ಸಾಗರ ತಾಲ್ಲೂಕಿನ ಕಡೂರಿನಲ್ಲಿ ಮಂಜುನಾಥನ್‌ ಅವರ ಜನನವಾಯಿತು. ಯಕ್ಷಗಾನ ಪ್ರಸಂಗಗಳಲ್ಲಿ ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದ ಶೇಷಗಿರಿ ಉಪಾಧ್ಯಾಯರ ಮಗನಾದ ಮಂಜುನಾಥನಿಗೆ ಬಾಲ್ಯ ಪಾಠಗಳನ್ನು ಆರಂಭಿಸಿದರು. ಮನೆಯ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಾಗ ಬೆಂಗಳೂರಿಗೆ ಬಂದು  ಹೋಟೆಲಿನಲ್ಲಿ ಕೆಲಸ ಮಾಡುತ್ತ ಪಾಲ್ಘಾಟ್‌ ಶ್ರೀನಿವಾಸ ಅಯ್ಯರ್ ನಂತರ ಪಾಲ್ಘಾಟ್‌ ಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಮೃದಂಗಾಭ್ಯಾಸ ಮುಂದುವರಿಸಿದರು. ಎಲ್‌.ಎಸ್‌. ಶೇಷಗಿರಿರಾವ್‌ ಅವರು ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಪರ್ಕ ವಲಯವನ್ನು ದೊರಕಿಸಿಕೊಟ್ಟು ಮಂಜುನಾಥನ್‌ ಪ್ರಬುದ್ಧ ಕಲಾವಿದನಾಗುವಂತೆ ಬೆಳೆಸಿದರು. ನಂತರ ಶ್ರೀಯುತರು ಸ್ವಂತ ಸಾಧನೆಯಿಂದ ಘಟವಾದನದಲ್ಲಿ ಶ್ರೇಷ್ಠತೆ, ಪ್ರತಿಭೆ ಪಾಂಡಿತ್ಯಗಳನ್ನು ಸಂಪಾದಿಸಿಕೊಂಡು ತಮ್ಮದೇ ಆದ ವಿಶಿಷ್ಟತೆಯನ್ನು ಮೆರೆದರು.

ಅಂದಿನ ಎಲ್ಲಾ ಹಿರಿಯ ವಿದ್ವಾಂಸರುಗಳಿಗೂ ಘಟ ವಾದನ ಸಹಕಾರ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು. ೧೯೭೦ರಲ್ಲಿ ಜಪಾನಿನಲ್ಲಿ ನಡೆದ ಎಕ್ಸ್ಪೊ-೭೦ ಯಲ್ಲಿ ಇವರ ಘಟವಾದನ ಮೊದಲ ಬಾರಿಗೆ ದೂರದರ್ಶನ ಮಾಧ್ಯಮದಲ್ಲಿ ಪ್ರಸಾರವಾಯಿತು. ಮರುವರ್ಷ ಪಶ್ಚಿಮ ಜರ್ಮನಿಯ ವಿಶ್ವಸಂಗೀತ ಮಹಾ ಸಮ್ಮೇಳನದಲ್ಲಿ ನಂತರ ೧೯೭೯ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ಏಷ್ಯಾದ ಎರಡನೆ ವಿಶ್ವ ಸಂಗೀತ ಸಮ್ಮೇಳನದಲ್ಲಿ ತಮ್ಮ ವಾದನದ ಮೂಲಕ ಕೀರ್ತಿ ಧ್ವಜ ಹಾರಿಸಿದ ಮಂಜುನಾಥ್‌ ಅವರು ಇಂಗ್ಲೆಂಡ್‌, ಫ್ರಾನ್ಸ್ ಮುಂತಾದ ವಿದೇಶ ಸ್ಥಳಗಳಲ್ಲಿಯೂ ದೇಶದ ಎಲ್ಲೆಡೆಯಲ್ಲಿಯೂ ತಮ್ಮ ಪ್ರೌಢ ವಾದನದಿಂದ ಮಾನ್ಯತೆ ಗಳಿಸಿದರು.

‘ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಕಲಾ ತಿಲಕ’ ಮುಂತಾದ ಗೌರವಗಳನ್ನು ಸಂಪಾದಿಸಿದ ಶ್ರೀಯುತರು ಬೆಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದರು.

ಘಟ ವಾದ್ಯಕ್ಕೆ ಒಂದು ವಿಶೇಷ ಆದರದ ಸ್ಥಾನಮಾನಗಳನ್ನು ಸಂಪಾದಿಸಿ ಕೊಟ್ಟ ಮಂಜುನಾಥನ್‌  ಅವರು ಅಪಾರ ಶಿಷ್ಯವೃಂದವನ್ನು ಸಂಗೀತ ಕ್ಷೇತ್ರಕ್ಕೆ ನೀಡಿ ೨೧-೪-೧೯೮೯ರಲ್ಲಿ ನಾದಬ್ರಹ್ಮನಲ್ಲಿ ಐಕ್ಯರಾದರು.