತಿಗೆ ಸಾಕ್ಷಿ. ಪ್ರೀತಿಯ ಬಗ್ಗೆ , ಪ್ರೇಮದ ಬಗ್ಗೆ ಇದಕ್ಕಿಂತ ಸರಳವಾಗಿ, ಇದಕ್ಕಿಂತ ಹೄದಯಸ್ಪರ್ಶಿಯಾಗಿ ಬರೆಯುವುದು ಸಾಧ್ಯವೇ ಇಲ್ಲವೇನೋ ಎನ್ನಿಸುವಷ್ಟು ಮನಮುಉಟ್ಟುವಂತೆ ಬರೆದವರು ಕೆ.ಎಸ್.ನ. ಬದುಕಿನುದ್ದಕ್ಕೂ ಪ್ರತಿಕೂಲ ಪರಿಸ್ಥಿತಿಯಲ್ಲೇ ಹೋರಾಟ ನಡೆಸುತ್ತಾ ಬಂದರೂ ತಮ್ಮ ನೋವನ್ನು ನುಂಗಿ ನಲಿವನ್ನು ಮಾತ್ರ ಜನತೆಗೆ ನೀಡುತ್ತಾ ಬಂದ ಧೀಮಂತಕವಿ ಕೆ.ಎಸ್.ನರಸಿಂಹಸ್ವಾಮಿಯವರು.

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದ ಕೆಎಸ್‌ನ, ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. (ಅಪೂರ್ಣ) ವ್ಯಾಸಂಗ ಮಾಡಿದರು. ೧೯೩೭ರಲ್ಲಿ ಮೈಸೂರು ನಗರಸಭಾ ಕಛೇರಿಯಲ್ಲಿ ಗುಮಾಸ್ತರಾಗಿ ಸರಕಾರಿ ಸೇವೆಗೆ.ನಂತರ ನಂಜನಗೂಡು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ೧೯೭೦ ರಲ್ಲಿ ನಿವೄತ್ತಿ ಹೊಂದಿದರು. ೧೯೩೬ ರಲ್ಲಿ ಶ್ರೀಯುತರು ವಿಶ್ವಕರ್ನಾಟಕ ಪತ್ರಿಕೆಯ ಉಪಸಂಪಾದಕರಾದರು. ೧೯೭೪ ರಲ್ಲಿ ಯುವಕರ್ನಾಟಕ ಪತ್ರಿಕೆಯ ಸಂಪಾದಕತ್ವ.

ಮೈಸೂರು ಮಲ್ಲಿಗೆ ಕೆ. ಎಸ್. ನರಸಿಂಹಸ್ವಾಮಿ ಅವರ ಮೊದಲ ಕವನ ಸಂಕಲನ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಮಿಕ್ಕಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರುಮುದ್ರಣದ ಭಾಗ್ಯ- ಅಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ “ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ’ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ” -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಹೆಚ್. ಎಸ್. ವಿ. ಗುರ್ತಿಸಿದ್ದಾರೆ.

ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ತಮ್ಮವು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಇದಲ್ಲದೆ ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಸಂಕಲನಗಳು ಹೊರಬಂದಿವೆ. “ಮಲ್ಲಿಗೆಯ ಮಾಲೆ” ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು’ ಎಂಬ ಹೊಸ ಕಾವ್ಯ ಹೊರಬಂದಿದೆ.

ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು. ೧೯೫೭ರಲ್ಲಿ `ಶಿಲಾಲತೆ’ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ೧೯೭೭ರಲ್ಲಿ ತೆರೆದ ಬಾಗಿಲು ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಫೆಲೋಶಿಪ್ ಕೆಎಸ್‌ನ ಅವರಿಗೆ ೧೯೯೯ರಲ್ಲಿ ಕೊಟ್ಟು ಗೌರವಿಸಿದೆ. ಅಲ್ಲದೆ ದೇವರಾಜ ಬಹದ್ದೂರ್ ಬಹುಮಾನ, ರಾಜ್ಯ ಸಂಸ್ಕೃತಿ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶನ್ ಪ್ರಶಸ್ತಿ ಗಳ ಗೌರವಕ್ಕೆ ಕೆ.ಎಸ್.ನ ಅವರು ಪಾತ್ರರ‍ಾಗಿದ್ದಾರೆ.

ಅರ್ಥ – ಪರಮಾರ್ಥಗಳೆರಡನ್ನೂ ಅತಿಗೆ ಒಯ್ಯದೆ; ಜನರ ದಿನ ನಿತ್ಯದ ತಾಪತ್ರಯಗಳ ನಡುವೆಯೂ ಅವರನ್ನು ಮುದಗೊಳಿಸುವ, ಸಾಂತ್ವನ ನೀಡುವ ಭರವಸೆಯ ಕಾವ್ಯವನ್ನು ಅವರ ಮಧ್ಯೆ ಕೂತೇ ರಚಿಸಿದಂತಿರುವ ಕೆ.ಎಸ್.ನ.ರ ಪದ್ಯಗಳು, ಸರಳ ಓದಿಗೂ ಸುಲಭ ಗಾಯನಕ್ಕೂ ಒದಗುವಷ್ಟು ಮೃದು ಮಧುರವಾದ ಕನ್ನಡದಲ್ಲಿ ಮೂಡಿ ಬಂದಿವೆ. ಕನ್ನಡ ಕಾವ್ಯಕ್ಕೆ ಒಂದು ಮಧ್ಯಮ ವರ್ಗವನ್ನು ಸೃಷ್ಟಿಸಿಕೊಟ್ಟ ಕವಿ ಇವರು.

ಪ್ರಶಸ್ತಿ-ಪುರಸ್ಕಾರಗಳು:

೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ. ೧೯೮೭- ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ .
೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ. ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
೧೯೯೬- ಮಾಸ್ತಿ ಪ್ರಶಸ್ತಿ .
೧೯೯೭- ಪಂಪ ಪ್ರಶಸ್ತಿ .
೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
೨೦೦೦- ಗೊರೂರು ಪ್ರಶಸ್ತಿ .