೧೯೨೭ರಲ್ಲಿ ಪುರೋಹಿತ ವಂಶದಲ್ಲಿ ಕೇರಳದಲ್ಲಿ ಜನಿಸಿದ ಶ್ರೀ ಕೆ.ಎಸ್.ಮಣಿ ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ಅನಾಥರಾದವರು. ನೃತ್ಯ ಕಲಿಯಬೇಕೆಂಬ ಆದಮ್ಯ ಆಸೆಯಿಂದ ಮದ್ರಾಸಿಗೆ ಬಂದು ಅಲ್ಲಿ ಅನೇಕ ಪ್ರಖ್ಯಾತ ನೃತ್ಯ ಕಲಾವಿದರ ಕಾರ್ಯಕ್ರಮಗಳನ್ನು ನೋಡುತ್ತಾ ತಮ್ಮಾಸೆಯನ್ನು ಗಟ್ಟಿಗೊಳಿಸಿಕೊಂಡರು.

ನಂತರ ಮೈಸೂರಿನ ಶ್ರೀ ಕೆ.ಎಸ್. ರಾಜಗೋಪಾಲ್ ಅವರಲ್ಲಿ ನೃತ್ಯ ಶಿಕ್ಷಣ ಪಡೆದ ಮಣಿ, ಶ್ರೀ ರಾಜನ್ ಅಯ್ಯರ್ ಅವರಿಂದಲೂ ತಮ್ಮ ಅರಿವನ್ನು ಹೆಚ್ಚಿಸಿಕೊಂಡರು. ಕಾಸರಗೋಡು ಶ್ರೀ ಬಾಬು ರೈ ಅವರಿಂದ ಮೃದಂಗ ಮತ್ತು ಆರ್.ಎಂ. ಜನಾರ್ಧನ್ ಅವರಿಂದ ವೀಣೆ ನುಡಿಸುವುದರಲ್ಲೂ ಮಣಿ ಅವರಿಗೆ ಪಾಠವಾಯಿತು.

ಆರಂಭದ ಕೆಲವು ವರ್ಷ ವೃತ್ತಿ ನಾಟಕ ಕಂಪನಿಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸಮಾಡಿದ ಮಣಿ ಅವರು ಕಳೆದ ನಲವತ್ತು ವರ್ಷಗಳಿಂದ ಮಂಡ್ಯದಲ್ಲಿ ನಟರಾಜ ಕಲಾನಿಕೇತನ ಸ್ಥಾಪಿಸಿ ಯುವ ಜನತೆಯನ್ನು ಕ್ಷೇತ್ರಕ್ಕೆ ತಯಾರಿಸಿ ಕೊಡುವ ಕಾರ್ಯ ಮಾಡುತ್ತಿದ್ದಾರೆ.

೧೯೬೨ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದಾಗ ಮಣಿ ಅವರು ತಮ್ಮ ನೃತ್ಯ ಶಾಲೆಯ ಕಾರ್ಯಕ್ರಮಗಳನ್ನು ನಡೆಸಿ ಆ ಕಾಲದಲ್ಲೇ ನಾಲ್ಕು ಸಾವಿರ ರೂಪಾಯಿಗಳನ್ನು ಯುದ್ಧ ನಿಧಿಗೆ ಅರ್ಪಿಸಿದ ದೇಶಭಕ್ತ ಮಣಿ ಅವರು.

ಮೈಸೂರಿನ ಭಾರತೀಯ ನೃತ್ಯ ಕಲಾ ಪರಿಷತ್ತು ಸಂಸ್ಥೆಯಿಂದ ನರ್ತನ ಮಣಿ ಪುರಸ್ಕಾರ ಪಡೆದಿರುವ ಇವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಲಾಗಿರುವ ಶ್ರೀಯುತರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯು ೧೯೯೯-೨೦೦೦ನೇ ಸಾಲಿನ ಪ್ರಶಸ್ತಿ ಸಂದಿದೆ.