ಕೆ.ಎಸ್.ರಾಜಗೋಪಾಲ್ ಅವರು ೫-೧೨-೧೯೨೪ರಲ್ಲಿ ಉಡುಪಿಯಲ್ಲಿ ಜನಿಸಿದರು. ತಂದೆ ಉತ್ತಮ ಶಿಕ್ಷಕರೆಂದು ಹೆಸರು ಪಡೆದಿದ್ದ ಶ್ರೀನಿವಾಸ ಹೆಬ್ಬಾರರು. ಮಗನನ್ನು ಉತ್ತಮ ವಿದ್ಯಾವಂತನನ್ನಾಗಿ ಮಾಡುವ ಹಂಬಲದಿಂದ ಉನ್ನತ ಶಿಕ್ಷಣ ಕೊಡ ಹತ್ತಿದರು. ವ್ಯಾಸಂಗದಲ್ಲಿರುವಾಗಲೇ ನಾಟ್ಯ-ಸಂಗೀತ ಕಲೆಗಳ ಗೀಳು ಹತ್ತಿಸಿಕೊಂಡ ರಾಜಗೋಪಾಲ್ ಮೆಟ್ರಿಕ್‌ವರೆಗೆ ಓದಿ ನೃತ್ಯ ಕಲೆಯನ್ನು ಕಲಿಯುವ ಆಸೆಯಿಂದ ಮೈಸೂರಿಗೆ ಬಂದರು. ಮೈಸೂರಿನ ಎಂ.ಎ. ಮಹದೇವಸ್ವಾಮಿ ನೆರವಿನಿಂದ ನಾಟ್ಯಾಚಾರ್ಯ ನಾಗಭೂಷಣ ಅವರಲ್ಲಿ ಪ್ರಾಥಮಿಕ ಶಿಕ್ಷಣ ಹೊಂದಿ ನಂತರ ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ ಮತ್ತು ನಾಟ್ಯ ಸುಂದರಮ್ಮನವರಲ್ಲಿ ಉನ್ನತ ಶಿಕ್ಷಣ ಪಡೆದು ನಾಟ್ಯಾಚಾರ್ಯರೆನಿಸಿಕೊಂಡರು. ಮೈಸೂರಿನಲ್ಲಿ “ಶ್ರಿ ನೃತ್ಯ ಕಲಾಮಂದಿರ”ವನ್ನು ಸ್ಥಾಪಿಸಿದರು.

ಕೇವಲ ನಾಟ್ಯಕಲೆಯೇ ಅಲ್ಲದೇ ಗಾಯನ, ವೀಣಾವಾದನ, ಪಿಟೀಲು ಹಾಗೂ ಮೃದಂಗವಾದನಗಳಲ್ಲೂ ಪರಿಣತಿಯನ್ನು ಪಡೆದು ಬಹುಮುಖಿ ಕಲಾವಿದರೆನಿಸಿಕೊಂಡಿದ್ದಾರೆ. ಇವರ ಪತ್ನಿ ಜಯಂತಿ ರಾಜಗೋಪಾಲ್ ಸಹ ಉತ್ತಮ ನೃತ್ಯ ಕಲಾವಿದೆ. ಈ ದಂಪತಿಗಳು ಪ್ರದರ್ಶಿಸಿದ “ಶಿವ-ಪಾರ್ವತಿ”, “ವಿಶ್ವಾಮಿತ್ರ-ಮೇನಕಾ” ಬೆಸ್ತರ ನೃತ್ಯಗಳು ಅತ್ಯಂತ ಜನಪ್ರಿಯವಾಗಿದ್ದು ಪಂಡಿತ-ಪಾಮರ ಪ್ರಶಂಸೆಗಳಿಸಿವೆ. ’ತಿಲ್ಲೋತ್ತಮ’ ಎಂಬ ಕನ್ನಡ ಚಿತ್ರಕ್ಕೆ ನೃತ್ಯ ನಿರ್ದೇಶನವನ್ನು ನೀಡಿದ ಹೆಗ್ಗಳಿಕೆ ಇವರದು.

ಭಾರತಾದ್ಯಂತ ಸಂಚರಿಸಿ ನೃತ್ಯ ಪ್ರದರ್ಶನ ನೀಡಿರುವ ರಾಜಗೋಪಾಲ್ ದಂಪತಿಗಳ ಸಾಧನೆಯನ್ನು ಅನೇಕ ಪ್ರಮುಖ ಪತ್ರಿಕೆಗಳು ಮುಕ್ತ ಕಂಠದಿಂದ ಪ್ರಶಂಸಿಸಿವೆ. ಭಾರತೀಯ ನೃತ್ಯ ಕಲಾ ಪರಿಷತ್ತು ಇವರಿಗೆ “ನೃತ್ಯ ಕಲಾಶಿಲ್ಪ” ಎಂಬ ಬಿರುದು ನೀಡಿ ಗೌರವಿಸಿದೆ. ಮಂಡ್ಯದ ಶಾಂತಲಾ ನೃತ್ಯಕಲಾ ಮಂದಿರದಿಂದ “ನಾಟ್ಯ ಕಲಾರತ್ನ”, ಮೈಸೂರು ಮಾರುತಿ ಸೇವಾ ಸಂಘದಿಂದ “ನಾಟ್ಯ ಕಲಾ ಪ್ರವೀಣ” ಇವರಿಗೆ ಸಂದಿರುವ ಬಿರುದುಗಳು.