ಜನನ : ೩೦-೧೦-೧೯೩೩ ರಂದು ಕನಕಪುರದಲ್ಲಿ ಬೆಂಗಳೂರು ಜಿಲ್ಲೆ

ಮನೆತನ : ಅಪ್ಪಟ ವೈದಿಕ ಸಂಪ್ರದಾಯಸ್ಥರ ಮನೆತನ. ತಂದೆ ಶ್ರೀನಿವಾಸ ದೇಶಿಕಾಚಾರ್ಯ, ತಾಯಿ ಶ್ರೀರಂಗ ನಾಯಕಮ್ಮ.

ಶಿಕ್ಷಣ : ವೈದಿಕ ಸಂಪ್ರದಾಯದ ಕುಟುಂಬದಿಂದ ಬಂದವರಾಗಿ ಹಿರಿಯರಿಂದಲೇ ಆರ್ಷೇಯ ಸಂಸ್ಕೃತಿಯ ಅಧ್ಯಯನ ನಡೆಸಿ ಸ್ವಯಂ ಪ್ರತಿಭೆಯಿಂದ ಪ್ರವಚನ, ಕೀರ್ತನ, ಗಮಕ ಕಲೆಗಳನ್ನು ರೂಢಿಸಿಕೊಂಡವರು. ಶ್ಲೋಕ ಸಂಗೀತರೆಂದೇ ಖ್ಯಾತರಾಗಿದ್ದ ಗಮಕಿ ಕಳಲೆ ಸಂಪತ್ಕುಮಾರಾಚಾರ್ಯರ ಪ್ರಭಾವ ಇವರ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಬೀರಿತು. ಕರ್ನಾಟಕ ಸಂಗೀತದಲ್ಲೂ ಕೃಷಿ ಮಾಡಿದ್ದಾರೆ. ಬಿ.ಎಸ್.ಸಿ. ಬಿ.ಎ. (ಆನರ್ಸ್‌) ಇಂಗ್ಲಿಷ್ ಎಂ.ಎ. ಪದವೀಧರರು. ಸಂಸ್ಕೃತಾಧ್ಯಯನ ಸಹ ಮಾಡಿರುತ್ತಾರೆ.

ಕ್ಷೇತ್ರ ಸಾಧನೆ : ಪ್ರವಚನಕಾರರಾಗಿ ಇವರ ಸಾಧನೆ ಅಪಾರ. ಕಥಾ ಕೀರ್ತನಕಾರರಾಗಿ, ಗಮನ ವಿದ್ವಾಂಸರಾಗಿ ಸುಮಾರು ೪೦ ವರ್ಷಗಳಿಂದ ರಾಜ್ಯದ ಒಳಗೆ, ಹೊರಗೆ ರಾಷ್ಟ್ರಾದ್ಯಂತ ಇವರ ಪ್ರವಚನಗಳು ನಡೆದಿವೆ. ಶ್ರೀಮದ್ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ, ಭಗವದ್ಗೀತೆ, ಆಳ್ವಾರ್‌ಗಳ ೪,೦೦೦ ಪ್ರಬಂಧಗಳು ಮುಂತಾದ ವಿಷಯಗಳಿಗೆ ಇಂದಿನ ರಾಜಕೀಯ ವಿದ್ಯಮಾನಗಳ ತೆಳು ಲೇಪನಗಳನ್ನು ಮಾಡಿ, ಕೆಲವೊಮ್ಮೆ ಕಟು ಟೀಕೆಗಳನ್ನು ಮಾಡಲು ಹಿಂಜರಿಯದೆ ಖಂಡತುಂಡವಾಗಿ ಖಂಡಿಸುವ ಎದೆಗಾರಿಕೆಯುಳ್ಳವರು. ಕನ್ನಡ ಕಾವ್ಯಗಳಲ್ಲೂ ಸಾಕಷ್ಟು ಅಧ್ಯಯನ ನಡೆಸಿ ಅವುಗಳಲ್ಲಿ ಉಲ್ಲೇಖಿಸಿರುವ ಆಧ್ಯಾತ್ಮಿಕ ಸನ್ನಿವೇಶ- ಸಂದರ್ಭಗಳನ್ನು ಸಮರ್ಥವಾಗಿ ವ್ಯಾಖ್ಯಾನಿಸಬಲ್ಲವರು. ತಮಿಳು, ಕನ್ನಡ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ಸಮಾನ ಪಾಂಡಿತ್ಯವುಳ್ಳವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷಾ ಪ್ರಾಚಾರ್ಯರಾಗಿ ನಿವೃತ್ತಿ ಪಡೆದಿದ್ದಾರೆ.

ವೇದ ಮಂತ್ರಗಳನ್ನು ಕುರಿತಾಗಿ ಬರೆದಿರುವ ಸಾಹಿತ್ಯ ಶ್ರೀರಾಮಾಯಣ ಪಾತ್ರ ಪ್ರಪಂಚ, ಮಹಾಭಾರತ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ಆಚಾರ್ಯ ಚಾಣಕ್ಯ ಕೃಷ್ಣಾವತಾರದ ಕೊನೆಯ ದಿನಗಳು, ವೇದ ಸಂಸ್ಕೃತಿ ಪರಿಚಯದ ಸಂಪುಟ ಇತ್ಯಾದಿಯಾಗಿ ಸುಮಾರು ೫೦ ಕ್ಕೂ ಮೀರಿ ಗ್ರಂಥ ರಚನೆ ಮಾಡಿರುತ್ತಾರೆ. ಹುಬ್ಬಳ್ಳಿಯ ಕುಮಾರವ್ಯಾಸ ಸೇವಾ ಸಂಘದವರು ಪ್ರಕಟಿಸುತ್ತಿರುವ ಕುಮಾರವ್ಯಾಸ ಭಾರತದ ಅರ್ಥ ವಿವರಣೆ ಸಹಿತವಾದ ಗ್ರಂಥದ ಸಂಪಾದಕರಲ್ಲೊಬ್ಬರಾಗಿದ್ದಾರೆ. ನಿತ್ಯಾತ್ಮ ಶುಕಯೋಗಿಯ ಕನ್ನಡ ಭಾಗವತ ಪ್ರಕಟನಾ ಸಮಿತಿಯ ಸದಸ್ಯರಾಗಿರುತ್ತಾರೆ. ಆಕಾಶವಾಣಿ-ದೂರದರ್ಶನಗಳಲ್ಲೂ ಇವರ ಕಾರ್ಯಕ್ರಮ ಪ್ರಸಾರವಾಗಿವೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ ಸಂಸ್ಥೆಗಳು ಪ್ರಮುಖವಾಗಿ ಶ್ರೀ ವೈಷ್ಣವ ಧರ್ಮ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಇವರ ವೇದ ಸಂಸ್ಕೃತಿ ಪರಿಚಯ ಸಂಪುಟ ಒಂದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ೧೯೯೬-೯೭ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.